ಭಾನುವಾರ, ಮಾರ್ಚ್ 17, 2024

ಪ್ರೊ. ಬಿ ಎ ವಿವೇಕ್ ರೈ ಎಂಬ ಸಾಹಿತ್ಯಪಾಕ ಬಾಣಸಿಗ

ಇಂದು ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಜಯಂತ್ ಕಾಯ್ಕಿಣಿ ಅವರ "ತಾರಿ ದಂಡೆ" ಹಾಗೂ ಪ್ರೊ. ಬಿ. ಎ. ವಿವೇಕ್ ರೈ ಅವರ "ಬದುಕು ಕಟ್ಟಿದ ಬಗೆಗಳು" ಎಂಬ ಎರಡು ಹೊತ್ತಿಗೆಗಳ ಅನಾವರಣ ಕಾರ್ಯಕ್ರಮವಿತ್ತು. ಕಾಯ್ಕಿಣಿ ಅವರ ಕಾರ್ಯಕ್ರಮಕ್ಕಾಗಿ ಹತ್ತಿರತ್ತಿರ ಒಂದು ವರ್ಷದಿಂದ ಕಾಯುತ್ತಿದ್ದುದು ಸತ್ಯವಾದರೂ ಅಂಕಿತದವರ ಕರೆಯೋಲೆಯಲ್ಲಿ ವಿವೇಕ್ ರೈ ಅವರ ಹೆಸರನ್ನು ಕಂಡು ಖುಷಿ ದ್ವಿಗುಣಗೊಂಡಿದ್ದು ಸತ್ಯ. ಆದರೆ ದುರದೃಷ್ಟವಶಾತ್ ಆರೋಗ್ಯದ ಕಾರಣದಿಂದಾಗಿ ರೈಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂಬುದು ತಿಳಿದಾಗ ನಿರಾಸೆಯಾಗಿದ್ದಂತೂ ಹೌದು. ಆದರೂ ಈ ಕೃತಿಯ ಕುರಿತಾಗಿ ಹಾಗೂ ರೈ ಅವರ ಕುರಿತಾಗಿ ಹಿರಿಯ ಸಾಹಿತಿ ನಾ ದಾಮೋದರ ಶೆಟ್ಟಿಯವರು ಕಟ್ಟಿಕೊಟ್ಟ ಸೊಗಸಾದ ಪ್ರಾಸ್ತಾವಿಕ ನುಡಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀಯುತರ ಅನನ್ಯ ಕೊಡುಗೆಗಳನ್ನು ಸ್ಮರಿಸಲು ವೇದಿಕೆಯಾಯಿತು. 

ವಿವೇಕ್ ರೈ ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಂಪಾದಕರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಸಾರಾಂಗದ ಮುಖ್ಯಸ್ಥರಾಗಿ ಮಾಡಿರುವ ಸಾಹಿತ್ಯ ಸೇವೆ ಅನನ್ಯ. ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪರಿಮಿತ ಒಲವಿದ್ದೂ ಹತ್ತು ಹಲವು ಕಾರಣಗಳಿಂದಾಗಿ ಐಚ್ಛಿಕ ಕನ್ನಡವನ್ನು ಅಧ್ಯಯನ ಮಾಡಲಾಗದೇ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರದಂತಹ ವ್ಯಾವಹಾರಿಕ ವಿಷಯಗಳನ್ನು ಉನ್ನತ ಶಿಕ್ಷಣದಲ್ಲಿ ಆಯ್ಕೆ ಮಾಡಿಕೊಂಡ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಲ್ಲೂ ಸಾಹಿತ್ಯದೊಲುಮೆ ಮುಕ್ಕಾಗದಂತೆ ಕಾಪಿಟ್ಟಿದ್ದು ಇದೇ ವಿವೇಕ್ ರೈ ಅವರ ಸಂಪಾದಿತ ಕನ್ನಡ ಭಾಷಾ ಪಠ್ಯಪುಸ್ತಕಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮೈನರ್ ಕನ್ನಡ ವಿದ್ಯಾರ್ಥಿಗಳಾಗಿದ್ದರೂ ನಾವು ಅಭ್ಯಸಿಸಿದ ಪ್ರಸಾರಾಂಗದ ಕನ್ನಡ ಪಠ್ಯಗಳು ಮೇಲ್ಪಂಕ್ತಿಯವು.

ಹಳಗನ್ನಡ ಗದ್ಯ ಪದ್ಯಗಳಿಂದ ಹಿಡಿದು ಆಧುನಿಕ ಕಾಲಘಟ್ಟದ ತನಕದ ಕಾವ್ಯ ಪ್ರಕಾರ ನಡೆದು ಬಂದ ಹಾದಿಗೆ ಕೈಪಿಡಿಯಂತಿದ್ದ "ಕಡಲ ಸಿರಿ" ಹಾಗೂ "ಬನದ ಸಿರಿ" ಅವಳಿಗಳು, ಕನ್ನಡದ ಆಯ್ದ ಅದ್ಬುತ ಪ್ರಬಂಧಗಳ ಸಂಕಲನವಾದ "ಅಬ್ಬಲಿಗೆ", ಮನುಜನ ಅಂತರಾಳದ ಸರ್ವ ಭಾವಗಳನ್ನು ಬಟಾಬಯಲಲ್ಲಿ ಅನಾವರಣಗೊಳಿಸುವಂತಹ "ಬದುಕು ಭಾವದ ಕಥೆಗಳು" ಎಂಬ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಸಣ್ಣ ಕಥೆಗಳ ಸಂಕಲನ, ವ್ಯಾವಹಾರಿಕ ಕನ್ನಡಕ್ಕೊಂದು ದಾರಿದೀಪದಂತಿದ್ದ "ಸಂವಹನ ಕನ್ನಡ", ಕಾಳಿದಾಸನ ಶ್ರೇಷ್ಠ ನಾಟಕಗಳಲ್ಲೊಂದಾದ "ಮಾಲವಿಕಾಗ್ನಿಮಿತ್ರ", ಕೊಡಗಿನ ಶ್ರೇಷ್ಠ ವೀರನ ಸಮಗ್ರ ಜೀವನ ಚಿತ್ರಣ ನೀಡುವ"ಕಲ್ಯಾಣ ಸ್ವಾಮಿ" ಕಾದಂಬರಿ........ ಹೀಗೆ ಒಂದಕ್ಕಿಂತ ಒಂದು ಅಮೋಘವಾದ ಸಾಹಿತ್ಯ ಕೃತಿಗಳ ಸಾರಾಮೃತವನ್ನು ಹೀರಿ ಸಾಹಿತ್ಯದ ರುಚಿಯನ್ನು ನೆತ್ತಿಗೇರಿಸಿದ್ದು ಇದೇ ವಿವೇಕ್ ರೈ ಅವರು ಮುಖ್ಯಸ್ಥರಾಗಿದ್ದ ನಮ್ಮ ನೆಚ್ಚಿನ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಸಾರಾಂಗ. ಇಂದಿಗೂ ಹಳೆಯ ದಿನಗಳ ನೆನಪಾದಾಗ ಇವೇ ಪಠ್ಯಪುಸ್ತಕಗಳು ನನ್ನ ಗ್ರಂಥಾಲಯದಿಂದ ಹೊರಬರುವುದುಂಟು. ಪ್ರಾಯಶಃ ನನ್ನ ಪುಟ್ಟ ಗ್ರಂಥಾಲಯದ ತಳಪಾಯದ ಸ್ತಂಭಗಳು ಈ ಪುಸ್ತಕಗಳೇ. ಇಂದು ನಾದಾ ಅವರ ಮಾತುಗಳನ್ನು ಕೇಳುತ್ತಿದ್ದಾಗ ಎಲ್ಲಾ ಹಳೆಯ ನೆನಪುಗಳೂ ಮತ್ತೆ ತಾಜಾಗೊಂಡತಹ ಭಾವ.....

ವಿಶ್ವವಿದ್ಯಾನಿಲಯದ ದ್ವಿಭಜನೆ, ತ್ರಿಭಜನೆಗಳೆಂಬ ದೊಂಬರಾಟದಲ್ಲಿ ಪ್ರಸಾರಾಂಗಗಳೇ ಇಲ್ಲದೇ ಆನ್ಲೈನ್ ಪ್ರಿಂಟ್ಔಟ್ ಗಳ ಮೂಲಕ ಓಡುತ್ತಿರುವ ಇಲ್ಲಿನ ವಿಶ್ವವಿದ್ಯಾಲಯಗಳ ಭಾಷಾ ವಿಭಾಗಗಳ ಪಾಡು ನೋಡುವಾಗ ಇಂದಿನ ವಿದ್ಯಾರ್ಥಿಗಳ ಪರಿಸ್ಥಿತಿ ನೆನೆದು ಖೇದವೆನಿಸುತ್ತದೆ. ಸಾಹಿತ್ಯೇತರ ವಿಭಾಗದ ವಿದ್ಯಾರ್ಥಿಗಳಲ್ಲೂ ಸಾಹಿತ್ಯದ ಹುಕಿ ಹಚ್ಚುವಲ್ಲಿ ಪ್ರಸಾರಾಂಗಗಳ ಪಾತ್ರ ಬಲು ಹಿರಿದು. ಇಲ್ಲಿನ ವಿದ್ಯಾರ್ಥಿಗಳು ಆ ಅದೃಷ್ಟದಿಂದಲೇ ವಂಚಿತರಾಗುತ್ತಿದ್ದಾರೆ. ಮೊದಲೇ ಪರೀಕ್ಷೆಗಾಗಿ, ಅಂಕಗಳಿಗಾಗಿ ಓದು ಎನ್ನುವಷ್ಟು ಮಟ್ಟಿಗೆ ವ್ಯವಹಾರೀಕರಣಗೊಂಡು ಯಾಂತ್ರೀಕೃತವಾಗಿ ಕೂತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಗ್ರಂಥಾಲಯದಲ್ಲಿನ ಸಾಹಿತ್ಯ ಕೃತಿಗಳು ಧೂಳಿನ ಪರದೆಯಲ್ಲಿ ಅಡಗುತ್ತಿರುವ ಈ ಸಂದರ್ಭದಲ್ಲಿ, ಪ್ರಸಾರಾಂಗಗಳೂ ನಾಪತ್ತೆಯಾದರೆ ಆನ್ಲೈನ್ ವೇದಿಕೆಗಳಲ್ಲಿನ ಹಸಿಬಿಸಿ ದೊಂಬರಾಟದ 'ಬಹುಜನಪ್ರಿಯ' ಮಸಾಲೆಗಳೇ ನಾಳಿನ ಪೀಳಿಗೆಗೆ ಸಾಹಿತ್ಯವಾಗುವ ಅಪಾಯ ತಪ್ಪಿದ್ದಲ್ಲ. ಪಠ್ಯದ ಹೊರತಾದ ಒಂದು ಅಕ್ಷರವನ್ನೂ ಎದೆಗೇರಿಸಿಕೊಳ್ಳಲು ಆಸಕ್ತಿ ತೋರದ ಯುವವರ್ಗವೊಂದನ್ನು ಕಣ್ಣೆದುರೇ ಕಾಣುತ್ತಿರುವ ನನ್ನಂತಹವಳ ಮಟ್ಟಿಗೆ ರೈ ಅವರು ರುಚಿಕಟ್ಟಾದ ಸಾಹಿತ್ಯಪಾಕದ ರುಚಿ ಹತ್ತಿಸುವ ಬಾಣಸಿಗನಂತೆ ಮನಕ್ಕೆ ಅತ್ಯಾಪ್ತರು. ಸಾಹಿತ್ಯ ಎಂದಾಗಲೆಲ್ಲ ಜಿಹ್ವೆ ಸದಾ ನೆನಸುವ ಅಮ್ಮನ ಕೈರುಚಿಯ ಸ್ವಾದ ಒಸರುವ ಒರತೆಯಂತೆ ನೆನಪಾಗುವವರು ಪ್ರೊ. ಬಿ. ಎ. ವಿವೇಕ್ ರೈ.

ನನ್ನ ನೆನಹುಗಳನ್ನು ತಾಜಾಗೊಳಿಸಿದ ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಹಾಗೂ ಪ್ರಭಾ ಕಂಬತ್ತಳ್ಳಿ ದಂಪತಿಗಳಿಗೆ ಅನಂತ ಧನ್ಯವಾದಗಳು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ