ಮಂಗಳವಾರ, ಜುಲೈ 7, 2020

ಲೋಕರೀತಿ.....

ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ನಟನೆಯ ಇನ್ನೂ ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ(ಆತನ ಸಾವಿನ ಕಾರಣ) 'ದಿಲ್ ಬೇಚಾರಾ' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದಿದೆ. ರೆಕಾರ್ಡ್ ಬ್ರೇಕಿಂಗ್ ಫಾಸ್ಟೆಸ್ಟ್ ಮಿಲಿಯನ್ ಲೈಕ್ಸ್, ಲಕ್ಷಾಂತರ ಶೇರ್ ಗಳು, ಹೊಗಳಿಕೆಗಳ ಅಬ್ಬರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕಣ್ಣಿಗೆ ರಾಚುತ್ತಿದೆ. ಇವನ್ನೆಲ್ಲಾ ನೋಡಿದಾಗ ಬೇಡವೆಂದರೂ ಮನವನ್ನಾವರಿಸಿದ್ದು ಒಂದೇ ಪ್ರಶ್ನೆ........ ಇದೇ ಸುಶಾಂತ್ ಸಿಂಗ್ ರಾಜಪೂತ್ ಎಂಬ ಯಾವುದೇ ಗಾಡ್ ಫಾದರ್ಗಳಿಲ್ಲದ, ಸ್ವಸಾಮರ್ಥ್ಯದಿಂದ ಮೇಲೆ ಬಂದ ಹುಡುಗ ಇಂದು ನಮ್ಮ ನಡುವೆ ಬದುಕಿದ್ದಿದ್ದರೆ ಈ ಟ್ರೇಲರ್ ಇಷ್ಟೊಂದು ಸದ್ದು ಮಾಡುತ್ತಿತ್ತೇ......? 

ಪ್ರಾಯಶಃ ಇಲ್ಲ..... ಇದು ಆತನ ನಟನೆಯ ಕೊನೆಯ ಸಿನಿಮಾ ಎಂಬುದೇ 'ದಿಲ್ ಬೇಚಾರ' ಎಂಬ ಸಿನಿಮಾದ ಟ್ರೇಲರನ್ನು ಟ್ರೆಂಡಿಂಗ್ ಲಿಸ್ಟಿಗೆ ತಲುಪಿಸಿರುವುದು ಅನ್ನುವುದು ಅರಗಿಸಿಕೊಳ್ಳಲು ಕಠಿಣವಾದರೂ ಸತ್ಯ. ಬದುಕಿದ್ದಾಗ ಪ್ರತಿಭೆಗೆ ಸಿಗದ ಬೆಲೆ, ಮನ್ನಣೆ ಸತ್ತ ನಂತರ ಸಿಕ್ಕರೆಷ್ಟು ಬಿಟ್ಟರೆಷ್ಟು? ಈ ಖ್ಯಾತಿ, ಹೊಗಳಿಕೆ, ಆತನ ನಟನೆ ಹಾಗೂ ಹೃದಯವಂತಿಕೆಯ ಬಗೆಗಿನ ಸಾಲು ಸಾಲು ವಿಡಿಯೋ, ಪೋಸ್ಟ್, ಟ್ವೀಟ್ ಇತ್ಯಾದಿಗಳು ಅವನ ಅತ್ಯಾಪ್ತ ವಲಯದಲ್ಲಿ ಆತನ ಸಾವು ಸೃಷ್ಟಿಸಿದ ಖಾಲಿತನವನ್ನು ತುಂಬಬಲ್ಲದೇ? ಆತನ ಅನಿರೀಕ್ಷಿತ ಸಾವಿನ ಹಿನ್ನೆಲೆಯಲ್ಲಿ 'ದಿಲ್ ಬೇಚಾರ' ಸಿನಿಮಾಕ್ಕೆ ಸಿಗುತ್ತಿರುವ ಈ ಖ್ಯಾತಿ ಅದರ ನಿರ್ಮಾಪಕ, ನಿರ್ದೇಶಕ, ವಿತರಕರ ಜೇಬು ತುಂಬಿಸಬಹುದೇ ಹೊರತು ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಆ ತಂದೆಯ ಜೀವನಪರ್ಯಂತದ ನೋವನ್ನು, ತೆರೆಯ ಮೇಲೆ ಮಗನ ಮೊಗ ಕಂಡಾಗಲೆಲ್ಲಾ ಭಾರವಾಗುವ ಮನವನ್ನು ಸಾಂತ್ವನಿಸಬಲ್ಲದೇ? ಇದನ್ನು ಯೋಚಿಸುವಾಗ ಮೀನಾ ಕುಮಾರಿಯವರ ಸಾವಿನ ನಂತರದ 'ಪಾಕೀಜಾ಼' ಚಿತ್ರದ ಅಭೂತಪೂರ್ವ ಯಶಸ್ಸು ನೆನಪಾಗುತ್ತದೆ. 

ಬದುಕಿದ್ದಾಗ ತಿಳಿಯದ ವ್ಯಕ್ತಿಯ ಬೆಲೆ ಆತ ಕಣ್ಮರೆಯಾದ ನಂತರ ಅರಿವಿಗೆ ಬರುವುದು ವಿಪರ್ಯಾಸವಲ್ಲದೆ ಮತ್ತೇನು? ಒಬ್ಬ ವ್ಯಕ್ತಿ ಜೀವಂತವಿದ್ದಾಗಲೇ ಅವನ ಅಸ್ತಿತ್ವವನ್ನು ಮರೆತವರಂತೆ ವರ್ತಿಸಿ ಆತ ಅಳಿದ ಮೇಲೆ ಇಡೀ ಜಗಕ್ಕೆ ತಿಳಿಯುವಂತೆ ಶೋಕಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸುವ ನಮ್ಮ ರೀತಿ ಕನಸುಗಳ ಸಮಾಧಿಯ ಮೇಲೆ ಚಂದದ ಸ್ಮಾರಕ ಕಟ್ಟಿದಂತೆಯೇ ಅಲ್ಲವೇ?

2 ಕಾಮೆಂಟ್‌ಗಳು:

  1. ನಿಜ ಮನುಷ್ಯನ ಬೆಲೆ ಗೊತ್ತಾಗೋದು ಅವರು ಸತ್ತ ನಂತರವೇ... ಇದು ಒಂದು ದೊಡ್ಡಾ ವಿಪರ್ಯಾಸ... ಇದ್ದಾಗ ಪ್ರೋತ್ಸಾಹ ಕೊಡದೆ ಹಿಂದೆ ಹಾಕಿದ ಜನ ಸತ್ತಾಗ ಶೋಕಚರಣೆ ಮಾಡಿ ಅವರ ಫಿಲ್ಮ್ ನ ಬಗ್ಗೆ ಹಾಡಿ ಹೊಗಳೋದು ಎಷ್ಟು ಸರಿ... ಈ ಫಿಲ್ಮ್ನ ಟ್ರೇಲರ್ ಇಷ್ಟೊಂದು ಹೆಸರು ಮಾಡಿದಕ್ಕೆ ಸಾರ್ತಾಕಥೆ ಯಾರಿಗೆ ಇದೆ. ಎಲ್ಲಾ ಪೊಳ್ಳು .. ಸತ್ತಿದಾರಲ್ಲವ ಏನ್ ಹೇಳಿದರು ನಡೆಯುತ್ತೆ. ಆದರೆ ಆ ಫಿಲ್ಮ್ ಗೆ ಅವರ ಶ್ರಮಾ ಯಾರಿಗು ಸುಶಾಂತ್ ಇದ್ದಾಡ ಕಾಣಲಿಲ್ಲಾ. ಸ್ವತಃ ನಿರ್ದೇಶಕ ರೆ ಹೇಳಿದ್ದಾರಂತೆ ಈ ಚಿತ್ರದ ಕಥೆ ಹೇಳೋಕೆ ಹೋದಾಗ ನೋಡದ ಕೇಳದೆ ಸೈನ್ ಹಾಕಿದ್ದರು.. ಅಂತ...ಅಂತಹ ಧೀಮಂತ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದರು ಅಂದರೆ ಎಷ್ಟು ಬೇಜಾರು
    ಪಬ್ಲಿಸಿಟಿ ಗಿಟ್ಟಿಸಿಕೊಳ್ಳೋಕೆ ಜನ ಏನೇನೆಲ್ಲಾ ಮಾಡ್ತಾರೆ

    ಪ್ರತ್ಯುತ್ತರಅಳಿಸಿ
  2. ನಿಜ.... ಬದುಕಿದ್ದಾಗ ಗಣನೆಗೆ ತೆಗೆದುಕೊಂಡಿದ್ದರೆ ಆತನಿಗೆ ಸಾವು ಅನಿವಾರ್ಯ ಆಯ್ಕೆಯಾಗುತ್ತಿರಲಿಲ್ಲ

    ಪ್ರತ್ಯುತ್ತರಅಳಿಸಿ