ಭಾನುವಾರ, ಜನವರಿ 1, 2023

ಕಾಲೇಜೆಂಬ ರಂಗಸ್ಥಳ

ಜಗತ್ತೇ ಒಂದು ನಾಟಕರಂಗ - ಷೇಕ್ಸ್ಪಿಯರ್
ಪ್ರಾಧ್ಯಾಪಕನ ಜಗತ್ತೇ ಕಾಲೇಜೆಂಬ ರಂಗಮಂದಿರವಾದ ಕಾರಣ ಷೇಕ್ಸ್ಪಿಯರ್'ನ ಜಗತ್ತೇ ಒಂದು ನಾಟಕರಂಗ ಎಂಬುದನ್ನು ನಾವು 'ಕಾಲೇಜೇ ಒಂದು ನಾಟಕರಂಗ' ಎಂಬುದಾಗಿ ಪರಿಗಣಿಸಿದರೆ ಅದರ ಮುಂದಿನ ಪ್ರಾಸಬದ್ಧ ಸಾಲು 'ನೀನೇ ಅದರೊಳಗೆ ದೊಡ್ಡ ಮಂಗ' ಎಂದಾಗಿರುತ್ತದೆ. (ಇಲ್ಲಿ 'ನೀನೇ' ಎಂಬ ಪದಕ್ಕೆ ನೈತಿಕತೆಯನ್ನು ಇನ್ನೂ ಕೊಂಡುಕೊಳ್ಳದ ಶಿಕ್ಷಕರನ್ನು ಅನ್ವರ್ಥವಾಗಿಸಿಕೊಳ್ಳಬೇಕೆಂದು ಕೋರಿಕೆ)

ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದ ಅವಧಿಯ ಸ್ವಾನುಭವಗ(ಗೋ)ಳನ್ನು ಸಂಕಲಿಸಿ ಸ್ವಾಮಿಯವರು ಬರೆದ ಈ ಕೃತಿ ಪ್ರಥಮ ಮುದ್ರಣ ಕಂಡಿದ್ದು 1973ರಲ್ಲಂತೆ. 1973ರ ಅನುಭವಗಳು 2023ಕ್ಕೂ ಅದೆಷ್ಟು ಕರಾರುವಾಕ್ಕಾಗಿ ಹೊಂದಿಕೊಳ್ಳುತ್ತವೆಂದರೆ ಓದುಗನಿಗೆ ಎಲ್ಲೂ ಇದು ಅಂದಿನ ಕಾಲಘಟ್ಟದ ಕಥೆ ವ್ಯಥೆ ಎನಿಸದೇ ಹೋಗುವುದು ಹದೆಗೆಟ್ಟ ಶಿಕ್ಷಣ ವ್ಯವಸ್ಥೆ ಪುನಶ್ಚೇತನವನ್ನು ಕಂಡೇ ಇಲ್ಲ ಎಂಬುದರ ಸ್ಪಷ್ಟ ದ್ಯೋತಕ. ಇನ್ನೂ ಅಂದಿಗಿಂತ ಇಂದು ಪರಿಸ್ಥಿತಿ ಇನ್ನಷ್ಟು ಹೆಚ್ಚು ಹದೆಗೆಟ್ಟಿದೆ ಎಂಬುದು ನಾವು ತಲೆತಗ್ಗಿಸಿ ಒಪ್ಪಿಕೊಳ್ಳಲೇಬೇಕಾದ ಸತ್ಯ. ಸ್ವತಃ ಇದೇ ವ್ಯವಸ್ಥೆಯ ಒಂದು ಭಾಗವಾಗಿರುವ ನನ್ನಂತಹವರ ಪಾಲಿಗೆ ಈ ಕೃತಿ ಶಿಕ್ಷಣ ವ್ಯವಸ್ಥೆ ಉಚ್ಛ್ರಾಯ ಮಟ್ಟದಿಂದ ಅಧೋಗತಿಗೆ ಹೇಗೆ ಹಂತಹಂತವಾಗಿ ಇಳಿದಿರಬಹುದೆಂಬುದರ ಪರಿವಿಡಿ. ವಿದ್ಯಾರ್ಥಿಗಳ ಬದುಕನ್ನು, ದೇಶದ ಭವಿತವ್ಯವನ್ನು ರೂಪಿಸಿಕೊಡಬೇಕಾದ ಪರಮ ಔನ್ನತ್ಯದ ವ್ಯವಸ್ಥೆಯೊಂದು ಜಾತಿ, ವರ್ಗ, ವರ್ಣ, ರಾಜಕೀಯ ಮೊದಲಾದ ವಿಷಸುಳಿಗಳಲ್ಲಿ ಸಿಲುಕಿ ಹೇಗೆ ಅಧಃಪತನಕ್ಕೆ ಜಾರುತ್ತದೆ ಎಂಬುದನ್ನು ತಮ್ಮ ಎಂದಿನ ಲಘುಹಾಸ್ಯದ ಶೈಲಿಯಲ್ಲಿ ಸ್ವಾಮಿ ದಾಟಿಸಿದ್ದಾರೆ. ಬರಹದ ಧಾಟಿ ಹಾಸ್ಯವಾದರೂ ಅದರೊಳಗೆ ಅಂತರ್ಗತವಾಗಿರುವುದು ನೀತಿಗೆಟ್ಟ ವ್ಯವಸ್ಥೆಯ ವಿಂಡಬನೆಯಷ್ಟೇ.