ಭಾನುವಾರ, ಸೆಪ್ಟೆಂಬರ್ 13, 2020

ಅಗ್ನಿ ತರಂಗಿಣಿ 9

ಚಕ್ರವ್ಯೂಹ್

ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಡ್ರಗ್ಸ್ ಸಾಗಾಣಿಕೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೇರಿತ್ತು‌. ಕಾರಣ ನನಗೆ ಈ ಮೊದಲೇ ಈ ಬಗ್ಗೆ ಅನುಭವವಿತ್ತಲ್ಲ......!
ಈ ಮುಂಚೆ ನಾನು ಕಲ್ಕತ್ತೆಯಿಂದ ಬಾಂಗ್ಲಾಕ್ಕೆ ಹೋಗುತ್ತಿದ್ದ ಸರಕು ಸಾಗಾಣಿಕಾ ವಾಹನಗಳಲ್ಲಿನ ರಟ್ಟಿನ ಸೀಲ್ಡ್ ಪೆಟ್ಟಿಗೆಗಳಲ್ಲಿರುತ್ತಿದ್ದ ರಹಸ್ಯ ಇದೇ ಡ್ರಗ್ಸ್.....!! ಅದನ್ನೇ ಲೋಡಿಂಗ್ ಹಾಗೂ ಅನ್ಲೋಡಿಂಗ್ ಮಾಡುತ್ತಿದ್ದದ್ದು ನಾನು. ಅದರೊಳಗೆ ಏನಿತ್ತು ಎಂಬುದು ತಿಳಿಯದಿದ್ದರೂ ಆ ಕೆಲಸ ನನಗೆ ಪರಿಚಿತವಲ್ಲವೇ? ಹಾಗಾಗಿ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದ ರಾಕಾ......

ಮುಂಚೆ ಕೂಲಿ ಕಾರ್ಮಿಕನಂತೆ ಸರಂಜಾಮುಗಳೊಂದಿಗೆ ಹಿಂಬದಿಯ ಮೂಲೆಯಲ್ಲಿ ನೇತಾಡುತ್ತಾ ಸರಕು ಸಾಗಾಣಿಕೆ ವಾಹನದಲ್ಲಿ ಬಾಂಗ್ಲಾಕ್ಕೆ ಹೋಗುತ್ತಿದ್ದ ನಾನು ಈಗ ಅದರ ಸಂಪೂರ್ಣ ನಿರ್ವಹಣೆ ಹೊತ್ತು, ಮಾಲೀಕನಂತೆ ಗತ್ತಿನಿಂದ ಮುಂಬದಿಯಲ್ಲಿ ಕುಳಿತು ಎಲ್ಲರಿಗೂ ನಿರ್ದೇಶನವೀಯುತ್ತಿರುವೆ. ರಾಕಾನ ಅತೀ ಪ್ರಮುಖ ವ್ಯವಹಾರವನ್ನು ನೋಡಿಕೊಳ್ಳುತ್ತಿರುವೆ. ಡೆಮೋನ್ ನ ಮೋನ್ಸ್ಟಾರ್ ವೆಬ್ ನಂತಹ ಪ್ರಬಲ ಗುಂಪಿನ ಮಾಲುಗಳನ್ನು ಸುರಕ್ಷಿತವಾಗಿ ಸಾಗಿಸುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವೆ........ 
ಅಂದರೆ........ ನಾನು ರಾಕಾನ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವೆ ಅಲ್ಲವೇ.......? ಅವನಿಗೆ ನನ್ನ ಮೇಲೆ ನಂಬಿಕೆ ಇಲ್ಲವಾಗಿದ್ದರೆ ಇಷ್ಟು ಮಹತ್ವದ ಕೆಲಸಗಳ ಮಾಹಿತಿಯನ್ನು ನನಗೆ ನೀಡಿ, ಈ ಕೆಲಸ ವಹಿಸುತ್ತಿರಲಿಲ್ಲ ತಾನೇ?
ಇದಲ್ಲವೇ ಪ್ರಗತಿ....... ಇದೇ ತಾನೇ ಬೆಳವಣಿಗೆ....... ಮೇರಾ ತರಖ್ಖೀ........!!! ಆ ದಿನಗಳಲ್ಲಿ ಇದೆಲ್ಲವೂ ನನ್ನ ಸಾಧನೆ ಎಂದೇ ಅನಿಸುತ್ತಿತ್ತು. ಆದರೆ ಈ ತರಖ್ಖೀ ಭವಿಷ್ಯದಲ್ಲಿ ನನ್ನಿಂದ ವಸೂಲಿ ಮಾಡಲಿರುವ ಸುಂಕ ಎಂತಹದು ಎಂಬುದರ ಕಿಂಚಿತ್ ಸುಳಿವಿರಲಿಲ್ಲ ನನಗೆ......

ಈಗಿನ ಕಲ್ಕತ್ತಾ ಟು ಢಾಕಾ ಪಯಣ ಹಿಂದಿನ ಪಯಣಕ್ಕಿಂತಲೂ ಬಹಳ ಭಿನ್ನವಾಗಿತ್ತು. ಆಗ ನನ್ನ ಅರಿವಿಗೆ ಬಾರದ ಹಲವು ಒಳಸುಳಿಗಳು, ತಂತ್ರಗಳು ಈಗ ನನ್ನ ಗ್ರಹಿಕೆಗೆ ಸ್ಪಷ್ಟವಾಗಿದ್ದವು. ಅತ್ಯಂತ ವ್ಯವಸ್ಥಿತ ಕಾರ್ಯನಿರ್ವಹಣೆಯ ವ್ಯವಸ್ಥೆಯೊಂದು ನನ್ನ ಕಣ್ಣೆದುರಿಗೆ ತೆರೆದುಕೊಂಡಿತ್ತು. 

ಮುಂಚೆ ಕಲ್ಕತ್ತಾದಿಂದ ಬೋನ್ಗಾ-ಬಾಲೂರ್ಘಾಟ್ ಮಾರ್ಗವಾಗಿ ಈ ವಾಹನಗಳು ಬಾಂಗ್ಲಾದೇಶವನ್ನು ತಲುಪುವ ಈ ಪಯಣಕ್ಕೆ ರಾಕಾ ಕೈಗೊಳ್ಳುವ ಸುರಕ್ಷತಾ ಕ್ರಮಗಳು ನಿಜಕ್ಕೂ ಬೆರಗು ಹುಟ್ಟಿಸುವಂತಿತ್ತು. ಈ ವಾಹನಗಳಿಗೆ ಹೆದ್ದಾರಿಗಳ ಬಳಕೆ ಬಹುಪಾಲು ನಿಷಿದ್ಧ. ಏಕೆಂದರೆ ಗಡಿಭಾಗವಾದ ಕಾರಣ ಇಲ್ಲಿನ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟುಗಳು, ಪೋಲಿಸ್ ಹಾಗೂ ಮಿಲಿಟರಿ ಕಣ್ಗಾವಲು ವಿಪರೀತ. ಹಾಗಾಗಿಯೇ ಮುರ್ಷಿದಾಬಾದ್, ಉತ್ತರ ಇಪ್ಪತ್ನಾಲ್ಕು ಪರಗಣ, ಮಾಲ್ದಾ ಜಿಲ್ಲೆಗಳ ದಟ್ಟ ಅರಣ್ಯಗಳೊಳಗಿನ ಬಳಸು ಹಾದಿಗಳ ಮೂಲಕ ಬಾಂಗ್ಲಾದೇಶದ ಸೀಮೆಯೊಳಗೆ ತಲುಪುತ್ತವೆ ಈ ವಾಹನಗಳು. ಒಂದು ಹಾದಿಯನ್ನೇ ಹೆಚ್ಚು ಸಮಯ ಬಳಸುವಂತಿಲ್ಲ. ಪದೇ ಪದೇ ಈ ಒಳಹಾದಿಗಳು ಬದಲಾಗುತ್ತಿರುತ್ತವೆ. ಒಮ್ಮೆ ಒಂದು ಹಾದಿಯಲ್ಲಿ ಮಾಲು ಸೀಜ಼್ ಆಯಿತೆಂದರೆ ಮತ್ತೆ ಆ ಹಾದಿಯನ್ನು ಬಳಸುವುದೇ ಇಲ್ಲ. ಬೇರೆ ದಾರಿಗಳನ್ನು ಅನ್ವೇಷಿಸಲಾಗುತ್ತದೆ. ದುರ್ಗಮವಾದ ದಟ್ಟಾರಣ್ಯ, ನದಿಗಳು, ಕಾಲುವೆಗಳು ಹಾಗೂ ಹೆಚ್ಚು ಬಳಕೆಯಲ್ಲಿ ಇಲ್ಲದ ಗಡಿ ಗ್ರಾಮಗಳ ಒಳ ಹಾದಿಗಳಿಗೆ ಸದಾ ಮೊದಲ ಆದ್ಯತೆ. ಇದಕ್ಕಾಗಿಯೇ ಪ್ರತ್ಯೇಕ ತಂಡವೊಂದಿದೆ. ಬೇರೆ ಬೇರೆ ಬದಲೀ ಹಾದಿಗಳನ್ನು ಗುರ್ತಿಸಿ, ಬೇಕಾದ ರಕ್ಷಣಾ ವ್ಯವಸ್ಥೆಗಳು, ಪರೀಕ್ಷಾರ್ಥ ಸಂಚಾರವನ್ನೂ ನಡೆಸಿ ಮಾರ್ಗಕ್ಕೆ ಹಸಿರು ನಿಶಾನೆ ತೋರುವುದೇ ಈ ತಂಡದ ಕೆಲಸ. ಅವರ ಅನುಮತಿಯ ನಂತರವೇ ಡ್ರಗ್ಸ್ ಹೊತ್ತ ವಾಹನಗಳು ಆ ಹಾದಿಯಲ್ಲಿ ಸಂಚರಿಸುವುದು.....

ಅದಲ್ಲದೇ ಡ್ರಗ್ಸ್ ಅನ್ನು ಇಲ್ಲಿಂದ ಅಲ್ಲಿಗೆ ಕೊಂಡೊಯ್ಯಲೂ ಒಂದು ವ್ಯವಸ್ಥೆಯಿದೆ. ದಿನವೂ ಭಾರತದಿಂದ ಹಲವು ದೈನಂದಿನ ಬಳಕೆಯ ವಸ್ತುಗಳು ಬಾಂಗ್ಲಾದೇಶಕ್ಕೆ ಸರಬರಾಜಾಗುತ್ತದೆ. ವಿವಿಧ ಫಲಗಳು, ಮಾಚ್ಚೀರ್(ಮೀನು), ದಿಮ(ಮೊಟ್ಟೆ), ಶಾಖ್ ಶೋಬ್ಜಿ(ತರಕಾರಿಗಳು), ಚಾನೆಲ್(ಅಕ್ಕಿ), ಆಲೂ, ಕಟ್ಹಲ್(ಹಲಸಿನ ಹಣ್ಣು), ಕುಮ್ರೋ(ಸಿಹಿಗುಂಬಳ), ಮಾಂಸ ಮುಂತಾದ ಆಹಾರಪದಾರ್ಥಗಳಲ್ಲದೇ ತೆಂಗಿನ ಚಿಪ್ಪುಗಳು, ಕಾಫಿನೇರ್(ಶವಪೆಟ್ಟಿಗೆ), ಗ್ಯಾಸ್ ಸಿಲಿಂಡರ್, ಆಯಿಲ್ ಕಂಟೈನರ್ ಇತ್ಯಾದಿ ವಸ್ತುಗಳೂ ದಿನಂಪ್ರತಿ ಭಾರತದಿಂದ ಬಾಂಗ್ಲಾಕ್ಕೆ ರವಾನೆಯಾಗುತ್ತವೆ. ಈ ವಸ್ತುಗಳೇ ಡ್ರಗ್ಸ್ ಸಾಗಾಣಿಕೆಯ ಮಾಧ್ಯಮ. ಇಂತಹ ವಾಣಿಜ್ಯ ವಸ್ತುಗಳ ಸೋಗಿನಲ್ಲಿ ಮರೆಮಾಚಿ ಮಾದಕ ಪದಾರ್ಥಗಳು ರವಾನಿಸಲ್ಪಡುತ್ತವೆ. ಈ ಆಹಾರ ಪದಾರ್ಥಗಳೊಳಗೆ ಡ್ರಗ್ಸ್ ಹುದುಗಿರುತ್ತದೆ. ಹಾಗೆಯೇ ಗ್ಯಾಸ್ ಸಿಲಿಂಡರ್, ಆಯಿಲ್ ಕಂಟೈನರ್, ಕಾಫೀನೇರ್ ಮುಂತಾದುವುಗಳ ಖಾಲಿ ಭಾಗಗಳಲ್ಲಿ ಸಣ್ಣ ಸಣ್ಣ ಗುಪ್ತ ಕೋಣೆಗಳನ್ನೂ, ಫಾಲ್ಸ್ ಬಾಟಮ್ಮುಗಳನ್ನೂ ಡ್ರಗ್ಸ್ ಸಾಗಾಣಿಕೆಗಾಗಿಯೇ ವಿನ್ಯಾಸಗೊಳಿಸಲಾಗುತ್ತದೆ. ಮೇಲ್ನೋಟಕ್ಕೆ ವಾಹನಗಳಲ್ಲಿ ಡ್ರಗ್ಸ್ ಇದೆಯೆಂದು ಯಾರೂ ಗುರುತಿಸಲಾಗುವುದಿಲ್ಲ. ಹಾಗಿರುತ್ತದೆ ಅವುಗಳ ರಚನೆ.

ಡ್ರಗ್ಸ್ ಹೊತ್ತ ವಾಹನ ಬಂಗಾಳದಿಂದ ಬಾಂಗ್ಲಾದೇಶದಲ್ಲಿನ ತನ್ನ ಗಮ್ಯ ತಲುಪುವವರೆಗೂ ಅದರ ಪಹರೆ ಕಾಯಲು ಹಾಗೂ ಕ್ಲಿಯರಿಂಗ್ ಸಿಗ್ನಲ್ ನೀಡಲು ಮುಖ್ಯ ವಾಹನದಿಂದ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಇನ್ನೊಂದು ವಾಹನವಿರುತ್ತಿತ್ತು. ದಾರಿಯಲ್ಲಿ ಯಾವುದೇ ರೀತಿಯ ಅಪಾಯ, ಅಡೆತಡೆಗಳು ಕಂಡುಬಂದಲ್ಲಿ ಈ ಪಹರೆ ವಾಹನಗಳಿಂದ ಮುಖ್ಯ ವಾಹನಕ್ಕೆ ಹಾದಿ ಬದಲಿಸಲು ಸಂದೇಶ ರವಾನೆಯಾಗುತ್ತಿತ್ತು. ಹಾಗಾಗಿ ಚೆಕ್ ಪೋಸ್ಟ್, ಸೀಜ಼್ ಅಂತಹ ಅಪಾಯಕ್ಕೆ ಈ ವಾಹನಗಳು ಸಿಲುಕುವುದೇ ಕಡಿಮೆ. ಅದರಲ್ಲೂ ಹೆಚ್ಚಾಗಿ ರಾತ್ರಿಯ ಹೊತ್ತು, ಮುಖ್ಯ ರಸ್ತೆಗಳು ಹಾಗೂ ಜನವಸತಿಯಿಂದ ಪ್ರತ್ಯೇಕವಾಗಿರುವ ನಿರ್ಜನ ಹಾದಿಗಳಲ್ಲೇ ಈ ವಾಹನಗಳ ಸಂಚಾರ.

ಬಂಗಾಳದ ಗಡಿಯಲ್ಲಿ ಪೋಲಿಸ್ ಹಾಗೂ ಮಿಲಿಟರಿ ಪಹರೆ ತೀರಾ ಹೆಚ್ಚಾಗಿದ್ದು ಎಲ್ಲಾ ಹಾದಿಗಳೂ ಅಪಾಯಕಾರಿ ಎನಿಸಿದಾಗ ಈಶಾನ್ಯ ರಾಜ್ಯಗಳ ಮೂಲಕ ಸಾಗುವ ಸುತ್ತಿನ ಮಾರ್ಗವೂ ಬಳಕೆಯಾಗುತ್ತಿತ್ತು ವಿಲೇವಾರಿಗೆ. ತ್ರಿಪುರಾದ ಅಗರ್ತಲಾ - ಕೋಮಿಲ್ಲಾ - ಬ್ರಾಹ್ಮಣ್ಬರಿಯಾದ ಮುಖಾಂತರ ಢಾಕಾ ತಲುಪುವ ಹಾದಿಯ ಬಳಕೆ ಹೆಚ್ಚು. ಕಾರಣ ಈ ಮಾರ್ಗದಲ್ಲಿರುವ ದಟ್ಟಾರಣ್ಯದ ನಡುವೆ ಸಾಗುವ ಒಳಹಾದಿಗಳ ಲಭ್ಯತೆ. ಇದು ಬಾರ್ಡರ್ ಸೆಕ್ಯುರಿಟಿಯವರ ಕಣ್ತಪ್ಪಿಸಿ ಮಾಲನ್ನು ಸಾಗಾಣಿಕೆ ಮಾಡಲು ಬಹಳ ಅನುಕೂಲಕರವಾಗಿತ್ತು. ಅದರೊಂದಿಗೆ ಗೋಮ್ತಿ ಹಾಗೂ ಟೈಟಸ್ ನದಿಪಾತ್ರಗಳು ಬೋನಸ್. ಭೂಮಾರ್ಗದಲ್ಲಿ ಅಪಾಯದ ಸೂಚನೆ ಕಂಡ ಪಕ್ಷದಲ್ಲಿ ಈ ನದಿಗಳ ಮುಖಾಂತರ ಒಂದಿಷ್ಟು ಹಾದಿ ಕ್ರಮಿಸಿ ನಂತರ ಅರಣ್ಯದ ನಡುವಿನ ಕಾಲುಹಾದಿಗಳನ್ನು ಬಳಸಿ ಸಾಗಾಣಿಕೆ ಮಾಡುವುದು ಸುಲಭ. ಈ ಪ್ರದೇಶಗಳಲ್ಲೂ ರಾಕಾನ ಏಜೆಂಟುಗಳಿದ್ದರು ಕಟ್ಟೆಚ್ಚರದ ಗಮನವಿಡಲು.....

ಹೀಗೆ ಬಾಂಗ್ಲಾದೇಶಕ್ಕೆ ತಲುಪಿದ ಮಾದಕವಸ್ತುಗಳನ್ನು ಒಂದೇ ಪ್ರದೇಶದಲ್ಲಿ ಇರಿಸುತ್ತಿರಲಿಲ್ಲ. ಅದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ಅಲ್ಲಿಯೂ ಅಷ್ಟೇ.... ಸ್ಮಶಾನದಲ್ಲಿನ ಸಮಾಧಿಗಳು, ನೆಲದಡಿಯ ಭೂಗತ ಕೋಣೆಗಳು, ಗೋಡೆಯೊಳಗಿನ ಕೋಣೆಗಳು, ನೀರಿನ ಟ್ಯಾಂಕುಗಳು, ಕೊಳಗಳು..... ಇಂತಹ ವಿಚಿತ್ರ ಗುಪ್ತ ಸ್ಥಳಗಳಲ್ಲಿ, ಯಾರೂ ಭೇದಿಸಲಾಗದ ಚಕ್ರವ್ಯೂಹದಂತಹ ಸುರಕ್ಷತೆಯಲ್ಲಿ ಈ ಡ್ರಗ್ಸ್ ಶೇಖರಣೆ..... ನನಗಂತೂ ಇವರ ಸಂಘಟಿತ ವ್ಯವಸ್ಥೆಗಳ ಪರಿಯೇ ಸೋಜಿಗ ಹುಟ್ಟಿಸುತ್ತಿತ್ತು‌.

ನಮ್ಮಲ್ಲಿ ಜನರ ಸೇವೆಗಾಗಿ ರೂಪಿಸಿರುವ ಸರ್ಕಾರಿ ಸಂಸ್ಥೆಗಳು ಕೆಲಸ ನಿರ್ವಹಣೆಯ ಶೈಲಿ ನೋಡಿದರೆ ಭಗವಂತನಿಗೇ ಪ್ರೀತಿ. ಅಂತಹದರಲ್ಲಿ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕಾರ್ಯನಿರ್ವಹಣೆಯ ವೈಖರಿ ಕಂಡು ನಾನು ದಂಗಾಗಿದ್ದೆ. ಅದೆಷ್ಟು ಕರಾರುವಕ್ಕಾದ ರಚನಾತ್ಮಕ ವ್ಯವಸ್ಥೆ ಈ ಜನರ ಪ್ರಾಣ ಬಲಿಪಡೆಯುವ ದಂಧೆಗೆ? ಅದೇ ಜನರ ಕಲ್ಯಾಣವೇ ಗುರಿಯಾಗಿರುವ ಸರ್ಕಾರಿ ಕಛೇರಿಗಳಲ್ಲಿ ಸಹಾಯ ಬಯಸಿ ಬಂದವರನ್ನು ಕೇಳುವವರು ಗತಿಯಿರದಂತಹ ಅವ್ಯವಸ್ಥೆ. ನಮ್ಮಂತಹ ನಿರ್ಗತಿಕರ ಕಲ್ಯಾಣಕ್ಕಾಗಿಯೇ 'ಭಿಕ್ಷುಕರ ಪುನರ್ವಸತಿ ಕೇಂದ್ರ'ಗಳಿವೆ. ಈ ಕೇಂದ್ರಗಳಿಗೆ ಧನಸಹಾಯ ಮಾಡುವ ಉದ್ದೇಶಕ್ಕೆಂದೇ 'ಕೇಂದ್ರ ಪರಿಹಾರ ನಿಧಿ' ಇದೆ. ಜನರಿಂದ ವಸೂಲಿ ಮಾಡುವ ಆಸ್ತಿ ತೆರಿಗೆಯ ಮೇಲೆ 3%ನಷ್ಟು ಭಿಕ್ಷಾಟನಾ ಶುಲ್ಕವನ್ನು ಸರ್ಕಾರ ವಸೂಲಿ ಮಾಡಿ ಅದನ್ನು ಪರಿಹಾರ ನಿಧಿಗೆ ನೀಡುತ್ತದೆ. ಆದರೆ ಇವೆಲ್ಲವೂ ಎಂದೂ ನಮ್ಮನ್ನಂತೂ ತಲುಪಿಲ್ಲ. ಆ ಹಣದಿಂದ ಇಲಾಖೆಯ ಅಧಿಕಾರಿಗಳು ಸಿರಿವಂತರಾಗುತ್ತಿದ್ದಾರಷ್ಟೇ....... ಊರಿನ ತುಂಬೆಲ್ಲ ಬೆಗ್ಗರ್ಸ್ ಕಾಲೋನಿ ಎಂದು ಭಿಕ್ಷುಕ ಪರಿಹಾರ ಕೇಂದ್ರಗಳ ಹೆಸರಿದ್ದರೂ ಆ ಪ್ರದೇಶಗಳಲ್ಲಿ ಇರುವವರೆಲ್ಲಾ ಡಾಲರ್ಸ್ ಕಾಲೋನಿಯವರೇ....... ಇದಕ್ಕೇನು ಹೇಳುವುದು? ಒಂದೆರೆಡು ಬೆಗ್ಗರ್ಸ್ ಕಾಲೋನಿಗಳು ನಮ್ಮಂತವರಿಗೆ ತೆರೆದಿದ್ದರೂ ಅದರೊಳಗೆ ನಮಗೆ ಒಂದಿನಿತೂ ಸ್ವಾತಂತ್ರ್ಯವೇ ಇಲ್ಲ. ಜೈಲಿನಲ್ಲಿ ಖೈದಿಗಳು ಹೇಗೋ ಅದೇ ಸ್ಥಿತಿ ನಮ್ಮದೂ. ಒಂದು ವೇಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಮೂರು ತಿಂಗಳ ಸೆರೆವಾಸ ಬೇರೆ....... ಇದು ನಮ್ಮ ಸರ್ಕಾರ ಜನರ ಕಲ್ಯಾಣ ಮಾಡುವ ವೈಖರಿ.......

ಅದೇ ರಾಕಾನಂತಹ ಸಮಾಜ ದ್ರೋಹಿಗಳು ಡ್ರಗ್ಸ್ ಎಂಬ ವಿಷವನ್ನು ರಾಜಾರೋಷವಾಗಿ ದೇಶದಿಂದ ದೇಶಕ್ಕೆ ಸಾಗಿಸಿ ಅಮಾಯಕರ ಪ್ರಾಣ ತೆಗೆಯುತ್ತಾರೆ. ಅವರದು ಒಂದಿನಿತೂ ಲೋಪವಿಲ್ಲದ ಕಾರ್ಪೋರೇಟ್ ಕಾರ್ಯನಿರ್ವಹಣೆ. ಜೊತೆಗೆ ರಾಕಾನಂತಹವರು ಸಮಾಜದ ಅತೀ ಪ್ರತಿಷ್ಠಿತ ಸಂಭಾವಿತ ವ್ಯಕ್ತಿಗಳೆಂಬ ಮುಖವಾಡ ತೊಟ್ಟವರು. ಮುಖವಾಡದ ಹಿಂದಿನ ಅಸಲಿ ಚಹರೆ ಯಾರಿಗೆ ಬೇಕು? ಸಭೆ ಸಮಾರಂಭಗಳಲ್ಲಿ ವೇದಿಕೆ ಏರಿ ಜನಸೇವೆಯ ಬಗ್ಗೆ, ದೇಶವನ್ನು ಉದ್ಧರಿಸುವ ಬಗೆ ಹೇಗೆಂದು ಗಂಟೆಗಟ್ಟಲೆ ಭಾಷಣ ಹೊಡೆಯುವ, ಡ್ರಗ್ಸ್ ಮಾರುವವರನ್ನು ಗಲ್ಲಿಗೇರಿಸಬೇಕು, ಬಡ ನಿರ್ಗತಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಸಮಾಜದೆದುರು ಉಪದೇಶ ನೀಡುವ ದೀನಬಂಧು ರಾಜನಾಥ್ ಕೀರ್ತನೀಯ ಎಂಬಾತನೇ ದೇಶದ ತುಂಬಾ ಡ್ರಗ್ಸ್ ದಂಧೆ ಮಾಡುವ, ಜನರನ್ನು ಊಳಿಗದ ಆಳುಗಳಂತೆ ಬಳಸಿಕೊಳ್ಳುವ ರಾಕಾ ಎಂಬುದೇ ಅತೀ ದೊಡ್ಡ ದುರಂತ. ಈ ವಿಚಾರ ನಮ್ಮ ಸರ್ಕಾರಕ್ಕೆ, ಸಭ್ಯ ಸಮಾಜಕ್ಕೆ ತಿಳಿದಿಲ್ಲವೇ? ಹಲವರಿಗೆ ಖಂಡಿತಾ ಗೊತ್ತಿದೆ‌. ಆದರೆ ಯಾರೂ ಬಾಯಿ ತೆರೆಯಲಾರರು. ಎಲ್ಲರಿಗೂ ಅವನ ಹಣ ಹಾಗೂ ಉರುಳಬಹುದಾದ ತಮ್ಮ ಹೆಣದ ಭಯ. ಆ ಭಯವನ್ನೇ ತನ್ನ ಅಸ್ತ್ರವನ್ನಾಗಿಸಿ ಜಗತ್ತನ್ನು ಆಳುತ್ತಿದ್ದಾನೆ ರಾಕಾ. 

ಇಷ್ಟಕ್ಕೂ ಭಯೋತ್ಪಾದನೆ ನಿಗ್ರಹಿಸಬೇಕು, ಉಗ್ರಗಾಮಿಗಳ ಹುಟ್ಟಡಗಿಸಬೇಕು ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸುವವರಿಗೆ ತಮ್ಮ ನಡುವಲ್ಲೇ ಸಂಭಾವಿತನಂತೆ ಕುಳಿತು ಇಡೀ ದೇಶದ ರಕ್ಷಣಾ ವ್ಯವಸ್ಥೆಗೇ ಅಪಾಯ ತರುವ ರಾಕಾನಂತಹವರ ಸುಳಿವಾಗುವುದೇ ಇಲ್ಲವಲ್ಲ....... ದೇಶದ ಮೂಲೆಮೂಲೆಯಲ್ಲಿನ ಗಡಿ ಪ್ರದೇಶಗಳ ಮೂಲಕ ಡ್ರಗ್ಸ್ ಸಾಗಿಸಲು ಕಳ್ಳ ಮಾರ್ಗಗಳನ್ನು ಹುಡುಕಿಡುವನಲ್ಲ ಈ ರಾಕಾ....... ಇದೇ ಕಳ್ಳ ಹಾದಿಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರಗಳೂ ಸಾಗಾಣಿಕೆಯಾಗುವುದಿಲ್ಲವೇ? ಉಗ್ರರೂ ದೇಶದೊಳಗೆ ನುಸುಳಿ ತಮ್ಮ ಹೀನಕಾರ್ಯಗಳನ್ನು ಸಾಧಿಸಲು ಇದೇ ಹಾದಿಗಳನ್ನು ಬಳಸುವುದು ಇವರಿಗೆಲ್ಲಾ ತಿಳಿದಿಲ್ಲವೇ? ಖಂಡಿತಾ ಕೆಲವರಿಗಾದರೂ ತಿಳಿದಿದೆ.... ಆದರೆ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮಧ್ಯೆ ಇದರ ಬಗ್ಗೆ ಯಾರಿಗೂ ಗಮನವಿಲ್ಲ. ಯಾವಾಗಲಾದರೊಮ್ಮೆ ರೈಡುಗಳು, ಸೀಜ಼್ ಗಳು ಆದಾಗ ರಾಕಾನಂತಹ ಕುತಂತ್ರಿಗಳಿಂದ ಹೇರಳವಾಗಿ ಹಣ ಪಡೆದು ಯಾರೋ ನಾಲ್ಕು ಜನ ಸಣ್ಣಪುಟ್ಟ ಡ್ರಗ್ ಪೆಡ್ಲರುಗಳನ್ನೇ ದೊಡ್ಡ ಡ್ರಗ್ ಡೀಲರುಗಳೆಂಬಂತೆ ಬಿಂಬಿಸಿ ಕಾಟಾಚಾರದ ತನಿಖೆ ಮಾಡಿ ಮುಗಿಸುತ್ತಾರೆ. ಯಾರಾದರೂ ದಿಟ್ಟ ಅಧಿಕಾರಿಗಳು ನಿಯತ್ತಾಗಿ ತನಿಖೆ ನಡೆಸಿದರೆ, ಅವರು ಸಾಕ್ಷಾಧಾರಗಳನ್ನು ಕಲೆಹಾಕುವುದರೊಳಗೆ ಈ ಭೂಮಿಯಿಂದ ಅವರ ಅಸ್ತಿತ್ವವೇ ಅಳಿಸಿಹೋಗಿರುತ್ತದೆ.

ಯೋಚಿಸಿದಷ್ಟೂ ನನ್ನ ತಲೆ ಕಾದ ಹಂಚಿನಂತಾಗುತ್ತಿತ್ತು. ತೀರದ ರೋಷ, ತಡೆಯಲಾರದ ಆವೇಶ...... ಯಾರ ಮೇಲೆ ಎಂಬುದೇ ಅರಿವಾಗುತ್ತಿರಲಿಲ್ಲ ನನಗೆ. ಇಡೀ ಜಗತ್ತೇ ನನಗೆ ಅನ್ಯಾಯಗೈಯುತ್ತಿದೆಯೆಂಬ ಭಾವ...... 
ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬಿರ್ಜೂ ಚಾಚ ಹಾಗೂ ಅಶ್ರಫ್ ನನ್ನೊಂದಿಗೆ ಮುನಿಸಿಕೊಂಡು ಕೂತಿದ್ದರು. ಬಿರ್ಜು ಚಾಚನೊಂದಿಗೆ ಮಾತನಾಡಲು ಹೋದಾಗಲೆಲ್ಲ ಅವರದು ಒಂದೇ ಮಾತು....... 

"ತೂ ಪಹ್ಲೇ ಉಸ್ ಅಧೋಮ್ ಶೊಯ್ತಾನ್ ಕಾ ಸಂಗ್ ಛೋಡೋ.... ಫಿರ್ ಮೇರೆ ಸೇ ಬಾತ್ ಕರ್ನಾ" 
ಯಾವಾಗಲೂ ಇದೇ ಮಾತು. ಜೊತೆಗೊಂದಿಷ್ಟು ಉಪದೇಶ..... ಧರ್ಮ - ಅಧರ್ಮ, ಮಾನವತ್ವ - ದಾನವತ್ವದ ಬಗ್ಗೆ. ಇನ್ನು ಅಶ್ರಫ್ ಅಂತೂ ನನ್ನ ಮುಖವನ್ನೂ ನೋಡುತ್ತಿರಲಿಲ್ಲ. ನಾನು ಏನಾದರೂ ಹೇಳಹೋದರೆ ಅದನ್ನು ಕೇಳುವಷ್ಟು ವ್ಯವಧಾನವೂ ಇರುತ್ತಿರಲಿಲ್ಲ ಅವನಿಗೆ....... ಒಮ್ಮೆಯಂತೂ 
"ರಾಕಾನೊಂದಿಗೆ ಕೈಜೋಡಿಸಿ ನೀನೂ ಅದೇ ಅನ್ಯಾಯದ ಭಾಗವಾಗಿರುವ ನೀನು ನ್ಯಾಯ ಅನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಂಡಿರುವೆ" ಎಂದುಬಿಟ್ಟಿದ್ದ ಅಶ್ರಫ್. ಇವರಿಬ್ಬರ ಈ ಪರಿ ನನಗೆ ನಿಜಕ್ಕೂ ಯಾತನೆ ತರುತ್ತಿತ್ತು. ಬಿರ್ಜೂ ಚಾಚ ಹಾಗೂ ಅಶ್ರಫ್ ಹೊರತು ನನಗಾಗಿ ಯಾರಿದ್ದರು ಈ ವಿಶಾಲ ಜಗದಲ್ಲಿ? ನನ್ನ ತಂದೆ, ತಾಯಿ, ಸ್ನೇಹಿತ, ಬಂಧು, ಬಳಗ ಎಲ್ಲವೂ ಅವರಿಬ್ಬರೇ..... ಅವರಿಬ್ಬರ ನಿರ್ಲಕ್ಷ್ಯ ನನ್ನನ್ನು ಕೊಲ್ಲುತ್ತಿತ್ತು. ಆದರೆ ರಾಕಾನ ಅಭೇದ್ಯ ಚಕ್ರವ್ಯೂಹದೊಳಗೆ ಹೊಕ್ಕಾಗಿತ್ತು. ಹೊರಬರಬೇಕೆಂದರೂ ಸಾಧ್ಯವಾಗದ ಸ್ಥಿತಿ. ಜೊತೆಗೇ ಅವನ ಬಗ್ಗೆ ತಿಳಿಯಬೇಕಾದದ್ದು ಇನ್ನೂ ಬಹಳವಿದೆಯೆಂಬ ಸತ್ಯವೂ ನನ್ನನ್ನು ಹಿಂತೆಗೆಯುವಂತೆ ಮಾಡುತ್ತಿತ್ತು....

ಒಟ್ಟಿನಲ್ಲಿ ನಾನು ರಾಕಾನ ಸಾಮ್ರಾಜ್ಯ ಹೊಕ್ಕ ಕ್ಷಣವೇ ನನ್ನ ಅತ್ಯಾಪ್ತರಿಬ್ಬರು ನನ್ನಿಂದ ದೂರ ಸರಿದಿದ್ದರು. ಅವರ ಮಾತುಗಳನ್ನು ಕೇಳಿ ರಾಕಾನ ಸಾಮ್ರಾಜ್ಯದಿಂದ ಹೊರಬರಬೇಕೋ ಇಲ್ಲಾ ನನ್ನ ಯೋಚನೆಯಂತೆ ರಾಕಾನ ಸಾಮ್ರಾಜ್ಯದ ಆಳವನ್ನು ಹೊಕ್ಕಬೇಕೋ ಎಂಬ ನಿರ್ಧರಿಸಲಾರದ ದ್ವಂದ್ವದಲ್ಲಿ ತೊಳಲಾಡುತ್ತಿದ್ದೆ.

ಇಂತಹ ಸಮಯದಲ್ಲೇ ನಡೆದಿತ್ತು ಒಂದು ಘಟನೆ.....

ನಾಲ್ಕು ದಿನಗಳ ಢಾಕಾ ಪಯಣ ಮುಗಿಸಿ ಆ ಸಂಜೆಯಷ್ಟೇ ನಾನು ಬಿಡಾರಕ್ಕೆ ವಾಪಾಸಾಗಿದ್ದೆ. ನನಗಾಗಿಯೇ ರಾಕಾ ಪ್ರತ್ಯೇಕ ಕೋಠಿಯೊಂದನ್ನು ನೀಡಿದ್ದನಾದರೂ ಅಲ್ಲಿ ನಿಲ್ಲಲು ಮನಸ್ಸಾಗುತ್ತಿರಲಿಲ್ಲ ನನಗೆ. ಬಿಡಾರಕ್ಕೆ ಬಂದು ಅಶ್ರಫ್ ಹಾಗೂ ಚಾಚಾನ ಮೊಗ ನೋಡದಿದ್ದರೆ, ಮಾತನಾಡಲು ಯತ್ನಿಸದಿದ್ದರೆ ನೆಮ್ಮದಿಯಿರುತ್ತಿರಲಿಲ್ಲ ನನಗೆ. ಹಾಗೆಯೇ ಅಂದೂ ಅವರಿಬ್ಬರನ್ನು ಮಾತನಾಡಿಸುವ ಯತ್ನದಲ್ಲಿ ಸೋತು ಅಲ್ಲೆ ಕಲ್ಲಿನ ಮೇಲೆ ಸುಮ್ಮನೆ ಕುಳಿತ್ತಿದ್ದೆ. ಹುಣ್ಣಿಮೆಯ ರಾತ್ರಿಯ ವಾತಾವರಣ ಹಿತವಿದ್ದ ಕಾರಣ ಬಿಡಾರದ ಸರ್ವರೂ ಹೊರಗೇ ಇದ್ದರು. ಯಾವ್ಯಾವುದೋ ಗುಂಪು ಚರ್ಚೆಗಳು, ತಮ್ಮದೇ ನೋವು ನಲಿವು ನಿಟ್ಟುಸಿರಿನ ಹಂಚಿಕೆ.......

ನನ್ನ ಬದಿಗೆ ಸ್ವಲ್ಪ ದೂರದಲ್ಲಿ ಕುಳಿತ ಹುಡುಗನೊಬ್ಬ ಅವನಷ್ಟಕ್ಕೇ ಅವನೇ ಹಾಡಿಕೊಳ್ಳುತ್ತಿದ್ದ.......

ಮೋನೆ ಪೋರೆ ರೂಬಿ ರಾಯ್.......
ಕೋಬಿತಾಯ್ ತೋಮಾಕೆ
ಏಕ್ದಿನ್ ಕೋತೋ ಕೋರೆ ದೇಖೇಚಿ...
ಆಜ್ ಹಾಯ್ ರೂಬಿ ರಾಯ್
ದೇಖೇ ಬೋಲೋ ಅಮಾಕೇ
ತೊಮಾಕೆ ಕೊತ್ಥಾಯ್ ಜೇನೋ ದೇಖೇಚಿ........

ಅವನ ಹಾಡನ್ನೇ ಕೇಳುತ್ತ ಮೈಮರೆತ್ತಿದ್ದ ನನ್ನನ್ನು, 

"ಎಲ್ಲಾ ಕಡೆಯೂ ಹುಡುಕಿದೆ. ಆದರೆ ರೋಬಿಂದ್ರ ಎಲ್ಲೂ ಕಾಣುತ್ತಿಲ್ಲ" ಎಂಬ ಹೆಣ್ಣೊಬ್ಬಳ ಕೂಗು ಇಹಕ್ಕೆ ಕರೆತಂದಿತ್ತು........

ಸಶೇಷ

ಟಿಪ್ಪಣಿಗಳು:

ದೇಶದ ಗಡಿಸೀಮೆಗಳಲ್ಲಿನ ಡ್ರಗ್ಸ್ ಕಳ್ಳಸಾಗಾಣಿಕೆ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂಬುವುದಕ್ಕೆ ಹಲವು ನಿದರ್ಶನಗಳು ದೊರಕುತ್ತವೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಾಣಿಕೆಗೆ ಬಳಸುವ ಕಳ್ಳ ಮಾರ್ಗಗಳನ್ನೇ ಉಗ್ರರು ದೇಶದೊಳಗೆ ನುಸುಳಲು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಗೂ ಬಳಸಲಾಗುತ್ತದೆ ಎಂಬ ತರ್ಕ ಬಹಳ ಹಿಂದಿನಿಂದಲೂ ಚರ್ಚಿತ ವಿಚಾರ. 1993ರ ಮುಂಬೈ ಸರಣಿ ಸ್ಪೋಟದಲ್ಲಿ ಬಳಕೆಯಾದ ಆಯುಧ ಹಾಗೂ ಸ್ಪೋಟಕಗಳನ್ನು 'ಡಿ ಗ್ಯಾಂಗ್'(ದಾವೂದ್ ಇಬ್ರಾಹಿಂ ಗ್ಯಾಂಗ್) ಡ್ರಗ್ಸ್ ಕಳ್ಳಸಾಗಾಣಿಕಾ ಹಾದಿಗಳ ಮೂಲಕವೇ ಭಾರತಕ್ಕೆ ರವಾನಿಸಿತ್ತು ಎಂಬುದಾಗಿ ಹಲವು ತನಿಖಾ ಸಿದ್ಧಾಂತಗಳು ಪ್ರತಿಪಾದಿಸಿವೆ. ಹಾಗೆಯೇ ಇತ್ತೀಚಿನ ಪಠಾಣ್ ಕೋಟ್ ಮೇಲೆ ಭಯೋತ್ಪಾದಕ ದಾಳಿಯ ತನಿಖೆಯೂ ಉಗ್ರರು ಭಾರತ ಪಾಕ್ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಾಣಿಕೆ ಮಾಡುವ ಮಾರ್ಗದಿಂದ ಭಾರತದೊಳಗೆ ಪ್ರವೇಶಿಸಿದ್ದರು ಎಂಬ ಸುಳಿವನ್ನು ನೀಡಿದೆ‌.

ಈ ಅಕ್ರಮ ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಹವಾಲಾ, ನೇಪಾಳದ ಕ್ಯಾಸಿನೋಗಳು, ಬೇನಾಮಿ ಖಾತೆಗಳ(methods of money laundering) ಮೂಲಕ ಈ ಅಕ್ರಮ ಹಣ ವರ್ಗಾವಣೆ ನಡೆಯುತ್ತದೆ. ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕಗಳ ಖರೀದಿಗೆ ಇದೇ ಹಣ ಬಳಕೆಯಾಗುತ್ತದೆ. ಒಂದು ಮೂಲದ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಬಳಕೆಯಾಗುವ ಹಣಕಾಸಿನಲ್ಲಿ ಅಂದಾಜು 15% ಡ್ರಗ್ಸ್ ಮಾರಾಟದಿಂದ ಬರುವುದು. ಇಷ್ಟಲ್ಲದೇ ಅವ್ಯಾಹತವಾಗಿ ಸಾಗಿರುವ ಅಕ್ರಮ ಡ್ರಗ್ಸ್ ದಂಧೆಯಿಂದಾಗಿ ದೇಶದ ಜನತೆ, ಅದರಲ್ಲೂ ಯುವ ವರ್ಗ ನಶೆಯ ಚಟಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಸಂಬಂಧಿ ಅಪರಾಧಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. 

"ಮೋನೆ ಪೋರೆ ರೂಬಿ ರಾಯ್" ಆರ್.ಡಿ. ಬರ್ಮನ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಜನಪ್ರಿಯ ಬೆಂಗಾಲಿ ಗೀತೆ. ಆಶಾ ಭೋಸ್ಲೆ ಅವರೊಂದಿಗೆ ಸ್ವತಃ ಆರ್.ಡಿ ಬರ್ಮನ್ ಅವರೇ ಈ ಹಾಡಿಗೆ ದನಿಯಾಗಿದ್ದಾರೆ. ಹಿಂದಿಯ ಅನಾಮಿಕಾ ಸಿನಿಮಾದ ಕಿಶೋರ್ ಕುಮಾರ್ ಅವರ ಕಂಠ ಸಿರಿಯ ಜನಪ್ರಿಯ "ಮೇರೆ ಭೀಗಿ ಭೀಗಿ ಸೀ‌ ಪಲ್ಕೋ ಪೆ" ಹಾಡಿನ ಮೂಲ ಇದೇ "ಮೋನೆ ಪೋರೆ ರೂಬಿ ರಾಯ್".

ಮಾಹಿತಿ ಮೂಲ:

https://www.unodc.org/unodc/en/data-and-analysis/bulletin/bulletin_1957-01-01_1_page003.html

https://www.wionews.com/south-asia/drug-trafficking-a-challenge-to-national-security-17448/amp#aoh=15740798708692&referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fwww.wionews.com%2Fsouth-asia%2Fdrug-trafficking-a-challenge-to-national-security-17448%2Famp%23aoh%3D15740798708692%26referrer%3Dhttps%253A%252F%252Fwww.google.com%26amp_tf%3DFrom%2520%25251%2524s

https://www.prajavani.net/business/commerce-news/what-hawala-and-why-it-illegal-662637.html

1 ಕಾಮೆಂಟ್‌:

  1. ನಾನು ಆಗ ಕೇಳಿದ ಪ್ರಶ್ನೆಗೆ ಉತ್ತರ ಇಲ್ಲಿದೆ. ಒಳ್ಳೆಯ ಉದಾಹರಣೆ ಕೊಟ್ರಿ, ನಮ್ಮ ಸರಕಾರಿ ಸೌಲಭ್ಯಕ್ಕೇ ಇಲ್ಲದ ಪ್ಲಾನಿಂಗ್ ಡ್ರಗ್ಸ್ ದಂಧೆ ಮಾಡುವವರು ಎಷ್ಟು ಚೆನ್ನಾಗಿ ಪ್ಲಾನ್ ಮಾಡಿದ್ದಾರೆ. ದುಡ್ಡು ಪವವರ್ ಎಲ್ಲವೂ ನಮ್ಮ ದೇಶದಲ್ಲಿ ಮಾತನಾಡುತ್ತೇ

    ಪ್ರತ್ಯುತ್ತರಅಳಿಸಿ