ಶುಕ್ರವಾರ, ಜೂನ್ 26, 2020

ಭಿನ್ನ...... the broken are different

#spoiler_alert 


ಜೂಲಿಯಸ್ ಸೀಜ಼ರ್ ನ Vini vidi vici…… ಅನ್ನುವ ಪ್ರಖ್ಯಾತ ಲ್ಯಾಟಿನ್ ಉಕ್ತಿಯನ್ನು ಕನ್ನಡಿಗರ ನಾಲಿಗೆತುದಿಯಲ್ಲಿ ಮೆರೆಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ 'ಶರಪಂಜರ'. ಕಲ್ಪನಾ ಎಂದರೆ 'ನಾ ಬಂದೆ, ನಾ ನೋಡ್ದೆ, ನಾ ಗೆದ್ದೇ' ಎಂದು ಉನ್ಮಾದದಿಂದ ಬಡಬಡಿಸುವ ಕಾವೇರಿಯೇ ಮೊದಲು ನೆನಪಾಗುವುದು. ಅಂತಹ ಕ್ಲಾಸಿಕ್ ಚಿತ್ರದ ಮೂಲ ಎಳೆಯಿಂದ ಸ್ಪೂರ್ತಿ ಪಡೆದು ಅದಕ್ಕೊಂದು ಬೇರೆಯದೇ ಆಯಾಮವನ್ನು ನೀಡಿರುವ ಸಿನಿಮಾ 'ಭಿನ್ನ'. 

'The broken are different' ಎಂಬ ವಿಶಿಷ್ಟ ಅಡಿಬರವನ್ನು ಹೊಂದಿರುವ 'ಭಿನ್ನ' ಹೆಸರಿನಷ್ಟೇ ವಿಭಿನ್ನವಾದ ಸಿನಿಮಾ. ತಮ್ಮ ಮೊದಲ ಚಿತ್ರದಲ್ಲಿ ವಾಸ್ತವಿಕ ಘಟನೆಗಳನ್ನು ಸಮಯದ ಸೂತ್ರದಲ್ಲಿ ಪೋಣಿಸಿ ಕುತೂಹಲ ಕೆರಳಿಸಿದ್ದ ನಿರ್ದೇಶಕರು ಈ  ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನೋಡುಗರನ್ನು ಭಯಗೊಳಿಸಿ ಬೆಚ್ಚಿಬೀಳಿಸುತ್ತಲೇ ನಮ್ಮ ಕಲ್ಪನೆಯ ಪಕ್ಷಿಗೆ ರೆಕ್ಕೆ ತೊಡಿಸಿದ್ದಾರೆ.

ಮೇಲ್ನೋಟಕ್ಕೆ ತನ್ನ ಬದುಕಿನಲ್ಲಿ ಘಟಿಸಿದ ಘಟನೆಗಳಿಂದ ಖಿನ್ನತೆಯ ಕೂಪಕ್ಕೆ ಜಾರಿ, ವಾಸ್ತವ ಹಾಗೂ ಭ್ರಮೆಯ ನಡುವಿನ ಅಂತರ ಗುರುತಿಸಲಾಗದೇ ತೊಳಲಾಡುವ ಮಹಿಳೆಯೊಬ್ಬಳ ಮನೋವಲಯವನ್ನು ಕೇಂದ್ರವಾಗಿಸಿಕೊಂಡ ಕಾಣುವ ಈ ಸಿನಿಮಾದ ಆಂತರ್ಯ ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದುದು. ಈ ಸಂಕೀರ್ಣತೆಗೆ ಮುಖ್ಯ ಕಾರಣ ಚಿತ್ರದ ನಿರೂಪಣೆ. ಇಡೀ ಚಿತ್ರದಲ್ಲಿ ವಾಚ್ಯವಾಗದೇ ಸೂಚ್ಯವಾಗಿಯೇ ಉಳಿದ ಹಲವು ವಿಚಾರಗಳಿವೆ. ಆ ಸಂಗತಿಗಳ ಬಗ್ಗೆ ಒಂದಿಷ್ಟು ಸುಳಿವುಗಳನ್ನು ಮಾತ್ರ ಬಿಟ್ಟುಕೊಟ್ಟು ನಿರ್ಧಾರವನ್ನು ವೀಕ್ಷಕರಿಗೇ ಬಿಟ್ಟಿದ್ದಾರೆ. ಆ ಕಾರಣದಿಂದಲೇ ಸಾಮಾನ್ಯವಾಗಿ ಎಲ್ಲವನ್ನೂ ವಾಚ್ಯವಾಗಿಯೇ ನೋಡಿ ಅಭ್ಯಾಸವಿರುವ ನೋಡುಗರಿಗೆ 'ಭಿನ್ನ' ಅಸಂಪೂರ್ಣ ಎನಿಸಲೂಬಹುದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸದೇ ಸಂಪೂರ್ಣ ಗಮನದಿಂದ ಚಿತ್ರವನ್ನು ನೋಡಿ ಸನ್ನಿವೇಶಗಳನ್ನು ಒಂದಕ್ಕೊಂದು ಹೊಂದಿಸಿಕೊಂಡರೆ ಮಾತ್ರವೇ 'ಒಡೆದ ಚೂರುಗಳು ಭಿನ್ನ ಏಕೆ' ಎನ್ನುವ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರಕುತ್ತದೆ‌.

ಸ್ಕ್ರಿಜೋಫೇನಿಯಾದಿಂದ ಬಳಲುತ್ತಿದ್ದ ಕಾವೇರಿ ಆತ್ಮಹತ್ಯೆಯ ಪ್ರಯತ್ನ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವಳಿಗೆ ಆರಂಭಿಕ ಚಿಕಿತ್ಸೆ ನೀಡುವ ವೈದ್ಯರು ಇದು ಆತ್ಮಹತ್ಯೆ ಯತ್ನವಾದ ಕಾರಣ ಪೋಲಿಸರಿಗೆ ವಿಚಾರ ತಿಳಿಸಿ ನಿಯಮಗಳನ್ನು ಆಕೆಯನ್ನು ಸರ್ಕಾರಿ ನಿಯೋಜಿತ ಮನೋವೈದ್ಯರ ಬಳಿಗೆ ಕಳಿಸುತ್ತಾರೆ. ಆ ಮನೋವೈದ್ಯರು ಅವಳ ಪತಿ ಸತೀಶನ ಬಳಿ ಕಾವೇರಿಯನ್ನು ಭೇಟಿಯಾಗುವ ಮೊದಲು ಅವಳ ಬಗ್ಗೆ ಚೆನ್ನಾಗಿ ತಿಳಿದಿರುವ, ಅವಳಿಗೆ ಆಪ್ತರಾಗಿದ್ದ ಕೆಲ ವ್ಯಕ್ತಿಗಳೊಂದಿಗೆ ಮಾತನಾಡಬೇಕೆಂಬ ಬೇಡಿಕೆಯನ್ನಿಡುತ್ತಾರೆ. ಹಾಗೆ ಅವರನ್ನು ಭೇಟಿಯಾಗುವ ಮೋಹನ್ - ವಿಮಲಾ ದಂಪತಿ ಹಾಗೂ ಖುದ್ದು ಸತೀಶ್ ವೈದ್ಯರಿಗೆ ಕಾವೇರಿಯ ಬದುಕಿನ ಬಗ್ಗೆ ಹೇಳುವ ಮೂಲಕ ನೋಡುಗರೆದುರು ಅವಳ ಸಂಕ್ಷಿಪ್ತ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅವಳ ಶೋಷಿತ ಬಾಲ್ಯ, ಅವಳೆಡೆಗಿನ ಸತೀಶನ ನಿರ್ಲಕ್ಷ್ಯ, ಗರ್ಭಪಾತದ ನಂತರ ಅವಳನ್ನಾವರಿಸುವ ಖಿನ್ನತೆ, ವಿಮಲಾಳೊಂದಿಗಿನ ಸತೀಶನ ವಿವಾಹೇತರ ಸಂಬಂಧ, ಮೋಹನ್ ಹಾಗೂ ಕಾವೇರಿಯ ನಡುವಿನ ಸಂಬಂಧ….. ಹೀಗೆ ಕಾವೇರಿಯ ಬದುಕಿನ ಹಲವು ಚದುರಿದ ಅಸ್ಪಷ್ಟ ಚಿತ್ರಗಳನ್ನು ಈ ಆರಂಭಿಕ ಸನ್ನಿವೇಶದಲ್ಲಿ ಸುಳಿವಿನಂತೆ ನೀಡುವ ಮೂಲಕ ಚಿತ್ರ ನೋಡುಗರನ್ನೂ ತನ್ನೊಳಗೆ ಸೆಳೆದುಕೊಳ್ಳಲು ತಯಾರಾಗುತ್ತದೆ. ಇತ್ತ ವಿಶುವಲ್ ಸೈಕೋ ಡ್ರಾಮಾ ಥೆರಪಿಯೊಂದಿಗೆ ಕಾವೇರಿಗೆ ಚಿಕಿತ್ಸೆ ಆರಂಭವಾಗುವುದರೊಟ್ಟಿಗೆ ಕಥೆ ಕಾವೇರಿಯ ಕೆಲ ಸಮಯದ ಹಿಂದಿನ ಬದುಕಿನೊಳಗೆ ಸಾಗುತ್ತದೆ.


ಕಾವೇರಿ ಮೆಥೆಡ್ ಆಕ್ಟಿಂಗ್ ಬಗ್ಗೆ ವಿಶೇಷ ಒಲವುಳ್ಳ ಉದಯೋನ್ಮುಖ ನಟಿ. ಬದುಕಿನ ಜಂಜಡಗಳಿಂದ ಬೇಸತ್ತಾಗ ಬೈಕಿನಲ್ಲಿ ಸೋಲೋ ರೈಡ್ ಹೋಗುವುದು ಅವಳ ಹವ್ಯಾಸ. ತನ್ನ ಮುಂದಿನ ಚಿತ್ರದ ನಿರ್ದೇಶಕರಿಂದ ತನ್ನ ಪಾತ್ರದ ಸ್ಕ್ರಿಪ್ಟ್ ಪಡೆದುಕೊಳ್ಳುವ ಕಾವೇರಿ ಅದನ್ನೋದಿ ಪಾತ್ರಕ್ಕೆ ತಯಾರಿ ನಡೆಸಲು ಸೋಲೋ ಟ್ರಿಪ್ ಗೆ ಹೊರಡುತ್ತಾಳೆ. ನಗರದ ಬಿಡುವಿರದ ಗೌಜಿನಿಂದ ದೂರ ಪ್ರಕೃತಿಯ ಮಡಿಲಲ್ಲಿನ ಒಂದು ಮನೆಯಲ್ಲಿ ಉಳಿದುಕೊಳ್ಳುವ ಅವಳು ಸ್ಕ್ರಿಪ್ಟ್ ಅನ್ನು ಓದಲು ತೊಡಗುತ್ತಾಳೆ. ಈ ಹಂತದಿಂದ ಚಿತ್ರದ ಗತಿ ಬದಲಾಗುತ್ತದೆ. 

ಸ್ಕ್ರಿಪ್ಟ್ ಓದತೊಡಗಿದಂತೆ ಕಾವೇರಿಗೆ ಅದರಲ್ಲಿನ ಕಥೆಗೂ ತನ್ನ ನೈಜ ಬದುಕಿಗೂ ಸಾಮ್ಯತೆ ಕಾಣುತ್ತದೆ. ಕ್ರಮೇಣ ತನ್ನನ್ನೇ ಕಥೆಯೊಳಗಿನ ಮುಖ್ಯಪಾತ್ರ ದೇವಕಿಯಾಗಿ, ಸತೀಶ್, ಮೋಹನ್ ಹಾಗೂ ವಿಮಲಾರನ್ನು ಉಳಿದ ಮೂರು ಪಾತ್ರಗಳಾಗಿ ಭ್ರಮಿಸತೊಡಗುವ ಕಾವೇರಿಯೊಂದಿಗೆ ನಾವೂ ಕೂಡಾ ಯಾವುದು ಭ್ರಮೆ ಯಾವುದು ವಾಸ್ತವ ಎಂಬುದನ್ನು ಗುರುತಿಸಲಾಗದೇ ಹೋಗುತ್ತಿದ್ದೇವೆ ಎನ್ನಿಸತೊಡಗುತ್ತದೆ. ಕಾವೇರಿ ಉಳಿದುಕೊಂಡಿರುವ ಮನೆ ಹಾಗೂ ಸ್ಕ್ರಿಪ್ಟಿನೊಳಗಣ ಕಥೆ ನಡೆಯುವ ಮೋಹನನ ಮನೆಯ ನಡುವೆ ಹಠಾತ್ತನೆ ಬದಲಾಗುವ ದೃಶ್ಯಗಳು, ಹಾಗೆ ಬದಲಾದ ದೃಶ್ಯಗಳಲ್ಲಿರುವ ಕಂಟಿನ್ಯೂಯಿಟಿ ನಿಜಕ್ಕೂ ನಮ್ಮನ್ನು ಗೊಂದಲದಲ್ಲಿ ಬೀಳಿಸುತ್ತದೆ. ಹೀಗೆ ಪ್ರತೀ ಹಂತದಲ್ಲೂ ಭಯ, ಗೊಂದಲಗಳನ್ನು ಸೃಷ್ಟಿಸುತ್ತಾ ಸಮಾನಾಂತರವಾಗಿ ಸಾಗುವ ಎರಡು  ಕಥೆಗಳು ಕೊನೆಗೊಮ್ಮೆ ಮುಖಾಮುಖಿಯಾಗುತ್ತದೆ. ಅಲ್ಲೊಂದು ರೋಚಕ ಅಂತ್ಯವಿದೆ. ಆ ನಂತರದಲ್ಲಿ ಕಾವೇರಿಯ ಮಾನಸಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟು ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಮೂಲಕ ಮತ್ತೆ ಕಥೆ ಆರಂಭದ ಸನ್ನಿವೇಶಕ್ಕೆ ಮರಳುತ್ತದೆ.

ಹದಿನಾಲ್ಕು ವಾರಗಳ ಥೆರಪಿಯ ನಂತರವೂ ಕಾವೇರಿಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಅವಳನ್ನು ಮನೆಗೆ ಕರೆದೊಯ್ಯುವೆನೆಂಬ ಸತೀಶನ ಬೇಡಿಕೆಗೆ ವೈದ್ಯರಿಂದ ಸಹಮತಿ ಸಿಗುವುದಿಲ್ಲ. ಕಾವೇರಿಯ ಆಸ್ಪತ್ರೆ ವಾಸ ಅನಿರ್ದಿಷ್ಟಾವಧಿಗೆ ಮುಂದುವರೆಯುತ್ತದೆ. ಆದರೆ ಇಡೀ ಚಿತ್ರದ ಅಸಲಿ ತಾತ್ಪರ್ಯವಿರುವುದು ಕೊನೆಯ ಸನ್ನಿವೇಶದಲ್ಲಿ.

ಕಾವೇರಿಯ ಇಂದಿನ ಸ್ಥಿತಿಗೆ ತಾನೇ ಕಾರಣ ಎಂಬ ಪಶ್ಚಾತಾಪದಲ್ಲಿ ದಗ್ಧನಾಗಿ ದೀನ ನೋಟದಿಂದ ಚಿಕಿತ್ಸಾ ಕೇಂದ್ರದೊಳಗೆ ಸಾಗುವ ಕಾವೇರಿಯನ್ನೇ ಸತೀಶ್ ದಿಟ್ಟಿಸುತ್ತಿರುವಂತೆಯೇ ಅಲ್ಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ತನ್ನ ವಾರ್ಡಿನಲ್ಲಿ ಕುಳಿತ ಕಾವೇರಿ ತನ್ನ ಕೈಯಲ್ಲಿ ಗ್ಲಾಸ್ ಇರುವಂತೆ, ತಾನು ಅದರೊಳಗಿನ ಪೇಯವನ್ನು ಆಘ್ರಾಣಿಸಿ ಕುಡಿಯುವಂತೆ ನಟಿಸುತ್ತಾ ನಗು ಬೀರುತ್ತಾಳೆ. ಬಾಗಿಲಿನ ಹೊರಗಿರುವ ಸತೀಶ ಪಶ್ಚಾತಾಪದ ಪಂಜರದೊಳಗೆ ಜೀವನ ಪರ್ಯಂತ ಬಂಧಿಯಾದರೆ, ಒಳಗಿರುವ ಕಾವೇರಿಯ ವಿಜಯದ ನಗುವಿನಲ್ಲಿ ತನಗೆ ದ್ರೋಹ ಬಗೆದ ಸತೀಶನ ಮೇಲೆ ಹಗೆ ತೀರಿಸಿಕೊಂಡ ಭಾವ ನಿಚ್ಚಳವಾಗಿದೆ. ಮೆಥೆಡ್ ಆಕ್ಟಿಂಗ್ ಪರಿಣಿತಳಾದ ಕಾವೇರಿ ಸ್ಕ್ರಿಜೋಫೇನಿಯಾ ರೋಗಿಯಾಗಿ ನಟಿಸಿ ಯಾರೊಬ್ಬರಿಗೂ ಅರಿವಾಗದಂತೆ ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತಾಳೆ. ಚಿತ್ರದ ಪೋಸ್ಟರಿನಲ್ಲಿರುವ 'vini vidi vici' ಯನ್ನು ಸೋತಂತೆ ಕಂಡರೂ ಗೆದ್ದವಳು ಕಾವೇರಿಯೇ ಎಂದು ಅರ್ಥೈಸಿಕೊಳ್ಳಬಹುದು. ಇದನ್ನು ಧ್ವನಿಸುವ ಹಲವು ಪ್ರತಿಮೆಗಳನ್ನು ಚಿತ್ರದುದ್ದಕ್ಕೂ ಕಾಣಬಹುದು(ವರ್ಣಚಿತ್ರ, ವಾಲ್ ಕ್ಲಾಕ್, ಪಂಜರದೊಳಗಿನ ಪಕ್ಷಿಯ ಶೋ ಪೀಸ್, ಕೊನೆಯಲ್ಲಿ ಕಾವೇರಿ ಮಾಡಿರುವ ಡ್ರಾಯಿಂಗ್ ಇತ್ಯಾದಿ).

ಈ ಚಿತ್ರದ ವೈಶಿಷ್ಟ್ಯತೆ ಎಂದರೆ ಇಡೀ ಚಿತ್ರ ಯಾವ ಸಂಗತಿಯನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಉತ್ತರವಿಲ್ಲದ ಹಲವು ಪ್ರಶ್ನೆಗಳು ಇಲ್ಲಿವೆ. ನಡೆಯುವ ಘಟನೆಗಳು, ಅಸ್ಪಷ್ಟ ಮಾಹಿತಿಗಳನ್ನು ಊಹೆಗೆ‌ ತಕ್ಕಂತೆ ಜೋಡಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ನೋಡುಗರಿಗೇ ನೀಡಿದ್ದಾರೆ ನಿರ್ದೇಶಕರು. ಸ್ಕ್ರಿಪ್ಟ್ ಓದುತ್ತಿರುವ ಕಾವೇರಿಗಾಗುವ ವಿಚಿತ್ರ ಅನುಭವಗಳಿಗೂ ಹಾಗೂ ಸ್ಕ್ರಿಪ್ಟಿನೊಳಗಣ ಕಥೆಯಲ್ಲಿ ಘಟಿಸುವ ಘಟನೆಗಳಿಗೂ ಸಂಬಂಧ ಕಲ್ಪಿಸಲು ಅನುವಾಗುವಂತೆ ದೊರಕುವ ಸುಳಿವುಗಳು ವೀಕ್ಷಕರಿಗೆ ತಾವೇ ವಾಸ್ತವ ಹಾಗೂ ಭ್ರಮೆಯ ಜಾಲದೊಳಗೆ ಸಿಲುಕಿದ್ದೇವೇನೋ ಎನ್ನುವ ಭಾವನೆ ಹುಟ್ಟಿಸುವಷ್ಟು ಟ್ರಿಕ್ಕಿಯಾಗಿವೆ. ಖಂಡಿತವಾಗಿಯೂ ಒಂದೇ ವೀಕ್ಷಣೆಗೆ ದಕ್ಕುವ ಸಿನಿಮಾ ಇದಲ್ಲ. ಕಥೆಯ ಹೊಳಹುಗಳನ್ನು ಅರ್ಥೈಸಿಕೊಂಡು ಕಥೆಯ ಸಾರವನ್ನು ಗ್ರಹಿಸಲು ಹಲವು ಬಾರಿ ಸಿನಿಮಾವನ್ನು ನೋಡಬೇಕು.

ಶರಪಂಜರ ಸಿನಿಮಾಕ್ಕೊಂದು ಭಿನ್ನ ಆಯಾಮ ನೀಡಿರುವ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಉಲ್ಲೇಖ ಒಂದಿಲ್ಲೊಂದು ರೂಪದಲ್ಲಿ ಹಲವೆಡೆ ಇದೆ. ಕಥಾನಾಯಕ ಹಾಗೂ ನಾಯಕಿಯ ಹೆಸರೂ ಶರಪಂಜರವನ್ನೇ ಧ್ವನಿಸುತ್ತದೆ. ಕಾವೇರಿಯ ಬೈಕಿನ ನಂಬರ್ ಪ್ಲೇಟ್, ಮೈಲಿಕಲ್ಲು, ಹಿನ್ನೆಲೆಯಲ್ಲಿನ ಹಾಡುಗಳು…..ಹೀಗೆ ಪುಟ್ಟಣ್ಣನವರನ್ನು ನೆನಪಿಸುವ ಹಲವು ಸಂಗತಿಗಳು ಚಿತ್ರದುದ್ದಕ್ಕೂ ಇವೆ.

ನೋಡುಗರ ಕಲ್ಪನೆಗೆ ಸಂಪೂರ್ಣ ಅವಕಾಶವಿರುವ ಕಾರಣ ಕ್ಲೈಮ್ಯಾಕ್ಸ್‌ ಹೊರತುಪಡಿಸಿ ಉಳಿದಿಡೀ ಚಿತ್ರವನ್ನು ಮೆಥೆಡ್ ಆಕ್ಟಿಂಗ್ ಪರಿಕಲ್ಪನೆಯ ಆಯಾಮದಿಂದಲೂ ಗ್ರಹಿಸಬಹುದು ಎನ್ನುವುದು ಈ ಸಿನಿಮಾದ ಇನ್ನೊಂದು ಹೆಚ್ಚುಗಾರಿಕೆ. 

ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ತಮ್ಮ ಎರಡನೇ ಚಿತ್ರದಲ್ಲೂ ಪ್ರಯೋಗಾತ್ಮಕ ಮಹಿಳಾ ಕೇಂದ್ರಿತ ವಿಚಾರವನ್ನೇ ಆಯ್ದುಕೊಂಡಿದ್ದಾರೆ. ಆದರೆ 'ಶುದ್ಧಿ' ಹಾಗೂ 'ಭಿನ್ನ' ಎರಡನ್ನು ಹೋಲಿಸಲಾಗದು. ಇಡೀ ಸಮಾಜದ ಭಾಗವಾಗಿ ಮಹಿಳೆಯರ ಕಥನವನ್ನು ವಿವರಿಸಿದ್ದ 'ಶುದ್ಧಿ' ಸಿನಿಮಾದ ವ್ಯಾಪ್ತಿ ಬಹಳ ವಿಶಾಲವಾದುದು. ಆದರೆ 'ಭಿನ್ನ' ಕೌಟುಂಬಿಕ ಚೌಕಟ್ಟಿನೊಳಗೆ ಮಹಿಳೆ ಎದುರಿಸುವ ಹಲವು ಸಮಸ್ಯೆಗಳ ಮೇಲೆ, ಆಕೆಯ ಮನೋವಲಯದ ಮೇಲೆ ಕೇಂದ್ರಿತವಾದ ಭಾವತೀವ್ರತೆಯ ಸಿನಿಮಾ. ಕುಟುಂಬದೊಳಗಿನ ಸೂಕ್ಷ್ಮ ಸಮಸ್ಯೆಗಳಾದ ಲೈಂಗಿಕ ದೌರ್ಜನ್ಯ, ದಾಂಪತ್ಯದ್ರೋಹ, ಮಾನಸಿಕ ತೊಳಲಾಟ ಮುಂತಾದವುಗಳ ಬಗೆಗೆ ಒಳನೋಟ ನೀಡುವ ಚಿತ್ರವಿದು.

ಇಡೀ ಚಿತ್ರದಲ್ಲಿರುವುದು ಏಳೆಂಟು ಪಾತ್ರಗಳು ಮಾತ್ರ. ಅದರಲ್ಲೂ ಮುನ್ನೆಲೆಯಲ್ಲಿರುವುದು ಕೇವಲ ನಾಲ್ಕೇ ಪಾತ್ರಗಳು. ಕಾವೇರಿ/ದೇವಕಿಯಾಗಿ ನಟಿಸಿರುವ ಪಾಯಲ್ ರಾಧಾಕೃಷ್ಣ ಅವರ ನಟನೆ ಇಡೀ ಚಿತ್ರದ ಜೀವಾಳ. ಒಮ್ಮೆ ಸೂತ್ರಧಾರಿಯಂತೆ ಇನ್ನೊಮ್ಮೆ ಪೀಡಿತೆಯಂತೆ ಕಾಣುವ ಎರಡು ಛಾಯೆಗಳ ಪಾತ್ರವನ್ನು ಅತ್ಯಂತ ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ. ಸಿದ್ಧಾರ್ಥ್ ಮಾಧ್ಯಮಿಕ, ಸೌಮ್ಯ ಜಗನ್ ಹಾಗೂ ಶಶಾಂಕ್ ಪುರುಷೋತ್ತಮ್ ಅವರು ಸತೀಶ್, ವಿಮಲಾ, ಮೋಹನ್ ಆಗಿ ಕಾಣಿಸಿಕೊಂಡಿದ್ದಾರೆ. ಮೂವರಲ್ಲಿ ಸೌಮ್ಯ ಉಳಿದಿಬ್ಬರಿಗಿಂತ ಹೆಚ್ಚು ಗಮನಸೆಳೆಯುತ್ತಾರೆ. ಜೆಸ್ಸಿ ಕ್ಲಿಂಟನ್ ಅವರ ಸಂಗೀತ ಹಾಗೂ ಆಂಡ್ರೀವ್ ಅಯಿಲೋ ಅವರ ಛಾಯಾಗ್ರಹಣ ನೋಡುಗರನ್ನು ಬೆಚ್ಚಿಬೀಳಿಸುತ್ತಾ ಸಿನಿಮಾಕ್ಕೆ ಹಾರರ್ ಅಂಶವನ್ನು ಅಳವಡಿಸುವಲ್ಲಿ ಸಮರ್ಥವಾಗಿದೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿ ಹಾಡಿರುವ ಶೀರ್ಷಿಕೆ ಗೀತೆ ಇಡೀ ಕಥೆಯ ಪರಿಭಾಷೆಯಂತಿದೆ.

'ನಾ ಮುರಿದ ಕನ್ನಡಿ ಚೂರಿನಂತೆ, ನಾ ಕಾಣೋ ಲೋಕ ನೂರರಂತೆ……' ಅನ್ನುವ ಸಾಲಿನಂತೆ ಒಡೆದ ಮನದ ನೂರು ಬಿಂಬಗಳ ಅಮೂರ್ತ ಯಾನವೇ ಭಿನ್ನ. 




ಮಂಗಳವಾರ, ಜೂನ್ 23, 2020

ಅನೂಹ್ಯ 19

ಮಧ್ಯಾಹ್ನವೇ ಕಾರ್ತಿಕ್ ಕಾಲೇಜಿನಿಂದ ಮನೆಗೆ ಬಂದಿದ್ದು ಕಂಡು ಕಣ್ಣರಳಿಸಿದಳು ನವ್ಯಾ.

"ಅದೇನು ಮಧ್ಯಾಹ್ನವೇ ಬಂದ್ಬಿಟ್ಟೇ? ಕಾಲೇಜಿಗೆ ರಜೆಯೇನು?" ಕೇಳಿದ್ದಳು.

"ಹೂಂ ಒಂಥರಾ ರಜೆನೆ ಅತ್ತಿಗೆ. ಆದರೆ ಅವರು ಕೊಟ್ಟಿದ್ದಲ್ಲ ನಾನೇ ತಗೊಂಡಿದ್ದು" ನಕ್ಕ.

"ಏನು ಹಾಗಂದ್ರೆ? ಕ್ಲಾಸ್ ಬಂಕ್ ಮಾಡಿದ್ಯಾ?" ಕೋಪದಲ್ಲಿ ಕೇಳಿದಳು.

"ಅಯ್ಯೋ ಸುಮ್ನಿರಿ ಅತ್ತಿಗೆ. ಅದೇ ಕಾಲೇಜು, ಅದೇ ಕ್ಲಾಸ್ ರೂಂ, ಅದೇ ಡೆಸ್ಕ್, ಅದೇ ಲೆಕ್ಚರ್…. ಬೋ‌ರು." ಎಂದವನ ಕಿವಿ ಹಿಡಿದು,

"ಏನಂದೆ? ನೀನು ಮಾಡಿರೋ ಕೆಲ್ಸ ಅಮ್ಮನಿಗೆ ಗೊತ್ತಾದ್ರೆ ಯಾತ್ರೆ ಅರ್ಧದಲ್ಲೇ ಬಿಟ್ಟು ಓಡೋಡಿ ಬರುತ್ತಾರೆ. ನಿಂದ್ಯಾಕೋ ತುಂಬಾ ಅತಿಯಾಯ್ತು" ಎಂದಳು.

"ಅತ್ಗೇ, ಕಿವಿ ನೋಯ್ತಿದೆ ಪ್ಲೀಸ್ ಬಿಡಿ" ಅವಲತ್ತುಕೊಂಡ.

"ನಿಮ್ಮಣ್ಣ ಬರ್ಲೀ ಇರು. ಇವತ್ತು ಅವರಿಗೆಲ್ಲಾ ಹೇಳ್ತೀನಿ" ಎಂದಾಗ ಮಾತ್ರ ಹೆದರಿದ. ಅವನು ಹೆದರುವುದು ಅಣ್ಣನಿಗೆ ಮಾತ್ರ.

"ಹಾಗೊಂದು ಮಾಡ್ಬೇಡಿ ಅತ್ಗೇ. ಪ್ಲೀಸ್ ಅಣ್ಣನಿಗೆ ಹೇಳ್ಬೇಡಿ. ಅಮ್ಮನೂ ಮನೇಲಿಲ್ಲ. ನಿಮಗೊಬ್ಬರಿಗೇ ಬೇಜಾರಾಗುತ್ತೆ ಅಂತ ನಾನು ಬೇಗ ಬಂದೆ. ಅಮ್ಮ ಹೇಳಿದ್ರಲ್ಲ ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ಳೋಕೆ. ನಿಮ್ಮ ಕೆಲಸದಲ್ಲಿ ಕೈ ಜೋಡಿಸೋಕೆ. ಅದಕ್ಕೆ ಬಂದೆ ಅಷ್ಟೇ" ಗೋಗರೆದ.

"ಸರಿ ಸರಿ ಹೇಳೋಲ್ಲ. ಹೋಗಿ ಕೈ ಕಾಲು ಮುಖ ತೊಳೆದು ಬಾ. ಊಟಕ್ಕೆ ರೆಡಿ ಮಾಡ್ತೀನಿ. ನಾನೂ ಒಬ್ಳೇ ಊಟ ಮಾಡ್ಬೇಕಲ್ಲ ಅಂದ್ಕೋತಿದ್ದೆ" ಹೇಳಿದಳು.

"ನೋಡಿದ್ರಾ….. ನಂಗೊತ್ತಿತ್ತು. ನಿಮ್ಗೆ ಒಬ್ಬರಿಗೆ ಬೇಜಾರಾಗುತ್ತೆ ಅಂತ. ಅದಕ್ಕೆ ಬಂದೆ." ಎಂದವನೇ ಫ್ರೆಶ್ ಆಗಲು ರೂಮಿಗೆ ಹೋದ. ಅವನು ತಯಾರಾಗಿ ಬರುವಾಗ ಅವಳು ಊಟ ಬಡಿಸಿ ಅವನಿಗಾಗಿಯೇ ಕಾಯುತ್ತಿದ್ದಳು. ಅವನ ಕಾಲೇಜಿನ ಪ್ರವರಗಳನ್ನು ಕೇಳುತ್ತಲೇ ಊಟ ಮುಗಿಯಿತು. ಇಬ್ಬರೂ ಒಂದು ರೌಂಡ್ ಹರಟೆ ಮುಗಿಸುವುದರೊಳಗೆ ಕಿಶೋರ್ ಹಾಜರಾಗಿದ್ದ.

"ಅರೇ, ಇದೇನು ನೀವೂ ಬೇಗ ಬಂದ್ಬಿಟ್ರೀ ಇವತ್ತು" ಅವಳ ಪ್ರಶ್ನೆಗೆ ನಕ್ಕನಷ್ಟೇ.

"ಕಾಫೀ ಕೊಡ್ತೀಯಾ?" ಎಂದು ಕೇಳುತ್ತಲೇ ರೂಮಿನತ್ತ ಹೊರಟ ಬಟ್ಟೆ ಬದಲಾಯಿಸಲು.

"ನೋಡಿದ್ರಾ ಅತ್ಗೇ, ನನಗೆ ಕ್ಲಾಸ್ ಬಂಕ್ ಮಾಡಿದ್ದೇ ಅಂತ ಬೈದ್ರಲ್ಲಾ ಈಗ ಅಣ್ಣ ಆಫೀಸ್ ಬಂಕ್ ಮಾಡಿದ್ದಾನೆ. ಅವನಿಗೂ ಬೈಬೇಕು ನೀವು" ಅಣಕಿಸಿದ.

"ಅಣ್ಣ ತಮ್ಮ ಇಬ್ಬರೂ ಸರಿ ಇದ್ದೀರಾ. ಯಾರೂ ಕಡ್ಮೇ ಇಲ್ಲಾ" ಎಂದವಳು ಅಡುಗೆ ಮನೆಗೆ ನಡೆದಳು.

ಮೂವರೂ ಒಟ್ಟಿಗೆ ಕಾಫಿ ಕುಡಿದರು ಹರಟುತ್ತಾ.

"ಅಣ್ಣ ಹೊರಗೆ ಎಲ್ಲಾದ್ರೂ ಹೋಗಿ ಸುತ್ತಾಡಿಕೊಂಡು ಬರೋಣ್ವಾ?" ಮೆಲ್ಲಗೆ ಪೀಠಿಕೆ ಹಾಕಿದ. ಕಿಶೋರನಿಗೂ ತಮ್ಮನ ಮಾತು ಸರಿಯೆನಿಸಿತು. ಸರಿ ಹೋಗೋಣವೆಂದು ಹೊರಟರು ಮೂವರು. ಎಲ್ಲಿಗೆ ಎಂದೇನೂ ನಿರ್ಧರಿಸಿರಲಿಲ್ಲ. ಕಾರ್ತಿಕ್ ಸಿನಿಮಾ ನೋಡುವ ಎಂದಾಗ ಮೂವರು ಥಿಯೇಟರ್ ಹೊಕ್ಕರು. ಸಿನಿಮಾ ಮುಗಿದಾಗ ರಾತ್ರಿಯಾಗಿತ್ತು. ಹೋಟೆಲಿನಲ್ಲಿ ಊಟ ಮಾಡಿ ಹೊರಡುವ ಎಂದೆನಿಸಿ ದೊಡ್ಡ ಹೋಟೆಲ್ ಒಂದನ್ನು ಹೊಕ್ಕರು. 

ಹೋಟೆಲಿಗೆ ಹೋದ ಕ್ಷಣದಿಂದ ಅಲ್ಲಿಂದ ಹೊರಬರುವವರೆಗೂ ನವ್ಯಾ ಚಡಪಡಿಸುತ್ತಿದ್ದಳು......

ಅದನ್ನು ಗಮನಿಸಿದ ಕಿಶೋರ್. ಇಲ್ಲಿಯವರೆಗೆ ಸರಿಯಾಗಿದ್ದವಳು ಈಗೇನಾಯಿತು ಎಂದು ಅರ್ಥವಾಗಲಿಲ್ಲ ಅವನಿಗೆ. ಹೋಟೆಲಿನಲ್ಲಿ ಇದ್ದಷ್ಟು ಹೊತ್ತೂ ಅವಳ‌ ಸಂಶಯದ ನೋಟ ಆಚೀಚೆ ಹರಿದಾಡುತ್ತಿತ್ತು….‌‌. ಅಂತೂ ಊಟ ಮುಗಿಸಿ ಹೊರಬಂದಾಗ ನಿಟ್ಟುಸಿರು ಬಿಟ್ಟು "ಸೀದಾ ಮನೆಗೆ ಹೋಗೋಣ " ಎಂದಳು.

ಮನೆಗೆ ಬಂದವನೆ ಕಾರ್ತಿಕ್ "ಅತ್ಗೇ, ನನಗೆ ಹೊಟ್ಟೆ ಫುಲ್ ಆಗಿದೆ. ಹಾಲು ಬೇಡ. ನಾನು ಮಲಗೋಕೆ ಹೊರಟೆ. ಗುಡ್ ನೈಟ್"  ಎಂದು ಮಲಗಲು ಹೊರಟ.

ಕಿಶೋರ್ ತನಗೂ ಏನು ಬೇಡವೆಂದ. ಅವಳಿಗೂ ಏನೂ ಬೇಡವಾಗಿತ್ತು. ರೂಮಿಗೆ ಬಂದವಳೇ ಬಟ್ಟೆ ಬದಲಾಯಿಸಿ ಟೆರೇಸಿಗೆ ಹೋಗಿ ನಿಂತಳು. 

ತಣ್ಣನೆಯ ಗಾಳಿ ಬೀಸುತ್ತಿತ್ತಾದರೂ ಅದು ಅವಳ ಮನದ ಬೇಗುದಿಯನ್ನು ಶಮನಗೊಳಿಸಲು ವಿಫಲವಾಗಿತ್ತು. ಕಿಶೋರ್ ಅವಳನ್ನು ಹುಡುಕಿ ಬಂದವನು ಸುಮ್ಮನೆ ಅವಳ ಭುಜ ಬಳಸಿ ಪಕ್ಕ ನಿಂತ. ಅವಳು ಅವನ ಎದೆಗೊರಗಿ ಕಣ್ಮುಚ್ಚಿದಳು.

"ಏನಾಯ್ತು. ಹೋಟೆಲಿನಲ್ಲಿ ಯಾರನ್ನಾದರೂ ನೋಡಿ ಹೆದರಿಕೊಂಡ್ಯಾ?" ಕೇಳಿದ.

ಇಲ್ಲವೆಂದು ತಲೆಯಾಡಿಸಿದಳು. 

"ಮತ್ಯಾಕೆ ಒಂಥರಾ ಇದ್ದೀಯಾ? ನಾನು ಗಮನಿಸುತ್ತಾ ಇದ್ದೆ. ಹೋಟೆಲಿಗೆ ಹೋಗೋವರೆಗೆ ನೀನು ಆರಾಮಾಗಿದ್ದೆ. ಆಮೇಲೆ ಏನಾಯ್ತು? ನನ್ಹತ್ರನೂ ಹೇಳೋಲ್ವೇನು?"

"ಹಳೆಯ ನೆನಪುಗಳು ಬೆನ್ನಟ್ಟಿದಂತಾಯ್ತು ಕಿಶೋರ್"

"ನನಗೆ ನಿನ್ನ ಮಾತು ಅರ್ಥವಾಗಲಿಲ್ಲ. ಏನು ನೆನಪಾಯ್ತು?"

"ಮುಂಚೆ ಕೆಲವು ಕಸ್ಟಮರ್ಸ್..... ಹೀಗೇ.... ಹೋ... ಹೋಟೆಲುಗಳಿಗೆ ಕರ್ಕೊಂಡು ಹೋಗುತ್ತಿದ್ದರು. ಅದ್ಯಾಕೋ ಇಂದು ತುಂಬಾ ನೆನಪಾಯ್ತು."

"ನವ್ಯಾ, ಯಾಕಮ್ಮಾ ಅದನ್ನೆಲ್ಲಾ ನೆನಪಿಸಿಕೊಳ್ತೀಯಾ? ಅದು ಮುಗಿದಿರೋ ಅಧ್ಯಾಯ."

ಅಲ್ಲೊಂದು ಮೌನ ಕೆಲಘಳಿಗೆ ಉಸಿರಾಡಿತು. ಆ ಮೌನದ ಎದೆಬಗೆದಂತೆ ಮಾತನಾಡತೊಡಗಿದ್ದಳು ನವ್ಯಾ.

"ನಾಟಕ ಮಾಡೋದು ಆ ಸಮಯಕ್ಕೆ ಸುಲಭ ಅನ್ಸುತ್ತೆ ಕಿಶೋರ್. ಆ ಕ್ಷಣಕ್ಕೆ ಮನಸಿಗೆ ಹಿತವನ್ನೂ ನೀಡುತ್ತೆ. ಆದರದು ಕ್ಷಣಿಕವಷ್ಟೇ….. ಸತ್ಯ ಅನಾವರಣ ಆಗೋವರೆಗೂ, ನಾಟಕ ಬಯಲಾಗೋವರೆಗೂ ಆರಾಮಾಗಿರಬಹುದು, ಗೊತ್ತಾದಾಗ ಶಿಕ್ಷೆ ಅನುಭವಿಸಿದರಾಯ್ತು ಅಂದುಕೊಳ್ಳುತ್ತೇವೆ. ಆದರೆ ಅದು ಕೇವಲ ನಮ್ಮ ಭ್ರಮೆಯಷ್ಟೇ. ಸತ್ಯ ಈಗ ಗೊತ್ತಾಗಬಹುದು, ನಾಟಕದ ಪರದೆ ಮುಂದಿನ ಕ್ಷಣದಲ್ಲಿ ಸರಿಯಬಹುದೆಂಬ ಭಯದಲ್ಲೇ ಬದುಕುವ ಅನಿವಾರ್ಯತೆ ಇದೆಯಲ್ಲ ಅದು ತಪ್ಪಿಗೆ ದೊರಕುವ ನಿಜವಾದ ಶಿಕ್ಷೆ. ಈಗ ನನ್ನ ಪರಿಸ್ಥಿತಿ ಕೂಡಾ ಹಾಗೇ ಇದೆ ಕಿಶೋರ್. ಹಗ್ಗ ಕಂಡರೂ ಹಾವನ್ನು ಕಂಡ ಭಾವ. ಯಾರಾದರೂ ನನ್ನನ್ನು ಸುಮ್ಮನೆ ದಿಟ್ಟಿಸಿ ನೋಡಿದರೂ ಸಾಕು, ಇವರಿಗೆ ನನ್ನ ಪೂರ್ವಾಪರ ತಿಳಿದಿರಬಹುದು ಎಂಬ ಅನುಮಾನ ವಿಪರೀತವಾಗುತ್ತದೆ" ತನ್ನ ಸಮಸ್ಯೆ ಅವನ ಮುಂದೆ ಬಿಡಿಸಿಟ್ಟಳು.

ಅವನೇನು ಮಾತಾಡಲಿಲ್ಲ. ಸುಮ್ಮನೆ ಅವಳನ್ನು ಬಳಸಿ ನೆತ್ತಿಗೆ ಮುತ್ತಿಟ್ಟ. ಅವಳು ಮತ್ತೆ ಮೌನವಾಗಿ ಅವನೆದೆಗೆ ಒರಗಿದಳು. ಆ ಮೌನದಲ್ಲಿ, ಅವನ ನೇವರಿಕೆಯಲ್ಲಿ ಮಾತಿನಲ್ಲಿ ಹೇಳಲಾರದಷ್ಟು ಕಾಳಜಿಯಿತ್ತು. ಎಷ್ಟು ಹೊತ್ತು ಹಾಗೇ ನಿಂತಿದ್ದರೋ.... ಬಹಳ ಸಮಯದ ನಂತರ, 

"ತುಂಬಾ ಹೊತ್ತಾಗಿದೆ ಕೆಳಗೆ ಹೋಗೋಣ ಬಾ" ಅವನೆಂದಾಗ, ಅವನೊಂದಿಗೆ ಹೆಜ್ಜೆ ಹಾಕಿದಳು.

"ನಾಳೆ ನಾನು ರಜೆ ತಗೋತೀನಿ. ಮನೆಯಲ್ಲಿ ನಿನಗೊಬ್ಬಳಿಗೆ ಬೇಸರವಾಗಬಹುದು" ಎಂದಾಗ ಅವಳಿಗೆ ನೆನಪಾಯಿತು.

"ಬೇಡ, ನೀವು ಆಫೀಸಿಗೆ ಹೋಗಿ. ಸಮಾ ಫೋನ್ ಮಾಡಿದ್ಲು. ಅವಳು ಕ್ವಾಟ್ರಸ್ ಗೆ ಶಿಫ್ಟ್ ಆಗಿದ್ದಾಳಲ್ಲ. ಒಂದಷ್ಟು ಪರ್ಚೇಸಿಂಗ್ ಇದೆ ಬಾ ಅಂದಿದ್ದಾಳೆ. ಹೋಗ್ತೀನಿ" ಎಂದಾಗ,

"ಒಳ್ಳೇದಾಯ್ತು. ಹೋಗಿ ಬಾ. ಈಗ ಮಲ್ಕೋ" ಎಂದವನು ತನ್ನ ಮಡಿಲಲ್ಲಿ ಮಲಗಿಸಿ ತಲೆ ತಟ್ಟತೊಡಗಿದ. ಅವಳು ಹಾಗೇ ನಿದ್ರೆಗೆ ಜಾರಿದಳು.

                     *****************

ಸಮನ್ವಿತಾ ಮನೆ ತೊರೆದು ಹೊರಟಿದ್ದೇ ರಾವ್ ಅವರ ಚಟುವಟಿಕೆಗಳು ಗರಿಗೆದರಿದವು. ಒಂದಷ್ಟು ಫೋನ್ ಕಾಲ್ ಗಳು, ಕೆಲವರ ಭೇಟಿ....... ಅವುಗಳಲ್ಲಿ ತುಂಬಾ ಮುಖ್ಯವಾದುದು ಸಚ್ಚಿದಾನಂದ ಶರ್ಮಾ ದಂಪತಿಗಳನ್ನು ಎರಡು ಬಾರಿ ಸತ್ಯಂ ರಾವ್ ಪತ್ನಿ ಸಮೇತ ಭೇಟಿಯಾಗಿದ್ದು…... ಈ ಎರಡು ಭೇಟಿ ಅವರ ಪ್ಲಾನಿನ ಎರಡನೇ ಹಂತ.

ಎರಡನೇ ಭೇಟಿಯಲ್ಲಿ ತಮ್ಮ ಮನದಿಂಗಿತ ವ್ಯಕ್ತಪಡಿಸಿ 'ನಮ್ಮ ಮಗಳನ್ನು ನಿಮ್ಮ ಸೊಸೆಯಾಗಿ ಕಳಿಸುವ ಇಚ್ಛೆ ಇದೆ' ಎಂದು ನೇರವಾಗಿಯೇ ಹೇಳಿದ್ದರು. ಶರ್ಮಾ ದಂಪತಿಗಳು ಅಭಿರಾಮ್ ಊರಲ್ಲಿರದ ಕಾರಣ ಅವನು ಬಂದ ನಂತರ ಅಭಿಪ್ರಾಯ ಕೇಳಿ ಮಾತನಾಡುವುದಾಗಿ ಹೇಳಿದ್ದರು. 

ಅವರು ಮಗನ ಅಭಿಪ್ರಾಯ ಕೇಳುವಾಗ ನಾವೂ ಕೂಡ ಮಗಳ ಅಭಿಪ್ರಾಯ ಕೇಳಬೇಕು ಎಂದು ರಾವ್ ದಂಪತಿಗಳಿಗೆ ಹೊಳೆಯದೇ ಹೋದದ್ದು ವಿಪರ್ಯಾಸವೇ ಸರಿ....

ಇಷ್ಟು ಕೆಲಸ ಮಾಡಿ ರಾವ್ ನಿರಾಳರಾದರು. ಶರ್ಮಾ ಕುಟುಂಬದವರಿಗೆ ಮಗಳು ಇಷ್ಟವಾಗಿದ್ದಾಳೆಂದು ಅವರಿಗೆ ತಿಳಿದುಹೋಗಿತ್ತು. ಇನ್ನು ಅಭಿರಾಮ್ ಮನೆಯವರ ಮಾತಿಗೆ ಎದುರಾಡಲಾರ ಎಂದು ಅವರ ನಂಬಿಕೆ. ಬಹಳ ಸಂತೋಷವಾಗಿತ್ತು ಅವರಿಗೆ. 

ಮಾರ್ಕೆಟ್ ನಲ್ಲಿ ಅವರ ಕಂಪನಿಯ ಷೇರು ಮೌಲ್ಯ ನೆಲಕ್ಕಚ್ಚಿತ್ತು. ಕಳೆದ ಐದು ತಿಂಗಳಿಂದ ಇದೇ ಸ್ಥಿತಿ. ಇದೇ ರೀತಿ ಮುಂದುವರೆದರೆ ಕಂಪನಿ ದಿವಾಳಿಯೆದ್ದು ಮುಚ್ಚಬೇಕಾಗುವುದು ಖಚಿತವಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಮೊತ್ತ ಬಡ್ಡಿಯೊಂದಿಗೆ ಹೆಗಲ ಮೇಲಿತ್ತು. ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದವರಿಗೆ ಹೊಳೆದ ಅತ್ಯದ್ಭುತ ಮಾರ್ಗವಿದು. 

ಸಮನ್ವಿತಾ ಅಭಿರಾಮ್ ವಿವಾಹವಾದರೆ ನಾವು ಹಾಗೂ ಶರ್ಮಾ ಸಂಬಂಧಿಗಳಾಗುತ್ತೇವೆ. ಶರ್ಮಾ ಎಂಪೈರ್ ಔದ್ಯೋಗಿಕ ಕ್ಷೇತ್ರದ ಅಘೋಷಿತ ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿವಾಹದಿಂದ ತಮ್ಮ ಕಂಪನಿಯ ಬಗ್ಗೆ ಜನರಲ್ಲಿ ಭರವಸೆ ಹೆಚ್ಚುತ್ತದೆ. ಷೇರು ಮೌಲ್ಯ ತಾನೇತಾನಾಗಿ ಏರುತ್ತದೆ. ಅದರೊಂದಿಗೆ ಸಂಬಂಧಿಗಳಾದ ಮೇಲೆ ಅವರನ್ನು ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಲು ಒಪ್ಪಿಸಿ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಯೋಚನೆಯೂ ಅವರಿಗಿತ್ತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ತಮ್ಮ ವ್ಯವಹಾರ ಸಫಲತೆಗೆ ಮಗಳನ್ನು ಏಣಿಯನ್ನಾಗಿ ಬಳಸಲು ತೀರ್ಮಾನಿಸಿದ್ದರು ಗಂಡ ಹೆಂಡತಿ...... 

ಯಯಾತಿ ಮಹಾರಾಜನ ಶಾಪ ಪರಿಹಾರಕ್ಕಾಗಿ ತನ್ನ ಯೌವ್ವನವನ್ನು ಧಾರೆ ಎರೆದ ಪುರುವಿನಂತೆ ತಮ್ಮ ವ್ಯವಹಾರ ಉಳಿಸಿಕೊಳ್ಳಲು ಮಗಳ ತಲೆದಂಡಕ್ಕೆ ಮುಹೂರ್ತವಿಟ್ಟಿದ್ದರು. ವ್ಯತ್ಯಾಸವಿಷ್ಟೇ. ಯಯಾತಿ ಪುರುವಿನಲ್ಲಿ ಬೇಡಿಕೊಂಡಿದ್ದ ತನ್ನ ಶಾಪವನ್ನು ನೀನು ಬದಲಿಸಿಕೋ ಎಂದು......

ಆದರಲ್ಲಿ ತನ್ನ ತಲೆದಂಡವಾಗುತ್ತಿರುವ ಕಲ್ಪನೆಯೇ ಇಲ್ಲ ಮಗಳಿಗೆ.......

                   *****************

ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದ ಅಭಿರಾಮ್ ಹಿಂದಿನ ರಾತ್ರಿಯಷ್ಟೇ ವಾಪಾಸಾಗಿದ್ದ. ಅವನಿಗೆ ತನ್ನ ಅನುಪಸ್ಥಿತಿಯಲ್ಲಿ ಇಲ್ಲಿ ನಡೆದ ವಿದ್ಯಮಾನಗಳ‌ ಅರಿವಿರಲಿಲ್ಲ.

ಆಫೀಸಿಗೆ ತೆರಳದೆ ನಾಲ್ಕು ದಿನಗಳಾಗಿದ್ದರಿಂದ ಬೆಳಗ್ಗೆ ಬೇಗನೆ ತಯಾರಾಗಿ ತಿಂಡಿ ಮುಗಿಸಿ ಆಫೀಸಿನತ್ತ ಹೋಗಲು ಯೋಚಿಸಿದ್ದ. ತಿಂಡಿ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ "ಅಭಿ ನಿನ್ಹತ್ರ ಒಂದು ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ. ಆಫೀಸಿಗೆ ಮಧ್ಯಾಹ್ನದ ನಂತರ ಹೋಗಬಹುದು" ಎಂದರು ಸಚ್ಚಿದಾನಂದ.

"ಡ್ಯಾಡ್, ಆಫೀಸ್ ಕಡೆ ಹೋಗದೆ ನಾಲ್ಕು ದಿನವಾಯ್ತು. ಇವತ್ತು ಒಂದೆರಡು ಮುಖ್ಯವಾದ ಮೀಟಿಂಗ್ ಬೇರೆ ಇದೆ. ಸಂಜೆ ಮಾತಾಡಿದ್ರೆ ಆಗೋಲ್ವಾ" ಕೇಳಿದ.

"ಮೀಟಿಂಗ್ಸ್ ನಾಳೆಗೆ ಮುಂದೂಡೋಕೆ ಹೇಳಿದ್ದೀನಿ. ಇದು ತುಂಬಾ ಮುಖ್ಯವಾದ ವಿಷಯ" ಎಂದ ತಂದೆಯ ಮಾತಿಗೆ, 

"ಒಕೆ ಡ್ಯಾಡ್. ಹೇಳಿ. ಏನು ವಿಷ್ಯ?" ಸೋಫಾದಲ್ಲಿ ಕುಳಿತು ಕೇಳಿದ.

ಸಚ್ಚಿದಾನಂದರು ಮಡದಿ, ಮಗಳೆಡೆ ನೋಟ ಹರಿಸಿದರು. ಅವನನ್ನು ಬಿಟ್ಟು ಉಳಿದ ಮೂವರು ಈ ಬಗ್ಗೆ ಚರ್ಚಿಸಿದ್ದರು. ಅವರೆಲ್ಲರಿಗೂ ಸಮ್ಮತವೇ. ಸಚ್ಚಿದಾನಂದರಿಗೆ ಸಮನ್ವಿತಾಳ ಪ್ರೌಢತೆ, ನೇರಮಾತು ಹಿಡಿಸಿತ್ತು. ಮೃದುಲಾ ಅವರು ಈ ಕ್ಷಣವೇ ಮನೆತುಂಬಿಸಿಕೊಳ್ಳಲೂ ತಯಾರು. ಇನ್ನು ಆಕೃತಿಯಂತು ತಮ್ಮ ಒಪ್ಪಿಗೆಯನ್ನು ಸಮನ್ವಿತಾಳಿಗೆ ತಿಳಿಸಲು ತುದಿಗಾಲಿನಲ್ಲಿ ನಿಂತಿದ್ದಳು. ಆದರೆ ಸಚ್ಚಿದಾನಂದ ಅವರು ಮಗನ ಅಭಿಪ್ರಾಯ ತಿಳಿಯುವ ತನಕ ಯಾರಿಗೂ ಏನೂ ಹೇಳುವಹಾಗಿಲ್ಲವೆಂದು ಕಟ್ಟಪ್ಪಣೆ ಹೊರಡಿಸಿದ್ದರಿಂದ ಸುಮ್ಮನಿದ್ದಳು. ಹಾಗಾಗಿ ಮೂವರೂ ಚರ್ಚಿಸಿ, ತಮಗೆಲ್ಲರಿಗೂ ಒಪ್ಪಿಗೆ ಆದರೂ ಮಗನ ತೀರ್ಮಾನವೇ ಅಂತಿಮ ಎಂದು ನಿರ್ಧರಿಸಿದ್ದರು. ಅದಕ್ಕಾಗಿಯೇ ಈ ದುಂಡು ಮೇಜಿನ ಪರಿಷತ್ತು.

ಮಾತನಾಡಲಿದೆ ಎಂದು ತನ್ನನ್ನು ಉಳಿಸಿಕೊಂಡು ಸುಮ್ಮನೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಿದ್ದುದು ಕಂಡು ಏನೋ ಗಹನವಾದ ವಿಚಾರವೆಂದು ಅನಿಸಿತು ಅವನಿಗೆ.

"ಯಾಕೆ ಡ್ಯಾಡ್, ಏನಾಯ್ತು? ಮಾತಾಡ್ಬೇಕು ಅಂತ ಹೇಳಿ ಎಲ್ಲಾ ಸುಮ್ನಿದ್ದೀರಲ್ಲ" ಕೇಳಿದ.

ಮತ್ತೆ ತನ್ನೆಡೆ ನೋಡಿದ ಗಂಡನಿಗೆ, "ಅಯ್ಯೋ ರಾಮಾ, ಅದೇನು ನನ್ನ ಮುಖ ನೋಡ್ತಿದ್ದೀರಾ. ಇಡೀ ದಿನ ಆ ನ್ಯೂಸ್ ರೀಡರ್ ನ ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತೀರಾ. ಅವಳು ನ್ಯೂಸ್ ಓದೋ ಹಾಗೆ ವಿಷಯ ಹೇಳಿ ಅವನಿಗೆ" ಗದರಿದರು ಮೃದುಲಾ. ಯಾಕೋ ಇದು ತನ್ನ ಬುಡಕ್ಕೆ ಬರುತ್ತದೆ ಅನಿಸಿದಾಗ ಸಚ್ಚಿದಾನಂದ್ ತಾವೇ ಮಾತನಾಡುವುದು ಒಳಿತೆಂದು,

"ಅಭಿ, ಸತ್ಯಂ ರಾವ್ ಒಂದು ಪ್ರಸ್ತಾಪ ತಂದಿದ್ದಾರೆ" ಎಂದರು.

ರಾವ್ ಅವರ ಹೆಸರು ಕೇಳಿದ್ದೇ, 'ಮಗಳು ನನ್ನ ಮೆದುಳಿಗೆ ಕೈಹಾಕಿ ಒಂಥರಾ ಕಾಟ ಕೊಡ್ತಾ ಇದ್ದಾಳೆ, ಈಗ ಅಪ್ಪನ ಕಾಟ ಬೇರೆ. ಈ ಅಪ್ಪ ಮಗಳು ಏನು ಮಾಡಬೇಕು ಅಂದ್ಕೋಡಿದ್ದಾರೋ' ಎಂದುಕೊಂಡವ,

"ಡ್ಯಾಡ್, ನಾನು ನಿಮಗೆ ಅವತ್ತೇ ಹೇಳಿದ್ದೆ. ಪಾರ್ಟಿಗೆ ಕರೆದಿರುವ ಹಿಂದೆ ಏನೋ ಉದ್ದೇಶ ಇದೆ ಅಂತ. ಐ ನ್ಯೂ ಇಟ್. ಏನಂತೆ ಅವರ ಪ್ರಸ್ತಾಪ" ಕೇಳಿದ ವಿಷಯದ ಅರಿವಿಲ್ಲದೇ.

"ಹೆಚ್ಚೇನಿಲ್ಲ. ನಿನಗೊಂದು ಮೂಗುದಾರ ಹಾಕಿ, ನಿನ್ನ ಜುಟ್ಟನ್ನು ಅವರ ಮಗಳ ಕೈಗೆ ಕೊಡೋ ಪ್ರಸ್ತಾಪ" ಕಿಸಕ್ಕನೆ ನಗುತ್ತಾ ಹೇಳಿದಳು ಆಕೃತಿ.

ಅವಳ ಮಾತಿನ ತಲೆಬುಡ ಅರ್ಥವಾಗಲಿಲ್ಲ ಅವನಿಗೆ. 

"ಏನು ಹಾಗಂದ್ರೆ. ನನಗೆ ಅರ್ಥ ಆಗ್ತಿಲ್ಲ" ಕೇಳಿದ.

"ಸತ್ಯಂ ರಾವ್ ದಂಪತಿಗಳು ಸಮನ್ವಿತಾ ಮತ್ತೆ ನಿನ್ನ ಮದುವೆ ಪ್ರಸ್ತಾಪ ಮಾಡಿದ್ದಾರೆ" ತಾಯಿ ಹೇಳುತ್ತಿದ್ದರೆ ಗರಬಡಿದವನಂತೆ ಕುಳಿತಿದ್ದ ಅಭಿರಾಮ್. ಅವನಿಗೆ ಏನು ಪ್ರತಿಕ್ರಿಯಿಸಬೇಕೋ ತಿಳಿಯದೇ ಮೌನವಾಗಿದ್ದ.

ಅವನು ಮೌನವಾಗಿರುವುದನ್ನು ಕಂಡು ಸಚ್ಚಿದಾನಂದ್ ಅವನ ಮನೋವಿಪ್ಲವ ಅರಿತವರಂತೆ,

"ನೋಡು ಅಭಿ, ಇದಕ್ಕೆ ನಮ್ಮ ವಿರೋಧವಿಲ್ಲ. ನಮಗೆಲ್ಲಾ ಸಮನ್ವಿತಾ ಬಹಳ ಹಿಡಿಸಿದ್ದಾಳೆ. ಆದರೆ ನಿನ್ನ ಅಭಿಪ್ರಾಯವಿಲ್ಲಿ ಬಹಳ ಮುಖ್ಯ. ಏಕೆಂದರೆ ಅವಳೊಂದಿಗೆ ಜೀವನ ಸವೆಸಬೇಕಾಗಿರುವವನು ನೀನು. ನಿನಗೆ ಯಾರ ಒತ್ತಾಯವೂ ಇಲ್ಲ. ಸರಿಯಾಗಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಾ. ಆಮೇಲೆ ಮಾತನಾಡೋಣ" ಎಂದು ಅವನಿಗೆ ಯೋಚಿಸಲು ಅವಕಾಶ ಕೊಟ್ಟರು.

"ಥ್ಯಾಂಕ್ಸ್ ಡ್ಯಾಡ್, ನಾನು ಯೋಚಿಸ್ತೀನಿ" ಎಂದವನೇ ನೇರ ತನ್ನ ರೂಮಿನತ್ತ ನಡೆದ.

       *********ಮುಂದುವರೆಯುತ್ತದೆ*********



ಅನೂಹ್ಯ 18

ಮಾಲಿನಿ ಎರಡು ಗ್ಲಾಸ್ ಗಳಲ್ಲಿ ವಿಸ್ಕಿ ಸುರಿದುಕೊಂಡು ಪತಿಯಿದ್ದಲ್ಲಿಗೆ ಆಗಮಿಸಿದಾಗ ರಾವ್ ಬಾಲ್ಕನಿಯಲ್ಲಿ ಕುಳಿತು ಗಹನವಾದ ಆಲೋಚನೆಯಲ್ಲಿ ಮುಳುಗಿದ್ದರು.

"ಸತ್ಯ, ಟೇಕ್ ದಿಸ್" ಒಂದು ಗ್ಲಾಸ್ ಅವರೆಡೆ ಚಾಚಿದಾಗ, ಗ್ಲಾಸ್ ತೆಗೆದುಕೊಂಡು ತುಟಿಗಿರಿಸಿದವರು,

"ನಿನ್ನೆ ಪ್ಲಾನ್ ನಾವಂದುಕೊಂಡಿದ್ದಕ್ಕಿಂತ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ನಿನ್ನ ಮಗಳಿಗೊಂದು ಥ್ಯಾಂಕ್ಸ್ ಹೇಳಲೇಬೇಕು ನೋಡು. ಲೈಫಲ್ಲಿ ಫಸ್ಟ್ ಟೈಮ್ ಒಂದು ನೆಟ್ಟಗಿರೋ ಕೆಲ್ಸ ಮಾಡಿರೋದು" ಎಂದರು.

"ನನಗಂತೂ ಅವಳ್ದೇ ಭಯ ಆಗಿತ್ತು. ಎಲ್ಲಿ ಏನು ಮಾಡ್ತಾಳೋ ಅಂತ. ಬಟ್ ಥ್ಯಾಂಕ್ ಗಾಡ್.... ಹಾಗೇನೂ ಮಾಡಿಲ್ಲ. ಇನ್ ಫ್ಯಾಕ್ಟ್ ಶರ್ಮಾಸ್ ತುಂಬಾ ಇಂಪ್ರೆಸ್ ಆದ್ರೂ ಸಮನ್ವಿತಾನ ನೋಡಿ. ಅವರು ಮಾತಾಡಿದ್ದು ನೋಡಿದ್ರಲ್ಲಾ. ವಾಟ್ ನೆಕ್ಸ್ಟ್?" ಕೇಳಿದರು ಮಾಲಿನಿ.

"ಆದಷ್ಟು ಬೇಗ ಮುಂದಿನ ಕೆಲಸ ಮಾಡಬೇಕು. ಆದ್ರೆ ಅದು ಸಮನ್ವಿತಾಗೆ ಎಟ್ ಎನೀ ಕಾಸ್ಟ್ ಗೊತ್ತಾಗಬಾರದು. ಅವಳು ನಿನ್ನೆ ಅವರತ್ರ ಚೆನ್ನಾಗಿ ಮಾತಾಡಿರಬಹುದು. ಆದರೆ ಅವಳು ನಾವು ಹೇಳಿದ್ದು ಒಪ್ತಾಳೆ‌ ಅನ್ಸೋಲ್ಲ ನಂಗೆ. ಅವಳಿಗೆ ಗೊತ್ತಾದ್ರೆ ಅದೇ ಎಲ್ಲದಕ್ಕೂ ದೊಡ್ಡ ಪ್ರಾಬ್ಲಮ್ ಆಗಬಹುದು. ಸೋ ಹೇಗೆ ಮಾಡೋದು ಅಂತ ಯೋಚಿಸ್ತಿದ್ದೀನಿ" 

"ಅವಳು ಒಪ್ಪೋದಿಲ್ಲ ಅಂತ ಯಾಕೆ ಅನ್ಸುತ್ತೆ ನಿಂಗೆ. ಇಷ್ಟೊಳ್ಳೆ ಆಫರ್ ಇನ್ನೆಲ್ಲಿ ಸಿಗುತ್ತೆ. ಶರ್ಮಾಸ್ ಸ್ಟೇಟಸ್, ಹಣ ಎಲ್ಲದರಲ್ಲೂ ನಮಗಿಂತ ಮೇಲಿದ್ದಾರೆ. ದೆನ್ ವಾಟ್ಸ್ ದಿ ಪ್ರಾಬ್ಲಮ್?" 

"ಮಾಲಿನಿ, ಅದು ನೀನಲ್ಲ. ಶಿ ಈಸ್ ಸಮನ್ವಿತಾ. ಅವಳು ಯೋಚನೆ ಮಾಡೋದೇ ಬೇರೆ ತರ. ಲೆಟ್ ಮೀ ಥಿಂಕ್" 

ತಮ್ಮ ಯೋಜನೆಯ ಯಶಸ್ಸಿನ ಬಗ್ಗೆ ಯೋಚಿಸುತ್ತಿದ್ದ ದಂಪತಿಗಳಿಗೆ ಈ ಪ್ಲಾನ್ ಎರಡು ಜೀವಗಳ ಬದುಕಿಗೆ ಸಂಬಂಧಿಸಿದ್ದು ಹಾಗೂ ಆ ಇಬ್ಬರಲ್ಲಿ ಒಬ್ಬಳು ತಮ್ಮದೇ ರಕ್ತ ಹಂಚಿಕೊಂಡಿರುವ ಮಗಳು ಎಂಬುದರ ಯೋಚನೆಯೇ ಇರಲಿಲ್ಲ….. ತಮ್ಮ ಯೋಜನೆ ಮಗಳಿಗೆ ತಿಳಿದಾಗ ಆ ಜೀವ ಎಷ್ಟು ಸಂಕಟಪಡಬಹುದೆಂಬ ಕಲ್ಪನೆಯೂ ಅವರಿಗೆ ಬರಲು ಸಾಧ್ಯವಿಲ್ಲ. ಅವರ ತಲೆಯಲ್ಲಿರುವುದು ಬಿಸ್ನೆಸ್ ಹಾಗೂ ಹಣ.....ಹಣ..... ಮತ್ತಷ್ಟು ಹಣ........ ಎಣಿಕೆಗೆ ಸಿಗದಷ್ಟು ಹಣ......

"ಮೇ ಐ ಕಮ್ ಇನ್ ಸರ್" ಚೈತಾಲಿ ಕೇಳಿದಾಗ, "ಯಾ ಗೆಟ್ ಇನ್" ಎಂದರು ಮಾಲಿನಿ.

"ಗುಡ್ ಈವ್ನಿಂಗ್ ಸರ್ ಎಂಡ್ ಮ್ಯಾಮ್. ಸರ್, ಸಮನ್ವಿತಾ ಮ್ಯಾಮ್ ಬೆಳಗ್ಗಿನಿಂದ ನಾಲ್ಕು ಸಲ ಬಂದಿದ್ರು. ನಿಮ್ಮ ಹತ್ರ ಮಾತಾಡ್ಬೇಕು ಅಂತ" ಚೈತಾಲಿ ಹೇಳಿದಾಗ ಗಂಡ-ಹೆಂಡತಿ ಗಾಬರಿಬಿದ್ದರು. ಎಲ್ಲಾ ಸರಿಯಾಗಿ ಹೋಗ್ತಿರುವಾಗ ಇನ್ನೇನಪ್ಪಾ ಎಂದುಕೊಂಡು, " ಚೈತಾಲಿ ಅವಳು ಬಂದಾಗಲೇ ಒಳಗೆ ಕಳ್ಸೋದು ತಾನೇ?" ಕೆಂಗಣ್ಣಿನಿಂದ ಗದರಿದರು ರಾವ್.

"ಸರ್...... ಸರ್.. ಅದೂ.... ಮತ್ತೆ.. ಅದು.. ನೀವು ಇನ್ನೂ ಎದ್ದಿರಲಿಲ್ಲ" ಹೇಳಲೋ ಬೇಡವೋ ಎಂಬಂತೆ ಹೇಳಿದಳು. ಹಿಂದಿನ ರಾತ್ರಿಯ ಪಾರ್ಟಿಯಲ್ಲಿ ಎಲ್ಲಾ ಅವರಂದುಕೊಂಡಂತೆ ನಡೆದ ಖುಷಿಗೆ ಕುಡಿದು, ಕುಣಿದು ಕುಪ್ಪಳಿಸಿ ಮಲಗಿದ್ದವರಿಗೆ ಎಚ್ಚರವಾದಾಗ ಮಧ್ಯಾಹ್ನ ಮೂರು ಗಂಟೆ. ಈಗ ನಾಲ್ಕು ಗಂಟೆ.  ಚೈತಾಲಿ ಹೇಳಿದ್ದು ನಿಜವೇ ಎನಿಸಿದಾಗ ಇಬ್ಬರೂ ಸುಮ್ಮನಾದರು.

"ಸರಿ ಈಗ್ಲೇ ಕಳಿಸು ಹೋಗು" ಎಂದರು ಮಾಲಿನಿ. ಚೈತಾಲಿ ಅವಳನ್ನು ಕರೆಯಲು ಹೋದರೆ ಇಬ್ಬರಿಗೂ ಕುಡಿದು ನಶೆಯೆಲ್ಲ ಇಳಿದಿತ್ತು. ಬೆಳಗ್ಗಿನಿಂದ ನಾಲ್ಕು ಬಾರಿ ಬಂದುಹೋಗಿರುವಳೆಂದರೆ ಏನೋ ಗಹನವಾದ ವಿಚಾರವೇ ಇರಬೇಕು ಎನಿಸಿತು.

"ಸತ್ಯ, ಮೋಸ್ಟಲೀ ಅವಳೇ ನಾನು ಅಭಿರಾಮ್ ನ ಮದ್ವೆ ಆಗ್ತೀನಿ ಅಂತ ಹೇಳೋಕೆ ಬಂದಿರ್ಬಹುದೇನೋ. ಅವಳಿಗೆ‌ ಇಷ್ಟ ಆಗಿರಬಹುದು ಅವನು" ಮೇರೆ ಮೀರಿದ ಸಂತಸದಿಂದ ಹೇಳಿದರು ಮಾಲಿನಿ.

"ಜಸ್ಟ್ ಶಟ್ ಅಪ್ ಮಾಲಿನಿ. ನಾನಾಗ್ಲೇ ಹೇಳಿದ್ದೀನಿ ಅದು ನೀನಲ್ಲ. ಸುಮ್ನಿರು ಅವಳು ಕೇಳಿಸ್ಕೊಂಡ್ರೆ ಕಷ್ಟ" ಸುಮ್ಮನಾಗಿಸಿ, "ಮೊದ್ಲು ಈ ಗ್ಲಾಸ್ಗಳನ್ನು ಎತ್ತಿಡು" ಆಳನ್ನು ಕರೆದು ಗದರಿದರು.

ಐದು ನಿಮಿಷಗಳಲ್ಲಿ "ಮೇ ಐ ಗೆಟ್ ಇನ್ ಡ್ಯಾಡ್" ಸಮನ್ವಿತಾಳ ದನಿ. ದನಿಯ ಹಿಂದೆಯೇ ಒಳಬಂದಳು ಕೂಡಾ.

"ಚೈತಾಲಿ ಯಾರು ಬಂದ್ರೂ ಒಳಗೆ ಬಿಡಬೇಡ" ಎಂದು ಅವಳನ್ನು ಹೊರಗೆ ಕಳಿಸಿ, "ಸಾರಿ ಬೇಬಿ, ರಾತ್ರಿ ಏನೋ ಇಂಪಾರ್ಟೆಂಟ್ ಡಿಸ್ಕಷನ್. ಮಲಗುವಾಗ ಲೇಟಾಗಿತ್ತು. ಸೋ ಎದ್ದಿದ್ದೂ ಲೇಟ್. ನೀನು ಮೂರ್ನಾಲ್ಕು ಸಲ ಬಂದು ಹೋದ್ಯಂತೆ" ಕೇಳಿದರು ರಾವ್.

ಅವರ ಇಂಪಾರ್ಟೆಂಟ್ ಡಿಸ್ಕಷನ್ ಏನಿರಬಹುದೆಂಬ ಕಲ್ಪನೆ ಅವಳಿಗಿತ್ತು. ಹಾಗಾಗಿ ಅವಳೇನು ಪ್ರಶ್ನಿಸಲು ಹೋಗಲಿಲ್ಲ. "ಹೌದು ಡ್ಯಾಡ್, ಸ್ವಲ್ಪ ಮಾತಾಡೋದಿತ್ತು. ಅದಕ್ಕೆ ಬಂದಿದ್ದೆ" ಎಂದಳು

"ಹೇಳು ಬೇಬಿ. ಏನು ವಿಷ್ಯ. ಡು ಯು ನೀಡ್ ಎನಿ ಹೆಲ್ಪ್?" ಕೇಳಿದರು.

"ಹೆಲ್ಪ್ ಏನೂ ಬೇಡ. ನಾನು ಏನೋ ಹೇಳ್ಬೇಕಿತ್ತು." ಎಂದಳು ಅನುಮಾನಿಸುತ್ತಾ. ರಾವ್ ದಂಪತಿಗಳು ಏನು ಎಂಬಂತೆ ನೋಡಿದರು.

"ಡ್ಯಾಡ್ ಮಾಮ್, ನಾನು ಹಾಸ್ಪಿಟಲ್ ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದೀನಿ. ನಿನ್ನೆಯಿಂದ ಹೇಳ್ಬೇಕು ಅಂದ್ಕೊಂಡೆ ಬಟ್ ನೀವು ಸಿಗ್ಲಿಲ್ಲ." ಎಂದಳು.

ಅವಳು ಹೇಳಿದ ವಿಷಯ ಕೇಳಿ ರಾವ್ ದಂಪತಿಗಳಿಗೆ ನಿರಾಳವಾಯಿತು. ರಾವ್ ಅವರು ಅರೆಘಳಿಗೆ ಯೋಚಿಸದೆ, "ನೀನು ಹೇಳೋದು ಸರಿಯೇ. ನಿನ್ನ ಕೆಲಸದಲ್ಲಿ ಹೊತ್ತು ಗೊತ್ತು ಇರೋಲ್ಲ. ನೈಟ್ ಡ್ಯೂಟಿ ಎಲ್ಲಾ ಇರುತ್ತೆ. ನೀನು ಶಿಫ್ಟ್ ಆಗು. ನಾನು ಶಿಫ್ಟಿಂಗ್ ವ್ಯವಸ್ಥೆ ಎಲ್ಲಾ ಮಾಡಿಸ್ತೀನಿ" ಎಂದುಬಿಟ್ಟರು…..!

"ನೋ ಥ್ಯಾಂಕ್ಸ್ ಡ್ಯಾಡ್. ಶಿಫ್ಟಿಂಗ್ ಆಗಿದೆ. ನಿಮಗೆ ಹೇಳ್ಬೇಕಿತ್ತಷ್ಟೇ. ಯು ಕ್ಯಾರಿ ಆನ್" ಎಂದವಳೇ, ಕಣ್ಣ ಹನಿ ಕೆಳಗಿಳಿಯುವ ಮೊದಲು ಹೊರಬಂದು ತನ್ನ ಕೋಣೆಯತ್ತ ನಡೆದಿದ್ದಳು.

ಕೋಣೆಗೆ ಬಂದವಳ ಕಣ್ಣಿಂದ ಕಂಬನಿ ಧಾರಾಕಾರವಾಗಿ ಸುರಿಯುತ್ತಿತ್ತು. ಪ್ರೀತಿ, ವಿಶ್ವಾಸ, ಮಮತೆಗಳಂತೂ ಎಂದಿಗೂ ಮರೀಚಿಕೆಯೇ….. ಕೊನೆಪಕ್ಷ ಮನೆಬಿಟ್ಟು ಹೋಗುತ್ತಿರುವೆನೆಂದು ಮಗಳು ಹೇಳುತ್ತಿರುವಾಗ ಒಂದು ಬಾರಿ........ ಒಂದೇ ಒಂದು ಬಾರಿ….... ಬಾಯ್ಮಾತಿಗಾದರೂ ಒಂದು ಬಾರಿ ತಾಯ್ತಂದೆಯರು "ಹೋಗಬೇಡ" ಎನ್ನಬಹುದು ಎಂಬ ನಿರೀಕ್ಷೆಯಿತ್ತು ಅವಳಿಗೆ....ಅದಕ್ಕೂ ತಿಲಾಂಜಲಿ ಇಟ್ಟಿದ್ದರು ಅವಳ ಹೆತ್ತವರು ಎನಿಸಿಕೊಂಡ ಜನ.

ಅವಳೆಂದೂ ಹೆತ್ತವರಿಗೆ ಹತ್ತಿರವಾಗಿರಲೇ ಇಲ್ಲ. ಅವರಿಗೆ ತನ್ನ ಬಗ್ಗೆ ಯಾವುದೇ ಭಾವನೆಗಳಿಲ್ಲ ಎಂದು ಅವರ ವರ್ತನೆ ಅವಳಿಗೆ ತಿಳಿಸುತ್ತಿತ್ತು. ಆದರೆ ಮನಸ್ಸು ಕೇಳಬೇಕಲ್ಲ..... ಭ್ರಮನಿರಸನ ಖಚಿತವೆಂದು ತಿಳಿದಿದ್ದರೂ ನಿರೀಕ್ಷೆ ಮಾಡುತ್ತದೆ. ನಿರೀಕ್ಷೆಗಳಿಲ್ಲದೇ ಜೀವಿಸಲು ಸಾಧ್ಯವೇ? ಬದುಕಲು ಯಾವುದೇ ಲಕ್ಷ್ಯ ಇಲ್ಲದಾಗಲೂ, ಪರಿಸ್ಥಿತಿ ಸಂಪೂರ್ಣ ವಿಷಮವಾಗಿದ್ದಾಗಲೂ ಮನುಷ್ಯ ಜೀವಿಸುತ್ತಾನೆ. ಏಕೆ? ಇಂದು ಹೇಗೇ ಇರಲಿ ನಾಳೆ ಎಲ್ಲವೂ ಸರಿಯಾಗುವುದೆಂಬ ನಿರೀಕ್ಷೆಯಲ್ಲಿ ಅಲ್ಲವೇ? ಆ ನಿರೀಕ್ಷೆಯನ್ನೇ ಕೊಂದುಕೊಂಡು ಬದುಕುವ ಬಗೆಯೆಂತು? 

ಇದೆಂಥಾ ಬದುಕು ತನ್ನದು. ಒಂದು ಸಣ್ಣ ನಿರೀಕ್ಷೆಯನ್ನು ಇರಿಸಿಕೊಳ್ಳಲು ತನಗೆ ಹಕ್ಕಿಲ್ಲವೇ? ಈ ಭಾಗ್ಯಕ್ಕೆ ಕುಟುಂಬ, ಪರಿವಾರ, ಸಂಬಂಧಗಳು ಏಕೆ ಬೇಕು? ಒಂದು ಕ್ಷಣ ಯೋಚಿಸದೆ 'ಸರಿ ಹೋಗು' ಎಂದರಲ್ಲ ತನ್ನ ಹೆತ್ತವರು.... ಅವರಿಗೆ ಇಲ್ಲದ ಯೋಚನೆ ತನಗೇಕೆ? 'Expectations always hurts ' ಎನ್ನುತ್ತಾರಲ್ಲವೇ. ಅವರಿಂದ ನಿರೀಕ್ಷಿಸಿದ್ದು ತನ್ನದೇ ತಪ್ಪು. ಇಷ್ಟಕ್ಕೂ ತಾನೇಕೆ ಅಳುತ್ತಿದ್ದೇನೆ? ಹೇಗಿದ್ದರೂ ಮನೆಯಿಂದ ಹೊರಹೋಗುವುದೆಂದು ಮೊದಲೇ ನಿರ್ಧರಿಸಿದ್ದೆ. ಅವರು 'ಹೋಗು' ಎಂದರೂ 'ಬೇಡ' ಎಂದರೂ ತನ್ನ ನಿರ್ಧಾರ ಅಚಲವಿತ್ತು. ಮತ್ತೇಕೆ ಈ ಕಣ್ಣೀರು? ಅವರ ನಿರ್ಧಾರ ತನಗೆ ಒಳ್ಳೆಯದೇ ಆಯಿತಲ್ಲವೇ?

ಹುಚ್ಚು ಖೋಡಿ ಮನಸ್ಸು.... ಮನವೆಂಬುದು ಒಂಥರಾ ನಾಯಿ ಬಾಲದಂತೆ.... ಎಷ್ಟೇ ನೇರವಾಗಿ ಯೋಚಿಸೆಂದರೂ ಮತ್ತೆಮತ್ತೆ ಬೇಡದ್ದನ್ನೇ ಯೋಚಿಸಿ ಹೈರಾಣಾಗುತ್ತದೆ. ಅಳಬಾರದು ತಾನು ಎಂದು ಕಣ್ಣೊರೆಸಿಕೊಂಡು ಎದ್ದಾಗ ಎದುರಿಗೆ ಚೈತಾಲಿ ನಿಂತಿದ್ದಳು…..

"ಯಾಕೆ‌ ಚೈತಾಲಿ ಅಲ್ಲೇ ನಿಂತೆ ಒಳಗೆ ಬಾ" ತುಟಿಯಲ್ಲಿ ನಗುವರಳಿಸಿ ನುಡಿದಳು.

"ಸಾರಿ ಮ್ಯಾಮ್, ನಾನು... ಡೋರ್...."

"ಇಟ್ಸ್ ಓಕೆ ಚೈತಾಲಿ. ನಾನು ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದೀನಿ. ನಿನ್ನ ತುಂಬಾ ಮಿಸ್ ಮಾಡ್ಕೋತೀನಿ. ಸ್ಪೆಷಲೀ ನಿನ್ನ 'ಮ್ಯಾಮ್' ಅನ್ನೋ ಕರೆನ ಮಿಸ್ ಮಾಡ್ಕೋತೀನಿ" ಎಂದು ಅವಳನ್ನಪ್ಪಿದಳು.

ಚೈತಾಲಿಗೆ ಗಾಬರಿ. ಈ ಮನೆಯಲ್ಲಿ ಇಂತಹವು ನಿಷಿದ್ಧ. 'ಬಾಸ್ ನೋಡಿದ್ರೆ ಬೈತಾರೆ' ಮಿದುಳು ಎಚ್ಚರಿಸಿತಾದರೂ  ಮೊದಲೇ ಬೇಸರದಲ್ಲಿದ್ದ  ಸಮನ್ವಿತಾಳಿಗೆ ಸ್ವಲ್ಪವಾದರೂ ಸಾಂತ್ವನ ದೊರೆಯಲಿ ಎಂದು ಸುಮ್ಮನಾದಳು.

"ಆಗಾಗ ಬರ್ತಿರು. ನೀನೂ ನನ್ನ ಮರ್ತು ಬಿಡಬೇಡ" ಎಂದವಳನ್ನು ನೋಡಿ,

"ನಿಮ್ಮ ಬಗ್ಗೆ ಸರಿಯಾಗಿ ತಿಳಿದಿರೋ ಯಾರೂ ನಿಮ್ಮನ್ನ ಮರೆಯೋಲ್ಲ ಮ್ಯಾಮ್. ನೀವು ಬರ್ಬೇಡ ಅಂದ್ರೂ ನಾನು ಬಂದೇ ಬರ್ತೀನಿ ನಿಮ್ಮನ್ನು ಭೇಟಿಯಾಗೋಕೆ" ಎಂದವಳಿಗೆ ಅದೇನೆನಿಸಿತೋ…. "ನೀವು ತುಂಬಾ ಒಳ್ಳೆಯವರು ಮ್ಯಾಮ್. ನಿಮ್ಮಪ್ಪ ಅಮ್ಮಂಗೆ ನಿಮ್ಮಂಥಾ ಮಗಳ ಜೊತೆ ಇರೋ ಅದೃಷ್ಟ ಇಲ್ಲ ಅಷ್ಟೇ. ಅವರಿಗೋಸ್ಕರ ನೀವು ಅಳ್ಬೇಡಿ. ನಿಮ್ಮ ಕಣ್ಣೀರಿಗೆ ಅವರು ಯೋಗ್ಯರಲ್ಲ" ಎಂದು ಬಿಟ್ಟಳು.

"ಯಾರಿಗೆ ಅದೃಷ್ಟ ಇಲ್ವೋ, ಯಾರಿಗೆ ಯೋಗ್ಯತೆ ಇಲ್ವೋ ಗೊತ್ತಿಲ್ಲ. ಆದ್ರೆ ಇನ್ನು ಸ್ವಲ್ಪ ದಿನ ಇಲ್ಲಿದ್ರೆ ನನಗೆ ಹುಚ್ಚು ಹಿಡಿಯೋದಂತು ಸತ್ಯ. ಅದಕ್ಕೆ ಮುಂಚೆ ಇಲ್ಲಿಂದ ಹೊರಟು ಬಿಡ್ತೀನಿ" ಎಂದವಳು ತನ್ನ ಕಬೋರ್ಡಿನಿಂದ ಸೀರೆಯೊಂದನ್ನು ಹೊರಗೆಳೆದಳು. ಹೊಸ ಸೀರೆ…. ಇನ್ನೂ ಕಟ್ಟು ಬಿಚ್ಚಿರಲಿಲ್ಲ.....

ಕಾಂಚೀಪುರಂ ಗೆ ಒಮ್ಮೆ ಅಲ್ಲಿನ ನೇಕಾರರ ಪರಿಸ್ಥಿತಿ ಹೇಗಿರಬಹುದು ಎಂದು ನೋಡುವ ಕುತೂಹಲದಿಂದ ಹೋಗಿದ್ದಳು. ಅಲ್ಲಿ ನೇರವಾಗಿ ನೇಕಾರರೊಬ್ಬರಿಂದ ಖರೀದಿಸಿದ ಸೀರೆಯದು. ಅವಳು ಖರೀದಿಸಿದ್ದು ತಾಯಿಗೆಂದು. ಆದರೆ ಎಂದೂ ಮಾಲಿನಿಯವರಿಗೆ ಅದನ್ನು ಕೊಡುವ ಮನಸ್ಸಾಗಲಿಲ್ಲ. ಇಂದಾದರೂ ಹೋಗುವ ಮುನ್ನ ಕೊಡುವ ಎಂದುಕೊಂಡಿದ್ದಳು..... ಈಗ ಬೇಡವೆಂದಿತು ಮನ‌........ ಅವರಂತೂ ಉಡಲಾರರು.......

ಅದನ್ನು ಆಪ್ಯಾಯಮಾನತೆಯಿಂದ ಒಮ್ಮೆ ಸವರಿ ಎದೆಗೆತ್ತಿಕೊಂಡಳು.......

ಚೈತಾಲಿಯೆಡೆ ತಿರುಗಿ,

"ತಗೋ ಚೈತಾಲಿ, ಇದನ್ನು ನಿನ್ನ ತಾಯಿಗೆ ಕೊಡು" ಅವಳ ಕೈಗಿತ್ತಳು.

"ಅದೂ... ಮ್ಯಾಮ್..."

"ಬೇರೇನೂ ಹೇಳ್ಬೇಡ. ನಾನು ನಿನಗಲ್ಲ ಕೊಡ್ತಿರೋದು ಅಮ್ಮನಿಗೆ. ಇದು ನಿನ್ನ ಬಾಸ್ ದುಡ್ಡಿನಿಂದ ತಗೊಂಡದ್ದಲ್ಲ. ಇದು ನನ್ನ ಸ್ವಂತ ಹಣದಿಂದ ಕೊಂಡದ್ದು. ನಿನ್ನ ಅಮ್ಮ ಕೇಳಿದ್ರೆ 'ಯಾರೋ ಒಬ್ಬ ನತದೃಷ್ಟ ಮಗಳು ಅಮ್ಮನಿಗೆ ಅಂತ ತಂದೂ ಕೊಡಲಾಗದೆ ಉಳಿದದ್ದು' ಅಂತ ಹೇಳು" ಎಂದವಳ ಮಾತಿಗೆ ಮರುನುಡಿಯದೇ ತಗೆದುಕೊಂಡಳು ಚೈತಾಲಿ.

ಮತ್ತೊಂದು ಮಾತನಾಡದೆ ತನ್ನ ಬ್ಯಾಗ್ ಹಾಗೂ ಮೊಬೈಲ್ ಹಿಡಿದು ರೂಮಿಂದ ಹೊರಬಿದ್ದವಳು, ಮತ್ತೊಮ್ಮೆ ಯಾರಿಗೂ ಹೇಳುವ ಗೋಜಿಗೆ ಹೋಗದೆ ಮನೆಯಿಂದ ಹಾಗೆ ಆ ಸಂಜೆ ಹೊರಬಿದ್ದಿದ್ದಳು. ಅವಳ ಕಾರು ಅನಾಥವಾಗಿ ಕಾಂಪೌಂಡಿನಲ್ಲಿ ನಿಂತಿತ್ತು. ಬಾಗಿಲಿಗೆ ಬಂದ ಚೈತಾಲಿ ಸಮನ್ವಿತಾ ಕೊಟ್ಟ ಸೀರೆಯನ್ನು ಎದೆಗವಚಿಕೊಂಡು ಅವಳು ಕಣ್ಮರೆಯಾಗುವಷ್ಟು ಹೊತ್ತು ಅಲ್ಲೇ ನಿಂತಿದ್ದಳು ಮಂಜು ಕವಿದ ಕಣ್ಣುಗಳಲ್ಲಿ.......

 *********ಮುಂದುವರೆಯುತ್ತದೆ***********



ಅನೂಹ್ಯ 17

ಸಮನ್ವಿತಾಳನ್ನು ಪಾರ್ಟಿಯಲ್ಲಿ ನೋಡಿದ ಕ್ಷಣವೇ ಅಭಿರಾಮ್ ಮನಕ್ಕೆ ಒಂದು ವಿಷಯ ಸ್ಪಷ್ಟವಾಗಿತ್ತು......

ನಾನಿವಳನ್ನು ಈ ಮೊದಲು ನೋಡಿದ್ದೇನೆ.........

ಮಾತನಾಡಿಸಿರುವೆನಾ? ಹೆಸರು ಗೊತ್ತಿತ್ತೇ? ಅದೊಂದೂ ತಿಳಿಯದು‌..... 

ಆದರೆ ಈ ಮೊದಲು ಈಕೆಯನ್ನು ನೋಡಿರುವುದಂತೂ ಸತ್ಯ........

ಆದರೆ ಎಲ್ಲಿ???

ಈ ಪ್ರಶ್ನೆಗೆ ಉತ್ತರ ಸಿಗದೆ ಹೆಣಗುತ್ತಿದ್ದ.

ಎಷ್ಟೇ ನೆನಪಿಸಿಕೊಂಡರೂ ಅವಳ ಮುಖಚರ್ಯೆಯ ಹೊರತು ಬೇರೇನೂ ನೆನಪಾಗದಾಯಿತು. ಆದರೆ ಹೀಗೇ ಎಲ್ಲೋ ನೋಡಿದ ಮುಖವೆನಿಸಲಿಲ್ಲ......

ಅವನು ಪ್ರಭಾವೀ ಉದ್ಯಮಿ. ದಿನಂಪ್ರತಿ ಹಲವಾರು ಜನರನ್ನು ಭೇಟಿಯಾಗುತ್ತಿರುತ್ತಾನೆ. ಅವರೆಲ್ಲರೂ ನೆನಪಿನಲ್ಲುಳಿಯುವುದಿಲ್ಲ.

ಆದರೆ ಅವಳ ಮುಖ ಕಂಡಕ್ಷಣವೇ ಅವನ ಮೆದುಳು, ಮನಸ್ಸು ಅವಳನ್ನು ಗುರುತಿಸಿತ್ತು. ಆದರೆ ಯಾವ ಸನ್ನಿವೇಶದಲ್ಲಿ ಭೇಟಿಯಾದೆ ಎಂಬುದು ಮಾತ್ರವೇ ನೆನಪಾಗಲಿಲ್ಲ….

ತಾನು ಸಾಮಾನ್ಯವಾಗಿ ಭೇಟಿ ನೀಡುವ ಆಫೀಸ್, ಫ್ಯಾಕ್ಟರಿ,ಕಲಾ ಗ್ಯಾಲರಿ, ಸ್ಪೋರ್ಟ್ಸ್ ಕ್ಲಬ್, ಹೋಟೆಲ್...... ಎಲ್ಲಾ ನೆನಪಿಸಿದರು ಆ ಮುಖದ ಹೊರತು ಬೇರೇನೂ ನೆನಪಾಗುತ್ತಿಲ್ಲ.

ಹೀಗೇ ಎಲ್ಲೋ ನೋಡಿರಬಹುದು ಎಂದು ಕೊಡವಿಕೊಳ್ಳಲು ನೋಡಿದ. ಆದರೆ ಅವನ ಮನವೇಕೋ ಅವಳ ಕುರಿತಾಗಿ ಸಣ್ಣ ಮಗುವಿನಂತೆ ರಚ್ಚೆ ಹಿಡಿದಂತಿತ್ತು......

'ಎಷ್ಟೋ ಜನರನ್ನು ಭೇಟಿಯಾಗಿಯೂ ಮರೆಯುವ ಕಾಲದಲ್ಲಿ ಈ ಪರಿಯಾಗಿ ನಿನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದ ಮುಖವೆಂದರೆ ಸಿಕ್ಕ ಸನ್ನಿವೇಶವೂ ಬಹಳ ಗಾಢವಾಗಿಯೇ ಇರಬೇಕಲ್ಲವೇ?' ಎಂದು ಮೆದುಳು ಪ್ರಶ್ನಿಸತೊಡಗಿತ್ತು…..

ಯೋಚಿಸಿ ತಲೆಕೆಡಿಸಿಕೊಂಡನೇ ಹೊರತು ಏನೂ ನೆನಪಾಗಲಿಲ್ಲ. ಅದೇ ಯೋಚನೆಯಲ್ಲಿಯೇ ಯಾವಾಗ ನಿದ್ರೆಯಾವರಿಸಿತೋ ತಿಳಿಯಲಿಲ್ಲ...... 

                  *******************

ಇತ್ತ ಸಮನ್ವಿತಾಳೂ ಯೋಚನೆಗೆ ಬಿದ್ದಿದ್ದಳು.....

ಸಮನ್ವಿತಾಳಿಗೆ ಶರ್ಮಾ ಪರಿವಾರದವರ ಭೇಟಿ ಬಹಳ ಸಂತೋಷ ತಂದಿದ್ದು ಸುಳ್ಳಲ್ಲ. ಆದರೆ ಈ ಭೇಟಿ ಸಂತಸದೊಂದಿಗೆ ಆದಿ ಅಂತ್ಯವಿಲ್ಲದ ಹಲವಾರು ಚಿಂತನೆಗಳನ್ನು ಅವಳಲ್ಲಿ ಬಿತ್ತಿತ್ತು.

ಶರ್ಮಾ ಕುಟುಂಬ ಸಿರಿವಂತಿಕೆಯಲ್ಲಿ ತಮಗಿಂತ ಒಂದು ಪಟ್ಟು ಮೇಲೆಯೇ ಇರುವುದು. ಆದರೂ ಅವರ ಕುಟುಂಬದಲ್ಲಿ ಸದಸ್ಯರ ನಡುವೆ ಒಂದು ಬೆಸುಗೆಯಿದೆ, ಉತ್ತಮ ಬಾಂಧವ್ಯವಿದೆ.ಸಚ್ಚಿದಾನಂದ ಹಾಗೂ ಮೃದುಲಾ ಅವರಿಗೆ ಮಕ್ಕಳ ಜೊತೆ ಅದೆಂಥಾ ಆತ್ಮೀಯತೆ...... ಅವರು ಮಕ್ಕಳನ್ನು ದೂರವಿಟ್ಟಿಲ್ಲ ಬದಲಾಗಿ ಅವರನ್ನು ಗೆಳೆಯರಂತೆ ನೋಡುತ್ತಾರೆ. ಕಾಳಜಿ ತೋರುತ್ತಾರೆ. ಆದರೂ ಮಕ್ಕಳು ಅವರ ಮೇಲೆ ಅವಲಂಬಿತರಾಗಿಲ್ಲ. ಅವರಿಗೆ ಸ್ವಾತಂತ್ರ್ಯವಿದೆ. ಅದರ ಜೊತೆಗೆ ಹೆತ್ತವರ ಕಾಳಜಿ, ಮಮತೆಯೂ ಇದೆ. 

ಆದರೆ ತನ್ನ ಬದುಕಿನಲ್ಲಿ? ತನ್ನ ಹೆತ್ತವರು ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಗೆ ಕೊಡುವ ಪರಿಭಾಷೆಯೇ ಬೇರೆ. ಸ್ವಾತಂತ್ರ್ಯ ನೀಡುವುದು, ಹೆತ್ತವರ ಮೇಲೆ ಅವಲಂಬಿತರಾಗದಂತೆ ಬೆಳೆಸುವುದೆಂದರೆ ಹೇಗೆ?  ಭೂಮಿಗೆ ಬಿದ್ದ ಮರುಕ್ಷಣವೇ ಕೂಸನ್ನು ಆಯಾಗಳ ಕೈಗೆ ಕೊಡುವುದೇ? ಬುದ್ಧಿ ತಿಳಿಯದ ವಯಸ್ಸಿನಲ್ಲೇ ವ್ಯಾಸಾಂಗದ ನೆಪವೊಡ್ಡಿ ಹೇರಳವಾದ ಹಣದೊಂದಿಗೆ ಪರದೇಶಕ್ಕೆ ಕಳಿಸುವುದೇ? ಸ್ವಾತಂತ್ರ್ಯ, ಸ್ವಾವಲಂಬನೆಯ ನೆಪವೊಡ್ಡಿ ವರ್ಷಾಂತರ ಭೇಟಿಯಾಗದಿರುವುದೇ? ಯಾರಿಗೆ ಬೇಕಾಗಿದೆ ಇಂಥಾ ಸ್ವಾತಂತ್ರ್ಯ? 

ನಮಗೂ, ಶರ್ಮಾ ಪರಿವಾರದವರಿಗೂ ಎಷ್ಟೊಂದು ಅಂತರ........ ನಾವು ಬರೀ ಹಣದಲ್ಲಷ್ಟೇ ಸಿರಿವಂತರು. ಅವರು ಹಣ, ಗುಣ, ಸಂಬಂಧಗಳು ಎಲ್ಲದರಲ್ಲೂ ಸಿರಿವಂತರೇ......

ಆದರೆ ಜಗತ್ತಿಗೆ ಕಾಣುವುದು, ಬೇಕಾಗಿರುವುದು ಹಣದ ಸಿರಿವಂತಿಕೆಯಷ್ಟೇ........

ಉಳಿದೆಲ್ಲವನ್ನೂ ಹಣ ಮುಚ್ಚಿಹಾಕುತ್ತದೆ. ಹಣಕ್ಕಿರುವ ಬೆಲೆ ಬದುಕಿಗಿಲ್ಲ ಇಲ್ಲಿ.........

ಏನೇ ಆದರೂ ಇಂದಿನ ಸಂತೋಷಕೂಟ ಎಂದಿಗೂ ತನ್ನ ನೆನಪಿನಲ್ಲಿ ಉಳಿಯುತ್ತದೆ ಎಂದುಕೊಂಡಳು. ಬೆಳಗ್ಗೆ ಬೇಗ ಎದ್ದು ಕ್ವಾಟ್ರಸ್ ಗೆ ಹೋಗುತ್ತಿರುವ ವಿಷಯ ಮಾತನಾಡಬೇಕು ಎಂದುಕೊಂಡು, ಸಂಜೆಯಿಂದ ಯಾವುದೋ ಮೂಲೆಯಲ್ಲಿ ಬಿದ್ದಿದ್ದ ಫೋನನ್ನು ಎತ್ತಿಕೊಂಡಳು. ಸಂದೇಶವೊಂದು ಕಾದು ಕುಳಿತಿತ್ತು. ಓದಿದವಳ ತುಟಿಯಂಚಿನಲ್ಲಿ ಮುಗುಳ್ನಗೆ ಮೂಡಿತು.... ಆಕೃತಿಯ ಸಂದೇಶವದು.

ಪಾರ್ಟಿ ಬಹಳ ಸಂತೋಷ ತಂದಿತು, ನಿಮ್ಮನ್ನು ಕಂಡದ್ದು ಅದಕ್ಕಿಂತ ಹೆಚ್ಚು ಖುಷಿಕೊಟ್ಟಿತೆಂಬುದರ ಜೊತೆಗೆ ತಮ್ಮ ಮನೆಗೆ ಬರಲೇಬೇಕೆಂಬ ಒತ್ತಾಯಪೂರ್ವಕ ಆಹ್ವಾನವಿತ್ತು ಎಲ್ಲರ ಕಡೆಯಿಂದ.

ಆಕೃತಿ ನೆನಪಾದಳು..... ಮನಸ್ಸು ಮತ್ತೆ ಹುಚ್ಚು ಕುದುರೆಯಂತೆ ಓಡತೊಡಗಿತು....ತನಗೂ ಒಡಹುಟ್ಟಿದವರೆಂದು ಯಾರಾದರೂ ಇರಬೇಕಿತ್ತು. ಆಗ ತನ್ನ ಸುಖ, ದುಃಖ ವನ್ನು ಹಂಚಿಕೊಳ್ಳಲು ಒಬ್ಬರು ಇದ್ದಂತಾಗುತ್ತಿತ್ತು. ಅವರೊಂದಿಗೆ ಹರಟೆ ಹೊಡೆಯಬಹುದಿತ್ತು, ಕಾಲೆಳೆದು ಹಾಸ್ಯ ಮಾಡಬಹುದಿತ್ತು, ನನ್ನ ಭಾವನೆಗಳನ್ನು ಹಂಚಿಕೊಳ್ಳಬಹುದಿತ್ತು.

ತನ್ನ ಯೋಚನೆಗೆ ತಾನೇ ನಕ್ಕಳು.....

ಏನೇ ಆದರೂ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಏನೂ ಬದಲಾಗುತ್ತಿರಲಿಲ್ಲ. ಈಗ ತಾನೊಬ್ಬಳೇ ಅಳುತ್ತಿರುವೆ. ಒಡಹುಟ್ಟಿದವರು ಇದ್ದರೆ ಇಬ್ಬರೂ ಸೇರಿ ದುಃಖಿಸಬಹುದಿತ್ತಷ್ಟೇ. ತನ್ನೊಂದಿಗೆ ಇನ್ನೊಂದು ಬಲಿ ಕಾ ಬಕರಾ ತಯಾರಾಗುತ್ತಿತ್ತು......

ಆಕೃತಿಗೊಂದು ಧನ್ಯವಾದದ ಜೊತೆ ಗುಡ್ ನೈಟ್ ಹೇಳಿ ತಾನೂ ಮಲಗಿದಳು. 

ಆದರೆ ತನ್ನನ್ನು ಈ ಮೊದಲು ಎಲ್ಲಿ ನೋಡಿರುವೆ ಎಂಬ ಯೋಚನೆಯಲ್ಲಿ ತಲೆಕೆಡಿಸಿಕೊಂಡು ಅಭಿರಾಮ್ ನಿದ್ರೆ ಬಿಟ್ಟು ನೆನಪಿಸಿಕೊಳ್ಳುತ್ತಿರುವನೆಂಬ ಸಣ್ಣ ಕಲ್ಪನೆ ಕೂಡಾ ಅವಳಿಗಿಲ್ಲ. ಕಾರಣ.... ಅವಳು ಅವನನ್ನು ನೋಡಿದ್ದು ಇದೇ ಮೊದಲು. ಈ ಹಿಂದೆ ಅವಳೆಂದೂ ಅಭಿರಾಮ್ ಶರ್ಮಾನನ್ನು ಭೇಟಿಯಾಗಿರಲಿಲ್ಲ. ಹಾಗಂತ ಅವನ ಬಗ್ಗೆ ತಿಳಿದಿಲ್ಲವೆಂದಲ್ಲ. ಅವಳು ಅವನ ಬಗ್ಗೆ ಕೇಳಿದ್ದಾಳೆ…! ಸಚ್ಚಿದಾನಂದ ಶರ್ಮಾರ ಬಗ್ಗೆಯೂ......

ಎಲ್ಲಿ, ಹೇಗೆ ಎಂದಿರಾ?

ಧನ್ವಂತರಿಯಲ್ಲಿ...‌...

ಮೀರಾ ಅವರ ಮಾತುಗಳಲ್ಲಿ........

ಶರ್ಮಾ ಎಂಪೈರ್ ನ ಸಚ್ಚಿದಾನಂದ ಶರ್ಮಾ ಹಾಗೂ ಅವರ ಮಗ ಅಭಿರಾಮ್ ತಮ್ಮ ಆಸ್ಪತ್ರೆಗೆ ಹಣ, ಶಸ್ತ್ರಚಿಕಿತ್ಸಾ ಸಲಕರಣೆಗಳು, ಲ್ಯಾಬ್ ಹೀಗೆ ಬಹಳಷ್ಟು ಕೊಡುಗೆ ನೀಡಿರುವುದಲ್ಲದೇ, ಅತ್ಯಾಚಾರ ಹಾಗೂ ಆಸಿಡ್ ದಾಳಿ ಸಂತ್ರಸ್ತರಿಗೆ ಎಲ್ಲಾ ಖರ್ಚುವೆಚ್ಚಗಳನ್ನು ತಾವೇ ಭರಿಸಿ ಚಿಕಿತ್ಸೆ ಕೊಡಿಸುತ್ತಾರೆಂದು, ಆದರೆ ಎಂದಿಗೂ ಅದನ್ನು ಹೊರಜಗತ್ತಿಗೆ ತೋರಿಸಿಕೊಂಡಿಲ್ಲವೆಂದೂ ಮೀರಾ ಹೇಳಿದ್ದ ನೆನಪಿತ್ತು. ಒಮ್ಮೆ ಭೇಟಿಯಾಗಬೇಕೆಂಬ ಆಸೆ ಇತ್ತವಳಿಗೆ. ಪಾರ್ಟಿ ನೆಪದಲ್ಲಿ ಆ ಆಸೆ ಪೂರ್ತಿಯಾಗಿತ್ತು.....

ಆದರೆ ಶರ್ಮಾ ಪರಿವಾರದ ಯಾರೊಂದಿಗೂ ತಾನು ಧನ್ವಂತರಿಯಲ್ಲಿರುವುದಾಗಿ ಹೇಳಿರಲಿಲ್ಲ ಅವಳು. ವೈಯಕ್ತಿಕವಾದ ಯಾವ ವಿಷಯವನ್ನೂ ಮಾತನಾಡಿರಲಿಲ್ಲ ಅವರು. 

               ************************

ಸತ್ಯನಾರಾಯಣ ಹಾಗೂ ಮಂಗಳಾ ಅವರು ತೀರ್ಥಯಾತ್ರೆಗೆ ಹೊರಟ್ಟಿದ್ದರು. ಅವರ ಲಗೇಜು ಪ್ಯಾಕ್ ಮಾಡುತ್ತಿದ್ದವಳಿಗೆ ಇಪ್ಪತ್ತು ದಿನ ಹೇಗೆ ಕಳೆಯುವುದೆಂಬ ಯೋಚನೆ ಹತ್ತಿ ಬೇಸರವಾಗಿತ್ತು. 

ಅವಳು ಮದುವೆಯಾಗಿ ಬಂದಲ್ಲಿನಿಂದ ಮನೆಯಲ್ಲಿ ಬೇರ್ಯಾರು ಇಲ್ಲದಿದ್ದರೂ ಮಂಗಳಮ್ಮ ಇದ್ದೇ ಇರುತ್ತಿದ್ದರು. ಹತ್ತಿರ ಹತ್ತಿರ ಒಂದು ತಿಂಗಳ ಮಟ್ಟಿಗೆ ಅವರು ಇರುವುದಿಲ್ಲವೆಂದು, ಎಲ್ಲವನ್ನೂ ತಾನೇ ನಿಭಾಯಿಸಬೇಕೆಂದು ಯೋಚಿಸಿಯೇ ದಿಗಿಲಾಗಿತ್ತವಳಿಗೆ.

ಮನೆ ನಿರ್ವಹಣೆ ಅವಳಿಗೆ ಕಷ್ಟವಲ್ಲ. ಆದರೆ ಅತ್ತೆ ಮಾವನ ಇರುವಿಕೆ ಅವಳಿಗೊಂದು ಭದ್ರತಾ ವಲಯವನ್ನು ಸೃಷ್ಟಿಸುತ್ತಿತ್ತು. ತನ್ನ ಅತೀತ ಅವರಿಗೆ ತಿಳಿಯಬಹುದೆಂಬ ಭಯವಿದ್ದರೂ ಅವರಿದ್ದರೆ ಅವಳಿಗೇನೋ ಧೈರ್ಯ. ಎಷ್ಟೆಂದರೂ ನರಕದ ಹಿಂಸೆಯನ್ನು ಉಂಡ ಜೀವವಲ್ಲವೇ. ಅವಳ ಮನ ಯಾವಾಗಲೂ ಅವರ ಅಕ್ಕರೆಯ ಆಸರೆಯನ್ನು ಬಯಸುತ್ತಿತ್ತು. 

ಮಂಗಳಮ್ಮನಿಗೂ ಅವಳನ್ನು ಬಿಟ್ಟು ಹೊರಡಲು ಬೇಸರವೇ. ಆದರೆ ಮೂವರೂ ಒತ್ತಾಯಮಾಡಿ ಹೊರಡಿಸಿದ್ದರು. ಜೊತೆಗೆ ಒಂದು ಬಾರಿ ಹೋಗಿಬರುವ ಎಂದು ಸತ್ಯನಾರಾಯಣ ಅವರೂ ಹೇಳಿದ್ದರಿಂದ ಹೊರಟಿದ್ದರು.

ಬಾಡಿದ ಮುಖ ಹೊತ್ತು, ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದ ಸೊಸೆಯನ್ನು ಕಂಡು, "ನವ್ಯಾ ಬಾ ಇಲ್ಲಿ" ಕರೆದರು ಮಂಗಳಾ.

"ಏನಾಯ್ತು ಅಮ್ಮಾ?" ಕೇಳುತ್ತಲೇ ಬಂದವಳ ಕೈ ಹಿಡಿದು, "ಬಾ ಕುತ್ಕೋ ಇಲ್ಲಿ" ಎಂದು ತಮ್ಮ ಪಕ್ಕ ಮಂಚದಲ್ಲಿ ಕೂಡಿಸಿಕೊಂಡರು.

ಪಕ್ಕ ಕುಳಿತು ಸುಮ್ಮನೆ ಅವರ ಮಡಿಲಲ್ಲಿ ತಲೆಯಿಟ್ಟು ಕಣ್ಮುಚ್ಚಿಕೊಂಡವಳ ತಲೆಗೂದಲಲ್ಲಿ ಕೈಯಾಡಿಸುತ್ತಾ, "ಇಪ್ಪತ್ತು ದಿನ ಹೇಗೆ ಕಳೆಯೋದು ಅಂತ ತಾನೆ ನಿನ್ನ ಯೋಚನೆ. ಏನೂ ಯೋಚನೆ ಮಾಡಬೇಡ. ಕಿಶೋರ, ಕಾರ್ತಿ ಇಬ್ಬರಿಗೂ ಹೇಳ್ತೀನಿ ಆದಷ್ಟು ಮನೆಯಲ್ಲೇ ಇರೋಕೆ. ಇಪ್ಪತ್ತುದಿನ ಬೇಗ ಕಳ್ದು ಬಿಡುತ್ತೆ ಮಗು." 

"ಹಾಗೇನಿಲ್ಲ ಅಮ್ಮ, ಹಗಲೆಲ್ಲಾ ಒಬ್ಬಳೇ ಇರ್ಬೇಕಲ್ಲ. ಬೋರಾಗುತ್ತೆ ಅಂತ ಅಷ್ಟೇ.‌ ನೀವು, ಅಪ್ಪಾಜಿ ಆರಾಮಾಗಿ ಯೋಚನೆ ಮಾಡದೇ ಹೋಗಿಬನ್ನಿ" ಎಂದು ಎದ್ದವಳು ತನ್ನ ಕೆಲಸ ಮುಂದುವರೆಸಿದ್ದಳು.

ಮರುದಿನ ನಸುಕಿನ ಟ್ರೈನಿಗೆ ಹೊರಡಬೇಕಿತ್ತು. ಆ ರಾತ್ರಿ ಊಟದ ನಂತರ ಕಿಶೋರ್, ಕಾರ್ತಿಕ್ ಇಬ್ಬರನ್ನೂ ಕೂರಿಸಿಕೊಂಡು, 

"ನೋಡ್ರೋ ಮಕ್ಕಳಾ, ಇಪ್ಪತ್ತು ದಿನ ಮನೆಕಡೆ ಗಮನ ಇರಲಿ. ಪಾಪ ಅವಳೊಬ್ಬಳಿಗೆ ಎಲ್ಲಾ ಮಾಡ್ಕೊಳ್ಳೋಕೆ ಕಷ್ಟ ಆಗಬಹುದು, ಇಬ್ರೂ ಅವಳೊಟ್ಟಿಗೆ ಕೈ ಜೋಡಿಸಿ" ಎಂದವರು, "ಕಿಶೋರ, ಮೂರ್ಹೊತ್ತೂ ಆಫೀಸ್ ಅಂತ ಅಲ್ಲೇ ಇರ್ಬೇಡ. ಲೇಟಾಗಿ ಹೋಗಿ ಬೇಗ ಮನೆಗೆ ಬಾ ಒಂದಿಪ್ಪತ್ತು ದಿನ ಅಷ್ಟೇ" ಕಿಶೋರನಿಗೆ ಹೇಳಿದಾಗ ಮಧ್ಯೆ ಬಾಯಿ ಹಾಕಿದ ಕಾರ್ತಿಕ್,

"ಮಂಗೂ ಡಾರ್ಲಿಂಗ್, ಆಫೀಸ್ ನಮ್ಮಾವಂದು ನೋಡು ನಾವ್ ಹೇಳಿದ್ದೆಲ್ಲಾ ಕೇಳ್ತಾರೆ. ನೀನು ಹೂಂ ಅನ್ನು ಸಾಕು, ಅಣ್ಣನ ಆಫೀಸಿನೋರೆ ಮನೆಗೆ ಬಂದು ಅಡಿಗೆ ಮಾಡಿ, ತೊಳ್ದು, ಬಳ್ದು, ಗುಡಿಸಿ, ಸಾರಿಸಿ ರಂಗೋಲಿ ಹಾಕಿ ಹೋಗ್ತಾರೆ" ಎಂದ.

"ಅಮ್ಮಾ ನಾನೆಲ್ಲಾ ನೋಡ್ಕೋತೀನಿ. ನೀನೇನು ಚಿಂತೆ ಮಾಡ್ಬೇಡ ಆರಾಮಾಗಿ ಹೋಗಿ ಬನ್ನಿ" ಎಂದ ಕಿಶೋರ್ ಮಾತಿಗೆ ನವ್ಯಾಳೂ, "ಅಮ್ಮಾ, ನನಗೆ ಇಲ್ಲೇನೂ ತೊಂದ್ರೆ ಇಲ್ಲಮ್ಮ" ಎಂದಳು.

"ಮಂಗೂ, ಟೇಕ್ ಇಟ್ ಈಸಿ಼, ಜಸ್ಟ್ ಚಿಲ್, ವಿ ವಿಲ್ ಮ್ಯಾನೇಜ್" ಎಂದವನಿಗೆ "ನನ್ಹತ್ರ ನಿನ್ ಇಂಗ್ಲೀಷು ಮಾತಾಡೋಕೆ ಬರಬೇಡ. ಎಲ್ಲಕ್ಕಿಂತ ದೊಡ್ಡ ತಲೆಬಿಸಿ ನಿಂದೇ ನೋಡು. ಕಾಲೇಜು ಮುಗಿಸಿ ಸೀದಾ ಮನೆಗೆ ಬಾ. ಆ ನಿನ್ ಕಪಿಸೇನೆ ಜೊತೆ ಬೀದಿ ಸುತ್ತೋದು ಮಾಡಿದ್ಯೋ ಕಾಲು ಮುರ್ದು ಕೈಗೆ ಕೊಡ್ತೀನಿ ನೋಡ್ತಿರು" ಗದರಿದರು.

"ಉಫ್, ಹೋಗ್ಲಿ ಬಿಡು ಮಂಗೂ, ನಾನ್ಯಾವತ್ತೂ ಹೇಳ್ತಿರೋಲ್ವಾ. ನಂಗೆ ನಿಂಗೆ ತುಂಬಾ ಜನರೇಷನ್ ಗ್ಯಾಪ್ ಇದೆ ಅಂತ. ನಾವು ಮಿಷನ್ ಮಾರ್ಸ್ ಅಂತ ಬೇರೆ ಗ್ರಹಕ್ಕೆ ಹೋಗೋಕೆ ಹೊರಟಿದ್ರೆ ನೀನು ಇಲ್ಲೇ ಪಕ್ಕದ ರಾಜ್ಯಕ್ಕೆ ಹೋಗೋಕೆ ಇಷ್ಟು ಬಿಲ್ಡಪ್ ಬೇಕಾ?" ಅಣಕಿಸಿದವನ ತಲೆಗೊಂದು ಮೊಟಕಿ "ಹೇಳಿದ್ದಷ್ಟು ಮಾಡು" ಎಂದರು.

"ಅಯ್ಯೋ ‌ಮಂಗಳಮ್ಮ, ನಾನು ನೀನು ಹೋಗೋದ್ನೇ ಕಾಯ್ತಿದ್ದೀನಿ. ನೀನು ಒಂದು ಸರಿ ಮನೆಯಿಂದ ಹೊರಗೆ ಕಾಲಿಡು ಸಾಕು. ಆಮೇಲೆ ಇಪ್ಪತ್ತು ದಿನ ಟ್ವೆಂಟಿ ಟ್ವೆಂಟಿ ಮ್ಯಾಚ್ ತರ ಕಳ್ದೋಗುತ್ತೆ. ನೀನು ಯಾತ್ರೆ ಮುಗ್ಸಿ ವಾಪಾಸ್ ಬರೋವಾಗ ಅತ್ತಿಗೆನ ಹೆಂಗೆ ರೆಡಿ ಮಾಡಿರ್ತೀನಿ ಅಂದ್ರೆ, 'ಅಮ್ಮಾ ನೀವು ಇನ್ನೊಂದು ನಾಲ್ಕು ತಿಂಗಳು ಯಾತ್ರೆ ಮಾಡ್ಕೋಬನ್ನಿ' ಅನ್ಬೇಕು. ನೋಡ್ತಿರು. ಈಗ ಮೊದ್ಲು ಹೋಗಿ ಮಲ್ಕೋ. ಬೆಳಿಗ್ಗೆ ಬೇಗ ಹೊರಡಬೇಕು" ಎಂದಾಗ ಎಲ್ಲರೂ ಅವನ ಮಾತಿಗೆ ನಕ್ಕು ಮಲಗಲು ಹೊರಟರು.

ಹಾಗೆ ಮರುದಿನ ಬೆಳಿಗ್ಗೆ ಹೊರಟವರನ್ನು ಮೂವರು ಟ್ರೈನ್ ಹತ್ತಿಸಿ ಬಂದಿದ್ದರು. ಹೊರಡುವವರೆಗೂ ಮಕ್ಕಳಿಬ್ಬರಿಗೂ ತನ್ನನ್ನು ಜಾಗೃತೆಯಾಗಿ ನೋಡಿಕೊಳ್ಳಿ ಎನ್ನುತ್ತಿದ್ದ ಅತ್ತೆಯನ್ನು ಕಂಡು ನವ್ಯಾಳ ಮನತುಂಬಿತ್ತು. ಕಿಶೋರ್ ಸಂಜೆ ಬೇಗ ಬರುತ್ತೇನೆಂದು ಆಫೀಸಿಗೆ ಹೊರಟಿದ್ದ. ಇನ್ನು ಮನೆಯಲ್ಲೇ ಇರುತ್ತೇನೆ ಎನ್ನುತ್ತಿದ್ದ ಕಾರ್ತಿಕ್ ನನ್ನು ಅವಳೇ ಒತ್ತಾಯಿಸಿ ಕಾಲೇಜಿಗೆ ಕಳುಹಿಸಿ ಬೇಸರ ಮೆಟ್ಟಿ ತನ್ನ ಕೆಲಸದಲ್ಲಿ ತೊಡಗಿದ್ದಳು ನವ್ಯಾ.

    **********ಮುಂದುವರೆಯುತ್ತದೆ************



ಅನೂಹ್ಯ 16

ಆ ದಿನ ಪೂರ್ತಿ ಮನೆಯಲ್ಲಿಯೇ ಉಳಿದ ಸಮನ್ವಿತಾಳಿಗೆ ಅಂದಿನ ಪಾರ್ಟಿಯ ತಯಾರಿಯೇ ವಿಶಿಷ್ಟವೆನಿಸಿತು. ಈ ಬಂಗಲೆಯ ಪಾರ್ಟಿಗಳು ಅವಳಿಗೆ ಹೊಸದಲ್ಲ. ಆ ಅಬ್ಬರದ ವಿದೇಶಿ ಸಂಗೀತ, ಆಲ್ಕೋಹಾಲ್ ಹೊಳೆ, ತಿಂದುಳಿದು ಬಿಸಾಡಬಹುದಾದಷ್ಟು ನಾನ್ ವೆಜ್ ಸಮಾರಾಧನೆ...... ಇವೆಲ್ಲಾ ಸರ್ವೇಸಾಮಾನ್ಯ.

ಆದರೆ ಇಂದಿನ ತಯಾರಿ ವಿಭಿನ್ನವೆಂದು ಅವಳ ಕಣ್ಣು, ಕಿವಿ ಹಾಗೂ ನಾಸಿಕಗಳು ಸಾರುತ್ತಿದ್ದವು. ಕಿವಿ ಹರಿಯುವ ಡಿ.ಜೆ ಬದಲಿಗೆ ಸುಮಧುರವಾದ ಶಾಸ್ತ್ರೀಯ ಆಲಾಪವೊಂದು ಮಂದ್ರಸ್ಥಾಯಿಯಲ್ಲಿ ಕೇಳಿಬರುತ್ತಿತ್ತು. ಅಲಂಕಾರಕ್ಕೆ ಬಳಸಲಾದ ಬಗೆಬಗೆಯ ಹೂಗಳ ಕಂಪು ಮನೆತುಂಬಾ ಪಸರಿಸಿತ್ತು. ಪಾಕಶಾಲೆಯಲ್ಲೂ ಭಾರತೀಯ ಖಾದ್ಯಗಳದೇ ಕಾರುಬಾರು...... ಅವಳಿಗೆ ಪ್ರಪಂಚದ ಎಂಟನೇ ಅದ್ಭುತವನ್ನು ಕಂಡಂತಾಯಿತು.

ಯಾವಾಗಲೂ ವಿದೇಶದ ಅಮಲಿನಲ್ಲಿ ಪರದೇಸಿಗಳಂತಾಡುವ ಮಿಸ್ಟರ್ ಅಂಡ್ ಮಿಸ್ಸೆಸ್ ರಾವ್ ಅವರು ಈ ರೀತಿಯ ಪಾರ್ಟಿಗಳನ್ನೂ ಆಯೋಜಿಸಬಲ್ಲರೇ? ಅವಳಿಗಂತೂ ನಂಬಲಸಾಧ್ಯವಾಯಿತು. 

ಇದೆಲ್ಲವನ್ನೂ ನೋಡಿ ಒಂದು ವಿಷಯ ಅವಳಿಗೆ ಸ್ಪಷ್ಟವಾಯಿತು......

something extraordinary is going to happen today....

ಆದರೆ ಹಾಗೆ ಸಂಭವಿಸಲಿರುವ ಘಟನೆ ನೇರವಾಗಿ ತನ್ನ ಬದುಕಿನೊಂದಿಗೆ ತಳುಕು ಹಾಕಿಕೊಂಡಿದೆ ಎಂಬುದರ ಪರಿವೆಯೇ ಇರಲಿಲ್ಲ ಆಕೆಗೆ. ಅದು ಶೀಘ್ರದಲ್ಲೇ ತನ್ನ ಮುಂದೆ ಅನಾವರಣಗೊಳ್ಳುವ ಪರಿಗೆ ತನ್ನ ಅಸ್ತಿತ್ವದ ಮೇಲೆಯೇ ಅಪನಂಬಿಕೆ ಹುಟ್ಟುವುದೆಂದೂ, ತಾಯ್ತಂದೆ ಎನಿಸಿಕೊಂಡವರನ್ನು ತನ್ನ ಜೀವನದಿಂದಲೇ ಅಳಿಸಿ ಹಾಕುವಷ್ಟು ಅಸಹ್ಯ ಆರಂಭವಾಗುವುದೆಂಬ ಸತ್ಯದ ಅರಿವಿಲ್ಲದೆ ಆರಾಮಾಗಿದ್ದಳು ಸಮನ್ವಿತಾ...

                   *****************

"ಆರ್ ಯೂ ರೆಡಿ ಸಮನ್ವಿತಾ" ಎಂದು ಕೇಳುತ್ತಲೇ ಒಳಬಂದ ಮಾಲಿನಿಯವರನ್ನು ಕಂಡು ಬಿಟ್ಟ ಕಣ್ಣು ಮುಚ್ಚದೇ ನೋಡುತ್ತಾ ಕುಳಿತುಬಿಟ್ಟಳು. 

ತನ್ನ ನೆನಪಿನಾಳವನ್ನೆಲ್ಲಾ ಕೆದಕಿ ಹುಡುಕಿದಳು. ಇಷ್ಟು ವರ್ಷಗಳಲ್ಲಿ ಎಂದಾದರೂ ಈಕೆ ಈ ಕೋಣೆಗೆ ಬಂದಿದ್ದಳೇ? ಇಲ್ಲವೆಂದಿತು ಅವಳ‌ ಬುದ್ಧಿ....

ಮಕ್ಕಳ ಕೋಣೆಗೆ ಬರುವುದು, ಅವರೊಂದಿಗೆ ಪ್ರೀತಿಯಿಂದ ನಾಲ್ಕು ಮಾತನಾಡುವುದು, ಅವರ ಬಗ್ಗೆ ವಿಚಾರಿಸುವುದೆಲ್ಲಾ ಮಕ್ಕಳನ್ನು ತಾಯ್ತಂದೆಯರ ಮೇಲೆ ಅವಲಂಬಿತರನ್ನಾಗಿಸುತ್ತದೆ. ಅವರಿಗೆ ಸ್ವಾತಂತ್ರ್ಯ ಕೊಡಬೇಕು, ಯಾರನ್ನೂ ಅವಲಂಬಿಸದೆ ಬದುಕುವುದು ಕಲಿಸಬೇಕು ಎಂಬುದು ಇವರ ಅಭಿಮತ. ಆದರೆ ಅದನ್ನು ಜಾರಿಗೆ ತಂದ ವಿಧಾನ ಮಾತ್ರ ಅತ್ಯದ್ಭುತ. 

"ವಾಟ್ ಈಸ್ ದಿಸ್? ವೈ ಆರ್ ಯು ಸೋ ಕೇರ್ ಲೆಸ್? ಯಾಕಿನ್ನೂ ರೆಡಿಯಾಗಿಲ್ಲ?" ಅವರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸದೇ,

"ಮಾಮ್, ಆರ್ ಯು ಆಲ್ರೈಟ್?" ಮರುಪ್ರಶ್ನೆ ಹಾಕಿದಳು.

"ನಾನು ಸರಿಯಾಗೇ ಇದ್ದೀನಿ. ನೋಡು ಬೇಗ ರೆಡಿಯಾಗು. ಪಾರ್ಟಿ ಶುರುವಾಗೋ ಟೈಮಾಯ್ತು. ಅಂದಹಾಗೆ ತಗೋ ಇದ್ರಲ್ಲಿ ಡ್ರೆಸ್ ಮತ್ತೆ ಮ್ಯಾಚಿಂಗ್ ಜ್ಯುವೆಲ್ಸ್ ಇದೆ. ಬ್ಯೂಟೀಷಿಯನ್ ನ ಕಳಿಸುತ್ತೀನಿ. ಅವ್ರು ರೆಡಿ ಮಾಡ್ತಾರೆ....." ಇನ್ನೇನು ಹೇಳಲಿದ್ದರೇನೋ....

"ಮಮ್ಮಿ, ನಾನಾಗ್ಲೇ ಹೇಳಿದ್ದೆ. ನಂಗೆ ಪಾರ್ಟೀಸ್ ಅಂದ್ರೆನೇ ಅಲರ್ಜಿ. ನಿನ್ನೆಯಿಂದ ಚೈತಾಲಿ ಕಾಟ, ನಿಮ್ಮ ನಾಟಕ ನೋಡೋಕಾಗ್ದೆ ಬರ್ತೀನಿ ಅಂದಿದ್ದು. ಈಗ ನನ್ನ ಪಾಡಿಗೆ ನನ್ನ ಬಿಟ್ರೆ ಬರ್ತೀನಿ. ಇದೇ ಬಟ್ಟೆ, ಅದೇ ಒಡವೆ, ಹೀಗೆ ಮೇಕಪ್ ಅಂತೇನಾದ್ರೂ ಇದ್ರೆ ನಿಮಗೊಂದು ದೊಡ್ಡ ನಮಸ್ಕಾರ. ನಿಮ್ಮ ಪಾರ್ಟಿ ನೀವೇ ಮಾಡ್ಕೋಳಿ. ನೀವೊಂದು ಕೆಲ್ಸ ಮಾಡಿ ಅಲ್ಲಿ ಹೇಗೆ ಬಿಹೇವ್ ಮಾಡ್ಬೇಕು, ಎಲ್ಲಿ ನಿಲ್ಲಬೇಕು, ಏನ್ ಮಾತಾಡ್ಬೇಕು, ಹೇಗೆ ತಿನ್ನಬೇಕು ಅನ್ನೋದ್ರದ್ದೂ ಒಂದು ಚಾರ್ಟ್ ಮಾಡಿ ಕೊಟ್ಟುಬಿಡಿ. ಜೀವನ ಪಾವನ ಆಗುತ್ತೆ. ಅದೆಲ್ಲಾ ಇರಲಿ...‌.. ಇಷ್ಟು ದಿನ ನಾನು ಬದ್ಕಿದ್ದೀನಾ ಇಲ್ಲಾ ಸತ್ತಿದೀನಾ ಅಂತ ಕೇಳೋರೂ ಗತಿ ಇರ್ಲಿಲ್ಲ. ಅದೇನು ನಿನ್ನೆಯಿಂದ ಮಗಳ ಮೇಲೆ ಪ್ರೀತಿ ಉಕ್ಕಿ ಹರೀತಿದೆ? ಏನೋ ಮಾಸ್ಟರ್ ಪ್ಲಾನ್ ತಯಾರಾಗ್ತಿರೋ ಹಾಗಿದೆ?" ಅವಳ ಹರಿತವಾದ ಮಾತಿಗೆ ಹೆದರಿ,

"ಅಯ್ಯೋ ಹಾಗೇನಿಲ್ಲಪ್ಪ. ನಿನಗೆ ಬೇಕಾದ ಹಾಗೆ ಇರಮ್ಮ" ಅಂದವರೆ ಅವಳ ಉತ್ತರಕ್ಕೂ ಕಾಯದೇ ಒಡವೆ, ವಸ್ತ್ರಗಳ ಸಮೇತ ಅವಳ ರೂಮಿನಿಂದ ಕಾಲ್ಕಿತ್ತರು ಮಾಲಿನಿ. ಅವರಿಗೆ ಗಂಡ ಹೇಳಿದ ಮಾತುಗಳು ನೆನಪಿತ್ತು. 'ಹಾಳಾದ ಹುಡುಗಿ ಹೇಳಿದಂತೆ ಮಾಡೋಳೆ……  ಹೇಗಾದ್ರೂ ಪಾರ್ಟಿ ಅಟೆಂಡ್ ಆದ್ರೆ ಸಾಕಪ್ಪ. ಇವಳ ದೆಸೆಯಲ್ಲಿ ಪ್ಲಾನ್ ಫ್ಲಾಪ್ ಆದ್ರೆ ಕಷ್ಟ' ಎಂದುಕೊಂಡರು.

ಅವರು ಹಾಗೆ ಮರುನುಡಿಯದೆ ಓಡಿದ ಪರಿಗೆ ಮತ್ತದೇ ಅನುಮಾನದಲ್ಲಿ ಬಿದ್ದಳು ಸಮನ್ವಿತಾ.

ಎಲ್ಲೋ ಏನೋ ತಪ್ಪಾಗಿದೆಯಾ.... ಅವಳ‌ ಮನ ಮತ್ತೆ ಮತ್ತೆ ಪ್ರಶ್ನಿಸತೊಡಗಿತು. 

ಆದರೆ ಯೋಚಿಸುತ್ತಾ ಕುಳಿತುಕೊಳ್ಳಲು ಸಮಯವಿರಲಿಲ್ಲ. ಬೇಗ ಬೇಗ ತಯಾರಾಗತೊಡಗಿದಳು. ಅದರರ್ಥ ಅವಳಿಗೆ ಪಾರ್ಟಿಗೆ ಹೋಗುವ ಆಸೆ ಎಂದಲ್ಲಾ..... ತಾನಿನ್ನೂ ಹೊರಡದಿದ್ದರೆ ಇನ್ಯಾವ ಹೊಸ ನಾಟಕ ಪ್ರದರ್ಶನ ಆರಂಭವಾಗುವುದೋ ಎಂಬ ಭಯವಿತ್ತು ಅವಳಿಗೆ...

               ******************

ಅಂತೂ ರಾವ್ ದಂಪತಿಗಳು ಕಾತುರದಿಂದ ಕಾಯುತ್ತಿದ್ದ ಸಮಯ ಬಂದೇಬಿಟ್ಟಿತು. ಪಾರ್ಟಿ ಆರಂಭವಾಗಿತ್ತು. ಅತಿಥಿಗಳು ಆಗಮಿಸುತ್ತಿದ್ದರು. ಆದರೆ ಇವರು ನಿರೀಕ್ಷಿಸುತ್ತಿದ್ದ ವ್ಯಕ್ತಿಗಳು ಇನ್ನೂ ಬಂದಿರಲಿಲ್ಲ. ಬಂದವರನ್ನೆಲ್ಲಾ ಮಾತನಾಡಿಸುತ್ತಿದ್ದರೂ ಅವರ ಕಣ್ಣುಗಳು ಬರುವವರ ನಿರೀಕ್ಷೆಯಲ್ಲಿಯೇ ಇತ್ತು. ಈ ಪಾರ್ಟಿಗೆ ಅವರ ರೆಗ್ಯುಲರ್ ಗೆಳೆಯರಿಗೆ ಆಮಂತ್ರಣವಿರಲಿಲ್ಲ. ಹೇಳಿಕೇಳಿ ಅವರೆಲ್ಲಾ ಗುಂಡು ತುಂಡಿನ ಗೆಳೆಯರು. ಆದರೆ ಈ ಕೂಟ ಬಹಳ ಸಂಸ್ಕಾರಯುತವಾಗಿರಬೇಕಿತ್ತು. ಏಕೆಂದರೆ ಶರ್ಮಾ ಪರಿವಾರ ಅಂತಹ ಡಾಂಭಿಕ ಪಾರ್ಟಿಗಳಿಂದ ಬಲುದೂರ. 

ರಾವ್ ದಂಪತಿಗಳ ಮಾತಿನಲ್ಲೇ ಹೇಳಬೇಕೆಂದರೆ "Sharma's are very boring and unfit to live in hi society" 

ಆದರೂ ಅವರಿಗೋಸ್ಕರ ಈ ಪಾರ್ಟಿ ಏಕೆ ಎಂದಿರಾ…..?  because Sharma's are more powerful than Rao's

ಇದೇ ಹಣವಂತರ ಲೆಕ್ಕಾಚಾರ. ಇಲ್ಲಿ ಎಲ್ಲಾ ಸಂಬಂಧಗಳ ಮೂಲ ಹಣ ಅಷ್ಟೇ. ಹಣದಿಂದಲೇ ಆರಂಭ ಅದರಿಂದಲೇ ಅಂತ್ಯ. 

ರಾವ್ ದಂಪತಿಗಳಿಗೆ ಜೀವನದಲ್ಲಿ ಪ್ರಪ್ರಥಮವಾಗಿ ಪಾರ್ಟಿ ಬೇಸರ ತರಿಸತೊಡಗಿತು. ತಮ್ಮ ನಿತ್ಯದ ಗೆಳೆಯರ ಬಳಗವಿಲ್ಲ, ಗುಂಡಿನ ನಶೆಯಿಲ್ಲ, ಹಾಡು ಕುಣಿತಗಳಿಲ್ಲ, ಚೆಂದದ ಲಲನೆಯರಿಲ್ಲ, ತಮ್ಮ ನೃತ್ಯ ಕೌಶಲ ಪ್ರದರ್ಶಿಸುವ ಎಂದರೆ ಆ ಡಿ.ಜೆ ಯೂ ಇಲ್ಲ....... ಛೇ....!! ಇದೆಂಥಾ ಪಾರ್ಟಿಯೋ…! ಶರ್ಮಾರನ್ನು ಒಲಿಸಿಕೊಳ್ಳಬೇಕಲ್ಲಾ ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಸಹಿಸಿಕೊಂಡು ನಗುಮುಖದಿಂದ ಓಡಾಡುತ್ತಿದ್ದರಷ್ಟೇ.

ಇನ್ನೊಂದೆಡೆ ಸಮನ್ವಿತಾಳಿಗೆ ಜೀವನದಲ್ಲಿ ಪ್ರಪ್ರಥಮವಾಗಿ ಪಾರ್ಟಿಯೊಂದು ಸಂತಸ ತಂದಿತ್ತು. ಪ್ರತಿಯೊಂದು ವಿಷಯವೂ ಖುಷಿ ಕೊಟ್ಟಿತು. ಎಲ್ಲವನ್ನೂ ಆಸ್ವಾದಿಸುತ್ತಾ ಪರಿಚಯವಿದ್ದ ಕೆಲವರೆಡೆ ಒಂದು ನಸುನಗು ಹರಿಸುತ್ತಾ ಮುನ್ನಡೆಯುತ್ತಿದ್ದಳು. 

ಮೆರೂನ್ ಕೋಟಾ ಸಿಲ್ಕ್ ಸೀರೆಗೆ ಅದೇ ಬಣ್ಣದ ಉದ್ದ ತೋಳಿನ ರವಿಕೆ, ಕೈಗೆರೆಡು ಬಳೆಗಳು, ಕಿವಿಗೊಂದು ಜುಮ್ಕಿ, ಕತ್ತಿನಲ್ಲಿ ಮುತ್ತಿನಹಾರ, ಕೂದಲನ್ನೆಲ್ಲಾ ಸೇರಿಸಿ ಕ್ಲಿಪ್ ಹಾಕಿ, ಹಣೆಗೊಂದು ಬೊಟ್ಟು…… ಇಷ್ಟೇ ಅವಳ ಅಲಂಕಾರ.

ಅವಳನ್ನು ಕಂಡು ಮಾಲಿನಿ ಹಣೆಗೆ ಕೈಯೊತ್ತಿ "ನಮ್ಮ ಮರ್ಯಾದೆ ತೆಗೆಯೋಕಂತಲೇ ಹುಟ್ಟಿದ್ದಾಳೆ ಇವಳು. ಇವಳನ್ನು ನೋಡಿದ್ರೆ ನಮ್ಮ ಮನೆ ಕೆಲಸದೋಳ ಮಗಳೇನೋ ಅಂದ್ಕೋತಾರೆ. ಸೀರೇನೆ ಉಡ್ಬೇಕು ಅಂತಿದ್ರೆ ಯಾವ್ದಾದ್ರೂ ಫ್ಯಾನ್ಸಿ ಸೀರೆ ಉಡೋದು ಬಿಟ್ಟು ಅದೇನು ಸುತ್ತಿಕೊಂಡಿದಾಳೇನೋ. ಒಂದು ಮೇಕಪ್ ಇಲ್ಲ ಏನಿಲ್ಲ. ಛೀ…..! ಮಾತಾಡಿದ್ರೆ ನಾನು ಬರೋದೇ ಇಲ್ಲಾ ಅಂತಾಳೇ" ಹಳಿದರು.

ರಾವ್ ಅವರು ಕೋಪವನ್ನು ಹತ್ತಿಕ್ಕುತ್ತಾ, " ಹೋಗ್ಲಿ ಬಿಡು.ಹೇಗಾದ್ರೂ ಇರಲಿ. ಆದ್ರೆ ಶರ್ಮಾ ಕುಟುಂಬ ಬಂದು ಹೋಗೋವರೆಗೂ ಅವಳು ಇಲ್ಲಿರಲೇಬೇಕು. ಅಷ್ಟು ನೋಡ್ಕೋ" ಎಂದವರ ಮುಖದಲ್ಲಿ ಒಂದು ಕುಟಿಲ ನಗುವಿತ್ತು.

ಇದಾವುದರ ಅರಿವಿಲ್ಲದೇ ಸಮನ್ವಿತಾ ಒಂದೆಡೆ ಕುಳಿತು ಗಜ಼ಲ್ ಆಲಿಸುತ್ತಾ ಹೂವಿನ ಅಲಂಕಾರವನ್ನು ನೋಡುವುದರಲ್ಲಿ ಮಗ್ನಳಾಗಿದ್ದಳು. ಅಲ್ಲೇ ಓಡಾಡುತ್ತಿದ್ದ ಚೈತಾಲಿ ಕಣ್ಣಿಗೆ ಬಿದ್ದಾಗ ಅವಳನ್ನು ಕರೆದು ಮಾತಿಗೆತೊಡಗಿದಳು.

                 ********************

"ನಾನು ಆಗ್ಲೇ ಹೇಳಿದ್ದೆ ಬೇಗ ಹೊರಡೋಣ ಅಂತ. ಈಗ್ನೋಡು, ಎಷ್ಟೊಂದು ಲೇಟಾಯ್ತು" ಎಂದ ಆಕೃತಿಗೆ

"ಲೇ ಕೋತಿ, ಸುಮ್ಮನೆ ಇರ್ತೀಯಾ ಇಲ್ಲಾ ಕಾರಿಂದ ಎತ್ತಿ ಹೊರಗೆ ಎಸೀಲಾ? ನಮ್ಗೇ ಇಲ್ದೀರೋ ಟೆನ್ಷನ್ ಇವ್ಳಿಗೆ" ಗದರಿದ ಅಭಿರಾಮ್.

"ಇಂಥಾ ಪಾರ್ಟಿಗಳಿಗೆ ಲೇಟಾಗಿ ಹೋದ್ರೇನೆ ಒಳ್ಳೇದು ಮಗಳೇ" ಸಚ್ಚಿದಾನಂದ ಶರ್ಮಾ ಹೇಳಿದಾಗ "ಅರ್ಥ ಆಯ್ತಾ ಕೋತಿ" ಮತ್ತೆ ಅಣಕಿಸಿದ. ಅಣ್ಣ ತಂಗಿಯರ ಜಗಳ್ಬಂದಿಯಲ್ಲಿ ಅಂತೂ ಇಂತೂ ಕಾರು ರಾವ್ ಮ್ಯಾನ್ಶನ್ ತಲುಪಿತ್ತು. ಪಾರ್ಕಿಂಗ್ ಏರಿಯಾದಿಂದ ಮನೆಯೊಳಗೆ ಹೋಗುವ ಮುನ್ನ, 

"ಅನಾವಶ್ಯಕ ಮಾತುಗಳು ಅಪಾಯಕ್ಕೆ ಆಹ್ವಾನ ನೀಡಿದಂತೆ. ನೆನಪಿರಲಿ" ಎಚ್ಚರಿಸುವವನಂತೆ ಹೇಳಿದ್ದು ಅಭಿರಾಮ್.

ಅವರ ಬರುವಿಕೆಗೇ ಕಾದಿದ್ದಂತೆ ಒಳ ಪ್ರವೇಶಿಸಿದೊಡನೆ ಅತಿಯಾದ ಆತ್ಮೀಯತೆಯನ್ನು ಪ್ರದರ್ಶಿಸುತ್ತಾ ಸ್ವಾಗತಿಸಿದರು ರಾವ್ ದಂಪತಿ.

"welcome welcome, ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂತೆ ಆಯಿತು. ತುಂಬಾ ಸಂತೋಷವಾಯಿತು ನೀವು ಪರಿವಾರ ಸಮೇತ ಬಂದಿದ್ದು" ತಮ್ಮೆಲ್ಲಾ ಹಲ್ಲುಗಳನ್ನು ಪ್ರದರ್ಶಿಸುತ್ತಾ ಸತ್ಯಂ ರಾವ್ ಹೇಳುತ್ತಿದ್ದರೆ ಶರ್ಮಾ ಪರಿವಾರಕ್ಕೆ ಆ ತೋರಿಕೆ ಉಸಿರುಗಟ್ಟಿಸಿದಂತಾಯಿತು. ಅದೆಷ್ಟೇ ಸಿರಿವಂತರಾದರೂ ಸಚ್ಚಿದಾನಂದ ಶರ್ಮಾ ತಮ್ಮ ಪರಿವಾರವನ್ನು ಇಂತಹ ಸೋಗಿನ ಜನರಿಂದ ದೂರವಿಟ್ಟಿದ್ದರು.

ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಮೃದುಲಾ, ಆಕೃತಿ ಸುಮ್ಮನೆ ನಕ್ಕರೆ, ಅಭಿರಾಮ್ ನಿಜಕ್ಕೂ ನೀವು ಬಡವರೇ ಗುಣದಲ್ಲಿ ಎಂದುಕೊಂಡ. ಸಚ್ಚಿದಾನಂದರು ನಕ್ಕು, "ನಿಮ್ಮಂಥಾ ಬಡವರು ದೇಶದಲ್ಲಿದ್ರೆ ಬಡತನ ಅಳೆಯುವ ಮಾನದಂಡ ಬದಲಾಯಿಸಬೇಕಾಗುತ್ತೆ ರಾವ್" ಎಂದರು. 

ಮಾಲಿನಿ ಮೃದುಲಾರ ಕೈ ಹಿಡಿದುಕೊಂಡು ಅತೀವ ಸ್ನೇಹ ತೋರುತ್ತಾ, "ಬಹಳ ಸಂತೋಷ ಆಯ್ತು ನೀವು ಬಂದಿದ್ದು. ಹೀಗೆ ಭೇಟಿಯಾಗ್ತಿದ್ರೆ ತಾನೇ ಸ್ನೇಹ ಗಟ್ಟಿಯಾಗೋದು. ಆಕೃತಿ ಪುಟ್ಟ ಹೇಗಿದ್ದೀ? ಎಷ್ಟು ಲಕ್ಷಣವಾಗಿದ್ದೀಯ. ಸಣ್ಣವಳಿದ್ದಾಗ ನೋಡಿದ್ದು" ಅಂದಾಗ ನಸುನಕ್ಕಳವಳು.

"ಸರಿಯಾಗಿ ಹೇಳಿದೆ ಮಾಲತಿ, ಯಾವಾಗ್ಲೋ ಒಮ್ಮೊಮ್ಮೆ ಭೇಟಿಯಾಗ್ತಿದ್ರೆ ಸಂಬಂಧಗಳು ಉಳ್ಕೊಳ್ಳೋದಿಲ್ಲ. ಆವಾಗಾವಾಗ ನಾವು ನಿಮ್ಮಲ್ಲಿಗೆ, ನೀವು ನಮ್ಮಲ್ಲಿಗೆ ಬರ್ತಾ ಇದ್ರೆ ಮಕ್ಕಳ ನಡುವೆಯೂ ಪರಿಚಯವಿರುತ್ತದೆ." ಹೇಳಿದವರು ಅಭಿರಾಮ್ ಬೆನ್ನು ತಟ್ಟಿ, "ಏನಪ್ಪಾ ಯುವರಾಜ, ಹೇಗಿದ್ದೀಯಾ?" ಎಂದರು ರಾವ್.

"ಇಲ್ಲಿಯತನಕ ಎಲ್ಲಾ ಕ್ಷೇಮ. ಮುಂದೇನೋ ಗೊತ್ತಿಲ್ಲ ಅಂಕಲ್" ನಗುತ್ತಾ ಹೇಳಿದ.

"ಮುಂದೆನೂ ಹೀಗೆ ಇರ್ತೀಯಾ ಬಿಡು. ಹುಲಿ ನೀನು" ಎಂದವರಿಗೆ

"ನಾನೇನೋ ಹುಲಿನೇ…… ಆದ್ರೆ ನಮ್ಮ ಫೀಲ್ಡಲ್ಲಿ ಗುಳ್ಳೆನರಿಗಳ ಕಾಟ ಜಾಸ್ತಿ" ಅವನ ನುಡಿ ಹರಿತವಾಗಿತ್ತಾದರೂ ಅದರ ಗೂಢಾರ್ಥ ಅರಿವಾಗಲಿಲ್ಲ ರಾವ್ ಅವರಿಗೆ.

ತಾನೇ ವಿಷಯಾಂತರಿಸುತ್ತಾ, "ಐ ಮಸ್ಟ್ ಸೇ, ಪಾರ್ಟಿ ಬಹಳ ಚೆನ್ನಾಗಿ ಅರೇಂಜ್ ಮಾಡಿದ್ದೀರಾ ಅಂಕಲ್. ನಿಮ್ಮ ರೆಗ್ಯುಲರ್ ಪಾರ್ಟಿಗಳಿಗಿಂತ ಬಹಳ ಡಿಫರೆಂಟಾಗಿದೆ" ಹೇಳಿದ.

ಅವನ ಮಾತನ್ನು ಅನುಮೋದಿಸಿ ಸಚ್ಚಿದಾನಂದ ಅವರೂ "ಯು ಆರ್ ರೈಟ್ ಅಭಿ. ಬಹಳ ಒಳ್ಳೆ ಅಭಿರುಚಿ ರಾವ್ ನಿಮ್ಮದು" ಎಂದರು.

ರಾವ್ ಅವರಿಗೆ ತಮ್ಮ ಕಾರ್ಯಸಾಧನೆಗೆ ಇದೇ ಸುಸಂದರ್ಭ ಎನಿಸಿತು. "ಇವತ್ತಿನ ಪಾರ್ಟಿಯ ಎಲ್ಲಾ ಅರೇಂಜ್ಮೆಂಟ್ ನನ್ನ ಮಗಳದ್ದು. ಪ್ಲಾನ್ ನಿಂದ ಹಿಡಿದು ಎಕ್ಸಿಕ್ಯೂಷನ್ ತನಕ ಎಲ್ಲಾ ಕ್ರೆಡಿಟ್ ಅವಳಿಗೇ" ಎಂದು ಹಗಲು ರಾತ್ರಿ ಕಷ್ಟಪಟ್ಟ ಚೈತಾಲಿಯ ಕೆಲಸದ ಕ್ರೆಡಿಟ್ ಅನ್ನು ಮಗಳಿಗೆ ಕೊಟ್ಟು, "ಅಂದಹಾಗೆ ನೀವು ನನ್ನ ಮಗಳನ್ನು ಮೀಟ್ ಆಗಿಲ್ಲ ಅಲ್ವಾ?" ಕೇಳಿದವರು ಮಗಳಿಗಾಗಿ ಸುತ್ತಲೂ ಅರಸುತ್ತಿದ್ದರೆ, 

"ಯಾರ ಹತ್ರನೋ ಮಾತಾಡ್ತಿರ್ಬೇಕು. ಕರೀತೀನಿ ಇರಿ" ಎಲ್ಲೂ ಕಾಣದವಳನ್ನು ಮನದಲ್ಲೇ ಶಪಿಸುತ್ತಾ ಹುಡುಕಿಹೊರಟರು ಮಾಲಿನಿ. ಈ ಮನುಷ್ಯ, ಇವನ ಹೆಂಡತಿ ಸಾಲದು ಅಂತ ಇವನ ಮಗಳ ಟಾರ್ಚರ್ ಬೇರೆ ತಡ್ಕೋಬೇಕಾ ಎಂದುಕೊಂಡ ಅಭಿರಾಮ್.

ಲಾನ್ ಬಳಿ ಚೈತಾಲಿಯೊಂದಿಗೆ ಮಾತನಾಡುತ್ತಿದ್ದವಳನ್ನು ಕರೆದರು. 

"ಏನು ಮಮ್ಮೀ?" ಅಲ್ಲಿಂದಲೇ ಕೇಳಿದವಳಿಗೆ ನಾಲ್ಕು ಬಾರಿಸುವ ಮನಸ್ಸಾದರೂ ಅದು ಸಾಧ್ಯವಿಲ್ಲವೆಂಬುದು ತಿಳಿದ ವಿಷಯ. ಏನಾದರಾಗಲೀ ಬಂದ ಕೆಲಸ ನೋಡೋಣ ಎಂದುಕೊಂಡವರು

"ಕೆಲವು ಇಂಪಾರ್ಟೆಂಟ್ ಗೆಸ್ಟ್ ಗಳನ್ನು ಮೀಟ್ ಮಾಡಿಸಬೇಕು ಬಾ" ಚೈತಾಲಿ ಕಡೆಗೆ ಉರಿನೋಟ ಬೀರುತ್ತಾ ಹೇಳಿದರು. 

ಚೈತಾಲಿ "ಪ್ಲೀಸ್ ಹೋಗಿ ಮ್ಯಾಮ್, ಇಲ್ಲಾಂದ್ರೆ ನನಗೆ ಬೈತಾರೆ" ಪಿಸುನುಡಿದಾಗ ಅವಳ ಪೆಚ್ಚು ಮುಖ ನೋಡಲಾರದೆ ಅವಳನ್ನು ಅಲ್ಲಿಂದ ಕಳಿಸಿ ತಾನು ಮಾಲಿನಿಯೊಂದಿಗೆ ಹೊರಟಳು.

ಅವರಿಬ್ಬರೂ ಶರ್ಮಾ ಪರಿವಾರವಿದ್ದಲ್ಲಿಗೆ ಬಂದಾಗ ರಾವ್ ಅವಳ ಕೈ ಹಿಡಿದು, "ಮೀಟ್ ಮೈ ಸ್ವೀಟ್ ಡಾಟರ್ ಸಮನ್ವಿತಾ…… ಸಮನ್ವಿತಾ ದಿಸ್ ಈಸ್ ಮಿಸ್ಟರ್ ಎಂಡ್ ಮಿಸ್ಸೆಸ್ ಶರ್ಮಾ. ಇವರ ಮಕ್ಕಳು ಅಭಿರಾಮ್ ಎಂಡ್ ಆಕೃತಿ ಶರ್ಮಾ" ಒಂದೇ ಏಟಿಗೆ ಪರಿಚಯಿಸಿದರು.

ತನ್ನೆದುರು ನಗುತ್ತಾ ನಿಂತಿದ್ದ ದಂಪತಿಗಳನ್ನು ನೋಡಿದ್ದೆ ಅಪ್ರಯತ್ನವಾಗಿ ಕೈಜೋಡಿಸಿದಳು ಸಮನ್ವಿತಾ. ಅವಳು ಯಾರ ಮಾತನ್ನೂ ಕೇಳುವವಳಲ್ಲ. ತನ್ನ ಮನಸ್ಸಿಗೆ ಯಾವುದು ಸರಿಯೆನಿಸುವುದೋ ಅದನ್ನು ಮಾತ್ರವೇ ಮಾಡುವಾಕೆ. ಅದೇಕೋ ಅವರಿಬ್ಬರನ್ನೂ ಕಂಡು ಮನಸ್ಸಿಗೆ ಮುದವೆನಿಸಿತ್ತು. ಅರಿವಾಗದ ಆತ್ಮೀಯತೆಯ ಅಲೆಯೊಂದು ಅವಳಲ್ಲಿ ತೇಲಿತ್ತು. 

ಅವಳ ಮಾತಿಗೆ ನಸುನಕ್ಕು ಪ್ರತಿವಂದಿಸಿದ ಸಚ್ಚಿದಾನಂದ, ಮೃದುಲಾ ಮತ್ತು ಆಕೃತಿ ಅವಳನ್ನು ಕಂಡು ಅಚ್ಚರಿಗೊಂಡಿದ್ದರು. ರಾವ್ ದಂಪತಿಗಳ ಮಗಳ ಬಗ್ಗೆ ಅವರು ಕಲ್ಪಿಸಿಕೊಂಡಿದ್ದ ಚಿತ್ರವೇ ಬೇರೆಯದು. ಆದರೆ ಎದುರು ಕೈಜೋಡಿಸಿ ನಸುನಗುತ್ತಿದವಳ ನಿಲುವಿನಲ್ಲೊಂದು ಪ್ರಬುದ್ಧತೆಯಿತ್ತು. ಆ ಕಣ್ಣುಗಳಲ್ಲಿ ಅಪಾರ ಶಾಂತಿಯಿತ್ತು. ಅವಳಲ್ಲಿ ನಿಷ್ಕಪಟತೆಯ ಹೊರತು ಕುಟಿಲತೆಯ ಲವಲೇಶವೂ ಕಾಣಲಿಲ್ಲ. 

"ನಿನ್ನನ್ನು ನೋಡಿ ತುಂಬಾ ಸಂತೋಷವಾಯಿತಮ್ಮ" ತಲೆಸವರಿ ನುಡಿದರು ಮೃದುಲಾ.

"ಇನ್ನು ಇವರು ನಿನ್ನ ಜವಾಬ್ದಾರಿ. ಅವರಿಗೆ ಬೋರಾಗದಂತೆ ನೋಡ್ಕೋ"  ರಾವ್ ದಂಪತಿಗಳು ತಮ್ಮ ಪ್ಲಾನಿನ ಮೊದಲ ಹಂತ ಯಶಸ್ವಿಯಾದ ಖುಷಿಯಲ್ಲಿ ಅಲ್ಲಿಂದ ಕಾಲ್ತೆಗೆದರು.

ಕೆಲ ಸಮಯದಲ್ಲೇ ಅವರ ನಡುವೆ ಆತ್ಮೀಯತೆ ಬೆಳೆದಿದ್ದು ವಿಸ್ಮಯವೋ ಮತ್ತೇನೋ, ಅಂತೂ ಎಷ್ಟೋ ವರ್ಷಗಳ ಪರಿಚಿತರಂತೆ ಹರಟಿದ್ದರು ಸಮನ್ವಿತಾ, ಮೃದುಲಾ ಹಾಗೂ ಆಕೃತಿ. ಅದರಲ್ಲಿ ಸಂಪೂರ್ಣ ಭಾಗಿಯಾಗಿ ನಡುನಡುವೆ ತಮ್ಮದೊಂದು ಮಾತು ಸೇರಿಸುತ್ತಿದ್ದರು ಸಚ್ಚಿದಾನಂದ. 

ಆದರೆ...........

ಅವರ ಮಾತು, ಹರಟೆಯೆಡೆಗೆ ಗಮನವೇ ಇಲ್ಲದೆ, ಸುತ್ತಮುತ್ತಲಿನ ಪರಿವಿಲ್ಲದವನಂತೆ ಇದ್ದವನು ಅಭಿರಾಮ್. ಆಗಾಗ ಅವರು ಕೇಳಿದ್ದಕ್ಕೆ ಉತ್ತರಿಸುವುದನ್ನು ಬಿಟ್ಟರೆ ಅವನು ಮೌನವಾಗಿದ್ದ. ಮೌನವಾಗಿದ್ದ ಎನ್ನುವುದಕ್ಕಿಂತ ಅವನು ತೀವ್ರವಾದ ಆಲೋಚನೆಗೆ ಬಿದ್ದಿದ್ದ...... ಹಾಗೆ ಯೋಚಿಸುತ್ತಿದ್ದವನ ನೋಟ ಆಗಾಗ ಸಮನ್ವಿತಾಳನ್ನು ಮುತ್ತಿಕ್ಕುತ್ತಿತ್ತು. ಆದರೆ ತಮ್ಮ ಮಾತಿನ ಲಹರಿಯಲ್ಲಿ ಕಳೆದುಹೋಗಿದ್ದವರು ಇದ್ಯಾವುದನ್ನೂ ಗಮನಿಸಲಿಲ್ಲ. 

ರಾವ್ ದಂಪತಿಗಳು ಅವರತ್ತ ಬಂದು, "ಬೇರೆ ಗೆಸ್ಟ್ ಗಳನ್ನು ಮಾತನಾಡಿಸುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ" ಎಂದಾಗಲೇ ಅವರಿಗೆ ಸಮಯದ ಅರಿವಾದದ್ದು.

"ಅಯ್ಯೋ ಇಷ್ಟು ಹೊತ್ತಾಯ್ತಾ? ಗೊತ್ತೇ ಆಗ್ಲಿಲ್ಲ. ಸಮನ್ವಿತಾ ಹತ್ತಿರ ಮಾತಾಡ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ" ಎಂದು ಎದ್ದರು ಸಚ್ಚಿದಾನಂದ.

"ಹೌದು ಪುಟ್ಟಾ. ನಿನ್ ಹತ್ರ ಮಾತಾಡ್ತಾ ಟೈಮೇ ನೋಡ್ಲಿಲ್ಲ ನೋಡು ನಾವು. ಅಭೀ ನೀನಾದ್ರೂ ಹೇಳೋದಲ್ವೇನೋ" ಮಗನೆಡೆ ನೋಡಿದರು ಮೃದುಲಾ.

"ಅದು…... ನೀವು ಮಾತಾಡೋದ್ರಲ್ಲಿ ಮುಳುಗಿದ್ರಿ. ಏನೋ ಖುಷಿಲೀ ಮಾತಾಡ್ತಿರೋರನ್ನ ನಾನ್ಯಾಕೆ ಡಿಸ್ಟರ್ಬ್ ಮಾಡ್ಲೀ ಅಂತ ಸುಮ್ಮನಾದೆ" ಎಂದನಾದರೂ ಹೇಳಿದ್ದು ಸುಳ್ಳೆಂದು ಅವನಿಗೆ ತಿಳಿದಿತ್ತು.

"ನಿಮ್ಗೆ ಬೋರ್ ಆಗ್ಲಿಲ್ಲ ಅಂದ್ಕೋತೀವಿ." ಮಾಲಿನಿಯವರ ಮಾತಿಗೆ "ಖಂಡಿತಾ ಇಲ್ಲಾ. ನಿಮ್ಮ ಮಗಳ ಜೊತೆ ಮಾತಾಡಿ ತುಂಬಾ ಖುಷಿಯಾಯ್ತು. ನೀವು ಕರೀಲಿಲ್ಲ ಅಂದಿದ್ರೆ ಬಹುಶಃ ಬೆಳಿಗ್ಗೆವರೆಗೂ ಮಾತಾಡ್ತಿದ್ವೇನೋ" ಎಂದ ಮೃದುಲಾ, ಸಮನ್ವಿತಾಳ ಕೈಹಿಡಿದು,

"ನಮ್ಮನೆಗೆ ಯಾವಾಗ ಬರ್ತೀಯಾ ಪುಟ್ಟಾ?" ಅಕ್ಕರೆಯಿಂದ ಕೇಳಿದ್ದರು. ಅದಕ್ಕೆ ಆಕೃತಿಯ ಒತ್ತಾಯವೂ ಸೇರಿ, "ಸರಿ ಬರ್ತೀನಿ ಸಧ್ಯದಲ್ಲೇ" ಎಂದಳು. 

ಆಕೃತಿ "ಮತ್ತೆ ಮತ್ತೆ ನೆನಪಿಸುತ್ತೇನೆ, ಬರೋವರೆಗೂ ಬಿಡಲ್ಲ" ಎಂದು ಸಮನ್ವಿತಾಳ ನಂಬರ್ ತಗೊಂಡಳು.

ಇವರೆಲ್ಲಾ ಪಾರ್ಟಿಯಿಂದ ಹೊರಟಾಗ ಕಾರಿನವರೆಗೂ ಬಂದು ಬಿಳ್ಕೊಟ್ಟವಳನ್ನು ಕಂಡು ರಾವ್ ದಂಪತಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. 

ಅದರೊಂದಿಗೆ ಹೊರಡುವ ಮುನ್ನ "ಮಿಸ್ಟರ್ ರಾವ್, ಇಂಥಾ ಮಗಳನ್ನು ಪಡೆಯಲು ನೀವು ತುಂಬಾ ಅದೃಷ್ಟ ಮಾಡಿದ್ರಿ" ಎಂದಿದ್ದರು ಸಚ್ಚಿದಾನಂದ ಶರ್ಮಾ. ಅದರಿಂದ ತಮ್ಮ ಕೆಲಸ ಕೈಗೂಡಿತೆಂದು ಹರ್ಷಿಸಿದ್ದರೇ ಹೊರತು ಅವರ ಮಾತು ಅಂತರಾಳ ತಲುಪಲಿಲ್ಲ......

ಜೊತೆಗೆ ಕಾರ್ ಡ್ರೈವ್ ಮಾಡಿಕೊಂಡು ಹೊರಡುವ ಮುನ್ನ ಅಭಿರಾಮ್ ನೋಟ ಸಮನ್ವಿತಾಳತ್ತ ಇದ್ದದ್ದನ್ನು ರಾವ್ ಗಮನಿಸಿಬಿಟ್ಟಿದ್ದರು. ಆದರೆ ಅವನ ನೋಟದ ಹಿಂದಿನ ತರ್ಕ ಅವರಿಗೆ ಅರ್ಥವಾಗುವ ಸಾಧ್ಯತೆ ಇರಲಿಲ್ಲ…..!

ಎಲ್ಲಾ ಅವರ ಎಣಿಕೆಗಿಂತಲೂ ಅದ್ಭುತವಾಗಿ ನಡೆಯುತ್ತಿತ್ತು. ಎಲ್ಲಕ್ಕಿಂತ ಅವರಿಗೆ ಅತೀ ಹೆಚ್ಚು ಭಯವಿದ್ದದ್ದು ಮಗಳ ಬಗ್ಗೆ... ಯಾರೊಂದಿಗೂ ಹೆಚ್ಚು ಬೆರೆಯದ ಮಗಳು ಶರ್ಮಾ ಪರಿವಾರದೊಂದಿಗೆ ಹೊಂದಿಕೊಂಡದ್ದು ತುಂಬಾ ಖುಷಿಕೊಟ್ಟಿತ್ತು. ಅವರಿಗೆ ಬೇಕಾಗಿದ್ದು ಅದೇ.... ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು......

ಇತ್ತ ಮನೆಗೆ ಹೊರಟ ಶರ್ಮಾ ಪರಿವಾರದವರೂ ತುಂಬಾ ಉಲ್ಲಾಸದಲ್ಲಿದ್ದರು. ಸಂಜೆ ಮನೆಯಿಂದ ಹೊರಟಾಗ ಇದ್ದ ಅನುಮಾನ, ಬೇಸರ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಅವರ ಮಾತುಗಳೆಲ್ಲ ಸಮನ್ವಿತಾಳ ಸುತ್ತವೇ ಎಂದು ಬೇರೆ ಹೇಳಬೇಕಿಲ್ಲ. ಅವರಿಗೆ ಅವಳ ನಡೆ, ನುಡಿ, ಗುಣ, ಸ್ವಭಾವ ಪ್ರತಿಯೊಂದು ಇಷ್ಟವಾಗಿತ್ತು....

ಅವರೆಲ್ಲರ ನಡುವೆ ಮೌನವಾಗಿದ್ದವನು ಅಭಿ ಮಾತ್ರ....... 

ಇವರ ಅವ್ಯಾಹತ ಮಾತುಗಳನ್ನು ಕೇಳಿ ತಲೆಚಿಟ್ಟಿಡಿದು, "ಅಬ್ಬಾ ಅದೆಷ್ಟು ಮಾತಾಡ್ತೀರಾ. ಪಾರ್ಟಿಗೆ ಹೋದಲ್ಲಿಂದ ಶುರುವಾಗಿರೋ ಮಾತು ಇನ್ನೂ ಮುಗೀತಿಲ್ವಲ್ಲ. ಚರ್ಮದ ಬಾಯಾಗಿರೋದಕ್ಕೆ ಆಯ್ತು. ಮರದ ಬಾಯಿ ಆಗಿದ್ರೆ ಇಷ್ಟೊತ್ತಿಗೆ ಮುರಿದೇ ಹೋಗಿರೋದು" ರೇಗಿದ.

ಮನೆಗೆ ಬಂದವನೇ "ಅಮ್ಮ ,ನನ್ಗೆ ತುಂಬಾ ನಿದ್ರೆ ಬರ್ತಿದೆ. ಯಾರೂ ಡಿಸ್ಟರ್ಬ್ ಮಾಡಬೇಡಿ" ಎಂದವನು ಸೀದಾ ರೂಮಿಗೆ ನಡೆದಿದ್ದ. ಬಟ್ಟೆ ಬದಲಾಯಿಸಿ ಟೆರೇಸಿಗೆ ಹೋಗಿ ಅಲ್ಲಿದ್ದ ಉಯ್ಯಾಲೆಯಲ್ಲಿ ಕುಳಿತವನೇ ತನ್ನ ನೆನಪಿನಾಳವನ್ನೆಲ್ಲಾ ಕೆದಕತೊಡಗಿದ...... ಊಹ್ಮೂಂ..... ಏನೂ ನೆನಪಾಗದು.....

ಆದರೆ ಸಮನ್ವಿತಾಳನ್ನು ಪಾರ್ಟಿಯಲ್ಲಿ ನೋಡಿದ ಕ್ಷಣವೇ ಅವನ ಮನಕ್ಕೆ ಒಂದು ವಿಷಯ ಸ್ಪಷ್ಟವಾಗಿತ್ತು….....

ತಾನಿವಳನ್ನು ಈ ಮೊದಲು ನೋಡಿದ್ದೇನೆ.........

ಮಾತನಾಡಿಸಿರುವೆನಾ…...? ಹೆಸರು ಗೊತ್ತಿತ್ತೇ…..? ಅದೊಂದೂ ತಿಳಿಯದು‌..... 

ಆದರೆ ಈ ಮೊದಲು ಈಕೆಯನ್ನು ನೋಡಿರುವುದಂತೂ ಸತ್ಯ

ಆದರೆ ಎಲ್ಲಿ???......    

      *********ಮುಂದುವರೆಯುತ್ತದೆ*********



ಅನೂಹ್ಯ 15

ತನ್ನ ಕೋಣೆಯಲ್ಲಿ ನೇಮಿಚಂದ್ರ ಅವರ "ಯಾದ್ ವಶೇಮ್" ಹಿಡಿದು ಕುಳಿತಿದ್ದಳು ಸಮನ್ವಿತಾ. ಓದಿದ್ದು ಮೆಡಿಕಲ್ ಆದರೂ ಅವಳಿಗೆ ಇತಿಹಾಸದಲ್ಲಿ ಅದಮ್ಯ ಆಸಕ್ತಿಯಿತ್ತು. ಅಡಾಲ್ಫ್ ಹಿಟ್ಲರ್ ನ ಗತಕಾಲದ ಕ್ರೌರ್ಯ ಹಾಗೂ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿರುವ ಅದರ ಪ್ರಭಾವ, ನಾಜ಼ಿಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ತಮ್ಮ ನಾಡನ್ನು ಬಿಟ್ಟು ಸುರಕ್ಷಿತ ಬದುಕನ್ನರಸಿ ತಂದೆಯೊಂದಿಗೆ ಭಾರತಕ್ಕೆ, ಕರ್ನಾಟಕಕ್ಕೆ ಬಂದು ಇಲ್ಲಿಂದ ಪುನಃ ತಾಯ್ನಾಡಿಗೆ ಮರಳಲಾಗದ ಅನಿವಾರ್ಯತೆಗೆ ಸಿಲುಕಿದ ಹೆಣ್ಣೊಬ್ಬಳ‌ ಕಥನ "ಯಾದ್ ವಶೇಮ್". ಸಣ್ಣ ವಯಸ್ಸಿನಲ್ಲೇ ಇಲ್ಲಿ ಬಂದು ನೆಲೆ ನಿಂತು, ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಇಲ್ಲಿನ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಇಲ್ಲಿಯವಳೇ ಆಗಿ ಬದಲಾದರೂ ಸಾಯುವ ಮುನ್ನ ಒಮ್ಮೆಯಾದರೂ ತನ್ನವರನ್ನು, ತನ್ನ ದೇಶವನ್ನು ಮತ್ತೆ ನೋಡಬೇಕೆಂದು ಹಂಬಲಿಸುವಾಕೆ ಬಹಳ ಆಪ್ತಳಾದಳು ಸಮನ್ವಿತಾಳಿಗೆ.

(ನೇಮಿಚಂದ್ರರ "ಯಾದ್ ವಶೇಮ್" ಒಂದು ಅತ್ಯುತ್ತಮ ಕಾದಂಬರಿ. ನೈಜ ಘಟನೆಗಳ ಆಧಾರದಲ್ಲಿರುವ ಕಾದಂಬರಿ ಇತಿಹಾಸ ಪ್ರಿಯರಲ್ಲದವರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಇಷ್ಟವಾಗುತ್ತದೆ.)

ಬಾಗಿಲು ಬಡಿದ ಸದ್ದಿಗೆ ಪುಸ್ತಕ ಮಡಚಿಟ್ಟು ಕದ ತೆರೆದಳು. ಎದುರಿಗೆ ಚೈತಾಲಿ ಅದೇ ಸುಂದರ ನಗುವಿನೊಂದಿಗೆ ನಿಂತಿದ್ದಳು.

"ಮ್ಯಾಮ್......" ಎಂದು ಅವಳು ಶುರುಮಾಡುವ ಮುಂಚೆಯೇ, 

"ಚೈತಾಲಿ ನೋಡು. ನೀನು ಹೇಳಿದ ಹಾಗೆ ನಾನು ಮನೆಯಲ್ಲೇ ಇದ್ದೀನಿ. ಈಗ ಸಮಾಧಾನ ಆಯ್ತಾ?" ನಗುತ್ತಾ ಕೇಳಿದಳು.

"ಅದು ಹಾಗಲ್ಲ ಮ್ಯಾಮ್. ಒಂದು ವೇಳೆ ನೀವು ಆಸ್ಪತ್ರೆಯತ್ತ ಹೋಗಿದ್ರೆ ಸರ್ ನನ್ಗೆ ಬೈತಿದ್ರು. ಅದಕ್ಕೆ...."

"ಸರಿ ಹೋಗ್ಲಿ ಬಿಡು. ನಿನ್ನೆ ಎಷ್ಟೊತ್ತಾಗಿತ್ತು ಮನೆಗೆ ಹೋದಾಗ. ಏನೂ ತೊಂದ್ರೆ ಆಗ್ಲಿಲ್ಲ ಅಲ್ವಾ?" ವಿಚಾರಿಸಿದಳು. 

"ಅರ್ಧ ಗಂಟೆಯಲ್ಲಿ ಹೋದ್ವಿ ಮ್ಯಾಮ್. ತಮ್ಮ ಬಂದಿದ್ನಲ್ವಾ. ತೊಂದ್ರೆ ಏನಾಗ್ಲಿಲ್ಲ. ಆದ್ರೆ ನಮ್ಮಮ್ಮನ ಕೈಲಿ ಸರೀ ಪೂಜೆಯಾಯ್ತು. 'ಒಬ್ಬಳೇ ಹುಡ್ಗೀ ಮನೆಗೆ ಬರೋಕೆ ಹೊತ್ತು ಗೊತ್ತು ಇಲ್ವಾ? ಸುಮ್ನೆ ಕೆಲ್ಸ ಬಿಟ್ಟು ಮನೆಯಲ್ಲಿರು' ಅಂತೆಲ್ಲ ಉಗ್ದು ಮಂಗಳಾರತಿ ಎತ್ತಿದ್ರು" ಬೇಸರದ ಮುಖದಲ್ಲಿ ಹೇಳಿದಳು.

"ನಿಮ್ಮಮ್ಮ ನೀನು ಮನೆಗೆ ಹೋಗೋವರ್ಗೂ ಕಾಯ್ತಿದ್ರಾ?" ಕೇಳಿದವಳ ಧ್ವನಿಯಲ್ಲಿ ಆರ್ದ್ರತೆಯಿತ್ತು.

"ಅಯ್ಯೋ…. ನೀವೊಳ್ಳೆ ಕೇಳಿದ್ರೀ. ನಾನು ಮನೆಗೆ ಹೋಗಿ, ಊಟಮಾಡಿ ಮಲ್ಗೋವರ್ಗೂ ನಮ್ಮಮ್ಮಂಗೆ ಸಮಾಧಾನ ಆಗೋಲ್ಲ. ನಾನು ಹೋಗೋತಂಕ ಬಾಗಿಲಲ್ಲೇ ಕಾಯ್ತಿರ್ತಾಳೆ. ಸ್ವಲ್ಪವಾದರೂ ಊಟ ಮಾಡ್ದೇ ಬಿಡೋಲ್ಲ. ಅಬ್ಬಾ ಅವಳ ಕಣ್ಣ್ ತಪ್ಪಿಸೋಕಾಗುತ್ತಾ?" ಕೈ ಮುಗಿದಳು ಚೈತಾಲೀ.

ಅವಳ ಮಾತುಗಳು ಸಮನ್ವಿತಾಳ ಅಂತರಾಳವನ್ನು ಕಲಕಿ ರಾಡಿಮಾಡಿತು. ತನ್ನ ತಾಯಿಗೆ ಮನೆಯಲ್ಲಿ ಇದ್ದೀನಾ ಇಲ್ವೋ ಅನ್ನೋದಿರಲಿ, ತಾನು ಬದ್ಕಿದ್ದೀನಾ ಸತ್ತಿದ್ದೀನಾ ಅಂತ ಕೇಳೋ ಪುರುಸೊತ್ತಿಲ್ಲ..... ಆ ದಿ ತನ್ನ ಬದುಕಿನಲ್ಲೆಂದೂ ಬರದು. ಅಂತ ಅದೃಷ್ಟ ನನ್ನ ಹಣೆಯಲ್ಲಿ ಬರೆದಿಲ್ಲ ಎಂದು ಬೇಯುವ ಮನವನ್ನು ಸಾಂತ್ವನಿಸಿದಳು.

"ಮ್ಯಾಮ್, ಮಾತಾಡ್ತಾ ನಾನು ಬಂದ ವಿಷಯನೇ ಮರ್ತು ಬಿಟ್ಟೆ. ನೀವು ನಾಲ್ಕೂವರೆ ಹೊತ್ತಿಗೆ ರೆಡಿಯಾಗಬೇಕಂತೆ" 

"ನೀನು ಮ್ಯಾಮ್ ಅಂತಿಯೋ ಮ್ಯಾವ್ ಅಂತಿಯೋ ನಿಂಗೇ ತಿಳೀಬೇಕು ಚೈತಾಲಿ. ಒಮ್ಮೊಮ್ಮೆ ನೀನು ಬೆಕ್ಕನ್ನು ಕರೀತಿದಿಯೇನೋ ಅನ್ಸುತ್ತೆ. ಸರಿ ನಾನು ಹೊರಟಿರ್ತೀನಿ ಆಯ್ತಾ? ಈಗ ಸಮಾಧಾನನಾ?" ಕೇಳಿದಾಗ ಖುಷಿಯಿಂದ ತಲೆಯಾಡಿಸಿ ಸರಿದು ಹೋದಳು ಚೈತಾಲಿ.

ಅವಳನ್ನು ಕಳಿಸಿ ಕೋಣೆಯ ಕದವಿಕ್ಕಿ ಮತ್ತೆ ಪುಸ್ತಕದೊಳಗೆ ಮುಳುಗಿದಳು.

           ****************************

ಉನ್ ಸೇ ನಜ಼ರೆ ಕ್ಯಾ ಮಿಲೀ 

ರೋಶನ್ ಫಿ಼ಜಾ಼ಯೇಂ ಹೋ ಗಯೀ

ಆಜ್ ಜಾನಾ ಪ್ಯಾರ್ ಕಿ 

ಜಾದೂಗರೀ ಕ್ಯಾ ಚೀಜ಼್ ಹೈ


ಹೋಶ್ ವಾಲೋಂ ಕೋ ಖಬರ್ ಕ್ಯಾ 

ಬೇಖುದಿ ಕ್ಯಾ ಚೀಜ಼್ ಹೈ

ಇಶ್ಕ್ ಕೀಜೆ ಫಿರ್ ಸಮಜಿಯೆ 

ಜಿ಼ಂದಗಿ ಕ್ಯಾ ಚೀಜ಼್ ಹೈ

ಜಗ್ ಜೀತ್ ಸಿಂಗ್ ಅವರ ಕಂಠಸಿರಿ ಆ ಕೋಣೆಯ ತುಂಬಾ ಹರಡಿತ್ತು. ಅದರೊಂದಿಗೆ ದನಿಗೂಡಿಸುತ್ತಿದ್ದವನ ಕೈಗಳು ಕ್ಯಾನ್ವಾಸಿನ ತುಂಬಾ ಹರಿದಾಡುತ್ತಿದ್ದವು.ಬೆಳಗ್ಗಿನಿಂದ ಅದರೊಳಗೆ ಮುಳುಗಿಹೋಗಿದ್ದವನಿಗೆ ಹಸಿವಿನ ಅರಿವಾಗಿರಲಿಲ್ಲ .  ಅದು ಅವನ ಸ್ವಭಾವ. ಕುಂಚ ಕೈಯಲ್ಲಿ ಬಂದಿತೆಂದರೆ ಊಟ ನಿದಿರೆಗಳೆಲ್ಲವನ್ನು ಮರೆಯಬಲ್ಲ. ಬಣ್ಣಗಳ ಸಾಮೀಪ್ಯ ಸಿಕ್ಕ ದಿನ ಅವನಿಗೆ ಬೇಕಾಗುವುದು ಗಜ಼ಲ್ ಗಳ ಆಲಾಪ ಮಾತ್ರ. ಅವೆರಡು ಅವನಿಗೆ ಅತೀ ಪ್ರಿಯ. ತನ್ನ ಬಿಡುವಿರದ ಕೆಲಸಗಳ ನಡುವೆಯೂ ಕುಂಚ ಹಿಡಿಯಲು ಹೇಗಾದರೂ ಸಮಯ ಹೊಂದಿಸಿಕೊಳ್ಳುತ್ತಾನವನು.

ಅವನು ಅಭಿರಾಮ್ ಶರ್ಮಾ. ಸಚ್ಚಿದಾನಂದ ಶರ್ಮಾ ಹಾಗೂ ಮೃದುಲಾ ಶರ್ಮಾ ದಂಪತಿಗಳ ಜೇಷ್ಠ ಪುತ್ರ, ಆಕೃತಿ ಶರ್ಮಾಳ ಪ್ರೀತಿಯ ಅಣ್ಣ, "ಶರ್ಮಾ ಎಂಪೈರ್" ನ ಮಾಲೀಕ. ಶರ್ಮಾ ಎಂಪೈರ್ ಎಂದರೆ ಉದ್ಯಮ ವಲಯದಲ್ಲಿಯ ಪ್ರತಿಷ್ಠಿತ ಹೆಸರು. ಟೆಕ್ಸ್ಟೈಲ್, ಸಿಮೆಂಟ್, ಹಾಗೂ ಪರ್ಫ್ಯೂಮ್ ಈ ಮೂರು ಉದ್ಯಮಗಳಲ್ಲಿ ಶರ್ಮಾ ಎಂಪೈರ್ ಹೊಂದಿರುವ ಹಿಡಿತ ಅಪಾರ.

ಸಚ್ಚಿದಾನಂದ ಶರ್ಮಾ ಅವರಿಗೆ "ಶರ್ಮಾ ಟೆಕ್ಸ್ಟೈಲ್" ತಂದೆಯಿಂದ ಬಳುವಳಿಯಾಗಿ ಬಂದಿದ್ದು. ಅವರು ಅದನ್ನು ಬೆಳೆಸುವುದರೊಂದಿಗೆ, ಹೊಸ ಉದ್ಯಮಗಳನ್ನು ಸ್ಥಾಪಿಸಿ ತಮ್ಮ ಔದ್ಯೋಗಿಕ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದರು. ಅಭಿರಾಮ್ ಅವರೊಂದಿಗೆ ಕೈ ಜೋಡಿಸಿದ ಮೇಲೆ ಆ ವಿಸ್ತಾರ ಹಾಗೂ ಉದ್ಯಮದ ಮೇಲಿನ ಹಿಡಿತ ಇನ್ನಷ್ಟು ಬಲವಾಗಿತ್ತು. 

ಇಡೀ ಶರ್ಮಾ ಎಂಪೈರ್ ನ ಕಾರ್ಯನಿರ್ವಹಣೆ ಅವನ ಕೈಗೊಪ್ಪಿಸಿದ್ದ ಸಚ್ಚಿದಾನಂದರು ತಾವು ಕೇವಲ ಸಲಹೆ, ಸೂಚನೆ ನೀಡುವ ಕಾರ್ಯವನ್ನು ಮಾತ್ರ ಉಳಿಸಿಕೊಂಡಿದ್ದರು. ತಮ್ಮ ಉಳಿದ ಅಮೂಲ್ಯ ಸಮಯವನ್ನು ಮಡದಿ ಮೃದುಲಾ ದೇವಿಯರ ತಲೆ ತಿನ್ನಲು ಸಮರ್ಥವಾಗಿ ಬಳಸಿಕೊಳ್ಳುವ ನಿರ್ಧಾರ ಮಾಡಿಬಿಟ್ಟಿದ್ದರೆನ್ನಿ.

ಕುಂಚ, ಮೂರ್ತಿ ಶಿಲ್ಪ, ಗಜ಼ಲ್, ಹಾಗೂ ಸ್ನೇಹಿತರ ಸಂಗದಲ್ಲಿ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದ ಅಭಿರಾಮ್ ಗೆ ತಂದೆಯ ನಿರ್ಧಾರದಿಂದ ಕೈ ಕಟ್ಟಿದಂತಾದರೂ ಅದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆಂದು ಅವನಿಗೂ ಅನಿಸಿದ್ದರಿಂದ ಮರುನುಡಿಯದೇ ಒಪ್ಪಿಕೊಂಡಿದ್ದ.

ಆದರೂ ಅವನ ಆಸೆ, ಆಸಕ್ತಿಗಳ ಮೇಲೆ ತಾಯ್ತಂದೆಯರಿಗೆ ಕಾಳಜಿಯಿತ್ತು. 

'ಹಣ ಬದುಕಿಗೆ ಅಗತ್ಯ ಆದರೆ ಹಣವೇ ಬದುಕಿನ ಅನಿವಾರ್ಯತೆಯಲ್ಲ…' ಇದು ಸಚ್ಚಿದಾನಂದ ಅವರ ತಂದೆ ಅವರಿಗೆ ಕಲಿಸಿದ್ದು. ಅದೇ ಗುಣವನ್ನು ಮಕ್ಕಳಲ್ಲೂ ಬೆಳೆಸಿದ್ದರು. ಹಾಗಾಗಿಯೇ ಅವನು ತನ್ನ ಹವ್ಯಾಸಗಳನ್ನು ಉಳಿಸಿಕೊಂಡಿದ್ದ.

ಕುಂಚ ಕೆಳಗಿಳಿಸಿ ಕ್ಯಾನ್ವಾಸ್ ನೋಡಿದ. ಪ್ರಕೃತಿಯ ರಮಣೀಯ ಹಿನ್ನೆಲೆಯಲ್ಲಿ ಸೂರ್ಯೋದಯದ ಕಲಾಕೃತಿ.... ನೋಡುತ್ತಾ ನಿಂತವನ ಧ್ಯಾನಕ್ಕೆ ತಡೆಯೊಡ್ಡಿದ್ದು 

"ಹಲೋ ಮಿಸ್ಟರ್ ಪೇಂಟರ್, ಬೆಳಗ್ಗಿನ ತಿಂಡಿ ಶಿವನ ಪಾದ ಸೇರ್ತು, ಊಟನಾದ್ರೂ ಮಾಡ್ತೀಯಾ ಇಲ್ಲಾ ಅದೂ ಗೋವಿಂದನಾ?" ಎಂಬ ಆಕೃತಿಯ ದನಿ.

"ನಿನ್ನ ಸೆನ್ಸ್ ಆಫ್ ಹ್ಯೂಮರ್ ಅದ್ಬುತವಾಗಿದೆ. ಪ್ರದರ್ಶನ ಮಾಡೋದೇನೂ ಬೇಕಾಗಿಲ್ಲ. ನೋಡು ಹೇಗಿದೆ?" ಕ್ಯಾನ್ವಾಸ್ ತೋರಿಸಿ ಕೇಳಿದ.

ಅದನ್ನು ನೋಡಿದವಳ ಮುಖ ಅರಳಿತು. "ಸೂಪರ್. ತುಂಬಾ ಚೆನ್ನಾಗಿದೆ ಕಣೋ. ಪ್ಲೀಸ್ ಅಣ್ಣಾ ಇದ್ನ ನಂಗೆ ಕೊಡೋ. ಫ್ರೇಮ್ ಹಾಕಿ ರೂಮಲ್ಲಿ ಇಟ್ಕೋತೀನಿ" ಗೋಗರೆದಳು.

"ಅದೇನೂ ಬೇಕಾಗಿಲ್ಲ. ನಾನು ಕೊಡೋಲ್ಲ. ಮಂಗನ ಕೈಲಿ ಮಾಣಿಕ್ಯ ಕೊಡೋಕಾಗುತ್ತಾ?" 

"ಏನೋ ನನ್ನೇ ಮಂಗ ಅಂತೀಯಾ? ನಾನು ಮಂಗ ಆದ್ರೆ ನೀನು ಮಂಗನ ಅಣ್ಣ ದೊಡ್ಡ ಮಂಗ" ಮುಖ ಉಮ್ಮಿಸಿ ಹೇಳಿದಳು.

"ನೋಡು ನೋಡು.... ಈಗಂತೂ ಥೇಟ್ ಕೆಂಪು ಮೂತಿ ಚಿಂಪಾಂಜಿನೇ. ಏನು ವ್ಯತ್ಯಾಸ ಇಲ್ಲ." ಅಣಕಿಸಿದ.

ಇವರ ಜಗಳ‌ ತಾರಕಕ್ಕೇರುವ ಮುನ್ನವೇ, "ಮೊದ್ಲು ಊಟಕ್ಕೆ ಬನ್ನಿ ಇಬ್ರೂ. ನಿಮ್ಮ ಕೋಳಿ ಜಗ್ಳ ಊಟ ಮಾಡ್ತಾ ಮುಂದುವರೆಯಲೀ" ಕರೆದರು ಮೃದುಲಾ.

ಇಬ್ಬರೂ ಕೆಳಗಿಳಿದು ಬಂದು ಡೈನಿಂಗ್ ಟೇಬಲ್ ಮೇಲೆ ಆಸೀನರಾಗುವ ಹೊತ್ತಿಗೆ ಸಚ್ಚಿದಾನಂದರೂ ಬಂದರು. ಮೃದುಲಾ ಮೂವರಿಗೂ ಊಟ ಬಡಿಸಿ ತಾವೂ ಊಟಕ್ಕೆ ಕುಳಿತರು. ಎಷ್ಟೇ ಕೆಲಸದವರಿದ್ದರೂ ಅಡುಗೆ ಕೆಲಸ, ಬಡಿಸುವುದೆಲ್ಲ ಮೃದುಲಾ ಅವರೇ. ಅಡುಗೆ ಮಾಡುವುದು, ಎಲ್ಲರ ಬೇಕು ಬೇಡಗಳನ್ನು ವಿಚಾರಿಸುತ್ತಾ ಬಡಿಸುವುದು ಅವರಿಗೆ ಇಷ್ಟವಾದ ಕೆಲಸ. ಅದನ್ನೆಂದೂ ಕೆಲಸದವರ ಕೈಗೊಪ್ಪಿಸರು.

"ಸಂಜೆ ಸತ್ಯಂ ರಾವ್ ಅವರ ಪಾರ್ಟಿ ಇನ್ವಿಟೇಶನ್ ಇದೆ. ಎಲ್ಲಾ ರೆಡಿಯಿರಿ" ನೆನಪಿಸಿದರು ಸಚ್ಚಿದಾನಂದ್.

"ಡ್ಯಾಡ್…. ಈ ಪಾರ್ಟಿಗೆ ಹೋಗ್ಲೇಬೇಕಾ? ಹೋಗದಿದ್ರೇನು? ಯಾಕೋ ಗೊತ್ತಿಲ್ಲ….  ಸತ್ಯಂ ರಾವ್ ಹೊರಗೆ ಕಾಣೋವಷ್ಟು ಒಳ್ಳೆ ವ್ಯಕ್ತಿ ಅಲ್ಲ ಅನ್ಸುತ್ತೆ ನಂಗೆ" ಅಭಿರಾಮ್ ಮಾತಿಗೆ ಅವರು ನಸುನಕ್ಕರು.

"ನೀನು ಅಂದ್ಕೊಂಡಿರೋದು ಸರಿಯಾಗಿದೆ. ರಾವ್ ತುಂಬಾ ಅಪಾಯಕಾರಿ ವ್ಯಕ್ತಿ. ಅದಕ್ಕಾಗೆ ನಾವು ಹೋಗ್ಲೇಬೇಕು. 

"ಅವರು ಇನ್ವೈಟ್ ಮಾಡಿದಾಗ್ಲೇ ಅನ್ಸಿತ್ತು ಇದು ನಮ್ಗೋಸ್ಕರವೇ ಅರೇಂಜ್ ಮಾಡಿರೋ ಪಾರ್ಟಿ ಅಂತ. ಈ ಪಾರ್ಟಿ ಹಿಂದೆ ಏನೋ ಉದ್ದೇಶ ಇದೆ ಅಪ್ಪಾ. ಅದಕ್ಕೇ ಕೇಳಿದ್ದು ಹೋಗ್ಲೇಬೇಕಾ ಅಂತ."

"ಹೋಗಿಲ್ಲ ಅಂದ್ರೆ ಅವನನ್ನು ಎದುರು ಹಾಕ್ಕೊಂಡಹಾಗೇ. ಅದು ಅಷ್ಟು ಒಳ್ಳೆಯದಲ್ಲ. ಸೋ ಬೆಟರ್ ಹೋಗಿ ಬರೋಣ" 

ಅವನಿಗ್ಯಾಕೋ ಹೋಗುವ ಮನವಿರಲಿಲ್ಲ. ಆದರೂ ತಂದೆಯ ಮಾತಿಗೆ ಒಪ್ಪಲೇ ಬೇಕಾಯಿತು. ಸರಿ ಹೋಗಿಬಂದರಾಯಿತೆಂದು ಸುಮ್ಮನಾದ.

         *******************************

ರಾವ್ ದಂಪತಿಗಳು ತಮ್ಮ ಕೋಣೆಯಲ್ಲಿ ಗಹನವಾದ ಸಮಾಲೋಚನೆಯಲ್ಲಿ ಮುಳುಗಿದ್ದರು.

"ಅಂತೂ ಸಮನ್ವಿತಾ ಮನೇಲೇ ಇರೋಕೆ ಒಪ್ಪಿದ್ಲಲ್ಲ. ಇನ್ನೇನು ಗಲಾಟೆ ಮಾಡ್ತಾಳೋ ಅಂತ ತಲೆಬಿಸಿಯಾಗಿತ್ತು ನನ್ಗೆ" ಹೇಳುತ್ತಿದ್ದರು ಸತ್ಯಂ ರಾವ್.

"ನಾನೂ ಹಾಗೇ ಅಂದ್ಕೊಂಡಿದ್ದೆ. ಏನೋ ಜಾಸ್ತಿ ತಕರಾರು ಮಾಡದೇ ಒಪ್ಪಿಕೊಂಡ್ಲಲ್ಲ" ದೊಡ್ಡ ಸಮಸ್ಯೆಯಿಂದ ಪಾರಾದಂತೆ ಹರ್ಷಿಸಿದ ಮಾಲಿನಿ "ಶರ್ಮಾ ಫ್ಯಾಮಿಲಿ ಪಾರ್ಟಿ ಅಟೆಂಡ್ ಮಾಡ್ತಾರೆ ಅನ್ನಿಸುತ್ತಾ ನಿಮ್ಗೆ?" ತನ್ನ ಅನುಮಾನವನ್ನು ವ್ಯಕ್ತಪಡಿಸಿದರು.

"ಬಂದೇ ಬರ್ತಾರೆ. ಅವರು ತುಂಬಾ ಪ್ರಭಾವಿ ವ್ಯಕ್ತಿಗಳಾದ್ರು ನಮ್ಮ ವಿರೋಧ ಕಟ್ಟಿಕೊಳ್ಳೋದು ಒಳ್ಳೆಯದಲ್ಲ ಅಂತ ಆ ಸಚ್ಚಿದಾನಂದ ಶರ್ಮನಿಗೆ ಚೆನ್ನಾಗಿ ಗೊತ್ತು." 

"ಆದ್ರೂ ನಂಗೆ ಅವರೆಲ್ಲರಿಗಿಂತ ನಿಮ್ಮ ಮಗಳ ಮೇಲೆಯೇ ಭಯ ಜಾಸ್ತಿಯಿದೆ. ನಮ್ಮ ಪ್ಲಾನ್ ಬಗ್ಗೆ ಸಣ್ಣ ಕ್ಲೂ ಸಿಕ್ರೂ ಸಾಕು, ಅವ್ಳಂತೂ ಸುಮ್ನಿರೋಲ್ಲ. ಬೇರೆ ಯಾರನ್ನಾದ್ರೂ ಒಪ್ಪಿಸಬಹುದು. ಆದ್ರೆ ಇವ್ಳು...... ಅಬ್ಬಾ .....'ಆಗೋಲ್ಲ' ಅಂದ್ರೆ ಮುಗೀತು. ಸ್ಟುಪಿಡ್ ಗರ್ಲ್. ನಮ್ಮ ಪ್ರೆಸ್ಟೀಜ್, ಸ್ಟೇಟಸ್ ಯಾವುದರ ಬಗ್ಗೆಯೂ ಕೇರಿಲ್ಲ. ಅದ್ಯಾವ್ದೋ ಧರ್ಮಾಸ್ಪತ್ರೆ, ಆಶ್ರಮ ಅಂತ ಆ ಡರ್ಟಿ ಲೋ ಕ್ಲಾಸ್ ಪೀಪಲ್ ಜೊತೆ ಸುತ್ತುತ್ತಾ ಇರ್ತಾಳೆ. ಯೂಸ್ ಲೆಸ್ ಗರ್ಲ್" ಮಗಳ ಮುಂದೆ ಹೇಳಲಾಗದ ಅಂತರಾಳದ ಭಾವನೆಗಳು ಸಮಾಜ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದ ಶ್ರೀಮತಿ ಮಾಲಿನಿಯವರ ಬಾಯಲ್ಲಿ ಮಂತ್ರಪುಷ್ಪಗಳಾಗಿ ಉದುರಿದವು. ಪುಣ್ಯ ಕೇಳಿಸಿಕೊಳ್ಳಲು ಅವಳಲ್ಲಿ ಇರಲಿಲ್ಲ. ಇವರಿಗೆ ಪ್ರಶಸ್ತಿ ಕೊಟ್ಟ ಸಮಾಜದ ಜನರು ಅಲ್ಲಿದ್ದಿದ್ದರೆ ಹಳೆಯ ಕೆರದಲ್ಲಿ ತಮಗೆ ತಾವೇ ಹೊಡೆದುಕೊಳ್ಳುತ್ತಿದ್ದರೇನೋ.....

"ಅದೇನೇ ಇರಲಿ ಯಾವುದೇ ಕಾರಣಕ್ಕೂ ಸಮನ್ವಿತಾಗೆ ಯಾವ ವಿಷಯನೂ ಗೊತ್ತಾಗಬಾರದು. ಅದಕ್ಕೆಲ್ಲ ವ್ಯವಸ್ಥೆ ಮಾಡ್ತೀನಿ. ನೀನು ಅವಳತ್ರ ಮಾತಾಡೋವಾಗ ಹುಷಾರಾಗಿರು" ಎಂದರು ರಾವ್.

"ಅಯ್ಯೋ, ನಾನಂತೂ ಅವಳ್ಹತ್ರ ಮಾತಾಡೋಕೆ ಹೋಗಲ್ಲಪ್ಪ" ಸತ್ಯ ಮಾಲಿನಿಯವರ ಬಾಯಿಂದಲೇ ಹೊರಬಿತ್ತು.

ಅಂತೂ ಗಂಡ ಹೆಂಡತಿ ಬಹಳ ಹೊತ್ತು ತಮ್ಮ ಯೋಜನೆಯ ಬಗ್ಗೆ, ಅದನ್ನು ಸುಸೂತ್ರವಾಗಿ ಜಾರಿಗೊಳಿಸುವ ಬಗ್ಗೆ ಚರ್ಚಿಸಿದರು.

      ********ಮುಂದುವರೆಯುತ್ತದೆ********



ಅನೂಹ್ಯ 14

ಸಮನ್ವಿತಾ ಆಸ್ಪತ್ರೆಗೆ ಬಂದು ಡೆಲಿವರಿ ಕೇಸೊಂದನ್ನು ಮುಗಿಸಿ ಮನೆಗೆ ಹೊರಟಾಗ ರಾತ್ರಿ ಹನ್ನೆರಡು ದಾಟಿತ್ತು. ಏನೋ ಯೋಚಿಸುತ್ತಾ ರೂಮಿನತ್ತ ನಡೆದವಳನ್ನು ತಡೆದಿತ್ತು "ಎಕ್ಸ್ಯೂಸ್ ಮೀ ಮ್ಯಾಮ್" ಎಂಬ ನವಿರು ಧ್ವನಿ. ಅದು ಚೈತಾಲಿಯ ಸ್ವರವೆಂದು ಗುರ್ತಿಸಿ ತಿರುಗಿದಳು.

ಚೈತಾಲಿ ಸತ್ಯಂ ರಾವ್ ಅವರ ಪಿ.ಎ. ಅವರ ಬಿಸ್ನೆಸ್ ಹಾಗೂ ಮನೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಅವಳೇ ಅವರ ಸಹಾಯಕಿ ಎನ್ನಬಹುದು. ಆದರೆ ಆ ಹೊತ್ತಿನಲ್ಲಿ ಅವಳನ್ನು ಅಲ್ಲಿ ಕಂಡು ಸಮನ್ವಿತಾಳ ಹುಬ್ಬೇರಿತು. 

ಅವಳ ಅಚ್ಚರಿ ಅರಿತವಳಂತೆ, "ನಿಮ್ಮನ್ನೇ ಕಾಯ್ತಿದ್ದೆ ಮ್ಯಾಮ್. ನಿಮಗೊಂದು ಇನ್ಫಾರ್ಮೇಷನ್ ಕೊಡೋದಿತ್ತು" ಚೈತಾಲಿ ನುಡಿದಾಗ,

"ಚೈತಾಲೀ, ನಾವಿಬ್ರೂ ಆಲ್ಮೋಸ್ಟ್ ಒಂದೇ ವಯಸ್ಸಿನವರು. ಪ್ಲೀಸ್ ಕಾಲ್ ಮೀ ಬೈ ನೇಮ್" ವಿನಂತಿಯೆಂಬಂತೆ ಕೇಳಿದಳು.

"ಅಯ್ಯೋ ಮ್ಯಾಮ್, ಅದು ಸರ್ ಗೆ ಇಷ್ಟ ಆಗೋಲ್ಲ." ತನ್ನ ಸಮಸ್ಯೆ ಹೇಳಿದಳು. ಅವಳು ಹೇಳಿದ್ದು ಅಕ್ಷರಶಃ ನಿಜ ಎಂಬುದು ಸಮನ್ವಿತಾಳಿಗೂ ತಿಳಿದ ವಿಷಯ.

"ಸರಿ ಹೋಗ್ಲಿ ಬಿಡು. ಹೇಳು ಅದೇನು ನನಗೆ ಕಾಯ್ತಾ ಕೂತ್ಕೋಳ್ಳುವಷ್ಟು ಮುಖ್ಯವಾದ ವಿಷ್ಯ?" ನೇರವಾಗಿ ಕೇಳಿದಳು.

"ಅದು ಮ್ಯಾಮ್, ನಾಳೆ ನೀವು ಮನೆಲೇ ಇರ್ಬೇಕಂತೆ. ಎಲ್ಲೂ ಹೋಗೋದು ಬೇಡ ಅಂತ ಹೇಳಿದ್ದಾರೆ" ಚೈತಾಲಿಯ ಮಾತು ಕೇಳಿ ಸಮನ್ವಿತಾಳಿಗೆ‌ ಆಶ್ಚರ್ಯವಾಯಿತು.

"ನಾನ್ಯಾಕೆ ಮನೆಲಿರ್ಬೇಕು? ಏನಿದೆ ನಾಳೆ?" ಕೇಳಿದಳು ಗೊಂದಲದಿಂದ.

"ಅದು ನಂಗೆ ಗೊತ್ತಿಲ್ಲ ಮ್ಯಾಮ್. ಸರ್ ತಾವೇ ಹೇಳೋಕಂತ ತುಂಬಾ ಹೊತ್ತು ಕಾಯ್ತಿದ್ರು. ನೀವ್ ಬರೋದು ಲೇಟಾಯ್ತಲ್ಲ. ಅವ್ರು ಯಾವುದೇ ಮುಖ್ಯವಾದ ಕೆಲ್ಸ ಅಂತ ಹೋದ್ರು. ವಿಷಯ ಅವ್ರೇ ಹೇಳ್ತಾರಂತೆ ನಾಳೆ. ನೀವು ಮನೇಲೇ ಇರ್ಬೇಕಂತೆ" ಮತ್ತೊಮ್ಮೆ ಒತ್ತಿ ಹೇಳಿದಳು.

"ಸರಿ ಬಿಡು ಚೈತಾಲಿ. ಹೇಳಿದ್ದಾಯ್ತಲ್ಲ. ತುಂಬಾ ಲೇಟಾಗಿದೆ. ಇಲ್ಲೇ ಗೆಸ್ಟ್ ರೂಮಿನಲ್ಲಿ ಉಳ್ಕೊ" 

ಸಮನ್ವಿತಾ ಮಾತು ಕೇಳಿ ಗಾಬರಿಯಾದ ಚೈತಾಲಿ, 

"ಏನು? ನಾನು ಗೆಸ್ಟ್ ರೂಮಲ್ಲಿ ಉಳ್ಯೋದಾ? ಅದು ಗಣ್ಯಾತಿಗಣ್ಯರಿಗೆ ಮಾತ್ರ ಮೀಸಲು. ಸರ್ ಗೆ ಗೊತ್ತಾದ್ರೆ ಅಷ್ಟೇ ನನ್ ಕಥೆ. ಕೆಲ್ಸ ಕಿತ್ಕೊಂಡು ಮನೆಗೆ ಕಳಿಸ್ತಾರೆ ಮ್ಯಾಮ್. ನಮ್ಮನೆ ಇಲ್ಲೇ ಹತ್ರದಲ್ಲಿರೋದು. ನಾನು ಮನೆಗೇ ಹೋಗ್ತೀನಿ" ನುಡಿದಾಗ ತಮಗಾಗಿ ದುಡಿಯುವ ಕೈಗಳ ಬಗ್ಗೆ ಒಂದಿನಿತೂ ಕನಿಕರವಿಲ್ಲದ ತಂದೆಯ ಬಗ್ಗೆ  ಸಮನ್ವಿತಾಳಿಗೆ ಜಿಗುಪ್ಸೆಯೆನಿಸಿತು. ಆದರೆ ಮಾತಾಡಿ ಪ್ರಯೋಜನವಿಲ್ಲವೆಂದು ಅರಿತು,

"ಸರಿ, ಹೇಗೆ ಹೋಗ್ತೀಯಾ?" ಕೇಳಿದಳು.

"ನನ್ನ ತಮ್ಮನಿಗೆ ಮೆಸೇಜ್ ಮಾಡಿದ್ದೀನಿ. ಗೇಟ್ ಹೊರಗೆ ಕಾಯ್ತಿದ್ದಾನೆ. ನಾನು ಹೊರಡ್ತೀನಿ ಮ್ಯಾಮ್. ನಾಳೆ ಮನೆಲಿರೋದು ಮರಿಬೇಡಿ" ಮತ್ತೊಮ್ಮೆ ನೆನಪಿಸಿ ಹೋದವಳತ್ತಲೇ ನೋಡಿದಳು. ಅವಳ "ಮ್ಯಾಮ್ ಮ್ಯಾಮ್" ಎಂಬ ಸಂಬೋಧನೆ ನೆನಪಾಗಿ ನಗುಮೂಡಿತು ಸಮನ್ವಿತಾಳ ಮೊಗದಲ್ಲಿ. ಒಳ್ಳೆ ಹುಡುಗಿ. ತಂದೆಯ ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವಾಕೆ ಚೈತಾಲಿ. ಆದರೂ ಈ ಅಪರಾತ್ರಿಯಲ್ಲಿ ಹೊರಡಬೇಡ. ಇಲ್ಲೆ ಉಳಿದು ಬೆಳಗ್ಗೆ ಮನೆಗೆ ಹೋಗು ಎನ್ನುವಷ್ಟು ಮಾನವೀಯತೆ ಇಲ್ಲದ ಜನರು.

"ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ" ಎಂಬ ಕಾರ್ಲ್ ಮಾರ್ಕ್ಸ್ ನ ಉಕ್ತಿ ಅವಳಿಗೆ ಪದೇ ಪದೇ ನೆನಪಾಯಿತು. ಉಳ್ಳವರಿಗೆ ತಮ್ಮಲ್ಲಾ ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸಲು ಇಲ್ಲದವರ ಸಹಕಾರ ಬೇಕು. ಆದರೆ ಅವರಿಗೆ ನ್ಯಾಯವಾಗಿ ದಕ್ಕಬೇಕಾದುದನ್ನೂ ತಾವೇ ಕಿತ್ತುಕೊಳ್ಳುವ ಕ್ರೌರ್ಯತೆ ಬಂಡವಾಳಶಾಹಿತ್ವದ ಮೂಲಗುಣ. ಶತಮಾನಗಳೇ ಕಳೆದರೂ ಇದು ಬದಲಾಗದ ಸತ್ಯವೆನಿಸಿತು ಅವಳಿಗೆ. 

ತಲೆ ಕೊಡವಿ ತಂದೆ ನಾಳೆ ತನ್ನನ್ನೇಕೆ ಮನೆಯಲ್ಲೇ ಉಳಿಯಲು ಹೇಳಿರಬಹುದೆಂದು ಯೋಚಿಸತೊಡಗಿದಳು. ಅವಳಿಗೆ ತಿಳಿದಂತೆ ಮಿಸ್ಟರ್ ರಾವ್ ಅವರಿಗೆ ಅವಳ ಬಳಿ ಚರ್ಚಿಸುವಂತಹ ಯಾವುದೇ ವಿಚಾರಗಳಿಲ್ಲ. ಇವಳು ಅವರ ಇಷ್ಟದ ವಿರುದ್ಧ ಧನ್ವಂತರಿಯಲ್ಲಿ ವೃತ್ತಿ ಆರಂಭಿಸಿದ ನಂತರ ಅಪ್ಪ ಮಗಳ ನಡುವೆ ಮಾತುಕತೆ ಇರಲೇ ಇಲ್ಲ ಅನ್ನಬಹುದೇನೋ. ಅಂಥದ್ದರಲ್ಲಿ ತನ್ನನ್ನು ಮನೆಯಲ್ಲೇ ನಿಲ್ಲಲು ಹೇಳುವಂಥಾ ವಿಷಯ ಯಾವುದಿರಬಹುದು? ಅವಳಿಗೇನೂ ಹೊಳೆಯಲಿಲ್ಲ. ಇರಲಿ, ಹೇಗಿದ್ದರೂ ನಾಳೆ ತಿಳಿಯುತ್ತದೆ ಎಂದು ಸುಮ್ಮನಾದಳು.

ಅವಳು ಇಲ್ಲದಿದ್ದರೂ ಮುಂದಿನ ಎರಡು ದಿನಗಳಿಗೆ ರಜೆ ಪಡೆದಿದ್ದಳು. ಮೀರಾ ಮಾತು ಕೊಟ್ಟಂತೆ ಕ್ವಾಟ್ರಸ್ ಒಂದನ್ನು ಅವಳಿಗಾಗಿ ಸಿದ್ಧಗೊಳಿಸಿದ್ದರು. ನಾಳೆ ಮಿಸ್ಟರ್ ಅಂಡ್ ಮಿಸ್ಸೆಸ್ ರಾವ್ ಅವರಿಗೆ ವಿಷಯ ತಿಳಿಸಿ ಇಲ್ಲಿಂದ ಕ್ವಾಟ್ರಸ್ ಗೆ ಶಿಫ್ಟ್ ಆಗಲು ತೀರ್ಮಾನಿಸಿದ್ದಳು. ರೂಮಿಗೆ ಬಂದವಳೇ ತನ್ನ ಬಟ್ಟೆ, ಪುಸ್ತಕಗಳನ್ನೆಲ್ಲಾ ಜೋಡಿಸಿ ಪ್ಯಾಕ್ ಮಾಡಿ ಮಲಗುವಾಗ ತುಂಬಾ ತಡವಾಯಿತು. ಬೆಳಿಗ್ಗೆ ನಿಧಾನವಾಗಿ ಎದ್ದರಾಯಿತು ಅಂದುಕೊಂಡೆ ಮಲಗಿದಳು.

                    *************

ಗಾಢನಿದ್ರೆಯಲ್ಲಿದ್ದವಳನ್ನು ಇಂಟರ್ಕಾಮ್ ನ ಕರ್ಕಶ ಸದ್ದು ಬಡಿದೆಬ್ಬಿಸಿತು. ಗಡಿಯಾರದತ್ತ ನೋಡಿದರೆ ಹನ್ನೊಂದುವರೆ ತೋರಿಸುತ್ತಿತ್ತು. ಫೋನ್ ರಿಸೀವ್ ಮಾಡಿದರೆ ಅತ್ತ ಕಡೆಯಿಂದ ಕೇಳಿದ್ದು ಮಾಲಿನಿಯವರ ದನಿ. "ನಮ್ಮ ರೂಮಿಗೆ ಬಾ. ನಿನ್ಹತ್ರ ಮಾತಾಡೋದಿದೆ" ಅಷ್ಟೇ ಹೇಳಿದ್ದು ಅವಳಮ್ಮ. ಏನೋ ಗಹನವಾದ ವಿಚಾರವೇ ಇರಬೇಕೆಂದುಕೊಂಡಳು.

"ಅರ್ಧಗಂಟೆಯೊಳಗೆ ಬರ್ತೀನಿ" ಇನ್ನೊಂದು ಮಾತಿಗೆ ಅವಕಾಶವಿಲ್ಲದಂತೆ ಫೋನು ಕುಕ್ಕಿದಳು. 

ಸ್ನಾನಮಾಡಿ ತಯಾರಾಗಿ 'ಅತೀ ಅಪರೂಪಕ್ಕೆ ಸಿಗುವ' ವ್ಯಕ್ತಿಗಳೊಂದಿಗೆ ಮಾತಾಡಲು ಅವರ ರೂಮಿನ ಹತ್ತಿರ ಬಂದು ಮೆಲ್ಲಗೆ ಬಾಗಿಲು ತಟ್ಟಿ, 

"ಮೇ ಐ ಕಮ್ ಇನ್?" ಅಪ್ಪಣೆ ಕೇಳಿದಳು. ಅವಳಿಗಾಗಿಯೇ ಕಾದಿದ್ದವರಂತೆ ಮಾಲಿನಿ ಕೈ ಹಿಡಿದು ಒಳಗೆ ಕರೆದೊಯ್ದರು. ರಾವ್ ಅವರು ಅವಳನ್ನು ಕಂಡೊಡನೆ "ಹೌ ಆರ್ ಯು ಮೈ ಚೈಲ್ಡ್" ಎನ್ನುತ್ತಾ ತಮ್ಮ ಆತ್ಮೀಯತೆ ಪ್ರದರ್ಶಿಸಿದರು. ಇಬ್ಬರೂ ಒಟ್ಟಿಗೆ ತನಗಾಗಿ ಕಾದಿರುವುದು ನೋಡಿಯೇ ಏನೋ ಭಯಂಕರ ಪ್ಲಾನ್ ಇರೋ ಹಾಗಿದೆ ಅಂದುಕೊಂಡವಳು, "ನಾನು ಚೆನ್ನಾಗಿದ್ದೀನಿ ಡ್ಯಾಡ್"  ಕೋಣೆಯನ್ನೇ ಅವಲೋಕಿಸುತ್ತಾ ನುಡಿದಳು. ಅತಿಯಾದ ಶ್ರೀಮಂತಿಕೆಯ ಕೆಟ್ಟ ಪ್ರದರ್ಶನವಿತ್ತು ಅಲ್ಲಿ. ಎಲ್ಲಾ ಪರದೇಶಿ ವಸ್ತುಗಳನ್ನು ಗುಡ್ಡೆಹಾಕಿದಂತಿತ್ತು. ಅಂದವಾದ, ಒಪ್ಪ ಓರಣದ ಅಲಂಕಾರಕ್ಕಿಂತ ಸಿರಿವಂತಿಕೆಯ ಪ್ರತಿಷ್ಟೆ ತೋರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆಂದು ಊಹಿಸಿದಳು. ಇದರ ಉಸಾಬರಿ ತನಗೇಕೆ ಎಂದುಕೊಂಡು 

"ಏನು ವಿಷಯ ಡ್ಯಾಡ್? ಇವತ್ತು ಮನೆಲ್ಲಿ ಇರೋಕೆ ಹೇಳಿದ್ರಂತೆ?" ನೇರವಾಗಿ ವಿಷಯಕ್ಕೆ ಬಂದಳು.

"ಇತ್ತೀಚೆಗೆ ಮನೇಲೇ ಇರೋಲ್ಲ ನೀನು ಅಂತಿದ್ಲು ಮಾಲಿನಿ. ಯಾವಾಗ್ಲೂ ಆಸ್ಪತ್ರೆ, ರೋಗಿಗಳು ಅಂತ ಹಗ್ಲೂ ರಾತ್ರಿ ಓಡಾಡ್ತಿದ್ರೆ ನಿನ್ನ ಆರೋಗ್ಯದ ಗತಿಯೇನು ಮೈ ಬೇಬಿ?" ಮಾತಿನಲ್ಲೇ ಅತೀವ ಕಾಳಜಿ ಸುರಿಸಿದಾಗ ಸಮನ್ವಿತಾಳ ಮೈಮೇಲೆ ಮುಳ್ಳುಗಳೆದ್ದಂತಾಯಿತು. ಈ ತೋರಿಕೆಯ, ಸೋಗಿನ ಮಾತುಗಳು ಅಗತ್ಯವೇ? ಇಷ್ಟು ವರ್ಷಗಳಲ್ಲಿ ಎಂದೂ ಇಲ್ಲದ ಅಕ್ಕರೆ, ಪ್ರೀತಿ ಈಗೇಕೆ? ಅವಳು ಜಾಣೆ. ಸರಿಯಾಗಿ ಅರ್ಥೈಸಿಕೊಂಡಳು. ತನ್ನಿಂದ ಏನೋ ಕಾರ್ಯಸಾಧನೆ ಆಗಬೇಕಾಗಿದೆ. ಅದಕ್ಕೆ ತನ್ನ ಮೇಲೆ ಇಂದು ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು.

"ಡ್ಯಾಡ್ ಪ್ಲೀಸ್. ನಿಮ್ಗೆ ಏನಾಗ್ಬೇಕು ನೇರವಾಗಿ ಹೇಳಿ. ಈ ರೀತಿ ಏನೇನೋ ಮಾತಾಡಿ ನಿಮ್ಮ ಟೈಂ ವೇಸ್ಟ್ ಮಾಡ್ಕೋಬೇಡಿ" ಮುಖದ ಮೇಲೆ ಹೊಡೆದಂತೆ ಹೇಳಿದಾಗ ಗಂಡ ಹೆಂಡತಿ ಮುಖ ಮುಖ ನೋಡಿಕೊಂಡರು.

"ಅಯ್ಯೋ, ನಮ್ಗೇನೂ ಆಗ್ಬೇಕಿಲ್ಲ. ಇವತ್ತು ಸಂಜೆ ಒಂದು ಚಿಕ್ಕ ಗೆಟ್ ಟುಗೆದರ್ ಇದೆ. ನೀನೂ ಇರ್ಬೇಕು. ಹಾಗಾಗಿ ಮನೆಯಲ್ಲೇ ಇರೋಕೆ ಹೇಳಿದ್ದು" ಮಾಲಿನಿ ಹೇಳಿದಾಗ ಹುಬ್ಬೇರಿಸಿದಳು. 

"ನಿಮ್ಮ ಗೆಟ್ ಟುಗೆದರ್ ಪಾರ್ಟಿಗಳು ವಾರದಲ್ಲಿ ಆರು ದಿನ ಇರುತ್ತೆ. ಅದಕ್ಕೆಲ್ಲ ಲೀವ್ ತಗೋತಾ ಹೋದ್ರೆ ನಾನು ಕೆಲ್ಸ ಬಿಟ್ಟು ಪರ್ಮನೆಂಟಾಗಿ ಮನೇಲೇ ಇರ್ಬೇಕಾಗುತ್ತೆ. ಯಾವತ್ತೂ ಇಲ್ಲದ್ದು ಇವತ್ತೇನು ವಿಶೇಷ? ನನ್ಗೆ ಈ ಥರ ಪಾರ್ಟಿಸ್ ಇಷ್ಟ ಆಗೋಲ್ಲ ಅಂತ ನಿಮ್ಗೂ ಗೊತ್ತು. ನೀವು ಏನಾದ್ರೂ ಮಾಡ್ಕೋಳಿ. ಬಟ್ ಡೋಂಟ್ ಫೋರ್ಸ್ ಮೀ." ಖಡಾಖಂಡಿತವಾಗಿ ಹೇಳಿದಳು.

ಆದರೆ ಇವತ್ತಿನ ಸಂತೋಷಕೂಟದಲ್ಲಿ ಅವಳ ಇರುವಿಕೆ ಅವರಿಗೆ ಅತೀ ಮುಖ್ಯವಾಗಿತ್ತು. ಹಾಗಾಗಿ ಶತಾಯಗತಾಯ ಅವಳನ್ನು ಒಪ್ಪಿಸಲೇಬೇಕಾಗಿತ್ತು. ಹಾಗಾಗಿ ಇನ್ನಷ್ಟು ನಯವಾಗಿ,

"ನಿನಗೆ ಪಾರ್ಟಿಗಳು ಇಷ್ಟವಿಲ್ಲ ಅಂತ ನಮಗೂ ಗೊತ್ತು. ನಾವು ಯಾವತ್ತಾದ್ರೂ ನಿನ್ನ ಒತ್ತಾಯ ಮಾಡಿದ್ದೀವಾ? ಇಲ್ಲ ತಾನೇ? ಆದ್ರೆ ಇವತ್ತು ಸ್ಪೆಷಲ್ ಗೆಸ್ಟ್ ಗಳು ಬರ್ತಿರೋದು. ಸೋ ನೀನು ಇರ್ಲೇಬೇಕಮ್ಮ" ಅವಳಪ್ಪ ಅನುನಯಿಸಿದಾಗ ಅವರ ಕಿರಿಕಿರಿ ತಾಳಲಾರದೆ ಒಪ್ಪಿದರೂ "ನನಗೆ ಅಲ್ಲಿರೋಕೆ ಇಷ್ಟ ಆಗ್ಲಿಲ್ಲ ಅಂದ್ರೆ ನಾನು ನಿಲ್ಲೋದಿಲ್ಲ" ಷರತ್ತು ಹಾಕಿದಳು. ಅವಳು ಒಪ್ಪಿದ್ದೇ ಸುಕೃತವೆಂಬಂತೆ ಅವರು ಅವಳು ಹೇಳಿದ್ದಕ್ಕೆ ತಲೆಯಾಡಿಸಿ "ಥ್ಯಾಂಕ್ಯೂ ಬೇಬಿ" ಅಂದರು.

"ಡ್ಯಾಡ್ ಮಾಮ್, ನಿಮ್ಮ ಹತ್ರ ಇನ್ನೊಂದು ವಿಷಯ ಹೇಳ್ಬೇಕು" ತಾನು ಕ್ವಾಟ್ರಸ್ ಗೆ ಶಿಫ್ಟ್ ಆಗುವ ಬಗ್ಗೆ ಹೇಳಲು ಹೊರಟಾಗ, "ಸಾರಿ ಬೇಬಿ, ಸಂಜೆ ಪಾರ್ಟಿ ಪ್ರಿಪರೇಷನ್ಸ್ ಎಲ್ಲಾ ಆಗ್ಬೇಕು. ತುಂಬಾ ಕೆಲ್ಸ ಇದೆ. ನಾಳೆ ಫುಲ್ ಡೇ ನಿನಗೆ. ಆಗ ಮಾತಾಡೋಣ. ಒಕೆ?" ಅವರು ಎದ್ದಾಗ, ಏಳುವುದು ಅವಳಿಗೆ ಅನಿವಾರ್ಯವಾಯಿತು. "ಕೆಲಸ ಆಗೋವರ್ಗೂ ಒಂಥರಾ, ಆಮೇಲೆ ಇನ್ನೊಂಥರಾ. ನಾಳೆ ನನ್ನ ನೆನಪೇ ಇರೋಲ್ವೇನೋ" ತನ್ನಲ್ಲೇ ಗೊಣಗಿಕೊಳ್ಳುತ್ತಾ, ಹೊರಡುವ ಮುನ್ನ ಹೇಳಿದರಾಯ್ತು ಎಂದುಕೊಂಡು ಸುಮ್ಮನಾದಳು.

ಸಂಜೆಯ ಪಾರ್ಟಿ ತಯಾರಿಗಳು ಭರದಿಂದ ಸಾಗಿದ್ದವು. ಇವತ್ತಿನ ಸಂಜೆಗೆ ತನ್ನ ಇರುವಿಕೆಗೆ ಏಕಿಷ್ಟು ಒತ್ತಾಯ ಎಂಬ ಪ್ರಶ್ನೆ ಪದೇ ಪದೇ ಮನದಲ್ಲಿ ಸುಳಿಯಿತಾದರೂ ಆ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ.ರೂಪುರೇಷೆಗಳ ಅರಿವಿಲ್ಲದಿದ್ದರೂ ಯಾವುದೋ ವಿಶೇಷ ಯೋಜನೆಯೊಂದು ತನ್ನ ತಂದೆಯ ತಲೆಯಲ್ಲಿದೆ ಎಂದವಳಿಗೆ ಸ್ಪಷ್ಟವಾಗಿತ್ತು. ಆದರೆ ಆ ಯೋಜನೆ ಅವಳ ಬದುಕಿನಲ್ಲಿ ಅತೀ ಪ್ರಮುಖವಾದ ತಿರುವನ್ನು ತರಲಿತ್ತು.

                 ******************

ಮಧ್ಯಾಹ್ನ ಊಟವಾಗಿ ಸತ್ಯನಾರಾಯಣರು ಗಡದ್ದಾದ ನಿದ್ರೆಯಲ್ಲಿದ್ದರು. ಮಂಗಳಮ್ಮ ಸೋಫಾದಲ್ಲಿ ಕೂತು ಪತ್ರಿಕೆ ಮಗುಚುತ್ತಿದ್ದರು. ಸ್ವಲ್ಪ ಮಲಗಿ ಎಂದು ನವ್ಯಾ ನೂರು ಬಾರಿ ಹೇಳಿದರೂ ಅವರು ಕೇಳರು. ಮಧ್ಯಾಹ್ನದ ನಿದ್ರೆ ಅವರಿಗಾಗದು. 

ಬಾಗಿಲು ಬಡಿದ ಸದ್ದಿಗೆ ಅವರೇ ಕದ ತೆರೆದರು. ಎದುರಿಗೆ ಕಿಶೋರ್ ನಿಂತಿದ್ದ. "ಏನೋ ಮಧ್ಯಾಹ್ನನೇ ಬಂದು ಬಿಟ್ಟಿದ್ದಿ ಇವತ್ತು?" ಅಚ್ಚರಿಯಿಂದ ಕೇಳಿದರು. 

"ಹೌದಮ್ಮ. ಕೆಲ್ಸ ಜಾಸ್ತಿ ಇರ್ಲಿಲ್ಲ. ಸ್ವಲ್ಪ ತಲೆ ನೋವಿತ್ತು. ಅದ್ಕೇ ಅರ್ಧ ದಿನ ರಜಾ ತಗೊಂಡು ಬಂದೆ" ಹೇಳಿದವನು, "ನವ್ಯಾ, ಒಂದು ಕಪ್ ಕಾಫಿ ಕೊಡ್ತೀಯಾ?" ಅಲ್ಲಿಂದಲೇ ಕೂಗಿದ. ಅತ್ತಲಿಂದ ಏನೂ ಉತ್ತರ ಬಾರದೇ ಅಡಿಗೆಮನೆಗೆ ಹೊರಟವನಿಗೆ "ನೀನು ಕೂತ್ಕೋ, ನಾನು ನೋಡ್ತೀನಿ" ಎಂದು ತಾವೇ ಹೊರಟರು ಮಂಗಳಮ್ಮ.

ಅಡಿಗೆ ಮನೆಯಲ್ಲಿ ಎಲ್ಲಾ ಸ್ವಚ್ಚಮಾಡಿ, ಸಾರನ್ನು ಬಿಸಿಮಾಡಲು ಇಟ್ಟಿದ್ದ ನವ್ಯಾ ಅಲ್ಲೇ ಒರಗಿ ಯೋಚಿಸುತ್ತಿದ್ದಳು. ಅವಳಿಗೆ ಕಿಶೋರ್ ಬಂದದ್ದೂ ಗೊತ್ತಾಗಿರಲಿಲ್ಲ. ಗ್ಯಾಸ್ ಆಫ್ ಮಾಡಿದ ಮಂಗಳಮ್ಮ ನವ್ಯಾಳನ್ನು ಅಲುಗಾಡಿಸಿ, "ಏನಾಯ್ತೇ ನವ್ಯಾ, ಏನು ಯೋಚಿಸ್ತಿದ್ದೀಯ?" ಕೇಳಿದಾಗ ವಾಸ್ತವಕ್ಕೆ ಬಂದವಳು ಎದುರು ನಿಂತ ಅತ್ತೆಯನ್ನು ನೋಡಿ, "ಏನಾಯ್ತಮ್ಮ" ಕೇಳಿದಳು.

"ನವ್ಯಾ, ನೀನು ಇತ್ತೀಚೆಗೆ ತುಂಬಾ ಯೋಚಿಸ್ತಿರ್ತೀಯ. ಯಾವಾಗ್ಲೂ ಏನೋ ಚಿಂತೆಲಿರ್ತೀಯ. ಯಾಕೆ ಮಗೂ? ನಿನ್ನ ಅಪ್ಪ ಅಮ್ಮ ನೆನಪಾದ್ರ? ಏನಾದ್ರೂ ಸಮಸ್ಯೆ ಇದ್ರೆ ನಮ್ಮ ಹತ್ರ ಹೇಳ್ಕೋಬಾರ್ದ ತಾಯೀ" ಕಕ್ಕುಲತೆಯಿಂದ ವಿಚಾರಿಸಿದಾಗ,

"ಅಯ್ಯೋ, ಹಾಗೇನೂ ಇಲ್ಲಮ್ಮ. ನೀವೆಲ್ಲಾ ಇರೋವಾಗ ನನಗೆಂಥಾ ಯೋಚನೆ?" ಎಂದಳು ನವ್ಯಾ. 

ಅಷ್ಟರಲ್ಲಿ ಅಡುಗೆಮನೆಗೆ ಬಂದಿದ್ದ ಕಿಶೋರ್ ಕೂಡಾ ತಾಯಿಯನ್ನು ಅನುಮೋದಿಸುತ್ತಾ, "ಹೌದು ನವ್ಯಾ, ಅಮ್ಮ ಹೇಳಿದ್ದು ಅಕ್ಷರಶಃ ಸತ್ಯ" ಎಂದಾಗ,

"ನೀವ್ಯಾವಾಗ ಬಂದಿದ್ದು?" ಅಚ್ಚರಿಯಿಂದ ಕೇಳಿದಳು.

"ನೋಡಮ್ಮಾ, ಇವಳಿಗೆ ನಾನು ಬಂದಿದ್ದೇ ಗೊತ್ತಿಲ್ಲ. ಅದಕ್ಕೆ ಹೇಳಿದ್ದು ಕಣೇ ನೀನು ಫಿಸಿಕಲೀ ಪ್ರೆಸೆಂಟ್ ಮೆಂಟಲೀ ಆಬ್ಸೆಂಟ್ ಆಗಿದ್ಯಾ ಅಂತ" ಅಣಕಿಸಿದ.

"ಸಾಕು ಸುಮ್ನಿರೋ, ಅವಳನ್ಯಾಕೆ ಆಡ್ಕೋತಿಯಾ. ಅಡ್ಗೆ ಮನೆಲಿದ್ಲಲ್ಲ ಅವಳಿಗೆ ಕೇಳಿರ್ಲಿಕ್ಕಲ್ಲ ನೀನು ಕೂಗಿದ್ದು" ಅವನಿಗೆ ಹೇಳಿದವರು, "ಸರಿ ನೀವಿಬ್ರೂ ಕಾಫಿ ಕುಡಿತಾ ಮಾತಾಡ್ತಿರಿ. ನಾನೊಂಚೂರು ವನಜಮ್ಮನ ಮನೆಗೆ ಹೋಗಿ ಬರ್ತೀನಿ" ಮಂಗಳಮ್ಮ ಹೊರಟಾಗ ನವ್ಯಾ "ಅಮ್ಮ ತುಂಬಾ ಬಿಸಿಲಿದೆ ಸ್ವಲ್ಪ ತಡೆದು ಹೋಗಿ. ನಿಮ್ಗೂ ಕಾಫಿ ಮಾಡ್ತೀನಿ" ಎಂದಳು.

"ಇಲ್ಲಮ್ಮ. ಅವರು ಮಾವಿನ ಮಿಡಿ ಉಪ್ಪಿಗೆ ಹಾಕಿದ್ದಾರಂತೆ. ಒಂಚೂರು ಮಸಾಲೆ ರೆಡಿಮಾಡಿ ಉಪ್ಪಿನಕಾಯಿ ಕಲೆಸಿಕೊಡಿ. ನೀವು ಮಾಡೋ ಉಪ್ಪಿನಕಾಯಿ ತುಂಬಾ ರುಚಿ ಅಂದ್ರು. ಅದ್ಕೆ ಹೋಗಿ ಮಾಡ್ಕೊಟ್ಟು ಬರ್ತೀನಿ. ಕಾಫಿ ಅಲ್ಲೇ ಆಗುತ್ತೆ" ಹೊರಟೇ ಬಿಟ್ಟರು ಮಂಗಳಮ್ಮ.

ಕಿಶೋರ್ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಹಾಲಿಗೆ ಬರುವ ವೇಳೆಗೆ ಕಾಫಿ ತಂದು ಕೊಟ್ಟ ನವ್ಯಾ ತಾನೊಂದು ಕಪ್ ಹಿಡಿದು ಎದುರು ಕೂತಳು.

"ಮತ್ತೆ ಅದೇ ವಿಷ್ಯ ಯೋಚಿಸ್ತಿದ್ದೀಯಾ ನವ್ಯಾ. ಏನಾದ್ರೂ ಪರಿಹಾರ ಹುಡ್ಕೋಣ ಇರು" ಎಂದ.

ಅವಳು ನಿಟ್ಟುಸಿರು ಬಿಟ್ಟು, "ಅದೂ ಯೋಚನೆ ಇದೆ. ಆದ್ರೆ ನಾನೀವಾಗ ಸಮಾ ಬಗ್ಗೆ ಯೋಚಿಸ್ತಾ ಇದ್ದೆ" ಎಂದಳು.

"ಏನು ಸಮನ್ವಿತಾ ಬಗ್ಗೆನಾ? ಯಾಕೆ ಅವಳಿಗೇನಾಯ್ತು?" ಕೇಳಿದ ಗಾಬರಿಯಲ್ಲಿ.

"ಗಾಬರಿ ಆಗೋಂಥದ್ದು ಏನೂ ಆಗಿಲ್ಲ. ಬೆಳಗ್ಗೆ ಫೋನ್ ಮಾಡಿದ್ಲು. ಅವ್ಳು ಹಾಸ್ಪಿಟಲ್ ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದಾಳಂತೆ" 

"ಓ ಅದಾ. ನನ್ಗೂ ಹೇಳಿದ್ಲೂ. ಒಂದು ವಾರದ ಹಿಂದೆನೇ ಕೇಳಿದ್ಲಂತೆ ಕ್ವಾಟ್ರಸ್. ಮೊನ್ನೆ ಕೊಟ್ರು ಅಂದ್ಲು. ಶಿಫ್ಟಿಂಗಿಗೆ ಬರ್ಲಾ ಅಂತ ಕೇಳ್ದೆ. ಬೇಡ ಅಷ್ಟೇನು ಲಗೇಜ್ ಇಲ್ಲ. ಅಲ್ಲಿಗೆ ಹೋದ್ಮೇಲೆ ಶಾಪಿಂಗ್ ಮಾಡೋಕೆ ನೀವಿಬ್ಬರೂ ಬೇಕು ಅಂದ್ಲು"

"ಕಿಶೋರ್ ನಾನು ಅವಳನ್ನ ಮೊದಲು ಭೇಟಿ ಮಾಡಿದಲ್ಲಿಂದ ನೋಡಿದ್ದೀನಿ. ಅವಳ್ಯಾವತ್ತೂ ಮನೆ,ಅಪ್ಪ, ಅಮ್ಮ ಯಾವುದ್ರ ಬಗ್ಗೆಯೂ ಮಾತಾಡೋದೆ ಇಲ್ಲ. ಕೇಳಿದ್ರೆ ವಿಷ್ಯ ಬದ್ಲಾಯಿಸ್ತಾಳೆ. ಯಾಕೆ? ಅವಳಪ್ಪ ತುಂಬಾ ಶ್ರೀಮಂತರು ಅಂತ ಆಸ್ಪತ್ರೆಯಲ್ಲಿ ಎಲ್ಲಾ ಮಾತಾಡೋದು ಕೇಳಿದ್ದೀನಿ. ಮತ್ಯಾಕೆ ಅವಳು ಅಪ್ಪ ಅಮ್ಮ ಮನೆ ಎಲ್ಲಾ ಬಿಟ್ಟು ಕ್ವಾಟ್ರಸಲ್ಲಿ ಇರ್ಬೇಕು?" ನವ್ಯಾ ಕೇಳಿದಾಗ ಕಿಶೋರ್ ಮುಖದಲ್ಲಿ ಅವ್ಯಕ್ತ ಭಾವವೊಂದು ಹಾದು ಹೋಯಿತು.

"ಹ್ಮಂ ನವ್ಯಾ. ಅವಳ ಅಪ್ಪ ದೇಶದ ಅತೀ ಸಿರಿವಂತರಲ್ಲೊಬ್ಬರು. ಹಲವು ತಲೆಮಾರುಗಳು ಕೂತು ತಿಂದರೂ ಕರಗದಷ್ಟು ಸಂಪತ್ತಿದೆ. ಆದರೇನು ಬಂತು. ಗುಣದಲ್ಲಿ ಆತ ಕಡುಬಡವ. ಹಣದ ಮುಂದೆ ಬೇರೆಲ್ಲವೂ ಗೌಣ ಆ ಮನುಷ್ಯನಿಗೆ. ಹೆಂಡತಿಯೂ ಅವನಂತೆಯೇ. ದುಡ್ಡು, ಪಾರ್ಟಿ, ಮೋಜು, ಮಸ್ತಿ ಇದೇ ಅವರ ಜೀವನ. ಇಂಥಾ ದಂಪತಿಗಳಿಗೆ ಸಮನ್ವಿತಾಳಂಥಾ ಮಗಳು..... ಅವಳ ಗುಣ ಸ್ವಭಾವಗಳು ಇವರಿಗೆ ತದ್ವಿರುದ್ಧ. ಅವಳನ್ನು ನೋಡಿದವರ್ಯಾರೂ ಅವಳು ದಿ ಗ್ರೇಟ್ ಸತ್ಯಂ ರಾವ್ ಅವರ ಮಗಳು ಅಂತ ಹೇಳೋಕಾಗಲ್ಲ. ಅವಳು ಓದಿದ್ದೆಲ್ಲಾ ವಿದೇಶದಲ್ಲೇ. ಒಂದು ಸಾರಿ ವಿದೇಶಕ್ಕೆ ಹೋಗಿ ಬಂದ್ರೆ ಜೀವನ ಪರ್ಯಂತ ಅಲ್ಲಿದೇ ಗುಣಗಾನ ಮಾಡೋ ಜನರ ಮಧ್ಯೆ ಇವಳು ಕ್ಷಣಕ್ಕೂ ಅದನ್ನು ನೆನಪಿಸಿಕೊಳ್ಳೋಲ್ಲ. ಅಪ್ಪ ಅಮ್ಮನ ಜೀವನಶೈಲಿಯ ಬಗ್ಗೆ ಅವಳಿಗೆ ತಿರಸ್ಕಾರ. ಹೊರಗೆ ಎಷ್ಟು ಖುಷಿಯಿಂದ ಇರೋ ಹಾಗೆ ತೋರಿಸ್ಕೊಂಡರೂ, ತಾಯ್ತಂದೆಯರು ತನ್ನನ್ನು ಮಗಳ ತರಾ ನೋಡ್ಲೇ ಇಲ್ಲ, ಹೆತ್ತವರ ಅಕ್ಕರೆ, ಆದರ, ಪ್ರೀತಿ, ಮಮತೆ ಯಾವುದೂ ತನಗೆ ಸಿಕ್ಕಲಿಲ್ಲ ಅನ್ನೋ ವಿಷಾದ ಅವಳ ಆಂತರ್ಯದಲ್ಲಿ ಬಹಳ ಗಾಢವಾಗಿದೆ. ಅದು ಅವಳ ಬಾಲ್ಯದಿಂದಲೇ ಬೇರೂರಿರುವ ಭಾವನೆ. ಅವಳು ತುಂಬಾ ಸಣ್ಣವಳಿದ್ದಾಗಲೇ ವಿದೇಶದಲ್ಲಿ ಬೋರ್ಡಿಂಗ್ ಸ್ಕೂಲಿಗೆ ಸೇರಿದ್ದಂತೆ. ಮೆಡಿಸಿನ್ ಕೋರ್ಸ್ ಮುಗಿದ ಮೇಲೇ ಇಲ್ಲಿಗೆ ವಾಪಾಸಾಗಿದ್ದಂತೆ ಅವಳು. ಹೆತ್ತವರು ಅನ್ನಿಸ್ಕೊಂಡ ಜನ ತನ್ನ ಬಾಲ್ಯನ ಕಿತ್ಕೊಂಡಿದ್ದಾರೆ. ಎಲ್ಲರೂ ಇದ್ದೂ ಯಾವುದೋ ದೇಶದಲ್ಲಿ ಗೊತ್ತಿಲ್ಲದ ಜನರ ನಡುವೆ ಅನಾಥೆ ತರ ಬೆಳೆಯೋಹಾಗೆ ಮಾಡಿದ್ದಾರೆ ಅನ್ನೋ ಭಾವನೆ ಅವಳಲ್ಲಿ ಹಾಸುಹೊಕ್ಕಾಗಿದೆ." ದೀರ್ಘವಾಗಿ ಹೇಳಿದ.

ವಿಷಾದದ ನಗುವೊಂದು ನವ್ಯಾಳ ತುಟಿಗಳಲ್ಲಿ ಕುಳಿತಿತು. "ನಾನು ಹುಟ್ಟಿದ್ದು ತುಂಬಾ ಬಡತನದಲ್ಲಿ ಕಿಶೋರ್. ಆಯಿ ಬಾಬಾ ದಿನ ಮಜೂರಿ ಮಾಡುತ್ತಿದ್ದದ್ದು. ಆ ದಿನ ಕೆಲಸ ಸಿಕ್ಕಿದರೆ ಒಪ್ಪತ್ತೂಟ ಇಲ್ಲವಾದರೇ ಅದೂ ಇಲ್ಲ. ನಮ್ಮದೊಂದು ಸಣ್ಣ ಗುಡಿಸಲಿತ್ತು. ನಾಲ್ಕಾರು ಪಾತ್ರೆಗಳು ಇಷ್ಟೆ ನಮ್ಮಾಸ್ತಿ. ಆದರೂ ಇಂದಿಗೂ ಆ ದಿನಗಳು ನನ್ನ ನೆನಪಲ್ಲಿ ಹಚ್ಚಹಸಿರು. ಆ ನೆನಪುಗಳೇ ಆಹ್ಲಾದಕಾರಿ. ಹಣವಿರದಿದ್ದರೂ ಪ್ರೀತಿಗೆ ಕೊರತೆಯಿರಲಿಲ್ಲ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ಹಿಂದಿಯಲ್ಲೊಂದು ಪದ್ಯವಿತ್ತು. ನೀವೂ ಓದಿರಬಹುದು. ಸುಭದ್ರ ಕುಮಾರಿ ಚೌಹಾಣ್ ಅವರದ್ದು.

ಬಾರ್ ಬಾರ್ ಆತೀ ಹೈ ಮುಜ಼್ ಕೋ ಮಧುರ್ ಯಾದ್ ಬಚ್ಪನ್ ತೇರೀ

ಗಯಾ ಲೇ ಗಯಾ ತೂ ಜೀವನ್ ಕೀ ಸಬ್ ಸೇ ಮಸ್ತ್ ಖುಷಿ ಮೇರಿ

ಊಚ್- ನೀಚ್ ಕಾ ಜ್ಞಾನ್ ನಹೀ ಥಾ ಚುವಾಚೂತ್ ಕಿಸನೇ ಜಾನಿ?

ಬನೀ ಹುಯೀ ಥೀ ವಹಾಂ ಜೋಪಡಿ ಔರ್ ಚಿಥಡೋಂ ಮೆ ರಾನಿ 

ಹೀಗೆ ಮುಂದುವರಿಯುತ್ತೆ ಪದ್ಯ. ಅದನ್ನು ಮೊದಲು ಓದಿದಾಗಿನಿಂದ ಇಂದಿನವರೆಗೂ ಅದು ನನಗಂತಲೇ ಬರೆದಿದ್ದು ಅನ್ಸುತ್ತೆ. ನನ್ನ ಬಾಲ್ಯ ಹಾಗೇ ಇದ್ದಿದ್ದು ಕಿಶೋರ್. ಏನಿಲ್ಲದಿದ್ರೂ ನೆನಪಿಸಿಕೊಳ್ಳೋಕೆ ಅಂಥ ಒಂದು ಸುಂದರ ಬಾಲ್ಯ, ಮಾ ಬಾಬಾನ ಪ್ರೀತಿ ಎಲ್ಲಾ ಇದೆ. ಎಷ್ಟೇ ಬಡವರಾದರೂ ಪ್ರತೀ ತಾಯ್ತಂದೆ ತಮ್ಮ ಮಕ್ಕಳಿಗೊಂದು ಸುಂದರ ಬಾಲ್ಯದ ಅನುಭೂತಿ ನೀಡಲು ಹಗಲಿರುಳು ಶ್ರಮಿಸುತ್ತಾರೆ. ಅಂಥದೊಂದು ಬೆಚ್ಚನೆ ನೆನಪು ಪ್ರತೀ ಮಗುವಿನ ಹಕ್ಕು ಕೂಡಾ. 

ಆದರೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಮನ್ವಿತಾಳಂಥ ಹುಡುಗಿಯ ಬದುಕಿನಲ್ಲಿ ಇಂಥಾ ನೋವಿದೆ ಅಂತ ನನಗೆ ತಿಳಿದಿರಲಿಲ್ಲ. ಅವಳ್ಯಾವತ್ತೂ ಅದನ್ನ ತೋರಿಸಿಕೊಳ್ಳಲಿಲ್ಲ ಅನ್ಸುತ್ತೆ.ಅವಳ ಭಾವನೆಗಳಲ್ಲಿ, ಆಸೆಯಲ್ಲಿ ಏನೂ ತಪ್ಪಿಲ್ಲ. ಅಂಥಾ ಹುಡುಗಿಗೆ ಅಪ್ಪ ಅಮ್ಮ ಅಂತ ಹೇಳ್ಕೊಳ್ಳೋದೇ ಕೂಡಾ ಹೆಮ್ಮೆಯ ವಿಚಾರ. ಎಷ್ಟು ಪುಣ್ಯ ಮಾಡಿದ್ರೋ ಅಂಥಾ ಮಗಳನ್ನು ಪಡೆಯೋಕೆ. ಅಂಥಾ ಮಗಳ ಮನಸ್ಸು ನೋಯ್ಸೋರು ಎಂಥವರಿರಬಹುದು? ಛೇ!" ಅವಳಿಗೆ ನಿಜಕ್ಕೂ ಅತೀವ ವೇದನೆಯೆನಿಸಿತ್ತು.

ಅರೆ ಘಳಿಗೆ ಸುಮ್ಮನಿದ್ದವನು ನೆನಪಿಸಿಕೊಂಡವನಂತೆ, "ಅದಕ್ಕೇ ಅವಳು ಆದಷ್ಟು ಮನೆಯಿಂದ ಹೊರಗಿರೋದು. ಎಲ್ಲರ ಜೊತೆನೂ ಮಾತಾಡಿದ್ರೂ ಅವಳಿಗೆ ಆತ್ಮೀಯರು ಅಂತ ಇರೋದು ನಾನು, ನೀನು, ನಮ್ಮನೆಯವರು, ಡಾ.ಮೀರಾ ಮಾತ್ರ.... ನಮ್ಮನೆಗೆ ಬರೋದಂದ್ರೆ ಅವಳಿಗೆ ತುಂಬಾ ಇಷ್ಟ. ನಮ್ಮ ಮಧ್ಯೆ ತಾನು ಕಳ್ಕೊಂಡಿರೋ ವಾತ್ಸಲ್ಯನ ಹುಡ್ಕೊಳ್ಳೋಕೆ ಪ್ರಯತ್ನಿಸ್ತಾಳೆ. ಅವಳ ತಾಯ್ತಂದೆಯರನ್ನು ಕರೀತಾಳೋ ಇಲ್ವೋ, ಆದ್ರೆ ನನ್ನ ಅಪ್ಪ ಅಮ್ಮನ್ನ ಅವಳೂ ಬಾಯ್ತುಂಬಾ ಅಪ್ಪಾ ಅಮ್ಮಾ ಅಂತಾನೇ ಕರ್ಯೋದು." ಹೇಳಿದ.

"ಮತ್ತೆ ನನ್ನಪ್ಪ- ಅಮ್ಮ ಅಂದ್ರೆ ಸುಮ್ನೆನಾ?" ನವ್ಯಾ ನಕ್ಕು ಕೇಳಿದಾಗ, "ಆದ್ರೂ ಸೊಸೆ ಬಂದ್ಮೇಲೆ ಮಗನ ವ್ಯಾಲ್ಯೂ ಸ್ವಲ್ಪ ಕಮ್ಮಿ ಆಗಿದೆ" ಅವಳ ಕೆನ್ನೆ ಹಿಂಡಿ ಹೇಳಿದ. 

ಇಬ್ಬರ ಮನಸ್ಸೂ ಸಮನ್ವಿತಾಳ ಮುಂದಿನ ಬದುಕಾದರೂ ಹಸನಾಗಿರಲೀ ಅಂತ ಹಾರೈಸಿದವು.

          ***** ಮುಂದುವರೆಯುತ್ತದೆ *****