ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 5

ಸಿಯಾ..... ದಿ ರೆಬೆಲ್ !!

ಚಾಚಿ ನನ್ನನ್ನು ಎದೆಗಾನಿಸಿಕೊಂಡು ತನ್ನ ಮನದ ಅಳಲನ್ನೆಲ್ಲಾ ಹೊರಹಾಕಿ ಕಣ್ಣೀರಾದರೆ, ಅವಳ ಬತ್ತದ ಕಣ್ಣೀರಿಗೆ ಸಾಕ್ಷಿಯಾಗಿಯೂ ನಗುತ್ತಿದ್ದೆ ನಾನು. ಆ ಮುಂಜಾವು ಹಾಗೆ ಮಾಯಿಯ ಅಗಲುವಿಕೆ ಮತ್ತು ಚಾಚಿಯ ಕಂಬನಿ ಧಾರೆಯೊಂದಿಗೆ ಕರಗಿತ್ತು. ಮನೆಯ ನಾಲ್ವರು ಹಿರಿಯ ಸದಸ್ಯರು ಮಾಯಿಯ ಅಂತ್ಯಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದರೆ, ಚಾಚಿ ನನ್ನ ಬಿಟ್ಟು ಸರಿಯಲಿಲ್ಲ. ಆದರೆ ಇವೆಲ್ಲದರ ನಡುವೆ ಹೈರಾಣಾಗಿ ಕುಳಿತಿದ್ದು ಮಾತ್ರ ನನ್ನ ಸೌತೇಲಿ ಮಾಯಿ....

ಅವಳು ಬಾಪೂವಿನ ಲುಗಾಯಿಯಾಗಿ ಈ ಮನೆಗೆ ಬಂದು ಸುಮಾರು ಎರಡು ತಿಂಗಳುಗಳಾಗಿತ್ತಷ್ಟೇ. ಈ ಅಲ್ಪ ಸಮಯದಲ್ಲೇ ತನ್ನ ಭವಿಷ್ಯ ಹೇಗಿರಬಹುದೆಂಬ ಅಂದಾಜು ಸಿಕ್ಕಿ ಹೋಗಿತ್ತು ಅವಳಿಗೆ. ಆ ಭಯವೇ ಅತಿಯಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಹೆದರಿದವಳ ಮೇಲೆ ಹಾವೆಸೆದಂತೆ ಎದುರಾಗಿದ್ದು ಮಾಯಿಯ ಮರಣ ಹಾಗೂ ನನ್ನ ಜನನ..... ನಮ್ಮಿಬ್ಬರ ಪರಿಸ್ಥಿತಿ ಆಕೆಯನ್ನು ಕಂಗೆಡಿಸಿತ್ತು. ಮಂಕಾಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟಿದ್ದಳು ಆಕೆ.

ಆ ದಿನ ಅಪರಾಹ್ನ ಕಳೆದು ಸಂಧ್ಯೆ ಮೆಲ್ಲಗೆ ಕಾಲಿಡುವವರೆಗೂ ಮನೆ ನೀರವ ಮೌನದೊಳಗೇ ಮುಳುಗಿತ್ತು. ದಾದಿ, ದಾದಾ, ಚಾಚೂ ಹಾಗೂ ಬಾಪೂ ಯಾವ ತಕರಾರಿಲ್ಲದೇ ಮಾಯಿಯ ಶವಕ್ಕೆ ಮುಕ್ತಿ ಕಾಣಿಸಿದ ನಿರಾಳತೆಯೊಂದಿಗೆ ಅಷ್ಟೇ ನಿಶ್ಯಬ್ದವಾಗಿ ಈ ರಾತ್ರಿ ನನಗೊಂದು ಗತಿ ಕಾಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದರು. ಚಾಚಿ ನನ್ನ ಭವಿಷ್ಯವನ್ನು ವಿಧಿಗೆ ಬಿಟ್ಟು, ಮೌನದ ಸೆರಗಲ್ಲಿ ನಿರ್ಲಿಪ್ತವಾಗಿ ಉಳಿದಿದ್ದಳು. ಸೌತೇಲಿ ಮಾಯಿ ಮಾತ್ರಾ ಸುಸ್ತು, ಗೊಂದಲ, ಭಯ, ಆತಂಕಗಳ ಮೂಸೆಯಲ್ಲಿ ಚಡಪಡಿಸುತ್ತಿದ್ದಳು.....

ಹೀಗಿದ್ದ ಮನೆ ಅದೇ ಸಂಜೆಯ ಒಂದು ಕ್ಷಣದಲ್ಲಿ ಮಾಯಿಯ ಸಾವಿನ ಸೂತಕ ಮರೆತು ಸಂಭ್ರಮಿಸಿತ್ತು......

ಕಾರಣ ಸೌತೇಲಿ ಮಾಯಿ ತಾಯಿಯಾಗುವ ಸೂಚನೆ ನೀಡಿದ್ದಳು....

ಮನೆಯಲ್ಲಿನ ನಾಲ್ವರ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೇ ಲಾಲಾನ ಆಗಮನದ ನಿರೀಕ್ಷೆಯೂ ಗರಿಗೆದರಿ ನರ್ತಿಸತೊಡಗಿತ್ತು. ಮಾಯಿಯ ಹಠಾತ್ ನಿರ್ಗಮನ ಅವರನ್ನು ಕಿಂಚಿತ್ತೂ ಕಾಡಲಿಲ್ಲ. ಆ ಕೂಡಲೇ ಭೈರವ್ ಬಾಬಾನಿಗೆ ಕರೆಹೋಗಿತ್ತು. ಆತ ತಕ್ಷಣವೇ ಬಂದಿದ್ದ. ಬರಲೇಬೇಕು ಕೂಡಾ.... ಎಷ್ಟೆಂದರೂ ಹಣ ಹಾಗೂ ಪ್ರತಿಷ್ಟೆ ತಾನೇ ಜಗವನ್ನು ಆಳುವುದು?

ಬಾಬಾನಿಗೆ ಬೆಳಗ್ಗಿನಿಂದ ನಡೆದ ಘಟನೆಗಳೆಲ್ಲವನ್ನೂ ವಿವರಿಸಿ ಆತನ ಭವಿಷ್ಯವಾಣಿಗಾಗಿ ಕಾಯತೊಡಗಿದರು.

ಭೈರವ್ ಬಾಬಾ ಚೋಟಿ ಮಾಯಿಯ ಕೈ ರೇಖೆಗಳ‌ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಆಕೆ ಮಾತ್ರ ತನ್ನ ಗ್ರಹಗತಿಗಳ ಬಗ್ಗೆ, ಭವಿಷ್ಯದ ಬಗ್ಗೆ ಯೋಚನೆಗೆ ಬಿದ್ದಿದ್ದಳು.

ನನ್ನನ್ನು ಮಡಿಲಲ್ಲಿ ಇರಿಸಿಕೊಂಡಿದ್ದ ಚಾಚಿ ಎಂದಿನಂತೆ ನಿರ್ಲಿಪ್ತೆಯಾದರೂ 'ಹೆಣ್ಣೊಂದು ಹುಟ್ಟದಿರಲಿ‌' ಎಂಬುದೊಂದೇ ಬೇಡಿಕೆ ಅವಳದು. 

ಉಳಿದ ನಾಲ್ವರ ಗಮ್ಯ ಒಂದೇ.‌..... ಲಾಲಾ...... 

ಚಾತಕ ಪಕ್ಷಿಗಳಂತೆ ಭೈರವ್ ಬಾಬಾನ ಮಾತಿಗಾಗಿ ಕಾತರಿಸಿ ಕುಳಿತ್ತಿದ್ದರು.....

ಹಲವು ಕ್ಷಣಗಳ ಗಹನ ಧ್ಯಾನ ಕಳೆದು ಅದೇಕೋ ನನ್ನ ಬಳಿ ಬಂದು ಇನ್ನೂ ಸರಿಯಾಗಿ ಒಡಮೂಡದ ನನ್ನ ಕೈ ರೇಖೆಗಳ ಪರಿಶೀಲನೆಗೆ ತೊಡಗಿದ್ದ. 

ತುಸು ಸಮಯದ ಪರಿಶೀಲನೆಯ ನಂತರ ನಿಶ್ಯಬ್ದತೆಯ ಎದೆಯಾಳವನ್ನು ಸೀಳಿಕೊಂಡು ನನ್ನ ಬದುಕಿನ ದಿಕ್ಕನ್ನೇ ಬದಲಿಸುವ ಭವಿಷ್ಯ ನುಡಿದಿದ್ದ ಬಾಬಾ.....

"ಥಾರೀ ಚೋರಿ ಅಚ್ಛೀ ಶಗುನ್ ಲೇಕರ್ ಆಯೀ ಹೆ. ಇಸ್ ಬಾರ್ ಸಬ್ ಶುಭ್ ಹೀ ಹೋಗಾ. ಯೇ ಲಾಲಿ ಕೆ ಸಾಥ್ ಮಾ ಲಾಲಾ ಭೀ ಆವೇಗಾ.... ಇಸೇ ಮಾರ್ನಾ ಮತ್...."(ನಿನ್ನ ಮಗಳು ಒಳ್ಳೆಯ ಶಕುನ ಹೊತ್ತು ತಂದಿದ್ದಾಳೆ. ಈ ಸಲ ಎಲ್ಲವೂ ಶುಭವೇ. ಈ ಲಾಲಿಯ ಜೊತೆಯಲ್ಲಿ ಲಾಲಾನ ಆಗಮನವೂ ಆಗುತ್ತದೆ. ಇವಳನ್ನು ಕೊಲ್ಲಬೇಡ) ಎಂದು ಯಾರೂ ನಿರೀಕ್ಷಿಸಿರದ ಸುಗ್ರೀವಾಜ್ಞೆ ಹೊರಡಿಸಿಬಿಟ್ಟ.‌....! 

ಅಷ್ಟೇ......!!

ಬೆಳಗಿನಿಂದ ಮೌನವೇ ತಾಂಡವವಾಡಿದ್ದ ಆ ಮನೆಯ ತುಂಬಾ ಸಂತಸ ಹೊನಲಾಗಿ ಹರಿಯತೊಡಗಿತು. ದಾದಾ, ದಾದಿ, ಚಾಚಾ ಮತ್ತು ಬಾಪೂನ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲಕ್ಕಿಂತ ದೊಡ್ಡ ನಿರಾಳತೆ ಚೋಟಿ ಮಾಯಿಗೆ. ಭವಿಷ್ಯತ್ತಿನ ಭಯದ ಕಬಂಧ ಬಾಹುಗಳಲ್ಲಿ ಸಿಲುಕಿ ಕ್ಷಣಕ್ಷಣಕ್ಕೂ ಸಾಯುತ್ತಿದ್ದವಳನ್ನು ಬಾಬಾನ ಒಂದು ವಾಣಿ ಬದುಕಿಸಿತ್ತು. ಅವಳೊಂದಿಗೆ ನನ್ನನ್ನೂ.... ಆ ಘಳಿಗೆಯಲ್ಲಿ ಕೊಂಚ ನಿರಾಳವಾಗಿ ಉಸಿರಾಡಿದ್ದಳಾಕೆ. ಆದರೆ ಚಾಚಿಯ ಮನದ ಭಾವನೆಗಳು ಮಾತ್ರ ಖುದ್ದು ಅವಳದೇ ಗ್ರಹಿಕೆಗೂ ನಿಲುಕದಷ್ಟು ಗೋಜಲಾಗಿದ್ದವು. ನಾನು ಸಾವನ್ನು ಜಯಿಸಿದೆನೆಂದು ಸಂತಸ ಪಡಬೇಕೋ ಇಲ್ಲಾ ನನ್ನ ಮುಂದಿನ ಹೋರಾಟದ ಬದುಕನ್ನು ನೆನೆದು ಸಂತಾಪ ಸೂಚಿಸಬೇಕೋ ಎಂಬ ಉತ್ತರ ಸಿಗದ ಪ್ರಶ್ನೆಯ ಬೆನ್ನು ಬಿದ್ದು ಮೌನಿಯಾಗಿದ್ದಳಾಕೆ‌. 

ಲಾಲಾನ ಆಗಮನವೆಂದರೆ ಭಗವಂತನ ಆಗಮನವಷ್ಟೇ..... ಬರಲಿರುವ ಭಗವಂತನನ್ನು, ಕುಲ ತಿಲಕನನ್ನು ಸ್ವಾಗತಿಸಲು  ಏನೆಲ್ಲಾ ತಯಾರಿಯಾಗಬೇಕೆಂದು ಆಗಿನಿಂದಲೇ ಚರ್ಚೆಗಳು ಆರಂಭವಾದವು. ನಿರೀಕ್ಷೆಗೂ ಮೀರಿದಷ್ಟು ಫಲ ತಾಂಬೂಲ ಭಕ್ಷೀಸುಗಳು ಬಾಬಾನ ಪದತಲಕ್ಕೆ ಸಮರ್ಪಣೆಯಾದವು. ಕೈ ತುಂಬಾ ಸಿಕ್ಕ ಭಕ್ಷೀಸಿನಿಂದ ಸಂತೃಪ್ತನಾಗಿ ಆಶೀರ್ವದಿಸಿ ತೆರಳಿದ ಆತ.

ಅವನು ನೀಡಿದ ಶುಭಸುದ್ದಿಯ ಮುಂದೆ ನಾನು ಸತ್ತರೆಷ್ಟು, ಬಿಟ್ಟರೆಷ್ಟು? ಅವನ ಮಾತೇ ಅಂತಿಮ ಇಡೀ ಶಾಮ್ಲಿಯಲ್ಲಿ. ಲಾಲಾನ ಆಗಮನದ ಸಂಭ್ರಮದ ಮುಂದೆ ಬೇರೆಲ್ಲವೂ ಗೌಣವಾಗಿತ್ತು. 'ಬಾಬಾ ಹೇಳಿದಂತೆ ಕೊಲ್ಲುವುದು ಬೇಡ, ಮನೆಕೆಲಸ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಬಿದ್ದಿರಲಿ' ಎಂದು ನಿರ್ಧಾರವಾಯಿತು.... 

ಲಾಲಾನ ಆಗಮನದ ಸಂತೋಷವನ್ನು ಹಂಚಿಕೊಳ್ಳಲು ಮರುದಿನ ಫೇಣಿ, ಮಲಾಯಿ ಮಕ್ಕನ್, ಚಂಚಂ ಇತ್ಯಾದಿ ಮಿಠಾಯಿಗಳ ಸಮೇತ ದಾವತ್ ಕರೆ ರಾತ್ರೋರಾತ್ರಿ ಊರಿನ ಪ್ರತೀ ಮನೆಯನ್ನೂ ತಲುಪಿತು. ನನ್ನ ಮಾಯಿ ಎಂಬುವವಳೊಬ್ಬಳು ಈ ದಿನ ಬೆಳಿಗ್ಗೆ ಜೀವ ತೆತ್ತಿದ್ದಾಳೆ ಎಂಬ ಕುರುಹೂ ಇಲ್ಲದಂತೆ ಮನೆ ಜಗಮಗಿಸತೊಡಗಿತ್ತು.

ಹೀಗೆ ಚೋಟಿ ಮಾಯಿಯ ದಯೆಯಿಂದ ಬದುಕುವ ಅವಕಾಶವೊಂದು ಲಭಿಸಿತ್ತು ನನಗೆ. ಆದರೆ ನನ್ನ ಇಚ್ಛಾನುಸಾರ ಜೀವಿಸುವ ಹಕ್ಕು ಖಂಡಿತಾ ನನ್ನ ಪಾಲಿಗಿರಲಿಲ್ಲ. ನನಗೆ ಆಯ್ಕೆಯ ಅವಕಾಶವಿರಲಿಲ್ಲ. ನನ್ನ ಬದುಕು ಪಂಜರದ ಪಕ್ಷಿಯಾಗಿಯೇ ಎಂದು ನಾನು ಜನಿಸಿದಾಗಲೇ ನಿರ್ಧರಿತವಾಗಿತ್ತು.

ಆದರೆ.......

ನಾನು ಯಾವ ಕಾರಣಕ್ಕೂ ಪಂಜರದ ಪಕ್ಷಿಯಾಗಲಾರೆ. ಮಾಯಿ, ಚಾಚಿಯರಂತೆ ಎಲ್ಲವನ್ನೂ ಸಹಿಸಲಾರೆ.  ರೆಕ್ಕೆಗಳನ್ನು ಚಾಚಿ ಮುಗಿಲೆತ್ತರಕ್ಕೆ ಹಾರಿ ಈ ಲೋಕದ ಕಟ್ಟುಪಾಡುಗಳ ಕೈಗೆ ದೂರ ಸಾಗಬೇಕು ನಾನು. ನನ್ನ ಧ್ವನಿಯಡಗಿಸಲು ಯತ್ನಿಸುವವರ ದನಿಯುಡುಗಿಸಬೇಕು ನಾನು......

ದಿನಗಳು, ಸಂವತ್ಸರಗಳು ಯಾರ ಅಪ್ಪಣೆಯಿಲ್ಲದೇ ಉರುಳುತ್ತವೆ. ಅವುಗಳನ್ನು ಯಾವ ಪಂಜರದಲ್ಲಿ ಬಂಧಿಸಿಡಲಾದೀತು? ಸಮಯ ಯಾರಿಗೂ ತಲೆಬಾಗದು.  ಬಾಬಾನ ಭವಿಷ್ಯದಂತೆಯೇ ಮನೆಗೆ ಲಾಲಾನ ಆಗಮನವಾಗಿತ್ತು. ಮನೆಯವರ ಸಂತಸಕ್ಕೆ ಮೇರೆಯೇ ಇರಲಿಲ್ಲ. ವಂಶವನ್ನು ಬೆಳಗಿಸುವವ ಎಂಬರ್ಥದಲ್ಲಿ ದಾದಿ ಅವನಿಗೆ ಕುಲ್ದೀಪ್ ಎಂದು ನಾಮಕರಣ ಮಾಡಿದ್ದರು. ಅವನ ಆಗಮನದಿಂದ ಮನೆಯ ಬಹುದೊಡ್ಡ ಕೊರತೆ ನೀಗಿತ್ತು. ಮನೆಯವರ ಕಣ್ಮಣಿಯಾಗಿದ್ದ ಅವನು ಕಡೆಗಣ್ಣಲ್ಲಿ ತೋರಿದ್ದನ್ನು ತಲೆಯ ಮೇಲಿಟ್ಟು ನೆಡೆಸುತ್ತಿದ್ದರು. 

ಆದರೆ ನಾನು.....?

ನಾನು ಆ ಮನೆಯಲ್ಲಿ ಅನಗತ್ಯ ಹೊರೆಯಾಗಿದ್ದೆ ಹಾಗೂ ಮನೆಯವರ ನಡವಳಿಕೆ ಅದನ್ನು ನನಗೆ ಪ್ರತಿಕ್ಷಣವೂ ನೆನಪಿಸುತ್ತಿತ್ತು. ಬೆಳಿಗ್ಗೆ ಬೇಗನೇ ಎದ್ದು ಅಂಗಳ ಗುಡಿಸುವುದರೊಂದಿಗೆ ನನ್ನ ದಿನ ಆರಂಭವಾಗುತ್ತಿತ್ತು. ನಂತರ ಮನೆಯನ್ನೂ ಗುಡಿಸಿ, ಒರೆಸುವಷ್ಟರಲ್ಲಿ ಚಾಚಿ ಕೊಟ್ಟಿಗೆಯ ಕೆಲಸ ಮುಗಿಸಿರುತ್ತಿದ್ದಳು. ಆನಂತರ ಇಬ್ಬರೂ ರಸೋಯಿ ಘರ್(ಅಡುಗೆ ಕೋಣೆ) ಹೊಕ್ಕರೆ ಮಧ್ಯಾಹ್ನದ ತನಕ ಅಲ್ಲೇ ನಮ್ಮ ವಾಸ. ಲಾಲಾನನ್ನು ಹಡೆಯುವಳೆಂದು ಬಾಬಾ ಭವಿಷ್ಯ ನುಡಿದಂದಿನಿಂದ ಚೋಟಿ ಮಾಯಿಗೆ ರಸೋಯಿ ಕೆಲಸದಿಂದ ಸಂಪೂರ್ಣ ವಿನಾಯ್ತಿ ದೊರಕಿತ್ತು. ಚಾಚಿಯೊಬ್ಬಳೇ ಅಡುಗೆ ಸಂಭಾಳಿಸಬೇಕಿತ್ತು.  ಈಗೀಗ ನಾನು ಅವಳೊಂದಿಗೆ ಕೈ ಜೋಡಿಸತೊಡಗಿದ್ದೆ. ಎಲ್ಲರ ಊಟ ಮುಗಿದು ನಾವಿಬ್ಬರೂ ಒಂದಿಷ್ಟು ಹೊಟ್ಟೆಗಿಳಿಸಿ ಪಾತ್ರೆಗಳನ್ನು ತೊಳೆದು ಮುಗಿಸುವಷ್ಟರಲ್ಲಿ ಸೂರ್ಯ ಅಸ್ತಮಿಸಲು ತಯಾರಿರುತ್ತಿದ್ದ. ಆಗೊಂದರೆಘಳಿಗೆ ವಿರಮಿಸಲು ಸಮಯ ಸಿಕ್ಕರೆ ಪುಣ್ಯ. ನಂತರ ಮತ್ತೆ ರಾತ್ರಿಗಾಗಿ ರೋಟಿ ಸುಡುವ ಕಾರ್ಯಕ್ರಮ ಆರಂಭವಾಗಿಬಿಡುತ್ತಿತ್ತು. ನಾನು ಬೇಲನ್ ನಲ್ಲಿ ರೋಟಿ ಲಟ್ಟಿಸಿದರೆ ಚಾಚಿ ಅದನ್ನು ಅರೆ ಬೇಯಿಸಿ ನಂತರ ತಂದೂರಿ ಮಟ್ಕಾದೊಳಗೆ ಅದನ್ನು ಎರಡೂ ಬದಿ ಬೇಯಿಸುತ್ತಿದ್ದಳು. ಇದೆಲ್ಲಾ ಮುಗಿದು, ರಸೋಯಿ ಶುಚಿರುಚಿಯಾಗಿಸಿ ಹಾಸಿಗೆಗೆ ತಲೆ ಸೋಕುವಾಗ ಮಧ್ಯರಾತ್ರಿಯೇ.... ಮರುದಿನ ಮತ್ತದೇ.....

ಹೀಗೇ ಎಳೆಯುತ್ತಿತ್ತು ಬಾಳಬಂಡಿ..... 

ಚಿಕ್ಕಂದಿನಿಂದಲೇ ಪರಕೀಯತೆಯ ಅಸುರಕ್ಷಿತ ಭಾವವೊಂದು ನನ್ನೊಂದಿಗೇ ಬೆಳೆಯತೊಡಗಿತ್ತು. ನಾನು ಬೆಳೆದು, ಬುದ್ಧಿ ಬಲಿತು, ಮನಸ್ಸು ಸುತ್ತಲಿನ ಘಟನೆಗಳ ವಿಶ್ಲೇಷಣೆಗೆ ತೊಡಗುವಷ್ಟು ಪ್ರಬುದ್ಧವಾಗುವ ಸಮಯಕ್ಕೆ ಆ ಭಾವ ಇನ್ನೂ ಬಲವಾಗಿ ಬೇರೂರಿಬಿಟ್ಟಿತು ನನ್ನಲ್ಲಿ. ಅದು ನನ್ನೊಳಗೆ ಅಸಹನೆಯೊಂದನ್ನು ಸೃಷ್ಟಿಸಿತ್ತು. ಕುಲ್ದೀಪ್ ಹಾಗೂ ನನ್ನ ನಡುವೆ ಮನೆಯವರು ತೋರುತ್ತಿದ್ದ ತಾರತಮ್ಯ ನನ್ನ ಅಸಹನೆಯನ್ನು ಇನ್ನಷ್ಟು ಬಲಗೊಳಿಸುತ್ತಿತ್ತು.

ದಾದಾ ಹಾಗೂ ಚಾಚೂವಿನ ಚೂಪು ನೋಟದಿಂದ ನಾನು ಸದಾ ದೂರವೇ.... ದಾದಿ ಹಾಗೂ ಬಾಪುವಿನದ್ದೂ ಅದೇ ತಿರಸ್ಕಾರದ ನೋಟವಾದರೂ ಅದ್ಯಾಕೋ ನಾನು ಅವರಿಬ್ಬರಿಗೂ ಹತ್ತಿರವಾಗಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಿದ್ದಂತೂ ಸುಳ್ಳಲ್ಲ. ಕುಲ್ದೀಪ್ ದಾದಿಯ ತೊಡೆಯೇರಿ ಕುಳಿತು ಅವರ ಗೂಂಗಟ್ ಎಳೆಯುವಾಗ, ಅವರು ಅವನನ್ನು ಮುದ್ದುಗರೆಯುವಾಗ, ಆ ದೊಡ್ಡ ಅಂಗಳದ ತುಂಬಾ ಓಡುವ ಅವನ ಬೆನ್ನತ್ತಿ ಅಕ್ಕರೆಯಲ್ಲಿ ತುತ್ತಿಡುವಾಗೆಲ್ಲಾ ನನ್ನನ್ನೂ ದಾದಿ ಹಾಗೇ ರಮಿಸಿ ಮುದ್ದಿಸಬೇಕೆಂಬ ಅದಮ್ಯ ಬಯಕೆ.... ಬಾಪೂ ಹೆಮ್ಮೆಯಿಂದ ಅವನನ್ನು ಹೆಗಲ ಮೇಲೇರಿಸಿಕೊಂಡು ಮೇಲಾ(ಜಾತ್ರೆ) ಸುತ್ತಾಡಿಸುವಾಗ, ಅವನನ್ನು ಬೆನ್ನ ಮೇಲೇರಿಸಿಕೊಂಡು ಘೋಡಾ ಸವಾರಿ ಮಾಡಿಸುವಾಗ ಅವನ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ಆಸೆ. ಹಠಹಿಡಿದು ದಾದಿಯ ಬೆನ್ನು ಬಿದ್ದಾಗೆಲ್ಲ, 'ಏ ಚೋರೀ, ಚಲ್ ದಫಾ ಹೋಜಾ, ಡಾಯನ್ ಕಹೀ ಕೀ' ಎಂಬರ್ಥದ ಬೈಗುಳಗಳೇ ದಕ್ಕಿದ್ದು. ಆಸೆಪಟ್ಟು ಬಾಪೂ ಬಳಿ ಸಾರಿದಾಗೆಲ್ಲ ನನಗೆ ದೊರಕಿದ್ದು ತಿರಸ್ಕಾರ ಹಾಗೂ ಬೈಗುಳಗಳು ಮಾತ್ರ. ಹಾಗೇ ಒಂದಷ್ಟು ಬಾರಿ ಥಪ್ಪಡ್, ಪಿಟಾಯಿ ಸೇವೆಗಳಾದ ನಂತರ ನಾನೇ ಅವರಿಬ್ಬರಿಂದಲೂ ದೂರ ನಿಲ್ಲತೊಡಗಿದೆ. 

ಜೊತೆಗೆ ಇನ್ನೊಂದು ಹೊಡೆತ ಬಿದ್ದಿದ್ದು  ಚೋಟಿಮಾಯಿಯ ಕಡೆಯಿಂದ. ಕುಲ್ದೀಪನ ಆಗಮನದ ನಂತರ ಸ್ವಲ್ಪ ಸ್ವಲ್ಪ ಬದಲಾಗಿದ್ದ ಚೋಟಿ ಮಾಯಿಯ ನಡವಳಿಕೆ ಕುಲ್ಜೀತ್ ಹುಟ್ಟಿದ ನಂತರ ಸಂಪೂರ್ಣವಾಗಿ ಬದಲಾಗಿತ್ತು. ಮುಂಚೆಲ್ಲಾ ಅಕ್ಕರೆ, ಮಮತೆ ತೋರುತ್ತಿದ್ದವಳು ನಿಧಾನವಾಗಿ ನನ್ನೆಡೆಗೊಂದು ಅಸಡ್ಡೆ, ಅನಾದರವನ್ನು ಬೆಳೆಸಿಕೊಳ್ಳತೊಡಗಿದ್ದಳು. ಮುಂಚೆ ಇದ್ದ ಮಮಕಾರ, ಅಂತಃಕರಣಗಳಿಗೆಲ್ಲಾ ತಿಲಾಂಜಲಿ ಇಟ್ಟು ನನ್ನ ಕಂಡೊಡನೆ ಹೀಯಾಳಿಸುವ, ಸಿಡಿಮಿಡಿಗುಟ್ಟುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಳಾಕೆ. ಇದಕ್ಕೆ ಕಾರಣ ಪ್ರಾಯಶಃ ಇಬ್ಬರು ಗಂಡುಮಕ್ಕಳು ಹುಟ್ಟಿದ ನಂತರ ಮನೆಯಲ್ಲಿ ಅವಳಿಗೆ ಸಿಕ್ಕ ಗೌರವ, ಅಧಿಕಾರಗಳಿರಬಹುದು. ಆದರೆ ಚಾಚಿಯನ್ನು ಬಿಟ್ಟರೆ ಅವಳನ್ನೇ ಕೊಂಚ ಹೆಚ್ಚೇ ಎನಿಸುವಷ್ಟು ಹಚ್ಚಿಕೊಂಡಿದ್ದ ನನಗೆ ಅವಳ ವರ್ತನೆ ತೀವ್ರತರನಾದ ಆಘಾತವನ್ನು ತಂದಿತ್ತು. ಈ ನಿರ್ಲಕ್ಷ್ಯ, ಅನಾದರ ಹೆಚ್ಚುತ್ತಾ ಹೋದಂತೆಲ್ಲಾ ನಾನು ಚೋಟಿ ಮಾಯಿಯಿಂದ ದೂರವಾಗುತ್ತಾ ಬಂದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಅಂತರಾಳವನ್ನು ಕದಡಿ ರಾಡಿಯಾಗಿಸಿ, ನನ್ನೊಳಗೆ ಅಚ್ಚಳಿಯದ ಭಯವೊಂದನ್ನು ಸೃಷ್ಟಿಸಿದ್ದು.......

ಚಾಚಿಯ ಹೆಣ್ಣು ಮಗುವಿನ ಕೊಲೆ.....

ಹೌದು ಕೊಲೆಯೇ ಅದು.....

ಚಾಚಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮರುಘಳಿಗೆಯೇ ಚಾಚೂ ಅದನ್ನು ಉಸಿರುಗಟ್ಟಿಸಿ ಕೊಂದಿದ್ದ.... ಮನೆಯ ಹಿಂಭಾಗದ ಕುರುಚಲು ಕಾಡಿನೊಳಗೆ ಒಂದು ಗುಂಡಿ ತೋಡಿ ಆ ನನ್ನ ತಂಗಿಯನ್ನು ಮಣ್ಣಾಗಿಸುವಾಗ

"ಲಾಲೀ ಲಡ್ಕೀ ತೂ ಜಾ..... 

ಔರ್ ಲಾಲಾ ಲಡ್ಕಾ ತು ಲೇ ಆ....." 

(ಓ ಹೆಣ್ಣೇ ನೀನು ವಾಪಾಸು ಹೋಗು.....

ಗಂಡು ಮಗನನ್ನು ವಾಪಾಸು ತಾ...)

ಎಂಬ ಮಂತ್ರ ಪಠಿಸಿ ಮಣ್ಣಾಗಿಸಿದ್ದರು.

ಚಾಚಿ ಮಗುವಿನ ಮುಖವನ್ನೂ ಕಾಣಲಿಲ್ಲ.... ಪ್ರಸವ ವೇದನೆಯಿಂದ ಸುಸ್ತಾಗಿ ಮಲಗಿದ್ದ ಅವಳಿಗೆ ಎಚ್ಚರವಾಗುವ ಸಮಯಕ್ಕೆ ಎಲ್ಲವೂ ಮುಗಿದಿತ್ತು. ಅವಳು ಮಗುವಿಗಾಗಿ ಅಕ್ಕಪಕ್ಕ ತಡಕಾಡಿ ಮೌನವಾಗಿ ಕಣ್ಣೀರು ಸುರಿಸಿದ್ದೇ ಬಂತು. ಅಂದಿನಿಂದ ಬಹಳ ದಿನಗಳವರೆಗೆ ಭಯದ ನೆರಳಿನಲ್ಲಿಯೇ ಇದ್ದೆ. ನನ್ನನ್ನು ಯಾವುದೋ ಕಾಣದ ಕೈಗಳು ಉಸಿರುಗಟ್ಟಿಸಿದಂತಹ ಕನಸು ಪದೇ ಪದೇ ಬೀಳುತ್ತಿತ್ತು. ಭಯದಲ್ಲಿ ಚಾಚಿಯನ್ನು ಅಪ್ಪಿ ಮಲಗುತ್ತಿದ್ದೆ. ನನ್ನ ಭಯ ಓಡಿಸಿ ಧೈರ್ಯ ನೀಡುವ ಚೇತನ ಅವಳಾದರೆ, ಮಗಳ ಕಳೆದುಕೊಂಡು ಬರಿದಾದ ಅವಳೊಡಲಿನ ಬೇಗೆಯ ಸಂತೈಸುವ ಕೈ ನಾನಾದೆ. ಆಕೆ ನನ್ನ ಹೆತ್ತ ತಾಯಿಯಲ್ಲ, ನಾನು ಅವಳ ಒಡಲಲ್ಲಿ ನವಮಾಸ ಇದ್ದ ಮಗಳಲ್ಲ ಎನ್ನುವುದೊಂದನ್ನು ಹೊರತುಪಡಿಸಿದರೇ ನಾವಿಬ್ಬರೂ ತಾಯಿ ಮಕ್ಕಳೇ.... ನಾನಾಕೆಯನ್ನು ಮಾಯಿ ಎಂದು ಕರೆಯುತ್ತಿದ್ದೆ. ಅವಳು ನನ್ನ ಬಿಟಿಯಾ ರಾನಿ ಎನ್ನುತ್ತಿದ್ದಳು.

ಈ ಎಲ್ಲಾ ಘಟನೆಗಳೂ ನನ್ನ ಬದುಕೆಂಬ ಯಜ್ಞದಲ್ಲಿ ಸಮಿದೆಗಳಾಗಿದ್ದವಾ ....? ಗೊತ್ತಿಲ್ಲ. ಆದರೆ ಒಂದಂತೂ ನನಗೆ ನಿಚ್ಚಳವಾಗಿತ್ತು. ನನ್ನ ಬದುಕಿನಲ್ಲಿ ನನಗೆಂದು ಇರುವುದು ಚಾಚಿ ಮಾತ್ರಾ.

ಹೌದು.... ಈ ಬರಡು ಬೆಂಗಾಡಿನಂತಹ ಬಾಳಿನಲ್ಲಿ ಓಯಸಿಸ್ ನಂತೆ ಇದ್ದದ್ದು ಚಾಚಿಯೊಬ್ಬಳೇ... ಮನೆಯ ತುಂಬಾ ಸದಸ್ಯರಿದ್ದರೂ ನನಗೆ ಮರೀಚಿಕೆಯಾಗಿದ್ದು ಪ್ರೀತಿ, ಮಮತೆ. ಆದರೆ ಅವರೆಲ್ಲರ ಪ್ರೀತಿಯನ್ನೂ ಸೇರಿಸಿ ಅಂಕೆಯಿಲ್ಲದ ಪ್ರೀತಿ, ಮಮತೆಯ ವರ್ಷಧಾರೆ ಹರಿಸಿ ನನ್ನನ್ನು ಸಲಹಿದವಳು ಚಾಚಿಯೇ. ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾದವಳು, ನೋವಿಗೆ ಮದ್ದಾದವಳು, ಅಳಲಿಗೆ ಕಿವಿಯಾದವಳು ಅವಳೇ.... 

ನನಗಿನ್ನೂ ನೆನಪಿದೆ. ಕುಲ್ದೀಪನ ನಾಮ್ಕರಣ್ ಬಹಳ ಸಂಭ್ರಮದಿಂದ ನಡೆದಿತ್ತು. ರಾಶಿ ರಾಶಿ ಜನರು ನೋಟುಗಳ ಮಾಲೆ ಮಾಡಿ ಅವನ ಕುತ್ತಿಗೆಗೇರಿಸಿದ್ದರು. ಆದರೆ ಅದೇ ಮನೆಯಲ್ಲಿದ್ದ ನನಗೆ ಒಂದು ಹೆಸರು ನೀಡುವ ಯೋಚನೆಯೂ ಯಾರಿಗೂ ಇರಲಿಲ್ಲ. ಎರಡು ವರ್ಷಗಳ ತನಕವೂ 'ಚೋರಿ ಆಜಾ ಇದರ್'(ಏ ಹುಡುಗಿ ಬಾ ಇಲ್ಲಿ), 'ಏ ಚೋಕ್ರಿ... ಜಾಡೂ ಪೋಛಾ  ಕರ್ನಾ'(ಏ ಹುಡುಗಿ ನೆಲ ಗುಡಿಸಿ ಒರೆಸು), 'ಅರೆ ಓ ಲಡ್ಕೀ ಬರ್ತನ್ ಧೋನಾ'(ಅರೇ ಹುಡುಗಿ, ಪಾತ್ರೆ ತೊಳೆ) ಹೀಗೇ ಮನಸ್ಸಿಗೆ ತೋಚಿದಂತೆ ಸಂಬೋಧಿಸುತ್ತಿದ್ದರು ನನ್ನನ್ನು. 

ಒಮ್ಮೆ ಕೇಳಿದ್ದೆ ಚಾಚಿಯಲ್ಲಿ... ಎಲ್ಲರೂ ನಿನ್ನನ್ನು ಕಜರೀ ಎಂದೇಕೆ ಕರೆಯುವರು ಎಂದು. ಅವಳಿಗೋ ಆಶ್ಚರ್ಯ. ಅದೇ ಅಚ್ಚರಿಯ ನೋಟದಲ್ಲಿ ಹೇಳಿದ್ದಳು... 

"ಕಜರೀ ಮ್ಹಾರಿ ನಾಮ್ ಹೆ ಬಿಟಿಯಾ ರಾನಿ...."   ಎಂದಿದ್ದಳಾಕೆ‌

"ಫಿರ್ ಮ್ಹಾರೇ ಕೋ ಕಾಹೆ ಸಬ್ ಚೋರಿ, ಚೋಕರಿ, ಲಡ್ಕೀ ಕಹ್ಕೇ ಬುಲಾವೇ...?" ನನ್ನ ಅನುಮಾನ ಹೇಳಿದೆ. ಆಗ ಅರಿವಾಗಿತ್ತು ಚಾಚಿಗೆ ಈ ಮಗಳಿಗೆ ಒಂದು ನಾಮಧೇಯವೇ ಇಲ್ಲವೆಂದು...... ಆ ದಿನವೆಲ್ಲಾ ಯೋಚಿಸಿ, ಚಿಂತಿಸಿ ಮರುದಿನ ವೇಳೆ, ಘಳಿಗೆ ನೋಡಿ ದೇವರ ಕೋಣೆಯಲ್ಲಿ ಭಗವಂತನಿಗೊಂದು ದೀಪ ಬೆಳಗಿ.....

"ಸೀತಾ ಮಯ್ಯಾ ಕೀ ಜೈಸೀ ಸೂರತ್, ತ್ಯಾಗ್ ಔರ್ ಸೆಹನ್ಶೀಲತಾ ಕೀ ಮೂರತ್..... ಮ್ಹಾರೀ ಬಿಟಿಯಾ ರಾನಿ....... ಸಿಯಾ ಬನೇಗೀ ಮಾಯಿ ಕೀ ತಾಕತ್..... ಸಿಯಾ ಸಿಯಾ ಸಿಯಾ....." ಎಂದು ನನ್ನ ಕಿವಿಯಲ್ಲಿ ಮೂರು ಬಾರಿ ಅರುಹಿದಳು.....

ಹೀಗೆ ನಡೆದಿತ್ತು ನನ್ನ ನಾಮಕರಣ......

ಮರುದಿನದಿಂದ ನನ್ನನ್ನು ಚೋರಿ, ಚೋಕರೀ, ಲಡ್ಕೀ ಅಂದವರಿಗೆಲ್ಲಾ ಹಮ್ಮಿನಿಂದ ಜೋರಿನಲ್ಲಿ ಹೇಳಿದ್ದೆ.....

"ಮ್ಹಾರೀ ನಾಮ್ ಸಿಯಾ ಹೇ.... ಐಸಾ ಹೀ ಬುಲಾನಾ...."

ನನ್ನ ಈ ವರಸೆ ಕಂಡು ಮನೆಯವರು ಒಂದು ಸಾರಿ ಬೆಚ್ಚಿದ್ದು ಸುಳ್ಳಲ್ಲ. ಆದರೆ ನನಗೊಂದು ಹೆಸರು ದೊರೆತ ಖುಷಿಯ ಮುಂದೆ ಅವರ ಪ್ರತಿಕ್ರಿಯೆಗಳೆಲ್ಲಾ ಗೌಣವೇ..... 'ಸಿಯಾ' ಎಂದೇ ಕರೆಯದ ಹೊರತು ತಿರುಗಿಯೂ ನೋಡುತ್ತಿರಲಿಲ್ಲ ನಾನು. ಹಾಗಾಗಿ ಅವರೆಲ್ಲರಿಗೂ ನನ್ನನ್ನು ಸಿಯಾ ಎಂದೇ ಕರೆಯುವುದು ಅನಿವಾರ್ಯವಾಯಿತು. ಇದರಿಂದ ನನಗೂ ಒಂದು ವಿಚಾರ ಸ್ಪಷ್ಟವಾಯಿತು. ಇಲ್ಲಿ ನನ್ನ ಇಚ್ಛಾನುಸಾರ ಜೀವಿಸಬೇಕೆಂದರೆ ನಾನು ಹೋರಾಡಲೇಬೇಕು.... ತಿರುಗಿಬಿದ್ದು ಹಠ ಹಿಡಿಯದೇ ಹೋದರೆ ಈ ಸಮಾಜ ನನ್ನನ್ನು ಪಾತಾಳಕ್ಕೆ ತಳ್ಳುತ್ತದೆ.... ಬಹುಶಃ ಆ ಕ್ಷಣದಿಂದಲೇ ನನ್ನೊಳಗೆ ಭಾಗೀ (ಬಂಡಾಯಗಾರ್ತಿ)ಯೊಬ್ಬಳು ಮೆಲ್ಲಗೆ ಕದಲಲಾರಂಭಿಸಿದ್ದಳು ಅನ್ನಿಸುತ್ತದೆ. ಹೇಗೂ ಭವಿಷ್ಯತ್ತಿನಲ್ಲಿ ನನ್ನ ಬದುಕಿನ ತುಂಬಾ ಬಂಡಾಯವೇ ಇತ್ತಲ್ಲ......

ಭಗವಂತನ ದಯೆಯಿಂದ ಕಾಯಿಲೆ ಕಸಾಲೆಗಳೆಂದೂ ನನ್ನನ್ನು ಕಾಡಲಿಲ್ಲ. ಆ ಮಟ್ಟಿಗಂತೂ ಗಟ್ಟಿಪಿಂಡವೇ ನಾನು‌. ಹಾಗಾಗಿ ಔಷಧಿ, ಆಸ್ಪತ್ರೆಗಳ ವಿಚಾರದಲ್ಲಿ ಮನೆಯವರೊಂದಿಗೆ ಕದನಕ್ಕೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಲಿಲ್ಲ.

ನನ್ನ ಮೊದಲ ಅಧಿಕೃತ ಹೋರಾಟಕ್ಕೆ ಕಾರಣವಾದದ್ದು ಓದು.......

ಮನೆಯೇ ಒಂದು ಪಂಜರವಾಗಿದ್ದ ನನಗೆ ಪಂಜರದಿಂದ ಹೊರಹಾರುವುದೇ ಬದುಕಿನ ಗಮ್ಯವೆನಿಸಿಬಿಟ್ಟಿತ್ತು. ಚಾಚಿ ನಾನು ತೊದಲು ನುಡಿಯಲು ಆರಂಭಿಸಿದಂದಿನಿಂದಲೇ ಮುಂದೆ ನಾನು ಎದುರಿಸಬೇಕಾದ ಸನ್ನಿವೇಶಗಳ ಬಗ್ಗೆ, ಬರಬಹುದಾದ ಅಡೆತಡೆಗಳ ಬಗ್ಗೆ ತನಗೆ ತಿಳಿದಂತೆ ಸೂಕ್ಷ್ಮವಾಗಿ ತಿಳಿಹೇಳುತ್ತಾ ಬಂದಿದ್ದಳು. ಹಾಗಾಗಿ ನಾನು ನನ್ನ ವಯಸ್ಸಿನ ಇತರೆ ಮಕ್ಕಳಿಗಿಂತ ಭಿನ್ನವಾಗಿ ಹಾಗೂ ಗಂಭೀರವಾಗಿ ಯೋಚಿಸತೊಡಗಿದ್ದೆ. ಆ ದಿನಗಳಲ್ಲೇ ಈ ಪಂಜರದಿಂದ ಹೊರಬಂದು ಹಾರಬೇಕೆಂದರೆ ನನ್ನ ಚಿಂತನೆಯ ರೆಕ್ಕೆಗಳು ಶಕ್ತಿಶಾಲಿಯಾಗಿರಬೇಕು ಎಂದು ಬಲವಾಗಿ ಅನಿಸತೊಡಗಿದ್ದು. ಚಿಂತನೆಗಳು ಪ್ರಭಾವಶಾಲಿಯಾಗಲು ಇದ್ದ ಒಂದೇ ದಾರಿ ಶಿಕ್ಷಣ.....

ಶಾಲೆಗೆ ಹೋಗುವ ಹಾಗೂ ಕಲಿಯುವ ಹಂಬಲ ಗಟ್ಟಿಯಾಗಿ ಬೇರೂರತೊಡಗಿತ್ತು.

ಆದರೆ...... 

ನನಗಿಂತ ಕಿರಿಯವನಾದ ಕುಲ್ದೀಪ್ ಶಾಲೆಗೆ ಹೋಗತೊಡಗಿದ್ದ. ಆದರೆ ನನ್ನನ್ನು ಶಾಲೆಗೆ ಕಳಿಸುವ ಪ್ರಸ್ತಾಪವೇ ಬರುತ್ತಿರಲಿಲ್ಲ. ನೋಡುವಷ್ಟು ನೋಡಿ ಚಾಚಿಯಲ್ಲಿ ನನ್ನ ಮನದಾಸೆ ಹೇಳಿದ್ದೆ. ನನ್ನ ಮಾತಿಗೆ ನಿಟ್ಟುಸಿರು ಬಿಟ್ಟಳು ಅವಳು....

"ಇದೆಂತಹಾ ಆಸೆ ಸಿಯಾ ಬಿಟಿಯಾ? ಇಲ್ಲಿ ಹೆಣ್ಣು ಮಕ್ಕಳಿಗೆ ಕಲಿಕೆ ವರ್ಜ್ಯ. ಅವರಿಗೆ ಮನೆಯ ಕೆಲಸ ಬೊಗಸೆಯ ಕಲಿಕೆ ಮಾತ್ರವೇ ಮುಖ್ಯ" ಎಂದಿದ್ದಳು. ನನಗೆ ಅವಳ ಮಾತುಗಳಿಂದ ವಿಪರೀತ ನಿರಾಸೆಯಾಯಿತು. ಇಷ್ಟಕ್ಕೂ ನನಗೆಂದು ಇದ್ದವಳು ಅವಳೊಬ್ಬಳೇ. ಅವಳೂ ನನ್ನ ಆಸೆಗೆ ತಣ್ಣೀರೆರಚುತ್ತಿರುವಳೆಂಬ ಬೇಸರ, ಸಿಟ್ಟು ಎಲ್ಲವೂ ಕಣ್ಣೀರ ರೂಪದಲ್ಲಿ ಹೊರಬಂದಿತ್ತು. ಅದೇನೆನಿಸಿತೋ ಚಾಚಿಗೆ.... ಆ ದಿನ ಸಂಜೆ ಮನೆಯವರೆಲ್ಲಾ ಹಜಾರದಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತುಕತೆಯಲ್ಲಿ ತೊಡಗಿದ್ದರು. ಪುಟಾಣಿ ಕುಲ್ಜೀತ್ ದಾದಿಯ ಮಡಿಲಲ್ಲಿ ಮಲಗಿದ್ದ. ಎರಡನೇ ಇಯತ್ತೆಯ ಕುಲ್ದೀಪ್ ಶಾಲಾ ಪುಸ್ತಕಗಳನ್ನು ಹಿಡಿದು ಸಪ್ಪೆ ಮೋರೆಯಲ್ಲಿ ಕುಳಿತ್ತಿದ್ದ. ಓದು, ಬರಹ ಎಳ್ಳಷ್ಟೂ ಹಿಡಿಸದ ಅವನಿಗೆ ಶಾಲೆಗೆ ಹೋಗುವ ಭಾಗ್ಯವಿತ್ತು. ಅದೇ ಅದಕ್ಕಾಗಿಯೇ ಕಾತರಿಸುತ್ತಿದ್ದ ನನಗೆ ಅಡುಗೆ ಮನೆಯೇ ಪಂಜರ...... ಎಂತಹ ವಿಪರ್ಯಾಸ.......

ಇಂತಹ ಸಂದರ್ಭದಲ್ಲಿ ಚಾಚಿ ನನ್ನ ಪರ ವಕಾಲತ್ತು ವಹಿಸಿ ನನ್ನನ್ನು ಶಾಲೆಗೆ ಕಳುಹಿಸುವ ಮಾತನಾಡಿದ್ದಳು. ಯಾರಾದರೂ ಬಾಯ್ತೆರುವ ಮೊದಲೇ ಚಾಚಾನ ಹಸ್ತದ ಅಚ್ಚು ಚಾಚಿಯ ಕೆನ್ನೆಯ ಮೇಲಿತ್ತು. 'ಒಂದು ಗಂಡು ಮಗುವನ್ನು ಹಡೆಯುವ ಯೋಗ್ಯತೆ ಇಲ್ಲ. ಇದರ ನಡುವೆ ಈ ಶನಿಯ ಉಸಾಬರಿ ಬೇರೆ' ಎಂದು ವಾಚಾಮಗೋಚರವಾಗಿ ಬೈಯತೊಡಗಿದ್ದ. ಅವನು ಮಾಡಿದ್ದು, ಹೇಳಿದ್ದು ಎಲ್ಲವೂ ಸರಿಯೇ ಎಂಬ ಭಾವ ಮನೆಯವರ ಮುಖದಲ್ಲಿದ್ದರೆ ಚಾಚುವಿನ ಜೋರುದನಿಗೆ ಕುಲ್ದೀಪ್ ಬೆಪ್ಪಾಗಿ ಕೂತಿದ್ದ ಹಾಗೂ ಮಲಗಿದ್ದ ಕುಲ್ಜೀತ್ ಗಾಬರಿಯಲ್ಲಿ ಅಳತೊಡಗಿದ್ದ. ಚೋಟಿ ಮಾಯಿ ಚಾಚಿಯೆಡೆಗೆ ತಿರಸ್ಕಾರದ ನೋಟವೊಂದನ್ನು ಬೀರಿ ಅಳುತ್ತಿದ್ದ ಕುಲ್ಜೀತನನ್ನು ಎತ್ತಿಕೊಂಡು ಒಳನಡೆದಿದ್ದಳು. ದಾದಿ, ದಾದ, ಬಾಪೂ ಕೂಡಾ ಚಾಚಿಯನ್ನು ನಿಂದಿಸತೊಡಗಿದ್ದರು. ನನಗೆ ಸಹಿಸಲಾಗಲಿಲ್ಲ.

ನಾನು ಓದಲೇ ಬೇಕೆಂದು, ಶಾಲೆಗೆ ಕಳಿಸದಿದ್ದರೆ ಉಪವಾಸ ಹಿಡಿದು ಸಾಯುವೆನೆಂದು ಚೀರಿ ಹೇಳಿದ್ದೆ.

"ಜಿತ್ನಾ ಜಲ್ದೀ ಹೋ ಸಕೇ ಉತ್ನಾ ಜಲ್ದೀ ಮರ್ ಜಾ ತೂ... ಇತ್ತೂ ಸೀ ಚೋಕರಿ ತೇರಿ ಜಬಾನ್ ಕಿತ್ನಾ ಲಂಬಾ ಚಲಾವತ್ ಹೇ ರೇ...? ಭಾಗೀ ಕಯ್ಕೀ..." (ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಿ. ಇಷ್ಟುದ್ದದ ಹುಡುಗಿ, ನಿನ್ನ ನಾಲಿಗೆ ಅದೆಷ್ಟು ಉದ್ದವಾಗಿದೆ?) ಎಂದು ಎರಡೇಟು ಹಾಕಿದ್ದಳು ದಾದಿ...

ನನ್ನನ್ನು ತಪ್ಪಿಸಲು ಹೋಗಿ ಚಾಚಿಗೆ ಸರಿಯಾಗಿಯೇ ಹೊಡೆತಗಳು ಬಿದ್ದಿದ್ದವು. ಜೊತೆಗೆ ಅಶ್ಲೀಲ ಮಾತಿನ ಪ್ರಹಾರಗಳೂ ಸೇರಿ ನಾವಿಬ್ಬರೂ ಜರ್ಜರಿತವಾಗಿದ್ದೆವು. ಎಲ್ಲರೆಡೆಗೆ ರೋಷ ಉಕ್ಕಿತ್ತು. ಚಾಚಿಯನ್ನು ಕರೆದುಕೊಂಡು ಒಳ ನಡೆದಿದ್ದ ನನ್ನ ಮನಸ್ಸು ಕಠೋರವಾಗತೊಡಗಿತ್ತು. ನಾನು ಉಪವಾಸವಿದ್ದು ಸತ್ತರೆ ನನಗೆ ನಷ್ಟವೇ ಹೊರತು ಬೇರೇನೂ ಬದಲಾಗದು, ನನ್ನ ಬದುಕಿಗಾಗಿ ನಾನೇ ಬಂಡೇಳಬೇಕು ಎಂಬ ನಿರ್ಧಾರ ಬಲವಾಗತೊಡಗಿತ್ತು. ದಾದಿ ಹೇಳಿದಂತೆ ಭಾಗಿ(ಬಂಡಾಯಗಾರ್ತಿ) ಯಾಗಬೇಕು ನಾನು. ನನ್ನ ಹಕ್ಕಿಗೆ ನಾನೇ ಹೋರಾಡಬೇಕು. ಆದರೆ ಹೋರಾಟದ ವಿಧಾನ ಜಾಣ್ಮೆಯಿಂದ ಕೂಡಿರಬೇಕು. ಕೋಪದಿಂದ ಕೂಗಾಡಿ, ಚೀರಾಡುವುದು ವ್ಯರ್ಥ. ಇದಕ್ಕೆ ಬೇರೆಯೇ ಮಾರ್ಗ ಹುಡುಕಬೇಕೆಂದು ತೀರ್ಮಾನಿಸಿದೆ. ಒಂದಿಷ್ಟು ದಿನ ಯೋಚಿಸಿ ಮಾರ್ಗವೊಂದನ್ನು ಕಂಡುಕೊಂಡೆ. 

ನಮ್ಮೂರ ಶಾಲೆ ಮನೆಯಿಂದ ಮೂರು ಮೈಲಿಗಳ ದೂರದಲ್ಲಿತ್ತು. ನಮ್ಮ ಜಮೀನು ದಾಟಿ, ಮುಂದಿದ್ದ ಸಣ್ಣ ಬೆಟ್ಟದಂತಹ ಹುಲ್ಲುಗಾವಲಿನ ಅಂಚಿಗೆ ಶಾಲೆಯ ಆವರಣ ಕಾಣಿಸುತ್ತದೆ. ಆ ಹುಲ್ಲುಗಾವಲಿನ ಜಮೀನೂ ದಾದೂವಿನದ್ದೇ. ನಾವು ಜಾನುವಾರಿಗೆ ಹುಲ್ಲನ್ನು ಒಟ್ಟುಮಾಡಲು ಅಲ್ಲಿಗೇ ಬರುತ್ತಿದ್ದೆವು. ಜೊತೆಗೆ ಸಣ್ಣ ಮರಗಳಿಂದ ಒಣ ಲಕಡಿಗಳನ್ನೂ ಉರುವಲಿಗಾಗಿ ಸಂಗ್ರಹಿಸುತ್ತಿದ್ದೆವು. 

ನಾನು ಬೆಳಿಗ್ಗೆ ಬೇಗನೆ ಎದ್ದು ನನ್ನ ಪಾಲಿನ ಕೆಲಸಗಳನ್ನೆಲ್ಲಾ ಮುಗಿಸಿ, ಚಾಚಿಗೆ ಅಡುಗೆ ಮನೆಯ ಕೆಲಸದಲ್ಲಿ ಸ್ವಲ್ಪ ಕೈ ಜೋಡಿಸಿ ಹತ್ತರ ಸುಮಾರಿಗೆ ಹುಲ್ಲಿಗೆಂದು ಹೋಗಲಾರಂಭಿಸಿದೆ. ಹಾಗೆ ಹೋಗುವವಳು ಹುಲ್ಲುಗಾವಲಿನ ಬೇಲಿ ದಾಟಿ ಶಾಲೆಯ ಹಿಂಭಾಗಕ್ಕೆ ಹೋಗಿ ಯಾವುದೋ ತರಗತಿಯ ಕಿಟಕಿಯ ಬಳಿ ಕುಳಿತು ಮಾಸ್ಟರ್ ಹೇಳುತ್ತಿದ್ದುದ್ದನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ಒಂದಿಷ್ಟು ಹುಲ್ಲು ಕೊಯ್ದು ಜೋಡಿಸಿ ಮನೆಗೆ ವಾಪಾಸಾಗುತ್ತಿದ್ದೆ.

ಆದರೆ ಮಧ್ಯಾಹ್ನದ ತರುವಾಯ ಶಾಲೆಗೆ ಹೋಗಲಾಗುತ್ತಿರಲಿಲ್ಲ ನನಗೆ. ಜೊತೆಗೆ ದಿನಕ್ಕೊಂದು ತರಗತಿ, ಬೇರೆ ಬೇರೆ ಪಾಠ ಏನೊಂದೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.... ಹೀಗೆ ನಡೆದಿತ್ತು.

ಅದೊಂದು ದಿನ ಸಂಜೆ ಕೊಟ್ಟಿಗೆಯಲ್ಲಿ ಹಸುಗಳಿಗೆ ಹುಲ್ಲು ಹಾಕುತ್ತಿದ್ದಾಗ ಕುಲ್ದೀಪ್ ಅಲ್ಲಿಗೆ ಬಂದು, 

"ನೀನು ದಿನಾ ಹುಲ್ಲಿಗೆ ಹೋಗುವೆನೆಂದು ಹೇಳಿ ಶಾಲೆಯ ಪಾಠ ಕೇಳೋದು ನನಗೆ ಗೊತ್ತು ಸಿಯಾ ದೀ..." ಎಂದುಬಿಟ್ಟಿದ್ದ. ಇದರ ನಿರೀಕ್ಷೆಯೇ ಇಲ್ಲದ ನಾನು ಏನು ಉತ್ತರಿಸಬೇಕೆಂದು ತಿಳಿಯದೇ ಕಂಗಾಲಾಗಿದ್ದೆ. ನಾನು ಮಾತನಾಡುವ ಮುನ್ನವೇ ಅವನೇ ಹೇಳಿದ್ದ.

"ಸಿಯಾ ದೀ... ನಾನು ಯಾರ ಹತ್ತಿರವೂ ಹೇಳುವುದಿಲ್ಲ. ಚಿಂತಿಸಬೇಡ. ಆದರೆ ನೀನು ನನಗೊಂದು ಸಹಾಯ ಮಾಡಬೇಕು. ನನಗೆ ಶಾಲೆಗೆ ಹೋಗುವುದೇ ಇಷ್ಟವಿಲ್ಲ. ನನ್ನ ತರಗತಿಯ ಹಿಂದೆ ಕುಳಿತು ನೀನು ದಿನಾ ಪಾಠ ಕೇಳು. ಮತ್ತೆ ಅವರು ಒಂದು ರಾಶಿ ಬರವಣಿಗೆಯನ್ನು ಮನೆಗೆಲಸವೆಂದು ಕೊಡುತ್ತಾರೆ. ನೀನು ನನಗೆ ಅದನ್ನೆಲ್ಲಾ ಬರೆದುಕೊಡು. ನಿನಗೆ ಇಷ್ಟವಾದದ್ದು ತಾನೇ ಓದುವುದು, ಬರೆಯುವುದು....." 

ಹೀಗೊಂದು ಕರಾರು ತಂದಿದ್ದ ಕುಲ್ದೀಪ್ ಮೇಲೆ ಪ್ರಪ್ರಥಮ ಬಾರಿಗೆ ಅತಿಯಾದ ಪ್ರೀತಿಯುಕ್ಕಿತ್ತು. ತಮ್ಮನಾದರೂ ನನ್ನ, ಅವನ ಒಡನಾಟ ಕಡಿಮೆಯೇ. ಅವನೊಂದಿಗೆ ಆಟವಾಡಲು ಬಿಡುತ್ತಿರಲಿಲ್ಲ ನನಗೆ. ಹಾಗಾಗಿ ನಾವಿಬ್ಬರೂ ದೂರದೂರವೇ. ಇಂದ್ಯಾಕೋ ಅವನು ಅತೀವ ಪ್ರಿಯ ತಮ್ಮನೆನಿಸಿಬಿಟ್ಟ. ಸಂತೋಷದಿಂದಲೇ ಅವನ ಮಾತಿಗೆ ಒಪ್ಪಿದ್ದೆ.

ಅಲ್ಲಿಂದ ಆರಂಭವಾಗಿತ್ತು ನನ್ನ ಕಲಿಕೆಯ ಪರ್ವ. ಹಗಲು ಸಾಧ್ಯವಾದಷ್ಟು ಹೊತ್ತು ಕುಲ್ದೀಪನ ತರಗತಿಯ ಹಿಂದೆ ಕುಳಿತು ಪಾಠ ಕೇಳಿಸಿಕೊಳ್ಳುತ್ತಿದ್ದೆ. ರಾತ್ರಿ ಎಲ್ಲರೂ ಪಡಸಾಲೆಯಲ್ಲಿ ಕುಳಿತು ಹರಟೆ ಹೊಡೆಯುವಾಗ ಕುಲ್ದೀಪನ ಮನೆಕೆಲಸಗಳನ್ನು ಮುಗಿಸುತ್ತಿದ್ದೆ. ಇದು ಚಾಚಿಯೊಬ್ಬಳಿಗೆ ತಿಳಿದಿತ್ತು. ಅವಳು ಖುಷಿ ಪಟ್ಟಿದ್ದಳು ಕೂಡಾ...... ಗಣಿತ ಕೊಂಚ ಕಠಿಣವೆನಿಸುತ್ತಿದ್ದದ್ದು ಬಿಟ್ಟರೆ ಉಳಿದವು ಸುಲಭವೆನಿಸಿತ್ತು. ಮನೆಯವರೆಲ್ಲಾ ಹಗಲಿಡೀ ಮನೆಯಿಂದ ಹೊರಗೆ ಬೀಡಾಡಿಯಂತೆ ತಿರುಗುತ್ತೀಯಾ ಎಂದು ಬೈದು, ದಬಾಯಿಸುತ್ತಿದ್ದರು. ನಾನು ಯಾವುದಕ್ಕೂ ಜಗ್ಗಲಿಲ್ಲ ಹಾಗೂ ಬಗ್ಗಲಿಲ್ಲ. ಎಲ್ಲಾ ತಂತ್ರಗಳನ್ನು ಪ್ರಯೋಗಿಸಿಯೂ ನನ್ನನ್ನು ನಿಯಂತ್ರಣದಲ್ಲಿ ಇಡಲಾಗದಾದಾಗ 'ಗಂಡುಬೀರಿ, ಭಾಗೀ....' ಎಂಬಿತ್ಯಾದಿ ಬಿರುದುಗಳೊಂದಿಗೆ ನನ್ನನ್ನು ಬಿಂಬಿಸಿ ಕೈ ಬಿಟ್ಟರು.... ನಾನು ತಲೆಕೆಡಿಸಿಕೊಳ್ಳಲೇ ಇಲ್ಲ. ಅಂತಹ ಅಗತ್ಯವೂ ನನಗೆ ಕಾಣಲಿಲ್ಲ.

ಕುಲ್ದೀಪ್ ನಾಲ್ಕನೇ ಈಯತ್ತೆಯಲ್ಲಿದ್ದಾಗ ನಮ್ಮಿಬ್ಬರ ಈ ಕರಾರು ಮನೆಯವರಿಗೆ ತಿಳಿದುಬಿಟ್ಟಿತ್ತು. ಮೊದಲು ಒಂದಿಷ್ಟು ಬೈದು, ಹೊಡೆದರಾದರೂ ಕುಲ್ದೀಪ್ ತನಗೆ ಬರೆಯಲು ಇಷ್ಟವಿಲ್ಲ, ಕೈ ನೋಯುವುದು ಎಂದೆಲ್ಲಾ ಅತ್ತೂ ಕರೆದು ಸಮಜಾಯಿಷಿ ನೀಡಿ, 'ತಾನು ತರಗತಿಗಳಿಗೆ ಹೋಗುವೆ, ಸಿಯಾ ದೀ ಮನೆಕೆಲಸ ಬರೆದು ಕೊಡಲಿ' ಎಂದು ಮನೆಯವರನ್ನು ಒಪ್ಪಿಸಿದ. ಮನೆಯ ಗಂಡು  ಮಗ ನೋವಿನಿಂದ ಕಣ್ಣೀರು ಹಾಕುವುದು ಮನೆಗೆ ಶ್ರೇಯಸ್ಸಲ್ಲವೆಂದು ಅವನು ಹೇಳಿದ್ದಕ್ಕೆಲ್ಲಾ ಮನೆಯವರು ಒಪ್ಪಿದರು. ಕುಲ್ಜೀತನ ಬರವಣಿಗೆಯ ಕೆಲಸಗಳನ್ನೂ ನನಗೇ ಒಪ್ಪಿಸಿದರಾದರೂ ಅವನು ಸುತಾರಾಂ ಒಪ್ಪಲಿಲ್ಲ. ಕುಲ್ದೀಪನಂತಲ್ಲ ಅವನು. ಅವನಿಗೆ ಓದು, ಬರಹದಲ್ಲಿ ಆಸಕ್ತಿಯಿತ್ತು. ಹಾಗಾಗಿ ತನ್ನ ಕೆಲಸ ತಾನೇ ಮಾಡಿಕೊಳ್ಳುವೆನೆಂದ.

ಹೀಗೆ ನನ್ನ ಓದು, ಬರವಣಿಗೆ ಎಲ್ಲರ ಅನುಮತಿಯಿಂದ ಸಾಗಿತ್ತು. ಹೇಗೋ ಒಂದು ವಿಧದಲ್ಲಿ ದೇವರು ನನ್ನ ಆಸೆಗೆ ಮಾರ್ಗ ತೋರಿದ್ದ. ಕುಲ್ದೀಪನ ಎಲ್ಲಾ ಶಾಲಾ ಸಂಬಂಧಿತ ಚಟುವಟಿಕೆಗಳನ್ನು ನಾನೇ ಮಾಡುತ್ತಿದ್ದೆ. ಜೊತೆಗೆ ಕುಲ್ಜೀತ್ ಕೂಡಾ ತನಗೆ ಅರ್ಥವಾಗದ ವಿಚಾರಗಳನ್ನು ನನ್ನ ಬಳಿ ಕೇಳುತ್ತಿದ್ದ. ಜೊತೆಗೆ ನನಗೆ ತಿಳಿಯದ ಗಣಿತದ ಸಮಸ್ಯೆಗಳನ್ನು ಹೇಳಿಕೊಡುತ್ತಿದ್ದ ಕೂಡಾ. ಹೀಗೆ ನಮ್ಮ ಮೂವರ ನಡುವೆ ಮನೆಯವರು ಬಯಸದ ಬಂಧವೊಂದು ಏರ್ಪಟ್ಟಿತ್ತು. ಅದರಲ್ಲೂ ಕುಲ್ಜೀತ್ ನನಗೆ ಅತ್ಯಂತ ಆಪ್ತನಾದ. ಕುಲ್ದೀಪ್ ಕೊಂಚ ಒರಟನಾದರೆ ಕುಲ್ಜೀತ್ ಮೃದು ಭಾವದವನು. ನನ್ನ ಸಮಸ್ಯೆಗಳನ್ನು, ನೋವುಗಳನ್ನು ಅರ್ಥೈಸಿಕೊಳ್ಳುವ ಹೆಂಗರುಳಿತ್ತು ಅವನಿಗೆ. ತನಗೆ ತಿಳಿದಂತೆ ಸಾಂತ್ವನಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ. ಇದು ಮನೆಯವರಿಗೆ ಸಹಿಸಲಾರದ ವಿಚಾರವಾಗಿತ್ತು. ಈ ವಿಚಾರಕ್ಕೆ ಆಗಾಗ ನನಗೆ ಬೈಗುಳ, ಹೊಡೆತಗಳು, ಮಕ್ಕಳನ್ನು ಹಾಳುಗೆಡವುತ್ತಿರುವೆನೆಂಬ ಶಾಪಗಳು ಸಾಮಾನ್ಯವಾಗಿತ್ತು. ಆದರೆ ಇವೆಲ್ಲಾ ಅಭ್ಯಾಸವಾಗಿದ್ದ ನನಗೆ ಏನೂ ಅನ್ನಿಸುತ್ತಲೇ ಇರಲಿಲ್ಲ. ಗಟ್ಟಿ ಚಮ್ಮಡಿಯವಳಾಗಿ ಬದಲಾಗಿ ಹಲವು ವರ್ಷಗಳೇ ಆಗಿತ್ತು. ಹೀಗೆ ಸಾಗಿತ್ತು ನಮ್ಮ ಬದುಕು......

ಹೇಗೋ ಎಲ್ಲವನ್ನೂ ಸಂಭಾಳಿಸಿಕೊಂಡು ಧೈರ್ಯದಿಂದ ಪಂಜರದ ಹೊರಗೆ ಹಾರುವುದೇ ಧ್ಯೇಯವೆಂದುಕೊಂಡು  ಮುನ್ನಡೆಯುತ್ತಿದ್ದ ನನ್ನ ರೆಕ್ಕೆಗಳನ್ನು ಘಾಸಿಗೊಳಿಸಿ, ಆತ್ಮವಿಶ್ವಾಸವನ್ನು ಪಾತಾಳಕ್ಕೆ ನೂಕಿದ್ದು ಚಾಚಿಯ ಸಾವು.

ನನಗೆ ಹದಿನೈದು ವರ್ಷಳಾಗಿದ್ದಾಗ ಹಲವು ವರ್ಷಗಳ ಬಳಿಕ ಮತ್ತೆ ಗರ್ಭಿಣಿಯಾಗಿದ್ದಳು ಚಾಚಿ. ಈ ವರ್ಷಗಳಲ್ಲಿ ಚಾಚಾನೂ ಬಾಪೂವಿನಂತೆ ಇನ್ನೊಬ್ಬ ಹೆಣ್ಣನ್ನು ಮದುವೆಯಾಗಲು ಪ್ರಯತ್ನಿಸಿದ್ದನಾದರೂ ಹೆಣ್ಣುಗಳ ಕೊರತೆ ತೀವ್ರವಾಗಿ, ಅವನಿಗೆ ವಧು ಸಿಕ್ಕಿರಲಿಲ್ಲ. ಈಗ ಚಾಚಿ ಮತ್ತೆ ಗರ್ಭಿಣಿಯಾಗಿದ್ದು ಅವನ ಗಂಡು ಮಗುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿತ್ತು. ಆದರೆ ಈ ವಿಚಾರ ನನಗೆ ದಿಗಿಲು ತಂದಿತ್ತು. ಒಂದು ವೇಳೆ ಗಂಡು ಮಗು ಜನಿಸಿದರೆ ಚಾಚಿಯೂ ಚೋಟಿಮಾಯಿಯಂತೆ ನನ್ನನ್ನು ದೂರ ತಳ್ಳುತ್ತಾಳೆ ಎಂಬ ಭಯವೇ ಹಿರಿದಾಗಿತ್ತು ನನಗೆ.

ಆ ಕಾಲಕ್ಕಾಗಲೇ ಆಕ್ರಮಣಶೀಲವಲ್ಲದ ತಂತ್ರಜ್ಞಾನಗಳು(non invasive techniques) ಅಭಿವೃದ್ಧಿಗೊಂಡಿದ್ದವು. ಮುಜ್ಜಫರ್ ನಗರದಲ್ಲೇ ಶ್ರವಣಾತೀತ ಧ್ವನಿತರಂಗ(ultrasonography) ತಂತ್ರಜ್ಞಾನ ಹೊಂದಿದ ಕೆಲವು ದವಾಖಾನೆಗಳು ತಲೆಯೆತ್ತಿದ್ದವು. ಜೊತೆಗೆ ಶಾಮ್ಲಿ ವಲಯವೂ ದೊಡ್ಡ ನಗರವಾಗಿ ಬೆಳೆಯುವತ್ತ ಹೆಜ್ಜೆ ಇಟ್ಟಿತ್ತು. ನಗರೀಕರಣದೊಂದಿಗೆ ಮುಜ್ಜಫರ್ ನಗರದಲ್ಲಿ ಲಭ್ಯವಿದ್ದ ಸವಲತ್ತುಗಳು ನಿಧಾನವಾಗಿ ಶಾಮ್ಲಿಯ ಹಳ್ಳಿಗಳಿಗೂ ವಿಸ್ತರಿಸತೊಡಗಿತ್ತು. ಮುಜ್ಜಫರ್ ನಗರದಿಂದ ವಾರದಲ್ಲಿ ಎರಡು ದಿನ ಸಂಚಾರಿ ದವಾಖಾನೆಗಳು(mobile clinic) ಶಾಮ್ಲಿಯ ಹಳ್ಳಿಗಳಿಗೂ ಬರುತ್ತಿದ್ದವು. ಈ ಸಂಚಾರಿ ದವಾಖಾನೆಗಳು ಶ್ರವಣಾತೀತ ಧ್ವನಿತರಂಗ ಪರೀಕ್ಷೆಯ ಮೂಲಕ ಭ್ರೂಣ ಲಿಂಗಪತ್ತೆ ಸೌಲಭ್ಯವನ್ನು ಹಳ್ಳಿಹಳ್ಳಿಗಳಿಗೂ ಒದಗಿಸಲು ಶುರುವಿಟ್ಟಿದ್ದವು. ಹಾಗಾಗಿ ಹೆಣ್ಣು ಶಿಶು ಹತ್ಯೆ ಹೆಣ್ಣು ಭ್ರೂಣ ಹತ್ಯೆಯಾಗಿ ಬದಲಾಗತೊಡಗಿತ್ತು. ಈಗ ಹೆಣ್ಣು ಮಗುವಿಗೆ ನವಮಾಸಗಳು ತಾಯಿಯ ಉದರದಲ್ಲಿರುವ ಭಾಗ್ಯವೂ ಇರಲಿಲ್ಲ. ಭ್ರೂಣ ಹೆಣ್ಣೆಂದು ತಿಳಿದೊಡನೆ ಗರ್ಭಪಾತ ಮಾಡಿಸಿಬಿಡುತ್ತಿದ್ದರು. ಅದೇ ಗಂಡು ಮಗುವಿನ ಭ್ರೂಣ ಕಂಡುಬಂದರೆ, 'ಗುಲಾಬ್ ಕಾ ಫೂಲ್'(a rose is blooming) , 'ತಾಲೀ ಬಜಾವೋ' (celebrate) ಎಂಬ ಸಂಕೇತಗಳ ವಿನಿಮಯವಾಗುತ್ತಿತ್ತು.

ಈ ಬಾರಿ ಚಾಚಿ ಗರ್ಭಿಣಿಯಾಗಿದ್ದಾಗ ಅಂತಹುದೇ ಸಂಚಾರಿ ದವಾಖಾನೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿಸಿದ್ದರು ದಾದಾ, ದಾದಿ ಹಾಗೂ ಚಾಚೂ. ಪರೀಕ್ಷೆಯ ಫಲಿತಾಂಶ ಮತ್ತೆ ನಕಾರಾತ್ಮಕವಾಗಿತ್ತು. ಕೂಡಲೇ ಗರ್ಭಪಾತ ಮಾಡಿಸಿ ಮನೆಗೆ ಕರೆತಂದಿದ್ದರು. ಅದೇನಾಯಿತೋ ಚಾಚಿಗೆ ವಿಪರೀತ ರಕ್ತಸ್ರಾವವಾಗತೊಡಗಿತು. ಮೊದಲ ಹಾಗೂ ಕೊನೆಯ ಬಾರಿಗೆ ಆ ರಾತ್ರಿ ಮನೆಯವರನ್ನೆಲ್ಲಾ ಗೋಗರೆದಿದ್ದೆ ಅವಳನ್ನು ಆಸ್ಪತ್ರೆಗೆ ಸೇರಿಸಲು. ಒಂದಿನಿತೂ ಕರುಣೆಯಿಲ್ಲದೇ ಎಲ್ಲರೂ ತಮ್ಮ ತಮ್ಮ ಕೋಣೆ ಸೇರಿ ಪವಡಿಸಿದ್ದರು. ನಾನು, ಕುಲ್ದೀಪ್ ಹಾಗೂ ಕುಲ್ಜೀತ್ ಮಾತ್ರ ಇಡೀ ರಾತ್ರಿ ಚಾಚಿಯ ಪಕ್ಕ ಎಚ್ಚರವಾಗಿ ಕುಳಿತು ಕಣ್ಣೀರು ಸುರಿಸಿದ್ದೆವು. ಮರುದಿನಕ್ಕೂ ರಕ್ತಸ್ರಾವ ನಿಲ್ಲಲಿಲ್ಲ. ಚಾಚಿಯ ನರಳುವಿಕೆ ಕ್ಷೀಣವಾಗತೊಡಗಿತು. ತೀವ್ರ ನಿತ್ರಾಣಳಾದ ಚಾಚಿ ಪ್ರಜ್ಞಾಶೂನ್ಯಳಾದವಳು ಮತ್ತೆಂದೂ ಕಣ್ಣು ತೆರೆಯಲೇ ಇಲ್ಲ.

ಮಾಯಿ ಸತ್ತಾಗ ನಾನು ಅನಾಥಳಾಗಿದ್ದೆನೋ ಇಲ್ಲವೋ ಇಂದು ಮಾತ್ರ ನಾನು ಅಕ್ಷರಶಃ ಅನಾಥಳಾಗಿದ್ದೆ......

ನನ್ನ ಚಾಚಿ...... 

ನನಗಾಗಿ ಬದುಕಿದವಳು, ಎಲ್ಲರ ಪ್ರೀತಿ, ಮಮತೆಯನ್ನು ತುಂಬಿ ಕೊಟ್ಟವಳು, ನನಗಾಗಿ ಹೊಡೆತ ತಿಂದವಳು, ನನ್ನ ಹಕ್ಕುಗಳಿಗಾಗಿ ಪ್ರಶ್ನಿಸಿದವಳು, ನನ್ನ ಏಳಿಗೆ ಕಂಡು ಸಂತಸಪಟ್ಟವಳು, ನನ್ನ ನೋವುಗಳಿಗೆ ಸಾಂತ್ವನವಾದವಳು, ನನ್ನ ಬದುಕಿನ ಗಮ್ಯ ತೋರಿದವಳು, ನನ್ನನ್ನು ಗಟ್ಟಿಗೊಳಿಸಿದವಳು, ನನ್ನೊಂದಿಗೆ ನಕ್ಕವಳು, ನನಗಾಗಿ ಅತ್ತವಳು......... ಇನ್ನೆಂದೂ ಇಲ್ಲದಂತೆ ನನ್ನನ್ನು ಶಾಶ್ವತವಾಗಿ ತೊರೆದಿದ್ದಳು.

ಇರುವಷ್ಟು ಜನ್ಮಗಳು ಅವಳ ಪಾದಗಳಡಿಗೆ ಧೂಳಾದರೂ ಅವಳ ಋಣ ತೀರಿಸಲು ನನ್ನಿಂದಾಗದು....... 

ಮನದ ತುಂಬಾ ಬಿರುಗಾಳಿಯೇ ಎದ್ದಿತ್ತು. ಆದರೆ ಅದ್ಯಾಕೋ ಮನದಲ್ಲೇ ಸತ್ತ ಭಾವಗಳಿಗೆ ಕಣ್ಣ ಹನಿಗಳ ಮುಕ್ತಿ ದೊರೆಯಲೇ ಇಲ್ಲ.......

ನಾ ಅಳಲಿಲ್ಲ...... ಹೆಸರಿಗೊಂದು ಕಣ್ಣ ಹನಿಯೂ ಕಣ್ಣಂಚಿನಿಂದ ಜಾರಲೇ ಇಲ್ಲ.......

ಮನೆಯ ತುಂಬಾ ಜನ ಸೇರಿದ್ದರು. ಬದುಕಿದ್ದಾಗ ಚಾಚಿಯ ನೋವಿಗೆ ಕುರುಡರಾದವರು ಅವಳು ಸತ್ತ ನಂತರ ಕಂಬನಿ ಹರಿಸಲು ಬಂದಿದ್ದರು.

ಕಣ್ಣೆದುರು ಚಾಚೂ ಹಣೆಹಣೆ ಬಡಿದುಕೊಂಡು ಅಳುತ್ತಿದ್ದ...... ಅಲ್ಲಾ...... ಅಳುವ ನಟನೆ ಮಾಡುತ್ತಿದ್ದ.

ಅದೆಲ್ಲಿತ್ತೋ ಸಿಟ್ಟು.......

ಬಾಗಿಲ ಮೂಲೆಯಲ್ಲಿದ್ದ ದಾದಿಯ ಊರುಗೋಲು ಕಣ್ಣಿಗೆ ಬಿದ್ದಿತ್ತು. ಸೀದಾ ಹೋಗಿ ಅದನ್ನು ತೆಗೆದುಕೊಂಡು ಬಂದವಳೇ ಅಕ್ಕಪಕ್ಕ ಹಿಂದೆಮುಂದೆ ನೋಡದೇ ಚಾಚೂವಿಗೆ ಬಾರಿಸತೊಡಗಿದ್ದೆ.

ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದರು. ಇದು ಅವರಿಗೆ ಅನಿರೀಕ್ಷಿತ...... ಇಂತಹದ್ದೊಂದು ಘಟನೆ ಇಡೀ ಶಾಮ್ಲಿಯ ಇತಿಹಾಸದಲ್ಲೇ ನಡೆದಿರಲಿಲ್ಲ. 

ಒಂದಿಷ್ಟು ಜನ ಬಂದು ನನ್ನ ಹಿಡಿದು, ಎಳೆದಿದ್ದರಿಂದ ಚಾಚಾನ ಜೀವ ಉಳಿದಿತ್ತು. ಇಲ್ಲವಾದರೇ ಆತನ ತಲೆ ಒಡೆಯುವುದು ಖಚಿತವಿತ್ತು......

ಯಾರ ಮುಖ ನೋಡುವುದೂ ಸಹ್ಯವೆನಿಸದೇ ಕೋಣೆಗೆ ನಡೆದು ಕದವಿಕ್ಕಿಕೊಂಡಿದ್ದೆ. ಮನೆ, ಮನಸ್ಸು ನನ್ನ ಜಗತ್ತು ಎಲ್ಲವೂ ಖಾಲಿಯಾಗಿತ್ತು.

ನಂತರದ ದಿನದಲ್ಲಿ ನಾನು ವಿಪರೀತ ಮೌನಿಯಾದೆ.... ನನ್ನ ವರ್ತನೆ ಎಲ್ಲರಿಗೂ ಸಂಕೀರ್ಣ ಎನಿಸುವಷ್ಟು ಏಕಾಂಗಿಯಾದೆ. ತಪ್ಪು ಎನಿಸಿದ್ದನ್ನು ಎಲ್ಲರೆದರೂ ನೇರಾನೇರ ವಿರೋಧಿಸುವಷ್ಟು ತೀಕ್ಷ್ಣಳಾದೆ.

ಭೈರೋನ್ ಗ್ರಾಮದಲ್ಲಿ ನನ್ನ ಗುರುತು 'ಬಾಗೀ ಸಿಯಾ' ಎಂದು ಬದಲಾಯಿತು‌. ನಾನು ಸಮುದಾಯದಿಂದ ಹೊರಗಿನವಳಾಗಿ ಗುರುತಿಸಲ್ಪಡತೊಡಗಿದೆ......

ಹಲವು ನೋವುಗಳೊಂದಿಗೆ, ಹೋರಾಟದ ಬದುಕಿನೊಂದಿಗೆ,ಬಂಡಾಯಗಾರ್ತಿಯ ಪಟ್ಟದೊಂದಿಗೆ ನನ್ನ ಬಾಲ್ಯ ಕಳೆದಿತ್ತು. ತಾರುಣ್ಯದ ದಿನಗಳ ಹೊಸ್ತಿಲಲ್ಲಿ ನಿಂತಿದ್ದ ನನ್ನ ಬದುಕಿನಲ್ಲಿ ಊಹೆಗೂ ಮೀರಿದ ಘಟನೆಗಳು ನಡೆಯಲಿದ್ದವು. ಇಲ್ಲಿಯವರೆಗಿನ ಹೋರಾಟಕ್ಕೂ ಮೀರಿದ ಮಹಾಯುದ್ಧ ನನಗಾಗಿ ಕಾದು ಕುಳಿತಿತ್ತು........

ಸಶೇಷ

ಟಿಪ್ಪಣಿಗಳು:

ಆಕ್ರಮಣಶೀಲವಲ್ಲದ ತಂತ್ರಗಳು(Non Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದ ಎರಡನೇ ಹಾಗೂ ಆಧುನಿಕ ವಿಧಾನವೇ ಆಕ್ರಮಣಶೀಲವಲ್ಲದ ತಂತ್ರಗಳು. ಈ ವಿಧಾನದಲ್ಲಿ ದೇಹದ ಒಳ ಭಾಗಕ್ಕೆ ಯಾವುದೇ ಬಾಹ್ಯ ಸಲಕರಣೆಗಳನ್ನು ಬಳಸದೇ, ಹೊರಗಿನಿಂದಲೇ ದೇಹದ ಒಳಭಾಗವನ್ನು ಪರೀಕ್ಷಿಸುತ್ತಾರೆ. 

ಇದರ ಪ್ರಮುಖ ಪ್ರಕಾರವೇ ಶ್ರವಣಾತೀತ ಧ್ವನಿತರಂಗ ಪರೀಕ್ಷೆ (Ultrasonography). ಈ ವಿಧಾನದಲ್ಲಿ ಧ್ವನಿ ತರಂಗಗಳ ಸಹಾಯದಿಂದ ಭ್ರೂಣದ ಚಿತ್ರಗಳನ್ನು ನೋಡಬಹುದು. ಸಾಮಾನ್ಯವಾಗಿ ಗರ್ಭಧಾರಣೆಯ ಹತ್ತು ವಾರಗಳ ನಂತರ ಈ ಪರೀಕ್ಷೆ ಮಾಡಲಾಗುತ್ತದೆ. ಗರ್ಭದ ಚಿತ್ರಣ, ಅದರ ಗಾತ್ರ, ಹೃದಯ ಬಡಿತ ಹಾಗೂ ಅಂಗಾಂಗಗಳ ಗಾತ್ರದ ಆಧಾರದ ಮೇಲೆ ಭ್ರೂಣದ ಬೆಳವಣಿಗೆಯನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಭ್ರೂಣದ ಜನನಾಂಗದ ಬಾಹ್ಯ ರೂಪದಿಂದ ಅದರ ಲಿಂಗವನ್ನು ನಿರ್ಧರಿಸುತ್ತಾರೆ. ಆಕ್ರಮಣಶೀಲ ತಂತ್ರಗಳ ಹೋಲಿಕೆಯಲ್ಲಿ ಈ ವಿಧಾನ ಬಹಳ ಅಗ್ಗವಾಗಿದ್ದು ಸಾಮಾನ್ಯವಾಗಿ ಕೈಗೆಟುಕುವ ದರದಲ್ಲಿ ಈ ಪರೀಕ್ಷೆ ಲಭ್ಯವಿದೆ. ಇದರ ಮೂಲ ಉದ್ದೇಶವೂ ಭ್ರೂಣದ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು ಗುರುತಿಸುವುದಾದರೂ ಲಿಂಗತ್ವ ಪತ್ತೆಗೆ ದುರುಪಯೋಗವಾಗುತ್ತಿರುವುದೇ ಹೆಚ್ಚು.

ಜನರ ಉಪಯೋಗಕ್ಕಾಗಿ ಅಭಿವೃದ್ಧಿ ಪಡಿಸಿದ ಈ ultrasonography ತಂತ್ರಜ್ಞಾನ ಭ್ರಷ್ಟ ವೈದ್ಯರ ಹಣದ ಹಪಾಹಪಿಗೆ ಬಳಕೆಯಾಗುತ್ತಿರುವುದು ವಿಷಾದನೀಯ. ಪ್ರಸವಪೂರ್ವ ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಕಾನೂನುಬಾಹಿರವಾಗಿ ಈ ಕಾರ್ಯದಲ್ಲಿ ನಿರತವಾಗಿರುವ ಅಸಂಖ್ಯಾತ ಖಾಸಗಿ ಕ್ಲಿನಿಕ್ ಗಳಿವೆ. ಭ್ರೂಣದ ಲಿಂಗ ಪತ್ತೆ ಮಾಡಿ, ಹೆಣ್ಣಾದರೆ ಅಲ್ಲೇ ಗರ್ಭಪಾತ ಮಾಡಿಸಿ ಕೈತುಂಬಾ ಹಣ ಗಳಿಸುವುದನ್ನೇ ದಂಧೆ ಮಾಡಿಕೊಂಡಿರುವವರ ಗುಂಪುಗಳೇ ಇವೆ. ಇವರೆಲ್ಲಿ ಹೆಚ್ಚಿನವರು ಅಸಲಿಗೆ ವೈದ್ಯರೇ ಆಗಿರುವುದಿಲ್ಲ. ವೈದ್ಯಕೀಯ ವಿಭಾಗ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಒಂದಿಷ್ಟು ತರಬೇತಿ ಪಡೆದು ವೈದ್ಯರೆಂಬ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಕ್ಲಿನಿಕ್ ನಡೆಸುತ್ತಾರೆ. 

ಕೆಲವು ಘಟನೆಗಳಲ್ಲಿ ಗಂಡು ಭ್ರೂಣವನ್ನೂ ಹೆಣ್ಣೆಂದು ಹೇಳಿ ಗರ್ಭಪಾತ ಮಾಡಿಸಿ ದುಡ್ಡು ಮಾಡಿದ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಓದಿದ್ದೇನೆ. ಉತ್ತರ ಪ್ರದೇಶದ ಖಾಸಗಿ ಕ್ಲಿನಿಕಿನ ನಕಲಿ ವೈದ್ಯ ದಂಪತಿಗಳಿಬ್ಬರು ಭ್ರೂಣ ಹತ್ಯೆಯನ್ನೇ ದಂಧೆ ಮಾಡಿಕೊಂಡು ವ್ಯವಸ್ಥಿತವಾಗಿ ಅದನ್ನು ನಡೆಸುತ್ತಿದ್ದ ಬಗ್ಗೆ ಸಿರೀಸ್ ಒಂದನ್ನು ನೋಡಿದ್ದೆ. ಗಂಡು ಭ್ರೂಣವಾದರೆ ತಾಯಿಯ ಫೈಲಿನ ಮೇಲೆ ಪೆನ್ಸಿಲ್ಲಿನಲ್ಲಿ 6 ಎಂದೂ(6 ಇಂಗ್ಲೀಷಿನ b ಅಕ್ಷರವನ್ನು ಹೋಲುವುದರಿಂದ... boy ಎಂಬರ್ಥದಲ್ಲಿ) ಅದೇ ಹೆಣ್ಣಾದರೆ 9 ಎಂದೂ (9 ಇಂಗ್ಲೀಷಿನ g ಅಕ್ಷರವನ್ನು ಹೋಲುವುದರಿಂದ.... girl ಎಂಬರ್ಥದಲ್ಲಿ) ಬರೆದು ಆ ಮೂಲಕ ಸೂಚ್ಯವಾಗಿ ಮಗುವಿನ ಲಿಂಗವನ್ನು ಪೋಷಕರಿಗೆ ತಿಳಿಸಿ ಗರ್ಭಪಾತ ಮಾಡಿಸುವ ವ್ಯವಸ್ಥಿತ ಜಾಲ ಈ ದಂಪತಿಗಳು. ಕೊನೆಗೆ ಪೋಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸತ್ಯ, ಈ ದಂಪತಿಗಳು ಗರ್ಭಪಾತ ಮಾಡಿಸಿದ ಭ್ರೂಣಗಳಲ್ಲಿ ಹಲವಾರು ಗಂಡುಭ್ರೂಣಗಳೂ ಇದ್ದವು ಎಂಬುದು.

ಮಾಹಿತಿ ಕೃಪೆ:

http://www.legalserviceindia.com/legal/article-777-the-evil-of-female-foeticide-in-india-causes-consequences-and-prevention.html

https://www.youthkiawaaz.com/2017/10/uttar-pradeshs-missing-girls-choked-to-death-drowned-or-simply-abandoned-to-die/

https://www.indiatoday.in/india/story/gender-bias-kills-over-200-000-girls-in-india-each-year-lancet-1234138-2018-05-15

https://m.timesofindia.com/india/Female-feticide-rampant-in-UP-Census-2011/articleshow/20340672.cms

https://pdfs.semanticscholar.org>

https://www.sascv.org>ijcjs

https://www.researchgate.net/publication/215590009_'Death_Before_Birth'_-_A_Study_on_Female_Foeticide_in_India

https://www.researchgate.net/publication/328064213_Born_to_Die_Female_infanticide_and_Feticide_An_Analysis_of_India

ಇದರೊಂದಿಗೆ ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಯ ಸಂಚಿಕೆಗಳು, ಎಂದೋ ವೃತ್ತಪತ್ರಿಕೆಗಳಲ್ಲಿ ಓದಿದ ಮಾಹಿತಿಗಳು, ಕೆಲವು ಸ್ನೇಹಿತರಿಂದ ಕೇಳಿ ತಿಳಿದ ಮಾಹಿತಿಗಳು ಎಲ್ಲವನ್ನೂ ವಿಮರ್ಶಿಸಿ ಹೆಣೆದ ಕಥೆ ಇದು. ನೀಡಿದ ಮಾಹಿತಿಗಳೆಲ್ಲವೂ ನಿಜವೇ. ಕಥೆಯ ಪಾತ್ರಗಳ ಹೆಣಿಗೆ ಹಾಗೂ ಬೆಳವಣಿಗೆ ಮಾತ್ರ ನನ್ನ ಕಲ್ಪನೆ.

ಧನ್ಯವಾದಗಳು

1 ಕಾಮೆಂಟ್‌:

  1. ಸಿಯಾ ನೇರವಾಗಿ ಹೃದಯ ಪ್ರವೇಶಿಸಿಬಿಟ್ಟಳು. ಅವಳ ಧೈರ್ಯ ಅವಳ attitude. ಆ ಜನರ ಮಧ್ಯೆ ಅವಳು ಬಂಡಾಯಗಾರ್ತಿಯಾಗಿ ಬೆಳೆಯಲೇ ಬೇಕು. Ultrasonography ಅಲ್ಲೂ ಒಮ್ಮೊಮ್ಮೆ ಏನಾಗುತ್ತೆ ಅಂದ್ರೆ ಮಗು ಮಡಿಚಿಕೊಂಡಿದ್ರೆ ಲಿಂಗ ಪತ್ತೆ ಹೇಳುವುದು ಸಾಧ್ಯವಿಲ್ಲ. ವಿದೇಶದಲ್ಲಿ ಲಿಂಗ ಪತ್ತೆ ಕಾಮನ್. ಅಲ್ಲಿ ಬೃಣ ಹತ್ಯೆ ಇಲ್ಲವಲ್ಲ ಹಾಗಾಗಿ. ನಮ್ಮ ದೇಶಕ್ಕೆ ಈ ಕಾನೂನು ಮುಖ್ಯವೇ ಸರಿ. ಇಲ್ಲಾಂದ್ರೆ ಹೆಣ್ಣು ಸಂತಾನ ಇರುತ್ತಿರಲಿಲ್ಲ ಅನ್ಸುತ್ತೆ

    ಪ್ರತ್ಯುತ್ತರಅಳಿಸಿ