ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 1

ಹೇ….. ಬೆಳದಿಂಗಳೇ…...


ಮೂಡಣದ ಮಡಿಲಿಂದ ನೇಸರ ಮೈಮುರಿದು ಜಡ ಕೊಡವಿ ಜಗಕೆಲ್ಲ ಸುಪ್ರಭಾತ ಹಾಡುತ್ತಾ ಮೆಲ್ಲಮೆಲ್ಲನೆ ಧಾವಿಸುತ್ತಿರುವ ಸುಂದರ ಮುಂಜಾವದು.....‌....
ಬಾಂದಳದಲ್ಲಿ ಆ ಉಷೆಯ ಪ್ರಭಾವಳಿಗೆ ಮನಸೋತ ಹಸಿರು ಹಾಸಿನ ಮೇಲಣ ಇಬ್ಬನಿಯ ಬಿಂದುಗಳು ಫಳಫಳನೆ ಹೊಳೆಯುತ್ತಿದ್ದವು.... 
ಅರಳಿ ನಿಂತು ನಗುತ್ತಿದ್ದ ಪಾರಿಜಾತದ ಕಂಪು ಬೀಸುತ್ತಿದ್ದ ಮಂದಾನಿಲದೊಂದಿಗೆ ಬೆರೆತು ಸುತ್ತಲಿನ ಪರಿಸರವೆಲ್ಲಾ ಆಹ್ಲಾದಗೊಂಡಿತ್ತು.... 
ಬಾನಾಡಿಗಳ ಚಿಲಿಪಿಲಿ ಇಂಚರ... ಪ್ರಕೃತಿ ದೇವಿಯ ನೈಸರ್ಗಿಕ ಸಂಗೀತ.... ಕೇಳಲೂ ಬಲು ಇಂಪು.....

ಬೆಳ್ಳಕ್ಕಿಗಳು ಹಿಂಡು ಹಿಂಡಾಗಿ ಕ್ಷಣದೊಳಗೆ ಹಾರುವಿಕೆಯ ವಿನ್ಯಾಸ ಬದಲಿಸುತ್ತಾ ಬಾನಲ್ಲಿ ಕವಾಯತು ಪ್ರದರ್ಶಿಸುತ್ತಿದ್ದವು ........

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ 
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

ಈ ಬೆಳ್ಳಕ್ಕಿಗಳ ಇಂತಹ ಅತ್ಯದ್ಬುತ ಕಲೆಯನ್ನು ನೋಡಿ ಪರವಶರಾಗಿಯೇ ಕುವೆಂಪುರವರು ಪರಮಾತ್ಮನೇ ಸಹಿ ಮಾಡಿದ ಎಂದುದಲ್ಲವೇ.....?
ಬೆಳ್ಳಕ್ಕಿಗಳ ಕಲೆಗೂ, ಅವರ ಹೋಲಿಕೆಗೂ ಅದೆಂತಹ ಚೆಂದದ ಸಾಮ್ಯತೆ......

ನಾನೂ ಬೆಳ್ಳಕ್ಕಿಗಳ ಸಾಲಿನೊಳಗೊಬ್ಬನಾಗಿ ಪ್ರಕೃತಿಯ ಆಸ್ವಾದನೆಯಲ್ಲಿ ಲೀನನಾಗಿ ಕವಿಯ ಕಲ್ಪನೆಯಲ್ಲಿ ಕಳೆದೇ ಹೋಗಿದ್ದೆ..... ಎಂತಹಾ ದಿವ್ಯ ಅನುಭೂತಿಯದು...... ಅನುಭವಿಸಿದಾಗಲಷ್ಟೇ ತಿಳಿಯುವುದು...... ಸುತ್ತಮುತ್ತಲಿನ ವಿವಿಧ ಬಗೆಯ ಸುಮಗಳ ಕಂಪನ್ನು ಹೊತ್ತು ತರುವ ಸುಳಿಗಾಳಿಯನ್ನು ಒಮ್ಮೆ ನಾಸಿಕದಿಂದ ಸೆಳೆದು ಆಘ್ರಾಣಿಸಿ ಶ್ವಾಸಕ್ಕಿಳಿಸಿದರೇ........ ಆಹಾ...... ಆ ಅನುಭೂತಿಯೇ ಬೇರೆ....... ಅದೊಂದು ತಾಧ್ಯಾತ್ಮವೇ ಸರಿ.....

ಇದೆಲ್ಲವೂ ಅವಳು ಕಲಿಸಿಕೊಟ್ಟ ಪರಿಪಾಠ. ಪ್ರಕೃತಿಯಲ್ಲಿ ಲೀನವಾಗುವ ಪರವಶತೆ ಎಂತಹುದೆಂದು ತೋರಿಸಿಕೊಟ್ಟವಳೇ ಅವಳು....... 

"ಮುಂಜಾವಿನ ಮಂಜಹನಿಗಳೊಂದಿಗೆ ಕ್ಷಿತಿಜದಂಚಿಂದ ಹೊರಗಿಣುಕುವ ಸೂರ್ಯ ರಶ್ಮಿಯ ಚಿನ್ನಾಟವನ್ನು ನೋಡುತ್ತಾ ದಿನವನ್ನಾರಂಭಿಸಿ, ಸಂಜೆಯ ಗೋಧೂಳಿ ಪ್ರಭಾವಳಿಯಲ್ಲಿ ಸಂಧ್ಯೆಯ ಕೆಂಬಣ್ಣದ ಓಕುಳಿಯಲ್ಲಿ ಮಿಂದು ನಾಚಿದ ಬಾನಿಗೆ ತಂಪೆರೆದು ಬೆಳದಿಂಗಳ ಮಳೆ ಸುರಿವ ಶಶಿಯ ಆಗಮನವನ್ನು ಕಣ್ತುಂಬಿಕೊಂಡು ದಿನ ಮುಗಿಸಿದರೇ........ ಬದುಕೆಷ್ಟು ಪ್ರಶಾಂತ ........!!" ಅವಳದೇ ನುಡಿಗಳು..... 

ನನ್ನ ಪ್ರತೀ ಬೆಳಗು ಬೈಗುಗಳೂ ಅವಳ ನೆನಪಿಂದಲೇ ಆರಂಭಗೊಂಡು ಅವಳಿಂದಲೇ ಅಂತ್ಯವಾಗುತ್ತವೆ...... ನೆನಪು???? ಇಲ್ಲ...... ನೆನೆಯಲು ಅವಳನ್ನು ಮರೆತಿದ್ದರಲ್ಲವೇ? ಇಲ್ಲೇ ಇರುವಳವಳು..... ನನ್ನ ಸುತ್ತಮುತ್ತ...... ನನ್ನೊಂದಿಗೆ....... ನನ್ನ ಉಸಿರಾಟದಲ್ಲಿ....... ನನ್ನ ಕನಸುಗಳಲ್ಲಿ....... ನನ್ನ ಮನಸಲ್ಲಿ...... 

ಬಾನಂಗಳದಲ್ಲಿನ ಬೆಳ್ಳಕ್ಕಿಗಳ ಚಮತ್ಕಾರವನ್ನು ಕಾಣುತ್ತಾ ಅವಳ ಧ್ಯಾನದಲ್ಲಿ ತುಟಿಯಂಚಿನಲ್ಲಿ ನಗುತ್ತಿದ್ದ ನನ್ನ ಧ್ಯಾನಕ್ಕೆ ಭಂಗ ತಂದಿದ್ದು ಜೋ.....

ಅವಳ ಸುಶ್ರಾವ್ಯ ಕಂಠದ ಮಧುರ ಗಾನ ಕೇಳಿ ಇಹಕ್ಕಿಳಿದಿದ್ದೆ ನಾನು.....

ಅಮ್ಮಾ..... ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ...

ಅಡುಗೆ ಕೋಣೆಯಿಂದ ಕೇಳಿ ಬರುತ್ತಿತ್ತು ಧ್ವನಿ. ಅದನ್ನು ಹಿಂಬಾಲಿಸಿ ಪಾಕಶಾಲೆಯತ್ತ ಮುಖ ಮಾಡಿದೆ...

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ ಎಂದು ತೋರಲು......
ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ...

ಸದ್ದಿಲ್ಲದೇ ಅಡುಗೆಮನೆಯ ಬಾಗಿಲಿಗೆ ಬಂದು ನಿಂತೆ. ಏನೋ ಬ್ರಹ್ಮಾಂಡವಾದ 'ಜೋ ಪಾಕ'ವೇ ತಯಾರಾಗುತ್ತಿದೆ ಎಂದು ಸುತ್ತಿ ಬಂದ ಪರಿಮಳವೇ ಸಾರಿತು.... ಅವಳ ಹಾಡು ಮುಂದುವರೆದಿತ್ತು...

ಕೃತಕ ದೀಪ ಕತ್ತಲಲ್ಲಿಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ
ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ...

ಅಂತರಂಗದಲ್ಲಿ ನೂರು ಕಗ್ಗತ್ತಲ ಕೋಣೆ 
ನಾದ ಬೆಳಕ ತುಂಬಲು ಮಿಡಿದ ಹಾಗೆ ವೀಣೆ......
ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ......

ಯಾವ ತರಬೇತಿ ಪಡೆಯದಿದ್ದರೂ ಒಳ್ಳೆಯ ಹಾಡುಗಾರ್ತಿ ಅವಳು. ಸ್ವರಗಳ ಆಲಾಪನೆ, ಏರಿಳಿತ, ರಾಗ, ತಾಳಗಳ ಜ್ಞಾನ ಜನ್ಮಜಾತವಾಗಿ ಬಂದಿತ್ತು ಅವಳ ಅಮ್ಮನಿಂದ. ಅವಳ ಹಾಡು ಕೇಳುತ್ತಿದ್ದರೆ ಮನಸ್ಸು ಮುದಗೊಳ್ಳುತ್ತದೆ. 

ಹಾಡಿನೊಂದಿಗೆ ಬೆಳಗ್ಗಿನ ತಿಂಡಿಯ ತಯಾರಿ ಮುಗಿಸಿ ಹಿಂತಿರುಗಿದವಳು ಬಾಗಿಲಲ್ಲಿ ನನ್ನ ಕಂಡು ಹುಬ್ಬೇರಿಸಿದಳು.

"ವಾಟ್ಸ್ ಅಪ್? ಏನು ಕಳ್ಳನ ತರ ಅಡುಗೆ ಕೋಣೆ ಬಾಗಿಲಲ್ಲಿ ನಿಂತಿದ್ದೀಯಾ? ಒಳಗೆ ಬಂದ್ರೆ ಎಲ್ಲಿ ಅಡುಗೆ ಕೆಲಸ ನಿನ್ನ ತಲೆ ಮೇಲೆ ಬೀಳುತ್ತೋ ಅನ್ನೋ ಭಯನಾ ಬೇಬಿ...?" ಮೂತಿ ತಿರುವಿ ಕೇಳಿದಳು...

"ನೋಪ್.... ಐ ಡೋಂಟ್ ಬ್ರೇಕ್ ರೂಲ್ಸ್. ಈ ವಾರ ಅಡುಗೆ ಮನೆ ಜವಾಬ್ದಾರಿ ನಿಂದು. ನಾನ್ಯಾಕೆ ಮಧ್ಯೆ ಬರಲೀ. ಏನೋ ಅಲ್ಪಸ್ವಲ್ಪ ಚೆನ್ನಾಗಿ ಹಾಡ್ತಿದ್ಯಲ್ಲಾ.... ಅದನ್ನು ಕೇಳಿಕೊಂಡು ನಿಂತಿದ್ದೇ ಅಷ್ಟೇ...." ಹೇಳಿದೆ.

"ಏನೂ.....? ಅಲ್ಪಸ್ವಲ್ಪ ಚೆನ್ನಾಗಿಯಾ? ಬೇಡಾ ದೇವ್... ನನ್ನ ಪಿತ್ತ ನೆತ್ತಿಗೇರಿಸಬೇಡ. ಚೆನ್ನಾಗಿರೋಲ್ಲ ಆಮೇಲೆ..." ವಾರ್ನಿಂಗ್ ಕೊಟ್ಟರು ಮೇಡಂ.

"ಓಹ್... ಜೋ....! ಪ್ಲೀಸ್ ಕಣೇ... ಹೀಗೆಲ್ಲಾ ಹೇಳಿ ಹೆದರಿಸಬೇಡ ಈ ಬಡಪಾಯಿನ. ಭಯ ಆಗುತ್ತೆ ನನಗೆ.." ಎಂದವನೇ ಜೋರಾಗಿ ನಗಲಾರಂಭಿಸಿದೆ. ಇದು ನಿಜಕ್ಕೂ ಬೇಕಿತ್ತಾ ನನಗೆ? ಅವಳಿಗೆ ಕೋಪ ಮೂಗಿನ ತುದಿಯಲ್ಲಲ್ಲ .... ಮೂಗಿನ ಬುಡದಲ್ಲೇ.... 

ಸುತ್ತಮುತ್ತ ನೋಡಿದವಳೇ ಕಾವಲಿ ಹುಟ್ಟು ಎತ್ತಿಕೊಂಡು ಎಸೆದೇಬಿಟ್ಟಳು. ಅದು ನನ್ನನ್ನು ತಾಕುವ ಮುನ್ನವೇ ಕಾಲಿಗೆ ಬುದ್ಧಿ ಹೇಳಿ ಬಚಾವಾಗಿದ್ದೆ. 

ಸ್ನಾನ ಮುಗಿಸಿ ತಯಾರಾಗಿ ಕಳ್ಳಹೆಜ್ಜೆಯಲ್ಲಿ ಡೈನಿಂಗ್ ಟೇಬಲಿಗೆ ಬಂದೆ. ಟೇಬಲ್ ಖಾಲಿ...!! ಯಾವಾಗಲೂ ತಿಂಡಿ ತಯಾರಿಸಿ ಟೇಬಲ್ಲಿನ ಮೇಲೆ ಚೆಂದ ಜೋಡಿಸಿರುತ್ತಾಳೆ ಜೋ.... ಇಂದು ಇಷ್ಟು ಹೊತ್ತಾದರೂ ಏನೂ ಸುಳಿವಿಲ್ಲ.... 
'ಬೇಕಿತ್ತಾ ಮಗನೇ‌ ರೇಗಿಸೋ ಕೆಲಸ... ಅನುಭವಿಸು ಈಗ...' ನನಗೆ ನಾನೇ ಉಗಿದುಕೊಳ್ಳುವ ಹೊತ್ತಿಗೆ ಅಶ್ರಫ್ ನ ಸವಾರಿ ಚಿತ್ತೈಸಿತು. 

"ಕ್ಯಾ ಭಾಯ್? ಇವತ್ತು ಏಕಾದಶಿ ಕಾ ಉಪವಾಸನಾ?" ಅಣಕಿಸಿದ. ಅವನಿಗೆ ಉಗಿದು ಉಪ್ಪಿನಕಾಯಿ ಹಾಕಬೇಕೆಂದು ತಯಾರಾಗುವಷ್ಟರಲ್ಲಿ ಬಿರುಗಾಳಿಯಂತೆ ಬಂದು ಎದುರಿಗೆ ಬಟ್ಟಲು ಕುಕ್ಕಿದವಳು ಅಶ್ರಫ್ ಎದುರಿಗೆ ನಿಧಾನವಾಗಿ ಸದ್ದಾಗದಂತೆ ಬಟ್ಟಲು ಇಟ್ಟಳು. 

ಇದರರ್ಥ ಜ್ಯೋತ್ಸ್ನಾ ದೇವಿಯವರಿಗೆ ಈ ಭಕ್ತನ ಮೇಲೆ ಕೋಪ ಬಂದಿದೆ ಎಂದು. ಅವಳು ತಿಂಡಿ ತರಲು ಒಳ ಹೋದಾಗ ಇನ್ನಷ್ಟು ಅಣಕಿಸಿದ ಅಶ್ರಫ್. ಕೆಂಡದಡ್ಯೆ (ತುಳುನಾಡು ಹಾಗೂ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಸವತೆಕಾಯಿಯಿಂದ ಮಾಡುವ ಒಂದು ಬಗೆಯ ಖಾದ್ಯ. ಕೆಳಮೈ ಹಾಗೂ ಮೇಲ್ಮೈಗಳೆರಡನ್ನೂ ಕೆಂಡದಲ್ಲಿ ಬೇಯಿಸುವುದು ಇದರ ವಿಶೇಷ) ಹಾಗೂ ತುಪ್ಪ ತಂದು ಟೇಬಲ್ಲಿನ ಮೇಲಿಟ್ಟು ತಾನೂ ತಟ್ಟೆಯೊಂದಿಗೆ ಬಂದು ಕುಳಿತಳು. ಈ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ, ತಿಂಡಿ ಮಾಡುವುದು ಅಲಿಖಿತ ನಿಯಮ. ಇದನ್ನು ಜಾರಿಗೆ ತಂದವಳು....... ಹೋಗಲಿ ಬಿಡಿ......

"ಜೋ......!!" ರಾಗ ಎಳೆದೆ. ತಿನ್ನುತ್ತಿದ್ದವಳು ತಲೆ ಎತ್ತಿ ಏನೆಂಬಂತೆ ನನ್ನನ್ನೇ ನೋಡಿದಳು.

"ಈ ಮೌನ ನಿನಗೆ ಹೇಳಿ ಮಾಡಿಸಿದ್ದಲ್ಲ. ನನ್ನ ಜೋ ವಟವಟ ಅಂತಿದ್ದರೇನೇ ಅವಳಿಗೊಂದು ಶೋಭೆ, ಪ್ರಭೆ. ಏನಾದರೂ ಮಾತಾಡೇ...." ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲ. ನಾನೇ ಕೋಪ ಕೆರಳಿಸಿದ್ದು, ಈಗ ಸಮಾಧಾನವೂ ನನ್ನಿಂದಲೇ ಆಗಬೇಕಲ್ಲವೇ.... ? ಮತ್ತದು ನನಗೆ ಅತೀ ಪ್ರಿಯವಾದ ಕೆಲಸ.... ಅವಳನ್ನು ರೇಗಿಸಿ, ಅವಳಿಂದ ಉಗಿಸಿಕೊಂಡು, ಕೋಪಗೊಂಡವಳನ್ನು ಸಮಾಧಾನಿಸುವುದು.... 

ಅಖೈರಿಗೆ ತಿಂಡಿ ಮುಗಿಯುವಾಗ ಮತ್ತೆ ಬೆಳದಿಂಗಳು ಸುರಿಯತೊಡಗಿತ್ತು.


                   ****************


"ದೇವ್.....!! ಏನು ಯೋಚನೆ ಮಾಡ್ತಿದ್ದೀಯಾ ಡ್ಯೂಡ್? ಆಗ್ಲಿಂದ ಗಂಟಲು ಕಿತ್ತೋಗೋ ಹಾಗೆ ಅರಚ್ಕೋತಿದ್ದೀನಿ. ಕೇಳಲ್ವಾ ನಿಂಗೆ?" ಸೊಂಟದ ಮೇಲೆ ಒಂದು ಕೈ ಇಟ್ಟು, ಇನ್ನೊಂದು ಕೈಯಲ್ಲಿ ಸೌಟು ಹಿಡಿದು, ಎರಡೂ ಹುಬ್ಬುಗಳನ್ನು ಸಂಕುಚಿತಗೊಳಿಸಿ ತೀಕ್ಷ್ಣ ನೋಟ ಬೀರಿದಳು ಜೋ......

ಎಲ್ಲಾ ಅವಳದೇ ತದ್ರೂಪು....ಗುಣ, ನಡವಳಿಕೆ, ನಡಿಗೆ ಮಾತನಾಡುವ ಶೈಲಿ, ಆ ಗುರಾಯಿಸುವ ಚೂಪು ನೋಟ.... ಅವಳೂ ಹೀಗೇ ಜಗಳಕ್ಕೆ ನಿಲ್ಲುತ್ತಿರಲಿಲ್ಲವೇ ನನ್ನೊಂದಿಗೆ....? ಅವಳ ನೆನಪಾಯಿತು......... ಅದರೊಂದಿಗೆ ಮಂದಸ್ಮಿತವೊಂದು ತುಟಿಯಂಚನ್ನು ಸವರಿತು.

"ಯಪ್ಪಾ!! ಆ ತರ ನಗಬೇಡವೋ ಮಾರಾಯ. ನನ್ನ ದೃಷ್ಟಿನೇ ಬೀಳುತ್ತೆ ನಿಂಗೆ. ಮೈ ಹ್ಯಾಂಡ್ಸಮ್ ದೇವ್. ಏನು ಗೊತ್ತಾ? ನನ್ನ ಗರ್ಲ್ ಫ್ರೆಂಡ್ಸ್ ಎಲ್ಲಾ ನಾನು ಹೇಗಿದ್ದೀನಿ ಅಂತ ಕೇಳದಿದ್ರೂ ದಿನಾ ನಿನ್ನ ವಿಚಾರಿಸ್ತಾರೆ. ಅವರ ಕಣ್ಮುಂದೆ ಹೀಗೆಲ್ಲಾ ನಗಬೇಡ ಆಯ್ತಾ?" ಮುದ್ದಾಗಿ ದೃಷ್ಟಿ ತೆಗೆದು ಹೇಳಿದಳು.

"ವಾವ್ ಜೋ....... ಕೇಳೋಕೆ ಎಷ್ಟೊಂದು ಖುಷಿಯಾಗ್ತಿದೆ. ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲಾ ನೋಡೋಕೆ ಚೆನ್ನಾಗಿದ್ದಾರಲ್ಲ...... ಒಂದ್ಕೆಲ್ಸ ಮಾಡು. ನಾಳೆ ಎಲ್ಲರನ್ನು ಊಟಕ್ಕೆ ಮನೆಗೆ ಕರ್ದುಬಿಡು. ಪರಿಚಯ ಮಾಡ್ಕೋತೀನಿ" ಅವಳನ್ನು ರೇಗಿಸದೇ ಇದ್ದರೆ ಸಮಾಧಾನವಿಲ್ಲ ನನಗೆ.

"ದೇವ್" ಸೌಟನ್ನು ನನ್ನೆಡೆಗೆ ಎಸೆದು ಅರಚಿದಳು.

ಅದನ್ನು ಒಂದು ಕೈಯಲ್ಲಿ ಹಿಡಿದು, "ಯಾಕೆ ಜೋ ಹೀಗೆ ಕಿರಚ್ತಾ ಇದ್ದೀಯಾ?" ಅಮಾಯಕನಂತೆ ಕೇಳಿದೆ.

"ನನ್ನ ಸ್ನೇಹಿತೆಯರೆಲ್ಲಾ ನೋಡೋಕೆ ಚೆನ್ನಾಗಿದ್ದಾರೆ. ಆದ್ರೆ ನಿನ್ನ ಮುಸುಡಿ ನೋಡ್ಕೋ ಕನ್ನಡಿಲೀ. ಎಲ್ಲಾ ನಿನ್ನ 'ಅಂಕಲ್' ಅಂತ ಕರೀತಾರೆ. ಅಷ್ಟು ವಯಸ್ಸಾಗಿದೆ. ನಿಂಗೆ ನನ್ನ ಫ್ರೆಂಡ್ಸ್ ಪರಿಚಯ ಬೇಕಾ? ಏನ್ ಕಿಂಡಲ್ಲಾ?" ಸೇರಿಗೆ ಸವ್ವಾಸೇರು ಅವಳದು.‌

"ಈಗಷ್ಟೇ ಯಾರೋ 'ದೃಷ್ಟಿಯಾಗುತ್ತೆ, ಮೈ ಹ್ಯಾಂಡ್ಸಮ್ ದೇವ್' ಅಂತೆಲ್ಲಾ ಹೇಳ್ತಿದ್ರು. ಅಷ್ಟು ಬೇಗ ಅಂಕಲ್ ಆದ್ನಾ? ನಾನು ನನ್ನ ಅಭಿಮಾನಿಗಳ ಹತ್ರ ಮಾತಾಡಿದ್ರೇ ತಮಗೇನೋ?" ಮತ್ತಷ್ಟು ಕೆಣಕಿದೆ.

ಮರುನುಡಿಯದೇ ಕೋಣೆಗೆ ಹೋಗಿಬಿಟ್ಟಳು. ಅರೇ..... ಅಂದರೆ...... ನನಗೆ ಏನೋ ಕಾದಿದೆ.... 
ಅಂದುಕೊಂಡಂತೆಯೇ ಆಯಿತು.....
ಹತ್ತು ನಿಮಿಷದಲ್ಲಿ ತಯಾರಾಗಿ ತನ್ನ ಹ್ಯಾಂಡ್ ಬ್ಯಾಗ್ ಹಿಡಿದು ಬಂದಳು.

"ಜೋ.... ಇನ್ನೂ ಅಡಿಗೆ ಆಗಿಲ್ಲ........" ಮೆಲ್ಲಗೆ ಹೇಳಿದಾಗ ಬಾಗಿಲತ್ತ ಹೋದವಳು ವಾಪಾಸಾದಳು. ಟೇಬಲ್ ಮೇಲಿದ್ದ ಸೌಟು ಕೈಗಿತ್ತು, "ಮಾಡ್ಕೊಂಡು ತಿನ್ನು. ನನಗೇನು ಬೇಡ. ಹೊರಗೆ ತಗೋತೀನಿ" ಎಂದುಬಿಟ್ಟಳು. 

ನನಗೆ ಮುಂಚೆಯೇ ಗೊತ್ತಿತ್ತು ಇದು ಹೀಗೆ ಏನಾದರೂ ಆಗುವುದೆಂದು. ಅವಳಮ್ಮನದೇ ಬುದ್ಧಿ ಅವಳಿಗೆ. ಎಲ್ಲಾ ತಿಳಿದೂ ನನಗ್ಯಾಕೆ ಬೇಕಿತ್ತು ಈ ರೇಗಿಸುವ ಕೆಲಸ?

"ಇದು ಮೋಸ..... ಈ ವಾರ ಅಡಿಗೆ ನಿಂದು, ಕ್ಲೀನಿಂಗ್ ನಂದು ತಾನೇ? ಕ್ಲೀನಿಂಗ್ ಕೆಲಸ ಎಲ್ಲಾ ಆಗಿದೆ. ಈಗ ನಿನ್ನ ಕೆಲಸ ನನ್ನ ಮೇಲೆ ಹಾಕ್ತಿದ್ದೀಯಾ? ದಿಸ್ ಈಸ್ ನಾಟ್ ಫೇರ್ ಜೋ" ಸಿಟ್ಟು, ಬೇಸರ ಒಟ್ಟಾಗಿದ್ದ ಧ್ವನಿಯಲ್ಲಿ ಹೇಳಿದೆ. ಇರಲಾರದೇ ಇರುವೆ ಬಿಟ್ಟಕೊಂಡ ನನ್ನ ಮೇಲೆ ನನಗೇ ಬೇಸರವಾಗಿತ್ತು. ನಿಜಕ್ಕೂ ಅಡುಗೆ ಮಾಡುವುದರಲ್ಲಿ ಕಳ್ಳ ನಾನು. ಅವಳಾದರೆ ರುಚಿಕಟ್ಟಾಗಿ ಮಾಡುತ್ತಾಳೆ. ಅದಕ್ಕಾಗಿಯೇ ಯಾವಾಗ ಅವಳ ಪಾಳಿ ಬರುತ್ತದೆಯೋ ಎಂದು ಕಾಯುವವನು ನಾನು....

"ತರಬೇತಿ ದೇವ್. ನಾಳೆ ನನ್ನ ಗರ್ಲ್ ಫ್ರೆಂಡ್ಸ್ ಮನೆಗೆ ಬಂದಾಗ ನಿನ್ನ ಅಡುಗೆಯಿಂದಾಗಿ ನನ್ನ ಮರ್ಯಾದೆ ಹೋಗ್ಬಾರ್ದಲ್ಲ. ಅದಕ್ಕೇ ಈಗಿಂದಲೇ ಪ್ರಾಕ್ಟೀಸ್ ಮಾಡಿಕೋ. ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಅಂತ ಹೇಳಲ್ವಾ? ಚೆನ್ನಾಗಿ ಪ್ರಾಕ್ಟೀಸ್ ಮಾಡು ಆಯ್ತಾ. ಬಾಯ್" ಎಂದು ಹಾರಿಹೋದಾಗ ಬೆಪ್ಪಾಗಿ ತಲೆಯ ಮೇಲೆ ಕೈ ಹೊರುವುದಷ್ಟೇ ಬಾಕಿ ಉಳಿದದ್ದು......

ಸುಮ್ಮನೆ ಇರಲಾರದೇ ಅವಳನ್ನು ರೇಗಿಸಲು ಹೋಗಿ ಅಡುಗೆ ಕೆಲಸನೂ ತಲೆಮೇಲೆ ಎಳೆದುಕೊಂಡಿದ್ದೆ...... ಬೇಕಿತ್ತಾ ನನಗಿದು? ಪಾಕಶಾಲೆಯಲ್ಲಿ ಏನೇನಿದೆ ನೋಡೋಣ ಎಂದುಕೊಂಡು ಅಡುಗೆಮನೆಗೆ ನಡೆದೆ ಸಣ್ಣ ಮುಖದಲ್ಲಿ.

ಅಡುಗೆ ಕೋಣೆ ತುಂಬಾ ರಸಂ ಘಮಲು......
ಅರೇ... ನಾನಿನ್ನೂ ಅಡುಗೆ ಆರಂಭಿಸಿಲ್ಲ. ಮತ್ತೆಲ್ಲಿಂದ ಈ ಪರಿಮಳ? ಯಾಕೋ ಅನುಮಾನ... ಗ್ಯಾಸ್ ಸ್ಟವ್ ಪಕ್ಕದಲ್ಲಿ ಸಾಲಾಗಿ ಮುಚ್ಚಿಟ್ಟಿದ್ದ ಪಾತ್ರೆಗಳ ಮುಚ್ಚಳ ತೆರೆದೆ.... ಬಾಯಲ್ಲಿ ನೀರೂರಿತು‌...

ರಸಂ... ಪಕ್ಕದಲ್ಲಿ ಅನ್ನ, ಉಪ್ಪಾಡಚ್ಚಿರು(ಉಪ್ಪಲ್ಲಿ ನೆನೆಸಿಟ್ಟ ಹಲಸಿನ ತೋಳೆಯ ಪಲ್ಯ),ನನ್ನಿಷ್ಟದ ಶ್ಯಾವಿಗೆ ಪಾಯಸ ಬೇರೆ... ಅರೆ ಅಡುಗೆ ಪ್ರಾಕ್ಟೀಸ್ ಮಾಡು ಅಂತ ನನಗೆ ಆವಾಜ಼್ ಹಾಕಿ, ಅದ್ಯಾವ ಮಾಯದಲ್ಲಿ ಮಾಡಿದಳು!!! ಯೋಚಿಸುವಷ್ಟರಲ್ಲಿ ಫೋನು ಬಡಿದುಕೊಂಡಿತು. ಅವಳೇ...

"ಅಲ್ಲ ಜೋ, ನಾನು ಆರಾಮಾಗಿ ಪಲಾವ್, ಮೊಸರು ಬಜ್ಜಿ, ರೋಟಿ, ದಾಲ್ ಮಾಡ್ಕೋಳ್ಳೋಣ ಅಂದ್ಕೊಂಡ್ರೆ, ಅದ್ಯಾವ ಗ್ಯಾಪಲ್ಲಿ ಇದೆಲ್ಲಾ ಮಾಡಿಟ್ಯೇ? ಈಗ ಇದನ್ನೇ ತಿನ್ಬೇಕು. ಅನ್ಯಾಯವಾಗಿ ಪಲಾವ್, ರೋಟಿ ತಿನ್ನೋ ಭಾಗ್ಯನೂ ಕಿತ್ಕೊಂಡ್ಯಲ್ಲೇ " ಇಷ್ಟಾದರೂ ನಾಯಿ ಬಾಲ ಡೊಂಕು ಎಂಬಂತೆ ಮತ್ತೆ ಅವಳನ್ನು ರೇಗಿಸಲು ಹಮ್ಮಿನಿಂದ ನುಡಿದೆ.

"ಜಾಸ್ತಿ ಆಡಬೇಡ ನೀನು. ನಾನಿದನ್ನು ಮಾಡಿರ್ಲಿಲ್ಲ ಅಂದ್ರೆ ಕುಚ್ಚಲಕ್ಕಿ ಗಂಜಿ ಬೇಯಿಸಿ, ಉಪ್ಪಿನಕಾಯಿ ಹಾಕ್ಕೊಂಡು ಮೇಯ್ತಿದ್ದೆ. ಅಷ್ಟೇ ನಿನ್ನ ಕೆಪಾಸಿಟಿ. ನಮ್ಮ ದೇವರ ಸತ್ಯ ನಮಗೊತ್ತಿರಲ್ವಾ? ಸುಮ್ನೆ ತಿಂದು ಪಾತ್ರೆ ತೊಳ್ದು, ಅಡುಗೆ ಮನೆ ಕ್ಲೀನ್ ಮಾಡಿ ಬಿದ್ಕೋ....." ಬೈದು ಫೋನಿಟ್ಟಳು. 

ಜೋ ಬೈಗುಳದಿಂದ ಮತ್ತೆ ನೆನಪಾದಳು 'ಅವಳು'. ಮನೆತುಂಬ ತುಂಬಿದ್ದ ರಸಂ ಪರಿಮಳವೂ ಅವಳನ್ನೇ ನೆನಪಿಸಿತು.....ಈ ಮನೆ, ಮನ ಅವಳನ್ನೆಂದೂ ಮರೆಯಲಾರದು... ಎಷ್ಟಾದರೂ ಈ ಅಲೆಮಾರಿ ರಾಕ್ಷಸನನ್ನು ಮನುಷ್ಯನನ್ನಾಗಿಸಿ, ಕತ್ತಲ ಹಾದಿಗೆ ಕಂದೀಲಂತೆ ಬೆಳದಿಂಗಳ ತುಣುಕೊಂದನ್ನು ಕೈಗಿತ್ತು ಕಣ್ಮರೆಯಾದ ಶಾಪಗ್ರಸ್ತ ದೇವತೆ ಅವಳೇ ಅಲ್ಲವೇ..... 

ಅವಳ ನೆನಪು ಗಾಢವಾಗತೊಡಗಿತು...ಮನೆಯೊಳಗೆ ಇರಲಾರೆ ಎನಿಸಿ ಹೊರಬಂದೆ ನನ್ನ ಕೈತೋಟಕ್ಕೆ...... 
ಒಂದು ಬಾರಿ ಇಡೀ ತೋಟ ಸುತ್ತಿದೆ. ಒಳ ಹೋಗಲು ಮನಸಾಗದೇ ಅಲ್ಲೇ ಇದ್ದ ತಿಳಿನೀರ ಕೊಳದ ಬಳಿ ಕುಳಿತೆ ಮೀನುಗಳ ಚಿನ್ನಾಟ ನೋಡುತ್ತಾ...

ಇದು ನನಗೆ ಪ್ರಿಯವಾದ ಕೆಲಸ. ಸಮಯ ಸಿಕ್ಕಾಗಲೆಲ್ಲಾ ಅಲ್ಲಿ ಕುಳಿತು ಅವಳೊಂದಿಗಿನ ಕ್ಷಣಗಳನ್ನು ನೆನೆಯುವುದು ಹವ್ಯಾಸವೇ ನನಗೆ.... ಅವಳ ಯೋಚನೆಯಲ್ಲೇ ಮುಳುಗಿದ್ದವನಿಗೆ ತಟ್ಟನೇ ಏನೋ ಭಾಸವಾದಂತಾಯಿತು...... ನೀರನ್ನೇ ದಿಟ್ಟಿಸಿ ನೋಡಿದೆ. ಅಚ್ಚರಿಯಾಯಿತು.... ಮತ್ತೆ ದಿಟ್ಟಿಸಿದೆ.

ಹೌದು......

ನೀರಲ್ಲಿನ ಪ್ರತಿಬಿಂಬದಲ್ಲಿ ಕಂಡಿದ್ದ ಅವನು.....

ಅವನೇ.......

ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನೊಳಗಿದ್ದ ರಾಕ್ಷಸ........

ಅವನೊಂದಿಗೆ ನನ್ನ ಬದುಕಿನ ಅಸ್ಮಿತೆಯಾದವಳೂ ನೆನಪಾದಳು......

ವರ್ತಮಾನದ ವಾಸ್ತವ ಹಿನ್ನೆಲೆಗೆ ಸರಿದು ಕಳೆದು ಹೋದ ದಿನಗಳು ವೇಗವಾಗಿ ಮುನ್ನೆಲೆಗೆ ಧಾವಿಸತೊಡಗಿತ್ತು....

ಸಶೇಷ

ನಲ್ಮೆಯ ಓದುಗರೇ, ಈ ಕಿರು ಕಾದಂಬರಿಯನ್ನು ಸ್ವಲ್ಪ ಭಿನ್ನವಾದ ನಿರೂಪಣಾ ಶೈಲಿಯಲ್ಲಿ ರಚಿಸಲು ಯತ್ನಿಸಿರುವೆ. ಪ್ರತೀ ಸಂಚಿಕೆಗೂ ಅದರದೇ ಆದ ಪ್ರತ್ಯೇಕ ಶೀರ್ಷಿಕೆ ಇರುತ್ತದೆ. ಅವನ ಕಥೆಯ ಸಂಚಿಕೆಗಳನ್ನು ಅವನು ನಿರೂಪಿಸಿದರೆ ಅವಳ ಕಥೆಯನ್ನು ಅವಳು ನಿರೂಪಿಸುತ್ತಾರೆ. ಇಬ್ಬರೂ ಇರುವ ಸಂಚಿಕೆಗಳನ್ನು ಒಟ್ಟಾಗಿ ನಿರೂಪಣೆ ಮಾಡುತ್ತಾರೆ.
ಅವನು ಯಾರು, ಅವಳು ಯಾರು, ಅವನಿಗೇನಾಗಬೇಕು, ಜೋ ಯಾರು, ಅಶ್ರಫ್ ಯಾರು.... ಹೀಗೆ ಕೆಲವು ಗೊಂದಲಗಳು ಉಂಟಾಗಬಹುದು ಇಂದಿನ ಸಂಚಿಕೆಯಲ್ಲಿ. ಮುಂದೆ ಕಥೆ ತೆರೆದುಕೊಂಡಂತೆ ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ.... ಸಮಾಧಾನದಿಂದ ಓದುವಿರಲ್ಲಾ? 

ನಿಮ್ಮ ವಿಮರ್ಶೆಗಳಿಗೆ ಸದಾ ಸ್ವಾಗತ...

ಧನ್ಯವಾದಗಳು......

1 ಕಾಮೆಂಟ್‌:

  1. ಕಥೆಯನ್ನು ಮತ್ತೆ ಮೊದಲಿನಿಂದ ಓದುವ ಬಯಕೆಯಾಯಿತು. ಬಹಳ ದಿನ ಆಗಿತ್ತಲ್ಲ. ಹಲವಾರು ಮಾಹಿತಿ ಬಿಟ್ಟು ಹೋಗಿದೆ. ಹಾಗಾಗಿ ಶುರು ಮಾಡಿದೆ. ಸ್ವಲ್ಪ ಬದಲಾವಣೆ ತಂದಿದ್ದೀರೇನೋ ತಿಳಿಯುತ್ತಿಲ್ಲ. ಅಥವಾ ನಾನು ಮೊದಲು ಪದ್ಯಗಳಿಗೆ ಒತ್ತು ಕೊಡುತ್ತಿರಲಿಲ್ಲ ಆದರೆ ಈಗ ಅದರ ಮಹತ್ವ ತಿಳಿದು ನಾನು ಬರೆಯುವುದರಲ್ಲೂ ಸೇರಿಸುವಾಗ ಹಲವಾರು ಕವಿತೆಗಳನ್ನು, ಭಾವಗೀತಗಳನ್ನು ಕೇಳಿದ ನಂತರ ಅದರ ಮಹತ್ವ ಅರ್ಥವಾಯಿತು. ಈಗ ಕಥೆಯನ್ನು ಹೊಸತೊಂದು ಭಾವದೊಂದಿಗೆ ಶುರುಮಾಡಿದ್ದೀನಿ.ಹಲವಾರು ಪ್ರಶ್ನೆಗಳು. ನೋಡೋಣ ಮುಂದೆ.

    ಪ್ರತ್ಯುತ್ತರಅಳಿಸಿ