ಶನಿವಾರ, ಸೆಪ್ಟೆಂಬರ್ 12, 2020

ಅಗ್ನಿ ತರಂಗಿಣಿ 3

ಅಗಲೇ ಜನಮ್ ಮೋಹೇ ಬಿಟಿಯಾ ನಾ ಕೀಜೋ…...

ಹೆರಿಗೆಯೆಂದರೆ ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ ಬಲ್ಲವರು. ಕೂಸ ಹಡೆಯುವಾಗ ತಾಯಿ ಸತ್ತು ಬದುಕುವಳಂತೆ. ನನ್ನ ಈ ಭೂಮಿಗೆ ತರುವಾಗ ನನ್ನ ಮಾಯಿ ಸತ್ತು ಬದುಕಿದಳಾ ಎಂಬುದು ಮುಂದೆ ನಿಮಗೇ ತಿಳಿಯುತ್ತದೆ.... ಆದರೆ ನಾನು ಮಾತ್ರ ಅವಳೊಡಲಿಗೆ ಬಿದ್ದ ಕ್ಷಣದಿಂದಲೇ ಮರಣದೊಂದಿಗೆ ಸೆಣಸುತ್ತಲೇ ಜೀವಿಸಿದ್ದೆ. ನನ್ನ ಪಾಡು ನೋಡಿ ಮರಣದ ಹೃದಯವೇ ದ್ರವಿಸಿತೇನೋ.... 
ಮರಣವೇ ಕರುಣೆದೋರಿ ದಯೆ ಪಾಲಿಸಿದ ಜನನದಂತೆ ನಾನು ಹುಟ್ಟಿದೆ....

'ಹುಟ್ಟೆಂದರೆ ಸಂಭ್ರಮದ ಹಬ್ಬ. ಅದಕ್ಕೇಕೆ ಇಷ್ಟೊಂದು ಜಂಜಾಟ......?' ಎಂಬ ಪ್ರಶ್ನೆ ಸುಳಿದಾಡಬಹುದು ನಿಮ್ಮ ಮಸ್ತಿಷ್ಕದಲ್ಲಿ. 

ಹೌದು......
ಹುಟ್ಟೆಂದರೆ ಸಂಭ್ರಮದ ಹಬ್ಬವೇ.......
ಆದರೆ ಎಲ್ಲರ ಪಾಲಿಗೂ ಅಲ್ಲವಲ್ಲ.......!!
ನಿಮ್ಮಲ್ಲಿ ಹೇಗೋ ಎಂತೋ....... ತಿಳಿದಿಲ್ಲ ನನಗೆ.......
ಆದರೆ ಇಲ್ಲಿ......?
ಇಲ್ಲಿ ಅದು ಕೇವಲ ಗಂಡಿನ ಪಾಲು........
ಜನನದ ಸಂಭ್ರಮ, ಸಂತೋಷ, ಹಬ್ಬ ಎಲ್ಲವೂ ಕೇವಲ ಅವನ ಹಕ್ಕು......

ನನಗೆ ಹುಟ್ಟು ಸಂಭ್ರಮವಲ್ಲ........
ಅದೊಂದು ಯುದ್ಧ.......
ಬದುಕಿಗಾಗಿ, ಜೀವಕ್ಕಾಗಿ ನನ್ನ ಯುದ್ಧ.....

ಏಕೆಂದರೆ ನಾನು ಮಗನಲ್ಲ........ 
ನಾನು ಮಗಳು.........!

ನಾನು ಹೆಣ್ಣು......!

ಈ ದೇಶದಲ್ಲಿ, ಅದರಲ್ಲೂ ನಾನು ಹುಟ್ಟಿದ ಪ್ರದೇಶದಲ್ಲಿ ಹೆಣ್ಣೆಂದರೆ.........

ಅಮ್ಮನ ಗರ್ಭದಲ್ಲೇ ಚಿವುಟಲ್ಪಡುವವಳು......!
ಜನಿಸಿದ ಮರು ಘಳಿಗೆಯೇ ಕೊಲ್ಲಲ್ಪಡುವವಳು....!
ಆರೋಗ್ಯ, ಓದು ಬರಹದ ಸೌಲಭ್ಯಗಳಿಂದ ವಂಚಿತಳಾಗುವವಳು.......!
ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯ ಹಕ್ಕನ್ನು ಕಳೆದುಕೊಂಡವಳು......!
ಸಣ್ಣ ವಯಸ್ಸಿಗೇ ಮದುವೆಯ ಬೇಡಿಯಿಂದ ಬಂಧಿಸಲ್ಪಡುವವಳು......!
ಪದೇ ಪದೇ ಗರ್ಭ ಧರಿಸಿ ಕಾಲಕ್ರಮೇಣ ಮಕ್ಕಳ ಹಡೆವ ಯಂತ್ರವಾಗಿ ಬದಲಾಗುವವಳು.....!
ಹಣಕ್ಕಾಗಿ ಮಾರಲ್ಪಡುವವಳು, ಉಪಯೋಗಕ್ಕಾಗಿ ಖರೀದಿಸಲ್ಪಡುವವಳು......!
ನಿರಂತರ ದೌರ್ಜನ್ಯಕ್ಕೆ ಒಳಗಾಗಿ ಕಡೆಗೊಮ್ಮೆ ಸಾಯುವವಳು......!

ಇವರ ಪಾಲಿಗೆ ಹೆಣ್ಣೆಂದರೆ ಹೊಣೆಗಾರಿಕೆ, ಬಾಧ್ಯತೆ, ಅಗತ್ಯವಿಲ್ಲದ ಹೊರೆ, ಪೋಷಿಸಲೊಂದು ಅನಗತ್ಯ ಉದರ..... ಅವಳು 'ಪರಾಯಾ ಧನ್'.....

ಅದೇ ಗಂಡು ಮಗ........? ಅವನು ಆಸ್ತಿ, ಸಂಪತ್ತು.... ಯೋಗ್ಯತೆ ಇರಲೀ ಇಲ್ಲದಿರಲೀ, ಅರಸನ ಪಟ್ಟ ಕಟ್ಟಿಟ್ಟ ಬುತ್ತಿ ಅವನಿಗೆ.... 'ಆಖಿ಼ರ್ ವಹೀ ತೋ ಹೇ, ಜೋ ವಂಶ್ ಕೋ ಆಗೇ ಬಢಾಯೇಗಾ....'. ಅವನಿಲ್ಲದಿದ್ದರೆ ಇವರ 'ರಾಜವಂಶ'ವೇ ಕೊನೆಯಾಗುವುದಲ್ಲ? ಇವರ ಚಿತೆಗೆ ಅವ ಕೊಳ್ಳಿ ಇಟ್ಟು ಕಳಿಸದಿದ್ದರೆ ಇವರಿಗೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವಲ್ಲ..... ಅವನು ತನ್ನ ಕೈಯಾರೆ ಶ್ರಾದ್ಧ ಮಾಡಿ ಪಿಂಡ ಪ್ರಧಾನಿಸದಿದ್ದರೆ ಇವರ ಆತ್ಮ ಮುಕ್ತಿ ಸಿಗದೇ ಅಂಡಲೆಯುವುದಿಲ್ಲವೇ.......?

ಅದೇ ಅವ'ಳು' ಹುಟ್ಟಿದರೇ.....? ಅವಳನ್ನು ಪೋಷಿಸಿ, ರಾಶಿ ಹಣ ಖರ್ಚು ಮಾಡಿ, ದಹೇಜ್ (ವರದಕ್ಷಿಣೆ) ನೀಡಿ ಮಾಯ್ಕಾದಿಂದ(ತವರಿನಿಂದ) ಸಾಗಹಾಕಬೇಕು. ಜೊತೆಗೆ ಮಗಳಿಂದ ವಂಶವೃದ್ಧಿಯಾಗದು, ಸ್ವರ್ಗ ಪ್ರಾಪ್ತಿಯಾಗದು, ಮುಕ್ತಿ ದೊರಕದು.......

ಸತ್ತ ಮೇಲೆ ಸಿಗುವ ಸ್ವರ್ಗದ ಆಸೆಗೆ ಅವಳ ಬದುಕನ್ನೇ ನರಕವಾಗಿಸುವುದು ನ್ಯಾಯವೇ....? ನಿಮ್ಮ ಆಸೆಗಳ ಪೂರೈಕೆಗೆ ಅವಳ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಹಕ್ಕು ನಿಮಗ್ಯಾರು ಕೊಟ್ಟಿದ್ದು? ಅವಳ ದಗ್ಧ ಮನದ ಸಂಕಟದ ಉರಿಶಾಪ ತಟ್ಟದೇ ಬಿಟ್ಟಿತೇ ನಿಮಗೇ.......?

ಈ ಪ್ರಶ್ನೆಗಳನ್ನು ಸ್ವಗತದಲ್ಲಿ ಅದೆಷ್ಟು ಬಾರಿ ಕೇಳಿಕೊಂಡಿರುವೆನೋ ನನಗೇ ತಿಳಿದಿಲ್ಲ....... ಈ ಜನರ ಅಮಾನುಷ ಕೃತ್ಯಗಳನ್ನು ನೊಡಿದಾಗಲೆಲ್ಲಾ ಇದೇ ಪ್ರಶ್ನೆಗಳು ಮತ್ತೆ ಮತ್ತೆ ನನ್ನ ತಲೆಯಲ್ಲಿ ಗಿರಕಿ ಹೊಡೆಯುವುದು......

ನನ್ನದು ಉತ್ತರಪ್ರದೇಶದ ಮುಜ್ಜಫರ್ ನಗರ ಜಿಲ್ಲೆಯ ಶಾಮ್ಲಿ ವಲಯದ ಭೈರೋನ್ ಗ್ರಾಮ. ಅದು ಉತ್ತರಪ್ರದೇಶ ಹಾಗೂ ಹರಿಯಾಣಾದ ಗಡಿಗ್ರಾಮ. ನಮಗೂ ಹರಿಯಾಣಕ್ಕೂ ಗಡಿಯಾಗಿದ್ದುದ್ದು ಸೊಬಗಿನಿಂದ ಬಳುಕುವ ಯಮುನೆ ಮಾತ್ರ. ಶಾಂತಳಾಗಿ ಹರಿಯುವ ಯಮುನೆಯನ್ನು ದಾಟಿದರೆ ಪಾಣಿಪತ್, ಕರ್ನಾಲ್, ಘರೌಂದಾ ಪಟ್ಟಣಗಳು ಹರಿಯಾಣಾ ರಾಜ್ಯಕ್ಕೆ ಸ್ವಾಗತ ಕೋರುತ್ತವೆ.

ಮುಜ್ಜಫರ್ ನಗರಕ್ಕೆ ದೊಡ್ಡ ಇತಿಹಾಸವೇ ಇದೆ. ತೈಮೂರ್ ಕಾಲದಿಂದ ಹಿಡಿದು, ಮೊಘಲರ ಆಳ್ವಿಕೆ, ಬ್ರಿಟೀಷರ ಕಾಲಘಟ್ಟದಲ್ಲೂ ಈ ನಗರ ಬಹಳ ಪ್ರಾಮುಖ್ಯತೆ ಪಡೆದಿತ್ತು.(ಸ್ವಾತಂತ್ರ್ಯ ಪೂರ್ವದಲ್ಲಿ ಮುಜ್ಜಫರ್ ನಗರ ಉತ್ತರ ಪಶ್ಚಿಮೀ ಪ್ರಾಂತ್ಯದ ಭಾಗವಾಗಿತ್ತು) ಹಲವು ಐತಿಹಾಸಿಕ ಸ್ಥಳಗಳೂ ಇಲ್ಲಿವೆ. ಗತದಲ್ಲಿ ಪ್ರಭಾವಿಯಾಗಿ ಮೆರೆದ ಈ ವಲಯ ವರ್ತಮಾನದಲ್ಲಿ ಕೊಲೆ, ಸುಲಿಗೆ, ದರೋಡೆ, ದೌರ್ಜನ್ಯಗಳಿಗೆ ಕುಖ್ಯಾತಿ ಪಡೆದಿದ್ದು ವಿಪರ್ಯಾಸವಲ್ಲದೇ ಮತ್ತೇನು? 

ಅದರಲ್ಲೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಇಲ್ಲಿ ಕೊನೆ ಮೊದಲಿಲ್ಲ. ಅವಳು ತಾಯ ಗರ್ಭದಲ್ಲಿ ಕುಡಿಯೊಡೆದಲ್ಲಿಂದಲೇ ಆರಂಭವಾಗುತ್ತದೆ ಅವಳ ಅಸ್ತಿತ್ವವನ್ನೇ ಅಳಿಸಿ ಹಾಕುವ ಹುನ್ನಾರ. ಆಗ ಭ್ರೂಣದ ಲಿಂಗ ಪತ್ತೆಗೆ ಸರಿಯಾದ ತಂತ್ರಜ್ಞಾನ ಇರಲಿಲ್ಲವಾದ್ದರಿಂದ ಹಳ್ಳಿ ಮದ್ದುಗಳ ಮೊರೆ ಹೋಗುತ್ತಿದ್ದರು ಗರ್ಭಪಾತಕ್ಕೆ. ಆದರೆ ಈ ಹಳ್ಳಿಮದ್ದುಗಳು ತಾಯಿಯ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆ ಹೆಚ್ಚಿದ್ದರಿಂದ ಜನನದವರೆಗೆ ಬದುಕುವ ಅದೃಷ್ಟವಿತ್ತು ಹೆಣ್ಣು ಕೂಸಿಗೆ.......

ಅಷ್ಟೇ........

ಹುಟ್ಟಿದ ಮರುಕ್ಷಣವೇ ಕೂಸಿನ ಹಣೆಬರಹ ನಿರ್ಧರಿತವಾಗುತ್ತದೆ.......

ಗಂಡಾದರೆ ಊರ ತುಂಬಾ ಮಲಾಯಿ ಮಕ್ಕನ್, ಚಂಚಂ ಮಿಠಾಯಿ ಹಂಚಿ ಸಂಭ್ರಮಾಚರಣೆ .........

ಅದೇ ಹೆಣ್ಣಾದರೆ......... !!
ಆ ಕಂದನ ಅಳು ಗಂಟಲಿನಿಂದ ಹೊರಬರುವ ಮೊದಲೇ ಉಸಿರು ನಿಲ್ಲುವುದು ವಾಡಿಕೆ....! ಹೆಣ್ಣು ಶಿಶು ಹತ್ಯೆ ಎಂಬುದು ಇಲ್ಲಿ ಬಕರೀ ಹಲಾಲ್ ಮಾಡುವಷ್ಟೇ ಸಾಮಾನ್ಯವಾದ ಸಂಗತಿ. 

ಇದು ಕೇವಲ ನನ್ನೂರು ಅಥವಾ ರಾಜ್ಯದ ಕಥೆಯಲ್ಲ. ನಮ್ಮ ಉತ್ತರಪ್ರದೇಶವೂ ಸೇರಿ ನೆರೆಯ ಹರ್ಯಾಣ, ಪಂಜಾಬ್, ರಾಜಸ್ಥಾನ, ಬಿಹಾರ........ ನನಗೆ ತಿಳಿದಿರುವಂತೆ ಈ ಪಂಚರಾಜ್ಯಗಳ ಇಡೀ ಹೆಣ್ಣು ಸಂತತಿಯ ವ್ಯಥೆ ಇದು.‌ ಅದರಲ್ಲೂ ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬಿನಲ್ಲಿ ಹೆಣ್ಣಾಗಿ ಜನಿಸುವ ನರಕ ಯಾವ ಜೀವಿಗೂ ಬರಬಾರದು. ಇಲ್ಲಿಯ ಸಮಾಜ ಆಕೆ ಹುಟ್ಟಿದ ಕ್ಷಣದಿಂದ ಹಿಡಿದು ಬದುಕಿನ ಪ್ರತಿಯೊಂದು ಮಜಲುಗಳಲ್ಲೂ ಹೆಣ್ಣನ್ನು ಬಹಳ ಕಠೋರ ಹಾಗೂ ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತದೆ. ಈ ಪುರುಷಪ್ರಧಾನ ಸಮಾಜದ ಕಣ್ಣಿನಲ್ಲಿ ಅವಳು ಕೇವಲ ಒಂದು ವಸ್ತುವಷ್ಟೇ..... 

ಅಂದಹಾಗೆ ಈ ಶಿಶು ಹತ್ಯೆ ಇಂದು ನಿನ್ನೆಯಿಂದ ಆರಂಭವಾದ ಪರಿಪಾಠವಲ್ಲ. ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದ, ತಲೆಮಾರಿನಿಂದ ತಲೆಮಾರಿಗೆ ಕಲಿಸಿಕೊಟ್ಟ 'ಅತ್ಯುತ್ತಮ' ಸಂಪ್ರದಾಯ.....

ರಾಜಮನೆತನಗಳ ಆಳ್ವಿಕೆಯ ಕಾಲದಲ್ಲೇ ಹೆಣ್ಣು ಶಿಶು ಹತ್ಯೆ ಈ ಪಂಚರಾಜ್ಯಗಳಲ್ಲಿ ಸಾಮಾನ್ಯವಾಗಿತ್ತು ಎನ್ನುತ್ತದೆ ಇತಿಹಾಸ. ಹೆಣ್ಣುಮಗು ಜನಿಸಿದೊಡನೇ ಒಂದೋ ಅದರ ಬಾಯಿಗೆ ದನದ ಸೆಗಣಿ ತುಂಬಿಸಿ ಇಲ್ಲವಾದರೆ ಮುಖವನ್ನು ಹಾಲಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸುವ ವಿಧಾನವನ್ನು ಅನುಸರಿಸಲಾಗುತ್ತಿತ್ತಂತೆ. ಆ ಸಮಯದಿಂದ ಹಿಡಿದು ಭಾರತ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಾಗಲೂ ಯಾವುದೇ ಎಗ್ಗಿಲ್ಲದೆ ಈ ಸಂಪ್ರದಾಯ ಮುಂದುವರೆಯಿತು. ಇದನ್ನು ತಡೆಯಲು ಬ್ರಿಟೀಷರು ೧೮೭೦ರಲ್ಲಿ ಹೆಣ್ಣು ಶಿಶು ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಫಲಕಾರಿಯಾಗಲಿಲ್ಲ. ಮುಂಚೆ ಹುಟ್ಟಿದೊಡನೆ ಹೆಣ್ಣು ಮಗುವನ್ನು ಕೊಲ್ಲುತ್ತಿದ್ದವರು ಈ ಕಾಯ್ದೆ ಬಂದ ನಂತರ ಒಂದೆರಡು ವರ್ಷ ಆ ಮಕ್ಕಳನ್ನು ಸರಿಯಾದ ಪೋಷಣೆ, ಕಾಳಜಿ ಇಲ್ಲದೇ ಸೊರಗಿ ಬದುಕಲು ಬಿಟ್ಟು ನಂತರ ಕೊಲ್ಲುವ ವ್ಯವಸ್ಥೆ ಆರಂಭವಾಯಿತಷ್ಟೇ.... ೧೯೦೬ರಲ್ಲಿ ಈ ಕಾನೂನು ಹಿಂಪಡೆಯಲ್ಪಟ್ಟ ನಂತರ ಮತ್ತೆ ಹಳೆಯ ಸಂಪ್ರದಾಯದ ಪುನರಾವರ್ತನೆ ಆರಂಭವಾಗಿದ್ದು ಈಗ ನನ್ನ ಜನನ ಕಾಲದವರೆಗೂ ಈ ಶಿಶು ಹತ್ಯೆ ಹಾಗೇ ಮುಂದುವರೆದಿದೆ ಎಂದರೆ ನಮ್ಮ ವ್ಯವಸ್ಥೆ ಅದೆಷ್ಟು ಕುಲಗೆಟ್ಟು ಹೋಗಿದೆ ಎಂದು ನೀವೇ ಅಂದಾಜಿಸಿ....

ಇಂತಹ ಪ್ರದೇಶದಲ್ಲಿ ಹಾಗೂ ಸಂದರ್ಭದಲ್ಲಿ ನಾನು ಜನಿಸಿದ್ದು. ನಮ್ಮದು ಹಿಂದೂ ರಜಪೂತ ಸಮುದಾಯದ ಚಾಂದೇಲ್ ಪಂಗಡ. ನನ್ನ ದಾದಾ ದಾದಿಗೆ ಇಬ್ಬರು ಗಂಡು ಮಕ್ಕಳು... ನನ್ನ ಬಾಬೂಜಿ ಹಿರಿಯವರು, ಚಾಚಾ ಎರಡನೇಯವರು. ಬಹುಶಃ ಇವರಿಗಿಂತ ಮುಂಚೆಯೋ ಇಲ್ಲಾ ನಂತರವೋ ಹೆಣ್ಣು ಕೂಸುಗಳು ಹುಟ್ಟಿ, ಬದುಕಿನ ಹೋರಾಟದಲ್ಲಿ ಸೋತು ಸತ್ತಿರಬಹುದು ಎಂಬುದು ನನ್ನ ಬಲವಾದ ಸಂಶಯ. ನಮ್ಮದು ಭೈರೋನ್ ಗ್ರಾಮದಲ್ಲಿನ ಕೆಲವೇ ಕೆಲವು ಅನುಕೂಲಸ್ಥ ಕುಟುಂಬಗಳಲ್ಲಿ ಒಂದು. ವಂಶಪಾರಂಪರ್ಯವಾಗಿ ಬಂದ ಜಮೀನು ಬಹಳವಿತ್ತು. ಗೇಹೂ(ಗೋಧಿ), ಚಾವಲ್(ಅಕ್ಕಿ), ಹಾಗೂ ಮಕ್ಕಾ(ಜೋಳ)ದ ಜೊತೆಗೆ ಗನ್ನಾ(ಕಬ್ಬು)ವನ್ನು ಬೆಳೆಯುವ ಜಮೀನು ಯಮುನೆಯ ದಯೆಯಿಂದ ಫಲವತ್ತಾಗಿತ್ತು. ಹಣಕಾಸಿನ ಕೊರತೆಯೇನೂ ಇರಲಿಲ್ಲ. ಅದಲ್ಲದೇ ದಾದಾ ಗ್ರಾಮದ ಪಂಚಾಯತ್ತಿನ ಸದಸ್ಯರಾಗಿದ್ದವರು. ಈಗ ಆ ಹುದ್ದೆ ಬಾಪೂವಿಗೆ ಲಭಿಸಿತ್ತು. ಮುಂದೆ 'ಸರಪಂಚ'ನಾಗುವ ಆಸಕ್ತಿ ಬೇರೆ... ಹಾಗಾಗಿ ನಮ್ಮ ಕುಟುಂಬವೆಂದರೆ ಎಲ್ಲರಿಗೂ ಗೌರವವೇ......

ಇನ್ನು ನನ್ನ ಮಾಯಿ ಮತ್ತು ಚಾಚಿಯ ಬಗ್ಗೆ ಏನು ಹೇಳಲಿ? ಹೇಳಲು ಉಳಿದಿರುವುದಾದರೂ ಏನು.....?

ಅವರಿಗೆ ಮಾತನಾಡುವ ಹಕ್ಕಿಲ್ಲ.... ಮನೆಯ ಗಂಡಸರು ಮತ್ತು ಅವರ ಸಾಸೂಮಾ ಹೇಳಿದ್ದಕ್ಕೆಲ್ಲಾ ಕುರಿಯಂತೆ ತಲೆಯಾಡಿಸುವುದು, ಏನಕ್ಕೂ ಎದುರಾಡದಿರುವುದು, ಮನೆಕೆಲಸವನ್ನೆಲ್ಲಾ ಅಚ್ಚುಕಟ್ಟಾಗಿ ಪೂರೈಸುವುದು, ತಮ್ಮ ಗಂಡಂದಿರ ದೈಹಿಕ ಕಾಮನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು, ಮಕ್ಕಳನ್ನು ಹೆರುವುದು, ಗಂಡಾದರೆ ಅವನ ಚಾಕರಿ ಮಾಡುವುದು, ಹೆಣ್ಣಾದರೆ...... ತಾನು ಹೆತ್ತೆನೆಂಬುದನ್ನೇ ಮರೆತು ಇನ್ನೊಮ್ಮೆ ಹೆರಲು ತಯಾರಾಗುವುದು....... 
ಎಲ್ಲೋ ಸಮಯ ಸಿಕ್ಕಾಗ ಮನೆಯ ಪಡಸಾಲೆಯಲ್ಲಿ ಕುಳಿತು ಘೂಂಗಟ್ ಪರದೆಯ ಒಳಗಿನಿಂದಲೇ ಆಗಸವನ್ನು ದಿಟ್ಟಿಸುತ್ತಾ, ಕಳೆದುಕೊಂಡ ಹೆಣ್ಣುಮಕ್ಕಳನ್ನು ನೆನೆಯುತ್ತಾ ನಿಟ್ಟುಸಿರಾಗಿ ಭಗವಂತನಿಗೊಂದು ಬೇಡಿಕೆ ಸಲ್ಲಿಸುವುದು......

"ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ.....
ಬಿಟಿಯಾ ಜೋ ಕಿಜೋ ತೋ, ಯೆ ದೇಶ್ ನ ದಿಜೋ......"

(ಮುಂದಿನ ಜನ್ಮದಲ್ಲಿ ನನ್ನ ಮಗಳಾಗಿ(ಹೆಣ್ಣಾಗಿ) ಸೃಷ್ಟಿಸಬೇಡ. ಹೆಣ್ಣಾಗಿಯೇ ಸೃಷ್ಟಿಸುವುದಾದರೇ ಈ ದೇಶದಲ್ಲಂತೂ ಹುಟ್ಟಿಸಲೇಬೇಡ.....)

ಇಷ್ಟೇ ಅವರ ಜೀವನ.........

ಇಂತಹ ಮನೆಯಲ್ಲಿನ ಮೂವರು ಗಂಡಸರಿಗೆ ಮತ್ತು ದಾದಿಗೆ ಇದ್ದದ್ದು ಒಂದೇ ಚಿಂತೆ...... ಅದು ಇನ್ನೂ ಮನೆಗೊಬ್ಬ 'ಲಾಲಾ'(ಗಂಡು ಮಗು) ನ ಆಗಮನವಾಗದ ಕುರಿತು...... ಇಪ್ಪತ್ತು ವರುಷದ ನನ್ನ ಮಾಯಿ ಈ ಹಿಂದೆ ಎರಡು ಬಾರಿ ಗರ್ಭಿಣಿಯಾದಾಗಲೂ ಹುಟ್ಟಿದ್ದು ಲಾಲಿ(ಹೆಣ್ಣು ಮಗು)ಯರು. ಹದಿನೆಂಟರ ಚಾಚಿಯೂ ಒಂದು ಚೋರಿಯನ್ನೇ ಹೆತ್ತಿದ್ದು......

'ಆ ಮೂವರು ಲಾಲಿಯರು ಈಗೆಲ್ಲಿ.......?' ಎಂದು ಮಾತ್ರ ಕೇಳಬೇಡಿ.........

ಈ ಮನೆಯಲ್ಲಿ ಮೂವರು ಲಾಲಿಯರು ಹುಟ್ಟಿದ್ದರು ಎಂಬುದು ಎಷ್ಟು ಸತ್ಯವೋ ಈಗ ಅವರಲ್ಲಿ ಒಬ್ಬರೂ ಬದುಕಿಲ್ಲ ಎಂಬುದೂ ಅಷ್ಟೇ ಸತ್ಯ.

ಈಗ ಮಾಯಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ನನ್ನ ಬಾಪೂ, ಚಾಚಾ, ದಾದಾ, ದಾದಿ ಎಲ್ಲರಿಗೂ ಇದ್ದದ್ದು ಒಂದೇ ನಿರೀಕ್ಷೆ...... ಈ ಬಾರಿಯಾದರೂ 'ವಂಶ್ ಕೀ ಚಿರಾಗ್' ನ ಆಗಮನವಾಗಲೀ ಎಂದು. ಬಹುಶಃ ಚಾಚಿಗೂ ಅದೇ ನಿರೀಕ್ಷೆ ಇತ್ತೇನೋ.... ಆ ಮೂಲಕವಾದರೂ ತಮ್ಮಿಬ್ಬರಿಗೂ ಒಂದಿನಿತು ನೆಮ್ಮದಿ ದೊರಕಲಿ ಎಂಬ ಅಭಿಲಾಷೆ ಇರಬಹುದು..... ಈಗಾಗಲೇ ಎರಡು ಹೆಣ್ಣು ಹೆತ್ತು ಮನೆಯವರ ಅವಕೃಪೆಗೆ ಪಾತ್ರಳಾಗಿದ್ದ ಮಾಯಿಗೂ 'ಒಮ್ಮೆ ಗಂಡು ಹುಟ್ಟಿ ಈ ನರಕದಿಂದ ಮುಕ್ತಿ ದೊರೆತರೆ ಸಾಕಪ್ಪಾ...' ಎನಿಸಿರಬಹುದಾ? ನನಗಂತೂ ತಿಳಿದಿಲ್ಲ. ಆದರೆ ಅವರೆಲ್ಲಾ ಆಸೆ, ನಿರೀಕ್ಷೆಗಳಿಗೆ ತಣ್ಣೀರೆರಚುವಂತೆ ಭ್ರಮನಿರಸನಗೊಳಿಸಲು ಅಮ್ಮನೊಡಲಲ್ಲಿ ಪವಡಿಸಿದ್ದೆ ನಾನು. ಆದರೆ ಇದರಲ್ಲಿ ನನ್ನ ತಪ್ಪೇನು......? 

ಬರಲಿರುವುದು ಅದೃಷ್ಟ ಹೊತ್ತು ತರುವ ಮಗನೋ, ಇಲ್ಲಾ ಹಿಂದಿನ ಎರಡು ಸಲದಂತೆ ದುರಾದೃಷ್ಟವೇ ಮೈವೆತ್ತ ಮಗಳೋ ಎಂದು ತಿಳಿವ ತವಕ ಅವರಿಗೆಲ್ಲಾ.....

ಪ್ರಸವ ಪೂರ್ವ ರೋಗನಿರ್ಣಯ ತಂತ್ರಗಳು (pre natal diagnostic techniques) ಲಭ್ಯವಿತ್ತಾದರೂ ಆ ಕಾಲದಲ್ಲಿ ಈಗಿನಂತೆ ಗಲ್ಲಿಗೊಂದು ಶ್ರವಣಾತೀತ ಧ್ವನಿ ತರಂಗ ಪರೀಕ್ಷೆಯ (ultrasonography) ಕೇಂದ್ರಗಳು ಇರಲಿಲ್ಲ. ಆ ತಂತ್ರಜ್ಞಾನ ಭಾರತಕ್ಕೆ ಇನ್ನೂ ಕಾಲಿಟ್ಟಿರಲಿಲ್ಲ. ಆಗ ಇದ್ದದ್ದು ಆಕ್ರಮಣಶೀಲ ತಂತ್ರಗಳು(invasive techniques) ಮಾತ್ರಾ. ಬಹಳ ಸಂಕೀರ್ಣವಾದ ಈ ತಂತ್ರಜ್ಞಾನದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿತ್ತು. ಆ ಕಾಲಕ್ಕೆ ಇವು ಅತೀ ದುಬಾರಿಯೂ ಕೂಡಾ..... ಎಲ್ಲಕ್ಕಿಂತಲೂ ಹೆಚ್ಚಾಗಿ ಆಗ ಈ ಸೌಲಭ್ಯ ಹೊಂದಿದ್ದ ಆಸ್ಪತ್ರೆಗಳು ಇದ್ದಿದ್ದು ಪಂಜಾಬ್ ಹಾಗೂ ಹರಿಯಾಣಾದ ಒಂದೆರೆಡು ಶಹರಗಳಲ್ಲಿ ಮಾತ್ರವೇ.

ಹಾಗಾಗಿ ಬಾಪೂ ಮತ್ತು ದಾದಾ ಆ ಯೋಜನೆಯನ್ನೇ ಕೈ ಬಿಟ್ಟಿದ್ದರು. ಅದಕ್ಕೆ ಬದಲಾಗಿ ಇನ್ನೊಂದು ಸುಲಭದ ಮಾರ್ಗೋಪಾಯ ಕಂಡುಹಿಡಿದ್ದಿದ್ದರು.......

ಅದೇ ಭೈರವ್ ಬಾಬಾ ಕೀ ಭವಿಷ್ಯವಾಣಿ.........

ಭೈರವ್ ಬಾಬಾ..... ಕೇವಲ ನಮ್ಮ ಗ್ರಾಮ ಮಾತ್ರವಲ್ಲ, ಇಡೀ ಶಾಮ್ಲೀಯಲ್ಲೇ ಚಿರಪರಿಚಿತ ಹೆಸರದು. ಅವನೊಬ್ಬ ಸ್ವಯಂ ಘೋಷಿತ ದೇವಮಾನವ. ಅದೇನೋ ಒಂದಷ್ಟು ತಂತ್ರ ಮಂತ್ರ ವಿದ್ಯೆ ಕಲಿತು ಸುತ್ತ ಹತ್ತೂರಿನ ಜನರನ್ನು ತನ್ನ ಕಿರು ಬೆರಳಲ್ಲಿ ಕುಣಿಸುತ್ತಿದ್ದ. ಶಾಮ್ಲಿಯ ಬೇರೆ ಬೇರೆ ಪ್ರಾಂತ್ಯಗಳಿಂದ ಜನ ಕಷ್ಟ ಪರಿಹಾರಕ್ಕಾಗಿ ಅವನ ಬಳಿ ದಾಂಗುಡಿ ಇಡುತ್ತಿದ್ದರು. ಅವುಗಳಲ್ಲಿ ಮುಕ್ಕಾಲು ಪ್ರತಿಶತ ಜನರ ಸಮಸ್ಯೆ....... ಹೆಣ್ಣು ಸಂತಾನ.... 

ಅದೇನು ಅವನ ಅದೃಷ್ಟವೋ ಇಲ್ಲಾ ಹೆಣ್ಣು ಭ್ರೂಣಗಳ ದುರಾದೃಷ್ಟವೋ ತಿಳಿಯದು ...... ಅವನ ಭವಿಷ್ಯ ವಾಣಿಗಳೆಲ್ಲ ಸಾಮಾನ್ಯವಾಗಿ ನಿಜವಾಗುತ್ತಿದ್ದವು. ಹಾಗಾಗಿ ಅವನ ಮಾತೆಂದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ವೇದವಾಕ್ಯ. 

ನನ್ನ ದಾದಾ ಮತ್ತು ಬಾಪೂ ಒಟ್ಟಾಗಿ ಭೈರವ್ ಬಾಬಾನನ್ನು ಮನೆಗೆ ಕರೆಸಿದ್ದರು. ಅವನು ಮಾಯಿಯ ಕೈ ನೋಡಿ, ಗ್ರಹಗತಿ ಲೆಕ್ಕಹಾಕಿ, ಕವಡೆ ಇಟ್ಟು ಈ ಬಾರಿಯೂ ಹೆಣ್ಣೇ ಹುಟ್ಟುವುದೆಂದು ಭವಿಷ್ಯ ನುಡಿದಿದ್ದ...... ಅದನ್ನು ಕೇಳಿ ಎಲ್ಲರ ಮುಖಗಳೂ ಬಿಳುಚಿಕೊಂಡರೇ ಮಾಯಿ ವಿಪರೀತ ಭಯ ಪಟ್ಟಿದ್ದಳು. ಅಮ್ಮನ ಒಡಲೊಳಗೆ ಬೆಚ್ಚಗೆ ಮಲಗಿದ್ದ ನನಗೆ ಈ ಲೋಕ ಹೀಗೆ ಸ್ವಾಗತ ಕೋರಿತ್ತು. 

ಬಾಬಾ ಬಂದು ಹೋದ ಮೇಲೆ ಮನೆಯಲ್ಲಿ ಮಾಯಿಯ ಪರಿಸ್ಥಿತಿ ಶೋಚನೀಯವಾಯಿತು‌. ಅಲ್ಲಿಯತನಕ ಗಂಡು ಹೆರುವಳು ಎಂಬ ನಿರೀಕ್ಷೆಯಲ್ಲಿ ತೋರುತ್ತಿದ್ದ ಪ್ರೀತ್ಯಾದರಗಳೆಲ್ಲಾ ಒಮ್ಮೆಗೆ ನಿಂತು ಹೋದವು. ಹಳೆಯ ದಿನಚರಿ ಮತ್ತೆ ಮರುಕಳಿಸಿತು. ಅವಳಿಗೆ ಕ್ಷಣ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ದುಡಿತ. 

ಅದರೊಂದಿಗೆ ನಾನು ಹೆಣ್ಣೆಂದು ಬಾಬಾ ಭವಿಷ್ಯ ನುಡಿದೊಡನೆ ಅದ್ಯಾವುದೋ ಹಳ್ಳಿ ಮದ್ದುಗಳನ್ನು ಕುಡಿಸಿ ಅಮ್ಮನೊಡಲಲ್ಲೇ ನನ್ನ ಚಿವುಟಿ ಹಾಕಲು ಕೆಲವು ಪ್ರಯತ್ನಗಳಾಗಿತ್ತು. ನನ್ನ ಉಸಿರು ಗಾಳಿಯ ಸೋಕದಂತೆ, ನನ್ನ ಕೊರಳು ದನಿ ಎತ್ತದಂತೆ, ನಾ ಕಣ್ತೆರೆದು ಜಗವನ್ನು ಕಾಣದಂತೆ ಮಾಡಲು ಅದೆಷ್ಟು ಹವಣಿಸಿದ್ದರು....? 

ಅದಕ್ಕೇ ಹೇಳಿದ್ದು ನಮಗೆ ಹುಟ್ಟು ಒಂದು ಕದನವೆಂದು.... ಯುದ್ಧದಲ್ಲಿ ಜಯಿಸಿದರೆ ಮಾತ್ರವೇ ಕಣ್ತೆರೆದು ಜಗ ಕಾಣುವ ಅವಕಾಶ. ಹಾಗೊಂದು ವೇಳೆ ಸಾವನ್ನು ಜಯಿಸಿ ಜನಿಸಿದರೆ ಆನಂತರದ ಬದುಕೇ ರಣರಂಗ......
ಮಗ ಜನಿಸಿದರೆ ಆತ ಎಲ್ಲರ ಮೇಲೂ ರಾಜ್ಯಭಾರ ನಡೆಸುತ್ತಾನೆ....
ಅದೇ ಮಗಳು ಜನಿಸಿದರೆ ಅವಳು ಬದುಕಿನ ಹೋರಾಟಕ್ಕೆ ಸಜ್ಜಾಗುತ್ತಾಳೆ....
ಇಬ್ಬರೂ ಮಕ್ಕಳೇ...... ಆದರೆ ಅವ'ನು' ಮತ್ತು ಅವ'ಳು' ನಡುವಿನ ವ್ಯತ್ಯಾಸ ಅದೆಷ್ಟು ಅಗಾಧ........!!

ಆದರೆ ಪಾಪ ನನ್ನ ಮಾಯಿ......... ಆ ಮದ್ದುಗಳನ್ನು ಕುಡಿದಂತೆ ನಟಿಸಿ ಉಗುಳುತ್ತಿದ್ದಳು. ಐದು ತಿಂಗಳು ತುಂಬಿದ ಮೇಲೆ ಆ ತರದ ಪ್ರಯತ್ನಗಳು ನಿಂತವು. ಹುಟ್ಟಿದ ಕೂಡಲೇ ಹನನ ಮಾಡಿದರಾಯಿತು ಎಂದುಕೊಂಡರೇನೋ......?

ಆದರೆ ಮಾಯಿಯ ಸಮಸ್ಯೆಗಳೇನೂ ಕೊನೆಯಾಗಲಿಲ್ಲ. ಬದಲಿಗೆ ಅವು ಇನ್ನೂ ವಿಪರೀತವಾದವು. ಈ ನಡುವೆಯೇ ಅವಳ ಕಲ್ಪನೆಗೂ ಮೀರಿದ ಘಟನೆಯೊಂದು ನಡೆಯಿತು.

ಅವಳಿಗೆ ಏಳು ತಿಂಗಳುಗಳಾಗಿದ್ದಾಗ ಬಾಪೂ ಇನ್ನೊಬ್ಬ ಹೆಣ್ಣನ್ನು ರಾಜಾರೋಷವಾಗಿ ಮದುವೆಯಾಗಿ ಮನೆಗೆ ಕರೆತಂದಿದ್ದ..........!!

ಲಾಲಾನನ್ನು ಹಡೆಯಲು ಅಸಮರ್ಥಳಾದ ನೀನು ಇನ್ನು ಮುಂದೆ ನನ್ನ ಹೆಂಡತಿಯಲ್ಲವೆಂದು, ತಾಳಿ ಕಟ್ಟಿದ ತಪ್ಪಿಗೆ ಜೀವನ ಪರ್ಯಂತ ಮೂರು ಹೊತ್ತು ಊಟ ಹಾಕಿ ಸಾಕುವೆನೆಂದೂ ದೊಡ್ಡ ಉಪಕಾರ ಮಾಡುವವನಂತೆ ನುಡಿದಿದ್ದ...... ಹಾಗೂ ಆ ಕ್ಷಣವೇ ಮಾಯಿ ಮತ್ತು ನಾನು ಇಬ್ಬರೂ ಮನೆಯಿಂದ ಹೊರದೂಡಲ್ಪಟ್ಟಿದ್ದವು. ಮನೆಯ ಹಿಂಬದಿಯ ಕೊಟ್ಟಿಗೆಯ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಾವು ಜೀವನ ಕಳೆಯಬೇಕಿತ್ತು. 

'ಆ ಕ್ಷಣದಲ್ಲಿ ಮಾಯಿಯ ಮನಸ್ಸಿಗೆ ಅದೆಂತಹ ಆಘಾತವಾಗಿರಬಹುದು? ಅವಳ ಅಂತರಂಗದಲ್ಲಿ ಅದೆಷ್ಟು ಭಾವನೆಗಳ ಬಿರುಗಾಳಿ ಸುಳಿಸುಳಿದು ಅಂತರಂಗದ ಕೊಳವನ್ನು ರಾಡಿಯಾಗಿಸಿರಬಹುದು.....?' ಈ ಉತ್ತರ ಸಿಗದ ಪ್ರಶ್ನೆಯನ್ನು ನಾನು ಅದೆಷ್ಟು ಬಾರಿ ಕೇಳಿಕೊಂಡಿರುವೆನೋ....... 

ಆನಂತರದ ದಿನಗಳಲ್ಲಿ ಆಕೆ ಕಲ್ಲಾಗಿದ್ದಳು. ಅವಳ ಉಸಿರಾಟವೊಂದರ ಹೊರತು ಬೇರ್ಯಾವ ಭಾವಗಳೂ ಅವಳಲ್ಲಿ ಉಳಿದಿರಲಿಲ್ಲವೇನೋ.... ನನ್ನೊಂದಿಗೆ ಮಾತನಾಡುತ್ತಿರಲಿಲ್ಲ, ಉದರದ ಮೇಲೆ ಕೈಯಾಡಿಸಿ ನನ್ನ ಚಲನೆಯ ಗತಿಯ ಅನುಭೂತಿಯನ್ನು ಅನುಭವಿಸುತ್ತಿರಲಿಲ್ಲ. ಅವರೇನು ತಿನ್ನಲು ಕೊಡುತ್ತಿದ್ದರೋ ಅದರ ಶುಚಿ, ರುಚಿಯ ಹಂಗಿಲ್ಲದೇ ತಿನ್ನುತ್ತಿದ್ದಳು.... ಒಮ್ಮೊಮ್ಮೆ ಮನೆಯವರ ಕಣ್ತಪ್ಪಿಸಿ ಚಾಚಿ ಬಂದು ಅವಳಿಗೊಂದಿಷ್ಟು ಬೆನ್ನು, ಸೊಂಟ ನೀವಿ ಏನಾದರೂ ತಿನ್ನಲು ಕೊಟ್ಟು ಹೋಗುತ್ತಾಳೆ. ಪಾಪ... ಆಕೆಯಾದರೂ ಏನು ಮಾಡಿಯಾಳು? ಅವಳೂ ಪಂಜರದ ಪಕ್ಷಿಯೇ ಅಲ್ಲವೇ....... 

ಒಟ್ಟಿನಲ್ಲಿ ಮಾಯಿ ವಿರಾಗಿನಿಯಂತಾಗಿದ್ದಳು. ಆದರೆ ನೀರವ ರಾತ್ರಿಗಳ ಕೊರೆವ ಚಳಿಯಲ್ಲಿ ಅವಳ ಕಣ್ಣೀರು ಮಾತ್ರ ಅಕ್ಷಯವಾಗಿ ಹರಿಯುತ್ತದೆ.....

ಮನೆಯಿಂದ ಹೊರಹಾಕಿದರೂ ಅವಳ ಮೇಲಿನ ಕೆಲಸದ ಹೊರೆಯಂತೂ ಒಂದಿನಿತೂ ಕಮ್ಮಿ ಇರಲಿಲ್ಲ. ಈಗ ಆಕೆ ಅಕ್ಷರಶಃ ಈ ಮನೆಯ ಕೆಲಸದ ಆಳಾಗಿದ್ದಳು ಎಂದರೆ ತಪ್ಪಾಗಲಾರದೇನೋ..... ಎಂಟು ತಿಂಗಳ ಗರ್ಭಿಣಿ ಬಾವಿಯಿಂದ ನೀರೆಳೆಯುವಾಗ, ಭಾರೀ ನೀರ ಕೊಡವನ್ನು ಸೊಂಟದ ಮೇಲಿಟ್ಟುಕೊಂಡು ನಡೆವಾಗ ಉಸಿರು ಸಿಕ್ಕಿಹಿಡಿದಂತಾಗುತ್ತಿತ್ತು ಅವಳಿಗೆ..... ಆಗೆಲ್ಲಾ ನನಗೂ ಯಮ ಯಾತನೆಯಾಗುತ್ತಿತ್ತು... ಉದರದಲ್ಲೇ ಒದ್ದಾಡುತ್ತಿದ್ದೆ. ಅವಳು ತನ್ನ ದುರ್ದೆಸೆ ನೆನೆದು ಕಣ್ಣೀರಿಡುವಾಗಲೆಲ್ಲಾ ಅವಳ ಕಣ್ಣೊರೆಸಬೇಕೆಂದು ತಳಮಳಿಸಿದ್ದೇನೆ. ಸಾಧ್ಯವಾಗದೇ ಪರಿತಪಿಸಿದ್ದೇನೆ. ಅವಳು ದೇವರ ನೆನೆದು, 'ಬಾಬಾ ಹೇಳಿದಂತೆ ಆಗದೆ ನನಗೆ ಗಂಡು ಕೂಸೇ ಹುಟ್ಟಲಿ' ಅಂತ ಬೇಡಿಕೊಂಡಾಗಲೆಲ್ಲಾ, 'ನಿನ್ನ ಉದರದಲ್ಲಿರುವುದು ಲಾಲಿಯೇ' ಎಂದು ಚೀರಿದ್ದೇನೆ...... ಆದರೆ ಅದ್ಯಾವುದೂ ಅವಳನ್ನು ತಲುಪಲಿಲ್ಲ. 

ನಾನೂ ಭಗವಂತನನ್ನು ಕೇಳಿಕೊಳ್ಳುತ್ತೇನೆ....... 

"ಮ್ಹಾರಿ ಮಾ ಕೋ ದೂಜಿ ಚೋರಿ ನಾ ದಿಜೋ.....
ಅಗಲೇ ಜನಮ್ ಮೋಹೆ ಬಿಟಿಯಾ ನಾ ಕಿಜೋ......"

(ನನ್ನಮ್ಮನಿಗೆ ಇನ್ನೊಂದು ಹೆಣ್ಣುಮಗುವ ಕೊಡಬೇಡ, ಮುಂದಿನ ಜನುಮದಲ್ಲಿ ನನ್ನ ಹೆಣ್ಣಾಗಿ ಸೃಷ್ಟಿಸಬೇಡ.....)

ಇಂತಹ ತೀರದ ವೇದನೆಗಳ ನಡುವೆಯೇ ನಾನು ನನ್ನ ಹೋರಾಟಕ್ಕೆ ಶ್ರೀಕಾರ ಹಾಕುವ ಸಮಯ ಬಂದೇಬಿಟ್ಟಿತು........ ನನಗೆ ಖಂಡಿತಾ ಈ ಹಾಳು ಪ್ರಪಂಚಕ್ಕೆ ಕಾಲಿಟ್ಟು ಅಮ್ಮನಂತೆ ಜೀವನ ಸವೆಸುವ ಆಸೆಯಿಲ್ಲ.... ಆದರೇನು ಮಾಡಲೀ? ಇದೇ ನನ್ನ ಲಲಾಟದಲ್ಲಿ ಬರೆದಿರುವುದು......

ಅದು ಶಿಶಿರ ಋತುವಿನ ಮಾಘ ಮಾಸ..... ವಿಪರೀತ ಚಳಿ... ನಾನೇನೋ ಮಾಯಿಯ ಒಡಲೊಳಗೆ ಬೆಚ್ಚಗೆ ಆಟವಾಡಿಕೊಂಡಿದ್ದೆ.... ಅಮ್ಮನ ಗರ್ಭ ಅದೆಷ್ಟು ಬೆಚ್ಚಗೆ, ಅಲ್ಲಿರುವಷ್ಟು ನೆಮ್ಮದಿ, ರಕ್ಷಣೆ ಇನ್ನೆಲ್ಲಿ? ಆದರವಳು ಆ ಚಳಿಯಲ್ಲಿ ನಡುಗುತ್ತಿದ್ದಳು. ಇದ್ದದ್ದೊಂದು ಹೊದಿಕೆ. ಅದೋ ನಾಲ್ಕು ಕಡೆಗಳಿಂದಲೂ ತೆರೆದಿದ್ದ ಕೊಟ್ಟಿಗೆ... ತಲೆಯ ಮೇಲೊಂದು ಸೂರು ಮಾತ್ರವೇ ಇದ್ದದ್ದು... ಶಿಶಿರದಲ್ಲಿ ಯಮುನೆಯ ಬದಿಯಿಂದ ಬೀಸುವ ಕುಳಿರ್ಗಾಳಿಯ ಬಿರುಸು ಹೆಚ್ಚಿರುತ್ತದೆ. ಹಾಗೇ ಅತೀ ಶೀತವೂ...... ಬೆಳಗಿನ ಜಾವದ ವಿಪರೀತ ಚಳಿಗೆ ಅವಳಿಗೆ ಉಸಿರಾಡಲು ತೊಂದರೆಯಾಗತೊಡಗಿತು. ಅವಳು ಉಸಿರು ಹಿಡಿಯತೊಡಗಿದಂತೆಲ್ಲಾ ನನಗೂ ಹಿಂಸೆಯಾಗಿ ಒದ್ದಾತೊಡಗಿದೆ. ತಲೆಯನ್ನು ಮುಂದಾಗಿಸಿ ನನ್ನ ಸುರಕ್ಷಾ ಕವಚದಿಂದ ಹೊರಬರಲು ಪ್ರಯತ್ನಿಸತೊಡಗಿದೆ. ಉಸಿರಾಟದ ಏರುಪೇರಿನೊಂದಿಗೆ ನನ್ನ ಒದ್ದಾಟವೂ ಸೇರಿ ಮಾಯಿ ನರಳತೊಡಗಿದ್ದಳು. ಆದರೆ ಜೋರಾಗಿ ಬಾಯ್ತೆರೆದು ಕೂಗಲಾರದಷ್ಟು ಬಾಧೆ ಕೊಡತೊಡಗಿತ್ತು ಕೊರೆವ ಚಳಿ. ಏನೂ ಮಾಡಲು ತೋಚದೇ ಪಕ್ಕದಲ್ಲಿದ್ದ ಕೈಗೆ ಸಿಕ್ಕ ತಟ್ಟೆ, ಲೋಟ, ಕಲ್ಲುಗಳನ್ನೆಲ್ಲಾ ಎಸೆಯತೊಡಗಿದಳು.... 

ಪಾಪ ಚಾಚಿಗೆ ಇವಳದ್ದೇ ಯೋಚನೆಯಾಗಿತ್ತೇನೋ..... ಮನೆಯ ಹಿಂಬಾಗಿಲಿನಿಂದ ಸದ್ದಾಗದಂತೆ ನಿಧಾನವಾಗಿ ನಮ್ಮೆಡೆಗೆ ಬಂದಿದ್ದಳು.... ಮಾಯಿಯ ಪರಿಸ್ಥಿತಿ ನೋಡಿ ಗಾಬರಿಯಿಂದ ಮನೆಯೊಳಗೆ ಓಡಿದ್ದಳು. ನಾನಾಗಲೇ ಶತ ಪ್ರಯತ್ನ ಪಟ್ಟು ಎಲ್ಲೆಡೆ ಹಾದಿ ಹುಡುಕಿ ತಲೆಯಿಂದ ಗುದ್ದಿ ಕೊನೆಗೊಮ್ಮೆ ಹೊರಹೋಗುವ ಹಾದಿ ಸಿಕ್ಕಿಯೇ ಬಿಟ್ಟಿತ್ತು... 

ಆದರೆ........ 

ನಾನು ನನ್ನ ಸಂಪೂರ್ಣ ಶಕ್ತಿ ಬಳಸಿ ಅವಳ ಗರ್ಭವೆಂಬ ಸ್ವರ್ಗದಿಂದ ಈ ನರಕ ಪ್ರವೇಶಿಸುವುದಕ್ಕೂ, ಅವಳು ಈ ನರಕದ ಯಾನ ಮುಗಿಸಿ ಮುಕ್ತಿಯ ನೆಮ್ಮದಿ ಪಡೆಯುವುದಕ್ಕೂ ಸರಿಹೋಯಿತು.......

ನನ್ನ ಜನನ ಮಾಯಿಯ ಮರಣ ಎರಡೂ ಒಂದೇ ಆಗಿ ಹೋಯಿತು......

ಚಾಚಿ ಬಿಸಿನೀರು ಹಿಡಿದು ಬರುವ ಸಮಯಕ್ಕೆ ಎಲ್ಲಾ ಮುಗಿದಿತ್ತು...... ಮಾಯಿಯ ತೆರೆದ ಕಣ್ಣುಗಳಲ್ಲಿ ಜನ್ಮದ ವೇದನೆಯಿತ್ತು. ಈಗ ಅವಳು ಏರುತ್ತಿರುವ ಚಳಿಯ ಹಂಗಿಲ್ಲದೆ ನಿಶ್ಚಲಳಾಗಿ ಬಿದ್ದಿದ್ದರೆ, ಇಷ್ಟು ಸಮಯ ಅವಳ ಬೆಚ್ಚಗಿನ ಉದರದಲ್ಲಿ ಹಾಯಾಗಿದ್ದ ನಾನು ಚಳಿಯ ಹೊಡೆತ ತಾಳಲಾರದೇ ಚೀರುತ್ತಿದ್ದೆ....... ಅಮ್ಮನ ಬೆಚ್ಚನೆಯ ಮಡಿಲಿಗಾಗಿ ಅರಸುತ್ತಿದ್ದೆ.... 

ಆದರೆ ಆ ಮಡಿಲು ಬದುಕಿನಲ್ಲಿ ನನಗೆಂದೂ ಸಿಗದ ಮರೀಚಿಕೆಯಾಗಿತ್ತು.......

ಹೀಗೆ ಆ ಕೊರೆವ ಚಳಿಯಲ್ಲಿ ಮಾಯಿಯ ಆಸರೆಯಿಲ್ಲದೆ ನನ್ನ ಬದುಕಿನ ಹೋರಾಟ ಆರಂಭವಾಗಿತ್ತು.......

ಇದು ಕೇವಲ ಆರಂಭ ಅಷ್ಟೇ........
ಕಾಣಬೇಕಾದದ್ದು, ಅನುಭವಿಸಬೇಕಾದದ್ದು ಇನ್ನೂ ಬಹಳಷ್ಟಿತ್ತು..........

ಸಶೇಷ

ಟಿಪ್ಪಣಿಗಳು:

Female Infanticide Prevention Act of 1870(Act VIII): ವಸಾಹತುಶಾಹಿ ಭಾರತದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಯಾವುದೇ ಮುಚ್ಚುಮರೆ, ಅಡೆತಡೆಯಿಲ್ಲದೆ ಅವ್ಯಾಹತವಾಗಿ ನಡೆದಿತ್ತು. ಇದನ್ನು ಗಮನಿಸಿದ ಬ್ರಿಟೀಷರು ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ೧೮೭೦ರಲ್ಲಿ Female Infanticide Prevention Act ಅಥವಾ Act VIII ಅನ್ನು ಜಾರಿಗೆ ತಂದರು. ಹೆಣ್ಣು ಶಿಶು ಹತ್ಯೆಗೆ‌ ಕುಖ್ಯಾತವಾಗಿದ್ದ ಉತ್ತರ ಪಶ್ಚಿಮೀ ಪ್ರಾಂತ್ಯ(ಈಗಿನ ಉತ್ತರ ಪ್ರದೇಶ), ಔಧ್ ಹಾಗೂ ಪಂಜಾಬ್ ಪ್ರಾಂತ್ಯಗಳಲ್ಲಿ ಈ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೊಳಿಸಲಾಯಿತು. ನಂತರ ಅಗತ್ಯತೆಯ ಅನುಸಾರ ಬೇರೆ ರಾಜ್ಯಗಳಿಗೆ ವಿಸ್ತರಿಸುವ ಯೋಜನೆಯಿತ್ತು. 
ಪಂಗಡ ಕೇಂದ್ರಿತವಾದ ಈ ಕಾಯಿದೆಯ ಅನುಸಾರ ಯಾವ ಪಂಗಡಗಳಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೪೦ಕ್ಕಿಂತ ಕಡಿಮೆ ಹೆಣ್ಣುಮಕ್ಕಳಿರುವರೋ ಆ ಪಂಗಡವನ್ನು ಹೆಣ್ಣು ಶಿಶು ಹತ್ಯೆಯ ಅಪರಾಧಿ ಎಂದು ಘೋಷಿಸಲಾಗುತ್ತಿತ್ತು. ಹೆಣ್ಣುಮಕ್ಕಳ ಪ್ರಮಾಣ ಶೇಕಡಾ ೨೫ಕ್ಕಿಂತಲೂ ಕಡಿಮೆ ಇದ್ದ ಪಂಗಡಗಳನ್ನು ಅತೀ ಗಂಭೀರ ಅಪರಾಧಿಗಳೆಂದು ಪರಿಗಣಿಸಲಾಗುತ್ತಿತ್ತು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿತ್ತು.

ಅಂಕಿ ಅಂಶಗಳ ಆಧಾರದಲ್ಲಿ ನೋಡುವುದಾದರೆ ಈ ಕಾಯಿದೆ ಯಶಸ್ವಿಯಾಯಿತು ಎಂದೇ ಹೇಳಬೇಕು. ಆ ಕಾಯಿದೆ ಜಾರಿಯ ನಂತರ ಉತ್ತರ ಪಶ್ಚಿಮೀ ಪ್ರಾಂತ್ಯಗಳು, ಪಂಜಾಬ್ ಹಾಗೂ ಔಧ್ ಪ್ರಾಂತ್ಯಗಳಲ್ಲಿ ಹೆಣ್ಣು ಶಿಶು ಹತ್ಯೆ ಗಣನೀಯವಾಗಿ ಕಡಿಮೆಯಾಯಿತು. ಅದೂ ಅಲ್ಲದೇ ಆಗ್ರಾ ಮತ್ತು ಔಧ್ ಸಂಯುಕ್ತ ಪ್ರಾಂತ್ಯಗಳ ಸರ್ಕಾರ ಈ ನಿಯಮ ಇನ್ನು ಅಗತ್ಯವಿಲ್ಲ ಎಂದು ಒತ್ತಡ ಹಾಕಿತ್ತು. ಹಾಗಾಗಿ ೧೯೦೫ರಲ್ಲಿ ಈ ಕಾಯಿದೆಯನ್ನು ಹಿಂಪಡೆಯಲಾಯಿತು.
ಆದರೆ ವಾಸ್ತವವಾಗಿ ಈ ಕಾಯಿದೆ ಜಾರಿಗೆ ಬಂದ ನಂತರವೂ ಹೆಣ್ಣು ಶಿಶು ಹತ್ಯೆ ಹಾಗೆಯೇ ಮುಂದುವರೆದಿತ್ತು. ವ್ಯತ್ಯಾಸವೆಂದರೆ ನವಜಾತ ಶಿಶುಗಳನ್ನು ಕೊಲ್ಲುವ ಬದಲು ಆ ಮಕ್ಕಳನ್ನು ಒಂದರಿಂದ ಎರಡು ವರ್ಷದವರೆಗೆ ಬದುಕಲು ಬಿಡಲಾಗುತ್ತಿತ್ತು. ಆ ಸಮಯದಲ್ಲಿ ಆ ಮಕ್ಕಳಿಗೆ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು, ಪೌಷ್ಟಿಕ ಆಹಾರವನ್ನು ಒದಗಿಸುತ್ತಿರಲಿಲ್ಲ. ಸಣ್ಣ ಮಗುವಿನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಪದೇ ಪದೇ ಕಾಯಿಲೆಗೊಳಗಾಗಿ ಈ ಮಕ್ಕಳು ಅಸುನೀಗುತ್ತಿದ್ದವು. ಒಂದು ವೇಳೆ ಅಷ್ಟಾಗಿಯೂ ಅವು ಬದುಕಿದರೆ ಬೇರೆ ಬೇರೆ ವಿಧಾನಗಳನ್ನು ಬಳಸಿ ಅವರನ್ನು ಕೊಲ್ಲವಾಗುತ್ತಿತ್ತು.


ಆಕ್ರಮಣಶೀಲ ತಂತ್ರಗಳು (Invasive Techniques): ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಜ್ಞಾನ(pre natal diagnostic techniques)ದಲ್ಲಿ ಎರಡು ವಿಧಗಳಿವೆ. 
I. ಆಕ್ರಮಣಶೀಲ ತಂತ್ರಗಳು 
II. ಆಕ್ರಮಣಶೀಲವಲ್ಲದ ತಂತ್ರಗಳು 

ದೇಹದ ಒಳಭಾಗದಲ್ಲಿ ಟ್ಯೂಬ್, ಬಲೂನ್ ಅಥವಾ ಇನ್ಯಾವುದಾದರೂ ಪರಿಕರಗಳನ್ನು ಬಳಸಿ ಪರೀಕ್ಷಿಸುವ ತಂತ್ರಗಳೇ ಆಕ್ರಮಣಶೀಲ ತಂತ್ರಗಳು. ಇವು ಆಕ್ರಮಣಶೀಲವಲ್ಲದ ತಂತ್ರಗಳ ಅಭಿವೃದ್ಧಿಗೆ ಮುಂಚೆ ಬಳಸಲ್ಪಡುತ್ತಿದ್ದವು. ಈಗ ಇವುಗಳ ಬಳಕೆ ಬಹಳ ಕಡಮೆ.

ಇದರಲ್ಲಿ ಎರಡು ವಿಧಗಳಿವೆ;
ಮೊದಲನೇಯದು Amniocentesis: ಈ ವಿಧಾನದಲ್ಲಿ ತಾಯಿಯ ಗರ್ಭಚೀಲದ ಆಮ್ನಿಯೋಟಿಕ್ ದ್ರವವನ್ನು ಸಿರೀಂಜ್ ಮೂಲಕ ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಹದಿನಾರು ವಾರಗಳು ಮುಗಿದ ನಂತರ ಮಾಡಲಾಗುತ್ತದೆ.

ಎರಡನೇಯದು chronic villi biopsy: ಇಲ್ಲಿ ಮಾಸುಚೀಲದ(ಭ್ರೂಣದ ಹೊರಪೊರೆ) ಜೀವಕೋಶ ಅಥವಾ ಅಂಗಾಂಶವನ್ನು ತೆಗೆದು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯನ್ನು ಗರ್ಭಧಾರಣೆಯ ಆರರಿಂದ ಹದಿಮೂರನೇ ವಾರಗಳ ನಡುವಲ್ಲಿ ಮಾಡಲಾಗುತ್ತದೆ.

ಈ ಎರಡೂ ಪರೀಕ್ಷೆಗಳ ಮೂಲ ಉದ್ದೇಶ ಅನುವಂಶಿಕ ಅಸ್ವಸ್ಥತೆ ಮತ್ತು ವಿರೂಪತೆಯನ್ನು (genetic disorder and deformities) ಪತ್ತೆಹಚ್ಚುವುದಾದರೂ ಈ ಎರಡೂ ಪರೀಕ್ಷೆಗಳಲ್ಲಿ ಮಗುವಿನ ಲಿಂಗ ಪತ್ತೆ ಮಾಡಬಹುದು. 
ಆದರೆ ಈ ಎರಡಕ ವಿಧಾನಗಳಲ್ಲೂ ಸಿರೀಂಜ್ ನಂತಹ ಸಲಕರಣೆಗಳು ಬಳಕೆಯಾಗುವುದರಿಂದ ಭ್ರೂಣಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ವಿಪರೀತ ರಕ್ತಸ್ರಾವ, ಗರ್ಭಪಾತದ ಆಗುವ ಸಂಭವವೂ ಇರುತ್ತದೆ.

೧೯೭೧ರಲ್ಲಿ ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಯಿತು(The Medical Termination of Pregnancy Act). ಆ ಸಮಯದಲ್ಲೇ ಪ್ರಸವಪೂರ್ವ ರೋಗನಿರ್ಣಯ ತಂತ್ರಜ್ಞಾನ ಇಲ್ಲಿ ಆರಂಭವಾಯಿತು. ಆಗ ಆಕ್ರಮಣಶೀಲ ತಂತ್ರಗಳು ಮಾತ್ರವೇ ಲಭ್ಯವಿತ್ತು. ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದರ ಹಿಂದೆ ಬಹಳಷ್ಟು ಕಾರಣಗಳಿದ್ದವು. ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ ಮಹಿಳೆಯರಿಗೆ ಸಹಾಯಮಾಡುವ ಮಾನವೀಯ ಉದ್ದೇಶ, ಆರೋಗ್ಯ ಸಂಬಂಧಿ ಉದ್ದೇಶಗಳು ಇನ್ನೂ ಹಲವು ಕಾರಣಗಳಿದ್ದರೂ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣ ಇದರ ಹಿಂದಿನ ಮೂಲ ಉದ್ದೇಶವಾಗಿತ್ತು.
ಆದರೆ ಜನ ಇದರ ದುರುಪಯೋಗ ಪಡೆದು ಭ್ರೂಣದ ಲಿಂಗ ಪತ್ತೆ ಮಾಡಿಸಿ, ಹೆಣ್ಣಾದರೆ ಗರ್ಭಪಾತ ಮಾಡಿಸಿಕೊಳ್ಳಲು ಆರಂಭಿಸಿದರು. ಹೀಗೆ ಒಳ್ಳೆಯ ಉದ್ದೇಶಗಳಿಗಾಗಿ ಜಾರಿಗೆ ತಂದ ಕಾಯ್ದೆ, ತಂತ್ರಜ್ಞಾನಗಳು ಹೆಣ್ಣುಭ್ರೂಣ ಹತ್ಯೆಯ ಸಾಧನಗಳಾಗಿ ಮಾರ್ಪಾಡಾದವು.

ಈ ಸಂಚಿಕೆಯಲ್ಲಿ ಬರೆದಿರುವ ಎಲ್ಲಾ ವಿಚಾರಗಳೂ ನಿಜವೇ. ೧೨೮೦ರ ಕಾಲಘಟ್ಟದಲ್ಲಿ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ, ಬಿಹಾರ್, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಹಳ ಸಾಮಾನ್ಯವಾಗಿದ್ದ ಆಚರಣೆ ಇದು. ಇಂದಿಗೂ ಈ ಕೆಲವು ರಾಜ್ಯಗಳಲ್ಲಿ ಹೆಣ್ಣೆಂದರೆ ಮೂಗೆಳೆಯುವವರೇ..... ಲಿಂಗಾನುಪಾತ 900ಕ್ಕೂ ಕಡಿಮೆ ಇರುವ ಹಲವು ಜಿಲ್ಲೆಗಳು ಈ ಮೇಲಿನ ರಾಜ್ಯಗಳಲ್ಲಿವೆ. ಪಂಜಾಬ್ ಹಾಗೂ ಹರಿಯಾಣಾದ ರಾಜ್ಯವಾರು ಲಿಂಗಾನುಪಾತವೇ 900ಕ್ಕೂ ಕಡಿಮೆ ಎಂದರೆ ನೀವು ನಂಬಲೇಬೇಕು. ಇನ್ನು ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅತೀ ಹೆಚ್ಚು..

ವಾಸ್ತವಿಕವಾಗಿರಲಿ ಎಂಬ ಉದ್ದೇಶದಿಂದಲೇ ಉತ್ತರಪ್ರದೇಶದ ಮುಜ್ಜಫರ್ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಜ್ಜಫರ್ ನಗರ ಜಿಲ್ಲೆಯಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಶಾಮ್ಲಿ ವಲಯ ಆಗ ಮುಜ್ಜಫರ್ ನಗರದ ಭಾಗವಾಗಿತ್ತು. ಪ್ರಸ್ತುತ ಶಾಮ್ಲಿ ಜಿಲ್ಲಾ ಕೇಂದ್ರ. ಗ್ರಾಮದ ಹೆಸರು ಮಾತ್ರ ಕಾಲ್ಪನಿಕವಾದದ್ದು.

ವೈದ್ಯಕೀಯ ಸಂಬಂಧಿ ಮಾಹಿತಿಗಳನ್ನು ನೀಡಿದ, ನನ್ನೆಲ್ಲಾ ಕಿರಿಕಿರಿಯ ಕೊರೆತಗಳನ್ನು ಸಮಾಧಾನದಿಂದ ಸಹಿಸಿ ಬರೆಯಲು ಸ್ಪೂರ್ತಿ ನೀಡಿದ ಆರಿದ್ರಾ ಅವರಿಗೆ ಅನಂತ ಧನ್ಯವಾದಗಳು.... 🙏🙏

ಮಾಹಿತಿ ಕೃಪೆ: 
ವಿಕಿಪೀಡಿಯ
ಅಂತರ್ಜಾಲ

1 ಕಾಮೆಂಟ್‌:

  1. Anomaly ಸ್ಕ್ಯಾನ್ ಅಂತ ಮಾಡುತ್ತರಲ್ಲ ಅದು ನೀವು ಹೇಳಿರುವ ಜೇನಿಟಿಕ್ ಸ್ಕ್ಯಾನ್ ಒಂದೇ ಏನೋ ಗೊತ್ತಿಲ್ಲ. ಒಂದೇ ಇರಬಹುದು. ಈ ಸಂಚಿಕೆ ಉಫ್...ಓದಿದ್ದರೂ ಮತ್ತೆ ಓದುವಾಗ ಹೃದಯ ತುಂಬಿ ಬಂತು.

    ಪ್ರತ್ಯುತ್ತರಅಳಿಸಿ