ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 4

ಪಿಂಜರೇ ಕಿ ಚಿಡಿಯಾ….. ಜೋ ಕಭೀ ನ ಉಡಿಯಾ….

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಅಮ್ಮನ ಗರ್ಭಗುಡಿಯಿಂದ ಹೊರಬಿದ್ದಿದ್ದೆ. ಆದರೆ ಈಗ್ಯಾಕೋ ವಾಪಾಸು ಅವಳೊಡಲಿಗೇ ಓಡುವ ತವಕ. ಸಾಧ್ಯವಾದೀತೇ.....? 

ಇಷ್ಟು ತಿಂಗಳುಗಳ ಕಾಲ ಯಾವ ಚಿಂತೆಗಳಿಲ್ಲದೇ ಮಾಯಿಯೊಡಲೊಳಗೆ ಬೆಚ್ಚಗಿದ್ದು ಈಗಿನ್ನೂ ಕಣ್ತೆರೆದ ಹಸುಗೂಸು..... ಆ ಮಾಘದ ಚಳಿ ತಡೆಯಲಾದೀತೇ? ನನಗೆ ಗೊತ್ತಿದ್ದುದು ಒಂದೇ ಭಾಷೆ..... ಅಳುವಿನ ಭಾಷೆ.

ಚಳಿ ತಾಳಲಾರದೇ ಇದ್ದ ಶಕ್ತಿಯನ್ನೆಲ್ಲಾ ಬಳಸಿ ಕೂಗತೊಡಗಿದೆ. ಆ ಕೂಡಲೇ ಚಾಚಿ ಓಡಿಬಂದು ತನ್ನ ಕೈಯಿಂದ ನನ್ನ ಬಾಯಿ ಮುಚ್ಚಿ ಗಟ್ಟಿಯಾಗಿ ಎದೆಗವಚಿಕೊಂಡಳು. ನನಗೆ ಯಾವುದೋ ರಕ್ಷಣೆ ದೊರೆತಂತಹ ಭಾವ... ಅವಳ ಮಡಿಲೂ ಬೆಚ್ಚಗಿತ್ತು. ಇದು ನನ್ನ ಮಾಯಿಯ ಮಡಿಲಲ್ಲ ಎಂಬುದು ತಿಳಿಯುತ್ತಿತ್ತಾದರೂ ಆ ಅಪ್ಪುಗೆಯಲ್ಲಿ ಏನೋ ಸುರಕ್ಷತೆಯ ಭರವಸೆ, ನಿರಾಳತೆ..... 

ಆದರೆ ಅವಳು ಗಾಬರಿಯಾಗಿದ್ದಳು. ಭಯದಿಂದ ಪದೇಪದೇ ಸುತ್ತಮುತ್ತ ನೋಟಹರಿಸುತ್ತಿದ್ದಳು. ಭಯ ಬೀಳದೇ ಇನ್ನೇನು ಮಾಡಿಯಾಳು? ಬೆಳಕು ಹರಿಯಲು ಇನ್ನೂ ಎರಡು ಜಾವಗಳಿತ್ತು‌....

ಎರಡು ಸುದೀರ್ಘ ಜಾವಗಳು......!!

ಒಂದು ವೇಳೆ ನನ್ನ ಅಳು ಮನೆಯೊಳಗೆ ಸುಖ ನಿದ್ರೆಯಲ್ಲಿ ಲೀನರಾಗಿರುವ ಯಾರದೇ ಕಿವಿಯ ಪರದೆಯನ್ನು ತಲುಪಿದರೂ ಸೂರ್ಯ ರಶ್ಮಿಯು ಭುವಿ ಸೋಕುವ ಮುನ್ನಿನ ಈ ಎರಡು ಜಾವಗಳಲ್ಲೇ ನನ್ನ ಅಂತ್ಯವಾಗುತ್ತದೆ ಎಂಬುದನ್ನು ಅರಿಯದಷ್ಟು ಮೂಢಳಲ್ಲ ಆಕೆ. ಎಷ್ಟೆಂದರೂ ಇದು ಅವಳ ಸ್ವಾನುಭವವಲ್ಲವೇ....? ಆಕೆ ಕೊನೆಯ ಪಕ್ಷ ಬೆಳಕು ಹರಿಯುವವರೆಗಾದರೂ ನನ್ನನ್ನು ಬದುಕಿಸಿಕೊಳ್ಳಲೇಬೇಕು ಎಂಬ ಹುಕಿಗೆ ಬಿದ್ದಿದ್ದಳು.

ಚಾಚಿ ಏನೋ ಯೋಚಿಸಿದವಳಂತೆ ನನ್ನನ್ನು ತನ್ನೆದೆಗೆ ಒತ್ತಿಕೊಂಡೇ ಹಿಂಬಾಗಿಲಿನಿಂದ ಮನೆಯೊಳಗೆ ನಡೆದಳು. ಅವಳ ಒಂದು ಕೈ ನನ್ನ ಬಾಯನ್ನು ಮುಚ್ಚಿತ್ತು. ಸದ್ದಾಗದಂತೆ ಒಂದು ಕೋಣೆಯತ್ತ ನಡೆದಳು... ಅವಳದೇ ಕೋಣೆಯದು...

ಚಾಚೂ ಈ ಲೋಕದ ಪರಿವೆಯೇ ಇಲ್ಲದೆ ಪವಡಿಸಿದ್ದ. ಅವನ ಗೊರಕೆಯ ಕರ್ಕಶ ಸದ್ದು ಕೋಣೆಯನ್ನು ದಾಟಿ ಮನೆಯನ್ನೇ ಆವರಿಸಿತ್ತು. ಕೆಲಸ, ಕಾರ್ಯ ಏನೂ ಇಲ್ಲ... ಜಮೀನಿನ ಕೆಲಸ ಮಾಡಲು ಆಳುಗಳು, ಮನೆಕೆಲಸಕ್ಕೆ ಹೇಗೂ ಲುಗಾಯಿ(ಹೆಂಡತಿ)ಯೇ ಬಿಟ್ಟಿಬಿದ್ದಿದ್ದಾಳೆ.

ಇನ್ನೇನು ಕೆಲಸ...? ಉಣ್ಣುವುದು, ಬೀದಿ ಬೀದಿ ಸುತ್ತುವುದು, ಮನೆಯಲ್ಲಿ ಹೆಂಡತಿಯ ಪ್ರಾಣ ಹಿಂಡುವುದು.... ಎಂಥಾ ಸುಖ ಲೋಲುಪದ ಜೀವನ....

ನಲ್ವತ್ತರ ಈ ಗಂಡಸಿಗೆ ಹದಿನೆಂಟರ ಚಾಚಿ ಲುಗಾಯೀ....

ಚಾಚಿ ಸದ್ದಾಗದಂತೆ ಒಂದು ತೆಳು ಸೀರೆ ಹಾಗೂ ಎಸೆಯಲೆಂದು ಇಟ್ಟ ಹಳೆಯ ದಪ್ಪನೆಯ ಚಾದರ್ ಒಂದನ್ನು ತೆಗೆದುಕೊಂಡು ಕೋಣೆಯ ಬಾಗಿಲೆಳೆದುಕೊಂಡು ಕಳ್ಳ ನಡಿಗೆಯಲ್ಲಿ ಅಡುಗೆ ಕೋಣೆಗೆ ಬಂದಿದ್ದಳು. ಹಾಲಿಗೆ ಒಂದಿಷ್ಟು ಕಾದಾರಿದ ನೀರು ಬೆರೆಸಿ ಒಂದು ಪಾತ್ರೆಯಲ್ಲಿ ಹಿಡಿದು ಹಿಂಬಾಗಿಲಿನಿಂದ ಹೊರಬಂದಿದ್ದಳು. ಮತ್ತೆ ನಾವಿಬ್ಬರೂ ಮಾಯಿ ಇದ್ದಲ್ಲಿಗೆ ಬಂದಿದ್ದೆವು. ತಂದ ಸೀರೆಯನ್ನು ಹರಿದು ಒಂದು ಭಾಗವನ್ನು ಮಡಚಿ ಅಲ್ಲೇ ನೆಲದ ಮೇಲೆ ಹಾಸಿದಳು. ಇನ್ನೊಂದು ಭಾಗವನ್ನು ನನಗೆ ಸುತ್ತಿ ಹಾಸಿದ ಸೀರೆಯ ತುಂಡಿನ ಮೇಲೆ ನನ್ನ ಮಲಗಿಸಿದಳು. ಮೇಲೆ ದಪ್ಪ ಚಾದರ ಹೊದಿಸಿದಳು. ಒಂದು ಬಟ್ಟೆಯ ಚೂರನ್ನು ಹಾಲಿನ ಪಾತ್ರೆಗೆ ಅದ್ದಿ ನನ್ನ ಬಾಯಿಗೆ ಹಿಂಡತೊಡಗಿದಳು....

ನನಗೆ ನಿಜಕ್ಕೂ ಹಸಿವಾಗಿತ್ತು. ಒಂದಿಷ್ಟು ಹಾಲು ಹೊಟ್ಟೆಗಿಳಿದಾಗ ನೆಮ್ಮದಿ ಎನಿಸಿತು. ಚಾಚಿ ನನ್ನ ಎತ್ತಿ ತೋಳ ಮೇಲೆ ಹಾಕಿಕೊಂಡು ಮೆದುವಾಗಿ ಬೆನ್ನು ನೀವತೊಡಗಿದಳು. ನಾನಲ್ಲೇ ನಿದ್ದೆ ಹೋದೆ ಮುಂದಿನ ಹೋರಾಟದ ಚಿಂತೆ ಇಲ್ಲದೇ.....  ನಿದ್ರಿಸಿರುವುದು ಖಚಿತವಾದ ಮೇಲೆ ನನ್ನ ಕೆಳಗೆ ಮಲಗಿಸಿ ಚಾದರ ಹೊದಿಸಿದಳು‌. 

ನನ್ನ ತಲೆಯನ್ನು ಮೆದುವಾಗಿ ಸವರಿ ಎದ್ದು ಅಲ್ಲೇ ಶತಪಥ ಹಾಕತೊಡಗಿದವಳು ವ್ಯಾಕುಲಳಾಗಿದ್ದಳು. ಆಗೀಗ ಮಾಯಿಯ ಶವವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳಿಗೆ ಮಾಯಿಯ ಸಾವು ದೊಡ್ಡ ಆಘಾತವನ್ನೇ ತಂದಿತ್ತು.

ಆದರೆ ಈಗಾಗಲೇ ಲೋಕದ ಬಂಧ ಕಳಚಿದ ಮಾಯಿಗಿಂತಲೂ, ಅಸುನೀಗಲು ಕ್ಷಣಗಳ ಗಣನೆಯಲ್ಲಿದ್ದ ನಾನೇ ಆಕೆಗೆ ಮುಖ್ಯವಾಗಿದ್ದೆನೆಂದು ತೋರುತ್ತದೆ. ಅವಳ ತಲೆಯಲ್ಲಿ ಅದೆಷ್ಟು ವಿಚಾರಗಳಿದ್ದವೋ, ಅವಳ ಮನದೊಳಗೆ ಅದೇನು ವೇದನೆಯಿತ್ತೋ ಬಲ್ಲವರ್ಯಾರು...? ಪ್ರಾಯಶಃ ಈ ರಾತ್ರಿ ಕಳೆದು ಬೆಳಕಾಗದಿರಲಿ, ಮನೆಯವರು ಎದ್ದು ನನ್ನ ನೋಡದಿರಲಿ ಎಂಬ ಪ್ರಾರ್ಥನೆ ಅವಳದಿತ್ತೇನೋ....

ನಮ್ಮ ಕೋರಿಕೆಗಳೆಲ್ಲಾ ಸ್ವೀಕೃತವಾಗಿ ಈಡೇರುವಂತಿದ್ದರೆ ಬದುಕು ಆನಂದ ಸಾಗರವೇ..... ಆದರೆ ಎಂದಾದರೂ ಹಾಗಾದೀತೇ? ಊಹೆಗೆ ನಿಲುಕದ್ದು, ಕಲ್ಪನೆಗಳನ್ನು ಮೀರಿದ್ದೇ ಬದುಕಲ್ಲವೇ.....?

ಕತ್ತಲು ಕರಗಿ ಬೆಳಕು ಸುರಿದೇ ಸುರಿದಿತ್ತು. ಬೆಳಗಿನ ಎಳೆಬಿಸಿಲು ಯಮುನಾ ತಟದ ಸಮೃದ್ಧ ನೆಲವನ್ನು ಸೋಕುವ ಹೊತ್ತಿಗೆ ಭಾರವಾದ ಮನದಿಂದ ಎಲ್ಲವನ್ನೂ ವಿಧಾತನ ಕೈಗೊಪ್ಪಿಸಿ ನಾಟಕದ ಅಂಕದ ಪರದೆ ಸರಿಸಲು ತಯಾರಾದಳು ಚಾಚಿ. ನನ್ನ ಮೈ ಮೇಲೆ ಹೊದಿಸಿದ್ದ ಬೆಚ್ಚನೆ ಚಾದರವನ್ನು, ಸುತ್ತಿದ್ದ, ಹಾಸಿದ್ದ ಬಟ್ಟೆಗಳನ್ನು ತೆಗೆದು ಅನತಿ ದೂರದಲ್ಲಿದ್ದ ಕುರುಚಲು ಪೊದೆಗಳ ನಡುವೆಲ್ಲೋ ಬಿಸುಟು ಬಂದಳು. ಹಾಲಿನ ಪಾತ್ರೆಯನ್ನು ಬಚ್ಚಲಿಗೊಯ್ದಳು. ಆ ನಸುಕಿನಲ್ಲಿ ಆಕೆ ಅಲ್ಲಿದ್ದಳು ಎಂಬುದಕ್ಕೆ ಒಂದು ಕುರುಹೂ ಉಳಿಯದಂತೆ ಎಲ್ಲವನ್ನೂ ಸರಿಪಡಿಸಿದವಳು, ಮತ್ತೆ ಚಳಿಗೆ ಮೈಯೊಡ್ಡಿ ಅಳುತ್ತಿದ್ದ ನನ್ನ ಎದೆಗೊತ್ತಿಕೊಂಡು, ನೊಸಲಿಗೊಂದು ಮುತ್ತಿಟ್ಟು ತುಂಬಿದ ಕಂಗಳೊಂದಿಗೆ ನನ್ನನ್ನು ನಿರ್ಜೀವವಾಗಿದ್ದ ಮಾಯಿಯ ಪಕ್ಕದಲ್ಲಿ ಮಲಗಿಸಿ ಮತ್ತೆ ತಿರುಗಿನೋಡದೇ ಮನೆಯೊಳಗೆ ಓಡಿದ್ದಳು.

ಇಷ್ಟು ಸಮಯದ ತನಕ ನನ್ನನ್ನು ಆವರಿಸಿದ್ದ ಸುರಕ್ಷತಾ ಭಾವ ಈಗಿರಲಿಲ್ಲ. ಪಕ್ಕದಲ್ಲೇ ಮಾಯಿಯಿದ್ದರೂ ತಣ್ಣನೆಯ ಕೊರಡಾಗಿದ್ದ ಅವಳ ಇರುವಿಕೆಯ ಅರಿವು ನನಗಾಗಲೇ ಇಲ್ಲ. ಇದ್ದವಳೊಬ್ಬಳು ಚಾಚಿಯೂ ಹೀಗೆ ನನ್ನ ಒಬ್ಬಂಟಿಯಾಗಿಸಿ ಸರಿದಿದ್ದಳು. 

ಈಗಲೂ ನನ್ನ ಸಾಥಿಯಾಗಿದ್ದು ಅದೇ ಅಳು.... ಏನೂ ತೋಚದೇ ಅಬೋಧಳಾಗಿ ಅಳತೊಡಗಿದೆ. ಉಸಿರು ಬಿಗಿ ಹಿಡಿದು ಇದನ್ನೇ ನಿರೀಕ್ಷಿಸುತ್ತಿದ್ದ ಚಾಚಿ ನನ್ನ ಅಳುವಿನ ಸದ್ದು ಕೇಳಿದೊಡನೆಯೇ ಮನೆಯವರನ್ನು ಎಬ್ಬಿಸಿದ್ದಳು. 

ಕುಲತಿಲಕನ ನಿರೀಕ್ಷೆಯಲ್ಲಿದ್ದ 'ರಾಜ ಮನೆತನ'ದ ಸದಸ್ಯರೆಲ್ಲರೂ, 'ಎಲ್ಲಿಯಾದರೂ ಬಾಬಾನ ಭವಿಷ್ಯವಾಣಿ ಸುಳ್ಳಾಗಿ ಲಾಲಾ ಹುಟ್ಟಿರಬಹುದೇ' ಎಂಬ ಆಸೆಯಲ್ಲಿ ಕೊಟ್ಟಿಗೆಯತ್ತ ದೌಡಾಯಿಸಿದ್ದರು. ನನ್ನ ಕಂಡದ್ದೇ ಅವರ ಮುಖದಲ್ಲಿ ನಿರಾಶೆ, ಕ್ರೋಧ, ತಿರಸ್ಕಾರ ಸ್ಪಷ್ಟವಾಗಿತ್ತು.... 

ಭ್ರಮನಿರಸನಗೊಂಡ ಮಹಾನುಭಾವರ ಗಮನ ಸೆಳೆದ ಚಾಚಿ ಅಳುತ್ತಲೇ ನಿರ್ಜೀವಗೊಂಡ ಮಾಯಿಯನ್ನು ತೋರಿಸಿದಳು...

ನನ್ನ ದಾದಿ ಮಾಯಿಯ ಮೂಗಿನ ಬಳಿ ಬೆರಳಿಟ್ಟು ಪರೀಕ್ಷಿಸಿ ಸಾವನ್ನು ಖಚಿತಪಡಿಸಿದ್ದಳು.

"ಏಕ್ ಔರ್ ಚೋಕರಿ ಪೈದಾ ಕರ್ಕೇ ಚಲೀ ಗಯೀ. ಇಸ್ಸೇ ಅಚ್ಛಾ ಪೆಹಲೇ ಹೀ ಮರೀ ಹೋತೀ......" ಅದೆಷ್ಟು ನಿಕೃಷ್ಟವಾಗಿ ಎಂದಿದ್ದ ಅಪ್ಪನೆಂಬ ಪುರುಷೋತ್ತಮ....?

ಹೆಣ್ಣು ಮಗುವಿನ ಜನನಕ್ಕೆ ಕೇವಲ ತಾಯಿ ಮಾತ್ರ ಕಾರಣ..... ಅದರ ತೆಗಳಿಕೆ, ತಿರಸ್ಕಾರ ಎಲ್ಲಾ ಅವಳೊಬ್ಬಳಿಗೇ. ಅದೇ ಗಂಡು ಮಗುವಿನ ಜನನಕ್ಕೆ ಪುರುಷ ಮಾತ್ರ ಕಾರಣ. ಅದರ ಶ್ರೇಯ, ಹೊಗಳಿಕೆಯೆಲ್ಲಾ ಮೀಸೆ ತಿರುವಿ ಮೆರೆವ ಗಂಡಸಿಗೆ. ಹೆಣ್ಣಿನ ಪಾತ್ರವಿಲ್ಲ ಅದರಲ್ಲಿ....... ವೈಜ್ಞಾನಿಕತೆಗೇ ಸವಾಲಾಗಬಲ್ಲ ಇಂತಹದೊಂದು ನಿಯಮ ನಮ್ಮ ಸಮಾಜದಲ್ಲಿ ಬಹು ಪುರಾತನ ಕಾಲದಿಂದ ಚಾಲ್ತಿಯಲ್ಲಿದೆ. ಅದೇ ಸಮಾಜದ ಪ್ರತಿನಿಧಿ ನನ್ನಪ್ಪ. ಅವನ ಮಾತನ್ನು ಅನುಮೋದಿಸಿದ್ದು ಇನ್ನೆರಡು ಪುರುಷ ಸಿಂಹಗಳು ಹಾಗೂ ಒಬ್ಬಳು ಹೆಣ್ಣು....

ನನ್ನ ದಾದಿ.... 

ಚಾಚಿಯದು ಮೌನದ ಮುಸುಕಿನೊಳಗಿನ ಅಗೋಚರ ವೇದನೆ. ಬಾಯ್ತೆರೆದು ವಿರೋಧಿಸಲೂ ಆಗದ, ವಿಷಾದವನ್ನು ವ್ಯಕ್ತಪಡಿಸಲೂ ಆಗದ ಅಸಹಾಯಕತೆ.... 

ಇನ್ನು ಉಳಿದವಳು ಬಾಪುವಿನ 'ನಯೀ ನವ್ವೇಲಿ ಲುಗಾಯಿ', ನನ್ನ ಸೌತೇಲಿ ಮಾಯಿ.... ಆಕೆಯೂ ಚಾಚಿಯಂತೆ ಹದಿನೆಂಟರ ಪ್ರಾಯದವಳೇ‌. ನನ್ನ ಬಾಪೂ ಅವಳಿಗಿಂತ ಮೂರುವರೆಪಟ್ಟು ಹಿರಿಯವ. ಆದರೆ ಆಕೆಯ ಹೆತ್ತವರಿಗೆ ಬಾಪೂವಿನ ದೌಲತ್ ಎದುರಿಗೆ ಅವನ ವಯಸ್ಸು ನಗಣ್ಯ. ಅದಕ್ಕೂ ಮಿಗಿಲಾಗಿ ಅವರಿಗೆ ಈ ಚೋರಿಯನ್ನು ಮನೆಯಿಂದ ಸಾಗಹಾಕಿದರೆ ಸಾಕಿತ್ತು. ಯಾವ ತಲೆಮಾಸಿದವನ ತಲೆಗೆ ಕಟ್ಟಿದೆವು ಎಂಬುದು ಅವರಿಗೆ ಮುಖ್ಯವಲ್ಲ. ಹೆಣ್ಣೆಂಬ ಪ್ರಾರಬ್ಧ ಮನೆಯಿಂದ ಹೊರಹೋದರೆ ಅಷ್ಟೇ ಸಾಕು ಅವರಿಗೆ. ಇದು ನಮ್ಮಲ್ಲಿ ಬಹಳ ಸಾಮಾನ್ಯವಾದ ಸಂಗತಿ ಬಿಡಿ....

ಪಾಪ.... ತನ್ನ ಎದುರು ನಡೆಯುತ್ತಿರುವ ಘಟನೆ ಅವಳಿಗೆ ಅವಳ ಭವಿಷ್ಯವನ್ನು ಕಣ್ಣೆದುರಿಗೆ ತಂದಿರಬೇಕು. ತನಗೂ ಹೆಣ್ಣು ಕೂಸು ಹುಟ್ಟಿದರೆ?? ಎಂಬ ಭಯಕ್ಕೆ ಬಿಳಚಿಕೊಂಡು ಅರಕ್ತಳಾಗಿ ನಿಂತಿದ್ದಳಾಕೆ. 

ದಾದಿ ನನ್ನೆಡೆಗೆ ನಿಕೃಷ್ಟವಾಗಿ ನೋಡುತ್ತಾ, "ಅಬ್ ಇಸ್ಕಾ ಕಾ ಕರೇ....? ಏ ತೇರಿ ಪುರಾನಿ ಲುಗಾಯೀ ಕೆ ಸಾಥ್ ಮಾ ಇಸ್ ಚೋರಿ ಕೋ ಭೀ ದಫ್ನಾಯೇ ಕಾ? ಯಾ ರಾತ್ ಕೀ ಟಂಡೀ ಪಡ್ನೆ ತಕ್ ಇಂತಜಾರ್ ಕರೇ?" ಎಂದು ಬಾಪೂವನ್ನು ಕೇಳಿದ್ದಳು!! 

(ಈಗ ಇದನ್ನೇನು ಮಾಡೋದು? ಈ ನಿನ್ನ ಹಳೆ ಹೆಂಡತಿಯೊಂದಿಗೆ ಈ ಹೆಣ್ಣನ್ನೂ ಮಣ್ಣು ಮಾಡೋಣವೇ? ಇಲ್ಲಾ ರಾತ್ರಿಯ ಚಳಿ ಬೀಳುವವರೆಗೆ ಕಾಯುವುದೋ?)

ಬಾಪೂ, ಚಾಚಾ ಹಾಗೂ ದಾದ ಯೋಚನೆಗೆ ಬಿದ್ದಿದ್ದರು. ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವುದು ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಈ ಊರಲ್ಲಿ ಇಂತಹವು ಸರ್ವೇಸಾಮಾನ್ಯವಾಗಿ ನಡೆಯುತ್ತವೆ. ಆದರೆ ಈ ಹಗಲಿನಲ್ಲಿ ಕೆಲಸ ಕೊಂಚ ಕಠಿಣವೆಂದು ತೋರಿತು ಅವರಿಗೆ. ಯಾವುದೇ ಎಗ್ಗಿಲ್ಲದೇ ಹೆಣ್ಣುಶಿಶುಗಳ ನರಮೇಧ ನಡೆಯುತ್ತಿದ್ದರೂ ಅದು ಕಾನೂನು ಪ್ರಕಾರ ಅಪರಾಧವೆಂದು ನಮ್ಮ ದೇಶದ ನ್ಯಾಯಸಂಹಿತೆ ಹೇಳುತ್ತದಲ್ಲ..... ಅದೇ ತೊಂದರೆಯಾಗಿದ್ದು. ಮೊದಲೇ ಬಾಪು ಕಾಪ್ ಪಂಚಾಯತಿನ ಸರಪಂಚನಾಗಲು ಎಲ್ಲಾ ವಿಧದಲ್ಲೂ ಪ್ರಯತ್ನಿಸುತ್ತಿದ್ದ. ಅದು ಮನೆಯ ಉಳಿದಿಬ್ಬರು ಗಂಡಸರು ಹಾಗೂ ದಾದಿಯ ಬಯಕೆಯೂ ಕೂಡ. ಆದರೆ ಅದೇ ಸರ್ಪಂಚ್ ಹುದ್ದೆಯ ಆಕಾಂಕ್ಷಿಗಳು ಇನ್ನೂ ಕೆಲವರಿದ್ದರು. ಈಗ ಹೀಗೆ ಮಗಳನ್ನು ಜೀವಂತ ಸಮಾಧಿ ಮಾಡಿರುವರೆಂಬ ವಿಷಯ ಅವರಿಗೆ ತಿಳಿದರೆ ಅದರಿಂದ ಬಾಪುವಿನ ಆಸೆ ಮಣ್ಣಾಗುವ ಸಾಧ್ಯತೆಯೇ ಹೆಚ್ಚು. ಸುಮ್ಮನೆ ಇಲ್ಲಸಲ್ಲದ ರಗಳೆ ಯಾಕೆಂದು ಮಾಯಿಯೊಂದಿಗೆ ನನ್ನನ್ನೂ ಮಣ್ಣು ಮಾಡುವ ಯೋಚನೆ ಕೈ ಬಿಟ್ಟರು. ಈಗ ಮಾಯಿಯನ್ನು ಮಣ್ಣು ಮಾಡುವುದೆಂದೂ, ರಾತ್ರಿಯಲ್ಲಿ ತಂಡಿ ಬಿದ್ದ ಮೇಲೆ ನನಗೊಂದು ಗತಿ ಕಾಣಿಸುವುದೆಂದೂ ನಿರ್ಧಾರವಾಯಿತು.

ಅಲ್ಲಿಗೆ ನನ್ನ ಮರಣ ಶಾಸನ ತಯಾರಾಗಿದೆ ಎಂದು ಚಾಚಿಗೂ, ಸೌತೇಲಿ ಮಾಯಿಗೂ ತಿಳಿದು ಹೋಯಿತು. ಇಬ್ಬರೂ ಮೌನವಾಗಿ ರೋಧಿಸುತ್ತಿದ್ದರಾದರೂ ಬಾಯ್ತೆರೆದು ವಿರೋಧಿಸುವ, ತಡೆಯುವ ಧೈರ್ಯ, ಹಕ್ಕು ಎರಡೂ ಅವರಿಗಿಲ್ಲ. ನನ್ನ ಮಾಯಿ ಒಂದು ವೇಳೆ ಜೀವಂತವಿದ್ದರೆ ಅವಳಿಂದಲೂ ನನ್ನನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ.... ಏಕೆಂದರೆ ಇದು 'ಮರ್ದೊಂಕಾ ಫೈಸಲಾ'... ಅದರ ಬಗ್ಗೆ ಚಕಾರವೆತ್ತುವಹಾಗಿಲ್ಲ ಔರತ್...

ದಾದಿ ಚಾಚಿಯನ್ನು ಕರೆದು ನನ್ನನ್ನು ರಾತ್ರಿಯ ತನಕ ಗೋದಾಮಿನಲ್ಲಿ ಇರಿಸಲು ಸೂಚಿಸಿದಳು. ಚಾಚಿ ನನ್ನನ್ನು ‌ಎತ್ತಿಕೊಂಡು ಗೋದಾಮಿನತ್ತ ಹೆಜ್ಜೆಗಳನ್ನು ಕಿತ್ತಿಟ್ಟ ಹಾಗೆ ಮಾಯಿ ನನ್ನ ಕಣ್ಣಂಚಿನಿಂದ ದೂರ ದೂರ ಸರಿಯತೊಡಗಿ ಕೊನೆಗೊಮ್ಮೆ ಮಾಯವಾದಳು....

ಹಾಗವಳು ಲಗುಬಗೆಯಿಂದ ನನ್ನ ಗೋದಾಮಿಗೆ ಕರೆತಂದವಳು ಅಲ್ಲೊಂದಿಷ್ಟು ಸ್ವಚ್ಛಗೊಳಿಸಿ ಬೇರೊಂದು ಚಾದರ್ ಹಾಸಿ ಮಲಗಿಸಿದಳು. ಮತ್ತೊಂದಿಷ್ಟು ಹಾಲು ತಂದು ನನ್ನ ಉದರ ಪೋಷಣೆ ಮಾಡಿದಳು..... ಇವಳ ಋಣ ಈ ಜನ್ಮದಲ್ಲಿ ತೀರುವುದುಂಟೇ....? ಈಗವಳು ಕೊಂಚ ನಿರಾಳ. ಏಕೆಂದರೆ ಇನ್ನು ರಾತ್ರಿಯಾಗುವವರೆಗೆ ಅವರ್ಯಾರೂ ಈ ಕಡೆಗೆ ತಲೆ ಕೂಡಾ ಹಾಕುವುದಿಲ್ಲ ಎಂಬುದು ಖಚಿತವಾಗಿತ್ತು ಅವಳಿಗೆ. ಆದರೆ ಆ ನಿರಾಳತೆಯ ಬೆನ್ನಿಗೇ ವಿಷಾದ ಆವರಿಸಿತು. ತಾನೇನೇ ಮಾಡಿದರೂ ಈ ರಾತ್ರಿಯವರೆಗೆ ಮಾತ್ರವೇ ಈ ಹಾಲುಗಲ್ಲದ ಕಂದಮ್ಮನ ಬದುಕು..... 

ಮಾಯಿಯನ್ನು ಮಣ್ಣುಮಾಡಲು ನೆರೆಕೆರೆಯವರೆಲ್ಲಾ ಮನೆಯಂಗಳದಲ್ಲಿ ಸೇರುತ್ತಿದ್ದರು. ಹೆರಿಗೆಯಲ್ಲಿ ಸಾವು ಉಸಿರಾಟದಷ್ಟೇ ಸಹಜ ಸಾಮಾನ್ಯ ಎಂಬಂತಾಗಿರುವ ಈ ಊರಿನಲ್ಲಿ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇನ್ನು ಹುಟ್ಟಿದ ಮಗುವಿನ ಬಗ್ಗೆ ಕೇಳುವ ಮಾತೆಲ್ಲಿಯದು? ಇಷ್ಟಕ್ಕೂ ಲಾಲಾ ಜನಿಸಿದ್ದರೆ ಈಗಾಗಲೇ ಊರಿಗೆಲ್ಲ ಮೀಠಾ ಸಮಾರಾಧನೆಯಾಗಿರುತ್ತಿತ್ತು... ಹಾಗಾಗಿಲ್ಲವೆಂದರೆ ಅನಿಷ್ಟದ ಲಾಲಿಯೇ ಜನಿಸಿರುವುದು ಎಂಬುದು ಅರ್ಥೈಸಿಕೊಂಡ ಸತ್ಯ. ಹಾಗಾಗಿ ಎಲ್ಲರೂ ಲಾಲಿಯ ಮನೆಯವರನ್ನು ಸಮಾಧಾನಿಸುತ್ತಾರಷ್ಟೇ. ಯಾವುದೋ ಸಾವಿನ ಮನೆಯಲ್ಲಿ ಶೋಕಾಚರಣೆ ಮಾಡಿ ಆ ಮನೆಯವರನ್ನು ಸಂತೈಸಿದಂತೆ......!!

ಇಲ್ಲೂ ಅದೇ ಕಾರ್ಯಕ್ರಮ ನಡೆಯುತ್ತಿತ್ತು. ಬಂದವರೆಲ್ಲರೂ ಬಾಪೂವಿನ ನಯೀ ದುಲ್ಹನ್ ಈ ಬಾರಿ ಲಾಲಾನನ್ನು ಹೆರುವಳೆಂದು ಭವಿಷ್ಯ ನುಡಿಯುತ್ತಾ ಸಾಂತ್ವನ ಹೇಳುತ್ತಿದ್ದರು. ನನ್ನ ಮಾಯಿ ನರಳಿ ನರಳಿ ಸತ್ತ ದುಃಖವಾಗಲೀ, ಜನಿಸಿದೊಡನೆ ಮಾಯಿಯ ಕಳೆದುಕೊಂಡು ಈ ರಾತ್ರಿಗೆ ಬದುಕಿನ ಯಾತ್ರೆ ಮುಗಿಸಲಿರುವ ನನ್ನ ವೇದನೆಯಾಗಲೀ, ಸೌತೇಲಿ ಮಾಯಿಯ ಮನದಲ್ಲಿ ತೀವ್ರವಾಗಿದ್ದ 'ಒಂದು ವೇಳೆ ನನಗೂ ಹೆಣ್ಣು ಕೂಸೇ ಜನಿಸಿದರೆ...?' ಎಂಬ ಭಯವಾಗಲೀ, ಚಾಚಿಯ ಗಾಢ ವಿಷಾದವಾಗಲೀ ಈ ಹಾಳು ಜನರನ್ನು ಸೋಕಲೇ ಇಲ್ಲ......

ಮಾಯಿಯ ಅಂತಿಮಯಾತ್ರೆ ಹೊರಟು, ಬಂದ ಜನರೆಲ್ಲಾ ಚದುರಿದರೂ ಚಾಚಿ ನನ್ನ ಬಿಟ್ಟು ಆಚೀಚೆ ಕದಲಲಿಲ್ಲ. ಎಲ್ಲಾ ಗದ್ದಲ ಕರಗಿ ನೀರವ ಮೌನವೊಂದು ಮನೆ ತುಂಬಾ ತಾಂಡವವಾಡಿದ ಆ ಕ್ಷಣದಲ್ಲಿ......

ಆಗ ಅವಳು ಇಷ್ಟರವರೆಗೆ ತಡೆಹಿಡಿದಿದ್ದ ದುಃಖ ದುಗುಡವೆಲ್ಲಾ ಒಮ್ಮೆಗೆ ಪ್ರವಾಹವಾಗಿ ಭೋರ್ಗರೆದು ಉಕ್ಕಿತು. ಬಿಕ್ಕಿ ಬಿಕ್ಕಿ ಅಳತೊಡಗಿದ ಚಾಚಿಯನ್ನು ಸಾಂತ್ವನಿಸಲು ಇದ್ದ ಒಂದೇ ಒಂದು ಹಸ್ತ ಇಹಲೋಕದ ಯಾತ್ರೆ ಮುಗಿಸಿ ತೆರಳಿಯಾಗಿತ್ತು...... ಅತ್ತು ಅತ್ತು ಕಣ್ಣೀರು ಪೂರಾ ಬತ್ತಿದ ಮೇಲೆ ನನ್ನೆಡೆಗೆ ಒಂದು ಶುಷ್ಕ ನಗು ಬೀರಿದವಳನ್ನು ಕಂಡು ನಾನೂ ನಕ್ಕೆ....

ನನ್ನ ನಗು ಕಂಡು ಅವಳಿಗೇನೆನಿಸಿತೋ.... ತನ್ನ ತೋಳಿಗೇರಿಸಿಕೊಂಡವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ನನ್ನ ತಲೆ, ಬೆನ್ನನ್ನು ಮೆದುವಾಗಿ ಸವರಿ ಎದೆಗೊತ್ತಿಕೊಂಡಳು..... 

ಹಾಗೆ ಎದೆಗಾನಿಸಿಕೊಂಡೇ ಇಡೀ ಜನುಮದ ಮಾತುಕತೆಯನ್ನೆಲ್ಲಾ ಶಶಿಯ ಆಗಮನದೊಳಗೆ ಮುಗಿಸುವ ಹುಚ್ಚಿಗೆ ಬಿದ್ದಂತೆ ನನ್ನೊಂದಿಗೆ ಮಾತಿಗಿಳಿದಿದ್ದಳು ನನ್ನ ಯಶೋಧಾ ಮಾಯಿ .......

"ನೀ ಯಾಕೆ ನಿನ್ನಮ್ಮನಂತೆ, ನನ್ನಂತೆ ಹೆಣ್ಣಾಗಿ ಹುಟ್ಟಿದೆ ಲಾಲೀ....?  ಈ ರಾತ್ರಿ ಚಂದಿರ ಮೂಡುವವರೆಗೆ ಮಾತ್ರವೇ ನಿನ್ನ ಆಯುಷ್ಯ. ಆನಂತರ ನಿನಗೆ ಈ ನರಕದಿಂದ ಮುಕ್ತಿಯೇನೋ ದೊರಕಿ ಬಿಡುತ್ತದೆ. ಇಲ್ಲಿ ಹೆಣ್ಣು ಸಾಯಲೆಂದೇ ಹುಟ್ಟುವವಳು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಆ ಸಾವನ್ನು ಆಹ್ವಾನಿಸಲು ಆಯ್ದುಕೊಳ್ಳುವ ವಿಧಾನಗಳು ಅದೆಷ್ಟು ಘೋರವಾಗಿರುವುದೆಂದು ನಿನಗೆ ತಿಳಿದಿಲ್ಲ. ನನಗೆ ಗೊತ್ತು ಅದೆಷ್ಟು ಭೀಭತ್ಸವೆಂದು..... ನಿನ್ನ ಉಸಿರು ನಿನ್ನ ಕಾಯದಿಂದ ದೂರಾಗುವ ಪ್ರತಿ ಕ್ಷಣವೂ ನಿನ್ನ ಅರಿವಿಗೆ ಬರುವಷ್ಟು ಬರ್ಬರ ಸಾವದು..... ನಮ್ಮನ್ನು ನೆಮ್ಮದಿಯಾಗಿ ಸಾಯಲೂ ಬಿಡದಂತೆ ಚಿತ್ರವಿಚಿತ್ರ ನರಕಯಾತನೆಗಳ ನೀಡಿ ಕೊಲ್ಲುತ್ತಾರೆ ಈ 'ನಾಗರೀಕ ಜನ'. ಕತ್ತು ಹಿಸುಕಿ, ಗೋಣು ಮುರಿದು ಸಾಯಿಸಿದರೆ ನಿನ್ನ ಪುಣ್ಯ. ಅದೇ ಆದಷ್ಟು ನೆಮ್ಮದಿಯ ಸಾವು......

ಆದರೆ ಈ ಮತಿಹೀನ ದಾನವರಿಗೆ ಅಷ್ಟಕ್ಕೇ ಸಮಾಧಾನವೆಲ್ಲಿಯದು? ಅದಕ್ಕಾಗಿಯೇ ಹಲವು ಹೀನಾಯ ತಂತ್ರಗಳನ್ನು ಸಂಪ್ರದಾಯ, ಆಚರಣೆಗಳ ಹೆಸರಲ್ಲಿ ತಲೆತಲಾಂತರದಿಂದ ರೂಢಿಸಿಟ್ಟಿದ್ದಾರೆ. ಈ ಸಾವೇ ಅನ್ಯಾಯ.... ಅದರೊಟ್ಟಿಗೆ ಇನ್ನಷ್ಟು ಕ್ರೌರ್ಯ ಮೆರೆವ ಹಂಬಲ...

ಇವರು ಅದೆಷ್ಟೆಲ್ಲಾ ಹಿಂಸೆ ನೀಡಿ ಹೆಣ್ಣು ಕೂಸ ಹತ್ಯೆಗೈವರೆಂದು ನಿನಗೆ ಗೊತ್ತೇನು ಮಗಳೇ....? 

ಆ ಎಳೆಯ ಕಂದನಿಗೆ ವಿಷಪ್ರಾಶನ ಮಾಡುವಾಗ ಇವರ ಕೈ ಕಿಂಚಿತ್ತೂ ನಡುಗುವುದಿಲ್ಲ. ಅವಳನ್ನು ನದಿಯಲ್ಲಿ ತೇಲಿ ಬಿಡುವಾಗ ಮನಃಸಾಕ್ಷಿ ಪ್ರಶ್ನಿಸುವುದಿಲ್ಲ. ಉಸಿರಾಡುವ ಎಳೆ ಜೀವವ ಜೀವಂತ ಹುಗಿದು ಮಣ್ಣು ಮುಚ್ಚುವಾಗ ಪಾಪಪ್ರಜ್ಞೆ ಕಾಡುವುದಿಲ್ಲ. ಹನಿ ನೀರೂ ನೀಡದೇ ಹಸಿವಿನಿಂದಲೇ ಸಾಯುವಂತೆ ಮಾಡುವಾಗ ನರಕದ ಭಯ ಇವರನ್ನು ಹೆದರಿಸುವುದಿಲ್ಲ. ಆಗಷ್ಟೇ ಜನಿಸಿದ ಕೂಸಿನ ಬಾಯಿ ತುಂಬಾ ಉಪ್ಪನ್ನೋ ಅಫೀಮನ್ನೋ ಇಲ್ಲಾ ತಂಬಾಕನ್ನೋ ತುಂಬಿ ಉಸಿರುಗಟ್ಟಿಸುವಾಗ ಆ ಉಸಿರಿನ ಸಂಕಟ ಇವರನ್ನು ದಹಿಸುವುದಿಲ್ಲ. ಪೀಲೀ ಕನೇರ್ ಬೀಜವನ್ನು (ಹಳದಿ ಅಥವಾ ದೀಪ ಕಣಗಿಲೆಯ ಬೀಜ) ಹಾಲಿಗೆ ಬೆರೆಸಿ ಅವಳ ಕೊಲ್ಲುವಾಗ ಅಂತಃಕರಣ ಬಾಧಿಸುವುದಿಲ್ಲ. ಹಸಿಯಾದ ದಪ್ಪನೆ ತೌಲಿಯಾ(ಟವೆಲ್)ದಿಂದ ಅವಳ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವಾಗ ಅದು ತಮ್ಮಂತೆಯೇ ಒಂದು ಜೀವ ಎಂದು ನೆನಪಾಗುವುದಿಲ್ಲ.... ಅವಳನ್ನು ಜೀವಂತವಾಗಿ ಮಣ್ಣಿನ ಮಡಿಕೆಯೊಳಗಿಟ್ಟು ಮುಚ್ಚಿ, ಮುಚ್ಚಲ ಅತ್ತಿತ್ತ ಸರಿಯದಂತೆ ನಾದಿದ ಹಿಟ್ಟನ್ನು ಅದರ ಸುತ್ತ ಹಚ್ಚಿ ಮಣ್ಣು ಮಾಡುವಷ್ಟು ಕ್ರೂರಿಗಳಿವರು... 

ಇಷ್ಟಕ್ಕೂ ನಿಲ್ಲುವುದಿಲ್ಲ ಇವರ ಹಾಳು ನಂಬಿಕೆಗಳು, ಆಚರಣೆಗಳು... ಸತ್ತ ಮೇಲೂ ನಮ್ಮನ್ನು ನೆಮ್ಮದಿಯಾಗಿರಲು ಬಿಡರು ಇವರು....

ಹೀಗೆ ಕೊಂದ ಹೆಣ್ಣು ಮಗುವನ್ನು ಊರ ಹೊರಗೆ ಇಡುತ್ತಾರೆ. ಸಿಯಾರ್(ನರಿ) ಬಂದು ಎತ್ತೊಯ್ಯಲೀ ಎಂದು. ಹಾಗೆ ಸಿಯಾರ್ ಆ ಹೆಣವನ್ನು ಹೊತ್ತೊಯ್ದರೆ ಅದು ಗಂಡು ಮಗುವಿನ ಆಗಮನದ ಶುಭ ಸಂಕೇತವಂತೆ.... 

ಕಿಂಚಿತ್ ಕರುಣೆಯಿಲ್ಲದೇ ಸಾಯಿಸಿದ ಮೇಲೆ ಅವಳ ಶವದ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು ಮಣ್ಣು ಮಾಡುವಾಗ ಒಂದಿನಿತೂ ನಾಚಿಕೆ ಇಲ್ಲದೆ,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

ಎಂಬ ದೋಹಾ ಪಠಿಸುತ್ತಾರೆ.

ಇದೆಲ್ಲವನ್ನೂ ಒಂದಿನಿತೂ ವೇದನೆಯಿಲ್ಲದೆ ಅತ್ಯಂತ ಸಂತಸದಿಂದ ಮಾಡುತ್ತಾರೆ ಇವರು. ಹೆಣ್ಣು ಮಗುವನ್ನು ಕೊಂದರೆ ಮುಂದಿನ ಮಗು ಖಂಡಿತಾ ಗಂಡಾಗಿರುತ್ತದೆ ಎಂಬ ಹುಚ್ಚು ನಂಬಿಕೆ ಈ ಮೂರ್ಖ ಜನರದ್ದು. ಒಂದು ವೇಳೆ ಅದೂ ಹೆಣ್ಣಾದರೆ ಅವಳನ್ನೂ ಕೊಂದು ಮತ್ತೆ ಗಂಡು ಮಗು ಜನಿಸುವುದೆಂದು ನಂಬುವುದು.... ಒಟ್ಟಿನಲ್ಲಿ ಇವರ ಆಚಾರ್ ವಿಚಾರ್ ಗಳಿಗೆ ಹರಕೆಯ ಕುರಿಯಾಗುವುದು ಮಾತ್ರ ಹೆಣ್ಣು ಮಗಳು.... 

ಹೆಣ್ಣು ಮಗು ಮನೆಗೆ ಕೆಡುಕನ್ನು ಹೊತ್ತು ತರುತ್ತಾಳಂತೆ. ಮೊದಲನೇ ಹೆಣ್ಣು ಮಗು ದುರಾದೃಷ್ಟ, ಎರಡನೇಯದು ವಿಪತ್ತು, ಮೂರನೆಯದೂ ಹೆಣ್ಣಾದರೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತ ಮಹಾದುರಂತವೇ ಸರಿ......

ಅದೆಷ್ಟು ಮುದ್ದಾಗಿ, ನಿಶ್ಚಿಂತೆಯಿಂದ ನಗುತ್ತಿರುವೆ ಲಾಲಿ ನೀನು...... ಇವತ್ತು ರಾತ್ರಿ ನಿನಗಾಗಿ ಕಾದಿರುವ ಮರಣದ ಪರಿಯ ಅರಿವಿದೆಯೇನು ನಿನಗೆ....? ಪಾಪ ನಿನಗೆಲ್ಲಿಂದ ತಿಳಿಯಬೇಕು? ಇವತ್ತು ರಾತ್ರಿ ಚಳಿ ಬಿದ್ದ ಕೂಡಲೆ ಯಾವುದೇ ಹೊದಿಕೆ ಇಲ್ಲದೇ ನಿನ್ನನ್ನು ಮನೆಯ ಹಿಂದಿನ ಆಂಗನ್(ಅಂಗಳ)ನಲ್ಲಿ ಹಾಕುತ್ತಾರೆ..... ಈ ಶಿಶಿರದ ಚಳಿಯನ್ನು ನಮಗೇ ತಡೆಯಲಾಗದು. ಇನ್ನು ನೀನು ತಡೆಯಬಲ್ಲೆಯಾ? ರಾತ್ರಿ ಬೆಳಗಿನವರೆಗೆ ಆ ಕೊರೆವ ಚಳಿಯಲ್ಲಿ ಅತ್ತೂ ಕರೆದು ಚಳಿ ಸಹಿಸಲಾಗದೇ ನರಳಿ ನಿನ್ನ ಒಂದು ದಿನದ ಬದುಕು ಸಮಾಪ್ತಿಯಾಗುತ್ತದೆ. ಈಗ ಹೀಗೆ ಕೈಕಾಲಾಡಿಸಿ ನಗುತ್ತಿರುವ ನೀನು ನಾಳೆ ಬೆಳಗಿನ ಜಾವಕ್ಕೆ ನಿರ್ಜೀವ ಕೊರಡಾಗಿರುತ್ತೀಯಾ ಮಗಳೇ..... ಯಾಕೆ ಹುಟ್ಟಿದೆ ಹೆಣ್ಣಾಗಿ.....?

ನಾನು ಎಂದಿಗೂ ಭಗವಂತನನ್ನು ಬೇಡುವುದು ಒಂದೇ....

'ಹೇ ಭಗವಾನ್..... ಅಗಲೇ ಜನಮ್ ಮೋಹೇ ಪೈದಾ ನ ಕಿಜೋ.....' ಎಂದು. ಈ ಜನ್ಮದಲ್ಲಿ ಕಂಡದ್ದೇ ಸಾವಿರ ಜನ್ಮಗಳಿಗೆ ಸಾಕಾಗಿದೆ. ಹೆಣ್ಣಾಗಿ ಹುಟ್ಟಲೇ ಬಾರದು ಲಾಲೀ.... ಹುಟ್ಟಿದರೂ ಬದುಕಿ ಉಳಿಯಬಾರದು.....

ಬದುಕಿ ಉಳಿದರೆ ಏನೆಲ್ಲಾ ಅನುಭವಿಸಬೇಕು ನಿನಗೆ ತಿಳಿದಿದೆಯೇನು.....?

ನನ್ನಪ್ಪ ದಲ್ಲಾಳಿಯೋರ್ವನಿಗೆ ನನ್ನ ಮಾರಿದ. ಆ ದಲ್ಲಾಳಿಯಿಂದ ನಿನ್ನ ಚಾಚೂವಿಗೆ ಬಿಕರಿಯಾದೆ ನಾನು... ನನ್ನ ಓರಗೆಯ ಕೆಲ ಹೆಣ್ಣುಗಳು ವೇಶ್ಯಾಗಾರಕ್ಕೆ ಮಾರಲ್ಪಟ್ಟಿದ್ದಾರೆ. ಅಂತಹ ಬದುಕು ನನ್ನದಾಗಲಿಲ್ಲ ಎಂಬುದಷ್ಟೇ ನನ್ನ ಅದೃಷ್ಟ. ಹಲವರಿಗೆ ಸೆರಗು ಹಾಸುವ ಬದಲು ಒಬ್ಬನಿಗೇ ನನ್ನನ್ನು ಒಡ್ಡಿಕೊಂಡಿರುವೆನಷ್ಟೇ.... ಅದರ ಹೊರತು ಈ ಎರಡರ ನಡುವೆ ಅಂತಹ ವ್ಯತ್ಯಾಸವೇನೂ ಕಾಣದು. ಇಲ್ಲಿಯವರೆಗಿನ ನನ್ನ ಬದುಕಿನಲ್ಲಿ ಪ್ರದೇಶ ಹಾಗೂ ವ್ಯಕ್ತಿಗಳ ಚಹರೆಯ ಹೊರತು ಬೇರೇನೂ ಬದಲಾವಣೆಗಳಿಲ್ಲ ಮಗಳೇ.... 

ಅಪ್ಪನ ಹಂಗಿನ ಮಾಯ್ಕಾದಲ್ಲಿದ್ದಾಗಲೂ, ತಲೆಹಿಡುಕ ದಲ್ಲಾಳಿಯ  'ಹೆಣ್ಣು ಮಾರಾಟದ ಅಂಗಡಿ' ಯ ಪ್ರದರ್ಶನದ ಗೊಂಬೆಯಾಗಿದ್ದಾಗಲೂ, ಈಗ ನಿನ್ನ ಚಾಚೂವಿನ ಕೈಗೊಂಬೆಯಾಗಿರುವಾಗಲೂ ನಾನು ಪಂಜರದ ಪಕ್ಷಿಯೇ........ 

ಎಂದಿಗೂ ಹಾರದ ಪಂಜರದ ಪಕ್ಷಿಗಳು ನಾವು. ಈ ಪಂಜರದಿಂದ ಹೊರಬಂದು ಹಾರುವ ಆಸೆ ನಮಗಿದ್ದರೂ ಅದನ್ನು ಒಪ್ಪಿಕೊಂಡು, ಗೌರವಿಸುವ ವಿಶಾಲ ಮನಸ್ಥಿತಿ ಈ ಜನರಿಗಿಲ್ಲ. ಹೆದರಿಸಿ, ಬೆದರಿಸಿ ಸೊಲ್ಲೆತ್ತದಂತೆ ದಮನಿಸಿ ಪಂಜರದಲ್ಲೇ ಇರಿಸಲು ನೋಡುತ್ತಾರೆ. ಒಂದು ವೇಳೆ ಅದೆಲ್ಲಾ ಮಿತಿಗಳನ್ನೂ ಮೀರಿ ಹಾರಲು ಪ್ರಯತ್ನಿಸಿದರೆ ನಮ್ಮ ರೆಕ್ಕೆಗಳನ್ನೇ ಕತ್ತರಿಸಿಬಿಡುತ್ತಾರೆ ಈ ಕಟುಕರು.....

ಇಂತಹ ಜನರ ಮಧ್ಯೆ ನೀನು ಸಾಯದೇ ಬದುಕು ಎಂದು ಹಾರೈಸಲೇ....? ಹಾಗೊಂದು ವೇಳೆ ಬದುಕಿದರೆ ನೀ ನೋಡಬೇಕಾದ ನರಕ, ಹೆಣ್ಣಾಗಿ ಹುಟ್ಟಿದ್ದಕ್ಕೆ ಅನುಭವಿಸಬೇಕಾದ ವೇದನೆ ಏನೆಂಬುದನ್ನು ನನಗಿಂತ ಚೆನ್ನಾಗಿ ಬಲ್ಲವರ್ಯಾರು? ನೀನು ಈ ರಾತ್ರಿ ಯಮ ಯಾತನೆ ಪಟ್ಟು ಕೊರೆವ ಚಳಿಯಲ್ಲಿ ನರಳಿ ಸತ್ತು ನಿನ್ನ ಮಾಯಿಯ ಮಡಿಲು ಸೇರಿಬಿಡು ಎಂದು ಹಾರೈಸಲು ಒಡಲ ಸಂಕಟ ಒಪ್ಪದು..... ಆದರೆ ನೀನು ಬದುಕಿ ಉಳಿದರೆ ನಿನ್ನ ಮಾಯಿ, ಚಾಚಿಯರಂತೆ ಪಂಜರದ ಪಕ್ಷಿಯಾಗಿ ಪ್ರತೀ ಕ್ಷಣ ನರಕ ಅನುಭವಿಸಬೇಕು... ಯಾವ ಕ್ಷಣದಲ್ಲಿ ಎಂತಹ ಆಪತ್ತು ಹೊಂಚು ಹಾಕಿ ಕುಳಿತಿದೆಯೋ ಎಂಬ ಭಯದಲ್ಲೇ ಬದುಕಬೇಕು.... ಅದಕ್ಕಿಂತ ಈ ರಾತ್ರಿ ನರಳಿ ಸಾಯುವುದೇ ಸುಖ ಮಗಳೇ........" 

ಕೈಸಾ ನಸೀಬಾ ಜಗ್ ಮೆ ಹರ್ ಬಿಟಿಯಾ ಪಾಯೇ......

ಅಪನಾ ಜಿನ್ಹೆ ಸಮ್ಜತ್ ಹೆ ಬನೇ ವೂ ಪರಾಯೇ......

ಬಾಬುಲ್ ಕಾ ಅಂಗನಾ ಚೂಟಾಯ್ ಮಯ್ಯಾ ಕಾ ಅಚರಾ.....

ಭೋಲಿ ಚಿರೈಯಾ ಪಾವೇ ಬಸ್ ಇಕ್ ಪಿಂಜರಾ....

ಫಿರ್ ಭಿ ಎ ಸಬ್ ಸಮಜಾವೇ ತಡಪಾ ನಾ ಕಿಜೋ.....

ಜೋ ಅಬ್ ಕಿಯೇ ಹೋ ಧಾತಾ ಐಸಾ ನಾ ಕಿಜೋ.....

ಅಗಲೇ ಜನಮ್ ಮೋಹೇ ಬಿಟಿಯಾ ನ ಕಿಜೋ.....

ಚಾಚಿಯ ಮನದ ಭಾವನೆಗಳ ಅಣೆಕಟ್ಟು ಒಡೆದು ಹಿಡಿದಿಟ್ಟಿದ್ದ ಗತದ ವೇದನೆಗಳೆಲ್ಲಾ ಪ್ರವಾಹೋಪಾದಿಯಲ್ಲಿ ಹರಿದಿತ್ತು. ಅವಳೆಲ್ಲಾ ಮಾತುಗಳಿಗೂ ನನ್ನ ನಿಷ್ಕಲ್ಮಶ ನಗುವೊಂದೇ ಉತ್ತರವಾಗಿತ್ತು....... ಅವಳು ಪದೇ ಪದೇ ನನ್ನ ಮೈದಡವಿ, ತಲೆ ಸವರಿ ಎದೆಗೊತ್ತಿಕೊಂಡು ಹನಿಗಣ್ಣಾಗುತ್ತಿದ್ದಳು. 'ಇಂದು ರಾತ್ರಿಯೇ ಸತ್ತು ನಿನ್ನಮ್ಮನ ಸೇರಿಕೋ ಮಗಳೇ.... ಬದುಕಿ ಈ ಪಂಜರದಲ್ಲಿ ನನ್ನಂತೆ ಬಂಧಿಯಾಗುವ ನರಕ ನಿನಗೆ ಬೇಡ' ಎಂದು ಹರಸುತ್ತಿದ್ದಳು.....

ಆದರೆ.......

ಆ ಕ್ಷಣಕ್ಕೆ ಚಾಚಿಯನ್ನೂ ಸೇರಿ ಮನೆಯ ಯಾವ ಸದಸ್ಯನಿಗೂ ತಿಳಿಯದ ವಿಚಾರವೆಂದರೆ.....

ಅಷ್ಟು ಸುಲಭದ ಸಾವನ್ನು ವಿಧಾತ ನನ್ನ ಹಣೆಯಲ್ಲಿ ಬರೆದಿರಲಿಲ್ಲ...... 

ನಾನು ಎದುರಿಸಬೇಕಾದ ಪರೀಕ್ಷೆಗಳು ಬಹಳವಿತ್ತು....... ಆ ಪರೀಕ್ಷೆಗಳನ್ನು ಎದುರಿಸಿ ಬಡಿದಾಡಲು ನಾನು ಬದುಕುಳಿಯಲಿದ್ದೆ......

ಆ ರಾತ್ರಿಗೆ ನಿಗದಿಯಾಗಿದ್ದ ನನ್ನ ಹನನದ ಮುಹೂರ್ತ ಶಾಶ್ವತವಾಗಿ ರದ್ದಾಗಲಿತ್ತು.......!!! 

ಹಾಗೂ ಆ ರದ್ದತಿಗೆ ಬಾಪೂವಿನ ನಯೀ ಲುಗಾಯೀ, ನನ್ನ ಸೌತೇಲಿ ಮಾಯಿ ಕಾರಣಕರ್ತೆಯಾಗಲಿದ್ದಳು......!!!!!

ಸಶೇಷ

ಟಿಪ್ಪಣಿಗಳು:

ದೇಶದ ಎಲ್ಲೆಡೆ ಹೆಣ್ಣು ಶಿಶುವನ್ನು ಹತ್ಯೆಗೈಯಲು ಹಲವು ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಮಣ್ಣು ಮಾಡುವ ವಿಧಾನದಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಹತ್ಯೆಗೆ ಬಳಸುತ್ತಿದ್ದ ವಿಧಾನಗಳು ಸಾಮಾನ್ಯವಾಗಿ ಒಂದೇ ತೆರನಾದವು.

* ಹಳದಿ ಕಣಗಿಲೆ/ದೀಪ ಕಣಗಿಲೆ(Yellow oleander shrub) ಯ ಬೀಜದ ಪುಡಿಯನ್ನು ಹಾಲಿಗೆ ಬೆರೆಸಿ ಕುಡಿಸುವುದು.

* ಎಕ್ಕದ ಗಿಡ(calotropis) ದ ಹಾಲನ್ನು ಕುಡಿಸುವುದು.

* ಭತ್ತದ ಕೆಲವು ಕಾಳುಗಳನ್ನು ಬಿಸಿ ನೀರು ಅಥವಾ ಹಾಲಿನೊಂದಿಗೆ ಕೊಡುವುದು.

* ತಂಬಾಕಿನ ಪುಡಿಯನ್ನು ತಿನ್ನಿಸುವುದು.

* ಕ್ರಿಮಿನಾಶಕಗಳನ್ನು ಕುಡಿಸುವುದು.

* ಬಾಯಿ,ಮೂಗು ಮುಚ್ಚಿ ಉಸಿರುಟ್ಟಿಸುವುದು.

* ಒದ್ದೆ ಮಾಡಿದ ದಪ್ಪ ಟವೆಲ್ಲಿನಿಂದ ಮುಖವನ್ನು ಮುಚ್ಚಿ ಉಸಿರುಗಟ್ಟಿಸುವುದು.

* ಚಳಿಗಾಲದಲ್ಲಿ ಯಾವುದೇ ಹೊದಿಕೆಯಿಲ್ಲದೆ ಮಗುವನ್ನು ಅಂಗಳದಲ್ಲಿ ಮಲಗಿಸುವುದು..... ಇತ್ಯಾದಿ ವಿಧಾನಗಳನ್ನು ಅನುಸರಿಸುತ್ತಿದ್ದರು.

ಹೆಣ್ಣು ಶಿಶು ಹುಟ್ಟಿದೊಡನೆ ಮಡಿಕೆಯೊಳಗೆ ಹಾಕಿ ಮುಚ್ಚಿ, ತೆರೆಯಲು ಸಾಧ್ಯವಾಗದಂತೆ ಗೋಧಿ ಹಿಟ್ಟಿನ ಕಣಕ(ಮಿಶ್ರಣ) ವನ್ನು  ಸುತ್ತ ಹಚ್ಚಿ, ಮುಚ್ಚಲ ತೆರೆಯಲು ಸಾಧ್ಯವಾಗದಂತೆ ಸೀಲ್ ಮಾಡಿ, ಜೀವಂತ ಸಮಾಧಿ ಮಾಡುವ ಸಂಪ್ರದಾಯ ಗುಜರಾತ್ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು.

ಪಂಜಾಬಿನ ಬೇಡಿ ಕತ್ರೀಸ್ ರಜಪೂತ ಪಂಗಡದಲ್ಲಿ ಹೆಣ್ಣು ಶಿಶು ಹತ್ಯೆ ಅತೀ ಹೆಚ್ಚು. ಹಾಗಾಗಿ ಈ ಪಂಗಡಕ್ಕೆ 'ಕುಡೀ ಮಾರ್' ಪಂಗಡ (killer of daughters) ಎಂಬ ವಿಶೇಷಣವೇ ಅಂಟಿಕೊಂಡಿದೆ. 

ಇವರು ಶಿಶುವನ್ನು ಹತ್ಯೆಗೈದ ನಂತರ ಅದರ ತುಟಿಗಳ ನಡುವೆ ಚೂರು ಬೆಲ್ಲವಿರಿಸಿ, ಕೈಯಲ್ಲಿ ಹತ್ತಿಯ ಉಂಡೆಯನ್ನು ಇಟ್ಟು,

'ಗೂರ್ ಖಾಯೆ, ಪೂನೀ ಕುತ್ತೆಯಾ

ಆಪ್ ನ ಆಯೇ, ಭಾಯ್ ಆನ್ ಗುತ್ತೆಯಾ '

(ನಿನ್ನ ಪಾಲಿನ ಬೆಲ್ಲವನ್ನು ತಿಂದು, ಹತ್ತಿಯನ್ನು ಹೊಸೆಯುತ್ತಿರು...

ನೀನು ವಾಪಾಸಾಗಬೇಡ, ನಿನ್ನ ಬದಲಾಗಿ ತಮ್ಮನನ್ನು/ಗಂಡು ಮಗುವನ್ನು ಕಳಿಸು) 

ಎಂಬ ದೋಹಾವನ್ನು ಪಠಿಸುತ್ತಾ ಶವವನ್ನು ಮಣ್ಣು ಮಾಡುವ ಸಂಪ್ರದಾಯ ಈ ಪಂಗಡದಲ್ಲಿದೆ.

ಮಾಹಿತಿ ಕೃಪೆ: ಅಂತರ್ಜಾಲ

ಧನ್ಯವಾದಗಳು......

1 ಕಾಮೆಂಟ್‌:

  1. ಹೆಣ್ಣು ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಂದರು ಇವರರು ನರಕಕ್ಕೆ ಹೋಗುವುದಿಲ್ಲ ಯಾಕೆಂದರೆ ಒಬ್ಬ ಗಂಡು ಮಗ ಇವರ ಚಿತೆಗೆ ಕೊಳ್ಳಿ ಇಟ್ಟು ಸ್ವರ್ಗಕ್ಕೆ ಕಳುಹಿಸುವನು. ಏನು ವಿಪರ್ಯಾಸ.

    ಪ್ರತ್ಯುತ್ತರಅಳಿಸಿ