ಗುರುವಾರ, ಸೆಪ್ಟೆಂಬರ್ 17, 2020

ಅಗ್ನಿ ತರಂಗಿಣಿ 12

ಟೂಟ್ ಕೆ ಬಿಖರ್ ಗಯಾ ವೋ ಚಮಕ್ತಾ ಸಿತಾರಾ….

ದೇವೇಂದ್ರ ಬಧೌರಿಯಾ……. ಭೈರೋನ್ ನ ಅನಭಿಷಿಕ್ತ ಸಾಮ್ರಾಟ. ಮುಕುಟವಿಲ್ಲದ ಮಹಾರಾಜ…… 

ಪ್ರಜಾಪ್ರಭುತ್ವ, ಸಮಾನತೆ, ಉಳುವವನೇ ಭೂಮಿಯ ಒಡೆಯ ಎಂಬ ಮಹಾನ್ ಪರಿಕಲ್ಪನೆಗಳೆಲ್ಲವೂ ಕೇವಲ ಪುಸ್ತಕಗಳಿಗೆ, ಸರ್ಕಾರಿ ದಸ್ತಾವೇಜುಗಳಿಗೆ ಸೀಮಿತವಾಗಿರುವ ಆದರ್ಶದ ಮುಖವಾಡಗಳು. ವಾಸ್ತವದಲ್ಲಿ ಹಣ, ಅಧಿಕಾರವುಳ್ಳ ದೇವೇಂದ್ರ ಬಧೌರಿಯಾನಂತಹವರದ್ದೇ ಪ್ರಭುತ್ವ……. ಅವನೇ ದೈವಾಂಶ ಸಂಭೂತ ಅವನೇ ಧರಣಿಗೊಡೆಯ. ಹೆಣ್ಣು ಹೊನ್ನು, ಮಣ್ಣೆಲ್ಲವೂ ಅವನ ಪದತಲಕ್ಕೇ ಸಮರ್ಪಿತ. ನನ್ನ ಬಾಪೂವಿನಂತಹ ಸ್ಥಿತಿವಂತರು 'ನೀನೇ ಇಂದ್ರ ನೀನೇ ಚಂದ್ರ' ಎಂದು ಬಹುಪರಾಕ್ ನುಡಿಯುತ್ತಾ ಅವನ ಆಸ್ಥಾನದಲ್ಲಿ ಆಯಕಟ್ಟಿನ ಪದವಿಗಳನ್ನು ಪಡೆದು ಸುಖ ವಿಲಾಸದಲ್ಲಿ ತೇಲುತ್ತಾರೆ. ಇನ್ನುಳಿದ ಬಡ ಪರಿಜನರು ಅರಸ ಮತ್ತವನ ವಂದಿಮಾಗಧರ ಊಳಿಗ ಮಾಡುತ್ತಲೇ ಸವೆದು ಹೋಗುತ್ತಾರೆ. ಇದು ಕೇವಲ ಭೈರೋನ್ ಗ್ರಾಮದ ಕಥೆಯಲ್ಲ……. ಇದು ಈ ದೇಶದ ಪ್ರಜಾಪ್ರಭುತ್ವದ ಹಕೀಕತ್ತು….. ಇಲ್ಲಿನ ಸಾಮಾನ್ಯ ಪ್ರಜೆಗಳ ವ್ಯಥೆಯ ಕಥೆ……..

ದೇವೇಂದ್ರ ಬಧೌರಿಯಾ ಭೈರೋನ್ ಗ್ರಾಮದ ಸರಪಂಚ. ನಮ್ಮದು ಶಾಮ್ಲಿ ಖಾಪ್ ಪಂಚಾಯತ್ ಅಧೀನದಲ್ಲಿ ಬರುವ ಪಂಚಾಯತ್. ಸರ್ಕಾರಿ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದಿದ್ದರೂ ಕೂಡಾ ನಮ್ಮ ಭಾಗದಲ್ಲಿ ಖಾಪ್ ಪಂಚಾಯತ್ ಹೊಂದಿರುವ ಹಿಡಿತವೇ ಬೇರೆಯದ್ದು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತ ಈ ಖಾಪ್ ಪಂಚಾಯತ್ ನ ರೀತಿ, ನೀತಿಗಳ ಬಗ್ಗೆ ಏನೆಂದು ಹೇಳಲಿ? ಖಾಪ್ ಆಡಳಿತ ವರ್ಗದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅವೆಲ್ಲವೂ ಪುರುಷರಿಗೆ ಮಾತ್ರವೇ ಮೀಸಲು. ಕೆಲವು ಖಾಪ್ ಗಳಲ್ಲಂತೂ ಮಹಿಳೆಯ ಭಾಗವಹಿಸುವಿಕೆಯೂ ನಿಷಿದ್ಧ. ಅವರ ಪ್ರತಿನಿಧಿಗಳಾಗಿ ಸಂಬಂಧಿತ ಪುರುಷರು ಭಾಗವಹಿಸುತ್ತಾರೆ. ವಿಪರ್ಯಾಸವೆಂದರೆ ಈ ಖಾಪ್ ಪಂಚಾಯತ್ ತೆಗೆದುಕೊಳ್ಳುವ ಮುಕ್ಕಾಲು ಪಾಲು ನಿರ್ಧಾರಗಳು, ನೀಡುವ 'ನ್ಯಾಯ' ತೀರ್ಪುಗಳು ಮಹಿಳೆಯರಿಗೆ ಸಂಬಂಧಪಟ್ಟವು. ಎಷ್ಟೆಂದರೂ ದೌರ್ಜನ್ಯಕ್ಕೆ ಒಳಗಾಗುವವಳು, ಸಂತ್ರಸ್ತೆಯಾಗಿಯೂ ಅಪನಿಂದೆಯ ಬಲಿಪಶುವಾಗುವವಳು ಅವಳೆ ತಾನೇ……? ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಸಂಬಂಧಿತ ವ್ಯಾಜ್ಯಗಳ ಕುರಿತಾಗಿ ಚರ್ಚೆ ನಡೆಯುವಾಗಲೂ ಪಂಚರ ಗುಂಪಿನಲ್ಲಿ ಮಹಿಳಾ ಸದಸ್ಯರಿರುವುದಿಲ್ಲ. ಆದರೆ ಅಲ್ಲಿಂದ ಹೊರಡುವ ಫರ್ಮಾನುಗಳು, ಕಾನೂನುಗಳು ಲಾಗೂ ಆಗುವುದು ಮಾತ್ರ ಅವಳ ಮೇಲೆಯೇ…….

ಇಂತಹ ನಿರಂಕುಶ ಸ್ವರೂಪದ ಪಂಚಾಯತ್ ನ ಸರಪಂಚನೆಂದ ಮೇಲೆ ಕೇಳಬೇಕೇ? ಭೈರೋನ್ ನಲ್ಲಿ ಅವನದ್ದು ಪ್ರಶ್ನಾತೀತ ಅಧಿಪತ್ಯ. ಭೈರೋನ್ ಮಾತ್ರವಲ್ಲದೇ ಶಾಮ್ಲಿ ಹಾಗೂ ಮುಜ್ಜಫರ್ ನಗರದಲ್ಲೂ ಅವನಿಗೆ ಬೇಕಾದಷ್ಟು ಆಸ್ತಿಪಾಸ್ತಿಗಳಿವೆ. ಅವನಿಗೋ ಶ್ರೀಮಂತಿಕೆಯ ಹಮ್ಮಿನೊಂದಿಗೆ ಅಧಿಕಾರದ ಅಮಲು ನೆತ್ತಿಯಲ್ಲಿತ್ತು. ಸರಪಂಚ ಪದವಿಯನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಳ ಈಡೇರಿಕೆಗಾಗಿ ಆತ ಬಳಸುತ್ತಾನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಅವನೆದುರು ನಿಂತು ಪ್ರಶ್ನಿಸುವ ಧೈರ್ಯವಾದರೂ ಯಾರಿಗಿತ್ತು? ಇಷ್ಟಕ್ಕೂ ಇಲ್ಲಿ ಪ್ರಶ್ನಿಸಲು ಬೇಕಾಗಿರುವುದು ಧೈರ್ಯವೂ ಅಲ್ಲ….. ಹಣ, ಅಂತಸ್ತುಗಳಿದ್ದರೆ ಸಾಕು. ಪ್ರಶ್ನಿಸುವ ಸಾಧ್ಯತೆಯುಳ್ಳ ನನ್ನ ಬಾಪುವಿನಂತಹ ಸ್ಥಿತಿವಂತರು ಬಧೌರಿಯಾನ ಆಪ್ತವಲಯದಲ್ಲಿ ಗುರುತಿಸಿಕೊಂಡು ಸಹಕಾರ ಗಳಿಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವನ ಕೃಪಾಕಟಾಕ್ಷಕ್ಕಾಗಿ ಕಾಯುವವರು ಅವನನ್ನು ಪ್ರಶ್ನಿಸಿಯಾರೇ? ಇನ್ನು ಉಳಿದ ಜನರು…... ಉಸಿರಾಡಲೂ ಅವನ ಅನುಮತಿ ಬೇಕಿರುವಾಗ ಅವನೆದುರು ನಿಲ್ಲುವ ಯೋಚನೆಯಾದರೂ ಬರುವುದೆಂದು? ಎಲ್ಲವೂ ಸೇರಿ ದೇವೇಂದ್ರ ಬಧೌರಿಯಾ ತನ್ನನ್ನು ತಾನೇ ಇಂದ್ರನೆಂದು ಭ್ರಮಿಸಿ ಭೈರೋನ್ ಗ್ರಾಮವನ್ನೇ ತನ್ನ ಅಮರಾಮತಿಯಾಗಿಸಿಕೊಂಡಿದ್ದ.

ಈ ದೇವೇಂದ್ರನ ಕುಲಪುತ್ರನೇ ಸೂರಜ್ ಬಧೌರಿಯಾ. ಹೆಸರು ಸೂರಜ್ ಎಂದಾದರೂ ಅವನನ್ನು ಎಲ್ಲರೂ ಕರೆಯುತ್ತಿದ್ದದ್ದು ಬಬ್ಲೂ ಎಂದು. ಅಗತ್ಯಕ್ಕೂ ಮೀರಿದ ಹಣದ ದೌಲತ್ತು, ಅಧಿಕಾರದ ಮದ ಎರಡೂ ಬಾಲ್ಯದಿಂದಲೇ ಅವನ ಹಾದಿ ತಪ್ಪಿಸಿದ್ದವು. ಸದಾ ಸಿಗರೇಟು, ಕುಡಿತದ ನಶೆಯಲ್ಲಿ ತೇಲುತ್ತಾ ಅಂಕೆ ಮೀರಿದ ಸ್ವೇಚ್ಛೆ, ಪುಂಡಾಟಿಕೆಗಳಲ್ಲೇ ಅವನ ದಿನ ಸಾಗುತ್ತಿದ್ದದ್ದು. ಅದಕ್ಕೆ ಸರಿಯಾಗಿ ಬೆನ್ನು ಬಿದ್ದು ತಿರುಗುವ ನಾಲ್ವರು ಅಪಾಪೋಲಿಗಳ ಸಹವಾಸ ಸಿಕ್ಕಿದ್ದು ಅವನ ಹಾರಾಟವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಖೂಳ ಗುಂಪಿನ ನಾಯಕನಾಗಿ ಮೆರೆಯುತ್ತಾ ಎಲ್ಲರನ್ನೂ ಅದರಲ್ಲೂ ವಿಶೇಷವಾಗಿ ಹೆಣ್ಮಕ್ಕಳನ್ನು ಕೆಣಕುವುದೇ ಚಟವಾಗಿತ್ತು ಅವನಿಗೆ. ತನ್ನ ಕಣ್ಣಳತೆಗೆ ಬರುವ ಹೆಣ್ಣುಗಳನ್ನೆಲ್ಲಾ ಅಶ್ಲೀಲ ಮಾತುಗಳಿಂದ ಛೇಡಿಸುವುದು, ಮೈ ಕೈ ಸವರುವುದು….... ಈ ಐವರು ಸಾರ್ವಜನಿಕವಾಗಿ ಇಂತಹ ಕೆಲಸಗಳಲ್ಲೇ ವ್ಯಸ್ತರಾಗಿರುವ ಬಗ್ಗೆ ಊರಿನವರಿಗೆ ತಿಳಿದಿಲ್ಲವೆಂದೇನಲ್ಲ. ಆದರೂ ಯಾರೂ ಪ್ರಶ್ನಿಸರು…... ಅದು ದೇವೇಂದ್ರನ ಬಗೆಗಿನ ಭಯವೋ ಇಲ್ಲಾ ಗಂಡಸರು ಹೆಣ್ಮಕ್ಕಳನ್ನು ಛೇಡಿಸಿದರೆ ತಪ್ಪೇನು ಎಂಬ ಯೋಚನೆಯೋ ನನಗಂತೂ ತಿಳಿದಿಲ್ಲ. ಒಮ್ಮೆ ಹೊಲದಿಂದ ಮನೆಗೆ ವಾಪಾಸಾಗುವ ಹಾದಿಯಲ್ಲಿ ಅಡ್ಡಗಟ್ಟಿದವರಿಗೆ ಕೈಯಲ್ಲಿದ್ದ ಹನ್ಸುವಾ (ಕುಡುಗೋಲು) ತೋರಿಸಿ ಓಡಿಸಿದ್ದು ನೆನಪಿದೆ ನನಗೆ. ಆ ನಂತರದಲ್ಲಿ ನನ್ನ ಕಂಡರೂ ಕಾಣದವನಂತೆ ಮಾಡಿ ಹೋಗುವುದರ ಹಿಂದಿನ ಕಾರಣ ನನ್ನ ಬಗ್ಗೆ ಊರಲ್ಲಿ ಬೆಳೆದಿದ್ದ ಊಹಾಪೋಹಗಳೇ ಇರಬೇಕು. 

ಅದ್ಯಾವ ದುರ್ಘಳಿಗೆಯಲ್ಲಿ ಬೇಲಾ ಸೂರಜ್ ನ ಕಣ್ಣಿಗೆ ಬಿದ್ದಳೋ ಅವಳ ಬದುಕಿಗೆ ಗ್ರಹಣ ಬಡಿದಂತಾಯ್ತು. ಅವನದಂತೂ ಒಂದಿನಿತೂ ನಾಚಿಕೆಯೇ ಇಲ್ಲದ ಜಿಗುಟು ಸ್ವಭಾವ. ಒಮ್ಮೆ ಹಿಂದೆ ಬಿದ್ದನೆಂದರೆ ಬೆನ್ನತ್ತಿದ ಬೇತಾಳದಂತೆಯೇ. ಅದರಲ್ಲೂ ಬೇಲಾಳದ್ದು ಬಲು ಸೌಮ್ಯ ಪ್ರವೃತ್ತಿ. ಅವಳ ಸಾತ್ವಿಕ ಮೌನ ಅವನಿಗೆ ಇನ್ನಷ್ಟು ಸದರವಾಯಿತು. ದಿನಂಪ್ರತಿ ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಗಟ್ಟಿ ಅಸಭ್ಯವಾಗಿ ಮಾತನಾಡುವುದು, ಹಿಂದೆ ಹಿಂದೆ ಸುತ್ತುವುದೇ ಆಟವಾಯಿತು. ಮೊದಲೇ ಸೂಕ್ಷ್ಮ ಮನದ ಹೆಣ್ಣು ಕಂಗಾಲಾಗಿರಬೇಕು…... ಇಂತಹ ವಿಚಾರವನ್ನು ತಂದೆಯ ಬಳಿ ಹೇಗೆ ಹೇಳಲಿ ಎಂಬ ಹಿಂಜರಿಕೆಯೋ ಇಲ್ಲಾ ಅಧಿಕಾರಬಲ ಹೊಂದಿರುವ ಸೂರಜ್ ಮತ್ತವನ ಅಪ್ಪನಿಂದ ತನ್ನ ತಂದೆಗೆ ಏನಾದರೂ ತೊಂದರೆಯಾಗಬಹುದೆಂದು ಬಗೆದಳೋ ಒಟ್ಟಿನಲ್ಲಿ ಈ ವಿಚಾರವನ್ನು ಕೇಶವ್ ಚಾಚರ ತನಕ ಕೊಂಡೊಯ್ಯಲಿಲ್ಲ ಅವಳು. ಈ ಒಂದು ತಪ್ಪು ನಿರ್ಧಾರ ಅವಳಿಂದ ವಸೂಲಿ ಮಾಡಿದ ಸುಂಕ ಅಪಾರ. ತಂದೆಯ ಬಳಿ ತನಗಾಗುತ್ತಿರುವ ಹಿಂಸೆಯನ್ನು ಹೇಳಿಕೊಳ್ಳುವ ಬದಲಿಗೆ ಮನೆಯಿಂದ ಹೊರಗೆ ಕಾಲಿಡುವುದನ್ನೇ ಆದಷ್ಟು ಕಡಿಮೆ ಮಾಡಿಬಿಟ್ಟಳು. ಕೇಶವ್ ಚಾಚಾ ಬೆಳಿಗ್ಗೆ ಶಾಲೆಗೆ ಹೊರಟರೆಂದರೆ ಸಂಜೆಯೇ ಹಿಂದಿರುಗುತ್ತಿದ್ದುದ್ದು. ಅವರಿಗೆ ಮಗಳಿಗಾಗುತ್ತಿರುವ ಸಮಸ್ಯೆಯ ಸುಳಿವೇ ಹತ್ತಲಿಲ್ಲ. 

ಸದಾ ಮಂದಹಾಸ ಸೂಸುತ್ತಿದ್ದ ಅವಳ ಮೊಗ ಬರಬರುತ್ತಾ ಚಿಂತೆಯ ಮೂಟೆಯೇ ಹೆಗಲೇರಿದಂತೆ ನಿರ್ಜೀವವಾದಾಗಲೇ ನನಗೆ ಅವಳಲ್ಲಿನ ಬದಲಾವಣೆ ಸಣ್ಣದಾಗಿ ಗೋಚರಿಸತೊಡಗಿದ್ದು. ಸದಾ ಲವಲವಿಕೆಯಿಂದಿರುವ ಬೇಲಾ ಇತ್ತೀಚಿಗೆ ಮನೆಯ ಕೆಲಸಕಾರ್ಯಗಳಲ್ಲಿ, ಪಾಠದಲ್ಲಿ ಮುಂಚಿನಷ್ಟು ಆಸಕ್ತಿವಹಿಸುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬರುವ ವೇಳೆಗಾಗಲೇ ಆಕೆ ಮಾನಸಿಕವಾಗಿ ಬಹಳ ಜರ್ಜರಿತಳಾಗಿದ್ದಳೆನಿಸುತ್ತದೆ. ನಾನು ಅದೆಷ್ಟೋ ಬಗೆಯಲ್ಲಿ ಕೇಳಿದೆನಾದರೂ ಆಕೆ ತನ್ನ ಮೌನ ಮುರಿಯಲಿಲ್ಲ. ತನಗೆ ಹೀಗೆಲ್ಲಾ ಸಮಸ್ಯೆಯಾಗುತ್ತಿದೆ ಎಂದು ತೋಡಿಕೊಳ್ಳಲಿಲ್ಲ. ನನಗಾದರೂ ಬೇಲಾಳಿಗೆ ಸೂರಜ್ ಮತ್ತವನ ಸಂಗಡಿಗರಿಂದ ಸಮಸ್ಯೆಯಾಗಿರಬಹುದೆಂಬ ಯೋಚನೆ ಹೇಗೆ ಬಂದೀತು? ಒಂದು ಮಾತು ನನ್ನೊಂದಿಗೆ ಇಲ್ಲಾ ಚಾಚಾನೊಂದಿಗೆ ಹೇಳಿಕೊಂಡಿದ್ದರೆ ನಮ್ಮಿಬ್ಬರ ಬದುಕು ಬೇರೆಯೇ ಆಗಿರುತ್ತಿತ್ತೇನೋ….... ಆದರೆ ಆ ವಿಧಾತನೆಂಬುವವನಿಗೆ ನಮ್ಮ ಮೇಲೆ ಯಾವುದೋ ತೀರದ ಕ್ರೋಧವಿತ್ತಲ್ಲ….…….

ಕೊನೆಕೊನೆಗೆ ಪರಿಸ್ಥಿತಿ ಎಲ್ಲಿಯತನಕ ಹೋಯಿತೆಂದರೆ ನನ್ನೊಂದಿಗೆ ಯಮುನೆಯ ತೀರಕ್ಕೆ ಬರುವುದನ್ನೂ ಅವಳು ನಿಲ್ಲಿಸಿಬಿಟ್ಟಳು. ತನಗೆ ತಾನೇ ಗೃಹಬಂಧನವನ್ನು ವಿಧಿಸಿಕೊಂಡಂತಿತ್ತು ಅವಳ ನಡವಳಿಕೆ. ಇದ್ಯಾಕೋ ತೀರಾ ವಿಪರೀತಕ್ಕೆ ಹೋಗುತ್ತಿದೆ ಎನಿಸಿದಾಗ ಕೇಶವ್ ಚಾಚಾರಿಗೆ ತಿಳಿಸಬೇಕೆನಿಸಿತು. ಆಗಲೇ ಮಂಗಳವಾರ. ಚಾಚಾರೊಂದಿಗೆ ಒಂದಿಷ್ಟು ವಿರಾಮವಾಗಿ ಮಾತನಾಡಲು ಭಾನುವಾರ ಮಾತ್ರವೇ ಸಾಧ್ಯ. ಹಾಗಾಗಿಯೇ ಭಾನುವಾರದ ಪ್ರತೀಕ್ಷೆಯಲ್ಲಿ ನಾನಿದ್ದೆ. 

ಆದರೆ…… ಆ ಭಾನುವಾರದಂದು ಮಾತನಾಡಲು ಏನೂ ಉಳಿಯಲೇ ಇಲ್ಲ…..
ಸಾಮಾನ್ಯವಾಗಿ ಶುಕ್ರವಾರದಂದು ಯಮುನೆಯ ತಟದಲ್ಲಿರುವ ಸಂತೋಷಿ ಮಾತೆಯ ಗುಡಿಗೆ ಬರುವುದು ಬೇಲಾಳ ರೂಢಿ. ಯಮುನೆಯ ಪಾತ್ರದಲ್ಲಿ ಕೂರುವುದು ನನ್ನ ದಿನಚರಿ. ಅವಳ ಪರಿಚಯವಾದನಂತರ ಅವಳು ಗುಡಿಗೆ ಹೋಗಿ ಬರುವತನಕ ಕಾದಿದ್ದು ನಂತರ ಅವಳೊಂದಿಗೆ ವಾಪಾಸಾಗುವ ಹವ್ಯಾಸ ಬೆಳೆದಿತ್ತು. ಅಂತೆಯೇ ಆ ಶುಕ್ರವಾರ ಯಮುನೆಯ ತಟದಲ್ಲಿ ಅವಳಿಗಾಗಿಯೇ ಕಾಯುತ್ತಾ ಕುಳಿತಿದ್ದೆ. ಹೊತ್ತು ಸರಿದು ಸೂರ್ಯ ನೆತ್ತಿಗೇರುತ್ತಾ ಬಂದರೂ ಬೇಲಾಳ ಸುಳಿವಿಲ್ಲ. ಮನವೇಕೋ ಯಾವುದೋ ಕೇಡನ್ನು ಶಂಕಿಸಿದಂತೆ ತಳಮಳಗೊಳ್ಳುತಿತ್ತು. ಎದ್ದು ಕೇಶವ್ ಚಾಚಾರ ಮನೆಯೆಡೆಗೆ ಹೊರಟೆ. ದಾರಿಯುದ್ದಕ್ಕೂ ಇತ್ತೀಚಿನ ಬೇಲಾಳ ಬದಲಾದ ವರ್ತನೆಗಳೇ ಮನಸ್ಸನ್ನು ಮುತ್ತಿ ಕಾಡುತ್ತಿದ್ದವು. ಮನೆ ಕಣ್ಣಳತೆಗೆ ಕಾಣುವಾಗಲೇ ಮನೆಯ ಸಮೀಪ ನಿಂತಿದ್ದ ಕಡು ಹಸಿರು ಬಣ್ಣದ ಓಪನ್ ಜೀಪ್ ಗಮನ ಸೆಳೆಯಿತು……. ಅನುಮಾನವೇ ಉಳಿಯಲಿಲ್ಲ….. ಇಡೀ ಭೈರೋನ್ ನಲ್ಲಿ ಇಂತಹ ಜೀಪಿರುವುದು ಸೂರಜನ ಬಳಿ ಮಾತ್ರವೇ. ಆ ಕ್ಷಣದಲ್ಲೇ ಬೇಲಾಳ ಸಮಸ್ಯೆಯ ಮೂಲ ತಿಳಿದುಹೋಯಿತು ನನಗೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವಳ ಸಧ್ಯದ ಪರಿಸ್ಥಿತಿಯ ಬಗ್ಗೆ ನೆನೆದು ದಿಗಿಲಾಯಿತು. 

ಒಂದೇ ಉಸಿರಿನಲ್ಲಿ ಮನೆಯತ್ತ ಧಾವಿಸುವಾಗಲೇ ಬೇಲಾಳ ಚೀರಾಟ ಕಿವಿಗೆ ಬೀಳತೊಡಗಿತು. ರಸೋಯಿ ಬಳಿಯ ಬಾಗಿಲಿನಿಂದ ದಟ್ಟವಾದ ಹೊಗೆ…...‌‌.. ಪ್ರಾಣಾಂತಿಕ ಯಾತನೆಯಲ್ಲಿ ಅದ್ದಿ ತೆಗೆದಂತಹ ಆ ಚೀತ್ಕಾರ ಕೇಳಿಯೇ ಎದೆಬಡಿತ ನಿಂತಂತಾಯಿತು ನನಗೆ. ಅಂಗಳ ದಾಟಿ ಮುಂಬಾಗಿಲ ಬಳಿ ಬಂದೆನಾದರೂ ಅದು ಒಳಗಿನಿಂದ ಮುಚ್ಚಿತ್ತು. "ಚೂತಿಯಾ ಸಾಲೀ….. ಮುಝೇ ಜುತ್ತೀ ದಿಖಾಯೇಗಿ? ಮುಝೇ…..?? ಅಬ್ ನತೀಜಾ ಬುಗತ್ ಸಸುರೀ…." ಎನ್ನುವ ಮಾತುಗಳು ಅಸ್ಪಷ್ಟವಾಗಿ ಅವಳ ಚೀರಾಟದ ಮಧ್ಯೆ ಕಿವಿಗೆ ತಾಕುತ್ತಿದ್ದವು. ನನಗೆ ಏನೊಂದೂ ತೋಚದಂತಾಗಿತ್ತು. ಇಡೀ ದೇಹದ ಚೇತನವೆಲ್ಲಾ ಕಾಲಬುಡದಲ್ಲಿ ಸೋರಿಹೋದಂತೆ ಜೀವ ನಿಷ್ಕ್ರಿಯವಾಗಿತ್ತು. ಸಾವರಿಸಿಕೊಂಡು ಹಿಂಬಾಗಿಲ ಬಳಿ ಸಾಗಬೇಕೆನ್ನುವಾಗಲೇ ಬಾಗಿಲು ತೆರೆದುಕೊಂಡಿತು. ಒಳಗಿನಿಂದ ಸೂರಜ್ ಮತ್ತವನ ನಾಲ್ವರು ಜೊತೆಗಾರರು ಗಡಿಬಿಡಿಯಲ್ಲಿ ಹೊರಬಂದರು. ಅವರಲ್ಲಿಬ್ಬರ ಕೈಯಲ್ಲಿ ಕಪ್ಪನೆಯ ಗಾಜಿನ ಶೀಷೆಗಳಿದ್ದರೆ ಇನ್ನಿಬ್ಬರು ದೊಡ್ಡವೆರಡು ಕ್ಯಾನುಗಳನ್ನು ಹಿಡಿದಿದ್ದರು. ನನ್ನನ್ನು ಅಲ್ಲಿ ನಿರೀಕ್ಷಿಸಿರದ ಕಾರಣ ಅವರ ಮೊಗದಲ್ಲಿ ಒಂದಿಷ್ಟು ಗಲಿಬಿಲಿ ಕಂಡಿತು. ಆ ಕ್ಷಣದಲ್ಲಿ ಅವರನ್ನು ಕನಿಷ್ಠ ತಡೆಯಲು ಪ್ರಯತ್ನಿಸಬೇಕೆಂಬುದೂ ನನಗೆ ತೋಚಲಿಲ್ಲ. ಅರೆಕ್ಷಣದಲ್ಲಿ ನನ್ನನ್ನು ಬದಿಗೆ ನೂಕಿ ನಾನು ಸಾವರಿಸಿಕೊಳ್ಳುವುದರೊಳಗಾಗಿ ಐವರೂ ಸರಸರನೇ ಜೀಪನ್ನೇರಿ ಮಾಯವಾದರು. ನಾನು ನೋಡುತ್ತಲೇ ಉಳಿದೆ.

ಒಳಗಿನ ಬೇಲಾಳ ಚೀರಾಟ ನನ್ನನ್ನು ಪ್ರಜ್ಞಾವಸ್ಥೆಗೆ ಕರೆತಂದಿತು. ಕೂಡಲೇ ಮನೆಯೊಳಕ್ಕೆ ಧಾವಿಸಿದೆ. ಮನೆಯ ತುಂಬಾ ತುಂಬಿದ್ದ ಎಂಥದೋ ವಿಚಿತ್ರ ವಾಸನೆ….. ಪೆಟ್ರೋಲ್ ಘಾಟಿನೊಂದಿಗೆ ಸುಟ್ಟ ಕಮಟು ವಾಸನೆ ಮೂಗಿಗೆ ಅಡರಿತು ….. ಅವರ ಕೈಯಲ್ಲಿದ್ದ ಸೀಸೆಗಳ ನೆನಪಾಯಿತು. ಆಸಿಡ್ ಎನ್ನುವುದರ ಬಗ್ಗೆ ಕೇಳಿದ್ದು, ಓದಿದ್ದು ನೆನಪಾಗಿ ತಲೆ ಸುತ್ತುವಂತಾಯಿತು. ಅವಳ ಧ್ವನಿಯ ಜಾಡು ಹಿಡಿದು ರಸೋಯಿಯೆಡೆಗೆ ಧಾವಿಸಿದೆ. ತುಂಬಿಕೊಂಡಿದ್ದ ಹೊಗೆ, ಘಾಟಿನ ನಡುವೆ ಉಸಿರೆಳೆದುಕೊಳ್ಳುವುದೂ ದುಸ್ತರವಾಗಿತ್ತು. ನೆಲದಲ್ಲಿ ಬಿದ್ದು ಒದ್ದಾಡುತ್ತಿರುವ ಅವಳ ಚೀರಾಟ, ಹೊತ್ತಿ ಉರಿಯುತ್ತಿದ್ದ ಬೆಂಕಿ…….. ತುಂಬಿದ್ದ ಹೊಗೆಯ ಮಧ್ಯೆ ಎಲ್ಲವೂ ಅಸ್ಪಷ್ಟ….. ಆಸಿಡ್ ಎರಚಿಯೂ ಸಮಾಧಾನವಾಗದೇ ಬೆಂಕಿ ಹಚ್ಚಿದರಾ…….?? ಹೇಗೋ ತಡಕಾಡಿಕೊಂಡು ರಸೋಯಿಯ ಹಿಂಬದಿಯ ಬಾಗಿಲನ್ನು ತೆರೆದೆ.

ನನ್ನಾಗಮನದ ಅರಿವಾಯಿತೇನೋ….. ನನ್ನ ಹೆಸರನ್ನು ಕೂಗುತ್ತಲೇ ಒದ್ದಾಡತೊಡಗಿದಳು. ಒಳಕೋಣೆಗೆ ಓಡಿ ನಾಲ್ಕೈದು ಚಾದರ್ ಗಳನ್ನು ಎಳೆದುಕೊಂಡು ಬಂದು ಅವಳ ಮೇಲೆ ಹಾಕುವ ವೇಳೆಗೆ ಅವಳ ಚೀರಾಟದ ಸದ್ದು ಕೇಳಿ ಜನರು ಜಮಾಯಿಸತೊಡಗಿದ್ದರು. ಹೇಗೋ ಎಲ್ಲಾ ಸೇರಿ ಬೆಂಕಿಯನ್ನು ಆರಿಸಿ ಒಂದೇ ಸಮನೆ ಅರಚುತ್ತಿದ್ದವಳನ್ನು ಚಾದರವೊಂದರಲ್ಲಿ ಸುತ್ತಿ ಹೊರಗಿನ ಅಂಗಳಕ್ಕೆ ಹೊತ್ತು ತಂದು ಮಲಗಿಸಿದರು. ಕುಲ್ಜೀತ್ ಡಾಕ್ಟರನ್ನು ಕರೆತರಲು ಓಡಿದರೆ ಕುಲ್ದೀಪ್ ತನ್ನ ಮೋಟಾರ್ ಸೈಕಲ್ಲಿನಲ್ಲಿ ಮಖೇಡಾಕ್ಕೆ ತೆರಳಿದ ಚಾಚಾರನ್ನು ಕರೆತರಲು.

ಅಂಗಳದ ಬದಿಯಲ್ಲಿದ್ದ ಸೆಣಬಿನ ನಾರಿನ ಮಂಚದ ಮೇಲೆ ಬಿದ್ದುಕೊಂಡಿರುವ ಮಾನವ ದೇಹವೆಂದೂ ಗುರ್ತಿಸಲಸಾಧ್ಯವಾದ ಆಕೃತಿಯೇ ನನ್ನ ಬೇಲಾಳೇ……? ಕೆಂಪು ಬೊಟ್ಟಿನ ಮೆರುಗು ಪಡೆಯುತ್ತಿದ್ದ ಆ ಅಗಲವಾದ ನೊಸಲು, ಅವಳ ಮೌನದೊಳಗಿನ ಮಾತುಗಳನ್ನು ವೇದ್ಯಗೊಳಿಸುತ್ತಿದ್ದ ಆ ಭಾವಪೂರ್ಣ ಕಂಗಳು, ಒಂಟಿಹರಳಿನ ನಥ್ನಿಯಿಂದ ಹೊಳೆಯುತ್ತಿದ್ದ ನಾಸಿಕ, ಸದಾ ಮುಗುಳ್ನಗೆಯ ಆಭರಣದಿಂದ ಶೋಭಿಸುತ್ತಿದ್ದ ಅಧರಗಳು…….. ಆ ಸುಲಕ್ಷಣವಾದ ವದನ…….. ಎಲ್ಲಾ ಎಲ್ಲಿ ಹೋದವು? ಹಣೆ, ರೆಪ್ಪೆ, ಕಣ್ಣು, ಮೂಗು, ಬಾಯಿಗಳೆಲ್ಲವನ್ನೂ ಕರಗಿಸಿ ಕಲಸಿ ಮೆತ್ತಿದಂತೆ ಬಿದ್ದಿರುವ ಈ ಕರಟಿದ ಮಾಂಸದ ಮುದ್ದೆ ಬೇಲಾಳೇ……..? ಸತ್ಯವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ…… ಆದರೆ ಅದನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವೇ…….? ನಿನ್ನೆಯಷ್ಟೇ ಇದೇ ಅಂಗಳದ ತುದಿಯವರೆಗೂ ಬಂದು 'ಚಲೋ….... ತೋ ಫಿರ್ ಕಲ್ ಮಿಲೇಂಗೇ' ಎಂದು ನಸುನಗುತ್ತಾ ನನ್ನನ್ನು ಬಿಳ್ಕೊಟ್ಟಿದ್ದಾಕೆಯನ್ನು ಇಂದು ಅದೇ ಅಂಗಳದಲ್ಲಿ ಹೀಗೆ ಭೇಟಿಯಾಗುವುದನ್ನು ನಂಬುವುದಾದರೂ ಎಂತು…...? ಇಲ್ಲ…… ಇವಳು ನನ್ನ ಗೆಳತಿ ಬೇಲಾಳಂತು ಅಲ್ಲವೇ ಅಲ್ಲ……

ಇಷ್ಟೊಂದು ಹಿಂಸೆಯಾಗುತ್ತಿದ್ದರೂ ಒಮ್ಮೆಯೂ ನನ್ನೊಂದಿಗೆ ಇಲ್ಲಾ ಚಾಚಾನೊಂದಿಗೆ ಹೇಳಿಕೊಳ್ಳಬೇಕೆಂದು ನಿನಗೆ ಅನಿಸಲಿಲ್ಲವೇ? ಒಂದು ಮಾತು ಹೇಳಿದ್ದರೆ ಪರಿಸ್ಥಿತಿ ಇಲ್ಲಿಯತನಕ ಹೋಗುತ್ತಿತ್ತೇ……? ಅವಳ ರಟ್ಟೆ ಹಿಡಿದೆಬ್ಬಿಸಿ ಕೇಳಬೇಕೆನಿಸುತ್ತಿದೆ. ಆದರೆ ಹಿಡಿದೆತ್ತಲು ರಟ್ಟೆಯಾದರೂ ಉಳಿದಿದೆಯೇ…..? ಕರಟಿ ಬೆಂದ ತೊಗಲು ಮಾಂಸದಡಿಯಲ್ಲಿನ ಮೂಳೆಗಳನ್ನೇ ಹಿಡಿದೆತ್ತಲೇ……? ಯಾವ ತಪ್ಪಿಗಾಗಿ ಈ ಪರಿಯ ಘೋರ ಶಿಕ್ಷೆ? ಅವಳಿಂದ ಯಾವ ಮಹಾಪರಾಧವಾಯಿತೆಂದು ಭೂಲೋಕದಲ್ಲೇ ನರಕಸದೃಶ ಯಾತನೆ…….?

ನನ್ನ ಮನಸ್ಸು ಹುಚ್ಚಾಗಿ ಅಲೆಯುತ್ತಿದ್ದಾಗಲೇ ಕ್ಷೀಣಿಸುತ್ತಿದ್ದ ದನಿಯಲ್ಲಿ ನನ್ನನ್ನು ಕೂಗಿದ್ದಳವಳು. ಅವಳ ಬಳಿ ಸಾರಿದೆ. ಇನ್ನಷ್ಟು ಹತ್ತಿರ ಬರುವಂತೆ ಸನ್ನೆ ಮಾಡಿದಳು. ಅವಳು ಏನೋ ಹೇಳಲು ತವಕಿಸುತ್ತಿದ್ದಳು. ಆದರೆ ಸ್ವಾಧೀನ ಕಳೆದುಕೊಂಡು ನೋವಿನಲ್ಲೇ ಮುಳುಗಿದ ದೇಹ ಸಹಕರಿಸುತ್ತಿರಲಿಲ್ಲ. ನಾನಾದರೂ ಅವಳ ಬಾಯಿಯ ಬಳಿಗೆ ಕಿವಿ ಕೊಂಡೊಯ್ಯೋಣವೆಂದರೆ ಎಲ್ಲಿ ಹುಡುಕಲಿ ಬಾಯಿಯನ್ನು? ಶತಪ್ರಯತ್ನದಿಂದ ಅಕ್ಷರಗಳನ್ನು ವಕ್ರವಕ್ರವಾಗಿ ಜೋಡಿಸಿ ಅವಳು ನುಡಿದ ಪದಗಳ ಒಟ್ಟು ಸಾರಾಂಶವೇನೆಂದರೆ……

ಹಿಂದಿನ ದಿನ ಮಧ್ಯಾಹ್ನ ಈ ಸೂರಜ್ ಮತ್ತವನ ಸ್ನೇಹಿತರು ಮನೆಗೇ ನುಗ್ಗಿ ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಮೇವು ಹಾಕುತ್ತಿದ್ದ ಬೇಲಾಳ ಕೈಹಿಡಿದು ಎಳೆದಾಡಿದ್ದರಂತೆ. ಅಸಭ್ಯ ಮಾತುಗಳಿಂದ ದೇವೇಂದ್ರ ಬಧೌರಿಯಾನ ಒಡೆತನದ ತೋಟದಲ್ಲಿದ್ದ ಅವರ ಹಳೇ ಮನೆಗೆ ಬರುವಂತೆ ಒತ್ತಾಯಿಸತೊಡಗಿದಾಗ ಇವಳು ಕೋಪಗೊಂಡು ಕಾಲಿನಲ್ಲಿದ್ದ ಚಪ್ಪಲಿ ತೆಗೆದು ತೋರಿಸಿದಳಂತೆ. ಅವರು ಮೇಲೇರಿ ಬಂದಾಗ ಅಲ್ಲೇ ಇದ್ದ ಧಾನ್ಯ ಕುಟ್ಟುವ ಬಡಿಗೆ ಕೈಗೆ ತೆಗೆದುಕೊಂಡಳಂತೆ. ಬಡಿಗೆಯಿಂದ ತಲೆ ಒಡೆದಾಳೆಂದು ಭಯ ಬಿದ್ದು ವಾಪಾಸಾಗಿರಬೇಕು. ಹೋಗುವಾಗ ಸೂರಜ್ ಹಿಂದಕ್ಕೆ ತಿರುಗಿ ತನಗೇ ಚಪ್ಪಲಿ ತೋರಿಸಿದ ನಿನಗೊಂದು ಗತಿ ಕಾಣಿಸದೇ ಬಿಡುವುದಿಲ್ಲ ಎಂದಿದ್ದನಂತೆ. ಆ ಭಯದಲ್ಲೇ ಇಂದು ಗುಡಿಗೂ ಬಾರದೇ ಮನೆಯಲ್ಲೇ ಉಳಿದಿದ್ದಳು ಅವಳು. ಬೆಳಿಗ್ಗೆ ಚಾಚಾ ಮನೆಯಿಂದ ತೆರಳಿ ಸುಮಾರು ಸಮಯದ ನಂತರ ಆ ಐವರೂ ತೆರೆದಿದ್ದ ಅಡುಗೆ ಕೋಣೆಯ ಬಾಗಿಲಿಂದ ಒಳಗೆ ಬಂದರಂತೆ. ಏನೊಂದೂ ಮಾತಾಡದೇ ಅವರಲ್ಲಿಬ್ಬರು ಮುಖದ ಮೇಲೆ ಅವರೇ ತಂದಿದ್ದ ಶೀಷೆಯಲ್ಲಿದ್ದ ದ್ರಾವಣವನ್ನು ಎರಚಿದ್ದರು. ಇಡೀ ಮುಖವನ್ನೇ ಕುದಿಯುವ ಎಣ್ಣೆಯಲ್ಲಿ ಅದ್ದಿದಂತಾಗಿ ಇವಳು ಕಿರುಚಾಡಲಾರಂಭಿಸುವ ಮೊದಲೇ ಅವರಲ್ಲೇ ಯಾರೋ ಮೈಮೇಲೆ ಪೆಟ್ರೋಲ್ ಸುರಿದು ಉರಿಯುತ್ತಿದ್ದ ಒಲೆಯ ಮೇಲೆ ದೂಡಿದ್ದಾರೆ. ಆಮೇಲೆ ಏನಾಯಿತು ಏನೊಂದೂ ತನಗೆ ತಿಳಿಯಲಿಲ್ಲ. ಮೈಯನ್ನೆಲ್ಲಾ ದಹಿಸಿ ದಹಿಸಿ ಧಗಧಗಿಸುತ್ತಿದ್ದ ಉರಿಯ ಹೊರತು ಮತ್ತೇನೂ ಗೊತ್ತಾಗಲಿಲ್ಲ…...‌‌
ಅತೀ ಕಷ್ಟದಿಂದ ಇಷ್ಟನ್ನು ಹೇಳಿದಳು. ಬೇರೆ ಏನನ್ನೂ ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ, ಹೇಳುವಷ್ಟು ಚೈತನ್ಯವೂ ಅವಳಿಗಿರಲಿಲ್ಲ. ಅವಳಾಗಲೇ ಪ್ರಜ್ಞಾಶೂನ್ಯಳಾಗುವ ಹಂತದಲ್ಲಿದ್ದಳು. ಆದರೂ ಇನ್ನೂ ಏನೋ ಹೇಳಲು ಬಾಕಿ ಉಳಿದಂತಿತ್ತು ಅವಳಿಗೆ. ಇನ್ನಷ್ಟು ಹತ್ತಿರ ಸರಿದು ಮೊಗ(?)ದ ಸನಿಹ ಬಾಗಿದೆ. ಅವಳ ಉಸಿರೆಳೆಯುತ್ತಿತ್ತು. ಬಹಳ ಹೆಣಗಾಟದ ನಂತರ, 'ಬಾಬಾ ಕಾ….. ಖಯಾಲ್ ರಖ್ನಾ ಸಿಯಾ….. ಮೇರೇ…… ಸಿವಾ….' ಇನ್ನೇನು ಹೇಳಲಿತ್ತೋ ಆದರೆ ಇಷ್ಟನ್ನು ತೊದಲುತ್ತಲೇ ಪ್ರಜ್ಞಾಶೂನ್ಯಳಾದಳು ಬೇಲಾ. ತಾನಿನ್ನು ಉಳಿಯಲಾರೆ ಎಂದು ಅದಾಗಲೇ ನಿರ್ಧರಿಸಿಬಿಟ್ಟಿದ್ದಳಾ….? ಬದುಕಿನ ಅರ್ಧ ಹಾದಿಯಲ್ಲೇ ತಂದೆಯನ್ನು ಬಿಟ್ಟು ಹೊರಡುತ್ತಿದ್ದೇನೆಂಬ ಖೇದವಿತ್ತು ಅವಳ ಮಾತುಗಳಲ್ಲಿ.

ಊರಿನ ವೈದ್ಯರು ಬಂದು ಒಮ್ಮೆ ಕೂಲಂಕಷವಾಗಿ ಪರೀಕ್ಷಿಸಿದವರೇ ತೊಂಬತ್ತು ಪ್ರತಿಶತ ದೇಹ ಸುಟ್ಟಿರುವುದರಿಂದ ಉಳಿಯುವ ಯಾವ ಭರವಸೆಯೂ ಇಲ್ಲ ಜೊತೆಗೆ ಚಿಕಿತ್ಸೆಯೂ ಇಲ್ಲಿ ಸಾಧ್ಯವಿಲ್ಲ ಎಂದರು. ಅವಳು ಬದುಕಲಾರಳು ಎನ್ನುವುದು ನನ್ನ ಮನಕ್ಕೆ ವೇದ್ಯವಾಗಿತ್ತು. ಅಷ್ಟರಲ್ಲಾಗಲೇ ಭೈರೋನಿನ ಅಧಿಪತಿಯ ಸವಾರಿಯೂ ಚಿತ್ತೈಸಿತ್ತು. ಮೊಸಳೆ ಕಣ್ಣೀರು ಸುರಿಸುತ್ತಾ ಗಡಿಬಿಡಿಯಿಂದ ಅತ್ತಿತ್ತ ಓಡಾಡಿ ನೆರೆದಿದ್ದ ಜನರೊಂದಿಗೆ ಮಾತನಾಡಿದ. ಬಹುಶಃ ತನ್ನ ಔರಸ ಪುತ್ರನೇ ಇದನ್ನೆಲ್ಲಾ ಮಾಡಿದ್ದಾನೆಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಯಾರಾದರೂ ಇದ್ದಾರೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದನೇನೋ…….. ಮಗನನ್ನು ಅವನ 'ಗೌರವಾನ್ವಿತ' ಗೆಳೆಯರನ್ನು ಯಾವ ಬಿಲದಲ್ಲಿ ಬಚ್ಚಿಟ್ಟು ಬಂದಿರುವನೋ….. ಬಚ್ಚಿಡುವ ಅಗತ್ಯವಾದರೂ ಏನಿದೆ? ನ್ಯಾಯಾಧೀಶನೇ ಇವನಲ್ಲವೇ ಇಲ್ಲಿ? ನ್ಯಾಯದೇವತೆಯ ಕೈಯಲ್ಲಿನ ತರಾಜೂ಼ವಿನಲ್ಲಿ(ತಕ್ಕಡಿ) ನ್ಯಾಯ ಅನ್ಯಾಯಗಳನ್ನು ತನ್ನಿಷ್ಟದಂತೆ ತೂಗುತ್ತಾನೆ. ಅವನು ಕೊಟ್ಟಿದ್ದೇ ತೀರ್ಪು, ಅವನ ಹೇಳಿದ್ದೇ ನ್ಯಾಯ…… ಮರ್ಜೀ಼ ಕಾ ಮಾಲೀಕ್ ನಿಗೆ ಕಡಿವಾಣ ಹಾಕುವವರ್ಯಾರು? 

ಅಷ್ಟರಲ್ಲೇ ಕುಲ್ದೀಪನೊಂದಿಗೆ ಕೇಶವ್ ಚಾಚಾ ಬಂದರು. ಬಹುಶಃ ಅವರಿಗೆ ಸತ್ಯ ವಿಚಾರ ಹೇಳದೇ ಕರೆತಂದಿದ್ದ ಅವನು. ಅವರ ಮುಖದಲ್ಲಿ ಸಣ್ಣ ಕಳವಳವಿತ್ತಷ್ಟೇ. ಆದರೆ ತಮ್ಮ ಮನೆಯ ಮುಂದಿನ ಜನಸಂದಣಿ ಕಾಣುತ್ತಲೇ ಅವರ ಮೊಗದಲ್ಲಿ ಗಾಬರಿಯೊಡೆಯಿತು. ಗೇಟಿನಿಂದ ಒಳಕ್ಕೆ ಬರುತ್ತಲೇ ದೇವೇಂದ್ರ ಬಧೌರಿಯಾನೇ ಖುದ್ದು ಅವರನ್ನು ಎದುರುಗೊಂಡು ಸಮಾಧಾನಿಸುತ್ತಾ ನಮ್ಮ ಬಳಿ ಕರೆತಂದ. ಚಾಚಾ ಮಾತ್ರ ಸುತ್ತಮುತ್ತ ಎಲ್ಲಾ ಕಡೆ ತಮ್ಮ ಗಾಬರಿಯ ನೋಟ ಹರಿಸುತ್ತಾ ಹುಡುಕುತ್ತಿದ್ದರು. ತಮ್ಮ ಮಗಳು ಎಲ್ಲೂ ಕಾಣುತ್ತಿಲ್ಲವೆಂಬ ಆತಂಕವದು. ಹುಟ್ಟಿದಾಗಿನಿಂದ ತಾನೇ ತಾಯಿಯಾಗಿ ತನ್ನ ಕಣ್ಣ ಮಣಿಯಂತೆ ಜತನದಿಂದ ಬೆಳೆಸಿದ ಅಚ್ಚೆಯ ಮಗಳು ಹೀಗೆ ಗುರುತಿಸಲೂ ಸಾಧ್ಯವಿಲ್ಲದಷ್ಟು ವಿರೂಪಗೊಂಡು ಮಲಗಿರುವಳೆಂದು ಆ ತಂದೆಗೆ ಅರಿವಾಗುವುದಾದರೂ ಹೇಗೆ? 

ಅವರ ನೋಟ ನನ್ನ ಮೇಲೆ ಸ್ಥಿರವಾದ ಕ್ಷಣ ನಾನು ಏನೊಂದೂ ತೋಚದೇ ನನ್ನ ನೋಟವನ್ನು ನೆಲದತ್ತ ಬಾಗಿಸಿದೆ. 

ಬಹುಶಃ ನನ್ನ ಪಕ್ಕವೇ ಇದ್ದ ಚಾದರದಲ್ಲಿ ಸುತ್ತಿದ್ದ ಆರಿದ ಮಸಿಕೆಂಡದಂತಹ ದೇಹ ಕಣ್ಣಿಗೆ ಬಿದ್ದಿರಬೇಕು…… 

ಅಪನಂಬಿಕೆಯಿಂದಲೇ ಅವಳತ್ತ ಸರಿದರು. ಮತಿಭ್ರಮಣೆಗೊಳಗಾದವರಂತೆ ಮಗಳ ಮೊಗ ಕೈ ಕಾಲುಗಳನ್ನೆಲ್ಲಾ ಸವರಿದರು. ಅವರ ಕೈ ಬೆರಳುಗಳು ಅವಳ ನೆತ್ತಿಯ ಮೇಲಿದ್ದ ಸೊಂಪಾದ ಕುರುಳನ್ನು ಅರಸಿ ಅರಸಿ ಸರಿದಾಡಿದವು. ಅವು ಎಂದಿಗಾದರೂ ಸಿಗಬಲ್ಲವೇ? ಆ ಬೆಂದ ದೇಹವನ್ನು ತಮ್ಮ ಮಡಿಲಿನಲ್ಲಿ ಹುದುಗಿಸಿಕೊಳ್ಳಲು ಹವಣಿಸಿದರು….. ಈ ದುರುಳ ಜನರಿಂದ ದೂರ ನನ್ನೊಡಲಲ್ಲಿ ನಿನ್ನನ್ನು ಸುರಕ್ಷಿತವಾಗಿರಿಸಿಕೊಳ್ಳುವೆ ಎಂಬ ಭಾವವಿತ್ತೇನೋ ಅವರ ಆ ಚರ್ಯೆಯಲ್ಲಿ……. 

ಪದೇ ಪದೇ ಗುರುತೇ ಸಿಗದ ಮೊಗದ ಮೇಲೆಲ್ಲಾ ಕೈಯಾಡಿಸುತ್ತಾ ಅವಳನ್ನು ಎಬ್ಬಿಸಲು ಪ್ರಯತ್ನಿಸಿದರು. ದೀನ ಕಂಗಳಿಂದ ನನ್ನೆಡೆಗೆ ನೋಡಿದರು. ಆ ನೋಟ ಕಸಾಯಿಖಾನೆ ಪಾಲಾದ ತನ್ನ ಕರುವನ್ನು ನೆನೆಯುವ ಹಸುವಿನಂತಿತ್ತು…… 

ಬೇಲಾಳನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಕುಲ್ಜೀತ್ ನನ್ನನ್ನು ಎಚ್ಚರಿಸಿದ. ಶಾಮ್ಲಿಯ ಆಸ್ಪತ್ರೆಗೇ ಕರೆದೊಯ್ಯುವುದು ಸೂಕ್ತವೆಂದರು ವೈದ್ಯರು. ಈ ಪರಿಸ್ಥಿತಿಯಲ್ಲಿ ಅಷ್ಟು ದೂರ ಕರೆದೊಯ್ಯುವುದು ಹೇಗೆಂಬ ಯೋಚನೆಯಾಯಿತು. ದೇವೇಂದ್ರ ಬಹಳ ಕಾಳಜಿಯುಳ್ಳವನಂತೆ ತನ್ನದೇ ಸ್ವಂತ ವಾಹನದಲ್ಲಿ ಕರೆದೊಯ್ಯೋಣವೆಂದ. 

ಮಗ ಒಂದು ವಾಹನದ ತುಂಬಾ ಆಸಿಡ್, ಪೆಟ್ರೋಲ್ ಹೊತ್ತು ತಂದು ದೇಹವನ್ನು ದಹಿಸಿದ‌…. ಈಗ ಅಪ್ಪ ತನ್ನ ವಾಹನದಲ್ಲಿ ತನ್ನ ಪ್ರಭಾವವುಳ್ಳ ಆಸ್ಪತ್ರೆಗೆ ಸಾಗಿಸಿ ಕ್ಷೀಣವಾಗಿರುವ ಉಸಿರನ್ನು ಶಾಶ್ವತವಾಗಿ ನಿಲ್ಲಿಸಿ ಚಿತೆಯ ಮೇಲೆ ಇನ್ನೊಮ್ಮೆ ಅವಳನ್ನು ಶಾಸ್ತ್ರೋಕ್ತವಾಗಿ ಬೇಯಿಸಲು ತಯಾರಾಗಿ ನಿಂತಿರುವನಷ್ಟೇ…….. ಪ್ರತೀ ದಿನ ಅದೆಷ್ಟು ಬೇಲಾರ ದಹನವಾಗುತ್ತಿದೆಯೋ ಈ ದೇಶದಲ್ಲಿ…... 

ಬೇಲಾಳ ಆತ್ಮವೂ ಇದನ್ನೇ ಯೋಚಿಸಿ ಈ ಅಪ್ಪ ಮಕ್ಕಳ ಹಂಗೇ ಬೇಡವೆಂದು ನಿರ್ಧರಿಸಿತೇನೋ…… ಈ ಕ್ರೂರ ಜನರ ಸಹವಾಸವೇ ಬೇಡವೆಂದು ಅವಳ ದೇಹವನ್ನು ತೊರೆದು ನಡೆದುಬಿಟ್ಟಿತದು…... 

ಬೇಲಾ ಎಂಬ ಹೂಮನದ ಹೆಣ್ಣು ವಯಸ್ಸಿಗೆ ಮಾಗಿ ಬಾಡುವ ಮೊದಲೇ ಅರಳಿದಲ್ಲೇ ಸುಟ್ಟು ಕರಕಲಾಗಿಹೋದಳು…..

वो नाज़ुक सी कमसिन कली, बड़ी नाझों से पली, 
जो थी सबसे प्यारी, जो थी अपने बाबुल की दुल्हारी। 

मुस्कुराता चेहरा 
आँखें, जो बोलते थे अनकही बातें 
जिसे वो लफ्झों में बयान ना कर पाती थी, 
अपने ही धुन में खोयी हुई, सपनों को संझौती हुई, 
उड़ने चली थी आसमान में                           

पड़ी उस पे एक अमानुष की नज़र 
जो मिटा दिया उसे बड़ी बेरेहमी से चंद छीटें उड़ा के। 
इस से भी मन नहीं भरा उस ज़ालिम का, 
जो धकेल दिया उसे सुलगते आग में, 
वो रोती रही, बिलकती रही, 
कोई नहीं था उसे सुन ने वाला, 
वो देखती रही अपने सपनों को टूट के बिखरते हुए, 
जो संझौये थे उसने बड़े प्यार से

जो था एक चमकता सितारा अब चुप गयी है अंधेरों में, क्या गलती थी उसकी?? कोई नहीं जानता

ये है उसकी कहानी था जिसका नाम बेला।।
वो नाज़ुक सी कमसिन कली बड़ी नाझों से पली, 
ये थी उसकी कहानी खामोश ज़िन्दगानी .....    

ಸಶೇಷ

ಶೀರ್ಷಿಕೆ ಹಾಗೂ ಹಿಂದಿ ಕವಿತೆಯ ಕೃಪೆ: ರೂಪಾ ಮಂಜುನಾಥ್


6 ಕಾಮೆಂಟ್‌ಗಳು:

  1. What to tell mam... No words.. so much a girl should suffer for being a girl, she wasn't raped. That was the only thing they didn't do before burning her, God should have not created women...

    ಪ್ರತ್ಯುತ್ತರಅಳಿಸಿ
  2. ನೂರಕ್ಕೆ ನೂರು ಸತ್ಯ ನಿಮ್ಮ ಮಾತು. ಕೆಲವೊಮ್ಮೆ ಇದನ್ನೆಲ್ಲಾ ಕಾಣುವಾಗ ದೇವರು ಹೆಣ್ಣನ್ನು ಯಾಕಾದರೂ ಸೃಷ್ಟಿಸಿದನೋ ಅನ್ನುವ ಯೋಚನೆ ಕೂಡಾ ಬರುತ್ತದೆ. She is highly vulnerable.

    ಪ್ರತ್ಯುತ್ತರಅಳಿಸಿ
  3. ಬೇಲಾಳಂತಹ ಮುಗ್ಧರ ಬಲಿ ಪಡೆಯುತ್ತಿರುವ ದೇವೇಂದ್ರ ಮತ್ತು ಬಬ್ಲೂ‌ನಂತಹ ಮೃಗಗಳ ಕ್ರೂರತೆಗೆ ಜೀವವಿದ್ದೂ ಸತ್ತ ಹೆಣಗಳಂತೆ ವರ್ತಿಸುವ ನಿರ್ದಯಿ ಸಮಾಜವೇ ನೇರ ಹೊಣೆ...

    ಪ್ರತ್ಯುತ್ತರಅಳಿಸಿ
  4. ಬಹಳ ಬಹಳ ಭಾವನಾತ್ಮಕ ಸಂಚಿಕೆ ಮ್ಯಾಮ್ ಇದು. ಹಿಂದೆ ಯಾವುದೋ ಕಥೆ ಡೈರಿಯಲ್ಲಿ ಬರೆದಿದ್ದಾಗ ಆಸಿಡ್ ಅಟ್ಯಾಕ್ ಬಗ್ಗೆ ಬರೆಯುವಾಗ ಒಂದಷ್ಟು ಮಾಹಿತಿಗಾಗಿ ಹುಡುಕಡಿದ್ದೆ. ಆಗಲೇ ಹಿಂಸೆ ಅನ್ನಿಸಿತ್ತು. ಇಲ್ಲಿ ಬೇಲಾ ಸ್ಥಿತಿ ಅದೆಲ್ಲಕ್ಕಿಂತ ಭಯಂಕರ. ಆ ಪ್ರಾಂತ್ಯದಲ್ಲಿ ಈಗಲೂ ಹೆಣ್ಣಿಗೆ ಬೆಲೆ ಇಲ್ಲ. ಅದರಲ್ಲೂ ಮೇಲು ಜಾತಿ ಕೀಳು ಜಾತಿ. ಕೀಳು ಜಾತಿ ಹೆಣ್ಣು ಮಕ್ಕಳು ಅಂದ್ರೆ ಏನು ಬೇಕಾದರೂ ಮಾಡಬಹುದು. ಪಂಚಾಯತ್ ಸರಪಂಚ್ ಎಲ್ಲ ಮೇಲು ಜಾತಿಯವರೆ ಅಲ್ವಾ

    ಪ್ರತ್ಯುತ್ತರಅಳಿಸಿ
  5. ಕಥೆ ಬಗ್ಗೆ ಏನು ಹೇಳಲು ತೋಚುತ್ತಿಲ್ಲ.ಅಷ್ಟು ಅದ್ಬುತವಾಗಿದೆ.. ಹೆಣ್ಣನ್ನ ಇನ್ನು ಕೀಳಾಗಿ ಕಾಣುವುದು ಕೆಲವು ಜನ ಬಿಟ್ಟಿಲ್ಲ. ಬಿಡೋದು ಇಲ್ಲ ಅನ್ನಿಸುತ್ತೆ.. ಸಮಾಜ ಎಷ್ಟು ಮುಂದುವರೆದರು ಹೇಳ್ತಾರೆ ಅಷ್ಟೇ ಗಂಡು ಹೆಣ್ಣು ಸಮಾನರೆ ಅಂತ ಆದರೆ ವಾಸ್ತವ ಹಾಗೆ ಇರುವುದಿಲ್ಲ..

    ಇದರ ಮುಂದಿನ ಭಾಗ ಸಿಗ್ತಿಲ್ಲ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ
  6. ಮೇಡಂ ಅದ್ಬುತವಾಗಿದೆ ಕಥೆ ಮುಂದಿನ ಭಾಗ ದಯವಿಟ್ಟು ಪ್ರಕಟಿಸಿ

    ಪ್ರತ್ಯುತ್ತರಅಳಿಸಿ