ಸೋಮವಾರ, ಸೆಪ್ಟೆಂಬರ್ 7, 2020

ಅರಿಯೋ ಗುರುವೇ ಶಿಷ್ಯನಂತರಂಗವ

ಸಾಮಾನ್ಯವಾಗಿ ಶಾಂತವಾಗಿರುವ ಶಿವಮೊಗ್ಗೆಯ ಡಾ‌.ಸರ್ವಪಳ್ಳಿ ರಾಧಾಕೃಷ್ಣನ್ ಮೆಮೋರಿಯಲ್ ಬಿ.ಎಡ್ ಕಾಲೇಜಿನ ಆವರಣದಲ್ಲಿ ಅಂದು ಆತಂಕದ ಮುಖಹೊತ್ತು ಚರ್ಚಿಸುತ್ತಿದ್ದ ವಿದ್ಯಾರ್ಥಿಗಳದ್ದೇ ಗಜಿಬಿಜಿ. ಹೆಚ್ಚು ಕಮ್ಮಿ ಎಲ್ಲರಲ್ಲೂ ಒಂದಿಷ್ಟು ಅಂಜಿಕೆ, ಅಳುಕು, ಭಯ. ಏನೋ ಗಡಿಬಿಡಿ, ಗಾಬರಿ ಸ್ಪಷ್ಟವಾಗಿ ಕಾಣುತ್ತಿತ್ತು. ಇಂತಹ ವಾತಾವರಣಕ್ಕೆ ಕಾರಣ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದ ಪ್ರಾಕ್ಟೀಸ್ ಟೀಚಿಂಗ್. ಕಳೆದ ಐದು ತಿಂಗಳುಗಳ ಕಾಲ ಕಾಲೇಜಿನಲ್ಲಿ ಕಲಿತ ಎಲ್ಲಾ ತತ್ವ, ಸಿದ್ಧಾಂತಗಳನ್ನೂ ನಾಡಿದ್ದಿನಿಂದ ಪ್ರಾಯೋಗಿಕವಾಗಿ ಹೇಗೆಲ್ಲಾ ಅಳವಡಿಸಿಕೊಳ್ಳಬೇಕು, ಮಕ್ಕಳೆದುರು ಅಧ್ಯಾಪಕರಾಗಿ ನಿಂತು ಹೇಗೆ ತರಗತಿಗಳನ್ನು ತೆಗೆದುಕೊಳ್ಳಬೇಕು ಎಂಬುದೇ ಎಲ್ಲರ ಚರ್ಚೆಯ ಕೇಂದ್ರಬಿಂದು. ಆ ಬಗ್ಗೆಯೇ ಎಲ್ಲರ ವಿಚಾರ ವಿನಿಮಯ ನಡೆದಿತ್ತು. 

ಹಾಗೆ ಗಲಗಲಿಸುತ್ತಿದ್ದ ತರಗತಿ ಪ್ರೊ.ರಾಧಾಕೃಷ್ಣ ಪಟ್ಟಾಭಿ ಅವರ ಆಗಮನದಿಂದ ನಿಶ್ಯಬ್ದವಾಯಿತು. ಪಟ್ಟಾಭಿಯವರು ಆ ಕಾಲೇಜಿನ ಶೈಕ್ಷಣಿಕ ಮನೋವಿಜ್ಞಾನ(educational psychology) ವಿಷಯದ ಉಪನ್ಯಾಸಕರು. ಡೆವಲಪ್ಮೆಂಟಲ್ ಸೈಕಾಲಜಿಯಲ್ಲಿ ಪರಿಣಿತಿಯ ಜೊತೆಗೆ ಮಕ್ಕಳ ಮನೋವಿಕಾಸವನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಆ ಬಗ್ಗೆ ಹಲವಾರು ಸಂಶೋಧನಾ ಲೇಖನ ಹಾಗೂ ಪುಸ್ತಕಗಳನ್ನೂ ಬರೆದಿದ್ದರು. ತಮ್ಮೆಲ್ಲಾ ಜ್ಞಾನವನ್ನೂ ಭವಿಷ್ಯದ ಅಧ್ಯಾಪಕರಿಗೆ ಧಾರೆಯೆರೆಯಬೇಕೆಂಬ ಉದ್ದೇಶದಿಂದಲೇ ಹಲವು ಲಾಭದಾಯಕ ಅವಕಾಶಗಳನ್ನು ಬಿಟ್ಟು ಈ ವೃತ್ತಿಯನ್ನು ಪಟ್ಟಾಭಿಯವರು ಆಯ್ದುಕೊಂಡಿದ್ದರು. ಅವರ ತರಗತಿಗಳು ಬಿ.ಎಡ್ ವಿದ್ಯಾರ್ಥಿಗಳಿಗೆ ಗೀತೋಪದೇಶದಂತಿರುತ್ತಿತ್ತು. ದೇಶದಾದ್ಯಂತ ಹಲವಾರು ಕಾಲೇಜುಗಳು ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದವು. ಅಂತಹ ಪಟ್ಟಾಭಿಯವರು ಮೇಷ್ಟ್ರಾಗಿರುವ ಕಾಲೇಜು ಎನ್ನುವ ಕಾರಣಕ್ಕಾಗಿಯೇ ಎಲ್ಲಾ ಬಿ.ಎಡ್ ವಿದ್ಯಾರ್ಥಿಗಳು ರಾಧಾಕೃಷ್ಣನ್ ಮೆಮೋರಿಯಲ್ ಕಾಲೇಜಿಗೆ ದಾಖಲಾಗಲು ಬಯಸುತ್ತಿದ್ದರು.

ಪಟ್ಟಾಭಿಯವರಿಗೆ ಇಂದಿನ ದಿನ ತಮ್ಮ ವಿದ್ಯಾರ್ಥಿಗಳ ಮನದಲ್ಲಿರುವ ಅಳುಕು, ಚಿಂತೆಗಳ ಅರಿವಿತ್ತು. ಅದಕ್ಕಾಗಿಯೇ ಅವರಿಗೆ ಒಂದಿಷ್ಟು ಮಾರ್ಗದರ್ಶನ ನೀಡಲು ತರಗತಿಗೆ ಬಂದಿದ್ದರು.‌ ಒಮ್ಮೆ ಎಲ್ಲರನ್ನೂ ಕೂಲಂಕಷವಾಗಿ ಗಮನಿಸಿ ಮಾತಿಗಾರಂಭಿಸಿದರು.

"ಮೈ ಡಿಯರ್ ಸ್ಟೂಡೆಂಟ್ ಟೀಚರ್ಸ್, ಇಂದಿನ ನಿಮ್ಮ ಗೊಂದಲ, ಆತಂಕಭರಿತ ಮನಸ್ಥಿತಿ ಸಹಜವೇ. ನಾಡಿದ್ದಿನಿಂದ ಸಂಪೂರ್ಣ ಹೊಸ ಜಗತ್ತೊಂದಕ್ಕೆ ನೀವು ತೆರೆದುಕೊಳ್ಳುತ್ತೀರಿ. ಅಲ್ಲಿ ನೀವು ಪಾಠ ಮಾಡುವ ವಿದ್ಯಾರ್ಥಿಗಳಿಗೆ ನೀವೇ ಗುರುಗಳು. ಇದು ಬೋಧನಾಭ್ಯಾಸವೇ ಆದರೂ 'ಶಿಕ್ಷಕ' ವೃತ್ತಿಗೆ ನೀವು ನಾಡಿದ್ದಿನಿಂದಲೇ ಕಾಲಿರಿಸುವಿರಿ. ಇದು ನಿಮ್ಮ ವೃತ್ತಿ ಬದುಕಿನ ಆರಂಭ. ಅಲ್ಲಿ ಏನು ಪಾಠ ಮಾಡಬೇಕು, ಹೇಗೆ ಮಾಡಬೇಕು, ಪಾಠಯೋಜನೆ(lesson plan) ತಯಾರಿ ಹಾಗೂ ಅದರ ಅಳವಡಿಕೆ ಹೇಗೆ ಎಂಬುದರ ಬಗ್ಗೆ ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿ ಇದೆ. ಕಲಿಕಾ ಕೌಶಲಗಳು, ಪಠ್ಯಕ್ರಮ, ಬ್ಲೂಮ್ ನ ಟ್ಯಾಕ್ಸೋನಮಿ ಮೊದಲಾದವುಗಳೆಲ್ಲವೂ ನಿಮಗೆ ತಿಳಿದಿದೆ. ಈ ಬಗ್ಗೆ ನಾನೇನೂ ಹೇಳುವುದಿಲ್ಲ" ಎನ್ನುತ್ತಲೇ ಒಮ್ಮೆ ಎಲ್ಲರತ್ತ ಕಣ್ಣು ಹಾಯಿಸಿ ತಮ್ಮ  ಮಾತನ್ನು ಮುಂದುವರೆಸಿದರು.

"ಅಧ್ಯಾಪಕ ಹೇಗೆ ಮನಸ್ಸು ಮಾಡಿದರೆ ಒಬ್ಬ ವಿದ್ಯಾರ್ಥಿಯ ಬಾಳಿಗೆ ದೀವಿಗೆಯಾಗಬಹುದೋ ಅಂತೆಯೇ ಅವನ ಒಂದು ತಪ್ಪು ನಡೆ ವಿದ್ಯಾರ್ಥಿಯ ಬದುಕಿನ ಲಕ್ಷ್ಯವನ್ನೇ ಬದಲಿಸಿ ಅಂಧಕಾರದಲ್ಲಿಯೂ ಮುಳುಗಿಸಬಹುದು…… ನಾನಿಂದು ನಿಮಗೆ ಕಥೆಯೊಂದನ್ನು ಹೇಳಬೇಕೆಂದುಕೊಂಡಿರುವೆ. ಕೇಳುವಿರೇನು?" ಎನ್ನುತ್ತಾ ಎಲ್ಲರತ್ತ ನೋಟಹರಿಸಿದರು ಪಟ್ಟಾಭಿ. ಎಲ್ಲರೂ ಸಂಪೂರ್ಣವಾಗಿ ಅವರ ಮಾತಿನಲ್ಲೇ ಲೀನರಾಗಿದ್ದರು. ಕಥೆಯನ್ನು ಕೇಳುವ ಕುತೂಹಲ, ಉತ್ಸಾ‌ಹ ಗರಿಗೆದರಿತ್ತು ಅವರುಗಳಲ್ಲಿ. ನಸುನಕ್ಕು ಕಥೆ ಹೇಳಲು ಉಪಕ್ರಮಿಸಿದರು ಪಟ್ಟಾಭಿ.

"ಒಂದು ಸಣ್ಣ ಪಟ್ಟಣ. ಅಲ್ಲೊಂದು ಶಾಲೆ. ಕಿಟ್ಟಿ ಆ ಶಾಲೆಯಲ್ಲಿ ಏಳನೇಯ ತರಗತಿ ಕಲಿಯುತ್ತಿದ್ದ ಸಾಮಾನ್ಯ ಬುದ್ಧಿಮತ್ತೆಯ ಬಾಲಕ. ತೀರಾ ತರಗತಿಗೆ ಪ್ರಥಮ ಎನ್ನುವಂತಹ ಬುದ್ಧಿವಂತನಲ್ಲದಿದ್ದರೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಿದ್ದ ಹುಡುಗನವನು. ಅವನಿಗೆ ಒಂದೇ ಬಾರಿಗೆ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎರಡು ಮೂರು ಬಾರಿ ಅದನ್ನು ಮನನ ಮಾಡಿಕೊಂಡ ನಂತರದಲ್ಲಿ ಪಠ್ಯಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುತ್ತಿದ್ದ. ಶಾಲೆಯಲ್ಲಿ ಹತ್ತರಲ್ಲಿ ಹನ್ನೊಂದು ಎನ್ನುವಂತಿದ್ದ ಕಿಟ್ಟಿಗೆ ಗಣಿತದಲ್ಲಿ ಅಪರಿಮಿತ ಆಸಕ್ತಿಯಿತ್ತು. ಶಾಲೆಯಲ್ಲಿ ಮೇಷ್ಟ್ರು ಲೆಕ್ಕಗಳನ್ನು ಹಂತ ಹಂತವಾಗಿ ಬಿಡಿಸುವುದನ್ನು ಗಮನವಿಟ್ಟು ನೋಡುತ್ತಿದ್ದ. ನಂತರ ಮನೆಯಲ್ಲಿ ಪುಸ್ಯಕದಲ್ಲಿದ್ದ ಉದಾಹರಣೆಯ ಹಾಗೂ ಅಭ್ಯಾಸದ ಲೆಕ್ಕಗಳನ್ನು ಆಸಕ್ತಿಯಿಂದ ಬಿಡಿಸುತ್ತಿದ್ದ. ಎರಡು ಮೂರು ಬಾರಿ ಪ್ರಯತ್ನಿಸಿ ಸರಿಯಾಗಿ ಲೆಕ್ಕ ಬಿಡಿಸಿದಾಗ ಅವನಿಗೆ ಬಹಳ ಆನಂದವೆನಿಸುತ್ತಿತ್ತು. ಆತನಿಗೆ ತಾನು ಗಣಿತ ವಿಷಯದಲ್ಲೇ ಮುಂದೆ ಪರಿಣಿತಿ ಸಾಧಿಸಬೇಕೆಂಬ ಹಂಬಲವಿತ್ತು. 

ಕಿಟ್ಟಿ ಏಳನೇಯ ತರಗತಿ ತೇರ್ಗಡೆಯಾಗಿ ಎಂಟನೇ ತರಗತಿಗೆ ಬರುವ ಸಮಯದಲ್ಲಿ ಆ ಶಾಲೆಗೆ ಹೊಸ ಗಣಿತ ಮೇಷ್ಟ್ರ ಆಗಮನವಾಯಿತು. ಈ ಹೊಸ ಶಿಕ್ಷಕರ ನೀತಿಗಳೇ ಬೇರೆಯಾಗಿತ್ತು. ಮೊದಲ ಕಿರು ಪರೀಕ್ಷೆಯಲ್ಲೇ ಆತ ಅಂಕಗಳ ಆಧಾರದಲ್ಲಿ ನಾಲ್ಕೈದು ವಿದ್ಯಾರ್ಥಿಗಳನ್ನು ಪ್ರತಿಭಾನ್ವಿತರೆಂದು ತಾನೇ ಗುರುತಿಸಿಕೊಂಡಿದ್ದರು. ಆ ನಂತರದಲ್ಲಿ ಅವರ ಪಾಠ ಕೇವಲ ಆ ಕೆಲವರನ್ನು ಮಾತ್ರವೇ ಕೇಂದ್ರೀಕರಿಸಿತ್ತು. ಲೆಕ್ಕಗಳನ್ನು ಬಿಡಿಸುವುದು, ಪ್ರಶ್ನೆಗಳನ್ನು ಕೇಳುವುದು ಎಲ್ಲವೂ ಅವರಿಗೆ ಮಾತ್ರವೇ ಎನ್ನುವಂತಿತ್ತು ಈ ಹೊಸ ಶಿಕ್ಷಕರ ನಡವಳಿಕೆ. ಕಿಟ್ಟಿಗೆ ಇದು ಬೇಸರವೆನಿಸಿದರೂ ಅವನು ಅದನ್ನು ಹೆಚ್ಚು ತಲೆಗೆ ಹಚ್ಚಿಕೊಳ್ಳಲಿಲ್ಲ.

ಹೀಗೇ ಒಂದು ದಿನ ಆ ಶಿಕ್ಷಕ ಬೀಜೋಕ್ತಿಗಳ ಬಗ್ಗೆ ಪಾಠಪಾಡುತ್ತಿದ್ದರು. ವರ್ಗೀಕೃತ ಸಮೀಕರಣದಲ್ಲಿ 'x'ನ ಮೌಲ್ಯವನ್ನು ಪತ್ತೆ ಮಾಡಿ ಅದನ್ನು ತಾಳೆ ನೋಡುವುದು ಹೇಗೆಂದು ಬಹಳ ಚೆನ್ನಾಗಿ ಎರಡು ಮೂರು ಉದಾಹರಣೆಗಳ ಮೂಲಕ ಬಿಡಿಸಿ ವಿವರಿಸಿದರು. ಅಷ್ಟರಲ್ಲಿ ಸಮಯವಾದ ಕಾರಣ ಆ ಪಾಠದ ಕೊನೆಯಲ್ಲಿದ್ದ ಲೆಕ್ಕಗಳಲ್ಲಿ ಮೊದಲ ಐದನ್ನು ಮನೆಯಲ್ಲಿ ಬಿಡಿಸಿಕೊಂಡು ಬರಲು ಹೇಳಿ ಹೊರಟು ಹೋದರು. ಆ ಸಂಜೆ ಮನೆಗೆ ಬಂದ ಕಿಟ್ಟಿ ಬಟ್ಟೆ ಬದಲಿಸಿ ಕೈ ಕಾಲು ತೊಳೆದು ತಾಯಿ ಕೊಟ್ಟ ಉಪಹಾರ ಸೇವಿಸಿದವನು ಸೀದಾ ಕೋಣೆ ಸೇರಿದ. ಮೊದಲು ಉಳಿದ ವಿಷಯಗಳ ಹೋಂ ವರ್ಕ್ ಮುಗಿಸಿ ಕೊನೆಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸಲಾರಂಭಿಸಿದ. ಪ್ರತೀ ಲೆಕ್ಕವನ್ನೂ ಸರಿಯಾಗಿ ಬಿಡಿಸಿ ತಾಳೆ ನೋಡುತ್ತಾ ಹೋದಂತೆ ಅವನೊಳಗೆ ಏನೋ ಸಂತಸ. ಅದೇ ಖುಷಿಯಲ್ಲಿ ತಲ್ಲೀನನಾಗಿ ಅಲ್ಲಿದ್ದ ಹತ್ತೂ ಲೆಕ್ಕಗಳನ್ನೂ ಬಿಡಿಸಿ ಮುಗಿಸಿದ ಮೇಲೆಯೇ ನೆನಪಾಗಿದ್ದು ಮೇಷ್ಟ್ರು ಬರೀ ಐದೇ ಲೆಕ್ಕ ಬಿಡಿಸಲು ಹೇಳಿದ್ದೆಂದು. 

ಮರುದಿನ ಶಾಲೆಗೆ ಬಂದಾಗಿನಿಂದ ಮೂರನೇ ಅವಧಿಯಲ್ಲಿದ್ದ ಗಣಿತ ತರಗತಿಗಾಗಿ ಒಂಟಿ ಕಾಲಿನಲ್ಲಿ ಕಾದಿದ್ದ. ತಾನು ಬಿಡಿಸಿದ ಲೆಕ್ಕಗಳನ್ನು ಮೇಷ್ಟ್ರಿಗೆ ತೋರಿಸಿ ಶಭಾಷಿ ಗಿಟ್ಟಿಸಬೇಕು ಅನ್ನುವ ಕಾತರ ಅವನಿಗೆ. ಕಡೆಗೂ ಗಣಿತದ ಮೇಷ್ಟ್ರು ತರಗತಿಗೆ ಬಂದರು. ಹಿಂದಿನ ದಿನದ ಹೋಂ ವರ್ಕ್ ಬಗ್ಗೆ ಕೇಳಿದಾಗ ಎಲ್ಲರಿಗಿಂತ ಮೊದಲು ಎದ್ದ ಕಿಟ್ಟಿ ತನ್ನ ಪುಸ್ತಕದೊಂದಿಗೆ ಅವರ ಬಳಿ ಧಾವಿಸಿದ. ತಮ್ಮ ಆಯ್ದ ಕೆಲವು ವಿದ್ಯಾರ್ಥಿಗಳತ್ತ ಗಮನವಿದ್ದ ಮೇಷ್ಟ್ರು ಒಂದಿಷ್ಟು ಬೇಸರದಲ್ಲೇ ತಮ್ಮೆದುರು ಬಂದ ಕಿಟ್ಟಿಯ ಪುಸ್ತಕದತ್ತ ನೋಡಿದರು…… ನೋಡಿದರು ಎನ್ನುವುದಕ್ಕಿಂತ ಪುಟ ತಿರುಗಿಸಿದರು ಎನ್ನುವುದು ಸೂಕ್ತವೇನೋ. 

'ಇದನ್ನು ಎಲ್ಲಿಂದ ನಕಲಿಸಿದೆ? ನೀನಂತೂ ಇದನ್ನು ಬಿಡಿಸಿರಲು ಸಾಧ್ಯವಿಲ್ಲ…….' ಅರೆ ಕ್ಷಣ ಕಳೆದು ಅವರ ಬಾಯಿಂದ ಬಂದಿದ್ದು ಇದೆರಡೇ ವಾಕ್ಯ. ಅಷ್ಟೇ…..

ಕಾತರದ ಕಂಗಳಿಂದ ಕಾಯುತ್ತಿದ್ದ ಕಿಟ್ಟಿಯ ಮನಸನ್ನು ಈ ಮಾತುಗಳು ಅದೆಷ್ಟು ಘಾಸಿಗೊಳಿಸಿತೆಂಬುದು ಆ ಮೇಷ್ಟ್ರಿಗೆ ಎಂದೂ ತಿಳಿಯಲಿಲ್ಲ ಬಿಡಿ. ಅವರು ಅವನಿಗೆ ಜೋರಾಗಿ ಗದರಲಿಲ್ಲ, ಹೊಡೆಯಲೂ ಇಲ್ಲ. ಆದರೆ ಅವರು ಅವನ ಪರಿಶ್ರಮವನ್ನು ಅವಹೇಳನ ಮಾಡಿದ್ದರು. ಆ ಕೂಡಲೆ ಪುಸ್ತಕವನ್ನು ಹಿಡಿದುಕೊಂಡು ತನ್ನ ಸ್ಥಾನಕ್ಕೆ ಬಂದು ಕುಳಿತಿದ್ದ ಕಿಟ್ಟಿಗೆ ಬಹುದೊಡ್ಡ ಆಘಾತವಾಗಿತ್ತು. ನಂತರದಲ್ಲಿ ಆ ಮೇಷ್ಟ್ರು ತರಗತಿಯ ಟಾಪರ್ ಆಗಿದ್ದ ವಿದ್ಯಾರ್ಥಿಗಳು ಲೆಕ್ಕ ಬಿಡಿಸಿದ್ದನ್ನು ಪರಿಶೀಲಿಸಿ ಅವರನ್ನು ಹೊಗಳುತ್ತಾ, ಅವರನ್ನು ಕರೆದು ಬೋರ್ಡಿನ ಮೇಲೆ ಅದೇ ಲೆಕ್ಕಗಳನ್ನು ಬಿಡಿಸಲು ಹೇಳಿ ಉಳಿದ ವಿದ್ಯಾರ್ಥಿಗಳಿಗೆ ಅವನ್ನು ತಮ್ಮ ಪುಸ್ತಕದಲ್ಲಿ ನಕಲಿಸಲು ಹೇಳುತ್ತಿದ್ದರು. ಕಿಟ್ಟಿ ಮಾತ್ರ ಸುಮ್ಮನೆ ಕುಳಿತಿದ್ದ. ಇಷ್ಟಕ್ಕೂ ಆತನಿಗೆ ನಕಲಿಸುವ ಅಗತ್ಯವಿರಲಿಲ್ಲ. ಆತ ಲೆಕ್ಕ ಬಿಡಿಸಿದ್ದು ಸರಿಯಾಗಿಯೇ ಇತ್ತು. ಅದನ್ನು ಗಮನಿಸುವ ವ್ಯವಧಾನ ಆ ಶಿಕ್ಷಕರಿಗೆ ಇರಲಿಲ್ಲ.

ಆ ದಿನ ಸಂಜೆ ಮನೆಗೆ ವಾಪಾಸಾದ ಕಿಟ್ಟಿಗೆ ಏನರಲ್ಲೂ ಆಸಕ್ತಿ ಇರಲಿಲ್ಲ. ಯಾವುದೋ ಕಾಟಾಚಾರಕ್ಕೆಂಬಂತೆ ಬೇರೆ ವಿಷಯಗಳ ಹೋಂ ವರ್ಕ್ ಮುಗಿಸಿದನಾದರೂ ಗಣಿತ ಪುಸ್ತಕವನ್ನು ಆತ ತೆಗೆಯಲೇ ಇಲ್ಲ. ಆನಂತರದ ದಿನಗಳಲ್ಲಿ ಅದೆಷ್ಟೇ ಯತ್ನಿಸಿದರೂ ಗಣಿತ ತರಗತಿಯಲ್ಲಿ ಏಕಾಗ್ರತೆ ಸಾಧಿಸುವುದಾಗಲೀ, ಲೆಕ್ಕಗಳನ್ನು ಬಿಡಿಸುವುದಾಗಲೀ ಆತನಿಂದ ಸಾಧ್ಯವಾಗಲಿಲ್ಲ. ಗಣಿತ ವಿಷಯದಲ್ಲೇ ಪರಿಣಿತಿ ಪಡೆಯಬೇಕೆಂದುಕೊಂಡಿದ್ದ ಬಾಲಕ ಗಣಿತ ಎನ್ನುವ ವಿಷಯವನ್ನೇ ದ್ವೇಷಿಸಲಾರಂಭಿಸಿದ……..... ಆ ವರ್ಷವನ್ನು ಹೇಗೋ ಆ ಶಾಲೆಯಲ್ಲಿ ಮುಗಿಸಿದ ಕಿಟ್ಟಿ ನಂತರದಲ್ಲಿ ಶಾಲೆಯನ್ನೇ ಬದಲಾಯಿಸಿದ. ಆದರೆ ಎಷ್ಟೇ ಪ್ರಯತ್ನಿಸಿದರೂ ಗಣಿತದ ಮೇಲೆ ಮುಂಚಿನ ಒಲವು ಮೂಡಲೇ ಇಲ್ಲ. ಹೇಗೋ ಕಷ್ಟಪಟ್ಟು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಗಣಿತದಲ್ಲಿ ತೇರ್ಗಡೆಯಾಗಿ ಆ ವಿಷಯಕ್ಕೇ ತಿಲಾಂಜಲಿ ಇಟ್ಟ……" 

ಎನ್ನುತ್ತಾ ಕಥೆ ನಿಲ್ಲಿಸಿ ಮೌನವಾದರು ಪ್ರೊ. ಪಟ್ಟಾಭಿ. ಅಲ್ಲಿದ್ದ ಪ್ರತೀ ವಿದ್ಯಾರ್ಥಿ ಶಿಕ್ಷಕನ ಮನದಲ್ಲಿಯೂ ವಿಚಾರ ಮಂಥನ ನಡೆದಿತ್ತು. ಈ ಕಥೆಯನ್ನು ಇಂದಿನ ದಿನವೇ ತಮಗೆ ಹೇಳಲು ನಿರ್ಧರಿಸಿರುವುದರ ಹಿಂದೆ ಬಲವಾದ ಕಾರಣವಿದೆ ಎಂಬುದು ಎಲ್ಲರಿಗೂ ಅರಿವಾಗಿತ್ತು. ಪ್ರೊಫೆಸರ್ ಅವರು ತಮಗೆ ಏನನ್ನು ಹೇಳಲು ಬಯಸಿದ್ದಾರೆ ಎನ್ನುವುದರ ಭಾಗಶಃ ಚಿತ್ರಣವೂ ಲಭಿಸಿತ್ತೆನ್ನಿ. ಒಂದಿಷ್ಟು ಸಮಯ ಆ ಕೋಣೆಯೊಳಗೆ ಮೌನವೇ ತುಂಬಿತ್ತು. ಆ ಮೌನವನ್ನು ಒಡೆಯುತ್ತಾ ಪಟ್ಟಾಭಿಯವರು ಮತ್ತೆ ಮಾತನ್ನು ಮುಂದುವರೆಸಿದರು.

"ನೀವೆಲ್ಲರೂ ಬುದ್ಧಿವಂತರು. ನಾನೇನು ಹೇಳ ಹೊರಟಿದ್ದೇನೆ ಎಂಬುದನ್ನು ಈಗಾಗಲೇ ನೀವು ಗ್ರಹಿಸಿದ್ದೀರಿ ಅಲ್ಲವೇ?" ಎಂಬ ಪಟ್ಟಾಭಿಯವರ ಮಾತಿಗೆ ಸಣ್ಣ ಗುಸುಗುಸು ಶುರುವಾಯಿತು ತರಗತಿಯಲ್ಲಿ.

"ಇದು ನಿಜವೇ ಸರ್? ಹೀಗೂ ಆಗುತ್ತದೆಯೇ?" ಎನ್ನುವ ಪ್ರಶ್ನೆಗಳು ಬಂದವು ಸುಮಾರು ಜನರಿಂದ. ಜೊತೆಗೆ "ಸರ್ ಇದು ಕಾಲ್ಪನಿಕ ಕಥೆಯಾ ಅಥವಾ ಹೀಗೆ ನಿಜಕ್ಕೂ ನಡೆದಿತ್ತೇ?" ಎಂದು ಕೇಳಿದರು ಕೆಲವರು. ತಮ್ಮ ಕನ್ನಡಕವನ್ನು ತೆಗೆದು ಮೇಜಿನ ಮೇಲಿರಿಸಿದ ಪ್ರೊ. ಪಟ್ಟಾಭಿಯವರ ಮುಖದಲ್ಲಿ ಅವ್ಯಕ್ತ ಭಾವಗಳಿದ್ದವು. 

"ಇದು ಕಾಲ್ಪನಿಕ ಕಥೆಯಲ್ಲ. ನನಗೆ ತೀರಾ ಆಪ್ತರಾದ ವ್ಯಕ್ತಿಯೊಬ್ಬರ ಬಾಲ್ಯದಲ್ಲಿ ಸಂಭವಿಸಿದ ನೈಜ ಘಟನೆಯಿದು. ಆ ಘಟನೆಗೆ ಆತ ತೀರಾ ಅತಿಯಾಗಿ ಪ್ರತಿಕ್ರಿಯಿಸಿದರೇನೋ ಎಂದು ಒಮ್ಮೊಮ್ಮೆ ಅನ್ನಿಸುವುದುಂಟು. ಅವರ ಜಾಗದಲ್ಲಿ ಬೇರೆಯವರಿದ್ದಿದ್ದರೆ ಅವರೂ ಅದನ್ನು ಹಾಗೆಯೇ ಮನಸ್ಸಿಗೆ ಹಚ್ಚಿಕೊಳ್ಳುತ್ತಿದ್ದರಾ ಎಂಬುದೂ ಗೊತ್ತಿಲ್ಲ. ಆದರೆ ಅದೇಕೋ ಆ ನನ್ನ ಆಪ್ತ ಸ್ನೇಹಿತನಿಗೆ ಅವನಿಷ್ಟದ ವಿಷಯದ ಮೇಲಿನ ಆಸಕ್ತಿಯೇ ಕುಂದಿಹೋಯಿತು. ಇವತ್ತಿಗೂ ಗಣಿತವೆಂದರೆ ಮಾರುದೂರ ನಿಲ್ಲುತ್ತಾನೆ ಆತ….." ಎಂದರು.

"ಸರ್ ಆ ನಿಮ್ಮ ಸ್ನೇಹಿತ ಈಗೇನು ಮಾಡುತ್ತಿದ್ದಾರೆ? ತಾವು ಭವಿಷ್ಯದಲ್ಲಿ ಪರಿಣಿತಿ ಸಾಧಿಸಬೇಕೆಂದು ಕನಸು ಕಂಡಿದ್ದ ವಿಷಯದ ಮೇಲೆ ನಿರಾಸಕ್ತಿ ಮೂಡಿದ ಮೇಲೆ ಅವರು ಏನಾದರು? " ತಟ್ಟನೆ ಒಬ್ಬ ವಿದ್ಯಾರ್ಥಿನಿ ಪ್ರಶ್ನಿಸಿದಳು. 

"ಅದು ಇನ್ನಷ್ಟು ಸ್ವಾರಸ್ಯಕರ ಸಂಗತಿ. ಗಣಿತದ ಮೇಲಿನ ನಿರಾಸಕ್ತಿಯಿಂದ ಪಿಯುಸಿಯಲ್ಲಿ ಕಲಾ ವಿಭಾಗ ಆಯ್ದುಕೊಂಡ ಕಿಟ್ಟಿ ಪದವಿ ಶಿಕ್ಷಣದಲ್ಲಿ ಕೊಂಚ ವಿಭಿನ್ನತೆ ಇರಲೆಂದು ಐಚ್ಚಿಕ ಆಂಗ್ಲ, ಮನಃಶಾಸ್ತ್ರ ಹಾಗೂ ಅಪರಾಧಶಾಸ್ತ್ರ(criminology) ವಿಷಯಗಳನ್ನು ಆಯ್ದುಕೊಂಡ. ಪದವಿಯ ಎರಡನೇ ವರ್ಷದಲ್ಲಿ ಅಪರಾಧಶಾಸ್ತ್ರದ ಪ್ರೊಫೆಸರ್ ಒಬ್ಬೊಬ್ಬರಿಗೆ ಒಂದೊಂದು ವಿಚಾರದ ಮೇಲೆ ಸೆಮಿನಾರ್ ಮಾಡಲು ಹೇಳಿದ್ದರು. ನಾವೇ ಶಿಕ್ಷಕರಂತೆ ಪಾಠ ಮಾಡುವ ಈ ಸೆಮಿನಾರ್ ಪರಿಕಲ್ಪನೆ ಅವನಿಗೆ ಆಸಕ್ತಿಕರವಾಗಿ ಕಂಡಿತು. ಅವನ ಸರದಿ ಬಂದಾಗ ಚೆನ್ನಾಗಿ ತಯಾರಿ ನಡೆಸಿಕೊಂಡು ಹೋಗಿದ್ದ. ಆರಂಭದಲ್ಲಿ ಕೊಂಚ ಅಳುಕೆನಿಸಿರಬಹುದೇನೋ…

ಆದರೆ ವಿಷಯದ ಬಗ್ಗೆ ವಿವರಿಸುತ್ತಾ ಹೋದಂತೆ ಎಲ್ಲವನ್ನೂ ಮರೆತು ಅದರಲ್ಲೇ ತಲ್ಲೀನನಾಗಿಬಿಟ್ಟ. ಎಷ್ಟರಮಟ್ಟಿಗೆ ಅವನು ವಿಷಯ ಮಂಡನೆಯಲ್ಲಿ ಲೀನನಾಗಿದ್ದನೆಂದರೆ ಚಪ್ಪಾಳೆಯ ಸದ್ದು ಕೇಳಿದಾಗಲೇ ಆ ಟ್ರಾನ್ಸ್ ನಿಂದ ಹೊರಬಂದಿದ್ದು. ಪ್ರೊಫೆಸರ್ ಗೆ ಅವನು ವಿಷಯ ಮಂಡನೆಯ ವೈಖರಿ, ವಿಷಯದ ಮೇಲಿನ ಹಿಡಿತ ಬಹಳ ಇಷ್ಟವಾಗಿತ್ತು. 'ಸೆಮಿನಾರ್ ಎಂದರೆ ಹೀಗಿರಬೇಕು. ಇದು ನಾನು ಕಂಡಂತೆ ಇಲ್ಲಿಯವರೆಗಿನ ಅತ್ಯುತ್ತಮ ಸೆಮಿನಾರ್. ಇನ್ನೊಮ್ಮೆ ಈ ಕಾನ್ಸೆಪ್ಟನ್ನು ವಿವರಿಸುವ ಅಗತ್ಯವೇ ಇಲ್ಲದಷ್ಟು ಸ್ಪಷ್ಟವಾಗಿ ವಿಷಯವನ್ನು ಪ್ರಸ್ತುತಪಡಿಸಿದ್ದಾರೆ' ಎಂದು ಮುಕ್ತ ಮನದಿಂದ ಕಿಟ್ಟಿಯನ್ನು ಅಭಿನಂದಿಸಿದ್ದರು. ಹಲವು ವರ್ಷಗಳ ಹಿಂದೆ ಒಬ್ಬ ಮೇಷ್ಟ್ರ ಮಾತಿನಿಂದ ಘಾಸಿಗೊಂಡಿದ್ದ ಅವನ ಮನಸ್ಸಿಗೆ ಈ ಉಪನ್ಯಾಸಕರ ಪ್ರೋತ್ಸಾಹಕರ ನುಡಿಗಳಿಂದ ಹೇಳಲಾರದಷ್ಟು ನೆಮ್ಮದಿ ದೊರಕಿತ್ತು. ಬಹುಶಃ ಆಗಿನಿಂದಲೇ ಅವನೊಳಗೆ ಆ ಉಪನ್ಯಾಸಕರು ಕಲಿಸುವ ಅಪರಾಧಶಾಸ್ತ್ರದ ಮೇಲೆ ವಿಶೇಷ ಒಲವು ಮೂಡಿತೆನಿಸುತ್ತದೆ. ಪದವಿಯ ಕೊನೆಯ ವರ್ಷದಲ್ಲಿ 'ಅಪರಾಧದ ಸಾಮಾಜಿಕ ಆಯಾಮಗಳು' ಅನ್ನುವ ವಿಷಯದ ಮೇಲೆ ಅದೇ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಣ್ಣ ಮಟ್ಟಿಗಿನ ಸಂಶೋಧನಾ ವರದಿ ಸಿದ್ಧಪಡಿಸುವ ಹೊತ್ತಿಗಾಗಲೇ ಅವನು ತನ್ನ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡಿದ್ದ. ಫೋರೆನ್ಸಿಕ್ ಸೈನ್ಸ್ ನಲ್ಲಿ ವಿಶೇಷ ಪರಿಣಿತಿಯೊಂದಿಗೆ ಉನ್ನತ ವ್ಯಾಸಾಂಗ ಮಾಡಿ ಈಗ ಫೋರೆನ್ಸಿಕ್ ಡಿಪಾರ್ಟ್ಮೆಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. 

ನಾನು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಪಡೆದು ಮಕ್ಕಳ ಮನೋವಿಕಾಸದ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಈ ನನ್ನ ಸ್ನೇಹಿತನೇ ಕಾರಣ. ಅವನೇಕೆ ಹಾಗೆ ವರ್ತಿಸಿದ ಎನ್ನುವುದನ್ನು ತಿಳಿಯಬೇಕಿತ್ತು ನನಗೆ. ಆ ಉದ್ದೇಶದಿಂದಲೇ ಹಲವಾರು ಪ್ರದೇಶಗಳ ವಿದ್ಯಾರ್ಥಿಗಳನ್ನು ಭೇಟಿಯಾಗಿ ಕೌನ್ಸಿಲಿಂಗ್ ನಡೆಸಿದೆ. ಅವರಿಗೆ ಪಾಠ ಹೇಳುವ ಶಿಕ್ಷಕರನ್ನು ಸಂದರ್ಶಿಸಿದೆ. ಹಲವಾರು ತರಗತಿಗಳಲ್ಲಿ ಕುಳಿತು ಶಿಕ್ಷಕ-ವಿದ್ಯಾರ್ಥಿಗಳ ಸಂವಹನವನ್ನು ಸೂಕ್ಷ್ಮವಾಗಿ ಗಮನಿಸಿ ಟಿಪ್ಪಣಿ ಮಾಡಿಕೊಂಡೆ. ಹೀಗೆ ಈ ಬಗ್ಗೆ ಆಳವಾಗಿ ವಿಶ್ಲೇಷಿಸುತ್ತಾ ಹೋದಂತೆ ಕಿಟ್ಟಿ ಏಕೆ ಒಬ್ಬ ಮೇಷ್ಟ್ರ ಕಾರಣದಿಂದಾಗಿ ತನ್ನಿಷ್ಟದ ವಿಷಯವನ್ನು ದ್ವೇಷಿಸಲಾರಂಭಿಸಿದ, ನಂತರದಲ್ಲಿ ಪ್ರೊಫೆಸರ್ ಅವರ ಒಂದು ಪ್ರೋತ್ಸಾಹಕಾರಿ ನಡವಳಿಕೆ ಹೇಗೆ ಅವನಲ್ಲಿ ಅಪರಾಧಶಾಸ್ತ್ರದ ಬಗ್ಗೆ ಆಸಕ್ತಿಯನ್ನು ಬೆಳೆಸಿತು ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿತು. ಒಂದು ವಿಷಯದ ಮೇಲಿನ ಆಸಕ್ತಿ ಅದನ್ನು ಕಲಿಸುವವರ ಮೇಲೆ ಗಾಢವಾಗಿ ಅವಲಂಬಿತವಾಗಿರುತ್ತದೆ ಎನ್ನುವುದು ನನ್ನ ಸಂಶೋಧನೆಗಳಿಂದ ಸ್ಪಷ್ಟವಾಯಿತು. ಇವೆಲ್ಲವೂ ನನ್ನನ್ನು ಬಹಳಷ್ಟು ಕಾಡಿದವು. ಇನ್ಯಾವುದೋ ಮಗುವಿಗೆ ನನ್ನ ಸ್ನೇಹಿತನಿಗಾದಂತೆ ಆಗಬಾರದು, ಭಾವೀ ಶಿಕ್ಷಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂಬ ಉದ್ದೇಶದಿಂದಲೇ ನಾನು ಈ ವೃತ್ತಿಯನ್ನು ಆಯ್ದುಕೊಂಡಿದ್ದು…… ಅದಕ್ಕಾಗಿಯೇ ಇಂದು ನಿಮಗೆ ಅವನ ಕಥೆಯನ್ನು ಒಂದಿಷ್ಟು ಬದಲಾವಣೆಗಳೊಂದಿಗೆ ಹೇಳಿದ್ದು" ಎಂದು ನಿಟ್ಟುಸಿರು ಬಿಟ್ಟರು. ಇಡೀ ತರಗತಿ ಮೌನದೊಳಗೆ ಮುಳುಗಿತ್ತು. ಅರೆ ಘಳಿಗೆ ಕಳೆದು ಮತ್ತೊಮ್ಮೆ ನಿಟ್ಟುಸಿರಿನೊಂದಿಗೆ ಮಾತಿಗೆ ತೊಡಗಿದರು ಪಟ್ಟಾಭಿ….

"ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರು ಮಕ್ಕಳನ್ನು ಅವರ ಅಂಕಗಳ ಆಧಾರದಲ್ಲಿ ವರ್ಗೀಕರಿಸಿ ಮಕ್ಕಳಲ್ಲಿ ಪಕ್ಷಪಾತ ಮಾಡುತ್ತಾರೆ. ಇದು ಎಷ್ಟರಮಟ್ಟಿಗೆ ಮುಂದುವರೆದಿದೆಯೆಂದರೆ ಮೌಲ್ಯಮಾಪನ ಮಾಡುವಾಗ ಪ್ರತಿಭಾವಂತರೆಂದು ತಾವು ಆಯ್ದ ಕೆಲ ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನೇ ಆಧಾರವಾಗಿಸಿಕೊಂಡು ಉಳಿದ ಮಕ್ಕಳ ಉತ್ತರಪತ್ರಿಕೆಗಳ ವ್ಯಾಲುವೇಷನ್ ಮಾಡುವುದೂ ಇದೆ. ಅಲ್ಲದೆ ಈಗೀಗ ಕೆಲವು ಹೆಸರಾಂತ ಖಾಸಗಿ ಶಾಲೆಗಳು ಮಕ್ಕಳನ್ನು ಅವರ ಐಕ್ಯೂ ಆಧಾರದಲ್ಲಿ ವಿಭಜಿಸಿ ಸೆಕ್ಷನ್ ಗಳನ್ನು ಮಾಡುತ್ತಾರೆ. ಇವೆಲ್ಲವೂ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ವಿಪರೀತವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. ಮಕ್ಕಳ ಮನಸ್ಥಿತಿ ಬಹಳ ನಾಜೂಕಾದದ್ದು. ಪ್ರತೀ ಮಗುವಿನ ಮನೋವಲಯವೂ ಭಿನ್ನ. ಇವು ಮಕ್ಕಳ ಗ್ರಹಿಕೆ ಹಾಗೂ ಕಲಿಕಾ ಸಾಮರ್ಥ್ಯದ ಮೇಲೂ ಗಹನವಾದ ಪರಿಣಾಮ ಬೀರುತ್ತದೆ. ಎಲ್ಲಾ ಮಕ್ಕಳ ಗ್ರಹಣ ಶಕ್ತಿ ಒಂದೇ ತೆರನಾಗಿರುವುದಿಲ್ಲ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಅವರ ಕಲಿಕಾ ಸಮಯವಿರುತ್ತದೆ. ಒಂದೇ ತರಗತಿಯಲ್ಲಿ ಎಲ್ಲಾ ರೀತಿಯ ಮಕ್ಕಳೂ ಇರುತ್ತಾರೆ….. ಹಾಗೇ ಇರಬೇಕು ಕೂಡಾ.

ನಾಡಿದ್ದಿನಿಂದ ನೀವೆಲ್ಲಾ ಪ್ರಾಕ್ಟೀಸ್ ಟೀಚಿಂಗಿಗೆ ಹೊರಡುತ್ತಿರುವಿರಿ. ಅಲ್ಲಿ ಬಹಳಷ್ಟು ರೀತಿಯ ಮಕ್ಕಳು ನಿಮಗೆದುರಾಗುತ್ತಾರೆ. ಎಲ್ಲರೂ ನೀವು ಒಮ್ಮೆ ಹೇಳಿದೊಡನೆ ಅರ್ಥೈಸಿಕೊಳ್ಳುತ್ತಾರೆ/ ಅರ್ಥೈಸಿಕೊಳ್ಳಬೇಕು ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಕೆಲವರು ನಿಧಾನಗತಿಯಲ್ಲಿ ಕಲಿಯುವವರಾಗಿರಬಹುದು(slow learners). ಕೆಲವು ಮಕ್ಕಳಿಗೆ ಕೆಲವು ವಿಷಯಗಳು ಅರ್ಥವೇ ಆಗದಿರಬಹುದು. ಇನ್ನು ಕೆಲವು ಮಕ್ಕಳಿಗೆ ಬೇರೆಯೇ ತೆರನಾದ ಸಮಸ್ಯೆಗಳಿರಬಹುದು. ಆದರೆ ಅಧ್ಯಾಪಕನಾದವನು ಎಲ್ಲಾ ಮಕ್ಕಳನ್ನೂ ಸಮಾನವಾಗಿ ಕಾಣಬೇಕು. ಮಕ್ಕಳಲ್ಲಿ ಪಕ್ಷಪಾತ ಧೋರಣೆ ಸಲ್ಲದು. ಹಾಗೆಯೇ ಮಗುವಿನ ಪ್ರತೀ ಸರಿಯಾದ ಹೆಜ್ಜೆಯನ್ನೂ ಗುರುತಿಸಿ ಬೆನ್ನು ತಟ್ಟುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಕ್ಕಳು ತಮ್ಮ ಹೆತ್ತವರಿಗಿಂತಲೂ ಹೆಚ್ಚು ಶಿಕ್ಷಕರನ್ನು ನಂಬುತ್ತಾರೆ. ನಿಮ್ಮ ಒಂದು ಸಣ್ಣ ಪ್ರೋತ್ಸಾಹಕಾರಿ ಚರ್ಯೆ ಆ ಮಗುವಿನೊಳಗೆ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಆ ಆತ್ಮವಿಶ್ವಾಸವೇ ಭವಿಷ್ಯದಲ್ಲಿ ದಾರಿದೀಪವಾಗಿ ಅವರ ಬದುಕನ್ನು ನಿರ್ದೇಶಿಸುತ್ತದೆ. ನೀವೆಲ್ಲರೂ ಅಂತಹ ಬೆಳಕಿನ ದೀವಟಿಗೆಗಳಾಗಬೇಕೆಂಬುದೇ ನನ್ನ ಹಾರೈಕೆ. ಈ ಅಧ್ಯಾಪಕ ವೃತ್ತಿ ಎಂಬುದು ಇಡೀ ಮನುಕುಲದ ದಿಕ್ಕನ್ನೇ ಬದಲಾಯಿಸಬಲ್ಲಂತಹ ಶ್ರೇಷ್ಠ ವೃತ್ತಿ. ಯಾವುದೇ ಅಳುಕಿಲ್ಲದೇ ಸಂಪೂರ್ಣ ಮನದಿಂದ ನಿಮ್ಮ ಕಾರ್ಯವನ್ನು ನಿರ್ವಹಿಸಿ. ಆಗ ಖಂಡಿತವಾಗಿಯೂ ನೀವು ಈ ಅಪೂರ್ವವಾದ ವೃತ್ತಿಗೆ ನ್ಯಾಯವನ್ನು ಸಲ್ಲಿಸಿದಂತಾಗುತ್ತದೆ" ಎನ್ನುತ್ತಾ ಎಲ್ಲರಿಗೂ ಶುಭ ಹಾರೈಸಿದ ಪ್ರೊ.ಪಟ್ಟಾಭಿ ಏನಾದರೂ ಅನುಮಾನಗಳಿದ್ದರೆ, ಪ್ರಶ್ನೆಗಳಿದ್ದರೆ ಕೇಳುವಂತೆ ಹೇಳಿದರು. ಪಾಠಯೋಜನೆಯ ಬಗ್ಗೆ ಹಾಗೆಯೇ ನಲ್ವತ್ತೈದು ನಿಮಿಷಗಳ ಅವಧಿಯಲ್ಲಿ ಇಡೀ ಪಾಠಯೋಜನೆಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಎಲ್ಲಾ ಮುಗಿಸಿ ಇನ್ನೇನು ತರಗತಿಯಿಂದ ಹೊರಡಬೇಕೆನ್ನುವಾಗ ಅವರನ್ನು ತಡೆದ ಒಬ್ಬ ವಿದ್ಯಾರ್ಥಿ, 

"ಸರ್, ನೀವು ಆಗಲೇ ಹೇಳಿದ ಕಥೆ ನಿಮ್ಮದೇ ಆಗಿದ್ದು ನೀವು ಕಿಟ್ಟಿಯ ಸ್ಥಾನದಲ್ಲಿದ್ದರೆ ಆ ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ?" ಎಂದು ಕೇಳಿದ. ಎಲ್ಲರೂ ಅವರ ಉತ್ತರ ಕೇಳಲು ಕಾತರರಾಗಿದ್ದರು. ಸುಮಾರು ಸಮಯ ಪ್ರೊಫೆಸರ್ ಏನೂ ಮಾತನಾಡದೇ ಸುಮ್ಮನೆ ನಿಂತರು. ಅವರೊಳಗೆ ಯಾವ ಭಾವವಿತ್ತೋ, ಅವರೇನು ಯೋಚಿಸುತ್ತಿದ್ದರೋ ಯಾರಿಗೂ ತಿಳಿಯಲಿಲ್ಲ. ಹಲವು ನಿಮಿಷಗಳ ನಂತರ ಒಂದು ಸಣ್ಣ ನಗುವಿನೊಂದಿಗೆ, "ಈ ಪ್ರಶ್ನೆಗೆ ಏನೂ ಉತ್ತರ ತೋಚುತ್ತಿಲ್ಲ ನನಗೆ. ಒಮ್ಮೆ ಗಹನವಾಗಿ ಯೋಚಿಸಿ ನೋಡಬೇಕು" ಎಂದರು. 

ಮತ್ತೊಮ್ಮೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ತರಗತಿಯಿಂದ ಹೊರಬಂದ ಪ್ರೊಫೆಸರ್ ಪಟ್ಟಾಭಿಯವರ ಮನಸ್ಸು ಭಾರವಾಗಿತ್ತು. ಯಾಕೋ ಕಾಲೇಜಿನಲ್ಲಿರುವುದು ಕಷ್ಟವೆನಿಸಿ ಅರ್ಧದಿನದ ರಜೆ ಪಡೆದು ಮನೆಗೆ ಬಂದರು. ಮನೆಯ ಹಜಾರದಲ್ಲಿ ಅವರ ತಮ್ಮನ ಮಗ ಅಂಕಗಣಿತದ ಯಾವುದೋ ಲೆಕ್ಕ ಬಿಡಿಸುತ್ತಿದ್ದದ್ದು ಕಣ್ಣಿಗೆ ಬಿತ್ತು. ವ್ಯಕ್ತಪಡಿಸಲಾಗದ ವಿಷಾದವೊಂದು ಬಿಡದಂತೆ ಕಾಡತೊಡಗಿತು. ನೇರ ತಮ್ಮ ವ್ಯಾಸಾಂಗದ ಕೋಣೆಗೆ ತೆರಳಿದವರು ಮನಃಶಾಸ್ತ್ರದ ಪುಸ್ತಕಗಳ ರಾಶಿಯ ಹಿಂದೆ ಮೂಲೆಯ ಕಪಾಟೊಂದರ ಬದಿಯಲ್ಲಿ ಬೆಚ್ಚಗೆ ಕುಳಿತಿದ್ದ ಪುಸ್ತಕವೊಂದನ್ನು ಕೈಗೆ ತೆಗೆದುಕೊಂಡರು. 

ಎಂಟನೇ ತರಗತಿಯ ಗಣಿತ ಪುಸ್ತಕವದು…..!!

ಅದರ ರಟ್ಟಿನ ಮೇಲೆ ಬರೆದಿದ್ದ ರಾಧಾಕೃಷ್ಣ ಪಟ್ಟಾಭಿ ಅನ್ನುವ ಹೆಸರನ್ನೊಮ್ಮೆ ಅಪ್ಯಾಯಮಾನವಾಗಿ ಸವರಿದರು. ಗಣಿತಪ್ರಿಯ ಕಿಟ್ಟಿ ಎಲ್ಲೋ ಆಂತರ್ಯದಲ್ಲಿ ನರಳಿ ಅತ್ತಂತೆ ಭಾಸವಾಯಿತು…..



1 ಕಾಮೆಂಟ್‌:

  1. ಅರ್ಥಪೂರ್ಣವಾದ ಕತೆ ನೀತಾ. ಪ್ರತೀ ಶಿಕ್ಷಕ ಅಗತ್ಯವಾಗಿ ತಿಳಿಯಲೇ ಬೇಕಾದ ಅಂಶ. ಎಲ್ಲರಿಗೂ ಹೇಗಿನ ಅನುಭವ ತುಂಬಾನೇ ಆಗಿರುತ್ತೆ ಬಾಲ್ಯದಲ್ಲಿ. ಶಿಕ್ಷಕರು, ಪೋಷಕರು ಅತೀ ಮುಖ್ಯ ಸ್ಥಾನದಲ್ಲಿ ಇರ್ತಾರೆ ಮಕ್ಕಳ ಜೀವನ ರೂಪಿಸುವ ವೇಳೆಗೆ.
    ಈಗ ನಮ್ಮ ಮಕ್ಕಳ ಜೀವನದಲ್ಲಿ ಹೀಗೆ ಆಗದೆ ಇರುವ ಹಾಗೆ ನೋಡ್ಕೊಬೇಕು.
    ಕಿಟ್ಟಿಗೆ ಯಾವ ನಷ್ಟವೂ ಆಗಲಿಲ್ಲ ಹಾಗೆ ನೋಡಿದ್ರೆ. ಆದ್ರೆ ಗಣಿತದಲ್ಲಿ ಅಷ್ಟು ಆಸಕ್ತಿ ಹೊಂದಿದವ ಏನಾದ್ರೂ ಸಾಧನೆ ಮಾಡುವ ಸಾಧ್ಯತೆ ಇತ್ತು ಅನ್ನೋದು ಅಲ್ಲಗಳೆಯೋದಕ್ಕೆ ಆಗಲ್ಲ ಅಲ್ವಾ?

    ಪ್ರತ್ಯುತ್ತರಅಳಿಸಿ