ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 7

ರಾಕಾ ಮೀಟ್ಸ್ ಆರ್.ಡಿ......... ರುದ್ರ್‌ ದೇವ್ 

ನಾನು ರಾಕಾನ ದಂಧೆಯ ಆಳಕ್ಕಿಳಿದು ಅವನ ಸಂಪತ್ತು, ಅಧಿಕಾರದ ಮೂಲ ಶೋಧಿಸುವ ಹುಕಿಗೆ ಬಿದ್ದು ಅದಕ್ಕೊಂದು ಹಾದಿಯ ಹುಡುಕಾಟದಲ್ಲಿದ್ದೆ. ಇಂತಹ ಸಂದರ್ಭದಲ್ಲಿ ಅರಸುತ್ತಿದ್ದ ಬಳ್ಳಿ ಕಾಲಿಗೇ ತೊಡರಿದಂತೆ ಅದೊಂದು ಸಂಜೆ ರಾಕಾ ನನ್ನನ್ನು ಭೇಟಿಯಾಗಿದ್ದ.....!!

ಇಲ್ಲಿಯವರೆಗೆ ಯಾರೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡದ ರಾಕಾ......
ಇಡೀ ಕಲ್ಕತ್ತೆಯನ್ನು ಕಿರು ಬೆರಳಿನಲ್ಲಿ ಕುಣಿಸಬಲ್ಲ ತಾಕತ್ತಿರುವ ರಾಕಾ......
ಪಶ್ಚಿಮ ಬಂಗಾಳದ ರಾಜಕೀಯದ ನೀಲಿನಕ್ಷೆ ಬದಲಾಯಿಸಬಲ್ಲ ರಾಕಾ......

ದಿ ಗ್ರೇಟ್ ರಾಜನಾಥ್ ಕೀರ್ತನಿಯಾ......

ನನ್ನನ್ನು ಮತ್ತು ಕೇವಲ 'ನನ್ನನ್ನು' ಭೇಟಿಯಾಗಲು ಬಂದಿದ್ದ.....!! 

ಈ ಭೇಟಿ ನನಗೆ ಗುರಿಗೆ ಹತ್ತಿರವಾದ ಸಂತಸದೊಂದಿಗೆ, ಅನುಮಾನವನ್ನೂ ಹೊತ್ತು ತಂದಿತ್ತು. ಏಕೆಂದರೆ ಅವನು ರಾಕಾ.... ಹೆಸರು ರಾಜನಾಥ್ ಆದರೂ ಆತ ರಕ್ಕಸಾಧಿಪತಿ. ದಯೆ, ಕರುಣೆ, ಪ್ರೀತಿ, ಮಾನವೀಯತೆ ಎಂಬ ಪದಗಳು ಅವನ ಪ್ರಪಂಚದಲ್ಲೇ ಇಲ್ಲ. ಅವನ ಜಗವನ್ನು ಆಳುವುದು ಕೇವಲ ಮತ್ತು ಕೇವಲ ಕ್ರೌರ್ಯವೊಂದೇ. ಮನುಜ ರೂಪದಲ್ಲಿ ಇರುವುದೊಂದನ್ನು ಬಿಟ್ಟರೆ ಮನುಜನೆನಿಸಿಕೊಳ್ಳುವ ಯಾವುದೇ ಲಕ್ಷಣಗಳಿಲ್ಲದ ಸೈತಾನ ಅವನು. ಅದಕ್ಕೇ ಅವನ ಸುದ್ದಿಗೆ ಹೋಗಲೇಬೇಡವೆಂದು ಅಶ್ರಫ್ ನನ್ನನ್ನು ಪದೇಪದೇ ಎಚ್ಚರಿಸುವುದು. ಇಂತಹ ರಾಕಾ ನನ್ನನ್ನು ಭೇಟಿಯಾಗಲು ಹುಡುಕಿಕೊಂಡು ಬಂದಿರುವ ಎಂದರೆ ಅನುಮಾನ ಪಡಬೇಕಾದದ್ದೇ ತಾನೇ...?

ಅದೊಂದು ಇಳಿಸಂಜೆಯಲ್ಲಿ ನಮ್ಮ ಬಿಡಾರದಿಂದ ಅನತಿ ದೂರದಲ್ಲಿ ಬಂದು ನಿಂತಿತ್ತು ಕಡುಗಪ್ಪು ಕಾಂಟೆಸ್ಸಾ. ರಾಕಾನ ಅಚ್ಚುಮೆಚ್ಚಿನ ಕಾರದು. ಅದು ಬಂದ ಮೇಲೆ ಅವನ ಅದೃಷ್ಟ ಖುಲಾಯಿಸಿದ್ದಂತೆ, ಅವನು ಮುಟ್ಟಿದ್ದೆಲ್ಲಾ ಚಿನ್ನವೇ ಅಂತೆ..... ಹೀಗೆ ಏನೇನೋ ಅಂತೆ ಕಂತೆಗಳು ಚಾಲ್ತಿಯಲ್ಲಿವೆ ಆ ಕಾರಿನ ಬಗ್ಗೆ....... ಸಿರಿವಂತರಿಗೆ ಕಾರುಗಳೂ ಅದೃಷ್ಟವನ್ನು ಹೊತ್ತುತರುತ್ತವೆ. ಅದರ ಬಗ್ಗೆ ಪ್ರತೀತಿಗಳು ಸೃಷ್ಟಿಯಾಗುತ್ತವೆ. ಆದರೆ ನಿಜವಾಗಿಯೂ ಅದೃಷ್ಟ ಆ ಕಾರಿನದ್ದೇ...? ಖಂಡಿತಾ ಅಲ್ಲ.... ನಮ್ಮಂತಹವರ ರಕ್ತ ಹಿಂಡಿ ಬಸಿದು, ನಮ್ಮನ್ನು ದುರಾದೃಷ್ಟವಂತರನ್ನಾಗಿಸಿ ಪಡೆದ ಅದೃಷ್ಟ ಅದು. ಒಂದರ್ಥದಲ್ಲಿ ಅದು ನಮ್ಮ ಅದೃಷ್ಟ.... ನಮ್ಮಿಂದ ಕಿತ್ತುಕೊಂಡ ನಮ್ಮದೇ ಅದೃಷ್ಟ ಅದು..... ಯೋಚಿಸಿದಷ್ಟೂ ಕೋಪದ ತಾಪಕ್ಕೆ ಮೈ ಬಿಸಿಯೇರುತ್ತದೆ ನನಗೆ. 

ಅವನ ಕಾರು ಕಂಡದ್ದೇ, ಕೊಳೆತ ಕಳೇಬರಕ್ಕೆ ಮುತ್ತಿರುವ ಕ್ರಿಮಿಗಳಂತೆ ರಾಕಾನ ಚೇಲಾಗಳೆಲ್ಲರೂ ಎದುರು ಹಾಜರಾಗಿ ಕೈ ಕಟ್ಟಿ ನಿಂತರು ಅವನಾಜ್ಞೆ ಕಾಯುತ್ತಾ. ಅಷ್ಟರಲ್ಲಿ ಕಾರಿನ ಹಿಂಬದಿಯ ಗಾಜು ಇಳಿಯಿತು. ಅವರಲ್ಲೊಬ್ಬನನ್ನು ಸನ್ನೆಯಿಂದ ಬಳಿಕರೆದು ಅದೇನು ಹೇಳಿ ಕಳಿಸಿದನೋ, ಅವನು ಬಂದು ನನ್ನ ಕರೆದ. ನನಗೇನು ಭಯವೇ?? ಸೀದಾ ಹೋಗಿ ಅವನೆದುರು ನಿಂತು ಅವನನ್ನೇ ದಿಟ್ಟಿಸಿದೆ. ಅಹಂಕಾರ ಬೆರೆತ ಕಣ್ಣುಗಳಲ್ಲಿ ಚಂಚಲತೆ ಬಹಳವಿದೆ ಎನಿಸಿತು ನನಗೆ. 

ಸುತ್ತ ನಿಂತಿದ್ದವರಿಗೆ ಕಣ್ಣಿನಲ್ಲೇ ಅಲ್ಲಿಂದ ತೆರಳುವಂತೆ ಸಂಜ್ಞೆ ನೀಡಿದನೇನೋ, ಡ್ರೈವರ್ ಸಮೇತ ಎಲ್ಲರೂ ಅಲ್ಲಿಂದ ತೆರಳಿದರು. ಕಾರಿನಿಂದ ಕೆಳಗಿಳಿದವನ ಗರಿಮುರಿ ಕೋಟು, ಮಿರಿಮಿಂಚುವ ಬೂಟುಗಳು ಅವನ ದೌಲತ್ತನ್ನು ತೋರಿಸಿಕೊಳ್ಳುವುದಕ್ಕೇನೋ.... ಇಳಿದು ಕಾರಿಗೊರಗಿದವ ಜೇಬಿಂದ ಸಿಗಾರ್ ತೆಗೆದವ ನನ್ನತ್ತ ಚಾಚಿದ. ಬೇಡವೆಂದು ತಲೆಯಾಡಿಸಿ ಸನ್ನೆ ಮಾಡಿದೆ. ನನ್ನನ್ನೇ ನೋಡುತ್ತಾ ಸಿಗಾರ್ ತುಟಿಗಿಟ್ಟು ಲೈಟರ್ ಸೋಕಿಸಿ ಹೊಗೆಯುಗುಳತೊಡಗಿದ. ನನ್ನನ್ನು ಪರಿಶೀಲನಾತ್ಮಕವಾಗಿ ಅಳೆಯುವವನಂತೆ ಕಂಡ. ನಾನಂತೂ ಅವನಿಂದ ನೋಟ ತಪ್ಪಿಸಲಿಲ್ಲ. ನೋಟ ತಪ್ಪಿಸುವ ಅಗತ್ಯವಾದರೂ ಏನು? ಕೊಂಚ ಸಮಯ ಬಿಟ್ಟು,

"ತೋಮಾರ್ ನಾಮ್ ಕೀ?" ಎಂದ.

ಎಲಾ ಇವನಾ.....? 
ಹೆಸರೇ ಗೊತ್ತಿಲ್ಲದೇ ನನ್ನನ್ನೇ ಹುಡುಕಿ ಮಾತಾಡಲು ಬಂದಿರುವನಾ? ಖಂಡಿತಾ ಇಲ್ಲ. ಗೊತ್ತಿದ್ದೂ ಕೇಳುತ್ತಿರುವನು..... ಸಿಟ್ಟು ಏರುತ್ತಲೇ ಇತ್ತು. ಆದರೇನು? ತೋರಿಸಿಕೊಳ್ಳುವಂತಿರಲಿಲ್ಲ. ಕೋಪವನ್ನು ನಿಯಂತ್ರಿಸುತ್ತಲೇ,

"ಆರ್.ಡಿ" ಎಂದೆ.

"ಆರ್.ಡಿ ಬೋಲೇ ತೋ...?" 

"ರುದ್ರ್ ದೇವ್" ಎಂದೆ ದನಿ ಏರಿಸುತ್ತಾ.

"ರುದ್ರ್ ..... ಧಮ್ದಾರ್ ನಾಮ್ ಹೈ. ಸುನಾ ಹೇ ಕೀ ಬಹುತ್ ಗುಸ್ಸೇವಾಲಾ ಹೈ ತೂ?" ಅವನ ಮಾತಿಗೆ ಪ್ರತಿಕ್ರಿಯಿಸಲಿಲ್ಲ ನಾನು. ಹೌದು.... ಕೋಪಿಷ್ಟನೇ ನಾನು. ಮುಂಚಿನಿಂದಲೂ ಇದ್ದ ಕೋಪ, ಸೆಡವು ಈಗೀಗ ಇನ್ನಷ್ಟು ಹೆಚ್ಚಾಗಿತ್ತು. 'ಅದ್ಯಾವ ಘಳಿಗೆಯಲ್ಲಿ ನಿನಗೆ ರುದ್ರನೆಂದು ಹೆಸರಿಟ್ಟೆನೇನೋ.... ಹೆಸರಿಗೂ ಮೀರಿದ ರೌದ್ರತೆ ತೋರುವೆ ನೀನು' ಎಂದು ಬಿರ್ಜೂ ಚಾಚ ಯಾವಾಗಲೂ ಹೇಳುತ್ತಿರುತ್ತಾನೆ. ಆದರೆ ಪರಿಸ್ಥಿತಿಗಳ ಕಾರಣದಿಂದ ಅನಿವಾರ್ಯವಾಗಿ ಶಾಂತನಾಗಿರುವೆ ನಾನು. ಒಮ್ಮೆ ಈ ರಾಕಾನ ವ್ಯವಹಾರಗಳ ಗುಟ್ಟು ತಿಳಿಯಲಿ... ಆಮೇಲೆ ಇವನ ಕಾಂಟೆಸ್ಸಾ ಕಾರಿನ ಅದೃಷ್ಟವೂ ಇವನನ್ನು ಕಾಯಲಾರದು.... ಮುಷ್ಟಿ ಬಿಗಿಯಾಗಿಸಿ ಯೋಚಿಸಿದೆ.

"ಅರೇ ರುದ್ರ್, ಇತನಾ ಗುಸ್ಸಾ ಮತ್ ಕರ್. ದೇಖ್..... ಆಜಾ ಇದರ್. ಯೇ ಮೇರೇ ಲಡ್ಕೋ ಸೇ ಬಹುತ್ ಸುನಾ ಹೈ ತೇರೇ ಬಾರೇ ಮೆ. ತೂ ಶೇರ್ ಹೈ ಶೇರ್...... ಅಗರ್ ತೂ ಮೇರಾ ಬಾತ್ ಮಾನೇಗಾ ತೋ ಆಜ್ಸೇ ತೇರಾ ಸ್ಟಾರ್ ಬದಲೇಗಾ. ಮೈ ತೇರೇ ಸಾಥ್ ಏಕ್ ಡೀಲ್ ಕೇ ಬಾರೆ ಮೇ ಬಾತ್ ಕರನೇ ಆಯಾ ಹೂಂ" ಅವನ ಮಾತು ಕೇಳಿದ್ದೇ ಇವನಿಗೆ ನನ್ನಿಂದ ಏನೋ ಆಗಬೇಕಾಗಿದೆ ಎಂಬುದು ಸ್ಪಷ್ಟವಾಗಿತ್ತು ನನಗೆ‌.

ಅವನೊಂದು ಡೀಲ್ ಹೊತ್ತು ತಂದಿದ್ದ. ಅವನ ಅಡಿಯಲ್ಲಿ ಕೆಲಸಗಾರನಾಗಿರುವ ಬದಲು, ಅವನ ವ್ಯವಹಾರಗಳಲ್ಲಿ ನೇರವಾಗಿ ಕೈಜೋಡಿಸುವ ಡೀಲ್ ಅದು. ನನ್ನ ಬುದ್ಧಿ ಹಾಗೂ ಕುಶಾಗ್ರಮತಿಯಿಂದ ಆಕರ್ಷಿತನಾಗಿದ್ದ ರಾಕಾ. 'ತನ್ನೆಲ್ಲಾ ವ್ಯವಹಾರಗಳಲ್ಲಿ ನೆರವಾಗಿ, ತಾನು ಹೇಳುವ ಎಲ್ಲಾ ಕೆಲಸಗಳನ್ನು ಮರುಪ್ರಶ್ನೆಯಿಲ್ಲದೇ ಮಾಡಬೇಕು, ಆದರೆ ಯಾವುದೇ ವಿಚಾರವನ್ನೂ ಕೆದಕುವಂತಿಲ್ಲ. ಕಣ್ಮುಂದೆ ಕೊಲೆ ನಡೆದರೂ ಕುರುಡನಂತಿರುವಷ್ಟು ಸ್ವಾಮಿನಿಷ್ಠೆ ಇರಬೇಕು. ಈ ಮಾತಿಗೆ ತಪ್ಪಿದರೆ ಸಾವು....' ಎಂಬುದು ಅವನ ಡೀಲ್. 

ಇಂತಹದೊಂದು ಪ್ರಸ್ತಾಪ ತಂದ ರಾಕಾನಿಗೆ ಖಂಡಿತಾ ನನ್ನ ಇರಾದೆಗಳ ಅರಿವಿರಲಿಲ್ಲ. ಅರಿವಿದ್ದಿದ್ದರೆ ಅಶ್ರಫ್ ಹೇಳಿದಂತೆ ಅದೇ ನನ್ನ ಬದುಕಿನ ಕೊನೆಯ ದಿನವಾಗುತ್ತಿತ್ತು. ನನಗೆ ಈ ಡೀಲ್ ನಿರಾಕರಿಸಲು ಕಾರಣವೇ ಇರಲಿಲ್ಲ. ಮರುಮಾತಾಡದೇ ರಾಕಾನೊಂದಿಗೆ ಕೈ ಮಿಲಾಯಿಸಿದ್ದೆ..... ನನ್ನ ಗುರಿ ತಲುಪಲು ನೇರವಾದ ರಾಜಮಾರ್ಗವನ್ನು ತಯಾರಿಸಿ ಕೊಟ್ಟಿರುವ ಅರಿವಿಲ್ಲದೇ 'ಯಾರನ್ನಾದರೂ ಮಣಿಸಬಲ್ಲೆ' ಎಂಬ ಅದೇ ಗರ್ವದ ನಗು ನಕ್ಕಿದ್ದ ರಾಕಾ. ಅವನ ಈ ಒಂದು ನಿರ್ಧಾರ ಸರಿಯಿತ್ತೋ ಇಲ್ಲಾ ಅದೇ ಅವನನ್ನು ಅವಸಾನದೆಡೆಗೆ ಕೊಂಡೊಯ್ಯಲಿತ್ತೋ ಕಾಲವೇ ಉತ್ತರಿಸಬೇಕಿತ್ತು.

ಆದರೆ ನಾನು ಈ ಡೀಲ್ ಒಪ್ಪಿಕೊಂಡಿದ್ದು ಅಶ್ರಫ್ ಹಾಗೂ ಬಿರ್ಜೂ ಚಾಚಾನಿಗೆ ಒಂದಿನಿತೂ ಹಿಡಿಸಲಿಲ್ಲ. ನನ್ನ ಇರಾದೆಗಳ ಸುಳಿವಿದ್ದ ಅಶ್ರಫನಿಗೆ ನನ್ನ ಜೀವದ ಬಗ್ಗೆ ಭಯವಿತ್ತು, ನನ್ನ ಸಲುವಾಗಿ ತೀರದ ಕಾಳಜಿಯಿತ್ತು. ನನಗೆ ತಿಳಿಹೇಳಲು ಪ್ರಯತ್ನಿಸಿದ, ಬೈದು ಗಲಾಟೆ ಮಾಡಿದ, ಕೆಲವು ಸಮಯ ಮಾತನಾಡುವುದನ್ನೂ ನಿಲ್ಲಿಸಿದ. ಅವನ ನೋವು, ಕಾಳಜಿ, ಭಯ ನನಗೆ ಅರಿವಾಗಲಿಲ್ಲವೆಂದಲ್ಲ. ಆದರೆ ಯಾವುದೇ ಕಾರಣಕ್ಕೂ ತಾನಾಗಿ ಅರಸಿಬಂದ ಈ ಅವಕಾಶವನ್ನು ಕೈಚೆಲ್ಲಲು ನಾನು ತಯಾರಿರಲಿಲ್ಲ. ನಿಮಗನಿಸಬಹುದು..... ರಾಕಾನ ದರ್ಪ, ದೌಲತ್ತು, ಅಧಿಕಾರಗಳನ್ನು ಕೈವಶ ಮಾಡಿಕೊಳ್ಳುವ ಹಪಾಹಪಿಗೆ ನಾನು ಹೀಗೆಲ್ಲಾ ಮಾಡುತ್ತಿದ್ದೇನೆ ಎಂದು. ನಿಜವಲ್ಲ ಅದು..... 

ಈ ಜಗದಲ್ಲಿ ಕಣ್ತೆರೆದ ಘಳಿಗೆಯಿಂದ ಹೀಗೇ ಬದುಕಿರುವೆ ನಾನು. ಚಿಲ್ಲರೆ ಕಾಸಿಗಾಗಿ ಕಂಡವರೆದುರು ಕೈಚಾಚುವಾಗ, ತುತ್ತು ಕೂಳಿಗಾಗಿ ರಾಕಾನಂತಹವರ ಮರ್ಜಿ ಕಾಯುವಾಗ ಅದೆಷ್ಟು ಹಿಂಸೆಯಾಗುತ್ತದೆಯೆಂಬ ಅರಿವು ನಿಮಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಅತ್ಯಂತ ಉನ್ನತವಾದುದು ಅವನ ಆತ್ಮಸಮ್ಮಾನ. ಆ ಆತ್ಮಾಭಿಮಾನವನ್ನೇ ಕಳೆದುಕೊಂಡು ಇನ್ನೊಬ್ಬರೆದುರು ಕೈಚಾಚುವಾಗ ಆಂತರ್ಯದಲ್ಲಾಗುವ ನೋವು ಅಪಾರ. ಇಷ್ಟು ವರ್ಷಗಳ ಬದುಕಿನಲ್ಲಿ ನಾನು, ಅಶ್ರಫ್, ಬಿರ್ಜೂಚಾಚ.... ನಮ್ಮಂತಹ ಲಕ್ಷಾಂತರ ಮಂದಿ ಅನುಭವಿಸಿರುವ ಯಾತನೆ ನಮ್ಮ ಗ್ರಹಿಕೆಗೆ ಮಾತ್ರ ಬರುವಂತಹದ್ದು. ಮುಂದೆಯೂ ಹೀಗೇ ಬದುಕುವ ಆಸೆಯಿರಲಿಲ್ಲ ನನಗೆ. ನಮ್ಮ ಬದುಕು ಇದೇ ಬಿಡಾರದಲ್ಲೇ ಕೊನೆಯಾಗಕೂಡದು. ನಾವು ಇಲ್ಲಿಂದ ಹೊರಬೀಳಬೇಕು. ಈ ಪರಿಮಿತಿಗಳನ್ನು ದಾಟಿ ಬದುಕಬೇಕು. ನಾವು ಬೆಳೆಯಬೇಕು. ನಮಗಾಗಿ ಬಾಳಬೇಕು. ಆತ್ಮಸಮ್ಮಾನದಿಂದ ಬದುಕಬೇಕು. ಆತ್ಮಾಭಿಮಾನದಿಂದ ಸಮಾಜದಲ್ಲಿ ತಲೆಎತ್ತಿ ಬದುಕಬೇಕು. 

ಇದೆಲ್ಲಾ ವಿಚಾರಗಳನ್ನು ಹೇಳಿದರೆ ಅಶ್ರಫ್ ನಕ್ಕು ಸುಮ್ಮನಾಗುತ್ತಿದ್ದನಷ್ಟೇ. ಹಾಗಾಗಿ ಅವನ ಕೋಪವನ್ನು ಎದುರಿಸಿಯೂ ನಾನು ಈ ಡೀಲಿನ ವಿಚಾರದಲ್ಲಿ ತಟಸ್ಥನಾಗಿದ್ದೆ. ಅವನೂ ಒಂದಿಷ್ಟು ದಿನ ಎಲ್ಲಾ ವಿಧದಲ್ಲೂ ನನ್ನ ನಿರ್ಧಾರ ಬದಲಿಸಲು ಪ್ರಯತ್ನಿಸಿ ಸುಮ್ಮನಾದ‌. ಆದರೆ ಅದೇಕೋ ಬಿರ್ಜೂ ಚಾಚ ಮಾತ್ರ ಬಹಳ ಖೇದಗೊಂಡಿದ್ದ. "ನಕ್ಕೋ ರುದ್ರ್ ಬೇಟಾ... ಏ ಸಬ್ ಛೋಡ್ ದೋ. ಏ ಲೋಗ್ ಗಲತ್ ಹೈ. ಇನಕೇ ಇರಾದೇ ಭೀ ಗಲತ್. ಭಗವಾನ್ ಪರ್ ಭರೋಸಾ ರಕೋ..." ಎಂಬುದು ಆತನ ನಿತ್ಯದ ಪರಿಪಾಠವಾಯ್ತು. ನನ್ನ ಕಂಡಾಗಲೆಲ್ಲಾ ಇದನ್ನೇ ಹೇಳುತ್ತಿದ್ದ. ನನ್ನ ಮಾತನ್ನು ಒಪ್ಪುತ್ತಲೇ ಇರಲಿಲ್ಲ ಅವನು. 'ನೀನು ಮಾಡುತ್ತಿರುವುದು ಒಂದಿನಿತೂ ಸರಿಯಿಲ್ಲ. ನೀನು ಆಯ್ದುಕೊಂಡಿರುವ ಹಾದಿ ಕೇವಲ ಏಕಮುಖವಾದುದು. ನೀನು ಒಳಹೋಗಬಲ್ಲೆಯಷ್ಟೇ. ಮುಂದೆ ನೀನೆಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಹಿಂದಿರುಗಲಾರೆ. ಇದೊಂದು ಸುಳಿ. ಮೇಲೆ ಬರಲು ಪ್ರಯತ್ನಿಸಿದಷ್ಟೂ ಆಳಕ್ಕೆಳೆದು ನುಂಗುವ ವಿಷವರ್ತುಲ. ಒಂದು ವೇಳೆ ಹೇಗೋ ಶತಪ್ರಯತ್ನ ಮಾಡಿ ಹಿಂದಿರುಗಿದೆ ಎಂದಾದರೂ ಆ ವೇಳೆಗಾಗಲೇ ಈ ಸುಳಿ ನಿನ್ನ ಬದುಕನ್ನು, ಅಸ್ತಿತ್ವವನ್ನೂ ಸರ್ವನಾಶಗೊಳಿಸಿರುತ್ತದೆ. ನಿನ್ನನ್ನು ಈ ಲೋಕ, ಸಮಾಜ ನೋಡುವ ನೋಟವೇ ಬೇರೆ ಇರುತ್ತದೆ.....' ಎಂಬರ್ಥದ ಮಾತುಗಳನ್ನು ಪದೇಪದೇ ಹೇಳುತ್ತಿದ್ದ. ಅಶ್ರಫಿನಂತೆ ಚಾಚಾನ ಪ್ರಯತ್ನಗಳನ್ನು ನಿಲ್ಲಿಸಲಾಗಲಿಲ್ಲ ನನಗೆ. ಕಡೆಗೆ ನಾನೇ ನಿರ್ಲಿಪ್ತನಾದೆ. ಅವನು ಹೇಳಿದ್ದನ್ನೆಲ್ಲಾ ಕೇಳುತ್ತಿದ್ದೆನೇ ಹೊರತು ಆಗ ಅದೆಂದೂ ನನ್ನ ಮನಸ್ಸಿನಾಳಕ್ಕೆ ತಲುಪಲೇ ಇಲ್ಲ...... 

ಆದರೆ ಬದುಕಿನಲ್ಲಿ ಮುಂದೊಂದು ಸಮಯ ಬರುವುದಿತ್ತು. ಚಾಚಾ ಹೇಳಿದ ಮಾತುಗಳೆಲ್ಲವೂ ಆಗ ನನಗೆ ಮನನವಾಗಲಿತ್ತು. ಸಾಗಿಬಂದ ಹಾದಿಯನ್ನು ವಿಮರ್ಶಿಸುವ ಆ ಘಳಿಗೆಯಲ್ಲಿ ಸಮಯ ನನ್ನ ಪಾಲಿಗಿರುವುದಾ??? 

ಗೊತ್ತಿಲ್ಲ.

ಸಧ್ಯದ ಮಟ್ಟಿಗೆ ಈ ಡೀಲ್ ನನ್ನ ಪಾಲಿನ ಜಾಕ್ ಪಾಟ್. ಈ ಒಂದು ಡೀಲ್ ರಾಕಾನ ಸಾಮ್ರಾಜ್ಯದ ಒಳಹೊರಗುಗಳನ್ನು ನನ್ನ ಮುಂದೆ ಎಳೆಎಳೆಯಾಗಿ ತೆರೆದಿಟ್ಟಿತು. ಜನ್ಮದಾರಭ್ಯ ಇದೇ ಪರಿಸರದಲ್ಲಿ ಉಸಿರಾಡಿದವನು ನಾನು. ಈ ಲೋಕದಲ್ಲಿ, ರಾಕಾನಂತಹ ರಕ್ಕಸನ ಸಾಮ್ರಾಜ್ಯದಲ್ಲಿ ಅಸ್ತಿತ್ವವನ್ನು ಗಳಿಸಿಕೊಳ್ಳಲು ಏನು ಮಾಡಬೇಕೆಂದು ನನಗೆ ತಿಳಿಯದೇ....? ನಾನು ಮಾಡಿದ್ದಾದರೂ ಏನು....? ರಾಕಾ ಹೇಳಿದ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದ್ದು. ಅವನ ಎಲ್ಲಾ ಷರತ್ತುಗಳನ್ನು ಒಂದಿನಿಂತೂ ಲೋಪವಿಲ್ಲದಂತೆ ಪಾಲಿಸಿದ್ದು. ಅವನ ಆಜ್ಞೆಗಳನ್ನು ಪ್ರತಿಜ್ಞೆಯಂತೆ ಭಾವಿಸಿ ನಡೆದದ್ದು. ಇದಿಷ್ಟೇ ಸಾಕಾಯ್ತು ರಾಕಾನ ಭರವಸೆ ಗೆಲ್ಲಲು. ಅವನನ್ನು ನಂಬಿಕೆಯ ಕಡಲಲ್ಲಿ ಮುಳುಗಿಸಿದೆ ನಾನು. ಸ್ವಾಮಿನಿಷ್ಠತೆಗೆ ಅನ್ವರ್ಥವೇ ನಾನು ಎಂಬಷ್ಟು ಭರವಸೆಯನ್ನು ಗಳಿಸಿಕೊಂಡುಬಿಟ್ಟೆ. ನಾನು ರಾಕಾನ ವಿಶ್ವಾಸ ಗಳಿಸುತ್ತಾ ಹೋದಂತೆಲ್ಲಾ ನನ್ನ ಮನದ ಪ್ರಶ್ನೆಗಳಿಗೆ ಉತ್ತರಗಳು ತಾನೇ ತಾನಾಗಿ ಅನಾವರಣಗೊಳ್ಳುತ್ತಾ ಹೋದವು. ಹಾಗೇ ರಾಕಾ ಎಂಬ ಸೈತಾನನ ಸಾಮ್ರಾಜ್ಯದ ಒಳಗುಟ್ಟುಗಳೂ......

ಹಾಗೆ ಅನಾವರಣಗೊಂಡ ಸತ್ಯಗಳು ನನ್ನ ಊಹೆಗೂ ಮೀರಿದಷ್ಟು ಭಯಂಕರವಾಗಿದ್ದವು. ಬದುಕಿನ ಬಗ್ಗೆ ಹೇವರಿಕೆ ಹುಟ್ಟಿಸುವಷ್ಟು ಭೀಭತ್ಸವಾಗಿದ್ದವು. ಈ ಲೋಕದಲ್ಲಿ ಪ್ರಾಣಕ್ಕೆ ಬೆಲೆಯೇ ಇರಲಿಲ್ಲ. ಪ್ರಾಣಕ್ಕೇ ಇಲ್ಲದ ಬೆಲೆ ಮಾನಕ್ಕೆಲ್ಲಿಂದ ಬಂದೀತು? ಪ್ರಾಣ, ಮಾನಗಳು ರಾಕಾನ ಅಂಗಡಿಯಲ್ಲಿ ಅತೀ ಹೆಚ್ಚು ಬಿಕರಿಯಾಗುವ ಸರಕುಗಳಾಗಿತ್ತು. ಸುರಿವ ರಕ್ತಕ್ಕೆ, ಹರಿವ ಕಣ್ಣೀರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದ ಜಗತ್ತೊಂದು ನನ್ನ ಕಣ್ಣೆದುರಿಗಿತ್ತು.....

ಮತ್ತು ನಾನು ರಾಕಾನೊಂದಿಗೆ ಕೈ ಮಿಲಾಯಿಸಿ ಆ ಜಗತ್ತಿನ ಪಾಲುದಾರನಾಗಿದ್ದೆ........

ಪ್ರಾಣ, ಮಾನಗಳ ಹರಣಕ್ಕೆ, ಹರಿವ ರುಧಿರ ಧಾರೆಗೆ, ಎದೆಬಿರಿವ ಆಕ್ರಂದನಕ್ಕೆ, ಕಣ್ಣೀರ ಹನಿಗಳ ಪರಿತಾಪಕ್ಕೆ, ಕೊನೆಯಿಲ್ಲದ ನಿಟ್ಟುಸಿರ ಶಾಪಗಳಿಗೆ.........

ನಾನೂ ಎಲ್ಲೋ ಪರೋಕ್ಷವಾಗಿ ಕಾರಣಕರ್ತನಾಗಿದ್ದೆನಲ್ಲವೇ.......?

ಬಿರ್ಜೂ ಚಾಚಾನ ನುಡಿಗಳಲ್ಲಿ ಇದೇ ಸತ್ಯ ಅಂತರ್ಗತವಾಗಿತ್ತೇ......?

ಆಗ ನಾನು ಆ ಬಗ್ಗೆ ಯೋಚಿಸಲಿಲ್ಲ. ಆಗ ನನ್ನ ಲಕ್ಷ್ಯ
ಒಂದೇ..... ರಾಕಾನ ದಂಧೆಗಳ ಒಳಸುಳಿಯ ಬಗ್ಗೆ ತಿಳಿಯಬೇಕು. ಹಾಗೆ ತಿಳಿದುಕೊಂಡ ನಂತರದಲ್ಲಿ ಏನು ಮಾಡಬೇಕೆಂಬ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ.... 

ನಾನಾಗ ಕೇವಲ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಮಾತ್ರ ಆಸಕ್ತನಾಗಿದ್ದೆ. ರಾಕಾನ ಜೊತೆ ಕೈ ಜೋಡಿಸಿದ ನಂತರ ನನ್ನ ಪ್ರಶ್ನೆಗಳಿಗೆ ಉತ್ತರಗಳು ಅನಾಯಾಸವಾಗಿಗಿ ದೊರಕುತ್ತಾ ಹೋದವು.....

ನಾನು ಢಾಕಾಕ್ಕೆ ಕೊಂಡೊಯ್ಯುತ್ತಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಏನಿರುತ್ತಿತ್ತು?, ಗುಂಪಿನಿಂದ ನಾಪತ್ತೆಯಾಗುವ ಜನರು ಎಲ್ಲಿಗೆ ಹೋಗುತ್ತಾರೆ?, ರಾತ್ರಿ ಹೋಗಿ ನಸುಕಿಗೆ ವಾಪಾಸಾಗುವವರ ಅಳಲೇನು?, ಢಾಕಾದಿಂದ ಕರೆತರುವ ಹೆಣ್ಣುಗಳು ಏನಾಗುತ್ತಾರೆ.......?

ಎಲ್ಲಾ ಪ್ರಶ್ನೆಗಳಿಗೂ ಉತ್ತರವೇನೋ ದೊರಕಿತ್ತು...... ಆದರೆ ದೊರೆತ ಉತ್ತರವನ್ನು ಅರಗಿಸಿಕೊಳ್ಳುವ ಚೈತನ್ಯವಿತ್ತೇ ನನ್ನಲ್ಲಿ.......?

ಸಶೇಷ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ