ಸಣ್ಣಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಣ್ಣಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಡಿಸೆಂಬರ್ 22, 2020

ಕೆಂಪು ಮಲ್ಲಿಗೆ

ಗಾಢಾಂಧಕಾರವನ್ನೇ ಹಾಸಿಹೊದ್ದ ಕಿರುಹಾದಿಯದು. ಎತ್ತ ಅರಸಿದರೂ ಬೆಳಕಿನ ಹನಿಯಿಲ್ಲ. ಅಕ್ಕಪಕ್ಕ, ಸುತ್ತಮುತ್ತ, ಕಡೆಗೆ ಸಾಗುತ್ತಿರುವ ಹಾದಿಯ ಸುಳಿವೂ ಸಿಗದ ಕತ್ತಲ ಸಾಮ್ರಾಜ್ಯ. ಆ ಹಾದಿಯಾದರೂ ಎಂತಹದ್ದು….? ಎಲ್ಲಿಂದ ಆರಂಭವಾಗಿ ಎಲ್ಲಿಗೆ ತಲುಪಲಿದೆ ಎಂಬ ಗೊತ್ತುಗುರಿಯೇ ಇಲ್ಲದ ಅಪರಿಚಿತ ದಾರಿ. ಕಾರ್ಗತ್ತಲ ನಡುವಿನ ಆ ವಿಲಕ್ಷಣ ಪಥದಲ್ಲಿಏಕಾಂಗಿಯಾಗಿ ಸಾಗುತ್ತಿದೆ ಒಂದು ಮನುಷ್ಯಾಕೃತಿ. ಸುತ್ತಮುತ್ತಲಿನ ಪರಿವಿಲ್ಲದೇ, ತಾನು ಒಬ್ಬಂಟಿಯಾಗಿ ಸಾಗುತ್ತಿರುವೆನೆಂಬ ಭಯವೂ ಇಲ್ಲದೇ ಯಾವುದೋ ಸಮಾಧಿಸ್ಥಿತಿಯಲ್ಲಿ ಆ ಆಕೃತಿ ಚಲಿಸುತ್ತಲೇ ಇದೆ. ಮೊಗದಲ್ಲಿ ಸಂತಸ ತುಂಬಿತುಳುಕುತ್ತಿದೆ.

ಇದ್ದಕ್ಕಿದ್ದಂತೆ ಅಲ್ಲೇನೋ ಕೋಲಾಹಲ….. ನೀರವ ಮೌನದ ಗರ್ಭವನ್ನು ಸೀಳಿಕೊಂಡು ಕೇಳಿ ಬಂದಿತು ರಭಸವಾದ ಹೆಜ್ಜೆಗಳ ಸದ್ದು…… ಇಲ್ಲಿಯವರೆಗೂ ಸಂತೃಪ್ತ ಭಾವದಿಂದ ಚಲಿಸುತ್ತಿದ್ದ ಆಕೃತಿ ಗಲಿಬಿಲಿಯಿಂದ ನಡಿಗೆಯ ವೇಗ ಹೆಚ್ಚಿಸಿತು. ವೇಗದ ನಡಿಗೆ ರಭಸವಾದ ಓಡುವಿಕೆಯಾಯಿತು. ಈಗ ಆ ಮನುಷ್ಯಾಕೃತಿಯ ಮೊಗದ ತುಂಬಾ ಭೀತಿಯೇ ತಾಂಡವವಾಡುತ್ತಿದೆ. ಉಸಿರುಗಟ್ಟಿ ಹಾದಿಗುಂಟ ಓಡುತ್ತಿದ್ದ ವ್ಯಕ್ತಿ ಒಂದೆಡೆ ತಟ್ಟನೆ ನಿಂತುಬಿಟ್ಟಿತು.
ಎದುರಿನಲ್ಲಿ ನಿಂತಿದ್ದಾಳೆ ಅವಳು……

ಶುಭ್ರ ಶ್ವೇತವರ್ಣದ ನಿಲುವಂಗಿ ತೊಟ್ಟ ಬಾಲೆಯ ಕೈಬೊಗಸೆ ತುಂಬಾ ಮಲ್ಲಿಗೆ ಹೂಗಳು……. ಕಾಲು ಮಂಡಿಗಳಲ್ಲಿನ ತರಚು ಗಾಯಗಳಿಗೆ ಮಣ್ಣು ಮೆತ್ತಿಕೊಂಡಿದೆ. ಬಲಹಣೆಯಲ್ಲಿನ ಗಾಯದಿಂದ ಸಣ್ಣಗೆ ಒಸರುತ್ತಿರುವ ನೆತ್ತರು…... ಆ ನೋವಿಗೇನೋ ಎಂಬಂತೆ ಪುಟಾಣಿ ಕಂಗಳು ತುಂಬಿಕೊಂಡಿವೆ. ಆದರೂ ಮುಖದಲ್ಲಿ ಮಾಸದ ಮಂದಹಾಸ.
ಹಠಾತ್ತನೆ ಆಕೆಯ ಸುತ್ತಲೂ ರುಧಿರಧಾರೆ ಚಿಮ್ಮತೊಡಗಿತು. ಕ್ಷಣಗಳ ಅಂತರದಲ್ಲೇ ಆಕೆ ತೊಟ್ಟ ಧವಲ ವಸ್ತ್ರ ರಕ್ತವರ್ಣ ಪಡೆದುಕೊಂಡಿತು. ಬೊಗಸೆಯಲ್ಲಿನ ಮಲ್ಲಿಗೆ ಹೂಗಳೂ ಕಡುಗೆಂಪಿಗೆ ತಿರುಗಿದವು. ನೋಡನೋಡುತ್ತಿದ್ದಂತೆ ಕೆನ್ನೀರಿನ ಪ್ರವಾಹ ಆ ವ್ಯಕ್ತಿಯನ್ನೇ ಆಪೋಶನ ತೆಗೆದುಕೊಳ್ಳಲು ಸನ್ನದ್ಧವಾದಂತೆ ಆವರಿಸತೊಡಗಿತು. ಗರಬಡಿದಂತೆ ನಿಂತಿದ್ದ ವ್ಯಕ್ತಿ ಬಂದ ಹಾದಿಯಲ್ಲೇ ವಾಪಾಸಾಗಲು ತಿರುಗಿದರೆ ಬೆಂಬತ್ತಿ ಬಂದಿದ್ದ ಸಾವಿರಾರು ಆಕೃತಿಗಳು ಆ ವ್ಯಕ್ತಿಯೆಡೆಗೇ ಬರುತ್ತಿವೆ…...

ಹಿಂದಕ್ಕೆ ಹೋಗಲಾಗದು ಮುಂದಕ್ಕೂ ಚಲಿಸಲಾಗದು…..

ಗಹಗಹಿಸುತ್ತಾ ಹಿಂಬಾಲಿಸಿ ಬಂದ ಆಕೃತಿಗಳೆಲ್ಲವೂ ಆ ವ್ಯಕ್ತಿಯೊಳಗೇ ಅಂತರ್ಧಾನವಾದವು. ಭೀತಿಯಿಂದ ಚೀರುತ್ತಿದ್ದ ವ್ಯಕ್ತಿಯನ್ನು ಸೆಳೆದುಕೊಳ್ಳಲು ನೆತ್ತರ ಸಾಗರದ ಆಳೆತ್ತರದ ಅಲೆಗಳು ಮುನ್ನುಗ್ಗಿ ಬರತೊಡಗಿದವು. ಇನ್ನೇನು ಅಲೆಗಳಲ್ಲಿ ಕೊಚ್ಚಿ ಹೋಗುವುದೇ ನಿಶ್ಚಿತ…… ಭಯದಿಂದ ಕಣ್ಮುಚ್ಚಿ ನಿಂತಿತು ಆ ಆಕೃತಿ……

ಯಾರೋ ಭುಜವನ್ನು ಹಿಡಿದಲುಗಿಸಿದಂತಾಗಿ ಥಟ್ಟನೆ ಎಚ್ಚರವಾಯಿತು ಶ್ರೀಧರನಿಗೆ‌. ಮೈಯೆಲ್ಲಾ ಬೆವರಿನಲ್ಲಿ ತೋಯ್ದುಹೋಗಿತ್ತು. ಎದೆಬಡಿತ ಕಿವಿಗೆ ತಲುಪುವಷ್ಟು ಜೋರಾಗಿತ್ತು.

"ಯಾಕಿಷ್ಟು ಹೆದರಿದ್ದೀ ಶ್ರೀ? ಏನಾಯ್ತು? ನಿದ್ದೆಯಲ್ಲೇ ಜೋರುಜೋರಾಗಿ ಕಿರುಚ್ತಿದ್ಯಲ್ಲಾ ಯಾಕೆ? ಕೆಟ್ಟ ಕನಸೇನಾದರೂ ಬಿತ್ತಾ?" ಅವನ ಕೈಗೆ ನೀರಿನ ಲೋಟ ನೀಡುತ್ತಾ ಗಾಬರಿಯಿಂದ ಕೇಳಿದಳು ವೈಜಯಂತಿ. ಅವಳ ಕೈಯಿಂದ ನೀರಿನ ಲೋಟ ಇಸಿದುಕೊಂಡು ಗಂಟಲಿಗೆ ಸುರಿದುಕೊಂಡ ನಂತರ ಕೊಂಚ ಹಾಯೆನಿಸಿತು. ಖಾಲಿಲೋಟವನ್ನು ಮಡದಿಯ ಕೈಗಿತ್ತು ಹಾಗೇ ದಿಂಬಿಗೆ ಒರಗಿ ಸೂರು ದಿಟ್ಟಿಸತೊಡಗಿದ.

"ಏನಾದ್ರೂ ಸಮಸ್ಯೆಯಾಗಿದೆಯಾ ಶ್ರೀ? ಕಳೆದ ಕೆಲವು ದಿನಗಳಿಂದ ನಿನ್ನ ವರ್ತನೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮುಂಚಿನ ಲವಲವಿಕೆ, ಚೈತನ್ಯ ಯಾವುದೂ ನಿನ್ನಲ್ಲಿಲ್ಲ. ಯಾವುದೋ ಬೇಸರದಲ್ಲಿರುವವನಂತೆ ಸದಾ ಏನೋ ಯೋಚನೆಯಲ್ಲಿ ಮುಳುಗಿರ್ತೀಯಾ. ಅದೇನು ಅಂತ ನನ್ನ ಹತ್ರನಾದ್ರೂ ಹೇಳಿಕೊಳ್ಬಾರ್ದಾ?" ಗಂಡನ ಪಕ್ಕಬಂದು ಕುಳಿತು ಅವನ ತಲೆಗೂದಲಲ್ಲಿ ಕೈಯಾಡಿಸುತ್ತಾ ಅವನ ಸಮಸ್ಯೆಯ ಮೂಲವನ್ನು ಅರಿಯಲು ಪ್ರಯತ್ನಿಸುತ್ತಿದ್ದಳು ವೈಜಯಂತಿ. ಆದರೆ ಶ್ರೀಧರನಿಗೆ ಅವಳ ಮಾತಿನ ಕಡೆ ಗಮನವೇ ಇರಲಿಲ್ಲ. ಅವನು ಯಾವುದೋ ಭಾವಸಮಾಧಿಯಲ್ಲಿ ಮೈಮರೆತಿದ್ದ.

ತಾನು ಎಷ್ಟೋ ಹೊತ್ತಿನಿಂದ ಪ್ರಶ್ನಿಸುತ್ತಿದ್ದರೂ ಮೌನವಾಗಿ ಶೂನ್ಯದಲ್ಲಿ ನೋಟನೆಟ್ಟಿರುವ ಗಂಡನ ಬಗ್ಗೆ ನಿಜಕ್ಕೂ ಕಳವಳವಾಯಿತು ಅವಳಿಗೆ. ಮತ್ತೊಮ್ಮೆ ಅವನ ಹೆಗಲು ಹಿಡಿದು ಅಲುಗಾಡಿಸಿದಾಗ ಅದೇ ತಾನೇ ಎಚ್ಚರಗೊಂಡವನಂತೆ ಮಡದಿಯತ್ತ ಶುಷ್ಕನೋಟ ಬೀರಿದ.

"ಶ್ರೀಧರ್…... ಯಾಕೆ ಹೀಗಾಡ್ತಿದ್ದೀ? ನಿನ್ನ ಪರಿಸ್ಥಿತಿ ನೋಡಿದ್ರೆ ಭಯ ಆಗುತ್ತೆ ನನಗೆ. ಒಂದು ಕ್ಷಣ ಸುಮ್ಮನಿರದಂತೆ ಮಾತಾಡ್ತಿದ್ದೋನು ಈಗ ಹತ್ತುಪ್ರಶ್ನೆ ಕೇಳಿದ್ರೆ ಒಂದಕ್ಕೂ ಉತ್ತರಿಸೋಲ್ಲ. ಏನಾಗಿದೆ ಅಂತಹ ಸಮಸ್ಯೆ ಅನ್ನೋದನ್ನಾದ್ರೂ ಹೇಳು. ಆಗ ಮನೀಷಾ ವಿಚಾರದಲ್ಲಿ ನಮಗೆ ತೀರದ ನೋವಿದ್ದಾಗಲೂ ನೀನು ಧೈರ್ಯ ಕಳ್ಕೊಂಡಿರ್ಲಿಲ್ಲ.ಈಗ ಕೈ ಬಿಟ್ಟೇಹೋದ್ಲು ಅಂದ್ಕೊಂಡಿದ್ದ ಮನೀಷಾ ನಮಗೆ ದಕ್ಕಿದ್ದಾಳೆ. ಹಾಗಿರುವಾಗ ಎಷ್ಟೊಂದು ಖುಷಿಯಾಗಿರ್ಬೇಕು ನೀನು. ಆದ್ರೆ ನಿನ್ನ ಅವಸ್ಥೆ ನೋಡು…... ನೀನು ನೆಮ್ಮದಿಯಿಂದ ನಿದ್ರೆ ಮಾಡದೇ ತಿಂಗಳುಗಳೇ ಕಳೆದಿವೆ. ನನ್ನನ್ನು ಬಿಡು……. ಮನೀಷಾ ಹುಷಾರಾದ್ಮೇಲಿಂದ ಅವಳ ಹತ್ರಾನೂ ಸರಿಯಾಗಿ ಮಾತಾಡ್ತಿಲ್ಲ ನೀನು. ಅವ್ಳೇ ಹತ್ತಿರ ಬಂದಾಗ್ಲೂ ಮುಖ ತಪ್ಪಿಸ್ತೀಯಾ. ಏನಿದೆಲ್ಲಾ ಶ್ರೀಧರ್?" ಅತೀವ ಬೇಸರದಲ್ಲೇ ಕೇಳಿದಳು ವೈಜಯಂತಿ.

ಅವಳ ಯಾವೊಂದು ಪ್ರಶ್ನೆಗೂ ಉತ್ತರಿಸದೆ, "ನನಗೆ ನಿದ್ರೆ ಬರ್ತಿಲ್ಲ. ಹಜಾರದಲ್ಲಿ ಒಂದಿಷ್ಟು ಓಡಾಡ್ತೀನಿ. ನೀನು ಮಲಗು" ಎಂದವ ಕೋಣೆಯಿಂದ ಹೊರಗೆ ಹೊರಟ ಶ್ರೀಧರ. ಇತ್ತೀಚೆಗೆ ಇದೇ ನಿತ್ಯದ ಪರಿಪಾಠವಾಗಿಹೋಗಿತ್ತು. ಇವನಿಗೇನಾಗಿದೆ ಎಂಬ ಯೋಚನೆಯಲ್ಲಿ ಮುಳುಗಿದಳು ವೈಜಯಂತಿ.

***************************************

ಮಗಳಿಂದ ಮುಖತಪ್ಪಿಸಿ ಓಡಾಡ್ತಿದ್ದೀಯಾ ಎಂದು ಆರೋಪಿಸಿದ್ದಳು ಮಡದಿ. 'ಮನೀಷೆಯೆದುರು ಮುಖಕ್ಕೆ ಮುಖಕೊಟ್ಟು ಮಾತನಾಡಲು ನಿನ್ನಿಂದ ಸಾಧ್ಯವೇ…..?' ಒಳಗಿನಿಂದ ಯಾವುದೋ ಧ್ವನಿ ಪ್ರಶ್ನಿಸಿದಂತಾಯಿತು. ಆ ಪ್ರಶ್ನೆಗೆ ಉತ್ತರಿಸುವ ಧೈರ್ಯ ಅವನಲ್ಲಿರಲಿಲ್ಲ. ತಮ್ಮ ಕೋಣೆಯನ್ನು ಬಳಸಿದಂತೆಯೇ ಇದ್ದ ಮಗಳ ಕೋಣೆಯೆದುರು ನಿಂತ. ಕನಸಿನಲ್ಲಿ ಕಂಡ ಬಿಳಿನಿಲುವಂಗಿಯ ಬಾಲೆ ಎದುರುನಿಂತು ನಕ್ಕಂತೆ ಭಾಸವಾಯಿತು.
ತಲೆಕೊಡವಿ ಸದ್ದಾಗದಂತೆ ಕೋಣೆಯ ಬಾಗಿಲನ್ನು ಅರೆತೆರೆದು ಇಣುಕಿದ. ಏಳು ವರ್ಷದ ಮನೀಷಾ ನೆಮ್ಮದಿಯಿಂದ ಮಲಗಿದ್ದಳು. ಇಂತಹ ನಿರಾಳತೆ ಅವಳ ಮುಖದಲ್ಲಿ ಕಳೆದೊಂದು ತಿಂಗಳಿನಿಂದ ಕಂಡಿದ್ದು. ಅದಕ್ಕೂ ಮೊದಲು ಬರೀ ನರಳಾಟವೇ. ಹಳೆಯ ದಿನಗಳೆಲ್ಲಾ ಒಮ್ಮೆ ಸ್ಮೃತಿಪಟಲದ ಮೇಲೆ ಹಾದುಹೋದಂತಾಗಿ ನಿಟ್ಟುಸಿರೊಂದು ಹೊರಬಿತ್ತು. ಅಂತೂ ಆ ನರಕದಿಂದ ಮನೀಷೆಗೆ ಹಾಗೂ ನಮಗೂ ಮುಕ್ತಿ ಸಿಕ್ಕಿತಲ್ಲ ಎಂಬ ಯೋಚನೆಯಿಂದ ಮನಸ್ಸಿಗೆ ಸಂತಸವಾಯಿತು. ಅರೆಘಳಿಗೆಯಷ್ಟೇ……...

'ಹೌದೇ…? ಮುಕ್ತಿ ಸಿಕ್ಕಿತೇ…..? ಮತ್ತೆ ಈ ಮುಕ್ತಿಗಾಗಿ ತೆತ್ತ ಬೆಲೆ….? ಅದರಿಂದ ಮುಕ್ತಿಯುಂಟೇ ನಿನಗೆ……?' ಮತ್ತೆ ಒಳಗಿನಿಂದ ಕೇಳಿ ಬಂದಿತೊಂದು ಕಟುಧ್ವನಿ. ಕತ್ತಿಯಲುಗಿನಂತಹ ಹರಿತವಾದ ಪ್ರಶ್ನೆಗೆ ಬವಳಿ ಬಂದಂತಾಯಿತು. ಮಗಳತ್ತ ದಿಟ್ಟಿಸಿದ. ಕೆಂಪನೆಯ ನಿಲುವಂಗಿ ತೊಟ್ಟಿದ್ದಾಳೆ ಮನೀಷೆ......

ಕೆಂಪನೆಯ ನಿಲುವಂಗಿ…... ಬೊಗಸೆಯ ತುಂಬಾ ಕೆಂಪುಮಲ್ಲಿಗೆ ಹೂ…..!!

ನಡುಗುವ ಕೈಗಳಿಂದ ಮುಖದ ಬೆವರೊರಿಸಿಕೊಳ್ಳಲು ಹವಣಿಸಿದ ಶ್ರೀಧರ್. ಆದರೆ…… ಅಂಗೈ ಪೂರಾ ರಕ್ತಮಯ…..!! ತಟ್ಟನೆ ಮಗಳ ಕೋಣೆಯ ಬಾಗಿಲೆಳೆದುಕೊಂಡ. ಚಿಲಕದ ಮೇಲೆ ನೆತ್ತರ ಛಾಪು ಕಂಡಿತು. ಬಾಗಿಲು, ಕಿಟಕಿ, ಗೋಡೆಗಳೆಲ್ಲಾ ಕಡುಗೆಂಪು….. ನೆಲದ ಮೇಲೆಲ್ಲಾ ಕೆಂಪುಮಲ್ಲಿಗೆ ಹೂಗಳ ರಾಶಿ…… ಬೆನ್ನಹುರಿಯಿಂದ ಆರಂಭವಾದ ಭೀತಿಯ ಛಳಕು ದೇಹದ ಕಣಕಣಗಳಲ್ಲೂ ಅಧಿಪತ್ಯವನ್ನು ಸ್ಥಾಪಿಸತೊಡಗಿತು. ಬಲಭಾಗದಲ್ಲಿದ್ದ ಕನ್ನಡಿಯತ್ತ ಅವನ ದೃಷ್ಟಿ ಹರಿಯಿತು.

ಕನ್ನಡಿಯಲ್ಲಿ ತನ್ನದೇ ಅಗಣಿತ ಪ್ರತಿಬಿಂಬಗಳು…….!

ತುಸುಹೊತ್ತಿನ ಮುಂಚೆ ಕಂಡ ವಿಲಕ್ಷಣ ಕನಸು ನೆನಪಾಯಿತು ಅವನಿಗೆ. ಆ ಕನಸಿನಲ್ಲಿದ್ದ ಏಕಾಂಗಿ ವ್ಯಕ್ತಿ ತಾನೇ. ತನ್ನನ್ನು ಸಾವಿರಾರು ಸಂಖ್ಯೆಯಲ್ಲಿ ಹಿಂಬಾಲಿಸಿಕೊಂಡುಬರುತ್ತಿದ್ದ ಆಕೃತಿಗಳೂ ತನ್ನವೇ…… ತನ್ನ ಛಾಯೆಗಳೇ ತನ್ನನ್ನು ಬೆಂಬತ್ತಿದ ಕನಸಿನಂತೆಯೇ ಕನ್ನಡಿಯಲ್ಲಿನ ಬಿಂಬಗಳೆಲ್ಲಾ ತನ್ನನ್ನು ನುಂಗಲು ಹವಣಿಸಿ ಹೊರಬರುತ್ತಿರುವಂತೆ ತೋರಿತು ಶ್ರೀಧರನಿಗೆ. ಇನ್ನೇನು ಅವು ಕನ್ನಡಿಯನ್ನೇ ಒಡೆದು ಹೊರಬರುತ್ತವೆ ಎನಿಸಿದಾಗ ಬೆಚ್ಚಿ ಒಂದು ಹೆಜ್ಜೆ ಹಿಂದೆಸರಿದ.

ಅವನು ಹಿಂದೆ ಸರಿದೊಡನೆ ಬಿಂಬಗಳು ದರ್ಪಣದಾಳಕ್ಕೆ ಒಳಸರಿಯತೊಡಗಿದವು. ಅವನು ಗಾಢವಾಗಿ ಕನ್ನಡಿಯನ್ನೇ ದಿಟ್ಟಿಸಿದ. ಬಿಂಬಗಳ ನಡುವೆ ಬಿಳಿನಿಲುವಂಗಿಯ ಬಾಲೆ ಕಂಡಳು…… ಅವಳ ಕೈಗಳಲ್ಲಿ ಕೆಂಪುಮಲ್ಲಿಗೆ……! ಕನ್ನಡಿಯೊಳಗಿನ ಬಿಂಬಗಳೆಲ್ಲ ತಮ್ಮ ಕಬಂಧಬಾಹುಗಳನ್ನು ಚಾಚಿ ಅವಳ ಕತ್ತುಹಿಸುಕುತ್ತಿವೆ…..

'ಅಪ್ಪಾ…. ನೋವಾಗುತ್ತೆ………!'

ಅರೇ……! ಮನೀಷಾಳ ಧ್ವನಿಯಿದು…!
ಹೌದು….. ಅದು ಮನೀಷೆಯೇ….. 

ಮಗಳನ್ನು ಅಲ್ಲಿಂದ ಹೊರಗೆಳೆದುಕೊಳ್ಳಲು ಧಾವಿಸಿದ. ಕನ್ನಡಿಯ ನುಣುಪು ಮೇಲ್ಮೈ ಅಡ್ಡಿಯಾದಾಗ ಕ್ರೋಧದಿಂದ ದಿಟ್ಟಿಸಿದ. ಕನ್ನಡಿಯಲ್ಲಿಅವನ ಪ್ರತಿಬಿಂಬದ ಹೊರತು ಬೇರೇನೂ ಕಾಣಲಿಲ್ಲ. ಸುತ್ತಲೂ ನೋಟಹರಿಸಿದ. ಬಾಗಿಲು, ಕಿಟಕಿ, ಚಿಲಕ, ತಿಳಿನೀಲಿ ಗೋಡೆ, ಬಿಳಿಹಾಸಿನ ನೆಲ ಎಲ್ಲವೂ ಎಂದಿನಂತೆಯೇ ಇತ್ತು. ಅಂಗೈಗಳನ್ನು ಪರಿಶೀಲನಾತ್ಮಕವಾಗಿ ನೋಡಿಕೊಂಡ. ರಕ್ತದ ಸಣ್ಣಬಿಂದು ಕೂಡಾ ಕಾಣಲಿಲ್ಲ. ಏನೊಂದೂ ತೋಚದೇ ಕನ್ನಡಿಯನ್ನೇ ದೃಷ್ಟಿಸಿದ. ಕನ್ನಡಿಯಲ್ಲಿನ ಪರಿಚಿತ ಬಿಂಬವೂ ತೀರಾ ಅಪರಿಚಿತವೆನಿಸಿದಾಗ ವ್ಯಾಕುಲಗೊಂಡ.

***********************************

"ನೋಡಿ ಮಿಸ್ಸೆಸ್ ವೈಜಯಂತಿ, ಶ್ರೀಧರ್ ಮನಸ್ಸಲ್ಲಿ ಏನಿದೆ ಅನ್ನೋದನ್ನು ನಿಖರವಾಗಿ ಗ್ರಹಿಸೋದು ತುಂಬಾ ಕಷ್ಟ. ಖುದ್ದು ಪರಿಣಿತ ವೈದ್ಯನಾಗಿರೋ ಅವನಿಗೆ ವೈದ್ಯಕೀಯ ಕ್ಷೇತ್ರದ ಎಲ್ಲಾ ವಿಭಾಗಗಳ ಬಗ್ಗೆಯೂ ಒಳ್ಳೆಯ ಜ್ಞಾನ ಇದೆ. ಅದರಲ್ಲೂ ನನಗೆ ತಿಳಿದಂತೆ ಮನಃಶಾಸ್ತ್ರದ ಬಗ್ಗೆ ವೈಯಕ್ತಿಕವಾಗಿ ತುಸುಹೆಚ್ಚೇ ಆಸಕ್ತಿ ಇದೆ. ನೀವು ಅವನನ್ನು ನನ್ನ ಹತ್ರ ಕರೆತಂದಿರೋ ಉದ್ದೇಶ ಏನು ಅನ್ನೋದು ಸ್ಪಷ್ಟವಾಗಿಯೇ ಗೊತ್ತಿದೆ ಅವನಿಗೆ. ಈಗಾಗಲೇ ನಾಲ್ಕನೇ ಕೌನ್ಸಿಲಿಂಗ್ ಸೆಷನ್ ಇದು. ಕಳೆದ ಮೂರು ಸೆಷನ್ಗಳಲ್ಲಿ ಅವನನ್ನು ಕಾಡುತ್ತಿರುವ ಸಮಸ್ಯೆಯೇನು ಅನ್ನೋದನ್ನು ಬಾಯ್ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೀನಿ ನಾನು. ಹಲವಾರು ರೀತಿಯ ಥೆರಪಿಗಳನ್ನು ಪ್ರಯತ್ನಿಸಿ ನೋಡಿದ್ದೀನಿ. ಅದರ ಹೊರತಾಗಿ ಸ್ನೇಹಿತ, ಸಹೋದ್ಯೋಗಿ ಅನ್ನುವ ಸಲುಗೆಯಿಂದಲೂ ಅವನ ಮನದೊಳಗೆ ಇಣುಕುವ ಪ್ರಯತ್ನ ಮಾಡಿದ್ದೀನಿ. ಫಲಿತಾಂಶ ಮಾತ್ರ ಶೂನ್ಯ. ಈ ಸಲವಂತೂ ನನ್ನೊಂದಿಗೆ ಬಹಳ ಒರಟಾಗಿ ವ್ಯವಹರಿಸಿದ. ಇದನ್ನೆಲ್ಲಾ ಗಮನಿಸಿದರೆ ಅವನು ಯಾವುದಕ್ಕೂ ಸಹಕರಿಸದಿರುವ ನಿರ್ಧಾರ ಮಾಡಿಕೊಂಡಿರುವಂತೆ ತೋರುತ್ತಿದೆ. ಪ್ರಾಯಶಃ ಜಗತ್ತಿಗೆ ಅಜ್ಞಾತವಾದ ಸತ್ಯವೊಂದನ್ನು ತನ್ನೊಳಗೇ ಸಮಾಧಿಯಾಗಿಸುವ ನಿಶ್ಚಯ ಅವನದಿರಬಹುದು"

ಹಲವು ವಾರಗಳಿಂದ ಶ್ರೀಧರನಿಗೆ ಕೌನ್ಸಿಲಿಂಗ್ ಮಾಡುತ್ತಿದ್ದ ನರೇನ್ ಅಹುಜಾ ಅವರು ವೈಜಯಂತಿಗೆ ವಿವರಿಸುತ್ತಿದ್ದರು. ಅವರಿಂದ ಅನತಿದೂರದಲ್ಲಿ ಗಾಜಿನಗೋಡೆಯ ಆಚೆಗಿನ ಸೋಫಾ ಮೇಲೆ ಕುಳಿತಿದ್ದ ಶ್ರೀಧರ್ ಮಾತ್ರ ಇವರ ಮಾತಿಗೂ ತನಗೂ ಸಂಬಂಧವೇ ಇಲ್ಲದಂತೆ ನಿಯತಕಾಲಿಕೆಯೊಂದನ್ನು ಹಿಡಿದು ಕುಳಿತಿದ್ದ. ಬರುಬರುತ್ತಾ ಶ್ರೀಧರನ ಮನೋವ್ಯಾಧಿ ತೀವ್ರಸ್ವರೂಪ ಪಡೆದುಕೊಂಡಿತ್ತು. ಹಗಲುರಾತ್ರಿಗಳೆಲ್ಲಾ ಒಂದೇ ಆಗಿಹೋಗಿತ್ತು. ಸದಾ ಯಾವುದೋ ದುಗುಡದಲ್ಲಿ ಮುಳುಗಿರುತ್ತಿದ್ದವ ಅರೆಘಳಿಗೆ ಕಣ್ಮುಚ್ಚಿದರೆ ದುಃಸ್ವಪ್ನಗಳ ದಾಳಿಗೆ ಕಂಗೆಟ್ಟು ಎದ್ದು ಕೂರುತ್ತಿದ್ದ.

ಶ್ರೀಧರ್ ವೃತ್ತಿವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಅವನಿಗೆ ತನ್ನ ವೃತ್ತಿಯ ಬಗ್ಗೆ ಅಪಾರ ಆಸ್ಥೆ, ಅಭಿಮಾನವಿತ್ತು. ಮುಂಚೆಲ್ಲಾ ಹಗಲಿರುಳೆನ್ನದೇ ಯಾವುದೇ ಸಮಯದಲ್ಲೂ ಆಸ್ಪತ್ರೆಗೆ ಹಾಜರಾಗಲು ತಯಾರಿರುತ್ತಿದ್ದವನು ಕಳೆದೆರಡು ತಿಂಗಳಿನಿಂದ ಆಸ್ಪತ್ರೆಗೆ ಬರಲೇ ಹಿಂತೆಗೆಯುತ್ತಿದ್ದ. ಮೊದಮೊದಲು ವೈಜಯಂತಿ ಹಾಗೂ ತನ್ನ ಸಹೋದ್ಯೋಗಿಗಳ ಒತ್ತಾಯಕ್ಕೆ ಮಣಿದು ಆಸ್ಪತ್ರೆಗೆ ಹೋಗಿ ಒಂದಿಷ್ಟು ಸಮಯ ಕಳೆದುಬರುತ್ತಿದ್ದವನು ನಂತರದ ದಿನಗಳಲ್ಲಿಅದನ್ನೂ ನಿಲ್ಲಿಸಿದ್ದ‌. ಮನೀಷಾಳೊಂದಿಗೆ ಮಾತುಕತೆ ಹಾಗಿರಲೀ…... ಆಕೆಗೆ ಎದಿರಾಗುವುದನ್ನೇ ತಪ್ಪಿಸುತ್ತಿದ್ದ. ಮಗಳ ಭೇಟಿಯನ್ನು ತಪ್ಪಿಸಲೆಂದೇ ಊಟತಿಂಡಿಗಳ ಪರಿವೆಯಿಲ್ಲದೆ ಗೃಹಬಂಧನದಲ್ಲಿರುವವನಂತೆ ತನ್ನ ವ್ಯಾಸಂಗಕೊಠಡಿಯಲ್ಲಿ ಕುಳಿತಿರುತ್ತಿದ್ದ. ಇತ್ತೀಚೆಗೆ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ನೆಟ್ಟನೋಟದಿಂದ ದಿಟ್ಟಿಸುವುದು, ಅವುಗಳನ್ನು ಹಿಡಿದು ಕೋಣೆಯೊಳಗೆ ಶತಪಥ ತಿರುಗುವುದು ಮೊದಲಾದ ವಿಚಿತ್ರಚರ್ಯೆಗಳು ಆತನಲ್ಲಿ ಕಂಡಿದ್ದವು. ಹಾಗಾಗಿಯೇ ವೈಜಯಂತಿ ಅಹುಜಾರ ಬಳಿ ಕೌನ್ಸಿಲಿಂಗ್ ಮಾಡಿಸಲು ಆರಂಭಿಸಿದ್ದಳು. ಆದರೆ ಆ ಯತ್ನಕ್ಕೂ ಶ್ರೀಧರನ ಅಸಹಕಾರ ತಡೆಯಾಗಿತ್ತು.

"ನೋಡಿ ಮಿಸ್ಸೆಸ್ ಶ್ರೀಧರ್, ನನ್ನ ಊಹೆಯ ಪ್ರಕಾರ ಯಾವುದೋ ಪಾಪಪ್ರಜ್ಞೆ ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದೇ ಮನಸ್ಸಿನಾಳದಲ್ಲಿ ಬಲವಾಗಿ ನಿಂತು ಅವನ ವರ್ತನೆಗಳನ್ನು ನಿಯಂತ್ರಿಸುತ್ತಿದೆ. ಬಹುಶಃ ಈ ವಿಚಾರ ನಿಮ್ಮ ಮಗಳು ಮನೀಷಾಳಿಗೆ ಸಂಬಂಧಿಸಿದೆ. ಒಟ್ಟಿನಲ್ಲಿ ಅವನೊಳಗೊಂದು ವ್ಯಕ್ತಪಡಿಸಲಾಗದ ವಿಷಾದವಿದೆ. ಆ ವ್ಯಥೆಯೇ ಬೇರೆಬೇರೆ ರೂಪತಾಳಿ ಅವನನ್ನು ಬೆದರಿಸ್ತಿದೆ ಅನ್ನೋದು ನನ್ನ ಅನಿಸಿಕೆ. ಎನಿ ಹೌ…… ನಾನೊಮ್ಮೆ ಡಾ. ಪೂರ್ಣೇಂದು ಚಟರ್ಜಿ ಅವರೊಂದಿಗೆ ಈ ಕೇಸ್ ಬಗ್ಗೆ ಚರ್ಚಿಸ್ತೀನಿ. ಹಿ ಈಸ್ ಒನ್ ಆಫ್ ದಿ ಬೆಸ್ಟ್ ಸೈಕೋಥೆರಪಿಸ್ಟ್. ಅವರಿಂದ ಏನಾದರೂ ಪ್ರಯೋಜನ ಆಗಬಹುದೇನೋ…... ಆದ್ರೆ ಒಂದು ವಿಚಾರ ಈಗ್ಲೇ ಹೇಳ್ತೀನಿ ಮಿಸ್ಸೆಸ್ ಶ್ರೀಧರ್. ಯಾರೊಂದಿಗೂ ಹೇಳಿಕೊಳ್ಳಲಾಗದಂತಹ ತುಂಬಾ ಆಳವಾದ ಯಾವುದೋ ಗಿಲ್ಟ್ ಇದೆ ಅವನೊಳಗೆ. ಸಧ್ಯ ಅವನಿರೋ ಪರಿಸ್ಥಿತಿಯಲ್ಲಿ ಒತ್ತಾಯಪೂರ್ವಕವಾಗಿ ಅವನ ಬಾಯಿಬಿಡಿಸಲು ಪ್ರಯತ್ನಿಸೋದು ತೀರಾ ಅಪಾಯಕಾರಿ. ಹಾಗೆ ಮಾಡಲು ಹೋದ್ರೆ ಅವನು ತನ್ನ ಜೀವಕ್ಕೇ ಕುತ್ತು ತಂದ್ಕೋತಾನೇನೋ ಅನ್ನೋ ಅನುಮಾನ ಇದೆ ನನಗೆ. ಹೋಪ್ ಯು ಅಂಡರ್ಸ್ಟಾಂಡ್….." 
ವೈಜಯಂತಿಯಿಂದ ಶ್ರೀಧರನ ನಡವಳಿಕೆಯ ಸಣ್ಣಪುಟ್ಟ ಬದಲಾವಣೆಯ ಬಗ್ಗೆಯೂ ಮಾಹಿತಿಪಡೆದು, ಕೌನ್ಸಿಲಿಂಗ್ ಸಮಯದಲ್ಲಿ ತನ್ನೊಂದಿಗಿನ ಅವನ ವರ್ತನೆಯನ್ನೂ ಸೂಕ್ಷ್ಮವಾಗಿ ಚಿಂತಿಸಿ, ತರ್ಕಿಸಿ ಅಹುಜಾ ತಮ್ಮ ಅಭಿಪ್ರಾಯ ತಿಳಿಸಿದ್ದರು.

ಇವರಿಬ್ಬರ ಮಾತುಕತೆ ಮುಗಿದು ವೈಜಯಂತಿ ಅಹುಜಾರ ಕ್ಯಾಬಿನ್ನಿನಿಂದ ಹೊರಬಂದು ಅವನನ್ನು ಕರೆಯುವವರೆಗೂ ಶ್ರೀಧರ್ ತನ್ನ ಕೈಯಲ್ಲಿನ ನಿಯತಕಾಲಿಕೆಯನ್ನೇ ದಿಟ್ಟಿಸುತ್ತಿದ್ದ. ಅವರಿಬ್ಬರೂ ಹೊರಹೋಗುವುದನ್ನೇ ಗಮನಿಸುತ್ತಾ ಯೋಚನಾಮಗ್ನರಾಗಿದ್ದ ಅಹುಜಾ ತುಸುಸಮಯದ ನಂತರ ಏನೋ ಹೊಳೆದವರಂತೆ ತಮ್ಮ ಕ್ಯಾಬಿನ್ನಿನಿಂದ ಹೊರಬಂದು ಇಷ್ಟುಹೊತ್ತೂ ಶ್ರೀಧರ್ ಹಿಡಿದಿದ್ದ ನಿಯತಕಾಲಿಕೆಯನ್ನು ಕೈಗೆತ್ತಿಕೊಂಡು ಪರೀಕ್ಷಿಸಿದರು. ಗಾಳಿಯಲ್ಲಿ ಪುಟಗಳನ್ನು ಮಗಚುವಾಗ ಒಂದು ಪುಟ ತಾನೇತಾನಾಗಿ ತೆರೆದುಕೊಂಡಿತು. ಬಹುಶಃ ಶ್ರೀಧರ್ ಬಹಳ ಹೊತ್ತಿನಿಂದ ಆ ಪುಟವನ್ನೇ ನೋಡುತ್ತಿದ್ದರಿಂದ ಈಗ ಅದೇ ಪುಟ ತೆರೆದುಕೊಂಡಿದೆ ಎಂದು ಊಹಿಸಿದರು. ಕುತೂಹಲದಿಂದ ಆ ಪುಟವನ್ನು ಗಮನಿಸಿದರು.

ಪುಟದ ಒಂದು ಬದಿಯಲ್ಲಿ ಯಾವುದೋ ಔಷಧಿಯ ಜಾಹೀರಾತಿತ್ತು. ಇನ್ನೊಂದು ಮಗ್ಗುಲಲ್ಲಿ ಒಂದು ಚಿತ್ರವಿತ್ತು……. 
ಬಿಳುಪುಛಾಯೆಯ ಮನುಷ್ಯಾಕೃತಿಯೊಂದು ತನ್ನ ಹೃದಯಭಾಗದಲ್ಲಿನ ಪಂಜರವನ್ನು ತನ್ನೆರಡೂ ಕೈಗಳಿಂದ ಮುಚ್ಚಿಡಲು ಯತ್ನಿಸುತ್ತಿದ್ದರೆ ಆ ಪಂಜರದೊಳಗಿನ ಕಡುಗಪ್ಪು ಮನುಷ್ಯಾಕೃತಿ ಅಲ್ಲಿಂದ ಹೊರಬರಲು ಹವಣಿಸುತ್ತಿರುವಂತೆ ಬಿಂಬಿಸುವ ಚಿತ್ರವದು……..

********************************************

ವರಾಂಡದಲ್ಲಿನ ತೂಗುಯ್ಯಾಲೆಯಲ್ಲಿ ಒರಗಿದ್ದವನ ದೃಷ್ಟಿಯೆಲ್ಲಾ ಎದುರಿಗಿದ್ದ ಎತ್ತರದ ಕಮಾನಿಗೆ ಹಬ್ಬಿಕೊಂಡು ರಾಶಿಮೊಗ್ಗುಗಳಿಂದ ಕಂಗೊಳಿಸುತ್ತಿದ್ದ ಮಲ್ಲಿಗೆಬಳ್ಳಿಯ ಮೇಲಿತ್ತು.

"ಜಯಂತಾಂಟಿ ಜಯಂತಾಂಟಿ ….. ನಾನು ಆ ಮಲ್ಲಿಗೆಮೊಗ್ಗು ಬಿಡಿಸ್ಕೊಂಡು ಮಾಲೆ ಮಾಡ್ಲಾ? ಉದ್ದಮಾಲೆ ಮಾಡ್ತೀನಿ. ನಿಮ್ಗೆ, ಮನೀಷಂಗೆ ಮತ್ತೆ ಉಳಿದಿದ್ದು ನಂಗೆ. ಬಿಡಿಸ್ಲಾ ಆಂಟಿ…..?"

ಅತ್ಯುತ್ಸಾಹದಿಂದ ಮೊಗ್ಗುಗಳನ್ನೆಲ್ಲಾ ಬಿಡಿಸುತ್ತಿದ್ದ ಬಾಲೆಯ ಮೊಗದಲ್ಲಿ ಅದೆಂತಹಾ ಅದಮ್ಯ ಸಂತಸ. ಇದ್ದಕ್ಕಿದ್ದಂತೆ ದೊಪ್ಪನೆ ಕೆಳಕ್ಕುರುಳಿದಳಾಕೆ…… ಆಸೆಯಿಂದ ಬಿಡಿಸಿದ ಮಲ್ಲಿಗೆಮೊಗ್ಗುಗಳೆಲ್ಲಾ ಸುತ್ತ ಚದುರಿವೆ. ಹಣೆಯಿಂದ ಸಣ್ಣಗೆ ನೆತ್ತರು ಚಿಮ್ಮುತ್ತಿದೆ. ದಡಬಡಿಸಿ ಎದ್ದು ಅತ್ತಧಾವಿಸಿದ ಶ್ರೀಧರ ಕಮಾನಿನಡಿಗೆ ಬಂದುನಿಂತ.

ಅರಳಿ ನೆಲಕ್ಕೆ ಉದುರಿದ ಮಲ್ಲಿಗೆ ಹೂಗಳ ಹೊರತು ಬೇರೇನೂ ಇಲ್ಲ……..

ಒಮ್ಮೆ ತಲೆ ಮೇಲಕ್ಕೆತ್ತಿ ಕಮಾನಿನ ತುಂಬಾ ಹಬ್ಬಿದ್ದ ಮಲ್ಲಿಗೆಬಳ್ಳಿಯನ್ನೇ ದಿಟ್ಟಿಸಿದ. ಎಲೆಗಳನ್ನೂ ಮುಚ್ಚುವಂತೆ ಎಲ್ಲೆಡೆ ನಳನಳಿಸುತ್ತಿದ್ದ ಹೂಗಳಲ್ಲಿ ಅವಳದ್ದೇ ನಗುಮೊಗ ಪ್ರತಿಫಲಿಸಿದಂತಾಗಿ ನೆಲದತ್ತ ನೋಟಹರಿಸಿದ. ಅವನ ಹೆಜ್ಜೆಯಡಿ ಸಿಲುಕಿದ ಮಲ್ಲಿಗೆಹೂಗಳು ಕೆಂಪಾಗಿ ನೆಲಕ್ಕಂಟಿ ನರಳಿದಂತೆ ಭಾಸವಾಯ್ತು.

“ತೋರಾ ಮನ್ ದರ್ಪಣ್ ಕೆಹಲಾಯೇ
ಭಲೇ ಬುರೇ ಸಾರೇ ಕರ್ಮೋಂಕೋ
ದೇಖೇ ಔರ್ ದಿಖಾಯೇ……”
ಟ್ರಾನ್ಸಿಸ್ಟರ್ನಿಂದ ತೇಲಿಬರುತ್ತಿದ್ದ ಸಾಲುಗಳು ಅವನ ಮನಃಪಟಲದ ಮೇಲೆ ಅಚ್ಚಾಗತೊಡಗಿದವು.

************************************

"ಡ್ಯಾಡಿ……… ಹೋಗು ನಾನು ಕೋಪ ನಿನ್ಹತ್ರ. ನಾನಂದ್ರೆ ಇಷ್ಟನೇ ಇಲ್ಲ ನಿಂಗೆ. ನನ್ನ ನೋಡಿದ್ರೂ ನೋಡದ ಹಾಗೆ ಹೋಗ್ತೀಯಾ. ನನ್ಹತ್ರ ಮಾತೂ ಆಡೋಲ್ಲ ನಂಜೊತೆ ಆಟನೂ ಆಡಲ್ಲ. ಟೂ ಟೂ ನಿನ್ಹತ್ರ…….." ಮುಖ ದುಮ್ಮಿಸಿಕೊಂಡು ಕುಳಿತಿದ್ದ ಮನೀಷಾಳ ಮೊಗವನ್ನು ದಿಟ್ಟಿಸುವ ಸಾಹಸಮಾಡಿದ. ಒಂದು ಕ್ಷಣವಷ್ಟೇ…… ತಾನೇತಾನಾಗಿ ನೋಟ ನೆಲಕ್ಕಿಳಿಯಿತು.

"ಡ್ಯಾಡಿಗೆ ತುಂಬಾ ಕೆಲಸ ಇದೆ ನಿಶಾ ಪುಟ್ಟಾ. ಅವರನ್ನ ಡಿಸ್ಟರ್ಬ್ ಮಾಡಬಾರ್ದು. ನಾನು ನೀನು ಆಟ ಆಡೋಣ ಆಯ್ತಾ. ನನ್ನ ಜಾಣಮರಿ ಅಲ್ವಾ ನೀನು……" ಅವನೆಡೆಗೆ ಆಕ್ಷೇಪಾರ್ಹ ನೋಟಬೀರುತ್ತಲೇ ಮಗಳನ್ನು ಸಮಾಧಾನಿಸುತ್ತಾ ಕೋಣೆಯಿಂದ ಹೊರಗೆ ಕರೆದೊಯ್ದಳು ಮಡದಿ.

"ಇಲ್ನೋಡು, ನನ್ನ ಜಾಣಮರಿ ಅಲ್ವಾ ನೀನು. ನಮ್ಮ ವೈಷೂ ಪುಟ್ಟಿ ಸ್ಟ್ರಾಂಗ್ ಗರ್ಲ್ ಅಲ್ವಾ? ಹೆದರ್ಕೋಬಾರದು. ಏನಾಗಲ್ಲ ಪುಟ್ಟಾ. ಶ್ರೀಧರ್ ಅಂಕಲ್ ಎಲ್ಲಾ ಸರಿಮಾಡ್ತಾರೆ ಆಯ್ತಾ. ಸಂಜೆಯಾಗುವಷ್ಟರಲ್ಲಿ ಗಾಯ ಎಲ್ಲಾ ಮಾಯ ಆಗಿರುತ್ತೆ. ಆಮೇಲೆ ನಾವಿಬ್ರೂ ಸೇರಿ ಮಲ್ಲಿಗೆಹೂ ಬಿಡಿಸೋಣ…….."

"ತುಂಬಾ ನೋವಾಗ್ತಿದೆ ಜಯಂತಾಂಟಿ…. ನನ್ಗೆ ಹೆದ್ರಿಕೆ ಆಗ್ತಿದೆ. ಸೂಜಿ ಚುಚ್ತಾರಾ…? ಅಮ್ಮ ಬೇಕು ನಂಗೆ….."

"ಏನಾಗಲ್ಲ ವೈಷೂ….... ನೀನು ಒಳಗೆ ಹೋಗಿ ಹೊರಗೆ ಬರುವಷ್ಟ್ರಲ್ಲಿ ಅಮ್ಮ ಬಂದಿರ್ತಾರೆ. ಒಳಗೆ ಶ್ರೀಧರ್ ಅಂಕಲ್ಲೇ ಬರ್ತಾರೆ ನಿಂಗೆ ಮದ್ದುಹಚ್ಚೋಕೆ ಆಯ್ತಾ. ಏನಾಗಲ್ಲ ಪುಟ್ಟಮ್ಮಾ…..."

"ಶ್ರೀಧರ್ ಅಂಕಲ್..... ಪ್ರಾಮಿಸ್ ನೀವೇ ಬರ್ತೀರಾ ಅಲ್ವಾ…."

ವೈಜಯಂತಿಯ ಕೈಹಿಡಿದ ಪುಟ್ಟ ವೈಷೂ ಸ್ಟ್ರೆಚರ್ ಮೇಲಿನಿಂದಲೇ ಪ್ರಶ್ನಿಸುತ್ತಿರುವಂತೆ ಅನಿಸಿ ಉಸಿರುಭಾರವಾಯಿತು. ಕೋಣೆಯಲ್ಲಿ ಕುಳಿತಿರಲಾಗದೇ ಎದ್ದು ಹೊರಬಂದ. ಕಾಲುಗಳು ಅಪ್ರಯತ್ನವಾಗಿ ಮಲ್ಲಿಗೆ ಬಳ್ಳಿಯತ್ತಲೇ ಸಾಗಿದವು. ಕಮಾನಿಗೆ ಒರಗಿ ನಿಂತವನ ಗಮನ ರಸ್ತೆಯ ಆಚೆ ಬದಿಗಿದ್ದ ತಾತ್ಕಾಲಿಕ ಜೋಪಡಿಗಳತ್ತ ಹರಿಯಿತು. ಮಲ್ಲಿಗೆಬಳ್ಳಿಯನ್ನೇ ಶೂನ್ಯಭಾವದಿಂದ ದಿಟ್ಟಿಸುತ್ತಿದ್ದ ಲೀಲಕ್ಕನನ್ನು ಕಂಡಿದ್ದೇ ಇನ್ನಷ್ಟು ಪ್ರಕ್ಷುಬ್ಧಗೊಂಡಿತು ಮನ.

"ಶ್ರೀಧರಪ್ಪಾ….. ನನ್ನ ಮಗೀಗೆ ಏನಾಗಕಿಲ್ಲ ಅಲ್ವಾ? ಏಟೊಂದು ನೆತ್ರ ಸುರ್ದೈತೆ. ನಂಗಂತ ಇರೋದು ಅದೊಂದೇ ಜೀವ. ಅದಕ್ಕೇನಾರ ಆದ್ರೆ ನಾ ಉಳಿಯಾಕಿಲ್ಲ ಶ್ರೀಧರಪ್ಪ….."

"ಮಗೂಗೆ ಏನೂ ಆಗಿಲ್ಲ ಲೀಲಕ್ಕ…ಒಂದಿಷ್ಟು ರಕ್ತ ಹೋಗಿದೆ. ಬಿದ್ದ ಆಘಾತಕ್ಕೆ ಗಾಬರಿಯಾಗಿದ್ದಾಳಷ್ಟೇ. ಮತ್ತೇನೂ ಆಗಿಲ್ಲ……"

"ಡಾಕ್ಟರ್….. ಮಗುದು ಎಬಿ ನೆಗೆಟಿವ್ ಬ್ಲಡ್ ಗ್ರೂಪ್. ನಮ್ಮಲ್ಲಿ ಸ್ಟಾಕ್ ಇಲ್ಲ. ಇನ್ನೊಂದುಗಂಟೆಯಲ್ಲಿ ಅರೇಂಜ್ ಮಾಡ್ತೀವಿ ಅಂದಿದ್ದಾರೆ….."

"ಎಬಿ ನೆಗೆಟಿವಾ……?"

"ಹೌದು ಸರ್. ಅದಕ್ಕೇ ಡೋನರ್ ಸಿಗೋದು ಕಷ್ಟಆಗ್ತಿದೆ"

"ಸರ್…..?"

"ಸರಿ…. ಒಂ….. ಒಂದು…... ಒಂದ್ಕೆಲಸ ಮಾಡು. ಬ್ಲಡ್ ಅರೇಂಜ್ ಆಗೋದ್ರೊಳಗೆ ನೀನು ಓಟಿ ತಯಾರಿಡು ಹೋಗು….."

ರಭಸವಾಗಿ ಬೀಸಿದ ಗಾಳಿಗೆ ರಾಶಿಹೂಗಳು ಮೈಮೇಲೆ ಉದುರಿದಾಗ ಇಹಕ್ಕಿಳಿದ ಶ್ರೀಧರ ಮತ್ತೆ ಲೀಲಕ್ಕನತ್ತ ಕಡೆಗಣ್ಣಿನಲ್ಲೂ ನೋಡದೇ ನಿಟ್ಟುಸಿರಿಟ್ಟು ಕೋಣೆಗೆ ಹಿಂದಿರುಗಿದ.

**************************************

"ವಾಟ್ಸ್ ರಾಂಗ್ ವಿತ್ ಯೂ ಶ್ರೀ? ನಿನ್ಗೆ ಗೊತ್ತುತಾನೇ ಮನೀಷಾ ಬಗ್ಗೆ? ಹುಟ್ಟಿದಂದಿನಿಂದ ಇಲ್ಲಿಯವರೆಗೆ ಬರೀ ಹಿಂಸೆಯೇ ಅವಳ ಪಾಲಿಗಿದ್ದದ್ದು. ಸಣ್ಣಮಗುವಾಗಿದ್ದಾಗಿಂದ ಏನೇನೆಲ್ಲಾ ಟ್ರೀಟ್ಮೆಂಟ್ ಕೊಡಿಸಿದ್ರೂ ಸುಧಾರಿಸದೇ ನಮ್ಮ ಕೈಜಾರಿಯೇ ಹೋದ್ಲು ಅನ್ನೋ ತನಕ ಆಗಿತ್ತು ಪರಿಸ್ಥಿತಿ. ಉಸಿರುತೆಗೆಯೋಕೆ ಆಗದೇ ಅವಳು ನರಳುವಾಗ ಅದೆಷ್ಟು ಯಾತನೆ ಅನುಭವಿಸಿದ್ದೀವಿ ನಾವು. ಮರೆಯುವಂತಹ ನೋವಾ ಅದು? ಅವಳದ್ದು ಬೇರೆ ರೇರೆಸ್ಟ್ ಬ್ಲಡ್ ಗ್ರೂಪ್. ಡೋನರ್ ಸಿಗೋದೇ ಇಲ್ಲಅಂತ ಅವಳ ಮೇಲಿನ ಆಸೆನೇ ಕೈಬಿಟ್ಟಾಗಿತ್ತು ನಾವು. ಏನೋ ನಮ್ಮ ಅದೃಷ್ಟ. ಭಗವಂತ ನಮ್ಮ ಕೈಬಿಡ್ಲಿಲ್ಲ. ಸರಿಯಾದ ಸಮಯಕ್ಕೆ ಅವ್ಳಿಗೆ ಹೊಂದುವಂತಹ ಡೋನರ್ ಸಿಕ್ಕಿ ಮನೀಷಾ ನಮ್ಮ ಪಾಲಿಗೆ ಉಳಿದ್ಲು. ಈ ಏಳುವರ್ಷಗಳ ಯಮಯಾತನೆಗೊಂದು ಮುಕ್ತಿ ಸಿಕ್ಕಿತು. ಇಂತಹ ನಿರಾಳತೆಯ ಸಮಯದಲ್ಲಿ ಇದೆಂತಹಾ ವಿಚಿತ್ರ ವರ್ತನೆ ನಿನ್ದು? ಆ ಮಗು ಅಷ್ಟು ಆಸೆಯಿಂದ ನಿನ್ನ ಹಿಂದೆಮುಂದೆ ಸುತ್ತುತ್ತಿದ್ರೆ ನೀನು ಅವಳ ಮುಖ ಕೂಡಾ ನೋಡದಂತೆ ಓಡಾಡ್ತಿಯಲ್ಲ? ಎಷ್ಟು ಬೇಜಾರ್ ಮಾಡ್ಕೊಂಡಿದ್ದಾಳೆ ಅವ್ಳು. ನೋಡು ಶ್ರೀ….... ನೀನು ನನ್ನ ಜೊತೆ ಸರಿಯಾಗಿ ಮಾತಾಡ್ದೇ ಇದ್ರೂ ತೊಂದ್ರೆ ಇಲ್ಲ ಆದ್ರೆ ಯಾವುದೇ ಕಾರಣಕ್ಕೂ ಮನೀಷಾ ಮನಸ್ಸನ್ನು ನೋಯಿಸ್ಬೇಡ. ಅಷ್ಟೇ ಕೇಳೋದು ನಾನು ನಿನ್ಹತ್ರ…..…." ವೈಜಯಂತಿಯ ಮಾತುಗಳಲ್ಲಿ ಅಡಗಿದ್ದ ನೋವು ಅವನಿಗೆ ತಿಳಿಯದ್ದೇನಲ್ಲ. ಅವನೂ ಅದೇ ನೋವಲ್ಲಿ ಮುಳುಗೆದ್ದವನೇ. ಆದರೆ ಅದನ್ನೂ ಮೀರಿದ ಅವ್ಯಕ್ತ ವೇದನೆಯೊಂದು ಅವನ ಆಂತರ್ಯದಲ್ಲಿ ಮಿಸುಕಾಡುತ್ತಿತ್ತು.

*************************************

ಮಲ್ಲಿಗೆಬಳ್ಳಿಯ ಕಮಾನಿಗೆ ಆತುಕೊಂಡು ಕುಳಿತಿದ್ದ ಶ್ರೀಧರ. ಹೂಗಳಿಲ್ಲದ ಮಲ್ಲಿಗೆಬಳ್ಳಿ ಬಾಡಿ ತನ್ನಂದಕಳೆದುಕೊಂಡಿತ್ತು. ಎದುರಿನ ಜೋಪಡಿಯೆದುರು ಯಾರೋ ಮಕ್ಕಳು ಆಡಿಕೊಳ್ಳುತ್ತಿದ್ದರು.

"ಲೀಲಕ್ಕ ಹೋಗ್ಬಿಟ್ರಂತೆ ಶ್ರೀ…. ತುಂಬಾ ಒಳ್ಳೆ ಹೆಂಗಸು. ಒಬ್ಬಂಟಿಯಾಗೇ ಬದುಕನ್ನು ಎದುರಿಸಿದ ಗಟ್ಟಿಗಿತ್ತಿ. ಇದ್ದೊಬ್ಬ ಮಗಳ ಮೇಲೆ ಪ್ರಾಣನೇ ಇಟ್ಕೊಂಡಿದ್ರು ಪಾಪ. ಅವಳಂತೂ ಎಷ್ಟು ಮುದ್ದಾಗಿದ್ಲು. ಜಯಂತಾಂಟಿ ಜಯಂತಾಂಟಿ ಅಂತ ನನ್ನ ಹಿಂದೆಮುಂದೆ ಸುತ್ತೋಳು. ನಮ್ಮ ಮನೀಷಾನೇ ಮನೆತುಂಬಾ ಓಡಾಡ್ಕೊಂಡಿದ್ದಾಳೆ ಅನ್ನಿಸ್ತಿತ್ತು ನನ್ಗೆ. ಮನೀಷಾ ಕೂಡಾ ತುಂಬಾ ಹಚ್ಕೊಂಡಿದ್ಲು ವೈಷೂನ. ಆ ಮಲ್ಲಿಗೆಹೂವಂದ್ರೆ ಅದೆಷ್ಟು ಆಸೆನೇನೋ ಅವ್ಳಿಗೆ. ದುರಾದೃಷ್ಟ ನೋಡು…….. ಅದೇ ಮಲ್ಲಿಗೆಹೂ ಬಿಡಿಸೋಕೆ ಹೋಗಿ ಬಿದ್ದಿದ್ದೇ ನೆಪವಾಗಿಹೋಯ್ತು. ವಿಪರ್ಯಾಸವೆಂದರೆ ನಮ್ಮ ಮನೀಷಾ ಪುಟ್ಟಿಗೆ ಡೋನರ್ ಸಿಕ್ಕಿ ಹಾರ್ಟ್ ಸರ್ಜರಿ ಆದ ದಿನವೇ ಆ ಮಗು ನಮ್ಮನ್ನು ಬಿಟ್ಟುಹೋಯ್ತು. ಅದನ್ನು ನೆನಸ್ಕೊಂಡ್ರೂ ಬೇಜಾರಾಗುತ್ತೆ. ನಮಗಾದ್ರೋ ಮನೀಷಾ ಹುಷಾರಾಗಿ ಓಡಾಡ್ಕೊಂಡು ಇರೋದ್ರಿಂದ ವೈಷೂ ಇಲ್ಲದ ಬೇಸರ ಅಷ್ಟೊಂದು ಕಾಡ್ಲಿಲ್ಲ. ಆದ್ರೆ ಪಾಪ ಲೀಲಕ್ಕ…. ಅವರನ್ನು ನೋಡೋಕಾಗ್ತಿರ್ಲಿಲ್ಲ ಅವ್ಳು ಹೋದ್ಮೇಲೆ. ಬದುಕಿನ ಮೇಲೆ ಆಸಕ್ತಿನೇ ಕಳ್ಕೊಂಡಿದ್ರು. ಕೊನೆಗೆ ಮಗಳನ್ನೇ ಹಿಂಬಾಲಿಸಿದ್ರು ಪಾಪ‌….."

ಹೆಂಡತಿಯ ಮಾತುಗಳೇ ಮನದಲ್ಲಿ ಮಾರ್ದನಿಸುತ್ತಿದ್ದವು. ಹಾಗೆಯೇ ಕಣ್ಮುಚ್ಚಿದ…….

"ಶ್ರೀಧರ್, ಐ ಕ್ಯಾನ್ ಅಂಡರ್ಸ್ಟಾಂಡ್ ಯುವರ್ ಫೀಲಿಂಗ್ಸ್. ಆದ್ರೇನು ಮಾಡೋದು? ಶೀ ಹ್ಯಾಸ್ ಕಂಜನಿಟಲ್ ಹಾರ್ಟ್ ಡಿಸೀಸ್. ಎಲ್ಲಾ ತರದ ಮೆಡಿಸಿನ್ ಟ್ರೈ ಮಾಡಿ ಆಗಿದೆ. ನೋ ಯೂಸ್. ವಿ ಹ್ಯಾವ್ ಟು ಗೋ ಫಾರ್ ಹಾರ್ಟ್ ಟ್ರಾನ್ಸಪ್ಲಾನ್ಟೇಷನ್. ಅದೇ ಲಾಸ್ಟ್ ಆಪ್ಷನ್ ಇರೋದು. ಆದ್ರೆ ಅವಳ ಬ್ಲಡ್ ಗ್ರೂಪೇ ದೊಡ್ಡ ಸಮಸ್ಯೆ. ಡೋನರ್ ಸಿಗೋದು ಅನುಮಾನವೇ….."

“ಡಾಕ್ಟರ್ ಮಗುದೂ ಎಬಿ ನೆಗೆಟಿವ್ ಬ್ಲಡ್ ಗ್ರೂಪ್…”

“ಸರಿ…. ಒಂದು….. ಒಂದ್ಕೆಲಸ ಮಾಡು. ಬ್ಲಡ್ ಅರೇಂಜ್ ಆಗೋದ್ರೊಳಗೆ ನೀನು ಓಟಿ ತಯಾರಿಡು ಹೋಗು…..”

"ಶ್ರೀಧರ್ ಅಂಕಲ್, ಪ್ರಾಮಿಸ್ ನೀವೇ ಬರ್ತೀರಾ ಅಲ್ವಾ? ನಂಗೆ ನೋವಾಗ್ತಿದೆ. ರಕ್ತ ಬರ್ತಿದೆ…...."

"ಶ್ರೀಧರಪ್ಪಾ…. ನನ್ಮಗೀಗೆ ಏನಾಗಕಿಲ್ಲ ಅಲ್ವಾ?"

"ಲೀಲಕ್ಕ ಹೋಗ್ಬಿಟ್ರಂತೆ ಶ್ರೀ…."

"ನಮ್ಮ ಮನೀಷಾನೇ ಮನೆ ತುಂಬಾ ಓಡಾಡ್ಕೊಂಡಿದ್ದಾಳೇನೋ ಅನ್ನಿಸ್ತಿತ್ತು ನನ್ಗೆ…….."

"ಆ ಮಲ್ಲಿಗೆಹೂವಂದ್ರೆ ಅದೆಷ್ಟು ಆಸೆನೇನೋ ಅವ್ಳಿಗೆ. ದುರಾದೃಷ್ಟ ನೋಡು….... ಅದೇ ಮಲ್ಲಿಗೆಹೂ ಬಿಡಿಸೋಕೆ ಹೋಗಿ ಬಿದ್ದಿದ್ದೇ ನೆಪವಾಗಿಹೋಯ್ತು"

"ನಂಗೆ ಭಯ ಆಗ್ತಿದೆ ಶ್ರೀಧರ್ ಅಂಕಲ್……"

ಬೆಚ್ಚಿ ಕಣ್ತೆರೆದ…….

"ಸುಖ್ ಕಿ ಕಲಿಯಾ ದುಃಖ್ ಕೇ ಕಾಂಟೇ ಮನ್ ಸಬ್ ಕಾ ಆಧಾರ್
ಮನ್ ಸೆ ಕೋಯೀ ಬಾತ್ ಛುಪೇ ನಾ ಮನ್ ಕೆ ನೈನ್ ಹಜಾ಼ರ್
ಜಗ್ ಸೆ ಚಾಹೇ ಭಾಗ್ ಲೇ ಕೋಯೀ
ಮನ್ ಸೇ ಭಾಗ್ ನ ಪಾಯೇ..…"

ಟ್ರಾನ್ಸಿಸ್ಟರ್ನಿಂದ ಹೊರಹೊಮ್ಮುತ್ತಿದ್ದ ಸಾಲುಗಳು ತನ್ನಂತರಂಗವನ್ನೇ ಬಗೆಯುತ್ತಿವೆಯೇನೋ ಎಂಬ ಭೀತಿಯಾವರಿಸಿತು ಅವನಿಗೆ.

ಬಾಡಿದ ಮಲ್ಲಿಗೆಬಳ್ಳಿಯ ತುಂಬಾ ಕೆಂಬಣ್ಣದ ಮಲ್ಲಿಗೆಹೂಗಳು ಅರಳಿ ನಿಂತಂತೆ ಕಂಡಿತು. ಪ್ರತೀ ಹೂವಿನಲ್ಲೂ ಕೆಂಪುನಿಲುವಂಗಿಯ ಬಾಲೆಯೇ ನಕ್ಕಂತೆ ಭಾಸವಾಗತೊಡಗಿತು.

ಅದಾರು….…..?

ವೈಷೂವೇ…...? ಹೌದು…. ಅದು ವೈಷ್ಣವಿಯೇ…..

ಇಲ್ಲ ಇಲ್ಲ…….. ಅದು ಮನೀಷಾ…….!!

ವೈಷೂ……. ಮನೀಷೆ…….
ಮನೀಷೆ……. ವೈಷೂ…….
ಇಲ್ಲಾ….. ಲೀಲಕ್ಕ……!!

ಎರಡೂ ಕೈಗಳಲ್ಲಿ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಶ್ರೀಧರ. ಕೂದಲನ್ನೆಲ್ಲಾ ಕಿತ್ತು ಹಾಕಬೇಕೆನಿಸಿತು.

ಸಾವಿರಾರು ಕೆಂಪುಮಲ್ಲಿಗೆ ಹೂಗಳು…..
ಸಾವಿರಾರು ವೈಷ್ಣವಿಯರು, ಮನೀಷೆಯರು, ಲೀಲಕ್ಕರು……

ಸಾವಿರಾರು ಶ್ರೀಧರರು…… 
ರಕ್ತಪಿಪಾಸುಗಳು…… 
ಸಂಭಾವಿತ ಕೊಲೆಗಾರರು……..
ಕೆಂಪುಮಲ್ಲಿಗೆ……..

"ಬೇಡ ಬೇಡ…. ಹತ್ತಿರ ಬರಬೇಡಿ….. " ಎನ್ನುತ್ತಲೇ ಮಲ್ಲಿಗೆಬಳ್ಳಿಯಿಂದ ದೂರದೂರ ಓಡತೊಡಗಿದ ಶ್ರೀಧರ…….. ಹಿಂಬಾಲಿಸಿ ಬರುತ್ತಿದ್ದ ಶ್ರೀಧರರಿಂದ ದೂರದೂರಕ್ಕೆ ಓಡುತ್ತಲೇ ಇದ್ದ……..!!


ಮುಕ್ತಾಯ