ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 2

ಕೋಲ್ಕತ್ತಾ…….. ಆಮಿ ತುಮಾಕೆ ಭಾಲೋಬಾಷಿ….!!         
  
ಅದೆಷ್ಟು ವಿಲಕ್ಷಣ ಈ ಲೋಕ........ 

ಕಲ್ಲಿನ ನಾಗ ಶಿಲೆಗೆ ಕರ ಮುಗಿದು ಹಾಲೆರೆಯುತ್ತಾರೆ. ಅದೇ ನಿಜದ ನಾಗರ ಕಂಡರೆ ಬಡಿದು ಕೊಲ್ಲುತ್ತಾರೆ. 
ಪರಮೇಶ್ವರನು ಭಿಕ್ಷಾಟನೆ ಮಾಡುತ್ತಿದ್ದ ಎನ್ನುತ್ತಲೇ ಅವನನ್ನು ಪೂಜಿಸುವ ಜನರು ನಿಜದ ಭಿಕ್ಷುಕರನ್ನು ಅದೆಷ್ಟು ತಿರಸ್ಕಾರದಿಂದ ನೋಡುತ್ತಾರೆ......

ನಮ್ಮ ಯೋಚನೆಗಳಲ್ಲಿ ಏಕಿಷ್ಟು ವಿರೋಧಾಭಾಸ.....? ನನಗಂತೂ ತಿಳಿದಿಲ್ಲ.......

ಒಂದು ಕಾಲಕ್ಕೆ ಭಿಕ್ಷುಕ ವೃತ್ತಿ ಸಮಾಜದ ಗೌರವಕ್ಕೆ ಪಾತ್ರವಾಗಿತ್ತಂತೆ. ವೇದಕಾಲದ ಗುರುಕುಲ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಭಿಕ್ಷಾನ್ನವನ್ನು ಸಂಗ್ರಹಿಸಿ, ಹಂಚಿಕೊಂಡು ಉಣ್ಣುತ್ತಿದ್ದರಂತೆ. ಆದರೆ ಈಗ......? 

ಈಗ ಹೆಚ್ಚಿನವರ ಪ್ರಕಾರ ಭಿಕ್ಷಾಟನೆ ಎಂಬುದೊಂದು ಲಾಭದಾಯಕ ಉದ್ಯೋಗ, ಮೈ ಬಗ್ಗಿಸಿ ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳ ಹಣ ಸಂಪಾದನೆಯ ಸುಲಭ ಮಾರ್ಗ, ಸಮಾಜಕ್ಕೆ ಅಂಟಿದ ಶಾಪ, ಕಾನೂನುಬಾಹಿರ ಚಟುವಟಿಕೆ, ಶಿಕ್ಷಾರ್ಹ ಅಪರಾಧ........

ಭಿಕ್ಷುಕರನ್ನು ಕಂಡೊಡನೆ ಎಲ್ಲರಿಗೂ ಸಾಮಾನ್ಯವಾಗಿ ಭಿಕ್ಷುಕ ಕುಳಿತುಕೊಳ್ಳುವ ಗೋಣಿ ಚೀಲದ ಕೆಳಗೆ ಸಾವಿರಾರು ರೂಪಾಯಿಗಳಿರುವ 'ಪುಷ್ಪಕ ವಿಮಾನ' ಸಿನಿಮಾದ ಜನಪ್ರಿಯ ದೃಶ್ಯವೇ ಕಣ್ಮುಂದೆ ಬರುತ್ತದೆ.

ಹೌದು... ಭಿಕ್ಷಾಟನೆಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡು ಅದರಿಂದಲೇ ಒಬ್ಬ ಮಧ್ಯಮ ವರ್ಗದ ಸಾಮಾನ್ಯ ನೌಕರನಿಗಿಂತಲೂ ಹೆಚ್ಚು ಆದಾಯ ಸಂಪಾದಿಸುವ ನಕಲಿ ಭಿಕ್ಷುಕರು ಇದ್ದಾರೆ. ಆದರೆ ಅವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ವಿಪರ್ಯಾಸವೆಂದರೆ ಆ ಬೆರಳೆಣಿಕೆಯಷ್ಟು ಮಂದಿಯ ಕೋರೈಸುವಿಕೆಯ ಹಿಂದೆ ಅಸಲಿ ಭಿಕ್ಷುಕರ ಕಥೆ ವ್ಯಥೆಗಳು ಭೂಗತವಾಗುತ್ತವೆ.

ಈ ಭಿಕ್ಷುಕರ ಲೋಕ ಜನಸಾಮಾನ್ಯರ ರಂಗುರಂಗಿನ ಲೋಕಕ್ಕಿಂತ ವಿಭಿನ್ನ. ಇದೊಂದು ಊಹಾತೀತವಾದ ಜಾಲ... ಜನರ ಪ್ರಕಾರ ಭಿಕ್ಷುಕರೆಂದರೆ ನಗರದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಇಲ್ಲಾ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಏನೇನೋ ನಾಟಕವಾಡಿ ಅವರಿಂದ ಚಿಲ್ಲರೆ ವಸೂಲಿ ಮಾಡುವ ಶನಿಗಳು. ಆದರೆ ಅವರ ಅಸಲೀ ಬದುಕು......!!?

ಮೈ ಬಗ್ಗಿಸಿ ದುಡಿದು ಸಂಪಾದಿಸಲಾಗದೇ ಈ ವೃತ್ತಿ ಹಿಡಿಯುವವರು ಬಹಳ ಕಡಿಮೆ. ಬಹುತೇಕ ಭಿಕ್ಷುಕರು ಭಿಕ್ಷಾಟನೆ ಮಾಫಿಯಾದ ಹಿಡಿತದಲ್ಲಿ ಸಿಲುಕಿ ನಲುಗುವವರು. ಅದರಲ್ಲೂ ಮಕ್ಕಳದ್ದು ಸಿಂಹಪಾಲು. ಅದು ಬಿಟ್ಟರೆ ಅಂಗವಿಕಲರದ್ದು....... ಇವರಲ್ಲಿ ಹೆಚ್ಚಿನವರು ಹುಟ್ಟು ಅಂಗವಿಕಲರಲ್ಲ, ಮಾಫಿಯಾದ ಹಣದ ಹಪಹಪಿಗೆ ತಮ್ಮ ಅಂಗಾಂಗಗಳನ್ನು ಊನವಾಗಿಸಿಕೊಂಡವರು ಎಂಬುದು ಗಮನಿಸಬೇಕಾದ ಸಂಗತಿ..... ಇಲ್ಲಿ ಸಿಲುಕಿಕೊಂಡ ಹೆಣ್ಣುಮಕ್ಕಳ ಪಾಡಂತೂ ಹೇಳಲಾಗದು.... ಆದರೆ ಇದ್ಯಾವುದನ್ನೂ ಯಾರೂ ಗಮನಿಸುವುದಿಲ್ಲವಲ್ಲ.......!

'ನಿನಗೇಕೆ ಇಷ್ಟು ಅಧಿಕಪ್ರಸಂಗ...? ಅದೆಲ್ಲಾ ನಿನಗೇಕೆ' ಎಂದಿರಾ.....?

ಅದಕ್ಕೂ ಕಾರಣವಿದೆ. ನಾನೂ ಅದೇ ತಿರಸ್ಕೃತ ಪಂಗಡದ ಸದಸ್ಯನಷ್ಟೇ........

ಹೌದು..........

ಅದು ಈಗ ಕೋಲ್ಕತ್ತಾ ಎಂದು ಕರೆಯಲ್ಪಡುವ ಆಗಿನ ಕಲ್ಕತ್ತಾ ........ ಅಲ್ಲೇ ನಾನು ಜಗತ್ತನ್ನು ಅರಿಯುವ ಪ್ರಯತ್ನ ಮಾಡಿದ್ದು... ನನ್ನ ಸಂಪೂರ್ಣ ಬಾಲ್ಯ ಹಾಗೂ ಯೌವ್ವನದ ಹಲವು ವರ್ಷಗಳಿಗೆ, ನನ್ನ ಬದುಕಿನ ಕೆಲವು ಪ್ರಮುಖ ತಿರುವುಗಳಿಗೆ ಸಾಕ್ಷಿಯಾಗಿರುವುದು ಅದೇ ಕಲ್ಕತ್ತಾ.......

ಈ ಜಗತ್ತಿಗೆ ನಾನು ಕಾಲಿಟ್ಟಿದ್ದೇ ಭಿಕ್ಷುಕ ಎಂಬ ಹಣೆಪಟ್ಟಿಯೊಂದಿಗೆ. ನನಗೆ ಬುದ್ದಿ ಬಂದಾಗಿನಿಂದಲೂ ಆ ಗುಂಪಿನೊಂದಿಗೇ ಭಿಕ್ಷೆ ಬೇಡಿ ಬೆಳೆದಿದ್ದು. ನನ್ನ ಹೆತ್ತವಳ್ಯಾರೋ ನನಗಂತೂ ತಿಳಿದಿಲ್ಲ. ಕಾಳೀಘಾಟಿನ ಆದಿಗಂಗೆಯ ತಟದಲ್ಲಿ ನನ್ನನ್ನು ಬಿಸುಟು ಹೋಗಿದ್ದರೆಂದು ಬಿರ್ಜೂ ಚಾಚ ಹೇಳುತ್ತಿದ್ದ. ಆ ಬಗ್ಗೆ ನನಗೆ ಬೇಸರವಿಲ್ಲ . ಏಕೆಂದರೆ ಅಲ್ಲಿದ್ದವರೆಲ್ಲರೂ ನನ್ನಂತವರೇ........ ಹೆತ್ತವರಿಗೆ (ಹೆತ್ತವಳಿಗೆ) ಬೇಡವಾದವರು, ಸಮಾಜದಿಂದ ತಿರಸ್ಕೃತರಾದವರು, ಇಲ್ಲಾ ಅಪಹರಿಸಲ್ಪಟ್ಟು ತಮ್ಮ ಪ್ರೀತಿ ಪಾತ್ರರಿಂದ ದೂರಾದವರು............ ಹತ್ತು ಹಲವು ರೀತಿಯ ಜನರಿದ್ದರು ಆ ಜಗತ್ತಿನಲ್ಲಿ. ಜೊತೆಗಿರುವವರೆಲ್ಲ ಸಂತೋಷದ ಹೊನಲಲ್ಲಿ ಮುಳುಗಿ ನಾನೊಬ್ಬನೇ ನೋವುಣ್ಣುತ್ತಿದ್ದವನಾಗಿದ್ದರೆ ಆಗ ವಿಪರೀತ ದುಃಖವಾಗುತ್ತಿತ್ತೇನೋ...... ಆದರೆ ಎಲ್ಲರೂ ದಿಕ್ಕು ದೆಸೆಯಿಲ್ಲದ ಅಬ್ಬೇಪಾರಿಗಳೆಂದಾಗ ವೈಯಕ್ತಿಕ ಬೇಸರದ ಮಾತೆಲ್ಲಿಂದ? ಅದು ಮನುಷ್ಯನ ಸಹಜ ಸ್ವಭಾವವೇ ಅಲ್ಲವೇ....? 

ಅಬಾಲವೃದ್ಧರಾದಿಯಾಗಿ ಎಲ್ಲಾ ವಯಸ್ಸಿನವರೂ ನಮ್ಮ ಗುಂಪಿನೊಳಗಿದ್ದರು. ಭಿಕ್ಷೆ ಬೇಡಲು ವಯಸ್ಸಿನ ರಿಯಾಯಿತಿಯಿರಲಿಲ್ಲ. ಹೊಡೆತ, ಬಡಿತ, ಅವಹೇಳನ, ಉಪವಾಸಗಳೆಲ್ಲಾ ನಮ್ಮ ದೈನಂದಿನ ಬದುಕಿನ ಭಾಗ. ಚಿಕ್ಕಮಕ್ಕಳೆಂಬ ಕಾರಣಕ್ಕೆ ಯಾವುದೇ ರಿಯಾಯಿತಿ ಸಿಗುವುದಿಲ್ಲ. ಮೊದಮೊದಲು ಹೊಡೆತಗಳು, ಬರೆಗಳು ಎಳೆಯ ಮೈಯನ್ನು ಅಲಂಕರಿಸಿದಾಗ ಸಹಿಸಲಸಾಧ್ಯವಾದ ನೋವಾಗುತ್ತಿತ್ತು. ಅದ್ಯಾವಾಗ ಅವುಗಳ ಅಭ್ಯಾಸವಾಗಿ ಹೋಯಿತೋ ತಿಳಿಯದು. ಅದೇನೋ ಹೇಳುತ್ತಾರಲ್ಲ.... ಬದುಕಿನಷ್ಟು ಒಳ್ಳೆಯ ಗುರು ಇನ್ಯಾರೂ ಇಲ್ಲವೆಂದು. ಬದುಕೆಂಬ ಗುರು ಪರಿಸ್ಥಿತಿಗಳೆಂಬ ಕಲಿಕಾ ಮಾದರಿಗಳ ಮೂಲಕ ನಾವು ಬೇಡವೇ ಬೇಡ ಎಂದು ದೂರ ತಳ್ಳುವ ಕಷ್ಟಗಳನ್ನು ಎದುರಿಸಿ ಬದುಕುವ ಕಲೆಯನ್ನು ಕಲಿಸುತ್ತದೆ. ನನ್ನಂತಾ ಅಸಂಖ್ಯಾತ ಭಿಕ್ಷುಕರ ಕಥೆಯೂ ಹಾಗೆಯೇ...... ಕಾಲಕ್ರಮೇಣ ಬಾಸುಂಡೆಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಅವುಗಳನ್ನು ನಮ್ಮ ದೇಹದ ಅವಿಭಾಜ್ಯ ಅಂಗಗಳನ್ನಾಗಿಸಿಕೊಂಡುಬಿಡುತ್ತೇವೆ. ನಮ್ಮ ಚರ್ಮವೂ ಎಮ್ಮೆಯ ಚರ್ಮದಂತೆ ಗಡುಸಾಗಿಬಿಡುತ್ತದೆ.

ನಮ್ಮ ತರಹವೇ ಭಿಕ್ಷೆ ಬೇಡುವ ಒಟ್ಟು ಇಪ್ಪತ್ಮೂರು ಗುಂಪುಗಳಿದ್ದವು. ಪ್ರತೀ ಗುಂಪಿನಲ್ಲೂ ಮುನ್ನೂರಕ್ಕಿಂತ ಅಧಿಕ ಜನರಿದ್ದರು. ಈ ಎಲ್ಲಾ ಗುಂಪುಗಳಿಗೆ ಒಬ್ಬನೇ ಗ್ಯಾಂಗ್ ಲೀಡರ್........ ರಾಕಾ.......... ಅವನೇ ಒಬ್ಬ 'ನಿರ್ಲೋಜ್ಜ್ ಅಧೋಮ್ ಶೊಯ್ತಾನ್'..... ಜೊತೆಗೆ ಅವನಂತಹ ಒಂದಷ್ಟು ಚೇಲಾಗಳು ಬೇರೆ.......ಅವನ ಬಗ್ಗೆ ಮುಂದೆ ಹೇಳುವೆ ಬಿಡಿ....... ನಾವು ಹಗಲಿಡೀ ಈ ಚೇಲಾಗಳು ಹೇಳಿದ ಬೇರೆ ಬೇರೆ ಜಾಗಗಳಲ್ಲಿ ಭಿಕ್ಷೆ ಬೇಡಬೇಕಿತ್ತು. ಹೆಚ್ಚು ವಿದೇಶಿಗರು ಭೇಟಿ ನೀಡುವ ಜಾಗಗಳು, ಜನನಿಬಿಡ ಪ್ರದೇಶಗಳೇ ಇವರ ಟಾರ್ಗೆಟ್. ಪಾರ್ಕ್ ಸ್ಟ್ರೀಟ್, ರಬೀಂದ್ರ ಸರೋವರ್, ನಂದನ್, ವೈದಾನ್, ವಿಕ್ಟೋರಿಯಾ ಮೆಮೋರಿಯಲ್, ಹೌರಾ ಬ್ರಿಡ್ಜ್ ಇಂತಹ ಪ್ರವಾಸಿ ತಾಣಗಳ ಆಸುಪಾಸಲ್ಲೇ ನಮ್ಮ ಕಾರ್ಯಕ್ಷೇತ್ರ...... 

ನಮ್ಮ ಗುಂಪುಗಳಲ್ಲಿ ಹಲವು ಬಗೆಯ ಜನರಿದ್ದಾರೆ. ಕೆಲವರು ನನ್ನಂತೆ ದಿಕ್ಕುದೆಸೆಯಿಲ್ಲದ ಕೂಸುಗಳು. ಆಗಾಗ ಈ ಗುಂಪಿಗೆ ಹೊಸ ಮುಖಗಳ ಸೇರ್ಪಡೆಯಾಗುತ್ತಿರುತ್ತದೆ. ಹಾಗೇ ರಾತ್ರೋರಾತ್ರಿ ಪ್ರತ್ಯಕ್ಷರಾಗುವವರೆಲ್ಲಾ ಚಿಕ್ಕ ವಯಸ್ಸಿನವರೇ........ ಇನ್ನೂ ತಿಂಗಳು ತುಂಬದ ಕೂಸುಗಳೂ ಇರುತ್ತವೆ..... ಆದರೆ ಅವರು ನಮ್ಮಂತೆ ಅನಾಥರಲ್ಲ. ಅವರು ತಮ್ಮ ಅಪ್ಪ ಅಮ್ಮನನ್ನು ನೆನಪಿಸಿಕೊಂಡು ಅಳುತ್ತಾರೆ. ಮೊದಮೊದಲು 'ಇದ್ದಕ್ಕಿದ್ದಂತೆ ಇವರು ಎಲ್ಲಿಂದ ಪ್ರತ್ಯಕ್ಷರಾಗುತ್ತಾರೆ? ಅಪ್ಪ ಅಮ್ಮ ಇದ್ದೂ ಇಲ್ಲಿಗ್ಯಾಕೆ ಬಂದಿದ್ದಾರೆ' ಎಂದೆಲ್ಲಾ ಯೋಚನೆಯಾಗುತ್ತಿತ್ತು ನನಗೆ. ಆಮೇಲೆ ತಿಳಿಯಿತು ಇವರನ್ನೆಲ್ಲಾ ಅಪಹರಿಸಿ ತರುತ್ತಾರೆಂದು... ಅದು ತಿಳಿದ ದಿನ ಮಾತ್ರ ಯಾಕೋ ತುಂಬಾ ಬೇಸರವಾಗಿತ್ತು ನನಗೆ.... 

ಹೀಗೆ ಅಪಹರಿಸಿ ತರುವ ಮಕ್ಕಳಲ್ಲಿ ಮೂರು ವರ್ಷ ದಾಟಿದವರನ್ನು ನಮ್ಮೊಂದಿಗೆ ಭಿಕ್ಷೆ ಬೇಡಲು ಕಳಿಸುತ್ತಾರೆ. ಅದಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳನ್ನು ನಮ್ಮ ಗುಂಪಿನಲ್ಲಿರುವ ಹೆಂಗಸರಿಗೆ ಜೊತೆಮಾಡುತ್ತಾರೆ. ಆ ತರಹ ಕೂಸುಗಳನ್ನು ಹೊತ್ತ ಹೆಂಗಸರಿಗೆ ಜನ ಜಾಸ್ತಿ ಭಿಕ್ಷೆ ಹಾಕುತ್ತಾರೆ...... ಆ ಮಕ್ಕಳಿಗೆ ಅದೇನೋ ಕುಡಿಸುತ್ತಾರೆ...... ಅದು ಕುಡಿದರೇ ಅವು ಅಳುವುದೂ ಇಲ್ಲ, ಏಳುವುದೂ ಇಲ್ಲ.... ಇಡೀ ದಿನ ಆ ಹೆಂಗಸರ ಕಂಕುಳಲ್ಲಿ ಸುಮ್ಮನೆ ಮಲಗಿರುತ್ತವೆ.... ಅದೇನೋ ನನಗೂ ತಿಳಿದಿರಲಿಲ್ಲ ಆಗ.... ಆದರೆ ಅದು ಆ ಕೂಸುಗಳ ದೇಹಕ್ಕೆ ಒಗ್ಗುವುದಿಲ್ಲ ಎಂಬುದು ಮಾತ್ರ ಅರಿವಾಗುತ್ತಿತ್ತು. ಕೆಲವು ಕಂದಮ್ಮಗಳು ಎರಡೇ ದಿನದಲ್ಲಿ ಉಸಿರಾಡುವುದನ್ನೇ ನಿಲ್ಲಿಸಿದಾಗ ಬಿರ್ಜೂ ಚಾಚ ಅತ್ತು ಅವುಗಳನ್ನು ಮಣ್ಣು ಮಾಡಿದ್ದು ನನಗೆ ನೆನಪಿದೆ.....

ಇನ್ನು ವಯಸ್ಕರದ್ದು ಬೇರೆಯೇ ಕಥೆ.... ಗಂಡಸರಲ್ಲಿ ವಯಸ್ಸಾದ ಮುದುಕರ ಸಂಖ್ಯೆಯೇ ಹೆಚ್ಚು... ಅವರಲ್ಲೂ ಬಹುಪಾಲು ಅಂಗಾಂಗ ಊನಗೊಂಡವರು, ಕುರುಡರು, ಮೂಗರು..... ಅವರು ಬಸ್ಸು ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಬೇಡುತ್ತಿದ್ದರು. ಅವರಲ್ಲಿ ಹಾಡಲು ಕಲಿತವರಿಗೆ ಭಿಕ್ಷೆ ಹೆಚ್ಚು ಬೀಳುವುದು... ಬಿರ್ಜೂ ಚಾಚಾನೂ ಸುಶ್ರಾವ್ಯವಾಗಿ ಹಾಡುತ್ತಿದ್ದ......

ರಾಕಾ ಗುಂಪಿನಲ್ಲಿದ್ದ ಹೆಂಗಸರಿಗೆ ಜಾಸ್ತಿ ಪ್ರಾಮುಖ್ಯತೆ ಕೊಡುತ್ತಿದ್ದ...... ಅವರು ಹಗಲೆಲ್ಲಾ ನಮ್ಮಂತೆ ಭಿಕ್ಷೆ ಬೇಡುತ್ತಿದ್ದರಾದರೂ ರಾತ್ರಿ ಅವರಲ್ಲಿ ಹೆಚ್ಚಿನವರನ್ನು ಅವನ ಚೇಲಾಗಳು ಅದೆಲ್ಲಿಗೋ ಒಯ್ಯುತ್ತಾರೆ.... ವಯಸ್ಸಾದ ಮುದುಕಿಯರು, ಸಣ್ಣ ಹುಡುಗಿಯರು ಮಾತ್ರವೇ ನಮ್ಮೊಂದಿಗೆ ಬಿಡಾರದಲ್ಲಿ ಉಳಿಯುತ್ತಿದ್ದುದು. ಉಳಿದ ಹೆಂಗಸರೆಲ್ಲಾ ರಾತ್ರಿ ಕಳೆದು ಬೆಳಕು ಹರಿಯುವಾಗ ವಾಪಾಸಾಗುತ್ತಿದ್ದರು. 'ಅವರು ರಾತ್ರಿಯೆಲ್ಲಾ ಎಲ್ಲಿರುತ್ತಾರೆ......?' ಎಂಬ ನನ್ನ ಪ್ರಶ್ನೆಗೂ ಉತ್ತರವಿಲ್ಲ.
ಕೆಲವೊಮ್ಮೆ ಲಿಂಗ ಬೇಧವಿಲ್ಲದೆ ಗುಂಪಿನ ಹಲವರು ನಾಪತ್ತೆಯಾಗಿಬಿಡುತ್ತಿದ್ದರು. ಅವರು ಎಲ್ಲಿಗೆ ಹೋದರೆಂಬುದೂ ಚಿದಂಬರ ರಹಸ್ಯವೇ... ಒಟ್ಟಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು..... ಉತ್ತರ ಸಿಗದ ಹನುಮಂತನ ಬಾಲದಂತ‌ಹ ಪ್ರಶ್ನೆಗಳೊಂದಿಗೆ ನಾನೂ ಅಶ್ರಫ್ ಬಡಿದಾಡುತ್ತಿದ್ದೆವು. ನನ್ನ ತಲೆಯಲ್ಲಿದ್ದ ಪ್ರಶ್ನೆಗಳು ಸಾಲದೇನೋ ಎಂಬಂತೆ ಅವನು ಅದಕ್ಕೆ ಇನ್ನೊಂದಿಷ್ಟನ್ನು ಜೋಡಿಸುತ್ತಿದ್ದ.

ಅರೇ........!! ನೋಡಿ, ಅದೆಷ್ಟು ಮರೆವು ನನಗೆ..... ನಿಮಗೆ ನನ್ನ ಅಶ್ರಫ್ ಸಾಬಿಯ ಬಗ್ಗೆ ಹೇಳಲೇ ಇಲ್ಲವಲ್ಲ.......!!! ಅಶ್ರಫ್ ಮತ್ತು ನಾನು ಶೋಲೆಯ ಜೈ ಮತ್ತು ವೀರು..... 
'ಯೇ ದೋಸ್ತೀ.... ಹಮ್ ನಹೀ ತೋಡೇಂಗೇ...' ಅಂತ ಕೈ ಕೈ ಮಿಲಾಯಿಸಿಕೊಂಡು ನಾವಿಬ್ಬರೂ ಅಲೆದಾಡದ ಗಲ್ಲಿಗಳಿಲ್ಲ ಕಲ್ಕತ್ತೆಯಲ್ಲಿ...... ಬಂಗಾಳಕೊಲ್ಲಿಯಿಂದ ಕಲ್ಕತ್ತೆಗುಂಟ ಬೀಸುವ ಸುಳಿಗಾಳಿಗೂ ನಮ್ಮ ಸ್ನೇಹ ಚಿರಪರಿಚಿತ..... ನಮ್ಮ ಗುಂಪಿನಲ್ಲಿ ಸುಮಾರು ಮಕ್ಕಳಿದ್ದರೂ ನನಗೆ ಆಪ್ತ ಸ್ನೇಹಿತ ಎಂದರೆ ಅದು ಅಶ್ರಫ್ ಮಾತ್ರ.... 

ನಮ್ಮ ಭಿಕ್ಷುಕರ ಗುಂಪಿನಲ್ಲಿ ಇರುವ ಬಹುತೇಕರು ಬಾಂಗ್ಲಾದೇಶದವರು. 'ಅವರು ಕಲ್ಕತ್ತೆಗೆ ಹೇಗೆ ಬಂದಿರಬಹುದು' ಎಂಬ ಪ್ರಶ್ನೆ ಆಗ ನನ್ನ ತಲೆಯಲ್ಲಿ ಇರಲಿಲ್ಲ. ಏಕೆಂದರೆ ಬಾಂಗ್ಲಾದೇಶವೆಂಬುದು ಬೇರೆ ದೇಶ ಅನ್ನುವುದೇ ನನ್ನ ತಲೆಯಲ್ಲಿರಲಿಲ್ಲ ಆಗ.... ಆ ಗುಂಪಿನೊಂದಿಗೆ ಬಂದವನು ಅಶ್ರಫ್. ನನ್ನದೇ ವಯಸ್ಸಿನವ..... ಆದರೆ ಸ್ವಭಾವ? ನನಗೂ ಅವನಿಗೂ ಅಜಗಜಾಂತರ..... 

ನಾನೋ ಆ ವಯಸ್ಸಿಗೇ ಖದೀಮ ಕಳ್ಳ. ರಾಕಾನ ಚೇಲಾಗಳಿಗೇ ಕಣ್ತಪ್ಪಿಸಿ ಮಣ್ಣುಮುಕ್ಕಿಸುತ್ತಿದ್ದ ನಾನೆಂದರೆ ರಾಕಾನಿಗೆ ಒಂಚೂರು.... ಚೂರೇ ಚೂರು ಆಸಕ್ತಿ.... ಅದನ್ನೇ ಬಳಸಿಕೊಂಡು ಉಳಿದ ಹುಡುಗರ ಕಣ್ಣುಗಳಲ್ಲಿ ಡಾನ್ ಆಗಿ ಮೆರೆಯುತ್ತಿದೆ ನಾನು. ಅವರ ಕೈಯಲ್ಲಿ ಸೇವೆಗಳನ್ನು ಮಾಡಿಸಿಕೊಳ್ಳುವುದು, ಏನೋ ನಾನೇ ದೊಡ್ಡ ಭಾಯ್ ಎಂಬಂತೆ ಚಮಕ್ ಕೊಡುವ ಶೋಕಿಗಳೆಲ್ಲ ತುಸು ಜಾಸ್ತಿಯೇ ಇತ್ತು. ನಾನು ಹೆದರುತ್ತಿದ್ದದ್ದು ಬಿರ್ಜೂ ಚಾಚಾನಿಗೆ ಮಾತ್ರವೇ.....

ಆದರೆ ಅಶ್ರಫ್ ನನಗೆ ತದ್ವಿರುದ್ಧ. ಮೃದು ಮಾತಿನ ಭಾವುಕ. ಜೋರಾಗಿ ದನಿಯೇರಿಸಿ ಮಾತನಾಡಲೇ ಬರದು ಅವನಿಗೆ. ನಮಗೆ ರಾತ್ರಿ ಒಂದೇ ಹೊತ್ತು ಊಟದ ಭಾಗ್ಯವಿದದ್ದು. ಅದೂ ಒಂದು ಹಿಡಿ ಅನ್ನ ಹಾಗೂ ರುಚಿಯಿಲ್ಲದ ದಾಲ್. ನಮ್ಮ ಹುಡುಗರ ಗುಂಪುಗಳಲ್ಲಿ ಅದಕ್ಕಾಗಿ ಹೊಡೆದಾಟಗಳು ಸರ್ವೇಸಾಮಾನ್ಯ. ಎಷ್ಟೆಂದರೂ ಹಸಿವು ಎಲ್ಲಕ್ಕೂ ಮಿಗಿಲಲ್ಲವೇ......? ಪಾಪದವನ ಕೈಯಿಂದ ತಾಟನ್ನು ಕಸಿಯುವುದು ಸುಲಭವಾದ್ದರಿಂದ ಆ ಜಗಳಗಳಲ್ಲಿ ಸಾಮಾನ್ಯ ಮಿಕ ಅಶ್ರಫ್. ಒಂದು ದಿನ ಇದು ನನ್ನ ಕಣ್ಣಿಗೆ ಬಿದ್ದು ಆ ಹುಡುಗರಿಗೆ ನಾಲ್ಕು ಕೊಟ್ಟೆ ನೋಡಿ........ ಆ ಏಟುಗಳು ಅಶ್ರಫ್ ಹಾಗೂ ನನ್ನ ಸ್ನೇಹಕ್ಕೆ ಮುನ್ನುಡಿ ಬರೆದವು. ಅಲ್ಲಿಂದ ಈ 'ಜೈ ವೀರೂ' ಜೋಡಿ ಮಾಡಿದ ಮೋಡಿ ಕಲ್ಕತ್ತೆಯ ಇತಿಹಾಸದಲ್ಲಿದೆ. 

ಭಿಕ್ಷೆ ಬೇಡಲು ಕಳಿಸುವ ಮೊದಲು ನಮಗೂ ಅಂದರೆ ಮೂರು ವರ್ಷದ ಮೇಲ್ಪಟ್ಟ ಮಕ್ಕಳೆಲ್ಲರಿಗೂ ದೇವರ ಪ್ರಸಾದದಂತೆ ಅದೇನೋ ಗುಳಿಗೆಯೊಂದನ್ನು ನುಂಗಿಸುತ್ತಿದ್ದರು. ಅದನ್ನು ನುಂಗಿದರೆ ಮುಗಿಯಿತು.... ಅದೇನೋ ಅಮಲು.... ಮನವೆಲ್ಲಾ ಹಗುರ.... ಆದರೆ ಮೊಗವೆಲ್ಲಾ ಬಾಡಿ ಬಸವಳಿದು ಹೋದಂತಾಗುವುದು... ನಮ್ಮ ದೇಹದ ಅಂಗಾಗಳಾವುವೂ ನಮ್ಮ ಮಾತನ್ನೇ ಕೇಳುವುದಿಲ್ಲವೆಂದು ಧಿಕ್ಕರಿಸುತ್ತವೆ.... ಕಾಲೆಳೆದು ಹಾಕಲೂ ಸಂಕಟ.... ವಿಚಿತ್ರವಾದ ವಿವರಿಸಲಾಗದಂತಹ ಅನುಭವವದು..... ಸಂತೋಷವೋ, ದುಃಖವೋ ಅರಿಯಲಾರದಂತಹ ಸ್ಥಿತಿ..... ಒಟ್ಟಿನಲ್ಲಿ ಅದನ್ನು ತಿಂದರೆ ಮೈ ಮೇಲೆ ಹಿಡಿತ ತಪ್ಪುತ್ತಿತ್ತು. ನೋಡುವವರಿಗೆ ಮರುಕವುಕ್ಕುವಂತೆ ಕಾಣುತ್ತಿದ್ದವು ನಾವು.... ಆಗ ಭಿಕ್ಷೆ ಹೆಚ್ಚು ಬೀಳುತ್ತಿತ್ತು....... 

ಆದರೆ ನಾನು ಆ ಗುಳಿಗೆ ತಿಂದಂತೆ ಮಾಡಿ ನಾಲಿಗೆಯ ತಳದಲ್ಲಿ ಇಟ್ಟುಕೊಂಡು ನಂತರ ಉಗಿದುಬಿಡುತ್ತಿದ್ದೆ. ಅದೇ ಅಭ್ಯಾಸವನ್ನು ಅಶ್ರಫಿಗೂ ಕಲಿಸಿದ್ದೆ. ಇಬ್ಬರೂ ಗುಳಿಗೆ ತಿಂದವರಂತೆ ನಟನೆ ಮಾಡುತ್ತಾ, ಕಾಲೆಳೆದುಕೊಂಡು ಹೋಗುವಂತೆ ಮಾಡಿ ಗುಳಿಗೆ ನುಂಗಿದವರಿಗಿಂತ ಚೆನ್ನಾಗಿ ನಟಿಸುತ್ತಿದ್ದೆವು. ಸಮಯ ಸಾಧಿಸಿ ರಾಕಾನ ಚೇಲಾಗಳ ಕಣ್ತಪ್ಪಿಸಿ ಒಂದಿಷ್ಟು 'ರೇಜ್ಕಿ'ಯ ಟಾಕಾಗಳನ್ನು ಅಬೇಸ್ ಮಾಡಿಕೊಂಡು ಬಿಡುತ್ತಿದ್ದೆ ನಾನು...... ಒಂದಿಷ್ಟು ಟಾಕಾಗಳು ಸಂಗ್ರಹವಾದ ಮೇಲೆ ಸಂಜೆ ಬಿಡಾರಕ್ಕೆ ವಾಪಾಸಾದ ನಂತರ ಎಲ್ಲರ ಕಣ್ತಪ್ಪಿಸಿ ಅಶ್ರಫ್ ನೊಂದಿಗೆ ಪರಾರಿಯಾಗುತ್ತಿದ್ದೆ..... 

ಎಲ್ಲಿಗೆ ಎಂದಿರಾ.......?

ನಗರ ಸಂಚಾರಕ್ಕೆ...........!!

ಹೌದು........ 

ಕಲ್ಕತ್ತೆಯ ಸಂಚಾರ............ 

ಕಲ್ಕತ್ತೆಯೆಂದರೆ ನಿಮಗೆ ಎಲ್ಲ ನಗರಗಳಂತೆಯೇ ಒಂದು ನಗರವಷ್ಟೇ..... 

ಆದರೆ ನನಗೆ........

ನನಗೆ ಕಲ್ಕತ್ತಾ ಕೇವಲ ನಗರವಲ್ಲ...... ಅದು ನನ್ನ ಎದೆಬಡಿತ......

ಏನೆಂದು ಬಣ್ಣಿಸುವುದು ಆ ನಗರವನ್ನು......... ಅದರ ರಫ್ತಾರನ್ನೂ.....

ಏ ಶಹೋರ್ ಪ್ರಂತೋ
ಕೋಲ್ಕತ್ತಾ ಪ್ರಂತೋ
ರುಪೋಶೀ ಅನಂತೋ
ಕೋಲ್ಕತ್ತಾ ನಾಮ್ ಜಾರ್
ತೋಲೇ ಪ್ರಾಣೇ ಜೋಂಕಾರ್
ಹೋಷಿ ಗಾನೇ ಕೊತ್ತೋನಾ.......
ಜಿಬೋಂತೋ ಜಿಬೋಂತೋ ಜಿಬೋಂತೋ........

(ಹೆಸರ ಉಲ್ಲೇಖ ಮಾತ್ರದಿಂದಲೇ ಎದೆಬಡಿತ ಏರಿಸುವ, ನಗು ಹಾಗೂ ನಾದದಿಂದಲೇ ಬದುಕಿಗೆ ಜೀವಂತಿಕೆಯ ಉಲ್ಲಾಸ ತುಂಬುವ ಕೋಲ್ಕತ್ತ ಎಂಬ ಅನಂತ ರೂಪಸಿಯ ಸರಹದ್ದಿದು......)

ಹೌದು...... ಆಕೆ ಅನಂತ ರೂಪಸಿಯೇ........ ರಾತ್ರಿಯ ನೀರವತೆಯಲ್ಲಿ ಅವಳ ಅಂದವನ್ನು ಕಣ್ತುಂಬಿಕೊಳ್ಳುವುದೇ ಒಂದು ಧ್ಯಾನ ನನಗೆ.......
ಹೂಗ್ಲಿ ನದಿಯ ದಂಡೆಯಲ್ಲಿ ಹಗಲೆಲ್ಲಾ ಗಂಭೀರೆಯಾಗಿರುವ ಅವಳು ಶಶಿಯ ಬೆಳ್ಳಿಯ ಬೆಡಗಿನಲ್ಲಿ ಚಂಚಲೆ......

ಶಮೋಯೇರ್ ಶಿಮಾನಾಯ್
ತೊಮಾಕೆ ಬಾಂದಾ ಕಿ ಜಾಯ್
ಹಜಾ಼ರ್ ಬಾಛೋರ್ ತುಮಿ ಪಿಛೋನಿ ಫಿಲೇ
ಪಾಯಿ ಪಾಯಿ ಕೊತೊ ಪೋತ್ ಪಿರಿಯೆ ಇಲೆ
ಜುಗ್ ಥೇಕೆ ಜೋಲೆಚೋ........
ಜುಗಂತೋ ಜುಗಂತೋ ಜುಗಂತೋ..........

(ಹಲವು ಸಂವತ್ಸರಗಳನ್ನು ಹಿಂದೆ ಹಾಕಿ, ಹಂತಹಂತವಾಗಿ ಹಲವು ಹಾದಿಗಳಲ್ಲಿ ಪಯಣಿಸಿ, ಯುಗ ಯುಗಾಂತರಗಳಿಗೆ ಸಾಗುವ ನಿನ್ನನ್ನು ಸಮಯದಿಂದ ಬಂಧಿಸಲು ಸಾಧ್ಯವಿಲ್ಲ)

ಬ್ರೀಟಿಷರ ಕಾಲದ ಆ ಕಟ್ಟಡಗಳು, ಸಣ್ಣಸಣ್ಣ ಗಲ್ಲಿಗಳು, ಕಾಳಿಘಾಟಿನಲ್ಲಿ ನೆಲೆನಿಂತು ಕಲ್ಕತ್ತೆಯನ್ನು ಕಾಯುವ ಕಾಳೀ ಮಾತೆ..... ಆ ಸಡಗರ ಸಂಭ್ರಮದ ದುರ್ಗಾ ಪೂಜಾ, ಪೋಯ್ಲಾ ಬೋಯ್ಶಾಖ್(ಪೆಹೆಲಾ ಬೈಶಾಖ್)..... ಅಬೇಸ್ ಮಾಡಿದ ಟಾಕಾಗಳ ಕೃಪೆಯಿಂದ ರುಚಿ ನೋಡಿದ ಸೊಂದೇಶ್, ಮಿಷ್ಟಿ ದೋಯ್, ಬೇಗುನಿ ಹಾಗೂ ಪುಚ್ಕೆಗಳು........ ಓಹ್......!!

ಕೆ ಬೊಲೇ ತೊಮಾಕೇ ಉಗೋ ಮೃತೋ ನೊಗೋರಿ
ಮಿಚಿಲ್ ಶೊಹೋರ್ ಬಾಲೆಹ್ಹೇ ಶುಂದೋರಿ
ನಾ ನಾ ಶೇತೋ ಶುದ್ದು ನಾಯ್
ತುಮಿ ಇತಿಹಾಸ್ ಸೃಷ್ಟಿರ್ ಇತಿಕಥಾ
ಕೋಲ್ಕತ್ತಾ ಕೋಲ್ಕತ್ತಾ ಕೋಲ್ಕತ್ತಾ
ನಾಮೇ ಕೊತೋ ಜಾದೂ
ಅಫುರಂತೋ ಅಫುರಂತೋ ಅಫುರಂತೋ.........

(ಮೃತ ನಗರ, ಪ್ರತಿಭಟನೆಗಳ ನಗರ ಎಂಬುದು ನಿನ್ನ ಒಂದು ಮುಖವಷ್ಟೇ..... ಓಹ್ ಸುಂದರಿಯೇ..., ಇತಿಹಾಸದ ಪುಟಗಳನ್ನು ಸಮಾಪ್ತಿಗೊಳಿಸುವ ಕೊನೆಯ ಪದ ನೀನು.... ಓಹ್ ಕೋಲ್ಕತ್ತಾ...., ನಿನ್ನ ಹೆಸರ ಮಾಯೆ ಅನಂತ....)

ಶುಂದೋರಿಯಂತೂ ಹೌದೇ ಹೌದು ನನ್ನ ಕೋಲ್ಕತ್ತಾ..... 
ಶರತ್ಕಾಲದ ಆರಂಭದೊಂದಿಗೆ ಶುರುವಾಗಿ ಮುಂಗಾರಿನ ಆಗಮನಕ್ಕೆ ಮುಂಚೆ ಕೊನೆಗೊಳ್ಳುವ ಜಾತ್ರಾ(ಯಾತ್ರಾ)ದ ಜಾದೂವಿಗೆ ಮರುಳಾಗದವರುಂಟೇ? ನಾಲ್ಕು ಗಂಟೆಗಳ ಜಾನಪದ ನಾಟಕ, ಅದರೊಳಗಿನ ಜನಪದ ಹಾಡು, ಕುಣಿತಗಳ ಮೇಳ, ಜಾತ್ರಾದ ಆರಂಭಕ್ಕೂ ಮುನ್ನಿನ ಒಂದು ಗಂಟೆಗಳ ಸಂಗೀತ ಕಛೇರಿ...... ಆಹ್..... ಜಾತ್ರಾದ ಸೊಬಗಿಗೇ ಅದೇ ಸರಿಸಾಟಿ....

ನಿಯೋನೇರ್ ಅಲೆಯಾಯ್
ತೊಮಾಕೇ ಚೆನಾ ನಾ ಜಾಯ್
ಮನುಷೇರ್ ಮೃಗೊಯಾಯ್ ಮನುಷ್ ಕಾಂದೇ
ಬಾಚಾರ್ ಲೊಡಾಯ್ ನಿಯೆ ಪ್ರೋತಿಜೋಗಿತ
ಜೊನ್ಮೇರ್ ರಿನ್ ಶೋದ್ ಮೃತ್ಯು ದಿಯೆ
ಹೊ಼ಷಿ ಆರ್ ಕನ್ನರ್ ಗೊಲ್ಪೋಕೊಥಾ
ದಿನ್ ಥೇಕೆ ಜೋಲೇಜೋ........
ದಿನಂತೋ ದಿನಂತೋ ದಿನಂತೋ........

(ಇರುಳಿನ ನಿಯಾನ್ ದೀಪಗಳ ಪ್ರಭೆಯಲ್ಲಿ ನಿನ್ನನ್ನು ಗುರುತಿಸಲಸಾಧ್ಯ. ಇಲ್ಲಿ ಜನರು ಸತ್ತವರಿಗಾಗಿ ಕಂಬನಿ ಮಿಡಿಯುತ್ತಾರೆ, ಉಳಿವಿಗಾಗಿ ಹೋರಾಡುತ್ತಾರೆ. ಜನ್ಮಕ್ಕೆ ಋಣ ಸಂದಾಯ ಮಾಡುವಂತೆ ಅವರು ಸಾವಿಗೆ ಬಲಿಯಾಗುತ್ತಾರೆ. ಮುಂಜಾನೆಯಿಂದ ಮುಸ್ಸಂಜೆಯವರೆಗಿನ ನಿನ್ನ ಪಯಣದ ನೋವು ನಲಿವುಗಳೇ ನಮ್ಮ ಕಥನ.....)

ಆಗ ನನ್ನ ಬದುಕಿಗೊಂದು ಗೊತ್ತು ಗುರಿ ಇರಲಿಲ್ಲ. ಭಿಕ್ಷುಕನೊಬ್ಬನ ಬದುಕಿಗೆಂತಹ‌ ಗಮ್ಯ ಅಲ್ಲವೇ...? ಆದರೂ ಕೆಲವೊಮ್ಮೆ ಅಶ್ರಫ್ 'ನಮ್ಮ ಭವಿಷ್ಯವೇನು ಭಾಯ್' ಎಂದಾಗಲೆಲ್ಲ ಅರಿಯದ ತಳಮಳ.... ಆಗೆಲ್ಲಾ ನನ್ನನ್ನು ಸಾಂತ್ವನಿಸಿದ್ದು ಈ ಕಲ್ಕತ್ತೆಯೇ..... ನನ್ನ ಪಾಲಿಗೆ ಕಲ್ಕತ್ತೆಯೆಂದರೆ ಸಮಸ್ಯೆಗಳನ್ನು ಮೆಟ್ಟಿನಿಂತು ಬೆಳೆಯುವ ಅಪರಿಮಿತ ಆತ್ಮವಿಶ್ವಾಸ.... ಬರಡಾದ ನೆಲವನ್ನೂ ಚಿಗುರಿಸಬಲ್ಲ ಚೈತನ್ಯದ ಒರತೆ....... ಕಷ್ಟಗಳ ಹೆಡೆಮುರಿ ಕಟ್ಟಿ ಬದುಕಲು ಕಲಿ ಎಂದು ಬೋಧಿಸುವ ಗುರು.....

ರಾತ್ರಿಯ ನೀರವ ಮೌನದಲ್ಲಿ ಹೌರಾ ಸೇತುವೆಯೇರಿ ಆಗಸದೆಡೆಗೆ ಮುಖಮಾಡಿ ನಿಂತರೆ, ಹೂಗ್ಲಿಯ ಸಾಗರಸಂಗಮದ ಕಡೆಯಿಂದ ಬೀಸುವ ಕಡಲ್ಗಾಳಿ ನನ್ನ ತಳಮಳಗಳನ್ನೆಲ್ಲಾ ಸರಿಸಿ ಮನಸ್ಸಿಗೆ ತಂಪೆರೆಯುತ್ತಿತ್ತು......
ಆಗಾಗ ಜೊತೆಯಾಗುವ ಮುಸಲ ಧಾರೆಯ ಸಿಂಚನ ಬೇರೆ....

ಆ ನೀರವ ರಾತ್ರಿಗಳಲ್ಲಿ ಆಗಸಕ್ಕೆ ಮುಖಮಾಡಿ ಜೋರಾಗಿ ಕಿರುಚಿ ಹೇಳುತ್ತಿದ್ದೆ..........

"ಕೋಲ್ಕತ್ತಾ........ಆಮಿ ತುಮಾಕೆ ಭಾಲೋಬಾಷಿ..!
ಆಮಿ ಶೊತ್ತಿ ಬೋಲ್ಚೀ......!!!" (ಕೋಲ್ಕತ್ತಾ, ಐ ಲವ್ ಯೂ, ನಾನು ಸತ್ಯವನ್ನು ನುಡಿಯುತ್ತಿರುವೆ)

ಅದು ನನ್ನೆಲ್ಲಾ ದುಃಖ ದುಮ್ಮಾನಗಳನ್ನು ಆಲಿಸಿ ಸಾಂತ್ವನಿಸುತ್ತಿದ್ದ ನನ್ನ ಕಲ್ಕತ್ತೆಗೆ, ಅವಳ ಸಾಂಗತ್ಯಕ್ಕೆ ನಾನು ಸಲ್ಲಿಸುತ್ತಿದ್ದ ಒಲವಿನ ಕಾಣಿಕೆ.........!! ಅವಳು ನನ್ನ ಬದುಕಿನ ಅವಿಭಾಜ್ಯ ಅಂಗವೇ......

ಹಾಗೆ ಅಶ್ರಫ್ ಎಂಬ ಗೆಳೆಯ ಹಾಗೂ ಕಲ್ಕತ್ತಾ ಎಂಬ ರೂಪಸಿಯ ಸಾನಿಧ್ಯದಲ್ಲಿ ನನ್ನ ಬಾಲ್ಯ ಕಳೆದು ಯೌವ್ವನದ ದಿನಗಳು ಕಾಲಿಟ್ಟಿತ್ತು........

ಯೌವ್ವನದ ಬಿಸಿ ರಕ್ತ ಬಂಡಾಯದ ಕಿಚ್ಚೊಂದನ್ನು ನಿಧಾನವಾಗಿ ನನ್ನೊಳಗೆ ಉರಿಸಲಿತ್ತು.... ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುವ ಕಾಲ ಸನ್ನಿಹಿತವಾಗಿತ್ತು...... ನನ್ನ ಗೊತ್ತು ಗುರಿಯಿಲ್ಲದ ಬದುಕು ಒಂದು ಗಮ್ಯವನ್ನು ಕಾಣಲಿತ್ತು...... ಇಡೀ ಜಗತ್ತಿಗೆ ನಾನ್ಯಾರು ಎಂದು ತಿಳಿಯುವ ಸಮಯ ಹತ್ತಿರದಲ್ಲಿತ್ತು.....

ಸಶೇಷ

ಭಿಕ್ಷೆಯ ಮೂಲಕ ಸಂಗ್ರಹಿಸಲಾಗುವ ನಾಣ್ಯಗಳನ್ನು ರೇಜ್ಕಿ ಎಂದು ಕರೆಯಲಾಗುತ್ತದೆ. ಟಾಕಾ ಬಾಂಗ್ಲಾದೇಶದ ಅಧಿಕೃತ ಕರೆನ್ಸಿಯ ಹೆಸರು. ಆದರೆ ಪಶ್ಚಿಮ ಬಂಗಾಳ, ತ್ರಿಪುರಾ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ರೂಪಾಯಿಯನ್ನು 'ಟಾಕಾ' ಎಂದು ಕರೆಯುವುದು ರೂಢಿ.

ಸೋಂದೇಶ್ ಹಾಲು ಮತ್ತು ಸಕ್ಕರೆ ಬಳಸಿ ತಯಾರಿಸುವ ಬೆಂಗಾಲಿಗಳ ಪ್ರಸಿದ್ಧ ಸಿಹಿತಿಂಡಿ.

ಮಿಷ್ಟಿ ದೋಯ್ ಅಥವಾ ಮಿಷ್ಟಿ ದಹಿ ಬಹುತೇಕ ಎಲ್ಲರಿಗೂ ಚಿರಪರಿಚಿತ. ಹಾಲು, ಮೊಸರು ಹಾಗೂ ಸಕ್ಕರೆ ಬಳಸಿ ತಯಾರಿಸುವ ಇದನ್ನು ಸಣ್ಣ ಮಡಿಕೆಯ ಲೋಟಗಳಲ್ಲಿ ಸರ್ವ್ ಮಾಡುವುದು ರೂಢಿ.   
ಬೇಗುನಿ ಬದನೆಕಾಯಿಯನ್ನು ಕಡಲೇಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಮಾಡುವ ಖಾದ್ಯ(ಬದನೇಕಾಯಿ ಬಜ್ಜಿ) ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧ.

                       
ಪುಚ್ಕೆಗಳೆಂದರೇ ನಮ್ಮ ನೆಚ್ಚಿನ ಗೋಲ್ಗಪ್ಪಾ... ಅದನ್ನೇ ಬೆಂಗಾಲಿಗರು ಪುಚ್ಕೇ ಎನ್ನುತ್ತಾರೆ.

ಜಾತ್ರಾ/ಯಾತ್ರಾ ಪಶ್ಚಿಮ ಬಂಗಾಳದ ಸುಪ್ರಸಿದ್ಧ ಜಾನಪದ ರಂಗಕಲೆ. ಇದರ ಆರಂಭ ಶ್ರೀ ಚೈತನ್ಯರ ಭಕ್ತಿ ಚಳುವಳಿಯೊಂದಿಗೆ ಬೆರೆತಿದೆ. ಇದು ಬಂಗಾಳವಲ್ಲದೇ ಈಶಾನ್ಯ ರಾಜ್ಯಗಳು, ಓಡಿಸ್ಸಾ ಹಾಗೂ ಬಾಂಗ್ಲಾದೇಶದಲ್ಲೂ ಪ್ರಸಿದ್ಧ. ಮೊದಮೊದಲು ಹಳ್ಳಿಗಳಿಗೆ ಸೀಮಿತವಾಗಿದ್ದ ಜಾತ್ರಾವನ್ನು ನಗರದ ಚೌಕಟ್ಟಿಗೆ ತಂದಿದ್ದು ಬೆಂಗಾಲಿ ನವೋದಯ. ಹಾಗೆಯೇ ಆರಂಭದಲ್ಲಿ ಪೌರಾಣಿಕ ಕಥನಗಳಿಗೆ ಸೀಮಿತವಾದದ್ದು ನಂತರ ಸಾಮಾಜಿಕ ವಿಚಾರಗಳನ್ನು ಹೊತ್ತ ಜಾತ್ರಾಗಳೂ ಆರಂಭವಾದವು. ಇವುಗಳಿಗೆ ಚಲನಚಿತ್ರದಂತೆ ಪೋಸ್ಟರ್ಗಳಿರುತ್ತವೆ. ಮುಂಚೆ ಈ ಕಲಾ ಪ್ರಕಾರ ಗಂಡಸರಿಗೆ ಮಾತ್ರ ಸೀಮಿತವಾಗಿತ್ತು. ಹೆಣ್ಣಿನ ಪಾತ್ರವನ್ನೂ ಗಂಡಸರೇ ಪೋಷಿಸುತ್ತಿದ್ದರು. ಈಗ ಹೆಣ್ಣುಮಕ್ಕಳೂ ಜಾತ್ರಾದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. 

                
ಜಾತ್ರಾ ಎಂದರೆ ಪಯಣ ಎಂಬ ಅರ್ಥವಿದೆ.‌ ಈ ವಿಶಿಷ್ಟ ನಾಲ್ಕು ಗಂಟೆಗಳ ನಾಟಕದ ಮುಂಚೆ ಸಾಮಾನ್ಯವಾಗಿ ಒಂದು ಗಂಟೆಗಳ ಸಂಗೀತ ಕಛೇರಿ ಇರುತ್ತದೆ. ಇದು ನಾಟಕಕ್ಕೆ ವೀಕ್ಷಕರನ್ನು ಸೆಳೆಯಲು ಸಹಕಾರಿ. ಜಾತ್ರಾದ ಪ್ರದರ್ಶನವು ನಾಟಕೀಯ ದೀರ್ಘ ಸ್ವಗತಗಳು, ಹಾಡು, ಯುಗಳ ನೃತ್ಯಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಜಾನಪದ ಸಂಗೀತದಿಂದ ಕೂಡಿದ ಈ ನೃತ್ಯಗಳು ನಾಟಕ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಬದಲಾಗುವಾಗ ಹಾಗೂ ನಾಟಕದ ಮುಕ್ತಾಯದಲ್ಲಿ ಇರುತ್ತವೆ. 
ಈ ಜಾತ್ರಾ ಕಲಾವಿದರು ಸೆಪ್ಟೆಂಬರ್ ತಿಂಗಳಿನಿಂದ ಮುಂಗಾರು ಆರಂಭವಾಗುವವರೆಗೆ ರಾಜ್ಯದಾದ್ಯಂತ ಬೇರೆ ಬೇರೆ ಜಾಗಗಳಲ್ಲಿ ಪ್ರದರ್ಶನ ನೀಡುತ್ತಾರೆ.
ಜಾತ್ರಾ ಪ್ರದರ್ಶನವು ಉತ್ತರ ಪ್ರದೇಶದ ನೌಟಂಕಿ, ಮಹಾರಾಷ್ಟ್ರದ ತಮಾಷಾ, ಗುಜಾರಿತನ ಭಾವೈ ಕಲೆಗಳಿಗೆ ಬಹುವಾಗಿ ಹೋಲುತ್ತದೆ.
ಮಾಹಿತಿಗಳ ಕೃಪೆ: ಅಂತರ್ಜಾಲ

ಕೋಲ್ಕತ್ತಾ ವಿವರಣೆಯ ಬೆಂಗಾಲಿ ಹಾಡಿನ ರಚನೆ, ಸಾಹಿತ್ಯ ಹಾಗೂ ಗಾಯನ: ಶ್ರೀಯುತ ಭೂಪೇನ್ ಹಜಾ಼ರಿಕಾ

ಕನ್ನಡ ಭಾವಾನುವಾದ ಕೃಪೆ: ಅಂತರ್ಜಾಲ

1 ಕಾಮೆಂಟ್‌:

  1. ಲಿಪಿಯಲ್ಲಿ ಓದುವಾಗ ಈ ಚಿತ್ರಗಳ ಲಿಂಕ್ ಕಂಡಿತ್ತು. ಆದರೆ ಇದರಲ್ಲಿ ಸ್ಪಷ್ಟವಾಗಿದೆ. ಈಗಲೂ ಭಿಕ್ಷೆಗೆ ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು ಬಂದವರನ್ನು ನೋಡಿದಾಗ ದುಡ್ಡು ಕೊಡಬೇಕೋ ಬೇಡವೋ ಅನ್ನುವ ದ್ವಂದ್ವ ಶುರುವಾಗುವುದು ನಿಜ. ಕೊಟ್ಟು ನಾವು ಅವರನ್ನು ಭಿಕ್ಷೆಗೆ ಪ್ರೋತ್ಸಾಹಿಸುತ್ತಿದಿವಿ ಅನ್ನಿಸಿದರೂ ಅವರು ದುಡ್ಡು ತೆಗೆದುಕೊಳ್ಳದೆ ವಾಪಸ್ಸು ಹೋದರೆ ಎಷ್ಟು ಪೆಟ್ಟು ತಿನ್ನಬಹುದು.

    ಪ್ರತ್ಯುತ್ತರಅಳಿಸಿ