ಭಾನುವಾರ, ಜೂನ್ 28, 2020

ಅನೂಹ್ಯ 26

ಅದು #7, ಲೋಕ್ ಕಲ್ಯಾಣ್ ಮಾರ್ಗ್, ನವದೆಹಲಿ........

ಅದನ್ನು "ಪಂಚವಟಿ" ಎಂದೂ ಕರೆಯಲಾಗುತ್ತದೆ. ಭಾರತದ ಪ್ರಧಾನಮಂತ್ರಿಗಳ‌ ಅಧಿಕೃತ ನಿವಾಸವದು.

ಅದರೊಳಗೆ ಪ್ರವೇಶಿಸುವುದು ಸುಲಭದ ಮಾತಲ್ಲ. ಕಷ್ಟಸಾಧ್ಯವಾದ ಕೆಲಸವದು.

ಆದರೆ ತಾನು ಅಂತಹ ಸೌಭಾಗ್ಯ ಪಡೆದಿದ್ದೇನೆ.

ಪಂಚವಟಿಯಲ್ಲಿ ಇಂದಿನ ಈ ಸಮಾರಂಭ ನನಗಾಗಿಯೇ. ನನ್ನ ಸಾಧನೆಯನ್ನು ಹಾಡಿ ಹೊಗಳಲು ಎಲ್ಲೆಡೆಯಿಂದ ಅತಿಥಿಗಳು ಆಗಮಿಸಿದ್ದಾರೆ.

ಪ್ರಧಾನಿ ಮೋದಿಯವರು ನನ್ನ ಸಾಧನೆಯನ್ನು ಬಣ್ಣಿಸುತ್ತಿದ್ದಾರೆ. RAW(Research and Analysis Wing) ದ ಅತ್ಯುನ್ನತ ಅಧಿಕಾರಿಯಾಗಿ ಸಾವಿರಾರು ದೇಶವಿರೋಧಿಗಳ ಹುಟ್ಟಡಗಿಸಿದ ವೀರನೆಂದು ಕೊಂಡಾಡಿ ಸನ್ಮಾನ ಮಾಡುತ್ತಿದ್ದಾರೆ.

ಅಲ್ಲಿ ನೆರೆದಿರುವ ಸಾವಿರಾರು ಜನರು "ಮೋದಿ" "ಮೋದಿ" ಎನ್ನುವ ಬದಲು "ವೈಭವ್…." "ವೈಭವ್..." ಎಂದು ಕಿರುಚುತ್ತಿದ್ದಾರೆ. ಪ್ರೆಸ್ ರಿಪೋರ್ಟರ್ಸ್ ನನಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಒಬ್ಬಳು ಸುಂದರಿ ಎದ್ದು ನಿಂತು "ಡಿಟೆಕ್ಟಿವ್ ವೈಭವ್, ಯು ಆರ್ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಹಾರ್ಟ್ ಥ್ರೋಬ್ ಆಫ್ ಇಂಡಿಯಾ" ಎನ್ನುತ್ತಿರುವಾಗಲೇ ಸುತ್ತ ನಿಂತಿರುವ ಸಾವಿರಾರು ಲಲನೆಯರು "ಹೋ......." ಎಂದು ಅರಚುತ್ತಿದ್ದಾರೆ.

ಹಾಗೆಯೇ ನನ್ನ ಮೇಲೆ ಹೂವುಗಳನ್ನು ಎರಚುತ್ತಿದ್ದಾರೆ.

ಆಹಾ..... ಪುಷ್ಪ ವೃಷ್ಟಿ......

ಅರೇ...... ಇದೇನು? ಹೂವು ಎಸೆದರೆ ನೋವಾಗುತ್ತಾ? ಇಲ್ವಲ್ಲಾ. ಯಾವನೋ ಅದು ಹೂವಿನೊಂದಿಗೆ ಕಲ್ಲೆಸಿತಿರೋದು? ಅಯ್ಯಮ್ಮಾ , ಕಾಲು ಮುರೀತು! ಯಪ್ಪಾ…. ಇದೇನಿದು?  

ವೈಭವ್ ಕಣ್ಣು ಹೊಸಕಿಕೊಂಡು ನೋಡುವುದರೊಳಗೆ ಇನ್ನು ನಾಲ್ಕು ಏಟುಗಳು ಬಿದ್ದಾಗಿತ್ತು. ಸರಿಯಾಗಿ ಕಣ್ಬಿಟ್ಟು ನೋಡ್ತಾನೇ….. ಎದುರಲ್ಲಿ ಅವನಮ್ಮ. 

ಸೆರಗು ಸೊಂಟಕ್ಕೆ ಸಿಕ್ಕಿಸಿ ರುದ್ರ ಕಾಳಿಯಂತೆ ನಿಂತಿದ್ದರು ಕೈಯಲ್ಲಿ ದೊಣ್ಣೆ ಹಿಡಿದು.

"ವಾಟ್ ಈಸ್ ದಿಸ್ ಜನಕಿ? (ಅಪ್ಪನಿಗೆ ಜನಕ ಅನ್ನೋದಾದ್ರೆ ಅಮ್ಮನಿಗೆ ಜನಕಿ ಅನ್ನೋದ್ರಲ್ಲಿ ತಪ್ಪೇನು ಎಂಬುದು ನಮ್ಮ ಶ್ರೀ ಶ್ರೀ ಶ್ರೀ ವೈಭವಾನಂದ ಸ್ವಾಮಿಗಳ ವಾದ) ಎಂತಾ ಕನಸು ಗೊತ್ತಾ? ನಿನ್ನ ಮಗನ ಸಾಧನೆ ಮೆಚ್ಚಿ ಪ್ರಧಾನಿ ಮೋದಿ ಅವರ ಮನೆಗೇ ಕರೆಸಿ ನನಗೆ ಸನ್ಮಾನ ಮಾಡಿ,

"ಭಾಯಿಯೋ ಔರ್ ಬೆಹನೋ, ಮೇರೆ ಪ್ಯಾರೇ ದೇಶ್ ವಾಸಿಯೋ... ಆಜ್ ಕಾ ದಿನ್ ಭಾರತ್ ಮಾತಾ ಕೀ ಸಿರ್ ಫಕ್ರ್ ಸೇ ಊಂಚಾ ಹೋಗಾ, ಜೋ ಉಸ್ ನೇ ವೈಭವ್ ಜೈಸೇ ಬೇಟಾ ಪಾಯಾ....." ಅಂತ ಏನೆಲ್ಲಾ ಹೊಗಳ್ತಿದ್ರು ಗೊತ್ತಾ? ಇದನ್ನು ನೋಡೋಕೆ ಆಡಳಿತ ಪಕ್ಷ, ವಿಪಕ್ಷ, ಶುಕ್ಲ ಪಕ್ಷ, ಪಿತೃ ಪಕ್ಷ ಹೀಗೆ ಎಲ್ಲಾ ಕಡೆಯಿಂದ ಗಣ್ಯರು ಆಗಮಿಸಿ ನನ್ನ ಸಾಧನೆ ಕೊಂಡಾಡ್ತಿದ್ರು. ನನ್ನಂಥಾ ಮಾಣಿಕ್ಯನ ಹೆತ್ತಿರೋದಕ್ಕೆ ನಿನಗೊಂದು ಭಾರತರತ್ನ ಕೊಡೋಕೆ ಡಿಸ್ಕಷನ್ ಆಗ್ತಿತ್ತು. ನೀನೊಬ್ಳು ಎಬ್ಬಿಸ್ಬಿಟ್ಯಲ್ಲ" ಹಲುಬಿದ.

"ನಿನ್ನ ಮೂತಿಗೆ ಮೋದಿ ಬೇರೆ ಬೇಕೇನೋ? ನಿನ್ನ ಹೆತ್ತಿದಕ್ಕೆ ನನಗೆ ಭಾರತ ರತ್ನ ಬೇರೆ ಕೇಡು. ಬೆಳಿಗ್ಗೆ ಎದ್ದು ಲಕ್ಷಣವಾಗಿ ಕೆಲಸಕ್ಕೆ ಹೋಗೋದು ಬಿಟ್ಟು ಹಗಲುಗನಸು ಕಾಣ್ತಿಯಾ? ನಿನ್ನ ಕಚೀಫ್, ಚಡ್ಡಿ, ಸಾಕ್ಸ್ ಎಲ್ಲಿದೆ ಅಂತ ನಾನು ಹುಡ್ಕಿಡಬೇಕು.  ಡಿಟೆಕ್ಟಿವ್ ಅಂತೆ ಡಿಟೆಕ್ಟಿವ್, ನಿನ್ನ ಯಾಸಕ್ಕಷ್ಟು ಬೆಂಕಿ ಹಾಕ…." ಮತ್ತೆ ದೊಣ್ಣೆ ಎತ್ತಿ ನಾಲ್ಕು ಬಾರಿಸಿದವರು ಬಂದ ವಿಷಯ ನೆನಪಿಸಿಕೊಂಡು, "ಪಾಪ ಅಭಿರಾಮ್, ಆಗ್ಲಿಂದ ನಿನಗೆ ಫೋನ್ ಮಾಡಿ ಸಾಕಾಯ್ತು ಅಂತ ಲ್ಯಾಂಡ್ಲೈನಿಗೆ ಮಾಡಿದ್ದ. ಏನೋ ಫೋನ್ ತೆಗೆಯೋಕಾಗದಷ್ಟು ದೊಡ್ರೋಗ ಬಂದಿರೋದು ನಿನಗೆ ಕಮಂಗಿ. ಮೊದ್ಲು ಅವ್ನಿಗೆ ಫೋನ್ ಮಾಡಿ ವಿಚಾರಿಸು. ಹಾಗೆ ಅವನನ್ನು ನೋಡಿ ಸ್ವಲ್ಪ ಕಲಿ" ಎಂದರು.

"ಓಹ್ ಶಿಟ್, ಮಮ್ಮಿ ಇದನ್ನು ಮುಂಚೆನೇ ಹೇಳ್ಬೇಕು ತಾನೇ? ಈಗ ಅವನೊಬ್ನೇ ಕುಳ್ಳಿ ಡಾರ್ಲಿಂಗ್ ಮನೆಗೆ ಹೋದ್ರೇ ನಾನೇನು ಮಾಡ್ಲೀ? ರಾತ್ರಿಯೆಲ್ಲ ನನ್ನ ಕುಳ್ಳಿ ಬೇಬಿನೇ ನೆನೆಸಿಕೊಂಡು ಮಲ್ಗಿದ್ದು ಗೊತ್ತಾ?" ಅವನ ಪ್ರವರ ಕೇಳಲು ಆಕೆ ಅಲ್ಲಿರಲಿಲ್ಲ.... ಅವನು ಮೊಬೈಲು ತೆಗೆದು ನೋಡಿದ..12 ಬಾರಿ ಕಾಲ್ ಮಾಡಿದ್ದ ಅಭಿರಾಮ್... ಅಯ್ಯೋ ದುರ್ವಿಧಿಯೇ ಎಂದು ವಾಪಸು ಕರೆ ಮಾಡಿದ.

ಕಾಲ್ ರಿಸೀವ್ ಮಾಡಿದವನ ಕೋಪ ಚರಮ ಸೀಮೆಯಲ್ಲಿತ್ತು. "ಗೋ ಟು ಹೆಲ್ ಯು ಈಡಿಯಟ್. ಏನೋ ಮೂರ್ಕಾಸಿನ ಮರ್ಯಾದೆ ಇದ್ಯೇನೋ ನಿಂಗೆ? ನಾನಿಲ್ಲಿ ಸಾಯ್ತಿದ್ರೆ ನೀನು ಆರಾಮಾಗಿ ನಿದ್ರೆ ಮಾಡ್ಕೊಂಡಿದ್ದೀಯಲ್ಲ. ನೀನೂ ಒಬ್ಬ ಫ್ರೆಂಡಾ? ಮಗನೇ ನಿನ್ನೆ ಹೇಳಿದ್ದೇ ತಾನೇ ಆ ಹುಡುಗಿ ಅಡ್ರೆಸ್ ನನಗೆ ಕಳಿಸು ಅಂತ. ನನ್ನ ಫಸ್ಟ್ ಕೇಸು, ನಾನೇ ಬರ್ತೀನಿ ಅಂತ ಏನೇನೋ ಡೈಲಾಗ್ ಹೊಡೀತಿದ್ದೆ. ಈಗ ಪತ್ತೆನೇ ಇಲ್ಲ."

"ಅಲ್ಲಾ ಬೀರ್, ಅದು ಮೋದಿ, RAW, ಸನ್ಮಾನ…. ಸಾರಿ ಮಗಾ ಪ್ಲೀಸ್ ಸಿಟ್ಟಾಗಬೇಡ. ಚೈತಾಲಿ, ಅದೇ ಆ ಕುಳ್ಳಿ….. ಅವಳು ಸತ್ಯಂ ರಾವ್ ಪಿ.ಎ ಅಂತೆ. ಅವಳ ಅಡ್ರೆಸ್ ತಗೊಂಡಿದ್ದೀನಿ. ಎಲ್ಲಿಗೆ ಬರ್ಲೀ ಹೇಳು? ಈಗ್ಲೇ ಹೊರಡ್ತೀನಿ" ಅವಸರದಲ್ಲಿ ತನ್ನ ಡಿಟೆಕ್ಟಿವ್ ಪೋಷಾಕು ಏರಿಸುತ್ತಾ ಕೇಳಿದ.

"ನೋಡಪ್ಪಾ ಅತಿರಥ, ದಯವಿಟ್ಟು ಆ ಹುಡುಗಿ ಅಡ್ರೆಸ್ ಸಿಕ್ಕಿದ್ರೆ ನನಗೆ ಕಳಿಸು. ಇಲ್ಲಾ ನಿನ್ನಂತವನಿಗೆ ಕೆಲಸ ಒಪ್ಪಿಸಿದ ತಪ್ಪಿಗೆ ಅದನ್ನೂ ನಾನೇ ಮಾಡ್ಕೋತೀನಿ. ತಮ್ಮ ಸರ್ವಾಂಗಕ್ಕೂ ಸಾಷ್ಟಾಂಗ ನಮಸ್ಕಾರ. ನನ್ನ ಬಿಟ್ಬಿಡು." 

"ಬೀರ್ ಸಾರಿ ಕಣೋ, ನನ್ನಿಂದ ತಪ್ಪಾಯ್ತು. ಕ್ಷಮಿಸೋ. ನಿನ್ನ ಬಿಟ್ರೆ ನನಗ್ಯಾರಿದ್ದಾರೆ? ನೀನೆ ನನ್ನ ಕೈ ಬಿಟ್ರೆ ನನ್ನ ಫಸ್ಟ್ ಕೇಸೇ ಹೊಗೆ. ಪ್ಲೀಸ್.. ಪ್ಲೀಸ್..." ಗೋಗರೆದ.

"ನಾನೀಗ ಡಾ. ಮೀರಾ ಅವರ ಹತ್ರ ಮಾತಾಡೋಕೆ ಧನ್ವಂತರಿಗೆ ಹೋಗ್ತಿದ್ದೀನಿ. ಒಂದು ಗಂಟೆ ಆಗ್ಬಹುದು. ಅಷ್ಟರೊಳಗೆ ನೀನು ಅಡ್ರೆಸ್ ಮೆಸೇಜ್ ಮಾಡ್ತಿಯೋ ಇಲ್ಲಾ ಆಸ್ಪತ್ರೆಗೆ ಬರ್ತೀಯೋ ನಿನಗೆ‌ ಬಿಟ್ಟಿದ್ದು. ನಾನು ಫೋನಿಡ್ತೀನಿ" ಕರೆ ಕಡಿತಗೊಳಿಸಿ ಒಳ್ಳೆ ಡ್ರಾಮಾ ಕಂಪನಿ ಸಹವಾಸ ಆಯ್ತು ಎಂದು ಮನದಲ್ಲೇ ನಗುತ್ತಾ ಧನ್ವಂತರಿಯೊಳಗೆ ಪ್ರವೇಶಿಸಿದ.

ಮೀರಾ ಅವರು ಕ್ಯಾಬಿನಿನಲ್ಲಿ ಕಾಣಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಯೋಚಿಸುತ್ತಾ ಹೊರಬಂದಾಗ ನರ್ಸ್ ಒಬ್ಬಳು ಎದುರಾದಳು. ಅವಳ ಬಳಿ ತಾನು ಮೀರಾ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದಾಗ ಆಕೆ ಅವನನ್ನು ಅಲ್ಲೇ ಇರಲು ತಿಳಿಸಿ ಕ್ಯಾಥ್ ಲ್ಯಾಬಿನಲ್ಲಿದ್ದ ಮೀರಾರನ್ನು ಕರೆಯಲು ಹೋದಳು.

ಅವನು ಮೀರಾ ಅವರ ಕ್ಯಾಬಿನಿನಲ್ಲಿ ಅವರಿಗಾಗಿ ಕುಳಿತು ಕಾಯತೊಡಗಿದ. ಸಮನ್ವಿತಾಳನ್ನು ಒಮ್ಮೆ ನೋಡಿ ಮಾತನಾಡಿಸಬೇಕೆಂದು ಬಲವಾಗಿ ಅನಿಸಿತಾದರು ಇಂದು ಅವಳು ಆಸ್ಪತ್ರೆಗೆ ಬಂದಿರಲಾರಳು ಎನಿಸಿತು. ಅವಳ ಆಘಾತಗೊಂಡ ಮನಸ್ಸು ತಹಬಂದಿಗೆ ಬರಲು ಒಂದಿಷ್ಟು ಸಮಯ ಬೇಕೆಂದು ತಿಳಿದಿತ್ತು ಅವನಿಗೆ. ಕ್ವಾಟ್ರಸ್ಸಿಗೆ ಹೋಗಿ ಭೇಟಿಯಾಗಲೇ ಎಂದುಕೊಂಡವ ಮೊದಲು ಚೈತಾಲಿಯನ್ನು ಭೇಟಿಯಾಗಿ ವಿಷಯ ತಿಳಿದುಕೊಂಡು ನಂತರ ಹೋಗುವುದೇ ಸೂಕ್ತ ಎಂದು ಸುಮ್ಮನಾದ.

ಅಷ್ಟರಲ್ಲಿ ಒಳ ಬಂದ ಮೀರಾ, ಅಭಿರಾಮನನ್ನು ಕಂಡು ಆನಂದಾಶ್ಚರ್ಯಗಳಿಂದ, "ವಾಟ್ ಎ ಸರ್ಪ್ರೈಸ್. ಅದೇನು ಸಡನ್ನಾಗಿ ಬಂದ್ಬಿಟ್ಟಿದ್ದೀರಾ?" ಎಂದರು.

"ಪ್ಲೀಸ್ ಬಹುವಚನ ಎಲ್ಲಾ ಬೇಡ. ನೀವು ನನ್ನ ಅಮ್ಮನ ಹಾಗೆ. ಹೆಸರು ಹಿಡಿದು ಕರೀರಿ" ಅವನೆಂದಾಗ, "ಸರಿನಪ್ಪಾ, ಈಗ್ಹೇಳು. ಅದೇನು ಹೀಗೆ ನನ್ನ ಹುಡುಕಿ ಬಂದು ಕಾಯ್ತಿದ್ದೀಯಾ?" ಫ್ಲಾಸ್ಕಿನಲ್ಲಿದ್ದ ಟೀ ಎರಡು ಗ್ಲಾಸುಗಳಿಗೆ ಬಗ್ಗಿಸಿ, ಒಂದನ್ನು ಅವನಿಗೆ ನೀಡಿ, ಇನ್ನೊಂದು ಕಪ್ ಕೈಗೆತ್ತಿಕೊಂಡು ಕೇಳಿದರು ಮೀರಾ.

"ನಿಮ್ಮ ಹತ್ತಿರ ಸ್ವಲ್ಪ ಮಾತಾಡೋದಿದೆ. ತೀರಾ ವೈಯಕ್ತಿಕ ವಿಷಯ. ಆರ್ ಯು ಫ್ರೀ ನೌ?" ಅವನು ಕೇಳಿದಾಗ ಅಚ್ಚರಿಯಿಂದ ಅವನೆಡೆಗೆ ನೋಡಿದರು. ನನ್ನ ಹತ್ರ ಮಾತನಾಡುವ ವೈಯಕ್ತಿಕ ವಿಷಯ ಏನಿರಬಹುದು ಎಂಬುದು ಅವರಿಗೆ ಅರ್ಥವಾಗಲಿಲ್ಲ. 

"ಕೆಲಸ ಇದೆ ಬಟ್ ಫ್ರೀ ಮಾಡ್ಕೋತೀನಿ. ಹೇಳು ಏನು ವಿಷಯ?" ಕೇಳಿದರು.

ಅವನು ಹೇಗೆ ಆರಂಭಿಸಬೇಕು ಎಂದು ಅರ್ಥವಾಗದೆ, ಎರಡು ಮೂರು ಸಲ ಮಾತಿಗಾರಂಭಿಸಲು ಹೊರಟು ಸುಮ್ಮನಾದಾಗ ಬಹಳ ಗಹನವಾದ ವಿಚಾರವೇ ಇರಬೇಕು ಎನಿಸಿತು ಮೀರಾರಿಗೆ.

"ಯಾಕಿಷ್ಟು ಸಂಕೋಚ? ಈಗಷ್ಟೇ ನಾನು ನಿನ್ನ ಅಮ್ಮನ ತರಾನೇ ಅಂದಿದ್ದು ಸುಳ್ಳೇನು?" 

"ಹಾಗಲ್ಲ. ತುಂಬಾ ಸೂಕ್ಷ್ಮ ವಿಚಾರ. ಹೇಗೆ ಹೇಳ್ಬೇಕೋ ತಿಳೀತಿಲ್ಲ. ನಾನು ಸಮನ್ವಿತಾ ಬಗ್ಗೆ ಮಾತನಾಡೋಕೆ ಬಂದೆ. ಅವಳ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತು" ಎಂದ. ಇದನ್ನು ನಿರೀಕ್ಷಿಸಿರಲಿಲ್ಲ ಮೀರಾ. ಅವರಿಗೆ ಅವನ ಮಾತಿನ ತಲೆಬುಡ ಅರ್ಥವಾಗಲಿಲ್ಲ.

"ಯು ಮೀನ್ ಡಾಕ್ಟರ್ ಸಮನ್ವಿತಾ? ಸತ್ಯಂ ರಾವ್ ಮಗಳು?" ಅನುಮಾನದಲ್ಲಿ ಕೇಳಿದರು. ಹೌದೆಂದು ತಲೆಯಾಡಿಸಿದ.

"ನನಗೇನು ಅರ್ಥವಾಗುತ್ತಿಲ್ಲ ಅಭಿರಾಮ್. ನಿನಗೆ ಅವಳು ಪರಿಚಯನಾ? ಪರಿಚಯ ಇದ್ರೆ ಅವಳ್ಹತ್ರನೇ ಕೇಳಬಹುದಲ್ಲ. ಇಷ್ಟಕ್ಕೂ ಅವಳ ಮಾಹಿತಿ ನಿಂಗ್ಯಾಕೆ? ವಿವರಿಸಿ ಹೇಳ್ಬಹುದಾ?" 

ಮೀರಾ ಬಗ್ಗೆ ಚೆನ್ನಾಗಿ ಗೊತ್ತು ಅವನಿಗೆ. ಆಕೆಗೆ ಎಲ್ಲಾ ವಿಷಯ ಹೇಳುವುದರಲ್ಲಿ ತೊಂದರೆಯೇನು ಇಲ್ಲ ಎನಿಸಿತು. ಕ್ಷಣ ಯೋಚಿಸಿದವನು ರಾವ್‌ ‌ಅವರ ಪಾರ್ಟಿಯಿಂದ ಹಿಡಿದು ನಿನ್ನೆಯತನಕ ನಡೆದದ್ದೆಲ್ಲವನ್ನೂ ಚಾಚೂ ತಪ್ಪದೆ ವಿವರಿಸಿದ. ಅವನ ಮಾತನ್ನು ಕೇಳಿ ಮೀರಾ ಉಸಿರಾಟವನ್ನೂ ಮರೆತವರಂತೆ ಕುಳಿತುಬಿಟ್ಟರು.

ಅವರಿಗೆ ಸುಧಾರಿಸಿಕೊಳ್ಳಲು ಸಮಯ ಹಿಡಿಯಿತು. ಅವನೇ ಅವರನ್ನು ಸಮಾಧಾನಿಸಿದ. ಸ್ವಲ್ಪ ಚೇತರಿಸಿಕೊಂಡವರು, "ಅದಕ್ಕೇ ಇವತ್ತು ಬಂದಿಲ್ಲ ಅವಳು ಆಸ್ಪತ್ರೆಗೆ. ಒಬ್ಬಳೇ ಕ್ವಾಟ್ರಸ್ಸಿನಲ್ಲಿ ಕೂತು ಅಳ್ತಿರ್ಬೇಕು ಹುಚ್ಚುಡುಗಿ. ಸಂತೋಷ ಎಲ್ಲರೊಟ್ಟಿಗೆ ಹಂಚಿಕೊಳ್ತಾಳೆ ಆದರೆ ನೋವಲ್ಲಿ ಯಾರಿಗೂ ಪಾಲಿಲ್ಲ" ವ್ಯಾಕುಲಗೊಂಡರು.

ಅವನು ಏನೂ ಕೇಳದೆ ಸುಮ್ಮನಾದ. ಆದರೆ ಅವರು ಮಾತನಾಡತೊಡಗಿದರು. ಅವಳು ಮೊದಲು ಧನ್ವಂತರಿಯಲ್ಲಿ ಕಂಡಲ್ಲಿನಿಂದ ಈಗಿನವರೆಗಿನ ಅವಳ ಪಯಣ, ಅವಳ ನೋವು, ನಲಿವು, ಆಶ್ರಯದೊಂದಿಗಿನ ಅವಳ ಒಡನಾಟ, ಕೆಲ ದಿನದ ಹಿಂದಷ್ಟೇ ಮನೆ ಬಿಟ್ಟು ಕ್ವಾಟ್ರಸ್ಸಿಗೆ ಶಿಫ್ಟ್ ಆದುದು ಎಲ್ಲವು ಬಂದು ಹೋದವು ಅವರ ಮಾತಲ್ಲಿ. ಅವಳ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು ಅಭಿರಾಮ್ ಮನದಲ್ಲಿ. ಹೊರ ಜಗತ್ತಿಗೆ ತೋರ್ಪಡಿಸದಿದ್ದರೂ ಅವಳ ಆಂತರ್ಯದಲ್ಲಿ ನೋವಿನ ಕೈ ಮೇಲು ಎನಿಸಿತವನಿಗೆ.

"ಹಣ, ಪ್ರತಿಷ್ಟೆ, ಸಿರಿವಂತಿಕೆ ಇದ್ಯಾವುದೂ ಅವಳಿಗೆ ಬೇಕಿರಲಿಲ್ಲ. ಅವಳು ಇಷ್ಟು ವರ್ಷಗಳಲ್ಲಿ ಹೆತ್ತವರಿಂದ ಬಯಸಿದ್ದು ಪ್ರೀತಿ, ಮಮತೆ ಮಾತ್ರ. ಬಟ್ ಅವಳಪ್ಪ ಅಮ್ಮನಿಗೆ ಅದ್ಯಾವತ್ತೂ ಅರಿವಾಗಲೇ ಇಲ್ಲ. ಇನ್ನು ಮುಂದೆ ಅರಿಯಲೂ ಸಾಧ್ಯವಿಲ್ಲ ಬಿಡು. ಎಂತಾ ನೀಚ ಜನ. ಪ್ರಾಣಿಗಳಿಗೂ ಕಡೆ. ಕೈಯಲ್ಲಿ ವಜ್ರ ಇಟ್ಕೊಂಡು ಯಾವುದೋ ಕಾಗೆ ಬಂಗಾರದ ಹಿಂದೆ ಓಡ್ತಿದ್ದಾರೆ. ಎಂತಹ ಮಗಳಿಗೆ ಎಂತಹ ಹೆತ್ತವರು........" ನಿಟ್ಟುಸಿರಾದರು.

ಇಬ್ಬರಲ್ಲೂ ಮಾತುಗಳಿರಲಿಲ್ಲ. ಕ್ಷಣಗಳು ಮೌನವಾಗಿ ಜಾರುತ್ತಿದ್ದವು. ಅವನು ಫೋನ್ ರಿಂಗಣಿಸಿತು. ವೈಭವ್ ಕರೆ ಮಾಡುತ್ತಿದ್ದ. ಚೈತಾಲಿಯ ಮನೆಗೆ ಹೋಗಬೇಕಿರುವುದು ನೆನಪಾಗಿ ಎದ್ದ.

"ಥ್ಯಾಂಕ್ಯೂ, ಇಷ್ಟೆಲ್ಲಾ ವಿಚಾರ ಹಂಚಿಕೊಂಡಿದ್ದಕ್ಕೆ. ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಉಳಿದವಕ್ಕೂ ಸಿಗುತ್ತೆ ಅನ್ನೋ ಭರವಸೆ ಇದೆ. ಬರ್ತೀನಿ" ಎಂದು ಹೊರಟವನನ್ನು ಮೀರಾರ ಮಾತುಗಳು ತಡೆಯಿತು.

"ಅಭಿರಾಮ್ ನೀನು ಸಮನ್ವಿತಾಳನ್ನು ಮದುವೆ‌ ಆಗ್ತೀಯೋ ಬಿಡ್ತೀಯೋ ಅದು ನಿಮ್ಮಿಬ್ಬರ ವೈಯಕ್ತಿಕ ವಿಚಾರ. ಆದರೆ ಒಂದು ವೇಳೆ‌ ಅವಳು ನಿನ್ನ ಮದುವೆ ಆಗ್ಲಿಕ್ಕೆ ಒಪ್ಪಿದರೆ ಖಂಡಿತಾ ನಿರಾಕರಿಸಬೇಡ. ಅವಳದ್ದು ಪರಿಶುದ್ಧ ಮನಸ್ಸು. ಅವಳ ಯೋಚನೆ, ಚಿಂತನೆಗಳೆಲ್ಲಾ ಮೇಲ್ಮಟ್ಟದ್ದು. ಯಾರ ಮನಸ್ಸನ್ನು ನೋಯಿಸುವವಳಲ್ಲ. ನಾನು ಇಲ್ಲಿಯವರೆಗೆ ನೋಡಿರುವವರಲ್ಲೇ ಅತೀ ನೇರ ನಡೆನುಡಿಯ ಹೆಣ್ಣುಮಗು ಅದು. ಅವಳಿಗೆ ಮನಸ್ಸಿನೊಳಗೊಂದು, ಹೊರಗೊಂದು ಇಲ್ಲ. ನೀನು ಸಮನ್ವಿತಾನ ಮದುವೆಯಾದರೆ ನನಗೆ ತುಂಬಾ ಸಂತೋಷ. ಆಗ ನಿನ್ನ ಮನೆಯವರ ಮೂಲಕವಾದರೂ ಅವಳು ಹಂಬಲಿಸುತ್ತಿರೋ ಪ್ರೀತಿ, ಮಮತೆ ಅವಳಿಗೆ ಸಿಗುತ್ತೆ. ಆ ಅದೃಷ್ಟ ನಿನ್ನಿಂದ ಅವಳಿಗೆ ಒದಗಲಿ ಅನ್ನೋ ಸ್ವಾರ್ಥ. ಹಾಗೆ ಆಗ್ಲೀ ಅನ್ನೋ ಹಾರೈಕೆ ನನ್ನದು" ಅವರ ಹೃತ್ಪೂರ್ವಕವಾದ ಹಾರೈಕೆಗೆ ಅವನು ನಸುನಕ್ಕ. ಅವನ ಮನದ ಭಾವನೆಗಳು ಈಗ ಬಹುಪಾಲು ಸ್ಪಷ್ಟರೂಪ ಪಡೆದಿದ್ದವು.....

"ನೀವು ಹೇಳಿದ ಹಾಗೆ ಆಗ್ಲೀ ಅಂತ ನಾನೂ ಆಶಿಸುತ್ತೇನೆ. ಆದರೆ ಒಂದು ಕರೆಕ್ಷನ್. ನನ್ನಿಂದ ಅವ್ಳಿಗೆ ಅದೃಷ್ಟ ದೊರಕಬೇಕಾದ ಅಗತ್ಯವಿಲ್ಲ. ಹಾಗೊಂದು ವೇಳೆ ಸಮನ್ವಿತಾ ಈ ಮದುವೆಗೆ ಒಪ್ಪಿದರೆ ನಮಗೆ ಅದೃಷ್ಟ ದೇವತೆ ಸಿಕ್ಕಂತೆ. ಐ ವಿಲ್ ಬಿ ವೆರಿ ಲಕ್ಕಿ ಟು ಹ್ಯಾವ್ ಹರ್. ಬರ್ತೀನಿ ಸಿ ಯೂ" ಎಂದವನೇ ಹೊರಬಂದ. 

ಕಾರಿನ ಬಳಿ ಬರುವಾಗ ವೈಭವ್ ಹಾಜರಿದ್ದ. ಬೈಗುಳ ಕೇಳಲು ತಯಾರಾಗಿ ಎರಡೂ ಕಿವಿಗೆ ಹತ್ತಿಯಿಟ್ಟು ಬಂದಿದ್ದ. ಆದರೆ ಅಭಿ ಬೈಯುವ ಮೂಡಿನಲ್ಲಿರಲಿಲ್ಲ. ಬಂದವನೇ ಅವನ ಭುಜ ಬಳಸಿ, 

"ಏನೋ ಕುಂಭಕರ್ಣ, ಆಯ್ತಾ ನಿದ್ದೆ? ಹಲ್ಲುಜ್ಜಿ, ಸ್ನಾನ ಗೀನ ಎಲ್ಲ ಮಾಡ್ಕೊಂಡು ಬಂದೆ ತಾನೆ? ಕಡೆಗೆ ನಿನ್ನ ಅತ್ತೆ ಮಾವನನ್ನು ಇಂಪ್ರೆಸ್ ಮಾಡೋಕೆ ಹೋಗಿ ನಿನ್ನ ಅವತಾರಕ್ಕೆ ಅವರು ಡಿಪ್ರೆಸ್ ಆದ್ರೆ ಕಷ್ಟ. ಅದೇನು ಪ್ಯಾಂಟ್ ಶರ್ಟ್ ಹಾಕ್ಕೊಂಡ್ ಬಂದಿದ್ದೀ? ನಾನೇನೋ ಪಂಚೆ ಉಟ್ಟು, ಶಲ್ಯ ಹೊದ್ದು, ಫಲ ತಾಂಬೂಲ ಸಮೇತ ಬರ್ತೀಯಾ ಅಂದ್ಕೊಂಡಿದ್ದೆ" ರೇಗಿಸಿದ.

"ಹೌದಲ್ಲ. ನನಗ್ಯಾಕಿದು ಹೊಳಿಲೇ ಇಲ್ಲ? ಛೇ ಇವತ್ತೇ ನಿಶ್ಚಿತಾರ್ಥ ಮುಗ್ಸಿಬಿಡ್ಬಹುದಿತ್ತಲ್ಲ ಬೀರ್" ಅವಲತ್ತುಕೊಂಡ.

"ಯಾಕೆ ಮದ್ವೇ ಬೇಡ್ವಾ?" ಕೇಳಿದ ತಮಾಷೆಯಾಗಿ.

"ಮದ್ವೆ ಈಗ್ಲೇ ಬೇಡ. ನಾನು RAW ಜಾಯ್ನ್ ಆಗಿ, ಮೋದಿಯವರು ಸನ್ಮಾನ ಮಾಡಿದ್ಮೇಲೆನೇ ಮದುವೆ"

"ಮೋದಿನಾ? ಏನು ಮತ್ತೆ ಕನಸಾ? ಇನ್ನೂ ಸ್ವಲ್ಪ ಹೊತ್ತು ನಿನ್ಹತ್ರ ಮಾತಾಡ್ತಿದ್ರೆ ನಿನ್ನ ಸುಡುಗಾಡು ಕನಸಿನ ದೆಸೆಯಿಂದ ನಾನು ಕಂಕನಾಡಿಗೆ ಹೋಗ್ಬೇಕಾಗುತ್ತೆ. ನೋಡಪ್ಪಾ…. ನಾನಂತು ಹೊರಟೆ. ನೀನು ಬರ್ತಿಯಾದ್ರೆ ಬಾ, ಇಲ್ಲಾ ಇಲ್ಲೇ ನಿಂತ್ಕೊಂಡು ಮೋದಿಜೀಗೆ ವೇಯ್ಟ್ ಮಾಡು" ಎಂದು ಕಾರು ಹತ್ತಿದ.

"ಇರೋ ಬೀರ್ ನಾನೂ ಬಂದೆ" ಎಂದು ಕಾರಿನ ಇನ್ನೊಂದು ಬದಿ ಹತ್ತಿ ಕುಳಿತ ವೈಭವ್.

ಕಾರು ಚೈತಾಲಿಯ ಮನೆಯ ಹಾದಿ ಹಿಡಿಯಿತು.

               ************************

ನವ್ಯಾ ಎಡೆಬಿಡದೆ ಸಮನ್ವಿತಾಳ ಅಂಗೈ ಅಂಗಾಲುಗಳನ್ನು ಉಜ್ಜುತ್ತಿದ್ದಳು. ನಡುನಡುವೆ ಅವಳ ನೋಟ ಬಾಗಿಲತ್ತ ಹರಿಯುತ್ತಿತ್ತು. ಮಾತ್ರೆ ತರುತ್ತೇನೆಂದು ಹೋದ ಕಿಶೋರ್ ಯಾಕಿನ್ನೂ ಬರಲಿಲ್ಲ ಅನ್ನೋ ಯೋಚನೆ ಬೇರೆ. ಪ್ರಜ್ಞೆಯಿಲ್ಲದೇ ಮಲಗಿದ್ದ ಸಮನ್ವಿತಾಳ ಪರಿಸ್ಥಿತಿ ನೋಡಿ ಅವಳಿಗೆ ಹುಚ್ಚು ಹಿಡಿದಂತಾಗಿತ್ತು.

ಹಿಂದಿನ ದಿನ ಸಂಜೆ ಸಮನ್ವಿತಾಳೊಂದಿಗೆ ಮಾತಾಡೋಣವೆಂದು ಕರೆ ಮಾಡಿದಾಗ ಅವಳು ರಿಸೀವ್ ಮಾಡಿರಲಿಲ್ಲ. ರಾತ್ರಿ ಪದೇ ಪದೇ ಕರೆ ಮಾಡಿದಾಗಲೂ ಅದೇ ಪುನರಾವರ್ತನೆ. ಮೆಸೇಜಿಗೆ ಉತ್ತರವಿಲ್ಲ. ಕೊನೆಗೆ ತಲೆಬಿಸಿಯಾಗಿ ಧನ್ವಂತರಿಗೆ ಕರೆಮಾಡಿ ಕೇಳಿದಾಗ ಅರ್ಧ ದಿನ ರಜೆ ಪಡೆದು ಎಲ್ಲಿಗೋ ಹೋದರು ಎಂಬ ಉತ್ತರ. ಆಗ ನೆನಪಾಗಿತ್ತು ಅವಳಿಗೆ ಅಭಿರಾಮ್ ಮನೆಯವರ ಆಹ್ವಾನ….. ಅಲ್ಲಿಗೆ ಹೋಗಿರಬಹುದು ಎಂದು ಸಮಾಧಾನಿಸಿಕೊಂಡಳಾದರೂ ಏನೋ ತಳಮಳ.

ಎಲ್ಲೇ ಇದ್ದರೂ ತನ್ನ ಕರೆ ಸ್ವೀಕರಿಸದೇ ಇರುವವಳಲ್ಲ. ಕೊನೆಗೆ ಒಂದು ಮೆಸೇಜನ್ನಾದರೂ ಕಳಿಸಿಯೇ ಇರುತ್ತಾಳೆ. ಇಂದೇನಾಯಿತು? 

ಅದನ್ನೇ ಕಿಶೋರನಿಗೂ ಹೇಳಿದ್ದಳು. ಅವನಿಗೆ ಗಾಬರಿಯಾದರೂ, ಶರ್ಮಾ ಅವರ ಮನೆಯಲ್ಲಿ ಮಾತಿನಲ್ಲಿ ಫೋನ್ ನೋಡಿರಲಿಕ್ಕಿಲ್ಲ ಎಂದು ಸಮಾಧಾನಿಸಿದ್ದ. ಹಾಗೋ ಹೀಗೋ ಯೋಚನೆಯಲ್ಲಿಯೇ ಬೆಳಗಾಗಿಸಿದ್ದಳು. ಬೆಳಿಗ್ಗೆಯೇ ಕರೆ ಮಾಡಿದಾಗಲೂ ಅದೇ ಉತ್ತರ ಕೇಳಿದಾಗ ಅವಳಿಗೆ ಗಾಬರಿಯಾಯಿತು. ಕಿಶೋರನನ್ನು ಎಬ್ಬಿಸಿ ಹೇಳಿದಳು. ಅವನು ಆಸ್ಪತ್ರೆಯಲ್ಲಿ ಕೇಳಿದಾಗ ಬಂದಿಲ್ಲವೆಂದರು. ಕೂಡಲೇ ಕಾರ್ತಿಕ್ ಗೆ‌ ಹೇಳಿ ಹೊರಟಿದ್ದರು.

ಅವಳ ಕ್ವಾಟ್ರಸ್ಸಿನ ಬಾಗಿಲು ಬಡಿದಾಗ ಅದು ತಾನಾಗೇ ತೆರೆದುಕೊಂಡಿತು. ಲಾಕ್ ಆಗಿರದ ಬಾಗಿಲು ಇಬ್ಬರಿಗೂ ಯಾವುದೋ ಅಪಾಯದ ಮುನ್ಸೂಚನೆ ನೀಡಿತ್ತು. ಗಾಬರಿಯಲ್ಲಿ ಇಡೀ ಮನೆಯನ್ನೆಲ್ಲಾ ಸುತ್ತಿದರು. ಎಲ್ಲೂ ಅವಳ ಸುಳಿವಿರಲಿಲ್ಲ. ಕರೆದರೂ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ಕಿಶೋರ್ ಮನೆಯ ಸುತ್ತಮುತ್ತ ನೋಡುವೆನೆಂದು ಹೊರಗೋಡಿದ್ದ. ಮನೆಯೊಳಗೆ ಮತ್ತೊಮ್ಮೆ ಸುತ್ತು ಹಾಕಿದ ನವ್ಯಾಳಿಗೆ ಬಚ್ಚಲು ಮನೆಯಲ್ಲಿ ಏನೋ ಸದ್ದಾಗುತ್ತಿರುವಂತೆ ಅನಿಸಿತ್ತು. ಕರೆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲಿಗೆ ಕಿವಿಯಿಟ್ಟು ಆಲಿಸಿದಳು. ಶವರ್ ನಿಂದ ನೀರು ಸುರಿಯುತ್ತಿರುವ ಸದ್ದು...... ನಡುನಡುವೆ ಇನ್ನೇನೋ ಶಬ್ದ......

ಸಮನ್ವಿತಾ ಒಳಗಿದ್ದಾಳೆಂಬುದು ಖಚಿತವಾಗಿತ್ತು.

ಬಾಗಿಲನ್ನು ಮೆಲ್ಲಗೆ ದೂಡಿದಳು. ಅದೂ ಲಾಕ್ ಆಗಿರಲಿಲ್ಲ. ಆದರೆ ಹಳೆಯ ಬಾಗಿಲಾದ್ದರಿಂದ ನಿರಂತರವಾಗಿ ನೀರು ಬಿದ್ದು ಕಚ್ಚಿಕೊಂಡಿತ್ತು. ಬಡಪೆಟ್ಟಿಗೆ ತೆರೆಯಲಿಲ್ಲ. ಇನ್ನೊಮ್ಮೆ ಸ್ವಲ್ಪ ಬಲವಾಗಿ ದೂಡಿದಾಗ ಬಾಗಿಲು ತೆರೆದುಕೊಂಡಿತ್ತು.

ಎದುರು ಕಂಡ ದೃಶ್ಯ ಅವಳ‌ ಮನಕಲಕಿತು......

ಶವರ್ ಆನ್ ಮಾಡಿ ಅದರ ಕೆಳಗೆ ಕೂತಿದ್ದಳು ಸಮನ್ವಿತಾ.......

ಕೈಯನ್ನು ಬಾಯಿಗೆ ಅಡ್ಡವಾಗಿ ಕಚ್ಚಿ ಹಿಡಿದು ಬಿಕ್ಕುತ್ತಿದ್ದಳು ಸ್ವರ ಹೊರಬರಬಾರದೆಂದು.

ಜೋರಾಗಿ ಸ್ವರವೆತ್ತಿ ಅಳಲೂಬಾರದೇ ಹುಡುಗೀ?

ಬಹಳ‌ ಹೊತ್ತಿನಿಂದ ಅಲ್ಲೇ ಕುಳಿತಿದ್ದಳೇನೋ. ಬಿಕ್ಕಳಿಸಿ ಬಿಕ್ಕಳಿಸಿ ಉಸಿರು ಹಿಡಿದಂತೆ ಸಣ್ಣ ಚೀತ್ಕಾರ ಹೊರಡುತ್ತಿತ್ತು.

ಕಣ್ಣೀರು ತುಂಬಿ ಎದುರಿನ ಬಿಂಬ ಮಸುಕಾಗತೊಡಗಿದಾಗ ಎಚ್ಚೆತ್ತ ನವ್ಯಾ ಶವರ್ ಆಫ್ ಮಾಡಿದವಳು ಕಿಶೋರನಿಗೆ ಕೂಗು ಹಾಕಿ ಸಮನ್ವಿತಾಳನ್ನು ಎಬ್ಬಿಸಲು ಪ್ರಯತ್ನಿಸಿದಳು. ಅವಳಿಂದ ಸಾಧ್ಯವಾಗದೇ ಮತ್ತೆ ಜೋರಾಗಿ ಕಿಶೋರನನ್ನು ಕೂಗಿದ್ದಳು. ಒಳ ಬಂದ ಕಿಶೋರನಿಗೆ ಗೆಳತಿಯ ಸ್ಥಿತಿ ನೋಡಿ ಹೃದಯ ಬಾಯಿಗೆ ಬಂದಂತಾಗಿತ್ತು. ಇಬ್ಬರೂ ಸೇರಿ ಸಮನ್ವಿತಾಳನ್ನು ರೂಮಿಗೆ ಸಾಗಿಸಿದ್ದರು. ನವ್ಯಾ ಅವಳ ಬಟ್ಟೆ ಬದಲಿಸಿ, ತಲೆ ಒರೆಸುವುದರೊಳಗೆ ಕಿಶೋರ್ ಹಾಲು ಬಿಸಿ ಮಾಡಿ ತಂದಿದ್ದ. ಆದರೆ ಇಬ್ಬರೂ ಎಷ್ಟು ಪ್ರಯತ್ನಿಸಿದರೂ ಅವಳು ಬಾಯಿ ತೆರೆಯಲಿಲ್ಲ.

ಕಣ್ಣಿಂದ ಅವ್ಯಾಹತವಾಗಿ ನೀರು ಸದ್ದಿಲ್ಲದೇ ಸುರಿಯುತ್ತಿರುವುದು ಬಿಟ್ಟರೇ ಅವಳಿಗೆ ಇಹದ ಬೋಧೆಯೇ ಇರಲಿಲ್ಲ. ಅವಳನ್ನು ಕರೆದು, ಎಬ್ಬಿಸಲು ಪ್ರಯತ್ನಿಸಿ ಸುಸ್ತಾಗಿ ನವ್ಯಾ ಕೆನ್ನೆಗೊಂದೇಟು ಹಾಕಿದವಳೇ "ಸಮಾ ಎಚ್ಚರ ಮಾಡ್ಕೋಳ್ಳೇ. ಯಾಕ್ಹೀಗೆ ಮಾಡ್ತಿದ್ದೀಯಾ" ಜೋರಾಗಿ ಹಿಡಿದಲುಗಿಸಿದಾಗ ಒಮ್ಮೆಲೇ ಬೆಚ್ಚಿ ನೋಡಿದಳು….. ಕಣ್ಮುಂದೆ ನವ್ಯಾ, ಕಿಶೋರ್.....

ನವ್ಯಾಳನ್ನು ಕಂಡದ್ದೇ ಜನ್ಮಾಂತರದ ನೋವನೆಲ್ಲಾ ಇಂದೇ ಹೊರಹಾಕುವೆ ಎಂಬಂತೆ ಅವಳನ್ನು ತಬ್ಬಿ ದೊಡ್ಡ ದನಿಯಲ್ಲಿ ಅಳತೊಡಗಿದಳು‌. ಅವಳ ಆ ಪರಿ ಕಂಡು ಇಬ್ಬರೂ ದಂಗಾಗಿದ್ದರು. ಅವರಿಗೆ ತಿಳಿದಂತೆ ಸಮನ್ವಿತಾ ತನ್ನ ಸಂತಸ ಹಂಚುತ್ತಾಳೆಯೇ ಹೊರತು ನೋವನ್ನು ಯಾರೊಂದಿಗೂ ತೋಡಿಕೊಳ್ಳುವುದಿಲ್ಲ. ಇನ್ನು ಸದ್ದೆತ್ತಿ ಅಳುವ ಮಾತೇ ಇಲ್ಲ. ಅವಳ ನೋವು ನೀರೊಳಗಿನ ಮೀನಿನ ಕಣ್ಣೀರಿನಂತೆ.

ಮೀನಿನ ಕಣ್ಣೀರು ತಿಳಿಯುವುದು ಮುಳುಗೇಳುವ ಅಲೆಗೆ ಮಾತ್ರವಂತೆ...

ಹಾಗೆಯೇ ಅವಳ ನೋವು.... 

ಅವಳ‌ ಆಂತರ್ಯಕ್ಕೆ ಮಾತ್ರವೇ ಅದು ವಿಶದವಾಗುವುದು.....

ಯಾರ ಊಹೆಗೂ ನಿಲುಕುವುದಿಲ್ಲ.....

ಅವಳ ಬಾಳ ಪುಟಗಳೂ ಸಹ ನವ್ಯಾಳ ಬಾಳಿನಂತೆಯೇ ಜಗಕ್ಕೆ ಅನೂಹ್ಯ.

ಏನಾಗಿದೆ? ಯಾಕೆ ಈ ಪರಿ ಶೋಕಿಸುತ್ತಿದ್ದಾಳೆ? ಎಂಬ ಯೋಚನೆಯಲ್ಲಿ ಇದ್ದರು ಇಬ್ಬರೂ. ನಿನ್ನೆ ಫೋನ್ ರಿಸೀವ್ ಮಾಡದಿದ್ದಾಗಲೇ ಬರಬೇಕಿತ್ತೆಂದು ಸಾವಿರ ಬಾರಿ ಅನ್ನಿಸಿತು ಮನಸಿಗೆ. ಅವಳ ತಲೆ ಸವರುತ್ತಾ ಸಮಾಧಾನಿಸಿದವಳು, "ಯಾಕೆ ಪುಟ್ಟಮ್ಮಾ ಹೀಗೆ ಅಳ್ತಿದ್ದೀ? ನೀನು ಹೀಗೆ ಅಳೋದು ನೋಡೋಕಾಗಲ್ವೇ. ಪ್ಲೀಸ್ ಏನಾಯ್ತು ಅಂತನಾದರೂ ಹೇಳೇ" ಗೋಗರೆದಳು.

ತಟ್ಟನೆ ನವ್ಯಾಳ ಮೊಗವನ್ನು ತನ್ನ ಕೈಗಳಲ್ಲಿ ಹಿಡಿದವಳು, "ಮೊದಲ ಬಾರಿಗೆ ನಿನ್ನ ಅರಿವಿಗೇ ಬಾರದಂತೆ ವೇಶ್ಯಾಗೃಹದೊಳಗೆ ನಿನ್ನನ್ನು ನೀನು ಕಂಡುಕೊಂಡಾಗ ನಿನಗೆ ಹೇಗನಿಸಿರಬಹುದು ಎಂದು ನನಗೆ ನಿನ್ನೆ ಅರಿವಾಯಿತು ನವ್ಯಾ….." ಎಂದುಬಿಟ್ಟಿದ್ದಳು ಸಮನ್ವಿತಾ.

ಅವಳ ಮಾತು ಕೇಳಿ ತತ್ತರಿಸಿ "ಸಮನ್ವಿತಾ" ಎಂದು ಚೀರಿದ್ದಳು ನವ್ಯಾ.

ಕಿಶೋರ್ "ಏನು ಮಾತಾಡ್ತಿದ್ದಿ ಅನ್ನುವ ಅರಿವಾದರೂ ಇದೆಯೇ ನಿನಗೆ ಸಮಾ" ಎಂದಿದ್ದ ಕೋಪದಲ್ಲಿ.

ಅದರೆ ಅವಳಿಗೆ ಅವರ ಮಾತು ಕೇಳಿಸುತ್ತಿರಲಿಲ್ಲ.

ಅವಳೊಳಗೆ ಹುಟ್ಟಿದ ಹೇವರಿಕೆ ಅವಳನ್ನು ಜಿದ್ದಿಗೆ ನೂಕಿತ್ತು. ಮಾತನಾಡಲೇ ಬೇಕು ಎಂಬ ಜಿದ್ದು....... 

ಜಗತ್ತಿನೊಂದಿಗೆ ಬಡಿದಾಡಬೇಕೆಂಬ‌ ಜಿದ್ದು......

"ನಾವಿಬ್ಬರೂ ಮಾರಾಟಗೊಂಡ ಹಸುಗಳು‌ ನವ್ಯಾ. ವ್ಯತ್ಯಾಸವೆಂದರೆ ಅಂದು ನೀನು ಕಸಾಯಿಖಾನೆಗೆ ಮಾರಲ್ಪಟ್ಟ ಹಸುವಾದರೆ, ಇಂದು ನಾನು ಗೋಕುಲಕ್ಕೆ ಮಾರಲ್ಪಟ್ಟಿರುವೆ. ಹೋಗಲಿರುವುದು ಕಸಾಯಿಖಾನೆಯಿರಲೀ, ಗೋಕುಲವಿರಲೀ ಇಲ್ಲಾ ಇಂದ್ರನ ಅಮರಾವತಿಯೇ ಆಗಿರಲಿ, ಆದರೆ ಆ ಮಾರಲ್ಪಟ್ಟ ಭಾವನೆಯ ಹಿಂದಿರುವ ವೇದನೆ ಶಮನವಾದೀತೇ? ಆ ಗೋವಿನಂತಹ ಹೆಣ್ಣಿಗೆ ಒಂದು ಮನವೆಂಬುದಿಲ್ಲವೇ? ಅದರೊಳಗೆ ಭಾವನೆಗಳಿಲ್ಲವೇ? ಒಂದು ಯಕಶ್ಚಿತ್ ವಸ್ತುವಿನಂತೆ ಮಾರಬಹುದೇ ಅವಳನ್ನು? ಹಣ ಸಂಪಾದಿಸಲು, ಸಿರಿವಂತಿಕೆಯ ಪ್ರತಿಷ್ಟೆ ಕಾಯ್ದಿಟ್ಟುಕೊಳ್ಳಲು ಅವಳನ್ನು ದಾಳವಾಗಿ ಉರುಳಿಸಬಹುದೇ?"

ಅವಳ ಮಾತುಗಳು ನವ್ಯಾಳಿಗೆ ಅತೀತದ ನರಕವನ್ನು ನೆನಪಿಸಿದರೆ, ಕಿಶೋರ್ "ಮಾರಾಟ" ಎಂಬ ಪದವನ್ನು ಜೀರ್ಣಿಸಿಕೊಳ್ಳಲಾಗದೇ ಒದ್ದಾಡಿ ಹೋಗಿದ್ದ.

ಆದರೂ ಹುಡುಗಿ ಮಾತು ನಿಲ್ಲಿಸದಾದಳು.

ಒಡಲಾಳವನ್ನು ದಹಿಸುತ್ತಿರುವ ಉರಿಕೆಂಡವನ್ನು ಎಷ್ಟು ಸಮಯ ಮನದ ಸೆರಗಿನಲ್ಲಿ ಕಟ್ಟಿಕೊಳ್ಳಬಹುದು? ಎಂದಾದರೂ ಒಮ್ಮೆ ಅದು ಅಗ್ನಿವರ್ಷ ಸುರಿಸುವ ಜ್ವಾಲಾಮುಖಿಯಂತೆ ಸಿಡಿಯಲೇ ಬೇಕಲ್ಲವೇ?  ಇಂದು ಅವಳ ಮನೋರಂಗದ ಅಗ್ನಿಶಿಖೆ ಸ್ಫೋಟಗೊಂಡಿತ್ತು.....

ಅವಳು ಮಾತನಾಡುತ್ತಲೇ ಇದ್ದಳು ಮತಿ ಇಲ್ಲದವರಂತೆ. ಅವರಿಬ್ಬರೂ ಸಮನ್ವಿತಾಳನ್ನು ತಡೆಯಲು ಹೋಗಲಿಲ್ಲ. ಇಂದು ಅವಳ ಒಡಲುರಿಯೆಲ್ಲವನ್ನು ಹೊರಹಾಕಿ ಸಮಾಧಾನಗೊಳ್ಳಲಿ ಎಂದು ಸುಮ್ಮನಾದರು. 

ನವ್ಯಾ ಅವಳ ಹೆಗಲು ತಬ್ಬಿ ಸುಮ್ಮನೆ ತಲೆ ನೇವರಿಸುತ್ತಿದ್ದಳು. ಮಾತನಾಡುತ್ತಲೇ ಅವಳು ಹೆಗಲಿನಿಂದ ಮಡಿಲಿಗೆ ಜಾರಿದಾಗ ಕಿಶೋರ್ ಎಚ್ಚೆತ್ತಿದ್ದ. ನವ್ಯಾಳಿಗೆ ಭಯವೆನಿಸಿತ್ತು ಅವಳ ಸ್ಥಿತಿ.

ನೆತ್ತಿ ಸುಡುತ್ತಿತ್ತು. ಕಿಶೋರ್ ಮಾತ್ರೆ ತರುವೆನೆಂದು ಹೊರಟ ಸ್ವಲ್ಪ ಹೊತ್ತಿಗೆ ಪ್ರಜ್ಞಾಹೀನಳಾಗಿದ್ದಳು ಸಮನ್ವಿತಾ. ನವ್ಯಾ ಅವಳನ್ನು ಎಚ್ಚರಿಸಲು ಪ್ರಯತ್ನಿಸಿ ಸೋತಳು. ಅವಳ ಭಯ ಹೆಚ್ಚಾಯಿತು.

ಕಿಶೋರನಿಗೆ ಕರೆ ಮಾಡಿದಳು. ಅವನು ಧನ್ವಂತರಿಯಲ್ಲೇ ಇದ್ದ. ಮೆಡಿಕಲಿನಲ್ಲಿ ಮಾತ್ರೆ ಕೊಳ್ಳುತ್ತಿದ್ದವ ನವ್ಯಾಳ ಮಾತು ಕೇಳಿ ಏನು ಮಾಡುವುದೆಂದು ತೋಚದೆ ನೇರ ಮೀರಾ ಅವರ ಬಳಿ ಓಡಿದ್ದ. ಅಭಿರಾಮ್ ಜೊತೆಗಿನ ಮಾತುಕತೆಯ ಬಗ್ಗೆ ಯೋಚಿಸುತ್ತಿದ್ದವರು ಕಿಶೋರನನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಅವನ ಮುಖದಲ್ಲಿನ ಗಾಬರಿ ಅವರಿಗೆ ಸಮನ್ವಿತಾಳದ್ದೇ ಚಿಂತೆ ತರಿಸಿತು.

"ಸಮನ್ವಿತಾ ಹುಷಾರಾಗಿದ್ದಾಳಲ್ಲ?" ಅವರೇ ಕೇಳಿದ್ದರು. ಅವನು ಇರುವ ವಿಷಯ ಹೇಳಿ ಅವರನ್ನು ಜೊತೆಗೆ ಕರೆದೊಯ್ದಿದ್ದ. ಜ್ವರ ನೆತ್ತಿಗೇರುವ ಸೂಚನೆ ಕಂಡು ಮೀರಾ ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದರು‌. ಹಿಂದಿನ ದಿನ ಮಧ್ಯಾಹ್ನದಿಂದ ಏನೂ ತಿಂದಿರಲಿಲ್ಲ ಅವಳು. ಅದರೊಂದಿಗೆ ರಾತ್ರಿ ಬೆಳಗಾಗುವವರೆಗೆ ತಣ್ಣೀರಿನಡಿ ಕುಳಿತಿದ್ದು, ವಿಪರೀತ ಅಳು, ಜ್ವರ ಎಲ್ಲಾ ಸೇರಿ ಗುರುತು ಹತ್ತದಂತಾಗಿದ್ದ ಸಮನ್ವಿತಾಳನ್ನು ಕಂಡು ಮೀರಾ ಮನ ದ್ರವಿಸಿತು.

ಎಂದೂ ಹೀಗೆ ಮಾಡಿದವಳಲ್ಲ ಈ ಹುಡುಗಿ. ಇಂದು ಈ ರೀತಿ ಆಗಬೇಕೆಂದರೆ ಅವಳಿಗೆಷ್ಟು ನೋವಾಗಿರಬೇಕು...... ನಿಟ್ಟುಸಿರುಬಿಟ್ಟರು.

ಡ್ರಿಪ್ಸ್ ಏರಿಸಿ ಅದರೊಳಗೆ ಇಂಜೆಕ್ಷನ್ ಚುಚ್ಚಿ ಹೊರಬಂದಾಗ ಕಳವಳದಲ್ಲಿ ಆಚೀಚೆ ಓಡಾಡುತ್ತಿದ್ದ ಕಿಶೋರ್, ತಲೆತಗ್ಗಿಸಿ ಕುಳಿತ ನವ್ಯಾ ಕಣ್ಣಿಗೆ ಬಿದ್ದರು. ನವ್ಯಾ ಅವರನ್ನು ನೋಡಿದವಳೇ ಓಡಿಬಂದಳು. ಅವರಿಬ್ಬರನ್ನು ಸಮಾಧಾನಿಸಿ ವಾರ್ಡಿನ ಒಳಗೆ ಇರುವಂತೆ ಕಳಿಸಿ ತಮ್ಮ ಕ್ಯಾಬಿನ್ನಿಗೆ ಬಂದವರು ಅಭಿರಾಮನಿಗೆ ಕರೆ ಮಾಡಿದರು.

ವೈಭವನ ತಲೆಬುಡವಿಲ್ಲದ ಮಾತುಗಳನ್ನು ಕೇಳಿ ನಗುತ್ತಾ ಡ್ರೈವ್ ಮಾಡುತ್ತಿದ್ದ ಅಭಿ. ಅವರು ಚೈತಾಲಿಯ ಮನೆಗೆ ಸಮೀಪವಿದ್ದರು. ಅಷ್ಟರಲ್ಲಿ ಅವನ ಫೋನ್ ರಿಂಗಾಗಿತ್ತು. ಯಾರೆಂದು ನೋಡಿದ.

'ಡಾ. ಮೀರಾ ಕಾಲಿಂಗ್' ಎಂದು ಡಿಸ್ಪ್ಲೇ ಆಗುತ್ತಿತ್ತು. ಕಾರು ನಿಲ್ಲಿಸಿ ಕರೆ ಸ್ವೀಕರಿಸಿದ್ದ.

"ಸಮನ್ವಿತಾ ಈಸ್ ಹಾಸ್ಪಿಟಲೈಸ್ಡ್" ಎಂದರು ಮೀರಾ.

"ವಾಟ್?" ಕಿರುಚಿದವನು ಮತ್ತೇನೂ ಕೇಳದೆ, "ನಾನು ಬರ್ತಿದ್ದೀನಿ" ಎಂದು ಕರೆ ಕಡಿತಗೊಳಿಸಿದ.

"ಚೈತಾಲಿ ಮನೆಗೆ ಆಮೇಲೆ ಹೋಗೋಣ. ಈಗ ಧನ್ವಂತರಿಗೆ. ಸಮನ್ವಿತಾ ಅಡ್ಮಿಟ್ ಆಗಿದ್ದಾಳಂತೆ" ಎಂದವನ ದನಿಯಲ್ಲಿ ಸತ್ವವಿರಲಿಲ್ಲ. 

ವೈಭವ್ "ಬೀರ್ ಕಾರು ನಾನು ಡ್ರೈವ್ ಮಾಡ್ತೀನಿ. ನೀನು ಸಮಾಧಾನ ಮಾಡ್ಕೋ. ಏನಾಗಲ್ಲ" ಎಂದವ ತಾನು ಡ್ರೈವಿಂಗ್ ಸೀಟಿನಲ್ಲಿ ಕುಳಿತ. ಕಾರು ಯು ಟರ್ನ್ ತೆಗೆದುಕೊಂಡು ಧನ್ವಂತರಿಯೆಡೆಗೆ ವೇಗವಾಗಿ ಸಾಗಿತು. ಅಭಿರಾಮ್ ತಂದೆಗೆ ವಿಷಯ ತಿಳಿಸಿದ. 

ಕಾರು ಧನ್ವಂತರಿಯ ಮುಂದೆ ನಿಂತಾಗ ಅಭಿರಾಮ್ ಹಾಗೇ ಕುಳಿತ್ತಿದ್ದ. ಅವನನ್ನು ಎಚ್ಚರಿಸಿದ ವೈಭವ್ "ಏನೂ ಆಗಿರಲ್ಲ ಬೀರ್, ನೀನು ಒಳಗೆ ಹೋಗು. ನಾನು ಕಾರ್ ಪಾರ್ಕ್ ಮಾಡಿ ಬರ್ತೀನಿ" ಎಂದ.

ಅಭಿರಾಮ್ ಭಾರವಾದ ಹೆಜ್ಜೆಗಳನ್ನು ಎತ್ತಿಟ್ಟು ಒಳನೆಡೆದ. ರಿಸೆಪ್ಷನಿನಲ್ಲೇ ಮೀರಾ ಕಂಡರು. ನಿಧಾನವಾಗಿ ಅವರ ಬಳಿ ಸಾಗಿದ. ಅವನ ಮುಖ ನೋಡಿಯೇ ಮನದ ತುಮುಲ ಲೆಕ್ಕ ಹಾಕಿದವರು, ಅವನ ಭುಜ ಹಿಡಿದು, "ಏನಾಗಿಲ್ಲ. ಜ್ವರ ಜಾಸ್ತಿಯಾಗಿ ಪ್ರಜ್ಞೆ ತಪ್ಪಿದೆಯಷ್ಟೇ. ನೋ ನೀಡ್ ಟು ವರಿ. ಹೋಗಿ ನೋಡು. ನಂಗೊಂಚೂರು ಕೆಲ್ಸ ಇದೆ. ಅವಳ ಫ್ರೆಂಡ್ಸ್ ನವ್ಯಾ ಮತ್ತೆ ಕಿಶೋರ್ ಇಬ್ರೂ ಇದ್ದಾರೆ ಅಲ್ಲೇ" ಎಂದು ವಾರ್ಡ್ ನಂಬರ್ ಹೇಳಿ ಕಳುಹಿಸಿದರು.

ಅವರು ಮಾತಿನಿಂದ ಕೊಂಚ ಸಮಾಧಾನಗೊಂಡವನು ಮೆಟ್ಟಿಲೇರಿ ವಾರ್ಡಿನ ಬಳಿ ಬಂದ. ಬಾಗಿಲು ತೆರೆದಿತ್ತು. 

ಕಿಶೋರ್ ಆಫೀಸಿನಿಂದ ಕರೆ ಬಂದ ಕಾರಣ ಮಾತನಾಡಲು ಹೊರಹೋಗಿದ್ದ. ಸಮನ್ವಿತಾಳಿಗೆ ಎಚ್ಚರವಾಗಿರಲಿಲ್ಲ. ನವ್ಯಾ ಅವಳನ್ನೇ ನೋಡುತ್ತಾ ಕುಳಿತುಬಿಟ್ಟಿದ್ದಳು. ಮನದಲ್ಲಿ ಏನೇನೋ ಯೋಚನೆಗಳು ತುಂಬಿ ಅದರೊಳಗೇ ಮುಳುಗಿಹೋಗಿದ್ದಳವಳು.

ಇನ್ನೇನು ಒಳಗೆ ಅಡಿ ಇಡಬೇಕು ಎಂದುಕೊಂಡವನ ಗಮನ ಅಲ್ಲೇ ಚೇರಿನಲ್ಲಿ ಕುಳಿತು ಸಮನ್ವಿತಾಳ ಮುಖವನ್ನೇ ನೋಡುತ್ತಾ ಯಾವುದೋ ಯೋಚನೆಯಲ್ಲಿ ಕಳೆದುಹೋಗಿದ್ದ ನವ್ಯಾಳ ಮೇಲೆ ಬಿತ್ತು.

ಅಷ್ಟೇ.........

ಅವನು ಸ್ತಬ್ದನಾದ ಅರೆ ಘಳಿಗೆ.......

ಇಷ್ಟು ದಿನದಿಂದ ಅವನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಯ ಉತ್ತರ ಈಗ ಅವನೆದುರಿತ್ತು.

ಕೆಲವು ವರ್ಷಗಳ ಹಿಂದಿನ ಘಟನೆಯೊಂದು ಅವನ ಅಕ್ಷಿಪಟಲದ ಮುಂದೆ‌ ಮರುಕಳಿಸಿತು.

ಒಮ್ಮೆ ನಿಡಿದಾಗಿ ಉಸಿರು ತೆಗೆದವನು ವಾರ್ಡಿನ ಒಳಹೋಗದೇ ಸೀದಾ ಹೊರಬಂದು ಅಲ್ಲಿದ್ದ ಸೋಫಾದಲ್ಲಿ ಕುಳಿತ.

ಅವನಿಗಂತೂ ವಿಪರೀತ ಸಂತೋಷವಾಗಿತ್ತು...... ಎಷ್ಟು ಸಂತೋಷವೆಂದರೆ…… ಸುಧಾರಿಸಿಕೊಳ್ಳಲು ಸಮಯ ಬೇಕಾಗುವಷ್ಟು.........

ಹೌ ಕ್ಯಾನ್ ಯು? ಹೇಗೆ ಮರೆತೆ ಸಮನ್ವಿತಾಳನ್ನು? ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೆ ಎಷ್ಟೊಂದು ಹುಡುಕಿದ್ದೆ ಇವಳನ್ನು.

ಸಿಕ್ಕಿರಲಿಲ್ಲ.......

ಹಾಗಂತ ಮರೆತೇ ಬಿಟ್ಟೆಯೇನು ಅವಳನ್ನು?

ನಾನೆಷ್ಟು ನೆನಪಿಸಲು ಪ್ರಯತ್ನಿಸಿದರೂ ಧೂಳು ಹಿಡಿದು ಮಸುಕಾಗಿದ್ದ ನೆನಪನ್ನು ಜಾಡಿಸಲಿಲ್ಲ ನೀನು....

ಅವನ ಮನ ಅವನನ್ನು ಪ್ರಶ್ನಿ‌ಸುತ್ತಿತ್ತು.

ಹೌದು ಹೇಗೆ ಮರೆತುಬಿಟ್ಟೆ ಇವಳನ್ನು ನಾನು? 

ಈಗ ಆ ಹುಡುಗಿಯನ್ನು ನೋಡಿದ್ದೇ ನೆನಪಾಯಿತು.

ಅಂದು ಇವಳೇ ಇದ್ದುದ್ದಲ್ಲವೇ ಸಮನ್ವಿತಾಳೊಂದಿಗೆ...

ಅವನು ಆನಂದದ ಪರಾಕಾಷ್ಟೆಯಲ್ಲಿದ್ದ. ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು.

ಎಷ್ಟೊಂದು ಹುಡುಕಾಡಿದರೂ ಸಿಗದೇ, ಸೋತು, ನೆನಪಿನಾಳದಲ್ಲಿ ಹುದುಗಿಸಿ ಇಟ್ಟವಳನ್ನು ಮರೆತೇಬಿಟ್ಟಿದ್ದೆನಲ್ಲ?

ಅವನ ಮನ ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು........

        *******ಮುಂದುವರೆಯುತ್ತದೆ*******





                 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ