ಭಾನುವಾರ, ಸೆಪ್ಟೆಂಬರ್ 13, 2020

ಅಗ್ನಿ ತರಂಗಿಣಿ 8

ದಂ ಮಾರೋ ದಂ.... ನಶೇ ಮೆ ತೂ ಹೋಜಾ ಗುಮ್......

'ನಶೆ.........!!

ಮೈ ಮೇಲೆ ಪ್ರಜ್ಞೆಯಿಲ್ಲದೇ ತಮ್ಮ ಅಸ್ತಿತ್ವವನ್ನೇ ಮರೆತು ಆಗಸದಲ್ಲೇ ತೇಲಾಡುತ್ತಾ ಸ್ವಪ್ನಲೋಕದಲ್ಲಿ ವಿಹಾರ ನಡೆಸುತ್ತಿದ್ದರೆ....... ಓಹ್...... ಅದೆಂಥಾ ಮಧುರಾನುಭೂತಿ.....

ಈ ಲೋಕದ ರೀತಿ ನೀತಿಗಳ ಹಂಗಿಲ್ಲದ, ಕಷ್ಟ ಕಾರ್ಪಣ್ಯಗಳ ಗುಂಗಿಲ್ಲದ, ನೋವಿನ ಸುಳಿವಿಲ್ಲದ ಆ ನಶೆಯ ಲೋಕ......

ಆಹ್......

ಮೈ ಮನವೆಲ್ಲಾ ಹತ್ತಿಯಷ್ಟೇ ಹಗುರ..... ಗಾಳಿಯಲ್ಲಿ ತೇಲುವಷ್ಟು ಹಗುರ......

ಈ ಬದುಕಿನಲ್ಲಿರುವುದಾದರೂ ಏನು? ಬರೀ ಕಷ್ಟಗಳ ಸರಮಾಲೆ‌...... ಆ ಕಷ್ಟಗಳ ಸರಮಾಲೆಯ ನಡುವಲ್ಲೆಲ್ಲೋ ಇರುವ ಕ್ಷಣಗಳ ಸಂತಸ. ಜೀವನ ಪರ್ಯಂತ ಶ್ರಮ ಹಾಕಿ, ಬೆವರು ಹರಿಸಿ, ಜೀವ ತೇಯ್ದು ದುಡಿಯುತ್ತಲೇ ಇದ್ದರೆ ಸಂತಸ ಪಡುವುದು ಯಾವಾಗ? ಇರುವುದೊಂದೇ ಮೂರು ದಿನದ ಬದುಕು. ಅದನ್ನು ಯಾವುದೇ ಕಷ್ಟಗಳ ಗೋಜಿಲ್ಲದೆ, ಬಿಂದಾಸ್ ಆಗಿ ನಶೆಯಲ್ಲಿ ಜೀವಿಸಿಬಿಡಬೇಕು...... '

ಇಂತಹ ವಿಚಿತ್ರ, ವಿಶಿಷ್ಟ ವಿಚಾರಧಾರೆಗಳ ಹಿಪ್ಪಿ ಕಲ್ಚರ್ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟವದು. ಚಿತ್ರವಿಚಿತ್ರ ವೇಷಭೂಷಣಗಳು, ಕೇಶ ವಿನ್ಯಾಸಗಳೊಂದಿಗೆ ಒಂದು ಕೈಯಲ್ಲಿ ಚುಟ್ಟಾ(ಸುಟ್ಟಾ) ಹಿಡಿದು ಸೇದುತ್ತಾ ನಶೆಯ ಲೋಕದಲ್ಲಿ ತೇಲುವ ಒಂದು ವರ್ಗವೇ ಸೃಷ್ಟಿಯಾಗಿತ್ತು. 

दुनिया ने हमको दिया क्या

दुनिया से हमने लिया क्या

हम सब की परवाह करें क्यूँ

सबने हमारा किया क्या

दम मारो दम.....

मिट जाए ग़म......

बोलो सुबह शाम.....

हरे कृष्णा हरे राम...

ಅನ್ನುವುದೇ ಇವರ ಪಾಲಿನ ಧ್ಯೇಯ ಗೀತೆ...... 

ಇಂತಹ ಹಿಪ್ಪಿ ಸಂಸ್ಕೃತಿಯಿಂದ ಪ್ರೇರೇಪಿತರಾಗಿ ನಶೆಯ ಖಯಾಲಿಯನ್ನು ಮೊದಲು ಹಿಡಿಸಿಕೊಂಡಿದ್ದು ಯುವ ವರ್ಗ. 

ಬಾಲ್ಯದ ಸರಹದ್ದನ್ನು ದಾಟಿ ಹರೆಯದ ಸೀಮೆಗೆ ಪ್ರವೇಶಿಸುವ ಕಾಲವಿದೆಯಲ್ಲಾ....... ಅದು ಮನದೊಳಗೆ ಸೃಷ್ಟಿಸುವ ತವಕ ತಲ್ಲಣಗಳು ಅಪಾರ. ಕೆಲವು ತಲ್ಲಣಗಳು ಹಿತವಾದ ಅಲೆಯ ತರಂಗಗಳಂತಾದರೆ ಇನ್ನು ಕೆಲವು ಉನ್ಮಾದವೇ ತುಂಬಿ ಭೋರ್ಗರೆವ ತೂಫಾನು ಸುಳಿಗಳು. ಒಂದು ಸಕಾರಾತ್ಮಕ ಚಿಂತನೆಗಳಿಗೆ ಆದ್ಯತೆ ನೀಡಿ ದಾರಿ ತೋರಿದರೆ ಇನ್ನೊಂದು ನಕಾರಾತ್ಮಕ ಯೋಚನೆಗಳಿಗೆ ಇಂಬುಕೊಟ್ಟು ಬದುಕಿನ ದಿಕ್ಕು ತಪ್ಪಿಸುತ್ತದೆ. ಸಕಾರಾತ್ಮಕತೆಯ ಹಾದಿಯ ಪಯಣ ಕಲ್ಲುಮುಳ್ಳುಗಳಿಂದ ಕೂಡಿದ ಕಷ್ಟದ ಯಾನ. ನ್ಯಾಯವಾದ ಪರಿಶ್ರಮವನ್ನು ಬೇಡುವ ಈ ಪಥದಲ್ಲಿ ಅಡ್ಡಹಾದಿಗಳಿಲ್ಲ. ಸುಲಭದಲ್ಲಿ ಗುರಿ ತಲುಪಲು ಸಾಧ್ಯವಿಲ್ಲ, ಹಂತ ಹಂತವಾಗಿ ಗುರಿಯೆಡೆಗೆ ಪಯಣಿಸಬೇಕು. ಅದೇ ನೇತ್ಯಾತ್ಮಕ ಪಥದಲ್ಲಿ ಗುರಿ ತಲುಪಲು ಅನ್ಯಾಯ ಅಕ್ರಮದ ಅಡ್ಡ ಹಾದಿಗಳು ಹಲವು. ಬಹು ವೇಗದಲ್ಲಿ ಗಮ್ಯವನ್ನು ತಲುಪಲೂಬಹುದು. ಹಾಗಾಗಿ ಈ ಹಾದಿ ಜನರಿಗೆ ಆಕರ್ಷಕವೆನಿಸಿಬಿಡುತ್ತದೆ. 

ಈಗ ನನ್ನ ವಿಚಾರವನ್ನೇ ತೆಗೆದುಕೊಳ್ಳಿ. ನಾನೂ ಬಿರ್ಜೂ ಚಾಚಾನಂತೆ ಸರಿತಪ್ಪುಗಳನ್ನು ವಿಶ್ಲೇಷಿಸಬಹುದಿತ್ತು. ಅಶ್ರಫಿಯಂತೆ ಕಷ್ಟವೋ ಸುಖವೋ ಮೈ ಬಗ್ಗಿಸಿ ದುಡಿಯಬಹುದಿತ್ತು. ರಾಕಾನ ಡೀಲ್ ನಿರಾಕರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಕಾರಣವೇನು......? ರಾಕಾನ ಸಾಮ್ರಾಜ್ಯದ ಒಳಗುಟ್ಟನ್ನು ಅರಿಯುವುದಷ್ಟೇ ನನ್ನ ಉದ್ದೇಶವೇ? ಇಲ್ಲಾ ಸುಲಭವೆನಿಸುವ ವಾಮಮಾರ್ಗದಲ್ಲಿ ಹಣ, ಪ್ರತಿಷ್ಠೆಗಳನ್ನು ಗಳಿಸಿಕೊಳ್ಳುವ ಆಸೆಗೆ ಬಿದ್ದಿದ್ದೆನಾ ನಾನು?? ಈ ಪ್ರಶ್ನೆಯನ್ನು ಬಾರಿ ಬಾರಿ ಕೇಳುತ್ತಾ ನನ್ನ ಅಂತರಾತ್ಮ ನನ್ನೊಂದಿಗೆ ಕದನಕಿಳಿಯುತ್ತಿತ್ತು. ಅಂತಹ ಸಂದರ್ಭದಲ್ಲೆಲ್ಲಾ ನನ್ನ ಮಹಾತ್ವಾಕಾಂಕ್ಷೆಯನ್ನು ಮುಂದಿಟ್ಟು ಅಂತರಾತ್ಮವನ್ನು ದಮನಿಸಿಬಿಡುತ್ತಿದ್ದೆ...... ಆಗೆಲ್ಲಾ ನಾನು ಮಾಡುತ್ತಿರುವುದು ತಪ್ಪು ಎಂದು ನನಗನಿಸುತ್ತಲೇ ಇರಲಿಲ್ಲ. ರಾಕಾನಂತಹ ದುರುಳನ ವ್ಯವಹಾರಗಳ ಬಗ್ಗೆ ತಿಳಿಯಲು ಅವನೊಂದಿಗೆ ಕೈ ಜೋಡಿಸಿದರೆ ತಪ್ಪಿಲ್ಲ ಎಂದು ಬಲವಾಗಿ ನಂಬಿದ್ದೆ ನಾನು. ಸರಿ ತಪ್ಪು, ನ್ಯಾಯ ಅನ್ಯಾಯಗಳ ಪ್ರಶ್ನೆ ಆಗ ನನ್ನನ್ನೆಂದೂ ಕಾಡಲಿಲ್ಲ.

ಏಕೆಂದರೆ ಈ ಸರಿ ಹಾಗೂ ತಪ್ಪುಗಳ ಹಾದಿಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಿ ಆಯ್ದುಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಾವು ಯಾವ ಹಾದಿಯನ್ನು ಆಯ್ದುಕೊಳ್ಳುತ್ತೇವೆಯೋ ಆ ಹಾದಿಯನ್ನು ಸಮರ್ಥಿಸಿಕೊಳ್ಳಲು ಕಾರಣಗಳನ್ನೂ ನಾವೇ ಸೃಷ್ಟಿಸಿಕೊಂಡು ಬಿಡುತ್ತೇವೆ. ಅನ್ಯಾಯ ಅಕ್ರಮದ ಮಾರ್ಗವಾದರೂ ಸರಿಯೇ, ಬುದ್ಧಿ ಅದನ್ನು ಸಮರ್ಥಿಸಲು ಸೂಕ್ತ ಕಾರಣಗಳನ್ನು ನೀಡಿಬಿಡುತ್ತದೆ. ನನ್ನ ವಿಚಾರದಲ್ಲೂ ಅಷ್ಟೇ. 'ನಿನಗೆ ಭಿಕ್ಷುಕನ ಪಟ್ಟ ನೀಡಿ ಅವಮಾನಿಸಿದ ಈ ಸಮಾಜದ ಬಗ್ಗೆ ನೀನೇಕೆ ಯೋಚಿಸುವೆ? ನಿನ್ನ ನೋವು, ಕಷ್ಟಗಳಿಗೆ ಅವರೇನಾದರೂ ಸ್ಪಂದಿಸಿದರೇ? ಇಲ್ಲವಲ್ಲ.... ನೀನು ರಾಕಾನೊಟ್ಟಿಗೆ ಕೈ ಜೋಡಿಸಲೂ ಈ ಸಮಾಜವೇ ಕಾರಣ. ಸಮಾಜ ನಿನ್ನನ್ನು ಗೌರವಿಸಿ ಪೊರೆದಿದ್ದರೆ ನೀನು ಹೀಗಾಗುತ್ತಿರಲಿಲ್ಲ. ಹಾಗಾಗಿ ನೀನು ಮಾಡುತ್ತಿರುವುದೇ ಸರಿ' ಎಂದು ನನ್ನ ವರ್ತನೆಗಳನ್ನು ಬುದ್ಧಿ ಸಮರ್ಥಿಸಿಕೊಂಡುಬಿಟ್ಟಿತು. ನನಗೆ ನನ್ನ ಕೆಲಸಗಳು ತಪ್ಪು ಎನಿಸಲೇ ಇಲ್ಲ.....

ಬಹುಶಃ ಹಾಗೆಯೇ ಈ ಯುವ ಜನಾಂಗದ ಮನಸ್ಥಿತಿಯೇನೋ...... 

ಹರೆಯದ ಬಿಸುಪಿನ ತಾರುಣ್ಯದ ಉನ್ಮಾದತೆ ಬಯಸುವುದು ಬಣ್ಣಗಳಿಂದ ತುಂಬಿದ ವೇಗದ ಬದುಕನ್ನು. ಎಲ್ಲವೂ ಸುಲಭ, ಸರಳವಾಗಿ ಸಿಗಬೇಕೆಂದು ಮನಸ್ಸು ಬಯಸುವ ಕಾಲಘಟ್ಟವಿದು. ಈ ಹಂತದಲ್ಲಿ ಕಷ್ಟಗಳ ಹಂಗಿಲ್ಲದ, ವೈಭೋಗದ ವಿಲಾಸಿ ಜೀವನ ಆಕರ್ಷಕವೆನಿಸುತ್ತದೆ. ಜವಾಬ್ದಾರಿಗಳೇ ತುಂಬಿರುವ ಕಟ್ಟುನಿಟ್ಟಿನ ಜೀವನಕ್ಕಿಂತ ಬೇಜವಾಬ್ದಾರಿಯುತ ಮೋಜು ಮಸ್ತಿಯೇ ಪ್ರಧಾನವಾದ ಹಿಪ್ಪಿ ಜೀವನಶೈಲಿ ಯುವ ಜನಾಂಗವನ್ನು ಬಹಳ ಬೇಗ ಆಕರ್ಷಿಸಿಬಿಟ್ಟಿತ್ತು. 

ಎಷ್ಟೆಂದರೂ ಬದುಕಿನ ಕಷ್ಟಗಳನ್ನು ಎದುರಿಸಿ ನಿಲ್ಲುವುದಕ್ಕಿಂತ ಕಷ್ಟಗಳಿಂದ ಪಲಾಯನ ಮಾಡುವುದೇ ಸುಲಭದ ಆಯ್ಕೆಯಲ್ಲವೇ? ಆ ಪಲಾಯನಕ್ಕೆ ಇವರು ಆಯ್ದುಕೊಂಡ ಹಾದಿಯೇ ನಶೆ........

ಯುವವರ್ಗದಿಂದ ಆರಂಭವಾದ ನಶೆಯ ನಿಶೆ ನೋಡು ನೋಡುತ್ತಲೇ ಸಮೂಹ ಸನ್ನಿಯಂತೆ ಅಬಾಲವೃದ್ಧರಾದಿಯಾಗಿ ಸಕಲರನ್ನೂ ಆದತ್(ಅಭ್ಯಾಸ)ನಂತೆ ಆವರಿಸಿಕೊಂಡಿತ್ತು ಈ ಲತ್ತ್(ಚಟ)......

ಅದಾಗೇ ಆವರಿಸಿಕೊಂಡಿತು ಎನ್ನುವುದಕ್ಕಿಂತ ವ್ಯವಸ್ಥಿತಾಗಿ ಆವರಿಸಿಕೊಳ್ಳುವಂತೆ ಮಾಡಲಾಗುತ್ತದೆ ಎನ್ನುವುದೇ ಸೂಕ್ತ.....

ಹಾಗೆ ನಶೆಯ ಅಲೆಯಲ್ಲಿ ಜನರನ್ನು ತೇಲಿಸಿ ಹಣದ ಹೊಳೆಯಲ್ಲಿ ಮೀಯುತ್ತಿರುವವನು ರಾಕಾ.........!

ಹೌದು.....

ಜನರನ್ನು ಭಿಕ್ಷಾಟನೆಗೆ ತಳ್ಳುವ ಮೂಲಕ ಸಂಪಾದಿಸುತ್ತಿರುವ ಹಣ ರಾಕಾನಿಗೆ ಪಾದದ ಧೂಳಿನಂತೆ ಅಷ್ಟೇ. ಅವನ ಹಣ, ಅಧಿಕಾರದ ನಿಜವಾದ ಮೂಲ ಅವನು ನಡೆಸುವ ಮೂರು ಕಾನೂನುಬಾಹಿರ ದಂಧೆಗಳಲ್ಲಿತ್ತು. ಅದರಲ್ಲಿ ಒಂದು ಈ ಮಾದಕ ವಸ್ತುಗಳ ನಶೆಯ ಜಾಲ. ಮೊದಲಿಗೆ ನಾನು ರಾಕಾನನ್ನು ಸಣ್ಣ ಮಟ್ಟದಲ್ಲಿ ಮಾದಕದ್ರವ್ಯಗಳನ್ನು ಮಾರುವ ಡ್ರಗ್ ಪೆಡ್ಲರ್ ಎಂದುಕೊಂಡಿದ್ದೆ. ಆದರೆ ಆಳಕ್ಕಿಳಿದಷ್ಟೂ ಗೋಚರವಾದ ಸತ್ಯಗಳು ನನ್ನನ್ನು ಸ್ತಂಭೀಭೂತನನ್ನಾಗಿಸಿತ್ತು......

ರಾಕಾ ಕೇವಲ ಡ್ರಗ್ ಪೆಡ್ಲರ್ ಆಗಿರಲಿಲ್ಲ. ಅವನು ಡೆಮೋನ್ ನ ಮೋನ್ಸ್ಟರ್ ವೆಬ್ ನಲ್ಲಿ ಫಾಲ್ಕನ್(falcon) ಆಗಿದ್ದ......!!!! 

ಡೆಮೋನ್........!!

ಡ್ರಗ್ ಮಾಫಿಯಾದ ಅನಭಿಷಿಕ್ತ ದೊರೆಗಳಲ್ಲೊಬ್ಬ..... ಗೋಲ್ಡನ್ ಕ್ರೆಸೆಂಟ್ ನ ಅತ್ಯಂತ ಪ್ರಭಾವೀ ಡ್ರಗ್ ಲಾರ್ಡ್.....!! 

ಗೋಲ್ಡನ್ ಕ್ರೆಸೆಂಟ್(Golden Crescent) ಹಾಗೂ ಗೋಲ್ಡನ್ ಟ್ರಯಾಂಗಲ್(Golden Triangle)......... ಡ್ರಗ್ ಮಾಫಿಯಾದ ಸ್ವರ್ಗಗಳು.....!! ಪ್ರಪಂಚದ  ಮಾದಕದ್ರವ್ಯಗಳ ಮಾರುಕಟ್ಟೆ ಇರುವುದೇ ಈ ಎರಡು ಮಾಫಿಯಾಗಳ ಕಬಂಧ ಹಿಡಿತದಲ್ಲಿ. ಇವುಗಳಲ್ಲಿ ಗೋಲ್ಡನ್ ಟ್ರಯಾಂಗಲ್ ತೀರಾ ಇತ್ತೀಚೆಗೆ ಅಂದರೆ 1980ರ ನಂತರದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವುದು. ಆದರೆ ಗೋಲ್ಡನ್ ಕ್ರೆಸೆಂಟ್ ಹಾಗಲ್ಲ. ಅದು 1950ರ ಸಮಯದಿಂದಲೇ ಡ್ರಗ್ಸ್ ಮಾರುಕಟ್ಟೆಯಲ್ಲಿ ಪಳಗಿದ ವಲಯ. 

ಈ ಗೋಲ್ಡನ್ ಕ್ರೆಸೆಂಟ್ ಅಫ್ಘಾನಿಸ್ತಾನ, ಇರಾನ್ ಹಾಗೂ ಪಾಕಿಸ್ತಾನದ ಭಾಗಗಳನ್ನು ಒಳಗೊಂಡ ವಲಯ. ಹೇಳಿಕೇಳಿ ಜಗತ್ತಿನಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದು. ಆ ಕಾಲದಲ್ಲೇ ಅತೀ ಹೆಚ್ಚು ಮಾದಕ ದ್ರವ್ಯಗಳ ವ್ಯವಹಾರ ನಡೆಸುವ ವಲಯವಾಗಿತ್ತು ಅದು. ಈ ಬಗ್ಗೆ ಕೇಳಿ ತಿಳಿದಿತ್ತು ನನಗೆ. ನನ್ನ ಕಲ್ಪನೆಯಲ್ಲಿ ಈ ಡ್ರಗ್ ಮಾಫಿಯಾ ಎಂಬುದೂ ಕೂಡಾ ಭೂಗತ ಲೋಕದಂತೆ ಒಂದಿಷ್ಟು ಪುಡಿ ರೌಡಿಗಳನ್ನು ಹೊಂದಿರುವ ಡಾನ್ ಗಳು ನಡೆಸಿಕೊಂಡು ಹೋಗುವ ವ್ಯವಹಾರ‌. ಈ ಡಾನ್ ತನ್ನ ಚೇಲಾಗಳ ಮೂಲಕ ಡ್ರಗ್ ಪೆಡ್ಲಿಂಗ್ ಕಾರ್ಯವನ್ನು ನಿರ್ವಹಿಸುತ್ತಾನೆ. ಅದರಿಂದ ಬಂದ ಹಣ ಹಂಚಿಕೆಯಾಗುತ್ತದೆ ಎಂದುಕೊಂಡಿದ್ದೆ. ರಾಕಾನ ಸಾಮ್ರಾಜ್ಯದ ಒಳಹೊಕ್ಕುವವರೆಗೆ ಡ್ರಗ್ ಮಾಫಿಯಾದ ಬಗ್ಗೆ ನನಗಿದ್ದ ತಿಳುವಳಿಕೆ ಇಷ್ಟೇ.....

ಆದರೆ ವಾಸ್ತವ ನನ್ನೆಣಿಕೆಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಡ್ರಗ್ ಮಾಫಿಯಾದ ಲೋಕವೇ ಹಾಗೆ..... ಯಾರ ಊಹೆಗೂ ಸಿಗದಷ್ಟು ಸಂಕೀರ್ಣ. ಮಾಫಿಯಾ ಒಂದರ ನಿರ್ವಹಣೆ ಹೀಗೂ ಇರಬಹುದೇ ಎಂದು ಬೆಚ್ಚಿದ್ದೆ ನಾನು.

ಸಂಶ್ಲೇಷಿತ ಮಾದಕವಸ್ತು(Synthetic drugs)ಗಳ ಭರಾಟೆ ಇನ್ನೂ ಆರಂಭವಾಗಿರದ ಕಾಲವದು. ಗಾಂಜಾ(cannabis), ಚರಾಸ್/ಹಶಿಶ್, ಮೆರುವಾನ(marijuana), ಹೆರಾಯಿನ್(heroin) ಹಾಗೂ ಮಾರ್ಫಿನ್(morphine)ಗಳೇ ಡ್ರಗ್ಸ್ ದಂಧೆಯನ್ನು ಆಳುತ್ತಿದ್ದವು. ಈ ಮಾದಕ ಪದಾರ್ಥಗಳ ಉತ್ಪಾದನೆ ಹಾಗೂ ಮಾರುಕಟ್ಟೆ ಕೆಲವೇ ಕೆಲವು ಕೈಗಳ ನಿಯಂತ್ರಣದಲ್ಲಿರುವಂತಹದ್ದು (ಕೆಲಜನ ಸ್ವಾಮ್ಯದ/oligopoly ಮಾರುಕಟ್ಟೆ). ಈ ಕೆಲವೇ ಕೆಲವು ವ್ಯಕ್ತಿಗಳು ಲಾಭ ಹೆಚ್ಚಿಸಿಕೊಳ್ಳಲೋಸುಗ ಒಟ್ಟಾಗಿ ಕೈಜೋಡಿಸಿ ಒಪ್ಪಂದ ಮಾಡಿಕೊಂಡು ಜೊತೆಯಾಗಿ ಕೆಲಸಮಾಡುವುದು ಈ ದಂಧೆಯಲ್ಲಿ ಸಾಮಾನ್ಯ. ಇಂತಹ ಒಪ್ಪಂದಗಳು ಮಾದಕ ಪದಾರ್ಥಗಳ ಮಾರುಕಟ್ಟೆ ನಿಯಂತ್ರಣ ಕೂಟಗಳನ್ನು (drug cartel) ಸೃಷ್ಟಿಸುತ್ತವೆ. ಈ ಡ್ರಗ್ ಕಾರ್ಟೆಲ್ಲುಗಳು ಕೆಲಜನ ಸ್ವಾಮ್ಯ ಮಾರುಕಟ್ಟೆಯನ್ನು ಏಕಸ್ವಾಮ್ಯ ಮಾರುಕಟ್ಟೆ(monopoly) ಆಗಿ ಬದಲಾಯಿಸಿ ಈ ಪಾತಕಿಗಳಿಗೆ ಹಣದ ಹೊಳೆಯನ್ನು ಹರಿಸುತ್ತವೆ. 

ಈ ಕಾರ್ಟೆಲ್ಲುಗಳಾದರೂ ಅಷ್ಟೇ. ಅತೀ ಸೂಕ್ಷ್ಮವಾದ ಅಷ್ಟೇ ರಕ್ಷಣಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತವೆ. ಯಾವ ಕಾರ್ಪೋರೇಟ್ ವಲಯಕ್ಕೂ ಕಡಿಮೆ ಇಲ್ಲದಂತೆ ಫಾಲ್ಕನ್(falcons), ಹಿಟ್ಮೆನ್(hitmen), ಲೆಫ್ಟಿನೆಂಟ್(lieutenants) ಹಾಗೂ ಡ್ರಗ್ ಲಾರ್ಡ್(drug lord) ಎಂಬ ನಾಲ್ಕು ಸ್ತರಗಳ ರಚನೆ ಈ ಕಾರ್ಟೆಲ್ಗಳದು.  

ಪೋಲೀಸ್, ಮಿಲಿಟರಿ ಹಾಗೂ ವಿರೋಧಿ ಗುಂಪುಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಮೇಲ್ವಿಚಾರಣೆ ನಡೆಸುತ್ತಾ, ಮಾಹಿತಿ ನೀಡುವುದು ಫಾಲ್ಕನ್ ಗಳ ಕೆಲಸ. ಹಾಗಾಗಿಯೇ ಇವರನ್ನು ಗುಂಪಿನ ಕಣ್ಣು ಹಾಗೂ ಕಿವಿ ಎಂದು ಪರಿಗಣಿಸಲಾಗುತ್ತದೆ. ಇದು ಡ್ರಗ್ ಕಾರ್ಟೆಲ್ಲಿನ ಕನಿಷ್ಠ ಸ್ತರ.

ಹಿಟ್ಮನ್  ಎನ್ನುವುದು ಕಾರ್ಟೆಲ್ಲಿನೊಳಗಿನ ಸಶಸ್ತ್ರ ಪಡೆ. ತಮ್ಮ ಒಡೆಯನ ಆಣತಿಯಂತೆ ಕಳ್ಳತನ, ಸುಲಿಗೆ, ಅಪಹರಣ, ಹತ್ಯೆಗಳನ್ನು ಮಾಡುವುದಲ್ಲದೆ ಗುಂಪಿನ ರಕ್ಷಣಾ ಕಾರ್ಯಗಳನ್ನು ನಿಭಾಯಿಸುವುದು, ಮಿಲಿಟರಿ ಹಾಗೂ ವಿರೋಧಿಗಳ ದಾಳಿಯಿಂದ ಕೂಟವನ್ನು ರಕ್ಷಿಸುವುದು ಇವರ ಹೊಣೆ. 

ಲೆಫ್ಟಿನೆಂಟ್  ನೇರವಾಗಿ ಡ್ರಗ್ ಲಾರ್ಡ್ ನ ಸುಪರ್ದಿಗೆ ಬರುತ್ತಾನೆ. ತಮಗೆ ನೀಡಿರುವ ವಲಯದೊಳಗೆ ಬರುವ ಎಲ್ಲಾ ಫಾಲ್ಕನ್ ಹಾಗೂ ಹಿಟ್ಮನ್ ಗಳ ಮೇಲ್ವಿಚಾರಣೆ ಇವರದ್ದು. ತಮ್ಮ ಒಡೆಯನಿಗೆ ಹೇಳದೇ ಕೆಲವು ಕೆಳದರ್ಜೆಯ ಹತ್ಯೆಗಳನ್ನು ನಿರ್ವಹಿಸುವ ಅನುಮತಿ ಇವರಿಗೆ ಇರುತ್ತದೆ.

ಇವರೆಲ್ಲರ ನಂತರದಲ್ಲಿ ಅತ್ಯುನ್ನತ ಸ್ತರದಲ್ಲಿರುವಾತನೇ ಡ್ರಗ್ ಲಾರ್ಡ್. ತನ್ನ ಅಧೀನದಲ್ಲಿರುವ ಸಂಪೂರ್ಣ ಉದ್ಯಮದ ಮೇಲ್ವಿಚಾರಣೆ, ವಲಯವಾರು ನಾಯಕರ ಆಯ್ಕೆ, ಸಭೆಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಹತ್ಯೆಗೆ ಯೋಜನೆ ರೂಪಿಸುವುದೆಲ್ಲಾ ಇವನದೇ ಜವಾಬ್ದಾರಿ. ಅಂತಹುದೇ ಡ್ರಗ್ ಲಾರ್ಡ್ ಈ ಡೆಮೋನ್. (ಈ ನಾಲ್ಕು ಸ್ಥರಗಳ ಜೊತೆಗೆ ಮಾದಕದ್ರವ್ಯ ಉತ್ಪಾದಕರು, ಪೂರೈಕೆದಾರರು, ಹಣಕಾಸು ಒದಗಿಸುವವರು, ಶಸ್ತ್ರಾಸ್ತ್ರ ಪೂರೈಕೆದಾರರು, ಕಪ್ಪು ಹಣದ ಅಕ್ರಮ ವರ್ಗಾವಣೆಗಳೂ ಕೂಡಾ ಇದರ ಭಾಗವೇ)

ಡೆಮೋನ್ ನ ಮೋನ್ಸ್ಟರ್ ವೆಬ್ ಕೂಡಾ ಅಂತಹುದೇ ಡ್ರಗ್ ಕಾರ್ಟೆಲ್. ಗೋಲ್ಡನ್ ಕ್ರೆಸೆಂಟ್ ನ  ಅತ್ಯಂತ ಪ್ರಭಾವಿ ಹಾಗೂ ಅತೀ ಕ್ರೂರ ಕಾರ್ಟೆಲ್. ಕ್ರೆಸೆಂಟಿನ ಮುಕ್ಕಾಲು ಪ್ರತಿಶತ ಮಾರುಕಟ್ಟೆ ಈ ಕೂಟದ ನಿಯಂತ್ರಣದಲ್ಲಿತ್ತು. ಇಂತಹ ಮೋನ್ಸ್ಟರ್ ವೆಬ್ ನ ಏಕೈಕ ಚಕ್ರಾಧಿಪತಿಯೇ ಈ ಡೆಮೋನ್......

ರಾಕಾನಿಗಿಂತಲೂ ದೊಡ್ಡ ರಕ್ಕಸನಾ.........? ಇರಬಹುದೇನೋ. ಡೆಮೋನ್ ಎಂಬುದು ಡ್ರಗ್ ಮಾಫಿಯಾದಲ್ಲಿ ಅವನ ಹೆಸರು. ಅವನ ನಿಜ ನಾಮಧೇಯವೇನೋ ಯಾರಿಗೂ ತಿಳಿದಿಲ್ಲ. ಕೆಲವೇ ಕೆಲವು ಬೆರಳೆಣಿಕೆಯ ಅತ್ಯಾಪ್ತರನ್ನು  ಹೊರತುಪಡಿಸಿದರೆ ಅವನನ್ನು ಕಂಡವರು ಯಾರಿಲ್ಲ. ಮೂಲತಃ ವೆನಿಜು಼ವೆಲಾ ದೇಶದ ಪ್ರಜೆಯಾದ ಡೆಮೋನ್ ಅದು ಹೇಗೆ ಮೋನ್ಸ್ಟರ್ ಕಾರ್ಟೆಲ್ ನ ಲಾರ್ಡ್ ಆದನೋ ಬಲ್ಲವರು ಯಾರಿಲ್ಲ.

ಇಂತಹ ಡೆಮೋನ್ ಎಂಬ ಡ್ರಗ್ ಲಾರ್ಡ್ ನ ಅಧೀನದ ಮೋನ್ಸ್ಟರ್ ವೆಬ್ ನಲ್ಲಿ ಫಾಲ್ಕನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಕಾ....... ಡೆಮೋನ್ ನ ಅತ್ಯಂತ ನಂಬಿಕಸ್ಥ ಲೆಫ್ಟಿನೆಂಟ್ ಬಾದಲ್. ಅವನು ಡೆಮೋನ್ ನ ಬಲಗೈ ಇದ್ದಂತೆ. ಈ ಬಾದಲ್ ಗೆ ರಾಕಾನ ಮೇಲೆ, ಅವನಿಗಿರುವ ಪ್ರಭಾವ ಸಂಪರ್ಕಗಳ ಮೇಲೆ ವಿಪರೀತ ನಂಬಿಕೆ. ಇದರಿಂದಾಗಿ ಮೋನ್ಸ್ಟರ್ ವೆಬ್ ನಲ್ಲಿ ರಾಕಾನಿಗೆ ಒಬ್ಬ ಫಾಲ್ಕನ್ ಗಿಂತಲೂ ಹೆಚ್ಚಿನ ಅಧಿಕಾರ ದಕ್ಕಿಬಿಟ್ಟಿತ್ತು. ಹಾಗೂ ಇದು ಡ್ರಗ್ ಮಾಫಿಯಾದಲ್ಲಿ ಅವನ ಅಸ್ತಿತ್ವವನ್ನೇ ಬದಲಿಸಿತ್ತು. ಅವನಿಗೊಂದು ಬೇರೆಯೇ ವರ್ಚಸ್ಸು ದೊರಕಿತ್ತು ಕೂಡಾ. ಅದಕ್ಕೆ ತಕ್ಕಂತೆ ಅವನ ಜವಾಬ್ದಾರಿಗಳು. ಸಾಮಾನ್ಯವಾಗಿ ಫಾಲ್ಕನ್ಗಳಿಗೆ ಇಂತಿಷ್ಟೇ ಎನ್ನುವ ಕಾರ್ಯಕ್ಷೇತ್ರದ ಮಿತಿಯಿರುತ್ತದೆ. ಅದರೊಳಗೆ ಅವರ ಕೆಲಸ. ಆದರೆ ರಾಕಾನಿಗೆ ಆ ಮಿತಿಯಲ್ಲಿ ವಿನಾಯ್ತಿ ಇತ್ತು. ಆತ ಇಡೀ ಭಾರತ ಮಾತ್ರವಲ್ಲದೇ ಬಾಂಗ್ಲಾದೇಶದಲ್ಲೂ ಮೋನ್ಸ್ಟಾರ್ ವೆಬ್ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ. ಭಾರತದ ಪ್ರತೀ ಮೂಲೆಯಲ್ಲೂ ತನ್ನ ಪ್ರಭಾವ ಹೊಂದಿರುವಾತ ರಾಕಾ. ಅವನಿಗೆ ಕಾನೂನು ರಕ್ಷಕರಿಂದ ಹಿಡಿದು ದೇಶ ಆಳುವವರ ತನಕ ಎಲ್ಲರ ಪರಿಚಯವಿದೆ. ಅವರೆಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ದೇಶದಾದ್ಯಂತ ತನ್ನ ಹಿಡಿತ ಹೊಂದಿರುವವನಿಗೆ ಎಲ್ಲಾ ಕಡೆಗಳಿಂದ ಪೋಲಿಸ್, ಮಿಲಿಟರಿ ಕಾರ್ಯಾಚರಣೆಗಳ ಮೇಲೆ ಸದಾ ಕಣ್ಣಿಡುವುದು ಕಷ್ಟವೇ........ ‌? ಖಂಡಿತಾ ಇಲ್ಲ ಎನಿಸಿತು ನನಗೆ. ಆದರೆ ನನಗೆ ಅಚ್ಚರಿ ತಂದಿದ್ದು ಬಾಂಗ್ಲಾದೇಶದಲ್ಲೂ ಆತನಿಗಿರುವ ಹಿಡಿತ. ಬಾಂಗ್ಲಾ ದೇಶದ ಮೂಲೆ ಮೂಲೆಗಳಲ್ಲೂ ತನ್ನ ಸಂಪರ್ಕದ ಜನರನ್ನು ಹೊಂದಿದ್ದ ರಾಕಾ. ಎಷ್ಟರ ಮಟ್ಟಿಗೆ ಎಂದರೆ ತನ್ನ ಬಾಂಗ್ಲಾದೇಶಿ ಸಂಪರ್ಕದ ಮೂಲಕ ಗೋಲ್ಡನ್ ಟ್ರಯಾಂಗಲ್ ನ ಕಾರ್ಯಚಟುವಟಿಕೆಗಳ ಮೇಲೂ ಗಮನವಿರಿಸಿದ್ದ ಆತ‌. 

ಗೋಲ್ಡನ್ ಟ್ರಯಾಂಗಲ್ ಡ್ರಗ್ ಮಾಫಿಯಾದಲ್ಲಿ ಹಿಡಿತ ಹೊಂದಿತ್ತಾದರೂ ಅದರ ಬಲ ಗೋಲ್ಡನ್ ಕ್ರೆಸೆಂಟಿನಷ್ಟು ಇರಲಿಲ್ಲ. ಹಾಗಾಗಿ ಅವರು ಸದಾ ಡೆಮೋನ್ ಹಾಗೂ ಮೋನ್ಸ್ಟರ್ ವೆಬ್ ಮೇಲೆ ಕತ್ತಿ ಮಸೆಯುತ್ತಿದ್ದರು. ಅದರಲ್ಲೂ ಸ್ಯಾಮ್ಯುಯೆಲ್ ಎಂಬ ಡ್ರಗ್ ಲಾರ್ಡ್ ಒಡೆತನದ 'ನಟೋರಿಯಸ್ ಬ್ಲಾಕ್' ಅನ್ನುವ ಕಾರ್ಟೆಲ್ ಡೆಮೋನ್ ನ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿತ್ತು. ಈ ನಟೋರಿಯಸ್ ಬ್ಲಾಕ್ ನ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸುತ್ತಿದ್ದುದು ಇದೇ ರಾಕಾನ ಪಡೆ. ಈ ಎಲ್ಲಾ ಕಾರಣಗಳಿಂದಲೇ ಅವನಿಗೆ ಮೋನ್ಸ್ಟರ್ ವೆಬ್ ನಲ್ಲಿ ಸಾಮಾನ್ಯ ಫಾಲ್ಕನ್ಗಿಂತಲೂ ಹೆಚ್ಚಿನ ಸ್ಥಾನ. 

ರಾಕಾ ಫಾಲ್ಕನ್ ಆಗಿ ಭಾರತ, ಬಾಂಗ್ಲಾ ಹಾಗೂ ಗೋಲ್ಡನ್ ಟ್ರಯಾಂಗಲ್ ಸಂಬಂಧಿತ ಮಾಹಿತಿಗಳನ್ನು ರವಾನೆ ಮಾಡುವುದಲ್ಲದೇ ಭಾರತ ಹಾಗೂ ಬಾಂಗ್ಲಾದ ಡ್ರಗ್ಸ್ ದಂಧೆಯನ್ನು ಅನೌಪಚಾರಿಕವಾಗಿ ಬಾದಲ್ ಪರವಾಗಿ ನಿಭಾಯಿಸುತ್ತಿದ್ದ. ಗೋಲ್ಡನ್ ಕ್ರೆಸೆಂಟಿನಲ್ಲಿ ಉತ್ಪಾದನೆಯಾಗುವ ಮಾದಕ ಸರಕುಗಳನ್ನು ಪಾಕಿಸ್ತಾನದ ಮೂಲಕ ಪಂಜಾಬ್ ಗಡಿಯಿಂದ ಅಕ್ರಮವಾಗಿ ಭಾರತದೊಳಕ್ಕೆ ತರಲಾಗುತ್ತಿತ್ತು. ಪಂಜಾಬಿನಲ್ಲಿ ರಾಕಾನ ಒಂದು ಸಶಸ್ತ್ರ ಪಡೆಯೇ ಇತ್ತು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಮೇಘಾಲಯ, ಮಣಿಪುರದ ಮುಖೇನವೂ ಗೋಲ್ಡನ್ ಟ್ರಯಾಂಗಲ್ ನಿಂದ ಮಾದಕದ್ರವ್ಯಗಳು ದೇಶದೊಳಗೆ ಸರಬರಾಜಾಗುತ್ತಿದ್ದರೂ ಅದರ ಪ್ರಮಾಣ ಕಡಿಮೆ. ಪಂಜಾಬಿನಿಂದಲೇ(ಗೋಲ್ಡನ್ ಕ್ರೆಸೆಂಟ್) ಅತೀ ಹೆಚ್ಚು ಮಾದಕ ದ್ರವ್ಯಗಳು ಭಾರತದ ಸರಹದ್ದನ್ನು ಪ್ರವೇಶಿಸುವುದು. ಹಾಗಾಗಿ ಸುಲಭವಾಗಿ, ಅಧಿಕ ಪ್ರಮಾಣದಲ್ಲಿ ಸಿಗುವ ಡ್ರಗ್ಸ್ ಇಡೀ ಪಂಜಾಬ್ ರಾಜ್ಯವನ್ನೇ ನಶೆಯಲ್ಲಿ ಮುಳುಗಿಸಿ ತೇಲಿಸಿತ್ತು ಎಂದರೆ ತಪ್ಪಿಲ್ಲ. ರಾಕಾನ ಗುಂಪು ಯುವವರ್ಗಕ್ಕೆ ಈ ನಶೆಯ ಹುಚ್ಚನ್ನು ಹತ್ತಿಸಿತ್ತು. ಇವರ ಯೋಜನೆ ಬಹಳ ಸರಳ. ಮೊದಲಿಗೆ ಕಡಿಮೆ ಬೆಲೆಗೆ ಮಾಲು ನೀಡಿ ಅವರನ್ನು ಅದರ ದಾಸರನ್ನಾಗಿಸುವುದು........ ಅವರು ನಶೆಯ ಚಟಕ್ಕೆ ಬಿದ್ದ ನಂತರ ಒಂದೋ ಅವರಿಂದ ಹಣ ಸುಲಿಗೆ ಮಾಡುವುದು, ಇಲ್ಲವೇ ಅವರನ್ನೇ ಪೆಡ್ಲರ್ ಗಳನ್ನಾಗಿಸಿ ದೇಶಾದ್ಯಂತ ಡ್ರಗ್ಸ್ ಸರಬರಾಜು ಮಾಡಲು ಬಳಸಿಕೊಳ್ಳುವುದು. ನಶೆಯ ಬಲೆಗೆ ಬಿದ್ದ ಯುವವರ್ಗವೇ ರಾಕಾನ ಡ್ರಗ್ ಪೆಡ್ಲರ್ ಗಳು. ಇವರ್ಯಾರಿಗೂ ರಾಕಾನ ಬಗ್ಗೆ ಏನೆಂದರೆ ಏನೂ ತಿಳಿದಿರುವುದಿಲ್ಲ. ಅವರಿಗೆ ನಶೆ ಬೇಕಷ್ಟೇ...... ಆ ನಶೆಗಾಗಿ ಯಾವ ಕೆಲಸಕ್ಕಾದರೂ ಸೈ. ಒಂದು ವೇಳೆ ಪೋಲಿಸರ ಕೈಯಲ್ಲಿ ಸಿಕ್ಕಿಬಿದ್ದರೂ ಅವರಿಗೆ ರಾಕಾನ ಕೆಳಹಂತದ ಚೇಲಾಗಳ ಹೊರತು ಬೇರ್ಯಾರ ಬಗ್ಗೆಯೂ ತಿಳಿದಿರುವುದಿಲ್ಲ. ಹೆಚ್ಚಿನ ಸಮಯದಲ್ಲಿ ಹಾಗೆ ಅವರು ಬಾಯ್ಬಿಡುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿರುತ್ತದೆ.........!! ಯಾವುದೇ ಅಡಚಣೆಯಿಲ್ಲದೇ ವ್ಯವಸ್ಥಿತವಾಗಿ ದಂಧೆ ನಿರ್ವಹಿಸುತ್ತಾನೆ ರಾಕಾ. ಆದ್ದರಿಂದಲೇ ಅವನ ಮೇಲೆ ಅಷ್ಟು ನಂಬಿಕೆ ಇಟ್ಟಿರುವುದು ಬಾದಲ್. 

ಪಂಜಾಬಿನಿಂದ ಮೊದಲೇ ಗುರುತಿಸಲ್ಪಟ್ಟ ಅಕ್ರಮ ಹಾದಿಗಳ ಮುಖಾಂತರ ಈ ಡ್ರಗ್ಸ್ ದೇಶಾದ್ಯಂತ ಸರಬರಾಜಾಗುತ್ತಿತ್ತು. ಅದರ ಜೊತೆಗೆ ದಕ್ಷಿಣ ಭಾರತದ ಮದ್ರಾಸ್ ಮೂಲಕ ಸಮುದ್ರ ಮಾರ್ಗವಾಗಿ ಶ್ರೀಲಂಕಾಗೆ ಗೋಲ್ಡನ್ ಕ್ರೆಸೆಂಟಿನ ಡ್ರಗ್ಸ್ ಸಾಗಿಸಲ್ಪಡುತ್ತಿತ್ತು. ಹಾಗೆ ಶ್ರೀಲಂಕಾ ತಲುಪಿದ ಮಾಲನ್ನು ಅಮೇರಿಕಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ರವಾನಿಸಲಾಗುತ್ತಿತ್ತು.

ಬಾಂಗ್ಲಾ ದೇಶ ಇವರ ದಂಧೆಯ ಭಾಗವಾದ ಹಿನ್ನೆಲೆಯಲ್ಲೂ ಒಂದು ಕಾರಣವಿದೆ. ಮುಂಚೆ ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದ್ದ ಈ ಅಕ್ರಮ ಸಾಗಾಣಿಕೆಗೆ ತಡೆ ಬಿದ್ದಿದ್ದು ಸರ್ಕಾರದಿಂದ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಬಳಕೆ ಮೇಲೆ ನಿಯಂತ್ರಣ ಬಿದ್ದಾಗ. ಮಾದಕ ವ್ಯಸನಕ್ಕೆ ಒಳಗಾದವರ ಸಂಖ್ಯೆ ವಿಪರೀತವಾಗತೊಡಗಿದನ್ನು ಕಂಡ ಸರ್ಕಾರ 1985 ಹಾಗೂ 88ರಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಬಳಕೆ ಹಾಗೂ ಮಾರಾಟ ನಿಯಂತ್ರಿಸಲು ಕಾಯಿದೆಗಳೆರಡನ್ನು ಜಾರಿಗೆ ತಂದಿತ್ತು(Narcotic drugs and psychotropic substances act of 1985, prevention of illicit trafficking in narcotic drugs and psychotropic substances act of 1988). ಇದರಿಂದಾಗಿ ಮುಂಚಿನಂತೆ ವ್ಯವಹಾರ ನಡೆಸುವುದು ಕಷ್ಟವಾಗತೊಡಗಿತು. ಅದರಲ್ಲೂ ಮುಖ್ಯವಾಗಿ ಪಂಜಾಬಿನಿಂದ ಮದ್ರಾಸಿಗೆ ಅಧಿಕ ಪ್ರಮಾಣದ ಮಾಲನ್ನು ಕಳಿಸಿ ಶ್ರೀಲಂಕಾಗೆ ರವಾನಿಸುವುದು ಕಷ್ಟವಾಗತೊಡಗಿತು. ಒಂದೆರಡು ಬಾರಿ ಸಣ್ಣಪುಟ್ಟ ಕನ್ಸೈನ್ಮೆಂಟುಗಳು ಪೋಲಿಸರ ವಶವಾದ ನಂತರ ಈ ಸಮಸ್ಯೆಗೊಂದು ಉಪಾಯ ಹುಡುಕುವ ಅನಿವಾರ್ಯತೆ ಸೃಷ್ಟಿಯಾಯಿತು ರಾಕಾನಿಗೆ. ಆಗ ಅವನ ಕಣ್ಣಿಗೆ ಬಿದ್ದಿದ್ದೇ ಬಾಂಗ್ಲಾದೇಶ......

ರಾಕಾ ಇಡೀ ಭಾರತದಾದ್ಯಂತ ತನ್ನ ಹಿಡಿತ ಹೊಂದಿದ್ದರೂ ಪಶ್ಚಿಮ ಬಂಗಾಳದಲ್ಲಿ ಅವನಿಗಿದ್ದ ಹಿಡಿತವೇ ಬೇರೆಯದು. ಬಂಗಾಳದ ಮೂಲೆಮೂಲೆಯ ಪರಿಚಯ, ನೆಲಮಟ್ಟದಿಂದ ಹಿಡಿದು ರಾಜಕೀಯ ವಲಯದ ಗಣ್ಯಾತಿಗಣ್ಯರ ತನಕ ಎಲ್ಲರೂ ಅವನ ಮುಷ್ಟಿಯಲ್ಲಿದ್ದರು. ಹೆಚ್ಚು ಕಡಿಮೆ ಇದೇ ತೆರನಾದ ಪ್ರಭಾವಿ ಸಂಪರ್ಕ ಅವನಿಗೆ ಬಾಂಗ್ಲಾದಲ್ಲೂ ಇತ್ತು.   ಇವನ ಬಳಿ ಇರುವ ಹಣ, ಅಧಿಕಾರಕ್ಕೆ ಬೆದರದವರಾರು?

ಯಾವಾಗ ಮದ್ರಾಸ್ ಮಾರ್ಗವಾಗಿ ಡ್ರಗ್ಸ್ ಸಾಗಾಣಿಕೆ ಕಷ್ಟವೆನಿಸಿತೋ ಅದಕ್ಕೆ ಪರ್ಯಾಯವಾಗಿ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾಕ್ಕೆ ಸಾಗಿಸಿ ಅಲ್ಲಿಂದ ಅಮೇರಿಕಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಮಾಲನ್ನು ತಲುಪಿಸುವುದು ಸುಲಭದ ಆಯ್ಕೆ ಎನಿಸಿತು ಅವನಿಗೆ. ಎಷ್ಟಾದರೂ ಬಡರಾಷ್ಟ್ರವದು. ಅಲ್ಲಿನ ಜನ ಕೆಲಸಕ್ಕಾಗಿ ಅಂಡಲೆಯುತ್ತಾರೆ. ಅಂತಹವರನ್ನು ಸುಲಭವಾಗಿ ಅತೀ ಕಡಿಮೆ ದುಡ್ಡಿಗೆ ಪೆಡ್ಲಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು. ಆರ್ಥಿಕವಾಗಿಯೂ ಬಹಳ ಉತ್ತಮ ಆಯ್ಕೆಯಾಗಿತ್ತದು. ಜೊತೆಗೇ ಬಾಂಗ್ಲಾ ಗೋಲ್ಡನ್ ಟ್ರಯಾಂಗಲ್ ಗೆ ಬಹಳ ಹತ್ತಿರವಿದ್ದ ಕಾರಣ ಅವರ ಚಟುವಟಿಕೆಗಳ ಮೇಲೆ ಕಣ್ಣಿಡುವುದೂ ಸುಲಭವೇ ಅವನಿಗೆ. ಹೀಗೆ ಬಾಂಗ್ಲಾ ದೇಶ ಇವನ ಪಾತಕ ಇರಾದೆಗಳ ಗಮ್ಯವಾಗತೊಡಗಿತು. 

ಈ ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಡ್ರಗ್ಸ್ ಸಾಗಾಣಿಕೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೇರಿತ್ತು‌. ಕಾರಣ ನನಗೆ ಈ ಮೊದಲೇ ಈ ಬಗ್ಗೆ ಅನುಭವವಿತ್ತಲ್ಲ........!!!!

ಅದು ಹೇಗೆ ಎಂದಿರಾ......???

ಅದೇ ನನ್ನ ಕಾಡುತ್ತಿದ್ದ ರಟ್ಟಿನ ಪೆಟ್ಟಿಗೆಗಳು........

ನೆನಪಾಯಿತೇ......?

ಈ ಮುಂಚೆ ನಾನು ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಹೋಗುತ್ತಿದ್ದ ಸರಕು ಸಾಗಾಣಿಕಾ ವಾಹನಗಳಲ್ಲಿನ ರಟ್ಟಿನ ಸೀಲ್ಡ್ ಪೆಟ್ಟಿಗೆಗಳಲ್ಲಿರುತ್ತಿದ್ದ ರಹಸ್ಯ ಇದೇ ಡ್ರಗ್ಸ್.....!! ಅದನ್ನೇ ಲೋಡಿಂಗ್ ಹಾಗೂ ಅನ್ಲೋಡಿಂಗ್ ಮಾಡುತ್ತಿದ್ದದ್ದು ನಾನು. ಅದರೊಳಗೆ ಏನಿತ್ತು ಎಂಬುದು ತಿಳಿಯದಿದ್ದರೂ ಆ ಕೆಲಸ ನನಗೆ ಪರಿಚಿತವಲ್ಲವೇ? ಹಾಗಾಗಿ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದ ರಾಕಾ......

ಸಶೇಷ

ಟಿಪ್ಪಣಿಗಳು:

ಮಾದಕ ಪದಾರ್ಥಗಳಿಗೆ ಪುರಾತನ ಇತಿಹಾಸವಿದೆ. ಪುರಾಣಗಳಲ್ಲೂ ಇದರ ಉಲ್ಲೇಖವಿರುವ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿರುವುದೇ ಅಲ್ಲವೇ? ನಾಗರೀಕತೆಗಳ ಕಾಲದಲ್ಲೂ ಗಾಂಜಾ, ಅಫೀಮುಗಳ ಬಳಕೆಯಿತ್ತು ಎನ್ನುವುದಕ್ಕೂ ಕುರುಹುಗಳಿವೆ. ಹೀಗೆ ಮಾನವನ ಪ್ರತೀ ಬೆಳವಣಿಗೆಗೂ ಸಾಕ್ಷಿಯಾಗಿರುವ ಮಾದಕದ್ರವ್ಯಗಳ ಕಳ್ಳಸಾಗಾಣಿಕೆ ಆರಂಭವಾದದ್ದು 19ನೇ ಶತಮಾನದಲ್ಲಿ ಎನ್ನುತ್ತದೆ ಇತಿಹಾಸ. 

ಮಾದಕವಸ್ತುಗಳ ಅಕ್ರಮ ಸಾಗಾಣಿಕೆ ಹೇಗೆ ಆರಂಭವಾಯಿತು ಎಂದು ಇತಿಹಾಸವನ್ನು ಕೆದಕುತ್ತಾ ಹೋದರೆ ಅದು 18 ಹಾಗೂ 19ನೇ ಶತಮಾನದ ಆರಂಭದ ಚೀನಾ ದೇಶಕ್ಕೆ ಹೋಗಿ ನಿಲ್ಲುತ್ತದೆ. ಚೀನಿಯರು ಆ ಕಾಲದಲ್ಲೇ ಮದಿರೆ ಹಾಗೂ ಅಫೀಮಿನ ನಶೆಯಲ್ಲಿ ದಾಸರಾಗಿದ್ದವರು. ಈ ಅಫೀಮನ್ನು ಗ್ರೇಟ್ ಬ್ರಿಟನ್ ನ ವಸಾಹತು ರಾಷ್ಟ್ರಗಳಿಂದ ಅದರಲ್ಲೂ ಮುಖ್ಯವಾಗಿ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದರಂತೆ. ಈ ಅಫೀಮು ಆಮದಿನಿಂದಾಗಿ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ನಷ್ಟವೇ ಹೆಚ್ಚಾಗಿ ಚೀನಾದ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರತೊಡಗಿತು. ಹಾಗಾಗಿ 1729ರಲ್ಲಿ ಚೀನಾ ಅಫೀಮು ಆಮದು ಹಾಗೂ ಬಳಕೆಯನ್ನೇ ನಿಷೇಧಿಸಿ ಆದೇಶ ಹೊರಡಿಸಿತು. 1799 ಹಾಗೂ 1800ರಲ್ಲಿ ಈ ನಿಷೇಧವನ್ನು ಇನ್ನೂ ಬಲಪಡಿಸಲಾಯಿತು. 

ಚೀನಾದ ಈ ಕ್ರಮದಿಂದಾಗಿ ಅದರ ಅರ್ಥವ್ಯವಸ್ಥೆ ಬಲಗೊಂಡು ವ್ಯಾಪಾರದಲ್ಲಿ ಲಾಭ ವರ್ಧಿಸತೊಡಗಿದರೆ ಅತ್ತ ಈ ಕ್ರಮ ಅಫೀಮು ರಫ್ತಿನಿಂದ ಲಾಭಗಳಿಸುತ್ತಿದ್ದ ಬ್ರಿಟನ್ ದೇಶಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅಫೀಮು ರಫ್ತು ಮಾಡಿ ಹಲವು ಚೀನಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಬ್ರಿಟನ್ ದೇಶದ ಆಮದುಗಳು ಹಾಗೇ ಮುಂದುವರೆದು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. 

ಅಫೀಮು ಆಮದು ಹಾಗೂ ಬಳಕೆ ನಿಷೇಧಿಸಿದ್ದ ಕಾರಣ ತೀರಾ ನಷ್ಟ ಅನುಭವಿಸಿದ ಬ್ರಿಟನ್ ಏರುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ತಂತ್ರವೊಂದನ್ನು ಯೋಚಿಸತೊಡಗಿದಾಗ ಆರಂಭವಾಗಿದ್ದೇ ಈ ಮಾದಕವಸ್ತುಗಳ ಕಳ್ಳಸಾಗಾಣಿಕೆಯ ಪರಿಕಲ್ಪನೆ. ಅದರಂತೆ ಬ್ರಿಟನ್ನಿನ ಅಧೀನದಲ್ಲಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು ಭಾರತದ ಬಂಗಾಳ ಪ್ರಾಂತ್ಯದಲ್ಲಿ(ಈಗಿನ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ) ಅಫೀಮನ್ನು ಬೆಳೆದು ಅದನ್ನು ಬ್ರಿಟೀಷ್ ವರ್ತಕರ ಮೂಲಕ ಅಕ್ರಮವಾಗಿ ಕಳ್ಳಮಾರ್ಗದಲ್ಲಿ ಚೀನಾಕ್ಕೆ ಸಾಗಿಸಿ ಮಾರಲು ಆರಂಭಿಸಿತು. ಅಲ್ಲಿಂದಲೇ ಈ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಆರಂಭವಾಯಿತು ಎನ್ನಬಹುದು. 

ಬ್ರಿಟನ್ನಿನ ಈ ಕ್ರಮದಿಂದಾಗಿ ಚೀನಾದ ಸಂಪತ್ತು ಬ್ರಿಟನ್ ದೇಶಕ್ಕೆ ಹರಿಯುವುದರೊಂದಿಗೇ ಚೀನಾದ ಜನತೆ ಮಾದಕದ್ರವ್ಯ ವ್ಯಸನದ ದಾಸರಾದರು. ಅಫೀಮು ನಿಷೇಧಿಸಿದ್ದರೂ ಕೂಡಾ ಏರುತ್ತಿರುವ ವ್ಯಸನಿಗಳ ಸಂಖ್ಯೆಯಿಂದ ಕಂಗಾಲಾಗಿ ಅದರ ಹಿನ್ನೆಲೆ ಪರಿಶೀಲನೆಗೆ ತೊಡಗಿದಾಗ ಬ್ರಿಟನ್ನಿನ ಕುತಂತ್ರಗಳು ಹೊರಬಂದವು. ಇದರಿಂದಾಗಿ ಚೀನಾ ಹಾಗೂ ಬ್ರಿಟನ್ ನಡುವೆ ಮೊದಲನೇ ಅಫೀಮು ಯುದ್ಧ(1839-42) ನಡೆಯಿತು. ಹಲವು ವಸಾಹತು ದೇಶಗಳಿಂದಾಗಿ ಬಲಿಷ್ಠ ಸೇನೆ ಹೊಂದಿದ್ದ ಬ್ರಿಟನ್ ಚೀನಾವನ್ನು ಸೋಲಿಸಿತು. ಇದರ ಪರಿಣಾಮ 1842ರಲ್ಲಿ ಚೀನಾ ಅನಿವಾರ್ಯವಾಗಿ ತನಗೆ ಸಂಪೂರ್ಣವಾಗಿ ವಿರುದ್ಧವಿದ್ದ ನ್ಯಾನ್ಕಿಂಗ್ ಒಪ್ಪಂದಕ್ಕೆ (Treaty of Nanking) ಸಹಿ ಹಾಕಬೇಕಾಯಿತು. ಈ ಒಪ್ಪಂದ ಚೀನಾದಲ್ಲಿ ಬ್ರಿಟನ್ನಿನ ಅಫೀಮು ಮಾರಾಟವನ್ನು ಮಾನ್ಯಗೊಳಿಸಿತು. ಅಲ್ಲದೇ ಮಾರಾಟ ಸುಂಕಗಳನ್ನು ಏಕಪಕ್ಷೀಯವಾಗಿ ಬ್ರಿಟನ್ ದೇಶವೇ ನಿರ್ಧರಿಸುವ ಕರಾರಿನಿಂದ ಚೀನಾ ನಷ್ಟ ಅನುಭವಿಸಿತು. ಈ ಎಲ್ಲಾ ಕಾರಣದಿಂದಾಗಿ ಚೀನಾದಲ್ಲಿ ಅರಾಜಕತೆ, ಕ್ರಾಂತಿಗಳು ಉಂಟಾಗಿ ಕೊನೆಗೆ ನ್ಯಾನ್ಕಿಂಗ್ ಒಪ್ಪಂದ ಮುರಿದುಬಿತ್ತು. 

ಇದು ಎರಡನೇ ಅಫೀಮು ಯುದ್ಧ(1956-60)ಕ್ಕೆ ಇಂಬು ಕೊಟ್ಟಿತು. ಈ ಯುದ್ಧದಲ್ಲಿ ಫ್ರೆಂಚರು ಬ್ರಿಟೀಷರೊಡನೆ ಕೈಜೋಡಿಸಿ ಇನ್ನೊಮ್ಮೆ ಚೀನಾವನ್ನು ಸೋಲಿಸಲಾಯಿತು. ಕನ್ವೆನ್ಷನ್ ಆಫ್ ಪೀಕಿಂಗ್/ಬೀಜಿಂಗ್ ನೊಂದಿಗೆ ಟಿಯಾನ್ಜಿನ್ ಒಪ್ಪಂದಕ್ಕೆ ಸಹಿ ಬಿತ್ತು. ಹಣ(ಬೆಳ್ಳಿ ನಾಣ್ಯ) ಸಂದಾಯವಷ್ಟೇ ಅಲ್ಲದೇ ಆ ಮೂಲಕ ಟಿಯಾನ್ಜಿನ್ ಅನ್ನು ವ್ಯಾಪಾರಿ ಬಂದರಾಗಿ ಸರ್ವರಿಗೂ ಮುಕ್ತಗೊಳಿಸಲಾಯಿತು. ಅಲ್ಲದೇ ಚೀನಾದಲ್ಲಿ ಧರ್ಮ ಆಯ್ಕೆಯ ಸ್ವಾತಂತ್ರ್ಯ ನೀಡಲಾಯಿತು.

ಆನಂತರದಲ್ಲಿ ಬ್ರಿಟನ್, ಅಮೇರಿಕಾ, ಐರೋಪ್ಯ ದೇಶಗಳೆಲ್ಲಾ ಮಾದಕದ್ರವ್ಯಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ನಿಧಾನವಾಗಿ ಮಾದಕ ವಸ್ತುಗಳ ಬಳಕೆಯನ್ನು ನಿಷೇಧಿಸತೊಡಗಿದವು. ಆದರೆ ಆ ಹೊತ್ತಿಗಾಗಲೇ ಈ ವ್ಯಸನ ಜನರನ್ನು ಆವರಿಸಿಕೊಂಡಿತ್ತು. ಇದರಿಂದಾಗಿಯೇ ಮಾದಕಸರಕುಗಳ ಕಾನೂನುಬಾಹಿರ ಮಾರಾಟ ಜಾಲ ಮಾಫಿಯಾ ಆಗಿ ಬೆಳೆಯತೊಡಗಿತು.

ಅಮೇರಿಕಾದ ಮೆಕ್ಸಿಕೋ, ಕೊಲಂಬಿಯಾ ಹಾಗೂ ಏಷ್ಯಾದ ಗೋಲ್ಡನ್ ಕ್ರೆಸೆಂಟ್ ಮತ್ತು ಗೋಲ್ಡನ್ ಟ್ರಯಾಂಗಲ್ ಪ್ರಸ್ತುತ ವಿಶ್ವದ ಕುಖ್ಯಾತ ಮಾದಕವಸ್ತು ಅಕ್ರಮ ಮಾರಾಟ ಜಾಲಗಳು.

ಹಿಪ್ಪಿ ಕಲ್ಚರ್: 1960-70ರ ದಶಕದಲ್ಲಿ ಅಮೇರಿಕಾದಲ್ಲಿ ಆರಂಭಗೊಂಡ ಯುವ ಚಳುವಳಿ ಇದು. ಯುವವರ್ಗ ಆಗಿನ ಕಾಲದಲ್ಲಿ ಅಮೇರಿಕಾದ ಮುಖ್ಯವಾಹಿನಿಯಲ್ಲಿ ಅಸ್ತಿತ್ವದಲ್ಲಿದ್ದ ನೀತಿ ನಿಯಮಗಳನ್ನು ವಿರೋಧಿಸಿ ಆರಂಭಿಸಿದ ಈ ಚಳುವಳಿ ವಿಶ್ವದಾದ್ಯಂತ ವ್ಯಾಪಿಸಿತು. ಅದರಲ್ಲೂ ಭಾರತದಲ್ಲಿ ಇದರ ಪ್ರಭಾವ ವಿಪರೀತವಾಗಿತ್ತು. ಶಾಂತಿಯ ಅರಸುವಿಕೆ ಎಂದು ಆರಂಭವಾದ ಈ ಸಂಸ್ಕೃತಿ ಕಾಲಕ್ರಮೇಣ ಮಾದಕಪದಾರ್ಥಗಳ ಹೂರಣವಾಯಿತು. 1970ರ ಕೊನೆಗೆ ವಿಶ್ವದ ಎಲ್ಲೆಡೆ ಈ ಸಂಸ್ಕೃತಿ ಅಂತ್ಯವಾದರೂ ಭಾರತದಲ್ಲಿ ಮಾತ್ರ ಇಂದಿಗೂ ಗೋವಾ, ಗೋಕರ್ಣ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಹಿಪ್ಪಿ ಕಲ್ಚರ್ ಜೀವಂತವಾಗಿದೆ. ಹಾಗೆಯೇ ಭಾರತದಲ್ಲಿ ಮಾದಕವ್ಯಸನದ ಬೆಳವಣಿಗೆಯಲ್ಲಿ ಹಿಪ್ಪಿ ಸಂಸ್ಕೃತಿಯ ಪಾತ್ರವನ್ನು ನಿರಾಕರಿಸಲಾಗದು.

ಗೋಲ್ಡನ್ ಕ್ರೆಸೆಂಟ್ ಹಾಗೂ ಗೋಲ್ಡನ್ ಟ್ರಯಾಂಗಲ್

ಪ್ರಪಂಚದ ಅತೀ ದೊಡ್ಡ ಅಫೀಮು ಉತ್ಪಾದನಾ ವಲಯಗಳಿವು. ಈ ಎರಡೂ ಪ್ರದೇಶಗಳಿಗೆ ತಮ್ಮದೇ ಆದ ಕುಖ್ಯಾತ ಇತಿಹಾಸವಿದೆ. ಬಹಳ ಹಿಂದಿನ ಕಾಲದಿಂದಲೂ ಅಫೀಮು ಉತ್ಪನ್ನಗಳ ಕೃಷಿಗೆ ಈ ವಲಯಗಳು ಪ್ರಸಿದ್ಧ. ಸರಿ ಸುಮಾರು 19ನೇ ಶತಮಾನದಿಂದಲೇ ಈ ಪ್ರದೇಶಗಳಲ್ಲಿ ಅಫೀಮು ಬೆಳೆಯಲಾಗುತ್ತಿತ್ತು. 

ಗೋಲ್ಡನ್ ಕ್ರೆಸೆಂಟ್ : 

1950ರ ದಶಕದಿಂದಲೇ ಅಂತಾರಾಷ್ಟ್ರೀಯ ಅಫೀಮು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ ಗೋಲ್ಡನ್ ಕ್ರೆಸೆಂಟ್ ಆಫ್ರಿಕಾ, ಅಮೇರಿಕಾ, ಮಧ್ಯ ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳ ಮಾದಕ ದ್ರವ್ಯಗಳ ಮಾರುಕಟ್ಟೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ಅಫ್ಘಾನಿಸ್ತಾನ್, ಇರಾನ್ ಹಾಗೂ ಪಾಕಿಸ್ತಾನ ದ ಹಲವು ಪ್ರದೇಶಗಳನ್ನು ಒಳಗೊಂಡ ಈ ಪ್ರದೇಶದ ಪರ್ವತಗಳ ಪರಿಧಿಗಳು ಅರ್ಧಚಂದ್ರನಿಗೆ ಹೋಲುತ್ತವೆ. ಹಾಗಾಗಿಯೇ ಅದಕ್ಕೆ ಗೋಲ್ಡನ್ ಕ್ರೆಸೆಂಟ್ ಎಂದು ಹೆಸರು ಬಂದಿದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಕೊರಿಯಾಕ್ಕೆ ಅಕ್ರಮ ಮಾದಕದ್ರವ್ಯ ಸಾಗಾಣಿಕೆಯ ಮೂಲವಾಗಿದೆ ಈ ಗೋಲ್ಡನ್ ಕ್ರೆಸೆಂಟ್. ಗೋಲ್ಡನ್ ಕ್ರೆಸೆಂಟಿನ ಹೆಚ್ಚಿನ ಅಫೀಮು ಉತ್ಪನ್ನಗಳು ಅಫ್ಘಾನಿಸ್ತಾನದ ಕಂದಹಾರ್ ಹಾಗೂ ಹೆಲ್ಮಂಡ್ ಪ್ರಾಂತ್ಯದಲ್ಲಿ ಬೆಳೆಯಲ್ಪಡುತ್ತವೆ. ವಿಶ್ವದಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ಪ್ರದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನವು ಅಗ್ರಸ್ಥಾನದಲ್ಲಿದೆ(2001ರಿಂದ).

ಗೋಲ್ಡನ್ ಟ್ರಯಾಂಗಲ್

ಬಹಳ ಹಿಂದಿನಿಂದ ಅಸ್ತಿತ್ವದಲ್ಲಿದ್ದರೂ 1980ರ ನಂತರದಲ್ಲಿ ಮಾದಕದ್ರವ್ಯಗಳ ಮಾರುಕಟ್ಟೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯ ಇದು. ಥೈಲ್ಯಾಂಡ್, ಲಾವೋಸ್ ಹಾಗೂ ಮಯನ್ಮಾರ್ ಮೂರೂ ದೇಶಗಳ ಗಡಿಗಳು ಸೇರುವ ಪ್ರದೇಶವೇ ಈ ಗೋಲ್ಡನ್ ಟ್ರಯಾಂಗಲ್. 1930ರ ಸಮಯದಲ್ಲಿ ಚೈನೀಸ್ ಕಮ್ಯುನಿಸ್ಟ್ ಪಕ್ಷವು ಚೀನಾದಲ್ಲಿ ಅಫೀಮು ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ, ಅಫೀಮು ಉತ್ಪಾದನೆ ಚೀನಾದ ಗಡಿಯ ದಕ್ಷಿಣದಲ್ಲಿರುವ ಈ ವಲಯಕ್ಕೆ ವರ್ಗಾಯಿಸಲ್ಪಟ್ಟಿತು. ಅಂದಿನಿಂದ ಹಂತ ಹಂತವಾಗಿ ಉತ್ಪಾದನೆ ಹೆಚ್ಚಿಸಿಕೊಂಡ ಗೋಲ್ಡನ್ ಟ್ರಯಾಂಗಲ್ 1980ರ ನಂತರದಲ್ಲಿ ತನ್ನ ಜಾಲವನ್ನು ಬಹು ವೇಗವಾಗಿ ವಿಸ್ತರಿಸಿಕೊಂಡಿದೆ. ಈ ಮೂರು ದೇಶಗಳಲ್ಲಿ ಮಯನ್ಮಾರ್ ಅಫೀಮು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲೇ ಅತೀ ಹೆಚ್ಚು ಅಫೀಮು ಉತ್ಪಾದಿಸುವ ಪ್ರದೇಶಗಳ ಪಟ್ಟಿಯಲ್ಲಿ  ಮಯನ್ಮಾರ್ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ(2001ಕ್ಕೂ ಮುಂಚೆ ಪ್ರಥಮ ಸ್ಥಾನದಲ್ಲಿತ್ತು). ಮಯನ್ಮಾರ್ ದೇಶದ ಹೆಚ್ಚಿನ ಬುಡಕಟ್ಟು ಜನರು ಅಫೀಮನ್ನು ಬೆಳೆಯುತ್ತಾರೆ. ಮಯನ್ಮಾರಿನಲ್ಲಿ ಬೆಳೆದ ಕಚ್ಚಾ ಅಫೀಮು ಹಾಗೂ ಹೆರಾಯಿನ್ ಅನ್ನು ಸಂಸ್ಕರಿಸಲು ಕುದುರೆ ಹಾಗೂ ಕತ್ತೆಗಳ ಗಾಡಿಯಲ್ಲಿ (ಕಾರವಾನ್) ಥೈಲ್ಯಾಂಡ್ ಗಡಿಗೆ ಕೊಂಡೊಯ್ಯಲಾಗುತ್ತದೆ. ಹಾಗೆ ಸಂಸ್ಕರಿಸಿದ ಸರಕುಗಳಲ್ಲಿ ಸ್ವಲ್ಪ ಉತ್ತರ ಥೈಲ್ಯಾಂಡಿನ ಮಾರುಕಟ್ಟೆಗೆ ಸರಬರಾಜಾದರೆ ಉಳಿದ ದಾಸ್ತಾನು ಸೀದಾ ಬ್ಯಾಂಕಾಕಿಗೆ ರವಾನೆಯಾಗುತ್ತದೆ. ಅಲ್ಲಿಂದ ಅಂತಾರಾಷ್ಟ್ರೀಯ ಡ್ರಗ್ಸ್ ಮಾರುಕಟ್ಟೆಗೆ ಹಂಚಲ್ಪಡುತ್ತದೆ. ಅಮೇರಿಕಾದ ಕ್ಯಾಲಿಫೋರ್ನಿಯಾ ಹಾಗೂ ಹವಾಯಿ ದ್ವೀಪಗಳು ಗೋಲ್ಡನ್ ಟ್ರಯಾಂಗಲ್ ನ ಮುಖ್ಯ ಖರೀದುದಾರರು.

ಡ್ರಗ್ ಕಾರ್ಟೆಲ್: ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ದೊಡ್ಡ ದೊಡ್ಡ ಸಂಸ್ಥೆಗಳು ಸರಕುಗಳು ಉತ್ಪಾದನೆ ಹಾಗೂ ಹಂಚಿಕೆ ಸಂಬಂಧ ಒಪ್ಪಂದವನ್ನು ಮಾಡಿಕೊಂಡಾಗ ಡ್ರಗ್ ಕಾರ್ಟೆಲ್ ಗಳು ಅಸ್ತಿತ್ವಕ್ಕೆ ಬಂದವು. ಒಪ್ಪಂದಗಳು ಮುರಿದು ಬಿದ್ದಾಗ ಕಾರ್ಟೆಲ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. 

ಪ್ರಸ್ತುತ ಅಮೇರಿಕಾದ ಭೂಗತ ಮಾಫಿಯಾದಲ್ಲಿ ಅತೀ ಹೆಚ್ಚು ಸಂಖ್ಯೆಯ ಕಾರ್ಟೆಲ್ಲುಗಳಿವೆ. ಅದನ್ನು ಬಿಟ್ಟರೆ ಗೋಲ್ಡನ್ ಕ್ರೆಸೆಂಟ್ ಹಾಗೂ ಗೋಲ್ಡನ್ ಟ್ರಯಾಂಗಲ್ ನಲ್ಲಿಯೂ ಹಲವು ಕಾರ್ಟೆಲ್ಲುಗಳು ಕಾರ್ಯನಿರ್ವಹಿಸುತ್ತಿವೆ. ದಾವೂದ್ ಇಬ್ರಾಹಿಂ ನ 'ಡಿ ಕಂಪೆನಿ' ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತೀ ದೊಡ್ಡ ಮಾಫಿಯಾ ಕಾರ್ಟೆಲ್ ಎನ್ನುತ್ತವೆ ದಾಖಲೆಗಳು.

ಓದುಗರ ಗಮನಕ್ಕೆ:

ಕಾರ್ಟೆಲ್, ಅವುಗಳ ರಚನೆಯ ಬಗೆಗಿನ ಮಾಹಿತಿ ವಾಸ್ತವಿಕ. ಆದರೆ ಕಾರ್ಟೆಲ್ಲುಗಳಿಗೆ ಹಾಗೂ ಡ್ರಗ್ ಲಾರ್ಡ್ ಗಳಿಗೆ ನೀಡಿರುವ ಹೆಸರುಗಳೆಲ್ಲಾ ನನ್ನ ಊಹೆ ಮಾತ್ರ. ಆ ಹೆಸರಿನ ಯಾವುದೇ ಕಾರ್ಟೆಲ್ ಅಸ್ತಿತ್ವದಲ್ಲಿ ಇಲ್ಲ.

ಮಾದಕ ಪದಾರ್ಥಗಳಿಗೆ ಸಂಬಂಧಿಸಿದ ಮಾಹಿತಿ ನೀಡಿ ಸಹಕರಿಸಿದ್ದಕ್ಕೆ ಅನು ಅವರಿಗೆ ಹಾಗೂ ಹಲವು ಗೊಂದಲಗಳನ್ನು ಪರಿಹರಿಸಿ ನಿರಂತರ ಪ್ರೋತ್ಸಾಹಕ್ಕೆ ಆರಿದ್ರಾ ಅವರಿಗೆ ಅನಂತ ಧನ್ಯವಾದಗಳು.

ಮಾಹಿತಿ ಕೃಪೆ:

https://www.unodc.org>india

https://en.m.wikipedia.org/wiki/Drug_policy_of_India

https://en.m.wikipedia.org/wiki/Golden_Crescent

https://en.m.wikipedia.org/wiki/Golden_Triangle_(Southeast_Asia)

https://www.unodc.org/unodc/en/data-and-analysis/bulletin/bulletin_1957-01-01_1_page003.html

https://en.m.wikipedia.org/wiki/Drug_cartel

https://www.wionews.com/south-asia/drug-trafficking-a-challenge-to-national-security-17448

https://www.thehindubusinessline.com/news/india-a-key-hub-for-illicit-drug-trade-use-of-darknet-cryptos-rampant-un-body/article26440255.ece

1 ಕಾಮೆಂಟ್‌:

  1. ಫಾಲ್ಕನ್ ಡೆಮನ್ ಪೆಡ್ಲ್ಯಾರ್ ಎಷ್ಟು ಮಾಹಿತಿ ಕಲೆ ಹಾಕಿದ್ದೀರಿ ಡ್ರಗ್ಸ್ ಬಗ್ಗೆ. ಆದರೂ ಆ ರಟ್ಟಿನ ಪ್ಯಾಕೆಟ್ ನಲ್ಲಿದ್ದ ಸರಕು ಸಿಕ್ಕಿ ಹಾಕಿಕೊಳ್ಳದೆ ಬಾರ್ಡರ್ ದಾಟುತ್ತಿದ್ದುದ್ದು ಹೇಗೆ?

    ಪ್ರತ್ಯುತ್ತರಅಳಿಸಿ