ಲೇಬಲ್ಗಳು
ಭಾನುವಾರ, ಜುಲೈ 26, 2020
ಕಾರ್ಗಿಲ್ ಕಂಪನ
ಶನಿವಾರ, ಜುಲೈ 25, 2020
ಆರ್ತನಾದ - ಪುಸ್ತಕ ಪರಿಚಯ
ಸೋಮವಾರ, ಜುಲೈ 20, 2020
ಚಿತಾದಂತ
ಪುಸ್ತಕದ ಹೆಸರು : ಚಿತಾದಂತ
ಲೇಖಕರು : ಡಾ. ಕೆ.ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಸ್ತುತ ಮುದ್ರಣ : 2017
ಪುಟಗಳು : 248 ಬೆಲೆ : 150 ರೂ
ಚರಿತ್ರೆ ಎನ್ನುವುದು ಹಲವು ರಹಸ್ಯಗಳ ನಿಗೂಢ ಸಂಪುಟ. ಆ ಸಂಪುಟದೊಳಗಿನ ಪುಟಗಳಲ್ಲಿ ದಾಖಲಾದ ವಿಚಾರಗಳಿಗಿಂತ ಪುಟಗಳ ನಡುವೆ ಅಜ್ಞಾತವಾಗುಳಿದು ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೇ ಹೆಚ್ಚು ಎನ್ನುವುದು ಒಪ್ಪಲೇಬೇಕಾದ ಸತ್ಯ. ಭಾರತದ ಮಟ್ಟಿಗೆ ನೋಡುವುದಾದರೆ ಇತಿಹಾಸವನ್ನೇ ತಿರುಚಿ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದನ್ನೇ ನಮ್ಮ ಇತಿಹಾಸವೆಂಬಂತೆ ಬಿಂಬಿಸುವ ಹುನ್ನಾರ ಸ್ವಾತಂತ್ರ್ಯಾನಂತರದಿಂದ ವ್ಯವಸ್ಥಿತವಾಗಿ ನಮ್ಮದೇ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆದಿದೆ ಎನ್ನುವ ಗಂಭೀರ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೆಲ ಅಪಾತ್ರರನ್ನು ವೈಭವೀಕರಿಸುತ್ತಾ ಅವರನ್ನು ವೀರರಂತೆ, ದೇಶಭಕ್ತರೆಂಬಂತೆ ಬಿಂಬಿಸಿ ಅಸಲೀ ನಾಯಕರನ್ನು ಅಜ್ಞಾತವಾಗಿಯೇ ಉಳಿಸಲಾಗಿದೆ ಎನ್ನುವ ವಾದ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರಹಗಾರರೂ ಕೂಡಾ ಗತದಲ್ಲಿ ಎಲ್ಲೋ ಮರೆಯಾಗಿ ಉಳಿದಿರುವ ಅವ್ಯಕ್ತ ಸತ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭೈರಪ್ಪನವರ 'ಆವರಣ', ವಸುಧೇಂದ್ರರ 'ತೇಜೋ ತುಂಗಭದ್ರಾ' ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಅಂತಹದೇ ಐತಿಹಾಸಿಕ ಸತ್ಯಾಸತ್ಯತೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ ಕಟ್ಟಿರುವ ಕಾದಂಬರಿ "ಚಿತಾದಂತ".
ತಮಗೇ ಅರಿವಾಗದಂತೆ ಕಾಲಗರ್ಭದಲ್ಲಿ ಹುದುಗಿದ ಐತಿಹಾಸಿಕ ರಹಸ್ಯವೊಂದರ ಸುಳಿಯಲ್ಲಿ ಸಿಲುಕುವ ಇಬ್ಬರು ಪುರಾತತ್ವಶಾಸ್ತ್ರಜ್ಞೆಯರು ಹೇಗೆ ಆ ಸಿಕ್ಕುಗಳನ್ನು ಬಿಡಿಸಿ ಅದರಿಂದ ಹೊರಬರುತ್ತಾರೆ ಎನ್ನುವುದೇ ಇಲ್ಲಿನ ಕಥೆಯಾದರೂ ಈ ಪ್ರಕ್ರಿಯೆಯಲ್ಲಿ ಅನಾವರಣಗೊಳ್ಳುವ ಇತಿಹಾಸದ ಅನುಕ್ತ ಪುಟಗಳೇ ಈ ಕಾದಂಬರಿಯ ಜೀವಾಳ. ಅಲೆಕ್ಸಾಂಡರ್ ನ ಗುಪ್ತನಿಧಿಯ ಅನ್ವೇಷಣೆ ಕಥೆಯ ಕೇಂದ್ರವೆನಿಸಿದರೂ ಕೂಡಾ ಅಲೆಗ್ಸಾಂಡರನ ದಂಡಯಾತ್ರೆಯಿಂದ ಹಿಡಿದು ನಂದರು, ಮೌರ್ಯರು, ಧಾರ್ಮಿಕ ಒಳಸುಳಿಗಳು, ಕ್ಯಾಂಡಿಯ ಪ್ರಸಿದ್ಧ ಬುದ್ಧದಂತ ಹೀಗೆ ಹಲವು ಐತಿಹಾಸಿಕ ವಿಚಾರಗಳು ಕಥೆಯಲ್ಲಿ ಅಂತರ್ಗತವಾಗಿವೆ. ಅಜೈವಿಕ ಪಂಥ, ಸಿಕಂದರ್, ಅಮಾರ್ತ್ಯ ರಾಕ್ಷಸ, ಚಾಣಕ್ಯ, ಅಶೋಕ ಮೊದಲಾದವರಿಗೆ ಸಂಬಂಧಿಸಿದ ಹಲವು ಸೂಕ್ಷ್ಮ ವಿವರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಬೌದ್ಧ ಧರ್ಮದ ಉಗಮದಿಂದ ಆರಂಭಿಸಿ ಕಾಲಕ್ರಮೇಣ ಬಾಹ್ಯ ಪ್ರಭಾವದಿಂದ ಅದರಲ್ಲಾದ ಬದಲಾವಣೆಗಳು, ಬುದ್ಧನ ಮೂಲ ತತ್ವಗಳ ಉಳಿವಿಗಾಗಿ ಶ್ರಮಿಸುವ ತೇರವಾದಿಗಳು, ಅವರ ಹಾಗೂ ಮಹಾಯಾನರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಘರ್ಷಣೆಗಳು ಮೊದಲಾದ ಐತಿಹಾಸಿಕ ವಿಚಾರಗಳೊಂದಿಗೆ ಕಲಾಶ್ ಪಂಗಡದ ಬದುಕು ಬವಣೆಗಳು, ನ್ಯೂಟನ್ ಸ್ಟೋನ್, ಭಾಷೆ ಹಾಗೂ ಅದನ್ನು ಬಳಸುವ ಜನಾಂಗದ ನಡುವಿನ ಸಂಬಂಧ, ಪ್ರಾಚ್ಯವಸ್ತು ಮಾಫಿಯಾ ಮುಂತಾದ ವಿವರಗಳೂ ಇದರಲ್ಲಿವೆ.
ಲೇಖಕರು ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ಸತ್ಯ ಮತ್ತು ಕಲ್ಪನೆಗಳನ್ನು ಬೆರೆಸುವಲ್ಲಿ ಅವರು ಯಾವುದೇ ಮಿತಿಯನ್ನು ಇರಿಸಿಕೊಂಡಿಲ್ಲ. ಕಲ್ಪನೆ ಯಾವುದು ಹಾಗೂ ಸತ್ಯ ಘಟನೆಗಳ್ಯಾವುವು ಎಂಬುದನ್ನು ಓದುಗರೇ ವರ್ಗೀಕರಿಸಿಕೊಳ್ಳಬೇಕು. ಹಾಗಂತ ಪುರಾವೆಗಳೊಂದಿಗೆ ನೀಡಿರುವ ವಿಚಾರಗಳು ಮಾತ್ರ ಸತ್ಯ ಉಳಿದವೆಲ್ಲವೂ ಲೇಖಕರ ಕಲ್ಪನೆ ಎಂದು ಸಾರಾಸಗಟಾಗಿ ನಿರ್ಧರಿಸಲೂ ಸಾಧ್ಯವಿಲ್ಲ. ಪುರಾವೆಗಳ ಹೊರತಾಗಿಯೂ ಲೇಖಕರು ಪ್ರಸ್ತುತಪಡಿಸಿರುವ ಹಲವು ಸಿದ್ಧಾಂತಗಳು, ಹಾಗೂ ಅವುಗಳ ಸಮರ್ಥನೆಗೆ ನೀಡಿರುವ ವಿವರಗಳು ಒಪ್ಪುವಂತಹದ್ದು. ಏಕೆಂದರೆ ಗತದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಿಲ್ಲ. ರಾಜರ ಆಸ್ಥಾನ ಕವಿಗಳು ಬರೆದ ಕಾವ್ಯಗಳು, ಸ್ವತಃ ರಾಜರೇ ಕೆತ್ತಿಸಿದ ಶಾಸನಗಳು ಮುಂತಾದವೇ ಚರಿತ್ರೆಯ ಮರುಸೃಷ್ಟಿಗೆ ಆಕರ. ಹಾಗಿರುವಾಗ ಆ ವಿವರಗಳು ಸಂಪೂರ್ಣ ಸತ್ಯ ಎನ್ನುವುದು ಮೂರ್ಖತನವೇ ಸೈ. ಹಾಗಾಗಿ ಚರಿತ್ರೆಯನ್ನು ಬೇರೆ ಬೇರೆ ಆಯಾಮಗಳಿಂದ ಪರಾಮರ್ಶಿಸುವುದು ಅತ್ಯಗತ್ಯ. ಅದನ್ನೇ ಲೇಖಕರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿನ ಹಲವು ಘಟನೆಗಳನ್ನು ಬೆದಕಿ ತೆಗೆದು ಅದನ್ನು ಕಾಲಾನುಕ್ರಮದಲ್ಲಿ ಜೋಡಿಸುವಲ್ಲಿ ಇತಿಹಾಸದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದ್ದರೆ ಅವುಗಳ ನಡುವೆ ಸಂಪರ್ಕದ ಕೊಂಡಿ ಬೆಸೆಯುವಲ್ಲಿ ಓದುಗರನ್ನು ಅವಲೋಕನಕ್ಕೆ ಒಳಪಡಿಸುವ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಆ ಮೂಲಕ ಚರಿತ್ರೆಯ ಕೆಲ ಭೂಗತ ಸತ್ಯಗಳತ್ತ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ. ಹಲವು ಚದುರಿದ ಚೂರುಗಳನ್ನು ಕ್ರೋಢೀಕರಿಸಿಕೊಂಡಾಗ ಮೂಡುವ ಚಿತ್ರ ನಾವು ಇದುವರೆಗೆ ಓದಿದ ಚರಿತ್ರೆಗಿಂತ ಭಿನ್ನವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ.
ಇದೆಲ್ಲವನ್ನೂ ಹೊರತುಪಡಿಸಿ ಕಾದಂಬರಿಯ ಬಗ್ಗೆ ಹೇಳುವುದಾದರೆ ಓದುಗರನ್ನು ಭೂತ, ವರ್ತಮಾನಗಳೆರಡರ ನಡುವೆ ಕೊಂಡೊಯ್ಯುತ್ತಾ ಕುತೂಹಲಕಾರಿಯಾಗಿ ಸಾಗುವ ಚಿತಾದಂತ ಒಂದಿಷ್ಟೂ ಬೇಸರಗೊಳಿಸದೆ ಓದಿಸಿಕೊಳ್ಳುತ್ತದೆ. ಸನ್ನಿವೇಶ ಸಂಬಂಧಿತ ನಕ್ಷೆ, ಚಿತ್ರಗಳು, ಬ್ರಾಹ್ಮಿ ಹಾಗೂ ಗ್ರೀಕ್ ಲಿಪಿಯ ಕೋಡ್ ಗಳು ಈ ಪಯಣವನ್ನು ಇನ್ನಷ್ಟು ರೋಚಕವಾಗಿಸುವ ಜೊತೆಗೆ ಪ್ರತೀ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳಲು ಸಹಕಾರಿಯಾಗಿವೆ. ಇದಕ್ಕಾಗಿ ಲೇಖಕರು ನಡೆಸಿರುವ ಅಧ್ಯಯನ, ತೆಗೆದುಕೊಂಡಿರುವ ಶ್ರಮ ಶ್ಲಾಘನೀಯ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದಂತಹ ಕಾದಂಬರಿಯಾದರೂ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪುರಾತತ್ವ ಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿರುವವರು ವಿವರವಾಗಿ ವಿಶ್ಲೇಷಿಸಿ ಅವಲೋಕಿಸುತ್ತಾ ಓದುವಂತಹ ಸಂಗ್ರಹಯೋಗ್ಯ ಪುಸ್ತಕ ಎನಿಸಿತು. ಅಂದು ಹಾಗೆ ಇದು ನಾನೋದಿದ ಗಣೇಶಯ್ಯನವರ ಮೊದಲ ಕಾದಂಬರಿ. ಈವರೆಗೆ ಅದೇಕೆ ಇವರ ಬರಹಗಳನ್ನು ಓದಲಿಲ್ಲ ಎನ್ನುವ ಭಾವ ಕಾಡಿದ್ದು ಸುಳ್ಳಲ್ಲ.
(ಇದು ಪುಸ್ತಕದ ವಿಮರ್ಶೆಯಲ್ಲ. ಪುಸ್ತಕ ಓದಿದ ನಂತರ ನನಗನ್ನಿಸಿದ್ದನ್ನು ಅನಿಸಿಕೆಯಾಗಿ ಬರೆದಿರುವೆನಷ್ಟೇ)
ಮಂಗಳವಾರ, ಜುಲೈ 7, 2020
ಲೋಕರೀತಿ.....
ಶನಿವಾರ, ಜುಲೈ 4, 2020
ಪುಸ್ತಕ ವಿಮರ್ಶೆ - ವೈದೇಹಿಯವರ ಆಯ್ದ ಕಥೆಗಳು
ಗುರುವಾರ, ಜುಲೈ 2, 2020
ಅವರೋಹಣ
ಈ ಜಗ ಸೋಜಿಗ ಬಲು ಡಾಂಭಿಕ ಇಲ್ಲಿನ ಲೆಕ್ಕಾಚಾರ
ಮಾತಿಗೂ ಕೃತಿಗೂ ಸಂಬಂಧವಿಲ್ಲದ ಜೀವನವಿದು ಆತ್ಮವಂಚನೆ
ಎದುರಿಗೊಂದು ನೀತಿ ಬೆನ್ನ ಹಿಂದೆ ಬೇರೆಯದೇ ರೀತಿ ನಯವಂಚನೆ
ಸಕಲವೂ ತೋರಿಕೆ ಭಾವಗಳ ಸೋರಿಕೆ ಬದುಕೇ ಆಡಂಬರದ ಪ್ರದರ್ಶನ
ಅಂಕೆಗಳಲಿನ ಗಳಿಕೆಯೊಂದೇ ಪ್ರಧಾನ ಆತ್ಮವೇ ಬಿಖರಿಯಾದದ್ದು ನಿದರ್ಶನ
ನಾ ಮೇಲು ತಾ ಮೇಲು ಎಂಬ ದೊಂಬರಾಟದೊಳು ಜ್ಞಾನಕ್ಕೂ ಪಕ್ಷಪಾತ
ಅರಿವಿಗೂ ತಾರತಮ್ಯದ ಅರಿವೆ ತೊಡಿಸಿರೆ ಮೌಲ್ಯಗಳ ಉಲ್ಕಾಪಾತ
ಇದುವೇ ಅಧಃಪತನದ ಹಾದಿ
ಇದುವೇ ಅವಸಾನಕ್ಕೆ ನಾಂದಿ
ಮಂಗಳವಾರ, ಜೂನ್ 30, 2020
ಅನೂಹ್ಯ ಪಯಣ
ಏನು ಬರೆಯಲಿ ಎಂದು ಯೋಚಿಸಿದಾಗ ಮೊದಲು ತಲೆಗೆ ಬಂದ ವಿಷಯವಿದು.... ಒಂದು ಪುಟ್ಟ ಕಥೆ, ಕವನ ಏನೋ ಗೀಚುವ ಬದಲು ಇಂತಹ ವಿಷಯವನ್ನಿಟ್ಟುಕೊಂಡು ಕಾದಂಬರಿ ಬರೆಯಬೇಕು ಎಂದು ಅದೇಕೆ ಅನಿಸಿತೋ ನನಗೂ ತಿಳಿಯದು. ಒಮ್ಮೊಮ್ಮೆ ನನಗೇ ಹುಚ್ಚು ಎನಿಸಿದ್ದಿದೆ. ಮೊದಲ ಪ್ರಯತ್ನಕ್ಕೆ ಇಂತಹ ವಿಷಯ, ವಿಸ್ತಾರವಾದ ಪರಿಕಲ್ಪನೆ ಬೇಕಾ ಅಂತ. ಆದರೆ ನನ್ನ ಮನಸ್ಸು ಕೇಳಲೇ ಇಲ್ಲ. ಇದರ ನಡುವಿನಲ್ಲೇ ಕೆಲವು ಸಣ್ಣ ಕಥೆ, ಕವನ, ಹಾಸ್ಯ ಬರಹಗಳನ್ನು ಬರೆದಿರುವೆನಾದರೂ ಒಟ್ಟಾರೆಯಾಗಿ ನನ್ನ ಮೊದಲ ಬರಹ ಅನೂಹ್ಯ.
ಬರವಣಿಗೆಯ ಬಗ್ಗೆ ಏನೇನೂ ಅನುಭವವಿರಲಿಲ್ಲ. ಹತ್ತು ಸಂಚಿಕೆಗಳಲ್ಲಿ ಮುಗಿಯಬಹುದು ಅಂದುಕೊಂಡಿದ್ದೆ. ಈಗ ಹಿಂತಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ.
ಇನ್ನು ಕಥೆಯ ವಿಷಯಕ್ಕೆ ಬರುವುದಾದರೇ, ಬರವಣಿಗೆ ಓದುಗರ ಚಿಂತನೆಗಳನ್ನು ಓರೆಗೆ ಹಚ್ಚಬೇಕು ಎಂದು ಆಶಿಸುವವಳು ನಾನು. ಹಾಗಾಗಿಯೇ ನನ್ನ ಸುತ್ತಮುತ್ತಲಿನ ಸಮಾಜದಲ್ಲಿ ನಾನು ಕಂಡ ವಿಶಿಷ್ಟ ವ್ಯಕ್ತಿತ್ವಗಳನ್ನು ಆಯ್ದುಕೊಂಡು ಈ ಕಥೆ ರಚಿಸಿದ್ದು. ಇದರಲ್ಲಿಯ ಎಲ್ಲಾ ಪಾತ್ರಗಳೂ ನಮ್ಮ ನಡುವಿನವೇ (ವೈಭವ್ ಹೊರತುಪಡಿಸಿ). ಬಹಳವಾಗಿ ಕಾಡಿದಂತಹ ಕೆಲ ವ್ಯಕ್ತಿತ್ವಗಳು, ಕೇಳಿದ ಕೆಲವೊಂದು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೊಂದಿಷ್ಟು ಕಲ್ಪನೆ, ಆಶಯ ಬೆರೆಸಿ ಹೆಣೆದ ಕಥೆಯಿದು. ಕಥೆಯಲ್ಲಿ ವೇದನೆ, ವಾಸ್ತವದ ಕ್ರೌರ್ಯತೆಯೇ ಮೇಲಾಗಿದ್ದಾಗ ಅದಕ್ಕೊಂದಿಷ್ಟು ವಿರಾಮ ನೀಡಲು ಪೂರ್ವಯೋಜನೆ ಇಲ್ಲದೇ ಸೃಷ್ಟಿಸಿದ ಪಾತ್ರ ವೈಭವನದು.
ಕೊನೆಯದಾಗಿ ಹಾಗೂ ಬಹಳ ಮುಖ್ಯವಾಗಿ……. ಈ ಕಥೆಯ ಮುಕ್ತಾಯ ಸುಖಾಂತ್ಯವಾಗಿದ್ದು ಹಲವರಿಗೆ ಇಷ್ಟವಾದರೂ ಕೆಲವರಿಗೆ ವಾಸ್ತವಕ್ಕೆ ದೂರ ಎನ್ನಿಸಬಹುದು. ಅದಕ್ಕೆ ನನ್ನದೊಂದು ಸಣ್ಣ ಸ್ಪಷ್ಟೀಕರಣ.
ಹೌದು…. ವಾಸ್ತವದಲ್ಲಿ ನವ್ಯಾಳ ಪರಿಸ್ಥಿತಿಯಲ್ಲಿರುವ ಹೆಣ್ಣುಮಕ್ಕಳನ್ನು ಕುಟುಂಬ, ಸಮಾಜ ಎರಡೂ ಧಿಕ್ಕರಿಸುವುದು ನೂರಕ್ಕೆ ತೊಂಬತ್ತು ಪ್ರತಿಶತ ಸತ್ಯ. ಎಲ್ಲೋ ಲಕ್ಷಕ್ಕೊಬ್ಬರು ಆ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸಿಗಬಹುದು. ಇನ್ನು ಲೋಕದ ಜನರ ಮಾತಂತೂ ಬೇಡವೇ ಬೇಡ. ಹೊಲಸು ನಾಲಿಗೆಯನ್ನು ಮನಬಂದಂತೆ ಹರಿಯಬಿಡುತ್ತಾರೆ.
ಆದರೆ ನಾನು ಈ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ಆದರೂ ಬದಲಾವಣೆಯ ಆಶಯದೊಂದಿಗೆ ಬರೆದಿರುವೆ. ಈ ವಾಸ್ತವ ಬದಲಾಗಲೀ, ಅಂತಹ ನೊಂದ ಹೆಣ್ಣುಮಕ್ಕಳ ಬಾಳೂ ಬೆಳಗಲಿ ಎಂಬ ಆಶಯ ನನ್ನದು. ತಮ್ಮದಲ್ಲದ ತಪ್ಪಿಗೆ ಜೀವಂತವಾಗಿಯೇ ನರಕ ದರ್ಶನ ಮಾಡಿದ್ದಾರೆ ಇಂತಹ ಹೆಣ್ಣುಮಕ್ಕಳು. ಅವರನ್ನು ಸಾಂತ್ವನಿಸಬೇಕಲ್ಲವೇ ನಾವು…..? ಸಾಂತ್ವನಿಸದಿದ್ದರೂ ಚಿಂತೆಯಿಲ್ಲ ಕಡೇಪಕ್ಷ ಅವರ ಬಗ್ಗೆ ಕೇವಲವಾಗಿ ಮಾತನಾಡದೇ ಸುಮ್ಮನಿರಬಹುದಲ್ಲವೇ? ನಮ್ಮಂತೆಯೇ ಗೌರವಯುತವಾಗಿ ಬಾಳುವ ಹಕ್ಕು ಅವರಿಗೂ ಇದೆ ಎಂಬುದನ್ನೇಕೆ ಅರ್ಥೈಸಿಕೊಳ್ಳುವುದಿಲ್ಲ ನಾವುಗಳು…..?
ಇದನ್ನೆಲ್ಲ ಅರಿತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಟ್ಟಾಗಿ ಪ್ರಯತ್ನಿಸೋಣ ಎಂಬ ಆಶಯದಿಂದ ಬರೆದ ಕಥೆಯಿದು. ಹಾಗಾಗಿ ವಾಸ್ತವದಲ್ಲಿ ಕಷ್ಟಸಾಧ್ಯವಾದ ಅಂತ್ಯವನ್ನು ನಾನು ಕಥೆಯಲ್ಲಿ ಸಾಧ್ಯವಾಗಿಸಿದ್ದೇನೆ ಮುಂದೊಂದು ದಿನ ಈ ಕಥೆಯ ಅಂತ್ಯವೇ ವಾಸ್ತವವಾಗಲೀ ಎಂಬ ಆಶಯದಿಂದ.
ಈ ಕಥೆಯ ಓದುಗರಿಗೆ ಧನ್ಯವಾದಗಳೊಂದಿಗೆ ಒಂದು ಸಣ್ಣ ಕೋರಿಕೆ…... ಇದನ್ನು ಕಥೆಯೆಂದು ಓದಿ ಇಲ್ಲಿಗೇ ಮರೆತುಬಿಡಬೇಡಿ. ಇಲ್ಲಿ ಪ್ರಸ್ತಾಪವಾಗಿರುವ ವಿಚಾರದ ಬಗ್ಗೆ ಚಿಂತಿಸಿ, ಸಾಧ್ಯವಾದರೆ ಕೆಟ್ಟದ್ದನ್ನು ಬದಲಿಸಿ, ಒಳ್ಳೆಯ ವಿಚಾರ ಯೋಚನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟು ವೈಶಾಲ್ಯತೆಯನ್ನು ತೋರೋಣ. ಈ ಕಥೆಯನ್ನು ಓದಿ ಕಡೆಯ ಪಕ್ಷ ಒಬ್ಬ ವ್ಯಕ್ತಿಯಾದರೂ ತನ್ನ ಚಿಂತನಾ ವಿಧಾನವನ್ನು ಬದಲಾಯಿಸಿಕೊಂಡರೆ ನನ್ನ ಬರವಣಿಗೆ ಸಾರ್ಥಕವಾದಂತೆ. ಈ ಬಗ್ಗೆ ಯೋಚಿಸುವಿರಲ್ಲ.......?
ಇನ್ನೇನು ಹೇಳಲಿ.... ಇಲ್ಲಿಗೆ ಭಾವನೆಗಳನ್ನು ಬಸಿದು ಕೊಂಚ ಹಗುರವಾದ, ಈ ಪಯಣ ಮುಗಿಯಿತು ಎಂದು ಒಂದಿಷ್ಟು ಭಾರವಾದ ಮನದಿಂದ ಈ ಕಥೆಗೆ ವಿದಾಯ ಹೇಳುತ್ತಿರುವೆ. ನನ್ನೀ ಪ್ರಯತ್ನವನ್ನು ಮೆಚ್ಚಿ ಆಶೀರ್ವದಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.
ಬದಲಾವಣೆಯ ಆಶಯದೊಂದಿಗೆ......
ನೀತಾ ಸುಧೀರ್😊☺️