ಸೋಮವಾರ, ಜೂನ್ 29, 2020

ಅನೂಹ್ಯ 36

ಘಳಿಗೆಗೊಮ್ಮೆ ಬಾಗಿಲಿನತ್ತ ನೋಟ ಹರಿಸುತ್ತಿದ್ದ ನವ್ಯಾಳ ಮನ ಪ್ರಕ್ಷುಬ್ಧಗೊಂಡಿತ್ತು. ಹೇಳಲಾರದ ಭಾವನೆಗಳ ಮೇಲಾಟ ಮನಸ್ಸನ್ನು ಘಾಸಿಗೊಳಿಸಿತ್ತು. ಸತ್ಯನಾರಾಯಣ ದಂಪತಿಗಳು ಯಾತ್ರೆಗೆಂದು ಮನೆ ಬಿಟ್ಟ ದಿನದಿಂದ ಆರಂಭವಾಗಿದ್ದ ದುಃಸ್ವಪ್ನಗಳ ನಿರಂತರ ಹಾವಳಿ ಅವಳನ್ನು ಕಂಗೆಡಿಸಿತ್ತು. ಅವಳು ತನ್ನ ಸ್ಥೈರ್ಯವನ್ನು ಕಳೆದುಕೊಂಡಿದ್ದಳು. ಮೇಲ್ನೋಟಕ್ಕೆ ಎಲ್ಲರೊಂದಿಗೆ ನಗುತ್ತಾ ಮಾತನಾಡಿಕೊಂಡಿದ್ದರೂ ಮನಸ್ಸು ಮುದುರಿ ಮುದ್ದೆಯಾಗಿತ್ತು. ಜೀವನ ಪ್ರೀತಿ ಕ್ಷೀಣಿಸತೊಡಗಿತ್ತು.

ತಿಂಡಿ ತಯಾರಿಸುತ್ತಲೇ ಗಡಿಯಾರದತ್ತ ನೋಡಿದಳು. ಒಂಬತ್ತು ನಲ್ವತ್ತು ತೋರಿಸುತ್ತಿತ್ತು. ಸತ್ಯನಾರಾಯಣ, ಮಂಗಳಾರನ್ನು ಕರೆತರಲು ಹೋಗಿದ್ದ ಕಾರ್ತಿಕ್. ಅವರ ನಿರೀಕ್ಷೆಯಲ್ಲೇ ಪದೇ ಪದೇ ಬಾಗಿಲಿನತ್ತ ಹೊರಳುತ್ತಿದ್ದವು ಅವಳ ಕಂಗಳು. ಇಂದು ಮಧ್ಯಾಹ್ನ ಸಮನ್ವಿತಾಳನ್ನು ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು ಮೀರಾ. ಅವಳು ಬರುವುದರೊಳಗೆ ಮನೆಯನ್ನೊಮ್ಮೆ ಓರಣಗೊಳಿಸಬೇಕಿತ್ತು. ಎರಡು ದಿನದಿಂದ‌ ಕಾರ್ತಿಕ್ ಒಬ್ಬನೇ ಮನೆಯಲ್ಲಿ ಇದ್ದುದರಿಂದ ಮನೆಯೆಲ್ಲಾ ಕಿತ್ತು ಹರಡಿ ರಾಡಿ.

ಹಾಗಾಗಿಯೇ ನಸುಕಿನ ಜಾವವೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದಳು. ಕಿಶೋರ್ ಡಿಸ್ಚಾರ್ಜ್ ಪ್ರೊಸೀಜರ್ ಮುಗಿಸಿ ಸಮಾಳನ್ನು ಕರೆತರಲು ಅಲ್ಲೇ ಉಳಿದಿದ್ದ. ಮನೆಯ ಅವತಾರ ಸರಿಮಾಡಲು ಮೂರು ತಾಸು ಹಿಡಿದಿತ್ತು. ಆ ನಂತರ ಸ್ನಾನ ಮುಗಿಸಿ ಬಂದವಳು ಕಾರ್ತಿಕ್ ನನ್ನು ರೈಲ್ವೇ ಸ್ಟೇಷನ್ ಗೆ ಕಳುಹಿಸಿ, ಗಡಿಬಿಡಿಯಲ್ಲಿ ಉಪ್ಪಿಟ್ಟು ತಯಾರಿಸತೊಡಗಿದ್ದಳು. ಆದರೂ ಒಡಲೊಳಗೆಲ್ಲಾ ತಳಮಳ. ಮಂಗಳಾರ ಮುಖ ನೋಡುವವರೆಗೂ ಸಮಾಧಾನವಿಲ್ಲ ಅವಳಿಗೆ.

ಉಪ್ಪಿಟ್ಟು ತಯಾರಾದರೂ ಅವರು ಬರುವ ಲಕ್ಷಣಗಳು ಕಾಣದಾದಾಗ, ರೈಲು ತಡವಾಗಿರಬಹುದೆಂದುಕೊಂಡು ಹಾಲಿನ ಎದುರಿನ ಕೋಣೆಯನ್ನು ಸಮನ್ವಿತಾಳಿಗಾಗಿ ಸಿದ್ಧಪಡಿಸತೊಡಗಿದಳು. ಇವಳ ಕೆಲಸ ಮುಗಿಯುವುದಕ್ಕೂ ಮನೆ ಮುಂದೆ ಆಟೋ ನಿಲ್ಲುವುದಕ್ಕೂ ಸರಿಯಾಯಿತು.

ಓಡಿ ಬಾಗಿಲಿಗೆ ಬಂದಳಾದರೂ ಅಲ್ಲಿಂದ ಮುನ್ನಡೆಯಲಾರೆವೆಂದು ಕಾಲುಗಳು ಮುಷ್ಕರ ಹೂಡಿದವು. 'ಕನಸಿನಲ್ಲಿ ನಡೆದಂತೆ ಅಮ್ಮ ನನ್ನ ಬೈದು ಹೊರಗಟ್ಟಿದರೇ?' ಅದನ್ನು ಎಣಿಸಿಯೇ ಅವಳ ನಾಲಿಗೆಯ ಪಸೆ ಆರಿತು. ಆಸರೆಗೆ ಬಾಗಿಲಿಗೆ ಒರಗಿ ನಿಂತಳು. ಆಟೋದಿಂದ ಇಳಿದ ಸತ್ಯನಾರಾಯಣ ಮಂಗಳಾ ಗೇಟು ತೆರೆದುಕೊಂಡು ಒಳಬಂದರೆ ಕಾರ್ತಿಕ್ ಅವರ ಹಿಂದೆ ಲಗೇಜ್ ಹೊತ್ತು ತಂದ.

ಬಾಗಿಲಿಗೆ ಒರಗಿ ನಿಂತ ಸೊಸೆಯ ಅವಸ್ಥೆ ಕಂಡು ಮಂಗಳಾ ಗಾಬರಿಯಾದರು. ಬಹಳ ಇಳಿದು ಹೋಗಿದ್ದವಳ ಕಂಗಳು ಆಳಕ್ಕಿಳಿದು ಕಾಂತಿ ಹೀನವಾಗಿದ್ದವು.

"ನವ್ಯಾ, ಯಾಕೆ ಹೀಗಾಗಿದ್ದೀ? ಮೈಯಲ್ಲಿ ಹುಷಾರಿಲ್ವೇನು?" ಅವಳ ಹಣೆ ಮುಟ್ಟಿ ಜ್ವರವಿದೆಯೇನೋ ಎಂದು ಪರೀಕ್ಷಿಸುತ್ತಾ ಕೇಳಿದರು.

ಅವರ ಮಾತಿನಲ್ಲೇ ಅದೇ ಅಕ್ಕರೆ, ಮಮತೆ ಧ್ವನಿಸಿದಾಗ ಹೋದ ಉಸಿರು ಬಂದಂತಾಯಿತು. ಅಷ್ಟು ದಿನಗಳ ಮೇಲೆ ಅವರನ್ನು ಕಂಡ ಖುಷಿ, ತನ್ನ ಕನಸು ಸುಳ್ಳಾದ ನಿರಾಳತೆ, ಇಷ್ಟು ದಿನದ ವೇದನೆ ಎಲ್ಲವೂ ಒಟ್ಟಾಗಿ ದುಃಖ ಒತ್ತರಿಸಿ ಕಣ್ಣೀರು ತಾನೇ ತಾನಾಗಿ ಹರಿಯತೊಡಗಿತು.

ಆದರೆ ಅವರು ಗ್ರಹಿಸಿದ್ದೇ ಬೇರೆ....... 'ಸಮನ್ವಿತಾ ಆಸ್ಪತ್ರೆಗೆ ದಾಖಲಾಗಿದ್ದು ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ' ಎಂದುಕೊಂಡವರು,

"ಅಯ್ಯೋ ಹುಚ್ಚುಡುಗಿ, ಏನೂ ಆಗಿಲ್ಲ ಸಮನ್ವಿತಾಳಿಗೆ. ಯಾಕಿಷ್ಟು ಗಾಬರಿ? ಈಗ ಹೇಗೂ ನಾನು ಬಂದಾಯ್ತಲ್ಲ. ಅವಳು ಸಂಜೆ ಮನೆಗೆ ಬರ್ಲಿ. ಒಂದು ವಾರ ರಜೆ ಹಾಕಿಸಿ ಬಿಡೋಣ. ಎಲ್ಲಾ ಸರಿ ಹೋಗುತ್ತೆ. ಅದಕ್ಯಾಕೆ ಅಳು? ನಾನೂ ಇಲ್ದೇ ಆಸ್ಪತ್ರೆ, ಮನೆ ಎರಡೂ ಸಂಭಾಳಿಸೋದು ಕಷ್ಟ ಆಯ್ತಾ? ಕಿಶೋರ ಸಹಾಯ ಮಾಡಿದ್ದಾನು. ಇವ್ನು ನಿನ್ನ ಕೆಲಸ ಇನ್ನೂ ಜಾಸ್ತಿ ಮಾಡಿದ್ನೇನೋ ಅಲ್ವೇನೋ" ಮಗನೆಡೆಗೆ ಆಕ್ಷೇಪಣೆಯ ನೋಟ ಹರಿಸಿದರು.

"ಸಾರಿ ಅತ್ಗೇ. ಮನೆನೆಲ್ಲಾ ಹರಡಿ ರಂಪ ಮಾಡಿಟ್ಟಿದ್ದೆ. ನೀವು ಮೊದ್ಲೇ ಸುಸ್ತಾಗಿದ್ರಿ. ಕ್ಲೀನ್ ಮಾಡೋಕೆ ನಿಮ್ಗೆ ಸಾಕಾಯ್ತೇನೋ? ಪ್ಲೀಸ್ ಅಳ್ಬೇಡಿ" ಮುಖ ಚಿಕ್ಕದು ಮಾಡಿ ಹೇಳಿದ.

ಆದರೆ‌ ತನ್ನ ತಲ್ಲಣಗಳೇ ಬೇರೆ ಎಂದು ಹೇಗೆ ವಿವರಿಸಿ ಹೇಳಿಯಾಳು? ಸುಮ್ಮನೆ ಕಣ್ಣೊರೆಸಿಕೊಂಡು ಪೆಚ್ಚಾಗಿ ನಕ್ಕಳಷ್ಟೇ. ಭಾವನೆಗಳ ಮೇಲೆ ಹಿಡಿತ ಸಾಧಿಸಿ, ತನ್ನನ್ನು ತಾನು ನಿಯಂತ್ರಿಸಿಕೊಂಡವಳು, "ನೀನ್ಯಾಕೋ ಮುಖ ಸಣ್ಣ ಮಾಡ್ತೀಯಾ? ಸಮಾ ಪರಿಸ್ಥಿತಿ ನೆನಸ್ಕೊಂಡು ಬೇಜಾರಾಯ್ತಷ್ಟೇ. ಛೇ, ನನ್ನ ಬುದ್ಧಿಗಿಷ್ಟು….. ಬಾಗಿಲಲ್ಲೇ ನಿಂತ್ಕೊಂಡಿದ್ದೀರಲ್ಲ. ಒಳಗೆ ಬನ್ನಿ" ಎಂದವಳು ಕಾರ್ತಿಕ್ ಕೈಯಿಂದ ಬ್ಯಾಗ್ ತೆಗೆದುಕೊಂಡಳು.

ಒಳಬಂದವರಿಗೆ ಕುಡಿಯಲು ನೀರು ಕೊಟ್ಟು, "ನೀವಿಬ್ರೂ ಸ್ನಾನ ಮಾಡಿ ಬನ್ನಿ. ತಿಂಡಿ ರೆಡಿ ಇದೆ. ತಿಂದು ಸ್ವಲ್ಪ ರೆಸ್ಟ್ ಮಾಡಿ. ದೂರದ ಪ್ರಯಾಣ. ಸುಸ್ತಾಗಿರುತ್ತೆ. ಸಂಜೆ ಅಷ್ಟೊತ್ತಿಗೆ ಸಮಾ ಬರ್ತಾಳೆ" ಎಂದಳು.

ಸತ್ಯನಾರಾಯಣ, ಮಂಗಳಾ ಕೋಣೆಯತ್ತ ನಡೆದಾಗ, ಇವಳು ಅಡುಗೆ ಮನೆಯತ್ತ ಹೊರಟಳು. ಮಧ್ಯಾಹ್ನದ ಅಡುಗೆ ತಯಾರಿ ಮುಗಿಸಿ, ಲಗೇಜ್ ಬ್ಯಾಗನ್ನು ತೆರೆದು ಪ್ರಸಾದವನ್ನು ದೇವರು ಕೋಣೆಯಲ್ಲಿಟ್ಟು, ಬಟ್ಟೆಗಳನ್ನು ಒಗೆಯಲು ಹಾಕತೊಡಗಿದಳು. ಹಿಂದೆ ಯಾರೋ ನಿಂತಂತೆ ಭಾಸವಾಗಿ ತಟ್ಟನೆ ತಿರುಗಿದಳು.

"ಏನಾಯ್ತು ಕಾರ್ತಿಕ್?" ಅಚ್ಚರಿಯಿಂದ ಕೇಳಿದಳು.

"ಕೊಡಿ ಅತ್ಗೇ, ನಾನು ಬ್ಯಾಗ್ ಖಾಲಿ ಮಾಡಿ ಬಟ್ಟೆಗಳನ್ನು ವಾಶಿಂಗ್ ಮೆಷಿನಿಗೆ ಹಾಕ್ತೀನಿ" ಎಂದವನನ್ನು ನೋಡಿ ನಕ್ಕಳು. 

"ಎಲ್ಲಾ ಆಯ್ತು. ಇನ್ನು ಪೌಡರ್ ಹಾಕಿ ಮಿಷನ್ ರನ್ ಮಾಡ್ಬೇಕಷ್ಟೇ. ಸ್ವಲ್ಪ ಹೊತ್ತಿಗೆ ಮುಂಚೆ ಕರೆಂಟ್ ಹೋಯ್ತು. ಬಂದ್ಮೇಲೆ ಹಾಕ್ತೀನಿ. ಇದೆಲ್ಲಾ ನಿನ್ನ ಕೈಲಾಗೋ ಕೆಲ್ಸ ಅಲ್ಲ. ತಿಂಡಿ ಹಾಕ್ಕೊಡ್ತೀನಿ, ತಿನ್ನುವೆಯಂತೆ ಬಾ" ಅಡುಗೆ ಕೋಣೆಯತ್ತ ಹೊರಟವಳನ್ನು ಹಿಂಬಾಲಿಸಿದ.

"ಸಾರಿ ಅತ್ಗೇ… ಮನೆ ಕ್ಲೀನ್ ಮಾಡೋಷ್ಟರಲ್ಲಿ ಸುಸ್ತಾಯ್ತಲ್ವಾ ನಿಮ್ಗೆ? ನಾನು ಎರಡೂ ದಿನ ಗುಡ್ಸಿದ್ದೆ. ಆದ್ರೂ ಇಷ್ಟೊಂದು ಕಸ ಎಲ್ಲಿಂದ ಬಂತು ಅಂತಾನೇ ಗೊತ್ತಾಗ್ತಿಲ್ಲ" ಚಿಂತಿತ ವದನನಾಗಿ ಅಮಾಯಕನಂತೆ ಹೇಳಿದ.

"ಆಹಾಹಾ….. ಗುಡ್ಸಿದ್ಯಾ? ನೀನಾ? ಮುಖ ನೋಡು ಗುಡ್ಸೋನ್ದು. ಗುಡ್ಸೋದೆಲ್ಲಾ ಬಿಡು, ಎಕ್ಸಾಮ್ ಇದೆ ಓದ್ಕೋ ಅಂದ್ರೆ ಅದನ್ನೂ ಮಾಡಿಲ್ಲ ನೀನು. ಆ ಪಬ್ ಜಿ ಆಡ್ಕೊಂಡು ಕೂತಿದ್ದೇ ಅಂತ ಗೊತ್ತು ನನ್ಗೆ. ಈ ಓವರ್ ಆಕ್ಟಿಂಗ್ ಎಲ್ಲಾ ಬೇಡ‌. ನಾನು ಆಸ್ಪತ್ರೆಗೆ ಹೋದಲ್ಲಿಂದ ಈ ನೆಲ ಹಿಡಿ ಮುಖನೇ ನೋಡಿಲ್ಲ" ಅವನ ಕಿವಿ ಹಿಂಡಿ ಹೇಳಿದಳು..

"ಅಯ್ಯೋ ಅತ್ಗೇ ಕಿವಿ ಬಿಡಿ ಪ್ಲೀಸ್" ಅವಳ ಕೈಯಿಂದ ಕಿವಿ ಬಿಡಿಸಿಕೊಂಡವನು, "ಪ್ಲೀಸ್ ಅತ್ಗೇ, ನೀವು ಆಸ್ಪತ್ರೆಯಲ್ಲಿ ಇದ್ದ ಎರಡೂ ದಿನ ನಾನು ಮನೇನ ನೀಟಾಗಿ ಗುಡ್ಸಿ, ಒರೆಸಿ ತಳತಳ‌ ಹೊಳೆಸಿದ್ದೆ ಅಂತ ಅಪ್ಪ ಅಮ್ಮನತ್ರ ಹೇಳಿ ಪ್ಲೀಸ್. ಇಲ್ಲಾಂದ್ರೆ ನಂಗೆ ಸಹಸ್ತ್ರನಾಮಾರ್ಚನೆ ಗ್ಯಾರಂಟಿ. ಅದಲ್ಲದೇ ಮಂಗು ಡಾರ್ಲಿಂಗ್ ಕಿಂಡಲ್ ಬೇರೆ ಮಾಡ್ತಾಳೆ. ಅಕ್ಕಪಕ್ಕದವರತ್ರ ಎಲ್ಲಾ ಹೇಳ್ಕೊಂಡು ಬಂದು ನನ್ನ ಇಮೇಜ್ ಖರಾಬ್ ಮಾಡ್ತಾಳೆ" ಒಂದೇ ವರಾತ ಶುರುಹಚ್ಚಿದ. ಅವನ ಕಾಟ ತಡೆಯಲಾರದೆ "ತಥಾಸ್ತು" ಎಂದಳು. ಅಷ್ಟಾದ ಮೇಲೂ ಅವಳ ಹಿಂದೆ ಹಿಂದೆಯೇ ಸುತ್ತತೊಡಗಿದಾಗ, "ಇನ್ನೇನು?" ಕೇಳಿದಳು. 

"ಅದೂ.......ಮತ್ತೇ......... ನಾನು...... ನಾನು..."

"ಏನು ನೀನು ಓದೋದ್ ಬಿಟ್ಟು ಪಬ್ ಜಿ ಆಡ್ತಿದ್ದೆ ಅನ್ನೋದ್ನೂ ಹೇಳ್ಬಾರ್ದಾ? ಅದೆಲ್ಲಾ ಆಗೋಲ್ಲ. ಗುಡ್ಸೋದು, ಒರ್ರ್ಸೋದೆಲ್ಲಾ ಮಾಡಿಲ್ಲ ಓಕೆ. ಆದ್ರೆ ಎರಡು ದಿನದಲ್ಲಿ ಎಕ್ಸಾಮ್ ಇಟ್ಕೊಂಡು ಹೀಗ್ಮಾಡ್ತಾರಾ ಯಾರಾದ್ರೂ? ಇದ್ನ ನಿಮ್ಮಣ್ಣನಿಗೇ ಹೇಳೋದು, ನಿನ್ಗೆ ಅವ್ರೇ ಸರಿ" ಎಂದದ್ದೇ ಅವಳ ಕಾಲು ಹಿಡಿದ.

"ಅತ್ಗೇ ಹಾಗೊಂದು ಮಾಡ್ಬೇಡಿ, ಅಣ್ಣನಿಗೆ ಹೇಳ್ಬೇಡಿ.‌....." ಎನ್ನುವಷ್ಟರಲ್ಲಿ ಮಂಗಳಮ್ಮ ಅಡುಗೆ ಮನೆಯ ಬಾಗಿಲಲ್ಲಿದ್ದರು.

"ನೀನೇನೋ ಯಾವತ್ತೂ ಇಲ್ಲದ್ದು ಅಡ್ಗೆಮನೆಲೀ ಪ್ರತ್ಯಕ್ಷ ಆಗಿದ್ದು. ಅವಳಿಗೇನು ಛೊರೆ ನಿಂದು? ಸತ್ಯ ಹೇಳು ಏನ್ಮಾಡಿದ್ದೀ ಇಲ್ಲಿ?" ಕೇಳಿದರು.

"ಏನೂ ಇಲ್ವೇ ಮಂಗೂ ಡಾರ್ಲಿಂಗ್, ಅತ್ಗೇಗೆ ತಿಂಡಿ ಹಾಕೋಕೆ ಹೆಲ್ಪ್ ಮಾಡ್ತಿದ್ದೆ" ಎಂದು ಉಪ್ಪಿಟ್ಟಿನ ಪ್ಲೇಟು ತೋರಿಸಿ ನೈಸಾಗಿ ಪ್ಲೇಟ್ ಚೇಂಜ್ ಮಾಡಿದವನನ್ನು ನೋಡಿ 'ಕಲಾವಿದ' ಎಂದುಕೊಂಡು ಮನದಲ್ಲೇ ನಕ್ಕಳು ನವ್ಯಾ. 

ತಡವಾಗಿದ್ದರಿಂದ ಎಲ್ಲರೂ ಒಟ್ಟಿಗೆ ತಿಂಡಿಗೆ ಕುಳಿತರು. 

"ಸಮನ್ವಿತಾ ಎಷ್ಟೊತ್ತಿಗೆ ಬರ್ತಾಳೆ? ಯಾರು ಕಿಶೋರ ಕರ್ಕೊಂಡು ಬರ್ತಾನಾ?" ಕೇಳಿದರು ಸತ್ಯನಾರಾಯಣ.

"ಮಧ್ಯಾಹ್ನ ಡಿಸ್ಚಾರ್ಜ್ ಅಂದ್ರು. ಪ್ರೊಸೀಜರ್ ಎಲ್ಲಾ ಮುಗಿದು ಬರೋವಾಗ ಸಂಜೆ ನಾಲ್ಕು ಗಂಟೆ ಆಗ್ಬಹುದು ಅಪ್ಪಾಜಿ" ಎಂದಳು.

"ಅವ್ನು ನಾಲ್ಕು ಅಂದಿದ್ದಾನೆ ಅಂದ್ರೆ ಬಹುಶಃ ಬರುವಾಗ ಐದು ಗಂಟೆ ಕಳೀಬಹ್ದು. ಬೇಗ ಅಡುಗೆ ಮಾಡಿ, ಮಧ್ಯಾಹ್ನದ ಊಟ ಕಾರ್ತಿಕ್ ಕೈಯಲ್ಲಿ ಕಳ್ಸೋಣ" ಮಂಗಳಮ್ಮ ಹೇಳಿದರು.

"ಅದೇನೂ ಬೇಡಮ್ಮಾ. ಮೃದುಲಾ ಅಮ್ಮ ಊಟ ತರ್ತೀನಿ ಅಂದಿದ್ದಾರೆ. ಅವ್ರೇ ಡಿಸ್ಚಾರ್ಜ್ ಆದ್ಮೇಲೆ ಅವಳನ್ನು ಇಲ್ಲಿ ಬಿಟ್ಟು ಹೋಗ್ತಾರೆ" ಎಂದವಳು, ರಾವ್ ಅವರ ಮದುವೆ ಪ್ರಪೋಸಲ್ ಇಂದ ಹಿಡಿದು ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿದಳು. ಮಂಗಳಾರಿಗೆ ಕೆಲದಿನಗಳ ಹಿಂದೆಯೇ ಫೋನಿನಲ್ಲಿ ಅಭಿರಾಮ್ ಬಗ್ಗೆ ಹೇಳಿದ್ದಳು ನವ್ಯಾ. 'ಅವನು ನಮ್ಮ ಸಮಾಗೆ ಒಳ್ಳೆ ಜೋಡಿ ಅನ್ನಿಸ್ತಾನೆ' ಎಂದಿದ್ದಳು. ಈಗ ಎಲ್ಲಾ ವಿಷಯ ಕೇಳಿ ರಾವ್ ದಂಪತಿಗಳ ಬಗ್ಗೆ ಅಸಹ್ಯವೆನಿಸಿದರೂ, ಶರ್ಮಾ ಪರಿವಾರದ ಬಗ್ಗೆ ಕೇಳಿ ಸಮಾಧಾನವಾಯಿತು. 

"ಹೇಗೋ ಆ ಮಗುವಿಗೆ ಇನ್ನಾದ್ರು ಒಳ್ಳೇದಾದ್ರೆ ಅಷ್ಟೇ ಸಾಕು. ಚಿನ್ನದಂತಹ ಹುಡುಗಿ. ಪುಣ್ಯ ಮಾಡಿರ್ಬೇಕು ಅಂತಹ ಮಗಳನ್ನು ಪಡೆಯೋಕೆ. ಆದ್ರೇನು ಮಾಡೋದು, ಬಂಗಾರವೇ ದೊಡ್ಡದು ಅಂದುಕೊಂಡವನಿಗೆ ವಜ್ರದ ಮೌಲ್ಯ ತಿಳಿಯುವುದಿಲ್ಲ. ಹಾಗೆ ಹಣವೇ ಶ್ರೇಷ್ಠ ಅನ್ನುವ ಮನುಷ್ಯರಿಗೆ ಸಂಬಂಧಗಳು ಕಾಲಕಸವಾಗುತ್ತೆ" ಬೇಸರಿಸಿ ನುಡಿದರು ಮಂಗಳಮ್ಮ.

"ನಿಜವೇ... ಹಣದ ಹುಚ್ಚು ಏರಿದರೆ ಕರುಳ ಸಂಬಂಧವೂ ವ್ಯವಹಾರವಾಗುತ್ತದೆ. ಆದರೆ ಅನ್ಯಾಯ ಮಾಡಿ ನೆಮ್ಮದಿಯಿಂದ ಬದುಕಿದವರು ಯಾರಿಲ್ಲ. ಪಾಂಡವರು ದ್ರೌಪದಿಯನ್ನು ದ್ಯೂತದಲ್ಲಿ ಪಣಕ್ಕಿಟ್ಟು ಸೋಲುವಂತೆ ಜಾಲ ಹೆಣೆದು ಯಶಸ್ವಿಯಾದೆವೆಂದು ಬೀಗಿದ್ದೇ ಕೌರವರ ಹನನಕ್ಕೆ ನಿಮಿತ್ತವಾಯಿತಲ್ಲವೇ? ತಪ್ಪು ಮಾಡಿ ಸಿಕ್ಕಿಕೊಳ್ಳದೇ ಬಚಾವಾದೆವೆಂದು ಬೀಗುವುದು ಕ್ಷಣಿಕವಾದ ಭ್ರಮೆಯಷ್ಟೇ. ತಪ್ಪುಮಾಡಿದವನಿಗೆ ಶಿಕ್ಷೆ ‌ಖಚಿತ. ಅನ್ಯಾಯದ ಹಣದ ಮದದಲ್ಲಿ ಮೆರೆಯುತ್ತಾ ಬೀಗುವವರ ಕಾಲ ಕೆಳಗಿನ ಭೂಮಿ ಅವರಿಂದ ನೊಂದವರ ಕಣ್ಣೀರ ಶಾಪದಲ್ಲಿ ಮಿಂದಿರುತ್ತದೆ. ಆ ದಗ್ಧ ಭುವಿಯೇ ಅವರನ್ನು ಒಂದಲ್ಲಾ ಒಂದು ದಿನ ಆಪೋಶನ ತೆಗೆದುಕೊಳ್ಳುತ್ತದೆ" ವಿಶ್ಲೇಷಿಸಿ ನುಡಿದರು ಸತ್ಯನಾರಾಯಣ. 

'ಹಾಗಾದರೆ ನನ್ನಂತಹ ಸಾವಿರಾರು ಹೆಣ್ಣುಗಳನ್ನು  ವೇಶ್ಯಾವಾಟಿಕೆಯ ನರಕಕ್ಕೆ ತಳ್ಳುವುದನ್ನೇ ನಿರಂತರ ವೃತ್ತಿಯಾಗಿಸಿಕೊಂಡಿರುವ ತಲೆಹಿಡುಕ ದಲ್ಲಾಳಿಗಳು, ತಾನೂ ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಆಕ್ರಂದನಕ್ಕೆ ಕಿವುಡಾಗುವ, ಸಾವಿರಾರು ಹೆಣ್ಣುಗಳ ದೇಹವನ್ನು ವಿಕ್ರಯಿಸಿ ಹಣ ಸಂಪಾದಿಸುವ ಕೋಠಿಗಳ ಮಾಲಕಿಯರು, ಹೆಣ್ಣು ಇರುವುದೇ ಹಾಸಿಗೆಯಲ್ಲಿ ಸುಖಿಸಲು ಎಂದುಕೊಳ್ಳುವ ಗಿರಾಕಿಗಳು...... ಇವರೆಲ್ಲರಿಗೂ ಯಾಕೆ ಕಠಿಣವಾದ ಶಿಕ್ಷೆಯಾಗುವುದಿಲ್ಲ? ವೇಶ್ಯೆಯೆಂದರೆ ಸಮಾಜಕ್ಕಂಟಿದ ವೃಣ ಎಂಬಂತೆ ಕಾಣುವ ಜನರ ನಡುವೆ, ನನ್ನ ಮನದೊಳಗಿನ ಹತಾಶೆಯೆಂಬ ರೋಗಕ್ಕೆ ಚಿಕಿತ್ಸೆ ನೀಡಿ, ಕಗ್ಗತ್ತಲಕೂಪದಿಂದ ಉಷೆಯೆಡೆಗೆ ಕೈ ಹಿಡಿದು ನೆಡೆಸಿದಾಕೆ ಸಮನ್ವಿತಾ. ಅಂತಹವಳಿಗೆ ಏಕಿಷ್ಟು ಕಠೋರವಾದ ಶಿಕ್ಷೆ?' ಸತ್ಯನಾರಾಯಣರ ಮಾತುಗಳ ಬಗ್ಗೆಯೇ ತೀವ್ರವಾಗಿ ಯೋಚಿಸತೊಡಗಿದಳು ನವ್ಯಾ.

ಅವಳ ಅನ್ಯಮನಸ್ಕತೆಯನ್ನು ಮೊದಲು ಗಮನಿಸಿದ್ದು ಕಾರ್ತಿಕ್. "ಯಾಕತ್ಗೆ? ಏನಾಯ್ತು?" ಅವಳ ಗಮನ ಸೆಳೆಯುತ್ತಾ ಕೇಳಿದ.

"ಏನಿಲ್ಲ. ಅಪ್ಪಾಜಿ ಹೇಳಿದ್ರ ಬಗ್ಗೆ ಯೋಚಿಸುತ್ತಿದ್ದೆ" ಎಂದಳು.

"ನೋಡು ಮಂಗು ಡಾರ್ಲಿಂಗ್, ಇಷ್ಟು ದಿನ ನಿನ್ನ ಕಾಟ ಇಲ್ದೇ ಮನೆ, ಮನಸ್ಸು ಶಾಂತವಾಗಿತ್ತು. ಈಗ ನೀನು ಘಟವಾಣಿ ಕಾಲಿಟ್ಟೆ. ಮನೆಯ ನೆಮ್ಮದಿ, ಶಾಂತಿ ಎಲ್ಲಾ ಮಂಗಳಯಾನಕ್ಕೆ ಹೋಯ್ತು. ಅದಿಕ್ಕೆ ಅತ್ತಿಗೆ ನೀನು ಬಂದ್ಕೂಡ್ಲೇ ಅತ್ತಿದ್ದು. ಈಗ ನಿನ್ನ ಜೊತೆ ಹೇಗಪ್ಪಾ ಏಗೋದು ಅಂತ‌ ಯೋಚ್ನೆ ಆಗಿದೆ ಅವರಿಗೆ. ನಾನು, ಅಣ್ಣ ಎಷ್ಟು ಚೆನ್ನಾಗಿ ನೋಡ್ಕೊಂಡಿದ್ವಿ ಅವ್ರನ್ನ. ಈ ಕಡೆ ಕಡ್ಡಿ ಎತ್ತಿ ಆ ಕಡೆ ಇಡೋಕೆ ಬಿಡ್ತಿರ್ಲಿಲ್ಲ ಗೊತ್ತಾ" ಹೆವಿ ಚಮಕ್ ಕೊಟ್ಟು, ಉಪ್ಪಿಟ್ಟು ಬಾಯಿಗೆ ಬಿಸಾಡುತ್ತಾ ಹೇಳಿದ ಕಾರ್ತಿಕ್.

ಅವನ ಮಾತು ಕೇಳಿ ತಿಂದಿದ್ದು ನೆತ್ತಿಗೇರಿ ಕೆಮ್ಮತೊಡಗಿದಳು. ಅವಳ ನೆತ್ತಿತಟ್ಟಿ ಕುಡಿಯಲು ನೀರು ಕೊಟ್ಟವರು, "ಇವಳ ನೆತ್ತಿಹತ್ತಿದ್ದು ನೋಡಿಯೇ ಗೊತ್ತಾಯ್ತು ನೀನು ಅದೆಷ್ಟು ಸೇವೆ ಮಾಡಿದ್ಯಾ ಅಂತ. ಏನು ನವ್ಯಾ, ಆಸ್ಪತ್ರೆಗೆ ಹೋದಲ್ಲಿಂದ ಇವ್ನು ಮನೆಯಲ್ಲಿ ಸಂಗ್ರಹಿಸಿದ್ದ ಕಸ ಎಲ್ಲಾ ಇವತ್ತು ಬೆಳಿಗ್ಗೆ ನೀನು ಕ್ಲೀನ್ ಮಾಡಿದ್ಯಾ? ಅದಕ್ಕೆ ಈ ರೀತಿ ಅವಸ್ಥೆ ಆಗಿರೋದು ನಿಂದು. ಮತ್ತೆ ಮಾತಾಡೋದು ನೋಡ್ಬೇಕು ದೊಡ್ಡ ಮನುಷ್ಯನ ತರ" ಮಂಗಳಾ ಅರ್ಚನೆಗೆ ಆರಂಭಿಸಿದಾಗ, ಸುಮ್ನಿರಲಾರ್ದೇ ಇರುವೆ ಬಿಟ್ಕೊಂಡಗಾಯ್ತು ಕಾರ್ತಿಕ್ ಪರಿಸ್ಥಿತಿ.  ಅತ್ತಿಗೆಯೆಡೆಗೆ ಕಳ್ಳ ನೋಟ ಹರಿಸಿದ ಏನೂ ಹೇಳಬೇಡಿ ಎಂಬ ಮನವಿಯೊಂದಿಗೆ.

"ಮತ್ತೇನ್ ಇವ್ನು ಕಸ ಗುಡ್ಸಿರ್ತಾನೆ ಅಂದ್ಕೊಂಡ್ಯಾ ನೀನು? ಇವ್ನು ಕಸ ಗುಡ್ಡೆ ಹಾಕಿ ಅದ್ರ ಮೇಲೇ ಮಲಗ್ತಾನಷ್ಟೇ..... ಗುಡಿಸಿ ಸಾರ್ಸೋದೆಲ್ಲಾ ದೂರದ ಮಾತು" ಸತ್ಯನಾರಾಯಣರೂ ಹೆಂಡತಿಯ ಮಾತನ್ನು ಅನುಮೋದಿಸಿದರು.

"ನಿಮ್ಗೆಲ್ಲಾ ನನ್ನ ನೋಡಿ ಸ್ಟಮಕ್ ಬರ್ನ್. ಅದಕ್ಕೆ ನನ್ನಂತಹ ದೇವ್ರಂಥಾ ಮನುಷ್ಯನ ಮೇಲೆ ಇಲ್ಲ ಸಲ್ಲದ ಆರೋಪ ಹೊರಸ್ತಾ ಇದ್ದೀರಾ. ನೀವು ತೀರ್ಥಯಾತ್ರೆಗೆ ಹೋಗ್ಬಂದಿದ್ದು ವೇಸ್ಟು….." ನಿವಾಳಿಸಿದ.

"ಹೂಂ ದೇವ್ರಂಥಾ ಮನುಷ್ಯ ನಾಯಿಯಂತಾ ಬುದ್ಧಿ. ಆಗ್ಲೇ ಅಡ್ಗೆ ಮನೇಲೀ ನಿನ್ನತ್ತಿಗೆ ಹತ್ರ ಪೂಸಿ ಹೊಡೀತಿದ್ದಿದ್ದು ನಂಗೊತ್ತಾಗ್ಲಿಲ್ಲ ಅಂದ್ಕೊಂಡ್ಯಾ?" ಸರಿಯಾಗಿ ಕೇಳಿದರು ಮಂಗಳಾ.

"ಥೋ... ಅದನ್ನೂ ಕದ್ದು ಕೇಳ್ಸಿಕೊಂಡ್ಯಾ? ಮಂಗೂ, ನೀನು ಸಾಮಾನ್ಯದವಳಲ್ಲ. ನಿನ್ನ ಟ್ಯಾಲೆಂಟಿಗೆ ಭೂಮಿಯ ತೀರ್ಥಯಾತ್ರೆ ಸಾಕಾಗಲ್ಲ. ನಿನ್ನ ನಾಸಾಕ್ಕೆ ಕಳಿಸಿ ಮಿಶನ್ ಶನಿಯಾನ ಮಾಡ್ಸೋಣ. ಹೇಗೂ ಆ ಶನಿ ಸೀರೀಯಲ್ ನಿನ್ನ ಲೈಫ್ ಟೈ ಫೇವರೇಟ್ ಅಲ್ವಾ? ದಿನಕ್ಕೆ ಎರಡು ಸಲ ಟಿ.ವಿ ಲೀ, ಇನ್ನೊಂದ್ ಸಲ ವೂಟ್ ಅಲ್ಲಿ ನೋಡಿ ಸಂಜ್ಞಾ ದೇವಿ, ದೇವೇಂದ್ರನಿಗೆ ಬಾಯಿಗ್  ಬಂದ್ಹಾಗೆ ಬೈತಾ ಇರ್ತೀಯಲ್ಲ. ಶನಿ ಗ್ರಹಕ್ಕೇ ಹೋಗಿ ಡೈರೆಕ್ಟಾಗಿ ಅವ್ರನ್ನು ಮೀಟ್ ಆಗಿ ಮಕ್ಮಕಕ್ಕೆ ಉಗ್ದು ಬಾ" ಅವನ ಸಲಹೆ ಕೇಳಿ ಮಾವ, ಸೊಸೆ ಜೋರಾಗಿ ನಕ್ಕರೆ, ಮಂಗಳಾ ಅವನಿಗೆ ಒಂದೇಟು ಹಾಕಿದರು.

"ಹೌದೋ, ನಾನು ನೋಡ್ತೀನಿ. ಏನಾಯ್ತು ಈಗ. ನೀನೇನು ಕಮ್ಮಿ... ಅದ್ಯಾವುದೋ ಫೈಟಿಂಗ್ ಅಂತೆ, ಜಾನ್ಸನ್ ಅಂತೆ....  ಮುಖ, ಮೂತಿ ನೋಡದೇ ಕುರ್ಚಿ, ಟೇಬಲ್ ಎಲ್ಲಾ ಎತ್ತಿ ಹೊಡಿತಾ ಇದ್ರೆ, 'ಇನ್ನೂ ಹೊಡಿ, ಹಾಗೆ ಹೊಡಿ, ಹೀಗೆ ಹೊಡಿ' ಅಂತ ಕೂಗಾಡ್ತಾ ಇರೋಲ್ವಾ ನೀನು?"

"ಮಂಗೂ ಅದು ಡಬ್ಲ್ಯೂ ಡಬ್ಲ್ಯೂ ಎಫ್ ಅಂತ, ಮತ್ತವನು ಜಾನ್ಸನ್ ಅಲ್ಲ ಜಾನ್ ಸೀನಾ…. ಮೈ ಫೇವರಿಟ್. ಅದನ್ನು ನೋಡಿಲ್ಲಾ ಅಂದ್ರೆ ನಿನ್ನಂತಾ ಮಾರಿ ಅಮ್ಮನಿಂದ ತಪ್ಪಿಸ್ಕೊಳ್ಳೋದು ಹೇಗೆ? ಅಲ್ಲಿಂದನೇ ನಿನ್ನ ಜೊತೆ ಏಗೋಕೆ ಎನರ್ಜಿ ಬರೋದು ನಂಗೆ" ಎಂದವನು ಇನ್ನೂ ಇಲ್ಲೇ ಇದ್ದರೆ ಸಮಸ್ಯೆ ತಪ್ಪಿದಲ್ಲವೆಂದು, "ನಾನು ಓದ್ಕೋಬೇಕು" ಎಂದು ಎದ್ದು ರೂಮಿಗೋಡಿದ.

"ಏನ್ ಓದೋದೋ ಏನ್ ಕಥೆನೋ, ಈಗ ರೂಮಲ್ಲಿ ಕಿವಿಗೊಂದು ವೈರು ಸಿಕ್ಕಿಸಿ ಕುತ್ಕೋತಾನಷ್ಟೇ" ಗೊಣಗಿದರು ಮಂಗಳಾ.

"ಓದ್ಕೊತಾನೆ ಬಿಡಿ ಅಮ್ಮ. ಈಗೇನು ಕೆಲ್ಸ ಇಲ್ಲ. ಅಡುಗೆ ಆಗಿದೆ. ನೀವು, ಅಪ್ಪಾಜಿ ಸ್ವಲ್ಪ ವಿಶ್ರಾಂತಿ ತಗೊಳ್ಳಿ" ತೊಳೆಯುವ ಪಾತ್ರೆಗಳನ್ನು ಅಡುಗೆ ಮನೆಗೆ ಒಯ್ದಳು. ಮಂಗಳಾರಿಗೂ ಆಯಾಸದ ಸುಸ್ತಿಗೆ ಕಣ್ಣೆಳೆಯುತ್ತಿತ್ತು.

"ಅಷ್ಟು ಬೇಗ ಅಡುಗೇನೂ ಮಾಡಿ ಮುಗ್ಸಿದ್ಯಾ? ಹೇಳಿದ್ದು ಕೇಳೋಲ್ಲ ನೀನು. ಸರಿ, ನೀನೂ ತುಂಬಾ ಸುಸ್ತಾಗಿದ್ದಿ. ಮಲಕ್ಕೋ ಹೋಗು" ಎಂದವರು ಕೋಣೆಗೆ ನಡೆದರು. ಪಾತ್ರೆಗಳನ್ನು ತೊಳೆದು ಬಂದವಳಿಗೆ ಸುಸ್ತಾಗಿತ್ತಾದರೂ ಮಲಗಲು ಮನಸ್ಸಾಗದೇ ಹಾಲಿನ ದಿವಾನ್ ಮೇಲೆ ಕಾಲುಚಾಚಿ ಪತ್ರಿಕೆ ತಿರುವತೊಡಗಿದಳು ನವ್ಯಾ... 

              **************************

ಆ ಸಂಜೆ ಎಂದಿಗಿಂತಲೂ ಹೆಚ್ಚು ಚೇತೋಹಾರಿಯಾಗಿತ್ತು ಸತ್ಯನಾರಾಯಣರ ಮನೆಯಲ್ಲಿ. ನಗು, ಮಾತು, ಹರಟೆ ಯಾವುದೇ ಅಡೆತಡೆಯಿಲ್ಲದೇ ಅವ್ಯಾಹತವಾಗಿ ಸಾಗಿತ್ತು.

ಡಿಸ್ಚಾರ್ಜಿಂಗ್ ಸಮಯದಲ್ಲಿ ಕೊಟ್ಟ ಇಂಜೆಕ್ಷನ್ ಪ್ರಭಾವದಿಂದಾಗಿ ಸಮನ್ವಿತಾ ಮನೆಗೆ ಬಂದೊಡನೇ ಮಲಗಿಬಿಟ್ಟಿದ್ದಳು. ಆಕೃತಿ ಮತ್ತು ಮೃದುಲಾರಿಗೆ ಅವಳನ್ನು ತಮ್ಮ ಮನೆಗೇ ಕರೆದೊಯ್ಯುವ ಆಸೆ ಇತ್ತಾದರೂ ಅಭಿಯೇ ಅವಳಿಗೆ ಮುಜುಗರವಾಗಬಹುದೆಂದು ಬೇಡವೆಂದಿದ್ದ. ಹಾಗಾಗಿ ಅವಳನ್ನು ಇಲ್ಲಿಗೆ ಬಿಡಲು ಅವರೆಲ್ಲರೂ ಬಂದಿದ್ದರು.

ಅಡುಗೆ ಮನೆಯಲ್ಲಿ ಮಂಗಳಾ, ನವ್ಯಾರೊಂದಿಗೆ ಮೃದುಲಾ ಕೂಡಾ ಸೇರಿದ್ದರಿಂದ ಅಡುಗೆಯೊಂದಿಗೆ ಹೆಂಗೆಳೆಯರ ಮಾತುಗಳಿಗೇನೂ ಕೊರತೆ ಇರಲಿಲ್ಲ. ಇತ್ತ ಹಜಾರದಲ್ಲಿ ಗಂಡೈಕಳ ದುಂಡು ಮೇಜಿನ ಪರಿಷತ್ತಿನಲ್ಲಿ ವಿಚಾರ ವಿಮರ್ಶೆ, ವಿಶ್ಲೇಷಣೆಗಳು ಸಾಗಿದ್ದವು. ಪಾಕಶಾಲೆ ಬೋರು ಎಂದು ಆಕೃತಿಯೂ ಸಧ್ಯ ಕಿಶೋರ್, ಸತ್ಯನಾರಾಯಣ, ಕಾರ್ತಿಕ್, ಅಪ್ಪ, ಅಣ್ಣನೊಂದಿಗೆ ಹಜಾರವಾಸಿ ಆಗಿದ್ದಳು. ಇವರೆಲ್ಲರ ನಡುವೆ ಹ್ಯಾಪ್ ಮೋರೆಗೆ ಹ್ಯಾಟ್ ಹಾಕ್ಕೊಂಡು ಅನ್ ಹ್ಯಾಪಿಯಾಗಿ ಕುಳಿತ್ತಿದ್ದ ಶೆರ್ಲಾಕ್ ಹೋಮ್ಸ್ ಕೂಡಾ ಇದ್ದರು.

ಇವನ್ಯಾಕಪ್ಪ ಇಲ್ಲಿಗೆ ಬಂದ? ಹೇಗೆ ಬಂದ? ಅಂತ ಯೋಚನೆ ಮಾಡ್ತಿದ್ದೀರಾ? ಅದೇನಾಯ್ತು ಅಂದ್ರೆ ಚೈ ಡಾರ್ಲಿಂಗ್ ಸಮನ್ವಿತಾಳನ್ನು ನೋಡೋಕೆ ಆಸ್ಪತ್ರೆಗೆ ಬರ್ತಾಳೆ ಅಂತ ಖುಷಿಯಲ್ಲಿ ಬೆಳಿಗ್ಗೆ ಎದ್ದು, ಮೆನ್ಸ್ ಪಾರ್ಲರ್ ಗೆ ಹೋಗಿ ಇದ್ದಬದ್ದ ಸೌಂದರ್ಯ ಸಾಧನಗಳನ್ನೆಲ್ಲಾ ಬಳಸಿ ಗೋಧಿ ಬಣ್ಣದ ವದನಾರವಿಂದವನ್ನು ಬೆಳ್ಳಕ್ಕಿ ಬಿಳಿಯಾಗಿಸಿ, ಅಲಂಕಾರವೆಲ್ಲಾ ಮುಗಿಸಿ ಸೂಟು, ಬೂಟು, ಹ್ಯಾಟು, ಗ್ಲೌಸು, ಟೈ ತೊಟ್ಟು ಸಿಗಾರ್ ಹಿಡಿದು ಇವನು ಆಸ್ಪತ್ರೆಗೆ ಬರುವುದರೊಳಗಾಗಿ ಚೈ ಡಾರ್ಲಿಂಗ್ ಬೈ ಹೇಳಿ ಹೊರಟೇಹೋಗಿದ್ದಳು. ಅದೇ ಫೀಲಿಂಗಲ್ಲಿ ವಾಪಾಸು ಹೊರಟ್ಟಿದ್ದವನನ್ನು ಕಿಶೋರ್ ಹಠ ಹಿಡಿದು ಮನೆಗೆ ಕರೆತಂದಿದ್ದ. 

ಇತ್ತ ಹಜಾರದಲ್ಲಿ "ಹೆಂಡತಿಯ ಗುಲಾಮನಾಗುವ ತನಕ" ಎಂಬ ವಿಷಯದ ಬಗ್ಗೆ ಸೂರು ಕಿತ್ತು ಹೋಗುವಷ್ಟು ಜೋರಿನಲ್ಲಿ ಬಿಸಿಬಿಸಿ ಚರ್ಚೆಯಾದರೆ, ಅತ್ತ ಅಡುಗೆ ಕೋಣೆಯಲ್ಲಿ "ಗಂಡನ ದಾಸ್ಯದಿಂದ ಮುಕ್ತರಾಗುವ ತನಕ" ಎಂಬ ವಿಚಾರದ ವಿಶ್ಲೇಷಣೆ ಗ್ಯಾಸಿನ ಮೇಲಿದ್ದ ಸಾರಿಗಿಂತ ಬಿರುಸಾಗಿ ಕುದಿಯುತ್ತಿತ್ತು. ಎರಡೂ ಕಡೆ ನಡೆಯುತ್ತಿದ್ದದ್ದು ಚರ್ಚೆಯೇ ಆದರೂ ಪಾಕಶಾಲೆಯ ಚರ್ಚೆ ಹದವಾದ ಪಾಕದಂತೆ ಅಚ್ಚುಕಟ್ಟಾಗಿದ್ದರೆ, ಹಜಾರದ ಚರ್ಚೆಯ ಕಥೆ ಕೆಸರಿನ ಹೊಂಡದಲ್ಲಿ ಬಿದ್ದ ಕೋಣದಂತಾಗಿತ್ತೆನ್ನಿ. 

ಹಜಾರದ ಚರ್ಚೆಗೆ ವಿಪರೀತ ಕಾವೇರಿ, ಎಲ್ಲಾ ಗಣ್ಮಕ್ಕಳ ಸ್ವರಗಳೂ ತಾರಕಕ್ಕೇರಿದ್ದವು. ಕಾರಣ...... ಇವರ ನಡುವಿದ್ದ ಗುಂಪಿಗೆ ಸೇರದ ಪದ.... ಆಕೃತಿ! ಇವರು ಹೇಳಿದ್ದಕ್ಕೆಲ್ಲಾ ಅವಳದು ಒಂದೇ ವಿರೋಧ. ಎಷ್ಟಾದರೂ ಅವಳು ಪಾಕಶಾಲೆಯ ಸದಸ್ಯೆಯಲ್ಲವೇ. ಇವಳ 'ಐ ಅಬ್ಜೆಕ್ಟ್' ಹರತಾಳ ನೋಡಿ ನಮ್ಮ ಗಂಡುಗಲಿ ಹುಲಿ ಸಿಂಹಗಳಿಗೆ ತಲೆಬೇನೆ ಆರಂಭವಾಯಿತು. ನೋಡುವಷ್ಟು ನೋಡಿದ ಅಭಿರಾಮ್ ಇನ್ನು ಸಾಧ್ಯವಿಲ್ಲವೆಂಬಂತೆ,

"ಮಿಸ್ ಆಕೃತಿ ಶರ್ಮಾ, ಅಡ್ಗೆ ಮನೆಗೆ ಹಾಳಾಗ್ ಹೋಗೋಕೆ ಏನ್ ರೋಗ ನಿಂಗೆ?" ಕೇಳೇಬಿಟ್ಟ.

"ನಾನು ಹೋಗಲ್ಲ ಕಣೋ. ನಿನ್ಗೆ ತಾನೇ ಪ್ರಾಬ್ಲಮ್ ಆಗಿರೋದು? ನೀನೇ ಹೋಗು. ಆದ್ರೆ ಹೋಗೋಕೆ ಮುಂಚೆ ನನ್ನ ಪಾಯಿಂಟ್ಸ್ ಗೆ ಉತ್ತರ ಕೊಡೋಕಾಗ್ದೇ ಸೋತು, ಶಸ್ತ್ರತ್ಯಾಗ ಮಾಡಿ, ಯುದ್ಧರಂಗದಲ್ಲಿ ಹೇಡಿಯಂತೆ ಬೆನ್ನುತೋರಿಸಿ ಓಡ್ತಿದ್ದೀಯಾ ಅಂತ ಒಪ್ಪಿಕೊಂಡು ಹೋಗೋ ಉತ್ತರಕುಮಾರ….." 

"ಏನ್ ದೊಡ್ಡ ಪಾಯಿಂಟ್ ಪರಿಮಳ ಇವ್ಳು. ಯುದ್ಧರಂಗ ಅಂತೆ, ಶಸ್ತ್ರತ್ಯಾಗ ಅಂತೆ... ನನ್ನೇ ಉತ್ತರಕುಮಾರ ಅಂತಾಳೆ ಗೋಸುಂಬೆ, ಹಿಡಿಂಬೆ, ಶೂರ್ಪನಖಿ.... ಹೀಗೇ ಆಡ್ತಿದ್ರೆ ಮೂಗು ಕಟ್ ಮಾಡಿ ಜೇಬಿಗೆ ಹಾಕ್ಕೋತೀನಿ ನೋಡ್ತಿರು."

"ಲೊಟ್ಟೆ, ನೀನು ಅಷ್ಟು ಮಾಡೋವರೆಗೆ ನಾನೇನು ಕಡ್ಲೇಪುರಿ ತಿಂತಾ ಕೂತಿರ್ತೀನಿ ನೋಡು. ನನ್ನ ಸುದ್ದಿಗೆ ಬಂದ್ರೆ ಚೆನ್ನಾಗಿರೋಲ್ಲ"

"ಅಯ್ಯಯ್ಯೋ, ಹೆದ್ರಿಕೆ ಆಗ್ತಿದೆ ನಂಗೆ. ಕಾಪಾಡ್ರಪ್ಪೋ.....!!  ಹೋಗೆಲೇ ಚಂಬಲ್ ರಾಣಿ ಪೂಲನ್ ದೇವಿ, ಇಷ್ಟಕ್ಕೂ ನೀನು ಅಡ್ಗೆ ಮನೆಗೆ ಹೋಗದೇ ಇರೋದಲ್ಲ. ಅವ್ರೇ ನಿನ್ನ ಅಲ್ಲಿಂದ ಹೊರಗಟ್ಟಿರೋದು. ನೀನು ಒಳಗಿದ್ರೆ ಒಂದೋ ಅವರು ಮಾಡಿದ ಭಕ್ಷ್ಯ ಭೋಜನಗಳನ್ನೆಲ್ಲಾ ಎಮ್ಮೆ ಹಿಂಡಿ ಬೂಸಾ ತಿಂದ್ಹಾಗೆ ಮೇಯ್ದು ನಮ್ಮನ್ನೆಲ್ಲಾ ಉಪವಾಸ ಸಾಯೋಹಾಗೆ ಮಾಡ್ತೀಯಾ ಇಲ್ಲಾ ನಮ್ಮ ದುರಾದೃಷ್ಟಕ್ಕೆ ದೇವ್ರು ನಿಂಗೆ ಅಡುಗೆ ಮಾಡೋ ದುರ್ಬುದ್ಧಿ ಕೊಟ್ಟು ನೀನು ಮಾಡಿದ 'ಇವದೋಪೂ' ತಿಂದ್ರಂತೂ ನಾವು ಬದುಕೋ ಚಾನ್ಸೇ ಇಲ್ಲ. ಹಾಗಾಗಿ ಜೀವಭಯದಿಂದ ಲೇಡೀಸ್ ಯೂನಿಯನ್ ನಿನ್ನ ಅಡಿಗೆಮನೆಯಿಂದ ಬಾಯ್ಕಾಟ್ ಮಾಡಿದ್ದಾರೆ. ಅದಕ್ಕೆ ಇಷ್ಟೆಲ್ಲಾ ಚಮಕ್ ಬೇರೆ ಕೇಡು."

"ಅಣ್ಣಾ......‌" ಕೋಪದಿಂದ ಕನಲಿ ಎದ್ದವಳನ್ನು ನೋಡಿದ್ದೇ ಹೌಹಾರಿ ಸೋಫಾದಿಂದ ಛಂಗನೆ ನೆಗೆದ ವೈ.

"ಅಯ್ಯಮ್ಮಾ ತಾಯಿ, ದಯವಿಟ್ಟು ಸುಮ್ನಿರಮ್ಮ ಕಾಲಿಗೆ ಬೀಳ್ತೀನಿ. ನೀವಿಬ್ಬರೂ ಬಾಯಿಗೆ ಬಂದ್ಹಾಗೆ ಮಾತಾಡ್ಕೊಳ್ಳೋ ತಪ್ಪಿಗೆ ಬಲಿ ಕಾ ಬಕರಾ ಆಗಿ ಹಲಾಲ್ ಆಗೋದು ಮಾತ್ರ ನಾನೇ. ಲೋ ಬೀರ್, ಆಗ್ಲೇ ನಿಮ್ಮಿಬ್ರ ಜಗಳದ ದೆಸೆಯಿಂದ ಜಗ್ಗಲ್ಲಿ ಪೂಜೆ ಆಗಿ ನನ್ನ ಫೇಸ್ಕಟ್ಟು ಅರ್ಧ ಸ್ಕ್ರಾಪ್ ಆಗಿದೆ. ಈಗ ನೀನವ್ಳನ್ನ ಚಂಬಲ್ ರಾಣಿ ಅಂದು ಅವ್ಳು ನನ್ಗೆ ಚೊಂಬಲ್ ಹೊಡೆದ್ರೇ ನಾನು ಗುಜುರಿ ಅಂಗಡಿ ಪಾಲಾಗ್ಬೇಕಾಗುತ್ತಷ್ಟೇ..... ಆ ತರದ ಪ್ಲಾನ್ ಏನಾದ್ರೂ ಇದ್ರೆ ಮುಂಚೆನೇ ಹೇಳ್ಬಿಡು. ನಾನು ಇಲ್ಲಿಂದ ಜೂಟ್ ಆಗ್ತೀನಿ. ಆಮೇಲೆ ನೀವಿಬ್ರೂ ಕತ್ತಿವರಸೆ ಮಾಡ್ಕೊಂಡು ಸಾಯ್ರೀ" ಎಂದ.

ಈ ವಿಷಯದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗುವುದರೊಳಗೆ ಪಾಕಶಾಲಾ ತಜ್ಞರು "ಊಟ ತಯಾರಿದೆ" ಎಂದು ಕದನವಿರಾಮ ಘೋಷಿಸಿದರು. ಅಲ್ಲಿಗೆ ಚರ್ಚೆಗಳೆಲ್ಲಾ ಗುಂಡಿಗೆ ಬಿದ್ದು ಉದರಪೂಜೆಗೆ ತೊಡಗಿದರು ಎಲ್ಲರೂ.

ಊಟ ಮುಗಿಸಿ ವೈಭವನೊಂದಿಗೆ ಶರ್ಮಾ ಪರಿವಾರ ಮನೆಗೆ ವಾಪಾಸು ಹೊರಟಾಗಲೂ ಸಮನ್ವಿತಾಳಿಗೆ ಮಂಪರಿನಿಂದ ಎಚ್ಚರವಾಗಿರಲಿಲ್ಲ. ಅವಳ ಬಗ್ಗೆ ಚಿಂತಿಸುವುದು ಬೇಡವೆಂದು ಭರವಸೆ ನೀಡಿ ಕಳಿಸಿಕೊಟ್ಟರು ಮಂಗಳಾ, ನವ್ಯಾ.

"ನೀವು ಇರುವಾಗ ನಮಗೆಂತಾ ಯೋಚನೆ‌. ಇಲ್ಲಿದ್ರೆ ನಮ್ಮನೆಯಲ್ಲೇ ಇದ್ದಹಾಗೆ. ಆಗಾಗ ನಾವೂ ಬರ್ತಾ ಇರ್ತೀವಿ" ಎಂದಿದ್ದರು ಮೃದುಲಾ.

"ಅಣ್ಣ ಅಂತೂ ಆಗಾಗ ಅಲ್ಲ, ದಿನಾ ಮೂರು ಹೊತ್ತೂ ಹಾಜರಿ ಹಾಕೇ ಹಾಕ್ತಾನೆ" ಛೇಡಿಸಿದ್ದಳು ಆಕೃತಿ.

"ಅಯ್ಯೋ, ನಮ್ಮ ಡಾಕ್ಟ್ರನ್ನ ನೋಡೋಕೆ ನಾವು ಬಂದೇ ಬರ್ತೀವಪ್ಪಾ. ಅದು ನಮ್ಮ ಜನ್ಮಸಿದ್ಧ ಹಕ್ಕು. ನಿನಗ್ಯಾಕೆ ಹೊಟ್ಟೆಉರಿ...." ದಬಾಯಿಸಿ ಬಾಯಿ ಮುಚ್ಚಿಸಿದ್ದ.

ಸತ್ಯನಾರಾಯಣ ಹಾಗೂ ಮಂಗಳಾರಿಗೂ ಶರ್ಮಾರ ಸರಳತೆ, ಸಜ್ಜನಿಕೆ, ಸೋಗಿಲ್ಲದ ನೇರ ನಡವಳಿಕೆ ಬಹಳವಾಗಿ ಹಿಡಿಸಿತು. ಅಭಿರಾಮ್ ಸಮನ್ವಿತಾಳಿಗೆ ತಕ್ಕ ಜೋಡಿ ಎಂದು ಅವರೂ ಅಂದುಕೊಂಡರು. 

                 *********************

ಕಾರಿನಲ್ಲಿ ವೈಭವ್ ಮತ್ತು ಆಕೃತಿಯ ಜುಗಲ್ ಬಂದಿ ತಾರಕಕ್ಕೇರಿತ್ತು. ಅವರಿಬ್ಬರ ದಯೆಯಿಂದ ನಗೆಯ ಕಡಲಲ್ಲಿ ತೇಲುತ್ತಿದ್ದರು ಸಚ್ಚಿದಾನಂದ ಮತ್ತು ಮೃದುಲಾ. ಆದರೆ ಡ್ರೈವ್ ಮಾಡುತ್ತಿದ್ದ ಅಭಿರಾಮ್ ಮಾತ್ರ ಗಂಭೀರವಾಗಿ ಯೋಚಿಸುತ್ತಿದ್ದ. 

"ಅಭಿ ಏನು ಅಷ್ಟೊಂದು ಗಹನವಾಗಿ ಯೋಚನೆ ಮಾಡ್ತಿದ್ದೀಯಾ?" ಬಹಳ ಹೊತ್ತಿನಿಂದ ಗಂಭೀರವಾಗಿದ್ದ ಮಗನನ್ನು ಕಂಡು ಸಚ್ಚಿದಾನಂದ್ ಕೇಳಿದಾಗ ಉಳಿದ ಮೂವರೂ ತಮ್ಮ ಹಾಸ್ಯಲಹರಿಯಿಂದ ಹೊರಬಂದು ಅವನತ್ತ ನೋಟ ಹರಿಸಿದರು.

"ರಾವ್ ಅವರ ಬಗ್ಗೆ ಡ್ಯಾಡ್. ಒಮ್ಮೆ ಅವರನ್ನು ಭೇಟಿಯಾಗಿ ಮುಖಕ್ಕೆ ಉಗಿದು ಬರ್ಲಾ ಇಲ್ಲಾ ಅವ್ರ ಬಿಸ್ನೆಸ್ ಎಲ್ಲಾ ಮುಳುಗಿಸೋದಾ ಅಂತ ಯೋಚಿಸ್ತಾ ಇದ್ದೆ. ಹೇಗೂ ಕುತ್ತಿಗೆ ತನಕ ಮುಳುಗಿದ್ದಾರೇ......"  ಹೇಳಿದ.

"ಅದರ ಅಗತ್ಯವೇ ಇಲ್ಲ ಅಭಿ. ಈಗ ಅವನ ಹಣಕಾಸಿನ ಹಾಗೂ ವ್ಯವಹಾರಿಕ ಸ್ಥಿತಿ ನೆಲಕ್ಕಚ್ಚಿದೆ. ಸಾಲಗಾರರು ಕುತ್ತಿಗೆ ಮೇಲಿದ್ದಾರೆ. ಅವ್ನ ಈ ಸ್ಥಿತಿ ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರಾದ್ರೂ ಸಾಲ ಕೊಡ್ತಾರೆ ಅನ್ನೋದು ಕನಸಿನ ಮಾತು. ಸಧ್ಯದಲ್ಲೇ ಸಾಲಗಾರರು ಅವನ ಅಸೆಟ್ಸ್ ಎಲ್ಲಾ ಸೀಜ಼್ ಮಾಡ್ತಾರೆ ಅಂತಾನೂ ಸುದ್ದಿ ಇದೆ. ಸೋ ಯಾವ ಕ್ಷಣದಲ್ಲಾದ್ರೂ ಅವನು ದಿವಾಳಿಯಾಗಬಹುದು. ನಾವೇನೂ ಮಾಡೋದೇ ಬೇಡ. ಅವನ ಕರ್ಮಗಳೇ ಅವನನ್ನು ಮುಳುಗಿಸುತ್ತೆ ಬಿಡು" ಎಲ್ಲಾ ನಿಟ್ಟಿನಿಂದ ಯೋಚಿಸಿ ನುಡಿದಿದ್ದರು ಸಚ್ಚಿದಾನಂದ್.

ಸರಿ ಎಂದು ತಲೆ ಆಡಿಸಿದರೂ, "ಬಟ್ ಸ್ಟಿಲ್ ಆ ಮನುಷ್ಯನ್ನ ಒಂದು ಸಾರಿ ನೇರಾನೇರ ಭೇಟಿ ಮಾಡಿ ಮಾತಾಡದ ಹೊರತು ನನಗೆ ಸಮಾಧಾನ ಇಲ್ಲ ಡ್ಯಾಡ್. ಅವ್ರಿಂದಾಗಿ ಎಷ್ಟೆಲ್ಲಾ ಸಮಸ್ಯೆಗಳಾಯ್ತು. ಕಡೆಗೆ ಸಮನ್ವಿತಾ ಎಲ್ಲಾ ಮನಸ್ಸಿಗೆ ಹಚ್ಚಿಕೊಂಡು ಆಸ್ಪತ್ರೆ ಸೇರಿದ್ರೆ ಅಲ್ಲಿಗೂ ಬಂದು ತನ್ನ ಬೇಳೆಕಾಳು ಬೇಯಿಸ್ಕೊಳ್ಳೋಕೆ ನೋಡಿದ್ದಾರಲ್ಲ. ಅವ್ರತ್ರ ಒಂದೆರಡು ಮಾತಾಡ್ಬೇಕು" ಎಂದ.  

ಇದನ್ನೇ ನೆಪವಾಗಿಟ್ಟುಕೊಂಡು ಅಣ್ಣನ ಕಾಲೆಳೆಯಲಾರಂಭಿಸಿದಳು ಆಕೃತಿ.

"ಯಾರೋ ಒಬ್ರು ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದ್ನೇಕಾಯಿ ಹಾಗೇ ಹೀಗೆ ಅಂತ ಪ್ರವಚನ ಕೊಡ್ತಿದ್ರು. ಈಗ ನೋಡಿದ್ರೆ ಫ್ಯೂಚರಲ್ಲಿ ಅಮ್ಮಾವ್ರ ಗಂಡ ಆಗೋ ಎಲ್ಲಾ ಲಕ್ಷಣಗಳೂ ಕಾಣಿಸ್ತಾ ಇದೆ. ಇನ್ನೂ ಮದ್ವೇನೇ ಆಗಿಲ್ಲ. ಈಗ್ಲೇ ಭಾವಿ ಪತ್ನಿ ಬಗ್ಗೆ ಏನು ಕಾಳಜಿ.  ಸಚ್ಚಿದಾನಂದ ಸ್ವಾಮಿಗಳೇ ನಿಮ್ಮ ಮಗ ಹೆಂಡತಿ ಸೇವೆ ಮಾಡೋದ್ರಲ್ಲಿ ನಿಮ್ಮನ್ನೂ ಮೀರಿಸ್ತಾನೆ ನೋಡ್ತಿರಿ" ಕಿಚಾಯಿಸಿದಳು.

"ಅಬ್ಬಬ್ಬಾ, ಬಂದ್ಬಿಟ್ಲು ಸುಪ್ನಾತಿ ಸುಬ್ಬಿ. ನಾನು ಮದ್ವೆಗೆ ಓಕೆ ಅನ್ನೋಕೆ ಮುಂಚೆನೇ ನನ್ನ ಅತ್ತಿಗೆ, ನನ್ನ ಸೊಸೆ ಅಂತ ಓಡಾಡ್ತಿದ್ದೋರು ಯಾರೋ? ಮೂರೂ ಜನ ಅವಳ ಪಕ್ಷ ವಹಿಸ್ಕೊಂಡು ನನ್ನನ್ನೇ ಕ್ಯಾರೇ ಅಂತಿರ್ಲಿಲ್ಲ. ಈಗ ಬಂದ್ಬಿಟ್ಲು ನಂದೆಲ್ಲಿಡ್ಲೀ ನಂದಗೋಪಾಲ ಅಂತ...." ಅವನೂ ಬಿಡಲಿಲ್ಲ.

"ಅರ್ಥ ಆಯ್ತೇನೇ ಸುಪ್ನಾತಿ ಸುಬ್ಬಮ್ಮ" ಅಭಿಯ ಮಾತುಗಳಿಂದ ಪ್ರೇರೇಪಿತಗೊಂಡು ನಾಲಿಗೆ ಚಾಚಿ ಅಣಕಿಸಿದ ವೈಭವ್. 

"ನೋಡೋ ಆಲ್ರೆಡಿ ಅರ್ಧ ಮುಖ ಊದಿ ಆಂಬೊಡೆ ತರ ಆಗಿದೆ. ಹೀಗೇ ಆಡ್ತಿದ್ರೆ ಇನ್ನರ್ಧ ಮುಸುಡಿ ಊದಿಸಿ ತಿಥಿ ವಡೆ ಮಾಡಿ ಹಾಕ್ತೀನಷ್ಟೇ. ಬಂದ್ಬಿಟ್ಟ ಸೀಮೆಗಿಲ್ಲದ ಪತ್ತೇದಾರ" ಕೆರಳಿದ ಸರ್ಪಿಣಿಯಂತೆ ಬುಸುಗುಟ್ಟಿದಳು.

"ಅಮ್ಮಾ ತಾಯಿ, ತಾವು ಈಗ ಮಾಡಿರೋ ಡ್ಯಾಮೇಜೇ ಸಾಕು. ದಯವಿಟ್ಟು ಕ್ಷಮಿಸಿ" ಹಾಸ್ಪಿಟಲಿನಲ್ಲಿ ನಡೆದದ್ದನ್ನೆಲ್ಲಾ ಎಣಿಸಿ ಕೈ ಮುಗಿದ ವೈ.

"ಅಂದ ಹಾಗೇ ಕೇಳೋದೇ ಮರೆತೆ ನೀನ್ಯಾಕೆ ಆಸ್ಪತ್ರೆಗೆ ಬಂದಿದ್ದು? ಆರಾಮಿಲ್ವಾ ನಿನ್ಗೆ?" ಕಕ್ಕುಲತೆಯಿಂದ ವಿಚಾರಿಸಿದರು ಮೃದುಲಾ.

"ಹೂನಮ್ಮಾ, ಆರಾಮಿಲ್ಲ. ಡಿಟೆಕ್ಟಿವ್ ಹಾರ್ಟಿಗೆ ಲವ್ವು ಅನ್ನೋ ವೈರಸ್ ಅಟ್ಯಾಕ್ ಆಗಿ ಡಿಫೆಕ್ಟಿವ್ ಆಗ್ಬಿಟ್ಟಿದೆ. ಆ ರೋಗ ಉಲ್ಬಣವಾದ ಹಿನ್ನೆಲೆಯಲ್ಲಿ ಪತ್ತೇದಾರ ಬೇರೆ ದಾರಿ ಕಾಣದೇ ಆಸ್ಪತ್ರೆ ದಾರಿ ಹಿಡ್ದಿದ್ದು" ವೈ ರೋಗವನ್ನು ಗುಣಲಕ್ಷಣಗಳ ಸಮೇತ ವಿವರಿಸಿದ ಅಭಿ.

"ಏನೂ ಇವ್ನಿಗೆ ಲವ್ವಾ? ಆ ಹುಡುಗಿ ಕಥೆ ಲಬ್ ಲಬ್ಬೋ ಲಬ್ ಲಬ್ಬೋನೇ ಗ್ಯಾರಂಟಿ. ಯಾರಣ್ಣ ಈ ಬಂಪರ್ ಬಹುಮಾನ ವಿಜೇತ ಅದೃಷ್ಟವಂತೆ" ಕುತೂಹಲದಿಂದ ಕೇಳಿದಳು.

"ಚೈತಾಲಿ ಅಂತ. ಸತ್ಯಂ ರಾವ್ ಅವರ ಮಾಜಿ ಪಿ.ಎ. ಇವನ ಅತೀ ಪ್ರಿಯ ಮಡಿ ಗುಂಡಮ್ಮನ ಮೊಮ್ಮಗಳು. ಅವಳು ಇವತ್ತು ಸಮನ್ವಿತಾನ ನೋಡೋಕೆ ಆಸ್ಪತ್ರೆಗೆ ಬರ್ತೀನಿ ಅಂದಿದ್ಲು. ಅದಕ್ಕೇ ಸಾಹೇಬರು ಹುಡುಗಿ ಮಿಸ್ ಆಗಿ ಬೇರೆಯವ್ರ ಮಿಸ್ಸೆಸ್ ಆಗ್ಬಾರ್ದೂ ಅಂತ ಬೆಳಿಗ್ಗೆ ಬೀಳೋ ಮೋದಿ ಕನಸೂ ಮಿಸ್ ಮಾಡ್ಕೊಂಡು ಆಸ್ಪತ್ರೆಗೆ ಓಡೋಡಿ ಬಂದಿದ್ದು" ವಿವರಿಸಿದ.

ಎಲ್ಲರೂ ನಗುತ್ತಿದ್ದರೆ, "ಎಷ್ಟು ಚೆನ್ನಾಗಿ ತಯಾರಾಗಿ ನಾರಿ ದರ್ಶನಕ್ಕೆ ಅಂತ ಬಂದ್ರೆ ಬೆಳಿಗ್ಗೆನೆ ಮಾರಿ ದರ್ಶನ ಆಗಿ ಮಂತ್ರಾಕ್ಷತೆ ಮಂಗಳಾರತಿನೂ ಆಯ್ತು" ಎಂದ‌ ಉಬ್ಬಿದ ಹಣೆ ಸವರಿಕೊಳ್ಳುತ್ತಾ.

"ನೋಡು ವೈಭವ್, ಹುಡುಗಿ ಒಲಿಸ್ಕೊಬೇಕು ಅಂದ್ರೆ ಮೊದ್ಲು ಅಡುಗೆ ಕಲಿ. ಈ ಹೆಂಗಸರಿಗೆ ಅಡುಗೆ ಮಾಡಲು ಬರೋ ಗಂಡಸರು ಇಷ್ಟ ಆಗ್ತಾರೆ" ಸಲಹೆ ನೀಡಿದರು ಸಚ್ಚಿದಾನಂದ.

"ಓ…. ಅಡುಗೆ ಎಲ್ಲಾ ಚೆನ್ನಾಗಿ ಬರುತ್ತೆ ಅಂಕಲ್ ನನಗೆ. ನಾಳೆ ಚೈ ಡಾರ್ಲಿಂಗಿಗೆ ಪ್ರಪೋಸ್ ಮಾಡೋಕೆ ಹಾಗಲಕಾಯಿ ಹಲ್ವಾ ಮಾಡ್ಲಾ ಇಲ್ಲಾ ಬದನೇಕಾಯಿ ಪಾಯಸ ಮಾಡ್ಲಾ?" 

"ಎರಡೂ ಬೇಡ, ಸೀಗೆ ಕಾಯಿ, ಅಂಟುವಾಳ ಕಾಯಿ(ನೊರೆಕಾಯಿ) ಎರಡೂ ಸೇರಿಸಿ ಉಪ್ಪಿಟ್ಟು ಮಾಡಿ ತಿನ್ಸು" ಅದ್ಬುತ ಸಲಹೆ ನೀಡಿದಳು ಆಕೃತಿ.

"ಪತ್ತೇದಾರಿ ಪರಂಧಾಮ, ಲೋ ಮಗಾ, ಇದೆಲ್ಲಾ ಬಿಡು. ಮೊದ್ಲು ನೆಟ್ಟಗೊಂದು ಟೀ ಮಾಡೋದು ಕಲಿ ನೋಡೋಣ" ಸವಾಲೆಸೆದ ಅಭಿ.

"ಬೀರ್, ಐ ನೋ ಹೌ ಟು ಪ್ರಿಪೇರ್ ಟೀ. ನಂಗೊತ್ತು" ಎಂದ.

"ಎಲ್ಲಿ ಟೀ ಮಾಡೋಕೆ ಏನೇನು ಬೇಕೋ ಹೇಳು ನೋಡೋಣ" ಮೃದುಲಾ ತಮ್ಮದೊಂದು ಪ್ರಶ್ನೆ ಕೇಳಿದರು.

"ಅದು ಟೀ ಪೌಡರ್, ಸಕ್ಕರೆ, ಹಾಲು, ನೀರು ಬೇಕು" ಎಂದಾಗ ಎಲ್ಲರೂ ಚಪ್ಪಾಳೆ ತಟ್ಟಿದರೆ ಅಭಿ "ಶಹಾಬ್ಬಾಸ್" ಎಂದು ಅವನ ಬೆನ್ನು ತಟ್ಟಿದ. ಇದರಿಂದ ಉತ್ಸಾಹಗೊಂಡವನು ಟೀ ಮಾಡುವ ವಿಧಾನ ವಿವರಿಸಿದ.....

"ಹಾಲು, ಸಕ್ಕರೆ, ರುಚಿಗೆ ತಕ್ಕಷ್ಟು ನೀರು, ಟೀ ಪುಡಿ ಎಲ್ಲಾ ಹಾಕಿ ಕುಕ್ಕರಿನಲ್ಲಿ ಮೂರು ವಿಷಲ್ ಹಾಕ್ಸಿಬಿಟ್ಟರೇ ಮುಗೀತು.... ಟೀ ರೆಡಿ...."

ಅವನ ಮಾತು ಮುಗಿಯುವುದರೊಳಗೆ ಗಾಡಿಗೆ ಬ್ರೇಕ್ ಬಿದ್ದ ಸ್ಪೀಡಿಗೆ ಎಲ್ಲರೂ ಒಮ್ಮೆ ಮುಂದೆ ಮುಗ್ಗರಿಸಿದರು. 

"ವಾಟ್ ಈಸ್ ದಿಸ್ ಬೀರ್? ಆಲ್ರೆಡಿ ನನ್ನ ಮುಖ ಡ್ಯಾಮೇಜ್ ಮಾಡಿದ್ದೀರಾ. ಈಗ ಹೀಗೆ. ನನ್ನ ಸಾಯ್ಸೋಕೆ ದೇಶದ್ರೋಹಿಗಳತ್ರ ಸುಪಾರಿ ತಗೊಂಡಿದ್ದೀಯಾ ಹೇಗೆ?" ಎಂದವನು ಕಾರಿನಲ್ಲಿದ್ದ ಎಲ್ಲರೂ ತನ್ನನ್ನೇ ಗುರಾಯಿಸುತ್ತಿರುವುದು ಕಂಡು, "ವಾಟ್ ಹ್ಯಾಪನ್ಡ್?" ಎಂದ.

"ನಿನ್ನ ಸುಪಾರಿ ಅಲ್ಲಾ ಜರ್ದಾ, ಗುಟ್ಕಾನೂ ತಂಗೊಂಡಿದ್ದೀನಿ ಕಣಲೋ ಪಿರ್ಕಿ.... ಲೋ ಯಾವೂರ ಗಮಾರನಲೇ ನೀನು. ಟೀನ ಕುಕ್ಕರಿನಲ್ಲಿ ಮಾಡೋನು ಐರನ್ ಬಾಕ್ಸ್ ಮೇಲೆ ಅನ್ನ ಮಾಡೋಲ್ವಾ ನೀನು? ತಂದೇ... ನಿನ್ನ ಪಾದ ಜೆರಾಕ್ಸು...... ಒಂದೇ ಒಂದು ಸಹಾಯ ಮಾಡು. ನೀನು ಈ ಸಾಹಸ ಮಾಡಿದ ದಿನ ನನಗೊಂದು ಫೋನ್ ಮಾಡಿ ಹೇಳ್ಬಿಡು ಆಯ್ತಾ" ಕೈ ಮುಗಿದು ಗಾಡಿ ಚಲಾಯಿಸತೊಡಗಿದ.

"ಅಯ್ಯೋ ನಿನಗಷ್ಟು ಆಸೆನಾ ಬೀರ್, ಫೋನ್ ಮಾಡೋದು ಯಾಕೆ? ಇವತ್ತು ನಿಮ್ಮನೇಲಿ ಎಲ್ಲರಿಗೂ ನಂದೇ ಟೀ ಸೇವೆ" ಘೋಷಿಸಿದ.

"ಡಬ್ಬಾ ನನ್ಮಗನೇ ಇನ್ನೊಂದು ಸಲ ಟೀ ಸುದ್ದಿ ಎತ್ತಿದ್ರೇ ನಿನ್ನ ಎತ್ತಿ ರೋಡಿಗೆ ಬಿಸಾಕಿ ಮೇಲೆ ಬುಲ್ಡೋಜರ್ ಹತ್ತಿಸ್ಬಿಡ್ತೀನಿ ನೋಡು." 

"ರೋಡಿಗೆ ಎಸೆಯೋದೇನೋ ಸರಿ, ಆದ್ರೆ ಮೇಲೆ ಕಾರು ಹತ್ತಿಸೋದು ಬಿಟ್ಟು ಬುಲ್ಡೋಜರ್ ಯಾಕೆ ಅಂತ ಗೊತ್ತಾಗ್ಲಿಲ್ಲ?" ತನ್ನ ಅನುಮಾನ ಕೇಳಿದ. ಪಕ್ಕದಲ್ಲಿದ್ದವನ ಉರಿ ನೋಟ ಕಂಡು ಹೆದರಿ ಕೈ ಕಟ್ ಬಾಯ್ ಮುಚ್ ಪೊಸಿಶನ್ನಿನಲ್ಲಿ ಕುಳಿತ ಮನೆ ತಲುಪುವವರೆಗೂ......

              **************************

ನವ್ಯಾ ಕಾಫಿ ಹಿಡಿದು ಬಂದಾಗ ಸಮನ್ವಿತಾ, ಕಿಶೋರ್ ಇಬ್ಬರೂ ಬೆಳಗಿನ ಎಳೆ ಬಿಸಿಲಿನಲ್ಲಿ, ಮೇಲಿನ ಬಾಲ್ಕನಿಯಲ್ಲಿ ಮಾತನಾಡುತ್ತಾ  ಕುಳಿತಿದ್ದರು. ಅದು ಕಿಶೋರನ ರೂಮಿಗೆ ಅಂಟಿಕೊಂಡಿದ್ದ ಬಾಲ್ಕನಿ. ಅದರ ತುಂಬಾ ತರಹೇವಾರಿ ಹೂವಿನ ಗಿಡಗಳನ್ನು ಬೆಳೆಸಿದ್ದಳು ನವ್ಯಾ. ಮಧ್ಯದಲ್ಲಿ ಒಂದು ಟೇಬಲ್, ಆರು ಚೇರುಗಳಿದ್ದವು. ಭಾನುವಾರದ ಸಂಜೆಯ ಟೀ ಸಮಯಕ್ಕೆ ಈ ಜಾಗ ಮೀಸಲು. ಎತ್ತರದಲ್ಲಿದ್ದುದರಿಂದ ಚೆನ್ನಾಗಿ ಗಾಳಿಯೂ ಬೀಸುತ್ತಿತ್ತು. ವಿವಿಧ ಹೂಗಳ ಕಂಪು, ಹಿತವಾದ ಗಾಳಿ, ಎಳೆ ಬಿಸಿಲು….... ಒಟ್ಟಾರೆ ಆಹ್ಲಾದಕರವಾಗಿತ್ತು. 

"ನವ್ಯಾ, ನಿನ್ನ ಗಾರ್ಡನ್ ತುಂಬಾ ಚೆನ್ನಾಗಿದೆ ಕಣೆ" ಕಾಫಿ ತೆಗೆದುಕೊಳ್ಳುತ್ತಾ ಸಮನ್ವಿತಾ ಹೇಳಿದಾಗ ನಕ್ಕು, ಇನ್ನೊಂದು ಕಪ್ ಕಿಶೋರನಿಗೆ ನೀಡಿ, "ಅದೆಲ್ಲಾ ಆಮೇಲೆ ನೋಡೋಣ. ನೀರು ಬಿಸಿ ಇದೆ. ಕಾಫಿ ಕುಡಿದು ಮೊದ್ಲು ಸ್ನಾನ ಮಾಡಿ ಕೆಳಗೆ ಬಾ, ತಿಂಡಿ ತಿನ್ನೋಣ. ಅಮ್ಮ ಸಿರಿಧಾನ್ಯಗಳ ದೋಸೆಗೆ ರೆಡಿ ಮಾಡಿದ್ದಾರೆ. ನಿನ್ನೆ ರಾತ್ರಿ ಇಂಜೆಕ್ಷನ್ ಮಂಪರೇ ಆಗೋಯ್ತು. ಏನೂ ತಿಂದಿಲ್ಲ. ಬೇಗ ಬಾ" ಎಂದು ಅಡುಗೆಮನೆಗೆ ನಡೆದಳು. ಬೆಳಿಗ್ಗೆ ಅವಳು ತುಂಬಾ ಬ್ಯುಸಿಯೇ.

"ಅವಳು ಹೇಳಿದ್ದು ಸರಿಯೇ. ಬೇಗ ಸ್ನಾನ ಮುಗ್ಸು. ಎಲ್ಲಾ ಒಟ್ಟಿಗೆ ತಿಂಡಿ ತಿನ್ನೋಣ. ಇಲ್ಲಾಂದ್ರೆ ಈಗ ತಿಂಡಿ ತಿನ್ಸೋಕೆ ಅಭಿರಾಮ್ ಬಂದ್ಬಿಡ್ತಾರೆ. ಆಲ್ರೆಡಿ ಬೆಳಿಗ್ಗೆ ಮುಂಚೆನೇ ಫೋನ್ ಮಾಡಿ ವಿಚಾರಿಸಿಕೊಂಡ್ರು....." ಕಿಶೋರ್ ಮಾತು ಕೇಳಿ ಅವಳ ಮನಸ್ಸಿಗೆ ಹಾಯೆನಿಸಿತು. ಇಂತಹ ಕಾಳಜಿಯನ್ನೇ ಮನ ಬಯಸುವುದು. ಇದೇ ಚಿಕ್ಕಂದಿನಿಂದಲೂ ಮರೀಚಿಕೆ ಅವಳ ಪಾಲಿಗೆ. ಇದುವರೆಗೆ ಇಂತಹ ಕಾಳಜಿ ತೋರಿದ್ದು ಕಿಶೋರ್ ಹಾಗೂ ನವ್ಯಾ. ಅದಕ್ಕೆ ಅವಳ ಬದುಕಿನಲ್ಲಿ ಅವರು ಸ್ಥಾನ ಬಹಳ ಎತ್ತರದ್ದು. ಈಗ ಹೊಸದಾಗಿ ಚಿಗುರೊಡೆದ ಬಂಧವೊಂದು ಬಳ್ಳಿಯಂತೆ ಬದುಕನ್ನು ಆವರಿಸುತ್ತಿತ್ತು. ಅದರ ಕಾಳಜಿ, ಅಕ್ಕರೆಯೂ ಮಲ್ಲಿಗೆ ಮೊಗ್ಗಿನಿಂದ ಸೆರೆಯೊಡೆದ ಗಂಧದಂತೆ ಮನಸಿಗೆ ಹಿತ. ಅವಳ ಕದಪುಗಳು ರಾಗರಂಜಿತವಾದವು.

"ಓಹೋ! ಏನು ಮೇಡಂ, ಅಭಿರಾಮ್ ಬಗ್ಗೆ ಹೇಳಿದ್ದೇ ಎದುರು ಕೂತಿರೋ ಸ್ನೇಹಿತನೂ ಮರೆಯೋವಷ್ಟು ಗುಂಗು.... ಹಾಗಿದ್ರೆ ತಿಂಡಿ ತಿನ್ನಿಸೋಕೆ ಅವ್ರನ್ನೇ ಕರ್ಯೋದು ಒಳ್ಳೇದಾ ಅಂತ?" ಛೇಡಿಸಿದ‌.

"ಕಿಶೋರ್!" ಹೊಡೆಯುವಂತೆ ಕೈಯೆತ್ತಿದವಳು, "ಸುಮ್ನೆ ರೇಗಿಸ್ಬೇಡಾ ನನ್ನ….." ತೋರು ಬೆರಳು ತೋರಿ ವಾರ್ನಿಂಗ್ ಕೊಟ್ಟಳು. ಕ್ಷಣಗಳ ತರುವಾಯ,

"ಹೇ ಕಿಶೋರ್, ಮೊನ್ನೆ ಆಸ್ಪತ್ರೆಲೀ ನವ್ಯಾ ಹತ್ರ ಅದೇನೋ ಕನಸು ಅಂತ ಕೇಳ್ತಿದ್ಯಲ್ಲಾ ಏನದು?" ನೆನಪಿಸಿಕೊಂಡು ಕೇಳಿದಾಗ ಅವನು ನಿಡಿದಾದ ಉಸಿರು ದಬ್ಬಿದ.

"ಹೇಳು ಅದೇನು ಅಂತ. ಇತ್ತೀಚೆಗೆ ಅವಳ್ಯಾಕೋ ತುಂಬಾ ಡಿಸ್ಟರ್ಬ್ ಆಗಿರುತ್ತಾಳೆ. ಬಿಳುಚಿಕೊಂಡು ಕಾಯಿಲೆ ಬಂದೋರ ತರ ಆಗಿದ್ದಾಳೆ. ಏನಾಗಿದೆ?" ಒತ್ತಾಯಿಸಿ ಕೇಳಿದಾಗ ಅವನಿಗೆ ಹೇಳುವುದು ಅನಿವಾರ್ಯವಾಯಿತು.

ಅವಳ ಕನಸುಗಳ ಬಗ್ಗೆ ವಿವರಿಸಿದವನು, "ಇದೇ ಅವಳಿಗೊಂದು ಶಾಪದ ತರ ಆಗಿದೆ ಕಣೇ. ಅಮ್ಮ ಅಪ್ಪ ತೀರ್ಥಯಾತ್ರೆ ಹೋದಾಗಿಂದ ಶುರುವಾಗಿರೋದು. ಅವ್ಳಿಗೆ ಭಯ. ಅವಳ ದೆಸೆಯಿಂದ ನನ್ಗೇ ಮತ್ತೆ ನಿನ್ಗೆ ತೊಂದರೆ ಆಗುತ್ತೆ, ಕೆಟ್ಟದಾಗುತ್ತೆ ಅಂತ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗೀ ಕೊರಗೀ ಹೀಗಾಗಿದ್ದಾಳೆ ನೋಡು. ನಾನೂ ಸಮಾಧಾನ ಮಾಡಿ ಸಾಕಾಯ್ತು. ಆದ್ರೆ ಅವಳ ಮನಸ್ಸಿನ ಭಯವೂ ಒಂದು ರೀತಿ ಸರಿಯೇ. ಮನೆಯವರಿಂದ, ಅಮ್ಮನಿಂದ ವಿಷಯ ಮುಚ್ಚಿಟ್ಟಿರೋದು ಹೇಳಲಾರದಂತಹ ಪಾಪಪ್ರಜ್ಞೆಯಾಗಿ ಅವಳನ್ನು ಕಾಡ್ತಿದೆ. ತೀರ್ಥಯಾತ್ರೆಗೆ ಹೋದಾಗಿಂದ ಇವಳ ಯೋಚನೆಗಳು ವಿಪರೀತವಾಗಿ ಅದೇ ಕನಸಲ್ಲೂ ಬರೋಕೆ ಶುರುವಾಗಿದೆ. ಅವಳ ಕಷ್ಟ ನೋಡೋಕಾಗ್ತಿಲ್ಲ ಸಮನ್ವಿತಾ......" ಮುಖ ಕಿವುಚಿದ.

ಅವಳಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನವ್ಯಾಳಿಗೊಂದು ಸುಭದ್ರ, ಸುಂದರ ಬದುಕನ್ನು ಕಟ್ಟಿಕೊಡುವ ಭರದಲ್ಲಿ ಅವಳ ಅಂತರಾತ್ಮದ ಕೂಗನ್ನು ನಿರ್ಲಕ್ಷ್ಯಿಸಿದೆವೇನೋ ಎಂದು ಅನಿಸತೊಡಗಿತು. ಮದುವೆಗೆ ಮೊದಲೇ ಇರುವ ವಿಷಯವನ್ನೆಲ್ಲಾ ಮನೆಯವರಿಗೆ ಹೇಳೋಣ ಎಂದು ಪಟ್ಟುಹಿಡಿದಿದ್ದಳು ನವ್ಯಾ. ನಾವೇ ಅವಳ ಮಾತನ್ನು ತಳ್ಳಿಹಾಕಿ ಅವಳನ್ನು ಒಪ್ಪಿಸಿದ್ದು. ಈಗ ಅದೇ ವಿಷಯ ಅವಳ ನೆಮ್ಮದಿಗೆ ಬೆಂಕಿ ಹಾಕಿದೆ. ಇದಕ್ಕೆ ಪರಿಹಾರವೆಂತು? ಯೋಚಿಸಿದಷ್ಟೂ ಅವಳ ತಲೆಕೆಡತೊಡಗಿತು.... ಕೊನೆಗೊಮ್ಮೆ,

"ಈಗೇನು ಮಾಡೋದು ಕಿಶೋರ್, ಇದೇ ರೀತಿ ಮುಂದುವರೆದ್ರೆ ಅವಳು ಮಾನಸಿಕ ರೋಗಿಯಾಗ್ತಾಳಷ್ಟೇ. ಇದಕ್ಕಾ ನಾನವಳನ್ನು ಆ ನರಕದಿಂದ ಹೊರತಂದಿದ್ದು? ಇವಳ ಸ್ಥಿತಿ ನೋಡಿದ್ರೆ ಜಾಸ್ತಿ ದಿನ ತಡೆಯೋಲ್ಲ. ಯಾವ ಕ್ಷಣದಲ್ಲಾದ್ರೂ ಅವಳ ಒಡಲ ಬೇಗುದಿ ಸಿಡಿಯಬಹುದು. ಆಗ ತಾನೇ ಎಲ್ಲಾ ವಿಷಯ ಅಮ್ಮನತ್ರ ಹೇಳ್ತಾಳೆ. ಅವ್ರು ಹೇಗೆ ರಿಯಾಕ್ಟ್ ಮಾಡಬಹುದು? ನನಗ್ಯಾಕೋ ಭಯ ಕಣೋ…….... ಏನು ಮಾಡೋದು?" ಅಸಹಾಯಕತೆಯಿಂದ ಕೇಳಿದಳು.

ಸ್ವಲ್ಪ ಹೊತ್ತು ಸುಮ್ಮನಿದ್ದವನು ಒಮ್ಮೆಲೆ, "ನಾನು ಆಫೀಸಲ್ಲಿ ಟ್ರಾನ್ಸಫರ್ ರಿಕ್ವೆಸ್ಟ್ ಮಾಡಿದ್ದೀನಿ ಸಮಾ. ಅಹಮದಾಬಾದ್ ಗೆ" ಎಂದುಬಿಟ್ಟ.

ಅವನ ಈ ನಡೆಯ ನಿರೀಕ್ಷೆಯೇ ಇಲ್ಲದ ಸಮನ್ವಿತಾ ಅಚ್ಚರಿಯಿಂದ ಅವನನ್ನೇ ದಿಟ್ಟಿಸಿದಳು.

        *******ಮುಂದುವರೆಯುತ್ತದೆ*******












     



ಅನೂಹ್ಯ 35

ಅದೇ ಸಂಧ್ಯೆಯ ಹೊನ್ನಿನ ಬೆಡಗನ್ನು ಆಸ್ವಾದಿಸುತ್ತಾ ತನ್ನ ಆತ್ಮದಂತಹಾ ಗೆಳತಿಗೆ ಪ್ರೇಮ ನಿವೇದಿಸಲು ರಾಶಿ ಕನಸುಗಳ ಚಾದರ ಹೊದ್ದು ಹೊರಟಿದ್ದ ಅಭಿರಾಮ್....

ತನ್ನ ಬದುಕಿನಲ್ಲಿ ಇಂತಹದ್ದೊಂದು ಅನಿರೀಕ್ಷಿತ ತಿರುವು ಬಂದೊದಗಬಹುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಅವನು. ಪ್ರೀತಿ ಪ್ರೇಮ ಎಂದೂ ಅವನ ಆದ್ಯತೆಯಾಗಿರಲಿಲ್ಲ. ತನ್ನ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಎಂದೂ ಅಂತಹದಕ್ಕೆ ಆಸ್ಪದವಿತ್ತಿರಲಿಲ್ಲ. ಅವನ ಲಕ್ಷ್ಯವೆಲ್ಲಾ ಓದು, ಕೆಲಸ, ಸಂಗೀತ, ಸಾಹಿತ್ಯ ಹಾಗೂ ಬಣ್ಣಗಳ ನಡುವೆ ಹುದುಗಿತ್ತು. ಹಾಗಂತ ಅವನು ಪ್ರೀತಿ, ಪ್ರೇಮವೆಂದರೆ ಎಂದರೆ ಸಿಡುಕು ಮೋರೆ ತೋರುವ, ಮದುವೆಯ ಬಂಧವೇ ಬೇಡವೆಂಬ ಮನಸ್ಥಿತಿಯವನಲ್ಲ. ಅಪ್ಪ ಅಮ್ಮ ಆರಿಸಿದ ಹುಡುಗಿಯನ್ನೇ ಮದುವೆಯಾಗಬೇಕೆಂಬ ಮನೋಭಿಲಾಷೆ ಅವನದು. ಅರೇಂಜ್ ಮ್ಯಾರೇಜ್ ಅವನ ಮನಕ್ಕೆ ಹಿತ. 

ಎಲ್ಲೋ ಹುಟ್ಟಿ ಬೆಳೆದ ಎರಡು ಅಪರಿಚಿತ ಜೀವಗಳನ್ನು ಮದುವೆಯೆಂಬ ಮೂರು ಗಂಟಿನ ನಂಟು ಜೀವನಪರ್ಯಂತ ಬೆಸೆಯುವ ಪರಿಕಲ್ಪನೆಯೇ ಅವನ ಪಾಲಿಗೆ ರೋಮಾಂಚಕಾರಿ. ಘಳಿಗೆಗೆ ಮುಂಚೆ ಏನೂ ಅಲ್ಲದವಳು ಕ್ಷಣ ಮಾತ್ರದಲ್ಲಿ ತನ್ನ ಬದುಕಿನ ಸರ್ವಸ್ವವೂ ಆಗುವುದು ಅದೆಷ್ಟು ಸೋಜಿಗ? ಗಂಡಿಗೆ ವಿವಾಹವೆಂದರೆ ಸಂಗಾತಿಯೆಂಬ ಸಹಚಾರಿಣಿಯ ಆಗಮನವಷ್ಟೇ. ಆದರೆ ಹೆಣ್ಣಿಗೆ? ಆಕೆಗೆ ವಿವಾಹವೆಂದರೆ ಹತ್ತು ಹಲವು ಭಾವನೆಗಳು ಮೇಳೈಸುವ ಸಂಪುಟ. ತನ್ನವರನ್ನು ತೊರೆದು ಹೊಸ ಮನೆ, ಮನಸ್ಸುಗಳನ್ನು ತನ್ನವರನ್ನಾಗಿಸಿಕೊಳ್ಳುವ ಸವಾಲು, ಅವರ ರೀತಿನೀತಿಗಳಿಗೆ ಹೊಂದಿಕೊಳ್ಳುವ ಪರೀಕ್ಷೆ, ಅಲ್ಲಿಯವರೆಗೆ ಮುಚ್ಚಟೆಯಾಗಿ ಬೆಳೆದವಳ ಹೆಗಲ ಮೇಲೆ ಒಮ್ಮೆಲೇ ಏರುವ ಸಂಸಾರವೆಂಬ ಜವಾಬ್ದಾರಿಯ ನೊಗವನ್ನು ಯಶಸ್ವಿಯಾಗಿ ಹೊರುವ ಸವಾಲು, ಮಡದಿ, ಸೊಸೆ, ನಾದಿನಿ, ಅತ್ತಿಗೆ, ಗೃಹಿಣಿ ಎಂಬ ಹಲವು ಪಾತ್ರಗಳನ್ನು ಸಮಾನಾಂತರವಾಗಿ ನಿಭಾಯಿಸುವ ಸವಾಲು. ಇವೆಲ್ಲಕ್ಕಿಂತ ಹೆಚ್ಚಾಗಿ ತವರಿನ ಅಗಲಿಕೆಯ ನೋವನ್ನು ನುಂಗಿ ಹೊಸ ಜಾಗ ಹಾಗೂ ಜನರ ನಡುವೆ ಮನದಲ್ಲಿ ಕಾಡುವ ಹಿಂಜರಿಕೆ, ಅಸುರಕ್ಷಿತ ಭಾವಗಳನ್ನು ಮೀರಿ ಅವರೊಡನೆ ಬೆರೆತು, ತನ್ನವರನ್ನಾಗಿಸಿಕೊಳ್ಳುವ ಸವಾಲು….. ಅದೆಲ್ಲವನ್ನೂ ನಿಭಾಯಿಸುತ್ತಾಳೆ ಆಕೆ. ಅದೇ ಗಂಡಿಗೆ ಈ ಸವಾಲುಗಳು ಎದುರಾಗಿದ್ದರೆ? ನಿಭಾಯಿಸಬಲ್ಲನೇ? ಇಲ್ಲವೆನಿಸುತ್ತಿತ್ತು ಅವನಿಗೆ. ಗಂಡು 'ನಾನು' ಎಂಬ ಪುರುಷಾಹಂಕಾರದಿಂದ ಮೆರೆಯಬಹುದು. ಆದರೆ ಅವಳಿಲ್ಲದೇ ತಾನು ಸಂಪೂರ್ಣನಲ್ಲ ಎಂಬ ಸತ್ಯ ಅವನಿಗೂ ತಿಳಿದಿರುತ್ತದೆ. ಗಂಡು ಸಬಲ, ಹೆಣ್ಣು ಅಬಲೆ, ಅವನ ಆಶ್ರಯವಿಲ್ಲದೇ ಅವಳು ಬದುಕಲಾರಳು ಎಂಬೆಲ್ಲಾ ರೂಢಿಗತ ಮಾತುಗಳ ನಡುವೆ, ಆ ಅಬಲೆಯ ಸಹಕಾರ ಇಲ್ಲದೇ ಈ ಸಬಲ ಹೊಣೆಗಾರಿಕೆ ನಿಭಾಯಿಸಲಾರ ಎಂಬುದೂ ವಾಸ್ತವಿಕ. ಹೆಣ್ಣು ಎಷ್ಟು ಸೂಕ್ಷ್ಮ ಹಾಗೂ ಕೋಮಲೆಯೋ ಅಷ್ಟೇ ಪ್ರಬಲೆ ಹಾಗೂ ದೃಢ ಮನಸ್ಕಳೂ ಹೌದು. ರಚ್ಚೆ ಹಿಡಿದ ಮಗುವಿಗೆ ತಾಯಿಯ ಮಡಿಲು ಹೇಗೋ, ಹಾಗೆಯೇ ಗಂಡಿಗೆ ಹೆಣ್ಣಿನ ಆಸರೆ. ಇದು ಎಲ್ಲಾ ಗಂಡಸರಿಗೂ ತಿಳಿದಿದ್ದರೂ ತಮ್ಮ ಅಹಂ ಬದಿಗಿಟ್ಟು ಅದನ್ನು ಒಪ್ಪಿಕೊಳ್ಳುವವರು ಕಡಿಮೆ. ಆದರೆ ಅವನಿಗೆ ಅದನ್ನು ಒಪ್ಪಿಕೊಳ್ಳಲು ಯಾವುದೇ ಹಿಂಜರಿಕೆ, ಕೀಳರಿಮೆ ಖಂಡಿತಾ ಇಲ್ಲ. ಅದಕ್ಕೆ ಕಾರಣ ಸಚ್ಚಿದಾನಂದ್ ಹಾಗೂ ಮೃದುಲಾ. ಅವರದ್ದು ಮನೆಯವರು ನಿಶ್ಚಯಿಸಿದ ವಿವಾಹವಾದರೂ ಪ್ರೀತಿಸಿ ಮದುವೆಯಾದವರಿಗಿಂತ ಹೆಚ್ಚಿನ ಹೊಂದಾಣಿಕೆ, ಸಹಭಾಗಿತ್ವವಿತ್ತು ಅವರಲ್ಲಿ. ಅದಕ್ಕೂ ಹೆಚ್ಚಾಗಿ ಪರಸ್ಪರ ಮಾತು, ನಿರ್ಧಾರಗಳಲ್ಲಿ ಗೌರವವಿತ್ತು. ಆಕೆ ಅಚ್ಚುಕಟ್ಟಾಗಿ ಪರಿಪಕ್ವತೆಯಿಂದ ಸಂಸಾರವನ್ನು ನಿಭಾಯಿಸಿದ್ದರಿಂದಲೇ ತಾನು ಔದ್ಯೋಗಿಕವಾಗಿ ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಚ್ಚಿದಾನಂದ್. ಅಪ್ಪ ಅಮ್ಮನ ಅನುರೂಪ ದಾಂಪತ್ಯವೇ ಅವನ ಅರೇಂಜ್ ಮ್ಯಾರೇಜ್ ಆಸೆಯ ಬೆನ್ನೆಲುಬಾಗಿದ್ದಿದ್ದು. ಅವನು ಆ ಬಗ್ಗೆ ಅಚಲನಾಗಿದ್ದ....... ವರ್ಷಗಳ ಹಿಂದೆ ಸಮನ್ವಿತಾಳನ್ನು ಪೋಲೀಸ್ ಸ್ಟೇಷನ್ನಿನಲ್ಲಿ ನೋಡುವವರಿಗೆ.......

ಠಾಣೆಯಲ್ಲಿ ಅವಳನ್ನು ಕಂಡ ದಿನ ಮೊದಲ ಬಾರಿಗೆ ಅವನ ಮನಸ್ಸು ವಿಚಲಿತಗೊಂಡಿತ್ತು. ಕಾರಣ ಬದುಕಿನ ಬಗ್ಗೆ ಅವಳ ಸ್ಪಷ್ಟ ನಿಲುವು. 'ಜನ ಏನೆನ್ನುತ್ತಾರೆ?' ಎಂಬ ಯೋಚನೆಯ ಗೊಡವೆಗೆ ಹೋಗದೇ ವೇಶ್ಯಾವಾಟಿಕೆಯ ಕಬಂಧ ಬಾಹುಗಳಿಂದ ಹುಡುಗಿಯರನ್ನು ಬಿಡಿಸಿದವಳ ಛಾತಿ ಅವನನ್ನು ದಂಗು ಬಡಿಸಿತ್ತು. ಜೀವನದಲ್ಲಿ ಪ್ರಥಮವಾಗಿ ಆಕೆಯನ್ನು ಅರಸಿದ್ದ. ಸಿಗದಿದ್ದಾಗ 'ಅರೇ.....ತಾನೇಕೆ ಅವಳನ್ನು ಹುಡುಕುತ್ತಿರುವೆ' ಎಂದು ಪ್ರಶ್ನಿಸಿಕೊಂಡಿದ್ದ. ಪ್ರೀತಿಸುತ್ತಿರುವೆನೆಂದು ಒಪ್ಪಿಕೊಳ್ಳಲು ಅವನ ಅಚಲ ನಿರ್ಧಾರ ಅಡ್ಡಿಯಾಗಿತ್ತು. ಅವಳ ನಿಲುವು, ದೃಢತೆಯನ್ನು ಮೆಚ್ಚಿ ಸ್ನೇಹಹಸ್ತ ಚಾಚಲಷ್ಟೇ ಅರಸುತ್ತಿರುವೆ ಎಂಬುದನ್ನು ಅಂತರಾತ್ಮ ಒಪ್ಪಿರಲಿಲ್ಲ. ಈ ನಿರ್ಧಾರ ಹಾಗೂ ಅಂತರಾತ್ಮದ ಕಲಹದಲ್ಲಿ ಆ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ ಅವನಿಗೆ. ಹಾಗಾಗಿ ಏನನ್ನೂ ನಿರ್ಧರಿಸದೇ ಅವಳನ್ನು ತನ್ನ ನೆನಪಿನ ಮೂಲೆಯಲ್ಲೆಲ್ಲೋ ಹುದುಗಿಸಿ ಮರೆತಿದ್ದ ಅಥವಾ ಮರೆತಂತೆ ನಟಿಸಿದ್ದನೇನೋ….... 

ಆದರೆ ವಿಧಿ ವಿಲಾಸ ವಿಚಿತ್ರವಲ್ಲವೇ........ ವರ್ಷಗಳ ನಂತರ ಅವಳು ಅವನ ಕಣ್ಮುಂದೆ ಬಂದಿದ್ದಳು. ಉದ್ದೇಶವೇನೇ ಇದ್ದರೂ ವಿಸ್ಮಯವೆಂಬತೆ ಈ ಭೇಟಿ ಅವರಿಗೇ ತಿಳಿಯದಂತೆ ಇಬ್ಬರ ಕವಲು ಹಾದಿಗಳನ್ನು ಬೆಸೆದು ಒಂದಾಗಿಸುವ ಹುನ್ನಾರವಾಗಿತ್ತು. ಅವಳನ್ನು ಎಲ್ಲಿ ನೋಡಿರುವೆನೆಂದು ನೆನಪಿಸಿಕೊಳ್ಳುವ ತವಕವನ್ನೇ ಅತಿಯಾಗಿ ಪ್ರೀತಿಸಿದ್ದನಾತ. ಅವಳನ್ನು ನೆನಪಿಸಿಕೊಳ್ಳುವುದೇ ಒಂದು ಸಂಭ್ರಮವಾಗಿತ್ತು ಮನಕ್ಕೆ. ಅಂತಹ ಹಿತವಾದ ಅನುಭವವನ್ನು ಕಸಿದಿದ್ದು ರಾವ್ ಅವರ ಪ್ರಸ್ತಾಪ. ಆ ನಂತರದಲ್ಲಿ ತನ್ನ ಮನಸ್ಸು, ಹೃದಯದ ಮಾತಿಗೆ ವಿರುದ್ಧವಾಗಿ ಅವಳನ್ನು ದ್ವೇಷಿಸಲು ಪ್ರಯತ್ನಿಸಿ ಹಿಂಸೆ‌ ಅನುಭವಿಸಿದ್ದ. ಅಪ್ಪ, ಅಮ್ಮ, ಆಕೃತಿ ಮೂವರು ಅವಳನ್ನೇ ವಹಿಸಿಕೊಂಡು ಪಟ್ಟು ಹಿಡಿದಾಗ ಅಪ್ಪ ಅಮ್ಮ ಒಪ್ಪಿದ ಹುಡುಗಿಯನ್ನೇ ಮದುವೆಯಾಗಬೇಕೆಂಬ ತನ್ನ ನಿಲುವನ್ನು ತಾನೇ ಶಪಿಸಿ, ಕೋಪಿಸಿಕೊಂಡಿದ್ದ ಅವಳ ಮೇಲೆ. ಅವಳು ಮನೆಗೆ ಬಂದ ದಿನ ನಡೆದ ಘಟನೆಗಳು, ಅವಳ ನಡವಳಿಕೆ, ಅರಿವಾದ ಸತ್ಯ ಅವನನ್ನು ಗೊಂದಲಕ್ಕೆ ದೂಡಿದ್ದು ಸುಳ್ಳಲ್ಲ. ಅವಳನ್ನು ಒಪ್ಪಿಕೊಳ್ಳಲಾರದೇ ಇತ್ತ ಕಡೆ ದ್ವೇಷಿಸಲೂ ಸಾಧ್ಯವಾಗದೆ ಒದ್ದಾಡಿಹೋಗಿದ್ದ.

ಆದರೆ ಆಸ್ಪತ್ರೆಯಲ್ಲಿ ನವ್ಯಾಳನ್ನು ಕಂಡ ಕ್ಷಣದಲ್ಲಿ ಮೋಡಕವಿದ ಮನದಲ್ಲಿ ಜಡಿಮಳೆಯಾಗಿ ತಮವೆಲ್ಲಾ ಕಳೆದು ಮನದ ಬಾನಿನಲ್ಲಿ ಉಷೆಯ ಆಗಮನವಾಗಿತ್ತು. ವರ್ಷಗಳ ಹಿಂದೆ ತನ್ನ ನಿಲುವನ್ನು ಅಲುಗಾಡಿಸಿ ಕಾಡಿದಾಕೆ, ತಾನು ಮಾಸಗಟ್ಟಲೆ ಅರಸಿದರೂ ಸಿಗದೇ ಮರೆಯಾದ ಮಾಯಾ ಜಿಂಕೆ, ತನಗೇ ತಿಳಿಯದಂತೆ ಮನದೊಳಗೇ ವರ್ಷಗಟ್ಟಲೇ ಸುಪ್ತವಾಗಿ ಉಳಿದಾಕೆ ಇವಳೇ ಎಂಬುದು ಬಹಳ ಸ್ಪಷ್ಟವಾಗಿತ್ತು ಅವನಿಗೆ. ಎಲ್ಲಕ್ಕಿಂತ ಸಂತೋಷವೆಂದರೆ ತಾನು‌ ಮನದಲ್ಲಿ ಧ್ಯಾನಿಸಿದವಳೇ ತನ್ನ ಅಪ್ಪ ಅಮ್ಮನ ಆಯ್ಕೆಯೂ ಕೂಡಾ...... ಇಷ್ಟಾದ ಮೇಲೆ ಅವನ ಖುಷಿಗೆ ಎಣೆಯುಂಟೇ? ನವ್ಯಾಳನ್ನು ಕಂಡು ಎಲ್ಲಾ ನೆನಪಾದ ಕ್ಷಣವೇ ಸಮನ್ವಿತಾಳೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕೆಂದುಕೊಂಡಿದ್ದ. ಆದರೆ ಪರಿಸ್ಥಿತಿ ವೈಪರೀತ್ಯದಿಂದಾಗಿ ಸುಮ್ಮನಾಗಿದ್ದ. ಆ ಸುದಿನ ಇಂದು ಒದಗಿ ಬಂದಿತ್ತು.

ಮನದ ತುಂಬಾ ಹರುಷ ಹುಚ್ಚು ಹೊನಲು…...

ಅವನ ಆ ಸುಂದರ ಪ್ರೇಮ ಸಂಜೆಯ ಆಹ್ಲಾದಕ್ಕೆ ಜೊತೆಯಾದದ್ದು ಕಿಶೋರ್ ಕುಮಾರ್ ಅವರ ಮಾಂತ್ರಿಕ ಧ್ವನಿ. ಅದರೊಂದಿಗೆ ತಾನೂ ದನಿಗೂಡಿಸುತ್ತಾ ಸಾಗಿದ್ದ.

ತೂ ಕ್ಯಾ ಜಾನೇ ತೇರೀ ಖಾ಼ತಿರ್ ಕಿತನಾ ಹೆ ಬೇತಾಬ್ ಎ ದಿಲ್

ತೂ ಕ್ಯಾ ಜಾನೇ ದೇಖ್ ರಹಾ ಹೆ ಕೈಸೇ ಕೈಸೇ ಕ್ವಾಬ್ ಎ ದಿಲ್

ದಿಲ್ ಕೆಹತಾ ಹೆ, ತೂ ಹೆ ಯಹಾ ತೋ ಜಾತಾ ಲಮ್ಹಾ ಥಮ್ ಜಾಯೇ

ವಕ್ತ್ ಕ ದರಿಯಾ ಬೆಹತೇ ಬೆಹತೇ ಇಸ್ ಮಂಜ಼ರ್ ಮೆ ಜಮ್ ಜಾಯೇ

ತೂನೇ ದಿವಾನಾ ದಿಲ್ ಕೊ ಬನಾಯಾ ಇಸ್ ದಿಲ್ ಪರ್ ಇಲ್ಜಾಮ್ ಹೆ ಕ್ಯಾ?

ಸಾಗರ್ ಜೈಸೀ ಆಂಕೋ ವಾಲಿ ಯೆ ತೊ ಬತಾ ತೆರಾ ನಾಮ್ ಹೆ ಕ್ಯಾ?

ಹಾಡಿನ ಮುಕ್ತಾಯದೊಂದಿಗೆ ಅವನ ಕಾತರತೆಯ ಪಯಣವೂ ಅಂತ್ಯಗೊಂಡು ತನ್ನ ಗಮ್ಯ ತಲುಪಿದ್ದ.  ಮೊದಲಿಗೆ ಮೀರಾರೊಂದಿಗೆ ಮಾತನಾಡಿ ಅವಳ ಆರೋಗ್ಯದ ಬಗ್ಗೆ ವಿಚಾರಿಸಿದ. ಅವರು ನಾಳೆಯೇ ಡಿಸ್ಚಾರ್ಜ್ ಮಾಡುವ ಎಂದಾಗ ಮನಸ್ಸು ಹಗುರಾಯಿತು. ಅವರೊಂದಿಗೆ ನಾಲ್ಕು ಮಾತನಾಡಿ ಹಾರುವ ನಡಿಗೆಯಲ್ಲೇ ವಾರ್ಡಿನ ಬಳಿ ಬಂದಿದ್ದ.

"ಗುಡ್ ಇವ್ನಿಂಗ್ ಫೋಕ್ಸ್" ಎಂಬ ಧ್ವನಿ ಕೇಳಿ ತಮ್ಮ ಹರಟೆ ಕೊಂಚ ನಿಲ್ಲಿಸಿ ಬಾಗಿಲ ಕಡೆ ಗಮನ ಹರಿಸಿದರು.

"ಹಾಯ್ ಅಭಿರಾಮ್. ಇಷ್ಟು ಬೇಗ ಸಂಜೆ ಆಯ್ತಾ? ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ" ಎಂದು ತಲೆಕೆರೆದು ಕೊಂಡ ಕಿಶೋರ್.

"ಅಬ್ಬಾ, ಹೇಗೂ ನೀವು ಬಂದ್ರಲ್ಲ. ಇನ್ಮೇಲೆ ಈ ಜಗಳಗಂಟಿ ಹುಡುಗಿ ಜವಾಬ್ದಾರಿ ನಿಮ್ದು. ನಾವು ಹೇಳಿದ್ದಂತೂ ಇವಳ ತಲೆ ಮೇಲೆ ಹೋಗುತ್ತೇ ಹೊರತು ತಲೆಯೊಳಗೆ ಇಳಿಯೋಲ್ಲ. ನೀವ್ ಹೇಳಿದ್ದು ತಲೆಯೊಳಗೆ ಹೋಗ್ಬಹುದೇನೋ ನೋಡಿ" ತಮಾಷೆಯಾಗಿ ಹೇಳಿದಳು ನವ್ಯಾ.

ಸಿಟ್ಟೇರಿದ ವದನ 'ಕೆಂ'ದಾವರೆಯಾಯಿತು…...

"ನಾನು ಬಾಯ್ತೆರೆಯೋದೆ ಕಡಿಮೆ. ಅಂತದ್ರಲ್ಲಿ ನಾನೇನು ಮಾಡ್ದೆ ಅಂತ ಈ ಜಗಳಗಂಟಿ ಅನ್ನೋ ಬಿರುದು ಕೊಟ್ಟೆ? ಮತ್ತೆ ನಿನ್ನ ಯಾವ ಮಾತು ಕೇಳ್ಲಿಲ್ಲ ನಾನು?" ಬಿರುಸಾಗಿ ಕೇಳಿದಳು.

"ಅಲ್ಲಾ ಡಾಕ್ಟ್ರೇ, ಅಂಗೈ ಮದರಂಗಿಗೆ ಕನ್ನಡಿ ಯಾಕೆ? ನೀವು ಮುಖನ ಬ್ಯಾಡಗಿ ಮೆಣಸಿನ ತರ ಕೆಂಪು ಮಾಡ್ಕೊಂಡು ಕೇಳೋದ್ರಲ್ಲೇ ಗೊತ್ತಾಗಲ್ವಾ ನೀವೆಷ್ಟು ಪಾಪ ಅಂತ? ಇಷ್ಟೆಲ್ಲಾ ಸಿಟ್ಟು ಮಾಡ್ಕೊಂಡ್ರೆ ಬಿಪಿ ಏರುತ್ತೆ, ಆಮೇಲೆ ನಾಳೆ ಡಿಸ್ಚಾರ್ಜ್ ಆಗೋಲ್ಲ ಅಂತ ಡಾಕ್ಟರಮ್ಮನಿಗೆ ಗೊತ್ತಿಲ್ವೇ?" ಅಣಕಿಸಿ ಕೇಳಿದ. ಅವನತ್ತ ಚೂಪು ನೋಟ ಬೀರಿ ಮುಖ ತಿರುಗಿಸಿ ಕೂತಳು.

"ಹೇಗೂ ನೀವಿದ್ದೀರಲ್ಲ ಇಲ್ಲಿ. ನಾವು ಇವಳ ಕ್ವಾಟ್ರಸ್ಸಿಗೆ ಹೋಗಿ ಸ್ನಾನ, ಖಾನಾ, ಪಾನ ಮಾಡ್ಕೊಂಡು ನಿಧಾನಕ್ಕೆ ಬರ್ತೀವಿ. ಅಷ್ಟೊತ್ತಿನ ತನಕ ಇರ್ತೀರಲ್ಲ ಇಲ್ಲಿ" ಅವರಿಬ್ಬರೇ ಮಾತನಾಡಿಕೊಳ್ಳಲಿ ಎಂದು ಕಿಶೋರ್ ಕೇಳಿದ. ಕಣ್ಣಿನಲ್ಲೇ ಅವನಿಗೆ ಧನ್ಯವಾದ ಹೇಳಿದವನು, "ಖಂಡಿತಾ. ನೀವು ಹೋಗ್ಬನ್ನಿ. ನನ್ನ ನೋಡ್ಕೊಳ್ಳೋಕೆ ಡಾಕ್ಟ್ರು ಇದ್ದಾರೆ. ಯೋಚ್ನೇ ಮಾಡ್ಬೇಡಿ" ಎಂದ. ನವ್ಯಾ, ಕಿಶೋರ್ ಸಮನ್ವಿತಾಳಿಗೊಂದು ಬಾಯ್ ಹೇಳಿ ಹೊರಟರು.

"ಇವರಿಬ್ರೂ ನಿಮ್ಗೆ ಸರಿಯಾಗಿದ್ದಾರೆ. ಕಂತೆಗೆ ತಕ್ಕ ಬೊಂತೆ ಅನ್ನೋಹಾಗೆ. ಮೂವರು ಸೇರಿ ಏನ್ ಪ್ಲಾನ್ ಮಾಡಿದ್ದೀರಾ? ಅಲ್ರೀ ಅಭಿರಾಮ್, ನಾನು ಪೇಷೆಂಟ್, ನಿಮ್ಮನ್ನ ನೋಡ್ಕೋಬೇಕಾ? ನೋಡ್ಕೊಳ್ಳೋವಂತಹ ದೊಡ್ಡ ರೋಗ ಏನಾಗಿದ್ಯೋ ತಮಗೆ?"

"ಏನ್ ಡಾಕ್ಟ್ರೇ, ಏನೋ ಪಾಪ, ಬೆಳಗ್ಗೆಯಿಂದ ಇಲ್ಲೇ ಕುತ್ಕೊಂಡು ಅವ್ರಿಗೂ ಬೇಜಾರಾಗಿರೋಲ್ವಾ. ಹೋಗ್ಬರ್ಲಿ ಬಿಡ್ರೀ‌. ಮತ್ತೆ ಅದು ಡಾಕ್ಟ್ರನ್ನ ನೋಡ್ಕೊಳ್ಳೋಕೆ ನಾನಿದ್ದೀನಿ ಅಂತ ಹೇಳೋಕೆ ಹೋದೆ... ನಿಮ್ಮ ಕೋಪಿಷ್ಟ ವದನ ಕಂಡು ಟಂಗ್ ಸ್ಲಿಪ್ ಆಗಿ ಉಲ್ಟಾ ಆಯ್ತು ಅಷ್ಟೇ" ಸ್ಪಷ್ಟೀಕರಣ ನೀಡಿದವನು ಮತ್ತೆ, "ಹೌದು ಡಾಕ್ಟ್ರೇ, ನಂಗೆ ತುಂಬಾ ದೊಡ್ಡ ರೋಗ ಬಂದಿದೆ. ನಿನ್ನೆಯಿಂದ ಎಲ್ಲಿ ನೋಡಿದ್ರೂ ನೀವೇ ಕಾಣ್ತೀರಾ ಅಂತೀನಿ..." 

ಒಮ್ಮೆ ಉರಿಗಣ್ಣಿನಲ್ಲಿ ಗುರಾಯಿಸಿದಳು. 

"ಅಯ್ಯೋ ಡಾಕ್ಟ್ರೇ, ನೀವೇನು ಜಮದಗ್ನಿ ಅಪರಾವತಾರಾನಾ? ಆ ತರ ನೋಡ್ಬೇಡಿ. ನಾನು ಸುಟ್ಟೋದ್ರೆ ಕಷ್ಟ. ನಮ್ಮಪ್ಪ ಅಮ್ಮನಿಗೆ ನಾನೋಬ್ನೇ ಮಗ. ಆಕೃತಿಗೂ ನಾನೊಬ್ನೇ ಅಣ್ಣ ಇರೋದು. ಅದಲ್ಲದೇ ನಮ್ಮ ಮಾವನ ಮಗಳು ನಾನು ಬಂದು ತಾಳಿ ಕಟ್ಟಿ ಕರ್ಕೊಂಡು ಹೋಗ್ತೀನಿ ಅಂತ ಬಕ ಪಕ್ಷಿ ಹಾಗೆ ಒಂಟಿ ಕಾಲಲ್ಲಿ ಕಾದು ನಿಂತಿದ್ದಾಳೆ. ದೇವ್ರಂಥಾ ಹುಡುಗಿ ಆದ್ರೆ ಸ್ವಲ್ಪ ಮೆಂಟ್ಲು. ಮೊನ್ನೆ ನಮ್ಮಾವನತ್ರ ಜಗಳ ಆಡ್ಕೊಂಡು ಬಂದು ಸಿಟ್ಟಲ್ಲಿ ಇಡೀ ರಾತ್ರಿ ಶವರ್ ಕೆಳಗೆ ಕೂತು ಬೆಳಿಗ್ಗೆ ಹಾಸ್ಪಿಟಲ್ನಲ್ಲಿ ಡ್ರಿಪ್ಸ್ ಹಾಕ್ಕೊಂಡು ಮಲ್ಗಿದ್ದಾಳೆ‌ ನೋಡಿ... "

"ರೀ ಯಾರ್ರೀ ಮೆಂಟಲ್? ನಾನು ನೀವು ತಾಳಿ ಕಟ್ತೀರಾ ಅಂತ ಬಕ ಪಕ್ಷಿ ತರ ಕಾಯ್ತಿದ್ದೀನಾ? ಯಾಕೆ, ನಟ್, ಬೋಲ್ಟ್ ಲೂಸಾಗಿದ್ಯಾ?" 

"ಅಯ್ಯೋ ನೀವಲ್ಲಾರೀ. ನಮ್ಮಾವನ ಮಗಳು. ಆದ್ರೂ ನೀವಿಷ್ಟು ಆಸೆ ಪಡ್ತಿದ್ದೀರಾ ಅಂದ್ರೆ ನಂಗೇನೂ ತೊಂದ್ರೆ ಇಲ್ಲಪ್ಪಾ. ಹೇಳಿ ಯಾವಾಗ ಮದ್ವೆಯಾಗೋಣ ಡಾಕ್ಟ್ರೇ...."

ತನ್ನ ಮಾತನ್ನು ತನಗೇ ವಾಪಾಸಾಗಿಸಿದ ಅವನ ವರಸೆಗೆ ನಕ್ಕವಳು, "ಹಳ್ಳಕ್ಕೆ ಬೀಳೋದು ಯಾವಾಗಾದರೇನು? ಈಗ್ಲೇ ಆಗ್ಬಿಡೋಣ. ಬೇಗ ಹೋಗಿ ತಾಳಿ ತಗೊಂಡ್ಬನ್ನಿ" ಮತ್ತೆ ನಕ್ಕಳು. ಅವಳನ್ನೇ ತದೇಕಚಿತ್ತದಿಂದ ನೋಡಿದ.

"ಇವತ್ತು ನಿಮಗೆ ತುಂಬಾ ಖುಷಿಯಾಗಿದೆ ಅಲ್ವಾ ಡಾಕ್ಟ್ರೇ?" ಅವಳ ಮನಸ್ಸನ್ನು ಓದಿದಂತೆ ನುಡಿದ. ಕ್ಷಣ ಯೋಚಿಸದೆ ಹೌದೆಂದು ತಲೆಯಾಡಿಸಿದಳು.

"ಯಾಕೆ ಅಂತ ಕೇಳಬಹುದಾ?"

"ಅಯ್ಯೋ ರಾಮ, ಏನ್ರೀ ಹೀಗೆ ಕೇಳ್ತಿದ್ದೀರಿ? ನೀವು ನನ್ನ ಮದ್ವೆ ಮಾಡ್ಕೋತೀರಾ ಅಂತ ನಾನು ಇಷ್ಟು ಸಂತೋಷದಲ್ಲಿದ್ರೆ, ನೀವು ಖುಷಿಗೆ ಕಾರಣ ಕೇಳ್ತಿದ್ದೀರಲ್ಲ…..." ಬೇಸರದಿಂದ ಹೇಳಿದಳು. ಅವನು ನಸುನಕ್ಕ.

"ಹ್ಮಂ... ಅದೂ ಹೌದಾದ್ರೂ ಅದಕ್ಕೂ ಮೀರಿದ ಕಾರಣವೇನೋ ಇದೆ. ನೀನು ಈ ತರ ಮಾತಾಡೋಳಲ್ಲ. ಇಷ್ಟು ಮಾತಂತೂ ಆಡೋದೇ ಇಲ್ಲ ಈ 'ಮಾತು ಬೆಳ್ಳಿ ಮೌನ ಬಂಗಾರ'ದ ಹುಡುಗಿ.

ನಿಮ್ಮಪ್ಪ ಅಮ್ಮ ಬಂದಿದ್ರಾ?"ಕೇಳಿದ.

ತಟ್ಟನೆ ತಲೆ ಎತ್ತಿ ಅವನ ಕಣ್ಣುಗಳಲ್ಲಿ ಇಣುಕಿದಳು. 'ಯಾರೀತ? ಕೆಲದಿನಗಳ ಮುಂಚಿನ ಪರಿಚಯ, ಹಾಗೆ ನೋಡಿದರೆ ಅವನ ಮನೆಯ ಉಳಿದ ಸದಸ್ಯರಷ್ಟು ಪರಿಚಿತನಲ್ಲ. ನನ್ನ ತಂದೆಯ ಷಡ್ಯಂತ್ರದಲ್ಲಿ ಅನಿವಾರ್ಯವಾಗಿ ನಮ್ಮ ಬದುಕಿನ ಹಾದಿಗಳು ಮುಖಾಮುಖಿಯಾದ್ದರಿಂದ ಪರಿಚಯ ಕೊಂಚ ವಿಸ್ತಾರವಾಗಿದೆಯಷ್ಟೇ. ಅದರ ಹೊರತು ಈತ ಅಪರಿಚಿತನೇ. ಆದರೆ ನಾನು ಯಾರೊಂದಿಗೂ ಹೇಳಿಕೊಳ್ಳದೇ ಆಂತರ್ಯದಲ್ಲಿ ಉಳಿಸಿಕೊಳ್ಳುವ ಕೊರಗು ಇವನಿಗೆ ಹೇಗೆ ತಿಳಿದುಬಿಡುತ್ತದೆ? ನಿನ್ನೆಯಿಂದ ಗಮನಿಸುತ್ತಿರುವೆ. ನನ್ನ ಮನದ ಮಾತನ್ನು ಹೇಳದೇ ಸ್ಪಷ್ಟವಾಗಿ ಅರಿಯುತ್ತಾನೆ ಇವನು. ನನಗೂ ಇಂದು ಬೆಳಗಿನಿಂದಲೇ ತಂದೆಯ ಆಗಮನದ ನಿರೀಕ್ಷೆಯಿತ್ತು. ಏನೋ ದುಗುಡ, ಚಡಪಡಿಕೆ ಕಾಡಿತ್ತು. ನವ್ಯಾ, ಕಿಶೋರನೊಂದಿಗೂ ಹೇಳಿಕೊಂಡಿರಲಿಲ್ಲ. ಆದರೆ ಇವನು ಅದನ್ನೇ ಬೆಳಿಗ್ಗೆ ನನಗೆ ಹೇಳಿಹೋಗಲಿಲ್ಲವೇ? ನನಗೆ ಭಾಸವಾದದ್ದು ಅವನಿಗೂ ತಿಳಿಯುವುದೆಂತು? ಅಷ್ಟೇ ಏಕೆ....? ಅಪ್ಪನ ಕುಟಿಲ ಪ್ರಸ್ತಾಪದ ಬಗ್ಗೆ ತಿಳಿದ ಆ ಕ್ಷಣ, ಏನೂ ತೋಚದೇ, ಪೆಟ್ಟು ತಿಂದ ಪಕ್ಷಿಯಂತೆ ಒದ್ದಾಡುತ್ತಿದ್ದ ನನ್ನ ಮನಸ್ಥಿತಿಯನ್ನು ಅದೆಷ್ಟು ಸರಿಯಾಗಿ ಅರ್ಥೈಸಿಕೊಂಡಿದ್ದ. ನನ್ನ ಮೌನವನ್ನು ತೆರೆದಿಟ್ಟ ಪುಸ್ತಕದಂತೆ ಓದಬಲ್ಲ ಏಕೈಕ ವ್ಯಕ್ತಿ ಇವನು ಎಂದು ಅಂದೇ ಅನಿಸಿತ್ತು. ತಾಯ್ತಂದೆ ಎಂಬ  ರಕ್ತಸಂಬಂಧಗಳೇ ಅಪರಿಚಿತರಾಗಿ ಉಳಿದ ನನ್ನ ಬದುಕನ್ನು ಈ ಕಿರು ಪರಿಚಯ ಏಕಿಷ್ಟು ಗಾಢವಾಗಿ ಆವರಿಸುತ್ತಿದೆ? ನನ್ನ ಮನಸ್ಸೇಕೆ ಬೇಡವೆಂದರೂ ಈತನೆಡೆಗೆ ವಾಲುತ್ತಿದೆ? ಇವನೊಂದಿಗೆ ಇದ್ದರೆ ಅದೆಷ್ಟು ಸುರಕ್ಷತಾ ಭಾವ........ ನಾನು ನನ್ನೊಡನೇ ಇದ್ದೇನೆ ಎನ್ನುವಷ್ಟು ಆಪ್ತತೆ…...... ನನ್ನೆಲ್ಲಾ ಅಸಂಪೂರ್ಣತೆಗಳ ನಡುವೆಯೂ ನಾನು ಪರಿಪೂರ್ಣಳು ಎಂಬ ಭಾವ ಇವನು ಬಳಿ ಇದ್ದಾಗ ಮಾತ್ರ ನನಗೆ ಭಾಸವಾಗುವುದು. ಯಾರೊಂದಿಗೂ ಹೆಚ್ಚು ಬೆರೆಯದ, ಮಾತನಾಡದ, ರಿಸರ್ವ್ಡ್ ಎನ್ನಬಹುದಾದ ಹುಡುಗಿ ನಾನು‌. ನವ್ಯಾಳೊಂದಿಗೆ ಒಂದೇ ಭೇಟಿಯಲ್ಲಿ ಆತ್ಮೀಯತೆ ಬೆಳೆದದ್ದಕ್ಕೆ ಗಹನವಾದ ಕಾರಣವಿತ್ತು. ಇನ್ನು ಕಿಶೋರನೊಂದಿಗೆ ಆತ್ಮೀಯತೆ ಬೆಳೆಸಿಕೊಂಡದ್ದೂ ಭೇಟಿಯಾಗಿ ಎರಡು ತಿಂಗಳುಗಳ ನಂತರವೇ. ಆದರೆ ಒಡನಾಟವೇ ಇಲ್ಲದ ಇವನೊಂದಿಗೆ ಕಳೆದೆರಡು ದಿನದಿಂದ ನಾನೆಷ್ಟೊಂದು ಸಲಿಗೆಯಿಂದ ಹರಟುತ್ತಿದ್ದೇನೆ……. ಏಕೆ ಹೀಗೆ?' 

"ಯಾಕಮ್ಮಾ ಏನೂ ಮಾತಾಡ್ತಿಲ್ಲ ನೀನು? ನಿಮ್ಮಪ್ಪ ಬೈದ್ರಾ ನಿಂಗೆ?" ತನ್ನನ್ನೇ ನೆಟ್ಟ ನೋಟದಲ್ಲಿ ನೋಡುತ್ತಿದ್ದವಳನ್ನು ಕೇಳಿದ.

"ಹಾಗೇನೂ ಇಲ್ಲ. ತುಂಬಾ ಪ್ರೀತಿಯಿಂದ ಮಾತಾಡಿದ್ರು. ಮನೆಗೆ ಹೋಗೋಣ ಅಂತ ಒತ್ತಾಯ ಮಾಡಿದ್ರು. ನಾನು ಮೊನ್ನೆ ತುಂಬಾ ಒರಟಾಗಿ ನಡ್ಕೊಂಡ್ಬಿಟ್ಟೆ ಅವರ ಹತ್ರ ಅನ್ನಿಸ್ತು. ಮನೆ ಅಂದ್ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಅದನ್ನೇ ದೊಡ್ಡದಾಗಿ ಮಾಡ್ಬಾರ್ದಿತ್ತು ನಾನು. ಅವ್ರು ನನ್ನೊಳ್ಳೇದಕ್ಕೇ ಮಾಡಿರೋದಲ್ವಾ? ಅದಕ್ಕೇ ನಾಳೆ ಡಿಸ್ಚಾರ್ಜ್ ಆಗಿ ಅಲ್ಲಿಗೇ ಹೋಗ್ತೀನಿ. ಬರ್ತಾರೆ ಅವ್ರು ಕರ್ಕೊಂಡುಹೋಗೋಕೆ"  ಅವನನ್ನು ಪರೀಕ್ಷಿಸಲೆಂದೇ ಹೇಳಿದ್ದಳು. 

ಅವನು ಮೌನವಾಗಿ ಅವಳನ್ನೇ ನೋಡತೊಡಗಿದ. ಕ್ಷಣಗಳು ಉರುಳಿದರೂ ನೋಟವೂ ಸರಿಯಲಿಲ್ಲ,  ಮಾತೂ ಹುಟ್ಟಲಿಲ್ಲ. ಅವನ ನೋಟದಲ್ಲಿದ್ದ ಭಾವನೆ ಅರ್ಥೈಸಿಕೊಳ್ಳಲಾಗದೇ ಚಡಪಡಿಸಿದಳು. ಅಸಹನೀಯ ಮೌನ ಬೇರೆ....

"ಅದ್ಯಾಕೆ ಹಾಗೆ ನೋಡ್ತಿದ್ದೀರಾ? ಏನಾದ್ರೂ ಮಾತಾಡಿ" ಇನ್ನು ಮೌನ ಸಹಿಸಲಾರೆನೆಂಬಂತೆ ಕೇಳಿದಳು.

"ನಿಮ್ಮಪ್ಪ ಅಮ್ಮ ನೀನು ಹೂಂ ಅಂದ್ರೆ ಈಗ್ಲೇ ನಿನ್ನ ಮನೆಗೆ ಕರ್ಕೊಂಡು ಹೋಗ್ತಾರೆ. ಇವತ್ತೂ ಅದೇ ಉದ್ದೇಶದಿಂದ ಇಲ್ಲಿಗೆ ಬಂದಿರ್ತಾರೆ. ಆದ್ರೆ ....... ನೀನು ಹೋಗ್ಬೇಡಾ ಸಮನ್ವಿತಾ. ಯಾಕೆಂದ್ರೆ ನೀನಲ್ಲಿಗೆ ಹೋದ್ರೆ ಹೆಚ್ಚೆಂದ್ರೆ ವಾರದೊಳಗೆ ನೀನು ಮಿಸ್ಸೆಸ್ ಅಭಿರಾಮ್ ಶರ್ಮಾ ಆಗ್ತೀಯಾ......... ಅದು ನಿನ್ಗೂ ಚೆನ್ನಾಗಿ ಗೊತ್ತು." ಅವಳ ಮೇಲಿನ ನೋಟ ಸರಿಸದೇ ಹೇಳಿದ.

"ಆಗ ನಿಮ್ಗೆ ಇನ್ನೂ ಒಳ್ಳೇದಾಯ್ತಲ್ವಾ? ನನ್ನ ಹಿಂದೆ ಹೀಗೆ ಅಲೆಯೋದು ತಪ್ಪುತ್ತೆ. ನಿಮ್ಮ ಮನೆಯವರೆಲ್ಲಾ ಆಸೆಪಟ್ಟಂತೆ ನಡೆಯುತ್ತೆ. ನೀವೂ ನಿನ್ನೆಯಿಂದ ಮದ್ವೆ ಮಾಡ್ಕೋ ಅಂತ ತಾನೇ ದುಂಬಾಲು ಬಿದ್ದಿರೋದು?" ಹುಬ್ಬು ಹಾರಿಸಿ ಕೇಳಿದಳು.

"ಪರವಾಗಿಲ್ವೇ ಹುಡುಗಿ. ಭಾರಿ ಜೋರಿದ್ದೀ ನೀನು. ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರೋ ಅಬೋಧ ಬಾಲಕಿ ತರ ಇರ್ತೀಯಾ. ನಾನೆಷ್ಟು ಕಷ್ಟ ಪಟ್ಟು ಸರ್ಕಸ್ ಮಾಡ್ತಿದ್ರೆ ನೀನು ಆರಾಮಾಗಿ ಕುತ್ಕೊಂಡು ಮಜಾ ತಗೋತಿದ್ಯಾ? ನಿನ್ನ ಈ ರೂಪದ ಬಗ್ಗೆ ನನಗೇನು ಗೊತ್ತಿರ್ಲಿಲ್ಲ"

"ಆಕ್ಚುಲಿ ನನಗೂ ಗೊತ್ತಿರ್ಲಿಲ್ಲ ನಾನು ಹೀಗೆಲ್ಲಾ ಆಡ್ತೀನಿ ಅಂತ. ನೀವು ಬಂದ್ಮೇಲೆ ಹೀಗಾಗಿರೋದು. ಅದೇನೋ ಹೇಳ್ತಾರಲ್ಲ. ಕೋತಿ ತಾನು ಕೆಡೋದಲ್ದೇ ವನನೆಲ್ಲಾ ಕೆಡಿಸ್ತು ಅಂತ. ಹಾಗಾಯ್ತು ಕಥೆ…..." ನಿಜವನ್ನೇ ಉಸುರಿದ್ದಳು. ಉಳಿದವರೆದುರು ಘನ ಗಂಭೀರೆ ಅವಳು. ಇವನನ್ನು ನೋಡಿದರೆ ಮಾತ್ರ ಮನಸ್ಸು ಹಾದಿ ತಪ್ಪುತಿತ್ತು.

"ತಗೋಳಪ್ಪಾ, ಮಾಡೋದೆಲ್ಲಾ ಮಾಡಿ ಕೊನೆಗೆ ಎಲ್ಲಾ ನನ್ನ ತಲೆ ಮೇಲೆ ಎತ್ತಾಕಿದ್ರೆ ಆಯ್ತು. ಥೂ, ಒಳ್ಳೇ ಡಸ್ಟ್ ಬಿನ್ ತರ ಆಗೋಯ್ತು ನನ್ನ ಕಥೆ. ರೀ ಡಾಕ್ಟ್ರೇ, ನಾನ್ಯಾವತ್ತು ನಿಮ್ಗೆ ಇಂತಹ ವಿದ್ಯೆ ಧಾರೆ ಎರ್ದಿದ್ದು? ನನ್ನಂತ ಒಳ್ಳೇ ಹುಡುಗನ್ನ ಕೋತಿ ಮಾಡ್ಬಿಟ್ರಲ್ಲಾ. ಇರ್ಲಿ ಬಿಡಿ ಒಳ್ಳೇದೇ. ಈಗ ನಾನು ಕೋತಿ ಆದ್ರೆ, ನಮ್ಮಾವನ ಮಗಳು, ಭಾವಿ ಹೆಂಡ್ತಿ ನೀವೂ ಕೋತಿನೇ ಅಲ್ವಾ. ನೀವು ಕಂಪನಿ ಕೊಡ್ತೀರಾ ಅಂದ್ರೆ ನಾನು ಕೋತಿ ಯಾಕೆ ವಾಟಾಳ್ ನಾಗರಾಜ್ ಅವರ ಕತ್ತೆ ಆಗೋಕೂ ರೆಡಿ"

"ಮತ್ತೆ ಸುತ್ತಿ ಬಳಸಿ ಅಲ್ಲಿಗೇ ಬಂತು ಮಾತು. ಏನು ಹೇಳಿದ್ರೂ ಕೊನೆಗೆ ಅಲ್ಲೇ ತಂದು ನಿಲ್ಲಿಸ್ತೀರಾ. ಅದು ಬಿಡಿ, ನನ್ನ ಪ್ರಶ್ನೆಗೆ ಉತ್ತರವೇ ಹೇಳ್ಲಿಲ್ಲ ನೀವು. ನಮ್ಮಪ್ಪ ವಾರದೊಳಗೆ ನನ್ನ ಮದುವೆ ಮಾಡ್ಸಿದ್ರೆ ರೋಗಿ ಬಯಸಿದ್ದು ವೈದ್ಯ ಹೇಳಿದ್ದೂ ಎರಡೂ ಒಂದೇ ಆಗೋಲ್ವಾ? ಮತ್ಯಾಕೆ ನನ್ನ ಮನೆಗೆ ಹೋಗ್ಬೇಡ ಅಂದಿದ್ದು" ಅವಳಿಗೆ ಅವನ್ಯಾಕೆ ಹಾಗೆ ಹೇಳಿದ ಎಂಬುದನ್ನು ತಿಳಿಯಬೇಕಿತ್ತು‌.

"ಹೇಳ್ಲೇಬೇಕಾ?"

"ಇಲ್ಲೇನು ಅಮಿತಾಭ್ ಬಚ್ಚನ್ ಕೆ.ಬಿ.ಸಿ ನೆಡ್ಸಿಕೊಡ್ತಿದ್ದಾರಾ ನಿಮ್ಗೆ ನಾಲ್ಕು ಆಯ್ಕೆ ಕೊಡೋಕೇ? ಹೇಳ್ಬೇಕು ಅಂದ್ರೆ ಹೇಳ್ಬೇಕಷ್ಟೇ. ಬೇರೆ ಆಯ್ಕೆ ಇಲ್ಲ." ತೋರು ಬೆರಳು ತೋರಿ ವಾರ್ನಿಂಗ್ ಮಾಡುವವಳಂತೆ ಹೇಳಿದಳು.

'ಥತ್ತೇರಿ, ಇವಳನ್ನು ಮದ್ವೆ ಆದ್ಮೇಲೆ ಪಕ್ಕಾ ನಾನು ನಮ್ಮಪ್ಪನ್ನೂ ಮೀರಿಸೋ ಅಮ್ಮಾವ್ರ ಗಂಡ ಆಗೋದು ಗ್ಯಾರಂಟಿ. ಒಳ್ಳೆ ನಾಗವಲ್ಲಿ ರೇಂಜಿಗೆ ಕೇಳ್ತಾಳಲ್ಲಪ್ಪಾ' ಅವನ ಮನ ಸ್ವಗತದವಲ್ಲಿ ಭವಿಷ್ಯವನ್ನು ಯೋಚಿಸತೊಡಗಿತು.

"ಪ್ಲೀಸ್ ಹೇಳಿಪ್ಪಾ, ನೀವ್ಯಾಕೆ ಹಾಗೆ ಹೇಳಿದ್ದು?" ಗೋಗರೆದಳು ಪುಟ್ಟ ಮಗುವಿನಂತೆ. ಅವಳ ಬಿನ್ನಹದ ಪರಿ ಕಂಡು ನಕ್ಕವನು ಗಂಭೀರನಾದ.

"ಹಾಗೆ ನಿಮ್ಮಪ್ಪ ವಾರದಲ್ಲಿ ಮದ್ವೆ ಮಾಡ್ಸಿದ್ರೆ ನಿನ್ಗೆ ಸಂತೋಷನಾ? ಖುಷಿಯಾಗಿರ್ತೀಯಾ ನೀನು?"

ಅವನ ಪ್ರಶ್ನೆಗೆ ಉತ್ತರ ಹೇಳಬೇಕೆನಿಸಲಿಲ್ಲ ಅವಳಿಗೆ. ಅವನು ಉತ್ತರವನ್ನು ನಿರೀಕ್ಷಿಸಲಿಲ್ಲ ಕೂಡಾ.... 

"ನಿನಗೆ ಹೇಳದೇ ಮದುವೆ ಪ್ರಸ್ತಾಪ ಮಾಡಿದಕ್ಕೆ ಅಷ್ಟೊಂದು ಘಾಸಿಗೊಂಡ ನೀನು, ವಾರದೊಳಗೆ ನನ್ನ ಮದ್ವೆಯಾಗಿ ಸಂತೋಷವಾಗಿರ್ತೀಯಾ ಅಂತ ಭ್ರಮಿಸುವಷ್ಟು ಮೂರ್ಖ ನಾನಲ್ಲ. ಅದು ನಿನ್ಗೆ ಜೀವನ ಪರ್ಯಂತ ಹಿಂಸೆ ಕೊಡ್ತಾನೆ ಇರುತ್ತೆ. ನಿನಗೆ ಅದನ್ನು ಸಹಿಸಿಕೊಂಡು ಬದುಕೋ ಶಿಕ್ಷೆ ಕೊಡೋಕೆ ನಾನು ತಯಾರಿಲ್ಲ. ಹೌದು..... ನನಗೆ ನೀನೂಂದ್ರೇ ಬಹಳ ಇಷ್ಟ. ಈ ದಿನಗಳಲ್ಲಿ ನಿನ್ನನ್ನು, ನಿನ್ನ ವ್ಯಕ್ತಿತ್ವವನ್ನು ಪ್ರೀತಿಸಿದಷ್ಟು, ಆರಾಧಿಸಿದಷ್ಟು ನನ್ನನ್ನು ನಾನು ಪ್ರೀತಿಸಿಲ್ಲ. ಆದ್ರೆ ಅದು ನನ್ನ ಭಾವನೆಗಳು. ನನ್ನಂತೆ ನಿನಗೂ ನಿನ್ನದೇ ಆದ ಭಾವನೆಗಳಿವೆಯಲ್ಲವೇ? ನಿನ್ನ ಭಾವನೆ, ಅನಿಸಿಕೆಗಳನ್ನು ಕೊಂದುಕೊಂಡು ನನ್ನ ಜೊತೆ ಜೀವನ ನಡೆಸುವ ಒತ್ತಡಕ್ಕೆ ನೀನ್ಯಾವತ್ತೂ ಒಳಗಾಗಬಾರದು. ಮದುವೆ ಅನ್ನೋದು ಎರಡು ಮನಸ್ಸುಗಳನ್ನು ಸೇರಿಸುವ ಸೇತುವೆ……. ಅದು ಬಂಧವಾಗಬೇಕೇ ವಿನಹಾ ಬಂಧನವೆನಿಸಬಾರದು. ಎರಡು ಮನಸ್ಸುಗಳು ಇಷ್ಟಪಟ್ಟು ಆ ಬಂಧ ಏರ್ಪಟ್ಟರೇ ಚೆಂದ. ಯಾರದೋ ಒತ್ತಾಯಕ್ಕೆ ಮಣಿದು ನೀನು ನನ್ನ ವರಿಸುವುದು ಸುತಾರಾಂ ಇಷ್ಟವಿಲ್ಲ ನನಗೆ. ನೀನು ನಿನ್ನ ಮನಃಪೂರ್ವಕವಾಗಿ ನನ್ನ ಒಪ್ಪಿದರೆ ಸಾಕು. ನಿಮ್ಮಪ್ಪನ ಅನುಮತಿ, ಅಪ್ಪಣೆಯೂ ನನಗೆ ಬೇಕಿಲ್ಲ. ನೀನು ಒಪ್ಪಲಿಲ್ಲಾ ಅಂದ್ರೆ........" ಮಾತು ನಿಲ್ಲಿಸಿದ. ಅವನ ಮಾತು ಮತ್ತೆ ಅವಳನ್ನು ಕಾಡಿಸತೊಡಗಿತು.

"ನನಗೇನು ಹೇಳ್ಬೇಕೋ ತಿಳಿಯುತ್ತಿಲ್ಲ ಮಿಸ್ಟರ್ ಶರ್ಮಾ. ನೀವು ಬಹಳ ಒಳ್ಳೆಯವರು. ಅಷ್ಟೇ ಚೆಂದದ ಮನವಿದೆ. ನಿಮ್ಮಷ್ಟೇ ಸರಳ, ಸಜ್ಜನರಿಂದ ತುಂಬಿದ ಕುಟುಂಬವಿದೆ. ತನು, ಮನ, ಧನ ಮೂರರಲ್ಲೂ ಸಿರಿವಂತರು. ಸಮಾಜದಲ್ಲಿ ಒಳ್ಳೆಯ ಹೆಸರಿದೆ. ನೀವು ಹೂಂ ಅಂದ್ರೆ ಅಷ್ಟೇ ಸುಗುಣ, ಸಜ್ಜನ ಪರಿವಾರದ ಒಳ್ಳೆಯ ಹುಡುಗಿಯರಿಗೇನು ಬರವೇ? ಅದೆಲ್ಲಾ ಬಿಟ್ಟು ನೀವ್ಯಾಕೆ ನನ್ನಂತಹ ನತದೃಷ್ಟಳ ಹಿಂದೆ ಬಿದ್ದಿದ್ದೀರಾ? ನಾನು ಒಳ್ಳೆಯವಳಲ್ಲ ಅನ್ನೋದಕ್ಕಿಂತ ನನ್ನ ಪರಿಸ್ಥಿತಿಗಳು ಸರಿಯಿಲ್ಲ. ಅಪ್ಪ ಅಮ್ಮನಿಗೇ ಅಗತ್ಯವಿಲ್ಲದ ಮಗಳು, ಇನ್ನು ಅವರೋ ತಮ್ಮ ಸ್ವಾರ್ಥಕ್ಕಾಗಿ ಯಾರನ್ನಾದ್ರೂ ಬಲಿ ಕೊಡೋ ಕಟುಕರು, ಹೈಲೀ ಇನ್ಸೆಕ್ಯೂರ್ಡ್ ಹುಡುಗಿ, ನನ್ನ ಸುರಕ್ಷತಾ ವಲಯ ಬಿಟ್ಟು ಬೇರೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟಪಡುವಾಕೆ.... ಇಂತಹ ನನ್ನ ಜೊತೆ ಯಾರೂ ಸಂತೋಷವಾಗಿರೋಕೆ ಸಾಧ್ಯವೇ ಇಲ್ಲ. ನನ್ನ ಫ್ರೆಂಡ್ಸ್ ಆಗಿರೋ ತಪ್ಪಿಗೆ ಇವತ್ತು ನವ್ಯಾ ಮತ್ತೆ ಕಿಶೋರ್ ಕೂಡಾ ನಮ್ಮಪ್ಪ ಅಮ್ಮನ ಬಾಯಿಗೆ‌ ಆಹಾರವಾಗಬೇಕಾಯ್ತು…... ಅಂತಹ ಆಸಕ್ತಿ ನಿಮಗ್ಯಾಕೆ? ನನ್ನನ್ನು ಮದ್ವೆ ಆಗೋನಿಗೆ, ಅವನ ಕುಟುಂಬದವರಿಗೆ ಕಷ್ಟ ಕಾರ್ಪಣ್ಯಗಳು ಫ್ರೀ ಪ್ಯಾಕೇಜಲ್ಲಿ ಸಿಗುತ್ತೆ ನಮ್ಮಪ್ಪ ಅಮ್ಮನ ರೂಪದಲ್ಲಿ. ಪ್ರತೀ ಕ್ಷಣ ಅವರೊಟ್ಟಿಗೆ ಏಗಬೇಕು ಅವನು. ಇದೆಲ್ಲಾ ಬೇಕಾ ನಿಮ್ಗೇ? am imperfect match to you Mr.Perfect" ತನ್ನ ಮನದ ತಳಮಳ ವಿವರಿಸಿ ಹೇಳಿದಳು ಹುಡುಗಿ.

"ಅದೇನೋ ಸರಿಯೇ. ಇವಳು ಹೈಲೀ ಇನ್ಸೆಕ್ಯೂರ್ಡ್ ಹುಡುಗಿ, ರಿಸರ್ವ್ಡ್ ನೇಚರ್. ನನ್ನ ಬಿಟ್ಟು ಬೇರ್ಯಾರ ಹತ್ರವೂ ಹೀಗೆ ಬಾಯಿಬಡ್ಕಿ ತರ ಆಡಲ್ಲ ನೀನು. ಅದ್ಕೇ ನನಗೆ ನೀನಂದ್ರೆ ತುಂಬಾ ಇಷ್ಟ…...." ಅವನು ಕೆನ್ನೆ ಹಿಂಡಿ ಹೇಳಿದಾಗ ಅವಳಿಗೆ ಹಣೆ ಚಚ್ಚಿಕೊಳ್ಳುವಂತಾಯಿತು. ಅವನಿಗೆ ಇನ್ನು ಹೇಗೆ ವಿವರಿಸಬೇಕೋ ತಿಳಿಯಲಿಲ್ಲ ಅವಳಿಗೆ.

"ಪ್ಲೀಸ್ ಅಭಿರಾಮ್, ಮತ್ತೆ ಅದೇ ತರ ಮಾತಾಡ್ಬೇಡಿ. ನೀವು ಹೀಗೆ ಮಾತಾಡಿದ್ರೆ ನನ್ನನ್ನು ನಾನು ಸಂಭಾಳಿಸಿಕೊಳ್ಳೋಕೆ ತುಂಬಾ ಕಷ್ಟ ಆಗುತ್ತೆ. ನನ್ನ ಮನಸ್ಸು ಹಿಡಿತ ತಪ್ಪುತ್ತೆ."

"ಯಾಕೆ ಹೇಳು? ಯಾಕೇಂದ್ರೆ ನಿನಗೂ ನಾನಂದ್ರೇ ಇಷ್ಟವೇ...... ನೀನು ಒಪ್ಕೋಳ್ಳೋಕೆ ತಯಾರಿಲ್ಲ ಅಷ್ಟೇ."

"ಹೌದು, ನನಗೂ ನೀವು ಅಂದ್ರೆ ಇಷ್ಟವೇ. ನಿಮ್ಮಮ್ಮ ಅಂದ್ರೆ ನಿಮಗಿಂತಲೂ ಇಷ್ಟ. ಅವ್ರನ್ನು ನೋಡ್ದಾಗಲೆಲ್ಲ ಅಂದ್ಕೊಂಡಿದ್ದೀನಿ ನಮ್ಮಮ್ಮ ಯಾಕೆ ಇವರ ಹಾಗಿಲ್ಲ ಅಂತ. ಅವ್ರು ಮತ್ತೆ ಅಂಕಲ್ ನಿಮ್ಮ ಬಗ್ಗೆ, ಆಕೃತಿ ಬಗ್ಗೆ ತೋರಿಸೋ ಕಾಳಜಿ, ಮಕ್ಕಳನ್ನು ಫ್ರೆಂಡ್ಸ್ ತರ ಟ್ರೀಟ್ ಮಾಡೋ ರೀತಿ ಎಲ್ಲವೂ ಇಷ್ಟ. ನೀವು, ನಿಮ್ಮ ಸ್ವಭಾವ, ಇನ್ನೊಬ್ಬರ ಭಾವನೆಗಳಿಗೆ ನೀವು ಕೊಡೋ ಗೌರವ, ನಿಮ್ಮ ಕಾಳಜಿ, ಪ್ರೀತಿ……  ಎಲ್ಲವೂ ನಂಗಿಷ್ಟ. ಆದರೆ ನನ್ನ ಈ ಇಷ್ಟ ಭವಿಷ್ಯದಲ್ಲಿ ನಮ್ಮಪ್ಪನ ರೂಪದಲ್ಲಿ ನಿಮ್ಮ ನಂದನದಂತಹ ಮನೆಯನ್ನು ನಾಶ ಮಾಡೋದು ಬೇಕಾಗಿಲ್ಲ ನಂಗೆ. ದಯವಿಟ್ಟು ಇದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡಿ." 

ಅರೆಕ್ಷಣ ಅಲ್ಲಿ ಮೌನ ರಾಜ್ಯವಾಳಿತು...... ಆ ಮೌನ ಭೇದಿಸಿ ನುಡಿದಿದ್ದ ಅವನು.....

"ನೋಡಮ್ಮಾ, ನಾನು ಈಗಾಗ್ಲೇ ಇದೇ ತಪ್ಪು ಮಾಡಿ ಬದುಕನ್ನು ಗೋಜಲಾಗಿಸಿಕೊಂಡಿದ್ದೆ. ಈಗ ನೀನು ಅದನ್ನೇ ಮಾಡ್ತಿದ್ದೀ. ನಾನು ಹೇಳೋದನ್ನು ಗಮನವಿಟ್ಟು ಕೇಳು. ನಾನು ಮುಂಚೆಯಿಂದಲೂ ಅಪ್ಪ ಅಮ್ಮ ಆರಿಸಿದ ಹುಡುಗಿಯನ್ನೇ ಮದ್ವೆ ಆಗ್ಬೇಕು ಅಂತ ನಿರ್ಧರಿಸಿದ್ದೆ. ಅವತ್ತು ಪಾರ್ಟಿಲಿ ನಿನ್ನ ನೋಡಿದ ದಿನವೇ ಅವರು ನಿನ್ನ ಆರಿಸಿದ್ರು….. ಆಮೇಲೆ ರಾವ್ ಅವರ ಪ್ರಸ್ತಾಪ ಎಲ್ಲಾ ನಿನಗೆ ತಿಳಿದಿದ್ದೇ. ಆದರೆ ನಿನಗೆ ಗೊತ್ತಿಲ್ಲದ ಒಂದು ವಿಷ್ಯ ನಾನು ಹೇಳ್ತೀನಿ ಕೇಳು. ಒಂದು ವೇಳೆ ನಿಮ್ಮಪ್ಪ ಈ ಮದುವೆ ಮಾತುಕತೆ ಆಡಿರ್ಲಿಲ್ಲಾ ಅಂದ್ರೆ ನಮ್ಮಪ್ಪ ಅಮ್ಮನೇ ನಿಮ್ಮನೆಗೆ ಬರ್ತಿದ್ರು ಹೆಣ್ಣು ಕೇಳೋಕೆ. ಅಷ್ಟರಮಟ್ಟಿಗೆ ಅವರು ನಿರ್ಧರಿಸಿದ್ರು. ನನಗೂ ನಿನ್ನ ಬಗ್ಗೆ ಒಳ್ಳೆ ಅಭಿಪ್ರಾಯವೇ ಇತ್ತು. ಅಷ್ಟರೊಳಗೆ ರಾವ್ ಅವ್ರೇ ಬಂದಿದ್ರಿಂದ ಅವ್ರು ಸುಮ್ನಾದ್ರು. ಆದ್ರೆ ಯಾವಾಗ ರಾವ್ ಈ ಪ್ರಸ್ತಾಪ ತಂದ್ರೋ ಆಗ ನಾನೂ ಈಗ ನೀನು ಮಾಡ್ತಿರೋ ತಪ್ಪನ್ನೇ ಮಾಡಿದೆ. ಮಗಳ ಬಗ್ಗೆ ಯೋಚಿಸೋದು ಬಿಟ್ಟು ಅವಳಪ್ಪನ ಬಗ್ಗೆ ಯೋಚಿಸಿದೆ. ಅದ್ರಿಂದ್ಲೇ ಇಷ್ಟೆಲ್ಲಾ ಆಗಿದ್ದು. ರಾವ್ ಅವರ ಸಂಪೂರ್ಣ ಪೂರ್ವಾಪರ ಗೊತ್ತಿತ್ತು ನನಗೆ. ಆದರೆ ನಿನ್ನ ಬಗ್ಗೆ ತಿಳ್ಕೊಳ್ಳೋ ಸಣ್ಣ ಪ್ರಯತ್ನಾನೂ ನಾನು ಮಾಡ್ಲಿಲ್ಲ. ನೀನು ಈಗ್ಲಾದ್ರೂ ರಾವ್ ಅವರ ಬಗ್ಗೆ ಯೋಚ್ಸೋದು ಬಿಟ್ಟು ನಿನ್ನ ಬಗ್ಗೆ ಯೋಚಿಸು ಹುಡುಗಿ. ನಾನು ನಿನ್ನ ಮದ್ವೆ ಮಾಡ್ಕೋ ಅಂತ ಕೇಳ್ತಿರೋದು. ನಿನ್ನ ತಂದೆಯನ್ನು ಇದರ ಮಧ್ಯೆ ತಂದು ನಿನಗೆ ನೀನೇ ಮೋಸ ಮಾಡ್ಕೋಬೇಡ. ಅವರೇ ಅಷ್ಟು ಸ್ವಾರ್ಥಿಗಳಾಗಿರುವಾಗ ನೀನ್ಯಾಕೆ ಇಷ್ಟು ಯೋಚಿಸ್ತೀಯಾ? ಇನ್ನು ಅವರಿಂದ ನಮಗೇನಾದರೂ ತೊಂದ್ರೆ ಆಗುತ್ತೆ ಅಂತ ನಿನಗೆ ಅನ್ನಿಸಿದ್ರೆ ಅದನ್ನು ತಲೆಯಿಂದ ತೆಗೆದು ಹಾಕು. ಹೀ ಕಾಂಟ್ ಡೂ ಎನಿಥಿಂಗ್. ಅದು ಅವ್ರಿಗೂ ಗೊತ್ತು. ಹಾಗೆ ಮಾಡೋಕೆ ಸಾಧ್ಯವಾಗಿದ್ರೆ ನಿನ್ನ ಹಿಂದೆ ಬೀಳ್ತಾನೇ ಇರ್ಲಿಲ್ಲ ಅವ್ರು. ಇಷ್ಟು ಪ್ರೀತ್ಯಾದರ ತೋರಿಸಿ ಮನೆಗೆ ಬಾ ಮಗಳೇ ಅಂತ ಕರೆಯೋದು ಕನಸಿನ ಮಾತಾಗಿತ್ತು. ಅವರ ಹಾದಿಗಳೆಲ್ಲಾ ಬಂದ್ ಆಗಿರೋದ್ರಿಂದ್ಲೇ ನಿನ್ ಹಿಂದೆ ಬಿದ್ದೀದ್ದಾರೇ ಹೊರತು ಪ್ರೀತಿ, ಕಾಳಜಿ ಎಲ್ಲಾ ಶೂನ್ಯವೇ......"

"ಅದೂ ಸರೀನೇ ಅನ್ನಿ. ಕನಸಲ್ಲೂ ಅಂತಹ ಅದೃಷ್ಟ ಪಡ್ಕೊಂಡಿಲ್ಲ ನಾನು" ನಕ್ಕಳು.

"ಸಮನ್ವಿತಾ.... ಐ ಅಗ್ರೀ.... ನಿನ್ನ ಬದುಕಿನಲ್ಲಿ ಹಲವು ಕೊರತೆಗಳಿವೆ, ಸಮಸ್ಯೆಗಳಿವೆ. ಹಾಗಾಗಿ ನಿನ್ಗೆ ನೀನು ಅಸಂಪೂರ್ಣ ಅನಿಸಬಹುದು. ಆದರೆ ನಿನ್ನೆಲ್ಲಾ ಕೊರತೆಗಳು, ಮಿತಿಗಳ ಸಮೇತ ನಂಗೆ ನೀನಿಷ್ಟ. ಯಾಕೆಂದ್ರೆ ನಿನ್ನ ಇರುವಿಕೆ ನನ್ನನ್ನು ಸಂಪೂರ್ಣಗೊಳಿಸುತ್ತೆ. You make me complete. ನೀನು ಜೊತೆಗಿದ್ದಾಗ.... I feel that as my comfort zone. ನೀನೇ ಸೃಷ್ಟಿಸಿಕೊಂಡಿರೋ ಭ್ರಮೆಯ ವ್ಯೂಹದಿಂದ ಒಮ್ಮೆ ಹೊರಗೆ ಬಾ. ಬದುಕು ನಿನಗೆ ಬಹಳ ಕಠಿಣ ಪರೀಕ್ಷೆಗಳನ್ನು ಒಡ್ಡಿರಬಹುದು. ಆದರೆ ಈಗ ಆ ಪರೀಕ್ಷಾ ಕಾಲ ಮುಗಿದಿದೆ. ಎಲ್ಲರೂ ನಿನ್ನಪ್ಪ ಅಮ್ಮನಂತೆ ಇರೋದಿಲ್ಲ. ನಿನಗೋಸ್ಕರ ನಿನ್ನ ತುಂಬಾನೇ ಇಷ್ಟ ಪಡೋ ಮೂವರು ನಮ್ಮನೆಯಲ್ಲಿ ಕಾಯ್ತಾ ಇದ್ದಾರೆ. ನಾನಂತೂ ವರ್ಷಗಳಿಂದ ಕಾಯ್ತಿದ್ದೀನಿ. ನೀನು ತಗೊಂಡ ನಿರ್ಧಾರಕ್ಕೆ ಬದುಕಿನಲ್ಲಿ ಎಂದೂ ಪಶ್ಚಾತಾಪ ಪಡದಂತೆ‌ ನೋಡ್ಕೋಳ್ಳೋ ಜವಾಬ್ದಾರಿ ನನ್ನದು. ಹೇಳು ಸಮನ್ವಿತಾ............ ನಿನ್ನ ಆತ್ಮ ಸಖನಾಗಿ ಜೀವನಪರ್ಯಂತ ನಿನ್ನ ಜೊತೆ ಹೆಜ್ಜೆ ಹಾಕೋಕೆ ಅವಕಾಶ ಕೊಡ್ತೀಯಾ?"

ಅವನ ಮಾತಿಗೆ ಏನುತ್ತರಿಸಬೇಕೋ ತಿಳಿಯದೇ ಚಡಪಡಿಸಿದಳು. "ಅಭಿರಾಮ್…...." ಆರ್ತಳಾಗಿ ಅವನತ್ತ ನೋಟ ಹರಿಸಿದವಳು, "ಹೀಗೆ ಒಮ್ಮೆಲೇ ಕೇಳಿದ್ರೆ ನಾನು ಏನಂತ ಹೇಳಲೀ? ಅಪ್ಪ ಮನಸ್ಸಿಗೆ ಮಾಡಿರೋ ಗಾಯ ಬಹಳ ಆಳವಾದದ್ದು. ಅದರಿಂದ ಚೇತರಿಸಿಕೊಳ್ಳೋದೇ ಕಷ್ಟ ಆಗಿದೆ. ಇನ್ನು ಮದುವೆ..... ನನಗೆ ಸ್ವಲ್ಪ ಸಮಯ ಬೇಕು ಅಭಿರಾಮ್…..."

"ನನಗೆ ನಿನ್ನ ಪರಿಸ್ಥಿತಿ ಅರ್ಥ ಆಗುತ್ತೆ. ನಮ್ಮವರು ಅನ್ನಿಸಿಕೊಂಡವರು ಇಷ್ಟು ಸ್ವಾರ್ಥಿಗಳಾದರೆ ಮನಸ್ಸಿಗೆ ತುಂಬಾ ಬಲವಾದ ಹೊಡೆತ ಬೀಳುತ್ತೆ. ನಿನ್ಗೆ ಬೇಕಾದಷ್ಟು ಸಮಯ ತಗೋ. ಆದ್ರೆ........"

"ಆದ್ರೆ....ಏನು?" ಕುತೂಹಲದಿಂದ ಕೇಳಿದಳು.

"ಆದರೆ ನೀನು ಒಪ್ಪಿಕೊಳ್ಳೋವರೆಗೂ ನನ್ನ ಕಾಟ ಡೈಲೀ ಸಹಿಸ್ಕೋಬೇಕು ನೀನು. ನಾನು ನಕ್ಷತ್ರಿಕನ ವಂಶಸ್ಥ ಬೇರೆ. ಇವತ್ತಿಂದ ನಾನು ನಿನ್ನ ಬೆನ್ನು ಬಿಡದ ಬೇತಾಳ…..." ಮೂಗೆಳೆದ.

"ಉಫ್, ಇದಕ್ಕಿಂತ ಈಗ್ಲೇ ಒಪ್ಪೋದೇ ವಾಸಿನಾ ಅಂತ" ನಿಟ್ಟುಸಿರಿನಲ್ಲಿ ಹೇಳಿದಳು.

"ಸೂಪರ್, ನಂಗೆ ಓಕೆ ಮಾವನ ಮಗ್ಳೇ. ಇನ್ನು ನಿನ್ನತ್ತೆ, ಮಾವ, ನಾದಿನಿಗಂತೂ ಡಬಲ್ ಓಕೆ. ತಾಳಿ ಕಟ್ಲಾ?" ಅವನು ಕೇಳಿದಾಗ ತಲೆಯಾಡಿಸಿ ನಕ್ಕಳು.

"ಯಾವಾಗ್ಲೂ ಹೀಗೆ ನಗ್ತಾ ಇರೋಕೆ ಏನ್ರೀ ರೋಗ ನಿಮ್ಗೆ? ಅಂದ್ಹಾಗೆ ನಿಮ್ಮ ಗಾಯಕ್ಕೆ ಔಷಧಿ ಇರೋದು ನನ್ಹತ್ರನೇ ಡಾಕ್ಟ್ರೇ. ಈ ಪೇಷೆಂಟ್ ಡಾಕ್ಟ್ರನ್ನ ರಿಪೇರಿ ಮಾಡೋ ಏಕೈಕ ಡಾಕ್ಟ್ರು ನಾನೇ….."  ಕಾಲರ್ ಮೇಲೆತ್ತಿ ಹೇಳಿದವನ ವರಸೆಗೆ ಮತ್ತೂ ನಕ್ಕಳು.

"ಹೌದು... ನಾನು ಯಾರತ್ರನೂ ಹೇಳ್ದಿರೋ ವಿಷಯಗಳು, ನನ್ನ ಮನಸ್ಸಿಲ್ಲೇ ಉಳಿದ ಮಾತುಗಳು ಎಲ್ಲಾ ನಿಮಗ್ಹೇಗೆ ತಿಳಿಯುತ್ತೆ?" ಜ್ಞಾಪಿಸಿಕೊಂಡು ಕೇಳಿದಳು.

"ಜಿ.ಪಿ.ಎಸ್ ಟ್ರಾಕರ್ ತರ ನಿಮ್ಮ ಮನಸ್ಸನ್ನು ಟ್ರಾಕ್ ಮಾಡೋ ಡಿವೈಸ್ ಇದೆ ನನ್ಹತ್ರ" ನಗುತ್ತಾ ಹೇಳಿದ.

"ತಮಾಷೆ ಅಲ್ಲ ಸೀರೀಯಸ್ಲೀ ಹೇಳಿ."

"ಟಾಪ್ ಸಿಕ್ರೇಟ್. ಇಷ್ಟು ವರ್ಷಗಳಿಂದ ನಿನ್ನ ಬಗ್ಗೆನೇ ಧ್ಯಾನ ಮಾಡುತ್ತಿದ್ದ ನನ್ನ ತಪಸ್ಸಿಗೆ ಮೆಚ್ಚಿ ದೇವರು ಕೊಟ್ಟಿರೋ ವರ ಅಂದ್ಕೋ. ಅದೇನೋ ನೀನು ಹೇಗೆಲ್ಲಾ ಯೋಚಿಸ್ತಿಯಾ ಅಂತ ನನಗನ್ನಿಸುತ್ತೋ ನೀನೂ ಅದೇ ತರ ಯೋಚಿಸಿರ್ತೀಯಾ" ಎಂದ.

'ವರ್ಷಗಳಿಂದ' ಅನ್ನುವ ಪದವನ್ನು ಎರಡು ಬಾರಿ ಬಳಸಿದ್ದನ್ನು ಗಮನಿಸಿದ್ದಳು ಅವಳು. 'ವರ್ಷಗಳಿಂದ ಕಾಯ್ತಿದ್ದೀನಿ' 'ವರ್ಷಗಳಿಂದ ಧ್ಯಾನಿಸಿದ್ದೆ' ಎಂಬ ಮಾತುಗಳು. ಮತ್ತೊಂದು ಪ್ರಶ್ನೆ ಉದ್ಭವಿಸಿತ್ತು.

"ಅಲ್ಲಾ‌....."

"ಅಲ್ಲಾನೂ ಇಲ್ಲ, ಏಸುನೂ ಇಲ್ಲ‌…... ಅಬ್ಬಾ ಅದೆಷ್ಟು ಪ್ರಶ್ನೆ ಕೇಳ್ತೀಯ? ನಾನಲ್ಲಮ್ಮಾ…. ನೀನು ಕೆ.ಬಿ.ಸಿ ಪ್ರೋಗ್ರಾಮ್ ನಡ್ಸಿರೋದು"

"ಸುಮ್ನಿರಿ...... ವರ್ಷಗಳಿಂದ ಅಂದ್ರಲ್ಲ. ನಾವಿಬ್ರೂ ಭೇಟಿಯಾಗಿದ್ದೇ ಇತ್ತೀಚೆಗೆ. ಮತ್ಹೇಗೆ? ನಿಮ್ಗೆ ನಾನು ಮುಂಚೆಯಿಂದನೇ ಗೊತ್ತಾ?"

"ಅಬ್ಬಾ, ಎಂತಾ ಡಿಸ್ಕವರಿ ಮಾಡ್ಬಿಟ್ಟೆ. ಮೇಡಂ ಮೇರಿ ಕ್ಯೂರಿ ನೋಡು ನೀನು" ಅವನ ತಮಾಷೆ ಅವಳನ್ನು ತಾಕಲಿಲ್ಲ. ಅವನನ್ನೇ ಪರಿಶೀಲನಾ ದೃಷ್ಟಿಯಿಂದ ನೋಡುತ್ತಿದ್ದಳು.

ದೀರ್ಘವಾಗಿ ಉಸಿರೆಳೆದುಕೊಂಡವನು, "ಹೌದು ಕೆಲವು ವರ್ಷಗಳ ಹಿಂದೆ ಒಂದ್ಸಾರಿ ನಿನ್ನ ನೋಡಿದ್ದೆ. ನಿನ್ನ ಮುಖ ಅಚ್ಚಳಿಯದೇ ಉಳಿದಿತ್ತು ಮನಸಲ್ಲಿ. ಪಾರ್ಟಿಯಲ್ಲಿ ನಿನ್ನ ನೋಡ್ದಾಗಿನಿಂದ ನೆನಪಿಸಿಕೊಳ್ತಿದ್ದೇ. ಬಟ್ ಜ್ಞಾಪಕ ಬರ್ತಿರ್ಲಿಲ್ಲ. ನಿನ್ನೆ ನವ್ಯಾ ಅವರನ್ನು ನೋಡಿದಾಗ ನೆನಪಾಯ್ತು. ಅವತ್ತು ನಿಮ್ಮಿಬ್ರನ್ನೂ ಒಟ್ಟಿಗೆ ನೋಡಿದ್ದೆ.....  ಈಗ ಎಲ್ಲಿ, ಯಾವಾಗ, ಯಾಕೆ, ಏನು ಅಂತ ಪ್ರಶ್ನೆ ಕೇಳಿದ್ಯೋ ಅಷ್ಟೇ ಮತ್ತೆ" ಅವಳು ಮುಂದೆ ಪ್ರಶ್ನೆ ಕೇಳಿದಂತೆ ತಡೆದ. ಅವಳೂ ಆಸ್ಪತ್ರೆಯಲ್ಲಿ ನೋಡಿರಬಹುದೆಂದು ಸುಮ್ಮನಾದಳು.

ಇಬ್ಬರೂ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರಾಗಿದ್ದರು. ಆತ್ಮೀಯ ಸ್ನೇಹಿತರಂತೆ ಹರಟಿದರು ಇಬ್ಬರೂ. ಅವನು ಅವಳನ್ನು ರೇಗಿಸಿದಾಗ ಅವಳೂ ಅವನ ಕಾಲೆಳೆಯುವುದರಲ್ಲಿ ಹಿಂದೆ ಬೀಳಲಿಲ್ಲ. ಬಹಳ ಹೊತ್ತಿನ ಬಳಿಕ ಕಿಶೋರ್, ನವ್ಯಾ ಬಂದಾಗ ಅಲ್ಲೊಂದು ಮೋಡಗಳಿಲ್ಲದ ಶುಭ್ರ ಆಗಸದ ಬೆಡಗಿತ್ತು. ಇಬ್ಬರ ನಿರಾಳ ಮುಖಭಾವವೇ ಸಾಕಿತ್ತು ಅರ್ಥೈಸಿಕೊಳ್ಳಲು…... ಅವರಿಬ್ಬರಿಗೂ ಹೇಳ ತೀರದ ಸಂತಸ.

ಮಾತಿನ ಉಗಿಬಂಡಿಗೆ ಅವರಿಬ್ಬರ ಸೇರ್ಪಡೆಯಾದದ್ದು ಸಮನ್ವಿತಾಳಿಗೆ ಪೀಕಲಾಟ ತಂದಿತು. ಇದ್ದವನೊಬ್ಬ ಸಾಲದೇನೋ ಎಂಬಂತೆ ಬಂದವರಿಬ್ಬರೂ ಅವನೊಂದಿಗೆ ಸೇರಿ ಅವಳನ್ನು ರೇಗಿಸಿ ಗೋಳುಹೊಯ್ದುಕೊಂಡಿದಕ್ಕೆ ಅವಳ ಕೆಂಪಾದ ಕೆನ್ನೆಯೊಂದೇ ಮೂಕ ಸಾಕ್ಷಿಯಾಗಿತ್ತು.

ನಾಲ್ವರ ಸಂಭ್ರಮ ಕಂಡು ಬಾಂದಳದ ಜೋತ್ಸ್ನೆ ಇನ್ನಷ್ಟು ತಂಪಾಗಿ ಹೊಳೆದಿದ್ದಳು....... 

        ******ಮುಂದುವರೆಯುತ್ತದೆ******

ಅನೂಹ್ಯ 34

ಸಮನ್ವಿತಾ ಇಂದು ಡಿಸ್ಚಾರ್ಜ್ ಆಗಲೇಬೇಕೆಂದು ಪಣತೊಟ್ಟು ಮೀರಾ ಅವರು ವಾರ್ಡಿಗೆ ಬಂದೊಡನೆಯೇ ಅವರ ಬೆನ್ನು ಬಿದ್ದಿದ್ದಳು.

"ಪ್ಲೀಸ್ ಮೀರಾ ಮೇಡಂ, ಡಿಸ್ಚಾರ್ಜ್ ಮಾಡ್ಬಿಡಿ...ನಾನು ಎಲ್ಲಾ ಮೆಡಿಸಿನ್ ಸರಿಯಾಗಿ ತಗೋತೀನಿ. ಮನೇಲೇ ರೆಸ್ಟ್ ಮಾಡ್ತೀನಿ‌. ಹೇಗೂ ಕ್ವಾಟ್ರಸ್ ಪಕ್ಕದಲ್ಲೇ ಇದೆಯಲ್ಲ." ಗೋಗರೆದಳು.

"ನೋ ನೋ ಸಮನ್ವಿತಾ. ಡಾಕ್ಟರಾಗಿ ನೀನೆ ಹೀಗೆ ಮಾಡಿದ್ರೆ ಹೇಗೆ? ಜ್ವರ ಎಲ್ಲಾ ಕಡಿಮೆಯಾಗಿದ್ದರೂ ಸುಸ್ತು, ನಿಶ್ಯಕ್ತಿ ಹಾಗೇ ಇದೆ. ಅದಲ್ಲದೇ ನಿನ್ನ ಬ್ಲಡ್ ರಿಪೋರ್ಟ್ ಬಂದಿದೆ. RBC ಕೌಂಟ್ ತುಂಬಾನೇ ಕಡಿಮೆ ಇದೆ. ಯು ಆರ್ ಅನೀಮಿಕ್. ಇವತ್ತು ಡಿಸ್ಚಾರ್ಜ್ ಆಗೋ ಮಾತೇ ಇಲ್ಲ. ನೀನು ನಾನು ಹೇಳಿದ ಕೇಳಿ, ಕೇರ್ ತಗೊಂಡ್ರೆ ನಾಳೆಗೆ ನೋಡೋಣ. ಇಲ್ಲಾಂದ್ರೆ ನಾಳೆಗೂ ಅನುಮಾನವೇ" ಒಂದೇ ಮಾತಿನಲ್ಲಿ ನಿರಾಕರಿಸಿದರು. ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದಳು. 

ಮೀರಾ ಅವಳನ್ನು ತಪಾಸಣೆ ಮಾಡಿ, ಮೃದುಲಾ ಹಾಗೂ ಶರ್ಮಾರೊಂದಿಗೆ ಒಂದಿಷ್ಟು ಮಾತನಾಡಿ ವಾರ್ಡಿನಿಂದ ಹೊರಟ ಮೇಲೆ ತಾವೂ ಮನೆಗೆ ಹೊರಡುವುದೆಂದು ಹೇಳಿದರು ಸಚ್ಚಿದಾನಂದ.

"ಅಪ್ಪಾ... ಈ ಅಣ್ಣ ವೈಭವನಿಗೆ ಸಮಾಧಾನ ಮಾಡೋಕೆ ಹೋದೋನು ಎಲ್ಲಿ ಅಂತ?" ಇನ್ನೂ ಬಾರದ ಅಣ್ಣನನ್ನು ಹುಡುಕಿದಳು ಆಕೃತಿ.

"ಹಲೋ, ಅವನಾಗ್ಲೇ ನನ್ನ ಸಮಾಧಾನ ಮಾಡಿ ಹೋಗಿ ತುಂಬಾ ಹೊತ್ತಾಯ್ತು. ಇಷ್ಟು ಹೊತ್ತು ನನ್ನ ಹತ್ರ ಇದ್ರೆ ಅವನು ನನ್ನ ಸಮಾಧಾನ ಅಲ್ಲ ವೈಕುಂಠ ಸಮಾರಾಧನೆ ಮಾಡ್ತಿದ್ದ ಅಷ್ಟೇ" ಒಳಬರುತ್ತಾ ಹೇಳಿದ ವೈಭವ್.

"ನಿನ್ನ ವೈಕುಂಠ ಸಮಾರಾಧನೆ ಮಾಡಿದ್ರೆ ವೈಕುಂಠಾಧಿಪತಿ ವಿಷ್ಣು ವೈಕುಂಠ ಬಿಟ್ಟು ಓಡಬಹುದು ನಿನ್ನ ಕಾಟಕ್ಕೆ" ಅಣಕಿಸಿದಳು. ಅವಳಿಗೆ ವೈಭವನಲ್ಲಿ ಅಣ್ಣನಷ್ಟೇ ಸಲುಗೆ. ಅಭಿಯನ್ನೇ ಬಿಡದವಳು ಇವನನ್ನು ಬಿಟ್ಟಾಳ?

"ನೀನು ಸ್ವಲ್ಪ ಸುಮ್ನಿರ್ತೀಯಾ? ಅಲ್ವೋ ಅವನು ನಿನ್ಹತ್ರ ತಾನೇ ಬಂದಿದ್ದು, ಮತ್ತೆಲ್ಲಿಗೆ ಹೋದ? ಆಗ್ಲಿಂದ ಫೋನ್ ಮಾಡ್ತಿದ್ದೀನಿ…..." ಸಚ್ಚಿದಾನಂದರ ಮಾತು ಮುಗಿಯುವುದರೊಳಗೆ ಕಿಶೋರ್, ಅಭಿರಾಮ್ ಇಬ್ಬರೂ ಹಾಜರಿದ್ದರು.

"ಏ ಮಗನೇ, ಎಷ್ಟು ಫೋನ್ ಮಾಡೋದೋ ನಿಂಗೆ? ಯಾಕೆ ರಿಸೀವ್ ಮಾಡಲಿಲ್ಲ?" ಗದರಿದಂತೆ ಕೇಳಿದರು ಮೃದುಲಾ.

"ಇಲ್ಲಮ್ಮಾ, ಈ ಡಿಟೆಕ್ಟಿವ್ ಸಾಹೇಬ್ರು ಫುಲ್ ಗರಂ ಆಗಿದ್ರು. ಇವನ ತಲೆ ಮೇಲೆ ಐಸ್ ಇಟ್ಟು ಬರೋವಾಗ ಕಿಶೋರ್ ಸಿಕ್ಕಿದ್ರು. ಹಾಗೇ ಇಬ್ರೂ ಮಾತಾಡ್ಕೊಂಡು ಬಂದ್ವಿ" ಸಮಜಾಯಿಷಿ ನೀಡಿದ.

"ಹೌದೋ, ನೀವಿಬ್ರೂ ಅಣ್ಣ ತಂಗಿ ಯಾವಾಗ್ಲೂ ನನ್ನ ಗೋರಿ ಕಟ್ಟೋದ್ರಲ್ಲೇ ಇದ್ರೆ ಇನ್ನೇನ್ ಮಾಡ್ಲಿ ನಾನು?" ಪೆಚ್ಚು ಮೋರೆಯಲ್ಲಿ ಕೇಳಿದ.

"ಅದ್ಸರಿ ನಾನು ಹೊರಗಿರ್ತೀನಿ ಅಂತ ಹೋದವನು ಈಗೇನು ಇಲ್ಲಿ ಪ್ರತ್ಯಕ್ಷ ಆಗ್ಬಿಟ್ಟಿದ್ದಿ?"

"ಮತ್ತಿನ್ನೇನು, ನಾನಾಗ್ಲಿಂದ ಕಾರ್ ಹತ್ರ ಕಾದೂ ಕಾದೂ ಸುಸ್ತಾಯ್ತು. ನೀವ್ಯಾರೂ ಬರೋ ಲಕ್ಷಣ ಕಾಣ್ಲಿಲ್ಲ. ಯಾಕೋ ಗೊತ್ತಿಲ್ಲ ಬೀರ್. ಅಕ್ಕಪಕ್ಕ ಇರೋರೆಲ್ಲಾ ನನ್ನ ಸಂಶಯಾಸ್ಪದವಾಗಿ ನೋಡ್ತಿದ್ರು. ಅದ್ಕೇ ಇಲ್ಲಿಗೆ ಬಂದೆ….." ಸತ್ಯವನ್ನೇ ಹೇಳಿದ.

"ನಿನ್ನ ಅವತಾರ ನೋಡ್ಕೊಂಡಿದ್ದೀಯಾ? ಮಿಸ್ಟರ್ ಬೀನ್ ಗೆ ಶೆರ್ಲಾಕ್ ಹೋಮ್ಸ್ ಬಟ್ಟೆ ಹಾಕ್ದಂಗಿದೆ. ಇರೋದು ಚಿಕ್ಕಣ್ಣನ ತರ, ಸಾಂಗ್ಲಿಯಾನ ರೇಂಜಿಗೆ ಬಿಲ್ಡಪ್ ಬೇಕಾ? ನೀನು ಈ ತರ ಇದ್ರೆ ಜನ ನಿನ್ನ ಸಂಶಯಾಸ್ಪದವಾಗಿ ನೋಡ್ದೇ ಇನ್ನೇನ್ ಮಾಡ್ತಾರೆ?" ಕೇಳಿದಳು ಆಕೃತಿ.

"ನೀನು ನನ್ನ ತುಂಬಾ ಅಂಡರ್ ಎಸ್ಟಿಮೇಟ್ ಮಾಡ್ತಿದ್ದೀ ಕೃತಿಹ..... ನಡೀಲಿ ನಡೀಲಿ, ಆದ್ರೆ ನೆನಪಿಟ್ಕೋ…... ಪ್ರತೀ ನಾಯಿಗೂ ಅದರದ್ದೇ ದಿನ ಬರುತ್ತೆ. ಹಾಗೇ ನನಗೂ ಒಂದಿನ ಬರುತ್ತೆ. ಮೋದಿಜೀ ನನ್ನ ಹೊಗಳಿ ಸನ್ಮಾನ ಮಾಡ್ತಾರಲ್ಲ, ನನ್ ಮಗಂದ್ ಅವತ್ತು.... ಅವತ್ತು... ನಾನು ಮಾತಾಡ್ತೀನಿ" ಕೆಚ್ಚೆದೆಯಿಂದ ಹೇಳಿದ.

"ಲೋ ಡಿಟೆಕ್ಟಿವ್, ಅದ್ಯಾಕೋ ಯಾವಾಗ್ಲೂ ಮೋದಿಯವರಿಂದಲೇ ಸನ್ಮಾನ ಬೇಕು ಅಂತೀಯಾ? ನಮ್ಮ ಕರುನಾಡ ಕುಮಾರರಿಂದ ಸನ್ಮಾನ ಮಾಡ್ಸಿಕೊಳ್ಳೋಕೇನು ದಾಢಿ ನಿನ್ಗೆ?" ಅಭಿಯ ಪ್ರಶ್ನೆಗೆ ವೈಭವ್ ಚಿಂತಾಕ್ರಾಂತ....

"ಇವರ ಸನ್ಮಾನ ಹಾಳಾಗಿ ಹೋಗ್ಲಿ, ಮೊದ್ಲು ಇವರು ಹುಡುಕ್ತಿರೋದೆಲ್ಲಾ ಸಿಕ್ಕಿದ್ರೆ ಸಾಕಾಗಿದೆ. ಇವರೆಲ್ಲ ನನ್ನ ಕಸ್ಟಮರ್ಸ್ ಕಣೋ. ಯಾವಾಗ ನೋಡಿದ್ರೂ ಅದು ಹುಡುಕಿ ಕೊಡಿ, ಇದು ಹುಡುಕಿ ಕೊಡಿ ಅಂತ ಬರ್ತಾರೆ. ಹುಡುಕಿ ಕೊಡುವಂತದ್ದಾದ್ರೂ ಕೇಳ್ತಾರಾ? ಮುಂಡಾ ಮೋಚ್ತು…... ಅದೂ ಇಲ್ಲ. 'ನಿಖಿಲ್ ಎಲ್ಲಿದ್ಯಪ್ಪಾ, ನಿಖಿಲ್ ಎಲ್ಲೂ ಕಾಣ್ತಿಲ್ಲ, ಅವನನ್ನು ಹುಡುಕಿ' ಅಂತಾರೆ, 'ಚೇರಡಿ ಇಡೋಕೆ ನಿಂಬೆ ಕಾಯಿ ಹುಡುಕಿ' ಅಂತಾರೆ, 'ವಿಶ್ವಾಸಮತಕ್ಕೆ ಎಂ.ಎಲ್.ಎಗಳನ್ನು ಹುಡುಕಿ' ಅಂತಾರೆ, 'ಎಂ.ಎಲ್.ಎ ಗಳಿಗೆ ರೆಸಾರ್ಟ್ ಹುಡುಕಿ' ಅಂತಾರೆ, 'ಅಸಲಿ ಸುಮಲತಾನ ಹುಡುಕಿ' ಅಂತಾರೆ, 'ಟೆಂಪಲ್ ರನ್ ಗೆ ದೇವಸ್ಥಾನ ಹುಡುಕಿ' ಅಂತಾರೆ.... ಅಪ್ಪಾ ಸಾಕಾಗೋಗಿದೆ ಇವರ ಸಹವಾಸ. ಮೊದ್ಲು ಇವರ ತಲೆ ಒಳಗೆ ಮೆದುಳು ಹುಡುಕ್ಬೇಕು" ಕೈ ಮುಗಿದವನನ್ನು ನೋಡಿ ಎಲ್ಲರೂ ನಕ್ಕರು.

"ಹೊಡೆತ ಸರಿಯಾಗಿ ಬಿದ್ದಿದೆ. ತುಂಬಾ ನೋವಿದೆಯಾ?" ಅವನ ಊದಿದ ಹಣೆ ಗಮನಿಸಿ ಕೇಳಿದಳು ಸಮನ್ವಿತಾ. ಇಲ್ಲವೆಂದು ತಲೆಯಾಡಿಸಿದ.

"ತಗೋಳಪ್ಪ ಡಾಕ್ಟರ್ ತುಂಬಾ ಜೋರಿದ್ದಾರೆ. ತಾವು ಅಡ್ಮಿಟ್ ಆಗಿದ್ರೂ ಬೇರೆ ಪೇಷೆಂಟುಗಳ ಬಗ್ಗೆ ಕಾಳಜಿ. ವೈಭೂ ಬೇಗ ಇಲ್ಲಿಂದ ಜೂಟ್ ಹೇಳು. ಇಲ್ಲಾಂದ್ರೆ ನಾಲ್ಕು ದಬ್ಬಣ ಸೂಜಿ ಗ್ಯಾರಂಟಿ" ಅಣಕವಾಡಿದ.

"ನೀನು ಸುಮ್ನೆ ಅವಳನ್ನು ಗೋಳುಹೊಯ್ಕೋಬೇಡ. ತುಂಬಾ ಹೊತ್ತಾಯ್ತು. ಮನೆಗೆ ಹೋಗೋಣ" ಎಲ್ಲರನ್ನೂ ಹೊರಡಿಸಿದರು ಮೃದುಲಾ. ಹೇಗೂ ಚೈ ಡಾರ್ಲಿಂಗ್ ಸಂಜೆಗೇ ಬರುವುದೆಂದು ವೈಭವನೂ ಅವರೊಂದಿಗೆ ಹೊರಟ. 

ಅಭಿರಾಮನಿಗೆ ಒಮ್ಮೆ ಸಮನ್ವಿತಾಳೊಂದಿಗೆ ಮಾತನಾಡಬೇಕಿತ್ತು. ಕಿಶೋರನೂ ಅದನ್ನೇ ಹೇಳಿದ್ದ. ಆದರೆ ಈಗಂತೂ ಸಾಧ್ಯವಿರಲಿಲ್ಲ. ಎರಡು ದಿನದಿಂದ  ಆಫೀಸಿನತ್ತ ಸರಿಯಾಗಿ ಗಮನ ಹರಿಸಿರಲಿಲ್ಲ. ಇಂದು ಹೋಗಲೇಬೇಕಿತ್ತು. ಜೊತೆಗೆ ರಾವ್ ಅವರ ಮುಂದಿನ ನಡೆಯ ಬಗ್ಗೆಯೂ ನೋಡಬೇಕಿತ್ತು. ಇಷ್ಟಕ್ಕೇ ಕೈ ಕಟ್ಟಿ ಕೂರುವ ಮನುಷ್ಯ ಆತನಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದ್ದ. ಬಹುಶಃ ಸಮನ್ವಿತಾಳನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಬಹುದು ಎಂದು ಬಲವಾಗಿ ಅನಿಸಿತೊಡಗಿತ್ತು. 

"ಸಮನ್ವಿತಾ, ನಿನ್ಹತ್ರ ಬಹಳ ಮುಖ್ಯವಾದ ವಿಷಯ ಮಾತಾಡೋದು ಇದೆ. ಬಟ್ ಈಗ ಹೋಗಲೇಬೇಕು. ಕೆಲ್ಸ ಇದೆ. ನಾನು ಸಂಜೆ ಬರ್ತೀನಿ. ಅಲ್ಲಿಯವರೆಗೆ ಜೋಪಾನ. ನೀನು ಈಗ ಪೇಷೆಂಟ್, ಡಾಕ್ಟರ್ ಅಲ್ಲಾ ಅನ್ನೋದು ನೆನಪಿರಲಿ. ಅದನ್ನೇನಾದ್ರೂ ಮರೆತರೇ ಮೀರಾ ಅವರಿಗೆ ಹೇಳಿ ಇನ್ನೊಂದು ವಾರ ಇಲ್ಲೇ ಅಡ್ಮಿಟ್ ಮಾಡಿಸ್ತೀವಷ್ಟೇ, ಅಲ್ವಾ ಕಿಶೋರ್?" 

"ಒಂದು ವಾರ ಏನು, ಇವಳು ಹೀಗೆ ಆಡ್ತಿದ್ರೇ ಒಂದು ತಿಂಗಳು ಇಲ್ಲೇ" ನಕ್ಕನು ಕಿಶೋರ್. ಉರಿನೋಟ ಬೀರಿದಳು ಅವನೆಡೆ.

"ಸಂಜೆ ಬರ್ತೀನಿ ಡಾಕ್ಟ್ರೇ" ಎಂದು ಬಾಗಿಲ ತನಕ ಹೋದವನು ತಿರುಗಿ, "ಬಿ ಕೇರ್ ಫುಲ್. ನಿನ್ನ ತಂದೆ ತಾಯಿ ನಿನ್ನ ನೋಡೋಕೆ ಬರಬಹುದು ಅನ್ಸುತ್ತೆ" ಅವನ ಮನಸ್ಸಿಗೆ ಭಾಸವಾದದ್ದನ್ನು ಹೇಳಿದ.

ವಿಷಾದದ ನಗುವೊಂದು ಸುಳಿದು ಮರೆಯಾಯಿತು ಅವಳಲ್ಲಿ.

"ನೋಡಲು, ಮಾತನಾಡಲು ಇನ್ನೇನೂ ಉಳಿದಿಲ್ಲ. ನಾನು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರವೂ ಅವರಲ್ಲಿಲ್ಲ. ನನ್ನ ಮುಖ ನೋಡುವಷ್ಟು ಧೈರ್ಯವೂ ಇಲ್ಲ. ಆದರೂ ನೀವು ಹೇಳಿದಂತೆ ಬರಬಹುದು ಅವರು. ಯಾಕೆ ಬರುವರೆಂಬ ಅಂದಾಜೂ ನನಗಿದೆ. ಐ ವಿಲ್ ಮ್ಯಾನೇಜ್. ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್ ಅಭಿರಾಮ್" ದೃಢವಾಗಿ ನುಡಿದಳು.

"ಐ ನೋ ಯು ವಿಲ್ ಮ್ಯಾನೇಜ್. ಎಷ್ಟೆಂದರೂ ಈ ಡಾಕ್ಟರ್ ಗಳಿಗೆ ಧೈರ್ಯ ಜಾಸ್ತಿ ಅಲ್ವಾ. ಅದಕ್ಕೇ ನೋಡಿ ನಿಮ್ಮ ಹತ್ರ ಮಾತಾಡೋಕೆ ಭಯ ಆಗೋದು. ಎಲ್ಲಿ ಹೊಟ್ಟೆ ಕೊಯ್ದು ಕರುಳು ಬಗೀತೀರೋ, ಎಲ್ಲಿ ಸೂಜಿ ತಗೊಂಡು ಬಾಯಿ ಹೊಲಿತೀರೋ ಅನ್ನೋ ಭಯಕ್ಕೆ ಮಾತೇ ಹೊರಡಲ್ಲ ನಂಗೆ" ಅವನ ಮಾತಿಗೆ ನಕ್ಕಳು.

"ಹೀಗೆ ನಗ್ತಾ ಇರು ಸಂಜೆ ತನಕ. ಅಷ್ಟೊತ್ತಿಗೆ ನಾನು ಬಂದ್ಬಿಡ್ತೀನಿ ನಿನ್ನ ತಲೆ ತಿನ್ನೋಕೆ. ಸಧ್ಯಕ್ಕೆ ಬಾಯ್" ಎಂದವನು ಮೂವರಿಗೂ ಕೈ ಬೀಸಿ ಹೊರಟ.

"ನೋಡು, ಎಷ್ಟು ಕೇರ್ ತಗೋತಾನೆ ನಮ್ಮ ರಾಜಕುಮಾರ.ಯ" ಅವಳ ಮೂಗೆಳೆಯುತ್ತಾ ಹೇಳಿದಳು ನವ್ಯಾ. ಕಿಶೋರನೂ ಅವಳೊಂದಿಗೆ ಸೇರಿ ಸಮನ್ವಿತಾಳನ್ನು ಛೇಡಿಸಲಾರಂಭಿಸಿದಾಗ ಸುಮ್ಮನೆ ನಕ್ಕಳಷ್ಟೇ. ಮನಸ್ಸು ಅಭಿರಾಮ್ ವ್ಯಕ್ತಿತ್ವದ ಅವಲೋಕನದಲ್ಲಿ ತೊಡಗಿತ್ತು.

           ‌ *************************

ಮಧ್ಯಾಹ್ನ ಊಟಕ್ಕೊಂದು ವಿರಾಮ ನೀಡಿ ಮತ್ತೆ ಅವ್ಯಾಹತವಾಗಿ ಮುಂದುವರೆದಿತ್ತು ಗೆಳತಿಯರ ಬಿಡುವಿಲ್ಲದ ಹರಟೆ. ನಡುವಲ್ಲಿ ಕಾರ್ತಿಕ್ ಬೇರೆ ಸೇರಿಕೊಂಡಿದ್ದ ತನ್ನ ಕಾಲೇಜಿನ ವಿಚಾರಗಳ ಒಗ್ಗರಣೆ ಹಾಕಲು. ಇವರ ನಡುವೆ ಕಿಶೋರ್ ಆಗೀಗ ಒಂದೊಂದು ಮಾತು ಸೇರಿಸುತ್ತಿದ್ದದ್ದು ಬಿಟ್ಟರೆ ಮೂಕ ಪ್ರೇಕ್ಷಕನೇ ಸರಿ.

ಇಂತಹ ಸುಸಂದರ್ಭವನ್ನು ಇನ್ನಷ್ಟು ಕಳೆಗಟ್ಟಿಸುವಂತೆ ನವ್ಯಾಳ ಜಂಗಮವಾಣಿಯ ಇಂಚರ ಕರೆ ಬಂದಿದೆ ಎಂದು ಸಾರಿ ಸಾರಿ ಹೇಳಿತು. ಫೋನ್ ಕೈಗೆತ್ತಿಕೊಂಡಳು. ಮಂಗಳಾರ ಕರೆ.

ಇಷ್ಟು ಹೊತ್ತು ಉಲ್ಲಾಸದಲ್ಲಿದ್ದವಳಿಗೆ ಒಮ್ಮೆಲೇ ಆತಂಕ ಶುರುವಾಯಿತು. 'ನನ್ನ ಕನಸು ನಿಜವಾದರೆ......' ಭಯದಿಂದ ಬಿಳುಚಿಕೊಂಡತು ಮುಖ. 

"ಏನಾಯ್ತೇ? ಯಾರು ಕಾಲ್ ಮಾಡಿದ್ದು?" ಸುಮ್ಮನೆ ಮೊಬೈಲ್ ಸ್ಕ್ರೀನ್ ನೋಡುತ್ತಾ ಕುಳಿತವಳನ್ನು ಉದ್ದೇಶಿಸಿ ಕೇಳಿದ ಕಿಶೋರ್. ಅವನು ಏನು ಹೇಳಿದನೆಂದು ಕೇಳಿದೆ ಸುಮ್ಮನೆ ಪೆಚ್ಚಾಗಿ ತಲೆಯಾಡಿಸಿದವಳು ಕರೆ ಸ್ವೀಕರಿಸಿದಳು ನಡುಗುವ ಕೈಗಳಿಂದ.

"ಯಾಕಮ್ಮಾ ಇಷ್ಟು ಹೊತ್ತು ಫೋನ್ ತೆಗೆಯೋಕೆ? ಸಮನ್ವಿತಾ ಹುಷಾರಾಗಿದ್ದಾಳೆ ತಾನೇ?" ಅದೇ ಅಕ್ಕರೆಯ ಸ್ವರ. ಹೋದ ಜೀವ ಬಂದಂತಾಯಿತು. 

"ಹೂಂ ಅಮ್ಮಾ, ಅವ್ಳು ಆರಾಮಾಗಿದ್ದಾಳೆ. ಬಹುಶಃ ನಾಳೆಗೆ ಡಿಸ್ಚಾರ್ಜ್ ಮಾಡಬಹುದು. ಕಾರ್ತಿಕ್ ಕೂಡಾ ಬಂದಿದ್ದಾನೆ. ಎಲ್ಲಾ ಮಾತಾಡ್ತಿದ್ವೀ. ಹಾಗಾಗಿ ಫೋನ್ ರಿಸೀವ್ ಮಾಡೋದು ಲೇಟಾಯ್ತು" ಉಸಿರೆಳೆದುಕೊಂಡು ಹೇಳಿದಳು.

"ಸರಿ ಹಾಗಿದ್ರೆ. ನಾವೂ ನಾಳೆ ಬೆಳಿಗ್ಗೆ ಬಂದು ಬಿಡ್ತೀವಿ. ಅವಳನ್ನು ಡಿಸ್ಚಾರ್ಜ್ ಮಾಡ್ಸಿ ನಮ್ಮನೇಗೇ ಕರ್ಕೊಂಡು ಬಂದ್ಬಿಡಿ. ಒಂದು ವಾರ ರಜಾ ಹಾಕಿ ಸುಧಾರಿಸಿಕೊಳ್ಳಲಿ ಮಗು. ನಾವೇ ನೋಡ್ಕೋಳ್ಳೋಣ" ಎಂದರಾಕೆ. ಮಂಗಳಮ್ಮನಿಗೆ ಸಮನ್ವಿತಾಳ ಮನೆಯ ಸ್ಪಷ್ಟ ಪರಿಸ್ಥಿತಿ ಅರಿವಿಲ್ಲದಿದ್ದರೂ ಅಪ್ಪ ಅಮ್ಮ ಎನಿಸಿಕೊಂಡವರಿಗೆ‌ ಅವಳ ಬಗ್ಗೆ ಕಾಳಜಿ ಕಡಿಮೆ ಎಂಬುದರ ಅರಿವಿತ್ತು. ಹಾಗಾಗಿಯೇ ತಾವೇ ನಿಂತು ನೋಡಿಕೊಳ್ಳುವ ತೀರ್ಮಾನ ಮಾಡಿದ್ದರು.

"ಸರಿ ಅಮ್ಮ. ನಾನು ಹೇಳ್ತೀನಿ. ಆದ್ರೆ ಅವಳು ಒಪ್ಪೋದು ಅನುಮಾನವೇ" ಬಡಪೆಟ್ಟಿಗೆ ಒಪ್ಪಲಾರಳು ಎಂಬುದು ಗೊತ್ತಿದ್ದ ವಿಷಯವೇ. "ನೀವೇ ಅವಳ ಹತ್ತಿರ ಮಾತನಾಡಿ ಒಪ್ಪಿಸಿ. ನೀವು ಹೇಳಿದ್ರೆ ಕೇಳ್ತಾಳೆ" ಅತ್ಯುತ್ತಮ ಉಪಾಯ ಹೇಳಿ ಫೋನನ್ನು ಸಮನ್ವಿತಾಳ ಕೈಗೆ ಕೊಟ್ಟಳು. ಕಾರ್ತಿಕ್ ಬಂದು ತುಂಬಾ ಹೊತ್ತಾಗಿದ್ದರಿಂದ ಮೂವರಿಗೂ ಬಾಯ್ ಹೇಳಿ ಮನೆಗೆ ವಾಪಾಸು ಹೊರಟ. ಅವನು ಹೊರಟ ಎನ್ನುವುದಕ್ಕಿಂತ ನವ್ಯಾ ಹೊರಡಿಸಿದಳು ಎನ್ನುವುದೇ ಸೂಕ್ತ. ಅವನು ಅಲ್ಲೇ ಮಾತಲ್ಲೇ ಮನೆ ಕಟ್ಟುತ್ತಾ ಕೂರಲು ತಯಾರಿದ್ದ. ಆದರೆ ಎರಡು ದಿನಗಳಲ್ಲಿ ಆಂತರಿಕ ಪರೀಕ್ಷೆಗಳಿದ್ದುದರಿಂದ ಓದಿಕೋ ಎಂದು ಅವನನ್ನು ಹೊರಡಿಸಿದ್ದಳು.

ಮಂಗಳಾ ಸಮನ್ವಿತಾಳೊಂದಿಗೆ ಮಾತನಾಡಿ ಅವಳನ್ನು ಒಪ್ಪಿಸಿಯೇ ಫೋನಿಟ್ಟಿದ್ದು.

"ಸೊಸೆಗೆ ತಕ್ಕ ಅತ್ತೆ.. ನೀನು ಐಡಿಯಾ ಕೊಡೋದು, ಅವ್ರು ಅದನ್ನ ಜಾರಿಗೆ ತರೋದು. ನೋಡಮ್ಮಾ, ನಾಳೆ ನಿಮ್ಮನೆಗೇ ಬರ್ತೀನಿ. ಒಂದೆರಡು ದಿನ ರಜಾ ತಗೊಂಡು ರೆಸ್ಟ್ ಕೂಡಾ ಮಾಡ್ತೀನಿ. ಆದ್ರೆ ಒಂದು ವಾರ ಎಲ್ಲಾ ಆಗೋಲ್ಲ ಕಣೇ ಪ್ಲೀಸ್‌ ಅರ್ಥ ಮಾಡ್ಕೋ" 

"ನಾಳೆ ಮನೆಗೆ ಹೋಗೋಣ. ಎರಡು ದಿನ ರೆಸ್ಟ್ ಮಾಡು. ಆಮೇಲಿನ ಪರಿಸ್ಥಿತಿ ನೋಡಿ ಮುಂದಿನ ಮಾತು" ಕಟ್ಟುನಿಟ್ಟಾಗಿ ನುಡಿದಳು ನವ್ಯಾ.

"ಹೋಗಿ ಹೋಗಿ ನಿಮ್ಮಿಬ್ಬರ ಕೈಲಿ ಸಿಕ್ಕಿಹಾಕೊಂಡಿದ್ದೀನಲ್ಲ. ಎಲ್ಲಾ ನನ್ನ ಕರ್ಮ ಅನುಭವಿಸಲೇಬೇಕು" 

"ರೈಟ್, ತಯಾರಾಗಿರು. ನಾಳೆಯಿಂದ ಮಂಗಳಾ-ನವ್ಯಾರ ಜುಗಲ್ ಬಂದಿಗೆ. ಇಲ್ಲಾದ್ರೂ ಅಪ್ಪಿತಪ್ಪಿಯಾದ್ರೂ ಮಂಚದಿಂದ ಇಳ್ದಿದ್ದಿಯೇನೋ. ಆದರೆ ನಾಳೆಯಿಂದ ನೆಲಕ್ಕೆ ಕಾಲೂರಿದ್ರೆ ಅಷ್ಟೇ.... ನಾನು ಲಗೇಜೆಲ್ಲಾ ಪ್ಯಾಕ್ ಮಾಡ್ತೀನಿ. ನಾಳೆಯಿಂದ ರಾಜಕುಮಾರಿ ಸಮನ್ವಿತಾ ಅವರ ನಮ್ಮನೆ ವಾಸ ಶುರು" ಕಿಶೋರ್ ಮತ್ತು ನವ್ಯಾರ ಸಂತಸಕ್ಕೆ ಪಾರವೇ ಇರಲಿಲ್ಲ. ಸಮನ್ವಿತಾ ಆಗಾಗ ಮನೆಗೆ ಬಂದು ಹೋಗುತ್ತಿದ್ದಳಾದರೂ ಎಂದೂ ಅವರಲ್ಲಿ ಉಳಿದಿರಲಿಲ್ಲ. ಈಗ ಹುಷಾರಿಲ್ಲದ ನೆಪದಲ್ಲಿಯಾದರೂ ತಮ್ಮ ಮನೆಯಲ್ಲಿ ನಿಲ್ಲುವಳೆಂದು ಅವರಿಬ್ಬರಿಗೂ ಆನಂದವಾಗಿತ್ತು.

ಆದರೆ ಅವರ ಸಂತೋಷದ ಕತ್ತು ಹಿಸುಕುವಂತೆ ಕೇಳಿ ಬಂದಿತ್ತು ಆ ಕರ್ಣ ಕಠೋರ ವಾಣಿ....

"ಹು ದ ಹೆಲ್ ಆರ್ ಯು ಟು ಟೇಕ್ ಕೇರ್ ಆಫ್ ಮೈ ಡಾಟರ್. ನಿನ್ಗೆ ಎಷ್ಟು ಸಲ ಹೇಳೋದು ಸಮನ್ವಿತಾ, ಇಂತ ಡರ್ಟೀ ಚೀಪ್ ಲೋ ಕ್ಲಾಸ್ ಜನರ ಜೊತೆ ಸೇರ್ಬೇಡಾ ಅಂತ. ವೈ ಕಾಂಟ್ ಯು ಅಂಡರ್ಸ್ಟಾಂಡ್?"

ತೀರಾ ಅಪರಿಚಿತರಾಗೇ ಉಳಿದವರ ಚಿರಪರಿಚಿತ ಸ್ವರ….... ಮಿಸ್ಸೆಸ್ ಮಾಲಿನಿ ರಾವ್…. ಅವಳ ಅಮ್ಮ?

ಮೆಲ್ಲನೆ ತಲೆಯೆತ್ತಿ ದನಿ ಬಂದಿತ್ತ ನೋಟ ಹರಿಸಿದಳು.

ಹೌದು. ಆಕೆಯೇ.... ತನ್ನ ತಂಗಿಯಂತೆ ಕಾಣುವ ಹಾಗೆ ಅಲಂಕರಿಸಿಕೊಂಡು ಬಂದಿರುವ ತನ್ನಮ್ಮ.... ಹಿಂದೆಯೇ ಕಾಣಿಸಿದ ಅಪ್ಪನೆಂಬ ದಲ್ಲಾಳಿ.... ಅಸಲಿಗೆ ಆಕೆಯನ್ನು ನೋಡಿದರೆ ಎದೆಯೆತ್ತರಕ್ಕೆ ಬೆಳೆದ ಮಗಳ ತಾಯಿಯೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಹಾಗಿತ್ತು ಆಕೆಯ ಗತ್ತು ಗೈರತ್ತು, ಅಲಂಕಾರ, ಆಡಂಬರ, ನಡವಳಿಕೆ. ಇಷ್ಟು ಹೊತ್ತು ಹಗುರಾಗಿದ್ದವಳಿಗೆ ಒಮ್ಮೆಲೇ ಕಾರ್ಕೋಟಕ ಹಾಲಾಹಲದ ಕಡಲಲ್ಲಿ ಮುಳುಗಿದಂತೆ ಭಾಸವಾಯಿತು. ಮೈ ಮನವೆಲ್ಲಾ ಕಹಿ ವಿಷ.

ಅವಳನ್ನು ಎಲ್ಲಕ್ಕಿಂತ ಹೆಚ್ಚು ನೋಯಿಸಿದ್ದು ಅವರು ಕಿಶೋರ್, ನವ್ಯಾಳ ಬಗ್ಗೆ ಆಡಿದ ಮಾತುಗಳು. ಅವಳ ಒಬ್ಬಂಟಿ ಬದುಕಿನ ಪಯಣದಲ್ಲಿ ಅವರಿಬ್ಬರ ಸ್ನೇಹ ಸಂಜೀವಿನಿಯಂತೆ. ಅಂತಹವರ ಬಗ್ಗೆ ಇಂತಹ ಹೀನ ಮಾತುಗಳು..... 

ಅವರಿಬ್ಬರಂತೂ ಈ ಅನಿರೀಕ್ಷಿತ ಮಾತುಗಳಿಂದ ಬೆಪ್ಪಾಗಿದ್ದರು. ರಾವ್ ದಂಪತಿಗಳ ಬಗ್ಗೆ ತಿಳಿದಿತ್ತಾದರೂ ಎಂದೂ ನೇರಾನೇರ ಭೇಟಿಯಾಗಿರಲಿಲ್ಲ. ಅವರು ಇಷ್ಟು ಕೀಳಾಗಿ ನುಡಿಯಬಹುದೆಂದು ಅನಿಸಿಯೂ ಇರಲಿಲ್ಲ.

ತಾವು ಹೊರಹೋಗುವುದೇ ಸೂಕ್ತ ಎನಿಸಿದರೂ, ಈಗಾಗಲೇ ಭೂಮಿಗಿಳಿದು ಹೋಗಿರುವ ಗೆಳತಿಯನ್ನು ಎಲ್ಲಿ ಪಾತಾಳಕ್ಕೆ ತಳ್ಳಿ ಬಿಡುವರೋ ಎಂಬ ಭಯ…... ಅಲ್ಲೇ ಸಪ್ಪೆ ಮೋರೆ ಹಾಕಿ ನಿಂತರು.

"ಅಷ್ಟು ಹೇಳಿದ್ರೂ ಇನ್ನೂ ಇಲ್ಲೇ ನಿಂತಿದ್ದೀರಲ್ಲ. ನಿಮಗೇನು ಮಾನ ಮರ್ಯಾದೆ ಇಲ್ವಾ? ಫ್ಯಾಮಿಲಿ ಮೆಂಬರ್ಸ್ ಮಧ್ಯೆ ನಿಮ್ಮಂತ ಆಳುಗಳಿಗೆ ಏನು ಕೆಲ್ಸ? ಗೆಟ್ ಔಟ್….." ಸತ್ಯಂ ರಾವ್ ಆಜ್ಞಾಪಿಸಿದಾಗ ಹೊರಹೋಗುವುದು ಅನಿವಾರ್ಯವಾಗಿತ್ತು.

ಆದರೆ ಸಮನ್ವಿತಾಳ ರಕ್ತ ಕುದಿಯತೊಡಗಿತು....... ಇಷ್ಟರವರೆಗೆ ಹೇಗೋ ಹರಸಾಹಸ ಪಟ್ಟು ತನ್ನನ್ನು ತಾನು ನಿಯಂತ್ರಿಸಿಕೊಂಡಿದ್ದಳು. ಇನ್ನು ಸಹಿಸಲಸಾಧ್ಯವೆನಿಸಿದ್ದೇ, "ಎಲ್ಲಿಗೆ ಹೊರಟ್ರೀ ನೀವಿಬ್ಬರೂ. ಸುಮ್ನೆ ಬಂದು ಕುತ್ಕೊಳ್ಳಿ ಇಲ್ಲಿ" ಹೊರಗೆ ಹೊರಟ ನವ್ಯಾ, ಕಿಶೋರನನ್ನು ತಡೆದಳು.

ಅವರಿಬ್ಬರೂ ಮುಖ ಮುಖ ನೋಡಿಕೊಂಡರು. "ಸಮಾ….. ನೀವು ಮಾತಾಡಿ, ನಾವಿಲ್ಲೇ ಕ್ಯಾಂಟೀನಿನಲ್ಲಿ ಇರ್ತೀವಿ" ನಿಧಾನಕ್ಕೆ ಹೇಳಿದಳು ನವ್ಯಾ.

"ನವ್ಯಾ, ನೋಡು ನನಗೆ ಸಿಟ್ಟು ಹತ್ತಿಸಬೇಡ. ನನ್ನ ಮಾತಿಗಿಂತ ಯಾರೋ ಗುರುತು ಪರಿಚಯ ಇಲ್ಲದಿರೋರ ಮಾತೇ ಹೆಚ್ಚಾಯ್ತಾ ನಿನ್ಗೆ? ಸುಮ್ನೆ ಇಲ್ಲೇ ಕುತ್ಕೋಳಿ ಅಷ್ಟೇ" ಆಜ್ಞಾಪಿಸಿದಂತೆ ಹೇಳಿದಾಗ ಅವರಿಬ್ಬರೂ ಅಲ್ಲೇ ನಿಲ್ಲುವುದು ಅನಿವಾರ್ಯವಾಯಿತು.

"ವಾಟ್ ರಬ್ಬಿಷ್ ಈಸ್ ದಿಸ್ ಬೇಬೀ? ಆ ಡರ್ಟಿ ಡಾಗ್ಸ್ ಪರ ವಹಿಸಿ ನಮ್ಮ ಮರ್ಯಾದೆ ತೆಗಿತಿದ್ಯಲ್ಲ. ನೋಡು ಇದೆಲ್ಲಾ ಸರಿ ಇರೋಲ್ಲ" ಕಿರುಚಿದರು ಸತ್ಯಂ ರಾವ್.

"ಮಿಸ್ಟರ್….. ನಿಮಗಿಷ್ಟ ಬಂದಂತೆ ಕಿರುಚಾಡೋಕೆ ಇದು ನಿಮ್ಮನೆ ಅಲ್ಲ ಆಸ್ಪತ್ರೆ ಅನ್ನೋದು ತಲೆಯಲ್ಲಿ ಇರ್ಲಿ. ಇವರಿಬ್ರ ಬಗ್ಗೆ ಮಾತಾಡೋಕೆ ನೀವ್ಯಾರು? ಯಾರ್ರೀ ನೀವು?" 

"ಬೇಬಿ, ಮನೆ ಅಂದ್ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಅಷ್ಟಕ್ಕೇ ಯಾರಾದ್ರೂ ಮನೆ ಬಿಟ್ಟು ಬರ್ತಾರಾ? ನಾವು ನಿನ್ನ ಪಪ್ಪ ಮಮ್ಮಿ ಸಮನ್ವಿತಾ. ನಾವೇನೇ ಮಾಡಿದ್ರೂ ನಿನ್ನ ಒಳ್ಳೆದಕ್ಕೇ ಕಣೇ......" ಬೆಣ್ಣೆಯಲ್ಲಿ ಅದ್ದಿ ತೆಗೆದಂತೆ ಮಾತನಾಡಿದರು ಮಾಲಿನಿ. ಶತಾಯಗತಾಯ ಅವಳನ್ನು ಮನೆಗೆ ಕರೆದೊಯ್ಯಲೇ ಬೇಕಿತ್ತು.

"ಪಪ್ಪ ಮಮ್ಮಿ.....? ನಿಮ್ಮಂತ ತಂದೆತಾಯಿಗಳಿಗಿಂತ ಶತ್ರುಗಳೇ ವಾಸಿ. ಅವರಿಗಾದರೂ ಚೂರುಪಾರು ಅಂತಃಕರಣ ಇರುತ್ತೆ. ನೀವಂತೂ ಅವರಿಗಿಂತ ಗ್ರೇಟ್ ಬಿಡಿ. ನಿಮ್ಮ ಬಿಸ್ನೆಸ್ ಉದ್ಧಾರ ಆಗಿ ದುಡ್ಡು ಬರುತ್ತೆ ಅಂದ್ರೆ  ನನ್ನನ್ನೂ ಮಾರ್ತೀರಾ, ನಿಮ್ಮನಿಮ್ಮನ್ನೇ ಬೇಕಾದ್ರೂ ಮಾರ್ಕೋತೀರಾ. ಥೂ….. ಇಂತಾ ಜನ್ಮನೂ ಬೇಕಾ? ನೋಡಿ ನೀವು ಏನಾದ್ರೂ ಮಾಡ್ಕೋಳಿ. ಬಟ್ ನನ್ನ ಸುದ್ದಿಗೆ ಬರ್ಬೇಡಿ ಅಷ್ಟೇ" ಕಟುವಾಗಿ ನುಡಿದಳು.

"ಎಷ್ಟು ರೂಡ್ ಆಗಿ ಮಾತಾಡ್ಬಿಟ್ಟೆ ಬೇಬಿ. ನೀನು ಮನೆಬಿಟ್ಟು ಹೋದಾಗಿಂದ ನಾವೆಷ್ಟು ಬೇಜಾರಾಗಿದ್ದೀವಿ ಅಂತ ನಮ್ಗೆ ಮಾತ್ರ ಗೊತ್ತು. ನಮಗೆ ನಿನ್ನ ಬಿಟ್ಟು ಇನ್ಯಾರಿದ್ದಾರೆ? ನಮ್ಮ ಆಸ್ತಿಗೆಲ್ಲಾ ನೀನೊಬ್ಬಳೇ ವಾರಸುದಾರಿಣಿ. ನಮ್ಮ ಆಸ್ತಿ ನೀನೇ. ಏನೋ ಎಲ್ಲಾ ಫಿಕ್ಸ್ ಮಾಡಿ ನಿನ್ಗೆ ಸರ್ಪ್ರೈಸ್ ಕೊಡೋಣ ಅಂತ ಮದ್ವೆ ವಿಚಾರ ಮುಚ್ಚಿಟ್ರೆ ನೀನು ಅದನ್ನೇ ತಲೆಹೋಗೋ ವಿಷಯ ಅನ್ನೋ ತರ ನಮ್ಮ ಮೇಲೆ ಸಿಟ್ಟಾಗ್ತಿದ್ದೀಯಲ್ಲಾ? ನಿನ್ಗೆ ಹುಷಾರಿಲ್ಲ ಅಂತ ಗೊತ್ತಾದ ಕೂಡ್ಲೇ ಓಡೋಡಿ ಬಂದ್ವಿ ಗೊತ್ತಾ" ಮೊಸಳೆ ಕಣ್ಣೀರು ಸುರಿಸುತ್ತಾ ಹೇಳಿದರು ಮಾಲಿನಿ ರಾವ್. ಸಮನ್ವಿತಾಳ ಕೋಪ ಭುಗಿಲೆದ್ದಿತು.

"ಐದು ವರ್ಷದ ನನ್ನ ಹಿಂದುಮುಂದು ನೋಡ್ದೇ ಲಂಡನ್ನಿನ ಬೋರ್ಡಿಂಗ್ ಸ್ಕೂಲಿಗೆ ಬಿಸಾಕಿದಾಗ ಬೇಜಾರಾಗಿರಲಿಲ್ಲ ನಿಮಗೆ. ಅಲ್ಲಿ ನಾನೇನೂ ಒಂದೆರಡು ವರ್ಷಗಳಲ್ಲ ಇದ್ದಿದ್ದು. ನನ್ನ ಕಾಲು ಬದುಕೇ ಅಲ್ಲಿ ಅನಾಥವಾಗಿ ಕಳೆದಿದೆ. ಆಗ ಒಮ್ಮೆಯೂ ನನ್ನನ್ನು ನೋಡಿಕೊಂಡು ಹೋಗುವಷ್ಟು ಸಮಯ, ಮಮತೆ, ಪ್ರೀತಿ ಇರ್ಲಿಲ್ಲ ನಿಮ್ಗೆ. ಅಷ್ಟೇ ಯಾಕೆ ನಾನು ಮನೆಗೆ ವಾಪಾಸಾದ್ಮೇಲೂ ನಾನು ಬದುಕಿದ್ದೀನಾ ಇಲ್ಲಾ ಸತ್ತೀದ್ದೀನಾ ಅಂತ ಕೇಳೋ ಪುರುಸೊತ್ತು, ಮನಸ್ಸು ಇಲ್ಲದ ನನ್ನ ವ್ಯವಹಾರಿಕ ಅಪ್ಪ ಅಮ್ಮನಿಗೆ ಮಗಳ ಮದುವೆ ವಿಚಾರದಲ್ಲಿ ಮಾತ್ರ ಎಂದೂ ಇಲ್ಲದ ಆಸಕ್ತಿ….. ಯಾಕೆ? ಮಗಳ ಮೇಲಿನ ಮಮಕಾರನಾ? ಬುಲ್ ಶಿಟ್…... ಅದು ಮಗಳ ಮೇಲಿನ ಮಮಕಾರ ಅಲ್ಲ. ಭಾವಿ ಅಳಿಯನಿಂದ ಒದಗಬಹುದಾದ ವ್ಯವಹಾರಿಕ, ಆರ್ಥಿಕ ಅನುಕೂಲಗಳ ಲೆಕ್ಕಾಚಾರ ಅಷ್ಟೇ. ಪ್ರೀತಿಯಂತೆ, ಮಮತೆಯಂತೆ, ಮಗಳೇ ಆಸ್ತಿಯಂತೆ….... ಮೈ ಫುಟ್…....ನಿಮ್ಮಂತವರ ಬಾಯಿಂದ ಇಂತ ಮಾತು ಕೇಳಿದ್ರೆ ಮೈಯೆಲ್ಲಾ ಉರಿಯುತ್ತೆ. ನಿಮ್ಮ ಸತ್ಯ ನನಗೊತ್ತಿಲ್ವಾ? ನಿಮ್ಗೆ ಹೇಗಾದ್ರೂ ಅಭಿರಾಮ್ ಅಳಿಯ ಆಗ್ಬೇಕು. ಇರೋದು ಒಬ್ಳೇ ಮಗಳಾಗಿ ಸಮಸ್ಯೆಯಾಗಿದೆ. ಇಲ್ಲೂ ಅಭಿರಾಮ್ ಮುಖ್ಯ ಅಲ್ಲ ನಿಮಗೆ. ನಿಮ್ಮ ತಲೆಯಲ್ಲಿ ಇರೋದು ಅವನ ಹೆಸರಿನಲ್ಲಿರೋ ಶರ್ಮಾ ಎಂಪೈರ್,  ಔದ್ಯೋಗಿಕ ರಂಗದಲ್ಲಿ ಅವನಿಗಿರುವ ಪ್ರಭಾವ, ಸಮಾಜದಲ್ಲಿ ಅವನಿಗಿರುವ ಪ್ರತಿಷ್ಟೆ……. ಇದೇ ಮೂರು ನಿಮಗೆ ಬೇಕಾಗಿರೋದು. ಈ ಮೂರು ಅವನ ಹತ್ರ ಇರ್ಲಿಲ್ಲ ಅಂದ್ರೆ, ಅಭಿರಾಮ್ ಮತ್ತೆ ಈ ಕಿಶೋರ್ ಇಬ್ರೂ ಒಂದೇ ಆಗಿರ್ತಿದ್ರು ನಿಮ್ಗೆ. ಅವನನ್ನು ಇವನ ಹಾಗೇ ಥರ್ಡ್ ಕ್ಲಾಸ್ ಡರ್ಟಿ ಡಾಗ್ ಅಂತನೇ ಕರೀತಿತ್ತು ನಿಮ್ಮ ಎಲುಬಿಲ್ಲದ ನಾಲಿಗೆ. ಏನದು…...ಏನಂದ್ರೀ? ನನಗೆ ಹುಷಾರಿಲ್ಲ ಅಂತ ಗೊತ್ತಾದ್ ಕೂಡ್ಲೇ ಓಡೋಡಿ ಬಂದ್ರಾ? ಅಷ್ಟೊಂದು ಬೇಜಾರಾಯ್ತಾ ಮಿಸ್ಸೆಸ್ ಮಾಲಿನಿ ರಾವ್? ಒಂದ್ಸಲ ಕನ್ನಡಿಯಲ್ಲಿ ಮುಖ ನೋಡ್ಕೊಳ್ಳಿ. ಒಂದು ಚೂರಾದ್ರೂ ಚಿಂತೆ, ಬೇಸರ ಇದ್ಯಾ ನಿಮ್ಮ ಮುಖದಲ್ಲಿ? ನಿಮ್ಮ ಅವತಾರ ನೋಡಿದ್ರೆ ಮದುವೆ ಮನೆಗೆ ತಯಾರಾಗಿ ಬಂದ್ಹಾಗಿದೆ. ಮೋಸ್ಟ್ ಲೀ ಬ್ಯೂಟಿ ಪಾರ್ಲರ್ ನಿಂದ ನೇರವಾಗಿ ಇಲ್ಲಿಗೆ ಬಂದಿರಬೇಕು ಅಲ್ವಾ? ನೀವು ಲೋ ಕ್ಲಾಸ್ ಡರ್ಟಿ ಪೀಪಲ್ ಅಂತ ಆರಾಮಾಗಿ ಅಂದ್ರಲ್ಲ.ಅವರನ್ನು ನೋಡಿ. ಅವ್ರು ನನ್ನ ಒಡಹುಟ್ಟಿದವರಲ್ಲ, ಸಂಬಂಧಿಕರಲ್ಲ. ಆದ್ರೂ ನಾನು ಇಲ್ಲಿಗೆ ಬಂದಾಗಿನಿಂದ ಮನೆ ಕಡೆ ಮುಖ ಹಾಕಿಲ್ಲ ಅವರಿಬ್ಬರೂ. ಯಾವಾಗ್ಲೋ ಒಂದಿಷ್ಟು ಊಟ ಹೊಟ್ಟೆಗೆ ಹಾಕಿರೋದು ಬಿಟ್ರೆ ನನ್ನ ಪಕ್ಕದಿಂದ ಆಚೀಚೆ ಹೋಗಿಲ್ಲ ಅವ್ರು. ಇಡೀ ರಾತ್ರಿ ಎಚ್ಚರ ಇದ್ದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡ್ತಾರೆ. ನೀವು ನನ್ನ ಹೆತ್ತವರು, ರಕ್ತ ಸಂಬಂಧಿಗಳು. ಇವತ್ತಲ್ಲ, ಜೀವಮಾನದಲ್ಲಿ ಯಾವತ್ತಾದ್ರೂ ಒಮ್ಮೆ ನನ್ನ ಹಾಗೆ ನೋಡ್ಕೊಂಡಿರೋ ನೆನಪಿದ್ಯಾ? ಖಂಡಿತಾ ಇಲ್ಲ. ಯಾಕೆಂದ್ರೆ ಅಂತಹ ಅದೃಷ್ಟ ನನಗೆಲ್ಲಿಯದು? ನಿಮಗೆ ಕುಡಿತ, ಕುಣಿತ, ಮೋಜು, ಮಸ್ತಿಯ ಪಾರ್ಟಿಗಳಿಂದ ಪುರುಸೊತ್ತಾದ್ರೆ ತಾನೇ? ಅದೆಲ್ಲಾ ಸಾಯ್ಲೀ, ಮೊನ್ನೆ ಆ ಅಪರಾತ್ರಿಯಲ್ಲಿ ಅಷ್ಟು ಬೇಜಾರಿಂದ ಮನೆಬಿಟ್ಟೆ ನಾನು. ಆಗ ನಿಮಗೆ ಹಿಂದೆ ಬಂದು ಸಮಾಧಾನಿಸ್ಬೇಕು ಅನ್ನಿಸ್ಲಿಲ್ಲ. ನಿನ್ನೆ ಇಡೀ ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೇ ಬಿದ್ದಿದ್ದೆ. ಆಗ್ಲೂ ಬೇಜಾರಾಗಿ ಮನೆ ಬಿಟ್ಟ ಮಗಳಿಗೆ ಏನಾಗಿದ್ಯೋ ಅಂತ ನೋಡ್ಬೇಕು ಅನ್ನಿಸಿಲ್ಲ ನಿಮ್ಗೆ. ಇವತ್ತು ಸಡನ್ನಾಗಿ ಮಗಳು ನೆನಪಾದ್ಲೂ ಯಾಕೆ? ನಾನು ಹೇಳ್ಲಾ ಯಾಕೆ ಅಂತ? ಮಗಳು ಶರ್ಮಾ ಅವರಿಗೆ ಎಲ್ಲಾ ವಿಷ್ಯ ಹೇಳಿ ಈ ಮದ್ವೆ ಕ್ಯಾನ್ಸಲ್ ಮಾಡಿಸಿರ್ತಾಳೆ. ಇನ್ನು ಇವಳಿಂದ ನಮಗ್ಯಾವ ಪ್ರಯೋಜನವೂ ಇಲ್ಲ ಅಂತ ನೀವು ತಲೆ ಮೇಲೆ ಕೈ ಹೊತ್ತು ಕೂತಿದ್ದಾಗ ಮಿಸ್ಟರ್ ಅಭಿರಾಮ್ ಶರ್ಮಾ ಆಸ್ಪತ್ರೆಗೆ ಬಂದು ನನ್ನ ಮಾತಾಡಿಸ್ಕೊಂಡು ಹೋದ್ರೂ ಅಂತ ನಿಮ್ಗೆ ಗೊತ್ತಾಗುತ್ತೆ. ಅವರಿಗೆ ಇನ್ನೂ ನನ್ನ ಮೇಲೆ ಮನಸ್ಸಿದೆ ಅಂತ ತಿಳಿದ ಕಾರಣಕ್ಕೆ ನೀವು ನನ್ನ ಮನೆಗೆ ಕರ್ಕೊಂಡುಹೋಗೋಕೆ ಅಂತ ಇಲ್ಲಿಗೆ ಬಂದಿರೋದು. ಹೇಗಾದ್ರೂ ಮಾಡಿ ನನ್ನ ಒಲಿಸಿ ಈ ಮದ್ವೆ ಮಾಡಿಸೋ ಅಜೆಂಡಾ ನಿಮ್ದು…….." 

ಸಮನ್ವಿತಾಳ ಮಾತುಗಳನ್ನು ಕೇಳುತ್ತಾ ರಾವ್ ದಂಪತಿಗಳ ಮುಖ ವಿವರ್ಣಗೊಂಡಿತು. ಅವಳು ಇಷ್ಟು ಖಚಿತವಾಗಿ ಅವರ ಯೋಜನೆಗಳನ್ನು ಗ್ರಹಿಸಬಹುದೆಂಬ ಕಲ್ಪನೆ ಅವರಿಗಿರಲಿಲ್ಲ. ಅವಳಿಗೆ ಏನು ಹೇಳಬೇಕೆಂದು ತೋಚದೇ ಗಲಿಬಿಲಿಗೊಂಡರು.

"ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ಇದೇ ಕೊನೆ. ಇನ್ಯಾವತ್ತೂ ನನ್ನ ಜೀವನದಲ್ಲಿ, ನನ್ನ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನ ಮಾಡ್ಬೇಡಿ. ನನಗೆ ಮುಂಚಿನಿಂದಲೂ ನಿಮ್ಮ ಮೇಲೆ ಕೋಪ, ದ್ವೇಷ, ತಿರಸ್ಕಾರ ಇತ್ತು. ಜೊತೆಗೇ ಒಂದಲ್ಲಾ ಒಂದು ದಿನ ಎಲ್ಲವೂ ಸರಿಯಾಗುತ್ತದೆ ಅನ್ನೋ ಆಶಾವಾದವಿತ್ತು. ಆದರೆ ಯಾವತ್ತು ನೀವು ನಿಮ್ಮ ವ್ಯವಹಾರಕ್ಕೆ ನನ್ನ ಪಣವಾಗಿ ಇಟ್ರೋ ಅವತ್ತಿಗೆ ಎಲ್ಲಾ ಆಸೆ, ಕನಸು, ನಿರೀಕ್ಷೆಗಳೂ ಸುಟ್ಟು ಬೂದಿಯಾಯ್ತು. ನನ್ನದು ಆಶಾವಾದ ಅಲ್ಲ ಅದೊಂದು ಭ್ರಮೆಯಷ್ಟೇ ಅಂತ ಈಗ ಗೊತ್ತಾಗಿದೆ ನನಗೆ. ಭ್ರಮೆ ಅನ್ನೋ ಮನಸಿನ ಮಾಯೆಯ ಪರದೆ ನನ್ನ ಕಣ್ಣುಗಳನ್ನು ಕಟ್ಟಿತ್ತು. ಈಗ ಆ ಪರದೆ ಹರಿದಿದೆ. ಭ್ರಮೆಯೂ ಹರಿದಿದೆ. ಭ್ರಮೆಯ ಪರದೆ ಹರಿದಾಗ ನಮ್ಮವರು ಹಾಗೂ ಪರರ ನಡುವಿನ ವ್ಯತ್ಯಾಸ ಗೋಚರಿಸುತ್ತದೆ. ನನಗೂ ಈಗ ಆ ವ್ಯತ್ಯಾಸ ಸ್ಪಷ್ಟವಾಗಿದೆ.  ನಾನು ನನ್ನ ತಾಳ್ಮೆ ಕಳ್ಕೊಳ್ಳೋ ಮುಂಚೆ ಇಲ್ಲಿಂದ ಹೊರಟು ಬಿಡಿ" ಕತ್ತಿಯಲುಗಿನಷ್ಟೇ ಹರಿತವಾಗಿತ್ತು ಅವಳ ಮಾತು.

ಗಂಡ-ಹೆಂಡತಿ ಮರುಮಾತಾಡದೇ ಅಲ್ಲಿಂದ ಹೊರಬಿದ್ದರು. ಅವರ ಕನಸಿನ ಗೋಪುರ ನೆಲಕಚ್ಚಿದ್ದು ನಿಚ್ಚಳವಾಗತೊಡಗಿತು. ಇನ್ನು ಮಗಳನ್ನು ಒಪ್ಪಿಸಲು ಸಾಧ್ಯವೇ ಇಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು. ಭಾರವಾದ ಹೆಜ್ಜೆಗಳನ್ನು ಎತ್ತಿಟ್ಟು ಭವಿಷ್ಯದ ಗತಿಯೇನು ಎಂಬ ಯೋಚನೆಯಲ್ಲಿ ಮನೆಯ ಕಡೆ ಹೊರಟರು.

ಅವರು ಹೋದ ದಿಕ್ಕಿಗೆ ಅಭಿಮುಖವಾಗಿ ಕುಳಿತು ನಿಡಿದಾದ ಉಸಿರು ದಬ್ಬಿದಳು ಸಮನ್ವಿತಾ. ನವ್ಯಾ ಕೈಗಿತ್ತ ನೀರನ್ನು ಒಂದೇ ಏಟಿಗೆ ಗಂಟಲಿಗೆ ಸುರಿದುಕೊಂಡಳು. ಸ್ವಲ್ಪ ಹಿತವೆನಿಸಿತು ದೇಹಕ್ಕೆ. ಆದರೆ ಒಡಲುರಿ……..? ಅದು ಶಮನವಾಗುವಂತೆ ಕಾಣಲಿಲ್ಲ. ಮನಸ್ಸು ಕಾದು ಕುಲುಮೆಯಂತಾಗಿತ್ತು. ನಿಧಾನಕ್ಕೆ ದಿಂಬಿಗೊರಗಿದಳು. ಎದುರಿನಲ್ಲಿ ನವ್ಯಾ ಕಿಶೋರ್....... ಕಿರುನಕ್ಕವಳು ಹಾಗೇ ಕಣ್ಮುಚ್ಚಿದಳು. ಅವಳಿಗೀಗ ಯಾರೊಂದಿಗೂ ಮಾತು ಬೇಕಿರಲಿಲ್ಲ. ತನ್ನನ್ನು ತಾನು ಸಮಾಧಾನಿಸಿಕೊಳ್ಳಬೇಕಿತ್ತು. ಚೀರುವ ಮನಸ್ಸನ್ನು ಸಂಭಾಳಿಸಬೇಕಿತ್ತು. ಅದು ಅವರಿಬ್ಬರಿಗೂ ಅರ್ಥವಾಗಿತ್ತು. ಅವಳ ಪಾಡಿಗೆ ಅವಳನ್ನು ಬಿಟ್ಟರು.

ಕೋಪ…... ಕೋಪ….... ಕೆಂಡದಂತಹ ಉರಿ ಉರಿ ಕೋಪ, ಸಿಟ್ಟು ಅವಳನ್ನು ಧಗಧಗಿಸಿ ದಹಿಸತೊಡಗಿತು. ದೀರ್ಘವಾಗಿ ಉಸಿರಾಡತೊಡಗಿದಳು.....

ಗೀತೆಯ ಶ್ಲೋಕಗಳು, ಕಗ್ಗದ ಸಾಲುಗಳು, ವಚನಗಳು....‌…. ಹೀಗೆ ಮನಸ್ಸಿಗೆ ಸಮಾಧಾನವಾಗುವಂತಹ ವಿಚಾರಗಳನ್ನು ನೆನಪಿಸಿಕೊಳ್ಳತೊಡಗಿದಳು.

ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ

ನೆರೆಮನೆಯ ಸುಡದೋ....

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ

ತನಗಾದ ಆಗೇನು ಅವರಿಗಾದ ಕೇಡೇನು (ಛೇಗೇನು)

ತನುವಿನ ಕೋಪ ತನ್ನ ಹಿರಿಯತನದ ಕೇಡು

ಮನದ ಕೋಪ ತನ್ನರಿವಿನ ಕೇಡು ಕೂಡಲಸಂಗಮದೇವ     

ಬಸವಣ್ಣನವರ ವಚನಗಳ ಸಾಲು ಬಿಟ್ಟೂ ಬಿಡದೇ ನೆನಪಾಗತೊಡಗಿತು. ಮತ್ತೆ ಮತ್ತೆ ಅದನ್ನೇ ಮನನ ಮಾಡಿಕೊಂಡಳು.

ಹೌದು. ತಾನೇಕೆ ಕೋಪಿಸಿಕೊಂಡು ತನ್ನ ಮನಃಶಾಂತಿಯನ್ನು ಕದಡಿಕೊಳ್ಳಬೇಕು? ಅವರ ಬದುಕಿನಲ್ಲಿ ತನ್ನ ಅಸ್ತಿತ್ವವೇ ಇಲ್ಲದಿರುವಾಗ ತನ್ನ ಕೋಪ, ದ್ವೇಷಕ್ಕೆ ಅಸ್ತಿತ್ವವೆಲ್ಲಿ? ನನ್ನ ಸಂತೋಷ, ಸಂತಾಪಗಳೆರಡೂ ನನಗೆ ಮಾತ್ರವೇ ಸಂಬಂಧಿಸಿದ್ದು. ಅವರಿಗೆ ಅದರಿಂದ ಆಗಬೇಕಾದ್ದು ಏನೂ ಇಲ್ಲ. ಹಾಗಿದ್ದಲ್ಲಿ ನಾನೇಕೆ ವೃಥಾ ಕೋಪಗೊಳ್ಳುತ್ತಿರುವೆ? ಅವರು ನನ್ನ ಕೋಪಕ್ಕೂ ಅರ್ಹರಲ್ಲ. ನನ್ನ ಕಾಲಿನ ಮೇಲೆ ನಾನೇ ಚಪ್ಪಡಿ ಎಳೆದುಕೊಳ್ಳುವಂತೆ, ನಾನೇ ನನ್ನ ನೆಮ್ಮದಿಯನ್ನು ಕೆಡಿಸಿಕೊಳ್ಳುತ್ತಿದ್ದೇನೆ. ಹಾಗಾಗಕೂಡದು. ನನ್ನ ನೆಮ್ಮದಿ, ಶಾಂತಿಗಳನ್ನು ನನ್ನ ಬಗ್ಗೆ ಕಿಂಚಿತ್ತೂ ಯೋಚಿಸಿದವರ ಕೈಗೊಂಬೆಯಾಗಿಸಲಾರೆ.  ಹೆತ್ತವರಿಗೆ ನಾನು ಬೇಡದವಳಾಗಿರಬಹುದು. ಆದರೆ ನನ್ನನ್ನು ಅತಿಯಾಗಿ ಪ್ರೀತಿಸುವ ಸ್ನೇಹಿತರಿದ್ದಾರೆ. ನನ್ನನ್ನು ಮನೆ ಮಗಳಂತೆ ಕಾಣುವ ವ್ಯಕ್ತಿಗಳಿದ್ದಾರೆ. ನನ್ನ ಬದುಕಿಗೆ ರಂಗು ತುಂಬಲು, ನನ್ನ ಮೊಗದಲ್ಲಿ ನಗುವರಳಿಸಲು, ನನ್ನ ನೋವುಗಳನ್ನು ತಮ್ಮದೆಂದುಕೊಂಡು ಸಾಂತ್ವನಿಸಲು ಮನಸ್ಪೂರ್ತಿಯಾಗಿ ಪ್ರಯತ್ನಿಸುವ ಜೀವಗಳಿವೆ.

ಮತ್ತೇಕೆ ಕೊರಗಬೇಕು ನಾನು?

ಈ ಯೋಚನೆ ಬಂದಿದ್ದೇ ಮನಸ್ಸು ಮುದಗೊಂಡಿತು. ಮಂದಹಾಸದೊಂದಿಗೆ ಕಣ್ತೆರೆದಾಗ ಕಂಡದ್ದು…… ಅವಳನ್ನೇ ನೋಡುತ್ತಿದ್ದ ಎರಡು ಜೊತೆ ಕಂಗಳು…..

"ಈಗ್ಲೇ ಹೋಗೋದಾ ಜಂಬೂಸವಾರಿ ನಿಮ್ಮನೆಗೆ?" ನಗುತ್ತಾ ಕೇಳಿದಳು.

ಅವಳ ನಗುಮುಖ ನೋಡಿ ಅವರಿಬ್ಬರ ಬಿಗಿದ ಕೊರಳು ಸಡಿಲಾಯಿತು. ನವ್ಯಾ ಓಡಿ ಬಂದು ಅವಳನ್ನಪ್ಪಿದರೆ, ಕಿಶೋರ್ ಅವಳ ತಲೆ ಸವರಿ, "ಮೀರಾ ಮೇಡಂ ಒಪ್ಪಿದ್ರೆ ಈಗ್ಲೇ ಹೋಗೋದೇ" ಎಂದ.

ನಿಮಿಷಗಳ ಮೊದಲು ಕೋಣೆಯೊಳಗಿದ್ದ ಅಸಹನೀಯ ಮೌನದ ಗೋಣು ಮುರಿಯುವಂತಹ ಆತ್ಮೀಯ ಮಾತುಕತೆಯ ಆರಂಭದೊಂದಿಗೆ ಸಂಧ್ಯೆ ಶುಭಕರಿಯಾಗಿ ಆಗಮಿಸಿದ್ದಳು.

ಅದೇ ಸಂಧ್ಯೆಯ ಹೊನ್ನಿನ ಬೆಡಗನ್ನು ಆಸ್ವಾದಿಸುತ್ತಾ ತನ್ನ ಆತ್ಮದಂತಹಾ ಗೆಳತಿಗೆ ಪ್ರೇಮ ನಿವೇದಿಸಲು ರಾಶಿ ಕನಸುಗಳ ಚಾದರ ಹೊದ್ದು ಹೊರಟಿದ್ದ ಅಭಿರಾಮ್....

             *****ಮುಂದುವರೆಯುತ್ತದೆ*****



ಅನೂಹ್ಯ 33

ತನ್ನ ಕಾಲೆಳೆದು ಗೋಳು ಹೊಯ್ದುಕೊಳ್ಳುತ್ತಿದ್ದ ಅಣ್ಣನಿಗೆ ಹೊಡೆಯಲು ಸ್ಟೀಲ್ ಜಗ್ ಎತ್ತಿಕೊಂಡಳು ಆಕೃತಿ. ಅದೇ ಸಮಯಕ್ಕೆ ಸರಿಯಾಗಿ ವಾರ್ಡಿನೊಳಗೆ ಪ್ರವೇಶಿಸಿದ್ದ ಡಿಟೆಕ್ಟಿವ್ ವೈಭವ್........

ಬಾಗಿಲಿಗೆ ಬಂದ ಅಭಿ ಎದುರು ಸಿಕ್ಕ ಪತ್ತೇದಾರನನ್ನು ತನ್ನ ಮುಂದೆ ರಕ್ಷಾ ಕವಚದಂತೆ ಹಿಡಿಯೋದಕ್ಕೂ....

ನಮ್ಮ ಪತ್ತೇದಾರರು ತಮ್ಮ ಅರ್ಧ ಮುಖ ಮುಚ್ಚೋ ಹ್ಯಾಟನ್ನು ಸ್ಟೈಲಾಗಿ ತೆಗ್ಯೋದಕ್ಕೂ....

ಆಕೃತಿ ಗುರಿ ಇಟ್ಟು ಜಗ್ ಎಸಿಯೋದಕ್ಕೂ....

ಆ ಜಗ್ ಪತ್ತೇದಾರರ ಬುರುಡೆ ಬಿಚ್ಚೋದಕ್ಕೂ......

ಟೈಮು ಫುಲ್ ಸಿಂಕ್.......

ಆಕೃತಿ ಅಣ್ಣನಿಗಿಟ್ಟ ಗುರಿ ಪತ್ತೇದಾರನ ಮುಖದ ನೀಲಿ ನಕ್ಷೆಯನ್ನು ಬದಲಿಸಿ ಹಣೆಯನ್ನು ನೀಲಿಯಾಗಿಸಿತು. ಏಟು ಬೀಳುವ ಸಣ್ಣ ಸುಳಿವೂ ಪತ್ತೇದಾರರಿಗೆ ಇರದ ಕಾರಣ ಬ್ಯಾಲೆನ್ಸ್ ತಪ್ಪಿ ದೊಪ್ಪನೆ ನೆಲ ಸೇರಿ ಕಣ್ಮುಚ್ಚಿದ.

ಮೃದುಲಾ, ಸಚ್ಚಿದಾನಂದ ತಲೆತಗ್ಗಿಸಿ ನಿಂತಿದ್ದ ಅಣ್ಣತಂಗಿಯರಿಗೆ ಮಂಗಳಾರತಿ ಎತ್ತಿದರೆ, ನವ್ಯಾ, ಕಿಶೋರ್ ವೈಭವವನ್ನು ಎಚ್ಚರಿಸಲು ನೋಡಿದರು. ಸಮನ್ವಿತಾ ತಾನು ಡ್ರಿಪ್ಸ್ ತೆಗೆದು ಏಳಲಾಗದ ಕಾರಣ ಪಕ್ಕದಲ್ಲಿದ್ದ ನರ್ಸ್ ಒಬ್ಬಳನ್ನು ಕರೆದಳು.

ನರ್ಸ್ ಬಂದವಳೇ ಸ್ವಲ್ಪ ನೀರನ್ನು ಮುಖದ ಮೇಲೆ ಸಿಂಪಡಿಸಿದಳು. ನೀರು ಮುಸುಡಿಯ ಮೇಲೆ ಬಿದ್ದದ್ದೇ ಎಚ್ಚರಗೊಂಡ ವೈಭವನಿಗೆ ಚೈತಾಲಿಯ ಮನೆಯ ಹಸುವಿನ ನೆನಪಾಗಿ 'ನಾನು ಸತ್ತೆ ಅಂತ ಬಾಯಿಗೆ ಗೋಜಲ(he meant ಗೋಮೂತ್ರ) ಸುರಿದರಾ' ಎನಿಸಿತು. ಆಮೇಲೆ ನೆನಪಾಯ್ತು ಸತ್ತಾಗ ಸುರಿಯೋದು ಗಂಗಾಜಲ, ಗೋಜಲ ಅಲ್ಲ ಅಂತ. 

ಪಂಕ್ಚರ್ ಆದ ಮುಖವನ್ನು, ಭಾರವಾದ ತಲೆಯನ್ನು ಕಷ್ಟಪಟ್ಟು ಎತ್ತಿ ಎದುರು ನೋಡಿದರೆ.......

ಕಂಡಳು ಸುಂದರಿ, ಗಂಧರ್ವ ಕಿನ್ನರಿ, ನಗುವ ಹೊನ್ನಝರಿ...

ಅವಳನ್ನು ಕಂಡದ್ದೇ ತಾನು ಸತ್ತು ಸ್ವರ್ಗಕ್ಕೆ ಬಂದಿರುವುದು ಖಚಿತವಾಯಿತು ವೈಭವನಿಗೆ. ಸತ್ತ ದುಃಖಕ್ಕಿಂತ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ನೋಡುವ ಪುಳಕಕ್ಕೆ ಅವನಿಗೆ ಖುಷಿಯೊಂಬೋತ್ಲಿ ಖುಷಿಯಾಗಿತ್ತು. ಆ ಸಂತೋಷದಿಂದ ಅವಳನ್ನು ನೋಡುತ್ತಿದ್ದಾಗಲೇ,

"ಎಂದಾ ಸಾರ್, ಇಪ್ಪೋ ಸುಗಮಾಣೋ" ಎಂದು ಕೇಳಿದಳು ಮಲೆಯಾಳಿ ನರ್ಸಮ್ಮ.

'ಯಪ್ಪೋ, ಬರೀ ಭೂಲೋಕದಲ್ಲಿ ಮಾತ್ರ ಅಂದ್ಕೊಂಡಿದ್ದೆ. ಈ ಸ್ವರ್ಗದಲ್ಲೂ ಲ್ಯಾಂಗ್ವೇಜ್ ಪ್ರಾಬ್ಲಂ ಇದ್ಯಲ್ಲಪ್ಪಾ ದೇವ್ರೇ. ಇವಳೇನೋ ಹೇಳ್ತಿದ್ದಾಳಲ್ಲ.... ಎಂತ ಹೇಳಿದ್ದವಳು?? ಹಾಂ... ಟ್ರಿಪ್ಪೋ ಸೊಗಮಾಣೋ ..... ಅಂದ್ರೆ? ಸೊಗಮಾಣೋ ಅಂದ್ರೆ ಸುಖವಾಗಿತ್ತಾ ಅಂತಲ್ವಾ? ಓಹ್.... ಟ್ರಿಪ್. ಪ್ರಯಾಣ ಅನ್ನೋಕೆ ಟ್ರಿಪ್ಪೋ ಅಂದಿರಬೇಕು  ಮೋಸ್ಟಲೀ ಸ್ವರ್ಗದ ಪ್ರಯಾಣ ಸುಖಕರವಾಗಿತ್ತಾ? ಅಂತ ಕೇಳಿರ್ಬೇಕು' ಎಂದು ತನ್ನಲ್ಲೇ ವಿಚಾರ ವಿಮರ್ಶೆ ನಡೆಸಿದವನು,

"ಯಾ ಟ್ರಾವೆಲಿಂಗ್ ವಾಸ್ ನೈಸ್. ಬಟ್ ಲಿಟಲ್ ಪೇನ್ ಫುಲ್" ಹಲ್ಕಿರಿದು ಹೇಳಿದ ಊದಿದ ಹಣೆ ಸವರಿಕೊಳ್ಳುತ್ತಾ. ಇಂಗ್ಲೀಷ್ ಯುನಿವರ್ಸಲ್ ಭಾಷೆಯಾದ ಕಾರಣ ಸ್ವರ್ಗದಲ್ಲೂ ನಡೆಯುತ್ತದೆ ಎಂಬ ಭಾವನೆ ಅವನದು.

ಇವನ ಉತ್ತರದಿಂದ ಕಕ್ಕಾಬಿಕ್ಕಿಯಾದ ನರ್ಸಮ್ಮನಿಗೆ ಇವನಿಗೆ ಮಲೆಯಾಳಂ ಬರುವುದಿಲ್ಲ ಎಂದು ಖಚಿತವಾಗಿದ್ದೇ,

"ಸಾರ್, ನೀಂಗಳು ಈಗ ಉಸರಾಗಿದ್ದೀರಾ?" ಎಂದು ತನ್ನ ಹರಕು ಕನ್ನಡದಲ್ಲಿ ಕೇಳಿದಳು.

"ಏ…. ಇಲ್ಲ ಕಣೇ ರಂಭೆ. ನನ್ನ ಉಸಿರು ಇಲ್ಲ. ಉಸಿರು ಹೋಗಿರೋಕೆ ತಾನೆ ಸ್ವರ್ಗಕ್ಕೆ ಬಂದಿದ್ದು. ಅದು ಬಿಡು, ನೀನ್ಯಾಕೆ ಹಾಸ್ಪಿಟಲ್ ನರ್ಸ್ ತರ ಡ್ರೆಸ್ ಹಾಕ್ಕೊಂಡು ಸ್ವರ್ಗದಲ್ಲೂ ಆಸ್ಪತ್ರೆ ಫೀಲ್ ಕೊಡ್ತಿದ್ದಿ? ಸ್ವರ್ಗದಲ್ಲೂ ಆಸ್ಪತ್ರೆಗಳಿದ್ಯಾ? ನನ್ನ ಹಣೆಗೆ ಗಾಯ ಆಗಿರೋದಕ್ಕೆ ನೀವು ಟ್ರೀಟ್ ಮಾಡ್ತಿದ್ದೀರಾ?"  ಸ್ವರ್ಗದ ಫೆಸಿಲಿಟಿಗಳ ಬಗ್ಗೆ ಅಚ್ಚರಿಗೊಂಡು ಕೇಳಿದ.

"ಹೂಂ, ಹಾಗೇ ಅಂದ್ಕೋ. ಇಲ್ಲಿ ಒಂದು ಡಿಟೆಕ್ಟಿವ್ ಏಜೆನ್ಸಿನೂ ಇದ್ಯಂತೆ. ತಾವು ಏಜೆಂಟ್ ಆಗಿ ಸೇರ್ಕೊತೀರಾ  ಅಂತ ದೇವೇಂದ್ರ ಕೇಳ್ತಿದ್ದ" ಎಂಬ ದನಿ ಕೇಳಿ ಅನುಮಾನವಾಗಿ ಅತ್ತ ತಿರುಗಿದರೇ…..... ಅಭಿರಾಮ್!

ಸುತ್ತಲೂ ಒಂದು ರೌಂಡ್ ಕಣ್ಣು ಹಾಯಿಸಿದ್ದೇ ಅವನಿಗೆ ಖಚಿತವಾಯಿತು. ತಾನು ಇರುವುದು ಆಸ್ಪತ್ರೆಯಲ್ಲೇ ಸ್ವರ್ಗದಲ್ಲಲ್ಲ, ಹಾಗೂ ತನ್ನೆದುರು ಇದ್ದವಳು ಅಪ್ಸರೆಯಲ್ಲ ಅವಳು ನರ್ಸ್ ಎಂದು.

ಅದರ ಅರಿವಾಗಿದ್ದೇ ಮತ್ತೆ ಕಣ್ಮುಚ್ಚಿ ನೆಲಕ್ಕೆ ಬಿದ್ದ. ಈ ಬಾರಿ ಆಕೃತಿ ಅವನನ್ನು ಎಬ್ಬಿಸಲು ನೋಡಿದರೆ, ಅಭಿ ಒಂದು ಲೋಟ ನೀರು ತಂದು ಸುರಿದ ಮುಖದ ಮೇಲೆ. ಕಣ್ಬಿಟ್ಟು ಸಪ್ಪೆ ಮೋರೆಯಲ್ಲಿ ಎದ್ದು ಕುಳಿತ ವೈಭವ್.

"ನಾನ್ಯಾರು, ನನಗೇನಾಗಿದೆ, ನಾನೆಲ್ಲಿದ್ದೀನಿ, ನೀವೆಲ್ಲಾ ಯಾರು…... ಈ ತರ ರೆಗ್ಯುಲರ್ ಪ್ರಶ್ನೆಗಳನ್ನು ಕೇಳ್ಬೇಡ. ಡಿಫರೆಂಟಾಗಿ ಬೇರೆ ಏನಾದ್ರೂ ಕೇಳು" ಸಾಧುಕೋಕಿಲ ರೇಂಜಿಗೆ ಕೇಳಿದ ಅಭಿಯನ್ನು ನೋಡಿ ಸಿಟ್ಟೇರಿತು ಅವನಿಗೆ.

"ನನ್ನ ಪಿಂಡ ತಿನ್ನೋಕೆ ಗಂಡ್ ಕಾಗೆ ಬಂದಿತ್ತಾ ಇಲ್ಲಾ ಹೆಣ್ಣ್ ಕಾಗೆ ಬಂದಿತ್ತಾ?" ಕೋಪದಲ್ಲಿ ಕನಲಿ ಕೇಳಿದ.

"ಸಾರಿ ಕಾಗೆ ಹತ್ರ ಜೆಂಡರ್ ಕೇಳೋಕೆ ಮರ್ತ್ ಹೋಯ್ತು" ಕೂಲಾಗಿ ಹೇಳಿದ.

"ಥೂ ಡಬ್ಬಾ ನನ್ ಮಗನೇ ಬೀರ್, ಫ್ರೆಂಡೇನೋ ನೀನು? ನಿನ್ನ ತಲೆ ಉಳ್ಸಿಕೊಳ್ಳೋಕೆ ನನ್ನ ಬಲಿ ಹಾಕ್ದೇ ಅಂತ ಬೇಜಾರಿಲ್ಲ ನನಗೆ. ಆದ್ರೆ ನನ್ನ ಪ್ರಾಣ ಹೋದ್ರೆ ಈ ದೇಶದ ರಕ್ಷಣೆ ಮಾಡೋದ್ಯಾರು ಅಂತ ಒಂದು ಸಲವೂ ಯೋಚ್ನೆ ಮಾಡ್ಲಿಲ್ವಲ್ಲ ನೀನು. ಅದು‌..... ಅದು ಕಣೋ ನನ್ನ ಬೇಜಾರು. ನಾನು ಈ ಭವ್ಯ ಭಾರತದ ಭದ್ರ ಭವಿಷ್ಯದ ಬುನಾದಿ. ನೀನು, ನಿನ್ನ ತಂಗಿ ಸೇರ್ಕೊಂಡು ಈ ಬುನಾದಿಗೆ ಸಮಾಧಿ ಕಟ್ಟೋ ಹಾಗೆ ಮಾಡ್ತಿದ್ರಲ್ಲೋ ದೇಶದ್ರೋಹಿಗಳಾ…..." ಅವಲತ್ತುಕೊಂಡು ಎದ್ದವನು ಎಲ್ಲರನ್ನೂ ಒಮ್ಮೆ ನೋಡಿದ.

ಮತ್ತೆ ಅಣ್ಣ ತಂಗಿಯರ ಮುಖವನ್ನು ಬದಲಿಸಿ ನೋಡಿ, " ಲೋ ಬೀರ್, ನಾನು ಚೈ ಡಾರ್ಲಿಂಗ್ ನೋಡೋಕಂತ ಹೀರೋ ತರ ರೆಡಿಯಾಗಿ ಬಂದ್ರೆ ನೀವಿಬ್ರೂ ಸೇರಿ ಸವ್ತೆಕಾಯಿ ಸೈಜಿನ ಮುಖಾನ ಕುಂಬಳಕಾಯಿ ಸೈಜಿಗೆ ಊದಿಸಿಟ್ಟಿದ್ದೀರಲ್ಲ. ಐ ಹೇಟ್ ಯು. ಮಾತಾಡಲ್ಲ ನಾನು ನಿಮ್ಹತ್ರ" ಎಂದು ಹೊರನಡೆದ.

ಈಗ ವಾರ್ಡಿನಲ್ಲಿದ್ದವರ ಆಕ್ಷೇಪದ ನೋಟ ಅಣ್ಣ ತಂಗಿಯ ಮೇಲೆ‌.

"ಓಕೆ, ಓಕೆ, ನಮ್ಮದೇ ತಪ್ಪು, ನಾನು ಅವನನ್ನು ಸರಿ ಮಾಡ್ತೀನಿ" ಎಂದು ಅವನ ಹಿಂದೆ ನಡೆದ ಅಭಿ.

ಇಲ್ಲಿ ಆಕೃತಿ, ಮೃದುಲಾ, ಸಚ್ಚಿದಾನಂದರು ಉಳಿದ ಮೂವರಿಗೆ ವೈಭವನ ಪತ್ತೇದಾರಿ ಪುರಾಣ ಪಾರಾಯಣ ಮಾಡಲು ತೊಡಗಿದರೆ, ಅತ್ತ ಅಭಿರಾಮ್ ಪತ್ತೇದಾರನ ಬೆನ್ನು ಬಿದ್ದಿದ್ದ ಸಮಾಧಾನಿಸಲು.

ಅಭಿರಾಮ್ ಹೊರಹೋದದ್ದು ಕಂಡು ಗಂಡನಿಗೆ ಸನ್ನೆ ಮಾಡಿದಳು ನವ್ಯಾ. ಅದನ್ನರಿತ ಕಿಶೋರ್, "ನೀವೆಲ್ಲಾ ಮಾತಾಡ್ತಿರಿ. ಒಂದು ಮುಖ್ಯವಾದ ಕೆಲಸ ಇದೆ. ಒಂದತ್ತು ನಿಮಿಷ ಬಂದ್ಬಿಡ್ತೀನಿ" ಎಂದವನೇ ಹೊರಗೆ ಬಂದ. ನವ್ಯಾ ಮತ್ತು ಅವನು ಮೊದಲೇ ಮಾತನಾಡಿಕೊಂಡಂತೆ ಸಮನ್ವಿತಾಳ ಬಗ್ಗೆ ಅಭಿರಾಮನಲ್ಲಿ ಮಾತನಾಡಬೇಕಿತ್ತು. 

"ಹೇ ವೈಭೂ ಸಾರಿ ಕಣೋ, ಅದು ಆ ಕೋತಿನ ರೇಗ್ಸೋಕೆ ಹೋಗಿ ಅವ್ಳು ಮಾರಿ ಅವತಾರ ತಾಳಿ ಈ ರೀತಿ ಆಯ್ತು. ಸಾರಿ ಮಚ್ಚಾ"  ಅಭಿ ವೈಭವನ ಓಲೈಕೆಯಲ್ಲಿ ತೊಡಗಿದ್ದ.

"ನೀನು ಮಾಡಿರೋ ಕೆಲ್ಸಕ್ಕೆ ಈ ರುಬ್ಬುಗುಂಡು ಫೇಸ್ ಇಟ್ಕೊಂಡು ನಾನು ಚೈ ಡಾರ್ಲಿಂಗಿಗೆ ಹೇಗೆ ಪ್ರಪೋಸ್ ಮಾಡ್ಲೀ?" ತನ್ನ ಸಮಸ್ಯೆ ತೋಡಿಕೊಂಡ.

"ಏನು? ಪ್ರಪೋಸಾ?" ಕಣ್ಣರಳಿಸಿ ಕೇಳಿದ ಅಭಿ.

"ಹೌದು ಬೀರ್, ನಾನು ಚೈ ಡಾರ್ಲಿಂಗಿಗೆ ಪ್ರಪೋಸ್ ಮಾಡೋಣ ಅಂತಿದ್ದೀನಿ" ನಾಚಿ ನುಲಿಯುತ್ತಾ ಹೇಳಿದ.

"ಲೋ, ಅದಕ್ಯಾಕೋ ಈ ರೇಂಜಿಗೆ ನುಲಿತಿದ್ಯಾ?" ಹಣೆಗಟ್ಟಿಸಿಕೊಳ್ಳುತ್ತಾ ಕೇಳಿದ.

"ಅದೂ... ಏನೋ ಒಂಥರಾ ನಾಚ್ಕೆ ಆಗುತ್ತೆ ಬೀರ್. ಹೌದು, ನೀನು ಅತ್ತಿಗೆಗೆ ಪ್ರಪೋಸ್ ಮಾಡಿದ್ಯಾ?"  ಅವನಿಂದ ಟಿಪ್ಸ್ ಪಡೆಯಲು ಕೇಳಿದ.

"ಅಪ್ಪಾ ತಂದೆ, ಮೇಡಂ ಮೊದ್ಲೇ ಡಾಕ್ಟರ್ ಬೇರೆ. ನಾನೇನಾದ್ರೂ ನಿನ್ನ ಹಾಗೆ ವಾಲಾಡ್ಕೊಂಡು ಪ್ರಪೋಸ್ ಮಾಡಿದ್ರೆ, ನಿಶ್ಯಕ್ತಿ ಆಗಿದೆ ಅಂತ ಡ್ರಿಪ್ಸ್ ಹಾಕ್ತಾಳಷ್ಟೇ. ನನ್ನ ಕತೆ ಬಿಡು. ನಿನ್ನ ಮ್ಯಾಟರ್ ಏನು ಅದ್ನ ಹೇಳು."

"ಅದೇ ನಾನು ಚೈಗೆ ಪ್ರೊಪೋಸ್ ಮಾಡ್ಬೇಕಿತ್ತು. ಆದ್ರೇ ಇವತ್ತು ನೀವಿಬ್ರೂ ಸೇರಿ ನನ್ನ ಮುಖ ಪಚ್ಚುಡಿ ಮಾಡಿರೋದು ನೋಡಿದ್ರೆ ಇವತ್ಯಾಕೋ ನನ್ನ ಗ್ರಹಗತಿ ಸರಿಯಾಗಿಲ್ಲ ಅನ್ಸುತ್ತೆ. ಇನ್ಯಾವಾಗ ಪ್ರಪೋಸ್ ಮಾಡ್ಲೀ? ಮೊದ್ಲೇ ನನ್ನ ಬೇಬಿ ಕೆಲ್ಸ ಬೇರೆ ಬಿಟ್ಟಿದಾಳಂತೆ. ಇನ್ಯಾವಾಗ ಮನೆಯಿಂದ ಹೊರಗೆ ಬರ್ತಾಳೋ? ಅವಳ ಮನೆಗೆ ಹೋಗಿ ಪ್ರಪೋಸ್ ಮಾಡೋಣ ಅಂದ್ರೆ ಆ ಮಡಿ ಮುದುಕಿ, ಆ ಡೈನೋಸಾರ್ ಹಸು, ಉಸೇನ್ ಬೋಲ್ಟ್ ತರ ಇರೋ ಆ ಹಸುವಿನ ಮರಿ(he meant ಕರು) ಎಲ್ಲಾ ನೆನೆಸಿದ್ರೇ ಭಯ ಆಗುತ್ತೆ ಬೀರ್ " ಹಲುಬಿದ.

"ಅಯ್ಯಾ ನಕ್ಷತ್ರಿಕ ನನ್ ಮಗನೆ, ನಿನ್ನ ಚೈ ಡಾರ್ಲಿಂಗ್ ಮುಂದಿನ ವಾರದಿಂದ ನನ್ನ ಆಫೀಸಿಗೆ ಸೇರ್ಕೋತಿದ್ದಾಳೆ. ಆಗ ಅದೇನ್ ಹೇಳ್ಬೇಕೋ ಹೇಳಿ ಸಾಯಿ" ಪರಿಹಾರ ಸೂಚಿಸಿದ.

"ವಾಟ್? ರಿಯಲೀ.... ಬೀರ್? ನೀನು ಚೈ ಬೇಬಿಗೆ ಕೆಲಸ ಕೊಟ್ಟಿದ್ದೀಯಾ? ವಾವ್….. ಲವ್ ಯು ಬೀರ್.  ಲವ್ ಯು. ನೀನು ಮನುಷ್ಯ ಅಲ್ಲಾ. ಯು ಆರ್ ಗಾಡ್ ಮ್ಯಾನ್. ಐ ವಾನ ಹಗ್ ಯು. ಈ ಖುಷಿಗೆ ನೀವಿಬ್ಬರೂ ನನ್ನ ಮುಖ ಡ್ಯಾಮೇಜ್ ಮಾಡಿದ್ದು ಮಾಫಿ…...." ಎಂದು ಕುಣಿದು ಕುಪ್ಪಳಿಸಿ ಅಭಿಯನ್ನು ಅಪ್ಪಿದ.

"ಹಾಗಾದ್ರೆ ಇದೇ ಖುಷಿಗೆ ಇನ್ನೊಂದ್ಸಲ ಬುರುಡೆ ಬಿಚ್ಲಾ?" ಅಭಿಯ ಮಾತನ್ನು ಕೇಳಿದ್ದೇ ಎರಡೂ ಕೈಯಲ್ಲಿ ತಲೆ ಹಿಡಿದುಕೊಂಡು "ನಾನು ಕಾರಿನ ಹತ್ರ ಇರ್ತೀನಿ. ನೀವು ಬನ್ನಿ. ಅತ್ಗೇನ ಕೇಳ್ದೇ ಅಂತ ಹೇಳು" ಎಂದವನೇ ತಿರುಗಿ ನೋಡದೇ ಓಡಿದ ತಲೆ ಉಳಿಸಿಕೊಳ್ಳಲು.

ಅವನು ಓಡಿದ ರೀತಿಯನ್ನು ನೆನೆಯುತ್ತಾ ವಾರ್ಡಿಗೆ ಹಿಂದಿರುಗಲು ಹೊರಟವನಿಗೆ ಕಿಶೋರ್ ಎದುರಾಗಿದ್ದ. 

"ಹೇ ಕಿಶೋರ್, ಎಲ್ಲಾ ಅಲ್ಲೇ ಇದ್ದಾರಲ್ಲ. ನೀವು ಎಲ್ಲಿಗೆ ಹೊರಟ್ರೀ?" ಕೇಳಿದ.

"ನಿಮ್ಮನ್ನೇ ಹುಡುಕಿಕೊಂಡು ಬಂದೆ. ನಿಮ್ಮ ಹತ್ರ ಒಂದು ಮುಖ್ಯವಾದ ವಿಷಯ ಮಾತಾಡ್ಬೇಕಿತ್ತು. ಇಲ್ಲೇ ಕೆಳಗೆ ಪಾರ್ಕ್ ಹತ್ತಿರ ಹೋಗೋಣ್ವೇ?" ಎಂದ ಕಿಶೋರ್. ಸರಿಯೆಂದು ತಲೆಯಾಡಿಸಿ ಅವನನ್ನು ಹಿಂಬಾಲಿಸಿದ ಅಭಿ. ತಿಂಡಿಯ ಸಮಯವಾದ್ದರಿಂದ ಜನ ಕಡಿಮೆಯೇ ಇದ್ದರು. ಒಂದು ಮೂಲೆಯಲ್ಲಿ ಮರದಡಿಯ ಕಲ್ಲು ಬೆಂಚಿನಲ್ಲಿ ಕುಳಿತರು.

"ಹೇಳಿ ಕಿಶೋರ್, ಏನು ವಿಷಯ?" ಅವನೇ ಕೇಳಿದ.

"ಸಮನ್ವಿತಾ ಬಗ್ಗೆ ಸ್ವಲ್ಪ ಮಾತಾಡ್ಬೇಕಿತ್ತು. 'ಅವಳ ಬಗ್ಗೆ ಮಾತಾಡೋಕೆ ಇವನ್ಯಾರು' ಅಂತ ನಿಮಗನ್ನಿಸಬಹುದು. ಆದರೆ ಈ ಬಗ್ಗೆ ಮಾತನಾಡುವವರು ಬೇರ್ಯಾರೂ ಇಲ್ಲ. ಅಲ್ಲದೇ ಕೆಲವು ವಿಷಯಗಳು ನಿಮಗೆ ತಿಳಿಯಲೇ ಬೇಕಾದ ಅನಿವಾರ್ಯತೆ ಇದೆ. ದುರಾದೃಷ್ಟವಶಾತ್ ಅವಳ ತಂದೆತಾಯಿಗಳಿಗೆ ಆ ವಿಷಯಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಹಾಗಾಗಿ ಅವಳ ಸ್ನೇಹಿತರಾಗಿ ನಾನು ಮತ್ತೆ ನವ್ಯಾ ಆ ಜವಾಬ್ದಾರಿ ತಗೊಂಡಿದ್ದೀವಿ. ಹಾಗಾಗಿ.... ಸಾರಿ, ತಪ್ಪು ತಿಳಿಯಬೇಡಿ." ಗಂಭೀರ ಪೀಠಿಕೆ ಹಾಕಿದ. 

ಅಭಿ ಅರೆಕ್ಷಣ ಸುಮ್ಮನಾದವನು ನಸುನಕ್ಕ.

"ಕಿಶೋರ್, ನಿಮ್ಮ ಮೂವರ ಒಡನಾಟ ಎಂತಹದ್ದು ಅನ್ನುವ ಅರಿವಿದೆ ನನಗೆ. ಇನ್ ಫ್ಯಾಕ್ಟ್ ನಾನೇ ನಿಮ್ಮ ಹತ್ರ  ಮಾತಾಡ್ಬೇಕು ಅಂದ್ಕೊಂಡಿದ್ದೆ. ಅಷ್ಟರಲ್ಲಿ ನೀವೇ ಬಂದ್ರಿ. ನಿಮ್ಮಿಬ್ಬರಷ್ಟು ಚೆನ್ನಾಗಿ ಸಮನ್ವಿತಾಳನ್ನು ಅರ್ಥೈಸಿಕೊಂಡಿರೋರು ಇನ್ಯಾರೂ ಇಲ್ಲ. ಯಾಕೆಂದ್ರೆ ಈ ಇಡೀ ಪ್ರಪಂಚದಲ್ಲಿ ಅವಳಿಗೆ ಸ್ನೇಹಿತರು ಅಂತ ಇರೋದು ನೀವಿಬ್ರೇ. ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಅವರಿಗಂತೂ ನೀವು ಹೇಳಿದಂತೆ ಅವಳ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ, ತಿಳಿದುಕೊಳ್ಳಬೇಕೆಂಬ ಕಾಳಜಿಯೂ ಇದ್ದಂತಿಲ್ಲ. ಅವರ ಬಗೆಗಿನ ಮಾತು ನಿರರ್ಥಕ. ಆದರೆ ನನಗೆ ಅವಳ ಬಗ್ಗೆ ತಿಳಿಯಬೇಕಾದ ಅನಿವಾರ್ಯತೆಯೊಂದಿಗೆ ಅವಳ ಅಂತರಾಳ ಅರಿಯಬೇಕೆಂಬ ಆಸ್ಥೆಯೂ ಇದೆ. ಸೋ….  ಯಾವುದೇ ಮುಜುಗರ, ಮುಚ್ಚುಮರೆಯಿಲ್ಲದೆ ನಿಮ್ಮ ಮನಸ್ಸಿಗೆ ಏನೇನು ಹೇಳ್ಬೇಕು ಅನ್ಸತ್ತೋ ಅದೆಲ್ಲವನ್ನೂ ನನ್ಹತ್ರ ಹೇಳಿ. ನಿಮ್ಮನ್ನ ಬಿಟ್ಟು ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ" ಅಭಿಯ ಮಾತುಗಳು ಕಿಶೋರನ ಹಿಂಜರಿಕೆಯನ್ನು ಬೇರು ಸಮೇತ ಕಿತ್ತು ಹಾಕಿದವು. ಅವನು ನಿರಾಳ ಭಾವದಿಂದ ಮಾತಿಗಾರಂಭಿಸಿದ.

"ಸಮನ್ವಿತಾ ಮತ್ತವಳ ಹೆತ್ತವರ ನಡುವಿನ ಸಂಬಂಧದ ಬಗ್ಗೆ ನಾನು ಹೇಳಬೇಕಾದ ಅಗತ್ಯವಿಲ್ಲ. ಈ ಮದುವೆ ಪ್ರಸ್ತಾಪದ ಅವಾಂತರದಲ್ಲಿ ನಿಮಗೇ ಎಲ್ಲಾ ತಿಳಿದಿದೆ. ನಾನು ಹೇಳಬೇಕಿರುವುದು ನನ್ನ ಸ್ನೇಹಿತೆಯ ಬಗ್ಗೆ. ನಮ್ಮದೇನು ಚಿಕ್ಕಂದಿನ ಪರಿಚಯವಲ್ಲ. ನಮ್ಮ ಮೂವರದೂ ಐದಾರು ವರ್ಷಗಳ ಪರಿಚಯವಷ್ಟೇ. ಆದರೆ ಈ ಅವಧಿಯಲ್ಲಿ ನಮ್ಮ ನಡುವೆ ಬೆಸೆದುಕೊಂಡ ಅನುಬಂಧ ಹಣ, ಅಂತಸ್ತಿನ ಹಂಗಿಲ್ಲದ ಪರಿಶುದ್ಧ ಸ್ನೇಹದ್ದು. ನಾನು, ನವ್ಯಾ ಯಾವ ವಿಧದಲ್ಲೂ ಅವಳಿಗೆ ಸರಿಸಾಟಿಯಲ್ಲ. ಆದರೂ ನಮ್ಮ ನಡುವೆ ಪದಗಳಲ್ಲಿ ವೇದ್ಯವಾಗದ ಸ್ನೇಹ ಸಂಬಂಧವೊಂದು ಬೆಸೆದುಕೊಂಡಿತು. ಈ ಬಂಧ ಬೆಸೆಯಲೇಬೇಕೆಂದು ವಿಧಾತ ಟೊಂಕಕಟ್ಟಿ ನಿಂತಿದ್ದನೇನೋ ಎಂದು ನನಗೆ ಒಮ್ಮೊಮ್ಮೆ ಬಲವಾಗಿ ಅನಿಸುತ್ತದೆ ಅಭಿರಾಮ್. ಇಲ್ಲವಾದರೇ, ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ, ವಿದೇಶದಲ್ಲಿ ಓದಿದವಳು, ಅಲ್ಲಿಯೇ ಉತ್ತಮ ಉದ್ಯೋಗದ ಅವಕಾಶಗಳಿದ್ದರೂ ಎಲ್ಲವನ್ನು ತಿರಸ್ಕರಿಸಿ ಇಲ್ಲಿಗೆ ಹಿಂತಿರುಗುತ್ತಿದ್ದಳೇ? ಹಿಂತಿರುಗಿದರೂ ಯಾವುದೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೋ ಇಲ್ಲಾ ತಾನೇ ಸ್ವತಃ ಒಂದು ಆಸ್ಪತ್ರೆ ಆರಂಭಿಸುವ ಯೋಜನೆಗೋ ಹೋಗದೆ ಧನ್ವಂತರಿಯಂತಹ‌ ಧರ್ಮಾಸ್ಪತ್ರೆಗೆ, ಆಶ್ರಯದಂತಹ NGOಗೆ ಸೇರುತ್ತಿದ್ದಳೇ? ಇದೆಲ್ಲವೂ ನಮ್ಮ ಭೇಟಿಗೆ ನಿಮಿತ್ತ ಮಾತ್ರವೇನೋ. ಚಿಕ್ಕಂದಿನಲ್ಲೇ ಹೆತ್ತವರಿಂದ, ತಾಯ್ನಾಡಿನಿಂದ ದೂರವಾಗಿ ಅಜ್ಞಾತ ಸ್ಥಳದಲ್ಲಿ ಅಪರಿಚಿತರೊಂದಿಗಿನ ಜೀವನ ಅವಳ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿದೆ. ಎಂದಿಗೂ ಹೇಳಿಕೊಳ್ಳದಿದ್ದರೂ ಅಲ್ಲಿ ಅವಳು ಬಹಳಷ್ಟು ಮಾನಸಿಕ ಯಾತನೆ ಅನುಭವಿಸಿದ್ದಾಳೆ. ಅದಕ್ಕೆ ಮೂಲ ಕಾರಣ ತನ್ನೆಡೆಗೆ ಹೆತ್ತವರ ದಿವ್ಯ ನಿರ್ಲಕ್ಷ್ಯ. ಓದು ಮುಗಿದು ಲಂಡನ್ನಿನಲ್ಲೇ ಕೆಲಸಕ್ಕೆ ಆಫರ್ ಬಂದಾಗ ಅದನ್ನೇ ಒಪ್ಪಿಕೋ ಎಂದು ರಾವ್ ದಂಪತಿಗಳು ಒತ್ತಾಯಿಸಿದ್ದರಂತೆ. ಆದರೆ ತಾನು ಇಲ್ಲೇ ಕೆಲಸ ಹಿಡಿದು ನಿಂತರೆ ತಂದೆತಾಯಿ ತನ್ನನ್ನು ಮರೆತೇ ಬಿಡುವರೆಂಬ ಭಯ ಅವಳನ್ನು ಬಿಟ್ಟೂ ಬಿಡದೆ ಕಾಡಿದೆ. ಹಾಗಾಗಿಯೇ ಓದು ಮುಗಿದ ಕೂಡಲೇ  ಇಲ್ಲಿಗೆ ವಾಪಾಸಾಗಿದ್ದಾಳೆ. ಇಲ್ಲಿಗೆ ಬಂದ ನಂತರ ತಂದೆ ತಾಯಿ ತನ್ನನ್ನು ಗಮನಿಸುತ್ತಾರೆ ಎಂಬ ಆಸೆಯಲ್ಲಿದ್ದವಳಿಗೆ ತನ್ನದು ಭ್ರಮೆಯಷ್ಟೇ ಎಂಬುದು ಬೇಗನೆ ಅರಿವಾಗಿದೆ. ತಾಯ್ತಂದೆಯರಿಗೆ ತಾನು ಬೇಡದ ಕೂಸು ಎಂಬ ಸತ್ಯ ಅವಳೊಳಗೆ ಒಂದು ದಾವಾಲನವನ್ನೇ ಸೃಷ್ಟಿಸಿದೆ. ದೂರದಲ್ಲಿದ್ದು ಹಿಂಸೆ ಅನುಭವಿಸಿದ್ದಕ್ಕಿಂತ ಎದುರಿಗಿದ್ದೂ ನಿರ್ಲಕ್ಷ್ಯಗೊಂಡಿದ್ದು ಬಹಳವಾಗಿ ಕಾಡಿದೆ. ಇವೆಲ್ಲಾ ಅವಳೊಳಗೆ ಹೆತ್ತವರ ಮೇಲೊಂದು ತಣ್ಣನೆಯ ದ್ವೇಷಕ್ಕೆ ನಾಂದಿ ಹಾಡಿದೆ. ಅದನ್ನು ತೋರ್ಪಡಿಸಿ ಮನಸ್ಸನ್ನು ಹಗುರಾಗಿಸಿಕೊಳ್ಳುವುದಕ್ಕೆ ಅವಳು ಕಂಡುಕೊಂಡ ವಿಧಾನವೇ ವಿರೋಧಿಸುವಿಕೆ. ಅಲ್ಲಿಂದ ಅವರು ಹೇಳಿದ್ದನ್ನೆಲ್ಲ ಮನಸ್ಪೂರ್ತಿಯಾಗಿ ವಿರೋಧಿಸುವ ಜಿದ್ದಿಗೆ ಬಿದ್ದಿದ್ದು.... ಇಂದಿಗೂ ಮುಂದುವರೆದಿದೆ. ಇಂತಹ ಹುಡುಗಿ ನನ್ನ ಸ್ನೇಹಕ್ಕೆ ಯಾಕೆ ಕೈಚಾಚಿದಳೋ ನನಗೇ ತಿಳಿಯದು. ಸಾಮಾನ್ಯ ಕುಶಲೋಪರಿಯ ಮುಗುಳ್ನಗೆಯಿಂದ ಆರಂಭವಾದ ಪರಿಚಯ ನಿಷ್ಕಲ್ಮಶ ಸ್ನೇಹಕ್ಕೆ ತಿರುಗಿತು. ಇನ್ನು ನವ್ಯಾ ನನಗೆ ಪರಿಚಯವಾದದ್ದೇ ಸಮನ್ವಿತಾಳಿಂದ. ಅವರಿಬ್ಬರ ಪರಿಚಯ, ಸ್ನೇಹವಂತೂ ಅನೂಹ್ಯ. ನನಗೆ ಅವರಿಬ್ಬರ ಸ್ನೇಹದಷ್ಟು ವಿಶಿಷ್ಟ ಈ ಜಗದಲ್ಲಿ ಮತ್ತೊಂದಿಲ್ಲ. ಆ ಬಗ್ಗೆ ಹೆಚ್ಚಿನ ವಿವರ ಹೇಳಲಾರೆ. ಆದರೆ ನವ್ಯಾಳ ಬದುಕನ್ನು ಕಟ್ಟಿಕೊಟ್ಟವಳು ಮಾತ್ರ ಇದೇ ಸಮನ್ವಿತಾ. ಎಲ್ಲರೊಂದಿಗೆ ನಗುತ್ತಾ ಮಾತನಾಡಿದರೂ ಯಾರೊಂದಿಗೂ ಬೆರೆಯದ ಅಂತರ್ಮುಖಿ ಸ್ವಭಾವದ ಹುಡುಗಿ ಅವಳು. ಯಾರಗೂ ತನ್ನ ಭಾವವಲಯವನ್ನು ತೋರ್ಪಡಿಸುವುದಿಲ್ಲ. ಮೊದಲ ಬಾರಿ ನೋಡಿದವರಿಗೆ ಅವಳ ಈ ವರ್ತನೆ ಹಣದ ಅಹಂಕಾರದಂತೆ ಭಾಸವಾಗುತ್ತದೆ. ಆದರೆ ಅದು ಬದುಕು ಅವಳಿಗೆ ಕಲ್ಪಿಸಿರುವ ಪಾಠ. ಹೊರಜಗತ್ತಿನ ಪಾಲಿಗೆ ಅವಳು ಶ್ರೀಮಂತ ಅಪ್ಪ ಅಮ್ಮನ ಗಟ್ಟಿ ವ್ಯಕ್ತಿತ್ವದ ಮಗಳು. ಆದರೆ ಅವಳ ಆಂತರ್ಯದ ಅಂತರ್ಗತ ಸತ್ಯ ಬೇರೆಯೇ ಇದೆ. ಆ ಗಟ್ಟಿಗಿತ್ತಿಯ ಮುಖವಾಡದೊಳಗೆ ಹಿಡಿ ಪ್ರೀತಿಗೆ ಹಪಹಪಿಸುವ ಮನಸ್ಸೊಂದಿದೆ. ಒಡೆದು ಚೂರಾದ ಬಾಲ್ಯದ ಕನಸುಗಳ ನಿಟ್ಟುಸಿರಿದೆ. ಎಲ್ಲಾ ಇದ್ದೂ ಏನೂ ಇಲ್ಲದ ಖಾಲಿತನವಿದೆ. ಯಾರ ಮೇಲೆ ಎಂದು ತಿಳಿಯದ ಕೊನೆ ಮೊದಲಿಲ್ಲದ ರೋಷವಿದೆ. ಆ ರೋಷದ ಹಿಂದೆಯೇ ಇನ್ನೊಬ್ಬರಿಗಾಗಿ ಮರುಗುವ ಹೃದಯವೊಂದಿದೆ. ಯಾರೊಂದಿಗೂ ಬೆರೆಯದ ಆದರೂ ಎಲ್ಲರೂ ಖುಷಿಯಾಗಿರಬೇಕೆಂದು ಬಯಸುವ ಹಾರೈಕೆಯಿದೆ. ಹೆತ್ತವರನ್ನು ದ್ವೇಷಿಸುವೆನೆಂದು ರಚ್ಚೆ ಹಿಡಿಯುತ್ತಲೇ ಇಂದಲ್ಲಾ ನಾಳೆ ಅವರು ನನ್ನನ್ನು ಪ್ರೀತಿಸಬಹುದೇನೋ ಎಂದು ನಿರೀಕ್ಷಿಸುವ ಜೀವನಪ್ರೀತಿಯಿದೆ........‌ ಇನ್ನೂ ಏನೇನನ್ನು ತನ್ನೊಳಗೆ ಅಡಗಿಸಿಕೊಂಡಿರುವಳೋ ಅವಳಿಗೇ ಗೊತ್ತು. ಅವಳೊಂದು ಕಡಲಿನಂತೆ. ಮೇಲ್ಮೆಯಲ್ಲಿ ಅಲೆಗಳ ನರ್ತನವಷ್ಟೇ ಕಾಣುವುದು. ಆದರೆ ಅದೇ ಕಡಲಲ್ಲ. ಆಳಕ್ಕಿಳಿದಾಗ ಮಾತ್ರವೇ ಕಡಲಿನ ಒಡಲಿನ ಸೆಳಹುಗಳು ತೆರೆದುಕೊಳ್ಳುವುದು, ಅದರ ವಿಸ್ತಾರದ ಅರಿವಾಗುವುದು. ನಮ್ಮ ಪಾಲಿಗೆ ಅವಳು ವಿಸ್ಮಯಗಳ ಸಂಪುಟವಷ್ಟೇ..... ಇಂತಹ ಹುಡುಗಿ ಇಷ್ಟು ವರ್ಷಗಳಲ್ಲಿ ನಮ್ಮೆದುರು ಕಣ್ಣೀರು ಹಾಕಿದ್ದು ನಿನ್ನೆ. ಇಲ್ಲಿಯವರೆಗೆ ಎಂತಹ ಸಂದರ್ಭದಲ್ಲೂ ಇನ್ನೊಬ್ಬರೆದುರು ಕಣ್ಣಿಂದ ಒಂದು ಹನಿ ಜಾರಲು ಬಿಟ್ಟವಳಲ್ಲ ಆಕೆ. ಆದರೆ ನಿನ್ನೆ ಅವಳ ಕಣ್ಣೀರು, ಅವಳ ಬಾಯಿಂದ ಬಂದ ಮಾತುಗಳು....

ಅವಳಿಗೆ ನಿಮ್ಮ ಮನೆಯವರ ಬಗ್ಗೆ, ಅದರಲ್ಲೂ ನಿಮ್ಮ ತಾಯಿಯ ಬಗ್ಗೆ ಯಾವುದೋ ಅರಿಯದ ಸೆಳೆತವಿದೆ. ನಿಮ್ಮೆಲ್ಲರನ್ನು ಭೇಟಿಯಾದಾಗಿನಿಂದ ಅದೆಷ್ಟು ಬಾರಿ ಮೃದುಲಾರ ಬಗ್ಗೆ ನವ್ಯಾಳಲ್ಲಿ ಹೇಳಿರುವಳೋ ಲೆಕ್ಕವಿಲ್ಲ. ಆದ ಕಾರಣವೇ ಅವರು ಮನೆಗೆ ಕರೆದ ಕೂಡಲೇ ಆಹ್ವಾನವನ್ನು ಒಪ್ಪಿ ನಿಮ್ಮ ಮನೆಗೆ ಬಂದಿದ್ದು. ರಾವ್ ಅವರ ಪ್ರಸ್ತಾಪದ ಬಗ್ಗೆ ಅವಳಿಗೇನೂ ತಿಳಿದಿರಲಿಲ್ಲ ಅಭಿರಾಮ್. ಅವಳು ನಿಮ್ಮ ಬಗ್ಗೆ ಹೇಳಿದ ದಿನದಿಂದಲೇ ನಾನು ನವ್ಯಾ ನಿಮ್ಮ ಪೂರ್ವಾಪರಗಳನ್ನು ಕಲೆ ಹಾಕಿದ್ದೆವು. ನೀವೇ ಅವಳಿಗೆ ಸೂಕ್ತ ಸಂಗಾತಿ ಎಂದು ನಮಗೆ ಬಲವಾಗಿ ಅನಿಸಿತ್ತು. ಅವಳಿಗೆ ನಿಮ್ಮ ಕುಟುಂಬದವರ ಮೇಲೆ ಮಮಕಾರ. ನಿಮ್ಮೊಂದಿಗೆ ಅವಳೂ ಸುರಕ್ಷಿತ ಹಾಗೂ ಅವಳ ಕನಸಿನ ಕುಟುಂಬವೂ ಅವಳಿಗೆ ದೊರಕುವುದು ಎಂಬ ಆಸೆ ನಮಗೆ. ನಾವಿಬ್ಬರೂ ನಿಮ್ಮ ಬಳಿ ಈ ಬಗ್ಗೆ ಮಾತನಾಡಲೂ ತೀರ್ಮಾನಿಸಿದ್ದೆವು. ಆ ನಂತರ ಅವಳನ್ನು ಒಪ್ಪಿಸುವ ಮಾತೂ ಆಗಿತ್ತು. ಅಷ್ಟರೊಳಗೆ ನಮ್ಮ ಕೈ ಮೀರಿ ಇಷ್ಟೆಲ್ಲಾ ನಡೆದು ಹೋಯಿತು. ಈಗ ಅವಳ ತಂದೆಯ ಈ ಅವಾಂತರದ ಪ್ರಸ್ತಾಪ ಅವಳಲ್ಲಿ ಹೇಳಲಾರದ ವೇದನೆಯೊಂದನ್ನು, ತೀರದ ವಿಷಾದವೊಂದನ್ನು ಸೃಷ್ಟಿಸಿದೆ. ಮಾರಾಟಕ್ಕಿಟ್ಟ ವಸ್ತುವಿನಂತೆ ತನಗೆ ಬೆಲೆ ಕಟ್ಟಿ ವಿಕ್ರಯಿಸಿದ್ದಾರೆ ಅನ್ನುವಷ್ಟು ಯೋಚಿಸಿದ್ದಾಳೆ. ಇಂತಹ ಸ್ಥಿತಿಯಲ್ಲಿ ಅವಳೊಂದಿಗೆ ಹೇಗೆ, ಏನು ಮಾತನಾಡುವುದೆಂದೇ ಗೊತ್ತಾಗುತ್ತಿಲ್ಲ. ಅದಕ್ಕೇ ನಿಮ್ಮ ಬಳಿ ಎಲ್ಲಾ ಹೇಳಿಬಿಡುವುದೇ ಸೂಕ್ತ ಎನಿಸಿತು. ನೀವೇ ನೇರವಾಗಿ ಸಮನ್ವಿತಾಳ ಬಳಿ ಮಾತನಾಡಿ. ಅವಳಿಗೆ ಒಪ್ಪಲು ಕಷ್ಟವೆನಿಸಬಹುದು. ಆದರೆ ಸ್ವಲ್ಪ ಸಮಯಾವಕಾಶದ ಮಾತಷ್ಟೇ. ಕಹಿ ನುಂಗಿ ಸಿಹಿಯಾಗಿ ನಗುವ ಕಲೆ ಅವಳಿಗೆ ಕರಗತವಾಗಿದೆ. ನಾವೂ ಆದಷ್ಟು ಅವಳೊಂದಿಗೆ ಸೂಚ್ಯವಾಗಿ ಮಾತನಾಡಿದ್ದೇವೆ‌. ಆದರೆ ಅವಳನ್ನು ಒಪ್ಪಿಸುವುದು ನಿಮ್ಮದೇ ಜವಾಬ್ದಾರಿ ಅಭಿರಾಮ್. ನಾವು ಸಹಕರಿಸಬಲ್ಲೆವಷ್ಟೇ..... ಇದಕ್ಕೆ ನಿಮ್ಮಷ್ಟು ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ. ಅವಳೊಳಗೆ ನಿಮ್ಮ ಮೇಲೊಂದು ನಂಬಿಕೆ ಹಾಗೂ ಪುಟ್ಟ ಭರವಸೆಯನ್ನು ಸೃಷ್ಟಿಸಿಕೊಡಬೇಕು ನೀವು. ಅವಳಿಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆಯಿದೆ. ಹಾಗಾಗಿ ನೀವು ಖಂಡಿತಾ ಇದನ್ನು ಸುಲಭವಾಗಿ ಮಾಡಬಲ್ಲಿರಿ ಅಭಿರಾಮ್" ಅವನ ಕೈ ಹಿಡಿದು ಹೇಳಿದ ಕಿಶೋರ್.

ಅಭಿರಾಮ್ ಮೌನವಾಗಿ ಕಿಶೋರನ ಮಾತುಗಳನ್ನು ಮನನ ಮಾಡಿಕೊಳ್ಳುತ್ತಿದ್ದ. "ಅಭಿರಾಮ್ ಏನಾಯ್ತು?" ಇನ್ನೊಮ್ಮೆ ಕರೆದಾಗ, 

"ಏನಿಲ್ಲ ಕಿಶೋರ್, ನಿಮ್ಮ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದೆ. ಥ್ಯಾಂಕ್ಯೂ ಸೋ ಮಚ್. ನನ್ನ ಹಲವು ಗೊಂದಲಗಳಿಗೆ ಪರಿಹಾರ ಸಿಕ್ಕಿತು ನಿಮ್ಮಿಂದ. ನಿಮ್ಮ ಮಾತುಗಳು ಯಾವಾಗಲೂ ನನ್ನ ನೆನಪಿನಲ್ಲಿರುತ್ತವೆ. ಹಾಗೆ ನಿಮ್ಮ ಮೂವರ ಸ್ನೇಹವೂ. ಇನ್ನು ನಮ್ಮ ಡಾಕ್ಟ್ರನ್ನು ಒಪ್ಪಿಸೋದು….. ಸ್ವಲ್ಪ ಕಷ್ಟದ ಕೆಲಸವೇ. ಬಟ್ ಯಾವತ್ತಿದ್ದರೂ ಡಾಕ್ಟ್ರೇ ನಮ್ಮನೆ ಸೊಸೆ ಅಂತ ನಿನ್ನೆಯೇ ನಿರ್ಧಾರ ಮಾಡ್ಬಿಟ್ಟಿದ್ದೀನಿ. ಆದ್ರೂ ನೀವಿಬ್ಬರೂ ದಂಪತಿಗಳು ನಿಮ್ಮ ಗೆಳತಿಗೆ ನಾನೇ ಸರಿಯಾದ ಜೋಡಿ ಅಂತ ಮುಂಚೆನೇ ತೀರ್ಮಾನಿಸಿದ್ರಿ ಅಂದ್ರಲ್ಲ. ಅದು ಕೇಳಿ ತುಂಬಾ ಖುಷಿಯಾಯ್ತು ಕಿಶೋರ್. ಸತ್ಯಂ ರಾವ್ ಅವರು ನನ್ನ ಚೂಸ್ ಮಾಡಿದ್ದು ನನಗೇನೂ ಅನ್ನಿಸ್ಲಿಲ್ಲ. ಬಟ್ ನೀವಿಬ್ಬರೂ ನನ್ನ ಆಯ್ಕೆ ಮಾಡಿದ್ವಿ ಅಂದಿದ್ದು.....‌. ಇಟ್ ಮೀನ್ಸ್ ಅ ಲಾಟ್ ಟು ಮಿ. ಡಾಕ್ಟ್ರ ಬಗ್ಗೆ ಇನ್ನೇನೂ ಯೋಚನೆ ಮಾಡ್ಬೇಡಿ. ಮಿಕ್ಕಿದ್ದು ನಾನು ನೋಡ್ಕೋತೀನಿ" ಭರವಸೆಯಿಂದ ಕೈ ಅದುಮಿದ.

ಕಿಶೋರನಿಗೆ ನೆಮ್ಮದಿಯಾಯಿತು. ತಟ್ಟನೇ ಅಭಿರಾಮ್,

"ಹೌದು, ನಿಮ್ಮಿಬ್ಬರ ಮದುವೆಯ ರೂವಾರಿನೂ ಡಾಕ್ಟ್ರೇನಾ?" ಕೇಳಿದ.

"ನಾನು ನವ್ಯಾನ ಇಷ್ಟಪಟ್ಟಿದ್ದೆ. ಮನೆಯಲ್ಲಿ ಹೇಳಿ, ಒಪ್ಪಿಸುವುದರಲ್ಲಿ ಸಮಾಳ ಪಾತ್ರ ದೊಡ್ಡದು. ಮದುವೆಯ ಓಡಾಟವೆಲ್ಲಾ ಅವಳದೇ...." ಮಂದಹಾಸದೊಂದಿಗೆ ಹೇಳಿದ.

ಕಿಶೋರನಿಗೆ ನವ್ಯಾಳ ಹಿನ್ನೆಲೆಯ ಅರಿವಿದೆಯೇ ಎಂಬ ಅನುಮಾನ ಕಾಡುತ್ತಿತ್ತು ಅಭಿಗೆ. ಎಷ್ಟೋ ಬಾರಿ ಸಮನ್ವಿತಾಳ ಬಳಿ ಕೇಳಬೇಕೆಂದುಕೊಂಡರೂ ಏನೋ ಒಂದು ಅವನನ್ನು ತಡೆಯುತ್ತಿತ್ತು. ಇವತ್ತಿನ ಕಿಶೋರ್ ಮಾತು ಕೇಳಿ ಅವನಿಗೆಲ್ಲಾ ತಿಳಿದಿದೆಯೇನೋ ಎನಿಸಿತ್ತು. ಇನ್ನು ಯಾವತ್ತೂ ಈ ಬಗ್ಗೆ ಕೇಳಬಾರದು ಎಂದುಕೊಂಡ. ಕಿಶೋರನ ಬಗ್ಗೆ ಅಭಿಮಾನ, ಗೌರವ ಮೂಡಿತು.

"ಯು ಮೇಕ್ ಅ ಗುಡ್ ಪೇರ್" ಮನದುಂಬಿ ಹೇಳಿದ.

"ಐ ನೋ.... ಬಟ್ ಅವಳನ್ನು ಒಪ್ಪಿಸೋಕೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದೀನಿ ಅಭಿರಾಮ್. ನಿಮ್ಮ ಡಾಕ್ಟ್ರನ್ನು ಒಪ್ಪಿಸೋಕೆ ಅಷ್ಟು ಕಷ್ಟ ಆಗ್ಲಿಕ್ಕಿಲ್ಲ" ಭರವಸೆ ನೀಡುವವನಂತೆ ಹೇಳಿದ.

"ಅಬ್ಬಾ, ಈಗ ಸ್ವಲ್ಪ ಧೈರ್ಯ ಬಂತು" ಎದೆಯ ಮೇಲಿನ ಕೈಯಿಟ್ಟು ಗಾಬರಿ ನಟಿಸಿ ಹೇಳಿದ ಅಭಿ.

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡು ತಮ್ಮ ತಮಾಷೆಯನ್ನು ತಾವೇ ಆಸ್ವಾದಿಸುತ್ತಾ ಜೋರಾಗಿ ನಕ್ಕರು. ಅವರ ಮನಗಳು ಹಗುರವಾಗಿತ್ತು.......

      ********ಮುಂದುವರೆಯುತ್ತದೆ**********



ಭಾನುವಾರ, ಜೂನ್ 28, 2020

ಅನೂಹ್ಯ 32

ಅತ್ತ ಸಮನ್ವಿತಾಳ ಬದುಕು ಸರಿಯಾದ ಹಳಿಯತ್ತ ಸಾಗುತ್ತಿದ್ದರೆ ಇತ್ತ ರಾವ್ ದಂಪತಿಗಳು ತಮ್ಮ ತಪ್ಪಿದ ಲೆಕ್ಕಾಚಾರದಿಂದಾಗಿ ಕಂಗಾಲಾಗಿದ್ದರು. ಎಷ್ಟು ಗೌಪ್ಯವಾಗಿ, ಜೇಡ ಬಲೆ ಹೆಣೆಯುವಷ್ಟೇ ಕೌಶಲದಿಂದ ತಯಾರಿಸಿದ ಯೋಜನೆ ಈ ರೀತಿಯಲ್ಲಿ ಕೈ ಕೊಡಬಹುದೆಂದು ಕನಸಲ್ಲೂ ನೆನಸಿರಲಿಲ್ಲ ಗಂಡ ಹೆಂಡತಿ. ಈ ಪ್ಲಾನ್ ಖಂಡಿತಾ ಯಶಸ್ವಿಯಾಗುವುದೆಂಬ ಅತೀ ಭರವಸೆಯಲ್ಲಿ ಪರ್ಯಾಯ ಯೋಜನೆಯ ಬಗ್ಗೆಯೂ ಯೋಚಿಸಿರಲಿಲ್ಲ.  

ಎಲ್ಲಾ ತಾವೆಣಿಸಿದ್ದಕ್ಕಿಂತ ವೇಗವಾಗಿ, ತಮಗೆ ಬೇಕಾದಂತೆ ನಡೆಯುತ್ತಿರುವುದು ಅವರಿಗೆ‌ ರೆಕ್ಕೆ ಮೂಡಿಸಿತ್ತು. ಅದೇ ಖುಷಿಯಲ್ಲಿ ತಮ್ಮ ಹೈ ಸೊಸೈಟಿಯ ಕೆಲವು ಹೈ ಫೈ ಜನರ ಮುಂದೆ ತಾವು ಶೀಘ್ರದಲ್ಲೇ ಶರ್ಮಾ ಅವರ ಸಂಬಂಧಿಗಳಾಗುತ್ತಿರುವುದಾಗಿ ನಾಲಿಗೆ ಹರಿಯಬಿಟ್ಟಿದ್ದರು. ಅದಕ್ಕೂ ಕಾರಣವಿತ್ತು. ಕಳೆದೊಂದು ವಾರದಲ್ಲಿ ಅವರ ಕಂಪನಿಯ ಷೇರು ಮೌಲ್ಯದ ಪತನ ತೀವ್ರ ವೇಗ ಪಡೆದಿತ್ತು. ಹೂಡಿಕೆದಾರರು ತಮ್ಮ ಪಾಲನ್ನು ಹಿಂತೆಗೆದುಕೊಳ್ಳುವ ಬೆದರಿಕೆ ಒಡ್ಡಿದ್ದರು. ಹಾಗಾಗಿ ಅವರೇ ಈ ವಿವಾಹದ ವಿಷಯದ ಗಾಳಿಸುದ್ದಿ ಹಬ್ಬಿಸಿದ್ದರು ಎಲ್ಲಾ ನಿರ್ಧಾರವಾಗುವ ಮೊದಲೇ. 

ಶರ್ಮಾ ದಂಪತಿಗಳಿಗೆ ಸಮನ್ವಿತಾ ಬಹಳ ಹಿಡಿಸಿದ್ದು ಇವರಿಗೆ ಜಾಕ್ ಪಾಟ್ ಹೊಡೆದಂತಾಗಿತ್ತು.ಒಂದು ವೇಳೆ ಅಭಿರಾಮ್ ಒಪ್ಪದಿದ್ದರೂ ಅವನನ್ನು ಅವನ ಮನೆಯವರ ಮೂಲಕ ಮಣಿಸುವ ವಿಧಾನ ಹುಡುಕಿದ್ದರು. ಏನೇ ಆದರೂ ಮೃದುಲಾ ಮಗನನ್ನು ಒಪ್ಪಿಸಿಯೇ ತೀರುತ್ತಾರೆಂದು ಗ್ರಹಿಸಿಬಿಟ್ಟಿದ್ದರು ರಾವ್.

ರಾವ್ ದಂಪತಿಗಳಿಗೆ ಇಡೀ ಜಗತ್ತನ್ನೇ ತಮ್ಮ ಕುಯೋಜನೆಗಳಿಂದ ಮಣಿಸುವ ತಾಕತ್ತಿದೆ. ಯಾರನ್ನಾದರೂ ಕಿರು ಬೆರಳಿನಲ್ಲಿ ಕುಣಿಸಬಲ್ಲೆವೆಂಬ ಹಮ್ಮಿದೆ. ಒಬ್ಬಳನ್ನು ಹೊರತುಪಡಿಸಿ....... 

ಸಮನ್ವಿತಾ......

ಮಗಳ ನೇರ ಧೀರ ನೋಟ ಎದುರಿಸುವ ಚೈತನ್ಯವಿಲ್ಲ ಅವರಲ್ಲಿ. ಪ್ರತೀ ಹಂತದಲ್ಲೂ ಅವರ ವಿರುದ್ಧ ನಿಲ್ಲುತ್ತಿದ್ದವಳು ಆಕೆಯೊಬ್ಬಳೇ. ಅವರು ಬೇಡವೆಂದಿದ್ದೆಲ್ಲಾ ಅವಳಿಗೆ ಬೇಕೇಬೇಕು. ಅವಳ ಈ ವರ್ತನೆಗೆ ನೇರವಾಗಿ ತಾವೇ ಹೊಣೆ ಎಂಬುದನ್ನು ಮಾತ್ರ ಅವರು ಒಪ್ಪುವುದಿಲ್ಲ. ಅವಳ ಹಿಂದೆ ಹೇಗೇ ಇದ್ದರೂ ಅವಳೆದುರು ಮಾತನಾಡಲು ಭಯವಿತ್ತು ಅವರಿಗೆ. ಅವಳಲ್ಲಿನ ನೈತಿಕ ಮೌಲ್ಯಗಳು ಅವರಲ್ಲಿ ಇಲ್ಲದಿರುವುದೇ ಅದಕ್ಕೆ ಕಾರಣವೇನೋ.

ಅದಕ್ಕಾಗಿಯೇ ಅವಳ ಸುತ್ತ ಯೋಜನೆ ಹೆಣೆದರೂ ಅವಳಿಗೆ ಅದರ ಸುಳಿವೇ ಸಿಗದಂತೆ ಎಚ್ಚರವಹಿಸಿದ್ದರು. ಅವಳು ಮನೆಬಿಟ್ಟು ಹೊರಟಾಗ ತಡೆದಿರಲಿಲ್ಲ. ಎಲ್ಲವೂ ಎಣಿಕೆಯಂತೆಯೇ ನಡೆದಿತ್ತು. 

ಆದರೆ........ 

ಇಷ್ಟೆಲ್ಲಾ ಎಚ್ಚರಿಕೆಯಿಂದ ಇದ್ದರೂ ಅವರ ಗಮನಕ್ಕೆ ಬಾರದಂತೆ ವಿಧಿ ತನ್ನ ದಾಳ ಉರುಳಿಸಿತ್ತು. ಮಗಳಿಗೆ ಇವರ ಪೂರ್ಣ ಯೋಜನೆ ತಿಳಿದುಹೋಗಿತ್ತು. ಅದೂ ಅಭಿರಾಮ್ ಮತ್ತವನ ಮನೆಯವರಿಂದಲೇ. ಅವಳು ತಿರುಗಿ ಬಿದ್ದಿದ್ದಳು. ಅದು ನಿಶ್ಚಿತವಾದುದೇ.

ಆದರೆ ಹೀಗೊಂದು ಸನ್ನಿವೇಶ ಎದುರಾಗಬಹುದೆಂಬ ಸಣ್ಣ ಕಲ್ಪನೆಯೂ ಅವರಿಗಿರಲಿಲ್ಲ.

ಈಗ ತಾವು ಹಬ್ಬಿಸಿದ್ದ ಅದೇ ಗಾಳಿಸುದ್ದಿ ಕುತ್ತಿಗೆಗೆ ಸುತ್ತಿ ಕೊಳ್ಳುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ಗೋಚರಿಸತೊಡಗಿದ್ದವು. ಈ ಗಾಳಿಸುದ್ದಿ ಕೇಳಿದ ಹೂಡಿಕೆದಾರರು ಆದಷ್ಟು ಬೇಗ ಈ ವಿವಾಹ ಮುಗಿಸಲು ಒತ್ತಾಯಿಸಿದ್ದಲ್ಲದೇ ಒಂದು ವಾರಗಳ ಗಡುವು ನೀಡಿದ್ದರು. ಬ್ಯಾಂಕುಗಳಿಂದ ನೋಟಿಸ್ ಮೇಲೆ ನೋಟಿಸ್. ಒಟ್ಟಿನಲ್ಲಿ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿತ್ತು. ರಾವ್ ದಂಪತಿಗಳ ತಲೆ ಕೆಟ್ಟಿತ್ತು.

ಇಡೀ ದಿನ ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ ದಂಪತಿಗಳು. ಹೊರಗೆ ಹೋದರೆ ಸಾಲಗಾರರು, ಹೂಡಿಕೆದಾರರ ಕಾಟ ವಿಪರೀತ. ಯಾರನ್ನೂ ಒಳ ಬಿಡಬಾರದೆಂದು ನೌಕರರಿಗೆ ಕಟ್ಟಪ್ಪಣೆ ಜಾರಿಯಾಗಿತ್ತು. ಆದರೆ ಇವರು ಹೊರ ಹೋಗದೇ ಮನೆಯಲ್ಲಿ ಕುಳಿತುಕೊಂಡ ಮಾತ್ರಕ್ಕೆ ಸಾಲಗಾರರು ಸುಮ್ಮನೆ ಬಿಟ್ಟಾರೇ? ಜಂಗಮವಾಣಿ ಬೆಳಗ್ಗಿನಿಂದ ಬಿಡುವಿಲ್ಲದೇ ಬಡಿದುಕೊಳ್ಳುತ್ತಿತ್ತು. ಮಾತನಾಡಿ, ಸಮಜಾಯಿಷಿ ನೀಡಿ ಸಾಕಾಗಿ ಮಧ್ಯಾಹ್ನಕ್ಕೆ ಅದನ್ನೂ ಸ್ಥಗಿತಗೊಳಿಸಿದ್ದಾಗಿತ್ತು.

ಮಧ್ಯಾಹ್ನದಿಂದ ಒಂದೇ ಸಮನೆ ಪೆಗ್ ಮೇಲೆ ಪೆಗ್ ಏರಿಸಿ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಒದರಾಡುತ್ತಿದ್ದರು ಸತ್ಯಂ ರಾವ್. ಮಾಲಿನಿಯವರೂ ರಂಗಾಗಿದ್ದರೂ ಹಿಡಿತ ತಪ್ಪಿರಲಿಲ್ಲ. ಹಾಗಂತ ಯಾವಾಗಲೂ ಆಕೆ ಕಡಿಮೆ ಕುಡಿಯುತ್ತಾಳೆಂದಲ್ಲ. ಗಂಡನಿಗಿಂತ ತಾನೇನೂ ಕಡಿಮೆ ಇಲ್ಲವೆಂಬಂತೆ, ಸ್ಪರ್ಧೆ ನೀಡುವಂತೆ ಕುಡಿಯುತ್ತಾರೆ ಆಕೆ. ಎಷ್ಟೆಂದರೂ ಗಂಡು ಹೆಣ್ಣು ಸಮಾನರಲ್ಲವೇ. ಅದರಲ್ಲೂ ಮಾಲಿನಿ ಸಾಮಾನ್ಯದವರಲ್ಲ. ಆಕೆ ಈ ಶತಮಾನದ ಮಾದರಿ ಹೆಣ್ಣು, ಮಹಿಳಾ ಸಬಲೀಕರಣದ ಹರಿಕಾರ್ತಿ, ಬಡ‌ ಹಾಗೂ ಅನಾಥ ಮಕ್ಕಳ ಮಾತೆ, ಗಂಡಸಿನಿಂದ ಶೋಷಣೆಗೊಳಗಾದ ಹೆಂಗಸರ ಧ್ವನಿ......

ಇದನ್ನೆಲ್ಲ ಕೇಳಿದವರು ಹೇಳಬಹುದು. ಸಮನ್ವಿತಾಳೂ ಅವಳಮ್ಮನಂತೆಯೇ ಆದರ್ಶವಾದಿ ಎಂದು.

ಭಾಗಶಃ ನಿಜವೇ.... ಆದರೆ ಅರ್ಧಸತ್ಯ.....

ಮಾಲಿನಿ ತಾವು ಹೀಗೆಲ್ಲಾ ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು, ಪೇಪರಿನಲ್ಲಿ ಫೋಟೋ ಹಾಕಿಸಿ, ಪ್ರಚಾರ ಪಡೆದು, ಕಾರಿನಲ್ಲಿ ತಿರುಗುತ್ತಾರೆ. ಆದರೆ ಸಮನ್ವಿತಾ ಅಗತ್ಯವುಳ್ಳವರಿಗೆ ಸಹಾಯ ಮಾಡುತ್ತಾಳಷ್ಟೇ. ಹೇಳಿಕೊಳ್ಳುವುದಿಲ್ಲ. ಅವಳಿಗೆ ಪ್ರಚಾರದ ಹಂಗಿಲ್ಲ.

ಇಂತಹ‌ ಮಾಲಿನಿ ಇಂದು ತಮ್ಮ ಸಧ್ಯದ  ಆರ್ಥಿಕ ಸ್ಥಿತಿಯ ಬಗ್ಗೆ ಚಿಂತಿತರಾಗಿದ್ದರು. ನೀರಿನಂತೆ ಹಣ ಖರ್ಚು ಮಾಡುತ್ತಿದ್ದವರು….... ಈಗ ಕೈ ಹಿಡಿತ ಮಾಡುವುದೆಂದರೆ ಸಾಧ್ಯವಿಲ್ಲದ ಮಾತು. ಅದೇ ಯೋಚನೆಯಲ್ಲೇ ಕಡಿಮೆ ಕುಡಿದಿದ್ದರಷ್ಟೇ. 

ಅಂಕೆ ಮೀರಿ ಕುಡಿಯುತ್ತಿರುವ ಗಂಡನನ್ನು ಕಂಡು ಗಾಬರಿ ಬಿದ್ದವರು, "ಸತ್ಯಂ, ಜಸ್ಟ್ ಸ್ಟಾಪ್. ಆಲ್ರೆಡಿ ನೀನು ಕುಡಿದದ್ದು ವಿಪರೀತವಾಗಿದೆ" ಎಂದು ಅವರ ಕೈಯಿಂದ ಗ್ಲಾಸ್ ತೆಗೆದುಕೊಳ್ಳಲು ಹೋದರು. ಸಿಟ್ಟಿನಿಂದ ಹೆಂಡತಿಯನ್ನು ದೂಡಿ ತೂರಾಡುತ್ತಾ ಎದ್ದು ನಿಂತರು...

"ಯು ಬ್ಲಡೀ ಬಿಚ್. ಆಹಾ....ಹಾ.. ಅದೆಂ...ಎಂತಾ ಮಗ... ಮಗಳನ್ನು ಹೆತ್ತು ಬಿಟ್ಯೇ? ಯಾವಾ...ಗ ನೋಡಿದ್ರೂ ನನ್ನ ಮೇಲೆ ಕತ್ತಿ ಮಸೀ..ತಾ ಇರ್ತಾಳೆ.... ನಾನೇ... ನ್ ಬೀದಿ ಭಿಕ್... ಬೀದಿ ಭಿಕಾರಿ ಜೊತೆಗಾ ಮದ್ವೇ ಮಾಡ್ಸ್... ಅವ...ನು... ನಮಗಿನ ಶ್ರೀ.... ಶ್ರೀಮಂತ..ಏನೋ ಅವಳ್...ಗೆ ಹೇಳ್ದೇ ಮಾ....ಡಿ..ದ್ವಿ.... ಅದ್...ಕೇ ಏ...ನೋ ದೊಡ್ಡ ಅ....ನ್ಯಾಯ ಮಾಡಿರೋ ತರ್... ತರಾ ನಮಗೆ ಹೇಗೆ ಉಲ್.... ಉಲ್ಟಾ ಮಾತಾ...ಡೀ ಹೋದ್ಲು.... ನೋಡೂ..ಸಂ ಸಂ...ಬಂ.ಧ ಇಲ್ವಂತೆ ಅದ್ಏನೋ  ಸಂಬಂಧ ಕಡ್..ಕೋತಾಳಂ..ತೆ ಮೈ ಫು...ಟ್....." ಬಾಯಿಂದ ಪದಗಳು ತೊದಲಾಗಿ ಹೊರಳಿ ಹೊರಳಿ ಬಂದವು.

"ಜಸ್ಟ್ ಶಟ್ ಅಪ್. ಹೀಗೆ ಕುಡ್ಯೋದು ಬಿಟ್ಟು ಸ್ವಲ್ಪ ಮುಂದೇನು ಮಾಡೋದು ಅಂತ ಯೋಚನೆ ಮಾಡು. ವಿ ಆರ್ ಸಿಂಕಿಂಗ್ ಸತ್ಯಂ. ಹೀಗೇ ಆದ್ರೆ ಇನ್ನೊಂದೆರಡು ತಿಂಗಳಲ್ಲಿ ನಾವು ಬ್ಯಾಂಕ್ರಪ್ಟ್ ಆಗ್ತೀವಿ. ಏನು ಮಾಡ್ತೀಯ ನೋಡು" ಪರಿಸ್ಥಿತಿ ಅರ್ಥೈಸಲು ಪ್ರಯತ್ನಿಸಿದರು ಮಾಲಿನಿ.

ಆದರೆ ಮದಿರಾ ಲೋಕದಲ್ಲಿ ತೇಲುತ್ತಿದ್ದ ರಾವ್ ಅವರಿಗೆ ಹೆಂಡತಿಯ ಮಾತುಗಳು ಕೇಳಬೇಕಲ್ಲ. ಅವರ ಬಾಯಿಂದ ಪುಂಖಾನುಪುಂಖವಾಗಿ ಅಶ್ಲೀಲ ಪದಪುಂಜಗಳು ಹೊರಬೀಳತೊಡಗಿದಾಗ ಬಾತ್ ರೂಮಿಗೆ ಎಳೆದೊಯ್ದು ತಲೆಯ ಮೇಲೆ ನಾಲ್ಕು ಬಕೆಟ್ ತಣ್ಣೀರು ಸುರಿದರು.

ತಲೆ ಮೇಲೆ ತಣ್ಣೀರು ಬಿದ್ದಂತೆ ನಶೆ ಇಳಿಯತೊಡಗಿತು. ಸಿಟ್ಟು ನೆತ್ತಿಗೇರಿ ಹೆಂಡತಿಗೆ ಬಾರಿಸಲು ಕೈಯೆತ್ತಿದರು. ಅಷ್ಟೇ……  ಮಾಲಿನಿಯ ಉರಿನೋಟ ಕಂಡು ಕೈ ಇಳಿಯಿತು.

"ಮಿಸ್ಟರ್ ಸತ್ಯಂ ರಾವ್…. ಹೌ ಡೇರ್ ಟು ಕಾಲ್ ಮೀ ಅ ಬಿಚ್? ನಿನ್ನ ಬಿಸ್ನೆಸ್ ಆಲ್ಮೋಸ್ಟ್ ಮುಳುಗಿದೆ. ಹೇಗೆ ಸರಿಮಾಡ್ತಿಯೋ ನೋಡು. ಆಗ್ಲಿಲ್ಲ ಅಂದ್ರೆ ಇನ್ನೊಂದು ಲೋನ್ ತಗೊಂಡು ನನಗೆ ಡಿವೋರ್ಸ್ ಅಲ್ಮೋನಿ ಅಮೌಂಟ್ ಕೊಡೋಕೆ ರೆಡಿಯಾಗು. ಗಾಟ್ ಇಟ್?" ದಬಾಯಿಸಿದಾಗ ಅಳಿದುಳಿದ ನಶೆಯೆಲ್ಲಾ ದಿಕ್ಕಾಪಾಲು. ಇವಳು ಹೇಳಿದ್ದನ್ನು ಮಾಡುವವಳೇ…... ತಾನೇ ರೋಡಲ್ಲಿ ನಿಂತಿರುವಾಗ ಇವಳಿಗೆ ವಿಚ್ಚೇದನ ಪರಿಹಾರ ಎಲ್ಲಿಂದ ಕೊಡಲೀ? ಸತ್ಯಂ ರಾವ್ ಅವರ ತಲೆ ಕಾದ ಕಾವಲಿಯಾಗಿತ್ತು.

ಅಷ್ಟರಲ್ಲಿ ಸರ್ವೆಂಟ್ ಕಾರ್ಡ್ ಲೆಸ್ ಫೋನ್ ಹಿಡಿದು ಬಂದ. ಫೋನ್ ಕಾಟ ಬೇಡವೆಂದು ಮೊಬೈಲ್ ಸ್ವಿಚ್ ಆಫ್ ಮಾಡಿರುವಾಗ ಕಾರ್ಡ್ ಲೆಸ್ ಹಿಡಿದು ಬಂದವನನ್ನು ನೋಡಿ ವಾಚಾಮಗೋಚರವಾಗಿ ಬೈಯತೊಡಗಿದರು. 

"ಸಾರಿ ಸರ್……. ಅದು….... ಪೀಟರ್ ಸರ್ ಫೋನ್ ಮಾಡಿದ್ದು. ತುಂಬಾ ಇಂಪಾರ್ಟೆಂಟ್. ನಿಮ್ಹತ್ರ ಮಾತಾಡ್ಲೇ ಬೇಕು ಅಂದ್ರು" ನಡುಗುತ್ತಲೇ ನುಡಿದವನ ಕೈಯಿಂದ ಫೋನ್ ಕಿತ್ತುಕೊಂಡರು. "ಗೆಟ್ ಔಟ್" ಅರಚಿದಾಗ ಇವತ್ತು ಬೆಳಿಗ್ಗೆ ಯಾರ ಮುಖ ನೋಡಿದ್ನೋ ಎಂದು ಶಪಿಸಿಕೊಳ್ಳುತ್ತಾ ನಡೆದ ಸರ್ವೆಂಟ್...

ಸಿಟ್ಟಿನಿಂದಲೇ ಫೋನಲ್ಲಿ ಮಾತಿಗಾರಂಭಿಸಿದವರು ಮಾತುಕತೆ ಮುಂದುವರೆದಂತೆ ಶಾಂತರಾದರು. ಮುಖದಲ್ಲಿ ಕೃತ್ರಿಮ ನಗುವೊಂದು ಹರಡತೊಡಗಿತು. ಪೀಟರ್ ಹೇಳಿದ ವಿಷಯವೇ ಅಂತಹದ್ದಾಗಿತ್ತು. ಪೀಟರ್ ರಾವ್ ಅವರ ನಂಬಿಕಸ್ಥ ಬಂಟ. ಹಣಕ್ಕಾಗಿ ಏನು ಮಾಡಲೂ ತಯಾರು. ವಿಷಯ ತಿಳಿದ ನಂತರ ಜಗಳವಾಡಿ ಹೊರಟ ಮಗಳ ಮುಂದಿನ ನಡೆಯ ಬಗ್ಗೆ ತಿಳಿಯಲು ಪೀಟರ್ ನನ್ನು ನಿಯೋಜಿಸಿದ್ದರು ರಾವ್. ಆ ಬಗ್ಗೆ ತಿಳಿಸಲು ಫೋನ್ ಮಾಡಿದ್ದ ಪೀಟರ್. ಅವನಿಂದ ಸಮನ್ವಿತಾ ಆಸ್ಪತ್ರೆ ಸೇರಿದ ಬಗ್ಗೆ, ಅಲ್ಲಿ ಅಭಿರಾಮ್ ಅವಳನ್ನು ಭೇಟಿಯಾದ ಬಗ್ಗೆ ತಿಳಿದವರಿಗೆ ಹೋದ ಜೀವ ಮತ್ತೆ ಬಂದಂತಾಯಿತು. ಮಗಳು ಎಲ್ಲಾ ವಿಚಾರವನ್ನು ಶರ್ಮಾ ಅವರಿಗೆ ಹೇಳಿ ಮದುವೆ ಪ್ರಸ್ತಾಪವನ್ನು ಮುರಿಯುತ್ತಾಳೆ ಎಂದುಕೊಂಡಿದ್ದವರಿಗೆ, ಅಭಿರಾಮ್ ಆಸ್ಪತ್ರೆಗೆ ಬಂದಿದ್ದು ತಿಳಿದು ಹಾಲು ಕುಡಿದಷ್ಟು ಸಂತೋಷವಾಗಿತ್ತು. 'ಅಂದರೆ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ. ಬಹುಶಃ ಅವಳು ಈ ವಿಚಾರವನ್ನು ಅವರಿಗೆ ಹೇಳಿಲ್ಲ. ಒಳ್ಳೆಯದಾಯಿತು. ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು' ಎಂದು ನಿರ್ಧರಿಸಿಬಿಟ್ಟರು.

ಫೋನಿಟ್ಟವರು ಹೆಂಡತಿಯತ್ತ ತಿರುಗಿ ವಿಜಯದ ನಗೆ ನಕ್ಕರು. ಗಂಡನಿಂದ ಎಲ್ಲಾ ವಿಚಾರ ತಿಳಿದ ಮಾಲಿನಿಯೂ ಸಮಾಧಾನಗೊಂಡರು. ಇಬ್ಬರೂ ಕುಳಿತು ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಹೇಗಾದರೂ ಆದಷ್ಟು ಬೇಗ ಈ ಮದುವೆ ಮಾಡಿ ಮುಗಿಸುವ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸತೊಡಗಿದರು. ನಾಳೆಯೇ ಆಸ್ಪತ್ರೆಗೆ ಹೋಗಿ ಮಗಳನ್ನು ಮನೆಗೆ ಕರೆದುಕೊಂಡು ಬರುವುದೆಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನವಾಯಿತು....

ಅವರ ಮನದಲ್ಲಿ ಆಸ್ಪತ್ರೆಯಲ್ಲಿ ಅಭಿರಾಮ್ ಸಮನ್ವಿತಾಳನ್ನು ಭೇಟಿಯಾಗಿದ್ದಾನೆ, ನಮ್ಮ ಪ್ಲಾನ್ ಈಗಲೂ ಕೆಲಸಮಾಡುತ್ತಿದೆ ಎಂಬ ಖುಷಿಯಿತ್ತೇ ಹೊರತು, ಮಗಳು ಆಸ್ಪತ್ರೆ ಸೇರಿದ್ದಾಳೆಂಬ ಬೇಸರ, ಯಾಕೆ ಆಸ್ಪತ್ರೆಗೆ ಸೇರಿದಳೆಂಬ ಕಳವಳ, ಈಗ ಹೇಗಿರುವಳೋ ಎಂಬ ಕಾಳಜಿಯ ಲವಲೇಶವೂ ಇರಲಿಲ್ಲ.....!

           *****************************

ಆಸ್ಪತ್ರೆಯ ಕಿಟಕಿಯಿಂದ ಒಳಬರುತ್ತಿದ್ದ ಸೂರ್ಯನ ಕಿರಣಗಳು ಮೊಗವನ್ನು ಸವರತೊಡಗಿದಾಗ ನಿಧಾನವಾಗಿ ಕಣ್ತೆರೆದಳು ಸಮನ್ವಿತಾ. ಪೂರ್ಣ ಬೆಳಕಾಗಿತ್ತು. ಇಷ್ಟು ಹೊತ್ತು ಮಲಗಿದೆನಾ? ಆಶ್ಚರ್ಯವೆನಿಸಿತು ಅವಳಿಗೆ. ಇಷ್ಟು ಸೊಂಪಾದ ನಿದಿರೆ ಎಂದೂ ಮಾಡಿರಲಿಲ್ಲವೇನೋ ಅವಳು. ಮೈ ಮನಸ್ಸು ಹಗುರಾಗಿತ್ತು. ಅದೇನೋ ಉಲ್ಲಾಸ. ತಿಳಿನಗುವೊಂದು ಕಾರಣವಿಲ್ಲದೇ ತುಟಿಯಂಚನ್ನು ಸವರಿ ಹೋಯಿತು. ಡ್ರಿಪ್ಸ್ ಹಾಕಿದ್ದ ಎಡಗೈ ನಿಧಾನವಾಗಿ ಆಡಿಸಿದಳು. ನಿನ್ನೆಯಂತೆ ನೋವಿರಲಿಲ್ಲ. ಇವತ್ತು ಹೇಗಾದರೂ ಡಿಸ್ಚಾರ್ಜ್ ಮಾಡಿಸಿಕೊಳ್ಳಲೇಬೇಕು ಎಂದುಕೊಂಡವಳಿಗೆ ನಗು ಬಂದಿತು. ಅದೇ ಸಮಯಕ್ಕೆ ಕಿಶೋರ್ ಕಾಫಿ ಫ್ಲಾಸ್ಕ್ ಹಿಡಿದು ಒಳಬಂದಿದ್ದ.

"ಓಹೋ ಏನಮ್ಮಾ? ನಿನ್ನೆಯಿಂದ ಈ ಮುಖದ ನಗು ತುಂಬಾ ಜಾಸ್ತಿಯಾಗಿದೆ. ಈ ಕಿರು ನಗೆಯ ಹಿಂದಿನ ಕಾರಣವೇನೋ?"

"ಏನಿಲ್ಲಾ ಕಿಶೋರ್, ಯಾವಾಗ್ಲೂ ಪೇಷೆಂಟ್ಸ್ 'ಡಾಕ್ಟ್ರೇ ಆದಷ್ಟು ಬೇಗ ಡಿಸ್ಚಾರ್ಜ್ ಮಾಡಿ' ಅಂತ ಗೋಗರೆದಾಗ ಅವರ ಕಷ್ಟ ಏನು ಅಂತ ಗೊತ್ತಾಗ್ತಿರ್ಲಿಲ್ಲ. ಈಗ ನಾನೇ ಪೇಷೆಂಟ್. ಒಂದ್ಸಲ ಇಲ್ಲಿಂದ ಡಿಸ್ಚಾರ್ಜ್ ಆಗಿ ಹೋದ್ರೆ ಸಾಕು ಅನ್ನಿಸ್ತಿದೆ. 'ಮೀರಾ ಮೇಡಂ ಕಾಲ್ಹಿಡಿದಾದ್ರೂ ಡಿಸ್ಚಾರ್ಜ್ ಮಾಡ್ಸಿಕೋಬೇಕು' ಅಂದುಕೊಂಡೆ. ಅದನ್ನೇ ನೆನೆಸಿ ನಗುಬಂತು" ಮತ್ತೆ ನಕ್ಕಳು.

"ಅದು ನಿಜ ಬಿಡು. ಆದ್ರೂ ನೀನಿವತ್ತು ಬಹಳ ಖುಷಿಯಾಗಿದ್ದೀಯ. ಇಷ್ಟು ವರ್ಷಗಳಲ್ಲಿ ನೀನು ಇಷ್ಟು ಸಂತೋಷವಾಗಿದ್ದಿದ್ದನ್ನ ನಾನ್ಯಾವತ್ತೂ ನೋಡಿಲ್ಲ. ಈ ಖುಷಿಗೆ ಕಾರಣ ಯಾರು?" ಛೇಡಿಸಿದ.

"ನಾನು ಯಾವತ್ತಿನ ಹಾಗೆಯೇ ಇದ್ದೀನಿ. ನಿನಗೇ ಏನೋ ಆಗಿದೆ" ಮುಖ ಊದಿಸಿ ನುಡಿದಳು.

"ನನಗೇನೂ ಆಗಿಲ್ಲ. ಆದ್ರೆ ನಿಂಗೆ ತುಂಬಾ ಖುಷಿಯಾಗಿದೆ. ಆ ಖುಷಿ ಈ ಚೆಂದದ ಮುಖದ ತುಂಬಾ ಹರಡಿದೆ. ಹಾಗೇ ಈ ಖುಷಿಗೆ ಕಾರಣ ಏನು ಅಂತಾನೂ ನಂಗೊತ್ತು….... ಹೇಳ್ಲಾ? ಈ ಖುಷಿಗೆ ಕಾರಣ ಅಭಿರಾಮ್........ ರೈಟ್?"

"ಬೇಡ ಕಿಶೋರ್ ನಂಗೆ ಸಿಟ್ಟು ಬರಿಸಬೇಡ. ಗಂಡ ಹೆಂಡತಿ ಇಬ್ರೂ ಸರಿ ಇದ್ದೀರಾ. ಹೋಗು ಮಾತಾಡಲ್ಲ ನಿನ್ನ ಹತ್ರ ನಾನು" ಮುಖ ತಿರುಗಿಸಿದಳು ತನ್ನ ಮುಖದ ಕೆಂಪನ್ನು ಅವನಿಂದ ಮರೆಮಾಚಲು. ಪಕ್ಕದ ಬೆಡ್ಡಿನಲ್ಲಿ ಮಲಗಿದ್ದ ನವ್ಯಾ ಕಣ್ಣಿಗೆ ಬಿದ್ದಾಗ ಅಚ್ಚರಿಯಾಯಿತು.

"ಅರೇ, ಇದೇನು ಇವ್ಳಿನ್ನೂ ಎದ್ದಿಲ್ಲ? ಇಷ್ಟೊತ್ತು ಮಲಗೋದಿಲ್ವಲ್ಲ ಇವ್ಳು. ಹುಷಾರಾಗಿಲ್ವೇನೋ?" ಕೇಳಿದಳು ಗಾಬರಿಯಲ್ಲಿ.

"ಆರಾಮಾಗಿದ್ದಾಳೆ. ರಾತ್ರಿ ಮಲಗಿದ್ದು ಲೇಟಾಗಿತ್ತಲ್ವ. ಹಾಗಾಗಿ. ಇನ್ನು ಸ್ವಲ್ಪ ಹೊತ್ತು ಮಲಗಿರ್ಲಿ ಅಂತ ಎಬ್ಬಿಸಲಿಲ್ಲ ನಾನು" ಕಾಫಿ ಕಪ್ ಅವಳ ಕೈಗಿಡುತ್ತಾ ನುಡಿದ. ಆದರೆ ಅವಳು ಕಪ್ ತೆಗೆದುಕೊಳ್ಳಲಿಲ್ಲ. ಅವಳ‌ ಗಮನವೆಲ್ಲಾ ನವ್ಯಾಳ ಮೇಲೆಯೇ ಕೇಂದ್ರೀಕೃತವಾಗಿತ್ತು.

"ಏಯ್, ಏನು ನೋಡ್ತಿದ್ದೀ? ಕಾಫಿ ತಗೋಳೇ." 

"ಕಿಶೋರ್, ನವ್ಯಾನ ನೋಡು" ಅವಳ ಗಾಬರಿಯ ದನಿ ಕೇಳಿ ಮಡದಿಯತ್ತ ತಿರುಗಿದ. ನವ್ಯಾ ನಿದ್ರೆಯಲ್ಲೇ ಚಡಪಡಿಸುತ್ತಿದ್ದಳು. ವಿಪರೀತ ಭಯಗೊಂಡವಳಂತೆ ಕಂಡಳು. ಕಿಶೋರ್ ಅವಳನ್ನು ಹಿಡಿದು ಅಲುಗಿಸಿದ. ತಟ್ಟನೆ ಎದ್ದು ಕುಳಿತವಳ ಮುಖ ಮೈಯೆಲ್ಲಾ ಬೆವರಿನಿಂದ ತೋಯ್ದು ಹೋಗಿತ್ತು. 

ಮತ್ತದೇ ಕನಸು....

ಅವಳಿಗೆ ಇತ್ತೀಚಿಗೆ ಯಾಕಾದರೂ ನಿದ್ರೆ ಬರುತ್ತದೇನೋ ಅನಿಸಿಬಿಟ್ಟಿತ್ತು. ಅವಳ ಮನದ ಅವ್ಯಕ್ತ ಭಯ ಕನಸಿನಲ್ಲೂ ಕಾಡಲು ಶುರುವಿಟ್ಟಿತ್ತು. ಬದುಕೇ ದುರ್ಭರ ಎನಿಸತೊಡಗಿತ್ತು. ಅತ್ತೆ ಮಾವ ಮನೆಗೆ ಬಂದೊಡನೆ ನನ್ನ ಅತೀತದ ಬಗ್ಗೆ ಪ್ರಶ್ನಿಸುತ್ತಾರೆಂಬ ಅನುಮಾನ ಅವಳನ್ನು ಇಂಚಿಂಚಾಗಿ ಕೊಲ್ಲತೊಡಗಿತ್ತು.

"ನವ್ಯಾ, ಯಾಕಿಷ್ಟು ಹೆದರಿದ್ದೀ? ಏನಾಯ್ತು?" ಸಮನ್ವಿತಾ ಇನ್ನೂ ಗಾಬರಿಯಲ್ಲೇ ಇದ್ದಳು.

"ಏನಾಯ್ತು ನವ್ಯಾ? ಮತ್ತೆ ಕೆಟ್ಟ ಕನಸಾ?" ಅವಳ ಕೈ ಹಿಡಿದು ಮೃದುವಾಗಿ ಕೇಳಿದ. ಹೌದೆಂದು ತಲೆಯಾಡಿಸಿದವಳ ಮುಖ ಬಿಳುಚಿಕೊಂಡಿತ್ತು.

"ಕನಸಾ? ಏನು ಕನಸು?" ವಿಷಯ ತಿಳಿಯುವ ಕಾತರ ಸಮನ್ವಿತಾಳಿಗೆ.

"ಏನಿಲ್ಲಾ ಸಮಾ, ಏನೋ ಕೆಟ್ಟ ಕನಸಷ್ಟೇ. ನೀನು ಹೇಗಿದ್ದೀ? ಕೈ ಬಾತಿರೋದು ಕಡಿಮೆ ಆಗಿದೆ. ನೋವಿದ್ಯಾ?" ಮಾತು ಬದಲಾಯಿಸಿಬಿಟ್ಟಳು ನವ್ಯಾ. ಈಗ ಆ ಬಗ್ಗೆ ಮಾತು ಬೇಕಿರಲಿಲ್ಲ ಅವಳಿಗೆ.

"ಏನೋ ನನ್ನಿಂದ ಮುಚ್ಚಿಡ್ತಿದ್ದೀಯಾ. ಏನದು?" ಅವಳು ಸುಲಭವಾಗಿ ಪಟ್ಟು ಸಡಿಲಿಸಲಿಲ್ಲ.

"ಏನೋ ಅರ್ಥ ಇಲ್ಲದ ಕೆಟ್ಟ ಕನಸು ಕಣೇ. ನಂಗೇ ನೆನಪಾಗ್ತಿಲ್ಲ ಸರಿಯಾಗಿ. ಅಷ್ಟೇ. ಈಗ ಸುಮ್ನೆ ಕಾಫಿ ಕುಡಿ ತಗೋ" ಅವಳ ಬಾಯಿ ಮುಚ್ಚಿಸಿದಳು. 'ಇದು ನಿಜವೇ' ಕೇಳಿತು ಕಿಶೋರ್ ನೋಟ. ಅವನ ನೋಟ ತಪ್ಪಿಸಿ ಬಾತ್ ರೂಮಿನತ್ತ ನಡೆದಳು.

"ನಿಜ ಹೇಳು ಕಿಶೋರ್,‌ ಏನಾಗಿದೆ ಇವಳಿಗೆ?"  ಅವನೇನಾದರೂ ಹೇಳುವ ಮುನ್ನವೇ ಮೃದುಲಾ, ಆಕೃತಿ ಒಳ ಬಂದಿದ್ದರಿಂದ ಆ ಮಾತುಕತೆ ಅಲ್ಲಿಗೆ ನಿಂತಿತು.

"ಅಂತೂ ಎಚ್ಚರ ಆಯ್ತಲ್ಲ. ನಿನ್ನೆ ಬಂದಾಗ ಪ್ರಜ್ಞೆಯೇ ಇರಲಿಲ್ಲ. ಈಗ ಹೇಗಿದ್ದೀಯಾ ಪುಟ್ಟ? ಜ್ವರ ಕಡಿಮೆ ಆಯ್ತಾ? ಕೈ ನೋವಿದ್ಯಾ?" ಮೃದುಲಾರ ಅಕ್ಕರೆಯ ಮಾತುಗಳು ಅವಳ ಬೆಂದ ಮನಸ್ಸಿಗೆ ಅಮೃತ ಸಿಂಚನದಂತಿತ್ತು. ಬುದ್ದಿ ಬಂದಲ್ಲಿನಿಂದ ಅವಳು ಮನದಲ್ಲಿ ಚಿತ್ರಿಸಿದ್ದ ಅಮ್ಮನ ರೂಪ ಮೃದುಲಾರಲ್ಲಿ ಕಾಣುತ್ತಿತ್ತು ಅವಳಿಗೆ. ಮೊದಲ ಬಾರಿಗೆ ಅವರನ್ನು ಕಂಡಾಗ ಅವಳ ಕಲ್ಪನೆಯ ಅಮ್ಮ ಜೀವತಳೆದು ಕಣ್ಮುಂದೆ ನಿಂತಂತೆ ಭಾಸವಾಗಿತ್ತು. ತನ್ನವರ ನಡುವಿರುವೆನೆಂಬ ಅರಿಯದ ತನ್ನತನದ ಸುರಕ್ಷಿತ ಭಾವ. ಅದಕ್ಕೇ ಪ್ರಾಯಶಃ ಅವಳು ಶರ್ಮಾ ಪರಿವಾರದೊಂದಿಗೆ ಅಷ್ಟು ಆತ್ಮೀಯವಾಗಿ ಬೆರೆತದ್ದು. 

ಅನಾಯಾಸವಾಗಿ ನಗುವರಳಿತು ಅವಳ ಮುಖದ ಮೇಲೆ. "ಈಗ ಆರಾಮಾಗಿದ್ದೀನಿ. ಮೀರಾ ಮೇಡಂ ಹೂಂ ಅಂದ್ರೆ ಇವಾಗ್ಲೇ ಡಿಸ್ಚಾರ್ಜ್ ಆಗೋಕೂ ರೆಡಿ" ಎಂದಳು.

"ಹೂಂ, ಬಿಟ್ರೆ ಈಗ್ಲೇ ಡ್ರಿಪ್ಸ್ ಕಿತ್ತುಹಾಕಿ ಆಪರೇಶನ್ ಮಾಡೋಕೂ ರೆಡೀನೇ…....." ಕಿಶೋರ್ ತಮಾಷೆಯಾಗಿ ಹೇಳಿದ. ಅಷ್ಟರಲ್ಲಿ ಬಾತ್ ರೂಮಿನಿಂದ ನವ್ಯಾಳೂ ಹೊರಬಂದಳು. ಮೃದುಲಾ, ಆಕೃತಿಯೊಂದಿಗೆ ಉಭಯ ಕುಶಲೋಪರಿ ವಿಚಾರಿಸುತ್ತಾ ಕಾಫಿ ಕೊಟ್ಟು ತಾನೊಂದು ಕಪ್ ಹಿಡಿದಳು. ಇವರು ಕಾಫಿ ಕುಡಿಯುವಾಗ ಸಚ್ಚಿದಾನಂದ್ ಟಿಫಿನ್ ಕ್ಯಾರಿಯರ್ ಹಿಡಿದು ಒಳಬಂದರು. ಹಿಂದೆಯೇ ಅಭಿರಾಮ್…....

"ಅಮ್ಮ, ಮಗಳು ಏನು ನನ್ನ ಮತ್ತೆ ಡ್ಯಾಡಿನ ಸರ್ವೆಂಟ್ ಅಂದ್ಕೊಂಡಿದ್ದೀರಾ ಹೇಗೆ? ಅಲ್ಲಾ ಕಾರಿಳಿದವರೆ ಓಡ್ಕೊಂಡು ಬಂದು ಇಲ್ಲಿ ಕಾಫಿ ಕುಡಿತಾ ಕೂತಿದ್ದೀರಲ್ಲಾ, ಕರ್ಟೆಸಿಗಾದ್ರೂ ಟಿಫಿನ್ ಬಾಕ್ಸ್ ತಗೊಂಡು ಹೋಗ್ಬೇಕಾ ಅಂತ ಒಂದು ಮಾತು ಕೇಳಿದ್ರಾ? ಥೂ ಎಂತಾ ಲೈಫಪ್ಪಾ ನಮ್ಮದು. ನಾನೊಬ್ಬ ಡ್ರೈವರ್, ಡ್ಯಾಡ್ ಒಬ್ಬ ಸರ್ವೆಂಟ್…..... ಸಾಕಾಗೋಗಿದೆ. ಜೀವನದಲ್ಲಿ ಜೀಗುಜ್ಜೆ ಬಂದಿದೆ ನಂಗಂತು" ಪೆಚ್ಚು ಮೋರೆ ಹಾಕಿ ನುಡಿದ.

"ಜೀಗುಜ್ಜೆ ಬಂದಿದ್ರೆ ಅದ್ರಲ್ಲಿ ಬೋಂಡಾ ಮಾಡ್ಕೊಂಡು ತಿನ್ನು" ಅಣಕಿಸಿದಳು ಆಕೃತಿ.

"ಅಯ್ಯೋ, ನೋಡು.‌... ನಿನ್ನ ನೋಡೋ ಆತುರದಲ್ಲಿ ಟಿಫಿನ್ ಕ್ಯಾರಿಯರ್ ಮರ್ತೇ ಬಿಟ್ಟಿದ್ದೆ" ತಮ್ಮ ಮರೆವನ್ನು ಶಪಿಸಿಕೊಂಡವರು, "ಏನ್ರೀ? ಈ ಕ್ಯಾರಿಯರ್ ತರೋಕೆ ಆಗ್ದೇ ಇರೋವಷ್ಟು ನಿಶ್ಯಕ್ತಿ ಆಗಿದ್ಯಾ ನಿಮಗೆ? ಹಾಗಿದ್ರೆ ಇರಿ. ಹೇಗೂ ಪಕ್ಕದ ಬೆಡ್ ಖಾಲಿ ಇದೆ. ನಿಮಗೂ ಡ್ರಿಪ್ಸ್ ಹಾಕ್ಸಿಬಿಡೋಣ" ತೀರ್ಮಾನಿಸಿ ಹೇಳಿದರು ಮೃದುಲಾ.

"ನಾನೇನಾದ್ರೂ ಮಾತಾಡಿದ್ನಾ ಈಗ. ಈ ಸಂಸಾರದ ಭಾರನೇ ಹೊರ್ತಿದ್ದೀನೀ ಇನ್ನು ಈ ಟಿಫಿನ್ ಬಾಕ್ಸ್ ಯಾವ ಲೆಕ್ಕ. ನಿನ್ನ ಮಗನದೇ ರೋಧನೆ, ವೇದನೆ ಎಲ್ಲಾ. ಅವನನ್ನೇ ಕೇಳು" ಅವನ ಮೇಲೆ ಎತ್ತಾಕಿದವರು, "ಹೇಗಿದ್ದೀ ಮಗಳೇ?" ಎಂದು ಸಮನ್ವಿತಾಳ ಆರೋಗ್ಯ ವಿಚಾರಣೆಯಲ್ಲಿ ತೊಡಗಿದರು.

"ಡ್ಯಾಡ್? ಏನೋ ಪಾಪ ಹೆಲ್ಪ್ ಮಾಡೋಣ ಅಂತ ಬಂದ್ರೆ ನನಗೇ ಕೈ ಕೊಟ್ರಲ್ಲ. ಈ ಹಾಳು ರಾಜಕೀಯ ನೋಡಿ ನೋಡಿ ಎಲ್ಲಾ ಪಕ್ಷಾಂತರಿಗಳಾಗ್ಬಿಟ್ರಿ. ಇರ್ಲಿ ಇರ್ಲೀ.... ಅಪ್ನಾ ಟೈಂ ಆಯೇಗಾ...." ಗೊಣಗಿದವನನ್ನು ನೋಡಿ ಎಲ್ಲರೂ ನಕ್ಕರು.

"ಓಹ್, ಪರವಾಗಿಲ್ಲ ಡಾಕ್ಟ್ರಿಗೆ ನಗೋಕು ಬರುತ್ತೆ. ನಾನೇನೋ ಬರೀ ಮೇಧಾವಿ, ತತ್ವಜ್ಞಾನಿಗಳ ರೀತಿ ಯೋಚ್ಸೋಕೆ ಮಾತ್ರ ಬರುತ್ತೆ ಅಂದ್ಕೊಂಡಿದ್ದೆ" ಛೇಡಿಸಿದ. 

"ಸಧ್ಯ ಸ್ವಲ್ಪ ಸುಮ್ನಿರು. ಮೊದ್ಲು ತಿಂಡಿ ತಿನ್ಲಿ ಅವಳು" ಎಂದು ಟಿಫಿನ್ ಕ್ಯಾರಿಯರ್ ತೆರೆದರು ಮೃದುಲಾ. ಕ್ಯಾಂಟಿನಿಗೆ ಹೊರಟ ನವ್ಯಾ ಮತ್ತು ಕಿಶೋರನನ್ನೂ ಅಲ್ಲೇ ತಡೆದರು. "ಮೂರು ಜನಕ್ಕೂ ಸೇರಿಯೇ ತಂದಿದ್ದು" ಆಕೃತಿ ಹೇಳಿದಾಗ ಸುಮ್ಮನಾಗಲೇ ಬೇಕಾಯಿತು.

"ಮೊನ್ನೆ ಊಟಕ್ಕೆ ಅಂತ ಬಂದು ಊಟನೇ ಮಾಡದೇ ಹೋದ್ರಿ, ಸೋ ಇವತ್ತು ಪನಿಶ್ಮೆಂಟ್. ನಾವು ಹಾಕಿದ್ದೆಲ್ಲಾ ತಿನ್ನಲೇಬೇಕು" ಸಮನ್ವಿತಾಳನ್ನು ಉದ್ದೇಶಿಸಿ ಹೇಳಿದಳು ಆಕೃತಿ. ಪ್ರತಿಯಾಗಿ ನಕ್ಕು ಸರಿಯೆಂದು ತಲೆಯಾಡಿಸಿದಳು.

"ಸರಿ ಅಂತ ತಲೆಯಾಡಿಸೋ ಮುಂಚೆ ಯೋಚ್ನೆ ಮಾಡಿ ಡಾಕ್ಟ್ರೇ, ಇವಳು ಕೋತಿ. ಏನು ತಿನ್ನಿಸ್ತಾಳೆ ಅಂತ ಹೇಳೋಕಾಗಲ್ಲ" ಎಚ್ಚರಿಕೆ ನೀಡುವಂತೆ ನುಡಿದ ಅಣ್ಣನನ್ನು ಗುರಾಯಿಸಿದಳು.

"ಅಮ್ಮಾ..., ನಿಮ್ಮೆಲ್ಲರಿಗೂ?" ಕೇಳಿದಳು ಸಮನ್ವಿತಾ.

"ನಾವು ಮನೆಯಲ್ಲಿ ತಗೋತೀವಿ ಮಗಳೇ" ಸಚ್ಚಿದಾನಂದ್ ಉತ್ತರಿಸಿದರು.

"ಹೌದು ಡಾಕ್ಟ್ರೇ, ಈ ಆಕೃತಿ ತಿನ್ನೋದ್ನ ನೋಡಿದ್ರೆ ಹುಷಾರಾಗ್ತಿರೋ ನೀವು ಐ.ಸಿ.ಯುಗೆ ಶಿಫ್ಟ್ ಆಗ್ಬೇಕಾಗುತ್ತೆ. ಆ ರಿಸ್ಕ್ ತಗೊಳ್ಳೋಕೆ ನಾನು ರೆಡಿ ಇಲ್ಲ. ಹತ್ತು ಜನ ಬಕಾಸುರರು ಸತ್ತು ಒಬ್ಬ ಆಕೃತಿ ಹುಟ್ಟಿರೋದು…..." ಈ ಬಾರಿ ಆಕೃತಿ ಯುದ್ಧಕ್ಕೆ ತಯಾರಾದಳು. ಕೈಗೆ ಏನು ಸಿಗಬಹುದೆಂದು ಸುತ್ತಲೂ ನೋಟ ಹರಿಸಿದವಳಿಗೆ ಖಾಲಿಯಾಗಿದ್ದ ನೀರಿನ ಜಗ್ ಕಂಡಿತು. ಆಯುಧ ಧಾರಣೆ ಮಾಡಿಯೇಬಿಟ್ಟಳು.... 

"ಲೇ ಕೋತಿ, ಅದು ಸ್ಟೀಲ್ ಜಗ್ ಕಣೇ... ನೋವಾಗುತ್ತೆ" ತಪ್ಪಿಸಿಕೊಳ್ಳಲು ಬಾಗಿಲತ್ತ ಓಡಿದ.

ಅಷ್ಟರಲ್ಲಿ ಗ್ರಹಗತಿ ಸರಿಯಿಲ್ಲದ, ರಾಹು,ಯಮಗಂಡ ಕಾಲದ ಮಿಶ್ರಣದಲ್ಲಿ , ಕಂಪ್ಲೀಟ್ ರಾಂಗ್ ಟೈಮಲ್ಲಿ ರಂಗಪ್ರವೇಶಿಸಿ ಮಧ್ಯಪ್ರವೇಶಿಸಿದ್ದು.......

ಡಿಟೆಕ್ಟಿವ್ ವೈಭವ್.........

ಬಾಗಿಲಿಗೆ ಬಂದ ಅಭಿ ಎದುರು ಸಿಕ್ಕ ಪತ್ತೇದಾರನನ್ನು ತನ್ನ ಮುಂದೆ ರಕ್ಷಾ ಕವಚದಂತೆ ಹಿಡಿಯೋದಕ್ಕೂ....

ನಮ್ಮ ಪತ್ತೇದಾರರು ತಮ್ಮ ಅರ್ಧ ಮುಖ ಮುಚ್ಚೋ ಹ್ಯಾಟನ್ನು ಸ್ಟೈಲಾಗಿ ತೆಗ್ಯೋದಕ್ಕೂ…....

ಆಕೃತಿ ಗುರಿ ಇಟ್ಟು ಜಗ್ ಎಸಿಯೋದಕ್ಕೂ.......

ಆ ಜಗ್ ಪತ್ತೇದಾರರ ಬುರುಡೆ ಬಿಚ್ಚೋದಕ್ಕೂ........

ಟೈಮು ಫುಲ್ ಸಿಂಕ್.........

        ********ಮುಂದುವರೆಯುತ್ತದೆ********