ಗುರುವಾರ, ಜೂನ್ 18, 2020

ನಿರಾಶ್ರಿತ

ನಾ ಯಾರೆಂದು ತಿಳಿದಿಲ್ಲ ನಿಮಗೆಲ್ಲ...
ಮುಂದೆ ತಿಳಿವ ಬಗೆಯೂ ಅರಿವಿಲ್ಲ...
ನಾ ಈಗಿನ್ನೂ ಜಗವ ಅರಿಯ ಹೊರಟಿದ್ದೆ ಕಣ್ಣಗಲಿಸಿ....
ಆದರೆ ಈ ಜಗ ಎನಗೆ ಕೊಟ್ಟ ನಾಮಧೇಯ....

"ನಿರಾಶ್ರಿತ"

ನಾ ನಿರಾಶ್ರಿತನಂತೆ......
ಯಾವುದೋ ನಿರಾಶ್ರಿತ ಶಿಬಿರದಲ್ಲಿ ಅಲೆವೆನಂತೆ ನನ್ನಪ್ಪ ಅಮ್ಮನೊಂದಿಗೆ....
ಹೋದಲ್ಲೆಲ್ಲ 'ನೀ ನಿರಾಶ್ರಿತ, ಇಲ್ಲಿರುವ ಹಕ್ಕು ನಿನಗಿಲ್ಲ, ತೊಲಗು ಇಲ್ಲಿಂದ ' ಎನ್ನುವರು...
ಹುಚ್ಚು ನಾಯಿಯಂತೆ ಅಟ್ಟಿಸುವರು.....
ಮಾತೃಭೂಮಿಗೂ ಸಲ್ಲದೇ ಪರದೇಶಕ್ಕೂ ಸಲ್ಲದೇ... ಕಡೆಗೊಮ್ಮೆ ಭುವಿಯ ಎಲ್ಲೋ ಒಂದೆಡೆ 
ಬದುಕ ಅರಸಿ ಹೊರಟೆವು ಸವಾರಿ ಕಳ್ಳಮಾರ್ಗದಲಿ

ಆದರೆ ವಿಧಿಯೋ ಕಡು ಕ್ರೂರಿ.... 
ಬದುಕೇ ಕಸಿದ ಇನ್ನೂ ಜಗ ತಿಳಿಯದ ಹಸುಳೆಯೆಂಬ ಕನಿಕರವಿಲ್ಲದೇ....
ಯಾವುದೋ ಯುದ್ಧ ಭೂಮಿಯ ನಡುವಲ್ಲಿಯೋ ಇಲ್ಲಾ ಯಾವುದೋ ನದಿ ತಟದಲ್ಲೋ ನಿರ್ಜೀವವಾಗಿ ನಿಶ್ಚಲನಾಗಿರುವೆ ನಾನು.......

ಆಗ ಬೀಳುವುದು ಜಗದ ಗಮನ ನನ್ನೆಡೆ.....
ನನ್ನ ಬವಣೆಗೆ ಮರುಗುವುದು ನಿಮ್ಮ ಹೃದಯ....
ದಿನಪತ್ರಿಕೆಗಳಲ್ಲಿ, ವಾರ್ತೆಗಳ ತುಂಬಾ ರಾರಾಜಿಸುತ್ತಿವೆ ನನ್ನ ಶವ.......
ಇದು ಕ್ರೌರ್ಯದ ಪರಮಾವಧಿಯೆಂಬ ನಿಮ್ಮ ಹಾರಾಟ, ಚೀರಾಟಗಳು
ನನಗಾಗಿ ನೀವು ಮಾಡುವ ಮೊಂಬತ್ತಿ ಮೆರವಣಿಗೆಗಳು......

ಆದರೇನು ಮಾಡಲಿ..... ಇದ ನೋಡಲು ನಾನು ಬದುಕಿಲ್ಲವಲ್ಲ......

ಅಯ್ಯೋ ಮೂಢ ಜನರೇ......
ಈ ಕಾಳಜಿ ನಾನು ಸತ್ತ ಮೇಲೆ ಬಂದಿತೇ ನಿಮಗೆ.....

ನನ್ನ ನಿರಾಶ್ರಿತನೆಂದು ಹಂಗಿಸಿ ಓಡಿಸಿದಿರಿ ಜಗದ ಮೂಲೆಮೂಲೆಗೆ......
ಅಣಕವಾಡಿದಿರಿ ನಾ ಜನಿಸಿದ್ದೇ ಅಪರಾಧವೆಂಬಂತೆ.....
ಜಾತಿ, ಧರ್ಮ, ವರ್ಗ, ವರ್ಣವೆಂದು ಭೇದ ಮಾಡಿದಿರಿ ನನ್ನ.......
ನನ್ನ ಬದುಕು ಕಸಿವ ಹಕ್ಕು ಕೊಟ್ಟವರಾರು ನಿಮಗೆ....

ಒಂದು ಮಾತು ನೆನಪಿರಲಿ ನನ್ನ ನಿರಾಶ್ರತನೆಂದು ಕರೆಯುವ ಮುನ್ನ.....

ನೀವೂ ನಿರಾಶ್ರಿತರೇ ಇಲ್ಲಿ.....
ಎಲ್ಲರೂ ನಿರಾಶ್ರಿತರೇ ಈ ಭುವಿಯಲ್ಲಿ....
ಈ ಧರಿತ್ರಿ ಕರುಣೆಯಲಿ ಆಶ್ರಯವಿತ್ತಿರುವಳು ನಿಮಗೆ....
ಅವಳು ನಿಮ್ಮಂತೆ ಭೇದವೆಣಿಸಿದ್ದರೆ ನೀವು ಇಂದು ನಿರಾಶ್ರಿತರೇ......

ಇಂದು ಮಡಿದಿರುವುದು ನಾನಲ್ಲ.......
ಇದು ಮಾನವೀಯತೆಯ ಮರಣ ನಿಮ್ಮ ಕೈಯಿಂದ.....

ಇಂತೀ ನಿಮ್ಮ ದ್ವೇಷಕ್ಕೊಳಗಾದ ಅನಾಥ ಶವ


3 ಕಾಮೆಂಟ್‌ಗಳು:

  1. ಇಂಗ್ಲೀಷ್ ಗಾಯಕ ಡಿಲಾನ್ ರವರ ಒಂದು ಹಾಡಿದೆ ನಿರಾಶ್ರಿತರ ಬಗ್ಗೆ. ಲೈಕ್ ಅ ರೋಲಿಂಗ್ ಸ್ಟೋನ್ ಅನ್ನೋ ಹಾಡು ಅದರಲ್ಲಿ ಹಿಗಿದೆ.
    ಹೌ ಡಸ್ ಇಟ್ ಫೀಲ್? ಹೌ ಡಸ್ ಇಟ್ ಫೀಲ್?ಟು ಬಿ ಆನ್ ಯುವರ್ ವೋನ್, ವಿದ್ ನೋ ಡೈರಕ್ಶನ್ ಹೋಮ್,ಎ ಕಪ್ಲೀಟ್ ಅನ್ನೋನ್,ಲೈಕ್ ಎ ರೋಲಿಂಗ್ ಸ್ಟೋನ್
    ಅಂದರೆ ನಿಮ್ಮಷ್ಟಕ್ಕೆ ನಿವಿರುವುದೂ,ಮನೆಯೆಂಬ ದಿಕ್ಕಿಲ್ಲದಿರುವುದು,ಉರುಳುವ ಕಲ್ಲಿನಂತೆ ಸಂಪೂರ್ಣ ಅಜ್ಞಾತ ವಾಸವಾಗಿ ಅನ್ನೋದು ಅರ್ಥ...... ನಿಮ್ಮ ಈ ವಿಚಾರವನ್ನು ಓದಿದಾಗ ನೆನಪಾದದ್ದು ಇದೆ. ಆದರೆ ಮಾನವ ಎಷ್ಟು ವಿಚಿತ್ರ,. ಕೆಲವು ಸಲ ಕ್ರೂರಿಯು ಆಗುತ್ತಾನೆ ಅಷ್ಟೇ..ಆ ಫೋಟೋ ನೋಡುವಾಗ ತುಂಬಾ ನೆ ನೋವಾಗುತ್ತೆ. ಅಲ್ಲಿರುವ ಆ ಕಂದನ ಪರಿಸ್ಥಿತಿ ಸಾಕು ಎಲ್ಲಾ ಭಾವವನ್ನು ವಿವರಿಸೋದಕ್ಕೆ,,,

    ಪ್ರತ್ಯುತ್ತರಅಳಿಸಿ
  2. ಇಂಗ್ಲೀಷ್ ಗಾಯಕ ಡಿಲಾನ್ ರವರ ಒಂದು ಹಾಡಿದೆ ನಿರಾಶ್ರಿತರ ಬಗ್ಗೆ. ಲೈಕ್ ಅ ರೋಲಿಂಗ್ ಸ್ಟೋನ್ ಅನ್ನೋ ಹಾಡು ಅದರಲ್ಲಿ ಹಿಗಿದೆ.
    ಹೌ ಡಸ್ ಇಟ್ ಫೀಲ್? ಹೌ ಡಸ್ ಇಟ್ ಫೀಲ್?ಟು ಬಿ ಆನ್ ಯುವರ್ ವೋನ್, ವಿದ್ ನೋ ಡೈರಕ್ಶನ್ ಹೋಮ್,ಎ ಕಪ್ಲೀಟ್ ಅನ್ನೋನ್,ಲೈಕ್ ಎ ರೋಲಿಂಗ್ ಸ್ಟೋನ್
    ಅಂದರೆ ನಿಮ್ಮಷ್ಟಕ್ಕೆ ನಿವಿರುವುದೂ,ಮನೆಯೆಂಬ ದಿಕ್ಕಿಲ್ಲದಿರುವುದು,ಉರುಳುವ ಕಲ್ಲಿನಂತೆ ಸಂಪೂರ್ಣ ಅಜ್ಞಾತ ವಾಸವಾಗಿ ಅನ್ನೋದು ಅರ್ಥ...... ನಿಮ್ಮ ಈ ವಿಚಾರವನ್ನು ಓದಿದಾಗ ನೆನಪಾದದ್ದು ಇದೆ. ಆದರೆ ಮಾನವ ಎಷ್ಟು ವಿಚಿತ್ರ,. ಕೆಲವು ಸಲ ಕ್ರೂರಿಯು ಆಗುತ್ತಾನೆ ಅಷ್ಟೇ..ಆ ಫೋಟೋ ನೋಡುವಾಗ ತುಂಬಾ ನೆ ನೋವಾಗುತ್ತೆ. ಅಲ್ಲಿರುವ ಆ ಕಂದನ ಪರಿಸ್ಥಿತಿ ಸಾಕು ಎಲ್ಲಾ ಭಾವವನ್ನು ವಿವರಿಸೋದಕ್ಕೆ,,,

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ ನಿಮ್ಮ ಮಾತು. ಈ ಚಿತ್ರಗಳನ್ನು ನ್ಯೂಸ್ಗಳಲ್ಲಿ, ದಿನಪತ್ರಿಕೆಗಳಲ್ಲಿ ನೋಡಿದಾಗ ಏನು ಫೀಲ್ ಆಯ್ತು ಅನ್ನೋದನ್ನೂ ವಿವರಿಸಲಾಗದು ನನಗೆ. ಇಡೀ ಜಗತ್ತಿನಲ್ಲೇ ಕನಿಷ್ಠ ಮಾನವೀಯತೆಯುಳ್ಳ ಪ್ರಾಣಿ ಮನುಷ್ಯನೇ.

      ಅಳಿಸಿ