ಸೋಮವಾರ, ಜೂನ್ 8, 2020

ವಿಮುಕ್ತೆ

ಪುಸ್ತಕದ ಹೆಸರು : ವಿಮುಕ್ತೆ
ತೆಲುಗು ಮೂಲ : ಓಲ್ಗಾ
ಅನುವಾದ : ಅಜಯ್ ವರ್ಮಾ ಅಲ್ಲೂರಿ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ
ಪ್ರಥಮ ಮುದ್ರಣ : 2019
ಪುಟಗಳು : 178
ಬೆಲೆ :150 ರೂ      

ಓಲ್ಗಾ ಎಂದೇ ಖ್ಯಾತರಾದ ಪೋಪೂರಿ ಲಲಿತ ಕುಮಾರಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಕಥಾಸಂಕಲನ 'ವಿಮುಕ್ತ'ದ ಕನ್ನಡಾನುವಾದ ವಿಮುಕ್ತೆ. ಸೀತೆಯ ಜೀವನದ ಏರಿಳಿತಗಳನ್ನೇ ಕೇಂದ್ರವಾಗಿರಿಸಿಕೊಂಡು ರಾಮಾಯಣದ ಕೆಲ ಸ್ತ್ರೀ ಪಾತ್ರಗಳ ಮೂಲಕ ಇಡೀ ಮಹಾಕಾವ್ಯವನ್ನೇ ಹೊಸದೊಂದು ಒಳನೋಟದಲ್ಲಿ ತೆರೆಯುತ್ತಾ ಎಲ್ಲಾ ಅಧಿಕಾರಗಳಿಂದ, ಬಂಧಗಳಿಂದ ಮುಕ್ತಗೊಂಡು ನಮ್ಮನ್ನು ನಾವು ಪಡೆದುಕೊಳ್ಳುವ ಸಂಕೀರ್ಣ ಪ್ರಕ್ರಿಯೆಯನ್ನು ಇಲ್ಲಿನ ಕಥೆಗಳು ಧ್ವನಿಸುತ್ತವೆ. 

ತನ್ನದ್ಯಾವ ತಪ್ಪೂ ಇಲ್ಲದೇ ಘೋರ ನಿಂದನೆ, ಅಪಮಾನಗಳಿಗೆ ಪಾತ್ರಳಾದ ಸೀತೆ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ಲವ ಕುಶರನ್ನು ಬೆಳೆಸುತ್ತಿದ್ದಾಳೆ. ಸಹಜವಾಗಿಯೇ ತನ್ನ ಭವಿತವ್ಯದ ಬಗ್ಗೆ ಆಕೆ ಚಿಂತಿತಳಾಗಿದ್ದಾಳೆ. ಇಂದಲ್ಲ ನಾಳೆ ಮಕ್ಕಳಿಗೆ ತಾವು ರಘುವಂಶದ ವಾರಸುದಾರರೆಂಬ ಸತ್ಯ ತಿಳಿಯಲೇಬೇಕು. ತಿಳಿದ ನಂತರ ಅವರು ತನ್ನೊಂದಿಗೆ ನಿಲ್ಲುವವರಲ್ಲ. ಆ ನಂತರ ತನ್ನ ಬದುಕೇನು ಎಂಬ ಯೋಚನೆಯಲ್ಲಿರುವ ಸೀತೆಯ ಚಿಂತನೆಗಳಲ್ಲಿ ಅವಳ ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಭೇಟಿಯಾದ ಕೆಲ ಸ್ತ್ರೀಯರು ಮುಖಾಮುಖಿಯಾಗುತ್ತಾರೆ. ಅವರು ಭೇಟಿಯಾದಾಗ ಹೇಳಿದ ಮಾತುಗಳು ಮತ್ತೆ ಮತ್ತೆ ಅವಳಾಂತರ್ಯದಲ್ಲಿ ಅನುರಣಿಸುತ್ತವೆ. ಆಗ ಅರ್ಥವಾಗದ ಪದಗಳ ಹಿಂದಿನ ಭಾವಗಳು, ಮಾತಿನ ಆಳ ವಿಸ್ತಾರಗಳು ಈಗ ಕಾಲನ ಹೊಡೆತಕ್ಕೆ ಮಾಗಿದ ಸೀತೆಯ ಗ್ರಹಿಕೆಗೆ ನಿಲುಕತೊಡಗುತ್ತವೆ. ಆ ಸ್ತ್ರೀಯರ ಮಾತುಗಳೇ ಸೀತೆಗೆ ತನ್ನನ್ನು, ತನ್ನ ಅಸ್ತಿತ್ವವನ್ನು, ತನ್ನ ಅಸ್ಮಿತೆಯನ್ನು ಅನ್ವೇಷಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತವೆ. ತನ್ನ ಮೇಲಿನ ಇತರರ ಎಲ್ಲಾ ಅಧಿಕಾರಗಳನ್ನು ವಿಮುಕ್ತಗೊಳಿಸಿಕೊಂಡು ತನ್ನನ್ನು ತಾನು ಗಳಿಸಿಕೊಳ್ಳಲು ದಾರಿದೀಪವಾಗುತ್ತವೆ. ಜನಕ ಪುತ್ರಿ, ಶ್ರೀರಾಮನ ಪಟ್ಟಮಹಿಷಿ, ಲವಕುಶರ ಮಾತೆ ಎಂಬೆಲ್ಲಾ ಗುರುತುಗಳಾಚೆಗೆ ಭೂ ಸಂಜಾತೆ ಸೀತೆಯೆಂಬ ತನ್ನ ಅಸಲೀ ಅಸ್ತಿತ್ವವನ್ನು ಕಂಡುಕೊಳ್ಳುವ ವೈದೇಹಿಯ ಪಯಣವೇ ಈ ವಿಮುಕ್ತೆ. ಈ ಅನ್ವೇಷಣೆಯ ಹಾದಿಯಲ್ಲಿ ಈಗಾಗಲೇ ಬದುಕಿನ ಅರ್ಥವನ್ನು ಕಂಡುಕೊಂಡ ಶೂರ್ಪನಖಿ, ಅಹಲ್ಯೆ, ರೇಣುಕೆ ಹಾಗೂ ಊರ್ಮಿಳೆ ಸೀತೆಯ ಚಿಂತನೆಗಳನ್ನು ಗಟ್ಟಿಗೊಳಿಸಿ ಅವಳಿಗೆ ತನ್ನತನವನ್ನು ಪಡೆದುಕೊಳ್ಳುವ ಹಾದಿಯನ್ನು ತೋರುತ್ತಾರೆ.

'ಮೂಗನ್ನು ಕಳೆದುಕೊಳ್ಳುವುದು ಎಂದರೇನೆಂಬುದು ನನ್ನ ಹೊರತು ಬೇರ್ಯಾರಿಗೂ ಅರ್ಥವಿರುವುದಿಲ್ಲ ಸೀತಾ' ಎನ್ನುತ್ತಲೇ ಪ್ರಕೃತಿಗೆ ರೂಪ, ಕುರೂಪದ ಭೇದಗಳಿಲ್ಲವೆಂದು ಗ್ರಹಿಸಿ ಪ್ರಕೃತಿಯೊಳಗಿನ ಅಣುಅಣುವನ್ನೂ ಶೋಧಿಸಿ ಸೌಂದರ್ಯದ ನಿಜ ಅರ್ಥವನ್ನು ಕಂಡುಕೊಂಡೆ ಎನ್ನುವ ಶೂರ್ಪನಖಿ ಸೀತೆಗೆ ಬದುಕಿನ ಸಾರ್ಥಕತೆಯನ್ನು ತೋರಿಸಿಕೊಡುತ್ತಾಳೆ. 

ವನವಾಸದ ಸಂದರ್ಭದಲ್ಲಿ ಅಹಲ್ಯೆಯನ್ನು ಭೇಟಿಯಾದಾಗ  ಆಕೆ ಕೇಳಿದ್ದ 'ವಿಚಾರಣೆ ಮಾಡುವುದೆಂದರೆ ಏನು ಸೀತಾ? ಅಪನಂಬಿಕೆ ತಾನೆ? ಅದಕ್ಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ?" ಎಂಬ ಮಾತಿನ ನಿಜವಾದ ಅರ್ಥ ಶ್ರೀರಾಮಚಂದ್ರ ಶೀಲಪರೀಕ್ಷೆಗೆ ಕೋರಿದ ಸಂದರ್ಭದಲ್ಲಿ ತಿಳಿಯುತ್ತದೆ ಸೀತೆಗೆ. 'ನೀನು ಈ ಇಡೀ ಪ್ರಪಂಚಕ್ಕೆ ಸೇರಿದವಳು, ಒಬ್ಬ ರಾಮನಿಗಷ್ಟೇ ಅಲ್ಲ. ನೀನು ಯಾರೆಂದು ತಿಳಿಯಲು ಪ್ರಯತ್ನಿಸು. ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ, ಅಧಿಕಾರಕ್ಕೆ ಶರಣಾಗದಿರು' ಎನ್ನುವ ಅಹಲ್ಯೆ ಸೀತೆಯಲ್ಲಿ ಸ್ವಾನ್ವೇಷಣೆಯ ಅಂಕುರ ಬಿತ್ತುತ್ತಾಳೆ.

ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ಯಾರಿಗೂ ಗೊತ್ತಿಲ್ಲ ಎಂದು ನಗುನಗುತ್ತಲೇ ಹೇಳುವ ರೇಣುಕೆಯ 'ಮಕ್ಕಳು ತಮ್ಮ ತಂದೆ ಯಾರೆಂದು ಕೇಳುವ ಸಂದರ್ಭ ಅಥವಾ ಗಂಡನೇ ತನ್ನ ಮಕ್ಕಳ ತಂದೆ ಯಾರೆಂದು ಕೇಳುವ ಸಂದರ್ಭ ಕೆಲ ಹೆಂಗಸರ ಬಾಳಿನಲ್ಲಿ ಬಂದೇ ಬರುತ್ತದೆ ಸೀತಾ' ಎಂಬ ಮಾತು ಸೀತೆಯ ಬದುಕಿನಲ್ಲೇ ಸತ್ಯವಾಗುತ್ತದೆ. 'ನಿನಗೆಷ್ಟೋ ಶಕ್ತಿಯಿದೆ ಸೀತಾ. ನಿನ್ನ ಶಕ್ತಿಯೇ ನಿನಗೆ ರಕ್ಷೆ' ಎಂಬ ರೇಣುಕೆಯ ಆಶೀರ್ವಾದ ಭವಿಷ್ಯದಲ್ಲಿ ಸೀತೆಗೆ ಅವಳ ಸ್ವಸಾಮರ್ಥ್ಯದ ಅರಿವನ್ನು ನೀಡಿ ಲವಕುಶರನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ.

'ಎಲ್ಲ ದುಃಖಗಳಿಗೂ ಮೂಲ ಅಧಿಕಾರ. ಈ ಅಧಿಕಾರವನ್ನು ನಾವು ಪಡೆಯಬೇಕು ಬಿಡಬೇಕು.ನಾನು ಯಾರ ಅಧಿಕಾರಕ್ಕೂ ಅಧೀನಳಾಗದೇ, ನನ್ನ ಅಧಿಕಾರದಿಂದ ಯಾರನ್ನೂ ಬಂಧಿಸದೇ ಉಳಿದರೆ ನನ್ನನ್ನು ನಾನು ವಿಮುಕ್ತಳಾಗಿಸಿಕೊಂಡಂತೆ' ಎಂದು ಹದಿನಾಲ್ಕು ವರ್ಷಗಳಲ್ಲಿ ತಾನು ಶೋಧಿಸಿಕೊಂಡ ಸತ್ಯವನ್ನುಸುರುವ ಊರ್ಮಿಳೆ 'ನಿನ್ನ ಮೇಲಿನ ಅಧಿಕಾರವನ್ನು ನೀನೇ ತೆಗೆದುಕೋ, ಇತರರು ಮೇಲಿನ ಅಧಿಕಾರವನ್ನು ಕಳೆದುಕೋ, ಆಗ ನಿನಗೆ ನೀನು ದಕ್ಕುವೆ' ಎನ್ನುವ ಮೂಲಕ ಸೀತೆಗೆ ಅಧಿಕಾರದ ಬಂಧನದಿಂದ ವಿಮುಕ್ತಳಾಗಲು ಮಾರ್ಗದರ್ಶಕಳಾಗುತ್ತಾಳೆ.

ತನ್ನೆಲ್ಲಾ ಸಹೋದರಿಯರ ಸಹಾಯದಿಂದ ಸೀತೆ ಲವಕುಶರನ್ನು ರಾಮನಿಗೊಪ್ಪಿಸಿ ವಿಮುಕ್ತಳಾಗುತ್ತಾಳೆ. ಆದರೆ ರಾಜಧರ್ಮ ಪಾಲನೆ, ರಾಜ್ಯಾಧಿಕಾರದ ನಿರ್ವಹಣೆಯ ಬಂಧನದಲ್ಲಿ ಸಿಲುಕಿದ ರಾಮ ತನ್ನ ಮೇಲಿನ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ. ಅವನಿಗೆ ಸೀತೆಯ ಮೇಲೆ ಪ್ರೇಮವಿಲ್ಲ ಎಂದಲ್ಲ. ಆದರೆ ಪುರುಷಪ್ರಧಾನ ವ್ಯವಸ್ಥೆಯ ಕರ್ತವ್ಯ ಪಾಲನೆಯ ಸಿಕ್ಕುಗಳು, ಧರ್ಮರಕ್ಷಣೆಯ ಭಾರ ಅವನನ್ನು ಬಿಡಿಸಿಕೊಳ್ಳಲಾರದಂತೆ ಬಂಧಿಸಿವೆ. 'ತಾನು ಸೀತೆಯನ್ನು ತ್ಯಜಿಸಬಲ್ಲ, ಏಕೆಂದರೆ ಸೀತೆ ತನ್ನವಳು. ಆದರೆ ರಾಜ್ಯವನ್ನು ತ್ಯಜಿಸಲಾರ, ಅದು ರಘುವಂಶದ್ದು.' 'ನಾನು ಸೀತೆ ಬೇರೆಬೇರೆಯಲ್ಲ ಲಕ್ಷ್ಮಣಾ. ಅದು ನಿಮಗಾರಿಗೂ ತಿಳಿಯುವುದಿಲ್ಲ' ಎನ್ನುವ ರಾಮನ ಮಾತುಗಳು ರಾಮನ ಪ್ರಕಟಪಡಿಸಲಾಗದ ಭಾವ ತೀವ್ರತೆಗೆ ಸಾಕ್ಷಿಯಂತೆ ತೋರುತ್ತವೆ. ಲವಕುಶರನ್ನು ತನಗೊಪ್ಪಿಸಿ ಒಂದರ್ಥದಲ್ಲಿ ತನಗೂ ವಿಮುಕ್ತಿಯ ಹಾದಿಯನ್ನು ತೆರೆದಿರುವ ಸೀತೆಯೇ ರಾಮನಿಗೆ ನಿಜವಾದ ರಕ್ಷೆ ಎಂಬುದು 'ಶ್ರೀರಾಮ ರಕ್ಷಾ' ಎನ್ನುವ ಲೋಕವಾಸಿಗಳಿಗೆ ಗೊತ್ತಿಲ್ಲ ಎನ್ನುವ ಸಾಲುಗಳು ರಾಮನ ಆಂತರ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಈ ಐದು ಕಥೆಗಳೊಂದಿಗೆ ಇತ್ತೀಚೆಗೆ ವೋಲ್ಗಾ ಅವರು ಮಂಡೋದರಿಯ ಬಗ್ಗೆ ಬರೆದ 'ಅಶೋಕ' ಕಥೆಯೂ ಈ ಸಂಕಲನದಲ್ಲಿ ಸೇರಿದೆ. ರಾವಣನ ಪತ್ನಿ ಮಂಡೋದರಿಯಲ್ಲಿ ಸ್ವತಂತ್ರ ಚಿಂತನೆಯ, ಸ್ತ್ರೀ ಪುರುಷ ಸಮಾನತೆಯನ್ನು ಪ್ರತಿಪಾದಿಸುವ, ಗಟ್ಟಿ ವ್ಯಕ್ತಿತ್ವದ ದ್ರಾವಿಡ ಹೆಣ್ಣೊಬ್ಬಳನ್ನು ಚಿತ್ರಿಸಿದ್ದಾರೆ. 'ನನ್ನನ್ನು ನಾನು ಇಲ್ಲವಾಗಿಸಿಕೊಂಡು ರಾವಣನನ್ನು ಹೇಗೆ ಪ್ರೀತಿಸಬಲ್ಲೆ' ಎಂಬ ಅವಳ ಪ್ರಶ್ನೆ ಸೀತೆಯ ಊಹೆಗೂ ನಿಲುಕದ್ದು. ರಾವಣನ ಎದುರು ನಿಂತು ವಾದಿಸುವ, ಅವನ ತಪ್ಪುಗಳನ್ನು ಪ್ರಶ್ನಿಸುವ ಮಂಡೋದರಿಯ ಮುಖೇನ ಆರ್ಯ ಹಾಗೂ ದ್ರಾವಿಡ ಸಂಸ್ಕೃತಿಗಳಲ್ಲಿ ಸ್ತ್ರೀ ಅಭಿವ್ಯಕ್ತಿಯ ಭಿನ್ನತೆಗಳನ್ನು ಎತ್ತಿ ಹಿಡಿದಿದ್ದಾರೆ ಲೇಖಕಿ.

ಒಟ್ಟಿನಲ್ಲಿ ರಾಮಾಯಣವನ್ನು ಹೆಣ್ಣಿನ ಒಳತೋಟಿಯಿಂದ ಚಿತ್ರಿಸುವ ವಿಮುಕ್ತೆ 'ನಮ್ಮ ಮೇಲೆ ಕೇವಲ ನಮಗೆ ಮಾತ್ರ ಅಧಿಕಾರವಿದೆ. ನಾವು ಕೊಡುವವರೆಗೂ ಬೇರ್ಯಾರೂ ನಮ್ಮ ಮೇಲೆ ಅಧಿಕಾರವನ್ನು ಹೊಂದಲಾರರು. ಆ ಅಧಿಕಾರವನ್ನು ಪಡೆದುಕೊಂಡು ನಾವು ಬಂಧಗಳಿಂದ ಮುಕ್ತರಾಗಬೇಕು ಎಂಬುದನ್ನು ಬಲವಾಗಿ ಧ್ವನಿಸುತ್ತದೆ. ಪುಸ್ತಕದ ಕೊನೆಯಲ್ಲಿರುವ ಓಲ್ಗಾ ಅವರೊಂದಿಗಿನ ಮಾತುಕಥೆ ಅವರ ಚಿಂತನೆಗಳು ಬೆಳೆದು ಬಂದ ಹಾದಿಯನ್ನು, ವಿಮುಕ್ತೆ ಹುಟ್ಟಿಕೊಂಡ ಬಗೆಯನ್ನು ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಹಾಗೆಯೇ ಸ್ತ್ರೀವಾದಿ ಸಾಹಿತ್ಯದ ಬಗೆಗಿನ ಸಾಕಷ್ಟು ವಿವರಗಳು ಇಲ್ಲಿವೆ. ಬಿಡಿ ಕಥನಗಳಾದರೂ ಎಲ್ಲಾ ಕಥನಗಳ ಕೇಂದ್ರ ಸೀತೆಯಾದ ಕಾರಣ ಸೀತೆಯ ಭಾವಲಹರಿಯಲ್ಲಿ ರಾಮಾಯಣ ನಿರೂಪಿತವಾದಂತೆ ಭಾಸವಾಗುತ್ತದೆ‌‌.

ಶನಿವಾರ, ಜೂನ್ 6, 2020

ಅನೂಹ್ಯ 5

ಆಕ್ಸಿಡೆಂಟ್ ಕೇಸೊಂದನ್ನು ಅಟೆಂಡ್ ಮಾಡಿ ಸಮನ್ವಿತಾ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದಾಗ ಮಧ್ಯರಾತ್ರಿ ದಾಟಿತ್ತು. ಯುವಕರಿಬ್ಬರ ಬೈಕ್ ವೀಲಿಂಗ್ ಹುಚ್ಚು ಅವರ ಬದುಕನ್ನೇ ಕಸಿದುಕೊಂಡಿತ್ತು. ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬ ತೀವ್ರ ರಕ್ತಸ್ರಾವದಿಂದ ಆಪರೇಷನ್ ಥಿಯೇಟರಿನಲ್ಲಿ ಪ್ರಾಣ ಬಿಟ್ಟಿದ್ದ. ಮಕ್ಕಳ ಭವಿಷ್ಯದ ಬಗ್ಗೆ ರಾಶಿ ಕನಸು ಕಟ್ಟಿದ್ದ ಹೆತ್ತವರ ವೇದನೆ ಹೇಳತೀರದಾಗಿತ್ತು.
ಏನಾಗಿದೆ ಈ ಯುವ ಜನಾಂಗಕ್ಕೆ? ಜೀವನ ಇಷ್ಟೊಂದು ಅಗ್ಗವೇ? ಬದುಕು ಹಸನಾಗಿಸಲು, ಸಾಧಿಸಲು ಅವಕಾಶಗಳಿಗೇನು ಕೊರತೆ? ಸಾಧಿಸಲು ಮನಸಿದ್ದವನು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ. ಇರುವುದೊಂದೇ ಬದುಕು. ಅದನ್ನು ಈ ರೀತಿ ಸಮಾಪ್ತಿಗೊಳಿಸುವುದೇ?

ಇದೇ ಯೋಚನೆಯಲ್ಲೇ ಕಾರು ನಿಲ್ಲಿಸಿ ಮನೆ ಪ್ರವೇಶಿಸಿದವಳನ್ನು ಅಬ್ಬರದ ವಿದೇಶಿ ಸಂಗೀತ ಸ್ವಾಗತಿಸಿತು. ಅವಳಿಗೆ ಕಿವಿ ಮುಚ್ಚುವಂತಾಯಿತು. ತಟ್ಟನೆ ಹೊಳೆಯಿತು......

ಇಂದು ಅವಳಮ್ಮ ಮಾಲಿನಿ ರಾವ್ ಅವರ ಹುಟ್ಟುಹಬ್ಬ. ಅದಕ್ಕೆ ಈ ಪಾರ್ಟಿ.

ಸಾಮಾನ್ಯ ಜನರ ಹುಟ್ಟುಹಬ್ಬ ಎಂದರೆ ದೇವಸ್ಥಾನದಲ್ಲೊಂದು ಪೂಜೆ, ಹಿರಿಯರ ಆಶೀರ್ವಾದ, ಕಿರಿಯರ ಕೇಕ್, ಭರ್ಜರಿ ಊಟ ಇಷ್ಟರಲ್ಲಿ ಮುಗಿಯುತ್ತದೆ. ಆದರೆ ಈ ಮನೆಯಲ್ಲಿ ಇರುವವರು ಮೂರೂ ಬಿಟ್ಟವರು. ಇವರ ಪಾರ್ಟಿಗಳ ಉದ್ದೇಶವೇ ಬೇರೆ. ಬಿಸಿನೆಸ್ ಡೀಲ್ ಗಳು, ಶ್ರೀಮಂತಿಕೆಯ ಹುಚ್ಚು ಆಡಂಬರ ಇನ್ನೂ ಏನೇನೋ.....

ಸಾಮಾನ್ಯರ ದೇಹದಲ್ಲಿ ರಕ್ತ ಹರಿಯುತ್ತದೆ. ಅವರು ಸಮಾಜಕ್ಕೆ, ನಿಂದನೆಗೆ ಹೆದರುತ್ತಾರೆ. ಮೂರೂ ಬಿಟ್ಟವರ ದೇಹದಲ್ಲಿ ದುಡ್ಡು ಹರಿಯುತ್ತದೆ. ಅವರು ಸಮಾಜವನ್ನೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ. ನಿಂದಕರನ್ನು ಹೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುತ್ತಾರೆ.

ತನ್ನ ರೂಮಿನತ್ತ ಹೊರಟವಳು ನಿಂತು ಹಾಲ್ ನಲ್ಲಿ ಒಮ್ಮೆ ಇಣುಕಿದಳು. 

ಒಳಗಿನ ದೃಶ್ಯ ನಯನಮನೋಹರ..........!ರಂಗುರಂಗಿನ ಭ್ರಮಾ ಲೋಕ..........!

ಪರಮಾತ್ಮನನ್ನು ಒಳಗಿಳಿಸಿ ವಿದೇಶಿ ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದವರಿಗೆ ಮೈಮೇಲೆ ಪ್ರಜ್ಞೆ ಇರಲಿಲ್ಲ. ಯಾರ ಗಂಡನೋ, ಇನ್ಯಾರ ಹೆಂಡತಿಯೋ ಯಾವುದರ ಪರಿವೆಯೂ ಇಲ್ಲ. ಇಲ್ಲಿ ವಯಸ್ಸಿನ ಭೇದವಿಲ್ಲ......

ಪ್ರಪಂಚವೇ ದೇವರು ಮಾಡಿರೋ ಬಾರು ನಾವೆಲ್ಲರೂ ಇಲ್ಲಿ ಬಂಧು ಮಿತ್ರರು 

ಕುಡಿಯೋನೆ ಇಲ್ಲಿ ಓನರು ದೇವ್ರೇನೇ ಇಲ್ಲಿ ಸರ್ವರೂ 

ಹೆಚ್ಚಾದ್ರೆ ಎಲ್ಲ ಬೀಗರು ರಿಚ್ಚಾದ್ರೆ ಭೂಮಿಪುತ್ರರು 

ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರೂ...

ಇಂಥವರನ್ನು ನೋಡಿಯೇ ಬರೆದಿರಬೇಕು.

ಅವಳ ಕಣ್ಣುಗಳು ಅಪ್ರಯತ್ನವಾಗಿ ಮಾಲಿನಿಯವರನ್ನು ಹುಡುಕಿದವು. ಯಾರೋ ಮಧ್ಯವಯಸ್ಕನ ಕೈ ಹಿಡಿದು ಕುಣಿಯುತ್ತಿದ್ದಾಕೆ ಕಣ್ಣಿಗೇ ಬಿದ್ದೇ ಬಿದ್ದಳು.

ಈಕೆ.......... ಈಕೆ ತನ್ನ ತಾಯಿಯೇ? ಮೇಕಪ್ಪಿನ ಛಾಯೆಯಡಿ ಕಳೆದುಹೋದ ಮುಖವನ್ನು ಗುರುತಿಸಲು ಪ್ರಯತ್ನಿಸಿ ಸೋತಳು. ತೀರಾ ಅಪರಿಚಿತರಂತೆ ಕಂಡರು.

ಮತ್ತೆ ತಿರುಗಿ ನೋಡಿದೆ ದಢದಢನೆ ಮೆಟ್ಟಿಲೇರಿ ಕೋಣೆಗೆ ಬಂದು ಕುಸಿದಳು. ತಲೆ ಸಿಡಿಯತೊಡಗಿತು. ಬಟ್ಟೆಯನ್ನೂ ಬದಲಾಯಿಸದೇ ಮಂಚಕ್ಕೆ ಒರಗಿದಳು. 

ಅವಳ ತಂದೆ  ಸತ್ಯಂ ರಾವ್ ದೇಶದ ಸಿರಿವಂತ ಉದ್ಯಮಿಗಳಲ್ಲೊಬ್ಬರು. ತಂದೆ ಸ್ಥಾಪಿಸಿ ಬೆಳೆಸಿದ ಉದ್ಯಮ ಅವರ ಮರಣಾನಂತರ ಏಕೈಕ ವಾರಸ್ದಾರರಾದ ರಾವ್ ಅವರಿಗೆ ಒಲಿದಿತ್ತು. ಅದನ್ನು ಇನ್ನೂ ಎತ್ತರಕ್ಕೆ  ಬೆಳೆಸಿ ದೇಶಾದ್ಯಂತ ಘಟಕಗಳನ್ನು ಸ್ಥಾಪಿಸಿದ್ದರು. ಕೇಂದ್ರ ಸಚಿವ ಮಹೇಶ್ವರ್ ಪಾಟೀಲರ ತಂಗಿ ಮಾಲಿನಿಯನ್ನು ಮದುವೆಯಾದ ಮೇಲೆ ಶ್ರೀಮಂತಿಕೆಯೊಂದಿಗೆ  ರಾಜಕೀಯ ಪ್ರಭಾವಳಿಯೂ ಸೇರಿ ಅವರನ್ನು ಅತ್ಯಂತ ಪ್ರಭಾವಿ ವ್ಯಕ್ತಿಯನ್ನಾಗಿಸಿತು. 

ಆದರೆ ತಂದೆಯ ಕಾಲದಲ್ಲಿದ್ದ ಮಾನವೀಯ ಮೌಲ್ಯಗಳು ಮೂಲೆಗುಂಪಾಗಿದ್ದೂ ಸತ್ಯಂ ಅವರ ಕಾಲದಲ್ಲೇ. ಹಣ ಗಳಿಕೆಯೊಂದೇ ಅವರ ಧ್ಯೇಯವಾಯಿತು. ಅವರ ಗಳಿಕೆಯ ಮೂಲದಲ್ಲಿ ಸಕ್ರಮಕ್ಕಿಂತ ಅಕ್ರಮವಾದುದೇ ಹೆಚ್ಚು ಅನ್ನುವುದು ನೂರಕ್ಕೆ ನೂರು ಸತ್ಯ.

ಇನ್ನು ಮಾಲಿನಿ ಸಮಾಜ ಸೇವೆ, ಪಾರ್ಟಿ, ಮಹಿಳಾ ಸಂಘಟನೆಗಳು ಹೀಗೆ ಹತ್ತು ಹಲವು ಕೆಲಸ ಹಚ್ಚಿಕೊಂಡಾಕೆ.ಇಂಥಾ ದಂಪತಿಗಳ ಸುಪುತ್ರಿ ಸಮನ್ವಿತಾ. ಮಾಲಿನಿ ಹೆತ್ತಿದ್ದು ಬಿಟ್ಟರೆ, ಅವಳು ಬೆಳದಿದ್ದೆಲ್ಲಾ ಆಯಾಗಳ ಕೈಯಲ್ಲಿ. ಗಂಡ ಮಕ್ಕಳು ಅಂತ ಮನೆ ನಿಭಾಯಿಸಲು ತಾನೇನು ಕೆಳವರ್ಗದ ಮಹಿಳೆಯಲ್ಲ ಅನ್ನೋದು ಮಹಿಳಾ ಸಬಲೀಕರಣಕ್ಕಾಗಿ ಭಾಷಣ ಬಿಗಿಯುವ ಮಾಲಿನಿಯವರ ಅಭಿಪ್ರಾಯ. ಹಾಗೆ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಕೂರುವುದು ತಮ್ಮ ಅಂತಸ್ತಿಗೆ ತಕ್ಕುದಲ್ಲ ಅನ್ನೋದು ಅವರ ದೃಷ್ಟಿಕೋನ.

ಲಂಡನ್ನಿನ ಪ್ರತಿಷ್ಠಿತ ಬೋರ್ಡಿಂಗ್ ಸ್ಕೂಲ್ ಸೇರಿದಾಗ ಅವಳಿಗೆ ಐದು ವರ್ಷ. ಅವಳ ತಾಯ್ತಂದೆಯರ ಪ್ರಕಾರ ಭಾರತದಲ್ಲಿ ವಿದ್ಯಾಭ್ಯಾಸ ಮಾಡುವುದು ಅವರ ಅಂತಸ್ತಿಗೆ ಕುಂದು. ಪೂರ್ತಿ ವಿದ್ಯಾರ್ಥಿ ಜೀವನ ಅಲ್ಲೇ ಕಳೆದಿತ್ತು. ಹಣದ ಕೊರತೆ ಅವಳನ್ನೆಂದೂ ಕಾಡಲಿಲ್ಲ. ಆದರೆ ಅಷ್ಟು ವರ್ಷಗಳಲ್ಲಿ ಅವಳು ಅವರನ್ನು ಭೇಟಿಯಾದ್ದು ಆರೇಳು ಸಲ ಇರಬಹುದು. ಭೇಟಿಯಾದಗಲೂ ಐದು-ಹತ್ತು ನಿಮಿಷಗಳ ಔಪಚಾರಿಕ ಮಾತುಕತೆಯಷ್ಟೇ. ಮೊದಮೊದಲ ಬೇಸರ, ದುಃಖ ನಂತರ ಅಭ್ಯಾಸವಾಯಿತು.  ಎಂದೂ ಅವಳಿಗೆ ಅವರ ಮೇಲೆ ಆತ್ಮೀಯತೆ ಬೆಳೆಯಲೇ ಇಲ್ಲ.

ಓದಿನಲ್ಲಿ ಬುದ್ದಿವಂತಳಾಗಿದ್ದ ಸಮನ್ವಿತಾಳ ಮೆಡಿಕಲ್, ಇಂಟರ್ನ್ಶಿಪ್ ಮುಗಿದ ಕೂಡಲೇ ಲಂಡನ್ನಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅವಳಿಗೆ ಉದ್ಯೋಗದ ಅವಕಾಶ ಅರಸಿ ಬಂತು. ರಾವ್ ಅವರಿಗಂತೂ ಮಗಳು ಅಲ್ಲೇ ವೈದ್ಯೆಯಾಗಲಿರುವುದು ಅತೀವ ಸಂತಸ. ಎಷ್ಟಾದರೂ ಮಗಳು ವಿದೇಶದಲ್ಲಿ ವೈದ್ಯೆ ಎಂದು ಹೇಳಿಕೊಳ್ಳೋದು ಸ್ಟೇಟಸ್ ಸಿಂಬಲ್ ಅಲ್ಲವೇ? ಆದರೆ ಅಲ್ಲಿನ ಎಲ್ಲಾ ಅವಕಾಶಗಳನ್ನು ತಿರಸ್ಕರಿಸಿ ಸಮನ್ವಿತಾ ಭಾರತಕ್ಕೆ ಬಂದಿಳಿದ್ದಿದ್ದಳು. ರಾವ್ ದಂಪತಿಗಳಿಗೆ ಮಗಳ ಮೇಲೆ ಅಪಾರ ಕೋಪ ಬಂದರೂ ದಂಡಿಸುವಷ್ಟು ಸಲಿಗೆ, ಆತ್ಮೀಯತೆ ಇರಲಿಲ್ಲ. ಇನ್ನು ಈ ಬಗ್ಗೆ ಯೋಚಿಸಿ ಫಲವಿಲ್ಲವಂದು ತಿಳಿದ ಮೇಲೆ ತಾವೇ ಸ್ವತಃ ಒಂದು ಆಸ್ಪತ್ರೆ ಯಾಕೆ ತೆರೆಯಬಾರದೆಂಬ ಯೋಚನೆ ಬಂದಿದ್ದೇ ಅವರ ತಲೆ ವೇಗವಾಗಿ ಕೆಲಸ ಮಾಡತೊಡಗಿತು. ಶ್ರೀಮಂತ ರೋಗಿಗಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ತೆರೆದರೆ ಒಂದು ಕಡೆಯಿಂದ ದುಡ್ಡೂ ಸಂಪಾದನೆ, ಜೊತೆಗೆ ಖ್ಯಾತಿಯೂ ಸಿಗುತ್ತದೆ ಎನಿಸಿದ್ದೇ ಸಂತೋಷದಿಂದ ತಮ್ಮ ಯೋಚನೆಯನ್ನು ಮಗಳ ಮುಂದಿಟ್ಟಿದ್ದರು ಅವಳು ಕುಣಿಯುತ್ತಾ ಒಪ್ಪಿಕೊಳ್ಳಬಹುದೆಂದು.

ಆದರೆ ಸಮನ್ವಿತಾ ಒಂದೇ ಏಟಿಗೆ ನಿರಾಕರಿಸಿದ್ದಳು. ಒಪ್ಪಿಸಲು ಶತ ಪ್ರಯತ್ನ ಮಾಡಿ ಸೋತಿದ್ದಾಯಿತೇ ಹೊರತು ಅವಳ ನಿರ್ಧಾರ ಒಂದಿಂಚು ಚಲಿಸಲಿಲ್ಲ. ಈ ಯೋಜನೆಯೂ ಮಣ್ಣು ಮುಕ್ಕಿದ ನಂತರ ಅವರ ಬಳಿ ಇದ್ದದ್ದು ಒಂದೇ ಆಯ್ಕೆ. ದೇಶದ ಯಾವುದಾದರೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಮಗಳು ವೈದ್ಯೆಯಗಬೇಕು. ಅದೇನು ಕಷ್ಟವಾಗಿ ಕಾಣಲಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಯಾವಾಗ ಸಮನ್ವಿತಾ, ಡಾ. ಮೀರಾ ಅವರ ಧನ್ವಂತರಿ ಆಸ್ಪತ್ರೆಯಲ್ಲಿ ಜೂನಿಯರ್ ಆಗಿ ಸೇರಿಕೊಂಡಿದ್ದು ತಿಳಿಯಿತೋ ರಾವ್ ಕೆಂಡಾಮಂಡಲವಾಗಿದ್ದರು. ಅದು ಸಮಾಜದ ಅತೀ ಬಡವರ್ಗದ ಜನರಿಗಾಗಿ ಮೀರಾ ಅವರೇ ಸ್ಥಾಪಿಸಿದ ಧರ್ಮಾಸ್ಪತ್ರೆ. ರಾವ್ ದಂಪತಿಗಳ ಸಮಾಜಸೇವೆಯ ಪ್ರಕಾರವೇ ಬೇರೆ. ಕೋಟಿಗಟ್ಟಲೆ ಹಣ ಸುರಿದು ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸಿದ ಮಗಳು ಇಂಥಾ ಹುಚ್ಚು ಕೆಲಸ ಮಾಡುವುದೇ?? ಅವರ ತಲೆ ಬಿಸಿಯಾಗಿತ್ತು.

ಮಗಳು ಮನೆಗೆ ಬರುವುದನ್ನೇ ಕಾಯುತ್ತಾ ಕೂತಿದ್ದವರು ಅವಳು ಬಂದೊಡನೆ, "ಸಮನ್ವಿತಾ, ವಾಟ್ ಯು ಥಿಂಕ್ ಆಫ್ ಯುವರ್ ಸೆಲ್ಫ್? ನಾಳೆಯೇ ಅಲ್ಲಿಗೆ ರೆಸಿಗ್ನೇಷನ್ ಲೆಟರ್ ಕಳ್ಸು. ಜಸ್ಟ್ ಗೋ ಎಂಡ್ ಮೀಟ್ ಡಾ. ಬಲರಾಂ ಟುಮಾರೋ. ಅವ್ರ ಹಾಸ್ಪಿಟಲ್ ಬೆಸ್ಟ್ ಇನ್ ಇಂಡಿಯಾ. ಒಳ್ಳೆ ಸ್ಯಾಲರಿ. ನಾನೆಲ್ಲ ಅರೇಂಜ್ ಮಾಡಿದ್ದೀನಿ. ಗೋ ಎಂಡ್ ಜಾಯ್ನ್ ದೇರ್" ಅಂದಿದ್ದರು.

"ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್ ಡ್ಯಾಡ್. ಆದ್ರೆ ಮೀರಾ ಅವರ ಧ್ಯೇಯೋದ್ದೇಶಗಳು, ಸಮಾಜದ ಬಗ್ಗೆ ಅವರಿಗಿರೋ ಕಾಳಜಿ ನನಗಿಷ್ಟ ಆಗಿದೆ. ವೆರಿ ಹ್ಯಾಪಿ ಟು ವರ್ಕ್ ವಿಥ್ ಹರ್.

"ನೀನು ಕೆಲ್ಸ ಮಾಡದೇ ಮನೇಲೇ ಇದ್ರೂ ತೊಂದರೆ ಇಲ್ಲ. ಇಂಥಾ ಹುಚ್ಚು ಬೇಡ. ನಿನಗಷ್ಟು ಸೋಶಿಯಲ್ ವರ್ಕ್ ಮಾಡ್ಬೇಕು ಅಂತಿದ್ರೆ ನಿನ್ನ ಮಮ್ಮಿ ಆರ್ಗನೈಜೇಷನ್ ಸೇರ್ಕೊ. ಆದರೆ ಧರ್ಮಾಸ್ಪತ್ರೆನ ಮರ್ತು ಬಿಡು."

"ಇಲ್ಲ ಡ್ಯಾಡ್. ಈ ವಿಷಯದಲ್ಲಿ ನೀವು ಇಂಟರ್ಫಿಯರ್ ಆಗ್ಬೇಡಿ" ಖಚಿತವಾಗಿ ನುಡಿದಾಗ ಅವರ ಕೋಪ ನೆತ್ತಿಗೇರಿತು. ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವಿಲ್ಲದೇ ಕಿರುಚತೊಡಗಿದರು.

"ಕೋಟಿಗಟ್ಟಲೆ ಡೊನೇಷನ್ ಕೊಟ್ಟು ಫಾರಿನ್ ನಲ್ಲಿ ಓದಿಸಿದ್ದು ಆ ಧರ್ಮಾಸ್ಪತ್ರೆಲೀ ಸೇವೆ ಮಾಡೋಕಲ್ಲ. ಮರ್ಯಾದೆಯಿಂದ ಹೇಳಿದ್ ಕೇಳ್ಕೊಂಡು ಬಿದ್ದಿರು." ಆಜ್ಞಾಪಿಸುವ ದನಿಯಲ್ಲಿ ಹೇಳಿದ್ದೇ ಅವಳ ಸ್ವಾಭಿಮಾನ ಹೆಡೆಯೆತ್ತಿತ್ತು.

"ಐದು ವರ್ಷದ ಮಗಳನ್ನು ಬೋರ್ಡಿಂಗ್ ಸ್ಕೂಲಲ್ಲಿ ಬಿಟ್ಟಂತಲ್ಲ ಇದು. ನಿಮ್ಮನ್ನು ಬಿಟ್ಟು ಬದುಕೋದು ಕಲಿತು ಬಹಳ ವರ್ಷಗಳಾಯ್ತು. ನನಗೆ ಬುದ್ದಿ ಹೇಳೋ, ಆಜ್ಞಾಪಿಸೋ ಅಥವಾ ದಂಡಿಸೋ ಹಕ್ಕು, ಅಧಿಕಾರ, ಆತ್ಮೀಯತೆ, ಸಲಿಗೆ ಯಾವುದೂ ನಿಮ್ಗಿಲ್ಲ. ನನ್ನ ಬಗ್ಗೆ ಅಷ್ಟೊಂದು ಯೋಚ್ಸೋ ಅಗತ್ಯವೂ ಇಲ್ಲ. ನನ್ನ ನಿರ್ಧಾರಗಳನ್ನು ನಾನೇ ತಗೋಬಲ್ಲೇ. ಇನ್ಯಾವತ್ತೂ ನನ್ನ ಬದುಕಲ್ಲಿ ಹಸ್ತಕ್ಷೇಪ ಮಾಡಬೇಡಿ" ಬಿರುಸಾಗಿ ನುಡಿದು ಮೆಟ್ಟಿಲೇರಿದ್ದಳು.

ಇಷ್ಟು ವರ್ಷಗಳಲ್ಲಿ ಯಾರೂ ಅವರೊಂದಿಗೆ ಹೀಗೆ ಮಾತಾಡಿರಲಿಲ್ಲ. ಇಂದು ಮಗಳಿಂದ ಇಂಥಾ ಅವಕಾಶ ಒದಗಿತ್ತು. ಇದಕ್ಕೆ ತಾನೇ ಕಾರಣವೆಂದು ಆಗಲೂ ಒಪ್ಪಲಿಲ್ಲ  ರಾವ್. ಈಗಲೂ ಒಪ್ಪಲಾರರು. ಆದರೆ ಬೈಯಲು ನಾಲಿಗೆಯೇಳದು. ದಂಡಿಸೋ ಅಧಿಕಾರ, ಆತ್ಮೀಯತೆ ಇಲ್ಲವೆಂದು ಮೊದಲೇ ಹೇಳಿದ್ದಳಲ್ಲ.

ಎಂದೂ ಧ್ವನಿಯೇರಿಸದ ಮಗಳು ಇಂದೇಕೆ ಹೀಗೆ ಮಾತಾಡಿದಳೆಂದು ಒಮ್ಮೆ ಯೋಚಿಸಿ, ಅವಳ ಬಳಿ ಕೂತು ಮಾತಾಡಿದ್ದರೆ ಬಹುಶಃ ಅವಳ ಸಮಸ್ಯೆಯ ಅರಿವಾಗುತ್ತಿತ್ತೇನೋ? ಆದರೆ ಅಷ್ಟು ಸಮಯ ಅವರ ಬಳಿ ಎಲ್ಲಿ? ಅಂದಿನಿಂದ ಮತ್ತಷ್ಟು ಮೌನಿಯಾಗಿದ್ದಳು ಸಮನ್ವಿತಾ. ನೆನಪುಗಳು ಕಾಡತೊಡಗಿದಾಗ ಮಗ್ಗುಲಾದಳು. 

ಪಾರ್ಟಿ ಇನ್ನೂ ನಡೆದೇ ಇತ್ತು. ಮತ್ತೆ ತಾಯಿಯ ನೆನಪಾಯಿತು. 'ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಳಾರಳು........' ಎಲ್ಲೋ ಓದಿದ ನೆನಪಾಯಿತು. ಮಾಲಿನಿ ತನ್ನ ಸ್ವಂತ ತಾಯಿಯೇ? ಒಮ್ಮೆ ಆತ್ಮೀಯವಾಗಿ ಮಾತಾಡಿಸಿದ್ದಿಲ್ಲ. ಪ್ರೀತಿಯಿಂದ ತಲೆ ಸವರಿದ ನೆನಪಿಲ್ಲ.....

ಇದ್ದಕ್ಕಿದ್ದಂತೆ ಮಂಗಳಾ ನೆನಪಾದರು. ಅದೆಷ್ಟು ಅಕ್ಕರೆ ಮಕ್ಕಳೆಂದರೆ. ನವ್ಯಾಳನ್ನೂ ಸ್ವಂತ ಮಗಳಂತೆ ಕಾಣುವ ಹೆಂಗರುಳು. ತಾನೂ ಅವರಿಗೆ ಮಗಳಂತೆಯೇ. ಹೆತ್ತವರ ಪ್ರೀತಿ ಸವಿದದ್ದೇ ಅಲ್ಲಿ. ಆ ಪುಟ್ಟ ಮನೆಯಲ್ಲಿ ಸಿಗುವ ಪ್ರೀತಿ, ಅಕ್ಕರೆ ಆನಂದ ಈ ಬಂಗಾರದ ಪಂಜರದಲ್ಲಿ ಎಂದೂ ಸಿಗದು. ಹೊರಜಗತ್ತಿಗೆ ಇಲ್ಲೇನು ಕೊರತೆ ಕಾಣದು. ಅದು ಅಂತರಂಗದ ಕಣ್ಣಿಗೆ ಮಾತ್ರ ಗ್ರಹಿಕೆಯಾಗುವಂಥದ್ದು. ಕಿಶೋರ್ ತನ್ನಷ್ಟು ಸಿರಿವಂತನಲ್ಲ. ಆದರೆ ಅವನ ಬಳಿಯಿರುವ ಸಂಪತ್ತು ತನ್ನಲಿಲ್ಲ. ಹಣದಿಂದ ಎಲ್ಲವನ್ನೂ ಕೊಳ್ಳಬಹುದೇ? ಎಷ್ಟೇ ಹಣವಿದ್ದರೂ ಸಾವನ್ನು ಗೆಲ್ಲಬಹುದೇ? ಹಣವಂತರಿಗೆ ಮುಪ್ಪಾಗದೇ?

ಮಿಸ್ಟರ್ ರಾವ್ ತಮ್ಮ ಪೂರ್ತಿ ಸಂಪತ್ತು ಸುರಿದರೂ ತನ್ನ ಬಾಲ್ಯದ ಒಂದು ದಿನವಾದರೂ ವಾಪಾಸಾದೀತೇ..?

ನನ್ನ ಬಾಲ್ಯ......... 

ಎಲ್ಲಾ ಇದ್ದೂ ಯಾರೂ ಇಲ್ಲದ ಅನಾಥತ್ವದ ಬಾಲ್ಯ........

ಅಂದಿಗೂ ಇಂದಿಗೂ ಏನಿದೆ ವ್ಯತ್ಯಾಸ?

ದಟ್ಟ ಕಾನನದಲ್ಲಿ ಒಬ್ಬಂಟಿ...........ಜೋರಾಗಿ ಅಳಬೇಕೆನಿಸುವುದು. ಆದರೆ ಅಳಲಾರೆ. ಅತ್ತರೂ ತನಗೆ ತಾನೇ ಸಾಂತ್ವನಿಸಿಕೊಳ್ಳಬೇಕು. ನಕ್ಕರೂ ನನ್ನ ನೋಡಿ ನಾನೇ ಖುಷಿ ಪಡಬೇಕು. ಇಂಥಾ ಬಾಳು ಯಾರಿಗೆ ಬೇಕು?

ಇಲ್ಲೇ ನಾಕ, ಇಲ್ಲಿಯೇ ನರಕ 

ಎಲ್ಲಾ ಈ ಭುವಿಯಲ್ಲೇ

ಬಾಳುವ ಕಲೆಯಾ, ಬಾಳಿನ ಬೆಲೆಯ

ತಿಳಿದವನ ಕೈಯಲ್ಲೇ

ಕೊಲ್ಲುವ ನೆನಪುಗಳು ನಡುವೆ ಕಷ್ಟದಿಂದ ನಿದ್ರಿಸಲು ಪ್ರಯತ್ನಿಸಿದಳು


ಮುಂದುವರೆಯುತ್ತದೆ


        


        


           


ಗುರುವಾರ, ಜೂನ್ 4, 2020

Where's your ಮುಂದಿನ ನಿಲ್ದಾಣ.....!!

ಬಿಡುಗಡೆಯಾದಾಗಲೇ ಚಿತ್ರಮಂದಿರದಲ್ಲಿ ನೋಡಬೇಕೆಂದುಕೊಂಡಿದ್ದ ಸಿನಿಮಾ ಇದು. ಕಾರಣಾಂತರಗಳಿಂದ ಆರಂಭದಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಹೋಗಲು ಸಮಯ ಹೊಂದಿಸಿಕೊಳ್ಳುವ ವೇಳೆಗೆ ಚಿತ್ರ ಥಿಯೇಟರ್ ಗಳಲ್ಲಿ ಇರಲೇ ಇಲ್ಲ. ಸ್ಟಾರ್ ನಟರಿಲ್ಲದ ಹೊಸ ಪ್ರತಿಭೆಗಳ ಪ್ರಯೋಗಾತ್ಮಕ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಸರ್ವೇ ಸಾಮಾನ್ಯವಾಗಿರುವ ಸಂಗತಿ. ಹಾಗಾಗಿ ಈ ಸಿನಿಮಾ ನೋಡುವ ಆಸೆ ಈಡೇರಿರಲಿಲ್ಲ. ಕೊನೆಗೂ ಅಮೆಜಾನ್ ಪ್ರೈಮ್ ದಯೆಯಿಂದ ಈ ಸಿನಿಮಾ ನೋಡುವ ಭಾಗ್ಯ ಲಭಿಸಿತು.


ಚಿತ್ರದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಒಂದು ವಿಚಾರ ಸ್ಪಷ್ಟಪಡಿಸಿಬಿಡುವೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಸಿನಿಮಾ ಅಲ್ಲ. ನೀವು ಕಮರ್ಷಿಯಲ್ ಅಂಶಗಳನ್ನು, ಭರಪೂರ ಹಾಸ್ಯವನ್ನು ಎಲ್ಲಕ್ಕಿಂತ ಮುಖ್ಯವಾಗಿ ವೇಗವಾಗಿ ಸಾಗುವ ಕಥೆಯನ್ನು ನಿರೀಕ್ಷಿಸುವವರಾದರೆ ಪ್ರಾಯಶಃ ಈ ಸಿನಿಮಾ ನಿಮಗಲ್ಲ. ಸ್ಲೋ ಪೇಸ್ ಚಿತ್ರಗಳನ್ನು ಪಾತ್ರಗಳೊಂದಿಗೆ ಬೆಸೆದುಕೊಂಡು ಆಸ್ವಾದಿಸುವ ಮನಸ್ಥಿತಿ ನಿಮಗಿದ್ದರೆ ಮುಂದಿನ ನಿಲ್ದಾಣ ನಿಮಗೆ ಖಂಡಿತಾ ಇಷ್ಟವಾಗುತ್ತದೆ.

ಚಿತ್ರತಂಡವೇ ಹೇಳಿಕೊಂಡಂತೆ ಇದು ಹೊಸಕಾಲದ ಯುವಮನಸ್ಸುಗಳ ಕಥನ. ಕಥಾನಾಯಕ ಪಾರ್ಥನ ನಿರೂಪಣೆಯಲ್ಲಿ ಫ್ಲಾಶ್ ಬ್ಯಾಕ್ ತಂತ್ರದ ಮೂಲಕ ತೆರೆದುಕೊಳ್ಳುವ ಅವನ ಬದುಕಿನ ಯಾನವೇ ಮುಂದಿನ ನಿಲ್ದಾಣ. ಈ ಯಾನದ ಬೇರೆ ಬೇರೆ ಹಂತಗಳಲ್ಲಿ ಅವನ ಬದುಕನ್ನು ಪ್ರವೇಶಿಸಿ ಪಯಣದ ಹಾದಿಯನ್ನು ಸಿಹಿ ಕಹಿ ನೆನಪುಗಳ ಘಮಲಿನಿಂದ ತುಂಬಿಸುವವರು ಮೀರಾ ಹಾಗೂ ಅಹನಾ. ಬದುಕಿನ ಬಗ್ಗೆ ಸಂಪೂರ್ಣ ಭಿನ್ನ ನಿಲುವನ್ನು ಹೊಂದಿರುವ ಈ ಮೂರು ವ್ಯಕ್ತಿತ್ವಗಳ ಮುಖೇನ 'ಬದುಕು ಸಾಗುತ್ತಲೇ ಇರಬೇಕು' ಎಂಬ ಸಂದೇಶವನ್ನು ಬಲು ಸೂಕ್ಷ್ಮವಾಗಿ ದಾಟಿಸುತ್ತದೆ ಈ ಸಿನಿಮಾ.

ಕಥಾನಾಯಕ ಪಾರ್ಥ ಶ್ರೀವಾಸ್ತವ್ ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್. ದಿನವೂ ಸಮಯದೊಂದಿಗೆ ಬಡಿದಾಡುವ ಒಂದೇ ರೀತಿಯ ಯಾಂತ್ರಿಕ ಬದುಕಿನಿಂದ ಬೇಸತ್ತವನು. ಫೋಟೋಗ್ರಫಿಯಲ್ಲಿ ಅದಮ್ಯ ಆಸಕ್ತಿಯಿದ್ದರೂ ಕೂಡಾ ಅದನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಳ್ಳಲು ಭವಿಷ್ಯದ ಜೀವನ ನಿರ್ವಹಣೆಯ ಭಯ. ಅತ್ತ ಮಾಡುತ್ತಿರುವ ವೃತ್ತಿಯಲ್ಲೂ ಆತ್ಮತೃಪ್ತಿಯಿಲ್ಲದ ಇತ್ತ ಕನಸುಗಳ ಹಿಂದೆಯೂ ಹೋಗಲಾರದ ತೊಳಲಾಟ ಅವನದು. 

ಮೀರಾ ಶರ್ಮಾ ಆರ್ಟ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ವಾವಲಂಬಿ ಯುವತಿ. ಬದುಕಿನ ಬಗೆಗೆ ಕೆಲ ಸ್ಪಷ್ಟ ನಿಲುವುಗಳುಳ್ಳ ಮೀರಾ ಏಕಾಂಗಿ. ತನ್ನೊಳಗಿನ ಆ ಖಾಲಿತನವನ್ನು ತುಂಬಲು ಆಕೆಗೊಂದು ಭಾವುಕ ಆಸರೆ ಬೇಕಿದೆ. ವಿವಾಹದ ಮುಖೇನ ತನ್ನ ಜೀವನ ಸಂಗಾತಿಯ ರೂಪದಲ್ಲಿ ಏಕಾಂಗಿತನದಿಂದ ಮುಕ್ತಿ ಪಡೆಯುವ ಹವಣಿಕೆ ಅವಳದ್ದು. 

ಅಹನಾ ಕಶ್ಯಪ್ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಬೇಕೆಂಬ ಮಹದಾಸೆಯುಳ್ಳ ವೈದ್ಯಕೀಯ ವಿದ್ಯಾರ್ಥಿನಿ. ತಾನು ಆಯ್ದುಕೊಂಡಿರುವ ಓದು, ವೃತ್ತಿ ಅವಳ ಪಾಲಿಗೆ passion ಕೂಡಾ. ಬಹಳ ಜೀವನ್ಮುಖಿಯಾದ ಲವಲವಿಕೆಯ ಹುಡುಗಿ ಆಕೆ.

ಈ ಮೂವರ ಹಾದಿಗಳು ಪರಸ್ಪರ ಸಂಧಿಸಿದಾಗ ಅವರ ಬದುಕಿನ ಪಯಣ ತೆಗೆದುಕೊಳ್ಳುವ ತಿರುವುಗಳನ್ನು ಬಹಳ ಸಾವಧಾನವಾಗಿ ನಿರೂಪಿಸಿದ್ದಾರೆ ನಿರ್ದೇಶಕ ವಿನಯ್ ಭಾರದ್ವಾಜ್. ಸಂಬಂಧಗಳ ಸೂಕ್ಷ್ಮತೆ, ಪ್ರೀತಿ, ಸ್ನೇಹ, ನಂಬಿಕೆ, ವೃತ್ತಿ, ಪ್ರವೃತ್ತಿ, ಆಸಕ್ತಿ, ಆದ್ಯತೆ ಇವೆಲ್ಲವನ್ನೂ ಇಂದಿನ ಯುವವರ್ಗದ ಜೀವನಶೈಲಿ ಹಾಗೂ ಅವರ ತವಕ ತಲ್ಲಣಗಳ ಮುಖೇನ ಕಟ್ಟಿಕೊಟ್ಟಿರುವ ಪರಿ ಇಷ್ಟವಾಗುತ್ತದೆ. ಈ ಚಿತ್ರದ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿನ ಮೂರು ಪ್ರಮುಖ ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಗಳು ಸರಿಯೋ ತಪ್ಪು ಎಂದು ವಿಮರ್ಶಿಸಲೇ ಸಾಧ್ಯವಿಲ್ಲ. ಒಂದು ಕ್ಷಣಕ್ಕೆ ಸರಿಯೆನಿಸಿದರೆ ಮತ್ತೊಮ್ಮೆ ಈ ನಿರ್ಧಾರ ತಪ್ಪಿತ್ತೇನೋ ಎನ್ನಿಸುತ್ತದೆ. 

ಪಾರ್ಥ, ಮೀರಾ ಹಾಗೂ ಅಹನಾ ಪಾತ್ರಗಳಿಗೆ ಪ್ರವೀಣ್ ತೇಜ್, ರಾಧಿಕಾ ಚೇತನ್ ಹಾಗೂ ಅನನ್ಯಾ ಕಶ್ಯಪ್ ಜೀವ ತುಂಬಿದ್ದಾರೆ. ದತ್ತಣ್ಣನವರದ್ದು ಸಣ್ಣ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಿದ್ದು ಪಾರ್ಥನ ಸ್ನೇಹಿತ ಏಕಲವ್ಯ(ಏಕಾ)ನಾಗಿ ನಟಿಸಿರುವ ಅಜಯ್ ರಾಜ್. ಕೊಂಚ ತುಂಟತನ, ಲಘುಹಾಸ್ಯ, ಒಂದಿಷ್ಟು ಸಲಹೆ ಮತ್ತು ಸ್ನೇಹಿತನೆಡೆಗೆ ಅಗಾಧ ಕಾಳಜಿ ಹೊಂದಿರುವ ಏಕಾ ತುಂಬಾ ಆಪ್ತನಾಗುತ್ತಾನೆ. 

ಇನ್ನು ಈ ಇಡೀ ಸಿನಿಮಾಕ್ಕೆ ಆಹ್ಲಾದಕಾರಿ ತಾಜಾತನದ ಪ್ರಭಾವಳಿ ನೀಡಿರುವುದು ಛಾಯಾಗ್ರಹಣ ಹಾಗೂ ಸಂಗೀತ. ಅಭಿಮನ್ಯು ಸದಾನಂದನ್ ಅವರ ಕ್ಯಾಮೆರಾ ಕೈಚಳಕ ಈ ನಿಧಾನ ಗತಿಯ ಸಿನಿಮಾಕ್ಕೆ ಚೇತೋಹಾರಿ ರಂಗಿನ ಚೌಕಟ್ಟನ್ನು ಒದಗಿಸಿದೆ. ಏಳು ಭಿನ್ನ ಸಂಗೀತ ನಿರ್ದೇಶಕರು ಸಂಯೋಜಿಸಿರುವ ಏಳು ಗೀತೆಗಳು ಈ ಚಿತ್ರದ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಜಾನಪದ ಸೊಗಡಿನಿಂದ ಹಿಡಿದು ಎಲ್ಲಾ ಪ್ರಕಾರದ ಹಾಡುಗಳಿರುವುದು ಮುಂದಿನ ನಿಲ್ದಾಣದ ಹೆಗ್ಗಳಿಕೆ. ವಾಸುಕಿ ವೈಭವ್ ಅವರು ಸಂಗೀತ ಸಂಯೋಜಿಸಿ ಹಾಡಿರುವ 'ಇನ್ನೂನು ಬೇಕಾಗಿದೆ' ಗೀತೆ ಈಗಾಗಲೇ ಬಹಳಷ್ಟು ಜನಪ್ರಿಯ. ಅದರೊಂದಿಗೆ ಮಸಾಲಾ ಕಾಫಿ ಬ್ಯಾಂಡ್ ಸಂಯೋಜನೆಯ 'ಮನಸೇ ಮಾಯ', ಜಿಮ್ ಸತ್ಯ ಸಂಗೀತ ಸಂಯೋಜಿಸಿರುವ 'ನಗುವ ಕಲಿಸು ಒಂದು ಬಾರಿ', ಮತ್ತು ಆದಿಲ್ ನದಾಫ್ ಸಂಯೋಜನೆಯ ಶೀರ್ಷಿಕೆ ಗೀತೆ ಸೊಗಸಾಗಿವೆ.

ಬದುಕೆಂಬ ಪಯಣಕ್ಕೆ ಹಲವು ನಿಲ್ದಾಣಗಳು. ಆದರೆ ಸಾವೆಂಬ ಅಂತಿಮ ನಿಲ್ದಾಣದ ಹೊರತು ಬೇರ್ಯಾವ ನಿಲ್ದಾಣದಲ್ಲೂ ಬದುಕು ಶಾಶ್ವತವಾಗಿ ನಿಲ್ಲುವುದಿಲ್ಲ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸಾಗುವ ಹಾದಿಯಲ್ಲಿ ಹಲವು ಅನಾಮಿಕರು ಎದುರಾಗುತ್ತಾರೆ. ಹಲವರು ಪರಿಚಿತರಾದರೆ ಕೆಲವರು ನಮ್ಮ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸುತ್ತಾರೆ. ಈ ಪಯಣವನ್ನು ಆನಂದಿಸಿ ಕಹಿ ನೆನಪುಗಳನ್ನು ಹಿಂದೆ ಬಿಟ್ಟು ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೆ ಸಾಗಬೇಕು ಎಂಬ ಆಶಯವನ್ನು ಮುಂದಿನ ನಿಲ್ದಾಣ ಧ್ವನಿಸುತ್ತದೆ. 

ನಿಧಾನವಾಗಿ ಸಾಗುವ ಕಥೆಯನ್ನು ಆಸ್ವಾದಿಸುವ ಮನಸ್ಸಿದ್ದರೆ ಖಂಡಿತಾ ಒಮ್ಮೆ ನೋಡಬಹುದಾದ, ನೋಡಬೇಕಾದ ಚಿತ್ರವಿದು.

ಮೃತ್ಯುಂಜಯ

ಪುಸ್ತಕದ ಹೆಸರು        : ಮೃತ್ಯುಂಜಯ
ಮೂಲ ಲೇಖಕರು      : ಶಿವಾಜಿ ಸಾವಂತ(ಮರಾಠಿ)
ಅನುವಾದ               : ಅಶೋಕ ನೀಲಗಾರ
ಪ್ರಕಾಶಕರು              : ಅಮಿತ ಪ್ರಕಾಶನ, ಬೆಳಗಾವಿ
ಪ್ರಥಮ ಮುದ್ರಣ      : 1991
ಪುಟಗಳು                  : 973        
ಬೆಲೆ                          :125 ರೂ      


'ಮಹಾಭಾರತ'ವೆಂಬ ಮಹಾಕಾವ್ಯದ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಪ್ರತಿಯೊಂದು ಪಾತ್ರವೂ ತನ್ನ ಗುಣ ಸ್ವಭಾವದ ಮೂಲಕ ಜಗತ್ತಿಗೆ ಯಾವುದೋ ಒಂದು ಮೌಲ್ಯವನ್ನು, ಇಲ್ಲವೇ ಕಲಿಯಬೇಕಾದ ಪಾಠವನ್ನು ಸಾರಿ ಹೇಳುತ್ತದೆ. ಮೂಲ ಮಹಾಭಾರತವು ಶತಶತಮಾನಗಳ ಅವಧಿಯಲ್ಲಿ ಬೇರೆ ಬೇರೆ ಕವಿಗಳ, ಲೇಖಕರ ಕಲ್ಪನೆಯ ಮೂಸೆಯಲ್ಲಿ ಹಲವು ಬದಲಾವಣೆಗಳೊಂದಿಗೆ ಬೇರೆ ಬೇರೆ ಸ್ವರೂಪದಲ್ಲಿ ನಮ್ಮ ಮುಂದೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ನಮ್ಮ ಕನ್ನಡದಲ್ಲೇ ಪಂಪ, ರನ್ನ, ಕುಮಾರವ್ಯಾಸ ಇನ್ನೂ ಅನೇಕ ಕವಿಗಳು ತಮ್ಮ ಕೃತಿಗಳಲ್ಲಿ ಮಹಾಭಾರತವನ್ನು ಬೇರೆ ಬೇರೆ ಆಯಾಮಗಳಿಂದ ವಿಶ್ಲೇಷಿಸಿದ್ದಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಮಹಾಭಾರತದ ಪಾತ್ರಗಳು ಅಗಣಿತ ಕಾವ್ಯ, ಕಥೆ, ಕಾದಂಬರಿ, ಲೇಖನಗಳಿಗೆ ಸ್ಪೂರ್ತಿಯಾಗಿವೆ. 

ಮಹಾಭಾರತದಲ್ಲಿ ತನ್ನ ವಿಶಿಷ್ಟ ಜೀವನಗಾಥೆಯಿಂದ ಗಮನಸೆಳೆಯುವುದು ಅಂಗರಾಜ ಕರ್ಣ. ಸಾಕ್ಷಾತ್ ಸೂರ್ಯಪುತ್ರನಾಗಿಯೂ ಸೂತಪುತ್ರನೆನೆಸಿಕೊಂಡ, ಕೌಂತೇಯನಾಗಿಯೂ ರಾಧೇಯನಾದ, ಜೇಷ್ಠ ಪಾಂಡವನಾಗಿಯೂ ಕೌರವರ ಪಕ್ಷದಲ್ಲಿ ಗುರುತಿಸಿಕೊಂಡ ಕರ್ಣನ ಬದುಕೇ ಅಪಮಾನ, ನಿಂದನೆ ಹಾಗೂ ಶಾಪಗಳಿಂದ ಕೂಡಿದ ದುರಂತ ಕಾವ್ಯ. ವೀರತ್ವ, ದಾನಶೂರತ್ವ ಹಾಗೂ ತ್ಯಾಗದ ಪ್ರತೀಕವೆನಿಸಿದರೂ ಕರ್ಣನ ಬದುಕಿನ ತುಂಬಾ ವಿಧಿಯ ಶಾಪಗಳೇ ಅಪಸವ್ಯದ ಸರಮಾಲೆಯಾಗಿ ಎದ್ದು ಕಾಣುವುದು ವಿಪರ್ಯಾಸ. ಪ್ರಾಯಶಃ ಈ ಕಾರಣಕ್ಕಾಗಿಯೇ ಮಹಾಕವಿ ಪಂಪ 'ನೆನೆಯದಿರಣ್ಣ ಭಾರತದೊಳಿನ್ ಪೆರರಾರನುಂ ಒಂದೆ ಚಿತ್ತದಿಂ ನೆನೆದುದಾರ್ದೊಡೆ ಕರ್ಣನಂ ನೆನೆಯಾ ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ' ಎಂದಿರಬಹುದೇನೋ.

ಇಂತಹ ಕರ್ಣನ ಜೀವನವನ್ನೇ ಆಧಾರವಾಗಿಸಿ ಅವನ ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಬೃಹತ್ ಕಾದಂಬರಿ 'ಮೃತ್ಯುಂಜಯ'. ಕರ್ಣ, ಕುಂತಿ, ದುರ್ಯೋಧನ, ವೃಷಾಲಿ, ಶೋಣ ಈ ಐದು ಪಾತ್ರಗಳ ಸ್ವಗತದಲ್ಲಿ ಸಾಗುವ ಕಥೆಯು ಶ್ರೀ ಕೃಷ್ಣನ ಸ್ವಗತದೊಂದಿಗೆ ಮುಕ್ತಾಯವಾಗುತ್ತದೆ. ಮೊದಲಿನ ಐದು ಪಾತ್ರಗಳ ಮೂಲಕ ಕರ್ಣನ ಜೀವನವನ್ನು ವಿಶ್ಲೇಷಿಸುತ್ತಾ ಸಾಗುವ ಕಥೆಗೆ ಭಗವಾನ್ ಶ್ರೀ ಕೃಷ್ಣನ ಸ್ವಗತದೊಂದಿಗೆ ಉಪಸಂಹಾರ ನೀಡಿರುವ ಲೇಖಕರ ಜಾಣ್ಮೆ ಅಭಿನಂದನಾರ್ಹ . ಇಲ್ಲಿ ಕರ್ಣನ ಕಥಾನಾಯಕನಾದ ಕಾರಣ ಇದು ಮೂಲ ವ್ಯಾಸ ಭಾರತಕ್ಕೆ ಸಂಪೂರ್ಣ ನಿಷ್ಠವಾದ ಕೃತಿಯಲ್ಲ. ಕರ್ಣನ ಜೀವನದ ಎಲ್ಲಾ ಮಹತ್ತರ ಘಟನೆಗಳನ್ನು ವ್ಯಾಸ ಭಾರತದಿಂದ ತೆಗೆದುಕೊಂಡು ಅದನ್ನೇ ಕೇಂದ್ರವಾಗಿಸಿದ್ದರೂ ಕೂಡಾ ಕರ್ಣನ ವ್ಯಕ್ತಿತ್ವ, ಮನಸ್ಥಿತಿಯನ್ನು ಪರಿಚಯಿಸಲು ಬೇಕಾದಂತೆ ಹಲವು ಪಾತ್ರಗಳು ಇಲ್ಲಿವೆ. ಕರ್ಣನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಮಾಧ್ಯಮಗಳಾಗಿ ಅವನ ತಮ್ಮ ಶೋಣ, ಪತ್ನಿ ವೃಷಾಲಿ, ವೃಷಾಲಿಯ ಅಣ್ಣ ಸಾರಥಿ ಸತ್ಯಸೇನನ ಪಾತ್ರಗಳಿಗೆ ಇಲ್ಲಿ ಮಹತ್ವವಿದೆ. ಹಾಗೆಯೇ ಪೌರಾಣಿಕ ಹಿನ್ನೆಲೆಗೆ ಹೊರತಾಗಿ ಈ ಕಥೆಯಲ್ಲಿ ಬಹಳ ಪ್ರಬಲವಾದ ಸಾಮಾಜಿಕ ಅಂಶಗಳಿವೆ. ಹಾಗಾಗಿಯೇ ಈ ಕಾದಂಬರಿಯ ಹಲವು ವಿಚಾರಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವೆನಿಸುತ್ತವೆ. 

ಚಂಪಾನಗರದಲ್ಲಿ ಧೃತರಾಷ್ಟ್ರನ ಸಾರಥಿ ಅಧಿರಥ ಹಾಗೂ ರಾಧೆಯ ಪುತ್ರನಾಗಿ ತಮ್ಮ ಶೋಣ(ಶತೃತಪ) ನೊಂದಿಗೆ ಗಂಗಾತೀರದಲ್ಲಿ ಬಾಲ್ಯವನ್ನು ಕಳೆಯುವ ಕರ್ಣ(ವಸುಸೇನ)ನ ಸ್ವಗತದ ಮೂಲಕ ಆರಂಭವಾಗುವ ಕಾದಂಬರಿ ಕೃಷ್ಣನಿಂದ ಕುಮಾರಿ ಭೂಮಿಯ ಮೇಲೆ ಕರ್ಣನ ಅಂತ್ಯಕ್ರಿಯೆ ಹಾಗೂ ವೃಷಾಲಿಯ ಆತ್ಮಾರ್ಪಣೆಯೊಂದಿಗೆ ಪರಿಸಮಾಪ್ತಿಯಾಗುತ್ತದೆ. ಈ ಆದಿಯಿಂದ ಅಂತ್ಯದ ನಡುವಿನ ಪಯಣದಲ್ಲಿ ಮಹಾಭಾರತವು ಕರ್ಣನ ಆಯಾಮದಲ್ಲಿ ತೆರೆದುಕೊಳ್ಳುತ್ತದೆ. 

ಜನ್ಮದಾರಭ್ಯ ದೊರೆತ ಅಭೇದ್ಯ ಕವಚ ಕುಂಡಲಗಳು, ಸೂರ್ಯಪ್ರಭೆಯ ಕಾಯ, ಕ್ಷತ್ರಿಯರಿಗೆ ಭೂಷಣವಾಗುವಂತಹ ವೀರತ್ವ, ಪರಾಕ್ರಮಗಳ ಗಣಿಯಾದ ಕರ್ಣ ಬೆಳೆಯುವುದು ಮಾತ್ರ ಸಾರಥಿ ಪುತ್ರನಾಗಿ. ಇಡೀ ಲೋಕ ಅವನನ್ನು ಅವನ ಕುಲದ ಆಧಾರದಲ್ಲಿಯೇ ಗುರುತಿಸಿ ಆ ಮಿತಿಯೊಳಗೇ ಅವನನ್ನು ಬಂಧಿಸಲು ಯತ್ನಿಸುತ್ತದೆ. ಅವನ ಪ್ರತೀ ಪರಾಕ್ರಮದ ಸನ್ನಿವೇಶದಲ್ಲೂ 'ನೀನು ಸೂತನಿರುವೆ. ಕ್ಷತ್ರಿಯನಾಗಲು ಯತ್ನಿಸಬೇಡ' ಎಂದು ಅಪಹಾಸ್ಯಗೈಯುವ ಸಮಾಜ ಅವನನ್ನು ಪದೇ ಪದೇ ಅಪಮಾನಿಸಿ ಜರ್ಜರಿತಗೊಳಿಸುತ್ತದೆ. ಇಡೀ ಲೋಕವೇ ತನ್ನನ್ನು ಕೇವಲ ಕುಲದ ಆಧಾರದಲ್ಲಿ ತಿರಸ್ಕರಿಸುವಾಗ ತನ್ನ ಸಾಮರ್ಥ್ಯವನ್ನು ಅರಿತು, ಕರ್ತೃತ್ವದ ಆಧಾರದಲ್ಲಿ ಅಂಗರಾಜನೆಂಬ ಕ್ಷತ್ರಿಯ ಪದವಿ ನೀಡಿ ಪುರಸ್ಕರಿಸುವ ದುರ್ಯೋಧನ ಸ್ವಾಭಾವಿಕವಾಗಿಯೇ ಕರ್ಣನ ಪಾಲಿಗೆ ಪರಮಾಪ್ತನೆನಿಸುತ್ತಾನೆ. ಆ ಕಾರಣಕ್ಕಾಗಿಯೇ ಕೊನೆಕೊನೆಗೆ ದುರ್ಯೋಧನನ ರಾಜಕಾರಣ ಆಟದಲ್ಲಿ ತಾನು ದಾಳವಾಗಿದ್ದೂ ತಿಳಿದರೂ ಅವನೆಡೆಗಿನ ಸ್ವಾಮಿನಿಷ್ಠೆಯನ್ನು ತೊರೆಯುವುದಿಲ್ಲ ಕರ್ಣ. 

ತನ್ನ ಜೀವನದ ಬಹುಪಾಲು ತಾನು ಯಾರಿದ್ದೇನೆ ಎಂಬ ಗೊಂದಲದಲ್ಲೇ ಜೀವಿಸುವ ಕರ್ಣನ ತಾಕಲಾಟಗಳನ್ನು ಕಾದಂಬರಿ ಬಹಳ ಸಮರ್ಥವಾಗಿ ಹಿಡಿದಿಡುತ್ತದೆ. ತಾನು ಸೂತಪುತ್ರನಿದ್ದೂ ಕೂಡಾ ತನಗೇಕೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಸಿಗದ ಪ್ರಶ್ನೆ ಅವನನ್ನು ಹಗಲಿರುಳು ಕಾಡುತ್ತದೆ. ತನ್ನ ಪ್ರಥಮ ಪುತ್ರ ಸುದಾಮ ಕವಚ ಕುಂಡಲ ರಹಿತವಾಗಿ ಜನಿಸಿದಾಗಲಂತೂ ಅವನ ಮನೋವಿಪ್ಲವಗಳು ತೀವ್ರವಾಗುತ್ತದೆ. ತನ್ನ ಈ ಕವಚಕುಂಡಲಗಳಿಂದಲೇ ತಾನು ಸೂತಪುತ್ರನೆಂಬ ಸತ್ಯವನ್ನು ತನಗೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂಬ ಭಾವ ಸದಾ ಅವನನ್ನು ಕಾಡುತ್ತದೆ. ಕೊನೆಗೆ ಕೃಷ್ಣನಿಂದ ತನ್ನ ಜನ್ಮರಹಸ್ಯ ತಿಳಿದಾಗಲಷ್ಟೇ ಅವನ ಗೊಂದಲಗಳಿಗೆ ಉತ್ತರ ಸಿಗುತ್ತದೆ. ಆದರೆ ಆ ವೇಳೆಗಾಗಲೇ ಅವನ ಬದುಕು ಹಿಂದಿರುಗಿ ಬರಲಾಗದಷ್ಟು ಮುಂದೆ ಸಾಗಿಹೋಗಿರುತ್ತದೆ.

ಈ ಕಾದಂಬರಿಯಲ್ಲಿನ ಇನ್ನೊಂದು ಪ್ರಮುಖ ಅಂಶ ಕರ್ಣ ಹಾಗೂ ಅಶ್ವತ್ಥಾಮರ ಬಾಂಧವ್ಯ. ಅವರಿಬ್ಬರ ಮಿತ್ರತ್ವ ಹಾಗೂ ಅವರ ನಡುವಿನ ಚರ್ಚೆಗಳಲ್ಲಿ ಹಲವು ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳ ಹರಿವು ಕಾದಂಬರಿಯ ತುಂಬಾ ಹರಡಿಕೊಂಡಿದೆ. ಕರ್ಣನ ಪ್ರತೀ ಗೊಂದಲಕ್ಕೆ ಅಶ್ವತ್ಥಾಮನ ಸಾತ್ವಿಕ ತತ್ವದ ಉತ್ತರಗಳು ಬಹಳ ಪ್ರಸ್ತುತವೆನಿಸುತ್ತದೆ. 

ಈ ಕಾದಂಬರಿಯ ಇನ್ನೊಂದು ಪ್ರಮುಖ ಅಂಶ ಉಪಮೆ, ರೂಪಕ ಹಾಗೂ ಪ್ರತಿಮೆಗಳ ಬಳಕೆ. ಕಥೆಯ ಪ್ರತಿಯೊಂದು ಪ್ರಮುಖ ಸನ್ನಿವೇಶಗಳಲ್ಲೂ ಭವಿಷ್ಯವನ್ನು ಸೂಚಿಸುವ, ಪರಸ್ಪರ ವೈರುಧ್ಯವನ್ನು ಧ್ವನಿಸುವ ಪ್ರತಿಮೆಗಳನ್ನು ಸಮರ್ಥವಾಗಿ ಬಳಸಿದ್ದಾರೆ ಲೇಖಕರು. ಬಾಲ್ಯದಲ್ಲಿ ಮಥುರೆಯ ಅರಮನೆಯಲ್ಲಿ ಗೂಡಿನಿಂದ ಬಿದ್ದ ಚಾಂಡೋಲ ಪಕ್ಷಿಯ ಮರಿಯನ್ನು ಮರಳಿ ಗೂಡಿಗೆ ಸೇರಿಸಲು ತನ್ನ ತಂದೆ ಮಹಾರಾಜ ಶೂರಸೇನರನ್ನೇ ಮರದ ಮೇಲೆ ಹತ್ತಿಸುವ ಪೃಥೆ ಮುಂದೊಮ್ಮೆ ತಾನೇ ಹೆತ್ತ ಹಸುಗೂಸನ್ನು ತುಂಬಿ ಹರಿಯುವ ಅಶ್ವನದಿಯಲ್ಲಿ ತೇಲಿಬಿಡುತ್ತಾಳೆ. ಬದುಕಿನುದ್ದಕ್ಕೂ ಸಂಯಮ ಪಾಲಿಸುವ, ಅಪಮಾನಗಳನ್ನು ಹಲ್ಮುಡಿ ಕಚ್ಚಿ ಸಹಿಸುವ ಕರ್ಣ ದ್ರೌಪದಿಯ ವಸ್ತ್ರಾಪಹರಣದ ಸನ್ನಿವೇಶದಲ್ಲಿ ಪ್ರಜ್ಞಾಶೂನ್ಯನಾಗಿ ದ್ರೌಪದಿಯ ಅಪಮಾನಗೈಯುತ್ತಾನೆ. ದ್ರೋಣರ ಗುರುಕುಲದಲ್ಲಿ ಪ್ರಥಮ ಬಾರಿಗೆ ಕರ್ಣಾಜುನರ ಭೇಟಿಯಾಗುವ ಕ್ಷಣದಲ್ಲಿ ಹಾರುತ್ತಿದ್ದ ಗರುಡ ಪಕ್ಷಿಯ ಚುಂಚಿನಲ್ಲಿದ್ದ ಅರೆಜೀವದ ಸರ್ಪ ಇಬ್ಬರ ನಡುವೆ ಬೀಳುವುದು ಅವರಿಬ್ಬರ ವೈರತ್ವವೇ ತುಂಬಿದ ಭವಿಷ್ಯವನ್ನು ಧ್ವನಿಸುವಂತೆ ಅನ್ನಿಸಿಬಿಡುತ್ತದೆ. ರಾಜಮಾತೆ ಕುಂತೀದೇವಿ ತಮ್ಮ ಆರು ಕುದುರೆಗಳ ರಥಕ್ಕೆ ಐದೇ ಕುದುರೆಗಳನ್ನು ಕಟ್ಟುವುದು, ಪರಸ್ಪರ ಎದುರಾದಗಲೆಲ್ಲಾ ಕರ್ಣನ ಪಾದಗಳನ್ನೇ ಏಕದೃಷ್ಟಿಯಿಂದ ನೋಡುವ ಯುಧಿಷ್ಠರ…. ಹೀಗೆ ಹಲವು ಸಂಗತಿಗಳನ್ನು ಇಲ್ಲಿ ಉದಾಹರಿಸಬಹುದು.

ಕಥೆಯ ಕೊನೆಯಲ್ಲಿ ತನ್ನ ಅಂತಿಮ ಘಳಿಗೆಯಲ್ಲಿರುವ ಕರ್ಣ ತನ್ನ ಸುವರ್ಣ ದಂತಗಳನ್ನು ಯಾಚಕನಿಗೆ ದಾನ ನೀಡುವ ಸನ್ನಿವೇಶ ಅವನಿಡೀ ಬದುಕಿಗೆ ಭಾಷ್ಯ ಬರೆದಂತೆ ಕಾಣುತ್ತದೆ. ಸಾವಿನ ದ್ವಾರದಲ್ಲೂ ಬದಲಾಗದ ಅವನ ಜೀವನದೆಡೆಗಿನ ವಿಚಾರ ಧಾರೆ, ಕರ್ತವ್ಯ ನಿಷ್ಠೆ  ಆ ಸನ್ನಿವೇಶದಲ್ಲಿ ಪ್ರತಿಫಲಿತವಾಗಿದೆ. ಸಾಯುವ ಮುನ್ನಿನ ಅವನ ಅಸ್ಪಷ್ಟ ಕನವರಿಕೆಗಳು ಅವನಿಡೀ ಬದುಕಿನ ದ್ವಂದ್ವವನ್ನು ಧ್ವನಿಸಿದಂತೆ ಭಾಸವಾಗುತ್ತದೆ. ಕರ್ಣನ ಶವವನ್ನು ಶೋಧಿಸುತ್ತಾ ಬರುವ ಕೃಷ್ಣನಿಗೆ ಕಾಣುವುದು ತನ್ನ ಒಡೆಯನ ಶವದ ಹತ್ತಿರ ಕುಳಿತು ತನ್ನ ಬಾಲದ ಚಮರಿಯನ್ನು ಬೀಸುವ ವಾಯುಜಿತ….! ಅದು ಸ್ವತಃ ಕೃಷ್ಣನಿಗೇ 'ಜಗತ್ತಿನ ಮೇಲೆ ಪ್ರಕೃತಿಯ ವಿಜಯದಂತೆ ಭಾಸವಾಯಿತು' ಎಂಬ ಸಾಲುಗಳು ಕಾಡುತ್ತವೆ. ಕೈಯಲ್ಲಿ ಒಂದೊಂದು ಹಣತೆ ಹಿಡಿದು ಕೃಷ್ಣನ ಅರಸುತ್ತಾ ಕರ್ಣನ ಉರಿವ ಚಿತೆಯೆದುರು ಪಾಂಡವರು ಬರುವ ಸನ್ನಿವೇಶ ಒಂದು ಚಿತೆ ಐದು ಹಣತೆಗಳಿಗೆ ನೇಹವಾಯಿತೇನೋ ಎಂಬ ಭಾವವನ್ನು ಹುಟ್ಟಿಸಿಬಿಡುತ್ತದೆ. 

ಒಟ್ಟಿನಲ್ಲಿ ಈ ಕಾದಂಬರಿ ಓದಿ ಮುಗಿಸಿದಾಗ 
ಕರ್ಣನ ಬದುಕನ್ನು ಅವನು ರೂಪಿಸಿಕೊಳ್ಳಲಿಲ್ಲ ಅದನ್ನು ಪರಿಸ್ಥಿತಿಗಳೇ ರೂಪಿಸಿದವು ಅನ್ನಿಸಿಬಿಡುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ವಿಧಿ ನಡೆಸಿದಂತೆ ನಡೆದರೂ ತನ್ನ ವಿಚಾರಧಾರೆಗಳಿಗೆ ನಿಷ್ಠನಾದ ಕರ್ಣನಿಗೆ ಕೊನೆಯವರೆಗೂ ಸ್ಪೂರ್ತಿಯಂತೆ ಜೊತೆಯಾಗುವುದು, ಕುಗ್ಗುವ ಅವನ ಮನಕ್ಕೆ ಚೈತನ್ಯ ತುಂಬಿ ಅವನೊಂದಿಗೆ ಸಾಗುವುದು ಸೂರ್ಯದೇವನ ಪ್ರಕಾಶ ಹಾಗೂ ಹರಿವ ಗಂಗೆಯ ತೆರೆಗಳು ಮಾತ್ರವೇ. ಒಂದೇ ಮಾತಿನಲ್ಲಿ ಹೇಳುವುದಾದರೇ ಕರ್ಣನು ಯೋಧನಾಗಿ ರಣರಂಗದಲ್ಲಿ ಹೋರಾಡಿದ್ದಕ್ಕಿಂತ ತನ್ನ ಮನೋರಂಗದಲ್ಲಿನ ಅಗಣಿತ ಗೊಂದಲಗಳೊಂದಿಗೆ ಹೋರಾಡಿದ್ದೇ ಹೆಚ್ಚು. ಆ ಹೋರಾಟಗಳ ಕಥನವೇ ಮೃತ್ಯುಂಜಯ.

ಅನೂಹ್ಯ 4

ನವ್ಯಾ ರೂಮಿಗೆ ಬಂದಾಗ ಕಿಶೋರ್ ಛಾವಣಿ ದಿಟ್ಟಿಸುತ್ತಿದ್ದವನು ಅವಳನ್ನು ನೋಡಿ ನಸುನಗುತ್ತಾ   "ಏನು ಮೇಡಂನೋರು ಬೆಳಿಗ್ಗೆಯಿಂದ ಏನೋ ತುಂಬಾ ಯೋಚನೆ ಮಾಡಿ ಕೊರಗ್ತಿರೋ ಹಾಗಿದೆ. ಅದೇನು ಅಂತ ಗೊತ್ತಾದ್ರೆ ನಾನು ನಿಂಜೊತೆ ಕುತ್ಕೊಂಡು ಬಾಯಿ ಬಡ್ಕೋಬಹುದು" ಅಂದಿದ್ದೇ ತಡ.... ಮನದ ಅಳಲೆಲ್ಲಾ ಒಂದೇ ಸಮನೆ ಉಮ್ಮಳಿಸಿ ಅವನನ್ನಪ್ಪಿ ಅಳತೊಡಗಿದಳು.

"ಯಾಕಮ್ಮ ಬಂಗಾರಿ, ಏನೇನೋ ಯೋಚನೆ ಮಾಡಿ ಮನಸ್ಸಿಗೆ ಯಾಕಿಷ್ಟು ಹಿಂಸೆ ಮಾಡ್ಕೋಳ್ತೀ? ಎಷ್ಟು ಸಾರಿ ಹೇಳಿದ್ದೀನಿ, ಹಳೆದೆಲ್ಲಾ ಮರ್ತು ಬಿಡು ಅಂತ. ನೋಡು ಪುಟ್ಟಾ, ಸುಮ್ಮನೆ ಏನೇನೋ ನೆನಸ್ಕೊಂಡು ಈಗಿನ ನೆಮ್ಮದಿ ಹಾಳ್ಮಾಡ್ಕೋಬೇಡ್ವೋ" ಎಂದ ಸಾಂತ್ವನಿಸುತ್ತಾ.

ಅವಳು ನಿಧಾನವಾಗಿ ಕಣ್ಣೀರೊರೆಸಿಕೊಂಡಳು. ಕಿಟಕಿಯ ಬಳಿ ನಿಂತು ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿದಳು. ಹಾಯೆನಿಸಿತು. ಆಗಸದಲ್ಲಿನ ಮೋಡಗಳು ಗಾಳಿ ಬೀಸುವ ದಿಕ್ಕಿನಲ್ಲಿ ರಭಸವಾಗಿ ದಿಗಂತದೆಡೆಗೆ ಸರಿಯುತ್ತಿವೆ. ಮೋಡಗಳೆಲ್ಲಾ  ಚದುರಿದರೆ ನೀಲಾಕಾಶದಲ್ಲಿ ಜೋತ್ಸ್ನೆಯ ಜ್ಯೋತಿರ್ಲಹರಿ. ಅದೇ ಮೋಡ ಮುಸುಕಿದರೇ ಕಾರಿರುಳು. ಅವ್ಯಕ್ತ ಭಾವವೊಂದು ಅವಳ ಮುಖದಲ್ಲಿ ಹಾದುಹೋಯಿತು.

"ಹಳೆಯದನ್ನು ನಾನೆಂದೂ ನೆನಪಿಟ್ಟುಕೊಂಡಿಲ್ಲ ಕಿಶೋರ್. ಅಲ್ಲಿ ಜೀವ ಹಿಂಡುವ ಯಾತನೆಯ ಹೊರತು ನೆನಪಿನಲ್ಲಿಡುವಂಥ ಒಂದು ಅಣುವೂ ಇಲ್ಲ. ನನ್ನ ಕೊಲ್ಲುತ್ತಿರೋದು ನನ್ನ ಅತೀತದ ಮೇಲೆ ವರ್ತಮಾನದಲ್ಲಿ ಹರಡಿರುವ ತೆರೆ. ನಾನೆಷ್ಟು ಪ್ರಯತ್ನಿಸಿದರೂ ನನ್ನ ಇಂದಿನಿಂದ ನಿನ್ನೆಯ ನೆರಳನ್ನು ತೊಡೆಯಲಾಗದೆ ಸೋತಿದ್ದೇನೆ"

"ನವ್ಯಾ, ನಿನ್ನ ಅತೀತದಿಂದ ಬಹುದೂರ ಸಾಗಿದ್ದೀಯ. ಮತ್ತೆ ತಿರುಗಿ ನೋಡಬೇಡ. ಅದರಿಂದ ಸಿಗುವುದು ನೋವು ಮಾತ್ರ"

"ಕಿಶೋರ್, ನೀವು ಈ ಮದುವೆಗೆ ಮೊದಲೇ ಎಲ್ಲವನ್ನೂ ಮನೆಯಲ್ಲಿ ಹೇಳಿಬಿಡ್ಬೇಕಿತ್ತು. ಅವರಿಗೆಲ್ಲಾ ನನ್ನ ಮೇಲೆ ಇರೋ ನಂಬಿಕೆ ನನ್ನ ಮನಸ್ಸನ್ನ ಚುಚ್ಚಿ ಘಾಸಿಗೊಳಿಸುತ್ತೆ. ಎಲ್ಲರಿಗೂ ಮೋಸ ಮಾಡ್ತಿದ್ದೀನಿ ಅನ್ಸುತ್ತೆ"

"ನಾನು ಹೇಳುವ ಪ್ರಯತ್ನ ಮಾಡಿದ್ದೆ ನವ್ಯಾ. ಆದರೆ ಯಾಕೋ ಸಾಧ್ಯವೇ ಆಗ್ಲಿಲ್ಲ. ಹೇಳಿದ್ರೆ ಖಂಡಿತ ಈ ಮದ್ವೆ ಆಗ್ತಿರ್ಲಿಲ್ಲ"

"ಆಗ ಇಷ್ಟೆಲ್ಲಾ ಸಮಸ್ಯೆನೇ ಆಗ್ತಿರ್ಲಿಲ್ಲಾ. ಹೋಗಿ ಹೋಗಿ ನನ್ನಂಥವಳನ್ನು ಮದ್ವೆ ಆಗೋಂಥ ಹುಚ್ಚು ನಿಮಗ್ಯಾಕೆ ಬಂತೋ? "

"ನವ್ಯಾ, ಸಾಕ್ಮಾಡು. ಇನ್ನೊಂದು ಮಾತಾಡ್ಬೇಡ. ಪ್ರೀತಿ ಅನ್ನೋದು ಕುಲ ಗೋತ್ರ ಹಿನ್ನೆಲೆ ತಿಳಿದು ಹುಟ್ಟೋದಲ್ಲ. ಅದು ನದಿಯಂತೆ. ಒಂದುಕಡೆ ತಡೆ ಇದ್ರೆ ಪಥ ಬದಲಿಸಿ ಬೇರೆ ಹಾದಿಯಲ್ಲಿ ಹರಿಯುತ್ತೆ. ಮನುಷ್ಯ ಅದಕ್ಕೆ ಅಣೆಕಟ್ಟು ಕಟ್ಟಿ ಕ್ಷಣಕಾಲ ಹಿಡಿದಿಡಬಹುದೇ ಹೊರತು ಶಾಶ್ವತವಾಗಿ ಅದನ್ನು ಬಂಧಿಸೋಕಾಗೋಲ್ಲ.  ಅದೇ ಪ್ರೀತಿಯ ರೀತಿ. ನಾನು ಯಾವುದೇ ಕಾರಣಕ್ಕೂ ನಿನ್ನ ಕಳ್ಕೊಳೋಕೆ ತಯಾರಿಲ್ಲ. ಸತ್ಯ ಗೊತ್ತಾದ್ರೂ, ಯಾರು ನಿನ್ನ ಜೊತೆ ಇದ್ರೂ ಇಲ್ದಿದ್ರೂ ನಾನು ಮಾತ್ರ ನನ್ನ ಕೊನೆ ಉಸಿರಿರೋ ತನಕ ನಿನ್ನ ಜೊತೆ ಇರ್ತೀನಿ. ಇದು ನನ್ನ ಪ್ರಾಮಿಸ್" ಒಂದೇ ಏಟಿಗೆ ಹೇಳಿ ಸುಮ್ಮನಾದ. ಅವಳೂ ಮೌನವಾಗಿ ಕೂತಳು. ಇಬ್ಬರ ನಡುವೆ ನೀರವತೆ ಬಿದ್ದುಕೊಂಡಿತು.

ಮೌನ ಅಸಹನೀಯವೆನಿಸಿದಾಗ ತಾನೇ ಮೌನ ಮುರಿಯುತ್ತಾ, "ನಿನ್ನ ನೋವು ಏನೂಂತ ನನಗೆ ಅರ್ಥ ಆಗುತ್ತೆ ನವ್ಯಾ. ಆಗಸದಲ್ಲಿ ಮೋಡ ತುಂಬಿದಾಗ ಕತ್ತಲು ಕವಿಯುತ್ತೆ. ಆದ್ರೆ ಆ ಕತ್ತಲೇ ಶಾಶ್ವತ ಅಲ್ಲ. ಒಮ್ಮೆ ಹನಿ ಒಡೆದು ಮಳೆ ಬಿದ್ದ ಮೇಲೆ ಮತ್ತೆ ಬೆಳಕು ಬಂದೇ ಬರುತ್ತೆ. ಕಾಯ್ಬೇಕು ಅಷ್ಟೇ. ನೀನೇನೂ ಯೋಚನೆ ಮಾಡಬೇಡ. ನಾಳೆನೇ ಇಬ್ರೂ ಸಮ್ಮು ಹತ್ರ ಮಾತಾಡಿ ಏನು ಮಾಡಬಹುದೋ ನೋಡೋಣ" ಭರವಸೆ ನೀಡಿದ.

"ಸರಿ ತುಂಬಾ ಹೊತ್ತಾಯ್ತ. ಮಲಗು ಇನ್ನು" ಎಂದು ಅವಳನ್ನು ಮಲಗಿಸಿ, ಹಲವು ಯೋಚನೆಗಳ ಭಂಡಾರವಾಗಿದ್ದ ತಲೆಯನ್ನು ಶಾಂತಗೊಳಿಸಿ ಮಲಗಲು ಪ್ರಯತ್ನಿಸಿದ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗ;

ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ,ತೊಳೆದೀತು ಒಳಗು ಹೊರಗ......

ಸೋದೆ ಮಳೆ ಮನದ ಒಳ ಹೊರಗನ್ನು ತೊಳೆಯುವುದೋ, ಇಲ್ಲಾ ಬಿರುಗಾಳಿಗೆ ಬಾಳೆ ನೌಕೆ‌ ಮುಳುಗುವುದೋ????? ಕಾಲವೇ ಉತ್ತರಿಸಬೇಕು.......

ಮುಂದುವರೆಯುತ್ತದೆ


ಮಂಗಳವಾರ, ಜೂನ್ 2, 2020

ಯಯಾತಿ

ಪುಸ್ತಕದ ಹೆಸರು     : ಯಯಾತಿ
ಮೂಲ ಲೇಖಕರು  : ವಿ. ಎಸ್. ಖಾಂಡೇಕರ್
ಅನುವಾದ            : ವಿ. ಎಂ. ಇನಾಂದಾರ್
ಪ್ರಕಾಶಕರು           : ಅಂಕಿತ ಪುಸ್ತಕ
ಪುಟಗಳು: ೪೪೦           ಬೆಲೆ : ೨೯೫ ರೂ
ಮೊದಲ ಮುದ್ರಣ       ೧೯೭೭ 
ಒಂಬತ್ತನೇ ಮುದ್ರಣ   ೨೦೧೫

ನಾನು ಬಹಳ ಸಮಯದಿಂದ ಓದಬೇಕೆಂದುಕೊಂಡ ಕಾದಂಬರಿ. ಪೌರಾಣಿಕ ಕಥನಗಳನ್ನು ಪ್ರಸ್ತುತಪಡಿಸುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಕಥನಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ತೊಡಕುಗಳು. ಎಂದೋ ಯಾವುದೋ ಕಾಲಘಟ್ಟದಲ್ಲಿ ನಡೆದಿರಬಹುದಾದ ಕಥನಗಳ ಸಮಕಾಲೀನ ಔಚಿತ್ಯದ ಪ್ರಶ್ನೆ ಒಂದೆಡೆಯಾದರೆ, ಮೂಲ ಕಥನದ ಸಾರಕ್ಕೆ ಚ್ಯುತಿ ಬಾರದಂತೆ ಬದಲಾದ ಮೌಲ್ಯಗಳೊಂದಿಗೆ ಕಥನವನ್ನು ಪ್ರಸ್ತುತಪಡಿಸುವುದು ಇನ್ನೊಂದು ಸವಾಲು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ವಸ್ತುವಿಷಯವನ್ನು ನಿರೂಪಿಸುವ ಕಲೆ ಎಲ್ಲರಿಗೂ ಕರಗತವಾಗಿರುವುದಿಲ್ಲ. ಈ ವಿಚಾರದಲ್ಲಿ ವಿ.ಎಸ್ ಖಾಂಡೇಕರ್ ಅವರ ಯಯಾತಿ ಒಂದು ಪರಿಪೂರ್ಣ ಕೃತಿ. ವೈಯಕ್ತಿಕವಾಗಿ ಶಿವಾಜಿ ಸಾವಂತ್ ಅವರ 'ಮೃತ್ಯುಂಜಯ' ಕೃತಿಯ ನಂತರ ನನ್ನನ್ನು ಅತೀವವಾಗಿ ಕಾಡಿದ ಎರಡನೇಯ ಪೌರಾಣಿಕ ಕಾದಂಬರಿ ಇದು.

ಲೇಖಕರೇ ಸ್ಪಷ್ಟಪಡಿಸಿರುವಂತೆ ಯಯಾತಿ ಒಂದು ಶುದ್ಧ ಪೌರಾಣಿಕ ಕಾದಂಬರಿಯಲ್ಲ. ಮಹಾಭಾರತದ ಒಂದು ಉಪಖ್ಯಾನವನ್ನು ಆಧಾರವಾಗಿಸಿ ಬರೆದ ಸ್ವತಂತ್ರ ಕಾದಂಬರಿ. ಖಾಂಡೇಕರ್ ಅವರ ಯಯಾತಿಯ ಕಥನ ಮೂಲ ಭಾರತದ ಯಯಾತಿಯ ಉಪಖ್ಯಾನಕ್ಕಿಂತ ಬಹಳ ವಿಚಾರಗಳಲ್ಲಿ ಭಿನ್ನವಾಗಿದೆ ಮತ್ತು ಆ ಭಿನ್ನತೆಗಳೇ ಖಾಂಡೇಕರ್ ಅವರ ಯಯಾತಿ ಗೆ ಹೊಸ ಆಯಾಮವನ್ನು ನೀಡಿವೆ ಎಂದರೆ ತಪ್ಪಾಗಲಾರದು.

ಇಡೀ ಕಥೆಯ ಕೇಂದ್ರಬಿಂದು ಹಸ್ತಿನಾಪುರದ ಅರಸ ಯಯಾತಿಯಾದರೂ ಕಥೆ ಮುಂದುವರಿದಂತೆ ದೇವಯಾನಿ, ಕಚ ಹಾಗೂ ಶರ್ಮಿಷ್ಠೆಯ ಪಾತ್ರಗಳು ಯಯಾತಿಗಿಂತಲೂ ಹೆಚ್ಚು ಕಾಡುತ್ತವೆ. ಭೌತಿಕ ವಾಂಛೆಗಳೇ ತುಂಬಿದ ವಿಷಯೋಪಾಸನೆ ಎಂಬ ಕ್ಷಣಿಕ ಸುಖದ ಅಮಲಿನ ಬೆನ್ನು ಬೀಳುವ ಮನುಜ ಹೇಗೆ ಆತ್ಮವಿಹೀನನಾಗಿ ನೈತಿಕ ಅಧಃಪತನದತ್ತ ಜಾರುತ್ತಾನೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸುತ್ತದೆ ಈ ಕಾದಂಬರಿ. ಮೇಲಿನ ನಾಲ್ಕು ಪಾತ್ರಗಳೊಂದಿಗೆ ಯತಿ, ರಾಜಮಾತೆ, ಶುಕ್ರಾಚಾರ್ಯರು, ಅಲಕೆ, ಮುಕುಲಿಕೆ, ಮಾಧವ, ತಾರಿಕೆ, ಮಾಧವಿ, ಮಂದರ, ಪುರು, ಯದು ಮುಂತಾದ ಪಾತ್ರಗಳ ಮೂಲಕ ವಿವಿಧ ವ್ಯಕ್ತಿತ್ವಗಳನ್ನು, ಮನುಜನ ಮನದ ಹಲವು ಭಾವಗಳನ್ನು ಅನಾವರಣಗೊಳಿಸುತ್ತಾ ಸಾಗುವ ಕಥೆ ಬದುಕಿನ ಅಪೂರ್ಣತೆಯನ್ನು, ದೇಹ ಮತ್ತು ಆತ್ಮಗಳ ಸಂಬಂಧವನ್ನು ವಿಶ್ಲೇಷಿಸುತ್ತದೆ.

ಇಲ್ಲಿ ಯಯಾತಿ ಇಂದ್ರಿಯ ನಿಗ್ರಹವಿಲ್ಲದ ಶುದ್ಧ ಲಂಪಟ ಪಲಾಯನವಾದಿ ವ್ಯಕ್ತಿತ್ವದ ಪ್ರತೀಕವಾದರೆ, ದೇವಯಾನಿ ಅಹಂಕಾರ, ದ್ವೇಷ, ಮಾತ್ಸರ್ಯ ಹಾಗೂ ಹಠ ಸ್ವಭಾವದ ಪ್ರತಿರೂಪ. ಇಬ್ಬರೂ ತಮ್ಮ ತಪ್ಪಿಗೆ ಪರಸ್ಪರರನ್ನು ಹೊಣೆಯಾಗಿಸಿಕೊಳ್ಳುತ್ತಾ ಸದಾ ಅಶಾಂತಿ, ಅತೃಪ್ತಿಯಿಂದ ಬೇಯುತ್ತಾರೆ. ಇಲ್ಲಿನ ಶರ್ಮಿಷ್ಠೆ ಅಸೀಮ, ನಿರೀಕ್ಷೆಗಳಿಲ್ಲದ ಒಲವನ್ನು ಉಸಿರಾಗಿಸಿಕೊಂಡಾಕೆ. ತಾಳ್ಮೆ, ತ್ಯಾಗ, ಸಹನೆಯ ಪ್ರತಿರೂಪ. ದೇವಯಾನಿ ಕಚನಂತಹ ಮೇರು ವ್ಯಕ್ತಿತ್ವದ  ಋತ್ವಿಜನ ಸಾನಿಧ್ಯದಲ್ಲಿದ್ದು ಅವನ ಅದಮ್ಯ ಪ್ರೀತಿಗೆ ಪಾತ್ರಳಾದರೂ ಅಸೂಯೆ, ದ್ವೇಷ, ಅಹಂಕಾರ ಮೊದಲಾದ ತಾಮಸ ಗುಣಗಳು ಅವಳಿಂದ ಬೇರ್ಪಡುವುದೇ ಇಲ್ಲ. ಅದೇ ಕಚನ ವಿಚಾರಧಾರೆಗಳಿಂದ ಪ್ರೇರಿತಳಾದ ದಾನವ ರಾಜಕನ್ಯೆ ಶರ್ಮಿಷ್ಠೆ ತನ್ನ ಕುಲ ಬಾಂಧವರ ಒಳಿತಿಗಾಗಿ ದೇವಯಾನಿಯ ದಾಸಿಯಾಗಲು ಹಿಂತೆಗೆಯುವುದಿಲ್ಲ. ಕಚನೊಂದಿಗಿನ ಕೆಲವೇ ಭೇಟಿಗಳಲ್ಲಿ ಅವನ ಆತ್ಮವಿಕಾಸದ ಹಾದಿಯ ಚಿಂತನೆಗಳನ್ನು ಗುರುತಿಸಿ ಅದರಿಂದ ಪ್ರಭಾವಿಳಾಗುತ್ತಾಳೆ ಶರ್ಮಿಷ್ಠೆ.
ಈ ಇಡೀ ಕಥೆಯ ಆತ್ಮದಂತೆ ಶೋಭಿಸುವುದು ಕಚದೇವನ ಪಾತ್ರಪೋಷಣೆ. ಖಾಂಡೇಕರ್ ಅವರು ಕಚನ ಪಾತ್ರವನ್ನು ಮೂಲದಲ್ಲಿ ಇರುವುದಕ್ಕಿಂತಲೂ ಹೆಚ್ಚು ವಿಸ್ತರಿಸಿದ್ದಾರೆ. ಹಾಗೂ ಆ ಪಾತ್ರದ ಮೂಲಕ ಸಮಕಾಲೀನ ಸಮಾಜವನ್ನು ಚಿಂತನೆಗೆ ಹಚ್ಚುವಂತಹ ವಿಚಾರಧಾರೆಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಈ ಪೌರಾಣಿಕ ಕಥೆಯಲ್ಲಿ ನಾವು ಒಂದು ಸಮಕಾಲೀನ ಸಾಮಾಜಿಕ ಆಯಾಮವನ್ನೂ ಗುರುತಿಸಬಹುದಾಗಿದೆ. ಯಯಾತಿಯ ವಿಕ್ಷಿಪ್ತ ಮನಸ್ಥಿತಿಯ ಮುಖಾಂತರ ನಮ್ಮ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿದು ವಾಸ್ತವ ದರ್ಶನ ಮಾಡಿಸಿದಂತೆ ಕಚನ ಮಾತುಗಳ ಮುಖಾಂತರ ಆ ಹುಳುಕುಗಳನ್ನು ಸರಿಪಡಿಸಿ ಆತ್ಮಾನಂದವನ್ನು ಹೊಂದಬಲ್ಲ ಪಾರಮಾರ್ಥಿಕ ಹಾದಿಯ ಬಗ್ಗೆಯೂ ವಿವರಿಸುತ್ತದೆ ಈ ಕಥನ. ಅದೇ ಈ ಕೃತಿಯ ಹೆಗ್ಗಳಿಕೆ. ಕಾದಂಬರಿಯ ಕೊನೆಯಲ್ಲಿ ಲೇಖಕರು ಬರೆದಿರುವ ಹಿನ್ನೆಲೆಯನ್ನು (ಪಾರ್ಶ್ವಭೂಮಿ) ಮೊದಲು ಓದಿ ನಂತರ ಕಥೆಯೊಳಕ್ಕೆ ಇಳಿದರೆ ಇನ್ನಷ್ಟು ಸ್ಪಷ್ಟವಾಗಿ ಯಯಾತಿ, ಕಚ, ಶರ್ಮಿಷ್ಠೆ ಹಾಗೂ ದೇವಯಾನಿಯರು ಅರ್ಥವಾಗುತ್ತಾರೇನೋ ಎಂಬುದು ನನ್ನ ಅನಿಸಿಕೆ. 

ಈ ಕಾದಂಬರಿ ಓದಿದ ನಂತರ ನನ್ನನ್ನು ಬಹುವಾಗಿ ಕಾಡಿದ ಒಂದು ಪ್ರಶ್ನೆ 'ನಹುಷ ಮಹಾರಾಜನ ಮಕ್ಕಳು ಎಂದಿಗೂ ಸುಖವಾಗಿರಲಾರರು' ಎಂಬ ಶಾಪವಿಲ್ಲದೇ ಹೋಗಿದ್ದರೆ ಅಥವಾ ಆ ಶಾಪದ ಬಗ್ಗೆ ಯಯಾತಿಗೆ ಎಂದೂ ತಿಳಿಯದೇ ಹೋಗಿದ್ದರೆ ಆತ ಸಂತೃಪ್ತನಾಗಿರುತ್ತಿದ್ದನೇ ಎಂಬುದು. ನನಗನ್ನಿಸಿದ್ದು ಪ್ರಾಯಶಃ ಆಗಲೂ ಆತ ಅತೃಪ್ತನಾಗಿಯೇ ಉಳಿಯುತ್ತಿದ್ದ. ಕಾರಣ ಆತನ ಅತೃಪ್ತಿಯ ಮೂಲ ಅವನ ಕಡಿವಾಣವಿಲ್ಲದ ವಿಷಯಾಸಕ್ತಿಯೇ ಹೊರತು ಬೇರೇನೂ ಅಲ್ಲ. ಇಲ್ಲವಾದಲ್ಲಿ ತನ್ನ ಸ್ವಂತ ಮಗನ ಯೌವ್ವನದೊಂದಿಗೆ ತನ್ನ ವಾರ್ಧಕ್ಯವನ್ನು ಬದಲಾಯಿಸಿ ಇಂದ್ರಿಯ ಭೋಗವನ್ನು ಅನುಭವಿಸುವ ಯೋಚನೆ ಅವನ ಕನಸಿನಲ್ಲೂ ಕೂಡಾ ಸುಳಿಯುತ್ತಿರಲಿಲ್ಲ. ತಾನೇ ಆಡಿಸಿದ ತಾರಕೆ ಹಾಗೂ ತನ್ನ ಆತ್ಮೀಯ ಗೆಳೆಯನ ವಧು ಮಾಧವಿಯನ್ನೂ ಉಪಭೋಗಿಸುವಷ್ಟು ಮದಿರೆಯೊಳಗೆ ಮೈಮರೆಯುತ್ತಿರಲಿಲ್ಲ ಆತ.
ಒಟ್ಟಿನಲ್ಲಿ ಕ್ಷಣಿಕ ಸುಖ ನೀಡುವ ಭೌತಿಕ ವಿಷಯ ಲೋಲುಪತೆಗೂ ಅನಂತ ಸಂತೃಪ್ತಿ ಪಾಲಿಸುವ ಪಾರಮಾರ್ಥಿಕ ಆತ್ಮಾನಂದಕ್ಕೂ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರ್ಪಡಿಸುವ ಯಯಾತಿ ಆತ್ಮವಿಕಸನದ ದೃಷ್ಟಿಯಿಂದ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ.

ಸೋಮವಾರ, ಜೂನ್ 1, 2020

ಅನೂಹ್ಯ 3

ಮಗ ಮೌನವಾಗಿ ಯೋಚಿಸುತ್ತ ನಿಂತಿದ್ದು ನೋಡಿ "ಕಿಶೋರ, ಅದೇನೇ ಇದ್ದರೂ ಹೇಳು. ಯಾಕಿಷ್ಟು ಯೋಚನೆ?" ಎಂದರು ಸತ್ಯನಾರಾಯಣ.

"ಅದು...... ಅಪ್ಪಾ...., ಅವಳಿಗೆ ಯಾರೂ ಇಲ್ಲ. ಅವಳ ತಂದೆ-ತಾಯಿ ಆಕ್ಸಿಡೆಂಟ್ ಆಗಿ ತೀರಿಕೊಂಡಿದ್ದಾರೆ. ಅವಳು ಇಲ್ಲಿಯವಳಲ್ಲ. ಪಶ್ಚಿಮ ಬಂಗಾಳದವಳು. ಅವಳಪ್ಪ- ಅಮ್ಮ ಹೋದ್ಮೇಲೆ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದು. ಈಗ ಇಲ್ಲೇ ಇದ್ದಾಳೆ. ಇಲ್ಲಿನ ಭಾಷೆ, ರೀತಿ ರಿವಾಜು ಕಲ್ತಿದ್ದಾಳೆ" ಸತ್ಯ-ಸುಳ್ಳು ಎರಡೂ ಬೆರೆಸಿ ಹೇಳಿದವನು ತಾಯಿಯ ಕಡೆ ವಾರೆ ನೋಟ ಹರಿಸಿದ.

"ಬೇಡ ಕಣೋ ಕಿಶೋರ, ಇದು ನಂಗ್ಯಾಕೋ ಸರಿ ಕಾಣ್ತಿಲ್ಲ" ಬಿಕ್ಕುತ್ತಲೇ ನುಡಿದರು ಮಂಗಳಾ. ಅವರು ಬಳಿ ಬಂದು ಅವರ ಕೈ ಹಿಡಿದು, "ಅಮ್ಮಾ, ನವ್ಯಾ ತುಂಬಾ ಒಳ್ಳೆ ಹುಡುಗಿ. ನಿನ್ನ ಸ್ವಂತ ತಾಯಿ ಥರಾ ನೋಡ್ಕೊಳ್ತಾಳೆ. ತುಂಬಾ ಸರಳ ಮೃದು ಸ್ವಭಾವದವಳಮ್ಮ. ಖಂಡಿತ ಎಲ್ಲರಿಗೂ ಹೊಂದಿಕೊಂಡು ಹೊಗ್ತಾಳೆ. ಪ್ಲೀಸ್, ಒಪ್ಕೊ ಅಮ್ಮ" ಅಂದ.

"ಹೌದು ಮಂಗಳಾ, ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಗಾದೆಯೇ ಇಲ್ವಾ. ನನ್ನ ಮಗ ಹಾಗೆಲ್ಲಾ ಯೋಚಿಸದೆ ಹೆಜ್ಜೆ ಇಡೋಲ್ಲ"  ಅಂದ ಗಂಡನ ಮಾತು ಸರಿಯೆನಿಸಿತು ಅವರಿಗೂ. ಆದರೂ ಅಸಮಾಧಾನ ಇದ್ದೇ ಇತ್ತು.

"ಎಲ್ಲಾ ಸರಿ, ಅವಳು ಏನು ಕೆಲಸ ಮಾಡುತ್ತಿದ್ದಾಳೆ? ಇರೋದು ಎಲ್ಲಿ?" ಕೇಳಿದರು ಸತ್ಯನಾರಾಯಣ.

"ನವ್ಯಾ ನಮ್ಮ ಸಮ್ಮು ಕ್ಲೋಸ್ ಫ್ರೆಂಡ್. ಅವಳು ಕೆಲ್ಸ ಮಾಡೋ ಆಸ್ಪತ್ರೆಯಲ್ಲೇ ಅಕೌಂಟ್ ಸೆಕ್ಷನ್ನಲ್ಲಿ ಇದ್ದಾಳೆ. ಆಸ್ಪತ್ರೆ ಹತ್ರ ಒಂದ್ಕಡೆ ಪೇಯಿಂಗ್ ಗೆಸ್ಟ್ ಆಗಿದ್ದಾಳೆ"

ಸಮನ್ವಿತಾ ಫ್ರೆಂಡ್ ಅಂದ ಕೂಡಲೇ ಮಂಗಳಾ ಪೂರ್ತಿ ಮೆತ್ತಗಾದರು. ಸಮನ್ವಿತಾಳಂದರೆ ಆ ಮನೆಯಲ್ಲಿ ಎಲ್ಲರಿಗೂ ಅತೀವ ಅಕ್ಕರೆ. ಕಿಶೋರನಿಗೆ "ಆಶ್ರಯ" NGO ದಲ್ಲಿ ಅವಳ ಪರಿಚಯವಾಗಿತ್ತು. ಅವಳೂ ಅವನಂತೆ ಆಶ್ರಯದ ಸಕ್ರಿಯ ಕಾರ್ಯಕರ್ತೆ. ಶ್ರೀಮಂತ ಉದ್ಯಮಿ ಸತ್ಯಂ ರಾವ್ ರ ಏಕೈಕ ಸಂತಾನ. ವೃತ್ತಿಯಿಂದ ವೈದ್ಯೆ. ಓದಿದ್ದೆಲ್ಲಾ ವಿದೇಶದಲ್ಲಾದರೂ ವೃತ್ತಿಗೆ ತಾಯ್ನಾಡನ್ನೇ ಆಯ್ದುಕೊಂಡವಳು.

ಇಬ್ಬರ ಆಸಕ್ತಿ ಅಭಿರುಚಿ ಒಂದೇ ತೆರನಾಗಿ ಇದ್ದುದರಿಂದ ಆತ್ಮೀಯ ಸ್ನೇಹಿತರಾದರು. ವಾರಕ್ಕೊಮ್ಮೆ ಕಿಶೋರನ ಮನೆಗೆ ವಿಸಿಟ್ ಹಾಕುವುದು ಅವಳ ಅಭ್ಯಾಸ. ಅಷ್ಟು ಶ್ರೀಮಂತ ಮನೆತನವಾದರೂ ಸ್ವಲ್ಪವೂ ಬಿಂಕ ಬಿಗುಮಾನವಿಲ್ಲದ ಹುಡುಗಿ ಮಂಗಳಾಗೆ ಅಚ್ಚುಮೆಚ್ಚು. ಅವಳ ಮಾತೂ ಹಿತ ಮಿತ. ತಮ್ಮಿಬ್ಬರು ಮಕ್ಕಳಿಗಿಂತ ಅವರಿಗೆ ಸಮನ್ವಿತಾಳ ಮೇಲೆಯೇ ಒಂದು ಹಿಡಿ ಪ್ರೀತಿ ಜಾಸ್ತಿ ಎಂದರೆ ತಪ್ಪಲ್ಲ.

ಇಂತಿಪ್ಪ ಸಮನ್ವಿತಾಳ ಸ್ನೇಹಿತೆ ಅಂದ್ರೆ ಹುಡುಗಿ ಒಳ್ಳಯವಳೇ ಇರ್ಬೇಕು ಅಂದುಕೊಂಡವರ ಮನ ನಿರಾಳವಾಯಿತು. ತಾಯ್ತಂದೆಯರು ಇಲ್ಲವಾದರೇನು, ಬೇರೆ ಪ್ರದೇಶದವಳಾದರೇನು.... ಹುಡುಗಿಯ ಗುಣ ನಡತೆ ಉತ್ತಮವಾಗಿದ್ದು ನಮಗೆ ಹೊಂದಿಕೊಂಡರೆ ಸಾಕೆಂದು ನಿರ್ಧರಿಸಿಬಿಟ್ಟಿದ್ದರು.

ಮರುದಿನ ಕಿಶೋರ್ ಮತ್ತು ಸಮನ್ವಿತಾಳ ಜೊತೆಗೆ ಬಂದ ನವ್ಯಾಳನ್ನು ನೋಡಿ ಅವರ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಗಿತ್ತು.  ಅವಳ ನಿಷ್ಕಲ್ಮಶ ಮುಖ, ಮೆದುಮಾತು ಅವರಿಗೆ ಹಿಡಿಸಿತ್ತು. ಆ ಕಣ್ಣಿನಾಳದಲ್ಲಿ ಅವ್ಯಕ್ತ ನೋವೊಂದು ಹೆಪ್ಪುಗಟ್ಟಿದಂತಿತ್ತು. ತಾಯ್ತಂದೆಯರನ್ನು ಕಳೆದುಕೊಂಡ ಆಘಾತಕ್ಕಿರಬಹುದೆಂದು ಊಹಿಸಿದ್ದರು. ಮೃದುವಾಗಿ ತಲೆ ಸವರಿದ್ದರು.

"ಅಮ್ಮ, ನನಗೆ ಫ್ರೆಂಡ್ಸ್ ಅಂತ ಇರೋದು ಇವರಿಬ್ರೇ. ನವ್ಯಾ ಖಂಡಿತ ಈ ಮನೆಗೆ ಒಳ್ಳೇ ಸೊಸೆ ಆಗ್ತಾಳೆ. ನನ್ನ ಮಾತಿನ ಮೇಲೆ ನಂಬಿಕೆ ಇಡಿ" ಸಮನ್ವಿತಾ ಅವರ ಕೈ ಹಿಡಿದು ಹೇಳಿದ್ದಳು.

ಅದೇ ತಿಂಗಳಿನಲ್ಲಿ ಸರಳವಾಗಿ ಕಿಶೋರ-ನವ್ಯಾ ವಿವಾಹ ನೆರವೇರಿತು. ಕಿಶೋರನ ಮನದನ್ನೆಯಾಗಿ, ಮಂಗಳಾ- ಸತ್ಯನಾರಾಯಣ ಅವರ ಮುದ್ದಿನ ಸೊಸೆಯಾಗಿ, ಕಾರ್ತಿಕ್ ನ ಅಕ್ಕರೆಯ ಅತ್ತಿಗೆಯಾಗಿ‌ ಆ ಮನೆ ಹೊಕ್ಕಿದ್ದಳು ನವ್ಯಾ.

ಅಂದಿನಿಂದ ಅವಳಿಲ್ಲದೆ ಆ ಮನೆಯಲ್ಲಿ ಯಾವ ಕೆಲಸವೂ ಆಗದು ಅನ್ನುವಷ್ಟು ಆವರಿಸಿಕೊಂಡಳು. ಅವಳ ಮೆಲು ಮಾತು, ಹಿರಿಯರ ಬಗೆಗಿನ ಕಾಳಜಿ ಮಂಗಳಾರಿಗೆ ಬಲು ಹಿಡಿಸಿತ್ತು. 'ಯಾವ ಪುಣ್ಯಾತ್ಗಿತ್ತೀ ಹೆತ್ತ ಮಗಳೋ, ಮಹಾಲಕ್ಷ್ಮೀ ಥರಾ ನಮ್ಮನೆಗೆ ಬಂದಿದ್ದಾಳೆ. ನಾವು ಜನ್ಮ ಪೂರ್ತಿ ಹುಡುಕಿದರೂ ಇಂಥ ಸೊಸೆ ಸಿಗ್ತಿರ್ಲಿಲ್ಲ. ಕಿಶೋರ ಪುಣ್ಯ ಮಾಡಿದ್ದ' ಅಂತ ದೇವರಿಗೆ ಕೈ ಮುಗಿಯತ್ತಿದ್ದರು.

ಕಾರ್ತಿಕ್ ಗಂತೂ ಅತ್ತಿಗೆ ಎಂದರೆ ಅಚ್ಚುಮೆಚ್ಚು. ಅಪ್ಪ ಅಮ್ಮನೊಂದಿಗೆ ಹರಟಲು ಅವನಿಂದಾಗದು. ಇನ್ನು ಇಡೀ ಮನೆಯಲ್ಲಿ ಅವನು ಹೆದರೋದು ಕಿಶೋರನಿಗೆ. ಅವನ ಬಳಿ ಸಲಿಗೆ ಕಡಿಮೆ. ಹಾಗಾಗಿ ನವ್ಯಾಳೆ ಅವನಿಗೆ ವಾಕಿಂಗ್ ನಿಂದ ಹಿಡಿದು ಹರಟೆ ಹೊಡೆಯುವ ತನಕ ಜೊತೆಗಾತಿ.

********************

ವಾಕಿಂಗ್ ಮುಗಿಸಿ ನವ್ಯಾ, ಕಾರ್ತಿಕ್ ಮನೆಗೆ ಹಿಂದಿರುಗಿದಾಗ ಕತ್ತಲಾಗಿತ್ತು. ಮಂಗಳಾ ಅಡುಗೆ ಕೆಲಸದಲ್ಲಿ ಇದ್ದದ್ದು ಕಂಡು ನವ್ಯಾ ಅತ್ತ ಕಡೆ ಹೋದಳು. ರೂಮಿಗೆ ಹೂರಟ ಕಾರ್ತಿಕ್ ನ ಹಾಲ್ ನಲ್ಲಿದ್ದ ಕಿಶೋರ ಕರೆದು ಪಕ್ಕದಲ್ಲಿ ಕೂರಿಸಿಕೊಂಡ.

"ಹೇಗೆ ನಡಿತಿದೆ ಕಾಲೇಜು? ನೀನು ಓದಿನ ಕಡೆ ಗಮನ ಕೊಡ್ತಾ ಇಲ್ಲಾ ಅಂತ ಅಮ್ಮ ಅಂತಿದ್ರು" ಎಂದು ಕೇಳಿದ.

"ಹಾಗೇನೂ ಇಲ್ಲ ಅಣ್ಣ. ಮುಂದಿನ ವಾರ ಕಾಲೇಜ್ ಡೇ. ಅದ್ರ ಪ್ರಾಕ್ಟೀಸ್ ನಡೀತಿದೆ. ಹಾಗಾಗಿ ಕ್ಲಾಸ್ ಇರೋಲ್ಲ ಅಷ್ಟೇ" ಎಂದ ಮನದಲ್ಲೇ ಅಮ್ಮನಿಗೆ ಬೈಯುತ್ತಾ.

"ನೋಡು ಕಾರ್ತಿ, ಈ ವಯಸ್ಸಲ್ಲಿ ಸುತ್ತಾಟ, ಹುಡುಗಾಟದಲ್ಲಿ ಆಸಕ್ತಿ ಜಾಸ್ತಿ ಇರೋದು ಸಹಜ. ಆದರೆ ಎಲ್ಲವೂ ಒಂದು ಮಿತಿಯಲ್ಲೇ ಇರಲಿ. ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ" ಅಂದಾಗ ತಲೆ ತಗ್ಗಿಸಿದ.

"ಸರಿಯಾಗಿ ಕೇಳು ಅವನನ್ನು.ನಾನು ಕೇಳಿದ್ರೆ ನಿಂಗಿದೆಲ್ಲ ಅರ್ಥ ಆಗೋಲ್ಲ ಸುಮ್ನಿರು ಅಂತ ಬಾಯಿ ಮುಚ್ಸ್ತಾನೆ" ಸಾರಿನ ಪಾತ್ರೆಯನ್ನು ಡೈನಿಂಗ್ ಟೇಬಲ್ ಮೇಲೆ ಇಡುತ್ತಾ ಗೊಣಗಿದರು ಮಂಗಳಾ.

"ಮಾತೃಶ್ರೀ ಮಂಗಳಮ್ಮನೋರೇ, ಅದನ್ನು generation gap ಅಂತಾರೆ" ಕಾರ್ತಿಕ್ ನಾಟಕೀಯವಾಗಿ ಹೇಳಿದ.

"ನೀನೋ, ನಿನ್ನ ಇಂಗ್ಲೀಷೋ, ನನಿಗೆ ಒಂದೂ ಅರ್ಥ ಆಗಲ್ಲಪ್ಪ" 

"ನಿನಗೆ ತುಂಬಾ ವಯಸ್ಸಾಗಿದೆ, ಓಲ್ಡ್ ಮಾಡೆಲ್, ಶಿಲಾಯುಗದ ಕಾಲದೋಳು ಅಂತ ನಿನ್ ಮಗ ಹೇಳ್ತಿದ್ದಾನೆ ಕಣೇ" ಸತ್ಯನಾರಾಯಣ ಕಾಲೆಳೆದಾಗ ಎಲ್ಲರೂ ನಕ್ಕರು.

"ನೀವೊಬ್ರು ಬಾಕಿ ಇದ್ರಿ ಇವನ ಕಪಿಸೇನೆಲಿ" ನಸುಮುನಿದವರು "ಈ ಮನೆಗೊಂದು ಪುಟ್ಟ ಕಂದ ಬಂದು ನಾನು ಅಜ್ಜಿ ಆಗೋವರೆಗೂ ನನಿಗೆ ವಯಸ್ಸಾಗಿದೆ ಅಂತ ನಾನು ಒಪ್ಪಿಕೊಳ್ಳೊಲ್ಲ" ಅಂದವರ ಮಾತನ್ನು ಸತ್ಯನಾರಾಯಣ, ಕಾರ್ತಿಕ್ ಅನುಮೋದಿಸಿದರು.

"ಸರಿ ಸರಿ, ಮಾತು ಜಾಸ್ತಿ ಆಯ್ತು. ಎಲ್ಲಾ ಊಟಕ್ಕೇಳಿ" ಮಂಗಳಾ ಅಂದಾಗ ಸತ್ಯನಾರಾಯಣ, ಕಾರ್ತಿಕ್ ಎದ್ದರು.

ಕಿಶೋರ್ ಮೆಲ್ಲನೆ ಮಡದಿಯತ್ತ ನೋಟ ಹರಿಸಿದ. ಕೃತಕ ನಗು ಮೊಗದಲ್ಲಿ ಹರಡಿ ನಿಂತಿದ್ದವಳ ಮನದ ಭಾವನೆಗಳನ್ನು ಅಳೆಯಲಾಗಲಿಲ್ಲ ಅವನಿಗೆ.‌

ಮುಂದುವರೆಯುವುದು