ಭಾನುವಾರ, ಸೆಪ್ಟೆಂಬರ್ 13, 2020

ಅಗ್ನಿ ತರಂಗಿಣಿ 11

ಯಾದೋಂ ಕಿ ಬಾರಾತ್

ಬೇಲಾ........

ನನ್ನ ಬದುಕಿನ ಪಥವನ್ನೇ ಬದಲಿಸಿದ ಈ ಎರಡಕ್ಷರವನ್ನು ಎಂದಿಗಾದರೂ ಮರೆಯಲುಂಟೆ ನಾನು? ಹಾಗೆ ಮರೆತುಬಿಡುವಂತಹ ಹೆಣ್ಣೂ ಅಲ್ಲ ಅವಳು. ಒಮ್ಮೆ ನೋಡಿದವರು ಮತ್ತೆ ಮತ್ತೆ ತಿರುಗಿ ನೋಡುವಷ್ಟು ರೂಪವತಿ ಎನ್ನುವುದು ಎಷ್ಟು ನಿಜವೋ ಒಮ್ಮೆ ಅವಳ ಸ್ವಭಾವವನ್ನು ಅರಿತವರು ಮರೆತೂ ಮರೆಯಲಾರದಂತಹ ವ್ಯಕ್ತಿತ್ವ ಅವಳದ್ದು ಎನ್ನುವುದೂ ಅಷ್ಟೇ ನಿಜ. ಯಮುನೆಯ ತಟದಲ್ಲಿ ಕುಳಿತು ದಿಗಂತದಂಚನ್ನು ಭಾವಶೂನ್ಯ ನೋಟದಿಂದ ದಿಟ್ಟಿಸಿ ನೋಡುವಾಗಲೆಲ್ಲಾ ಆ ನಿರಭ್ರ ಬಾನಿನ ಭಿತ್ತಿಯಲ್ಲಿ ಅವಳ ನಗುಮೊಗವೇ ಪ್ರತಿಫಲಿಸುತ್ತಿದೆಯೇನೋ ಎನ್ನಿಸಿಬಿಡುತ್ತದೆ. ನನ್ನ ಮೈ ಮನಸ್ಸು ಪ್ರಫುಲ್ಲಿತವಾಗಿ ಸಂತಸದ ‌ಊಟೆ ಚಿಮ್ಮುತ್ತದೆ. ಅದು ಅರೆಘಳಿಗೆಯಷ್ಟೇ..... ಮರುಘಳಿಗೆ......!? ಮರುಘಳಿಗೆಯಲ್ಲಿ ಮುಡಿಯಲ್ಲಿ ಮೇಘಮಾಲೆ ಧರಿಸಿ ನೀಲಿ ಪತ್ತಲ ಭೂಷಿತೆಯಾಗಿ ನಲಿವ ಆ ಅಂಬರೆಯೇ ಸುಟ್ಟು ಕರಕಲಾದಂತೆ ಭಾಸವಾಗಿ ನಾಭಿಯಾಳದಿಂದ ಸಂಕಟವೊಂದು ಉದ್ಭವಿಸಿ ನನ್ನನ್ನೇ ಆಪೋಶನ ತೆಗೆದುಕೊಳ್ಳಲು ಹವಣಿಸಿದಂತೆ ದಿಗಿಲಾಗುತ್ತದೆ. ಬೇಲಾಳ ನೆನಪೆಂದರೆ ಹೀಗೆಯೇ...... ಪರಸ್ಪರ ವೈರುಧ್ಯ ಭಾವಗಳನ್ನು ಒಟ್ಟಾಗಿ ಹೊತ್ತು ತರುವ ಸ್ಮೃತಿಯದು.

ನೆಮ್ಮದಿಯ ಬದುಕು ಬರಡಾಗಲು ಎಷ್ಟು ಸಮಯ ಬೇಕು? ಸಂತಸ ಸಂತಾಪವಾಗಲು, ಬೆಳಕು ಆರಿ ಕತ್ತಲಾವರಿಸಲು, ತುಟಿಯಂಚಿನ ಮಂದಹಾಸ ಮಾಸಿ ಕಣ್ಣಂಚಿನ ಹನಿಗಳು ಹೊನಲಾಗಲು ತಗಲುವ ಅವಧಿಯೆಷ್ಟು....?

ದಿನ? ತಿಂಗಳು? ವರ್ಷ ಅಥವಾ ದಶಕಗಳು....??

ಕಣ್ಮುಚ್ಚಿ ತೆರೆಯುವ ಒಂದು ಕ್ಷಣ ಸಾಕಲ್ಲವೇ....!!?

ಕೇವಲ ಚಿಟಿಕೆ ಹೊಡೆಯುವ ಅಂತರದಲ್ಲಿ ಬದುಕು ಬದಲಾಗುತ್ತದೆ. ಆಹ್ಲಾದಕರ ಹಚ್ಚ ಹಸಿರ ವನಸಿರಿ ಧಗೆಯ ಬೆಂಗಾಡಾಗಿ ಮಾರ್ಪಾಡಾಗುತ್ತದೆ. ಬದುಕೆಂಬ ರಣಭೂಮಿಯಲ್ಲಿ ಸಮರಾನಂತರ ಅಳಿದುಳಿದ ಅವಶೇಷಗಳಂತೆ ಒಡೆದ ಸ್ವಪ್ನಗುಚ್ಛದ ಮೊನಚಾದ ಚೂರುಗಳು ಉಳಿಯುತ್ತವಷ್ಟೇ. ಆ ಕುಟುಕು ಜೀವದ ಚೂರುಗಳನ್ನೂ ಬಿಡದೇ ಹರಿದು ತಿನ್ನುವ ನರರೂಪದ ರಣಹದ್ದುಗಳಿಗೇನೂ ಕೊರತೆಯಿಲ್ಲ ಈ ಜಗದಲ್ಲಿ. ಬದುಕಿನ ಈ ಯಾನದ ಕೊನೆಯಲ್ಲಿ ಉಳಿಯುವುದು ನಿರಾಸೆಗಳ ನಿಟ್ಟುಸಿರಿನಿಂದ ಆವಿರ್ಭವಿಸುವ ನೀರವ ಮೌನವೊಂದೇ.......

ಆದರೆ ಅದೇ ಬರಡಾದ ಬಾಳಿಗೆ ಮತ್ತೆ ಸಂತಸದ ರಂಗನ್ನು ತುಂಬಲು ಮಾತ್ರ ಸಂಪೂರ್ಣ ಆಯುಷ್ಯವೂ ಸಾಲದೇ ಹೋಗುತ್ತದೆ. ಕಹಿನೆನಪುಗಳ ಜಿದ್ಮ ಶರಗಳು ಬಿಟ್ಟೂ ಬಿಡದೆ ಮನಃಪಟಲವನ್ನು ಛಿದ್ರಗೊಳಿಸಿ ಅಟ್ಟಹಾಸಗೈಯುವಾಗ ನರಳುವ ಮನದ ಮೇಲೆ ಮರೆವಿನ ಮುಸುಕೆಳೆದು ಮೊಗದ ಮೇಲೆ ನಗುವಿನ ಬಣ್ಣ ಬಳಿದು ನಟಿಸದೇ ಗತ್ಯಂತರವಿಲ್ಲ. ಹೇಗೋ ಎಂತೋ….. ಸಾವು ದೇಹದ ಬಾಗಿಲು ತಟ್ಟುವವರೆಗೆ ಬದುಕಲೇಬೇಕಲ್ಲವೇ….? ಹಾಗೆ ಬದುಕುವುದಕ್ಕೊಂದು ಕಾರಣ ಬೇಡವೇ? ವಿಸ್ಮರಣಕ್ಕಿಂತ ಉತ್ತಮ ಕಾರಣ ಬೇರಾವುದು? ಎಲ್ಲವನ್ನೂ ಮರೆತುಬಿಟ್ಟಿದ್ದೇವೆ ಅಂದುಕೊಂಡರೆ ಬದುಕು ಅಬೋಧ ಹಸುಳೆಯಂತೆ ಎಷ್ಟೊಂದು ಶಾಂತ….!! ಆದರೆ ಮರೆವಿನ ವರ ಪಡೆವುದು ಸುಲಭ ಸಾಧ್ಯವೇ? ಆಗಿ ಹೋದ ಕರಾಳ ಅಧ್ಯಾಯಗಳು ಹಗಲಿರುಳು ದುಃಸ್ವಪ್ನವಾಗಿ ಕಾಡುವಾಗ ಎಲ್ಲ ಮರೆತು ಮುಂದೆಸಾಗುತ್ತೇವೆಂಬುದು ಕೇವಲ ನಮ್ಮ ಭ್ರಮೆಯಷ್ಟೇ. ನಾವು ಏನನ್ನೂ ಮರೆಯುವುದಿಲ್ಲ. ಕೇವಲ ಮರೆತಂತೆ ತೋರಿಸಿಕೊಳ್ಳುತ್ತೇವೆ.

ಬೇಲಾ ಎಂದರೆ ಅಂತಹುದೇ ಒಂದು ಮರೆತಂತೆ ನಟಿಸುವ ವಾಸ್ತವದಲ್ಲಿ ಮರೆತೂ ಮರೆಯಲಾಗದ ನೆನಪು‌….

ಬೇಲಾ ಎಂದರೆ ಬದುಕನ್ನು ಬದಲಾಯಿಸುವ 'ಆ ಒಂದು ಕ್ಷಣ'ವಾಗಿ ಈ ಸಿಯಾ ಎಂಬ ಹತಭಾಗ್ಯೆಯ ಬದುಕಿನ ಪುಟದಲ್ಲಿ ದಾಖಲಾದ ನತದೃಷ್ಟೆ……

ಬೇಲಾ ಎಂದರೆ ಹೊರಗೆ ಸಭ್ಯಸ್ಥರೆಂಬ ಡೌಲು ತೋರಿಸಿಕೊಂಡು ಮೆರೆವವರ ಅಂತರಂಗದ ಕುರೂಪತೆಗೆ ಹಿಡಿದ ಕೈಗನ್ನಡಿ……

ಬೇಲಾ ಎಂದರೆ………. 'ಹೀಗೇಕೆ?' ಎಂಬ ಉತ್ತರ ಸಿಗದ ಪ್ರಶ್ನೆಗಳ ಸಂಪುಟ……!!

ಇದು ಹೀಗೇ ನಡೆಯಬೇಕೆಂಬುದು ನಿಯತಿಯ ನಿಯಮವಿತ್ತೇ? ಇಲ್ಲವಾದರೆ ಮೊದಲೇ ಗೋಜಲಾಗಿದ್ದ ನನ್ನ ಬದುಕಿನ ಎಳೆಗಳು ಬಿಡಿಸಲಾಗದ ಕಗ್ಗಂಟಾಗಲು ಬೇಲಾ ಏಕೆ ನಿಮಿತ್ತವಾಗಬೇಕಿತ್ತು? ಇಷ್ಟಕ್ಕೂ ಬೇಲಾಳ ಆಗಮನದ ನಂತರ ನಾನು ನತದೃಷ್ಟೆಯಾದುದೇನಲ್ಲ. ಹೆಣ್ಣೆಂಬ ಅಸ್ತಿತ್ವದೊಂದಿಗೆ ಎಂದು ಮಾಯಿಯ ಒಡಲಿಗೆ ಬಿದ್ದೆನೋ ಆ ಘಳಿಗೆಯಲ್ಲೇ ಅದೃಷ್ಟವೆಂಬುದು ನನ್ನ ಕೈ ಬಿಟ್ಟಿತ್ತು. ನನ್ನ ಜೀವನವೆಲ್ಲಾ ನನ್ನ ಸ್ವಂತ ಹೋರಾಟದ ಫಲವಿತ್ತೇ ಹೊರತು ಯಾವ ಭಾಗ್ಯವೂ ನನ್ನನ್ನು ಕಾದಿರಲಿಲ್ಲ. ಆದರೆ ಇಲ್ಲಿಯವರೆಗಿನ ನನ್ನ ಜೀವನದ ಸೂತ್ರ ನನ್ನ ಕೈಯಲ್ಲಿತ್ತು. ಭಾಗ್ಯವೋ, ದೌರ್ಭಾಗ್ಯವೋ ಎರಡೂ ನನ್ನ ನಿರ್ಣಯಗಳ ಸರಹದ್ದಿನ ಮಿತಿಯೊಳಗೇ ಇತ್ತು.

ಆದರೆ ಬೇಲಾಳಿಂದಾಗಿ ಬದುಕಿನ ಕಡಿವಾಣ ನನ್ನ ಕೈತಪ್ಪಿ ಹೋಯಿತು. ನನ್ನ ಜೀವನ ಸೂತ್ರ ಹರಿದ ಪಟದಂತಾಯಿತು. ಏನೇನೆಲ್ಲಾ ಘಟಿಸಿಹೋಯಿತು ನನ್ನ ಬದುಕಿನಲ್ಲಿ…..!! ಈ ಸಿಯಾಳನ್ನು ಎಂತಹ ಅಗ್ನಿಪರೀಕ್ಷೆಗೆ ಗುರಿಮಾಡಿತು ಈ ಸಮಾಜ…. ಇಂತಹ ಬದುಕನ್ನು ಬದುಕುವುದಕ್ಕಿಂತ ಸಾವೇ ಮಿಗಿಲ್ಲಲ್ಲವೇ ಎಂದು ಲೆಕ್ಕವಿಲ್ಲದಷ್ಟು ಬಾರಿ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಅತ್ತ ಬದುಕಿನ ಹೋರಾಟ ನಡೆಸಲೂ ತ್ರಾಣವಿಲ್ಲದೇ,
ಇತ್ತ ಮನದ ಬಡಬಾಗ್ನಿಯ ತಾಪ ಸಾಯಲೂ ಅನುಮತಿಸದೇ ರೌರವ ಅಸಹಾಯಕತೆಯನ್ನೇ ಉಸಿರಾಡಿದ್ದೇನೆ. ಇದೆಲ್ಲವೂ ಆರಂಭವಾಗಿದ್ದು ಅದೊಂದೇ ಘಟನೆಯಿಂದ…... ಬೇಲಾಳಿಂದ …..

ಬೇಲಾ ಪರ್ಮಾರ್……

ಅದೇ ಭೈರೋನ್ ಗ್ರಾಮದವಳು. ನನ್ನದೇ ಓರಗೆಯವಳು. ಆದರೆ ಗುಣ ಸ್ವಭಾವದಲ್ಲಿ ನಾವಿಬ್ಬರೂ ವಿರುದ್ಧ ಧ್ರುವಗಳು. ಸದಾ ಗಂಭೀರವಾಗಿರುವ ನಾನು ಚಾಚಿ ಸತ್ತ ಬಳಿಕ ನಗುವನ್ನೇ ಮರೆತಿದ್ದೆನೆಂದರೆ ಅತಿಶಯೋಕ್ತಿಯಲ್ಲ. ಆದರೆ ಬೇಲಾ ಹಾಗಲ್ಲ. ಎಂದಿಗೂ ಮಾಸದ ಮಂದಹಾಸವೊಂದು ಅವಳ ತುಟಿಯಂಚಿನಲ್ಲೇ ಕುಳಿತಿರುತ್ತಿತ್ತು. ಹೆಚ್ಚಿನ ಸಮಯ ಮೌನವಾಗಿರುವೆನಾದರೂ ಬಾಯ್ತೆರೆದರೆ ಎದುರಿರುವವರು ಮೌನವಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಸುವಂತಹ ಹರಿತವಾದ ಮಾತಿನ ಒಡತಿ ನಾನು. ಆದರೆ ಮೌನದಲ್ಲೂ ಸ್ಪಷ್ಟವಾಗಿ ಕೇಳಲಾರದಷ್ಟು ಮೆದು ಮಾತಿನವಳು ಬೇಲಾ. ಅವಳ ಮಾತಿಗೂ ಮೌನಕ್ಕೂ ಅಂತಹ ವ್ಯತ್ಯಾಸವಿರಲಿಲ್ಲ. ಹೆಚ್ಚು ಮೌನವನ್ನೇ ಆಶ್ರಯಿಸಿದ್ದ ಆ ಮಿತಭಾಷಿ ಹೆಣ್ಣಿನ ಭಾವಪೂರ್ಣ ಕಂಗಳೇ ಬಹಳಷ್ಟು ಮಾತನಾಡುತ್ತಿದ್ದದ್ದು ಸುಳ್ಳಲ್ಲ.

ನಿಸ್ಸಂಶಯವಾಗಿ ಬೇಲಾ ಭೈರೋನ್ ಗ್ರಾಮದಲ್ಲೇ ಅತ್ಯಂತ ಭಾಗ್ಯಶಾಲಿ ಹೆಣ್ಣುಮಗಳಾಗಿದ್ದಳು. ಅದು ಹಣ, ಹೊನ್ನಿನ ಸಿರಿವಂತಿಕೆಯ ಭಾಗ್ಯವಲ್ಲ. ಅವೆಲ್ಲಕ್ಕೂ ಮಿಗಿಲಾದ ಅದೃಷ್ಟ, ಇಲ್ಲಿನ ಯಾವೊಬ್ಬ ಹೆಣ್ಮಗಳೂ ಕನಸಲ್ಲೂ ಕಾಣಲಾಗದ ಭಾಗ್ಯ........ ಹೆತ್ತವರ ಮಮತೆ, ಅಕ್ಕರೆಯ ಆರೈಕೆಯಲ್ಲಿ ಅವರ ಕಣ್ಮಣಿಯಾಗಿ ಬೆಳೆಯುವ ಮಹಾ ಅದೃಷ್ಟವದು. ನನ್ನಂತಹ ಸಾವಿರಾರು ಲಾಲಿಯರನ್ನು ಕಾಡಿ ಕಂಗೆಡಿಸುತ್ತಿದ್ದ 'ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ' ಎಂಬ ಪ್ರಶ್ನೆ ಎಂದಿಗೂ ಅವಳ ಸಮೀಪವೂ ಸುಳಿದಿರಲಿಲ್ಲ. ಭೈರೋನ್ ಸಮೀಪದ ಮಖೇಡಾ ಗ್ರಾಮದಲ್ಲಿ ಉಪಾಧ್ಯಾಯರಾಗಿದ್ದ ಕೇಶವ್ ಪರ್ಮಾರರ ಏಕ ಮಾತ್ರ ಸಂತಾನ ಬೇಲಾ. ಬೇಲಾಳಿಗೆ ಐದಾರು ವರ್ಷವಾಗಿದ್ದಾಗಲೇ ಅವಳ ಮಾಯಿ ಅನಾರೋಗ್ಯದಿಂದ ಮರಣಿಸಿದ್ದರು. ಬದುಕಿದ್ದಾಗಲೂ ಅವರ ಆರೋಗ್ಯ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಬೇಲಾಳ ಪಾಲನೆ ಪೋಷಣೆಯ ಸಂಪೂರ್ಣ ಜವಾಬ್ದಾರಿ ಕೇಶವ್ ಚಾಚಾರದ್ದೇ ಆಗಿತ್ತು. ಹೆಂಡತಿಯ ಮರಣಾನಂತರ ಮನಸ್ಸು ಮಾಡಿದ್ದರೆ ಕೇಶವ್ ಚಾಚಾ ಮರುಮದುವೆಯಾಗಬಹುದಿತ್ತು. ಎಷ್ಟೆಂದರೂ ತಮ್ಮ ಮನೆಯ ಹೆಣ್ಣನ್ನು ಯಾರದಾದರೂ ತಲೆಗೆ ಕಟ್ಟಿ ಕೈತೊಳೆದುಕೊಳ್ಳಲು ಹಪಹಪಿಸುವ ಜನರಿಗೇನೂ ಕೊರತೆಯಿರಲಿಲ್ಲ ನಮ್ಮಲ್ಲಿ. ಅದರಲ್ಲೂ ಚಾಚಾ ಸರ್ಕಾರಿ ಉದ್ಯೋಗದಲ್ಲಿದ್ದರೆಂದ ಮೇಲೆ ಕೇಳಬೇಕೇ? ಅವರ ಮುಂದೆ ಬೇಕಾದಷ್ಟು ಆಯ್ಕೆಗಳಿದ್ದವು. ಆದರೆ ಚಾಚಾ ಆ ಬಗ್ಗೆ ಕನಿಷ್ಠ ಯೋಚನೆಯನ್ನೂ ಕೂಡಾ ಮಾಡಲಿಲ್ಲ. ಅವರ ಬದುಕಿನ ಏಕೈಕ ಲಕ್ಷ್ಯ ಬೇಲಾ ಮಾತ್ರವಾಗಿದ್ದಳು. ಶಾಲೆ, ಮನೆ, ಮಗಳು ಇಷ್ಟೇ ಅವರ ಪ್ರಪಂಚವಾಗಿತ್ತು.

ಕೇಶವ್ ಚಾಚಾರನ್ನು ಕಾಣುವಾಗಲೆಲ್ಲಾ ಅರಿವಿಲ್ಲದೇ ನನ್ನ ಮನಸ್ಸು ಅವರೊಂದಿಗೆ ನನ್ನ ಬಾಪುವನ್ನು ಹೋಲಿಸಲು ತೊಡಗಿಬಿಡುತ್ತಿತ್ತು. ಗಟ್ಟಿಮುಟ್ಟಾಗಿ ಹತ್ತಾಳಿನ ಕೆಲಸ ಒಬ್ಬಳೇ ಮಾಡುತ್ತಿದ್ದ ಮಾಯಿಯನ್ನು ದನಕ್ಕೆ ಬಡಿದಂತೆ ಬಡಿಯುತ್ತಿದ್ದ ಬಾಪು. ವರ್ಷಗಳ ಕಾಲ ಹಾಸಿಗೆ ಹಿಡಿದ ಪತ್ನಿಯನ್ನು ಮಗುವಿನಂತೆ ನೋಡಿಕೊಂಡಿದ್ದರು ಕೇಶವ್ ಚಾಚಾ. ನನ್ನ ಮಾಯಿ ಜೀವಂತವಿದ್ದಾಗಲೇ ಇನ್ನೊಂದು ಬಿಹಾ ಮಾಡಿಕೊಂಡು ಹೊಸ ಲುಗಾಯಿಯನ್ನು ಮನೆಗೆ ತಂದಿದ್ದ ಬಾಪು. ಹೆಂಡತಿ ಸತ್ತ ಮೇಲೆಯೂ ಇನ್ನೊಂದು ಮದುವೆಯಾಗದೇ ಮಗಳಿಗಾಗಿಯೇ ತಮ್ಮ ಬದುಕನ್ನು ಮುಡುಪಿಟ್ಟವರು ಕೇಶವ್ ಚಾಚಾ. ಇದು ಶಿಕ್ಷಣದಿಂದ ಸಿಕ್ಕ ಸಂಸ್ಕಾರವಿತ್ತೋ ಇಲ್ಲಾ ಸ್ವಭಾವತಃ ಕೇಶವ್ ಚಾಚಾ ಸಂಸ್ಕಾರವಂತರಿದ್ದರೋ ಹೇಳುವುದು ಕಷ್ಟವಿತ್ತು. ಆದರೂ ಅವರ ಇಂತಹ ವಿಶಾಲ ಯೋಚನೆಗಳಲ್ಲಿ ಅವರು ಪಡೆದ ಶಿಕ್ಷಣದ ಪ್ರಭಾವ ಬಹಳವಿತ್ತು ಎಂದು ಬಲವಾಗಿ ಅನ್ನಿಸುತ್ತದೆ ನನಗೆ. ಬಹುಶಃ ಸಹೃದಯರಾಗಿದ್ದ ಅವರ ವ್ಯಕ್ತಿತ್ವಕ್ಕೆ ಶಿಕ್ಷಣ ಇನ್ನಷ್ಟು ಮೆರುಗು ನೀಡಿ ವಿವೇಚನೆಯ ಹೊನ್ನ ಚೌಕಟ್ಟು ಒದಗಿಸಿತ್ತು.

ಸ್ವತಃ ಉಪಾಧ್ಯಾಯರಾಗಿದ್ದ ಕೇಶವ್ ಚಾಚಾರಿಗೆ ಬೇಲಾಳನ್ನು ಶಾಲೆಗೆ ಕಳಿಸಲು ಬಹಳ ಮನವಿತ್ತು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರೂ ಕೂಡಾ. ಆವತ್ತು ನಡೆದ ಪಂಚಾಯತ್ ದೊಂಬರಾಟ ಇಂದಿಗೂ ನನ್ನ ಕಣ್ಮುಂದಿದೆ. ಈ ವಿಚಾರ ಕಿವಿಗೆ ಬಿದ್ದೊಡನೆ ಯಾವುದೋ ಮಹಾನ್ ಆಪತ್ತು ಬಂದೊದಗಿದಂತೆ, ಇನ್ನೇನು ಪ್ರಳಯವೇ ಸಂಭವಿಸಿ ಜಗತ್ತು ನಾಶವಾಗಲಿದೆ ಎನ್ನುವಂತಹ ಭೀತಿಯಿಂದ ಊರಿನ ಮುಕ್ಕಾಲು ಪ್ರತಿಶತ ಜನರು ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ಯಾವುದೋ ಉದಾತ್ತ ವಿಚಾರಕ್ಕಾಗಿ ಹೋರಾಡುವ ಮಹಾನ್ ಸಾಧಕರಂತೆ ಒಟ್ಟಾಗಿ ಕೇಶವ್ ಚಾಚಾರನ್ನು ವಿರೋಧಿಸಿದ್ದರು. ಊರಿಡೀ ಡಂಗುರ ಸಾರಿ ಲಗುಬಗೆಯ ಪಂಚಾಯತ್ ಬೈಠಕ್ ಕರೆಯಲಾಯಿತು. ಯಾರದೋ ಖೂನಿ ಮಾಡಿ ಸಿಕ್ಕಿಬಿದ್ದವನನ್ನು ಪ್ರಶ್ನಿಸುವಂತಿತ್ತು ಅಂದಿನ ಬೈಠಕ್. ಕೇಶವ್ ಚಾಚಾರಿಗೆ ಕನಿಷ್ಠ ಬಾಯಿ ತೆರೆಯಲೂ ಅವಕಾಶವಿಲ್ಲದಂತೆ ಸಲಹೆ, ಸೂಚನೆ, ಆದೇಶಗಳ ಜಡಿಮಳೆ ಸುರಿದಿತ್ತು ಎಲ್ಲರಿಂದ. 

"ಪಹ್ಲೇ ಥಾರೀ ಚೋರಿ ಕೀ ಲಗಾಮ್ ಸಂಭಾಲ್ ಕೇಸವ್. ಇತ್ನಾ ಢೀಲಾ ಮತ್ ಚೋಡೋ. ಕಹೀ ಕಲ್ ಯೇ ಥಾರೀ ನಾಕ್ ನಾ ಕಟ್ವಾಯೇ...." ಎಂಬ ಸರಪಂಚನ ಕಟ್ಟೆಚ್ಚರಿಕೆಯ ಜೊತೆಗೇ ನೆರೆದಿದ್ದ ಗುಂಪಿನಿಂದ 'ಅರೇ… ಚೋರಿ ಕೋ ಪಡ್ನೇ ಕೀ ಕಾ ಜರೂರತ್ ಹೋವೇ? ಜಾಢೂ - ಪೋಚಾ ಲಗಾನಾ, ಖಾನಾ ಪಕಾನಾ ಏ ಸಬ್ ಸಿಖಾವೋ ಉಸೇ. ಬಡಾ ಆಯಾ ಲಡ್ಕೀ ಕೋ ಇಸ್ಕೂಲ್ ಬೇಜ್ನೇ ವಾಲಾ' ಎಂಬ ಹೀಯಾಳಿಕೆಯ ಮಾತುಗಳೂ ಉಚಿತವಾಗಿ ದೊರೆತಿದ್ದವು. ಈ ವಿರೋಧ ಗಂಡಸರಷ್ಟೇ ಪ್ರಬಲವಾಗಿ ಅಲ್ಲಿ ನೆರೆದಿದ್ದ ಮಹಿಳೆಯರಿಂದಲೂ ಬಂದಿತ್ತು. 'ಹೆಣ್ಣಾಗಿ ಜನಿಸಿದ್ದೇ ತಮ್ಮ ಪೂರ್ವಜನ್ಮದ ಕುಕರ್ಮಗಳ ಫಲ. ಇನ್ನು ಶಾಲೆಗೆ ಹೋಗುವುದೆಂದರೆ, ಗಂಡಸರ ಸರಿಸಮಾನವಾಗಿ ಕಲಿಯುವುದೆಂದರೆ ಏನರ್ಥ? ತಮ್ಮ ಜೀವನವೇನಿದ್ದರೂ ಮನೆಯ ನಾಲ್ಕು ಗೋಡೆಯ ಚೌಕಟ್ಟಿಗಷ್ಟೇ ಸೀಮಿತ' ಎನ್ನುವ ಇವರ ತರ್ಕವೇ ಎಷ್ಟು ವಿಚಿತ್ರ. ಹಿಂದಿನ ಕರ್ಮಗಳ ಫಲವನ್ನು ಈ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಅನುಭವಿಸುತ್ತಿದ್ದೇವೆ ಎಂದುಕೊಳ್ಳುವವರಿಗೆ ಈ ಜನ್ಮದಲ್ಲಿನ ಶಿಶುಹತ್ಯೆಯಂತಹ ಘೋರ ಕರ್ಮದ ಪಾಪ ಸುತ್ತಿಕೊಳ್ಳುವುದಿಲ್ಲವೇ? ಪೂರ್ವ ಜನ್ಮದ ಪಾಪಗಳಿಗೆಲ್ಲಾ ಹೆಣ್ಣಾಗಿ ಜನಿಸುವುದೇ ಶಿಕ್ಷೆ ಎಂದಾದರೆ ಸೃಷ್ಟಿಗೆ ಮೂಲವಾದ ಇನ್ನೊಂದು ಜೀವಕ್ಕೆ ಜೀವ ಕೊಡುವ ಮಾತೃತ್ವದ ಭಾಗ್ಯ ಹೆಣ್ಣಿಗೇ ಏಕೆ ದೊರಕಿತು? ಹೆಣ್ಣೇ ಇಲ್ಲದ ಲೋಕವನ್ನು ಊಹಿಸಲಾದೀತೇ? ಸೃಷ್ಟಿಕ್ರಿಯೆಯಲ್ಲಿ ಗಂಡಿನಷ್ಟೇ ಪಾತ್ರ ಹೆಣ್ಣಿನದ್ದೂ ಇದೆಯಲ್ಲವೇ? ಹಾಗಿದ್ದ ಮೇಲೆ ಈ ಪಾಪಪುಣ್ಯಗಳ ಲೆಕ್ಕಾಚಾರ, ಅದೃಷ್ಟ ಅನಿಷ್ಟಗಳ ಹಂಚಿಕೆ ಅದು ಹೇಗಾಯಿತೋ ನಾ ಕಾಣೆ.

ಒಟ್ಟಿನಲ್ಲಿ ಆ ದಿನದ ಬೈಠಕ್ ಬೇಲಾಳಿಗೆ ಔಪಚಾರಿಕ ಶಿಕ್ಷಣ ನೀಡುವ ಚಾಚಾರ ಕನಸಿಗೆ ಕೊಳ್ಳಿ ಇಟ್ಟಿತ್ತು. ಹಾಗೊಂದು ವೇಳೆ ಅವಳನ್ನು ಶಾಲೆಗೆ ಸೇರಿಸಲೇಬೇಕೆಂದರೆ ಚಾಚಾ ಊರಿನ ಜನರ ವಿರೋಧ ಕಟ್ಟಿಕೊಳ್ಳಬೇಕಿತ್ತು. ಹಾಗಾದ ಪಕ್ಷದಲ್ಲಿ ಚಾಚಾ ಹಾಗೂ ಬೇಲಾ ಇಬ್ಬರೂ ಜೀವ ಕಳೆದುಕೊಳ್ಳುವುದು ಖಚಿತವಿತ್ತು. ಯಾವ ತಪ್ಪೂ ಮಾಡದ ನವಜಾತ ಶಿಶುಗಳನ್ನೇ ಬಿಡದ ಈ ರಕ್ಕಸರು ತಮ್ಮ ಮಾತನ್ನು ಧಿಕ್ಕರಿಸುವವರನ್ನು ಬದುಕಲು ಬಿಟ್ಟಾರೇ? ಪಂಚಾಯತಿಯ ನಿರ್ಧಾರ ವಿರೋಧಿಸುವುದೆಂದರೆ ಅಪಾಯಕಾರಿ ಅಲೆಗಳ ವಿರುದ್ಧ ಈಜಲು ನಿರ್ಧರಿಸಿದಂತೆಯೇ ಸೈ. ಆದರೆ ಶಾಂತ ಬದುಕನ್ನು ಬಯಸುತ್ತಿದ್ದ ಕೇಶವ್ ಚಾಚಾರಿಗೆ ಇಂತಹ ಹೋರಾಟ ಬೇಕಿರಲಿಲ್ಲ. ನಾಳೆ ಇದರಿಂದಾಗಿ ಬೇಲಾಳಿಗೆ ಒದಗಬಹುದಾದ ಸಂಭಾವ್ಯ ಆಪತ್ತುಗಳನ್ನು ಪರಿಗಣಿಸಿ ಅವಳನ್ನು ಶಾಲೆಗೆ ಕಳಿಸುವ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದರು ಚಾಚ.

ಆದರೆ ಅವಳ ಕಲಿಕೆ ನಿಲ್ಲಲಿಲ್ಲ. ಬದಲಿಗೆ ಅಂದಿನಿಂದ ಮನೆಯೇ ಬೇಲಾಳಿಗೆ ಪಾಠಶಾಲೆಯಾಯಿತು. ದಿನವೂ ಸಂಜೆಯ ನಂತರ ಹಾಗೂ ನಸುಕಿನಲ್ಲಿ ಚಾಚಾರ ಮಾರ್ಗದರ್ಶನದಲ್ಲಿ ಅವಳ ಕಲಿಕೆ ಸುಗಮವಾಗಿ ಸಾಗಿತ್ತು. ಚಾಚಾರ ಮನೆಯ ತೀರಾ ಸಮೀಪದಲ್ಲಿ ಮತ್ಯಾವ ಮನೆಗಳೂ ಇಲ್ಲದೆ ಕಾರಣ ಈ ಬಗ್ಗೆ ಯಾರಿಗೂ ಅನುಮಾನ ಬರುವ ಸಾಧ್ಯತೆಯೂ ಇರಲಿಲ್ಲ. ನಮ್ಮ ತೋಟದಾಚೆಗಿನ ಕಾಲು ಹಾದಿಯಲ್ಲಿ ಗಾವುದ ದೂರ ನಡೆದರೆ ಬೇಲಾಳ ಮನೆ. ಮೊದಲಿನಿಂದಲೂ ಕೇಶವ್ ಚಾಚಾ ಎಂದರೆ ಅದೇನೋ ಗೌರವ ನನಗೆ. ಪಂಚಾಯಿತಿಯಲ್ಲಿ ಬೇಲಾಳ ಶಾಲೆಯ ವಿಚಾರ ಬಂದ ನಂತರವಂತೂ ಗೌರವದೊಂದಿಗೆ ಅಭಿಮಾನವೂ ಬೆಳೆದಿತ್ತು ಅವರ ಮೇಲೆ. ರಾಕ್ಷಸರ ಲೋಕದೊಳಗೊಬ್ಬ ದೇವಮಾನವನನ್ನು ಕಂಡಂತಾಗಿತ್ತು ನನಗೆ. ಅದರೊಟ್ಟಿಗೇ ನಾನೂ ಬೇಲಾಳೊಂದಿಗೆ ಕಲಿಯುವಂತಿದ್ದರೆ ಎಷ್ಟು ಚೆನ್ನಿತ್ತು ಎಂಬ ಯೋಚನೆಯೂ ಸದಾ ನನ್ನೊಳಗೆ ಸುಳಿಯುತ್ತಿತ್ತು. ಅವರು ಬೇಲಾಳೊಟ್ಟಿಗೆ ನನಗೂ ಪಾಠ ಹೇಳುವರೆಂಬ ವಿಶ್ವಾಸವೇನೋ ಇತ್ತು. ಆದರೆ ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡಲು ನನಗೆ ಸಾಧ್ಯವಿರಲಿಲ್ಲ. ಇನ್ನು ಬೆಳಗಿನ ಜಾವದಲ್ಲಿ ತೀರದ ಕೆಲಸದ ಹೊರೆ. ಆ ಕೆಲಸಗಳನ್ನು ಉಸಿರುಗಟ್ಟಿ ಮುಗಿಸಿ ಶಾಲೆಯ ಬಳಿ ಹೋಗುವಾಗಲೇ ಸಮಯ ಮೀರಿರುತ್ತಿತ್ತು. ಇನ್ನು ಚಾಚಾರ ಬಳಿ ಹೋಗುವುದೆಂತು? ಹೇಗೋ ಸಮಯ ಹೊಂದಿಸಿಕೊಂಡು ಹೋಗುವಾ ಎಂದುಕೊಂಡೆನಾದರೂ ಈ ಬಗ್ಗೆ ಮನೆಯಲ್ಲಿ ಅಥವಾ ಊರಿನ ಇನ್ಯಾರಿಗಾದರೂ ತಿಳಿದರೆ ಕೇಶವ್ ಚಾಚಾ ಹಾಗೂ ಬೇಲಾ ಇಬ್ಬರೂ ತೊಂದರೆಗೆ ಸಿಲುಕುತ್ತಾರೆ ಎಂಬ ಚಾಚಿಯ ಎಚ್ಚರಿಕೆಯ ಮಾತುಗಳಲ್ಲಿನ ಸತ್ಯ ನನ್ನ ನಿರ್ಧಾರವನ್ನು ಬದಲಿಸುವಂತೆ ಮಾಡಿತ್ತು.

ಆದರೆ ಚಾಚಿಯ ಮರಣಾನಂತರ ನಾನು ಹಿಂದಿನ ಸಿಯಾಳಾಗಿ ಉಳಿಯಲಿಲ್ಲ. ಮೊದಲಿನಿಂದಲೇ ನನ್ನೊಳಗೆ ಹೊಗೆಯಾಡುತ್ತಿದ್ದ ಬಂಡಾಯದ ಮನಸ್ಥಿತಿ ಸಂಪೂರ್ಣ ಜಾಗೃತವಾಗಿತ್ತು. ಜಗತ್ತೇ ವಿರುದ್ಧ ನಿಂತರೂ ನನ್ನ ಹಾದಿ ಕಿಂಚಿತ್ತೂ ಬದಲಿಸಲಾರೆ ಎಂದು ನಿರ್ಧರಿಸಿಬಿಟ್ಟಿದ್ದೆ ನಾನು. ಗೆಲುವೋ ಸೋಲೋ ಯಾವುದಾದರೂ ಸರಿಯೇ ಆದರೆ ಜೀವಚ್ಛವದಂತಹ ಬದುಕಿಗಿಂತ ನರಕವೇ ಮೇಲಲ್ಲವೇ? ಅಲೆಗಳ ವಿರುದ್ಧ ಈಜುವುದೆಂದು ಗಟ್ಟಿ ಮನದಿಂದ ನಿರ್ಧರಿಸಿದ ಮೇಲೆ ನನಗ್ಯಾವ ಭಯವೂ ಇರಲಿಲ್ಲ. ಇವೆಲ್ಲದರ ನಡುವೆ ಚಾಚಿಯ ಸಾವಿನ ನಂತರ ಓದಿನಲ್ಲೂ ನನ್ನ ಆಸಕ್ತಿ ಕುಂದಿತ್ತು. ಹೆಣ್ಣೆಂದರೆ 'ಪೇರೋಂಕಿ ಜುತ್ತಿ' ಎನ್ನುವ ಜನರಿಂದ, ಕೈ ಕಾಲುಗಳಿಗೆ ರೀತಿ-ರಿವಾಜುಗಳ ಸಂಕೋಲೆ ತೊಡಿಸಿ ಕೊಲ್ಲುವ ಈ ಹಾಳು ಬಂಧನದಿಂದ ಮುಕ್ತಳಾಗಿ ಸ್ವಚ್ಛಂದವಾಗಿ ಉಸಿರಾಡಬೇಕು, ನನ್ನಿಷ್ಟದಂತೆ ಬದುಕಬೇಕೆಂಬ ಹಂಬಲವೊಂದೇ ಗಟ್ಟಿಯಾಗಿ ನೆಲೆಯೂರತೊಡಗಿತ್ತು ನನ್ನಲ್ಲಿ. ಹಾಗಾಗಿಯೇ ನನಗೆ ಪಾಠಕ್ಕಾಗಿ ಕೇಶವ್ ಚಾಚಾರ ಬಳಿ ಹೋಗಬೇಕೆನಿಸಲಿಲ್ಲ.

ಆದರೆ ಚಾಚಿಯ ಸಾವಿನ ನಂತರ ಅವರೇ ಬೇಲಾಳೊಂದಿಗೆ ನನ್ನನ್ನು ಅರಸಿ ಬಂದಿದ್ದರು ಯಮುನೆಯ ತಟಕ್ಕೆ. ಆ ವೇಳೆಗಾಗಾಲೇ ನಾನು ಚಾಚಾನ ತಲೆಯೊಡೆದ ವಿಷಯ ಊರಜನರ ಬಾಯಲ್ಲಿ ಹರಿದಾಡತೊಡಗಿತ್ತು. ಎಲ್ಲರೂ ಅವರಿಷ್ಟ ಬಂದಂತೆ ಕಥೆ ಕಟ್ಟಿದ್ದರು. ಆಗಲೇ ಕೇಶವ್ ಚಾಚಾರಿಗೆ ನನ್ನ ಬಗ್ಗೆ ತಿಳಿದದ್ದು. ಅವರಿಗೆ ನನ್ನ ಮನದ ತುಮುಲಗಳನ್ನು ಗ್ರಹಿಸುವಷ್ಟು ಪ್ರಬುದ್ಧತೆಯಿತ್ತು. ನನ್ನ ಕಣ್ಣುಗಳಲ್ಲಿನ ರೋಷದ ಹಿಂದಿನ ನೋವನ್ನು ಗುರುತಿಸಿದ್ದರು ಅವರು. ನಂತರದ ದಿನಗಳಲ್ಲಿ ಅವರಿಬ್ಬರು ನನ್ನೆಡೆಗೆ ವಿಶೇಷ ಆದರವನ್ನು ತೋರಿ ಮುತುವರ್ಜಿ ವಹಿಸತೊಡಗಿದ್ದರು. ನನ್ನ ಕಾರಣದಿಂದಾಗಿ ಅವರಿಬ್ಬರಿಗೂ ಏನಾದರೂ ಸಮಸ್ಯೆಯಾಗಬಹುದೇ ಎಂಬ ಅವ್ಯಕ್ತ ಭಯವೊಂದು ಸದಾ ನನ್ನನ್ನು ಕಾಡುತ್ತಿತ್ತು. ನಾನೇನೋ ಏನಾಗುವುದೋ ನೋಡೇ ಬಿಡುವೆ ಎಂಬ ಧೈರ್ಯದಲ್ಲಿ ಜೀವಿಸುತ್ತಿದ್ದೆ. ಆದರೆ ಕೇಶವ್ ಚಾಚಾ ಹಾಗಲ್ಲ. ಮೊದಲೇ ಈ ಊರಿನ ಜನರಿಗೆ ಸಂಪೂರ್ಣ ವಿರುದ್ಧವಾದ ಮೃದು ಮನಸತ್ವ ಅವರದು. ಗಲಾಟೆ, ಗೊಂದಲಗಳಲ್ಲೇ ಮುಳುಗಿದ ಬದುಕು ಅವರಿಗೆ ಎಂದೂ ಬೇಕಿರಲಿಲ್ಲ. ಅಂತಹವುಗಳನ್ನು ಎದುರಿಸಿ ನಿಲ್ಲುವಂತಹ ಉಗ್ರ ವ್ಯಕ್ತಿತ್ವವೂ ಅವರದಲ್ಲ. ನನ್ನಿಂದಾಗಿ ಅವರಿಗೇನಾದರೂ ತೊಂದರೆಯಾದರೆ ಜೀವನಪರ್ಯಂತ ಆ ಪಾಪಪ್ರಜ್ಞೆ ನನ್ನನ್ನು ದಹಿಸುವುದೆಂದು ನಿಚ್ಚಳವಾಗಿ ತಿಳಿದಿತ್ತು ನನಗೆ. ಈ ಕಾರಣಕ್ಕಾಗಿಯೇ ಆರಂಭದಲ್ಲಿ ಅವರೊಂದಿಗೆ ಹೆಚ್ಚು ಬೆರೆಯದೇ ಅಂತರ ಕಾಯ್ದುಕೊಂಡಿದ್ದೆ ನಾನು. ಕ್ರಮೇಣ ಚಾಚಾರ ಪಿತೃವಾತ್ಸಲ್ಯದಲ್ಲಿ, ಬೇಲಾಳ ಸ್ನೇಹದಲ್ಲಿ ಆ ಭಯ ಕುರುಹಿಲ್ಲದಂತೆ ಕರಗಿ ಹೋಯಿತು.

ಮೊದಮೊದಲು ನನ್ನ ಮನಸ್ಸು ಯಾವುದಕ್ಕೂ ಸ್ಪಂದಿಸದಷ್ಟು ಶುಷ್ಕವಾಗಿತ್ತಾದರೂ ಅವರ ಕಾಳಜಿ ಆಗೀಗ ಚಾಚಿಯನ್ನೇ ನೆನಪಿಸುತ್ತಿದ್ದದ್ದು ಸುಳ್ಳಲ್ಲ. ಕೇಶವ್ ಚಾಚಾ ದಿನವೂ ಬೇಲಾಳೊಂದಿಗೆ ನನಗೂ ಪಾಠ ಹೇಳಲು ತಯಾರಿದ್ದರು. ಬೇಲಾ ಕೂಡಾ ಈ ಬಗ್ಗೆ ಬಹಳ ಒತ್ತಾಯಿಸುತ್ತಿದ್ದಳು ನನ್ನನ್ನು. ಇಬ್ಬರೂ ಸೇರಿ ಬಲು ಕಷ್ಟಪಟ್ಟು ಓದಿಗೆ ಬೆನ್ನು ಮಾಡಿದ್ದ ನನ್ನನ್ನು ಮತ್ತೆ ಅತ್ತ ಕಡೆಗೆ ನಿಧಾನವಾಗಿ ಸೆಳೆದಿದ್ದರು. ಮುಂಚಿನಷ್ಟು ಆಸಕ್ತಿಯಿಂದ ಅಲ್ಲದಿದ್ದರೂ ತಕ್ಕಮಟ್ಟಿಗೆ ಮತ್ತೆ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಈಗ ಚಾಚಾರೇ ನನಗೂ ಗುರುವಾಗಿದ್ದರು. ನನ್ನಲ್ಲಿ ಹಾಗೂ ಬೇಲಾಳಲ್ಲಿ ಯಾವುದೇ ತಾರತಮ್ಯವಿರಲಿಲ್ಲ ಅವರಿಗೆ. ಇಬ್ಬರನ್ನೂ ಒಟ್ಟಿಗೆ ಕೂಡಿಸಿ ಪಠ್ಯದೊಂದಿಗೇ ರಾಮಾಯಣ, ಮಹಾಭಾರತ, ಪಂಚತಂತ್ರ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟ, ಸಮಾಜ ಸುಧಾರಣಾ ಚಳುವಳಿ ಮೊದಲಾದವುಗಳ ಬಗ್ಗೆ ಕೂಡಾ ಹೇಳುತ್ತಿದ್ದರು. ಇವನ್ನೆಲ್ಲಾ ಗ್ರಹಿಸುತ್ತಾ ಹೋದಂತೆ ಶಿಕ್ಷಣದ ಮೂಲಕ ಈ ಬಂಧದಿಂದ ಮುಕ್ತಿ ದೊರಕಬಹುದು ಎನ್ನುವ ತಿಳಿವು ನನ್ನೊಳಗೆ ಮೂಡತೊಡಗಿತು. ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕೆಂದರೆ ಅದಕ್ಕೆ ವಿದ್ಯೆಯೇ ಮೂಲ ಎಂಬ ಅರಿವಾಗತೊಡಗಿತು. ಇನ್ನಷ್ಟು ಗಮನದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡೆ. ಜೊತೆಗೇ ಕೇಶವ್ ಚಾಚಾ ಹಾಗೂ ಬೇಲಾರೊಂದಿಗೆ ಬಹಳ ಆಪ್ತವಾದ ಬಾಂಧವ್ಯವೊಂದು ಬೆಸೆಯತೊಡಗಿತು.

ಕುಲ್ದೀಪ್ ಹಾಗೂ ಕುಲ್ಜೀತ್ ರನ್ನು ಹೊರತುಪಡಿಸಿದರೆ ನನಗೆ ಅತ್ಯಂತ ಆತ್ಮೀಯವಾಗಿದ್ದಿದ್ದು ಬೇಲಾ. ನಮ್ಮಿಬ್ಬರ ಸ್ವಭಾವಗಳಲ್ಲಿನ ವೈರುಧ್ಯದ ನಡುವೆಯೂ ನಮ್ಮಲ್ಲಿ ಗಾಢ ಸ್ನೇಹವಿತ್ತು. ಇಂತಹ ವಿಶಾಲ ಮನೋಭಾವದ ಕೇಶವ್ ಚಾಚಾರ ಮಗಳಾಗಿರುವ ಬೇಲಾ ಅದೆಷ್ಟು ಅದೃಷ್ಟವಂತೆ ಎನ್ನಿಸುತ್ತಿತ್ತು ನನಗೆ. ಅವಳ ಜೀವನ್ಮುಖಿ ಬದುಕಿಗೂ ನನ್ನ ಜೀವಚ್ಛವದಂತಹ ಬದುಕಿಗೂ ಬಾನುಭೂಮಿಯ ಅಂತರವಿತ್ತು. ನಮ್ಯಾರಲ್ಲೂ ಕಾಣಸಿಗದ ಅವಳಲ್ಲಿ ಮಾತ್ರವೇ ನೆಲೆಯಾಗಿದ್ದ ಆ ಜೀವಂತಿಕೆಯ ಲವಲವಿಕೆ ಅವಳಿಗೊಂದು ಪ್ರತ್ಯೇಕ ಮೆರುಗು ನೀಡಿತ್ತು. ವಿಧೇಯತೆ, ಸಂಯಮ, ಸಹನೆಗಳೆಲ್ಲವನ್ನೂ ತಂದೆಯಿಂದಲೇ ಬಳುವಳಿ ಪಡೆದಿದ್ದ ಮೃದು ಹೃದಯಿ. ಇಂತಹ ಬೇಲಾಳನ್ನು ಯಾರಾದರೂ ದ್ವೇಷಿಸಲು ಸಾಧ್ಯವಿತ್ತೇ…..‌‌?
'ಖಂಡಿತಾ ಇಲ್ಲ…. ಯಾರಿಂದಲೂ ಸಾಧ್ಯವಿಲ್ಲ' ಎಂಬ ಸ್ಪಷ್ಟ ಉತ್ತರವನ್ನು ಸದಾ ನನ್ನ ಮನಸ್ಸು ನೀಡುತ್ತಿತ್ತು.

ಆದರೆ……

ಮನುಷ್ಯತ್ವವೇ ಇರದ ಮನುಜರು ವ್ಯರ್ಥ ಕಾಲಹರಣಕ್ಕಾಗಿ ನಡೆಸುವ ಶೋಕಿಗಳು ದ್ವೇಷಕ್ಕೂ ಮೀರಿದ ಕ್ರೌರ್ಯಕ್ಕೆ ನಾಂದಿಯಾಗಬಹುದೆಂದು ಎಂದೂ ಊಹಿಸಿರಲಿಲ್ಲ ನಾನು….. ಬಹುಶಃ ಅವಳೂ…..!!

ಇನ್ನು ಕೇವಲ ಮಗಳ ಹಿತಕ್ಕಾಗಿ ಎಂದಿಗೂ ಅಲೆಗಳ ವಿರುದ್ಧ ಈಜದೇ ಅಲೆಗಳೊಂದಿಗೇ ತೇಲಿದ ಕೇಶವ್ ಚಾಚಾರಂತೂ ತಮ್ಮ ಜೀವನದಲ್ಲಿ ಹೀಗೊಂದು ದಿನ ಬರಬಹುದೆಂದು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ.

ಆದರೆ……

ಅಂತಹದ್ದೊಂದು ಕರಾಳ ದಿನ ಬಂದೇ ಬಂತು. ಅಲೆಗಳೊಟ್ಟಿಗೆ ತೇಲಿಯೂ ಬದುಕು ಅವರೆಣಿಸಿದ ತೀರವನ್ನು ತಲುಪದೇ ಹೋಯಿತು. ತೀರ ತಲುಪುವ ಮುನ್ನವೇ ಸುರಿದ ಬೆಂಕಿಯ ಮಳೆಯಲ್ಲಿ ಉಳಿದದ್ದು ಕರಟಿದ ಕನಸುಗಳ ಬೂದಿ ಮಾತ್ರವೇ.

ಸಶೇಷ

1 ಕಾಮೆಂಟ್‌: