ಭಾನುವಾರ, ಸೆಪ್ಟೆಂಬರ್ 13, 2020

ಅಗ್ನಿ ತರಂಗಿಣಿ 10

ಅಭಿನವ ದ್ರೌಪದಿಯರು

ಚಾಚಿಯ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಮೇಲಿಂದ ಮೇಲೆ ತಪ್ಪುಗಳನ್ನು ಮಾಡುತ್ತಲೇ ರಾಜಾರೋಷವಾಗಿ ಎದೆಯುಬ್ಬಿಸಿ ತಲೆಯೆತ್ತಿ ಓಡಾಡುವ ನನ್ನ ಸುತ್ತಲಿನ ಜನರ ಬಗ್ಗೆ ತಿರಸ್ಕಾರ ಬೆಳೆಯತೊಡಗಿತು. ಈ ಅನ್ಯಾಯಗಳೆಲ್ಲವನ್ನೂ ಬದಲಾಯಿಸಿಬಿಡಬೇಕೆಂಬ ತವಕ ಅತಿಯಾಗಿ ಅನ್ಯಾಯ, ತಪ್ಪು ಎನಿಸಿದ್ದನ್ನು ಯಾವ ಎಗ್ಗಿಲ್ಲದೇ ನೇರಾನೇರ ವಿರೋಧಿಸುವಷ್ಟು ತೀಕ್ಷ್ಣಳಾಗತೊಡಗಿದೆ. ಹೊರ ಜಗತ್ತಿನ ಪಾಲಿಗೆ ನನ್ನ ಮಾತುಗಳು ಕಠೋರವಾಗತೊಡಗಿದವು. ತಲೆತಲಾಂತರಗಳಿಂದ ನಡೆದುಕೊಂಡು ಬಂದ ತಲೆಬುಡವಿಲ್ಲದ ಹಲವು ನೀತಿ, ನಿಯಮ, ಆಚರಣೆಗಳನ್ನು ಪ್ರಶ್ನಿಸುವ ನನ್ನ ನಡವಳಿಕೆ ನನಗೆ ಸಮಾಜ ವಿರೋಧಿ, ಬಂಡಾಯಗಾರ್ತಿ, ವಿದ್ರೋಹಿಯೆಂಬ ಬಿರುದುಗಳನ್ನು ದಯಪಾಲಿಸಿತು. ಭೈರೋನ್ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ನನ್ನ ಗುರುತು 'ಬಾಗೀ ಸಿಯಾ' ಎಂದು ಬದಲಾಯಿತು‌. ನಾನು ಉದ್ಧಟೆಯಾಗಿ, ಸಮುದಾಯದಿಂದ ಹೊರಗಿನವಳಾಗಿ ಗುರುತಿಸಲ್ಪಡತೊಡಗಿದೆ......

ಆದರೆ ಆ ಬಗ್ಗೆ ಯಾವ ಚಿಂತೆಯಿಲ್ಲ ನನಗೆ. ಚಿಂತಿಸಬೇಕಾದ ಅಗತ್ಯವಾದರೂ ಏನಿತ್ತು? ಇವರ್ಯಾರೂ ಎಂದೂ ಕ್ಷಣಮಾತ್ರಕ್ಕೂ ನನ್ನ ಬಗ್ಗೆ ಚಿಂತಿಸಿದವರಲ್ಲ, ಯೋಚಿಸಿದವರಲ್ಲ.
ಆದರೆ ಚಾಚಿ...........? ನಾನು ಭುವಿಗೆ ಬಿದ್ದ ಕ್ಷಣದಿಂದ ಅವಳು ನನಗಾಗಿಯೇ ಬದುಕಿದವಳು. ಅವಳ ಮುಂಜಾನೆಗಳು ನನ್ನ ಹಿತದ ನಿರೀಕ್ಷೆಯಲ್ಲಿ ಆರಂಭವಾದರೆ, ನನ್ನ ಭವಿಷ್ಯದ ಚಿಂತೆಯಲ್ಲಿ ಅವಳ ಸಂಜೆಗಳು ಜಾರುತ್ತಿದ್ದವು. ನಿದ್ರಾಹೀನ ರಾತ್ರಿಗಳಲ್ಲಿ ಅವಳು ಕಣ್ತೆರೆದೇ ಕಾಣುವ ಕನಸುಗಳೂ ಇರುತ್ತಿದ್ದುದು ನನ್ನ ಬದುಕಿನ ಸುತ್ತವೇ..... 'ನನ್ನ ಸಿಯಾಳ ಕನಸುಗಳೆಲ್ಲಾ ನನಸಾಗಲಿ' ಎಂಬ ಆಶಯದೊಂದಿಗೆ ಮತ್ತೊಂದು ಮುಂಜಾವಿನ ಸ್ವಾಗತಕ್ಕೆ ಸಿದ್ಧಳಾಗುತ್ತಿದ್ದಾಕೆ ನನ್ನ ಚಾಚಿ. ತನಗಾಗಿ ಎಂದೂ ಏನನ್ನೂ ಆಶಿಸಿದ ಜೀವವಲ್ಲ ಅದು.
ಅವಳ ಪ್ರಾರ್ಥನೆ, ಬೇಡಿಕೆ, ಪ್ರತೀಕ್ಷೆ, ನಿರೀಕ್ಷೆಗಳ ಉದ್ದಗಲಕ್ಕೂ ಇದ್ದವಳು ಈ ಬಿಟಿಯಾ ರಾನಿ ಮಾತ್ರವೇ. ಅಂತಹಾ ಚಾಚಿಗೆ ಅದೆಂತಹಾ ಯಾತನಾಮಯ ಸಾವು........ ಅವಳ ನರಳುವಿಕೆಯ ಯಾತನೆ ಇಂದಿಗೂ ನನ್ನ ಕರಣಗಳನ್ನು ತಾಕುತ್ತಿದೆಯೇನೋ ಎನಿಸುತ್ತದೆ. ಅಮ್ಮಂದಿರ ಮಮತೆ ತುಂಬಿದ ಯಾವ ಬೇಡಿಕೆಯನ್ನೂ ಭಗವಂತ ತಿರಸ್ಕರಿಸುವುದಿಲ್ಲ ಎಂದು ಸದಾಕಾಲ ಹೇಳುತ್ತಿದ್ದಳು ಚಾಚಿ. ಸಾವಿನ ಮನೆಗೆ ಪಯಣಿಸುವ ಆ ಕ್ಷಣಗಳಲ್ಲಿ ಆಕೆಯ ನಿಸ್ತೇಜ ಕಣ್ಣುಗಳಲ್ಲಿ 'ಸಿಯಾಳಿಗೋಸ್ಕರವಾದರೂ ನನ್ನನ್ನು ಬದುಕಿಸು ದೇವಾ' ಎಂಬ ಕೋರಿಕೆಯಿತ್ತು. ಆದರೆ ಅದೇಕೋ ಆ ದೇವನಿಗೆ ನನ್ನಮ್ಮನ ಅಳಲು ಕೇಳಲೇ ಇಲ್ಲ...

ಮನೆಯವರಿಗಂತೂ ಅವಳು ಬದುಕಿಗೂ ಸಾವಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಆದರೆ ಆ ದಿನ ಊರ ಜನರಲ್ಲಿ ಕಡೇಪಕ್ಷ ಯಾರಾದರೊಬ್ಬರು ಚಾಚಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳೇನೋ...... ಆಗ ಕನಿಷ್ಠ ಮಾತ್ರದ ಮಾನವೀಯತೆ ತೋರದವರು ಅವಳು ಸತ್ತ ನಂತರ ಸಂತಾಪ ಸೂಚಿಸಿ ತಿಪ್ಪೆ ಸಾರಿಸಲು ದಂಡಿಯಾಗಿ ಆಗಮಿಸಿದರು. ಇಂತಹ ಹೃದಯಹೀನ ಜನ ಬದುಕಿದ್ದೂ ಸತ್ತಂತೆಯೇ ನನ್ನ ಪಾಲಿಗೆ. ಇವರಿಗೆ ನನ್ನ ಬಗ್ಗೆ ಯಾವ ಅಭಿಪ್ರಾಯಗಳಿವೆ ಎಂಬುದು ನನಗೆ ಅನಗತ್ಯವಾಗಿತ್ತು. 

ಈ ಮನುಷ್ಯತ್ವವಿಲ್ಲದ ಅವಕಾಶವಾದಿ ಜನರಿಗೆ ಕರುಣೆ, ದಯೆ ದಾಕ್ಷಿಣ್ಯಗಳೆಂಬುದೇ ಇಲ್ಲ ಎಂಬುದು ಮುಂಚಿನಿಂದಲೂ ತಿಳಿದಿತ್ತಾದರೂ ಚಾಚಿಯ ಸಾವಿನ ಬಳಿಕ ಅದು ಇನ್ನೂ ಸ್ಪಷ್ಟವಾಗತೊಡಗಿತ್ತು. ನಾವು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸಿದಷ್ಟೂ ಅದನ್ನೇ ನಮ್ಮ ಬಲಹೀನತೆ ಎಂದುಕೊಂಡು ಪಾದದಡಿ ಹೊಸಕಿ ದಮನಿಸುವ ಲೋಕವಿದು. ಅನಾದಿ ಕಾಲದಿಂದ ಮೌನವಾಗಿ ಸಹಿಸಿ ಸಹಿಸಿ ಹೊಂದಿಕೊಂಡು ಬದುಕಿದೆವಲ್ಲಾ ನಾವು...... ಅದರಿಂದ ಸಾಧಿಸಿದ್ದಾದರೂ ಏನು? ನನಗಿಂತ ಮುಂಚಿನ ಎರಡು ಹೆಣ್ಣುಕೂಸುಗಳ ಹನನವನ್ನು ಕಂಡವಳು ನನ್ನ ಮಾಯಿ... ಆದರೂ ಆಕೆ ಪ್ರತಿಭಟಿಸದೇ ಸಹಿಸಿಕೊಂಡಳು. ಆ ಸಹನೆಗೆ ಸಿಕ್ಕ ಬೆಲೆಯೇನು? ಬಾಪೂ ಇನ್ನೊಬ್ಬ ಲುಗಾಯಿಯನ್ನು ಕರೆತಂದ. ಮಾಯಿ ಕೊಟ್ಟಿಗೆ ಪಾಲಾದಳು. ಕೊನೆಗೊಮ್ಮೆ ನನ್ನ ಹೆತ್ತು ಸತ್ತಳು. ಚಾಚಿಯದೂ ಹೆಚ್ಚುಕಡಿಮೆ ಅದೇ ಪುನರಾವರ್ತನೆ. ಬಹುಶಃ ಮಾಯಿ ಹಾಗೂ ಚಾಚಿಯ ಹೆತ್ತಬ್ಬೆಯರದ್ದೂ ಇದೇ ತೆರನಾದ ಕಥೆಯಿರಬಹುದು. ಆದರೂ ಅವರ್ಯಾರೂ ಪ್ರತಿರೋಧ ತೋರಲಿಲ್ಲ. ಎಲ್ಲವನ್ನೂ ಸಹಿಸಿದರು.... ಸಹಿಸಿ ಸಹಿಸಿ ಕೊನೆಗೊಮ್ಮೆ ಅದೇ ಸಹನೆಯೇ ಕತ್ತಿಗೆ ಉರುಳಾಯಿತಷ್ಟೇ ಹೊರತು ಬೇರ್ಯಾವ ಸಾಧನೆಯಾಯಿತು ಸಹನೆಯಿಂದ?

ಇನ್ನು ಗಂಡು ಮಗು ಜನಿಸಿದೊಡನೆ ತಾವೂ ಹೆಂಗಸರೇ ಎಂಬುದನ್ನೂ ಮರೆಯುವ ದಾದಿ, ಚೋಟಿ ಮಾಯಿಯಂತಹವರ ಬಣ್ಣಬದಲಿಸುವ ಗಿರ್ಗಿಟ್(ಗೋಸುಂಬೆ) ತರಹದ ಜೀವನದ ಬಗ್ಗೆಯಂತೂ ನೆನಸಿದರೆ ರೋಷ ಉಕ್ಕುತ್ತದೆ. ಇಲ್ಲಿ ಯಾರೂ ನಂಬಿಕೆಗೆ ಅರ್ಹರಲ್ಲ.

ಒಂದಂತೂ ನನಗೆ ಸ್ಪಷ್ಟವಾಗಿತ್ತು.
ಇದು ನನ್ನ ಬದುಕು...... ನನ್ನ ಹೋರಾಟ....... 
ಇಲ್ಲಿ ಗೆದ್ದರೂ, ಸೋತರೂ, ಸತ್ತರೂ ಅದು ನನಗೆ ಮತ್ತು ಕೇವಲ ನನಗೆ ಮಾತ್ರ ಸಂಬಂಧಿಸಿದ್ದು..... ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ಖಚಿತ ಎಂಬುದು ನಿಜವೇ. ಆದರೆ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಹುಟ್ಟಿದೊಡನೇ ಸಾವು ಖಚಿತ. ಅಂತಹದ್ದರಲ್ಲಿ ನಾನು ಇಷ್ಟು ಸುದೀರ್ಘ ವರ್ಷಗಳು ಬದುಕಿರುವೆನೆಂದರೆ.......!! 

ಹುಟ್ಟಿದೊಡನೇ ಜೀವ ಕಳೆದುಕೊಳ್ಳುವ ಅಸಂಖ್ಯಾತ ಲಾಲಿಯರಿಗಿಂತ ಅದೃಷ್ಟವಂತೆಯಲ್ಲವೇ ನಾನು......? ಎಲ್ಲರ ನಸೀಬಿನಲ್ಲಿರದ ಅದೃಷ್ಟ ನನ್ನ ಪಾಲಿಗೊಲಿದಿರುವಾಗ ಮಾಯಿ, ಚಾಚಿಯರಂತೆ ಮೂಕ ಹಸುವಿನ ಬಾಳ್ವೆ ನಡೆಸಿ ನರಳಿ ನರಳಿ ಸಾಯಬೇಕೇನು? ಎಷ್ಟೇ ಹೊಂದಿಕೊಂಡು ಬದುಕಿದರೂ ನರಳುವಿಕೆ, ಸಾವು ಎರಡೂ ನಿಶ್ಚಿತವೇ ಎಂದ ಮೇಲೆ ಸಹಿಸುವುದೇಕೆ.......?
ರಣಹೇಡಿಯಂತೆ ಅಂಜುತ್ತಾ ಬಾಳಿ ಸಾಯಲೇಕೆ.....? ಏನಾದರಾಗಲಿ..... ಊರಿಗೂರೇ ಗಯ್ಯಾಳಿ, ರೆಬೆಲ್ ಎಂದರೂ ತೊಂದರೆಯಿಲ್ಲ. ತಿರುಗಿಬಿದ್ದು ಹೋರಾಡಿಯೇ ಸಿದ್ಧ ಎಂದು ನಿರ್ಧರಿಸಿಬಿಟ್ಟೆ. ಅಷ್ಟೇ..... ನನ್ನ ಬದುಕು ಬದಲಾಯಿತು.  

ಮುಂಚೆಯಿಂದಲೂ ಸಣ್ಣ ಮಟ್ಟಿಗೆ ನನಗೆ ಇಷ್ಟವಾಗದ್ದನ್ನು ವಿರೋಧಿಸಿ, ಬೇಕಾದ ವಿಚಾರಗಳಿಗೆ ಮೊಂಡು ಹಿಡಿದು ಅಭ್ಯಾಸವಿತ್ತು ನನಗೆ. ಆದರೆ ಅದು ನನ್ನ ಮನೆಯ ನಾಲ್ಕು ಗೋಡೆಗಳ ನಡುವೆ........ ಅದೇ ನಾಲ್ಕು ಗೋಡೆಗಳ ಸಂಕುಚಿತ ಮನಸ್ಥಿತಿ ನಮ್ಮ ಸಮಾಜದ್ದು ಎಂಬುದು ಯಾವಾಗ ಅರಿವಾಗತೊಡಗಿತೋ ಆಗ ನನ್ನ ಬಂಡಾಯ ಮನೆಯ ನಾಲ್ಕು ಗೋಡೆಗಳ ಚೌಕಟ್ಟಿನಿಂದ ಸಮಾಜದ ಗೋಡೆಗಳ ಚೌಕಟ್ಟಿಗೆ ವಿಸ್ತರಿಸಿತು. ಹಾಗಾಗಿಯೇ ಮುಂಚೆ ಮನೆಗೆ ಮಾತ್ರ ಮಾರಿಯಾಗಿದ್ದ ನಾನು ಈಗ ಊರಮಾರಿಯಾಗಿ ಗುರುತಿಸಲ್ಪಡತೊಡಗಿದೆ. ಅಷ್ಟದಿಕ್ಕುಗಳಿಂದಲೂ ಬೈಗುಳದ ಮಂತ್ರಾಕ್ಷತೆಯೇ...... ಬಾಪುವಿಗೆ ದಿನೇದಿನೇ ನನ್ನ ಕುರಿತಾದ ದೂರುಗಳು, 'ಕಿತನೀ ಅಖಡ್ ಹೆ ರೇ ಥಾರೇ ಚೋರಿ ಕೋ? ಕೈಸೀ ಘಟಿಯಾ ಬಾತ್ ಕರ್ತೀ ಹೇ ಬೇಷರಮ್ ಕಹಿಕೀ..... ಏಕ್ ಚೋಕರಿ ಕೋ ಸಮ್ಹಾಲ್ ನಹೀ ಸಕ್ತಾ ತೂ?' ಎಂಬ ಬೈಗುಳಗಳು ಸರ್ವೇಸಾಮಾನ್ಯವಾಯಿತು. ಅವನು ಒಳಗೊಳಗೇ ಕ್ರೋಧದಿಂದ ಕುದಿಯತೊಡಗಿದ. ಆದರೆ ನಾನು ಚಾಚಾನ ತಲೆಯೊಡೆದ ಮೇಲೆ ಮನೆಯವರ ಮನದಲ್ಲಿ ನನ್ನ ಬಗೆಗೊಂದು ದಬಾಯಿಸಿ ಹೇಳಲಾರದಂತ ಭಯ ಮೂಡಿತ್ತು. ಹಾಗಾಗಿಯೇ ಬಾಪು 'ಈ ದರಿದ್ರ ಹೆಣ್ಣನ್ನು ತನ್ನ ಕೈಯಲ್ಲಿ ಹದ್ದುಬಸ್ತಿನಲ್ಲಿಡಲಾರದು' ಎಂದು ಕೈಚೆಲ್ಲಿ ಕೂತಿದ್ದ. 

ಆದಷ್ಟು ಬೇಗ ಯಾವನಿಗಾದರೂ ನನ್ನನ್ನು ಕಟ್ಟಿ ಕೈತೊಳೆದುಕೊಳ್ಳುವ ಯೋಚನೆಯಲ್ಲಿದ್ದರು ದಾದಿ, ಬಾಪು ಹಾಗೂ ಚೋಟಿ ಮಾಯಿ. ಕುಲ್ದೀಪ್ ಹಾಗೂ ಕುಲ್ಜೀತರಿಂದ ಅದು ನನಗೆ ತಿಳಿದಿತ್ತು ಕೂಡಾ....... ಆದರೆ ಆ ಸಮಯ ಬಂದಾಗ ನೋಡಿದರಾಯಿತೆಂದು ನಾನು ಈ ಬಗ್ಗೆ ಲಕ್ಷ್ಯವಹಿಸಲಿಲ್ಲ. ನನ್ನ ಮನಸ್ಸು ಪೂರ್ತಿಯಾಗಿ ಬಂಡಾಯದ ಹಾದಿಯಲ್ಲಿತ್ತು. ಆ ಬಂಡಾಯದಲ್ಲೇ ನನ್ನ ಮನಸ್ಸಿಗಾದ ನೋವಿಗೆ ಪರಿಹಾರ ಕಂಡುಕೊಳ್ಳುವ, ನೋವನ್ನು ಮರೆಯುವ ಯತ್ನ ನನ್ನದು. ನನ್ನ ಮೇಲ್ನೋಟದ ಅರಚಾಟದ ಮಾತುಗಳು, ಎಲ್ಲವನ್ನೂ ಪ್ರಶ್ನಿಸುವ ಕ್ರೋಧ ಪೂರಿತ ವರ್ತನೆಯನ್ನು ಲೋಕ ಗುರುತಿಸಿ ನನ್ನನ್ನು ಬಾಗೀ ಸಿಯಾ ಎಂದು ಹೀಯಾಳಿಸಿತು....

ಆದರೆ ನನ್ನ ಅಂತರಂಗ.....?? ಅದು ಯಾರ ಅರಿವಿಗೂ ಬಾರದೇ ಹೋಯಿತು. ಲೋಕದೆದುರು ರೆಬೆಲ್ ಆಗುತ್ತಾ ಹೋದಂತೆ ಆಂತರ್ಯದಲ್ಲಿ ನಾನು ವಿಪರೀತ ಮೌನಿಯಾದೆ. ನನಗೇ ನಿಭಾಯಿಸಲು ಸಂಕೀರ್ಣ ಎನಿಸುವಷ್ಟು ಏಕಾಂಗಿಯಾದೆ. ಲೋಕದೆದುರು ರಣಚಂಡಿಯಂತೆ ಹೋರಾಟಕ್ಕೆ ನಿಂತವಳು ಮನದೆದುರು ಅಳಲು ತೋಡಿಕೊಳ್ಳಲಾರದ ನಿರ್ಲಿಪ್ತೆಯಾಗಿ ಹೋದೆ. ಯಾಕೋ ಭಾವಗಳೆಲ್ಲಾ ಒಮ್ಮೆಲೇ ಬರಡಾಗಿ ಮನ ಬಂಜರು ಬೆಂಗಾಡು....... 

ಒಮ್ಮೊಮ್ಮೆ ಯಾರೊಂದಿಗೂ ಒಂದು ಮಾತೂ ಬೇಡವೆಂಬ ಭಾವ ಮೂಡಿದರೆ ಮಗದೊಮ್ಮೆ ಮನದ ಭಾವಗಳಿಗೆಲ್ಲಾ ಮಾತಿನ ರೂಪ ಕೊಟ್ಟು ಯಾರದಾದರೂ ಮಡಿಲಿನಲ್ಲಿ ಸಾಂತ್ವನ ಅರಸಬೇಕೆಂಬ ಹಂಬಲ...

ಒಮ್ಮೆ ಕಣ್ಣೀರ ಹನಿಗಳನೆಲ್ಲಾ ಮಂಜಿನಂತೆ ಘನೀಕರಿಸಿ ಹಿಮಪರ್ವತವಾಗಿಸುವ ಮನಸಾದರೆ ಇನ್ನೊಮ್ಮೆ ಕಾಡುವ ನೆನಪುಗಳ ಶಾಖದಲ್ಲಿ ಹೆಪ್ಪುಗಟ್ಟಿದ ನೋವನ್ನು ಕರಗಿಸಿ ಕಂಬನಿಯ ಬಿಂದುಗಳನ್ನು ಬಂಧಮುಕ್ತಗೊಳಿಸುವ ತಪನೆ......

ದ್ವಂದ್ವಗಳಲ್ಲಿ ನರಳುವ ಮನ ಹುಚ್ಚುಕುದುರೆಯ ಮೇಲೆ ಸವಾರಿ ಹೊರಟಿದೆಯೇನೋ ಎನಿಸುತ್ತಿತ್ತು ನನಗೆ. ಈ ಮನೋವೇದನೆಯಿಂದ ಹೊರಬರಲಾಗದಂತೆ ಸಿಲುಕಿದ್ದೆ. ಅದನ್ನು ಅರ್ಥೈಸಿಕೊಳ್ಳುವರಾರಿದ್ದರು? ಕುಲ್ದೀಪ್, ಕುಲ್ಜೀತ್ ಸಾಧ್ಯವಾದಷ್ಟು ನನ್ನನ್ನು ಮಾತಿಗೆಳೆಯುತ್ತಿದ್ದರಾದರೂ ನನಗೇ ಏನೋ ಅಪನಂಬಿಕೆ..... ಇವರಿಬ್ಬರು ಅದೆಷ್ಟು ದಿನ ಇದ್ದಾರು ನನ್ನ ಅಳಲಿಗೆ ಕಿವಿಯಾಗಿ? ನಾನೀಗ ಚಾಚಿಯನ್ನು ಹಚ್ಚಿಕೊಂಡಂತೆ ಇವರಿಬ್ಬರನ್ನು ವಿಪರೀತ ಹಚ್ಚಿಕೊಂಡು ನಾಳೆಯ ದಿನ ದಾದಿ, ಚೋಟಿ ಮಾಯಿ, ಬಾಪೂವಿನಂತೆ ಇವರೂ ಬದಲಾದರೇ.........? ಎಂಬ ಅನಿಶ್ಚಿತ ಭಾವವೊಂದು ಸದಾ ಮಿಸುಕಾಡುತ್ತದೆ ನನ್ನೊಳಗೆ. ಅರಿತೂ ಅರಿತೂ ನೋವಿಗೆ ಆಹ್ವಾನ ನೀಡುವುದೇಕೆ? ಈಗಿನಿಂದಲೇ ಅಂತರ ಕಾಯ್ದುಕೊಂಡರೆ ಒಳಿತಲ್ಲವೇ ಎಂದು ಸುಪ್ತಮನಸ್ಸು ಪದೇ ಪದೇ ಎಚ್ಚರಿಸುತ್ತದೆ. ಹಾಗಾಗಿ ಅವರೊಂದಿಗೂ ಮೌನಿಯೇ ನಾನು. ಆದರೆ ಅವರಿಬ್ಬರು ಬಿಡಲೊಲ್ಲರು. ಬಿಟ್ಟೆನೆಂದರೂ ಬಿಡದೇ ಸುತ್ತ ಸುಳಿಯುವ ಮಾಯೆಯಂತೆ ಸುಳಿಯುತ್ತಾರೆ ಅವರು. ಕುಲ್ದೀಪನಾದರೂ ಕೊಂಚ ಒರಟ. ಆಗೀಗ ನನ್ನ ವರ್ತನೆ ನೋಡಿ ಸಿಟ್ಟಿನಲ್ಲಿ ಬೈಯುತ್ತಾನೆ. ಆದರೆ ಕುಲ್ಜೀತ್ ಹಾಗಲ್ಲ. ಅವನದು ಹೆಂಗರುಳು. ಚಾಚಿಯಷ್ಟೇ ಮೃದು ಮನಸ್ಸಿನವನು. ರೇಗುವುದಿರಲಿ ದನಿಯೆತ್ತಿ ಮಾತನಾಡಿಯೂ ಗೊತ್ತಿಲ್ಲ ಅವನಿಗೆ. ನಾನೆಂದರೆ ಅಪರಿಮಿತ ಪ್ರೀತಿ,ಕಾಳಜಿ. ಅವರಿಬ್ಬರದು ತೋರಿಕೆಯ ನಟನೆಯಲ್ಲ ಎಂಬುದೂ ನನಗೆ ವೇದ್ಯ. ಆದರೆ ಅವರ ಅಕ್ಕರೆಯನ್ನು ಆದರದಿಂದ ಸ್ವೀಕರಿಸಲು ಮನದ ಬೇಲಿಯೊಂದು ಅಡ್ಡಿ. ತಿರಸ್ಕರಿಸಿ ಕಡೆಗಾಣಿಸಲು ಅಂತಃಕರಣ ಬಿಡದು. ಈ ಬಿಡಿಸಲಾರದ ದ್ವಂದ್ವದಲ್ಲಿ ನಿರಂತರ ತೊಳಲಾಟ ನನ್ನದು. ಸಾಧ್ಯವಾದಷ್ಟು ಅವರಿಂದ ದೂರವೇ ಉಳಿಯತೊಡಗಿದ್ದೆ ನಾನು.

ಬಾಪೂವಿನ ಹಂಗಿನ ಅರಮನೆ ಮೊದಲಿನಿಂದಲೂ ನನ್ನ ಪಾಲಿಗೆ ಸೆರೆಮನೆಯೇ. ಚಾಚಿಯ ಕಾಲಾನಂತರದಲ್ಲಿಯಂತೂ ಆ ಮನೆ ಕಸಾಯಿಖಾನೆ ಎನಿಸತೊಡಗಿತ್ತು ನನಗೆ. ಅದಕ್ಕಿಂತ ಊರ ಸರಹದ್ದಿನಲ್ಲಿ ಶಾಂತಳಾಗಿ ಹರಿಯುವ ಯಮುನೆಯ ತಟವೇ ಹಿತವೆನಿಸುತ್ತದೆ. ಚಾಚಿಯ ನಂತರ ನನಗೆ ಸಾಂತ್ವನವೆಂಬುದು ದೊರಕಿದ್ದು ಅವಳ ಮಡಿಲಲ್ಲಿ ಮಾತ್ರವೇ. ಇಡೀ ಜಗದ ಶಾಂತಿಯೆಲ್ಲವೂ ಅವಳ ಪಾತ್ರದಲ್ಲಿ ನೆಲೆನಿಂತ ಭಾವ. ಅವಳಲ್ಲಿ ಯಾವ ತಾರತಮ್ಯಗಳಿಲ್ಲ. ಅವಳೆಂದೂ ಹೆಣ್ಣೆಂದು ನನ್ನ ಜರಿಯುವುದಿಲ್ಲ. ಬಾಗೀ ಎಂದು ಹೀಯಾಳಿಸುವುದಿಲ್ಲ. ಬೆಳಗು ಬೈಗಿನ ದೈವಿಕ ರಮ್ಯತೆಯಲ್ಲಿ ಕಣ್ಮುಚ್ಚಿ ಕುಳಿತು ಯಮುನೆಯ ಹರಿಯುವಿಕೆಯ ನಿನಾದವನ್ನು ಆಲಿಸುವಾಗಲೆಲ್ಲಾ ಅವಳು ನನಗಾಗಿ ಲೋರಿ(ಲಾಲಿ) ಹಾಡುತ್ತಿರುವಳೇನೋ ಎಂಬ ಭಾವ ಮನವನ್ನು ಆವರಿಸಿ ತನ್ಮಯಗೊಳಿಸುತ್ತದೆ.

ಚಾಚಿ ನನಗಾಗಿ ಹಾಡುತ್ತಿದ್ದ ಅದೇ ಲೋರಿ........

ಯಮುನೆಯ ಜುಳುಜುಳು ನಿನಾದದ ಆಳದಿಂದ ಚಾಚಿಯೇ ಹಾಡುತ್ತಿರುವಳೇನೋ ಎಂಬ ಭ್ರಮೆಯನ್ನು ಸೃಷ್ಟಿಸುವ ಲೋರಿ........

ಗುಡಿಯಾ ರಾನಿ ಬಿಟಿಯಾ ರಾನಿ ಪರಿಯೋಂ ಕೇ ನಗರೀ ಸೇ ಇಕ್ ದಿನ್......
ರಾಜ್ ಕುವಂರ್ ಜೀ ಆಯೇಂಗೇ ಮಹಲೋಂ ಮೆ ಲೇ ಜಾಯೇಂಗೇ......

ಆಗೇ ಪೀಛೇ ಘೋಡೇ ಹಾಥೀ ಬೀಚ್ ಮೆ ಹೋಂಗೇ ಸೌ ಬಾರಾತಿ.......
ಇತನೀ ಆಜ್ ಅಕೇಲೀ ಹೋ ತುಮ್ ತೇರೆ ಕಿತನೇ ಹೋಂಗೇ ಸಾಥೀ......
ಕಿತನೀ ಖುಷ್ ಹೂಂ ಮೇ ಮೇರೇ ಆಂಖ್ ಮೇ ಪಾನಿ....

ಗುಡಿಯಾ ರಾನಿ ಬಿಟಿಯಾ ರಾನಿ.......

ತೂ ಮೇರೀ ಚೋಟಿ ಸೀ ಗುಡಿಯಾ ಬನ್ ಜಾಯೇಗೀ ಜಾದೂ ಕೀ ಪುಡಿಯಾ........
ತುಜ್ ಪೇ ಆ ಜಾಯೇಗೀ ಜವಾನಿ ಮೇ ತೋ ಹೋ ಜಾವೂಂಗೀ ಬುಡಿಯಾ.......
ಭೂಲ್ ನ ಜಾನಾ ಪ್ರೀತ್ ಪುರಾನಿ ಗುಡಿಯಾ ರಾನಿ ಬಿಟಿಯಾ ರಾನಿ.........

ಭಾವಪರವಶತೆಯ ತಾಧ್ಯಾತ್ಮದ ಅದ್ಯಾವ ಘಳಿಗೆಯಲ್ಲಿ ನಾನೇ ದನಿಯಾಗಿ ಹಾಡತೊಡಗುತ್ತೇನೋ ಅರಿವಿಗೇ ಬರುವುದಿಲ್ಲ. ಲೋರಿ ಮುಗಿದಾಗ ದಿವ್ಯಮೌನವೊಂದು ಯಮುನೆಯ ತಟದಲ್ಲಿ ನೆಲೆಯಾಗುತ್ತದೆ. ಆ ಮೌನದಲ್ಲಿ ಚಾಚಿ ನೆನಪಾಗುತ್ತಾಳೆ. ಬಾಲ್ಯದ ಅವಳ ಲೋರಿಯ ನೆನಪಿನಿಂದ ಸುಖಾಸುಮ್ಮನೆ ನನ್ನ ತುಟಿಯಂಚಿನಲ್ಲಿ ಮುಗುಳ್ನಗುವೊಂದು ಲಾಸ್ಯವಾಡುತ್ತದೆ. 

ಬಾಲ್ಯದಲ್ಲಿ ನೋವು, ಬೇಸರಗಳೇ ನನ್ನ ಬೆನ್ನಿಗೆಬಿದ್ದ ಜೊತೆಗಾರರು. ಹಾಗೆ ನಾನು ಬೇಸರಗೊಂಡಾಗಲೆಲ್ಲಾ ಈ ಲೋರಿ ಹಾಡುತ್ತಿದ್ದಳು ಚಾಚಿ. ಕುದುರೆಯೇರಿ ಬರುವ ರಾಜಕುಮಾರನೊಬ್ಬ ನನ್ನೆಲ್ಲಾ ಕಷ್ಟಗಳನ್ನು ಪರಿಹರಿಸಿ, ನೋವನ್ನೇ ಕಾಣದ ಊರೊಂದಕ್ಕೆ ನನ್ನ ಕರೆದೊಯ್ಯುವನೆಂದು ರಮಿಸುತ್ತಿದ್ದಳವಳು. ಕಷ್ಟಗಳ ನಿವಾರಿಸುವ ರಾಜಕುಮಾರ, ನೋವೇ ಇಲ್ಲದ ಊರು..... ಅದರದೇ ಕಲ್ಪನೆಯಲ್ಲಿ ನನ್ನ ಬೇಸರ ಮರತೇಹೋಗುತ್ತಿತ್ತು. ಅದೆಷ್ಟು ಚೆಂದವಿತ್ತು ಆ ಕಲ್ಪನೆಗಳು. ಅವುಗಳ ನೆನಪೇ ಮನವನ್ನು ಅರಳಿಸುತ್ತದೆ.

ಆದರೆ....... ಬದುಕು ರಮ್ಯಕಲ್ಪನೆಯಲ್ಲ. ಅದು ಕಲ್ಪನಾತೀತವಾದ ವಾಸ್ತವ. ಕಣ್ಮುಂದಿನ ವಾಸ್ತವ ಬಲು ಕಠೋರ. ಇಲ್ಲಿ ಏಳು ಸಮುದ್ರ ದಾಟಿ ಬಂದು ಕಷ್ಟಗಳನ್ನು ಹರಿಸುವ ರಾಜಕುಮಾರನೂ ಇಲ್ಲ, ಇನ್ನು ನೋವುಗಳು ಸೋಕದ ಊರಂತೂ ಸಾವಿಲ್ಲದ ಮನೆಯ ಸಾಸಿವೆಯೇ ಸೈ. ಇಲ್ಲಿರುವುದು ಮನುಷ್ಯತ್ವದ ಗಂಧಗಾಳಿ ಇಲ್ಲದ ಮುಖವಾಡದ ಮನುಜರು. ಸರಿದ ಸಮಯದೊಂದಿಗೆ ಬಾಲ್ಯದ ರಮ್ಯ ಕಲ್ಪನೆಗಳು ಕರಗಿ ವಾಸ್ತವ ಮುನ್ನೆಲೆಗೆ ಬರಲೇಬೇಕಲ್ಲ.....? 

ಸಮಯ ಸರಿದಿದೆ. ಕಾಲ ಬದಲಾಗಿದೆ. ಕಾಲದೊಂದಿಗೆ ಕ್ರೌರ್ಯದ ಸ್ವರೂಪವೂ ಬದಲಾಗಿದೆ.....

ಮುಂಚೆ ಮುಜ್ಜಫರ್ ನಗರದ ಭಾಗವಾಗಿದ್ದ ಶಾಮ್ಲಿ ಈಗ ಜಿಲ್ಲೆಯ ಸ್ಥಾನಮಾನ ಪಡೆದಿತ್ತು. ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿದ್ದವು. ಹಾಗೆಯೇ ಹೆಣ್ಣು ಮಗುವನ್ನು ಅಮ್ಮನ ಉದರದಲ್ಲೇ ಕೊನೆಗಾಣಿಸಲು ಇನ್ನಷ್ಟು ಹೊಸ ತಂತ್ರಜ್ಞಾನಗಳು ಬಂದಿದ್ದವು. ಭೈರೋನ್ ಗ್ರಾಮದ ಶಾಲೆಯ ಮಗ್ಗುಲಲ್ಲೇ ಸರ್ಕಾರಿ ದವಾಖಾನೆಯೊಂದು ಪ್ರತಿಷ್ಠಾಪಿತವಾಗಿತ್ತು. ರೋಗಗಳನ್ನು ಗುಣಪಡಿಸುವ ಔಷಧೋಪಚಾರಗಳಿಗೆ ಕೊರತೆಯಿದ್ದರೂ ಗರ್ಭಪಾತ ಮಾಡಲು ಬೇಕಾದ ಸಕಲ ಸೌಲಭ್ಯಗಳು ಇಲ್ಲಿ ಲಭ್ಯವಿತ್ತು. ಈಗ ಭೈರೋನ್ ನಲ್ಲಿ ಮಲಾಯಿ ಮಕ್ಕನ್ ಹಾಗೂ ಚಂಚಂ ಮಿಠಾಯಿ ಹಂಚಿಕೆಯದ್ದೇ ಕಾರುಬಾರು.

ಇದರ ಜೊತೆಗೆ ........

ಇನ್ನೊಂದು ಮಹತ್ತರ ಬದಲಾವಣೆಯಾಗಿತ್ತು. ಕಣ್ಣೆದುರಿಗೇ ರಾಚುತ್ತಿದ್ದ ಆದರೆ ಯಾರೂ ಅರ್ಥೈಸಿಕೊಳ್ಳದ ಅಸಹಜ ಬದಲಾವಣೆ. ಹಿಂದಿನಿಂದ ಮಾಡಿಕೊಂಡು ಬಂದ ಕಾರ್ಯಗಳ ಪರಿಣಾಮವಾಗಿ ಉದ್ಭವಿಸಿದ ಘನಘೋರ ಬದಲಾವಣೆ......‌

ವಂಶವನ್ನು ಉದ್ಧರಿಸುವ ಕುಲತಿಲಕರೇನೋ ಊರ ತುಂಬಾ ಇದ್ದರು. ಆದರೆ ವಂಶದ ಭಾರ ಹೊರುವ ವಾಹಕಗಳು........?? ಲಾಲಾ ಹಡೆದಾನೇ ಕುಲದೀಪಕನನ್ನು? ಲಾಲಿಯರು ದುರ್ಬೀನಿನಲ್ಲಿ ಹುಡುಕಿದರೂ ಇಲ್ಲವಲ್ಲಾ......!! ಮದುವೆಯ ವಯಸ್ಸಿಗೆ ಬಂದ ವರನಿಗೆ ವಧುವಿನ ಕೊರತೆ ಉಂಟಾಗತೊಡಗಿತ್ತು. ತಾನು ಸೃಷ್ಟಿಸಿದ ನಿಯಮಗಳ ಕಟ್ಟಳೆಯಲ್ಲಿ ತಾನೇ ಬಂಧಿಯಾಗತೊಡಗಿತ್ತು ಸಮಾಜ. ಪ್ರಕೃತಿಯ ನಿಯಮವನ್ನೇ ಮೀರಿ ತಮ್ಮದೇ ಹುಕುಮ್ಮತ್ತು ಚಲಾಯಿಸಹೊರಟವರು ಉದ್ಧಾರವಾದ ಇತಿಹಾಸವುಂಟೇ? ಭೂತಕಾಲದ ತಪ್ಪು ಕಂದಾಯ ವಸೂಲಿಮಾಡಹೊರಟ್ಟಿತ್ತು. 

ಆದರೆ ಇದನ್ನೂ ಅರ್ಥೈಸಿಕೊಳ್ಳದೇ ಹೋಯಿತು ಈ ಸಮುದಾಯ. ಈಗಲೂ ಬಲಿಪಶುವಾದಳು ಅವಳೇ.........!!

ವಧು ಸಿಗುತ್ತಿಲ್ಲ ಎಂಬ ಸಮಸ್ಯೆಗೆ ಅತೀ ಸುಲಭದ ಪರಿಹಾರ ಕಂಡುಹುಡುಕಿದ್ದರು ಈ ಜನರು. 

ಅಣ್ಣತಮ್ಮಂದಿರಿಗೆಲ್ಲಾ ಒಬ್ಬಳೇ ಹೆಂಡತಿ........!!

ಕಥೆಗಳಲ್ಲಿ, ಶಾಲಾ ಪಾಠದಲ್ಲಿ ಓದಿ, ಕೇಳಿ ತಿಳಿದಿದ್ದೆ ಮಹಾಭಾರತದ ಪಾಂಚಾಲಿಯ ಬಗ್ಗೆ. ಹಸ್ತಿನಾಪುರದ ಸಾಮ್ರಾಜ್ಞಿಯಾದರೂ ಜೀವಿತದ್ದುದ್ದಕ್ಕೂ ಕಷ್ಟ, ನಿಂದನೆ, ಅಪಮಾನಗಳನ್ನು ಸಹಿಸಿದ ಪ್ರಭಾವೀ ವ್ಯಕ್ತಿತ್ವದ ಕೃಷ್ಣೆ ನನ್ನನ್ನು ಬಹುವಾಗಿ ಕಾಡಿದ್ದಳು. ಕಲ್ಪನೆಯಲ್ಲೇ ಅವಳ ಬದುಕನ್ನು ಚಿತ್ರಿಸಲು ಯತ್ನಿಸಿದ್ದೆ ಕೂಡಾ. 

ಇಂದು ಭೈರೋನ್ ಗ್ರಾಮದಲ್ಲಿ, ಶಾಮ್ಲಿಯಲ್ಲಿ, ಮುಜ್ಜಫರ್ ನಗರದಲ್ಲಿ, ಉತ್ತರಪ್ರದೇಶದಲ್ಲಿ, ಸುತ್ತಮುತ್ತಲಿನ ರಾಜ್ಯಗಳ ಹಲವು ಮನೆಗಳಲ್ಲಿ ದ್ರೌಪದಿಯರು ಅವತರಿಸಿದ್ದಾರೆ. ಆದರೆ ಇವರಿಗೂ ಭಾರತದ ದ್ರೌಪದಿಗೂ ಅಜಗಜಾಂತರ ವ್ಯತ್ಯಾಸ.....

ಅಂದಿನ ದ್ರೌಪದಿಗೆ ಒಂದು ವ್ಯಕ್ತಿತ್ವವಿತ್ತು.... ಅಸ್ಮಿತೆಯಿತ್ತು.... ತನ್ನನ್ನು ದ್ಯೂತದಲ್ಲಿ ಪಣಕ್ಕಿಟ್ಟ ಗಂಡಂದಿರನ್ನು, ತನ್ನ ಅಪಮಾನವನ್ನು ತಡೆಯದೇ ನಿಂತ ಸಭಿಕರನ್ನು ಪ್ರಶ್ನಿಸುವ ಅಧಿಕಾರವಿತ್ತು.....
ಇಂದಿನ ದ್ರೌಪದಿಯರು........!!?
ವ್ಯಕ್ತಿತ್ವ, ಅಸ್ಮಿತೆ ಒತ್ತಟ್ಟಿಗಿರಲಿ... ಅವರಿಗೂ ಒಂದು ಜೀವವಿದೆ ಎಂಬುದನ್ನು ಗುರುತಿಸುವವರಿಲ್ಲ. ಇನ್ನು ಮಾತನಾಡುವ ಹಕ್ಕನ್ನೇ ಕಳೆದುಕೊಂಡವರಿಗೆ ಪ್ರಶ್ನಿಸುವ ಅಧಿಕಾರವೆಲ್ಲಿಯದು?
ಅಂದಿನ ದ್ರೌಪದಿಯ ಅಳಲಿಗೆ ಕಿವಿಯಾಗಿ ಶ್ರೀ ಕೃಷ್ಣ ಪರಮಾತ್ಮನಿದ್ದ..... ಇಂದೂ ಎಲ್ಲೋ ಮರೆಯಲ್ಲಿ ಇರುವನೇನೋ....... ಆದರೆ ಇಂದಿನ ದ್ರೌಪದಿಗೆ ತನ್ನ ಅಳಲನ್ನು ತೋಡಿಕೊಳ್ಳಲೂ ಸ್ವರವಿಲ್ಲ.... ಅವಳ ದನಿಯುಡುಗಿ ಯಾವುದೋ ಕಾಲವಾಗಿದೆ. 
ಅವಳೊಂದು ಉಸಿರಾಡುವ ಕಟ್ ಪುಥ್ಲಿ(ಕೈ ಗೊಂಬೆ).......

ಇವರಿಗೆ ಬೇಕಾಗಿರುವುದು ವಂಶವನ್ನು ಮುಂದುವರೆಸಲೊಂದು ಗಂಡು ಸಂತಾನ ಅಷ್ಟೇ. ಅದು ಯಾವ ಮಗನ ಮಗುವಾದರೇನು........? ಊರಲ್ಲಿ ಹೆಣ್ಣು ಸಿಗುತ್ತಿಲ್ಲ. ಎಲ್ಲಿಂದಲಾದರೂ ಒಬ್ಬಳನ್ನು ಖರೀದಿಸಿ ತಂದು ಮನೆಯಲ್ಲಿನ ಪ್ರಾಪ್ತ ವಯಸ್ಕ ವರಮಹಾಶಯರುಗಳೊಂದಿಗೆ ವಿವಾಹ ಮಾಡಿಸಿದರಾಯಿತು. 

ಅವಳೊಬ್ಬಳೇ ಅವರೆಲ್ಲರಿಗೂ ಪತ್ನಿ......!!! 

ಹೆಂಡತಿಯ ಹಂಚಿಕೆ ಮಾಡಿಕೊಂಡರಾಯಿತು, ವಂಶವನ್ನು ಬೆಳೆಸಿದರಾಯಿತು.........!! 
ಆದರೆ...... ಅವಳಿಗೂ ಗಂಡು ಮಗುವೇ ಜನಿಸಬೇಕು. ಹೆಣ್ಣು ಬೇಡವೇ ಬೇಡ.........!!

ಕುಸಿಯುತ್ತಿರುವ ಲಿಂಗಾನುಪಾತ ಈ ಜನರನ್ನು ಎಚ್ಚರಿಸಲಿಲ್ಲ. ಬದಲಿಗೆ ಹೆಂಡತಿಯ ಹಂಚಿಕೆ(wife sharing) ಎಂಬ ಮಹಾನ್ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಅವಳ ಪರಿಸ್ಥಿತಿ ಅರಿಯುವವರು ಯಾರು? ಅವಳ ಅಳಲು ಕೇಳುವವರು ಯಾರು? ಇದು ವಿವಾಹವೇ? ವಿವಾಹದ ಸೋಗಿನ ತಲೆಹಿಡುಕತನವಲ್ಲವೇ ಇದು? ಸಮುದಾಯ ಒಪ್ಪಿತ ವ್ಯಭಿಚಾರ........ ನೈತಿಕತೆಯ ಪರಿಧಿಯೊಳಗಿನ ಅನೈತಿಕತೆ...... ನಾಗರೀಕತೆಯ ಹೆಸರಿನಲ್ಲಿನ ಅನಾಗರೀಕ ಪದ್ಧತಿ...... ಮಾನವೀಯತೆಯ ಮುಖವಾಡದೊಳಗಿನ ಅಮಾನವೀಯ ಸಂಸ್ಕೃತಿ.....!

ಅವಳು ಕಣ್ತೆರೆದು ಈ ಜಗವನ್ನು ಕಾಣದಂತೆ ಸಕಲ ರೀತಿಯಲ್ಲೂ ಯತ್ನಿಸುವ ಈ ಸಮಾಜ ಅವಳು ಹೇಗೋ ಬದುಕುಳಿದರೆ ತಾನು ಯಾಕಾದರೂ ಬದುಕಿದೆನೋ ಎಂದು ಪಶ್ಚಾತಾಪ ಪಡುವಷ್ಟು ಪೈಶಾಚಿಕವಾಗಿ ನಡೆಸಿಕೊಳ್ಳುತ್ತದೆ ಅವಳನ್ನು. ಬಲವಂತದ ಸಾವೂ ನರಕ, ಬದುಕಂತೂ ಸಾವಿಗೂ ಮೀರಿದ ನರಕ......!

ಈಗಂತೂ ಚಾಚಿಯ ಲೋರಿಯಲ್ಲಿನ ರಾಜಕುಮಾರನ ಬಗ್ಗೆ ನೆನೆಯಲೂ ಭಯವೆನಿಸುತ್ತದೆ ನನಗೆ. 'ಆ ರಾಜಕುಮಾರನಿಗೆ ಇನ್ನೆಷ್ಟು ಜನ ಅಣ್ಣ ತಮ್ಮಂದಿರಿದ್ದಾರೋ?' ಎಂಬ ಒಂದೇ ಪ್ರಶ್ನೆ ನಡುಗಿಸುತ್ತದೆ ನನ್ನನ್ನು. ವಿವಾಹವೆಂಬ ವಿಚಾರದಿಂದಲೇ ಮನಸ್ಸು ವಿಮುಖವಾಗಿದೆ. 

ನಾನಂತೂ ಯಾವುದೇ ಕಾರಣಕ್ಕೂ ಆಧುನಿಕ ದ್ರೌಪದಿಯಾಗಲಾರೆ....... ಪ್ರಾಣ ಹೋದರೂ ಸರಿಯೇ ಹಂಚಿಕೆಯ ಹೆಣ್ಣಾಗಲಾರೆ...... ಇದು ನನ್ನ ಬದುಕು. ನನ್ನ ಬದುಕಿನ ನಿರ್ಧಾರಗಳ ಮೇಲೆ ಹಕ್ಕಿರುವುದು ನನಗೆ ಮಾತ್ರ. ನನ್ನ ಬದುಕನ್ನು ನಿಯಂತ್ರಿಸುವ ಹಕ್ಕನ್ನು ಯಾರಿಗೂ ಕೊಡಲಾರೆ.....!!

ಹೀಗೊಂದು ನಿರ್ಧಾರ ನನ್ನೊಳಗೆ ಗಟ್ಟಿಯಾಗಿತ್ತು. ಮೊನಚು ಮಾತುಗಳೊಂದಿಗೆ ತಪ್ಪನ್ನು ಖಂಡಿಸುತ್ತಾ, 'ಮನೆಯವರು' ಎನಿಸಿಕೊಂಡವರ ತಿರಸ್ಕಾರಕ್ಕೆ ನಿರ್ಲಿಪ್ತಳಾಗುತ್ತಾ, ಸಮಾಜದ ಕ್ರೋಧಯುಕ್ತ ನೋಟವನ್ನು ನಿರ್ಲಕ್ಷಿಸುತ್ತಾ, ಅಂತರಂಗದಲ್ಲಿ ಹೆಚ್ಚೆಚ್ಚು ಮೌನಿಯಾಗುತ್ತಾ, ಯಮುನೆಯ ತೀರದಲ್ಲಿ ಯಾವುದೋ ಮರೆತಿರುವ ಸಾಲುಗಳನ್ನು ಗುನುಗುತ್ತಾ........... ಸಮಯ ತೋರುತ್ತಿದ್ದ ಹಾದಿಯಲ್ಲಿ ಸಾಗುತ್ತಿತ್ತು ನನ್ನ ಬದುಕು.

ಆದರೆ..........

ನನ್ನ ಬದುಕಿನ ಸಂಪೂರ್ಣ ಪಥವನ್ನೇ ಬದಲಾಯಿಸಲು ವಿಧಿ ಹೊಂಚು ಹಾಕಿತ್ತು. ಅಪಸವ್ಯಗಳ ಸರಮಾಲೆಯೇ ನನಗಾಗಿ ಕಾದು ಕುಳಿತಿತ್ತು......

ಇವೆಲ್ಲಕ್ಕೂ ನಿಮಿತ್ತವಾಗಿದ್ದು.........  

ಅದೊಂದು ಘಟನೆ ಮತ್ತು ಅವಳು.......

ಅವಳು........ ಬೇಲಾ.......

ಸಶೇಷ

1 ಕಾಮೆಂಟ್‌:

  1. ಎಂತಹ ಬುದ್ಧಿಗೇಡಿಗಳು. ಅಷ್ಟಾದರೂ ಬುದ್ದಿ ಇಲ್ಲ. ಈಗಲೂ ಗಂಡು ಬೇಕು ಅನ್ನೋವರು. ಸಮಾಜ ಒಪ್ಪಿದ ವ್ಯಭಿಚಾರವಿದು ನಿಜ

    ಪ್ರತ್ಯುತ್ತರಅಳಿಸಿ