ಗುರುವಾರ, ಜೂನ್ 4, 2020

Where's your ಮುಂದಿನ ನಿಲ್ದಾಣ.....!!

ಬಿಡುಗಡೆಯಾದಾಗಲೇ ಚಿತ್ರಮಂದಿರದಲ್ಲಿ ನೋಡಬೇಕೆಂದುಕೊಂಡಿದ್ದ ಸಿನಿಮಾ ಇದು. ಕಾರಣಾಂತರಗಳಿಂದ ಆರಂಭದಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಹೋಗಲು ಸಮಯ ಹೊಂದಿಸಿಕೊಳ್ಳುವ ವೇಳೆಗೆ ಚಿತ್ರ ಥಿಯೇಟರ್ ಗಳಲ್ಲಿ ಇರಲೇ ಇಲ್ಲ. ಸ್ಟಾರ್ ನಟರಿಲ್ಲದ ಹೊಸ ಪ್ರತಿಭೆಗಳ ಪ್ರಯೋಗಾತ್ಮಕ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಸರ್ವೇ ಸಾಮಾನ್ಯವಾಗಿರುವ ಸಂಗತಿ. ಹಾಗಾಗಿ ಈ ಸಿನಿಮಾ ನೋಡುವ ಆಸೆ ಈಡೇರಿರಲಿಲ್ಲ. ಕೊನೆಗೂ ಅಮೆಜಾನ್ ಪ್ರೈಮ್ ದಯೆಯಿಂದ ಈ ಸಿನಿಮಾ ನೋಡುವ ಭಾಗ್ಯ ಲಭಿಸಿತು.


ಚಿತ್ರದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಒಂದು ವಿಚಾರ ಸ್ಪಷ್ಟಪಡಿಸಿಬಿಡುವೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಸಿನಿಮಾ ಅಲ್ಲ. ನೀವು ಕಮರ್ಷಿಯಲ್ ಅಂಶಗಳನ್ನು, ಭರಪೂರ ಹಾಸ್ಯವನ್ನು ಎಲ್ಲಕ್ಕಿಂತ ಮುಖ್ಯವಾಗಿ ವೇಗವಾಗಿ ಸಾಗುವ ಕಥೆಯನ್ನು ನಿರೀಕ್ಷಿಸುವವರಾದರೆ ಪ್ರಾಯಶಃ ಈ ಸಿನಿಮಾ ನಿಮಗಲ್ಲ. ಸ್ಲೋ ಪೇಸ್ ಚಿತ್ರಗಳನ್ನು ಪಾತ್ರಗಳೊಂದಿಗೆ ಬೆಸೆದುಕೊಂಡು ಆಸ್ವಾದಿಸುವ ಮನಸ್ಥಿತಿ ನಿಮಗಿದ್ದರೆ ಮುಂದಿನ ನಿಲ್ದಾಣ ನಿಮಗೆ ಖಂಡಿತಾ ಇಷ್ಟವಾಗುತ್ತದೆ.

ಚಿತ್ರತಂಡವೇ ಹೇಳಿಕೊಂಡಂತೆ ಇದು ಹೊಸಕಾಲದ ಯುವಮನಸ್ಸುಗಳ ಕಥನ. ಕಥಾನಾಯಕ ಪಾರ್ಥನ ನಿರೂಪಣೆಯಲ್ಲಿ ಫ್ಲಾಶ್ ಬ್ಯಾಕ್ ತಂತ್ರದ ಮೂಲಕ ತೆರೆದುಕೊಳ್ಳುವ ಅವನ ಬದುಕಿನ ಯಾನವೇ ಮುಂದಿನ ನಿಲ್ದಾಣ. ಈ ಯಾನದ ಬೇರೆ ಬೇರೆ ಹಂತಗಳಲ್ಲಿ ಅವನ ಬದುಕನ್ನು ಪ್ರವೇಶಿಸಿ ಪಯಣದ ಹಾದಿಯನ್ನು ಸಿಹಿ ಕಹಿ ನೆನಪುಗಳ ಘಮಲಿನಿಂದ ತುಂಬಿಸುವವರು ಮೀರಾ ಹಾಗೂ ಅಹನಾ. ಬದುಕಿನ ಬಗ್ಗೆ ಸಂಪೂರ್ಣ ಭಿನ್ನ ನಿಲುವನ್ನು ಹೊಂದಿರುವ ಈ ಮೂರು ವ್ಯಕ್ತಿತ್ವಗಳ ಮುಖೇನ 'ಬದುಕು ಸಾಗುತ್ತಲೇ ಇರಬೇಕು' ಎಂಬ ಸಂದೇಶವನ್ನು ಬಲು ಸೂಕ್ಷ್ಮವಾಗಿ ದಾಟಿಸುತ್ತದೆ ಈ ಸಿನಿಮಾ.

ಕಥಾನಾಯಕ ಪಾರ್ಥ ಶ್ರೀವಾಸ್ತವ್ ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್. ದಿನವೂ ಸಮಯದೊಂದಿಗೆ ಬಡಿದಾಡುವ ಒಂದೇ ರೀತಿಯ ಯಾಂತ್ರಿಕ ಬದುಕಿನಿಂದ ಬೇಸತ್ತವನು. ಫೋಟೋಗ್ರಫಿಯಲ್ಲಿ ಅದಮ್ಯ ಆಸಕ್ತಿಯಿದ್ದರೂ ಕೂಡಾ ಅದನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಳ್ಳಲು ಭವಿಷ್ಯದ ಜೀವನ ನಿರ್ವಹಣೆಯ ಭಯ. ಅತ್ತ ಮಾಡುತ್ತಿರುವ ವೃತ್ತಿಯಲ್ಲೂ ಆತ್ಮತೃಪ್ತಿಯಿಲ್ಲದ ಇತ್ತ ಕನಸುಗಳ ಹಿಂದೆಯೂ ಹೋಗಲಾರದ ತೊಳಲಾಟ ಅವನದು. 

ಮೀರಾ ಶರ್ಮಾ ಆರ್ಟ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ವಾವಲಂಬಿ ಯುವತಿ. ಬದುಕಿನ ಬಗೆಗೆ ಕೆಲ ಸ್ಪಷ್ಟ ನಿಲುವುಗಳುಳ್ಳ ಮೀರಾ ಏಕಾಂಗಿ. ತನ್ನೊಳಗಿನ ಆ ಖಾಲಿತನವನ್ನು ತುಂಬಲು ಆಕೆಗೊಂದು ಭಾವುಕ ಆಸರೆ ಬೇಕಿದೆ. ವಿವಾಹದ ಮುಖೇನ ತನ್ನ ಜೀವನ ಸಂಗಾತಿಯ ರೂಪದಲ್ಲಿ ಏಕಾಂಗಿತನದಿಂದ ಮುಕ್ತಿ ಪಡೆಯುವ ಹವಣಿಕೆ ಅವಳದ್ದು. 

ಅಹನಾ ಕಶ್ಯಪ್ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಬೇಕೆಂಬ ಮಹದಾಸೆಯುಳ್ಳ ವೈದ್ಯಕೀಯ ವಿದ್ಯಾರ್ಥಿನಿ. ತಾನು ಆಯ್ದುಕೊಂಡಿರುವ ಓದು, ವೃತ್ತಿ ಅವಳ ಪಾಲಿಗೆ passion ಕೂಡಾ. ಬಹಳ ಜೀವನ್ಮುಖಿಯಾದ ಲವಲವಿಕೆಯ ಹುಡುಗಿ ಆಕೆ.

ಈ ಮೂವರ ಹಾದಿಗಳು ಪರಸ್ಪರ ಸಂಧಿಸಿದಾಗ ಅವರ ಬದುಕಿನ ಪಯಣ ತೆಗೆದುಕೊಳ್ಳುವ ತಿರುವುಗಳನ್ನು ಬಹಳ ಸಾವಧಾನವಾಗಿ ನಿರೂಪಿಸಿದ್ದಾರೆ ನಿರ್ದೇಶಕ ವಿನಯ್ ಭಾರದ್ವಾಜ್. ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ಸ್ನೇಹ, ನಂಬಿಕೆ, ವೃತ್ತಿ, ಪ್ರವೃತ್ತಿ, ಆಸಕ್ತಿ, ಆದ್ಯತೆ ಇವೆಲ್ಲವನ್ನೂ ಇಂದಿನ ಯುವವರ್ಗದ ಜೀವನಶೈಲಿ ಹಾಗೂ ಅವರ ತವಕ ತಲ್ಲಣಗಳ ಮುಖೇನ ಕಟ್ಟಿಕೊಟ್ಟಿರುವ ಪರಿ ಇಷ್ಟವಾಗುತ್ತದೆ. ಈ ಚಿತ್ರದ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿನ ಮೂರು ಪ್ರಮುಖ ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಗಳು ಸರಿಯೋ ತಪ್ಪು ಎಂದು ವಿಮರ್ಶಿಸಲೇ ಸಾಧ್ಯವಿಲ್ಲ. ಒಂದು ಕ್ಷಣಕ್ಕೆ ಸರಿಯೆನಿಸಿದರೆ ಮತ್ತೊಮ್ಮೆ ಈ ನಿರ್ಧಾರ ತಪ್ಪಿತ್ತೇನೋ ಎನ್ನಿಸುತ್ತದೆ. 

ಪಾರ್ಥ, ಮೀರಾ ಹಾಗೂ ಅಹನಾ ಪಾತ್ರಗಳಿಗೆ ಪ್ರವೀಣ್ ತೇಜ್, ರಾಧಿಕಾ ಚೇತನ್ ಹಾಗೂ ಅನನ್ಯಾ ಕಶ್ಯಪ್ ಜೀವ ತುಂಬಿದ್ದಾರೆ. ದತ್ತಣ್ಣನವರದ್ದು ಸಣ್ಣ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಿದ್ದು ಪಾರ್ಥನ ಸ್ನೇಹಿತ ಏಕಲವ್ಯ(ಏಕಾ)ನಾಗಿ ನಟಿಸಿರುವ ಅಜಯ್ ರಾಜ್. ಕೊಂಚ ತುಂಟತನ, ಲಘುಹಾಸ್ಯ, ಒಂದಿಷ್ಟು ಸಲಹೆ ಮತ್ತು ಸ್ನೇಹಿತನೆಡೆಗೆ ಅಗಾಧ ಕಾಳಜಿ ಹೊಂದಿರುವ ಏಕಾ ತುಂಬಾ ಆಪ್ತನಾಗುತ್ತಾನೆ. 

ಇನ್ನು ಈ ಇಡೀ ಸಿನಿಮಾಕ್ಕೆ ಆಹ್ಲಾದಕಾರಿ ತಾಜಾತನದ ಪ್ರಭಾವಳಿ ನೀಡಿರುವುದು ಛಾಯಾಗ್ರಹಣ ಹಾಗೂ ಸಂಗೀತ. ಅಭಿಮನ್ಯು ಸದಾನಂದನ್ ಅವರ ಕ್ಯಾಮೆರಾ ಕೈಚಳಕ ಈ ನಿಧಾನ ಗತಿಯ ಸಿನಿಮಾಕ್ಕೆ ಚೇತೋಹಾರಿ ರಂಗಿನ ಚೌಕಟ್ಟನ್ನು ಒದಗಿಸಿದೆ. ಏಳು ಭಿನ್ನ ಸಂಗೀತ ನಿರ್ದೇಶಕರು ಸಂಯೋಜಿಸಿರುವ ಏಳು ಗೀತೆಗಳು ಈ ಚಿತ್ರದ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಜಾನಪದ ಸೊಗಡಿನಿಂದ ಹಿಡಿದು ಎಲ್ಲಾ ಪ್ರಕಾರದ ಹಾಡುಗಳಿರುವುದು ಮುಂದಿನ ನಿಲ್ದಾಣದ ಹೆಗ್ಗಳಿಕೆ. ವಾಸುಕಿ ವೈಭವ್ ಅವರು ಸಂಗೀತ ಸಂಯೋಜಿಸಿ ಹಾಡಿರುವ 'ಇನ್ನೂನು ಬೇಕಾಗಿದೆ' ಗೀತೆ ಈಗಾಗಲೇ ಬಹಳಷ್ಟು ಜನಪ್ರಿಯ. ಅದರೊಂದಿಗೆ ಮಸಾಲಾ ಕಾಫಿ ಬ್ಯಾಂಡ್ ಸಂಯೋಜನೆಯ 'ಮನಸೇ ಮಾಯ', ಜಿಮ್ ಸತ್ಯ ಸಂಗೀತ ಸಂಯೋಜಿಸಿರುವ 'ನಗುವ ಕಲಿಸು ಒಂದು ಬಾರಿ', ಮತ್ತು ಆದಿಲ್ ನದಾಫ್ ಸಂಯೋಜನೆಯ ಶೀರ್ಷಿಕೆ ಗೀತೆ ಸೊಗಸಾಗಿವೆ.

ಬದುಕೆಂಬ ಪಯಣಕ್ಕೆ ಹಲವು ನಿಲ್ದಾಣಗಳು. ಆದರೆ ಸಾವೆಂಬ ಅಂತಿಮ ನಿಲ್ದಾಣದ ಹೊರತು ಬೇರ್ಯಾವ ನಿಲ್ದಾಣದಲ್ಲೂ ಬದುಕು ಶಾಶ್ವತವಾಗಿ ನಿಲ್ಲುವುದಿಲ್ಲ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸಾಗುವ ಹಾದಿಯಲ್ಲಿ ಹಲವು ಅನಾಮಿಕರು ಎದುರಾಗುತ್ತಾರೆ. ಹಲವರು ಪರಿಚಿತರಾದರೆ ಕೆಲವರು ನಮ್ಮ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸುತ್ತಾರೆ. ಈ ಪಯಣವನ್ನು ಆನಂದಿಸಿ ಕಹಿ ನೆನಪುಗಳನ್ನು ಹಿಂದೆ ಬಿಟ್ಟು ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೆ ಸಾಗಬೇಕು ಎಂಬ ಆಶಯವನ್ನು ಮುಂದಿನ ನಿಲ್ದಾಣ ಧ್ವನಿಸುತ್ತದೆ. 

ನಿಧಾನವಾಗಿ ಸಾಗುವ ಕಥೆಯನ್ನು ಆಸ್ವಾದಿಸುವ ಮನಸ್ಸಿದ್ದರೆ ಖಂಡಿತಾ ಒಮ್ಮೆ ನೋಡಬಹುದಾದ, ನೋಡಬೇಕಾದ ಚಿತ್ರವಿದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ