ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 6

ಕಲ್ಕತ್ತಾ ಟು ಬಾಂಗ್ಲಾದೇಶ್ - ಢಾಕಾ ಡೈರೀಸ್

ಹಾಗೆ ಅಶ್ರಫ್ ಎಂಬ ಗೆಳೆಯ ಹಾಗೂ ಕಲ್ಕತ್ತಾ ಎಂಬ ರೂಪಸಿಯ ಸಾನಿಧ್ಯದಲ್ಲಿ ನನ್ನ ಬಾಲ್ಯ ಕಳೆದು ಯೌವ್ವನದ ದಿನಗಳು ಕಾಲಿಟ್ಟಿತ್ತು. ಈ ಕಾಲಘಟ್ಟ ನನ್ನ ಜೀವನದಲ್ಲಿ, ಯೋಚನೆಗಳಲ್ಲಿ, ಸ್ವಭಾವದಲ್ಲಿ ಹಲವು ಬದಲಾವಣೆಗಳನ್ನು ಹೊತ್ತು ತಂದಿತ್ತು. ಇಲ್ಲಿಯವರೆಗೂ ಹಗುರವಾಗಿ ಕಾಣುತ್ತಿದ್ದ ವಿಚಾರಗಳು ಈಗ ಗಂಭೀರವೆನಿಸತೊಡಗಿದ್ದವು. ಎಲ್ಲವನ್ನೂ ಪ್ರಶ್ನಿಸಬೇಕು, ವಿರೋಧಿಸಬೇಕು, ರಾಕಾನ ಚೇಲಾಗಳಿಗೆ ನಾಲ್ಕು ಬಾರಿಸಬೇಕು, ನನ್ನ ಗುಂಪಿನವರನ್ನೆಲ್ಲಾ ಕಟ್ಟಿಕೊಂಡು ರಾಕಾನ ವಿರುದ್ಧ ಬಂಡೇಳಬೇಕು...... ಹೀಗೆ ಏನೇನೋ ಹುಚ್ಚು ಆಲೋಚನೆಗಳು ನನ್ನನ್ನು ಮುತ್ತಿಗೆ ಹಾಕಿ ರಕ್ತವನ್ನು ಕಾವೇರಿಸುತ್ತಿತ್ತು. 

ಇವೆಲ್ಲವುಗಳ ಆಳದಲ್ಲಿ ರಾಕಾನ ಸಾಮ್ರಾಜ್ಯಕ್ಕೆ ಅಧಿಪತಿಯಾಗಬೇಕೆಂಬ ಸುಪ್ತ ಆಸೆಯೊಂದು ಪ್ರಚೋದನಾತ್ಮಕ ತಂತುವಾಗಿ ಕಾರ್ಯ ನಿರ್ವಹಿಸುತ್ತಿತ್ತಾ..........? 
ರಾಕಾ ಎಂಬ ರಕ್ಕಸನ ಸಿರಿವಂತ ಸಾಮ್ರಾಜ್ಯ, ಸಮಾಜವನ್ನು ತನ್ನ ಕಿರುಬೆರಳಲ್ಲಿ ಕುಣಿಸುವ ಅವನ ಅಧಿಕಾರ, ಜನರ ಕಣ್ಣುಗಳಲ್ಲಿ ಅವನೆಡೆಗೆ ಕಾಣುತ್ತಿದ್ದ ಆ ಭಯಮಿಶ್ರಿತ ಗೌರವ(??) ಇವೆಲ್ಲವೂ ನನ್ನದಾಗಬೇಕು ಎಂಬ ಭಾವನೆ ನನ್ನೊಳಗೆ ಬೇರೂರತೊಡಗಿತ್ತಾ.........? 

ಆ ಕ್ಷಣಕ್ಕೆ ಈ ಪ್ರಶ್ನೆಗಳಿಗೆ ನನ್ನೊಳಗೆ ಉತ್ತರವಿತ್ತೋ, ಇಲ್ಲವೋ ನನಗೇ ತಿಳಿದಿಲ್ಲವೆನ್ನಿ. ನನ್ನ ಪ್ರಕಾರ ನಾನು ಮುಂಚಿನಂತೆಯೇ ಇದ್ದೆ. ಆದರೆ ಉಳಿದವರ ಕಣ್ಣುಗಳು ನನ್ನನ್ನು ಪ್ರಶ್ನಾರ್ಥಕವಾಗಿಯೋ, ಅಚ್ಚರಿಯಿಂದಲೋ ಇಲ್ಲಾ ಇನ್ಯಾವುದೋ ಅರ್ಥವಾಗದ ಭಾವದಿಂದ ದಿಟ್ಟಿಸುವಾಗೆಲ್ಲ 'ನಾನು ನಿಜವಾಗಿಯೂ ಬದಲಾಗಿರುವೆನಾ?' ಎಂಬ ಪ್ರಶ್ನೆ ಒಳಗಿನಿಂದ ಉದ್ಬವಿಸುತ್ತಿತ್ತು. ಆದರೆ ಎಂದಿಗೂ ಈ ಪ್ರಶ್ನೆ ಮಸ್ತಿಷ್ಕವನ್ನು ಕೊರೆಯಲು ಬಿಡಲೇ ಇಲ್ಲ ನಾನು. ನನ್ನ ತಲೆಯ ತುಂಬಾ ಇನ್ನೂ ಉತ್ತರ ಸಿಗದೇ ಗಿರಕಿಹೊಡೆಯುತ್ತಿದ್ದ ಪ್ರಶ್ನೆಗಳಿಗೇನು ಬರವಿತ್ತೇ? 

ಬಾಲ್ಯದಲ್ಲಿ ಮನದ ಭಿತ್ತಿಯಲ್ಲಿ ಒಡಮೂಡಿ ಅಚ್ಚಳಿಯದೇ ಉಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂಬ ತುಡಿತ ನನ್ನೊಳಗೆ ಅದಾಗಲೇ ತೀವ್ರವಾಗತೊಡಗಿತ್ತು. ರಾತ್ರೋರಾತ್ರಿ ಗುಂಪಿನಲ್ಲಿ ಪ್ರತ್ಯಕ್ಷವಾಗುವ ಮಕ್ಕಳನ್ನು ಹೇಗೆ, ಎಲ್ಲಿಂದ ಅಪಹರಿಸುತ್ತಾರೆ? ರಾತ್ರಿಗೆ ಬಿಡಾರದಿಂದ ಹೊರಟು ಬೆಳಕು ಹರಿಯುವಾಗ ವಾಪಾಸಾಗುವ ಹೆಣ್ಣುಗಳು ಹೋಗುವುದಾದರೂ ಎಲ್ಲಿಗೆ? ಆಗಾಗ ನಮ್ಮ ಗುಂಪಿನಿಂದ ಹಲವು ಸದಸ್ಯರು ಕಣ್ಮರೆಯಾಗುವ ಹಿಂದಿನ ಮರ್ಮವೇನು? 

ಇದೆಲ್ಲಕ್ಕಿಂತ ಹೆಚ್ಚಾಗಿ ಸದಾ ನನ್ನನ್ನು ಕಾಡುವ ಪ್ರಶ್ನೆ ಈ ರಾಕಾನ ಅಸಲಿ ವ್ಯವಹಾರವಾದರೂ ಏನು? ಕೇವಲ ಒಂದಿಷ್ಟು ಭಿಕ್ಷುಕರ ಗುಂಪಿನ ಲೀಡರ್ ಆಗಿರುವ ವ್ಯಕ್ತಿ ಅವನಲ್ಲ. ಅದಕ್ಕೂ ಮೀರಿದ ಸತ್ಯಗಳು ಹಲವಿವೆ ಎಂಬ ಬಲವಾದ ಶಂಕೆ ನನ್ನೊಳಗೆ ಗಟ್ಟಿಯಾಗಿತ್ತು. ಇಲ್ಲವಾದರೇ ರಾಕಾನಂತಹ ರಕ್ಕಸ ರೌಡಿಗೆ ಸಮಾಜದಲ್ಲಿ ಈ ಪರಿಯ ಮರ್ಯಾದೆಯೇ....? 
ಆ ಮರ್ಯಾದೆಗೆ ಕಾರಣ ಅವನೆಡೆಗಿನ ಗೌರವವಲ್ಲ........ ಅದು ಭಯ........ 
ಅವನನ್ನು ಕಂಡರೆ ಜನ ಭಯ ಬೀಳುತ್ತಾರೆ. ಆ ಭಯವೇ ಅವನಿಗೆ ಸಮಾಜದಲ್ಲಿ ಗೌರವವನ್ನು ದಕ್ಕಿಸುತ್ತಿರುವುದು. ಜೊತೆಗೇ ಇಡೀ ಬಂಗಾಳವನ್ನೇ ಖರೀದಿಸಬಲ್ಲಷ್ಟು ಹಣವಿರಬಹುದು ಅವನಲ್ಲಿ. ಹಣವೆಂದರೆ ಹೆಣ ಕೂಡಾ ಬಾಯ್ಬಿಡುತ್ತಂತೆ.... ಇನ್ನು ಬದುಕಿರುವ ಜನರ್ಯಾವ ಲೆಕ್ಕ ಅಲ್ಲವೇ? ಆ ಹಣ ಹಾಗೂ ಜನರ ಮನದಲ್ಲಿನ ಭಯದಿಂದಲೇ ಸಮಾಜದಲ್ಲಿ ಪ್ರತಿಷ್ಠಿತನೆಂಬ ಬಿರುದು ಪಡೆದು ಮೆರೆಯುತ್ತಿದ್ದಾನೆ ರಾಜನಾಥ್ ಕೀರ್ತನಿಯಾ ಉರುಫ್ ರಾಕಾ.....
ಈ ರಾಕಾನ ವ್ಯವಹಾರಗಳೆಂಬ ಹಣೆಪಟ್ಟಿಯಡಿಗೆ ನಡೆಯುವ ದಂಧೆಗಳು ಹಲವು ಇವೆ. ಹಾಗೂ ಈ ದಂಧೆಗಳು ಪ್ರಾಯಶಃ ಕಾನೂನುಬಾಹಿರವಾಗಿವೆ ಎಂಬ ಅನುಮಾನ ಬಲವಾಗಿ ಕಾಡತೊಡಗಿತ್ತು. 

ನಾನೇನು ದೊಡ್ಡ ಓದು ಕಲಿತ ವಿದ್ಯಾವಂತನಲ್ಲ. ಆದರೆ ನನ್ನ ತಿಳುವಳಿಕೆ ಹಾಗೂ ಅರಿವಿನ ಬಗ್ಗೆ ಅಪಾರ ನಂಬಿಕೆಯಿದೆ ನನಗೆ. ಏಕೆಂದರೆ ಶಾಲೆಯಲ್ಲಿ ಬಾಯಿಪಾಠ ಮಾಡಿ ಕಲಿತ ವಿದ್ಯೆಯಲ್ಲ ಅದು. ಹುಟ್ಟಿದಾಗಿನಿಂದ ಇಂದಿನವರೆಗಿನ ಜೀವನಾನುಭವಗಳ ಮೂಸೆಯಿಂದ ಸಂಪಾದಿಸಿದ ಜ್ಞಾನ. ಬದುಕಿನಲ್ಲಿ ಎದುರಿಸಿದ ಸನ್ನಿವೇಶಗಳು ಕಲಿಸಿದ ಪ್ರಾಯೋಗಿಕ ತಿಳಿವಳಿಕೆಯದು. ಬದುಕು ಕಲಿಸುವ ಪಾಠಗಳು ನೀಡುವ ಅರಿವು ಅಪಾರ. ಅಂತಹ ಅರಿವಿನ ಆಧಾರದಲ್ಲೇ ರಾಕಾನ ನಡವಳಿಕೆಯನ್ನು ಅಂದಾಜಿಸಿದ್ದೇನೆಂದರೆ ಅದು ಸರಿಯೇ ಇರಬಹುದು ಎನ್ನುವ ನಂಬಿಕೆ ನನ್ನದು. ಜೊತೆಗೆ ನಮ್ಮ ಅಶ್ರಫಿ ಸಾಬಿಯೂ ನನ್ನ ಅನುಮಾನ ನಿಜವೇ ಎಂದು ಒಪ್ಪುತ್ತಿದ್ದ. 

ಬಾಲ್ಯದಿಂದಲೂ ಈ ಪ್ರಶ್ನೆಗಳು ನಮ್ಮಿಬ್ಬರ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವಾದರೂ ಯಾವ ಪ್ರಶ್ನೆಗಳಿಗೂ ಆಗ ನಮ್ಮ ಬಳಿ ಉತ್ತರವಿರಲಿಲ್ಲ. ಉತ್ತರವಿರಲಿಲ್ಲ ಅನ್ನುವುದಕ್ಕಿಂತಲೂ ಕಣ್ಮುಂದೆಯೋ ಇಲ್ಲಾ ಆಳದಲ್ಲೋ ಇದ್ದ ಉತ್ತರಗಳನ್ನು ಗ್ರಹಿಸುವ ಶಕ್ತಿ ಆಗ ನಮಗಿರಲಿಲ್ಲ. ಆದರೆ ಈಗೀಗ ಎಲ್ಲವೂ ಕೊಂಚ ಕೊಂಚವೇ ಅರಿವಿಗೆ ಬರತೊಡಗಿತ್ತು. ಮನದ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಸುತ್ತ ಮುತ್ತ ನಡೆಯುತ್ತಿದ್ದ ಘಟನೆಗಳ ಆಳದಲ್ಲಿ ಉತ್ತರವಿತ್ತು‌. ವಯಸ್ಸು ಬಲಿತಂತೆ ಒಂದಕ್ಕೊಂದು ಬೆಸೆದುಕೊಂಡಂತಿದ್ದ ಘಟನೆಗಳ ಕೊಂಡಿಗಳು ನಿಧಾನವಾಗಿ ಗ್ರಹಿಕೆಗೆ ಸಿಗತೊಡಗಿದವು. 

ರಾಕಾನ ವ್ಯವಹಾರದ ಬಗೆಗಿನ ನನ್ನ ಗ್ರಹಿಕೆ ಸರಿ ಎಂದು ನನಗೆ ಅರಿವಾಗಿದ್ದು ನನ್ನ ಯೌವ್ವನದ ದಿನಗಳಲ್ಲಿ. ನನಗೆ ಅತೀವ ನೋವನ್ನು ತಂದ, ಅಲ್ಲಿಯವರೆಗೆ ಒಟ್ಟಿಗೆ ಭಿಕ್ಷಾಟನೆ ಮಾಡುತ್ತಿದ್ದ ನನ್ನನ್ನು ಹಾಗೂ ಅಶ್ರಫ್ ನನ್ನು ದೂರಾಗಿಸಿದ ಘಟ್ಟವಿದು. 

ಈ ಸಮಯದಲ್ಲಿ ರಾಕಾನ ದಂಧೆಗಳ ವಲಯ ವಿಸ್ತರಿಸಿತ್ತು. ಹಾಗಾಗಿ ಗುಂಪಿನ ಎಲ್ಲರನ್ನೂ ಮುಂಚಿನಂತೆ ಭಿಕ್ಷೆ ಬೇಡಲು ಕಳಿಸುವ ಪರಿಪಾಠ ಇರಲಿಲ್ಲ ಈಗ. ಮಹಿಳೆಯರಿರಲೀ ಇಲ್ಲಾ ಪುರುಷರಾಗಲೀ ದೈಹಿಕವಾಗಿ ತೀರಾ ದುರ್ಬಲ ಹಾಗೂ ನಿಶ್ಯಕ್ತರಾಗಿರುವವರು, ಅಂಗ ಊನಗೊಂಡವರನ್ನು ಮಾತ್ರವೇ ಭಿಕ್ಷಾಟನೆಗೆ ಕಳಿಸುತ್ತಿದ್ದಾರೆ. ಸದೃಢರಾಗಿರುವ ಗಂಡು ಮಕ್ಕಳನ್ನು ಪಟಾಕಿ, ಬಿಂದಿ, ಹೋಟೆಲ್ ಇತ್ಯಾದಿ ಉದ್ಯಮಗಳಲ್ಲಿ ಕೆಲಸಕ್ಕೆ ತೊಡಗಿಸಿದರೆ, ವಯಸ್ಕ ಗಂಡಸರನ್ನು ರಾಕಾನ ಒಡೆತನಕ್ಕೆ ಒಳಪಟ್ಟ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಎರಡೂ ಸಂಬಳವಿಲ್ಲದ ಜೀತವೇ. ನಮ್ಮ ದೇಹದ ಶಕ್ತಿ ಕುಂದುವ ಲಕ್ಷಣಗಳು ಕಂಡಾಗ ಇಲ್ಲವೇ ಯಾವುದೋ ಅವಘಡ ಸಂಭವಿಸಿ ಅಂಗ ಊನವಾದರೆ ಮಾತ್ರವೇ ನಮ್ಮನ್ನು ಮತ್ತೆ ಭಿಕ್ಷಾಟನೆಗೆ ದೂಡಲಾಗುತ್ತದೆ ಎಂಬ ವಿಚಾರವೂ ಆಗ ಮನವರಿಕೆಯಾಗತೊಡಗಿತ್ತು ನನಗೆ. 

ಅಶ್ರಫಿಯನ್ನು ರಾಕಾನ ಒಡೆತನದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ದುಡಿತಕ್ಕೆ ಹಾಕಲಾಗಿತ್ತು. ಬಹಳಷ್ಟು ಕಠಿಣವಾದ, ಅತಿಯಾದ ದೈಹಿಕ ಶ್ರಮ ಬೇಡುವ, ಅಪಾಯಕಾರಿ ಕೆಲಸಗಳನ್ನು ಒಳಗೊಂಡ ವಲಯವದು. ರಾಕಾ ಮತ್ತವನ ಚೇಲಾಗಳ ರುಂಡ ಚಂಡಾಡುವಷ್ಟು ರೋಷವಿತ್ತು ನನ್ನಲ್ಲಿ. ಆದರೆ ಹಾಗೆ ಅನ್ನಿಸಿದ್ದನ್ನು ಮಾಡುವ ಪರಿಸ್ಥಿತಿ ನನ್ನದಾಗಿರಲಿಲ್ಲ. ಕೋಪವನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಇತ್ತು. ಬದುಕು ತೋರುವ ಹಾದಿ ದುರ್ಗಮವಾದರೂ ಪಯಣಿಸಲೇಬೇಕಲ್ಲವೇ...? ಬೆಳಗ್ಗಿನಿಂದ ಸಂಜೆಯವರೆಗೆ ಗಣಿಯಲ್ಲಿದ್ದರೂ ಸಂಜೆ ಬಿಡಾರಕ್ಕೆ ಹಿಂದಿರುಗುವೆನಲ್ಲಾ ಎಂದು ಅಶ್ರಫಿಯೇ ನನ್ನನ್ನು ಸಮಾಧಾನಿಸಿದ್ದ. ನನಗೂ ಸಮಾಧಾನಿಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲವಲ್ಲ. ಆದರೆ ದಿನವೂ ನಮ್ಮ ಭೇಟಿ ಸಾಧ್ಯವಿರಲಿಲ್ಲ. ಕಾರಣ ನನಗೆ ವಹಿಸಿದ್ದ ಕೆಲಸ.

ನನ್ನನ್ನು ಕಲ್ಕತ್ತೆಯಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಸಾಗಿಸುವ ವಾಹನಗಳಲ್ಲಿ ಲೋಡಿಂಗ್ ಹಾಗೂ ಅನ್ಲೋಡಿಂಗ್ ಕೆಲಸಕ್ಕೆ ಹಾಕಲಾಯಿತು. ಅದೇ ದಿನ ಹೋಗಿ ಅವತ್ತೇ ವಾಪಾಸಾಗುವ ಕೆಲಸವಾಗಿರಲಿಲ್ಲ ಅದು. ಕೆಲವೊಮ್ಮೆ ವಾರಗಟ್ಟಲೇ ಬಾಂಗ್ಲಾದೇಶದಲ್ಲೇ ಉಳಿಯಬೇಕಾಗುತ್ತಿತ್ತು. ಈ ಸಂದರ್ಭದಲ್ಲೇ ನನಗೆ ರಾಕಾನ ದಂಧೆಗಳ ಸುಳಿವು ದೊರಕತೊಡಗಿದ್ದು....

ನಾನು ನಿರಂತರವಾಗಿ ಕಲ್ಕತ್ತಾ ಹಾಗೂ ಢಾಕಾ ನಡುವೆ ಸಂಚರಿಸುತ್ತಿದ್ದೆನಾದರೂ, ಯಾವ ವಿಚಾರವಾಗಿ ಹೋಗುತ್ತಿದ್ದೇನೆ, ಅಲ್ಲೇನು ಏನು ನಡೆಯುತ್ತಿದೆ ಎಂಬ ವಿಚಾರಗಳ ಬಗ್ಗೆ ಸೊಲ್ಲೆತ್ತುವಂತಿರಲಿಲ್ಲ. ಅವನ ಚೇಲಾಗಳು ಹೇಳಿದ ಕೆಲಸಗಳನ್ನು ಮಾಡುವುದಷ್ಟೇ ನನ್ನ ಕೆಲಸ. ಸಾಮಾನ್ಯವಾಗಿ ಮುಚ್ಚಿದ್ದ ರಟ್ಟಿನ ಪೆಟ್ಟಿಗೆಗಳನ್ನು, ಕಟ್ಟಿದ್ದ ಗೋಣಿಚೀಲಗಳನ್ನು ಕಲ್ಕತ್ತೆಯಲ್ಲಿ ವಾಹನಕ್ಕೆ ಲೋಡ್ ಮಾಡುವುದು, ಢಾಕಾದಲ್ಲಿ ಅನ್ಲೋಡ್ ಮಾಡುವುದಷ್ಟೇ ನನ್ನ ಕೆಲಸವಾಗಿತ್ತು. ಬೇರೇನನ್ನೂ ಪ್ರಶ್ನಿಸುವಂತಿರಲಿಲ್ಲ. 

ಆದರೆ ನಿಮಗೇ ತಿಳಿದಿದೆಯಲ್ಲ ನಾನೆಂತಹ ಖದೀಮ ಕಳ್ಳನೆಂದು? ಅವರ ಬಳಿ ಏನನ್ನೂ ಕೇಳುವಂತಿರಲಿಲ್ಲ. ಆದರೆ ನಾನೇ ಬೇಹುಗಾರಿಕೆ ಮಾಡಲು ತೊಂದರೆಯಿರಲಿಲ್ಲವಲ್ಲ.....? ನಾನು ಮೊದಲೇ ರಾಕಾನ ವ್ಯವಹಾರಗಳನ್ನು ತಿಳಿದುಕೊಳ್ಳುವ ಹುಚ್ಚು ಜಿದ್ದಿಗೆ ಬಿದ್ದಿದ್ದೆ. ಅದಕ್ಕೆ ಸರಿಯಾಗಿ ಸಿಕ್ಕಿದ್ದು ಈ ಕಲ್ಕತ್ತಾ-ಬಾಂಗ್ಲಾ ಪಯಣ. ಮೊದಮೊದಲು ಏನೂ ತಿಳಿಯದಿದ್ದರೂ ನಂತರದ ದಿನಗಳಲ್ಲಿ ನನಗೆ ಅವನ ದಂಧೆಯ ಒಂದು ಮಜಲಿನ ಪರಿಚಯವಾಯಿತು. ಹಾಗೆಯೇ ನನ್ನ ಮನದಲ್ಲಿ ಕೊರೆಯುತ್ತಿದ್ದ ಎರಡು ಪ್ರಶ್ನೆಗಳಿಗೆ ಉತ್ತರವೂ ದೊರಕಿತ್ತು.

ರಾತ್ರೋರಾತ್ರಿ ನಮ್ಮ ಗುಂಪಿನಲ್ಲಿ ಪ್ರತ್ಯಕ್ಷರಾಗುವ ಮಕ್ಕಳೆಲ್ಲರೂ ದೇಶದ ವಿವಿಧ ಭಾಗಗಳಿಂದ ಅಪಹರಿಸಲ್ಪಟ್ಟವರು ಅಂದುಕೊಂಡಿದ್ದೆವು ಈವರೆಗೆ. ಆದರೆ ಅದು ಅರ್ಧಸತ್ಯವಷ್ಟೇ ಎಂಬುದು ಈಗ ಗೋಚರವಾಗತೊಡಗಿತ್ತು. ಕೆಲವು ಮಕ್ಕಳನ್ನು ಅವರ ಹೆತ್ತವರಿಂದ ಬೇರಾಗಿಸಿ ಅಪಹರಿಸಿ ತರುತ್ತಿದ್ದುದು ನಿಜವೇ. ಅವರಲ್ಲಿ ಹೆಚ್ಚಿನ ಮಕ್ಕಳನ್ನು ರೈಲ್ವೇ ನಿಲ್ದಾಣ ಹಾಗೂ ಮೇಲಾ(ಜಾತ್ರೆ)ಗಳಲ್ಲಿ ಅಪಹರಿಸಿ ತರಲಾಗಿತ್ತು. ದೋಶೆರಾದ ದುರ್ಗಾಪೂಜಾ ಸಂದರ್ಭದಲ್ಲಿ ಹಾಗೂ ಜಾತ್ರಾಗಳು ನಡೆಯುವ ಸಂದರ್ಭದಲ್ಲಿ ವಿಪರೀತ ಜನಜಂಗುಳಿ ಇರುವಾಗ ಇಂತಹ ಅಪಹರಣಗಳು ಹೆಚ್ಚು. ಹಾಗೆಯೇ ಮನೆ, ಶಾಲೆಗಳಿಂದ ಅಪಹರಿಸಲ್ಪಟ್ಟ ಮಕ್ಕಳೂ ಇದ್ದರು. ನವಜಾತ ಶಿಶುಗಳನ್ನು ಆಸ್ಪತ್ರೆಯಿಂದಲೇ ಅಪಹರಿಸಿ ತರುತ್ತಿದ್ದರು ರಾಕಾನ ಚೇಲಾಗಳು. ಕೆಲವು ಆಯ್ದ ಹೆರಿಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿಂದ ಮಕ್ಕಳನ್ನು ಕರೆತರುತ್ತಿದ್ದರು. ಹಾಗೆಯೇ ಕೆಲವು ಅನಾಥಾಶ್ರಮದ ಮಕ್ಕಳು, ಹೆತ್ತವರಿಂದಲೇ ಮಾರಲ್ಪಟ್ಟವರೂ ಇದ್ದರು.

ಆದರೆ ಈ ಬಾಂಗ್ಲಾ ಪ್ರಯಾಣ ಇನ್ನೊಂದು ಸತ್ಯವನ್ನು ನನ್ನೆದುರು ತೆರೆದಿಟ್ಟಿತ್ತು‌......

ನಮ್ಮ ಗುಂಪಿನಲ್ಲಿನ ಮುಕ್ಕಾಲು ಪಾಲು ಭಿಕ್ಷುಕರು ಅಶ್ರಫ್ ನಂತೆ ನೆರೆಯ ಬಾಂಗ್ಲಾದೇಶದವರು ........! 
ಹೌದು.... ನಮ್ಮ ಗುಂಪಿನಲ್ಲಿ ಇದ್ದ ಹೆಚ್ಚಿನವರು ಬಾಂಗ್ಲಾದೇಶಿ ವಲಸಿಗರು ಎಂಬ ಸತ್ಯ ಇಲ್ಲಿ ತಿಳಿಯಿತು. ಕೆಲವರು ಉದ್ಯೋಗವನ್ನು ಅರಸಿ ಭಾರತಕ್ಕೆ ಬಂದು ಬೇರಾವ ಉದ್ಯೋಗವೂ ದೊರಕದೆ ಭಿಕ್ಷಾಟನೆಗೆ ಇಳಿದು ರಾಕಾನ ಕಪಿಮುಷ್ಠಿಯಲ್ಲಿ ಸಿಲುಕಿದವರಾದರೇ ಹೆಚ್ಚಿನವರು ಕಳ್ಳಸಾಗಣೆಯ ಮೂಲಕ ಭಾರತಕ್ಕೆ ಕಾಲಿಟ್ಟವರು. ಬಾಂಗ್ಲಾದೇಶದಿಂದ ಇಲ್ಲಿಗೆ ಅಕ್ರಮವಾಗಿ ಮಾನವ ಸಾಗಾಣಿಕೆ ಮಾಡುವ ಒಂದು ವ್ಯವಸ್ಥಿತ ಜಾಲವೇ ರಾಕಾನ ನಿಯಂತ್ರಣದಲ್ಲಿದೆ...... ಮತ್ತು ನಾನು ಯಾವ ಕಾರ್ಪೋರೇಟ್ ಕಂಪನಿಗೂ ಕಡಿಮೆ ಇಲ್ಲದ ಈ ಜಾಲದ ಒಂದು ಭಾಗವಾಗಿದ್ದೇನೆ. ಆಳಕ್ಕಿಳಿದು ನೋಡಿದಂತೆಲ್ಲಾ ಹಲವು ವಿಚಾರಗಳು ನನಗೆ ಸ್ಪಷ್ಟವಾದವು.

ರಾಕಾನ ಕೆಲ ಚೇಲಾಗಳು ಬಾಂಗ್ಲಾದೇಶದಲ್ಲಿ ಇದ್ದುಕೊಂಡು ಮಕ್ಕಳು ಹಾಗೂ ವಯಸ್ಕ ಹೆಣ್ಣುಗಳಿರುವ ಬಡ ಕುಟುಂಬಗಳನ್ನು ಗುರುತಿಸುತ್ತಾರೆ. ಇದು ಇವರ ಜಾಲದ ಮೊದಲ ಹಂತ. ಅಂತಹ ಕುಟುಂಬಗಳೇ ಇವರ ಲಕ್ಷ್ಯ. ಹಾಗೆ ಆಯ್ದ ಕುಟುಂಬದವರಿಗೆ ಭಾರತದಲ್ಲಿ ನೌಕರಿ ಕೊಡಿಸುವ ಭರವಸೆಯೊಂದಿಗೆ ಒಂದಿಷ್ಟು ಹಣದ ಆಮಿಷ ತೋರಿಸಿ ಅವರ ಸಮ್ಮತಿ ಪಡೆಯುವುದು ಎರಡನೇ ಹಂತ. ಹೆಚ್ಚಿನ ಸಂದರ್ಭಗಳಲ್ಲಿ ಮನೆಕೆಲಸವೋ ಇಲ್ಲಾ ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನೋ ಕೊಡಿಸುತ್ತೇವೆ ಎಂದು ನಂಬಿಸುತ್ತಾರೆ. ಕಿತ್ತು ತಿನ್ನುವ ಬಡತನ, ಒಂದು ಹೊತ್ತಿನ ತುತ್ತಿಗೂ ತತ್ವಾರವಿರುವ ಮನೆಯವರು ಇವರ ಈ ಪ್ರಸ್ತಾಪ ನಿರಾಕರಿಸುವ ಸಾಧ್ಯತೆ ಕಡಿಮೆ. ಜೊತೆಗೆ ಹೆಚ್ಚಿನವರು ಅಶಿಕ್ಷಿತರಾದ್ದರಿಂದ ಇಂತಹ ಖೂಳರ ಧೂರ್ತ ಜಾಲಗಳ ಅರಿವಾಗುವುದು ದೂರದ ಮಾತು. ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ವಿಶ್ವಾಸಾರ್ಹವಾಗಿ ಮಾತನಾಡಿ ಮನೆಯವರ ನಂಬಿಕೆ ಗೆದ್ದರೆ ಕೆಲಸ ಮುಗಿದಂತೆಯೇ. ಆ ಮಕ್ಕಳು ಹಾಗೂ ಮಹಿಳೆಯರನ್ನು ದಾಖಲೆಗಳಿಲ್ಲದೇ ಅಕ್ರಮವಾಗಿ ಸರಕು ಸಾಗಣೆ ವಾಹನಗಳಲ್ಲಿ ತುಂಬಿಸಿ ಕಲ್ಕತ್ತೆಗೆ ರವಾನಿಸಲಾಗುತ್ತದೆ. 

ಹಾಗೆ ಇಲ್ಲಿಗೆ ಬರುವ ವಾಹನಗಳು ಮರಳಿ ಬಾಂಗ್ಲಾದೇಶಕ್ಕೆ ಹೋಗುವಾಗ ರಟ್ಟಿನ ಪೆಟ್ಟಿಗೆಗಳಲ್ಲಿ ಹಾಗೂ ಗೋಣಿ ಚೀಲಗಳಲ್ಲಿ ಸೀಲ್ ಮಾಡಲ್ಪಟ್ಟ ಸರಕುಗಳನ್ನು ಹೊತ್ತೊಯ್ಯುತ್ತವೆ. ಇದೇ ಪೆಟ್ಟಿಗೆ ಮತ್ತು ಚೀಲಗಳನ್ನೇ ನಾನು ಕಲ್ಕತ್ತೆಯಲ್ಲಿ ವಾಹನಕ್ಕೆ ಏರಿಸಿ ರಟ್ಟಿನ ಪೆಟ್ಟಿಗೆಯನ್ನು ಢಾಕಾದ ಗೋಡೋನ್ ಒಂದರಲ್ಲೂ ಹಾಗೂ ಗೋಣಿ ಚೀಲಗಳನ್ನು ಕಾಲೀರ್ ನಲ್ಲಿಯೂ ಇಳಿಸುತ್ತಿದ್ದೆ.

ಹಾಗೆ ಕಲ್ಕತ್ತೆಯಿಂದ ಢಾಕಾಗೆ ರವಾನೆಯಾಗುತ್ತಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿರುತ್ತಿತ್ತು ಎಂಬುದು ಆಗ ನನಗೆ ತಿಳಿಯಲಿಲ್ಲ. ಆದರೆ ಆ ಪೆಟ್ಟಿಗೆಗಳೊಂದಿಗೆ ಇರುವ ಗೋಣಿ ಚೀಲಗಳಲ್ಲಿ ಇರುತ್ತಿದ್ದುದ್ದು ನಮ್ಮ ಗುಂಪಿನವರು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ 'ರೇಜ್ಕಿ'ಯ ಟಾಕಾಗಳು...........!! 

ಇದೂ ನನಗೆ ವಿಪರೀತ ಅಚ್ಚರಿ ತಂದ ವಿಚಾರವಾಗಿತ್ತು. ಇಲ್ಲವಾದರೆ ಆ ರೇಜ್ಕಿಯ ಟಾಕಾಗಳನ್ನು ಬಾಂಗ್ಲಾದೇಶಕ್ಕೆ ಯಾಕೆ ಸಾಗಿಸಬೇಕು? ಇದರ ಹಿನ್ನೆಲೆ ಶೋಧಿಸುತ್ತಾ ಹೋದಂತೆ ನನ್ನನ್ನು ಬಹುವಾಗಿ ಕಾಡಿದ್ದ ಇನ್ನೊಂದು ಪ್ರಶ್ನೆಗೆ ಉತ್ತರ ದೊರಕಿತ್ತು.

ನಾವು ರೇಜ್ಕಿಯ ಟಾಕಾಗಳನ್ನು ಬೇಡುವುದಕ್ಕೆ ಒಂದು ನಿಯಮವಿದೆ. ಈ ರೇಜ್ಕಿಯ ಹಣದ ಸಿಂಹಪಾಲು ಒಂದು ಅಥವಾ ಎರಡು ರುಪಾಯಿಯ ನಾಣ್ಯದ ರೂಪದಲ್ಲೇ ಇರಬೇಕು. ಭಿಕ್ಷೆಯನ್ನು ಯಾರಾದರೂ ನೋಟಿನ ರೂಪದಲ್ಲಿ ನೀಡಿದರೆ ಅವರನ್ನು ಕಾಡಿ ಬೇಡಿಯಾದರೂ ಅದನ್ನು ಚಿಲ್ಲರೆಗೆ ಬದಲಾಯಿಸಲು ನಮಗೆ ಹೇಳುತ್ತಿದ್ದರು ರಾಕಾನ ಮಂದಿ. ಆಗೆಲ್ಲ ಇವರಿಗೆ ಚಿಲ್ಲರೆಯೇ ಯಾಕೆ ಬೇಕು? ನೋಟಿಗೂ ಅಷ್ಟೇ ಮೌಲ್ಯವಿದೆಯಲ್ಲ. ಮತ್ತೇಕೆ ಚಿಲ್ಲರೆ ಕಾಸಿಗೆ ಸಾಯುತ್ತಾರೆ ಇವರು... ಎಂಬೆಲ್ಲಾ ಪ್ರಶ್ನೆಗಳು ತಲೆಯನ್ನು ಆವರಿಸುತ್ತಿದ್ದವು. ಅದರ ಹಿಂದಿನ ಮರ್ಮ ಈಗ ಅರಿವಾಗತೊಡಗಿತ್ತು. ಈ ರೇಜ್ಕಿಯ ನಾಣ್ಯಗಳನ್ನು ಹಾಗೂ ರಟ್ಟಿನ ಪೆಟ್ಟಿಗೆಗಳನ್ನು ಬಾಲೂರ್ ಘಾಟ್- ಬೋನ್ಗಾ ಮಾರ್ಗವಾಗಿ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಸಾಗಣೆ ಮಾಡುತ್ತಿದ್ದರು ಈ ದುರುಳರು. ಹಾಗೆ ಬಾಂಗ್ಲಾದೇಶ ತಲುಪುವ ಈ ರೇಜ್ಕಿಯನ್ನು ಕಾಲೀರ್ ನಲ್ಲಿರುವ ಬ್ಲೇಡ್ ತಯಾರಿಕಾ ಕಾರ್ಖಾನೆಗಳು ಖರೀದಿಮಾಡುತ್ತವೆ. ಬ್ಲೇಡ್ ತಯಾರಿಕೆಗೆ ಕಚ್ಚಾ ಸರಕಾಗಿ ಈ ನಾಣ್ಯಗಳು ಬಳಕೆಯಾಗುತ್ತಿದ್ದವು. ಒಂದು ನಾಣ್ಯದಿಂದ ಎರಡು ಬ್ಲೇಡುಗಳು ತಯಾರಾಗುತ್ತವೆ. ಒಂದಿನಿತು ಶ್ರಮವಿಲ್ಲದೇ ಸಂಪಾದಿಸಿದ ರೇಜ್ಕಿಗಳನ್ನು ಬ್ಲೇಡು ತಯಾರಿಕಾ ಕಂಪನಿಗಳಿಗೆ ಮಾರುವ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾನೆ. ರಾಕಾನ ಸಂಪತ್ತಿನ ಒಂದು ಸಣ್ಣ ಮೂಲ ನಾವು ಹಗಲಿಡೀ ಬಸವಳಿದು ಬೇಡಿ ತರುವ ರೇಜ್ಕಿಗಳು ಕೂಡಾ.....!!

ಬಾಂಗ್ಲಾದಿಂದ ಕಲ್ಕತ್ತೆಗೆ ಮನುಜರನ್ನು ಸಾಗಣೆ ಮಾಡುವ ವಾಹನಗಳು ಕಲ್ಕತ್ತೆಯಿಂದ ಬಾಂಗ್ಲಾದೇಶಕ್ಕೆ ಹಿಂದಿರುಗುವಾಗ ಸರಕುಗಳು ಅಥವಾ ಜಾನುವಾರುಗಳ ನಡುವೆ ಅಡಗಿಸಿ ರೇಜ್ಕಿಯನ್ನು ಕೊಂಡೊಯ್ಯುತ್ತವೆ. ಆದರೆ ಆ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿತ್ತೋ ತಿಳಿಯಲು ಸಾಧ್ಯವಾಗಲಿಲ್ಲ. ಹಾಗೆ ಕರೆತಂದ ಬಾಂಗ್ಲಾದೇಶಿಗರೇ ನಮ್ಮ ಭಿಕ್ಷುಕ ಗುಂಪಿನಲ್ಲಿ ಅಧಿಕವಾಗಿರುವುದು. ಬಹುಶಃ ಅಶ್ರಫ್ ಕೂಡಾ ಹೀಗೆಯೇ ಇಲ್ಲಿಗೆ ಬಂದಿರಬಹುದು. ಅವನಾಗ ಬಹಳ ಚಿಕ್ಕವನಿದ್ದನಂತೆ. ಏನೋ ಒಂದಿಷ್ಟು ಮಸುಕು ಮಸುಕಾದ ಚಿತ್ರಗಳ ಹೊರತು ಬೇರೇನೂ ನೆನಪಾಗದು ಎನ್ನುತ್ತಾನೆ.

ಈ ಸಮಯದಲ್ಲೇ ನಾನು ಇನ್ನೊಂದು ಅಂಶವನ್ನು ಗಮನಿಸಿದ್ದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಕರೆತರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ವಯಸ್ಕ ಮಹಿಳೆಯರು. ಕೆಲವೊಮ್ಮೆಯಂತೂ ಮುಕ್ಕಾಲುಪಾಲು ಹುಡುಗಿಯರೇ. ಆದರೆ ಅವರ್ಯಾರೂ ನಮ್ಮ ಬಿಡಾರಗಳಲ್ಲಿ ಇರುತ್ತಿರಲಿಲ್ಲ. ಢಾಕಾದಿಂದ ಅವರನ್ನು ಕರೆತಂದು ನಮ್ಮ ಬಿಡಾರದಲ್ಲೇ ಇಳಿಸುತ್ತಿದ್ದುದು ನಿಜವೇ ಆದರೂ ಸಂಜೆಯೊಳಗೇ ಇನ್ನೊಂದು ವಾಹನದಲ್ಲಿ ಆ ಹೆಣ್ಣುಗಳನ್ನು ಬೇರೆಡೆಗೆ ಕರೆದೊಯ್ದುಬಿಡುತ್ತಿದ್ದರು. ಆ ನಂತರದಲ್ಲಿ ಎಂದೂ ಆ ಹೆಣ್ಣುಗಳು ಅಲ್ಲಿ ಕಂಡದ್ದಿಲ್ಲ. ಅವರ ಮನೆಯವರಿಗೆ ಆಶ್ವಾಸನೆ ನೀಡಿದಂತೆ ನೌಕರಿ ಕೊಡಿಸಿರಬಹುದೇನೋ ಎಂದು ಒಮ್ಮೊಮ್ಮೆ ಅನಿಸುತ್ತಿತ್ತಾದರೂ ರಾಕಾ ಇಂತಹ ಒಳ್ಳೆಯ ಕೆಲಸಗಳನ್ನು ಖಂಡಿತಾ ಮಾಡಲಾರ, ಬೇರೇನೋ ವಿಷಯವಿದೆ ಎಂದು ಬುದ್ಧಿ ಪದೇಪದೇ ಎಚ್ಚರಿಸುತ್ತಿತ್ತು. 

ನನಗೆ ಹಾಗನಿಸಿದ್ದಕ್ಕೂ ಕಾರಣವಿಲ್ಲದಿಲ್ಲ. ರಾಕಾ ಎನ್ನುವವ ಅಕ್ಷರಶಃ ರಕ್ಕಸನೇ. ಗುಂಪಿನಲ್ಲಿರುವ ಮುಗ್ಧ ಮಕ್ಕಳನ್ನೂ ಬಿಡುವವನಲ್ಲ ಆತ. ಇನ್ನು ಉಳಿದವರ ಬಿಟ್ಟಾನೆ? ಗಂಡು ಮಕ್ಕಳನ್ನು ಹೋಟೆಲ್ಲುಗಳಲ್ಲಿ ಕ್ಲೀನಿಂಗ್ ಕೆಲಸಕ್ಕೋ ಇಲ್ಲಾ ಲಘು ಕಾರ್ಖಾನೆಗಳ ಕೆಲಸಕ್ಕೋ ಹಾಕಿದರೆ, ಹೆಣ್ಣು ಮಕ್ಕಳನ್ನು ಮನೆಕೆಲಸಕ್ಕೆ ಹಾಕುತ್ತಾರೆ. ಮನೆಕೆಲಸಕ್ಕೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಕೆಲಸದವರನ್ನು ಪೂರೈಸುವ ಏಜೆನ್ಸಿಯೊಂದನ್ನು ಹೊಂದಿದ್ದಾನೆ ರಾಕಾ. ಅದರ ಮೂಲಕ ಈ ಮಕ್ಕಳನ್ನು ಸಿರಿವಂತ ಕುಟುಂಬಗಳಿಗೆ ಮನೆಕೆಲಸದವರನ್ನಾಗಿ ಕಳಿಸುತ್ತಾನೆ. ಅವರ ಪರವಾಗಿ ತಿಂಗಳ ಪಗಾರವನ್ನು ತಾನೇ ವಸೂಲಿ ಮಾಡುತ್ತಾನೆ. ಆ ಪುಟ್ಟ ಮಕ್ಕಳ ಸ್ಥಿತಿ ಅಧೋಗತಿಯೇ. ಚಿಕ್ಕ ವಯಸ್ಸಿನಲ್ಲಿ ಇಡೀ ಮನೆಯ ಕೆಲಸಗಳನ್ನೆಲ್ಲಾ ನಿರ್ವಹಿಸಬೇಕು ಆ ಪುಟ್ಟ ಕೈಗಳು. ಇಲ್ಲವಾದರೆ ಮನೆಯೊಡೆಯರ ಹೊಡೆತ, ಬೈಗುಳ...... 

ಶೋಷಣೆಗೆ ಅದೆಷ್ಟು ಮುಖಗಳು........?

ತಮ್ಮ ಮನೆಯ ಅದೇ ವಯಸ್ಸಿನ ಮಕ್ಕಳನ್ನು ಅದೆಷ್ಟು ಜತನವಾಗಿ, ಕಾಲು ನೆಲಕ್ಕೆ ಸೋಕದಂತೆ ಬೆಳೆಸುತ್ತಾರೆ. ಆದರೆ ಮನೆಕೆಲಸಕ್ಕೆಂದು ಬರುವ ಮಗುವಿನ ಮೇಲೆ ಅದೆಷ್ಟು ದಬ್ಬಾಳಿಕೆ? 

ಅದು ನಿಮ್ಮ ಮಗುವಾಗಿರದಿರಬಹುದು.......
ಆದರೆ ಅದೂ ಮಗುವೇ ಅಲ್ಲವೇ.......?
ಅದರ ಕೈಗಳೂ ನಿಮ್ಮ ಮಗುವಿನಷ್ಟೇ ಮೃದು ಕೋಮಲವಲ್ಲವೇ......?
ಅದರ ಮನಸ್ಸೂ ಸೂಕ್ಷ್ಮವಲ್ಲವೇ......?
ಅದಕ್ಕೂ ಒಂದಿನಿತು ಮಮತೆ, ಅಂತಃಕರಣದ ಅಗತ್ಯವಿದೆ ಎಂಬ ಅತೀ ಸರಳ ವಿಚಾರ ಅದೇಕೆ ಇವರ ಅರಿವಿಗೆ ಬರುವುದೇ ಇಲ್ಲ....? 

ಇದು ಉತ್ತರ ಸಿಗದ ಪ್ರಶ್ನೆಯೇನೋ? ಅಶ್ರಫಿಯಲ್ಲಿ ಈ ವಿಚಾರಗಳನ್ನು ಹೇಳಿದಾಗಲೆಲ್ಲಾ ಅವನು ನನ್ನ ಮಾತುಗಳನ್ನು ಒಪ್ಪುತ್ತಾನಾದರೂ ಇಂತಹ ವಿಚಾರಗಳಲ್ಲಿ ತಲೆಹಾಕದೇ ಸುಮ್ಮನಿರುವ ಸಲಹೆ ನೀಡುತ್ತಿದ್ದ. ಇಂತಹ ವಿಚಾರಗಳ ಬಗ್ಗೆ ಕೆದಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನನಗೆ ಅಪಾಯವಾಗುವುದು ಅವನಿಗೆ ಸುತಾರಾಂ ಹಿಡಿಸದ ವಿಚಾರ. ಅವನು ಪದೇ ಪದೇ ನನಗೆ ಬುದ್ಧಿ ಹೇಳಿ, ನನ್ನ ಕುತೂಹಲವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೇಳುತ್ತಿದ್ದ. ಅವನೇನೋ ಹೇಳುತ್ತಿದ್ದ. ನಾನು ಕೇಳಬೇಕಲ್ಲ....?
ಅದೆಂಥಾ ಹುಚ್ಚೋ, ಅದು ನನ್ನನ್ನು ಎತ್ತ ಸೆಳೆಯಲಿತ್ತೋ...... ಆದರೆ ನಾನಂತೂ ರಾಕಾನ ವ್ಯವಹಾರದ ತಳಬುಡ ಶೋಧಿಸುವ ಜಿದ್ದಿಗೆ ಬಿದ್ದಾಗಿತ್ತು. ಈಗ ತಿಳಿದದ್ದು ಅತ್ಯಲ್ಪ. ಇದಕ್ಕೂ ಮಿಗಿಲಾದ ರಹಸ್ಯಗಳಿವೆ ಎಂಬುದಂತೂ ನಿಚ್ಚಳ. ಆದರೆ ಅದನ್ನು ತಿಳಿಯುವುದು ಹೇಗೆ ಎಂಬುದೇ ನನ್ನ ಮುಂದಿದ್ದ ದೊಡ್ಡ ಪ್ರಶ್ನೆ. ಹೇಗಾದರೂ ಮಾಡಿ ರಾಕಾನ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಬೇಕು ಎಂಬ ಯೋಚನೆಯಲ್ಲಿ ನಾನು ಮುಳುಗಿದ್ದಾಗಲೇ...........

ಅದೊಂದು ಸಂಜೆ ರಾಕಾ ನನ್ನನ್ನು ಭೇಟಿಯಾಗಿದ್ದ.....!!

ಇಲ್ಲಿಯವರೆಗೆ ಯಾರೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡದ ರಾಕಾ......
ಇಡೀ ಕಲ್ಕತ್ತೆಯನ್ನು ಕಿರು ಬೆರಳಿನಲ್ಲಿ ಕುಣಿಸಬಲ್ಲ ತಾಕತ್ತಿರುವ ರಾಕಾ......
ಪಶ್ಚಿಮ ಬಂಗಾಳದ ರಾಜಕೀಯದ ನೀಲಿನಕ್ಷೆ ಬದಲಾಯಿಸಬಲ್ಲ ರಾಕಾ......

ದಿ ಗ್ರೇಟ್ ರಾಜನಾಥ್ ಕೀರ್ತನಿಯಾ......

ನನ್ನನ್ನು ಮತ್ತು ಕೇವಲ 'ನನ್ನನ್ನು' ಭೇಟಿಯಾಗಲು ಬಂದಿದ್ದ.....!!

ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತೇ.......?

ಸಶೇಷ

ಟಿಪ್ಪಣಿಗಳು:
ಮಾಹಿತಿ ಮೂಲ:

೧.http://iyouthmagblog.blogspot.com/2017/10/the-streets-of-kolkata-world-beyond.html?m=1

೨.ವಿಕಿಪೀಡಿಯ

೩. ಬಾಂಗ್ಲಾದೇಶದಿಂದ ಅಕ್ರಮವಾಗಿ ಮಾನವ ಕಳ್ಳಸಾಗಾಣಿಕೆ ಮಾಡುವ ಬಗ್ಗೆ ಮತ್ತು ಅಪಹರಿಸಿದ ಹೆಣ್ಣು ಮಕ್ಕಳನ್ನು ಶ್ರೀಮಂತ ಕುಟುಂಬಗಳಿಗೆ ಮನೆಕೆಲಸಗಾರರಾಗಿ ಕಳಿಸುವ ಬಗ್ಗೆ ಹಿಂದಿಯ crime patrol ನ ಹಲವಾರು ಸಂಚಿಕೆಗಳು ಬಂದಿವೆ. ಅವುಗಳಿಂದ ಕಲೆ ಹಾಕಿದ ಕೆಲವು ಮಾಹಿತಿಗಳನ್ನು ಈ ಸಂಚಿಕೆಯಲ್ಲಿ ಬಳಸಿಕೊಂಡಿದ್ದೇನೆ.

1 ಕಾಮೆಂಟ್‌: