ಭಾನುವಾರ, ಜೂನ್ 28, 2020

ಅನೂಹ್ಯ 31

ಅಭಿರಾಮ್ ಹೊರಟುಹೋದ ನಂತರವೂ ಅವನ ಮಾತುಗಳೇ ಸಮನ್ವಿತಾಳ ಮನಸಿನಲ್ಲಿ ಮಾರ್ದನಿಸುತ್ತಿದ್ದವು. ಅವನೇನೋ ತನ್ನ ಮನದ ಭಾವನೆಗಳನ್ನೆಲ್ಲಾ ಅವಳ ಮುಂದೆ ಚೆಲ್ಲಿದ್ದ. ಆದರೆ ಅವಳ ಮನವೆಂಬ ತಿಳಿನೀರ ಕೊಳದಲ್ಲಿ ಅವನ ಮಾತುಗಳು ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು.

ಈ ಮದುವೆ ಮಾತುಕತೆ ಹಿಂದಿರುವ ಸತ್ಯ ಅರಿಯದೇ ಅವನು ಭಾವಿ ಹೆಂಡತಿ ಎಂದೆಲ್ಲಾ ಮಾತನಾಡುತ್ತಿದ್ದಾನೆ ಎಂದೇ ಭಾವಿಸಿದ್ದಳು. ಆದರೆ ಅವನು ಅವಳ ಎಣಿಕೆಯನ್ನು ಸುಳ್ಳಾಗಿಸಿದ್ದ. ಪ್ರತಿಯೊಂದು ವಿಷಯದ ಅರಿವಿದೆ ಅವನಿಗೆ. ಹಾಗಿದ್ದೂ ಮತ್ತೇಕೆ? ತಮಾಷೆ ಮಾಡಿರಬಹುದೇ? ಆದರೆ ಕೊನೆಯಲ್ಲಿ ಅವನಾಡಿದ ಮಾತುಗಳು? ಅವನ ಮಾತಿನ ರೀತಿ,‌ ಅವನ ಕಣ್ಣಲ್ಲಿ ಸ್ಫುರಿಸುತ್ತಿದ್ದ ಭಾವಗಳು.....? ಎಲ್ಲಾ ವಿಷಯ‌ ತಿಳಿದೂ ನನ್ನಪ್ಪನ ಜಾಲದಲ್ಲಿ ಸಿಲುಕಲು ಅವನಿಗೇನು ಹುಚ್ಚೇ? ಮತ್ತೇಕೆ?

ಯೋಚನೆಗೆ ಬಿದ್ದ ಹುಡುಗಿ ಹಣೆಯೊತ್ತಿಕೊಂಡಳು ಏನೂ ಅರ್ಥವಾಗದೆ.

ಅವಳ ಅನ್ಯಮನಸ್ಕತೆಯನ್ನೇ ಗಮನಿಸುತ್ತಿದ್ದ ನವ್ಯಾ, "ನೋಡಿ ಕಿಶೋರ್, ಮೇಡಂ ಎಷ್ಟೊಂದು ಗಾಢವಾದ ಯೋಚನೆಯಲ್ಲಿದ್ದಾರೆ. ಏನಾದ್ರೂ ಆಗ್ಲೀ ಸಮಾ... ಅಭಿರಾಮ್ ಅಷ್ಟು ಚೆನ್ನಾಗಿ ನಿನ್ನ ಯಾರೂ ಅರ್ಥ ಮಾಡ್ಕೊಂಡಿಲ್ಲ ಬಿಡು. 'ಡಾಕ್ಟ್ರ ಮೇಲೆ ಸ್ವಲ್ಪ ಜಾಸ್ತಿನೇ ಗಮನ ಇರ್ಲಿ. ಏನೇನೋ ಯೋಚನೆ ಮಾಡ್ಕೊಂಡು ಕೂತಿರುತ್ತಾರೆ' ಅಂತ ಎಷ್ಟು ಕರೆಕ್ಟಾಗಿ ಹೇಳಿದ್ರು ನೋಡು" ಅವಳ ಪಕ್ಕದಲ್ಲಿ ಕುಳಿತು ಭುಜ ಬಳಸಿ ಹೆಗಲಿಗೆ ತನ್ನ ಗದ್ದವನ್ನೂರಿ ಹೇಳಿದಳು. 

ಕಿಶೋರನೂ ಅವಳನ್ನೇ ಅನುಮೋದಿಸುತ್ತಾ, "ಹೌದು ಕಣೇ ಸಮನ್ವಿತಾ. ನವ್ಯಾ ಹೇಳಿದ್ದು ನೂರಕ್ಕೆ ನೂರು ಸತ್ಯ. ಅದ್ಸರಿ ಈಗೇನು ಇಷ್ಟು ಗಹನವಾದ ಯೋಚನೆ ರಾಜಕುಮಾರಿಯವರಿಗೆ?" 

ನವ್ಯಾ ಅವಳ ಪಕ್ಕದಿಂದ ಎದ್ದು ಕಿಶೋರನ ಬಳಿ ಕುಳಿತು ಸಮನ್ವಿತಾಳ ಮುಖವನ್ನೇ ಪರೀಕ್ಷಿಸುತ್ತಾ, "ನನ್ನ ಪ್ರಕಾರ ರಾಜಕುಮಾರಿಯ ಈ ಯೋಚನೆಯ ಮೂಲ ಕೀಲಿಕೈ ರಾಜಕುಮಾರನ ಹತ್ರ ಇದ್ಯಾಂತ? ಅಭಿರಾಮ್ ಬಂದು ಹೋದ್ಮೇಲೆ ನಿಮ್ಮ ಮನಸ್ಸು ನಿಮ್ಮ ಮಾತನ್ನು ಕೇಳುತ್ತಿಲ್ಲವೇ ದೇವಿ?" ನವ್ಯಾ ಕೀಟಲೆಯಾಗಿ ಪ್ರಶ್ನಿಸಿದಳು.

ಎದುರು ಕುಳಿತಿದ್ದ ಗಂಡ ಹೆಂಡತಿಯತ್ತ ಒಂದು ತೀಕ್ಷ್ಣ ನೋಟದ ಬಾಣ ಬಿರುಸಾಗಿ ಬಂದಾಗ, "ಅಮ್ಮಾ ತಾಯಿ, ಹೀಗೆ ಕಣ್ಣಲ್ಲೇ ಸುಡೋ ತರ ನೋಡ್ಬೇಡ. ಭಯ ಆಗುತ್ತೆ" ಎಂದ ಕಿಶೋರ್.

"ಅಲ್ವೇ, ಆಗ್ಲಿಂದ ಹೀಗೆ ಯೋಚಿಸ್ತಾ ಕೂತಿದ್ದೀಯಲ್ಲ. ಅದೇನು ಅಂತ ಹೇಳ್ಬಾರ್ದಾ?" ಕೇಳಿದಳು ನವ್ಯಾ..

"ನನ್ಗೇ ಏನೂ ಅರ್ಥ ಆಗ್ತಿಲ್ಲ ಇನ್ನು ನಿಮಗೇನು ಹೇಳ್ಲಿ? ಬರೀ ಗೊಂದಲಗಳಷ್ಟೇ….." ನಿಟ್ಟುಸಿರಿಟ್ಟಳು. 

ಕಿಶೋರ್ ನವ್ಯಾಳಿಗೆ ಕಣ್ಣಲ್ಲೇ ಏನೋ ಸನ್ನೆ ಮಾಡಿದವನು, "ಒಂದು ಇಂಪಾರ್ಟೆಂಟ್ ಕಾಲ್ ಮಾಡ್ಲಿಕ್ಕಿದೆ. ಮಾಡಿ ಬರ್ತೀನಿ" ಹೊರಹೋದ. ಅಭಿರಾಮ್ ಸಮನ್ವಿತಾಳಿಗೆ ಸರಿಯಾದ ಜೋಡಿ ಎಂದು ನವ್ಯಾ ಕಿಶೋರ್ ಕೆಲ ದಿನಗಳ ಹಿಂದೆಯೇ ಲೆಕ್ಕ ಹಾಕಿದ್ದರು. ಆದರೆ ಅವಳು ಇತರೆ ಹುಡುಗಿಯರಂತಲ್ಲ. ಅವಳ ಬಾಹ್ಯಲೋಕ ಹಾಗೂ ಭಾವಲೋಕದ ನಡುವೆ ಬಾನು ಭೂಮಿಗಳ ನಡುವಿನ ಅಂತರವಿದೆ. ಅದನ್ನು ಅಭಿರಾಮ್ ಸ್ಪಷ್ಟವಾಗಿ ಅರಿಯಬೇಕೆಂದರೆ ನಾವೇ ಅವನಿಗೆ ಎಲ್ಲವನ್ನೂ ತಿಳಿಸಬೇಕೆಂದು ನಿರ್ಧರಿಸಿದ್ದರು. ಆ ಬಗ್ಗೆ ಅಭಿರಾಮನಲ್ಲಿ ಮಾತನಾಡುವ ಮೊದಲು ಸಮನ್ವಿತಾಳ ಸ್ಪಷ್ಟ ಅಭಿಪ್ರಾಯದ ಅಗತ್ಯವಿತ್ತು. ಆ ಕೆಲಸಕ್ಕೆ ಇದೇ ಸರಿಯಾದ ಸಮಯವೆನಿಸಿತ್ತು. ಹಾಗಾಗಿಯೇ ನವ್ಯಾಳಿಗೆ ಕೆಲಸ ಒಪ್ಪಿಸಿ ತಾನು ಹೊರ ನಡೆದಿದ್ದ.

"ಸಮಾ, ನಾನೊಂದು ವಿಷ್ಯ ಕೇಳ್ತೀನಿ. ನಿಜ ಹೇಳ್ತೀಯಾ?" ಪೀಠಿಕೆ ಹಾಕಿದಳು. ಏನು ವಿಷಯ ಎಂಬಂತೆ ನೋಡಿದಳು ಸಮನ್ವಿತಾ.

"ನಿನ್ನ ಮತ್ತೆ ಅಭಿರಾಮ್ ಮದುವೆ ಬಗ್ಗೆ ನಿನ್ನ ಅಭಿಪ್ರಾಯ ಏನು?"

"ಬಹಳ ನೇರವಾಗಿದೆ ನವ್ಯಾ ನಿನ್ನ ಪ್ರಶ್ನೆ. ಆದರೆ ಉತ್ತರ? ಅಭಿರಾಮ್ ಬಗ್ಗೆ ನನ್ನ ಅಭಿಪ್ರಾಯ… ಈ ಸಂಜೆಯ ತನಕ ನನ್ನಲ್ಲಿ ನಿನ್ನ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿತ್ತು. ಆದರೆ ಈಗ ನನಗೇ ಈ ಬಗ್ಗೆ ಸ್ಪಷ್ಟನೆ ಇಲ್ಲದಂತಾಗಿದೆ. ನನ್ನ ಯೋಚನೆಗಳು, ಅಭಿಪ್ರಾಯಗಳು ಪಥ ಬದಲಿಸಿ ದಿಕ್ಕಾಪಾಲಾಗಿವೆ."

"ನನಗೆ ನಿನ್ನ ಮಾತುಗಳು ‌ಅರ್ಥವಾಗುತ್ತಿಲ್ಲ ಸಮಾ‌. ಬಿಡಿಸಿ ಹೇಳ್ತಿಯಾ?"

"ಈ ಮದುವೆ ಸತ್ಯಂ ರಾವ್ ಅವರ ಹಳ್ಳಹತ್ತಿದ ಬಿಸ್ನೆಸ್ ಮೇಲೆತ್ತಲು ಅವರು ಕಂಡುಕೊಂಡ ಉಪಾಯ. ಹಾಗಾಗಿ ಇರೋ ವಿಷಯ ಸಚ್ಚಿದಾನಂದ್ ಅಂಕಲ್ ಮನೆಯವರಿಗೆ ಹೇಳಿ ಈ ಮದುವೆಯ ವಿಷಯಕ್ಕೆ ಅಂತ್ಯ ಹಾಡಬೇಕು ಅಂತ ನಾನು ನಿರ್ಧಾರ ಮಾಡಿದ್ದೆ. ಈಗ ಸ್ವಲ್ಪ ಹೊತ್ತಿನ ಹಿಂದಿನ ತನಕವೂ ಅದೇ ನಿರ್ಧಾರವೇ ಖಾಯಂ ಆಗಿತ್ತು..... ಆದರೆ...."

"ಆದರೆ ಏನು?"

"ಆದರೀಗ ನಾನೇನೂ ಹೇಳಬೇಕಾದ ಅಗತ್ಯವಿಲ್ಲ. ಅಭಿರಾಮ್ ಗೆ ಎಲ್ಲಾ ವಿಷಯ ಗೊತ್ತಿದೆ. ಐ ಮೀನ್ ಗೊತ್ತಾಗಿದೆ. ಸೋ….. ಹೇಳುವಂತಹದೇನೂ ಬಾಕಿ ಉಳಿದಿಲ್ಲ."

"ಒಳ್ಳೆಯದೇ ಆಯ್ತು ಬಿಡು. ಸತ್ಯ ಎಲ್ಲಾ ತಿಳೀತಲ್ಲ."

"ಆದ್ರೆ…...."

"ಯಾಕೆ ನಿಲ್ಲಿಸಿದೆ? ಏನಾಯ್ತು? ಅವರೇನಾದ್ರೂ ಬೈದ್ರಾ ನಿಂಗೆ?" ನವ್ಯಾಳ ಮಾತಿಗೆ ಇಲ್ಲವೆಂದು ತಲೆಯಾಡಿಸಿದಳು.

"ಮತ್ತೇನಕ್ಕೆ ಹೀಗೆ‌ ಆಕಾಶ ತಲೆ ಮೇಲೆ ಬಿದ್ದಂತೆ ಯೋಚಿಸ್ತಿದ್ದೀಯಾ?" ಅವಳ ಪ್ರಶ್ನೆಗೆ ಉತ್ತರವಿರಲಿಲ್ಲ ಇವಳ ಬಳಿ.

ನವ್ಯಾ ಕ್ಷಣ ಸುಮ್ಮನಿದ್ದವಳು ಒಂದೇ ಬಾರಿಗೆ "ಸಮನ್ವಿತಾ, ನಿನ್ಗೆ ಅಭಿರಾಮ್ ಅಂದ್ರೆ ಇಷ್ಟನಾ?" ಎಂದು ಕೇಳಿದ್ದಳು ಈ ಪ್ರಶ್ನೆಯಿಂದ ಗೆಳತಿ ಅಚ್ಚರಿಗೊಳಗಾಗುವಳೆಂಬ ನಿರೀಕ್ಷೆಯಲ್ಲಿ. ಆದರೆ ಅವಳೇನೂ ಗಾಬರಿಯಾಗಲಿಲ್ಲ. ಈಗ ನವ್ಯಾ ಮನದಲ್ಲೊಂದು ಅನುಮಾನ ಹುಟ್ಟಿಕೊಂಡಿತು. 'ಇವಳಿಗೂ ಅವನೆಂದರೆ ಇಷ್ಟವೇನೋ……' ಎಂಬ ಯೋಚನೆಯೇ ಖುಷಿ ತಂದಿತವಳಿಗೆ. ಇವಳು ಬಾಯ್ತೆರೆಯುವ ಲಕ್ಷಣ ಕಾಣದಾಗ ಮತ್ತೆ ತಾನೇ ಮಾತು ಮುಂದುವರೆಸಿದಳು.

"ಹೇಳೇ ಸಮಾ, ಡು ಯು ಲೈಕ್ ಹಿಮ್?"

"ಇಷ್ಟವೇ ನವ್ಯಾ. ಒಮ್ಮೆ ನೋಡಿ ಮಾತಾಡಿದ ಯಾರಾದರೂ ಇಷ್ಟ ಪಡುವಂತಹ ವ್ಯಕ್ತಿತ್ವವಿದೆ ಅವನಿಗೆ. ಅವನ ಸುತ್ತಮುತ್ತಲಿನ ಜನರೂ ಅಷ್ಟೇ ಸಂಸ್ಕಾರವಂತರು.  ಇಷ್ಟವಿಲ್ಲ ಎನ್ನಲು ಒಂದಾದರೂ ಕಾರಣ ಬೇಕಲ್ಲವೇ?"

"ಅಯ್ಯೋ ಅದು ಹಾಗಲ್ವೇ. ಹೋಗ್ಲಿ ಡೈರೆಕ್ಟಾಗಿ ಕೇಳ್ತೀನಿ, ಡು ಯು ಲವ್ ಹಿಮ್?"

"ನಿಂಗೇನು ಹುಚ್ಚಾ? ನಾನವನನ್ನು ನೋಡಿದ್ದೇ ಮೂರು ಸಲ. ಮಾತಾಡಿರೋದು ಎರಡು ಸಲ. ಅದೂ ಉಭಯಕುಶಲೋಪರಿಯ ಮಾತುಕತೆ. ಅಂತದ್ರಲ್ಲಿ ಕೇಳೋ ಪ್ರಶ್ನೆ ನೋಡು….... 'ಡು ಯು ಲವ್ ಹಿಮ್' ಅಂತೆ. ನಿನ್ಗೇನು ಲೂಸಾ." ರೇಗಿದಳು.

"ಸಮಾ, ನಾನು ನೀವಿಬ್ರೂ ಎಷ್ಟು ಸಲ ಮೀಟ್ ಆಗಿ ಮಾತಾಡಿದ್ದೀರ ಅಂತ ಕೇಳ್ಲಿಲ್ಲ. ನಾನು ಕೇಳಿದ್ದು ಬಹಳ ಸರಳವಾದ ಪ್ರಶ್ನೆ. 'ನೀನು ಅವನನ್ನು ಪ್ರೀತಿಸ್ತಿದ್ದೀಯಾ?' ಅಂತ. ಹೌದಾದ್ರೆ ಹೌದು ಅನ್ನು, ಇಲ್ಲಾಂದ್ರೆ ಇಲ್ಲ. ಅಷ್ಟೇ. ಅದ್ಯಾಕೆ ಸುತ್ತಿ ಬಳಸಿ ಮಾತಾಡ್ತೀ?"

"ನವ್ಯಾ ಮೊದಲೇ ನನ್ನ ತಲೆ ಕೆಟ್ಟಿದೆ. ನೀನು ಏನೇನೋ ಕೇಳಿ ನನ್ನ ಕನ್ಫ್ಯೂಸ್ ಮಾಡಬೇಡ"

"ಓಕೆ ಅದು ಬಿಡು. ಈಗ ಅಭಿರಾಮ್ ನಿನ್ಹತ್ರ ಏನು ಮಾತಾಡಿದ್ರು ಅಂತ ಹೇಳು. ನಿನ್ನೆಲ್ಲಾ ಕನ್ಫ್ಯೂಷನ್ ಗೆ ಅದೇ ಮೂಲ ಅಂತ ನಂಗೊತ್ತು. ಅದೇನು ಅಂತಹ‌ ವಿಚಾರ?" 

"ನವ್ಯಾ, ನಾನು ಇರೋ ಎಲ್ಲಾ ವಿಷ್ಯ ಅವನತ್ರ ಹೇಳ್ಬೇಕು ಅಂದ್ಕೊಂಡೆ. ಆದ್ರೇ ನಾನು ಹೇಳ್ಬೇಕು ಅಂದ್ಕೊಂಡಿದ್ದೆಲ್ಲಾ ಅವನೇ ಹೇಳಿದ. ಅವನಿಗೆಲ್ಲಾ ಗೊತ್ತು ಅಂತ ಸಮಾಧಾನ ಆಯ್ತು ನಂಗೆ. ಆದ್ರೆ ಎಲ್ಲಾ ಗೊತ್ತಿದ್ದೂ ಅವನು ಮಾತಾಡಿದ ರೀತಿ, ಕೊನೆಯಲ್ಲಿ ಅವನೇನು ಹೇಳಿದ ಅಂತ ಈಗ್ಲೂ ಅರ್ಥ ಆಗ್ತಿಲ್ಲ ನಂಗೆ. ಅವನು ಮಾತಾಡಿದ ವರಸೆ ನೋಡಿದ್ರೆ....." ಮುಂದುವರೆಸಲಾರದೇ ನಿಲ್ಲಿಸಿದಳು.

"ಲೇ ಬುದ್ಧು, ಅವನಿಗೆ ನೀನಂದ್ರೆ ತುಂಬಾ ಇಷ್ಟ. ಅಷ್ಟೂ ಅರ್ಥ ಆಗ್ಲಿಲ್ವಾ ನಿಂಗೆ. ಅಲ್ವೇ ಅವನು ನಿನ್ಹತ್ರ ಮಾತಾಡೋ ರೀತಿ, ಅವನ ಕಣ್ಣಲ್ಲಿನ ಕಾಳಜಿ ನೋಡಿದ್ರೇ ಯಾರಿಗಾದ್ರೂ ಗೊತ್ತಾಗುತ್ತೆ. ಮೋಸ್ಟ್ ಲೀ ಅವ್ನು ನಿಂಗೆ ನೇರವಾಗೇ ಹೇಳ್ತಿದ್ದ ಅನ್ಸುತ್ತೆ. ಅಷ್ಟರಲ್ಲಿ ಶಿವಪೂಜೆಲೀ ಕರಡಿ ತರ ನಾವಿಬ್ರೂ ಬಂದ್ವಿ ನೋಡು" 

"ಅವನು ಮಾತಾಡಿದ ರೀತಿ ನೋಡಿ ನನಗೂ ಹಾಗೆ ಅನ್ನಿಸ್ತು" ಎಂದಳು ಸಮನ್ವಿತಾ.

"ಈಗ ನಿನ್ನ ನಿರ್ಧಾರ ಏನು?"

"ಏನನ್ನೂ ನಿರ್ಧರಿಸೋಕೆ ಆಗ್ತಿಲ್ಲ ನನಗೆ. ಯಾವುದು ಸರಿ, ಯಾವುದು ತಪ್ಪು ಒಂದೂ ಗೊತ್ತಾಗ್ತಿಲ್ಲ."

"ಸಮಾ.... ಬದುಕಿನಲ್ಲಿ ನೀನು ಎದುರಿಸಿದ ಸನ್ನಿವೇಶಗಳು ನಿನ್ನ ನಿರಾಶಾವಾದಿಯಾಗಿಸಿವೆ. ನೀನು ಬದುಕಿನಿಂದ ನಿರೀಕ್ಷೆ ಮಾಡಿದಾಗಲೆಲ್ಲ ನಿನಗೆ ಎದುರಾದದ್ದು ಭ್ರಮನಿರಸನ. ಅದೇ ನಿನ್ನ ಮನದಲ್ಲಿ ಆಳವಾಗಿ ಬೇರೂರಿದೆ. ನನ್ನ ಬದುಕಲ್ಲಿ ಸಂತೋಷದ ಕ್ಷಣಗಳು ನಿಷಿದ್ಧ ಅಂತ ನಿನಗೆ ನೀನೇ ಬೇಲಿ ಹಾಕ್ಕೊಂಡಿದ್ದೀಯಾ. ಸ್ವರವೆತ್ತಿ ಅಳೋದಕ್ಕೂ ಹಿಂಜರಿಕೆ ನಿನಗೆ. ಆ ಗಡಿ ದಾಟಿ ಹೊರಗೆ ಬಾ. ಚೆಂದದ ಬದುಕೊಂದು ನಿನಗಾಗಿ ಕಾಯುತ್ತಿದೆ. ಎಲ್ಲರೂ ನಿನ್ನಪ್ಪನಂತೆಯೇ ಇರೋಲ್ಲ ಕಣೇ. ಅಭಿರಾಮ್ ಮತ್ತವನ ಮನೆಯವರು ತುಂಬಾ ಒಳ್ಳೆಯವರು. ಅದು ನಿನಗೂ ಗೊತ್ತು. ಮತ್ಯಾಕೆ ಹಿಂಜರಿಕೆ? ನೀನು ಅಭಿರಾಮ್ ವಿಷ್ಯ ಹೇಳಿದ ದಿನವೇ ನಾನು, ಕಿಶೋರ್ ಯೋಚಿಸಿದ್ವಿ. ನಿನಗೆ ತಕ್ಕ ಜೋಡಿ ಅವ್ನು ಅಂತ. ನಿಮ್ಮಿಬ್ಬರ ಯೋಚನೆ, ನಡವಳಿಕೆಗಳಲ್ಲಿ ಅಪರೂಪದ ಹೊಂದಾಣಿಕೆ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವನಿಗೆ ನೀನಂದ್ರೆ ಬರೀ ಇಷ್ಟವಲ್ಲ, ನಿನ್ನ ಬಗ್ಗೆ ತುಂಬಾ ಗೌರವವಿದೆ. ಸರಿಯಾಗಿ ವಿಚಾರ ಮಾಡು ಸಮಾ. ನಿನ್ನೆಲ್ಲಾ ಹಿಂಜರಿಕೆ ತೊರೆದು ನೀನು ಸೃಷ್ಟಿಸಿಕೊಂಡಿರೋ ವರ್ತುಲದಿಂದ ಒಮ್ಮೆ ಹೊರಗೆ ಬಾ. ಅಭಿರಾಮ್ ಯಾವತ್ತೂ ನಿನ್ನ ಕೈ ಬಿಡೋಲ್ಲ ಅನ್ನೋ ನಂಬಿಕೆ ನನಗಿದೆ. ನಾನು ಇನ್ನೇನೂ ಹೇಳೊಲ್ಲ. ಆದ್ರೆ ನೀನು ಈ ವಿಚಾರವಾಗಿ ಯೋಚಿಸು. ನಾಳೆ ಅವರೆಲ್ಲರೂ ಬರ್ತಾರೆ. ಅಷ್ಟರಲ್ಲಿ ಸರಿಯಾದ ನಿರ್ಧಾರಕ್ಕೆ ಬಾ. ಈಗ ಸುಮ್ನೇ ಮಲ್ಕೋ" ಅವಳನ್ನು ಒತ್ತಾಯದಿಂದ ಮಲಗಿಸಿದಳು. ಗೊಂದಲದ ಯೋಚನೆಗಳ ದಾಳಿಗೆ ಸಿಲುಕಿ ಸುಸ್ತಾಗಿದ್ದವಳನ್ನು ನಿದ್ರಾದೇವಿ ಬೇಗನೆ ಆವರಿಸಿಕೊಂಡಿದ್ದಳು.

ಕಿಶೋರ್ ವಾರ್ಡಿಗೆ ಬಂದಾಗ ಸಮನ್ವಿತಾ ಒಳ್ಳೆಯ ನಿದ್ದೆಯಲ್ಲಿದ್ದಳು. ನಡೆದದ್ದೆಲ್ಲ ವಿವರಿಸಿದಳು ನವ್ಯಾ. ಇಬ್ಬರೂ ನಾಳೆ ಎಲ್ಲವನ್ನು ಅಭಿರಾಮನಿಗೆ ಹೇಳಬೇಕೆಂದು ನಿರ್ಧರಿಸಿದರು.

                **********************

ಇತ್ತ ಅಭಿರಾಮ್ ಮನೆಯಲ್ಲಿ ಯಾರೂ ಮಲಗಿರಲಿಲ್ಲ. ಮೂವರೂ ಅವನ ದಾರಿಯನ್ನೇ ಕಾದಿದ್ದರು. ತಮ್ಮ ಮನೆಗೆ ಬರುವಾಗ ಆರಾಮಾಗಿದ್ದ ಸಮನ್ವಿತಾ ಮದುವೆ ವಿಷಯ ಕೇಳಿ ಏಕೆ ಹಾಗೆ ವರ್ತಿಸಿದಳು ಎನ್ನುವುದರಿಂದ ಹಿಡಿದು ಇದ್ದಕ್ಕಿದ್ದಂತೆ ಆಸ್ಪತ್ರೆ ಸೇರಿದ್ದು ಹೇಗೆ ಎನ್ನುವವರೆಗೆ ಅವರಲ್ಲಿ ಸಾವಿರ ಪ್ರಶ್ನೆಗಳಿದ್ದವು. ಅಭಿ ನಿನ್ನೆಯಿಂದ ಏನೇ ಕೇಳಿದರೂ ಸರಿಯಾಗಿ ಉತ್ತರಿಸಿರಲಿಲ್ಲ. ಇವತ್ತು ಉತ್ತರ ಪಡೆದೇ ತೀರಬೇಕೆಂಬ ಪಟ್ಟು ಬಲವಾಗಿತ್ತು. 

ಅವನು ಮನೆಗೆ ಬಂದಾಗ ಮಧ್ಯರಾತ್ರಿಯ ಸಮೀಪ. ಪ್ರಶ್ನೆಗಳ ಸುರಿಮಳೆ ಎದುರಾಗುತ್ತದೆ ಎಂದು ತಿಳಿದಿತ್ತು ಅವನಿಗೆ. ಹಾಗಾಗಿ ಮೂವರೂ ಎದ್ದಿದ್ದು ಅಚ್ಚರಿ ಎನಿಸಲಿಲ್ಲ. 

"ಆಸ್ಪತ್ರೆಯಿಂದ ಬಂದ್ಯಾ? ಸಮನ್ವಿತಾ ಹೇಗಿದ್ದಾರೆ? ಅಣ್ಣಾ ಏನೋ ಇದೆಲ್ಲಾ? ಏನಾಗ್ತಿದೆ ಇಲ್ಲಿ?" ಅವನು ಮನೆಯೊಳಗೆ ಅಡಿ ಇಡುತ್ತಿದ್ದಂತೆಯೇ ಕೇಳಿದಳು ಆಕೃತಿ. ಅವನಿಗೆ ಸುಸ್ತಾಗಿತ್ತು. ಇಷ್ಟರವರೆಗೆ ಸೊಲ್ಲೆತ್ತದ ಹಸಿವು ಈಗ ತನ್ನಿರವನ್ನು ನೆನಪಿಸುತ್ತಿತ್ತು.

"ಆಕೃತಿ, ಈಗಿನ್ನೂ ಬಂದಿದ್ದಾನೆ. ಅವ್ನು ಫ್ರೆಶ್ ಆಗಿ ಬರ್ಲಿ ಇರು" ಮೃದುಲಾ ಮಗನ ಸಹಾಯಕ್ಕೆ ಬಂದರು.

"ಥ್ಯಾಂಕ್ಸ್ ಮಾ" ಸೀದಾ ರೂಮಿನತ್ತ ನಡೆದ. ಮೃದುಲಾ ಊಟಕ್ಕೆ ರೆಡಿ ಮಾಡುವ ಹೊತ್ತಿಗೆ ಹಾಜರಾಗಿದ್ದ.

"ಅಮ್ಮಾ, ಬೇಗ ಊಟ ಹಾಕು. ತುಂಬಾ ಹಸಿವಾಗ್ತಿದೆ" ಗೋಗರೆದ. ಬಡಿಸಿದ ಊಟ ಹಸಿವಿಗೆ ಇನ್ನಷ್ಟು ರುಚಿಕಟ್ಟಾಗಿತ್ತು. "ತುಂಬಾ ರುಚಿಯಾಗಿದೆ ಅಮ್ಮಾ" ಎಂಬ ಮಗನ ಮಾತಿಗೆ ನಕ್ಕರು ಮೃದುಲಾ.

"ಊಟ ಯಾವತ್ತಿನ ಹಾಗೇ ಇದೇ. ಆದ್ರೆ ಇವತ್ತು ಹಸಿವು ಜಾಸ್ತಿ ಆಗಿರೋದ್ರಿಂದ ರುಚಿ ಹೆಚ್ಚಾದಂತೆ ಅನಿಸಿದೆ ಅಷ್ಟೇ. ನಿನ್ನ ಮುಖ ನೋಡಿದ್ರೆ ಬೆಳಿಗ್ಗೆ ತಿಂಡಿ ತಿಂದಿದ್ದು ಬಿಟ್ಟು ಬೇರೇನೂ ತಿಂದಿಲ್ಲ ಅನ್ಸುತ್ತೆ." 

"ಅದ್ಕೇ ಹೇಳೋದು ಅಮ್ಮನಿಗೆ ಮಾತ್ರ ಮಕ್ಕಳ ಮನಸ್ಸಿನಲ್ಲಿ ಏನಿದೇ, ಅವರಿಗೆ ಏನು ಬೇಕು ಅಂತ  ಅರಿವಾಗೋದು ಅಂತ" ನಕ್ಕವನು ತಕ್ಷಣ ಗಂಭೀರನಾದ. 

ಇಲ್ಲಾ...‌‌….. ಎಲ್ಲರಿಗೂ ಅರಿವಾಗುವುದಿಲ್ಲ. ರಾವ್ ದಂಪತಿಗಳಿಗೆ ಮಗಳ ಮನಸ್ಸಿನಲ್ಲೇನಿದೆ, ಅವಳ ಆಸೆ, ನಿರಾಶೆಗಳೇನು ಎಂಬುದು ಅರಿವಾಗಲೇ ಇಲ್ಲ. ಅಥವಾ ಅರಿಯುವ ಆಸ್ತೆಯೇ ಅವರಿಗಿರಲಿಲ್ಲವೇನೋ. 'ಪುತ್ರ ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನ ಭವತೀ' ಎನ್ನುವ ಮಾತೊಂದಿದೆ. ಜಗದಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲವಂತೆ. ಆದರೆ ಸಮನ್ವಿತಾಳ ತಾಯಿ ಇದಕ್ಕೆ ಹೊರತಾದದ್ದು ಹೇಗೆ? ಮಾಲಿನಿಯವರಿಗೂ ಮಗಳ ಬಗ್ಗೆ ಯಾವುದೇ ಮಮಕಾರವಿದ್ದಂತಿಲ್ಲ. ಒಂದು ವೇಳೆ ಮಗಳ ಬಗ್ಗೆ ಅಕ್ಕರೆ ಇದ್ದಿದ್ದರೆ ಈ ಮದುವೆ ಪ್ರಸ್ತಾಪವನ್ನು ಹೇಗಾದರೂ ತಡೆಯುತ್ತಿದ್ದರು. ಆದರೆ ಆಕೆ ರಾವ್ ಅವರಿಗೆ ಈ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆಂದು ಚೈತಾಲಿ ಹೇಳಿದಳಲ್ಲ. ಯಾಕೆ ಹೀಗೆ? ರಾವ್ ದಂಪತಿಗಳಿಗೆ ಮನಸ್ಸು, ಹೃದಯವೆಂಬುದೇ ಇಲ್ಲವೇ? ಸಮನ್ವಿತಾ ಅನುಮಾನ ಪಟ್ಟಂತೆ ಅವರು ಅವಳ ಹೆತ್ತವರಲ್ಲವೇ? ದತ್ತು ಮಗಳಾಗಿರಬಹುದೇ? ಇಲ್ಲಾ ಅವರಿಗೆ ಗಂಡು ಮಗು ಬೇಕಿತ್ತೇನೋ? ಮಗಳು ಹುಟ್ಟಿದಳೆಂಬ ತಿರಸ್ಕಾರವೇ? ಯಾರಿಗಾದರೂ ಪುರಸ್ಕರಿಸಬೇಕೆನಿಸುವ ವ್ಯಕ್ತಿತ್ವವುಳ್ಳ ಹೆಣ್ಣೊಬ್ಬಳು ಹೆತ್ತವರಿಂದ ತಿರಸ್ಕೃತಳಾದ್ದದ್ದು ಏತಕ್ಕಾಗಿ? ಬಹುಶಃ ಅವಳ ನಡವಳಿಕೆಯಿಂದಲೇನೋ….. ರಾವ್ ದಂಪತಿಗಳಿಗೆ ಮಗಳಿಂದ, ಅವಳ ವೃತ್ತಿಯಿಂದ ಇನ್ನಷ್ಟು ಹಣ ಸಂಪಾದಿಸುವ ಆಕಾಂಕ್ಷೆ ಇತ್ತೇನೋ? ಆದರೆ‌ ಇವಳ ನಿರ್ಧಾರಗಳು ಅವರಿಗೆ ನುಂಗಲಾರದ ತುತ್ತಾಗಿರಬೇಕು….

ಯೋಚನೆಗಳ ನಡುವೆ ಊಟಮಾಡುತ್ತಿದ್ದವನಿಗೆ ತಟ್ಟೆ ಖಾಲಿಯಾದದ್ದೂ ತಿಳಿಯಲಿಲ್ಲ.

"ಅಭಿ, ಏನೋ ಯೋಚ್ನೆ ಮಾಡ್ತಿದ್ದೀಯಾ? ಇನ್ನೂ ಸ್ವಲ್ಪ ಅನ್ನ ಬಡಿಸ್ಲಾ?" ತಾಯಿಯ ಕರೆಗೆ ಬೇಡವೆಂದು ತಲೆಯಾಡಿಸಿದವನು ಕೈ ತೊಳೆದು ಹಾಲಿನ ಸೋಫಾದಲ್ಲಿ ಮೈ ಚೆಲ್ಲಿದ.

ಸಚ್ಚಿದಾನಂದ್, ಆಕೃತಿ ಅವನೆದುರು ಬಂದು ಕುಳಿತರು. ಮೃದುಲಾ ಕೂಡಾ ಅವನ ಪಕ್ಕದಲ್ಲಿ ಕುಳಿತು, "ಸಮನ್ವಿತಾ ಹೇಗಿದ್ದಾಳೆ?" ಕೇಳಿದರು ಕಾತರದ ಕಣ್ಣುಗಳಲ್ಲಿ. 

"ಈಗ ಆರಾಮಾಗಿದ್ದಾಳೆ. ಪ್ರಜ್ಞೆ ಬಂದಿದೆ. ಜ್ವರ ಎಲ್ಲಾ ಕಡಿಮೆಯಾಗಿದೆ. ನಿಶ್ಯಕ್ತಿ ಇರೋದ್ರಿಂದ ಡ್ರಿಪ್ಸ್ ನಾಳೇವರೆಗೂ ಕಂಟಿನ್ಯೂ ಮಾಡ್ತೀನಿ ಅಂದ್ರು ಮೀರಾ" ಹೇಳಿ ಉಸಿರುದಬ್ಬಿದ. ಮಗನ ಮಾತು ಕೇಳಿ ಸಮಾಧಾನವಾಯಿತು ಅವರಿಗೆ.

"ಅಭಿ ಏನಾಯ್ತು? ಸಮನ್ವಿತಾಗೆ ಏನಾಗಿದೆ? ನಮ್ಮನೆಗೆ ಬರೋವಾಗ ಸರಿಯಾಗಿದ್ದ ಹುಡುಗಿ. ಆಮೇಲೆ ಆ ರೀತಿ ಇಲ್ಲಿಂದ ಹೋಗಿದ್ಯಾಕೆ? ಮತ್ತೀಗ ಆಸ್ಪತ್ರೆ? ಏನಾಗ್ತಿದೆ ಅಂತ ಕೇಳಿದ್ರೆ ನೀನೂ ಸರಿಯಾಗಿ ಏನೂ ಹೇಳ್ತಿಲ್ಲ. ಯಾಕೋ?" ಸಚ್ಚಿದಾನಂದ್ ಕೇಳಿದರು ಮಗನನ್ನು. ಅವರ ಧ್ವನಿಯಲ್ಲಿ ಇವತ್ತು ಎಲ್ಲಾ ವಿಷಯ ತಿಳಿಯಲೇ ಬೇಕೆಂಬ ಕಾತರವಿತ್ತು.

ಮತ್ತೆ ನಿಟ್ಟುಸಿರಿಟ್ಟವನು ಸೀಲಿಂಗ್ ದಿಟ್ಟಿಸಿದ.

"ಡ್ಯಾಡ್. ನಾನು ನಿಮಗೆ ಅವತ್ತೊಂದು ಮಾತು ಹೇಳಿದ್ದೆ ನೆನಪಿದ್ಯಾ? ಸತ್ಯಂ ರಾವ್ ಏನೇ ಮಾಡಿದರೂ ಅದರ ಹಿಂದೆ ಏನೋ ಭಯಂಕರವಾದ ಉದ್ದೇಶ ಇರುತ್ತೆ ಅಂತ. ಅದೇ ಆ ಪಾರ್ಟಿಯ ದಿನ….. ಅಂದು ನಾನು ಹೇಳಿದ್ದೇ ನಿಜ ಡ್ಯಾಡ್. ಅಸಲಿಗೆ ಅದೊಂದು ಪಾರ್ಟಿನೇ ಅಲ್ಲ. ಅದು ನಮ್ಮನ್ನು ಹಳ್ಳಕ್ಕೆ ಬೀಳಿಸಲು ತೋಡಿದ್ದ ಖೆಡ್ಡಾ. ಈ ಔತಣಕೂಟ ರಾವ್ ಅವರ ಪ್ಲಾನಿಂಗ್ ಒಂದು ಭಾಗ. ಆ ಪಾರ್ಟಿ ನೆಪದಲ್ಲಿ ಸಮನ್ವಿತಾನ ನಮಗೆ ಪರಿಚಯಿಸುವುದು ಅವರ ಅಸಲಿ ಉದ್ದೇಶ ಆಗಿತ್ತು. ಅವರ ಯೋಜನೆ ಯಶಸ್ವಿಯಾಯಿತು. ನಿಮಗೆಲ್ಲಾ ಸಮನ್ವಿತಾ ಬಹಳ ಹಿಡಿಸಿದಳು. ಅದೇ ಸಮಯಕ್ಕೆ ನಾನು ಜರ್ಮನಿಗೆ ಹೋದೆ. ಈ ಟೈಮನ್ನ ಸರಿಯಾಗಿ ಬಳಸಿಕೊಂಡು ನಮ್ಮಿಬ್ಬರ ಮದುವೆ ಪ್ರಪೋಸಲ್ ತಂದ್ರು. ಆಲ್ರೆಡಿ ನಿಮ್ಮ ಮನಸ್ಸು ಆ ಕಡೆಗೇ ಇತ್ತು. ಅದನ್ನು ಸರಿಯಾಗಿ ಬಳಸ್ಕೊಂಡು ನಿಮ್ಮನ್ನು ಒಪ್ಪಿಸಿದ್ರು. ನೀವೆಲ್ಲಾ ನನ್ನ ಒಪ್ಸೇ ಒಪ್ಪಿಸ್ತೀರಾ ಅಂತ ಗ್ಯಾರಂಟಿ ಇತ್ತು ಅವರಿಗೆ‌. ಹಾಗೇ ಆಯ್ತು ಕೂಡಾ. ನೀವು ಮೂವರೂ ಹಠ ಹಿಡಿದು ನಾನು ಒಪ್ಪಲೇ ಬೇಕು ಅನ್ನೋ ವಾತಾವರಣ ಸೃಷ್ಟಿಸಿದ್ರಿ. ಅಲ್ಲಿಗೆ ರಾವ್ ಅವರು ಸ್ವರ್ಗದ ಬಾಗಿಲಲ್ಲಿದ್ರು. ಎಲ್ಲಾ ಅವರೆಣಿಕೆಯಂತೆ, ಕಷ್ಟವೇ ಇಲ್ದೇ ಆರಾಮಾಗಿ ನಡೀತಿತ್ತು. ಆದ್ರೆ…... ಆಗ್ತಿರೋ ಅನ್ಯಾಯ ದೇವರಿಗೂ ಹಿಡಿಸಲಿಲ್ವೇನೋ….. ನನ್ನ ತಲೆಯಲ್ಲಿ ಸಮನ್ವಿತಾ ಬಗ್ಗೆ ಅನುಮಾನದ ಹುಳ ಕೊರೆಯತೊಡಗಿತು. ನೀವೆಲ್ಲಾ ಎಷ್ಟೇ ಒತ್ತಾಯ ಮಾಡಿದ್ರೂ ನಿಮ್ಮ ಮಾತು ಕೇಳಲು ನನ್ನ ಮನಸ್ಸು ಒಪ್ಪಲೇ ಇಲ್ಲ. ಏನೋ ಗೊಂದಲ. ಆ ಗೊಂದಲವೇ ನಾನು ಸಮನ್ವಿತಾನ ಮನೆಗೆ ಕರೆಯೋಹಾಗೆ ಮಾಡಿತು. ಅಲ್ಲೇ.... ಅಲ್ಲೇ..... ರಾವ್ ದಂಪತಿಗಳ ಮಾಸ್ಟರ್ ಪ್ಲಾನ್ ಹಳಿ ತಪ್ಪಿದ್ದು. ಇದನ್ನು ಅವರು ನಿರೀಕ್ಷಿಸಿರಲೇ ಇಲ್ಲ‌. ಅವರ ಇಡೀ ಯೋಜನೆಯ ಕೇಂದ್ರ  ಸಮನ್ವಿತಾ. ಆದರೆ ಅವಳಿಗೆ ಇದರ ಸಣ್ಣ ಸುಳಿವನ್ನೂ ನೀಡಿರಲಿಲ್ಲ ಇಬ್ಬರೂ…...."

"ಏನೋ ಹಾಗಂದ್ರೆ? ಏನು ತಮಾಷೆ ಮಾಡ್ತಿದ್ದೀಯಾ? ಅವಳಿಗೆ ಸುಳಿವೇ ಇರ್ಲಿಲ್ಲ ಅಂದ್ರೆ ಏನರ್ಥ? ಅದೂ ಅವಳ ಮದುವೆ ಬಗ್ಗೆ. ಅವಳಿಗೇ ಗೊತ್ತಿರ್ಲಿಲ್ಲ ಅಂತಾನಾ?" ಅಪನಂಬಿಕೆಯಿಂದ ಕೇಳಿದರು ಮೃದುಲಾ. 

"ಹೋಗಣ್ಣ. ಏನೇನೋ ಮಾತಾಡ್ಬೇಡ ನೀನು" ಆಕೃತಿಯದೂ ಅದೇ ಮಾತು.

"ವಿಚಿತ್ರವಾದರು ಇದೇ ಸತ್ಯ ಅನ್ನೋದನ್ನ ನೀವು ನಂಬಬೇಕು. ಅವಳನ್ನು ಮನೆಗೆ ಕರೆಯೋಕೆ ಫೋನ್ ಮಾಡಿದಾಗ್ಲೇ ಅನುಮಾನ ಬಂದಿತ್ತು. ನಿನ್ನೆ ಎಲ್ಲಾ ಕ್ಲಿಯರ್ ಆಯ್ತು. ಅದಕ್ಕೇ ಅವಳಿಗೆ ಅಷ್ಟು ಶಾಕ್ ಆಗಿದ್ದು. ಅವ್ಳು ಹಾಗೆ ಬಿಹೇವ್ ಮಾಡಿದ್ದು. ಇಲ್ಲಿಂದ ರಾವ್ ಮ್ಯಾನ್ಶನ್ ಗೆ ಹೋಗಿದ್ಲು. ನಾನೇ ಡ್ರಾಪ್ ಮಾಡಿದ್ನಲ್ಲ" ಎಂದವ ಅಲ್ಲಿ ನಡೆದ ಚೈತಾಲಿ ಹೇಳಿದ ಮಾತುಕತೆಯನ್ನೆಲ್ಲಾ ವಿವರಿಸಿದ.

"ತುಂಬಾ ಬೇಜಾರಾಗಿರುತ್ತೆ. ಬೇಸರ, ನೋವು ಅನ್ನೋದೆಲ್ಲಾ ಸಣ್ಣ ಪದಗಳಾಗುತ್ತೆ. ರಾತ್ರಿ ಬೆಳಗ್ಗೂ ಶವರ್ ಕೆಳಗೆ ಕೂತಿದ್ಲಂತೆ. ಎಷ್ಟು ಫೋನ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ ಅನ್ನೋ ಗಾಬರಿಯಲ್ಲಿ ನವ್ಯಾ ಮತ್ತೆ ಕಿಶೋರ್ ಕ್ವಾಟ್ರಸ್ಸಿಗೆ ಹುಡ್ಕೊಂಡು ಹೋಗಿದ್ದಾರೆ. ಜ್ವರ ವಿಪರೀತ ಇದ್ದಿದ್ರಿಂದ ಅಡ್ಮಿಟ್ ಮಾಡಿದ್ದಾರೆ." 

ಮೂವರೂ ಸ್ತಬ್ಧರಾಗಿದ್ದರು. ಯೋಚನೆಗಳು ಹಲವು ದಿಕ್ಕಿನಲ್ಲಿದ್ದವು. ರಾವ್ ಕೆಟ್ಟ ವ್ಯಕ್ತಿ ಎಂದು ತಿಳಿದಿತ್ತಾದರೂ ಸ್ವಂತ ಮಗಳೊಡನೆ ಈ ರೀತಿ ವರ್ತಿಸಬಹುದೆಂದು ಎಣಿಸಿರಲಿಲ್ಲ ಸಚ್ಚಿದಾನಂದ್. ಮೃದುಲಾಗೆ ಆ ದಂಪತಿಗಳ ಬಗ್ಗೆ ಅದರಲ್ಲೂ ಮಾಲಿನಿಯ ಬಗ್ಗೆ ರೇಜಿಗೆ ಹುಟ್ಟಿತು. ಅಸಹ್ಯವೆನಿಸತೊಡಗಿತು ಅವರ ವ್ಯವಹಾರಿಕ ಬದುಕು. ಇನ್ನು ಆಕೃತಿ ತನ್ನ ಬದುಕನ್ನು ಸಮನ್ವಿತಾಳ ಬದುಕಿನೊಡನೆ ತಾಳೆ ಹಾಕುತ್ತಿದ್ದಳು. ತನಗಾಗಿ ಒಂದು ಬಟ್ಟೆ ಖರೀದಿಸುವಾಗಲೂ ತನ್ನ ಆಯ್ಕೆ ಕೇಳುವ ತನ್ನ ಹೆತ್ತವರೆಲ್ಲಿ, ಮಗಳ ಮದುವೆಯನ್ನು ಅವಳಿಗೊಂದು ಮಾತು ಹೇಳದೆ ನಿಶ್ಚಯಿಸುವ ಜನರೆಲ್ಲಿ...‌?

"ಒಂದು ವೇಳೆ ನೀವು ಹೇಳಿದ್ದಕ್ಕೆ ಒಪ್ಪಿ ನಾನವಳನ್ನು ಮದ್ವೆ ಆಗ್ತೀನಿ ಅಂದಿದ್ರೆ ಬಹುಶಃ ಮಂಟಪದಲ್ಲಿ ಅವಳಿಗೆ ಸತ್ಯ ಗೊತ್ತಾಗುತ್ತಿತ್ತು ಅನ್ಸುತ್ತೆ. ಆ ಮಟ್ಟಿಗಿತ್ತು ರಾವ್ ಅವರ ಯೋಜನೆ. ಅದ್ಯಾಕೆ ನನಗಂತಹ ಹಠ ಮೂಡಿತೋ ಗೊತ್ತಿಲ್ಲ. ಆದ್ರೆ ಬಹಳ ಒಳ್ಳೆಯದೇ ಆಯ್ತು ಅದರಿಂದ" ತಾನು ಅಷ್ಟು ಪಟ್ಟಾಗಿ ಮಾತನಾಡಲೇ ಬೇಕೆಂದು ಹಠ ಹಿಡಿದು ಅವಳನ್ನು ಏಕೆ ಮನೆಗೆ ಕರೆದೆ ಎಂಬುದು ಅವನಿಗೆ ಇಂದಿಗೂ ಅರ್ಥವಾಗಿರಲಿಲ್ಲ.

"ಪಾಪ ಸಮನ್ವಿತಾ ಆಗಿದ್ದಕ್ಕೆ ಅಷ್ಟು ಸೈಲೆಂಟಾಗಿ ತಗೊಂಡ್ರು ಈ ವಿಚಾರನ. ನಾನಾಗಿದ್ರೇ ಮನೇಲಿರೋ ವಸ್ತುಗಳೆಲ್ಲಾ ಪೀಸ್ ಪೀಸ್ ಮಾಡಿ, ಇಡೀ ಮನೇನೇ ಛಿದ್ರ ಮಾಡ್ತಿದ್ದೆ. ಬ್ಲಡೀ ಬ್ಯಾಸ್ಟರ್ಡ್ಸ್. ಅದೆಂತಾ ಪೇರೆಂಟ್ಸ್ ಅವರು" ಆಕೃತಿ ಹಲ್ಲುಮಸೆದಳು.

"ಹೂಂ, ರಾವ್ ಈ ವಿಷಯದಲ್ಲಿ ಭಾರೀ ಅದೃಷ್ಟವಂತರು. ಸಮನ್ವಿತಾ ಆಗಿದ್ದಕ್ಕೆ ತಾನು ಜ್ವರ ಬರ್ಸಿಕೊಂಡಳು. ಇಗೋ…... ಈ ರಾಕ್ಷಸಿ ಆಗಿದ್ರೆ ಅವರನ್ನೇ ಬಡ್ದು ಬಾಯಿಗೆ ಹಾಕ್ಕೋತಿದ್ಲು. ಇವಳ ಮದ್ವೆ ಅಲ್ಲಾ ತಾವು ಮದ್ವೆ ಆಗಿರೋದೇ ಮರೀಬೇಕಿತ್ತು. ಶೂಟ್ ಮಾಡಿ ಜೈಲಿಗೆ ಹೋಗ್ತಿದ್ಲೇನೋ…..." ತಂಗಿಯ ಕಾಲೆಳೆದ.

"ಅದೆಲ್ಲಾ ಬಿಡು. ಈಗ ನಿನ್ನ ನಿರ್ಧಾರ ಏನು?" ಸೊಂಟದ ಮೇಲೆ ಕೈ ಇಟ್ಟು ಕೇಳಿದಳು.

"ನೀನ್ಯಾಕೆ ಹೀಗೆ ಒನಕೆ ಓಬವ್ವನ ತರ ನಿಂತಿದ್ದೀ? ಏನು ನಿರ್ಧಾರ?"

"ಅದೇ ಅತ್ತಿಗೆನ ಯಾವಾಗ ಮನೆಗೆ ಕರ್ಕೊಂಡು ಬರ್ತೀಯಾ ಅಂತ?"

"ಅತ್ತಿಗೆನಾ? ಅಬ್ಬಾ ರಾಕ್ಷಸಿ…. ನನ್ನ ಅಣ್ಣ ಅಂತ ಕರ್ಯೋಕಾಗಲ್ಲ ನಿನ್ಗೆ. ಮಿಸ್ಟರ್ ಪೈಂಟರ್, ಮಿಸ್ಟರ್ ಉಸ್ತಾದ್ ಅಂತೆಲ್ಲಾ ಹಾರಾಡ್ತೀಯ. ಈಗ ಅತ್ತಿಗೆ ಅಂತೆ ಅತ್ತಿಗೆ…... ಮುಖ ನೋಡು…..."

"ಹೌದೋ….. ಅವಳು ಸರಿಯಾಗೇ ಕೇಳಿದ್ದಾಳೆ. ನೋಡು ಅಭಿ… ನಮಗೆ ಅವತ್ತಿಂದನೂ ಸಮನ್ವಿತಾನೇ ಸೊಸೆ ಆಗ್ಬೇಕು ಅಂತ‌ ಆಸೆ ಇತ್ತು. ನೀನು ಒಪ್ಪದೇ ಮಾತುಕತೆ ಅಂತ ಕರ್ದು ಹೀಗಾಯ್ತು. ಒಳ್ಳೇದೇ ಬಿಡು. ಈಗೆಲ್ಲಾ ಮುಗೀತಲ್ಲ. ಅವ್ಳ ಮನಸ್ಸು ಮೊದಲೇ ಸರಿ ಇಲ್ಲ. ಒಬ್ಳೇ ಇರೋದು ಬೇಡ. ಇಲ್ಲಿಗೆ ಕರ್ಕೊಂಡು ಬಂದ್ಬಿಡೋಣ" ಮಗಳ ಮಾತನ್ನು ಅನುಮೋದಿಸಿದ ಮೃದುಲಾ, "ಅಲ್ವೇನ್ರೀ?" ಎಂದರು ಪತಿಯ ಮುಖ ನೋಡುತ್ತಾ.

"ಹೈಕಮಾಂಡ್ ಆರ್ಡರ್ ಆದ್ಮೇಲೆ ಮುಗೀತು. ಈಗ್ಲೇ ಗಾಡಿ ತೆಗೀಲಾ?" ಎಂದರು ತಮಾಷೆಯಾಗಿ.

"ಅಬ್ಬಾ, ಏನು ಮೂರೂ ಜನರ ಬಾಯಲ್ಲಿ ಒಂದೇ ಕ್ಯಾಸೆಟ್ ಪ್ಲೇ ಆಗ್ತಿದೆ. ಈಗ್ಲೇ ಹೀಗೆ... ಮುಂದೆ ಇನ್ಹೇಗೋ…...." ಚಿಂತೆ ನಟಿಸಿದ.

"ಏ ಕಳ್ಳ, ಸಾಕು ಸುಮ್ನಿರೋ. ನಿನ್ನ ಮನಸ್ಸಲ್ಲಿರೋದು ನಮ್ಮ ಬಾಯಲ್ಲಿ ಅಷ್ಟೇ. ಮನಸ್ಸಲ್ಲೇ ಮಂಡಿಗೆ ತಿಂತಿದ್ದೀಯಾ ಅಂತ ಗೊತ್ತು ಸುಮ್ನಿರು" ಎಂದ ಮೃದುಲಾ ಕಡೆ ನೋಡಿ, "ಇದೂ ಗೊತ್ತಾಗುತ್ತಾ ನಿಂಗೆ. ಛೇ, ನಂಗೊಂಚೂರು ಪ್ರೈವೆಸಿನೇ ಇಲ್ಲಾ" ಎಂದ ಚಿಂತಾಕ್ರಾಂತನಾಗಿ. ಅವನ ತಲೆಗೊಂದು ಮೊಟಕಿದವರು, "ಸರಿ ಈಗೇನು ಮಾಡೋದು ಅಂತ?" ಕೇಳಿದರು.

"ಮಾತೇ, ನಿನ್ನ ಸೊಸೆ ಮೊದ್ಲೇ ಹೇಳಿದ ಮಾತು ಕೇಳೋ ಪೈಕಿಯಲ್ಲ. ಇನ್ನು ಇಲ್ಲಿ ಕಥೆ ಟ್ರಾಕ್ ಬೇರೆ ಹಳಿತಪ್ಪಿದ್ದು. ಹಳಿತಪ್ಪಿದ ಟ್ರಾಕಲ್ಲಿ ಜಾಸ್ತಿ ದೂರ ಹೋದ್ರೆ ನಾನು ಹಳ್ಳ ಸೇರ್ತೀನಿ. ಬೇರೆ ಟ್ರಾಕ್ ರೆಡಿ ಮಾಡ್ಬೇಕು. ಸೋ ನಾಳೆಯಿಂದ ಆಪರೇಷನ್ ಡಾಕ್ಟ್ರಮ್ಮ ಶುರು ಮಾಡ್ಬೇಕು. ನೋಡೋಣ ಯಾರು ಯಾರಿಗೆ ಆಪರೇಷನ್ ಮಾಡೋದು ಅಂತ. ಅದೇನೇ ಇರ್ಲಿ ಅಮ್ಮಾ. ನಿನ್ನ ಸೊಸೆ ಮಾತ್ರಾ ಬುದ್ಧು ಅಂದ್ರೆ ಬುದ್ಧು... ಎಷ್ಟೆಲ್ಲಾ ಸರ್ಕಸ್ ಮಾಡಿ ಹಿಂಟ್ ಕೊಟ್ರೂ ಏನು ಹೇಳ್ತಿದ್ದೀನಿ ಅಂತಾನೇ ಅರ್ಥ ಆಗ್ಲಿಲ್ಲ ನಮ್ಮ ಡಾಕ್ಟ್ರಿಗೆ. ಪೇಷೆಂಟ್ಸ್ ನೋಡಿ ನೋಡಿ ಬುದ್ಧಿ ಮಂದ ಆಗಿದೆ…..." ಎಂದ.

"ನೋಡೋ, ನೀನು ಏನಾದ್ರೂ ಮಾಡ್ಕೋ. ನನ್ನ ಸೊಸೆ ಸುದ್ದಿಗೆ ಮಾತ್ರ ಬರ್ಬೇಡ. ಸರಿ ಇರೋಲ್ಲ ಮತ್ತೆ. ಬುದ್ಧು ಅಂತೆ ಬುದ್ಧು….. ಹೌದೋ…... ನೀವು ಗಂಡಸರಿಗೆಲ್ಲಾ ಹಾಗೇ. ಹೆಣ್ಮಕ್ಕಳು ಬುದ್ಧು ತರನೇ ಕಾಣೋದು. ಇನ್ನೊಂದ್ಸಾರಿ ಬುದ್ಧಿ ಮಂದ ಅಂದ್ರೆ ಮಗನೇ ಲಟ್ಟಣಿಗೆ ತಗೊಂಡು ಚಪಾತಿ ತರ ಲಟ್ಟಿಸಿ ಬಿಡ್ತೀನಿ ನೋಡು. ಈಗ್ಲೇ ಲೇಟಾಯ್ತು. ಹೋಗಿ ಮಲ್ಕೋ. ಬೆಳಿಗ್ಗೆ ನನ್ನ ಸೊಸೆ ನೋಡೋಕೆ ಹೋಗ್ಬೇಕು" ಎದ್ದು ಹೋದರು ಮೃದುಲಾ.

"ಅಮ್ಮ ಹೇಳಿದ್ದು ಕೇಳ್ತಲ್ಲ. ನಾನು ಲಟ್ಟಣಿಗೆ ಎಲ್ಲಾ ಇಲ್ಲ. ಡೈರೆಕ್ಟ್ ಲಾಂಗು, ಮಚ್ಚೇ. ಗೊತ್ತಾಯ್ತ. ಹೋಗಿ ಬಿದ್ಕೋ" ತಾನೂ ತಾಯಿಯ ಹಿಂದೆ ಹೊರಟಳು ಆಕೃತಿ.

ಅಪ್ಪನೆಡೆಗೆ ನೋಟ ಹರಿಸಿದ. 'ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು, ಗಂಡಸರ ನೋವಿಗೇ ಇಲ್ಲಾ ಮುಲಾಮು….' ಎಂಬಂತೆ "ನಮ್ಮ ಪಾಡು ಇಷ್ಟೇ ಕಣೋ. ಏನೇನು ಕಡ್ದು ಕಟ್ಟೆ ಹಾಕ್ಬೇಕು ಅಂದ್ಕೊಂಡಿದ್ಯೋ ಅದನ್ನೆಲ್ಲ ಮದ್ವೆಗೆ ಮುಂಚೆನೇ ಮಾಡ್ಬಿಡು. ಆಮೇಲೆ ನಮ್ಮ ಜುಟ್ಟು ಜನಿವಾರ ಎರಡೂ ಇವರ ಕೈಯಲ್ಲೇ…..." ಎನ್ನುವಾಗಲೇ "ಏನ್ರೀ ಅದು ಗುಸುಗುಸು" ಒಳಗಿಂದಲೇ ಕೂಗಿದರು ಮೃದುಲಾ.

"ಏನಿಲ್ವೇ, ಬೆಳಿಗ್ಗೆ ಹಾಸ್ಪಿಟಲ್ಲಿಗೆ ಹೋಗ್ಬೇಕಲ್ಲ. ಅದ್ಕೇ ಬೇಗ ಅಲಾರಾಂ ಇಟ್ಕೋ ಮಗನೇ ಅಂತಿದ್ದೆ ಅಷ್ಟೇ" ಎಂದು ಹೊರಡಲನುವಾದವರು ನಿಂತು, "ಆದ್ರೂ ಅಭಿ, ನಿನ್ಗೆ ನನ್ನಷ್ಟು ಸಮಸ್ಯೆ ಆಗೋಲ್ಲ ಬಿಡು. ನನ್ನ ಸೊಸೆ ಪಾಪದವಳು….." ಅವನು ಕಿರುಚುವ ಮುನ್ನ ಕಾಲ್ಕಿತ್ತರು.

'ಎಂಥಾ ಮರ್ಯಾದೆ, ಏನು ಕಥೆ…..ಅಯ್ಯೋ ಅಭಿ ನಿನ್ನ ಮುಖಕ್ಕಿಷ್ಟು ಬೆಂಕಿ ಹಾಕ. ಅಲ್ವೋ ಈಗ್ಲೇ ಹೀಗೆ, ಇನ್ನು ಅವ್ಳು ಮನೆಗೆ ಬಂದ್ಮೇಲೆ ಅಷ್ಟೇ. ಮುಗೀತು ನಿನ್ನ ಕಥೆ. ನಿನ್ನ ಮೂಸೋರೂ ಗತಿ ಇರೋಲ್ಲ. ಅಪ್ಪಾ ದೇವ್ರೇ, ನನ್ನ ಫ್ಯೂಚರ್ ನಮ್ಮಪ್ಪಗಿಂತನೂ ಹೀನಾಯ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ನನ್ನ ಪಾಡು ನಾಯಿ ಪಾಡಾಗಿದೆ. ಇವ್ರೆಲ್ಲಾ ಸೇರಿ ನನ್ನ ಅಮ್ಮಾವ್ರ ಗಂಡ ಮಾಡ್ತಾರಾ ಅಂತ. ಏನಾದ್ರಾಗ್ಲಿ…. ಡಾಕ್ಟ್ರನ್ನೇ ನನ್ನ ಪಾರ್ಟಿಗೆ ಸೇರಿಸ್ಕೋಬೇಕು. ನನ್ನ ಗೋಳು ಕೇಳೋರು ಯಾರೂ ಇಲ್ವಾ ತಂದೇ.......' ಎಂದು ತನ್ನ ತಾನೇ ಹಳಿದುಕೊಳ್ಳುತ್ತಾ ರೂಮಿನತ್ತ ಹೆಜ್ಜೆ ಹಾಕಿದ. 

            *****ಮುಂದುವರೆಯುತ್ತದೆ*****



ಅನೂಹ್ಯ 30

ಅಭಿರಾಮನ ಮಾತುಗಳಿಂದ ವ್ಯಾಕುಲಗೊಂಡಿದ್ದಳು ಸಮನ್ವಿತಾ. ಅವನ ಮಾತಿನಲ್ಲಿದ್ದ ಭಾವನೆಯನ್ನು ಗ್ರಹಿಸಲಿಲ್ಲ ಅವಳು. ಈಗವಳಿಗೆ ನೆನಪಾದದ್ದು ತಂದೆ ಎನಿಸಿಕೊಂಡಾತ ಮಾಡಿದ್ದ ಮದುವೆ ಪ್ರಸ್ತಾಪ.

ಅದಕ್ಕೇ ಅಭಿರಾಮ್ ಹೀಗೆ ಮಾತನಾಡುತ್ತಿದ್ದಾನೆ. ಏನೆಂದು ಉತ್ತರಿಸುವುದು? ತನಗೇ ತಿಳಿಯದೇ ತನ್ನ ಮದುವೆಯ ನಿಶ್ಚಯಿಸಿದ್ದಾರೆ ತನ್ನ ಸ್ವಾರ್ಥಿ ತಂದೆ ಎಂದಿವನಿಗೆ‌ ಹೇಗೆ ವಿವರಿಸಲಿ?

ಸಪ್ಪಗಾದಳು ಹುಡುಗಿ.......

ಇದು ಹೀಗೇ ಮುಂದುವರೆದರೆ ಯಾರಿಗೂ ನೆಮ್ಮದಿಯಿಲ್ಲದಂತಾಗುವುದೆಂದು ಗ್ರಹಿಸಿದವಳೇ ಇಂದೇ ಎಲ್ಲಾ ತೀರ್ಮಾನವಾಗಿಬಿಡಲಿ ಎಂದು ನಿರ್ಧರಿಸಿಬಿಟ್ಟಳು.

ಮಲಗಿದ್ದವಳು ಎದ್ದು ಕೂರಲು ಪ್ರಯತ್ನಿಸಿದಳು. ಸಾಧ್ಯವಾಗಲಿಲ್ಲ. ಅಭಿರಾಮನೆಡೆಗೆ ನೋಟ ಹರಿಸಿದಳು. ಬೆಡ್ ನ ಹ್ಯಾಂಡಲ್ ಮೇಲೆತ್ತಿ ಅವಳಿಗೆ ಕುಳಿತುಕೊಳ್ಳಲು ಆರಾಮಾಗುವಂತೆ ಹೊಂದಿಸಿ ಬಂದು ಅವಳೆದುರು ಕುಳಿತು ಅವಳು ಹಸ್ತದೆಡೆಗೆ ನೋಡಿದ. ತಟ್ಟನೆ ಅವಳು ಬಲಗೈ ತೆಗೆದು ಉದರದ ಮೇಲಿರಿಸಿಕೊಂಡದ್ದು ನೋಡಿ ನಕ್ಕ.

"ಏನು ಡಾಕ್ಟರ್ ಮೇಡಂ, ಕೈ ಕೊಡೋ ಯೋಚನೆನಾ? ಅಷ್ಟು ಸುಲಭದಲ್ಲಿ ನಾನು ಹಿಡಿದ ಕೈ ಬಿಡೋಲ್ಲ" ಎಂದವನ ಮಾತು ಅವಳಿಗೆ ಕಸಿವಿಸಿಯಾಯಿತು. ಜೊತೆಗೆ ತನ್ನಿಂದ ಅತ್ತಿತ್ತ ಸರಿಯದ ಅವನ ಆ ನೋಟ…….

"ಮಿಸ್ಟರ್ ಶರ್ಮಾ, ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಚಾರ ಮಾತಾಡೋದಿದೆ"

"ಮಾತನಾಡೋಣ. ಅದಕ್ಕೇನಂತೆ? ಮೊದ್ಲು ಹುಷಾರಾಗಿ ಬಿಡು. ಆಮೇಲೆ ಕುತ್ಕೊಂಡು ಮಾತಾಡೋಣ."

"ಇಲ್ಲಾ. ತುಂಬಾ ಜರೂರಾಗಿ ಮಾತಾಡಬೇಕಿರೋ ವಿಷಯ. ಈಗಾಗ್ಲೇ ನಿಮಗೆ ಗೊತ್ತಿರ್ಬೇಕಿತ್ತು ಇದೆಲ್ಲಾ. ಇನ್ನೂ ಹೇಳ್ದಿದ್ರೆ ತಪ್ಪಾಗುತ್ತೆ" 

"ಅಂತೂ ನೀನು ಹೇಳಿದ್ದೇ ಆಗ್ಬೇಕಲ್ಲ? ಅದ್ಯಾರು ಡಾಕ್ಟರ್ ಮಾಡಿದ್ರೋ ನಿನ್ನ. ಚಿಕ್ಕ ಮಕ್ಕಳ ತರ ಹಠ ಮಾಡ್ತೀಯಾ. ಸರಿ…… ದೇವರ ಮೇಲೆ ಭಾರ ಹಾಕಿ ನನ್ನೆರಡೂ ಕಿವಿಗಳನ್ನು ನಿನ್ನ ಸುಪರ್ದಿಗೆ ವಹಿಸ್ತಿದ್ದೀನಿ. ಅದೇನು ಹೇಳ್ಬೇಕು ಅಂತಿದ್ದೀಯೋ ಎಲ್ಲಾ ಹೇಳ್ಬಿಡು. ಆದ್ರೆ ನನ್ನ ಕಿವಿ ಜಾಗ್ರತೆ" ತಮಾಷೆಯಾಗಿ ಹೇಳಿದ.

"ಅದೂ.... ಈ ಮದುವೆ..... ನನ್ನ ತಂದೆ......" 

"ನಿನ್ನ ತಂದೆ ಮಾಡಿದ ಮದುವೆ ಪ್ರಸ್ತಾಪದ ಬಗ್ಗೆ ನೀನು ಮಾತಾಡ್ಬೇಕು ಅಂತ ಯೋಚಿಸಿದ್ದರೆ ಅದನ್ನು ತಲೆಯಿಂದ ತೆಗೆದುಹಾಕು ಸಮನ್ವಿತಾ. ನನಗೆ ಆ ಬಗ್ಗೆ ಯಾವುದೇ ಮಾತುಕತೆಯ ಅಗತ್ಯವಿಲ್ಲ."

ಅವಳು ವಿಷಯ ಹೇಗೆ ಹೇಳುವುದೆಂದು ಯೋಚನೆಯಲ್ಲಿದ್ದಾಗಲೇ ಅಭಿರಾಮ್ ಸ್ಪಷ್ಟವಾಗಿ ಹೇಳಿಯೇಬಿಟ್ಟ..

"ಹಾಗೆ ಹೇಳ್ಬೇಡಿ ಅಭಿರಾಮ್. ಈ ಬಗ್ಗೆ ನಿಮಗೆ ಗೊತ್ತಾಗಲೇ ಬೇಕಾದ ಅನಿವಾರ್ಯತೆ ಇದೆ. ನೀವು, ನಿಮ್ಮ ಮನೆಯವರು ಅಂದ್ಕೊಂಡಿರೋದೇ ಬೇರೆ ವಾಸ್ತವವೇ ಬೇರೆ."

"ಆಗ್ಲೇ ಹೇಳಿದ್ನಲ್ಲ ಸಮನ್ವಿತಾ. ಈ ಬಗ್ಗೆ ಇನ್ಯಾವ ಡಿಸ್ಕಷನ್ ಬೇಡ…...." ಅವನದು ಖಡಾಖಂಡಿತ ವಿರೋಧ‌.

"ನನ್ನ ಬಗ್ಗೆ ಬಿಡಿ, ಈ ಮದುವೆ ನಿಮಗೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ ಅಭಿರಾಮ್. ನಿಮಗೆ ನನ್ನ ತಂದೆ ಬಗ್ಗೆ…...."

"ನನಗೆ ನಿನ್ನ ತಂದೆ ಬಗ್ಗೆ, ಅವರ ಯೋಜನೆಯ ಬಗ್ಗೆ ನಿನಗಿಂತ ಚೆನ್ನಾಗಿ ತಿಳಿದಿದೆ ಸಮನ್ವಿತಾ…..." ಗಂಭೀರವಾಗಿ ಹೇಳಿದ ಅಭಿಯನ್ನೇ ಅಚ್ಚರಿಯಿಂದ ದಿಟ್ಟಿಸಿದಳು ಅವಳು.

"ಎಲ್ಲಾ ಗೊತ್ತಿದ್ದೂ ಈ ಮದುವೆಗೆ…...?" ಪ್ರಶ್ನಾರ್ಥಕವಾಗಿ ಕೇಳಿದಳು...

ಅವನು ಮೌನವಾಗಿದ್ದ. ಕುಳಿತಲ್ಲಿಂದ ಎದ್ದು ಕಿಟಕಿಯ ಬಳಿ ಹೋಗಿ ಹೊರಗೆ ನೋಡತೊಡಗಿದ. ಅವಳಿಗೆ ಆ ಮೌನ ಉಸಿರುಗಟ್ಟಿಸುವಂತಾಯಿತು.

"ಮಿಸ್ಟರ್ ಶರ್ಮಾ, ಆಮ್ ಆಸ್ಕಿಂಗ್ ವಿಥ್ ಯು. ಏನಾದ್ರೂ ಮಾತಾಡಿ. ಇಷ್ಟು ಹೊತ್ತು ಎಷ್ಟೊಂದು ಮಾತಾಡ್ತಿದ್ರಿ. ಈಗ್ಯಾಕೆ ಇಷ್ಟು ಮೌನ? ನನ್ನ ಪ್ರಶ್ನೆಯಲ್ಲಿ ಏನಾದ್ರೂ ತಪ್ಪಿದ್ದೀಯಾ?" 

ಕಿಟಕಿಯಿಂದ ಸುಮ್ಮನೆ ಹೊರ ನೋಡುತ್ತಿದ್ದವನು ಅವಳೆಡೆ ತಿರುಗಿ ನಸುನಕ್ಕು ಇಲ್ಲವೆಂದು ತಲೆಯಾಡಿಸಿದ. ಅವಳ ಕಣ್ಣುಗಳಲ್ಲಿ ಪ್ರಶ್ನೆಯಿತ್ತು. ಆ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಅವನಲ್ಲಿತ್ತು. ಆದರೆ ಈಗಲೇ ಹೇಳಬೇಕೇ? ಎಂಬ ಜಿಜ್ಞಾಸೆ ಅವನದು. 

"ಅಭಿರಾಮ್?" ಅವಳಲ್ಲಿ ಉತ್ತರ ಪಡೆಯಲೇಬೇಕೆಂಬ ಹಠ.

ನಿಧಾನವಾಗಿ ಅವಳೆದುರು ಬಂದು ಕುಳಿತವನು, "ಈಗ್ಲೇ ಹೇಳ್ಬೇಕೇನು? ನೀನು ಹುಷಾರಾದ ಮೇಲೆ ಹೇಳಿದರಾಗದೇ?" ಕೇಳಿದ.

"ಪ್ಲೀಸ್ ಅಭಿರಾಮ್, ಈ ವಿಷಯ ಆಲ್ರೆಡಿ ನನಗೆ ತುಂಬಾ ಹಿಂಸೆ ಕೊಡ್ತಿದೆ. ಇನ್ನಷ್ಟು ದಿನ ಇದನ್ನೇ ತಲೆಯಲ್ಲಿ ತುಂಬ್ಕೊಂಡು ಯೋಚಿಸೋದ್ಯಾಕೆ? ಅದೇನೇ ಇರಲಿ ಹೇಳ್ಬಿಡಿ."

ಮೊಗವನ್ನು ಮೇಲೆತ್ತಿ ನಿಡಿದಾದ ಉಸಿರು ದಬ್ಬಿದ.

"ನಿನ್ನ ತಂದೆ, ಅವರ ಸ್ವಭಾವ ನನಗೇನು ಹೊಸದಲ್ಲ. ನಾನು ಓದು ಮುಗಿಸಿ ನಮ್ಮ ಬಿಸ್ನೆಸಲ್ಲಿ ಅಪ್ಪನೊಂದಿಗೆ ಕೈ ಜೋಡಿಸಿದಾಗಿಂದ ಸತ್ಯಂ ರಾವ್ ಅವರನ್ನು ಗಮನಿಸ್ಕೊಂಡೇ ಬಂದಿದ್ದೀನಿ. ಆದ್ರೆ ವೈಯಕ್ತಿಕವಾಗಿ ನಾವೆಂದೂ ಭೇಟಿಯಾಗಿರಲಿಲ್ಲ. ಯಾಕೆಂದರೆ ನಮ್ಮ ಸಿದ್ಧಾಂತಗಳು ಹಾಗೂ ರಾವ್ ಅವರ ಸಿದ್ಧಾಂತಗಳು ಪರಸ್ಪರ ವಿರುದ್ಧವಾದುದು. ಸಂಬಂಧಕ್ಕೂ, ವ್ಯವಹಾರಕ್ಕೂ ಸ್ಪಷ್ಟ ಅಂತರವಿದೆ ನಮ್ಮಲ್ಲಿ. ಹಣದಿಂದಲೇ ಎಲ್ಲವನ್ನೂ ಅಳೆಯೋರು ನಾವಲ್ಲ. ಇಂದಿಗೂ ನಮ್ಮನೆಯಲ್ಲಿ ಬಾಂಧವ್ಯಕ್ಕಿರೋ ಪ್ರಾಮುಖ್ಯತೆ ಹಣಕ್ಕಿಲ್ಲ. ಚಿಕ್ಕಂದಿನಿಂದಲೂ ನನಗೆ, ಆಕೃತಿಗೆ ಮನೆಯಲ್ಲಿ ಇದನ್ನೇ ಕಲಿಸಿ ಬೆಳೆಸಿದ್ದು. ಎಷ್ಟೇ ಹಣ, ಶ್ರೀಮಂತಿಕೆ ಇದ್ದರೂ ಅದು ನೆತ್ತಿಗೇರದಂತೆ, ದರ್ಪ, ಅಹಂಕಾರ ನಮ್ಮ ಬಳಿ ಸುಳಿಯದಂತೆ ಯಾವಾಗ್ಲೂ ಎಚ್ಚರವಹಿಸಿದ್ರು ಅಪ್ಪ ಅಮ್ಮ. ಹಾಗಾಗಿ ಸೋಗಿನ, ತೋರಿಕೆಯ ಜನರಿಂದ ನಾವು ಬಹಳ ದೂರವೇ. ಅಂತಹವರಲ್ಲಿ ಒಬ್ಬರು ಸತ್ಯಂ ರಾವ್. ನನಗೆ ಮುಂಚಿನಿಂದಲೂ ಇಷ್ಟವಿಲ್ಲದ ವ್ಯಕ್ತಿ. ಅವರೊಂದಿಗೆ ನಮ್ಮ ಕಂಪನಿಯ ಯಾವುದೇ ವ್ಯವಹಾರ ಇರ್ಲಿಲ್ಲ. ಹಾಗಾಗೀ ಯಾವತ್ತೂ ಭೇಟಿಯಾಗುವ ಪ್ರಮೇಯವೇ ಬರಲಿಲ್ಲ. ಯಾವುದಾದರೂ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ಒಂದೆರಡು ಸಲ ನೋಡಿದ್ರೂ ನಾನಂತೂ ಎಂದೂ ಮಾತನಾಡಿಸಲೂ ಹೋಗಿರ್ಲಿಲ್ಲ. ಅಂತಹ ವ್ಯಕ್ತಿ ನನ್ನ ಬದುಕಿನಲ್ಲಿ ನೇರವಾಗಿ ಮಧ್ಯಪ್ರವೇಶಿಸಿಬಿಟ್ಟರು. ತಿಂಗಳ ಹಿಂದೆ ರಾವ್ ಅವರು ಪಾರ್ಟಿಗೆ ಕರೆದಾಗಲೇ ನನ್ನೊಳಗೆ ಒಂದು ಕಸಿವಿಸಿ ಸುಳಿದಾಡಿತ್ತು. ಅವತ್ತೇ ಡ್ಯಾಡಿಗೆ ಹೇಳಿದ್ದೆ 'ಏನೋ ಪ್ಲಾನ್ ಮಾಡ್ತಿದ್ದಾರೆ, ಈ ಪಾರ್ಟಿ ಅಟೆಂಡ್ ಆಗೋದು ಬೇಡ' ಅಂತ. ಆದ್ರೆ ಡ್ಯಾಡ್ ಕೇಳ್ಲಿಲ್ಲ. 'ರಾವ್ ಅವರನ್ನು ಎದುರು ಹಾಕ್ಕೊಳ್ಳೋದು ಒಳ್ಳೇದಲ್ಲ. ಕರ್ದಿದ್ದಾರೆ. ಹೋಗಿ ಬಂದ್ರಾಯ್ತು' ಎಂದುಬಿಟ್ಟರು. ಆಮೇಲೆ ಪಾರ್ಟಿಯಲ್ಲಿ ನಿನ್ನ ಪರಿಚಯವಾಯಿತು. ನಮ್ಮನೆಯವರಿಗೆಲ್ಲಾ ನಿನ್ನ ಗುಣಸ್ವಭಾವ ಬಹಳ ಹಿಡಿಸಿತ್ತು. ಆಮೇಲೆಲ್ಲಾ ಮನೆತುಂಬಾ ನಿಂದೇ ಮಾತುಗಳು. ಈ ಮಧ್ಯೆ ಅಗ್ರಿಮೆಂಟ್ ಒಂದನ್ನು ಫೈನಲೈಸ್ ಮಾಡೋಕೆ ಅಂತ ನಾನು ವಾರಗಳ ಮಟ್ಟಿಗೆ ಜರ್ಮನಿಗೆ ಹೋಗಿದ್ದೆ. ನಾನು ಹೋಗಿ ಬರೋದ್ರೊಳಗೆ.........

ನನ್ನ ಊಹೆಗೂ ಮೀರಿದ ಪರಿಸ್ಥಿತಿ ನಿರ್ಮಾಣ ಆಗಿತ್ತು ಮನೆಯಲ್ಲಿ. ರಾವ್ ಅವರು ನನ್ನ, ನಿನ್ನ ಮದುವೆ ಬಗ್ಗೆ ಮಾತಾಡಿದ್ದಾರೆ ಅಂದಾಗಲೇ ನನಗೆ ಗಾಬರಿಯಾಯಿತು. ಅದ್ರ ಮೇಲೆ ಅಪ್ಪ, ಅಮ್ಮ, ಆಕೃತಿನೂ ನಮಗೆಲ್ಲಾ ಒಪ್ಪಿಗೆ ಇದೆ. ನೀನೂ ಒಪ್ಪಿಕೊಂಡ್ಬಿಡು ಅಂದಾಗ ನಂಗೆ ತಲೆಕೆಟ್ಟು ಹೋಯ್ತು. ರಾವ್ ಅವರ ಪ್ಲಾನ್ ನನಗೆ ಆಗ ಅರ್ಥವಾಯಿತು. ಆ ಪಾರ್ಟಿ ನಮಗೋಸ್ಕರನೇ ಅರೇಂಜ್ ಆಗಿತ್ತು ಅನ್ನೋದು ಸ್ಪಷ್ಟವಾಯ್ತು. ಖೆಡ್ಡಾ ತೋಡಿ ಬೀಳ್ಸಿದ್ದಾರೆ ಅಂತ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ನಾನು ಇದು ಸಾಧ್ಯವೇ ಇಲ್ಲ ಅಂತ ಪಟ್ಟು ಹಿಡಿದೆ. ರಾವ್ ಅವರ ಕಂಪನಿ ಶೇರ್ ವ್ಯಾಲ್ಯೂ ಬಿದ್ದಿದೆ. ಈ ಮದುವೆ ನೆಪದಲ್ಲಿ ನಮ್ಮ ಗುಡ್ ವಿಲ್ ಮತ್ತು ಪ್ರಭಾವ ಬಳಸಿಕೊಂಡು ಅವರ ಬಿಸ್ನೆಸ್ ಮೇಲೆತ್ತಲು ಯೋಜನೆ ಮಾಡಿದ್ದಾರೆ ಅಂತ ವಾದಿಸಿದೆ. ಅದು ಸತ್ಯ ಅಂತ ಅಪ್ಪ ಒಪ್ಪಿದ್ರು. ಆದರೆ ಹಾಗೆ ಸಹಾಯ ಮಾಡೋದ್ರಲ್ಲಿ ತಪ್ಪೇನಿಲ್ಲ, ಸಮನ್ವಿತಾ ಈ ಮನೆಗೆ ಸೊಸೆಯಾಗಿ ಬರ್ತಾಳಂದ್ರೆ ಅಷ್ಟು ಮಾತ್ರದ ಸಹಾಯ ಮಾಡಿದರಾಯ್ತು ಅಂದು ಬಿಟ್ಟರು. 'ನೀನು ರಾವ್ ಬಗ್ಗೆ ಯಾಕೆ ಯೋಚ್ನೆ ಮಾಡ್ತಾ ಇದ್ದೀಯಾ. ಮದ್ವೆ ಆಗ್ಬೇಕಿರೋದು ಅವರ ಮಗಳ ಜೊತೆ. ಬಿಸ್ನೆಸ್ ಮತ್ತೆ ಸಂಬಂಧನ ಒಂದಕ್ಕೊಂದು ಗಂಟು ಹಾಕ್ಬೇಡ…' ಅಪ್ಪ, ಅಮ್ಮ, ಆಕೃತಿ ಮೂವರದೂ ಇದೇ ಮಾತು. ಅವರ ಮಾತಿನಲ್ಲಿ ನ್ಯಾಯವಿದೆ ಅನಿಸಿತಾದರೂ ನನಗೆ ರಾವ್ ಜೊತೆ ಬಿಸ್ನೆಸ್, ಸಂಬಂಧ ಯಾವುದೂ ಬೇಡವಾಗಿತ್ತು. ಮನೆಯವರೂ ಪಟ್ಟು ಸಡಿಲಿಸಲಿಲ್ಲ ನಾನೂ ಗೊಂದಲದಲ್ಲಿದ್ದೆ. ಆಗ ನನಗೆ ಹೊಳೆದ ಉಪಾಯವೇ ಇದು……. ನೇರವಾಗಿ ನಿನ್ನ ಹತ್ರನೇ ಮಾತಾಡಿ ಎಲ್ಲಾ ನೇರಾನೇರ ಕೇಳಿಬಿಡೋದು ಅಂತ ಡಿಸೈಡ್ ಮಾಡಿಬಿಟ್ಟೆ. ಅದನ್ನು ಹೇಳೋಕಂತಲೇ ಮೊನ್ನೆ ಕಾಲ್ ಮಾಡಿದಾಗ ನೀನು ಕೊಟ್ಟ ರಿಯಾಕ್ಷನ್……. ನಿನಗ್ಯಾವ ವಿಷಯವೂ ಗೊತ್ತಿಲ್ಲವೇನೋ ಅನ್ನೋ ರೀತಿಯಲ್ಲಿ ಮಾತಾಡಿದಾಗಲೇ ನನ್ನ ತಲೆಯಲ್ಲೊಂದು ಅನುಮಾನ ಮೊಳಕೆಯೊಡೆದಿತ್ತು. ರಾವ್ ಅವರು ಮಗಳಿಗೇ ಹೇಳದೇ ಇದ್ನೆಲ್ಲಾ ಮಾಡಿರಬಹುದಾ ಅಂತ ಅನಿಸಿತಾದರೂ ಸುಲಭವಾಗಿ ತಳ್ಳಿಹಾಕಿದೆ……..

ಯಾಕಂದ್ರೆ …......." 

ಮಾತು ನಿಲ್ಲಿಸಿ ಅವಳನ್ನು ನೋಡಿದ. ಅವಳಲ್ಲಿ ಯಾವುದೇ ರೀತಿಯ ಭಾವತೀವ್ರತೆಯಿರಲಿಲ್ಲ. ತಂದೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು ಅವಳಿಗೆ. ಅವಳಲ್ಲೊಂದು ದಿವ್ಯ ಮೌನವಿತ್ತು. ನಿರ್ಲಿಪ್ತಳಾಗಿದ್ದಳು. ಅವನ ನಿರೀಕ್ಷೆಯೂ ಅದೇ…... ಆದರೆ ಅಲ್ಲಿಂದ ಮುಂದೆ ಮಾತನಾಡುವುದು ಕೊಂಚ ಕಷ್ಟವೆನಿಸಿತು ಅವನಿಗೆ. ಅವಳೇನು ಅಂದುಕೊಳ್ಳಲಾರಳು ಎಂಬುದು ತಿಳಿದಿದ್ದರೂ ತಾನು ಮುಂಚೆ ಕಲ್ಪಿಸಿಕೊಂಡಿದ್ದ ಅವಳ ಚಿತ್ರದ ಬಗ್ಗೆ ಅವನಿಗೇ ಖೇದವಿತ್ತು.

"ಯಾಕೆ ನಿಲ್ಲಿಸಿಬಿಟ್ರಿ? ಹೇಳೋಕೇ ಕಷ್ಟವೆನಿಸ್ತಿದೆಯಾ?" ಅವನ ಮನಸ್ಸು ಅರಿತವಳಂತೆ ಕೇಳಿದಾಗ ಉತ್ತರ ಬರಲಿಲ್ಲ ಅವನಿಂದ.

"ನಾನೇ ಹೇಳ್ಲಾ ಯಾಕೆಂತ? ಯಾಕಂದ್ರೆ ಸತ್ಯಂ ರಾವ್ ಮಗಳು ಅಂದ್ರೆ ಅಪ್ಪನ ತರಾನೇ ಇರ್ತಾಳೆ, ಅದೇ ನಾಟಕ, ತೋರಿಕೆ, ಅಹಂಕಾರ ಎಲ್ಲವೂ ಇರುತ್ತೆ. ಅದಕ್ಕೆ ಫೋನಲ್ಲಿ ಹೀಗೆ ಮಾತಾಡಿದ್ದಾಳೆ ಅಂದ್ಕೊಂಡ್ರಿ ಅಲ್ವಾ? ನಿಮ್ಮ ಯೋಚನೆಯಲ್ಲಿ ತಪ್ಪೇನೂ ಇಲ್ಲ ಬಿಡಿ…... ನನ್ನ ಬಗ್ಗೆ ತಿಳಿದಿರೋರನ್ನು ಬಿಟ್ಟು ಉಳಿದವರೆಲ್ಲ ನನ್ನನ್ನು ಸತ್ಯಂ ರಾವ್ ಅನ್ನೋ ವ್ಯಕ್ತಿಯ ವ್ಯಕ್ತಿತ್ವದಿಂದಲೇ‌ ಅಳೆಯೋದು" ಸಣ್ಣಗೆ ನಕ್ಕಳು.

"ಇರಬಹುದೇನೋ ಸಮನ್ವಿತಾ........ ಟು ಬಿ ವೆರಿ ಫ್ರಾಂಕ್ ವಿಥ್ ಯು, ಅವತ್ತು ಪಾರ್ಟಿಯಲ್ಲಿ ನಿನ್ನ ನೋಡೋವರೆಗೆ ರಾವ್ ಅವರಿಗೊಬ್ಬ ಮಗಳಿದ್ದಾಳೆ ಅನ್ನೋ ವಿಷಯವೇ ನನಗೆ ತಿಳಿದಿರಲಿಲ್ಲ. ಇನ್ನು ಅವತ್ತು ನಾನು ನನ್ನದೇ ಯೋಚನೆಯಲ್ಲಿ ಮುಳುಗಿದ್ದೆ. ಸೋ ನಿನ್ನ ಬಿಹೇವಿಯರ್ ಏನು ಎತ್ತ ಯಾವುದೂ ಗಮನಿಸಲಿಲ್ಲ. ಬಟ್ ಅವತ್ತು ಮನೆಗೆ ವಾಪಾಸಾಗೋವಾಗ ದಾರಿ ತುಂಬಾ ಕಾರಲ್ಲಿ ನಿನ್ನದೇ ಮಾತು. ಆಮೇಲಿಂದ ಮನೆಯಲ್ಲಿ ದಿನಾ ನಿನ್ನ ಬಗ್ಗೆ ಒಂದೆರಡು ಗಂಟೆಗಳಾದ್ರೂ ಮಾತಾಡ್ತಿದ್ರು ಡ್ಯಾಡ್, ಮಮ್ಮಿ ಮತ್ತೆ ಆಕೃತಿ. ಅವರ ಮಾತುಗಳಲ್ಲಿ ಅಡಗಿದ್ದ ನಿನ್ನ ವ್ಯಕ್ತಿತ್ವವನ್ನು ನನ್ನ ಮನದ ಭಿತ್ತಿಯಲ್ಲಿ ಚಿತ್ರಿಸಿದ್ದೆ. ಯಾಕೆ? ಗೊತ್ತಿಲ್ಲ...... ಆದರೆ ಆ ಚಿತ್ರ ಅತ್ಯಂತ ಅಪ್ಯಾಯಮಾನವಾಗಿತ್ತು. ನಾನೂ ಆರಾಮಾಗಿದ್ದೆ. ರಾವ್ ಅವರು ಮದುವೆ ಪ್ರಸ್ತಾಪ ಮಾಡುವ ತನಕ.......... ಆ ಪ್ರಸ್ತಾಪ ನನ್ನ ಯೋಚನೆಗಳ ಹಳಿ ತಪ್ಪಿಸಿತು. ನಾನು ಚಿತ್ರಿಸಿದ ಚಿತ್ರಕ್ಕೆ ಮಂಕುಬಡಿದು ರಾವ್ ಅವರ ಪ್ರಭಾವಳಿಯೇ ಕಣ್ಮುಂದೆ ಕವಿಯತೊಡಗಿತು. ಅಂದಿನ ಸಂತೋಷಕೂಟ ಈ ಪ್ರಸ್ತಾಪಕ್ಕೆ ನಾಂದಿ ಹಾಡಲೆಂದೇ ಮಾಡಿದ ಸೋಗಿನ ಉಪಾಯ ಎಂದು ನಂಬಿಕೆ ಬಂದಿತ್ತು. 'ಸಂತೋಷಕೂಟವೇ ನಕಲಿ ಎಂದ ಮೇಲೆ ಅಲ್ಲಿದ್ದ ಪಾತ್ರಗಳ ನಡತೆಯೂ ನಾಟಕದ್ದೇ ಅಲ್ಲವೇ?' ಎನ್ನುವ ತರ್ಕವನ್ನು ಬುದ್ಧಿ ಒಪ್ಪಿಬಿಟ್ಟಿತು. ವಿವೇಚನೆಯ ಅಗತ್ಯವೇ ಬರಲಿಲ್ಲ. ನಿನ್ನ ಸ್ವಭಾವದ ಬಗ್ಗೆ ಕೊಂಚ ತಿಳಿದಿದ್ದರೂ ಬಹುಶಃ ಹೀಗಾಗುತ್ತಿರಲಿಲ್ಲವೇನೋ. ಅಸಲಿಗೆ ನೀನೊಬ್ಬ ಡಾಕ್ಟರ್ ಎಂಬುದೂ ನಿನ್ನೆಯೇ ನಮಗೆ ತಿಳಿದಿದ್ದು. ರಾವ್ ಅವರೊಂದಿಗೆ ಬಿಸ್ನೆಸ್ ಸಂಭಾಳಿಸುತ್ತೀಯಾ ಅಂತಲೇ ಎಂದುಕೊಂಡಿದ್ದೆವು. ಹಾಗಾಗಿಯೇ ನಾನು ಮೊನ್ನೆ ಫೋನಿನಲ್ಲಿ ಮಾತಾಡಿದ್ದು ನಿನಗೆ ವಿಚಿತ್ರವೆನಿಸಿದೆ….. ಎಂಡ್ ಅಫ್ಕೋರ್ಸ್..... ನೀನು ಎಲ್ಲಾ ತಿಳಿದೂ ಉದ್ಧಟತನದ ಮಾತಾಡಿದೆ ಅನ್ನಿಸ್ತು ನನಗೆ. ಆದರೂ ಎಲ್ಲೋ ಏನೋ ಸರಿಯಾಗಿಲ್ಲ ಎಂಬ ಭಾವ. ಮನಸ್ಸು ನಿನ್ನನ್ನು ರಾವ್ ಅವರಂತೆಯೇ ಎಂದುಕೊಳ್ಳಲು ಒಪ್ಪುತ್ತಲೇ ಇರಲಿಲ್ಲ. ಏನಾದರಾಗಲೀ ನೇರಾನೇರ ಮಾತನಾಡಿಬಿಡೋಣ ಎಂದುಕೊಂಡೇ ಮನೆಗೆ ಕರೆದದ್ದು. ನೀನು ಆಟೋದಲ್ಲಿ ಬಂದಿಳಿದಾಗ ಮತ್ತೆ ಅನಿಸಿತು ನನ್ನೆಣಿಕೆ ತಪ್ಪಾಗಿದೆಯೇನೋ ಎಂದು. ಆಮೇಲೆ ತಿಳಿದದ್ದು ನೀನು ಧನ್ವಂತರಿಯಲ್ಲಿ ಕೆಲಸಮಾಡುವೆಯೆಂದು. ನಿನ್ನ ನೇರ ಮಾತುಗಳು, ದೃಢಚಿತ್ತ ನನ್ನೆಲ್ಲಾ ಯೋಚನೆಗಳನ್ನೂ ಬುಡಮೇಲು ಮಾಡಿತು. ಈ ಮದುವೆಯ ಔಚಿತ್ಯ ಹಾಗೂ ಅದರಿಂದ ನಿಮಗಾಗುವ ಲಾಭದ ಬಗ್ಗೆ ಕೇಳಬೇಕೆಂದು ನಿನ್ನ ಮನೆಗೆ ಕರೆದಿದ್ದೆ. ಆದರೆ ಯಾವಾಗ ನೀನು 'ನಾನು ಸಂಬಳಕ್ಕೆಂದಲ್ಲ…. ನೆಮ್ಮದಿ, ಆತ್ಮತೃಪ್ತಿಗೋಸ್ಕರ ಕೆಲಸ ಮಾಡ್ತೀನಿ. ನನ್ನ ಅವಶ್ಯಕತೆಗಳು ಬಹಳ ಕಡಿಮೆ. ಸತ್ಯಂ ರಾವ್ ಅವರ ಸಂಪಾದನೆ ಅವರಿಗೆ ಸಂಬಂಧಿಸಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ' ಎಂದೆಯೋ ಆಗ ನನ್ನ ಯೋಚನೆಯ ಬಗ್ಗೆ ನನಗೇ ನಾಚಿಕೆಯೆನಿಸಿತು. ಬಹಳ ಹೆಮ್ಮೆಯೆನಿಸಿತು ನಿನ್ನ ಬಗ್ಗೆ. ಬೇರೆನನ್ನೂ ಕೇಳಬೇಕೆನಿಸದೇ ನೇರ ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿಬಿಟ್ಟೆ. ರಾವ್ ಅವರೇ ತಂದ ಪ್ರಸ್ತಾಪ…. ನಿನಗೇ ಗೊತ್ತಿಲ್ಲದೇ…..... ನಿನ್ನ ಮದುವೆ ಮಾಡಿಸಬಹುದೆಂದು........ 

ನನಗೆ ಅನುಮಾನವಿತ್ತು. ಆದರೂ....... ಇಷ್ಟು ಕೆಳ ಮಟ್ಟಕ್ಕೆ….... ರಾವ್ ಅವರು ಕುತಂತ್ರಿ ಎಂಬ ಅರಿವಿತ್ತಾದರೂ ತಮ್ಮ ಸ್ವಂತ ಮಗಳ ವಿವಾಹವನ್ನು ಹೀಗೆ ಅವಳ ಅರಿವಿಗೇ ಬಾರದಂತೆ........

ನನ್ನ ಸಮ್ಮತಿ ತಿಳಿಸಿದ ನಂತರ ನಿನ್ನ ಮುಖದಲ್ಲಾದ ಬದಲಾವಣೆ, ಗೊಂದಲ, ಕಸಿವಿಸಿ……. ನನ್ನ ಅನುಮಾನ ನಿಜವಾಗಿತ್ತು.ಆಮೇಲಿನ ವಿಷಯ ನಿನಗೇ ಗೊತ್ತಲ್ಲ. ಬಟ್ ಎಕ್ಸಟ್ರೀಮ್ಲೀ ಸಾರಿ. ನಮಗೆ ವಿಷಯ ಹೀಗಿರಬಹುದು ಅನ್ನೋ ಕಲ್ಪನೆಯೂ ಇರಲಿಲ್ಲ" ದೀರ್ಘವಾಗಿ ವಿವರಿಸಿ ಸುಮ್ಮನಾದ.

"ನೋ ಅಭಿರಾಮ್, ಡೋಂಟ್ ಬಿ ಸಾರಿ, ಆಕ್ಚುಲಿ ನಾನು ನಿಮ್ಗೆ ಥ್ಯಾಂಕ್ಸ್ ಹೇಳ್ಬೇಕು. ನೀವು ಈ ಬಗ್ಗೆ ಮಾತಾಡಿಲ್ಲ ಅಂದಿದ್ರೆ ನನಗೆ ವಿಷಯನೇ ಗೊತ್ತಾಗ್ತಾ ಇರ್ಲಿಲ್ಲ. ಆಮೇಲೆ ನನ್ನ ಮದುವೆ ಗಿನ್ನಿಸ್ ದಾಖಲೆಗೆ ಸೇರಿರೋದೇನೋ.... ವಿಚಿತ್ರ ಮದುವೆ ಅಂತ….." ಅವನು ಬದಲಾಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವಳೇ ಮಾತು ಮುಂದುವರೆಸಿದಳು.

"ಯು ಆರ್ ವೆರಿ ಲಕ್ಕಿ ಅಭಿರಾಮ್. ನಿಮ್ಮ ಅಪ್ಪ ಅಮ್ಮ ನಿಮ್ಮ ಬೆನ್ನಿಗಿದ್ದಾರೆ. ನಿಮ್ಮ ಬೆಳವಣಿಗೆಯ ಪ್ರತೀ ಹಂತದಲ್ಲೂ ಸರಿ ತಪ್ಪುಗಳನ್ನು ತೋರಿಸಿ ತಿದ್ದಿದ್ದಾರೆ. ಕೈ ಹಿಡಿದು ನಡೆಸಿದ್ದಾರೆ. ನಿಮ್ಮ ಬಾಲ್ಯವನ್ನು ಚೆಂದದ ನೆನಪಾಗಿಸಿದ್ದಾರೆ. ಬದುಕಿನ ಪ್ರತೀ ನಿರ್ಧಾರದಲ್ಲೂ ನಿಮ್ಮ ಆಸೆ, ಆಕಾಂಕ್ಷೆಗಳಿಗೆ ಬೆಲೆಕೊಟ್ಟು ನಿಮ್ಮೊಂದಿಗೆ ನಿಲ್ಲುತ್ತಾರೆ. ಯಾವ ಸಂದರ್ಭದಲ್ಲೂ ನೀವು ಒಬ್ಬಂಟಿ ಅನ್ನೋ ಭಾವ ನಿಮ್ಮನ್ನು ಕಾಡೋಲ್ಲ.‌ ಇಂಥಾ ಅದೃಷ್ಟ ಎಲ್ಲರ ಹಣೇಲಿರೋಲ್ಲ. ಈ ಒಬ್ಬಂಟಿ ಅನ್ನೋ ಭಾವನೆ ಇದ್ಯಲ್ಲ ಅದು ತುಂಬಾ ಹೆದರಿಕೆ ಹುಟ್ಟಿಸುತ್ತೆ ಅಭಿರಾಮ್. ಅದು ಮನುಷ್ಯನನ್ನು ಮಾನಸಿಕವಾಗಿ ದುರ್ಬಲನನ್ನಾಗಿಸುತ್ತದೆ. ಬದುಕೇ ಖಾಲಿ ಖಾಲಿ ಅನ್ಸುತ್ತೆ. ಹುಟ್ಟಿನಿಂದಲೇ ಅನಾಥರಾಗಿರೋದು ಒಂದು ತರ. ಆದರೆ ಎಲ್ಲಾ ಇದ್ದೂ ಅಂತರಂಗದಲ್ಲಿ ಅನಾಥರಾಗಿರ್ತಾರಲ್ಲ…. ಅವರ ಮನೋವಿಪ್ಲವವೇ ಬೇರೆ. ಬೇಸರ ಆದ್ರೂ, ಸಂತೋಷ ಆದ್ರೂ ಹಂಚ್ಕೊಳ್ಳೋಕೆ ಎಲ್ಲಾ ಇದ್ದೂ ಯಾರೂ ಇಲ್ಲದ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ. ನಾವೇ ಅತ್ತು ನಾವೇ ಸಮಾಧಾನ ಮಾಡ್ಕೊಳ್ಳೋದು ತುಂಬಾ ಕಷ್ಟ…… ಬಟ್ ಥ್ಯಾಂಕ್ ಗಾಡ್. ಸ್ಟಿಲ್ ಐ ಹ್ಯಾವ್ ಫ್ಯೂ ಪೀಪಲ್ ಬೈ ಮೈ ಸೈಡ್……." ತಣ್ಣಗೆ ನಕ್ಕಳು. ಹೀಗೇ ಬಿಟ್ಟರೆ ಮತ್ತೆ ಅಳುತ್ತಾಳೆಂಬುದು ಖಚಿತವಾಯಿತು ಅವನಿಗೆ.

"ಐ ಅಗ್ರೀ, ನಾನು ತುಂಬಾ ಲಕ್ಕಿ. ಅಪ್ಪ, ಅಮ್ಮ, ಆಕೃತಿ…… ಎಲ್ಲಾ ವಿಷಯದಲ್ಲೂ. ಬಟ್ ಅದೆಲ್ಲಕ್ಕಿಂತಲೂ ದೊಡ್ಡ ಅದೃಷ್ಟದ ಖಜಾನೆಯೊಂದು ನನಗೆ ಸಿಕ್ಕಿದೆ. ನನಗೆ ಮಾತ್ರವಲ್ಲ ನಮ್ಮೆಲ್ಲರಿಗೂ. ಬಹಳ ಪುಣ್ಯ ಸಂಪಾದನೆ ಮಾಡಿದವರ‌ ನಸೀಬಲ್ಲಿ ಮಾತ್ರ ಇರುವಂತಹದ್ದು…..." ಎಂದ.

"ಹೌದಾ? ಏನದು?" ಕುತೂಹಲದಿಂದ ಕೇಳಿದಳು.

"ನೀನು" 

"ನಾ……." ಅವಳೇನೋ ಕೇಳಬೇಕೆನ್ನುವ ಮುನ್ನ ಅವಳನ್ನು ತಡೆದ.

"ಶೂ….... ಮಾತಾಡ್ಬೇಡ. ನಾನ ಹೇಳೋದು ಸುಮ್ನೆ ಕೇಳು. ರಾವ್ ಅವರ ಮೇಲೆ ವಿಪರೀತ ಸಿಟ್ಟಿದೆ ನನಗೆ. ಬಟ್ ಐ ಆಲ್ವೇಸ್ ಬಿ ಗ್ರೇಟ್ಫುಲ್ ಟು ಹಿಮ್ ಬಿಕಾಸ್ ಅವರಿಂದಾಗಿಯೇ ನೀನು ನನಗೆ ಸಿಕ್ಕಿದ್ದು. ಅವರಿಲ್ಲದಿದ್ರೂ ನೀನು ನನ್ನೆದುರು ಬರ್ತಿದ್ಯಾ? ನಂಗೊತ್ತಿಲ್ಲ. ಬಟ್ ಈಗ ಅವರಿಂದಲೇ ಸಿಕ್ಕಿದ್ಯಾ. ಇನ್ನು ಮಾತ್ರ ನಿನ್ನ ಬಿಡೋ ಮಾತೇ ಇಲ್ಲ."

ಅವನು ಇನ್ನೇನೋ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನವ್ಯಾಳ ದನಿ ಕೇಳಿತ್ತು.

"ಅಬ್ಬಾ ಎಚ್ಚರ ಆಯ್ತಲ್ಲ. ನನಗಂತೂ ಗಾಬರಿ ಆಗೋಗಿತ್ತು" ಖುಷಿಯಲ್ಲಿ ಒಳಬಂದಳು. ಹಿಂದೆಯೇ ಕಿಶೋರನೂ ಊಟ ಹಿಡಿದು ಬಂದ.

"ಎಷ್ಟೊತ್ತಿಗೆ ಎದ್ಲು ಸರ್" ಕೇಳಿದ ಅಭಿರಾಮನಲ್ಲಿ.

"ಹೇ ಪ್ಲೀಸ್, ಸರ್ ಗಿರ್ ಅಂತೆಲ್ಲಾ ಕರೀಬೇಡಿ. ಅಭಿರಾಮ್ ಅನ್ನಿ ಇಲ್ಲ ಅಭಿ ಅಂದ್ರೂ ಓಕೆ. ನೀವು ಹೋಗಿ ಸ್ವಲ್ಪ ಹೊತ್ತಿಗೆ ಎಚ್ಚರ ಆಯ್ತು" ಎಂದ.

ಅವನಿಗೆ ಅವಳಲ್ಲಿ ಇನ್ನೂ ಮಾತನಾಡಲಿತ್ತು. ನಾಳೆಯೇ ಮಾತನಾಡಿಬಿಡಬೇಕು ಎಂದುಕೊಂಡ.

"ಸರಿ ನಾನಿನ್ನು ಹೊರಡ್ತೀನಿ. ಲೇಟಾಯ್ತು. ನಾಳೆ ಬರ್ತೀನಿ ಎಲ್ಲರ ಜೊತೆ" ಹೊರಡಲನುವಾದ.

"ಅಭಿರಾಮ್ ಊಟ ಮಾಡ್ಕೊಂಡು ಹೋಗಿ" ಕಿಶೋರನ ಒತ್ತಾಯಿಸಿದ. ಆದರೆ ಅವನಿಗೆ ಊಟ ಮಾಡುವ ಮನಸ್ಸಿರಲಿಲ್ಲ. 

"ಇಲ್ಲ ಮನೇಲೀ ಎಲ್ಲಾ ಕಾಯ್ತಿರ್ತಾರೆ. ಅಲ್ಲೇ ತಗೋತೀನಿ. ಯು ಕ್ಯಾರಿ ಆನ್. ಹಾಗೇ ನಮ್ಮ ಡಾಕ್ಟ್ರ ಮೇಲೆ ಸ್ವಲ್ಪ ಜಾಸ್ತಿನೇ ಗಮನ ಇರ್ಲಿ. ಏನೇನೋ ಯೋಚನೆ ಮಾಡ್ಕೊಂಡು ಕೂತಿರುತ್ತಾರೆ" ಅವನ ಮಾತಿಗೆ ಕಿಶೋರ್, ನವ್ಯಾ ಇಬ್ಬರೂ ನಕ್ಕರು. ಆದರೆ ಸಮನ್ವಿತಾ ಮಾತ್ರ ಅವರ ಮಾತಿನ ಪರಿವೆಯೇ ಇಲ್ಲದೆ ಅವನ ಮಾತಿನ ಅರ್ಥ ತಿಳಿಯಲು ಹೆಣಗುತ್ತಿದ್ದಳು. ಅವಳ ಬಳಿ ಹೋದವನು, "ನಾಳೆ ಸಪರಿವಾರ ಸಮೇತ ಬರ್ತೀನಿ ಡಾಕ್ಟ್ರೇ. ಅಷ್ಟರೊಳಗೆ ಈ ಡ್ರಿಪ್ಸ್ ಎಲ್ಲಾ ತೆಗೆಸಿಕೊಂಡಿರಿ. ಇನ್ನುಳಿದದ್ದು ನಾಳೆ ಮಾತಾಡೋಣ. ಓಕೆ ನಾ?" ಅವಳ ಕೆನ್ನೆ ತಟ್ಟಿ ನಿರಾಳವಾಗಿ ಹೊರನೆಡೆದ.

ಅವನು ಹೋದ ದಿಕ್ಕನ್ನೇ ನೋಡುತ್ತಾ ಕುಳಿತವಳ ಮನ ಮಾತ್ರ ನಿರಾಳವಾಗಿರಲಿಲ್ಲ...

         ***** ಮುಂದುವರೆಯುತ್ತದೆ *****



ಅನೂಹ್ಯ 29

"ನವ್ಯಾ....." ಸಿಟ್ಟಿನಿಂದ ಅಬ್ಬರಿಸುತ್ತಿದ್ದ ಮಂಗಳಮ್ಮನ ಧ್ವನಿ ಕೇಳಿ ಭಯವಾಯಿತು ಅವಳಿಗೆ. ಹಿಂದೆ ಎಂದೂ ಅಮ್ಮ ಇಷ್ಟು ಕೋಪಗೊಂಡಿರಲಿಲ್ಲ. ಈಗೇಕೆ ಹೀಗೆ? ಏನಾಗಿರಬಹುದು? ಯಾತ್ರೆಗೆ ಹೋಗುವಾಗ ಆರಾಮಾಗಿದ್ದರು. ಮೊನ್ನೆ ಕರೆಮಾಡಿ ಸಮನ್ವಿತಾಳ ಬಗ್ಗೆ ವಿಚಾರಿಸಿದಾಗಲೂ ಅಕ್ಕರೆಯಿಂದಲೇ ಮಾತನಾಡಿದ್ದರು. ಮತ್ತೆ ಈಗ ಇದ್ದಕ್ಕಿದ್ದಂತೆ ಏನಾಯಿತು? 

ಅವರಿಗೇನಾದರೂ..... ನನ್ನ ಅತೀತದ ಸುಳಿವು ಸಿಕ್ಕಿರಬಹುದೇ.....?

ಈ ಯೋಚನೆ ತಲೆಗೆ ಬರುತ್ತಲೇ ಅವಳ ಮೈಯಲ್ಲಿನ ಶಕ್ತಿಯೆಲ್ಲಾ ಕಾಲಬುಡದಲ್ಲಿ ಸೋರಿಹೋದಂತಾಯಿತು.

"ನವ್ಯಾ….. ಎಲ್ಲಿದ್ದೀ? ಬಾ ಹೊರಗೆ" ಈಗ ಸತ್ಯನಾರಾಯಣರ ಧ್ವನಿ.

ನಿಧಾನವಾಗಿ ಎದ್ದು ಬಲಹೀನ ದೇಹವನ್ನು ಕಷ್ಟಪಟ್ಟು ಸಂಭಾಳಿಸಿಕೊಂಡು ಹೊರಬಂದು ಅವರೆದುರು ನಿಂತಳು ತಲೆತಗ್ಗಿಸಿ. ಮುಖ ನೋಡುವ ಧೈರ್ಯವಾಗಲಿಲ್ಲ.

"ಎಷ್ಟು ಚೆನ್ನಾಗಿ ನಾಟಕ ಮಾಡಿದ್ಯಲ್ಲೇ? ನಾವೇನು ಅನ್ಯಾಯ ಮಾಡಿದ್ವಿ ನಿಂಗೆ? ಯಾಕೆ ಹೀಗೆ ಗುಳ್ಳೆನರಿ ಹಾಗೆ ಸೋಗಿನಲ್ಲಿ ಈ ಮನೆ ಸೇರ್ಕೊಂಡೆ? ನಿನ್ನ ಮದ್ವೆ ಆಗೋ ಹುಚ್ಚಿಗೆ ನನ್ನ ಮಗನೇ ಬೇಕಿತ್ತಾ? 'ನಿನ್ನ ಮಗನಿಗೆ ಮದ್ವೆ ಆಗೋಕೆ ಬೇರ್ಯಾರೂ ಸಿಗ್ಲಿಲ್ವೇ? ಅವನೋ ಮೂರ್ಕಾಸಿಗೆ ಮೈ ಮಾರ್ಕೊಳ್ಳೋ ಹೆಂಗಸನ್ನು ಮದ್ವೆ ಮಾಡ್ಕೊಂಡು ಬಂದ. ಇನ್ನು ನೀನು ನನ್ನ ಸೊಸೆ ಗರತಿ ಗೌರಮ್ಮನ ತರ ಅಂತ ಊರ ತುಂಬಾ ಹೇಳ್ಕೊಂಡು ತಿರ್ಗಿದ್ದೇನು, ಮೆರೆಸಿದ್ದೇನು...' ಅಂತ ಊರೆಲ್ಲಾ ನಮ್ಮನ್ನ ಆಡ್ಕೊಂಡು ನಗೋ ಹಾಗೆ ಮಾಡ್ಬಿಟ್ಯಲ್ಲೇ. ಅಷ್ಟು ಅಕ್ಕರೆಯಿಂದ ನೋಡಿಕೊಂಡ್ವಲ್ಲಾ ನಿನ್ನಾ...... ಒಂದು ದಿನಕ್ಕಾದ್ರೂ ನಿನ್ನ ಸೊಸೆ ತರ ನೋಡಿದ್ದೀವಾ? ಹೊಟ್ಟೆಯಲ್ಲಿ ಹುಟ್ಟಿದ ಮಗಳ ಹಾಗೆ ನೋಡ್ಕೊಂಡಿದ್ವಲ್ಲ. ಅದಕ್ಕೆ ತಕ್ಕ ಪ್ರತಿಫಲ ಕೊಟ್ಬಿಟ್ಟೆ ಕಣೇ ನೀನು. ಇಷ್ಟು ಹೊಟ್ಟೆ ಉರಿಸಿದ್ಯಲ್ಲಾ…. ಖಂಡಿತಾ ಒಳ್ಳೆಯದಾಗಲ್ಲ ನಿನಗೆ ನೋಡ್ತಿರು…....." ಅಳು, ಸಿಟ್ಟಿನೊಂದಿಗೆ ಶಾಪ ಹಾಕುತ್ತಿದ್ದ ಮಂಗಳಮ್ಮನನ್ನು ಕಂಡು ವೇದನೆಯಾಯಿತು ಅವಳಿಗೆ.

'ನನ್ನಿಂದ ಯಾರಿಗೂ ನೆಮ್ಮದಿ ಇಲ್ಲ' ತನ್ನನ್ನು ತಾನೇ ಶಪಿಸಿಕೊಂಡಳು.....

"ಯಾಕಮ್ಮಾ ಹೀಗೆ ಮಾಡಿದೆ. ನೀನು ಬದುಕಿನಲ್ಲಿ ತುಂಬಾ ನೋವನುಭವಿಸಿರಬಹುದು. ಇಲ್ಲವೆನ್ನುವುದಿಲ್ಲ ನಾವು. ಆದರೆ ನೀನು ಹೀಗೆ ಸುಳ್ಳಿನ ಅಡಿಪಾಯದಲ್ಲಿ ಈ ಮದುವೆಯಾಗಬಾರದಿತ್ತು. ಮದುವೆಯಾಗಿ ವರ್ಷಗಳುರುಳಿವೆ. ಇಷ್ಟು ದಿನದಲ್ಲಿ ಒಮ್ಮೆಯಾದರೂ ನಮಗೆ ಹೇಳಬೇಕೆನಿಸಲಿಲ್ಲವೇ ನಿನಗೆ? ಯಾರೋ ಮೂರನೆಯವರ ಅಪನಿಂದೆಯ ಮಾತುಗಳಿಂದ ನಮಗೆ ವಿಷಯ ತಿಳಿಯುವಂತಾಯಿತು. ಅವರು ಅಷ್ಟೊಂದು ಜನರೆದುರು ಎಷ್ಟು ಅಸಹ್ಯಕರ ಮಾತುಗಳನ್ನು ಹೇಳಿದರು ಎಂಬ ಅರಿವಿದೆಯೇ ನಿನಗೆ?" 

ಸತ್ಯನಾರಾಯಣರ ಮಾತು ಕೇಳಿ ಭರ್ಜಿಯಿಂದ ಇರಿದಂತಾಯಿತು. ಆದರೆ ಅವರು ಹೇಳಿದ ಪ್ರತೀ ಪದವೂ ಸತ್ಯವೇ‌ ಅಲ್ಲವೇ? ಏನು ತಪ್ಪಿದೆ ಅವರ ಮಾತಿನಲ್ಲಿ? ಕುಸಿದು ಕುಳಿತವಳ ಕಣ್ಣಿಂದ ನೀರು ನಿಶ್ಯಬ್ದವಾಗಿ ಜಾರುತ್ತಿತ್ತು…….

ಅವಳೆದುರು ಬಂದು ಅವಳನ್ನು ಎತ್ತಿ ನಿಲ್ಲಿಸಿದ ಮಂಗಳಮ್ಮ ಕೈ ಮುಗಿದು, "ನೋಡು ತಾಯಿ, ಬಹಳ ಒಳ್ಳೆ ಕೆಲಸ ಮಾಡಿದ್ದೀ. ಇಷ್ಟು ದಿನ ನಿನ್ನನ್ನು ನಮ್ಮ ಕೈಲಾದಷ್ಟು ಚೆನ್ನಾಗಿ ನೋಡಿಕೊಂಡು ಸಾಕಿರೋದಕ್ಕೆ ಒಂದೇ ಒಂದು ಉಪಕಾರ ಮಾಡ್ಬಿಡು. ನಾಲ್ಕು ಜನರ ಮಧ್ಯೆ ನಮ್ಮ ಮರ್ಯಾದೆ ಹೋಗಿ ಆಯ್ತು. ಇನ್ನು ಎಲ್ಲಾ ಸೇರಿ ನಮಗೆ ಬಹಿಷ್ಕಾರ ಹಾಕೋ ಮೊದ್ಲು ಇಲ್ಲಿಂದ ಹೊರಟ್ಬಿಡು. ಇದೊಂದು ಸಹಾಯ ಮಾಡು" ಎಂದವರೇ ರೂಮಿಗೆ ಹೋಗಿ ಅವಳ ಬಟ್ಟೆಗಳನ್ನೆಲ್ಲಾ ಕೈಗೆ ಸಿಕ್ಕ ಸೂಟ್ಕೇಸ್ ಒಂದಕ್ಕೆ ತುಂಬಿ ತಂದು ಅವಳ ಕೈಗಿತ್ತರು.

"ನೋಡು ಕಿಶೋರ್ ಬರೋ ಮೊದ್ಲು ಹೊರಟು ಬಿಡು. ಅವನನ್ನು ಆಮೇಲೆ ಹೇಗೋ ಸಮಾಧಾನ ಮಾಡ್ಕೋತೀವಿ. ದಯವಿಟ್ಟು ಹೋಗಮ್ಮ" ಎಂದಾಗ ಅವಳಿಗೆ ಇನ್ಯಾವ ಆಯ್ಕೆಯಿತ್ತು? 

ಹೋಗ್ಬೇಕು. ಹೋಗ್ತೀನಿ ಕೂಡಾ…... ಆದರೆ ಹೋಗುವ ಮುನ್ನ ಒಮ್ಮೆ ಕಿಶೋರನನ್ನು ಕಾಣಬೇಡವೇ?

"ಅಮ್ಮ ನಾ ಮಾಡಿರೋದು ಕ್ಷಮಿಸುವಂತಹ ತಪ್ಪಲ್ಲ ಅಂತ ಗೊತ್ತು. ನಾನು ಖಂಡಿತಾ ಹೋಗ್ತೀನಿ. ಏನೂ ತೊಂದ್ರೆ ಕೊಡೋಲ್ಲ. ಆದ್ರೆ ಹೋಗೋಕೆ ಮುಂಚೆ ಒಂದೇ ಒಂದು ಸಾರಿ……. ಒಂದು ಕೊನೆಯ ಬಾರಿಗೆ ಕಿಶೋರನನ್ನ ನೋಡಿ ಹೋಗ್ತೀನಮ್ಮ. ಇದೇ ಕೊನೆ. ಇನ್ಯಾವತ್ತೂ ಅವರನ್ನು ನೋಡೋಕಾಗಲ್ಲ. ನಿಮ್ಮ ದಮ್ಮಯ್ಯ ಒಂದ್ಸಲ ಅವ್ರನ್ನ ನೋಡಿ ಹೋಗ್ತೀನಿ ಅಷ್ಟೇ….. ಮಾತಾಡ್ಸೋಲ್ಲ….." ಆರ್ತಳಾಗಿ ಬೇಡಿದಳು.

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು, ಇನ್ನೂ ಯಾರ್ಯಾರೋ ಬಂದರು. ಅವಳ ಅಂಗಲಾಚುವಿಕೆಗೆ ಬೆಲೆ ಸಿಗಲಿಲ್ಲ. ಅವಳ ಕೂದಲು ಹಿಡಿದು ಹೊರಗೆಳೆದೊಯ್ದರು. ಅತ್ತೆ, ಮಾವ, ಮೈದುನನ ಕಣ್ಣಲ್ಲಿದ್ದ ಭಾವಗಳು ಏನು? ಕಾಣುತ್ತಿಲ್ಲ ಅವಳಿಗೆ. ಅಕ್ಕಪಕ್ಕದ ಮನೆಯ ಹೆಂಗಸರು, ನಿನ್ನೆಯವರೆಗೆ ಕಷ್ಟ ಸುಖ ವಿಚಾರಿಸುತ್ತಾ ಅಕ್ಕ ತಂಗಿಯರಂತಿದ್ದವರು‌ ಈಗ ಅವಳಿಗೆ ಬಾಯಿಗೆ ಬಂದಂತೆ ಬೈಯುತ್ತಾ, ಥಳಿಸುತ್ತಿದ್ದಾರೆ...‌‌..... 'ಮಾಡೋದೆಲ್ಲಾ ಹಲ್ಕಾ ಕೆಲಸ, ಮೇಲೆ ಗರತಿ ಮುಖವಾಡ ಬೇರೆ' , 'ಇಂತಾ ಮನೆಹಾಳಿನ ಕಲ್ಲು ಹೊಡೆದು ಸಾಯಿಸಬೇಕು' , 'ಮುಂಚೆಯೆಲ್ಲಾ ಆ ಸೂಳೆಗೇರಿಲಿ ಮಾತ್ರ ಇರ್ತಿದ್ರು ಈಗ ನೋಡ್ರೀ ಧೈರ್ಯನಾ? ನಮ್ಮಂತ ಮರ್ಯಾದಸ್ತರ ಕೇರಿಲಿ ಬಂದು ಗರತಿ ತರ ಇದ್ಕೊಂಡು ಹಾದರ ನಡ್ಸೋಕೆ ಶುರು ಮಾಡಿದ್ದಾರೆ' ಇನ್ನೂ ಏನೇನೋ ಮಾತುಗಳು ಕೇಳುತ್ತಿವೆ…... ನಿತ್ರಾಣಳಾಗುತ್ತಿದ್ದಾಳೆ ಅವಳು…... 

ಈಗ ಹೆಂಗಸರೆಲ್ಲಾ ಹಿಂದೆ ಸರಿದರು. ಸುತ್ತ ಮುತ್ತ ಅಪರಿಚಿತ ಗಂಡಸರು. ಮಂತ್ರ, ಶ್ಲೋಕಗಳನ್ನು, ಸುವಿಚಾರಗಳನ್ನು ಹೇಳುವ ಬಾಯಲ್ಲಿಯೇ ಕೆಟ್ಟ ಮಾತುಗಳು ಅವಳ ಚಾರಿತ್ರ್ಯದ ಬಗ್ಗೆ ಮಂತ್ರಪುಷ್ಪದಂತೆ ಉದುರುತ್ತಿವೆ. ಹಾಗೆ ಮಾತಾಡುತ್ತಲೇ ಹತ್ತಿರ ಬರುತ್ತಿದ್ದಾರೆ. ಅವಳ ಸೀರೆ ಸೆಳೆಯುತ್ತಿದ್ದಾರೆ ಮಾನವಂತ ಜನರು……. ಮನಬಂದಂತೆ ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ ಸಂಪ್ರದಾಯಸ್ಥ, ಮರ್ಯಾದಸ್ತ ಕೇರಿಯ ಗಂಡಸರು......

ಅಷ್ಟರಲ್ಲಿ ಅದೆಲ್ಲಿಂದಲೋ ಅವರು ನಡುವಿನಿಂದ ಓಡಿ ಬಂದಿದ್ದ ಕಿಶೋರ್.

ತನ್ನ ಕಿಶೋರ್............

ಈ ಡೋಂಗಿ ಸಮಾಜದ ಡಾಂಭಿಕ ತೋರಿಕೆಯ ಹಂಗಿಲ್ಲದ ಕಿಶೋರ್‌‌………

ತನ್ನ ದೇಹದ ಮೇಲೆ ಕಿಂಚಿತ್ ಕಾಮನೆಯಿಲ್ಲದೇ ತನ್ನ ಆತ್ಮವನ್ನು ಆರಾಧಿಸುವ, ಗೌರವಿಸುವ ಕಿಶೋರ್.......

ಇನ್ನೊಂದೆಡೆಯಿಂದ ಆ ಜನರನೆಲ್ಲಾ ತಳ್ಳಿ ದಾರಿ ಮಾಡಿಕೊಂಡು ಬಂದಳು ಸಮನ್ವಿತಾ........

ಯಾರಿವಳು……..? 

ಏನಾಗಬೇಕು ತನಗೆ…...? 

ಅಮ್ಮನಾ? ಮಗಳಾ? ಗೆಳತಿಯಾ? ಗುರುವಾ? ದೇವತೆಯಾ……..? ಎಲ್ಲವೂ ಇವಳೇ.... 

ಇವಳು ನನ್ನ ಅಸ್ತಿತ್ವ….... ನನ್ನ ಅಸ್ಮಿತೆ........

ಸಂತೆಯಲ್ಲಿ ತಪ್ಪಿಹೋಗಿ ಒಬ್ಬಂಟಿಯಾಗಿ ಕಾರ್ಗತ್ತಲ ಕಾನನದಲ್ಲಿ ಭೀತಿಯಿಂದ ಹೆದರಿದ ಪುಟ್ಟ ಕಂದಮ್ಮನ ಎದುರಲ್ಲಿ ತಾಯಿಯ ಮೊಗ ಕಂಡರೆ ಅದೆಂತಹ ಆನಂದ…….. ಅವಳಿಗೂ ಅಷ್ಟೇ ಸಂತಸವಾಯಿತು……. ನಿತ್ರಾಣಗೊಂಡ ದೇಹಕ್ಕೆ ಚೈತನ್ಯದ ಸಂಚಾರವಾದಂತಾಯಿತು.

ಇಬ್ಬರೂ ಅವಳ ಬಳಿಸಾರಿ ಸುತ್ತುವರೆದರು ಅವಳನ್ನು ರಕ್ಷಾಕವಚದಂತೆ. ಈಗ ಜನರೆಲ್ಲಾ ಅವರಿಬ್ಬರನ್ನೂ ಎಳೆದಾಡುತ್ತಿದ್ದಾರೆ. ಆದರೂ ಇವರದೇ ಕೈ ಮೇಲು. ನನ್ನ ಸುತ್ತಲಿಂದ ಕದಲಲೇ ಇಲ್ಲ ಇಬ್ಬರೂ…....

ಎಲ್ಲಿಂದಲೋ ಕಲ್ಲುಗಳ ಸುರಿಮಳೆಯಾಗತೊಡಗಿತು. ಸುತ್ತಲಿದ್ದವರ ಕೈಯಲ್ಲಿ ಕಲ್ಲುಗಳು……..

ಕಿಶೋರನ ಮೈ ಮೊಗ ಅರಿವೆಯೆಲ್ಲಾ ರಕ್ತಸಿಕ್ತ…....

"ಕಿಶೋರ್, ಪ್ಲೀಸ್ ಇಲ್ಲಿಂದ ಹೋಗಿ ಸಮನ್ವಿತಾನ ಕರ್ಕೊಂಡು. ಇಲ್ಲಾಂದ್ರೆ ಕೊಂದೇ ಬಿಡ್ತಾರೆ" ಕಾಲು ಹಿಡಿದು ಬೇಡಿದೆ........ 

ಆದರವನು ಅದಕ್ಕೆ ಕಿವಿಗೊಡಲಿಲ್ಲ. ಕಲ್ಲೆಸೆತ ಮುಂದುವರೆಯಿತು.

ನೋಡು ನೋಡುತ್ತಲೇ ಸಮನ್ವಿತಾ ನೆಲಕ್ಕೊರಗಿದಳು ಸುರಿವ ನೆತ್ತರಿನೊಂದಿಗೆ…….. ತುಟಿಯಂಚಿನಲ್ಲಿ ಸಣ್ಣ ನಗು……... 'ನೋಡು ನಿನಗಿಂತ ಮೊದಲು ನನ್ನ ಪ್ರಾಣ ಹೋಗ್ತಿದೆ' ಎಂಬ ಮುಗುಳ್ನಗುವೇ…..? ಇಲ್ಲಾ 'ಈ ದರಿದ್ರ ಸಮಾಜಕ್ಕೆ ನನ್ನ ಧಿಕ್ಕಾರ' ಎಂಬ ಕುಹಕದ ನಗುವಾ…...? ತಿಳಿಯಲಿಲ್ಲ.

"ಸಮಾ" ಜೋರಾಗಿ ಚೀರಿದಳು ನವ್ಯಾ....

"ನವ್ಯಾ ಏನಾಯ್ತು? ಯಾಕೆ ಕಿರುಚ್ಕೊಂಡೆ?" ಕಿಶೋರನ ದನಿ ಕೇಳಿ ಕಣ್ಬಿಟ್ಟು ಸುತ್ತ ನೋಡಿದಳು. ಆಸ್ಪತ್ರೆ…..... ಪಕ್ಕದ ಬೆಡ್ ನಲ್ಲಿ ಮಲಗಿದ್ದ ಸಮನ್ವಿತಾಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಅಂದರೆ.... ಛೇ ಮತ್ತೆ ಅದೇ ತೆರನಾದ ಕನಸು…….

ಹಣೆಯೊತ್ತಿದಳು. ಈಗ್ಗೆ ಕೆಲವು ದಿನಗಳಿಂದ ದಿನಾ ಇಂತಹ‌ ಕನಸುಗಳೇ. ಅದಕ್ಕೆ ಹೊತ್ತುಗೊತ್ತಿಲ್ಲ. ಅರೆ ಘಳಿಗೆ ಕಣ್ಮಚ್ಚಿದರೆ ಸಾಕು ಹೀಗೆ ಏನೇನೋ ಹುಚ್ಚಚ್ಚು ಕನಸು ಬೀಳುತ್ತಿತ್ತು. ಕ್ರಮ ಬೇರೆಯಾದರೂ ತಾತ್ಪರ್ಯ ಒಂದೇ. ಅವಳು ಹಿಂದೆ ವೇಶ್ಯೆಯಾಗಿದ್ದಳೆಂದು ಮನೆಯಲ್ಲಿ ಎಲ್ಲರಿಗೂ ತಿಳಿದುಬಿಟ್ಟಿದೆ. ಬೈದು ಹೊರಹಾಕುತ್ತಾರೆ. ಸುತ್ತಮುತ್ತಲಿನ ಜನ ಕುಹಕವಾಡುವಾಗ ಕಿಶೋರ್ ಮತ್ತು ಸಮನ್ವಿತಾ ಅವಳಿಗೆ ಜೊತೆಯಾಗುತ್ತಾರೆ. ಕೊನೆಗೆ ಮೂವರೂ ಗಾಯಗೊಳ್ಳುವುದೋ, ಸಾಯುವುದೋ ಹೀಗೇನೋ ಆಗಿ ಕೊನೆಗೊಳ್ಳುವ ಕನಸು ನವ್ಯಾಳ ಜೀವ ಹಿಂಡತೊಡಗಿತ್ತು. ಏಕಿಂತಹಾ ಕನಸು? ತಾನು ಮನೆಯಿಂದ ಬೀದಿಪಾಲಾಗಲಿದ್ದೇನೆಯೇ? ತನ್ನಿಂದಾಗಿ ಕಿಶೋರ್, ಸಮನ್ವಿತಾ ಅಪಾಯಕ್ಕೊಳಗಾಗುವರೇ? ಬರೀ ಪ್ರಶ್ನೆಗಳೇ…….. ಉತ್ತರ ದೊರಕುತ್ತಿರಲಿಲ್ಲ.

"ನವ್ಯಾ" ಕಿಶೋರ್ ಭುಜ ಹಿಡಿದು ಅಲುಗಿಸಿದಾಗ ಬಾಹ್ಯ ಪ್ರಪಂಚಕ್ಕೆ ಬಂದಳು.

"ಏನಾಯ್ತೇ? ಯಾಕೆ ಕಿರ್ಚಿದ್ದು? ಕೆಟ್ಟ ಕನಸೇನಾದರೂ ಬಿತ್ತಾ? ಸುಮಾರು ದಿನದಿಂದ ಹೀಗೆ ಆಡ್ತಿದ್ದೀ ಯಾಕೆ?" ಪ್ರಶ್ನೆಗಳ ಸುರಿಮಳೆ ಅವನಿಂದ.

"ಏನಿಲ್ಲ ಕಿಶೋರ್, ಹೀಗೆ ಏನೋ ಕೆಟ್ಟ ಕನಸು ಅಷ್ಟೇ" ಅವನಿಗೆ ಹೇಳಿ ನೋವು ಮಾಡುವುದೇಕೆ ಎಂದುಕೊಂಡು ಮಾತು ತೇಲಿಸಿದಳು‌.

"ಏನೇನೋ ಯೋಚನೆ ಮಾಡಿದ್ರೆ ಹೀಗೇ ಆಗೋದು. ನಾವು ಏನು ಯೋಚಿಸ್ತೀವೋ ಅದೇ ಕನಸುಗಳಾಗಿ ಕಾಡೋದು. ಇಲ್ಲಸಲ್ಲದ ಯೋಚನೆ ಬಿಟ್ಟು ಆರಾಮಾಗಿರು. ಆಗ ಎಲ್ಲಾ ಸರಿಹೋಗುತ್ತೆ. ಅರ್ಥ ಆಯ್ತಾ" ನೆತ್ತಿ ಚುಂಬಿಸಿ ಕೇಳಿದ. ತಲೆಯಾಡಿಸಿದಳು.

ಅಷ್ಟರಲ್ಲಿ ಮೀರಾ ಬಂದರು ಅಭಿರಾಮ್ ಹಾಗೂ ವೈಭವನೊಂದಿಗೆ. ಡ್ಯೂಟಿ ಡಾಕ್ಟರ್ ಇದ್ದರೂ  ಸಮನ್ವಿತಾಳ ಜವಾಬ್ದಾರಿಯನ್ನು ತಾವೇ ಖುದ್ದು ವಹಿಸಿಕೊಂಡಿದ್ದರಾಕೆ. ಪರೀಕ್ಷಿಸಿದವರಿಗೆ ನಿರಾಳವೆನಿಸಿತು. "ಎಲ್ಲಾ ನಾರ್ಮಲ್ ಇದೆ. ಜ್ವರ ಏನೂ ಇಲ್ಲ" ಎಂದವರು ಡ್ರಿಪ್ಸ್ ಬದಲಾಯಿಸಿದರು. ಜ್ವರ ಇಲ್ಲದಿದ್ದರೂ ನಿಶ್ಯಕ್ತಿಯ ಕಾರಣ ಡ್ರಿಪ್ಸ್ ಮುಂದುವರಿಕೆಯಾಗಿತ್ತು. ನರ್ಸ್ ಕರೆದು ಕೆಲವು ಸೂಚನೆ ನೀಡಿ ರೌಂಡ್ಸ್ ಗೆ ಹೋದರಾಕೆ.

ಅಭಿರಾಮ್ ವೈಭವವನ್ನು ಮನೆಗೆ ಕಳುಹಿಸಿ ತಾನು ಅಲ್ಲೇ ಉಳಿದ. ಅವಳಿಗೆ ಎಚ್ಚರವಾಗಿ ಒಮ್ಮೆ ಮಾತನಾಡದ ಹೊರತು ಸಮಾಧಾನವಿರಲಿಲ್ಲ ಅವನಿಗೆ. ಕಿಶೋರ್ ನವ್ಯಾ ಬೆಳಗ್ಗಿನಿಂದ ಅಲ್ಲೇ ಇದ್ದದ್ದು ಗಮನಿಸಿದ್ದ ಅಭಿ. ಹೇಗೂ ಸಮನ್ವಿತಾಳ ಕ್ವಾಟ್ರಸ್ ಪಕ್ಕದಲ್ಲೇ ಇದ್ದುದರಿಂದ ಊಟಮಾಡಿ ಸ್ವಲ್ಪ ವಿರಮಿಸಿ ಬನ್ನಿ ಎಂದರೆ ನವ್ಯಾ ಒಪ್ಪಲೇ ಇಲ್ಲ. ಕಡೆಗೆ ಅವರಿಬ್ಬರನ್ನೂ ಒತ್ತಾಯಿಸಿ ಸ್ನಾನ, ಊಟ ಮುಗಿಸಿ ಬರಲು ಕಳುಹಿಸುವಾಗ ಸಾಕು ಬೇಕಾಯ್ತು ಅವನಿಗೆ. 

ಅವರಿಬ್ಬರೂ ಹೋದ ಮೇಲೆ ಮನೆಗೊಂದು ಫೋನ್ ಮಾಡಿ ತಾನು ಬರುವುದು ತಡವಾಗುವುದೆಂದು ಹೇಳಿ ವಾರ್ಡಿನೊಳಗೆ ಬಂದ. ಯಾಕೋ ಊಟ ಬೇಕೆನಿಸಲಿಲ್ಲ. ಅಲ್ಲಿದ್ದ ಚೇರಿನಲ್ಲಿ ಸುಮ್ಮನೆ ಕುಳಿತು ಸಮನ್ವಿತಾಳನ್ನೇ ದಿಟ್ಟಿಸತೊಡಗಿದ. ಒಂದೇ ದಿನದಲ್ಲಿ ಬಿಳಚಿಕೊಂಡಿದ್ದಾಳೆ ಎನಿಸಿತು. ಡ್ರಿಪ್ಸ್ ಚುಚ್ಚಿದ್ದ ಕೈ ಬಾತುಕೊಂಡಿತ್ತು. ಮೆಲ್ಲಗೆ ಮುಂಗುರುಳು ಸವರಿದ. ಅವಳ ಕೈಯನ್ನು ತನ್ನ ಹಸ್ತದಲ್ಲಿ ಹಿಡಿದು ಕುಳಿತ.

ಹಾಗೇ ಕುಳಿತಿದ್ದ. ನಿಮಿಷಗಳು ಜಾರುತ್ತಿತ್ತು. ಅವಳು ಮೆಲ್ಲಗೆ ಕದಲಿದಳು.  ಕೈ ಬೆರಳುಗಳ ನಿಧಾನ ಚಲನೆ ಅರಿವಾಯಿತು ಅವನ ಹಸ್ತದಲ್ಲಿ. 

ಅವಳಿಗೆ ನಿಧಾನವಾಗಿ ಮಂಪರು ಹರಿಯತೊಡಗಿತು. ಮೂಗಿಗೆ ಬಡಿದ ವಾಸನೆ ತಾನು ಆಸ್ಪತ್ರೆಯಲ್ಲಿರುವೆನೆಂಬ ಅರಿವು ನೀಡಿತು. ತಲೆಭಾರವೆನಿಸಿತು. ನಿಧಾನವಾಗಿ ಕಣ್ತೆರೆಯಲು ಪ್ರಯತ್ನಿಸಿದಳು. ಎಡಗೈ ಕದಲಿಸಲು ಸಾಧ್ಯವಾಗದಷ್ಟು ನೋವು. ಕ್ಷಣದಲ್ಲೇ ಡ್ರಿಪ್ಸ್ ಹಾಕಿರುವುದು ತಿಳಿಯಿತು. ಎಷ್ಟೆಂದರೂ ವೈದ್ಯೆಯಲ್ಲವೇ? ಆ ಪ್ರಯತ್ನ ಬಿಟ್ಟು ಬಲಗೈ ಕದಲಿಸಲು ನೋಡಿದಳು. ಏನೋ ಅಡ್ಡಿ. ಕೈ ಯಾರದೋ ಹಿಡಿತದಲ್ಲಿತ್ತು. ಅಪರಿಚಿತ ಸ್ಪರ್ಶ. ಯಾರೋ ಪಕ್ಕದಲ್ಲಿ ಕುಳಿತಿರುವಂತೆ ಭಾಸವಾಯಿತು. ತನ್ನ ಕೈ ಅವರ ಹಿಡಿತದಲ್ಲೇ ಇದೆ. ಯಾರು?

ಕಷ್ಟಪಟ್ಟು ಬೆಳಕಿಗೆ ಕಣ್ಣು ಹೊಂದಿಸಿಕೊಂಡು ಕಣ್ಣು ತೆರೆದಳು. ಬಲಬದಿಗೆ ಯಾವುದೋ ಬಿಂಬ ಮಸುಕು ಮಸುಕಾಗಿ ಕಾಣಿಸಿತು. ತಾನು ಪ್ರಜ್ಞೆ ತಪ್ಪುವ ಮುನ್ನ ತನ್ನೊಂದಿಗೆ ಇದ್ದದ್ದು ನವ್ಯಾ, ಕಿಶೋರ್……. ನೆನಪಿಸಿಕೊಂಡಳು. ಆದರೆ ಎದುರು ಕುಳಿತಿರುವುದು ಅವರಿಬ್ಬರೂ ಅಲ್ಲ ಎಂಬುದು ತಿಳಿಯುತಿತ್ತು ಅವಳಿಗೆ. ಮತ್ತಷ್ಟು ಪ್ರಯತ್ನಿಸಿ ನೋಡತೊಡಗಿದಳು ಎದುರಿದ್ದ ವ್ಯಕ್ತಿಯನ್ನು.

ನಿಧಾನವಾಗಿ ಅವಳ ನೋಟ ಸ್ಪಷ್ಟವಾಗತೊಡಗಿ ಎದುರು ನಸುನಗುತ್ತಾ ಕುಳಿತವನ ಮೊಗ ಸ್ಫುಟವಾಗತೊಡಗಿದಂತೆ‌ ಅವಳ ಹುಬ್ಬುಗಳು ಸಂಕುಚಿತವಾಗಿ ನೋಟ ಪ್ರಶ್ನಾರ್ಥಕವಾಯಿತು.

"ನೀವು…….. ನೀವಿಲ್ಲಿ ಹೇಗೆ?" ಸುತ್ತಮುತ್ತ ನೋಟ ಹರಿಸಿದಳು ನವ್ಯಾ ಹಾಗೂ ಕಿಶೋರನಿಗಾಗಿ.

"ನಿಮ್ಮ ಫ್ರೆಂಡ್ಸ್ ಇಬ್ರೂ ಬೆಳಗ್ಗಿನಿಂದ ಇಲ್ಲೇ ಇದ್ರು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ನಾನೇ ಸ್ನಾನ, ಊಟ ಮುಗಿಸಿ ಬನ್ನಿ ಅಂತ ಒತ್ತಾಯ ಮಾಡಿ ಕಳಿಸಿದೆ" ಅವಳ ಹುಡುಕಾಟ ಅರಿತವನಂತೆ ನುಡಿದ.

"ಅಂದ್ರೆ ನಾನು ಬೆಳಿಗ್ಗೆಯಿಂದ ಇಲ್ಲೇ ಇದ್ದೀನಾ?" ಗಾಬರಿಯಿಂದ ಕೇಳಿದಳು. 

"ಹೌದು ಮೇಡಂ, ನೀವು ಬೆಳಗ್ಗಿನಿಂದ ಇಲ್ಲೇ ಪ್ರಜ್ಞೆ ಇಲ್ದೇ ಡ್ರಿಪ್ಸ್ ಏರಿಸಿಕೊಂಡು ಮಲ್ಗಿದ್ದೀರಿ. ನಮ್ಮಂತಾ ಬಡಪಾಯಿಗಳ ಜೀವ ಬಾಯಿಗೆ ಬರಿಸಿ ನೀವು ಆರಾಮಾಗಿ ಮಲ್ಗಿರೋದು ನೋಡಿ…...." 

ಅವಳಿಗೆ ಮೊದಲೇ ಮುಜುಗರ. ಅವನನ್ನು ಇಲ್ಲಿ ನಿರೀಕ್ಷಿಸಿರಲಿಲ್ಲ ಆಕೆ. ಮೊದಲು ಹೇಗೋ ಈಗ ಈ ಮದುವೆ ಎಂಬ ಪ್ರಸ್ತಾಪ ಬೇರೆ ನಡುವಲ್ಲಿತ್ತು. ಎದುರಲ್ಲಿ ಕುಳಿತವನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಯಾವುದೋ ಸಂಕೋಚ, ಹಿಂಜರಿಕೆ..... ಕಣ್ಣಲ್ಲಿ ಕಣ್ಣಿಡುವುದು ದೂರದ ಮಾತು….. ಅವಳಿಗೆ ಅವನ ಮೊಗವನ್ನು ದಿಟ್ಟಿಸಲೇ ಸಾಧ್ಯವಾಗಲಿಲ್ಲ....... ಅದೇನೆಂದು ಸ್ಪಷ್ಟವಾಗದು……..

ಅದಕ್ಕೆ ಸರಿಯಾಗಿ ಅವಳ ಕೈಯನ್ನು ತನ್ನ ಹಸ್ತಗಳ ನಡುವೆ ಹಿಡಿದಿದ್ದನಾತ. ಇವಳು ಕೊಸರಿಕೊಂಡರೂ ಆಸಾಮಿ ಕೈ ಬಿಡುವ ಲಕ್ಷಣಗಳು ಗೋಚರಿಸಲಿಲ್ಲ. ಅವಳ ಬಲಗೈ ಇನ್ನೂ ಅವನ ಹಿಡಿತದಲ್ಲೇ ಇತ್ತು.

ಇವಳ ಮುಜುಗರ ಅವನಿಗೆ ಅರಿವಾಗಲಿಲ್ಲ ಎಂದೇನಿಲ್ಲ. ಅವಳು ಕೈ ಬಿಡಿಸಿಕೊಳ್ಳಲು ಪರದಾಡುತ್ತಿದ್ದಾಳೆ ಎಂದು ಅವನಿಗೂ ಗೊತ್ತು. ಆದರೆ ಅವನು ಅವಳ ಕೈ ಬಿಡಲು ತಯಾರಿಲ್ಲ ಅಷ್ಟೇ. 

ಇಬ್ಬರ 'ನೀ ಕೊಡೆ, ನಾ ಬಿಡೆ' ತಕರಾರಿನಲ್ಲಿ ಕೊನೆಗೆ ಸೋತದ್ದು ಸಮನ್ವಿತಾಳೇ. ಎಲ್ಲಾ ರೀತಿಯ ಕೊಸರಾಡಿದರೂ ಅವನು ಕೈ ಹಿಡಿತ ಸಡಿಲಿಸದಾಗ ಕೈಯನ್ನು ನೇರ ಹಿಂದೆಳೆದು ಮಲಗಿದ್ದಲ್ಲಿಂದ ಏಳಲು ಪ್ರಯತ್ನಿಸಿದಳು. ಆದರೆ ಅವನ ಹಿಡಿತ ಬಲವಾಗಿತ್ತು.

"ರೀ ಡಾಕ್ಟ್ರೇ, ನೀವೀಗ ಡಾಕ್ಟರ್ ಅಲ್ಲಾ ಪೇಷೆಂಟ್ ಅನ್ನೋದು ನೆನಪಿರ್ಲಿ. ನೀವು ಪೇಷೆಂಟುಗಳಿಗೆ ಏನೆಲ್ಲಾ ಎಚ್ಚರಿಕೆ ಹೇಳ್ತಿದ್ರಿ ನೆನಪಿಸ್ಕೊಳ್ಳಿ. ಅದೆಲ್ಲಾ ಈಗ ನಿಮ್ಗೂ ಅಪ್ಲಿಕೇಬಲ್. ಸೋ ಸುಮ್ನೆ ನಂಗೆ ಕೋಪ ಬರಿಸದೇ ಮಲ್ಕೊಳ್ಳಿ. ಇಲ್ಲಾಂದ್ರೆ ಈ ಕೈಗೂ ಡ್ರಿಪ್ಸ್ ಹಾಕ್ಸಿ ಬಿಡ್ತೀನಷ್ಟೇ. ಅದೇನು ಡಾಕ್ಟ್ರೇನೋ?" 

ಅವನ ಈ ಪರಿಗೆ ಗಪ್ ಚಿಪ್ ಆದಳು ಹುಡುಗಿ. ಕೈ ಬಿಡಿಸಿಕೊಳ್ಳುವ ಪ್ರಯತ್ನಕ್ಕೆ ಎಳ್ಳುನೀರು ಬಿಟ್ಟಳು.

"ಯಾಕೆ ಡಾಕ್ಟ್ರೇ ಹೀಗೆಲ್ಲಾ ಮಾಡ್ಕೊಂಡ್ರೀ?" ಅವನ ಧ್ವನಿ ಭಾರವಾಗಿತ್ತು.

"ನೀವೇ ಹೇಳಿದ್ರಲ್ಲಾ ನಾವು ಪೇಷೆಂಟ್ಸ್ ಗೆ ರಾಶಿ ಎಚ್ಚರಿಕೆ ಕೊಡ್ತೀವಿ ಅಂತ. ಒಂದು ಸಲ ರೋಗಿಗಳ ಮನಸ್ಥಿತಿ ಹೇಗಿರುತ್ತೆ ಅಂತ ನೋಡೋಣ ಅನ್ನಿಸ್ತು. ಅದಕ್ಕೆ ನಾನೇ ಪೇಷೆಂಟ್ ಆದೆ" ನಕ್ಕಳು.

"ತುಮ್ ಇತನಾ ಜೋ ಮುಸ್ಕುರಾ ರಹೇ ಹೋ

ಕ್ಯಾ ಗಮ್ ಹೆ ಜಿಸಕೋ ಚುಪಾ ರಹೇ ಹೋ?

ಆಕೋಂ ಮೆ ನಮೀ ಹಸೀ ಲಬೋಂ ಪರ್

ಕ್ಯಾ ಹಾಲ್ ಹೈ ಕ್ಯಾ ದಿಖಾ ರಹೇ ಹೋ?"

ತಟ್ಟನೆ ತಲೆ ಎತ್ತಿದಳು ಸಮನ್ವಿತಾ. ತನ್ನ ಪರಿಸ್ಥಿತಿಗೆ ತಕ್ಕ ಸಾಲುಗಳು…...ನಗುತ್ತೇನೆ ಅಳುವ ಮರೆಸಿ….. ಅತ್ತು ದುಃಖವನ್ನು ಹೊರಹಾಕಲೂ ಅದೃಷ್ಟ ಬೇಕು...... ಇಲ್ಲವಾದರೆ ನನ್ನಂತೆ ರಾತ್ರಿಯಿಡೀ ಒಬ್ಬಳೇ ಅತ್ತು ತನ್ನ ತಾನೇ ಸಮಾಧಾನಿಸಿಕೊಂಡು ನಗಬೇಕು.

ಆದರೆ ಇವನು ಹಾಡುತ್ತಿರುವನೋ ಇಲ್ಲಾ ತನ್ನನ್ನು ಕೇಳುತ್ತಿರುವನೋ? ಗೊಂದಲದಲ್ಲಿ ಬಿದ್ದಳು. ಅವನ ಕಣ್ಣುಗಳಲ್ಲಿ ಉತ್ತರ ಅರಸಿದಳು. ಎರಡನೇಯದೇ ಸರಿಯಾ?

"ವೈದ್ಯರೇ, ಹಾಗೆ ನೋಡ್ಬೇಡ್ರೀ. ನಂಗೇನು ದೃಷ್ಟಿಯಾಗಲ್ಲ….. ಆದ್ರೆ ನಿಮ್ಗೇ ತೊಂದರೆಯಾಗಬಹುದು" ಕಣ್ಣು ಮಿಟುಕಿಸಿದ.

"ಪರ್ವಾಗಿಲ್ವೇ….. ನಿಮ್ಮನ್ನ ಏನೋ ಅಂದ್ಕೊಂಡಿದ್ದೆ. ತುಂಬಾ ಚೆನ್ನಾಗಿ ಹಾಡ್ತೀರಾ." 

"ಏನಂದ್ಕೊಂಡಿದ್ರಿ ಡಾಕ್ಟ್ರೇ?"

"ಏನಿಲ್ಲ ಬಿಡಿ"

"ನನಗೆ ಈ ಬಿಸ್ನೆಸ್ ಬಿಟ್ಟು ಬೇರಿನ್ನೇನೂ ಗೊತ್ತಿಲ್ಲ ಅಂತ ಅಂದ್ಕೊಂಡಿದ್ದೆ ಅಲ್ವಾ? ನಾನು ‌ಹೈಲೀ ಟ್ಯಾಲೆಂಟೆಡ್ ಪರ್ಸನ್ ಕಣಮ್ಮಾ. ಬೇಕಿದ್ರೆ ಅಡಿಗೆ ಕೂಡಾ ಮಾಡ್ತೀನಿ ಗೊತ್ತಾ?"

"ನಿಮಗೆ ಮಾತಾಡೋಕೇ ಬರೋಲ್ಲ ಅಂದ್ಕೊಂಡಿದ್ನಲ್ರೀ ನಾನು. ನೀವು ನೋಡಿದ್ರೆ ಗುರ್ತು ಪರಿಚಯ‌ ಇಲ್ಲದವಳತ್ರ ಹೀಗೆ ನಾನ್ ಸ್ಟಾಪ್ ಮಾತಾಡ್ತಿದ್ದೀರಲ್ಲ."

"ಏನು? ಯಾರಿಗೆ ಯಾರ ಗುರುತು, ಪರಿಚಯ ಇಲ್ಲ? ಯಾಕೆ? ಮೆಮೋರಿ ಲಾಸ್ ಆಗಿದ್ಯಾ?" ಚೇರಿನಿಂದ ಮುಂದೆ ಬಂದು ಕೇಳಿದ ಗಾಬರಿಯಲ್ಲಿ.

"ಅಲ್ಲ…. ಏನೋ ಅವತ್ತು ಪಾರ್ಟಿಲಿ ಒಂದ್ಸಲ ನೋಡಿದ್ದು. ಆಮೇಲೆ ನಿನ್ನೆ ಒಂದಷ್ಟು ಮಾತಾಡಿದ್ದು. ಅಷ್ಟೇ"

"ತಮ್ಮ ಪ್ರಕಾರ ಗುರುತು, ಪರಿಚಯ ಅಂದ್ರೆ ಏನು ಡಾಕ್ಟ್ರೇ? ಬ್ಲಡ್ ಗ್ರೂಪ್, ಬಿ.ಪಿ, ಶುಗರ್ ಲೆವೆಲ್, WBC, RBC ಕೌಂಟ್, ಪಾಸ್ಪೋರ್ಟ್, ವೀಸಾ, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಎಲ್ಲಾ ಆಧಾರ್ ಕಾರ್ಡಿಗೆ ಲಿಂಕ್ ಮಾಡಿ ಬಯೋಮೆಟ್ರಿಕ್ ಮೆಷಿನಲ್ಲಿ ಹೆಬ್ಬೆಟ್ಟು ಒತ್ತಿ ಗುರುತು ಪರಿಚಯ ಮಾಡ್ಕೋಬೇಕಾ?" ಅವನ ಕೇಳಿಕೆಗೆ ಅವಳು ಜೋರಾಗಿ ನಗತೊಡಗಿದಳು.

ಅಭಿರಾಮನಿಗೆ ಸಿಟ್ಟು ಬಂದಿತ್ತು. 'ಇಷ್ಟು ಸರ್ತಿ ನೋಡಿ, ಮಾತಾಡಿ, ಗುರುತು ಪರಿಚಯ ಇಲ್ವಾ ನಿಂಗೆ. ಮತ್ತೆ ನಗು ಬೇರೆ….. ಮಾಡ್ತೀನಿ ಇರು' ಎಂದುಕೊಂಡವನು,

"ಅಮ್ಮಾ ತಾಯೇ.... ಎಲ್ಲರತ್ರ ಹೀಗೆ ಮಾತಾಡೋಕೆ ನನ್ಗೇನು ಹುಚ್ಚಾ? ಮನೆಯಲ್ಲೂ ಹೀಗೆ ಮಾತಾಡಲ್ಲ ನಾನು ಗೊತ್ತಾ? ಏನೋ ಪಾಪ ನನ್ನ ಹೆಂಡ್ತಿ…..! ಡಾಕ್ಟ್ರಾಗಿದ್ದೋಳು ಈಗ ಪೇಷೆಂಟಾಗಿ ಕೈಗೆಲ್ಲಾ ಗ್ಲುಕೋಸ್ ಚುಚ್ಚಿಸ್ಕೊಂಡು ಮಲ್ಗಿದ್ದಾಳೆ. ಅವಳಿಗೆ ಬೇಜಾರಾಗ್ಬಾರ್ದು ಅಂತ ನಾನು ಮಾತಾಡ್ತಿದ್ರೆ ನೋಡು ಹೇಗ್ಹೇಳ್ತಿದ್ದೀ?" 

ತಟ್ಟನೆ ನಿಂತಿತು ನಗು......

"ಏನಂದ್ರಿ? ಏನಂದ್ರಿ ನೀವು? ಹೆಂಡ್ತಿನಾ? ಯಾರ್ರೀ ನಿಮ್ಮ ಹೆಂಡತಿ"

"ಓ…. ಹೆಂಡ್ತಿ ಆಗಿಲ್ಲ ಅಲ್ವಾ ಇನ್ನೂ…. ಸಾರಿ ಅದು ಬರಿ ಹೆಂಡ್ತಿ ಅಲ್ಲ ಭಾವಿ ಹೆಂಡ್ತಿ. ನೋಡಮ್ಮಾ ಭಾವೀ ಪತ್ನಿ. ನಿನ್ನಿಂದಾಗಿ ನಾನು ಮನೇಲೀ ಎಲ್ಲರತ್ರ ಉಗಿಸ್ಕೋತಾ ಇದ್ದೀನಿ. ಮಾತಾಡ್ಬೇಕು ಅಂತ ಮನೆಗೆ ಕರ್ದು ನಮ್ಮ ಭಾವಿ ಸೊಸೆನ ಅಳ್ಸಿ ಆಸ್ಪತ್ರೆ ಸೇರ್ಸಿದ್ಯಾ ಅಂತ ಅಮ್ಮ ಮತ್ತೆ ಡ್ಯಾಡ್, ಡಾಕ್ಟರ್ ಆಗಿದ್ದ ನನ್ನ ಭಾವಿ ಅತ್ತಿಗೆನ ಪೇಷೆಂಟ್ ಮಾಡಿದ್ಯಾ ಅಂತ ಆಕೃತಿ ನನ್ಹತ್ರ ಮಾತಾಡುತ್ತಿಲ್ಲ. ನೋಡಿ ಡಾಕ್ಟ್ರೇ….. ನಾನೊಬ್ಬ ಅಬೋಧ ಬಾಲಕ ಎಷ್ಟೆಲ್ಲಾ ಸಮಸ್ಯೆಗೆ ಸಿಕ್ಕಿ ನರಳ್ತಾ ಇದ್ದೀನಿ. ಅದ್ಕೇ ನೀವು ಹುಷಾರಾಗೋ ತನಕ ಇಲ್ಲಿಂದ ಅಲ್ಲಾಡಲ್ಲ ನಾನು. ಕಂಪೆನಿ, ಆಫೀಸ್ ಕೆಲ್ಸ ಎಲ್ಲಾ ಬೇರೆಯವರಿಗೆ ವಹಿಸ್ಬಿಟ್ಟಿದ್ದೀನಿ. ನೀವು ಬೇಗ ಹುಷಾರಾಗಿ ಬಿಡಿ. ತಾಳಿ ಕಟ್ಟಿ ನಿಮ್ಮನ್ನ ನಿಮ್ಮ ಅತ್ತೆ, ಮಾವ, ನಾದಿನಿ ಜೊತೆ ಬಿಟ್ಮೇಲೆನೇ ಬೇರೆ ಕೆಲ್ಸ"

ಅವನ ಮಾತಿನಲ್ಲಿದ್ದ ಭಾವನೆಯನ್ನು ಗ್ರಹಿಸಲಿಲ್ಲ ಅವಳು…….. ಈಗವಳಿಗೆ ನೆನಪಾದದ್ದು ತಂದೆ ಎನಿಸಿಕೊಂಡಾತ ಮಾಡಿದ್ದ ಮದುವೆ ಪ್ರಸ್ತಾಪ.

ಅದಕ್ಕೇ ಅಭಿರಾಮ್ ಹೀಗೆ ಮಾತನಾಡುತ್ತಿದ್ದಾನೆ. ಏನೆಂದು ಉತ್ತರಿಸುವುದು……?

ತನಗೇ ತಿಳಿಯದೇ ತನ್ನ ಮದುವೆಯ ನಿಶ್ಚಯಿಸಿದ್ದಾರೆ ತನ್ನ ಸ್ವಾರ್ಥಿ ತಂದೆ ಎಂದಿವನಿಗೆ‌ ಹೇಗೆ ವಿವರಿಸಲಿ……?

ಸಪ್ಪಗಾದಳು ಹುಡುಗಿ.........

         ******ಮುಂದುವರೆಯುತ್ತದೆ******



ಅನೂಹ್ಯ 28

ಅವತ್ತು ಬೆಳಗಿನಿಂದಲೇ ಚೈತಾಲಿಯ ಎಡಗಣ್ಣು ಹೊಡೆದುಕೊಳ್ಳುತ್ತಿತ್ತು. 'ಯಾಕಪ್ಪ ದೇವ್ರೇ ಈ ತರ ಹೊಡ್ಕೋತಿದೆ ಶನಿ. ಯಾವ್ದೋ ಧೈರ್ಯದಿಂದ ಕೆಲಸ ಬೇರೆ ಬಿಟ್ಬಿಟ್ಟೆ. ಬೇರೆ ಕೆಲ್ಸ ಹುಡುಕಬೇಕು. ಇನ್ನೇನು ಗ್ರಹಚಾರ ಕಾದಿದೆಯೋ' ತನ್ನಲ್ಲೇ ಗೊಣಗಿದಳು.

ಪಾಪ ಅವಳಿಗೇನು ಗೊತ್ತು ಗ್ರಹಚಾರ ನಿನ್ನೆ ರಾತ್ರಿಯಿಂದಲೇ ಅವಳ ಬೆನ್ನು ಬಿದ್ದಿದೆ, ಈಗಾಗಲೇ ಕಾರಿನಲ್ಲಿ ಕುಳಿತು ಅವಳ ಮನೆಯ ಪಡಸಾಲೆಗೆ ಆಗಮಿಸುತ್ತಿದೆ ಎಂದು.

ರಾತ್ರಿ ಬಂದೊಡನೆ ಅಪ್ಪ ಅಮ್ಮನಲ್ಲಿ ನಡೆದ ಘಟನೆಯನೆಲ್ಲಾ ಹೇಳಿ ತಾನು ಕೆಲಸ ಬಿಟ್ಟೆ ಎಂದಿದ್ದಳು. ಅವರಿಗೆ ಮಗಳು ಸತ್ಯಂ ರಾವ್ ಅವರಲ್ಲಿ ಕೆಲಸ ಮಾಡುವುದು ಮುಂಚಿನಿಂದಲೂ ಇಷ್ಟವಿರಲಿಲ್ಲ. ಹಾಗಾಗಿ ಅವರಿಗೆ ಅವಳ ನಿರ್ಧಾರ ಆನಂದ ತಂದಿತ್ತು.‌ ಇವಳು ಇನ್ನೊಂದು ಕೆಲಸ ಅಂತ ಹುಡುಕುವ ಮುನ್ನ ಯೋಗ್ಯ ವರನನ್ನು ನೋಡಿ ಮದುವೆ ಮಾಡಬೇಕು ಎಂಬ ಯೋಚನೆ ಅವರದ್ದು. ಮಧ್ಯಮ ವರ್ಗದ ಸಂಪ್ರದಾಯಸ್ಥ ಧರ್ಮಭೀರು ಕುಟುಂಬವದು. ಮಾನ ಮರ್ಯಾದೆಗೆ ಅಂಜುವ ಜನರು. ಮನೆಯ ವಾತಾವರಣವೂ ಹಾಗೆಯೇ ಇತ್ತು. ನಗರದಿಂದ ಹೊರಭಾಗದಲ್ಲಿದ್ದ ಮನೆಯಲ್ಲಿ ಗ್ರಾಮ್ಯ ಸೊಗಡು ಹಾಸುಹೊಕ್ಕಾಗಿತ್ತು.

ಆದರೆ ಮಕ್ಕಳಿಬ್ಬರೂ ಆಧುನಿಕತೆಯ ಪ್ರಭಾವಳಿಗೆ ಸಿಕ್ಕವರು. ಚೈತಾಲಿ ಓದು ಮುಗಿದ ಮೇಲೆ ಹಟ ಹಿಡಿದು ಕೆಲಸಕ್ಕೆ ಸೇರಿದ್ದಳು. ಅವರು ಬೇಡವೆಂದರೂ ಕೇಳಿರಲಿಲ್ಲ. ಅವಳಿಗೆ ಆಧುನಿಕ, ಸಿರಿವಂತ ಜೀವನದ ಆಸೆ ಜಾಸ್ತಿ. ಹಾಗಂತ ದುರಾಸೆಯಲ್ಲ. ಆ ಜೀವನ ಶೈಲಿಯ ಮೇಲೆ ವ್ಯಾಮೋಹ. ಯಾವುದೋ ಸ್ಟಾರ್ ಹೋಟೆಲ್ ರಿಸೆಪ್ಷನಿಸ್ಟ್, ದೊಡ್ಡ ಸಿರಿವಂತರ ಪಿ.ಎ ಇಂತ ಕೆಲಸಗಳೇ ಬೇಕು ಎಂಬ ಹಂಬಲವಿತ್ತು. ಅದಕ್ಕೆ ಸರಿಯಾಗಿ ಒದಗಿಬಂದಿತ್ತು ಈ ರಾವ್ ಅವರ ಪಿ.ಎ ಕೆಲಸ. ಮನೆಯವರನ್ನು ಹಟ ಹಿಡಿದು ಒಪ್ಪಿಸಿ ಸೇರಿದ್ದು ಕೆಲಸಕ್ಕೆ.

ಮೊದಲಿಗೆ ಎಲ್ಲಾ ಸುಂದರವೆನಿಸಿದರೂ ನಿಧಾನವಾಗಿ ಶ್ರೀಮಂತಿಕೆಯ ಸೋಗಿನ ಬದುಕಿನ ಮರ್ಮ ಅರಿವಾಗತೊಡಗಿತ್ತು. ಆ ಹಣದ ಜಗಮಗದ ಕೃತಕ ಬೆಳಕಿನ ತಳದಲ್ಲಿ ಅವಿತಿರುವ ಸೋಗಿನ ಬದುಕು, ಬಗೆ ಬಗೆ ಹುನ್ನಾರಗಳು ಅವಳನ್ನು ಚಿಂತೆಗೆ ದೂಡಿತ್ತು. ಅದೇನೇ ಇದ್ದರೂ ಆ ಇಡೀ ವಾತಾವರಣದಲ್ಲಿ ಚೈತಾಲಿಗೆ ಅತ್ಯಾಪ್ತೆಯಾಗಿ ಕಂಡದ್ದು ಸಮನ್ವಿತಾ. ಅವಳೆಂದರೆ ಅಪರಿಮಿತ ಪ್ರೀತಿ, ಗೌರವ. ಕಸ್ತೂರಿ ಮೃಗದಂತೆ ತನ್ನ ಸುತ್ತಮುತ್ತೆಲ್ಲಾ ಕಂಪುಬೀರುವ ಅವಳ ಒಳ್ಳೆಯತನ, ಯಾವ ಭೇದಭಾವವಿಲ್ಲದೆ ಎಲ್ಲರೊಡನೆ ಒಡಗೂಡುವ ನಡವಳಿಕೆ ಚೈತಾಲಿಗೆ ಅವಳ ಮೇಲಿದ್ದ ಗೌರವವನ್ನು ನೂರ್ಮಡಿಗೊಳಿಸುತ್ತಿತ್ತು.

ಅಂತಹ ಸಮನ್ವಿತಾಳನ್ನೇ ತಮ್ಮ ಬದುಕಿನಲ್ಲಿ ಉಳಿಸಿಕೊಳ್ಳಲು ಯೋಗ್ಯತೆಯಿಲ್ಲದ ಈ ಜನ ನಾಳೆ ತನ್ನೊಂದಿಗೆ ಹೇಗೆಲ್ಲಾ ವ್ಯವಹರಿಸಬಹುದು ಎಂಬ ಯೋಚನೆ ತಲೆಯಲ್ಲಿ ಸುಳಿದದ್ದೇ ಹಿಂದೆಮುಂದೆ ಯೋಚಿಸದೆ ಕೆಲಸ ಬಿಟ್ಟಿದ್ದಳು. ಆ ಬಗ್ಗೆ ಅವಳಿಗ್ಯಾವ ಬೇಸರವೂ ಇರಲಿಲ್ಲ. ಈಗ ಬೇರೆ ಯಾವುದಾದರೂ ಕೆಲಸ ಹುಡುಕಬೇಕೆಂಬ ಯೋಚನೆಯೊಂದೇ ಅವಳ ತಲೆಯಲ್ಲಿ. ಜೊತೆಗೆ ಒಮ್ಮೆ ಸಮನ್ವಿತಾಳನ್ನು ಕಂಡು ಬರಬೇಕೆನಿಸುತ್ತಿತ್ತು.

ಅದೇ ಯೋಚನೆಯಲ್ಲಿಯೇ ಆಗತಾನೆ ಕೊಯ್ದ ಮಲ್ಲಿಗೆ ಹೂವನ್ನು ಎದುರು ಹಾಕಿಕೊಂಡು ಮಾಲೆ ಕಟ್ಟುತ್ತಿದ್ದಳು. 

"ಏನೇ ಸುಬ್ಬವ್ವ, ಅದೇನು ಇವತ್ತು ಮನೇಲೇ ಇದ್ದೀಯಾ? ಸೂಟಿಯೇನು ಇವತ್ತು?" ಕೇಳಿತು ಗುಂಡಮ್ಮ.  

ಚೈತಾಲಿ ಹಣೆಯೊತ್ತಿಕೊಂಡು,"ಅಜ್ಜಿ, ಇನ್ನೊಂದ್ಸಲ ಸುಬ್ಬವ್ವ ಅಂದ್ರೆ ಸರಿಯಿರೋಲ್ಲ ನೋಡು ಮತ್ತೆ. ಅದೇನ್ ಬೆಳಿಗ್ಗೆಯಿಂದ ಹಾಳಾಗಿರೋ ಟೇಪ್ ರೆಕಾರ್ಡರ್ ತರಾ ಅದೇ ಕೇಳ್ತಿದ್ದೀ? ಇದು ಐದನೇ ಸಲ ಕೇಳ್ತಿರೋದು ನೀನು. ಹೇಳ್ದೇ ತಾನೇ ಆ ಕೆಲಸ ಬಿಟ್ಟೆ ಅಂತ. ನಿಂದೊಳ್ಳೆ ಕಾಟ ನನಗೆ" ರೇಗಿದಳು.

ಗುಂಡಮ್ಮ ಚೈತಾಲಿಯ ಅಜ್ಜಿ. 90+ ವಯಸ್ಸು. ಕಿವಿ ಸರಿಯಾಗಿ ಕೇಳಿಸದು. ಹಾಗೇ ಮರೆವು ವಿಪರೀತ ಜಾಸ್ತಿ. ಅತೀ ಮಡಿಯ ಹೆಂಗಸು. ಶೌಚಕ್ಕೆ ಹೋದಾಗಲೆಲ್ಲ ಸ್ನಾನವಾಗಬೇಕು. ಬೇರೆಲ್ಲ ಮರೆಯುವಾಕೆ ದಿನಕ್ಕೆ ಮೂವತ್ತು ಬಾರಿ ಸ್ನಾನ ಮಾಡುವುದೊಂದನ್ನು ಮರೆಯದಿದ್ದದ್ದು ವಿಸ್ಮಯವೇ ಸರಿ. ದಿನ ಬೆಳಿಗ್ಗೆ ತಯಾರಾಗಿ ಹೋಗುತ್ತಿದ್ದ ಮೊಮ್ಮಗಳು ಮನೆಯಲ್ಲೇ ಇದ್ದದ್ದು ಕಂಡು ಐದಾರು ಬಾರಿ ಅದೇ ಪ್ರಶ್ನೆ ರಿಪೀಟ್ ಮೋಡ್ ನಲ್ಲಿ ಬಂದಿತ್ತು. ಜೊತೆಗೆ ಸುಬ್ಬವ್ವ ಎಂಬ ನಾಮಧೇಯ ಬೇರೆ. ಅದು ಚೈತಾಲಿಯ ಹುಟ್ಟು ಹೆಸರು. ಜಗವೆಲ್ಲ ಅವಳನ್ನು ಚೈತಾಲಿ ಎಂದರೂ ಅವಳಜ್ಜಿಗೆ ಅವಳು ಸುಬ್ಬವ್ವನೇ.

"ಅಯ್ಯೋ, ಈಗ ನಾನೇನು ಕೇಳ್ಬಾರದ್ದು ಕೇಳಿದ್ದೇ ಅಂತ ಈ ಪಾಟಿ ಹಾರಾಡ್ತೀ? ಕೆಲ್ಸ ಬುಟ್ಟಿದ್ದು ಒಳ್ಳೆದಾತು ತಗಾ. ಹೆಣ್ಣ್ ಮಕ್ಳು ಹಿಂಗೆಲ್ಲ ಹೊರಹೋಗಿ ತಿರ್ಗುದು ಅದೇನ್ ಚಂದಾ ಅಂತೀನಿ? ನಮ್ ಕಾಲದಾಗೆ ಸರೀಗಿತ್ತು. ಹೆಣ್ಮಕ್ಕಳು ಅಂದ್ರೆ ಲಕ್ಷಣವಾಗಿ ಅಡಿಗೆ ಕೆಲ್ಸ ಬೊಗ್ಸೆ ಕಲ್ತು ಕೊಟ್ಟ ಮನೇಲೀ ತವ್ರಿಗೆ ಕೀರ್ತಿ ತರ್ರ್ಬೇಕು. ಅದು ಬಿಟ್ಟು ಕೆಲಸ ಕಛೇರಿ ಅಂತ ಸುತ್ತಿದ್ರೇ ಅಡಿಗೆ ಗಂಡ ಮಾಡ್ಲಕ್ಕೇನು? ಅದೇನ್ ಚಂದನೇನೋ? ದಿವಿನಾಗಿ ಸೀರೆ ಉಟ್ಟು, ಕಾಸಗಲ ಕುಂಕುಮ, ಕೈಗೆ ಬಳೆ ಇಟ್ಟು ಮನ್ಯಾಗ ಇರೋದ್ ಬುಟ್ಟು ಅದೇನ್ ಮೊಣಕಾಲ್ ಮೇಲೆ ಬಟ್ಟೆ ಹಾಕಿ, ಕೈಗೆ ಬಳೆ ಇಲ್ಲ, ಕಿವಿಲೀ ವಾಲೆ ಇಲ್ಲ, ಬೋಳು ಹಣೆ ಹೊತ್ತು ಗಂಡ ಸತ್ತ ಮುಂಡೆ ತರ ಹೋಗೋ ಚಂದಾನೋ..‌……..."  ರಾಗ ಎಳೆದರು ಗುಂಡಮ್ಮ.

"ಹೌದೇ ಅಕ್ಕ, ಸ್ವಲ್ಪ ಗುಂಡುನ ನೋಡಿ ಕಲಿ. ನೋಡು ಎಷ್ಟ್ ಆರಾಮಾಗಿ ದಿನಕ್ಕೆ ಮಿನಿಮಮ್ ಇಪ್ಪತ್ತೈದ್ ಸಲ ಸ್ನಾನ ಮಾಡಿ, ಮಡಿ ಮಾಡಿ, ಜಪಸರ ಹಿಡ್ಕೊಂಡು ದೇವ್ರ ಕಿವಿ ತೂತಾಗಿ ರಕ್ತ ಬರೋವರೆಗೆ ಜಪಮಾಡುತ್ತೆ. ಮೋಸ್ಟಲೀ ಗುಂಡು ಕಾಟ ತಾಳಕಾಗ್ದೇ ದೇವ್ರು ಕಲ್ಲಾಗಿರ್ಬೇಕು..‌….. " ಆಗ ತಾನೇ ಕಾಲೇಜಿನಿಂದ ಬಂದ ಅವಳ ತಮ್ಮ ಚೇತನ್ ಅಜ್ಜಿಯನ್ನು ಕಿಚಾಯಿಸುತ್ತಾ ಟಿ.ವಿ ಹಾಕಿದ.

ಕಾಲೇಜಿನಲ್ಲಿ ಓದುತ್ತಿದ್ದ ಅವನಿಗೆ ಪಾಶ್ಚಾತ್ಯ ‌ವ್ಯಾಮೋಹ ಹೆಚ್ಚೇ. ತನ್ನ ಚಿತ್ರ ವಿಚಿತ್ರ ಸ್ವಾಗ್ ಸ್ಟೈಲ್ ಗಳಿಂದಾಗಿ ಆಗಾಗ ಅವನಜ್ಜಿಯಿಂದ ಮಂಗಳಾರತಿ ಪೂಜೆ ಆಗುತ್ತಿದ್ದದ್ದೂ ಉಂಟು.

"ಅಷ್ಟು ಮಡಿ ಮೈಲಿಗೆ ಇಲ್ಲಾಂದ್ರೇ ಅದೆಂತ ಚೆಂದ? ನನ್ನ ಮಡಿ ಬಗ್ಗೆ ಆಡ್ಕೊಂಡ್ರೇ ನರಕಕ್ಕೆ ಹೋಗ್ತಿ ಮುಂಡೆದೇ" ಶಾಪ ಹಾಕಿತು ಮುದುಕಿ.

"ಉದಯ ಕಾಲದಲೆದ್ದು ಗಡಗಡ ನಡುಗುತ 

ನದಿಯಲಿ ಮಿಂದೆನೆಂದು ಹಿಗ್ಗುತಲಿ

ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲ್ಲಿದ್ದವರಿಗಾಶ್ಚರ್ಯ ತೋರುವುದು

ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ

ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು"  

ಪುರಂದರ ದಾಸರ ಎರಡು ಕೀರ್ತನೆಗಳನ್ನು mash up ಮಾಡಿ ಕರ್ಕಶ ಕಂಠದಲ್ಲಿ ಅರಚತೊಡಗಿದ ಚೇತನ್. ಚೇತನನ ಕಂಠ ಸಿರಿ ಕೇಳುತ್ತಾ ಗುಂಡಮ್ಮನ ಚೇತನವೆಲ್ಲಾ ಕಾಲಬುಡದಲ್ಲಿ ಸೋರಿ ಅಚೇತನವಾಗತೊಡಗಿದರು.

ಅವನ ಅಮೋಘ ಕಂಠದ ಗಾರ್ಧಬ ಗಾನ ಕೇಳಲಾಗದೇ "ಮೊದ್ಲು ಹೋಗಿ ಸ್ನಾನ ಮುಗಿಸಿ ಬಾ. ಕಾಲೇಜಿನಿಂದ ಬಂದ ಕೂಡ್ಲೇ ಟಿ.ವಿ ಹಾಕ್ಕೊಂಡು ಕೂತಿರ್ತಿಯಲ್ಲ" ಗದರಿಸಿದಳು ಚೈತಾಲಿ. ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದ ಅವನಮ್ಮನೂ ಕೂಡಾ ಸೇರಿದರು ಬೈಯಲು.

ಅವನ ಹಾಡೇನೋ ನಿಂತಿತು. ಆದರೂ ಅವನೇನು ಸ್ನಾನಕ್ಕೆ ಹೋಗಲಿಲ್ಲ. ಅಲ್ಲೇ ಚೇರಿಗೊರಗಿ ಟಿ.ವಿ ಚಾನೆಲ್ ಬದಲಾಯಿಸಿ ಮ್ಯೂಸಿಕ್ ಚಾನೆಲ್ ಒಂದನ್ನು ಹಾಕಿದ. ಯಾವುದೋ ಒಂದು ಹಾಡು.... ಒಂದಷ್ಟು ಜನ ಗಂಡು ಹೆಣ್ಣುಗಳು ಹುಚ್ಚು ಕುಣಿತ ಕುಣಿಯುತ್ತಿದ್ದರು. ಇದನ್ನು ಕಂಡು ಮಡಿ ಗುಂಡಮ್ಮನ ಪಿತ್ತ ನೆತ್ತಿಗೇರಿತು.

"ಹಾಳು ಮುಂಡೇವು. ಅಲ್ಲಾ ಆ ಗಂಡ್ಮಕ್ಕಳು ಲಕ್ಷಣವಾಗಿ ಮೈ ತುಂಬಾ ಬಟ್ಟೆ ಹಾಕ್ಕೊಂಡವೆ. ಈ ಹೆಣ್ಮಕ್ಕಳಿಗೆ ಏನ್ ಬಂದದೆ ದೊಡ್ಡ್ ರೋಗ ಅಂತ. ಅದೆಂತ ಬಟ್ಟೆನೋ? ಈ ಪಿಚ್ಚರ್ ಮುಂಡೇವ್ಕೆ ಗಂಡಸರಿಗೆ ಮೈತುಂಬಾ ಬಟ್ಟೆ ಹಾಕ್ಸಕೆ ಕಾಸಿರುತ್ತೆ. ಹೆಣ್ಣ್ಮಕ್ಕಳಿಗೆ ಬಟ್ಟೆ ಹಾಕ್ಸಕೆ ಮಾತ್ರ ಯಾಕೆ ಕಾಸಿಲ್ಲ ಅಂತೀನಿ? ಇವರ ಮನೆ ಕಾಯೋಗ, ಛೇ ನಮ್ಮ್ ಕಾಲದಾಗೆ ಹಿಂಗಿರ್ಲಿಲ್ಲಪ್ಪ" ಅವಲತ್ತುಕೊಂಡರು.

"ಇನ್ಹೇಗಿತ್ತು ನಿನ್ನ ಕಾಲದಲ್ಲಿ. 'ಪುಟ್ಟಗೌರಿ' ಅಲ್ಲಲ್ಲ 'ಮಂಗಳಗೌರಿ ಮದುವೆ' ತರಾ ನಿಂದೂ 'ಗುಂಡುಗೌರಿ ಮದುವೆ' ಆಗಿತ್ತಾ ತಾತನ ಜೊತೆ? ಇಲ್ಲಾ 'ಅಗ್ನಿಸಾಕ್ಷಿ' ತರಾ 'ಮಡಿಸಾಕ್ಷಿ'ಯಾಗಿ ತಮ್ಮ ಪರಿಣಯ ಆಗಿತ್ತಾ?" ಕೇಳಿದ ಗುಂಡುವಿನ ಹೆಗಲ ಮೇಲೆ ಕೈ ಹಾಕಿ.

ಅವನ ಕೈ ಹೆಗಲು ಸೋಕಿದ್ದೇ ಹಾವು ಕಂಡವರಂತೆ ಕುಮುಟಿ ಎದ್ದ ಮುದುಕಿ, "ಅಯ್ಯೋ ಅನಿಷ್ಟವೇ... ನನ್ನ ಮಡಿಯೆಲ್ಲ ಮೈಲಿಗೆ ಆಯ್ತಲ್ಲೋ, ಕಾಲೇಜಿಂದ ಬಂದೋನಿಗೆ ಒಂದು ಚೊಂಬು ನೀರು ಸುರ್ಕೊಳ್ಳೋಕೆ ಏನೋ ದೊಡ್ಡ್ ರೋಗ ನಿಂಗೆ, ಪಾಪಿಷ್ಟ ಮುಂಡೇದು" ಬೈಗುಳದ ಸಹಸ್ತ್ರ ನಾಮಾರ್ಚನೆ ಮಾಡುತ್ತಾ ಬಚ್ಚಲಿಗೆ ನಡೆದರು ಗುಂಡಮ್ಮ.

ಇದೇ ಸಮಯದಲ್ಲಿ ಅತ್ತ ಹಾಸ್ಪಿಟಲ್ ಕಡೆಯಿಂದ ಅಭಿಯೊಂದಿಗೆ ಡಿಟೆಕ್ಟಿವ್ ವೈಭವ್ ಅವರು ತಮ್ಮ ಪ್ರಿಯತಮೆಯನ್ನು ಕಾಣಲು ಕಾತುರದಿಂದ ಆಗಮಿಸುತ್ತಿದ್ದರು. ಸತ್ಯಂ ರಾವ್ ಅವರ ಬಂಗಲೆಯನ್ನು ದಾಟಿ ನಗರದ ಹೊರವಲಯದತ್ತ ಕಾರು ವೇಗವಾಗಿ ಓಡುತ್ತಿತ್ತು. ಆದರೂ ಅದು ನಿಧಾನವಾಗಿ ಓಡುತ್ತಿದೆ ಎನಿಸಿತು ವೈಭವನಿಗೆ. 

"ಬೀರ್ ಫಾಸ್ಟಾಗಿ ಹೋಗೋ. ಯಾಕಿಷ್ಟು ನಿಧಾನ?"  ಹೇಳೇ ಬಿಟ್ಟ ಧೈರ್ಯ ಮಾಡಿ.

"ಯಾಕೆ ಮಗಾ, 'ಅತೀ ವೇಗ ತಿಥಿ ಬೇಗ' ಅಂತ ಕೇಳಿಲ್ವಾ? ಒಳ್ಳೆ ಆರ್ ತಿಂಗ್ಳಿಗೆ ಹುಟ್ಟ್ದೋನ ಹಾಗೆ‌ ಆಡ್ತೀಯಲ್ಲೋ. ಸ್ವಲ್ಪ ಸುಮ್ನಿರು" ಗದರಿಸಿದ.

ಕಾರು ಚೈತಾಲಿಯ ಮನೆ ಮುಂದೆ ನಿಂತಿತು. ಮನೆ ಎದುರಿನ ರಂಗೋಲಿ, ಸುತ್ತ ಮುತ್ತಲಿನ ಹೂವಿನ ಗಿಡಗಳು ಎಲ್ಲವನ್ನೂ ಕುತೂಹಲದಿಂದ ಡಿಟೆಕ್ಟಿವ್ ಕಣ್ಣಿನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದವನನ್ನು ನೋಡಿ, "ಏನೋ ಮಾವನ ಮನೆನ ಕಣ್ಣಲ್ಲೇ ಸ್ಕಾನಿಂಗ್ ಮಾಡ್ತಿದ್ದೀ. ಮನೆ ಪರಿಸರ ನೋಡಿ ಒಳಗಿರೋ ಅತ್ತೆ ಮಾವನ್ನ ಅಳೆಯೋ ಯೋಚನೆಯಾ?" ಕಾಲೆಳೆದ ಅಭಿರಾಮ್.

"ಶು.... ಅತ್ತೆ, ಮಾವ, ಹೆಂಡತಿ ಎಲ್ಲಾ ಸೆಕೆಂಡರಿ, ಮೊದ್ಲು ನಾನು ಡಿಟೆಕ್ಟಿವ್. ಹೋದ ಜಾಗವನ್ನು ಕೂಲಂಕುಷವಾಗಿ ಪರಿಶೀಲಿಸುವುದು ಪತ್ತೇದಾರನಾಗಲು ಬೇಕಾದ ಮೊದಲ ಕ್ವಾಲಿಫಿಕೇಷನ್ಞೀರಜಾ ರ" ಎದೆಯುಬ್ಬಿಸಿ ಹೇಳಿದ. ಅಷ್ಟರಲ್ಲಿ ಅಭಿರಾಮ್ ಆಫೀಸಿನಿಂದ ಕರೆ ಬಂದಿದ್ದರಿಂದ ವೈಭವನಿಗೆ ಒಂದೆರಡು ನಿಮಿಷ ಕಾಯುವಂತೆ ಹೇಳಿ ಅಲ್ಲೇ ಮಾತಾಡುತ್ತಾ ನಿಂತ. 

ಆದರೆ ಡಿಟೆಕ್ಟಿವ್ ಸಾಹೇಬರು ಸುಮ್ಮನಿರಬೇಕಲ್ಲ.... ನಿಧಾನಕ್ಕೆ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕಿ ಗೇಟಿನೊಳಗೆ ಕಾಲಿಟ್ಟೇಬಿಟ್ಟ. ಹಾಗೇ ಸುತ್ತಮುತ್ತ ಪರಿಶೀಲಿಸುತ್ತಿದ್ದವನ ಮೂಗಿಗೆ ಏನೋ ವಾಸನೆ ಬಡಿಯತೊಡಗಿತು. ಜೊತೆಗೆ ಪಕ್ಕದಿಂದ ಏನೋ ಸದ್ದು. ನಮ್ಮ ಶೆರ್ಲಾಕ್ ಹೋಮ್ಸ್ ಅವರು ನಿಧಾನವಾಗಿ ಸದ್ದಿನ ಜಾಡನ್ನು ಹಿಂಬಾಲಿಸಿದಾಗ ಎದುರು ಒಣ ಹುಲ್ಲಿನ ಬಣವೆ ಕಂಡಿತು. ಇದೇನಿರಬಹುದು? ಎಂದು ಯೋಚಿಸಿದ. ತಿಳಿಯಲಿಲ್ಲ. ಆದರೆ ಸದ್ದು ಅದರ ಹಿಂಭಾಗದಿಂದ ಬರುತ್ತಿತ್ತು. ಜೊತೆಗೆ ಆ ವಾಸನೆ ಇನ್ನಷ್ಟು ದಟ್ಟವಾಗಿತ್ತು. (ಪಾಪ ಸಗಣಿ, ಗಂಜಲದ ವಾಸನೆ ಹೇಗಿರುತ್ತೆ ಅಂತ ಗೊತ್ತಿಲ್ಲ ನಮ್ಮ ಪತ್ತೇದಾರರಿಗೆ)

ಥಟ್ಟನೇ ಅವನ ತಲೆಯಲ್ಲಿನ LED ಬಲ್ಬ್ ಹೊತ್ತಿಕೊಂಡಿತು. 'ಮೋಸ್ಟಲೀ ಇದರ ಹಿಂದೆ ಹಾವು ಗೀವು ಏನಾದ್ರೂ ಇರಬಹುದಾ? ವಾಸನೆ ಬರ್ತಿರೋದು ನೋಡಿದ್ರೆ ಅನಕೊಂಡ ನೇ ಇರ್ಬಹುದಾಂತ. ಇರ್ಲೀ ನಾನೂ ನೋಡೇ ಬಿಡ್ತೀನಿ' ಎಂದವನೇ ಎರಡು ಕೈಗಳನ್ನು ಮುಂದೆ ಚಾಚಿ ಕಬ್ಬಡಿ ಆಡುವವನಂತೆ ಅನಕೊಂಡಾ ಹಿಡಿಯಲು ತಯಾರಾದ.

ಸದ್ದಾಗದಂತೆ ಹುಲ್ಲಿನ ಬಣವೆಯ ಹಿಂಬದಿಗೆ ಬಂದವನು, ಲಬಕ್ಕನೇ ಎರಡು ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡು ಅನಕೊಂಡ ಹಿಡಿದೇಬಿಟ್ಟೆ‌ ಅಂತ ಕಣ್ಣ್ಬಿಟ್ಟು ನೋಡ್ತಾನೆ…….

ಎದುರಿಗೆ............

ಆಳೆತ್ತರದ ಗೀರ್ ಹಸು......‌‌. 

ಅವನನ್ನೇ ಗುರಾಯಿಸಿಕೊಂಡು ನೋಡ್ತಿದಿದ್ದು ಝಾಡಿಸಿ ಒದ್ದು ಬಿಡೋದಾ?

ಪಾಪ ಅದಾದ್ರೂ ಏನ್ಮಾಡುತ್ತೆ?

ಈ ಎಡವಟ್ಟು ವೈಭವ್ ಅನಕೊಂಡಾ ಅಂತ ಅದ್ರ ಬಾಲ ಹಿಡಿದ್ರೆ ಅದು ಸುಮ್ನೆ ಬಿಡುತ್ತಾ?

ಅದು ಒದ್ದ ಏಟಿಗೆ ಡಿಟೆಕ್ಟಿವ್ ಸಾಹೇಬ್ರು ಎದ್ನೋ ಬಿದ್ನೋ ಅಂತ ತರಾತುರಿಲಿ ಸೊಂಟ ಹಿಡ್ಕೊಂಡು ಒಂದೇ ಓಟ. ಇವನ ಉಸೇನ್ ಬೋಲ್ಟ್ ಮಾದರಿಯ ಓಟದ ಪರಿಕಂಡು ಅಲ್ಲೇ ಅಂಗಳದ ತುಂಬಾ ಕಿವಿಗೆ ಗಾಳಿ ಹೊಕ್ಕಂತೆ ಓಡುತ್ತಿದ್ದ ಪುಟಾಣಿ ಕರುವಿಗೆ ಕನ್ಫ್ಯೂಷನ್ ಆಯ್ತು. ಯಾರಿವ ನನಗೇ ಕಾಂಪಿಟೇಶನ್ ಕೊಡ್ತಾನೆ ಅಂದಿದ್ದೆ ಅವನ ಹಿಂದೆಯೇ ಓಡಿಕೊಂಡು ಬಂತು. ಈಗ ವೈಭವ್ ಪತ್ತೇದಾರಿಕೆ, ಪ್ರೀತಿ,ಪ್ರೇಮ ಎಲ್ಲಾ ಮರೆತು 'ಯಪ್ಪಾ ಜೀವ ಉಳಿದ್ರೆ ಸಾಕು' ಎಂಬಂತೆ ಓಡತೊಡಗಿದ.

ಹಾಗೆ ಓಡುವ ಗಡಿಬಿಡಿಯಲ್ಲಿ ಆಗಷ್ಟೇ ಒಂದು ಚೊಂಬು ನೀರು ಸುರ್ಕೊಂಡು, ಮೈಲಿಗೆ ಕಳೆದು ಮಡಿಶುದ್ಧವಾಗಿ ಬರುತ್ತಿದ್ದ ಗುಂಡುಗೆ ಡಿಕ್ಕಿಹೊಡೆದು ಮುಂದೆ ಓಡಿಬಿಟ್ಟ ವೈಭವ್.

ಅಷ್ಟೇ ಆಗಿದ್ರೇ ಪರವಾಗಿರಲಿಲ್ಲ. ಆದರೆ ಇವ 'ಡೀ' ಹೊಡೆದ ರಭಸಕ್ಕೆ ಮುದುಕಿ ಬ್ಯಾಲೆನ್ಸ್ ತಪ್ಪಿ ಅಂಗಳಕ್ಕೆ ಸಾರಿಸಲು ರಾಶಿ ಹಾಕಿದ್ದ ಸಗಣಿ ಮೇಲೆ ಬೀಳೋದಾ ಶಿವನೇ? ಕಷ್ಟಪಟ್ಟು ಎದ್ದುಕೊಂಡಿತು ಗುಂಡಜ್ಜಿ. ಬಿದ್ದ ಏಟಿಗೆ, ಮಡಿ ಎಕ್ಕುಟ್ಟಿ ಹೋದ ಕೋಪಕ್ಕೆ ಒರಲತೊಡಗಿತು ಮುದುಕಿ.

ಆ ಸದ್ದಿಗೆ ಮನೆಯೊಳಗಿದ್ದವರು ಹೊರ ಬಂದರೆ, ಫೋನಿನಲ್ಲಿದ್ದ ಅಭಿರಾಮ್ ಗೇಟಿನಿಂದ ಒಳಬಂದ.

ಅಜ್ಜಿಯ ಒರಲಾಟ ಕೇಳಿ ಕರು ಹೆದರಿ ಕೊಟ್ಟಿಗೆಗೋಡಿತು. ವೈಭವ್ ತಿರುಗಿದರೇ ಎದುರಿಗೆ...... ಮೈತುಂಬಾ ಸಗಣಿ ಮೆತ್ತಿಕೊಂಡು ನಿಂತಿತ್ತು ಒಂದು ಬಾಡಿ...... ಜೊತೆಗೆ ಅದೇ ವಾಸನೆ.....

"ಓಹ್ ಶಿಟ್ ಮ್ಯಾನ್. ಇಟ್ಸ್ ಘೋಸ್ಟ್. ಘೋಸ್ಟ್ ಈ ತರಾ ಸ್ಮೆಲ್ ಇರುತ್ತೆ ಅಂತ ನಂಗೊತ್ತಿರಲಿಲ್ಲ. ಇಟ್ಸ್ ಘೋಸ್ಟ್, ಎಲ್ಲಾ ಓಡಿ ಕ್ವಿಕ್" ಎಂದರಚಿದ.

ಗುಂಡಮ್ಮನ ಅಪರಾವತಾರ ಕಂಡು ಮನೆಯವರೆಲ್ಲಾ ಮೂಕವಿಸ್ಮಿತರಾಗಿದ್ದರೆ, ಈ ಎಡವಟ್ಟುರಾಯನ ಯಾಕಾದ್ರೂ ಕರ್ಕೋಂಡ್ಬಂದ್ನಪ್ಪ ಎಂದು ಸಿಟ್ಟಾಗಿದ್ದ ಅಭಿ.

ಅಷ್ಟರಲ್ಲಿ ಶಾಕಿನಿಂದ ಎಚ್ಚೆತ್ತ ಚೈತಾಲೀ, "ಯಾರ್ರೀ ನೀವು? ಏನ್ ಮಾಡ್ತೀದ್ದೀರಾ ಇಲ್ಲಿ? ನಮ್ಮನೆಯೊಳಗೆ ಯಾಕೆ ಬಂದ್ರೀ?" ಕೇಳಿದಳು ಕೋಪದಲ್ಲಿ.

"ಅಯ್ಯೋ ನನ್ನ ಬಿಡು ಕುಳ್ಳಿ ಡಾರ್ಲಿಂಗ್, ಮೊದ್ಲು ಈ ಘೋಸ್ಟ್ ಓಡ್ಸಬೇಕು. ಎಲ್ಲಿ ಬಡಿಗೆ ಕೊಡಿ."

"ಏನು? ಕುಳ್ಳಿ ಡಾರ್ಲಿಂಗಾ? ಲೇ ಯಾವನಲೇ ನೀನು? ಡಾರ್ಲಿಂಗ್ ಗೀರ್ಲಿಂಗ್ ಅಂದ್ರೆ ನನ್ಮಗನೇ ಸೀಲಿಂಗ್ ಗೆ ನೇತ್ಹಾಕಿ ಬಿಡ್ತೀನಿ" ಕನಲಿದಳು.

"ಅಯ್ಯೋ ಬೇಬಿ ಸುಮ್ನಿರು ಸ್ವಲ್ಪ... ಮೊದ್ಲು ಈ ಭೂತಕ್ಕೆ ಹಿಡ್ದಿರೋ ಗ್ರಹಚಾರ ಬಿಡ್ಸಬೇಕು" ಬಡಿಗೆಯಿಂದ ಬಡಿಯಲು ತಯಾರಾದ.

"ಅಯ್ಯೋ ಯಾರಾದ್ರೂ ಕಾಪಾಡ್ರೋ, ನನ್ನ ಪ್ರಾಣ ತೆಗಿಯುತ್ತೇ ಶನಿ ಮುಂಡೇದು" ಎಂದು ಕಿರುಚತೊಡಗಿದರು ಗುಂಡಮ್ಮ.

"ರೀ ಮಿಸ್ಟರ್ ಬಿಡ್ರೀ, ಘೋಸ್ಟು ಇಲ್ಲ ಬೀಸ್ಟೂ ಇಲ್ಲ. ಅದು ನಮ್ಮಜ್ಜಿ. ಬಿಡ್ರೀ ಅವ್ರನ್ನ" ಎಂದ ಚೇತನ್

ಎಚ್ಚೆತ್ತುಕೊಂಡ ಅಭಿ ಹೀಗೆ ಬಿಟ್ಟರೆ ಹೊಡೆದೇ ಬಿಡುತ್ತಾನೆ ಎಂದುಕೊಂಡು ಓಡಿಬಂದು ಅವನ ಕೈಯಲ್ಲಿದ್ದ ಬಡಿಗೆ ಎಸೆದ. "ಲೋ ಹೇಳಿದ್ದೆ ತಾನೇ. ಹೊರಗೇ ನಿಂತಿರು ನಾನು ಫೋನಲ್ಲಿ ಮಾತಾಡೋವರ್ಗೂ ಅಂತ. ಮತ್ಯಾಕೋ ಒಳಗೆ ಬಂದೆ? ಸ್ವಲ್ಪನೂ ಸೀರಿಯಸ್ನೆಸ್ ಇಲ್ವಲ್ಲ ನಿನಗೆ? ನಾನು ಯಾಕಾದ್ರೂ ಕರ್ಕೊಂಡು ಬಂದ್ನೋ" 

ಅಭಿರಾಮ್ ಮುಖ ಕಂಡದ್ದೇ ಪರಿಚಯ ಹತ್ತಿತು ಚೈತಾಲಿಗೆ. ಅಂದಿನ ಪಾರ್ಟಿಯಲ್ಲಿ ಕಂಡ ನೆನಪಿತ್ತು. ಇವರ್ಯಾಕೆ ತನ್ನ ಮನೆಗೆ ಬಂದಿದ್ದಾರೆ? ಅವಳಿಗೇನೂ ಅರ್ಥವಾಗಲಿಲ್ಲ.

"ನೀವು.......  ನೀವು ಇಲ್ಲೇನು ಮಾಡ್ತಿದ್ದೀರಾ?" ಕೇಳಿದಳು ಗೊಂದಲದಿಂದ.

"ಹಲೋ ಚೈತಾಲಿ, ನಾನು ಅಭಿರಾಮ್ ಶರ್ಮಾ ಅಂತ. ನಿಮ್ಮ ಹತ್ರ ಸ್ವಲ್ಪ ಮಾತಾಡ್ಬೇಕಿತ್ತು. ಅದಕ್ಕೇ ಬಂದ್ವಿ. ಇವ್ನು ವೈಭವ್ ಅಂತ. ನನ್ನ ನಕ್ಷತ್ರಿಕ. ಸ್ವಲ್ಪ ಎಡವಟ್ಟು ಜಾಸ್ತಿ. ಏನೋ ಮಾಡೋಕೆ ಹೋಗಿ ಹೀಗಾಗಿದೆ. ದಯವಿಟ್ಟು ಕ್ಷಮಿಸಿ" ತನ್ನನ್ನು ಪರಿಚಯಿಸಿಕೊಂಡು ಕೈ ಮುಗಿದ.

"ಇರ್ಲಿ ಬಿಡಪ್ಪ. ಏನೋ ಹುಡುಗು ಬುದ್ದಿ. ಗೊತ್ತಿಲ್ದೇ ಆಗಿದೆ ಅಷ್ಟೇ. ಒಳಗೆ ಬನ್ನಿ. ಕುತ್ಕೊಂಡು ಮಾತಾಡುವಿರಂತೆ" ಒಳಗೆ ಕರೆದರು ಚೈತಾಲಿಯ ತಾಯಿ. ಎಲ್ಲರೂ ಒಳ ನಡೆದರು ಗುಂಡಮ್ಮ ಒಬ್ಬರನ್ನು ಬಿಟ್ಟು. "ಮತ್ತೆ ಒಂದು ಚೊಂಬು ನೀರು ಸುರ್ಕೊಂಡು ಬರೋಹಾಗಾಯ್ತು. ಎಲ್ಲಾ ಈ ಪ್ರಾರಬ್ಧದಿಂದ" ಗೊಣಗುತ್ತಾ ಬಚ್ಚಲೆಡೆಗೆ ಹೊರಟಿತು ಮುದುಕಿ.

ಮುಂದೆ ಹೋದ ವೈಭವ್ ತಿರುಗಿ ಬಂದು, "ಸಾರಿ ಓಲ್ಡ್ ಲೇಡಿ, ಗೊತ್ತಾಗ್ಲಿಲ್ಲ. ಬಟ್ ಒಂದು ಚೊಂಬು ನೀರು ಹಾಕ್ಕೊಂಡ್ರೇ ಸಾಲಲ್ಲ. ಒಂದು ಡ್ರಮ್ ಮಿನಿಮಮ್ ಬೇಕು. ನೀವು ಹೂಂ ಅಂದ್ರೆ ನಾನೇ ಬಾವಿಯಿಂದ ನೀರು ಸೇದಿ ಮೇಲೆ ಸುರೀಲಾ?" ಒಂದು ಬಂಪರ್ ಆಫರ್ ಕೊಟ್ಟ.

"ಅಷ್ಟಾವಕ್ರ ಮುಂಡೆದೇ, ಬಿಡೋ ನನ್ನ. ಜೀವನಾದ್ರೂ ಉಳ್ಸೋ" ಬೊಬ್ಬಿರಿಯಿತು ಮುದುಕಿ.

ಅಭಿ ಓಡಿ ಬಂದವನು ಅಜ್ಜಿಯನ್ನು ಅಲ್ಲಿಂದ ಕಳುಹಿಸಿ, "ಅಯ್ಯಾ ಮನೆಹಾಳ, ನೀನು ಬಿಟ್ರೆ ಅಜ್ಜಿನೇ ಬಾವಿಗೆ ಎತ್ತಾಕ್ತೀ. ಮುಚ್ಚ್ಕೊಂಡು ಬಾ. ಇಲ್ಲಿಂದ ವಾಪಾಸಾಗೋವರೆಗೆ ನಿನ್ನ ಬಾಯಿಂದ ಒಂದು ಶಬ್ದ ಬರ್ಬಾರ್ದು ತಿಳೀತಾ" ಎಚ್ಚರಿಕೆ ಹೇಳಿಯೇ ಒಳಕರೆತಂದ.

"ಕುತ್ಕೊಳ್ಳಿ" ಚೇರಿನೆಡೆಗೆ ಕೈ ತೋರಿಸಿ ತಾಯಿಯ ಹಿಂದೆ ಅಡುಗೆಮನೆಯತ್ತ ನಡೆದಳು. ಪುಟ್ಟದಾದರೂ ಅಚ್ಚುಕಟ್ಟಾಗಿತ್ತು ಮನೆ. ಎಲ್ಲೆಡೆ ದೇವರ ಚಿತ್ರಪಟಗಳನ್ನು ಕಂಡು ವೈಭವ್, "ಅಲ್ಲಾ ಇದೇನು ಮನೆಯಾ ಇಲ್ಲಾ ದೇವಸ್ಥಾನವಾ? ಹೇಗೂ ನಮ್ಮ ರಾಜ್ಯದ ರಾಜಕಾರಣಿಗಳು ಮಾಡೋ ಕೆಲ್ಸ ಬಿಟ್ಟು ಮೂರ್ಹೊತ್ತು ಟೆಂಪಲ್ ರನ್ ಮಾಡ್ತಿರ್ತಾರೆ. ಅವರಿಗೆಲ್ಲ ನನ್ನ ಡಾರ್ಲಿಂಗ್ ಮನೆ ಅಡ್ರೆಸ್ ಕೊಟ್ರೆ ಪ್ರಜೆಗಳ ದುಡ್ಡಾದ್ರೂ ಉಳಿಯುತ್ತೆ" ಪಿಸುಗುಟ್ಟಿದ.

"ಈಗ ಸುಮ್ನಿದ್ರೆ ಸರಿ. ಇಲ್ಲಾಂದ್ರೆ ಮಗನೇ ಟೆಂಪಲ್ ರನ್ ಅಲ್ಲ, ನಿನ್ನ ಚಟ್ಟ ಏರಿಸಿ ಸ್ಮಶಾನ ರನ್ ಮಾಡ್ಸಿಬಿಡ್ತೀನಷ್ಟೇ" ಉರಿಗಣ್ಣಿನಲ್ಲಿ ನೋಡುತ್ತಾ ಹೇಳಿದ.

ಕಾಫಿ, ಕುರುಕಲು ತಿಂಡಿ ಸರಬರಾಜಾಯಿತು. ತಿಂದು ಮುಗಿಯುವಷ್ಟರಲ್ಲಿ ನಮ್ಮ ಗುಂಡಮ್ಮನವರ ಮಡಿಯೂ ಆಗಿತ್ತು. ಜಪಸರ ಹಿಡಿದು ಹೊರಬಂದಾಕೆ ಕೆಂಗಣ್ಣಿನಿಂದ ವೈಭವವನ್ನು ನೋಡಿ ದೇವರಕೋಣೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟರು. ವೈಭವ್ ತಲೆಕೆರೆದುಕೊಂಡಾಗ ಚೇತನ್, "ಡೋಂಟ್ ವರಿ ಡ್ಯೂಡ್, ಶಿ ಈಸ್ ಮಡಿ ಗುಂಡಮ್ಮ. ನೀನು ಬೀಳ್ಸಿಲ್ಲಾ ಅಂದಿದ್ರೂ ಏನಾದ್ರೂ ನೆಪ ಹುಡುಕಿ ನೀರು ಸುರ್ಕೊಂಡಿರೋದು ಮುದುಕಿ. ಸ್ನಾನ ಮಾಡೋದು ಗುಂಡು ಹಾಬಿ ಯು ನೋ….. ದಿನಕ್ಕೆ ಕಡಿಮೆ ಅಂದ್ರೂ ಇಪ್ಪತ್ತು ಸಲ ಸ್ನಾನ ಮಾಡುತ್ತೆ ಮಡಿ ಮುದ್ಕಿ. ನಮ್ಮ ದೇಶದಲ್ಲಿ ನೀರಿನ ಪ್ರಾಬ್ಲಂ ಆಗೋಕೆ ಮುಕ್ಕಾಲು ಪರ್ಸೆಂಟ್ ಈ ಕಾಗೆ ಮುದ್ಕಿನೇ ಕಾರಣ" ದೀರ್ಘವಾಗಿ ಗುಂಡಾಯಣವನ್ನು ಪಾರಾಯಣ ಮಾಡಿದ.

ಭಾಮೈದ ಇಷ್ಟು ಮಾತನಾಡಿದ್ದು ನೋಡಿ ಖುಷಿಯಾದ ವೈಭವ್ 'ಇವ್ನು ನನ್ನ ಪಾರ್ಟಿ ತರ ಇದ್ದಾನೆ. ಸ್ವಲ್ಪ ಮಾತಾಡಿ ಕ್ಯಾಚ್ ಹಾಕ್ಕೊಂಡ್ರೇ ನಮ್ಗೆ ಬೇಕಾದಾಗ ವರ್ಕೌಟ್ ಮಾಡ್ಕೋಬಹುದು' ಎಂದು ಅವನೊಂದಿಗೆ ಹರಟೆಗೆ ಶುರುವಿಟ್ಟ.

ಇತ್ತ ಅಭಿ ಮಾತನಾಡಲಿದೆ ಎಂದಾಗ ಚೈತಾಲಿ ಅವನನ್ನು ಅಂಗಳಕ್ಕೆ ಕರೆದೊಯ್ದಳು. ಅವನಿಗೆ ತನ್ನ ಬಳಿ ಮಾತನಾಡಲು ಏನಿರಬಹುದೆಂಬ ಗೊಂದಲ ಅವಳಿಗಿದ್ದರೆ, ಅವಳು ಏನು ಹೇಳಬಹುದೆಂಬ ಕುತೂಹಲ ಅವನಿಗೆ.

"ನೋಡಿ ಚೈತಾಲಿ, ಸುತ್ತಿ ಬಳಸಿ ಮಾತಾಡೋಲ್ಲ ನಾನು, ನೇರ ವಿಷಯಕ್ಕೆ ಬಂದು ಬಿಡ್ತೀನಿ. ನೀವು ಸತ್ಯಂ ರಾವ್ ಅವರ ಪಿ.ಎ ಆದ್ದರಿಂದ ನಿಮಗೇ ಗೊತ್ತಿರೋ ವಿಷಯವೇ ಅಂದ್ಕೋತೀನಿ. ಮಿಸ್ಟರ್ ರಾವ್ ಸ್ವಲ್ಪ ದಿನಗಳ ಹಿಂದೆ ನನ್ನ ಹಾಗೂ ಸಮನ್ವಿತಾ ಮದುವೆ ಪ್ರಸ್ತಾಪ ಮಾಡಿದ್ರು. ನನ್ನ ಮನೆಯವರಿಗೆಲ್ಲಾ ಅದು ಸಮ್ಮತವೂ ಆಗಿತ್ತು. ಆದರೆ ನಾನೇ ಹಿಂಜರಿದಿದ್ದೆ. ಯಾಕೆಂದ್ರೆ ನಿಮ್ಮ ಬಾಸ್ ಬಗ್ಗೆ ನನಗೆ ಅಂತಹ ಒಳ್ಳೆ ಅಭಿಪ್ರಾಯ ಇಲ್ಲ. ಅಂತಹವರ ಮಗಳು ಅಂದ್ರೆ‌….... ನಾನೂ ಯೋಚನೆಗೆ ಬಿದ್ದಿದ್ದೆ. ಅಪ್ಪ ಮಗಳು ಸೇರಿ ಏನಾದ್ರೂ ಪ್ಲಾನ್ ಮಾಡಿರಬಹುದಾ ಅಂತ. ಅದೆಲ್ಲದರ ಜೊತೆ ನನ್ನ ಮನೆಯವರೆಲ್ಲ ಅವಳನ್ನು ಒಪ್ಪಿದ್ದು, ನಾನೂ ಒಪ್ಪದೇ ವಿಧಿಯಿಲ್ಲ ಅನ್ನೋ ಹಾಗೆ ಆಗಿತ್ತು. ಹಾಗಾಗಿ ನೇರಾ ನೇರವಾಗಿ ಸಮನ್ವಿತಾಳ ಹತ್ರನೇ ಎಲ್ಲಾ ವಿಷಯ ಮಾತಾಡೋಣ ಅಂದುಕೊಂಡು ಅವಳನ್ನು ನಿನ್ನೆ ನಮ್ಮನೆಗೆ ಕರೆದಿದ್ದೆ. ಅವಳನ್ನು ಮನೆಗೆ ಇನ್ವೈಟ್ ಮಾಡೋಕೆ ಕರೆ ಮಾಡಿದಾಗ್ಲೇ ಏನೋ ಸರಿ ಇಲ್ಲ ಅಂತ ಅನ್ನಿಸಿತ್ತು ನನ್ಗೆ. ಆದ್ರೆ ಅದನ್ನ ನೆಗ್ಲೆಕ್ಟ್ ಮಾಡಿಬಿಟ್ಟೆ. ನಿನ್ನೆ ಮನೆಯಲ್ಲಿ ಮಾತಾಡ್ತಾ ಈ ವಿಷ್ಯ ಬಂತು. ಈ ವಿಷ್ಯ ಕೇಳಿದಾಗ ಅವಳು ಪ್ರತಿಕ್ರಿಯಿಸಿದ ರೀತಿ...... ಶಿ ವಾಸ್ ಬ್ಲಾಂಕ್......ಬಹುಶಃ ನಮ್ಮಿಂದಲೇ ಅವಳಿಗೆ ವಿಷಯ ಫಸ್ಟ್ ಟೈಮ್ ಗೊತ್ತಾಯ್ತು ಅನಿಸಿತು. ನಾನು ಅವಳ ಹತ್ರ ಕೇಳಿದೆ ನಿನ್ಗೆ ವಿಷಯ ಗೊತ್ತಿರ್ಲಿಲ್ವಾ ಅಂತ. ಬಟ್ ಅವಳೇನು ಹೇಳ್ಲಿಲ್ಲ ಸರಿಯಾಗಿ. ಸೋ ಐ ನೀಡ್ ಯುವರ್ ಹೆಲ್ಪ್. ನಿನ್ನೆ ರಾವ್ ಮ್ಯಾನ್ಶನ್ ಅಲ್ಲಿ ಏನಾಯ್ತು? ನನ್ನ ಅನುಮಾನ ನಿಜ ಅಲ್ವಾ? ರಾವ್ ಅವರನ್ನು ಕೇಳೋಕಾಗಲ್ಲ, ಸಮನ್ವಿತಾ ಹೇಳಲ್ಲ, ಸೋ ನೀವೊಬ್ಬರೇ ಇದನ್ನೆಲ್ಲಾ ಹೇಳ್ಬಹುದು. ಪ್ಲೀಸ್ ಚೈತಾಲಿ, ಟ್ರಸ್ಟ್ ಮಿ, ಎಂಡ್ ಟೆಲ್ ಮಿ ದಿ ಟ್ರುಥ್. ನನಗೊಂತರಾ ಗಿಲ್ಟ್ ಕಾಡ್ತಿದೆ. ನಾನು ಹೇಳಿನೇ ಹೀಗೆಲ್ಲಾ ಆಯ್ತಾ ಅಂತ. ಜೊತೆಗೆ ಸಮನ್ವಿತಾ ಬಗ್ಗೆ ತುಂಬಾ ತಪ್ಪಾಗಿ ಅರ್ಥೈಸಿಕೊಂಡಿದ್ದೆ ಅನ್ಸುತ್ತೆ.

ಒಟ್ಟಾರೆ ನಾನು ಮಾಡಿರೋ ತಪ್ಪನ್ನೆಲ್ಲಾ ಸರಿಪಡಿಸಬೇಕು. ಅದಾಗಬೇಕು ಅಂದ್ರೆ ಮೊದ್ಲು ನನಗೆ ವಿಷಯ ಎಲ್ಲಾ ಸರಿಯಾಗಿ ಅರ್ಥ ಆಗ್ಬೇಕು. ಸೋ ಪ್ಲೀಸ್ ಹೆಲ್ಪ್ ಮೀ ಔಟ್ ಚೈತಾಲಿ"  ಕೇಳಿದವನತ್ತಲೇ ನೋಡಿದಳು.

'ಇದು ಬಹಳ ಸೂಕ್ಷ್ಮ ವಿಚಾರ, ಹೇಳಬಹುದಾ ಇವರಿಗೆ? ಏನ್ಮಾಡ್ಲೀ? ಒಳ್ಳೆಯವರಂತೆ ಕಾಣ್ತಾರೆ. ಹೊರಗೂ ಒಳ್ಳೆಯ ಹೆಸರಿದೆ ಇವರಿಗೆ‌ ಹಾಗೂ ಇವರ ಮನೆಯವರಿಗೆ. ಆದರೆ ಇವರು ಸತ್ಯಂ ರಾವ್ ಅವರಂತಲ್ಲ. ಆತನಿಗೆ ಹೆಸರಿರುವುದು ಅವನ ಹಣಬಲದಿಂದ ಮಾತ್ರ. ಎದುರಿಗೆ ನಿಂತು ಸಲಾಂ ಹಾಕುವವರು ಹಿಂದಿನಿಂದ ಹಿಡಿ ಶಾಪ ಹಾಕುತ್ತಾರೆ ಅವನಿಗೆ. ಆದರೆ ಶರ್ಮಾಸ್ ಎಂದರೆ ಹಾಗಿಲ್ಲ. ಹಣ ಗುಣ ಎರಡರಲ್ಲೂ ಮೇಲಿದ್ದಾರೆ. ಆದರೆ? ಸಮನ್ವಿತಾ ಮ್ಯಾಮ್ ಬಗ್ಗೆ ಇವರಿಗೆ ಹೇಳುವುದು ಸರಿಯಾ?' ಯೋಚನೆಗೆ ಬಿದ್ದಳು.

"ಚೈತಾಲಿ, ನೀವು ಯಾವ ಹಿಂಜರಿಕೆ ಇಲ್ಲದೇ ನನ್ನ ಹತ್ರ ಮಾತಾಡಬಹುದು. ಈ ವಿಚಾರ ನನ್ನ ಬಿಟ್ಟು ಬೇರೆಯವರ ಕಿವಿಗೆ ಹೋಗೋಲ್ಲ. ಆದರೆ ನನಗೆ ತಿಳಿಯಲೇಬೇಕಾದ ಅನಿವಾರ್ಯತೆ ಇದೆ. ಸಮನ್ವಿತಾಳ ಮನಸ್ಸಿನಲ್ಲೇನಿದೆ ಅಂತ ತಿಳಿಯದೇ ನಾನೇನೂ ಮಾಡಲಾರೆ" ಮತ್ತೆ ಹೇಳಿದ.

ಅವನ ಮಾತಿನಲ್ಲಿ, ಕಣ್ಣಿನಾಳದಲ್ಲಿ ಯಾವುದೋ ಭರವಸೆ ಸಿಕ್ಕಿತೇನೋ ಚೈತಾಲಿಗೆ, ನಿನ್ನೆ ನಡೆದ ಪ್ರತಿಯೊಂದನ್ನೂ ಇಂಚಿಂಚಾಗಿ ವಿವರಿಸಿದಳು. 

ಚೈತಾಲಿ ಎಲ್ಲವನ್ನೂ ಹೇಳಿ ಹಗುರಾದರೆ, ಎಲ್ಲವನ್ನೂ ಕೇಳಿ ಅಭಿರಾಮ್ ಮನ ಭಾರವಾಯಿತು.... ಪರಿಸ್ಥಿತಿ ತನ್ನೆಣಿಕೆಗಿಂತ ವಿಪರೀತವಾಗಿದೆ ಅನಿಸತೊಡಗಿತು ಅವನಿಗೆ. ಸಮನ್ವಿತಾಳ ಅನಿಸಿಕೆ ಪ್ರಕಾರ ಅವಳಪ್ಪ ಅವಳನ್ನು ನಮಗೆ ಮಾರಾಟಮಾಡಿದ್ದಾರೆ. ಅವಳಿಗೆ ಹೆತ್ತವರು ತಲೆಹಿಡುಕರೆನಿಸಿದ್ದಾರೆ. ಹಾಗಾದಲ್ಲಿ ಈಗ ಅವಳ‌ ಪ್ರಕಾರ ನಾವು? ಮುಂದೆ ಯೋಚಿಸಲು ಭಯವೆನಿಸಿತು ಅವನಿಗೆ.

ಈಗೇನು ಮಾಡಲಿ? ಈ ಹುಡುಗಿ ನನ್ನ ಮದುವೆಯಾಗಲು ಒಪ್ಪಬಹುದೇ? ಹೇಗೆ ಒಪ್ಪಿಸುವುದು? 

ಒಪ್ಪಿಸಲೇಬೇಕು…... ಒಪ್ಪಿಸಿಯೇ ತೀರುತ್ತೇನೆ......!

ಬಿಡುವ ಮಾತಂತೂ ಖಂಡಿತಾ ಸಾಧ್ಯವಿಲ್ಲ. ಬಿಟ್ಟರೆ ನನಗೆ ಬದುಕೆಲ್ಲಿದೆ?

ಇದೆಲ್ಲಕ್ಕೂ ಮೂಲ ಕಾರಣ ಅವಳಪ್ಪ. ಏನು ಮಾಡಲಿ ಈ ರಾವ್ ಎಂಬ ರಕ್ಕಸನನ್ನು. ತುಳಿದು ಹೊಸಕಿ ಹಾಕಲೇ? ಮಗಳು ಇವನ ಕಂಪನಿಯಲ್ಲಿ ತಯಾರಾಗುವ ಮಾರಾಟದ ವಸ್ತುವೇ? ದುಡ್ಡಿಗಾಗಿ ಯಾರನ್ನೂ ಮಾರಲು ತಯಾರೇನೋ? ಸರಿಯಾಗಿ ಬುದ್ಧಿ ಕಲಿಸಬೇಕು. ಕೊಡುವ ಪೆಟ್ಟು ಜೀವನಪರ್ಯಂತ ನೆನಪಿರಬೇಕು. ಈಗೆಲ್ಲಾದರೂ ಎದುರು ಸಿಕ್ಕರೆ. ಹಲ್ಮುಡಿ ಕಚ್ಚಿ ಮುಷ್ಟಿ ಬಿಗಿಯಾಗಿಸಿದ.

ಅವನನ್ನು ನೋಡಿದವಳು, "ಯಾಕೆ? ಏನಾಯ್ತು?" ಕೇಳಿದಳು.

"ಏನಿಲ್ಲಾ ನಿಮ್ಮ ಬಾಸ್ ನೆನಪಾಗಿ ಪ್ರೀತಿ ಉಕ್ಕಿತು" 

"ನೋ ವೇ….., ಹಿ ಈಸ್ ನಾಟ್ ಮೈ ಬಾಸ್ ನೌ. ನಿನ್ನೆ ರಾತ್ರಿಯೇ ಆ ಕೆಲಸ ಬಿಟ್ಹಾಕಿ ಬಂದೆ. ಚಿನ್ನದಂತಹ ಮಗಳನ್ನೇ ಉಳಿಸಿಕೊಳ್ಳೋ ಯೋಗ್ಯತೆ ಇಲ್ಲದವನ ಹತ್ರ ನಾನೆಷ್ಟು ಸೇಫ್ ಅನ್ನುವ ಯೋಚನೆ ಬಂತು. ಕೆಲ್ಸ ಇಲ್ದೇ ಮನೆಯಲ್ಲಿದ್ರು ಪರವಾಗಿಲ್ಲ ಆದ್ರೆ ಆ ಮನುಷ್ಯನ ಹತ್ರ ಕೆಲಸ ಮಾಡೋಲ್ಲ. ಮನುಷ್ಯರ ಬೆಲೆ ಗೊತ್ತಿಲ್ಲದ ಮುಟ್ಟಾಳ. ತಾನು, ತನ್ನ ದುಡ್ಡು ಇದೆರಡು ಬಿಟ್ಟು ಬೇರೇನೂ ಬೇಡ ಅವನಿಗೆ. ನಾನು ಚೆನ್ನಾಗಿದ್ರೆ ಸಾಕು, ನನ್ನವರು ಅನ್ನಿಸ್ಕೊಂಡೋರು ಹಾಳಾದ್ರೂ ತೊಂದ್ರೆ ಇಲ್ಲ ಅಂತಾರೆ ಗಂಡ ಹೆಂಡತಿ. ಯಾಕಿಷ್ಟು ಸ್ವಾರ್ಥಿಗಳಾಗ್ತಾರೆ ಮನುಷ್ಯರು? ಯಾಕೆ ಆ ದೇವರು ಇಂಥಾ ಸ್ವಾರ್ಥಿಗಳಿಗೆ ಸಮನ್ವಿತಾ ಮ್ಯಾಮ್ ಅಂಥಾ ಮಗಳನ್ನು ಕೊಟ್ಟಿದ್ದು. ಅವರ ತಂದೆ ತಾಯಿ ಅನ್ನಿಸ್ಕೊಳ್ಳೋ ಯೋಗ್ಯತೆ‌ನೇ ಇಲ್ಲ ರಾವ್ ದಂಪತಿಗಳಿಗೆ. ಸಮನ್ವಿತಾ ಮ್ಯಾಮ್ ನ ಸರಿಯಾಗಿ ಅರ್ಥ ಮಾಡಿಕೊಂಡವರಿಗೆಲ್ಲಾ ಅನ್ನಿಸೋ ಒಂದು ಕಾಮನ್ ವಿಷಯ ಶಿ ಡಿಸರ್ವ್ಸ್ ಬೆಟರ್ ಪೇರೆಂಟ್ಸ್ ಅಂತ….." ಬೇಸರದಲ್ಲಿ ನುಡಿದಳು.

"ಆ ರಾವ್ ಗೆ ಸರಿಯಾಗಿ ಮಾಡ್ತೀನಿ. ಸುಮ್ಮನೆ ಬಿಡೋದಿಲ್ಲ. ಅದು ಬಿಡಿ. ಈಗ ಏನ್ಮಾಡಬೇಕು ಅಂತಿದ್ದೀರಿ? ಡು ಯು ವಿಷ್ ಟು ವರ್ಕ್?"

"ಅಯ್ಯೋ ಬಿಡಿ ಸರ್, ಅವರೊಬ್ರೇನಾ ಇರೋದು ಕೆಲ್ಸ ಕೊಡೋಕೆ? ಬೇರೆ ಹುಡುಕ್ತೀನಿ. ಸರ್, ಅದು..... ಅದೂ..... ಮೋಸ ಗೀಸ ಏನೇ ಆಗಿರ್ಲೀ ಆದರೆ ನಿಮ್ಮ ಸಮನ್ವಿತಾ ಮ್ಯಾಮ್ ಜೋಡಿ ಚೆನ್ನಾಗಿರುತ್ತೆ….." ಮೆಲುವಾಗಿ ಅಂದಳು. ನಸುನಕ್ಕವನು ಜೇಬಿನಿಂದ ಒಂದು ಕಾರ್ಡ್ ತೆಗೆದು ಅವಳಿಗೆ ನೀಡಿ,

"ನಿಮಗೆ ಇಂಟ್ರೆಸ್ಟ್ ಇದ್ರೆ ನಾಳೆ ಈ ವಿಳಾಸಕ್ಕೆ ಬನ್ನಿ. ಕೆಲಸ ಸಿಗುತ್ತೆ. ನೀವು ಬರ್ತೀರಾ ಅನ್ನೋ ನಂಬಿಕೆ ನಂದು. ಒಂದು ವೇಳೆ ನೀವು ಬರ್ದಿದ್ರೇ, ನೀವು ಕೆಲಸ ಬಿಟ್ಟ ಸುದ್ದಿ ತಿಳಿದು, 'ನನ್ನಿಂದಾಗಿ ಚೈತಾಲಿ ಕೆಲಸ ಬಿಡೋ ಹಾಗಾಯ್ತು' ಅಂತ ನಿಮ್ಮ ಮ್ಯಾಮ್ ಬೇಜಾರಾಗ್ತಾರೆ ಅಷ್ಟೇ. ಹಾಗೆನೇ ನಿಮ್ಮ ಹಾರೈಕೆಯಂತೆ ಒಂದು ವೇಳೆ ನಿಮ್ಮ ಮ್ಯಾಮ್ ನನ್ನ ಜೋಡಿ ಆದ್ರೆ ಅವರಿಗೂ ಆಫೀಸಲ್ಲಿ ನಿಮ್ಮನ್ನು ನೋಡಿ ಖುಷಿ ಆಗುತ್ತಲ್ವಾ?" ಅವನ ಮಾತಿನಲ್ಲೊಂದು ತುಂಟತನವಿತ್ತು.

ಅವನ ಮಾತಿನ ಶೈಲಿ ಅವಳ ಮೊಗದಲ್ಲಿ ನಗು ಮೂಡಿಸಿತು. "ಖಂಡಿತಾ ಬರ್ತೀನಿ. ಅಲ್ಲಿಗೆ ಸಮನ್ವಿತಾ ಮ್ಯಾಮ್ ಜೋಡಿ ಆಗೋ ಆಸೆಯಂತು ನಿಮಗೆ ಇದೆ ಅಂತಾಯ್ತು" ಅವನದೇ ಧಾಟಿಯಲ್ಲಿ ಕೇಳಿದಳು.

"ನನಗೆ ಆಸೆ ಇದ್ಯೋ ಇಲ್ವೋ ಅನ್ನೋದಕ್ಕಿಂತ ನಿಮ್ಮ ಮ್ಯಾಮ್ ನನ್ನ ಜೋಡಿ ಆಗೋಕೆ ಒಪ್ತಾರೋ ಇಲ್ವೋ ಅನ್ನೋದೆ ಈಗಿರೋ ಪ್ರಶ್ನೆ"  ಜಾಣತನದಿಂದ ಉತ್ತರಿಸಿ ನಕ್ಕವನೊಂದಿಗೆ ಚೈತಾಲಿಯ ನಗುವೂ ಮಿಳಿತವಾಯಿತು.

ಅಷ್ಟರಲ್ಲಿ ಒಳಗಿನಿಂದ ಚೈತಾಲಿಯ ಅಮ್ಮನ ಕರೆ ಬಂದಿದ್ದರಿಂದ ಇಬ್ಬರೂ ಒಳಬಂದಾಗ ಗುಂಡಮ್ಮ ವ್ಯಾಕುಲರಾಗಿದ್ದರೆ, ವೈಭವ್ ಚಿಂತಾಕ್ರಾಂತನಾಗಿದ್ದ. ಚೇತನ್ ಮಾತ್ರ ಹೊಟ್ಟೆ ಹಿಡಿದು ನಗುತ್ತಿದ್ದ.

ಅಭಿರಾಮ್ ವೈಭವವನ್ನು ಎಬ್ಬಿಸಿಕೊಂಡು ಮನೆಯವರಿಗೆ ಹೊರಡುತ್ತೇವೆ ಎಂದು ಹೇಳಿ ಹೊರಟ.

"ಊಟ ಮಾಡಿಕೊಂಡು ಹೋಗಿ ಸರ್" ಹಿಂದಿನಿಂದ ಬಂದ ಚೈತಾಲಿ ಹೇಳಿದಳು.

"ಇಲ್ಲಾ ಚೈತಾಲಿ, ಲೇಟಾಯ್ತು, ಹಾಸ್ಪಿಟಲ್ ಗೆ ಹೋಗ್ಬೇಕು. ಇನ್ನೊಮ್ಮೆ ಬರ್ತೀನಿ" ಎಂದ.

"ಹಾಸ್ಪಿಟಲ್?" ಪ್ರಶ್ನಾರ್ಥಕವಾಗಿ ಕೇಳಿದಳು.

"ಓ ಸಾರಿ, ಹೇಳಲು ಮರೆತೆ" ಎಂದವ ಸಮನ್ವಿತಾ ಅಡ್ಮಿಟ್ ಆದದ್ದನ್ನು ತಿಳಿಸಿ, ಗಾಬರಿಯಾಗುವ ಪ್ರಮೇಯವಿಲ್ಲ ಎಂದು ವಿವರಿಸಿದ.

"ಸರ್ ನಾನೂ ಬರ್ತೀನಿ" ಎಂದಳು.

"ನಾಳೆ ಬನ್ನಿ ಚೈತಾಲೀ. ಸಮನ್ವಿತಾಳಿಗೆ ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಸೋ ಬಂದ್ರೂ ಮಾತನಾಡಿಸಲು ಆಗೋಲ್ಲ" ಅವನೆಂದಾಗ ಅದು ಸರಿ ಎನಿಸಿತು ಅವಳಿಗೆ.

ಅಭಿರಾಮ್ ಕಾರು ಆಸ್ಪತ್ರೆಯೆಡೆಗೆ ತಿರುಗಿಸಿದ. ವೈಭವ್ ತನ್ನ ಭಾಮೈದನೊಂದಿಗಿನ ಮಾತುಕತೆಯ ವರದಿ ಒಪ್ಪಿಸುತ್ತಿದ್ದ. ಕೇಳುತ್ತಾ ಡ್ರೈವ್ ಮಾಡುತ್ತಿದ್ದವ ಒಮ್ಮೆ ಪಕ್ಕ ನೋಡಿದಾಗ ವೈಭವ್ ಕೈಯಲ್ಲಿದ್ದ ಬಟ್ಟೆಗಳು ಕಾಣಿಸಿತು...

"ಏನೋ ಇದು?" ಕೇಳಿದ ಅಚ್ಚರಿಯಿಂದ.

"ನೋಡು ಬೀರ್ ಆ ಮುದ್ಕಿನ. ನನಗೆ 'ತಂಗೊಂಡ್ಹೋಗಪ್ಪಾ' ಅಂತ ಈ ಪ್ಯಾಂಟುಗಳನ್ನು ಕೊಟ್ಟಿದೆ" ಅವಲತ್ತುಕೊಂಡ.

"ಅದೇನಾಯ್ತು ಅಂತ ಸರಿಯಾಗಿ ಹೇಳು" ಗದರಿ ಕೇಳಿದ. ನಡೆದ ಘಟನೆಯನೆಲ್ಲಾ ವಿವರಿಸಿದ ವೈಭವ್.

ಅಸಲಿಗೆ ಆಗಿದ್ದಿಷ್ಟು…...

ಗುಂಡಮ್ಮ ಜಪ ಮುಗಿಸಿ ಎದ್ದು ಬಂದಾಗ ಚೇತನ್, ವೈಭವ್ ಹರಟೆ ಹೊಡೆಯುತ್ತಿದ್ದರು. ಅಲ್ಲೇ ಬಂದು ಕುಳಿತ ಮುದುಕಿ ಕಣ್ಣಿಗೆ ವೈಭವನ ಫ್ಯಾಷನೇಬಲ್ ಜೀನ್ಸ್ ಬಿದ್ದಿತ್ತು.. ಎಲ್ಲೆಂದರಲ್ಲಿ ಬ್ಲೇಡ್ ಹಾಕಿ ಹರಿದಂತಿದ್ದ ಇವನ ಬಟ್ಟೆ ಕಂಡು ಗುಂಡುವಿನ ಕರುಣೆಯ ಕಟ್ಟೆ ಒಡೆದಿತ್ತು. ಒಳಗೆ ಹೋಗಿ ಚೇತನ್ ನ ನಾಲ್ಕಾರು ಹಳೆ ಪ್ಯಾಂಟ್ ಆರಿಸಿ ತಂದು ಕೊಟ್ಟಿತ್ತು ಮುದುಕಿ.

"ನೋಡು ಮಗಾ. ಇದು ಒಂದೆರಡು ಕಡೆ ಹರ್ದಿದ್ರೆ ಹೊಲಿಗೆ ಹಾಕಬಹುದಿತ್ತು. ಇದಾಗಲ್ಲ ಬಿಡು. ಇನ್ಮೇಲೆ ಈ ತರ ಹರ್ದಿರೋ ಬಟ್ಟೆ ಹಾಕ್ಬೇಡ" ಎಂದು ಸಮಾಧಾನಿಸಿ ಬೇಡವೆಂದರೂ ಕೇಳದೆ ಬಟ್ಟೆ ಕೊಟ್ಟು ಕಳಿಸಿತ್ತು.

ಅಭಿಗೆ ತಾನು ಚೈತಾಲಿಯೊಡನೆ ಮಾತು ಮುಗಿಸಿ ಮನೆಯೊಳಗೆ ಹೋದಾಗಿನ ಮೂವರ ಎಕ್ಸ್ಪ್ರೆಷನ್ ನೆನಪಾಯಿತು. ಅದರ ಅರ್ಥ ಈಗ ಹೊಳೆಯಿತು ಕೂಡಾ. ಹೊಟ್ಟೆ ಹುಣ್ಣಾಗುವಂತೆ ನಕ್ಕ.

"ಏನೋ ನನ್ನ ಕುಳ್ಳಿ ಡಾರ್ಲಿಂಗ್ ಅಜ್ಜಿ ಅಂತ ಸುಮ್ನೆ ತಗೊಂಡೆ. ಇಲ್ಲಾಂದಿದ್ರೆ ನನ್ನ ಮಗಂದು ಕಾಗೆ ಮುದ್ಕಿ ತಿಥಿ ಮಾಡ್ತಿದ್ದೆ" ಹಾಗೆಯೇ ಮುಂದುವರೆದಿತ್ತು ಅವನ ಪುರಾಣ…...

ಅಭಿ ಮಾತ್ರ ಇವನ ಪಾಡು ನೆನೆದು ಆಸ್ಪತ್ರೆ ತಲುಪುವವರೆಗೂ ನಗುತ್ತಲೇ ಇದ್ದ......

         ******* ಮುಂದುವರೆಯುತ್ತದೆ ********



ಅನೂಹ್ಯ 27

ಸಮನ್ವಿತಾಳ ವಾರ್ಡಿನಲ್ಲಿ ನವ್ಯಾಳನ್ನು ಕಂಡೊಂಡನೆ ಅಭಿರಾಮನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ದೊರಕಿತ್ತು. ಹರುಷಗೊಂಡ ಅವನ ಮನ ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು.

ಶರ್ಮಾ ಕಂಪನಿಯ ಕೆಲಸಗಾರರು ಇರುವುದು ಕಂಪನಿಯ ವತಿಯಿಂದ ನೀಡಲಾಗುವ ಕ್ವಾಟ್ರಸ್ ಗಳಲ್ಲಿಯೇ. ಅಲ್ಲಿನ ವ್ಯವಸ್ಥೆ, ನಿರ್ವಹಣೆ, ರಕ್ಷಣೆ, ನೋವು, ನಲಿವು ಎಲ್ಲದರ ಜವಾಬ್ದಾರಿ ಶರ್ಮಾ ಪರಿವಾರದ್ದೇ. ತಮಗಾಗಿ ದುಡಿಯುವ ಕೈಗಳಿಗೆ ಅಷ್ಟೂ ಮಾಡದಿದ್ದರೆ ಹೇಗೆ ಎಂಬ ಅನಿಸಿಕೆ ‌ಸಚ್ಚಿದಾನಂದರದು.

ಸರಿ ಸುಮಾರು ಮೂರುಮುಕ್ಕಾಲು ವರ್ಷಗಳ ಹಿಂದಿನ ಮಾತು. ಶರ್ಮಾ ಸಿಮೆಂಟ್ಸ್ ನ ಇಬ್ಬರು ನೌಕರರು ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕ್ವಾಟ್ರಸ್ಸಿನಲ್ಲಿ ಹೊಡೆದಾಡಿಕೊಂಡು, ಜಗಳ ವಿಪರೀತಕ್ಕೆ ಹೋಗಿ ಒಬ್ಬನ ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿ ಪೋಲೀಸ್ ಕೇಸ್ ದಾಖಲಾಗಿತ್ತು. ಹೊಡೆದವನನ್ನು ಪೋಲಿಸರು ಎಳೆದೊಯ್ದು ಲಾಕಪ್ಪಿನಲ್ಲಿ ಕೂರಿಸಿದ್ದರು. ಅವನ ಹೆಂಡತಿ ತನ್ನ ಮೂವರು ಮಕ್ಕಳೊಂದಿಗೆ ಸಚ್ಚಿದಾನಂದರ ಕಾಲು ಹಿಡಿದುಕೊಂಡು ಅಳುತ್ತಾ ಕೂತುಬಿಟ್ಟಿದ್ದಳು. ದುಡಿಯುವ ಕೈಯೇ ಇಲ್ಲವಾದರೆ ಜೀವನ ಹೇಗೆಂಬ ಚಿಂತೆ ಆ ಹೆಣ್ಣನ್ನು ಕಿತ್ತು ತಿನ್ನುತ್ತಿತ್ತು. ಆಕೆಯ ಗೋಳು ನೋಡಲಾರದೇ ಅಭಿರಾಮ್ ತಾನೆಲ್ಲಾ ವ್ಯವಸ್ಥೆ ಮಾಡುವೆನೆಂದು ಅಭಯ ನೀಡಿ ಆಕೆಯನ್ನು ಮನೆಗೆ ಕಳುಹಿಸಿದ್ದ.

ಈ ವಿಚಾರವಾಗಿ ಮಾತನಾಡಲು ಅವನು ಮರುದಿನ ಬೆಳಗ್ಗೆ ಠಾಣೆಗೆ ಹೋಗಿದ್ದ. ಆದರೆ ಯಾವುದೋ ಮುಖ್ಯವಾದ ಕೆಲಸದ ಮೇಲೆ ಎಸ್.ಐ ಹೊರಹೋಗಿದ್ದರು. ಹಾಗಾಗಿ ಸಂಜೆ ಮತ್ತೆ ಹೋಗಬೇಕಾಯಿತು. ಅಸಲಿಗೆ ಅವನೇ ಖುದ್ದಾಗಿ ಹೋಗಬೇಕಾದ ಅವಶ್ಯಕತೆ ಇರಲಿಲ್ಲವಾದರೂ ಆ ಹೆಂಗಸಿನ ಗೋಳಾಟ, ಮೂವರು ಮಕ್ಕಳು ಕಣ್ಣುಗಳಲ್ಲಿದ್ದ ಭಯ ಅವನ ಚಿತ್ತ ಕದಡಿತ್ತು.

ಸಂಜೆ ಅವನು ಠಾಣೆಗೆ ಬಂದಾಗ ಅಲ್ಲಿನ ಸ್ಥಿತಿ ಬೆಳಗಿನಂತಿರಲಿಲ್ಲ. ಬಹಳಷ್ಟು ಜನರಿದ್ದರು. ಹೆಂಗಸರು, ಮಕ್ಕಳೂ ಕೂಡಾ. ಆ ಗುಂಪಿನವರೆಲ್ಲರೂ ವಿಪರೀತ ಅಳುತ್ತಿದ್ದ ನಾಲ್ವರು ಹುಡುಗಿಯರನ್ನು ಸಂತೈಸುತ್ತಿರುವುದನ್ನು ಕಂಡು ಬಹುಶಃ ಅವರೆಲ್ಲ ಆ ಹುಡುಗಿಯರ ಮನೆಯವರಿರಬೇಕೆಂದು ಗ್ರಹಿಸಿದ್ದ. ಎಲ್ಲರೂ ಅಳುತ್ತಾ, ಸಮಾಧಾನಿಸಿಕೊಳ್ಳುತ್ತಾ, ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಿದ್ದರು. ಏನೋ ನಡೆದಿದೆ ಈ ಹೆಣ್ಣುಮಕ್ಕಳ ಬಾಳಲ್ಲಿ ಎನಿಸಿತಾದರೂ ಏನೆಂದು ತಿಳಿಯಲಿಲ್ಲ ಅವನಿಗೆ....

ಒಳಗೆ ಎಸ್.ಐ ಯಾರೊಂದಿಗೋ ಏನೋ ಮಾತನಾಡುತ್ತಿದ್ದರು. ಹೊರಗೆ ಕಾಯುತ್ತಾ ನಿಂತು ಆ ಗುಂಪನ್ನೇ ನೋಡುತ್ತಿದ್ದ.(ಈ ಘಟನೆಗೆ ಸರಿಯಾಗಿ ಲಿಂಕ್ ಸಿಗದಿದ್ದರೇ ಹತ್ತನೇ ಅಧ್ಯಾಯವನ್ನು ಓದಿರಿ)

ಅವರಲ್ಲೊಬ್ಬ ವಯಸ್ಸಾದ ಹೆಂಗಸು ನಾಲ್ವರನ್ನೂ ಸಮಾಧಾನಿಸುತ್ತಾ "ಆಗಿದ್ದು ಆಗೋಗದೆ ಬಿಡ್ರವಾ. ತೆಪ್ಪ್ ಯಾರದು ಇಲ್ಲಾ. ಆದ್ರೂ ದ್ಯಾವರು ದೊಡ್ಡೋನು ಈಗಾರ ಹೆಂಗೋ ಆ ನರ್ಕ ಮುಗೀತಲಾ... ಅದ್ಯಾವ ಪುಣ್ಯಾಸ್ತ್ರೀ ಹೆತ್ತ ಮಗಾನೋ, ಆ ಸಿವಾ ಆಕಿ ಹೊಟ್ಟಿ ತಣ್ಣ್ಗಿಟ್ಟಿರ್ಲಿ" ಎಂದು ಒಬ್ಬಳನ್ನು ಅಪ್ಪಿ ಸಂತೈಸಿದ್ದಳು. ಈ ಹುಡುಗಿಯರು ಯಾವುದೋ ಜಾಲಕ್ಕೆ ಸಿಲುಕಿ ನೊಂದಿದ್ದಾರೆ. ಯಾರೋ ಅವರನ್ನು ಅಲ್ಲಿಂದ ಬಿಡಿಸಿಕೊಂಡಿದ್ದಾರೆ ಎಂದು ಸ್ಪಷ್ಟವಾಯಿತು ಅವನಿಗೆ. ಯಾರಿರಬಹುದು ಎಂದು ಕುತೂಹಲವಾಯಿತು...

ಮಾತುಕತೆಗಳು ಮುಂದುವರೆದಂತೆ ಈ ಹುಡುಗಿಯರನ್ನು ವೇಶ್ಯಾಗೃಹವೊಂದರಿಂದ ಬಿಡಿಸಿ ತರಲಾಗಿದೆ ಎಂಬುದು ಅವನಿಗೆ ವೇದ್ಯವಾಯಿತು. ತಟ್ಟನೆ ತಲೆ ಎತ್ತಿ ಆ ಹೆಣ್ಣುಮಕ್ಕಳನ್ನು ನೋಡಿದ. ಹೆಚ್ಚುಕಮ್ಮಿ ಆಕೃತಿಯ ವಯಸ್ಸಿನವರು........ ಕನಸುಗಳು, ನಿರೀಕ್ಷೆಗಳು, ಸಾವಿರ ಆಸೆಗಳು ತುಂಬಿರಬೇಕಾದ ನಯನಗಳಲ್ಲಿ ಇದ್ದದ್ದು ನೋವು, ಯಾತನೆ, ಆತಂಕ...... ಬದುಕಿನ ಬಗ್ಗೆ ಕನಸುಗಳು ಚಿಗುರಬೇಕಾದ ವಯಸ್ಸಿನಲ್ಲಿ ಆಗಲೇ ವೈರಾಗ್ಯದಂಚಿಗೆ ತಲುಪಿದ ವಿರಾಗಿನಿಯರಂತೆ ಕಂಡರು…….

ಚಿಗುರು ಕೊನರುವ ಮುನ್ನವೇ ಮುರುಟಿಸಿ ಎಸೆದ ಜಗದ ಮೇಲೆ ರೋಷವುಕ್ಕಿತ್ತು ಅವನಿಗೆ. ಪದೇ ಪದೇ ಆಕೃತಿಯ‌ ನೆನಪಾಗಿ ಕಣ್ಣಂಚು ಒದ್ದೆಯಾಗಿತ್ತು.

ಅಷ್ಟರಲ್ಲಿ ಎಸ್.ಐ ಕ್ಯಾಬಿನ್ ಇಂದ ಇಬ್ಬರು ಹುಡುಗಿಯರು ಹೊರಬಂದಿದ್ದರು.‌ ಅವರನ್ನು ನೋಡುತ್ತಲೇ ಈ ನಾಲ್ವರೂ ಓಡಿಬಂದು ಅವರಿಬ್ಬರನ್ನೂ ಸುತ್ತುವರೆದಿದ್ದರು. ಅವರು ಒಬ್ಬಳನ್ನು ಅಪ್ಪಿ ಅಳತೊಡಗಿದರು. ಅವಳ ಕಣ್ಣುಗಳಲ್ಲಿ ನೀರಿದ್ದರೂ ಕೆನ್ನೆ ಮೇಲೆ ಇಳಿಯದಂತೆ ತಡೆದಿದ್ದಳು. ಅವಳ ಕಣ್ಣುಗಳಲ್ಲಿಯೂ ಜನ್ಮಾಂತರದ ವೇದನೆಯೊಂದು ಕುಳಿತಿತ್ತು. ಅವಳೂ ಇವರೊಂದಿಗೆ ಇದ್ದವಳೆಂದು‌ ಅವನಿಗೆ ಅನಿಸಿತ್ತು. ಆ ನಾಲ್ವರು ಅವಳಿಗೆ ವಿದಾಯ ಹೇಳಿ ಎಸ್. ಐ ಕ್ಯಾಬಿನ್ ಹೊಕ್ಕಿದ್ದರು.

ಇವರಿಬ್ಬರೂ ಹೊರಗೆ ಹೊರಡಬೇಕು ಎನ್ನುವಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಅವರನ್ನು ತಡೆದು ನಿಲ್ಲಿಸಿದ್ದರು. ಅವರು ಆ ಇನ್ನೊಬ್ಬ ಹುಡುಗಿಯ ಬಳಿ ಬಂದು ಅವಳ ಕೈಗಳನ್ನು ಕಣ್ಣಿಗೊತ್ತಿಕೊಂಡು ಅವಳ ಬಳಿ ಮಾತನಾಡತೊಡಗಿದ್ದರು.

ಅವರ ಮಾತುಗಳನ್ನು ಕೇಳಿದವನು‌ ಅವಕ್ಕಾಗಿದ್ದ…..

ಅವರು ತಮ್ಮ ಮಗಳನ್ನು ವೇಶ್ಯಾಗೃಹದಿಂದ ಬಿಡಿಸಿದ್ದಕ್ಕೆ ಆ ಹುಡುಗಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

ಅಂದರೆ ಈ ಹುಡುಗಿಯರನ್ನು ಬಿಡಿಸಿದ್ದು ಇವಳಾ?

ಅಚ್ಚರಿಯಿಂದ ಅವಳನ್ನು ಒಂದು ಘಳಿಗೆ ದಿಟ್ಟಿಸಿದ್ದ.

ನಿರಾಭರಣ, ಸರಳ ಸುಂದರಿ. ಆದರೆ ಅವನನ್ನು ಸೆಳೆದದ್ದು ಕಣ್ಣುಗಳಲ್ಲಿ ನೇರತೆ, ಆತ್ಮವಿಶ್ವಾಸ, ದೃಢತೆ.

ಅವಳು ಆ ವ್ಯಕ್ತಿಗೆ ಕ್ಯಾಬಿನ್ ಒಳಗೆ ಹೋಗಲು ತಿಳಿಸಿ ಇನ್ನೊಬ್ಬ ಹುಡುಗಿಯೊಂದಿಗೆ ಹೊರಟು ಬಿಟ್ಟಳು.

ಅಷ್ಟರಲ್ಲಿ ಆ ಇನ್ನೊಬ್ಬ ಹುಡುಗಿ ಹಿಂದಿರುಗಿ ಬಂದು ಆ ವ್ಯಕ್ತಿಗೆ ಏನೋ ಹೇಳಿದಳು. ಆದರೆ ಅವನು ಅದ್ಯಾವುದನ್ನೂ ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಅವನ ತಲೆ ತುಂಬಾ ಅವಳೇ ತುಂಬಿದ್ದಳು. ಯಾರಿರಬಹುದು ಈಕೆ? ಈ ಲೋಕದ ಜನ ನಾನು, ನನ್ನದು, ನನ್ನವರು ಎಂಬ ಪರಿಧಿ ಬಿಟ್ಟು ಹೊರಗೆ ತಲೆಹಾಕರು. ನಾವು ಚೆನ್ನಾಗಿದ್ದರೆ ಸಾಕು ಬೇರೆಯವರು ಹಾಳಾಗಿ ಹೋದ್ರೆ ನಮಗೇನು ಎಂದು ಯೋಚಿಸುವುದಲ್ಲದೇ ಪರರು ಎಡವಿದಾಗ ಆಡಿಕೊಂಡು ನಗುವವರೇ ಜಾಸ್ತಿ. ಇಷ್ಟು ಸಂಕುಚಿತ ಮನಸ್ಥಿತಿಯ ಜಗದಲ್ಲಿ ಒಬ್ಬ ಹೆಣ್ಣುಮಗಳು ತನ್ನ ಸ್ವಂತ ಆಸಕ್ತಿಯಿಂದ ವೇಶ್ಯಾವಾಟಿಕೆಯ ಕೂಪದಲ್ಲಿ ಬೇಯುತ್ತಿದ್ದ ಐವರನ್ನು ಬಿಡಿಸಿಕೊಂಡು ಬಂದಿರುವಳೆಂದರೆ........ ಅವಳ ಮನೋಸ್ಥೈರ್ಯವನ್ನು ಅಳೆಯದಾಗಿದ್ದ. ಬಹಳ ಧೈರ್ಯಸ್ಥೆಯೇ ಈಕೆ. ಇಲ್ಲವಾದರೇ ಈ  ಸಮಾಜದ ನೀತಿ ನಿಯಮ, ಕಟ್ಟುಪಾಡುಗಳು, ಹುಚ್ಚು ಜನರ ಚುಚ್ಚು ಮಾತುಗಳನ್ನು ಮೀರಿ ಈ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಯಾರಿರಬಹುದು ಈಕೆ ಎಂದು ಅವಳತ್ತ ಮತ್ತೆ ನೋಟಹರಿಸುವುದರೊಳಗೆ ಅವರಿಬ್ಬರೂ ಹೊರಟೇ ಹೋಗಿದ್ದರು. ಠಾಣೆಯ ಹೊರಗೂ ಇಬ್ಬರೂ ಕಾಣಲಿಲ್ಲ. ಆದರೆ ಅವರಿಬ್ಬರ ಮುಖಗಳೂ ಅವನ ಮನದಲ್ಲಿ ಅಚ್ಚಾಗಿತ್ತು. ಆ ದಿನ ಠಾಣೆಯ ಕೆಲಸ ಮುಗಿಸಿ ಮನೆಗೆ ಬಂದವನು ಆಕೃತಿಯನ್ನು ತಬ್ಬಿ ತಲೆ ನೇವರಿಸಿದ್ದ. ಕಣ್ಣಂಚು ತೇವವಾಗಿತ್ತು ವಿನಾಕಾರಣ.....‌.. 

"ಏನೋ ಅಣ್ಣಾ? ಏನಾಯ್ತು? ಯಾಕೆ ಅಳ್ತಿದ್ದೀ?" ಗಾಬರಿಯಿಂದ ಕೇಳಿದ್ದಳು ಆಕೃತಿ.

"ಏನಿಲ್ಲ ಪುಟ್ಟ, ಹೀಗೆ ಸುಮ್ಮನೆ..." ಎಂದು ಮಾತು ತೇಲಿಸಿದ್ದ.

ನಂತರದ ದಿನಗಳಲ್ಲಿ ಅವರಿಬ್ಬರನ್ನು ಹುಡುಕಲು ಬಹಳ ಪ್ರಯತ್ನಿಸಿ ಸೋತಿದ್ದ. ಅವನಿಗಿರುವ ಪ್ರಭಾವ ಬಳಸಿ ಪೋಲಿಸ್ ಠಾಣೆಯಿಂದಲೇ‌ ವಿಷಯ ಸಂಗ್ರಹಿಸಬಹುದಿತ್ತಾದರೂ,‌ ಅದರಿಂದ ಮುಂದೆ ಆ ಐವರು ಹೆಣ್ಣುಮಕ್ಕಳ ಬದುಕಲ್ಲಿ ಸಮಸ್ಯೆ‌ ತಲೆದೋರಬಹುದು ಎನ್ನಿಸಿತ್ತವನಿಗೆ. ಹೇಗೋ ಆ ನರಕದಿಂದ ತಪ್ಪಿಸಿಕೊಂಡು ಈಗಿನ್ನೂ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ತಾನು ಏನೋ ಮಾಡಲು ಹೋಗಿ ಆ ಹುಡುಗಿಯರ ಐಡೆಂಟಿಟಿ ಲೀಕ್ ಆಗಿ, ಈ ಸೋ ಕಾಲ್ಡ್ ಸಭ್ಯ ಸಮಾಜದ ಮೂಳೆ ಇಲ್ಲದ ನಾಲಿಗೆಗೆ ಆಹಾರವಾಗುವುದು ಬೇಡ ಎನಿಸಿ ಸುಮ್ಮನಾಗಿದ್ದ.

ನಿಧಾನವಾಗಿ ಈ ಘಟನೆ ಅವನ ನೆನಪಿನಾಳದಲ್ಲಿ ಎಲ್ಲೋ ಹುದುಗಿ ಧೂಳು ಹಿಡಿದಿತ್ತು. ಸಮನ್ವಿತಾ ಕಣ್ಣಿಗೆ ಬೀಳುವ ತನಕ…….. ಅವಳನ್ನು ಕಂಡಂದಿನಿಂದ ಅವನ ಚಿತ್ತ ಸ್ವಾಸ್ಥ್ಯವೇ ಕದಡಿತ್ತು. ನೆನಪಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತಿದ್ದ. ಇಂದು ನವ್ಯಾಳನ್ನು ಕಂಡಕೂಡಲೇ ಮಿಸ್ಸಿಂಗ್ ಲಿಂಕ್ ಸಿಕ್ಕಿದಂತಾಗಿತ್ತು. ನೆನಪಿನ ಕೊಂಡಿಗಳು ಒಂದಕ್ಕೊಂದು ಜೋಡಣೆಗೊಂಡು ಎಲ್ಲಾ ನೆನಪಾಗಿತ್ತು ಅವನಿಗೆ. 

             *************************

"ಬೀರ್…. ವೈ ಆರ್ ಯು ಸಿಟ್ಟಿಂಗ್ ಹಿಯರ್ ಮ್ಯಾನ್" ಎಂಬ ವೈಭವನ ಮಾತು ಅಭಿರಾಮ್ ನೆನಪಿನ ಸರಪಳಿಯನ್ನು ತುಂಡರಿಸಿತು.

ವೈಭವನೊಂದಿಗೆ ಸಚ್ಚಿದಾನಂದ್ ಹಾಗೂ ಮೃದುಲಾ ಕೂಡಾ ಇದ್ದರು. ಮೃದುಲಾ ಅವನ ಬಳಿ ಬಂದು,

"ಇದೇನೋ ಇಲ್ಲಿ ಕೂತಿದ್ದಿ? ಸಮನ್ವಿತಾ ಎಲ್ಲಿ? ಹೇಗಿದ್ದಾಳೆ?" ಗಾಬರಿಯಲ್ಲಿ ಕೇಳಿದರು.

"ಟೇಕ್ ಇಟ್ ಈಸಿ಼ ಮಾ. ಏನಾಗಿಲ್ಲ. ಸ್ವಲ್ಪ ನಿಶ್ಯಕ್ತಿಯಿಂದಾಗಿ ಪ್ರಜ್ಞೆ ತಪ್ಪಿದೆಯಷ್ಟೇ" ಸಮಾಧಾನಿಸಿ, "ಅವಳಿಗೆ ಎಚ್ಚರ ಇಲ್ಲ. ಹಾಗೆ ಇಲ್ಲಿ ಕುತ್ಕೊಂಡೆ ಅಷ್ಟೇ. ಈಗ ಒಳಗೆ ಹೋಗೋಣ ಬಾ" ಎಂದು ಎಲ್ಲರೂ ವಾರ್ಡಿನತ್ತ ನಡೆದರು.

ಅಭಿರಾಮ್ ಇನ್ನು ಯಾರೇ ಬರಲಿ, ಏನೇ ಆಗಲಿ ಎಲ್ಲದಕ್ಕೂ ಸೈ ಎಂದುಕೊಂಡವ ಉಲ್ಲಾಸದಿಂದ ವಾರ್ಡಿನೊಳಗೆ ಹೆಜ್ಜೆ ಹಾಕಿದ.....

ಯೋಚನೆಯಲ್ಲಿ ಮುಳುಗಿದ್ದ ನವ್ಯಾಳಿಗೆ ಯಾರೋ ವಾರ್ಡಿನೊಳಗೆ ಬರುತ್ತಿರುವಂತೆ ಅನಿಸಿ ತಟ್ಟನೆ ಬಾಗಿಲಿನತ್ತ ನೋಡಿದಳು.

ಒಳಬಂದ ನಾಲ್ವರೂ ಅವಳಿಗೆ ಅಪರಿಚಿತರೇ. ಅಭಿರಾಮ್ ಬಗ್ಗೆ ಕೇಳಿದ್ದೇ ಹೊರತು ನೋಡಿರಲಿಲ್ಲ ಎಂದೂ. ಅವಳು ಗಲಿಬಿಲಿಗೊಂಡು ಎದ್ದು ನಿಂತಳು. ಅವಳಿಗೆ‌ ಅಪರಿಚಿತ ಗಂಡಸರನ್ನು ನೋಡಿದ್ದೇ ಭಯದಿಂದ ಕೈಕಾಲು ನಡುಗುತ್ತದೆ. ಇದು ಅವಳ ಗತ ಜೀವನ ಅವಳಿಗಿತ್ತ ಕೊಡುಗೆ. ಇವರ್ಯಾರೋ, ನನಗೇನಾದರೂ ಹಾನಿ ಮಾಡಲು ಬಂದಿರಬಹುದೇನೋ ಎಂಬ ಭಯ ಬೆಂಬಿಡದ ಭೂತ ಅವಳಿಗೆ. ಆದರೂ ಜೊತೆಯಲ್ಲಿದ್ದ ಮೃದುಲಾರನ್ನು ಕಂಡು ಸ್ವಲ್ಪ ಧೈರ್ಯ ತಂದುಕೊಂಡಳು.

ನವ್ಯಾಳ ಮುಖ ಕಂಡು ಅವಳ ಪರಿಸ್ಥಿತಿ ಒಂದು ಮಟ್ಟಿಗೆ ಅರ್ಥವಾಯಿತು ಅಭಿರಾಮ್ ಗೆ. ಅವನು ನಸುನಕ್ಕು, "ಹಲೋ, ನನ್ನ ಹೆಸರು ಅಭಿರಾಮ್. ಇವರಿಬ್ಬರೂ ನನ್ನ ತಂದೆ ತಾಯಿ ಹಾಗೇ ಅವನು ನನ್ನ ಫ್ರೆಂಡ್. ನೀವು ನವ್ಯಾ, ರೈಟ್?" ಪರಿಸ್ಥಿತಿ ತಿಳಿಗೊಳಿಸುತ್ತಾ ಕೇಳಿದ.

ಅಭಿರಾಮ್ ಹೆಸರು ಕೇಳಿದ್ದೆ ಅವಳ ಮುಖದಲ್ಲಿ ನಗುಮೂಡಿತು. "ಓಹ್ ನೀವಾ? ಸಾರಿ ನಿಮ್ಮನ್ಯಾವತ್ತೂ ನೋಡಿರಲಿಲ್ಲ. ಹಾಗಾಗಿ ಗೊತ್ತಾಗ್ಲಿಲ್ಲ" ಎಂದಳು.

"ಇರ್ಲಿ ಬಿಡಮ್ಮಾ. ಅಂದ್ಹಾಗೆ ನೀನು?" ಕೇಳಿದರು ಮೃದುಲಾ.

"ಅಮ್ಮ, ಇವ್ರು ನವ್ಯಾ ಅಂತ. ಸಮನ್ವಿತಾ ಫ್ರೆಂಡ್" ಅವನೇ ಹೇಳಿದ. ನವ್ಯಾ ಕೈ ಜೋಡಿಸಿದಳು. ಅಷ್ಟರಲ್ಲಿ ಫೋನಿನಲ್ಲಿ ಮಾತು ಮುಗಿಸಿದ ಕಿಶೋರ್ ಒಳಗೆ ಬಂದಿದ್ದ. ನವ್ಯಾ ಅವರನ್ನು ಪರಸ್ಪರ ಪರಿಚಯಿಸಿದಳು. 

"ಇಟ್ಸ್ ಗ್ರೇಟ್ ಪ್ಲೆಷರ್ ಟು ಮೀಟ್ ಯು ಮಿಸ್ಟರ್ ಅಭಿರಾಮ್"  ಕೈ ಚಾಚಿದ ಕಿಶೋರ್. ಅವನೇ ನವ್ಯಾಳೊಂದಿಗೆ ಅಭಿಯನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದ ಸಮನ್ವಿತಾಳ‌ ಬಗ್ಗೆ ಮಾತನಾಡಲು. ಅಭಿರಾಮನ ಬಿಗುಮಾನವಿಲ್ಲದ ನಡವಳಿಕೆ ಬಹಳ ಹಿಡಿಸಿತು ಇಬ್ಬರಿಗೂ.

ಹೀಗೆ ಶುರುವಾದ ಮಾತುಕತೆ ಕೆಲವೇ ನಿಮಿಷಗಳಲ್ಲಿ ಬಹು ವರ್ಷಗಳ ಆತ್ಮೀಯರಂತೆ ಹರಟುವ ತನಕ ಬೆಳೆಯಿತು. ಮಧ್ಯೆ ಮಧ್ಯೆ ವೈಭವನ ಒಗ್ಗರಣೆ ಬೇರೆ. ಇವರ ಎಕ್ಸಪ್ರೆಸ್ ಟ್ರೈನಿನಂತಹಾ ಮಾತುಕತೆಗೆ ಬ್ರೇಕ್ ಬಿದ್ದದ್ದು ಮೀರಾ  ಒಳಗೆ ಬಂದಾಗಲೇ. ಸಮನ್ವಿತಾಳನ್ನು ಇನ್ನೊಮ್ಮೆ ಪರೀಕ್ಷಿಸಿ ಇನ್ನೊಂದು ಇಂಜೆಕ್ಷನ್ ಕೊಟ್ಟು ಡ್ರಿಪ್ಸ್ ಬದಲಾಯಿಸಿದರು.

ಅವಳಿಗೆ ಸಧ್ಯದಲ್ಲಿ ಎಚ್ಚರವಾಗುವ ಲಕ್ಷಣವಿರಲಿಲ್ಲ. ಜ್ವರ ಕಡಿಮೆಯಾದರೂ ನಿಶ್ಯಕ್ತಿ, ಸುಸ್ತು ಬಹಳವಿತ್ತು. ಸಚ್ಚಿದಾನಂದ್ ದಂಪತಿಗಳು ಮರುದಿನ ಬರುವೆವು ಎಂದು ಮೀರಾರೊಂದಿಗೆ ಹೊರಟರು. 

ಚೈತಾಲಿಯನ್ನು ಭೇಟಿಯಾಗಬೇಕಿತ್ತು ಅಭಿಗೆ. ಹಾಗಾಗಿ ಅವನೂ ಸಂಜೆಗೆ ಬರುವೆನೆಂದು ವೈಭವನೊಂದಿಗೆ ಹೊರಟ.

ಅದರ ಹಿಂದೆಯೇ ಮಂಗಳಮ್ಮ ಕರೆ ಮಾಡಿದ್ದರು. ಕಾರ್ತಿಕ್ ವಿಷಯ ಹೇಳಿದ್ದರಿಂದ ಗಾಬರಿಯಲ್ಲಿ ಕರೆ ಮಾಡಿದ್ದರಾಕೆ. ಅವರಿಗೆ ವಿಷಯ ತಿಳಿಸಿ ಗಾಬರಿಯಾಗುವಂತದ್ದು ಏನೂ ಇಲ್ಲವೆಂದು ಸಮಾಧಾನಿಸಿದಳು‌ ನವ್ಯಾ. ಇನ್ನೆರಡು ದಿನದಲ್ಲಿ ಹಿಂದಿರುಗುವವರಿದ್ದರಾಕೆ. ತಾನು ವಾಪಾಸಾದ ಕೂಡಲೇ ಒಂದು ವಾರ ರಜೆ ಹಾಕಿಸಿ ಸಮನ್ವಿತಾಳನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದವರ ಮಾತು ಕೇಳಿ ಹೆಮ್ಮೆಯೆನಿಸಿತು ಆ ತಾಯಿಯ ಬಗ್ಗೆ ನವ್ಯಾಳಿಗೆ. ಆಕೆ ಹಾಗಿರುವುದರಿಂದಲೇ ಕಿಶೋರ್ ಇಷ್ಟು ಒಳ್ಳೆಯ ವ್ಯಕ್ತಿಯಾಗಿರುವುದು ಎನಿಸದಿರಲಿಲ್ಲ. ಸತ್ಯನಾರಾಯಣ ಅವರು ಯೋಗಕ್ಷೇಮ ವಿಚಾರಿಸಿ ಫೋನಿಟ್ಟರು.

ನವ್ಯಾ, ಕಿಶೋರ್ ಮಾತ್ರ ಉಳಿದರು ಸಮನ್ವಿತಾಳೊಡನೆ. ಕಾರ್ತಿಕ್ ತಾನು ಹೊರಗೆ ಊಟತಿಂಡಿ ಮಾಡಿಕೊಳ್ಳುವೆ, ಸಂಜೆ ಆಸ್ಪತ್ರೆಗೇ ಬರುವೆ ಎಂದಿದ್ದರಿಂದ ಮನೆಯತ್ತ ಹೋಗಲಿಲ್ಲ ಇಬ್ಬರೂ.

ಅವರಿಬ್ಬರ ಯೋಚನೆಯೂ ಒಂದೇ ದಿಕ್ಕಿನಲ್ಲಿ ಸಾಗುತ್ತಿತ್ತು.

ಅದರ ಗಮ್ಯ..... ಅಭಿರಾಮ್.......

ಅವನ ಹಾಗೂ ಅವನ ಮನೆಯವರ ಮಾತುಕತೆಯ ಶೈಲಿಯಿಂದಲೇ ಅವರು ಸುಸಂಸ್ಕೃತರೆಂದು ತಿಳಿಯುತ್ತಿತ್ತು. ಹಾಗೆಯೇ ಅವರ ಮಾತಿನಲ್ಲಿ ಸಮಾಳ ಬಗ್ಗೆ ಅಕ್ಕರೆಯಿತ್ತು.

ಇಬ್ಬರೂ ಆ ಬಗ್ಗೆಯೇ ಚರ್ಚಿಸತೊಡಗಿದರು.

ಹೇಗಾದರೂ ಸಮನ್ವಿತಾಳನ್ನು ಈ ಮದುವೆಗೆ ಒಪ್ಪಿಸಿ ಆ ಪರಿವಾರಕ್ಕೆ ಸೇರಿಸಬೇಕೆಂಬ ಯೋಜನೆಗೆ ರೂಪುರೇಷೆಗಳು ತಯಾರಾಗತೊಡಗಿದವು.

ಸಮನ್ವಿತಾ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ನೆಮ್ಮದಿಯಾಗಿ ಮಲಗಿದ್ದಳು.

ನೆಮ್ಮದಿ........!?

ನೆಮ್ಮದಿ ಇತ್ತೋ ಇಲ್ಲವೋ ಯಾರಿಗೂ ತಿಳಿಯದಾಗಿತ್ತು........ 

     ********ಮುಂದುವರೆಯುತ್ತದೆ*********



ಅನೂಹ್ಯ 27

ಸಮನ್ವಿತಾಳ ವಾರ್ಡಿನಲ್ಲಿ ನವ್ಯಾಳನ್ನು ಕಂಡೊಂಡನೆ ಅಭಿರಾಮನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ದೊರಕಿತ್ತು. ಹರುಷಗೊಂಡ ಅವನ ಮನ ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು.

ಶರ್ಮಾ ಕಂಪನಿಯ ಕೆಲಸಗಾರರು ಇರುವುದು ಕಂಪನಿಯ ವತಿಯಿಂದ ನೀಡಲಾಗುವ ಕ್ವಾಟ್ರಸ್ ಗಳಲ್ಲಿಯೇ. ಅಲ್ಲಿನ ವ್ಯವಸ್ಥೆ, ನಿರ್ವಹಣೆ, ರಕ್ಷಣೆ, ನೋವು, ನಲಿವು ಎಲ್ಲದರ ಜವಾಬ್ದಾರಿ ಶರ್ಮಾ ಪರಿವಾರದ್ದೇ. ತಮಗಾಗಿ ದುಡಿಯುವ ಕೈಗಳಿಗೆ ಅಷ್ಟೂ ಮಾಡದಿದ್ದರೆ ಹೇಗೆ ಎಂಬ ಅನಿಸಿಕೆ ‌ಸಚ್ಚಿದಾನಂದರದು.

ಸರಿ ಸುಮಾರು ಮೂರುಮುಕ್ಕಾಲು ವರ್ಷಗಳ ಹಿಂದಿನ ಮಾತು. ಶರ್ಮಾ ಸಿಮೆಂಟ್ಸ್ ನ ಇಬ್ಬರು ನೌಕರರು ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕ್ವಾಟ್ರಸ್ಸಿನಲ್ಲಿ ಹೊಡೆದಾಡಿಕೊಂಡು, ಜಗಳ ವಿಪರೀತಕ್ಕೆ ಹೋಗಿ ಒಬ್ಬನ ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿ ಪೋಲೀಸ್ ಕೇಸ್ ದಾಖಲಾಗಿತ್ತು. ಹೊಡೆದವನನ್ನು ಪೋಲಿಸರು ಎಳೆದೊಯ್ದು ಲಾಕಪ್ಪಿನಲ್ಲಿ ಕೂರಿಸಿದ್ದರು. ಅವನ ಹೆಂಡತಿ ತನ್ನ ಮೂವರು ಮಕ್ಕಳೊಂದಿಗೆ ಸಚ್ಚಿದಾನಂದರ ಕಾಲು ಹಿಡಿದುಕೊಂಡು ಅಳುತ್ತಾ ಕೂತುಬಿಟ್ಟಿದ್ದಳು. ದುಡಿಯುವ ಕೈಯೇ ಇಲ್ಲವಾದರೆ ಜೀವನ ಹೇಗೆಂಬ ಚಿಂತೆ ಆ ಹೆಣ್ಣನ್ನು ಕಿತ್ತು ತಿನ್ನುತ್ತಿತ್ತು. ಆಕೆಯ ಗೋಳು ನೋಡಲಾರದೇ ಅಭಿರಾಮ್ ತಾನೆಲ್ಲಾ ವ್ಯವಸ್ಥೆ ಮಾಡುವೆನೆಂದು ಅಭಯ ನೀಡಿ ಆಕೆಯನ್ನು ಮನೆಗೆ ಕಳುಹಿಸಿದ್ದ.

ಈ ವಿಚಾರವಾಗಿ ಮಾತನಾಡಲು ಅವನು ಮರುದಿನ ಬೆಳಗ್ಗೆ ಠಾಣೆಗೆ ಹೋಗಿದ್ದ. ಆದರೆ ಯಾವುದೋ ಮುಖ್ಯವಾದ ಕೆಲಸದ ಮೇಲೆ ಎಸ್.ಐ ಹೊರಹೋಗಿದ್ದರು. ಹಾಗಾಗಿ ಸಂಜೆ ಮತ್ತೆ ಹೋಗಬೇಕಾಯಿತು. ಅಸಲಿಗೆ ಅವನೇ ಖುದ್ದಾಗಿ ಹೋಗಬೇಕಾದ ಅವಶ್ಯಕತೆ ಇರಲಿಲ್ಲವಾದರೂ ಆ ಹೆಂಗಸಿನ ಗೋಳಾಟ, ಮೂವರು ಮಕ್ಕಳು ಕಣ್ಣುಗಳಲ್ಲಿದ್ದ ಭಯ ಅವನ ಚಿತ್ತ ಕದಡಿತ್ತು.

ಸಂಜೆ ಅವನು ಠಾಣೆಗೆ ಬಂದಾಗ ಅಲ್ಲಿನ ಸ್ಥಿತಿ ಬೆಳಗಿನಂತಿರಲಿಲ್ಲ. ಬಹಳಷ್ಟು ಜನರಿದ್ದರು. ಹೆಂಗಸರು, ಮಕ್ಕಳೂ ಕೂಡಾ. ಆ ಗುಂಪಿನವರೆಲ್ಲರೂ ವಿಪರೀತ ಅಳುತ್ತಿದ್ದ ನಾಲ್ವರು ಹುಡುಗಿಯರನ್ನು ಸಂತೈಸುತ್ತಿರುವುದನ್ನು ಕಂಡು ಬಹುಶಃ ಅವರೆಲ್ಲ ಆ ಹುಡುಗಿಯರ ಮನೆಯವರಿರಬೇಕೆಂದು ಗ್ರಹಿಸಿದ್ದ. ಎಲ್ಲರೂ ಅಳುತ್ತಾ, ಸಮಾಧಾನಿಸಿಕೊಳ್ಳುತ್ತಾ, ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಿದ್ದರು. ಏನೋ ನಡೆದಿದೆ ಈ ಹೆಣ್ಣುಮಕ್ಕಳ ಬಾಳಲ್ಲಿ ಎನಿಸಿತಾದರೂ ಏನೆಂದು ತಿಳಿಯಲಿಲ್ಲ ಅವನಿಗೆ....

ಒಳಗೆ ಎಸ್.ಐ ಯಾರೊಂದಿಗೋ ಏನೋ ಮಾತನಾಡುತ್ತಿದ್ದರು. ಹೊರಗೆ ಕಾಯುತ್ತಾ ನಿಂತು ಆ ಗುಂಪನ್ನೇ ನೋಡುತ್ತಿದ್ದ.(ಈ ಘಟನೆಗೆ ಸರಿಯಾಗಿ ಲಿಂಕ್ ಸಿಗದಿದ್ದರೇ ಹತ್ತನೇ ಅಧ್ಯಾಯವನ್ನು ಓದಿರಿ)

ಅವರಲ್ಲೊಬ್ಬ ವಯಸ್ಸಾದ ಹೆಂಗಸು ನಾಲ್ವರನ್ನೂ ಸಮಾಧಾನಿಸುತ್ತಾ "ಆಗಿದ್ದು ಆಗೋಗದೆ ಬಿಡ್ರವಾ. ತೆಪ್ಪ್ ಯಾರದು ಇಲ್ಲಾ. ಆದ್ರೂ ದ್ಯಾವರು ದೊಡ್ಡೋನು ಈಗಾರ ಹೆಂಗೋ ಆ ನರ್ಕ ಮುಗೀತಲಾ... ಅದ್ಯಾವ ಪುಣ್ಯಾಸ್ತ್ರೀ ಹೆತ್ತ ಮಗಾನೋ, ಆ ಸಿವಾ ಆಕಿ ಹೊಟ್ಟಿ ತಣ್ಣ್ಗಿಟ್ಟಿರ್ಲಿ" ಎಂದು ಒಬ್ಬಳನ್ನು ಅಪ್ಪಿ ಸಂತೈಸಿದ್ದಳು. ಈ ಹುಡುಗಿಯರು ಯಾವುದೋ ಜಾಲಕ್ಕೆ ಸಿಲುಕಿ ನೊಂದಿದ್ದಾರೆ. ಯಾರೋ ಅವರನ್ನು ಅಲ್ಲಿಂದ ಬಿಡಿಸಿಕೊಂಡಿದ್ದಾರೆ ಎಂದು ಸ್ಪಷ್ಟವಾಯಿತು ಅವನಿಗೆ. ಯಾರಿರಬಹುದು ಎಂದು ಕುತೂಹಲವಾಯಿತು...

ಮಾತುಕತೆಗಳು ಮುಂದುವರೆದಂತೆ ಈ ಹುಡುಗಿಯರನ್ನು ವೇಶ್ಯಾಗೃಹವೊಂದರಿಂದ ಬಿಡಿಸಿ ತರಲಾಗಿದೆ ಎಂಬುದು ಅವನಿಗೆ ವೇದ್ಯವಾಯಿತು. ತಟ್ಟನೆ ತಲೆ ಎತ್ತಿ ಆ ಹೆಣ್ಣುಮಕ್ಕಳನ್ನು ನೋಡಿದ. ಹೆಚ್ಚುಕಮ್ಮಿ ಆಕೃತಿಯ ವಯಸ್ಸಿನವರು........ ಕನಸುಗಳು, ನಿರೀಕ್ಷೆಗಳು, ಸಾವಿರ ಆಸೆಗಳು ತುಂಬಿರಬೇಕಾದ ನಯನಗಳಲ್ಲಿ ಇದ್ದದ್ದು ನೋವು, ಯಾತನೆ, ಆತಂಕ...... ಬದುಕಿನ ಬಗ್ಗೆ ಕನಸುಗಳು ಚಿಗುರಬೇಕಾದ ವಯಸ್ಸಿನಲ್ಲಿ ಆಗಲೇ ವೈರಾಗ್ಯದಂಚಿಗೆ ತಲುಪಿದ ವಿರಾಗಿನಿಯರಂತೆ ಕಂಡರು…….

ಚಿಗುರು ಕೊನರುವ ಮುನ್ನವೇ ಮುರುಟಿಸಿ ಎಸೆದ ಜಗದ ಮೇಲೆ ರೋಷವುಕ್ಕಿತ್ತು ಅವನಿಗೆ. ಪದೇ ಪದೇ ಆಕೃತಿಯ‌ ನೆನಪಾಗಿ ಕಣ್ಣಂಚು ಒದ್ದೆಯಾಗಿತ್ತು.

ಅಷ್ಟರಲ್ಲಿ ಎಸ್.ಐ ಕ್ಯಾಬಿನ್ ಇಂದ ಇಬ್ಬರು ಹುಡುಗಿಯರು ಹೊರಬಂದಿದ್ದರು.‌ ಅವರನ್ನು ನೋಡುತ್ತಲೇ ಈ ನಾಲ್ವರೂ ಓಡಿಬಂದು ಅವರಿಬ್ಬರನ್ನೂ ಸುತ್ತುವರೆದಿದ್ದರು. ಅವರು ಒಬ್ಬಳನ್ನು ಅಪ್ಪಿ ಅಳತೊಡಗಿದರು. ಅವಳ ಕಣ್ಣುಗಳಲ್ಲಿ ನೀರಿದ್ದರೂ ಕೆನ್ನೆ ಮೇಲೆ ಇಳಿಯದಂತೆ ತಡೆದಿದ್ದಳು. ಅವಳ ಕಣ್ಣುಗಳಲ್ಲಿಯೂ ಜನ್ಮಾಂತರದ ವೇದನೆಯೊಂದು ಕುಳಿತಿತ್ತು. ಅವಳೂ ಇವರೊಂದಿಗೆ ಇದ್ದವಳೆಂದು‌ ಅವನಿಗೆ ಅನಿಸಿತ್ತು. ಆ ನಾಲ್ವರು ಅವಳಿಗೆ ವಿದಾಯ ಹೇಳಿ ಎಸ್. ಐ ಕ್ಯಾಬಿನ್ ಹೊಕ್ಕಿದ್ದರು.

ಇವರಿಬ್ಬರೂ ಹೊರಗೆ ಹೊರಡಬೇಕು ಎನ್ನುವಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಅವರನ್ನು ತಡೆದು ನಿಲ್ಲಿಸಿದ್ದರು. ಅವರು ಆ ಇನ್ನೊಬ್ಬ ಹುಡುಗಿಯ ಬಳಿ ಬಂದು ಅವಳ ಕೈಗಳನ್ನು ಕಣ್ಣಿಗೊತ್ತಿಕೊಂಡು ಅವಳ ಬಳಿ ಮಾತನಾಡತೊಡಗಿದ್ದರು.

ಅವರ ಮಾತುಗಳನ್ನು ಕೇಳಿದವನು‌ ಅವಕ್ಕಾಗಿದ್ದ…..

ಅವರು ತಮ್ಮ ಮಗಳನ್ನು ವೇಶ್ಯಾಗೃಹದಿಂದ ಬಿಡಿಸಿದ್ದಕ್ಕೆ ಆ ಹುಡುಗಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

ಅಂದರೆ ಈ ಹುಡುಗಿಯರನ್ನು ಬಿಡಿಸಿದ್ದು ಇವಳಾ?

ಅಚ್ಚರಿಯಿಂದ ಅವಳನ್ನು ಒಂದು ಘಳಿಗೆ ದಿಟ್ಟಿಸಿದ್ದ.

ನಿರಾಭರಣ, ಸರಳ ಸುಂದರಿ. ಆದರೆ ಅವನನ್ನು ಸೆಳೆದದ್ದು ಕಣ್ಣುಗಳಲ್ಲಿ ನೇರತೆ, ಆತ್ಮವಿಶ್ವಾಸ, ದೃಢತೆ.

ಅವಳು ಆ ವ್ಯಕ್ತಿಗೆ ಕ್ಯಾಬಿನ್ ಒಳಗೆ ಹೋಗಲು ತಿಳಿಸಿ ಇನ್ನೊಬ್ಬ ಹುಡುಗಿಯೊಂದಿಗೆ ಹೊರಟು ಬಿಟ್ಟಳು.

ಅಷ್ಟರಲ್ಲಿ ಆ ಇನ್ನೊಬ್ಬ ಹುಡುಗಿ ಹಿಂದಿರುಗಿ ಬಂದು ಆ ವ್ಯಕ್ತಿಗೆ ಏನೋ ಹೇಳಿದಳು. ಆದರೆ ಅವನು ಅದ್ಯಾವುದನ್ನೂ ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಅವನ ತಲೆ ತುಂಬಾ ಅವಳೇ ತುಂಬಿದ್ದಳು. ಯಾರಿರಬಹುದು ಈಕೆ? ಈ ಲೋಕದ ಜನ ನಾನು, ನನ್ನದು, ನನ್ನವರು ಎಂಬ ಪರಿಧಿ ಬಿಟ್ಟು ಹೊರಗೆ ತಲೆಹಾಕರು. ನಾವು ಚೆನ್ನಾಗಿದ್ದರೆ ಸಾಕು ಬೇರೆಯವರು ಹಾಳಾಗಿ ಹೋದ್ರೆ ನಮಗೇನು ಎಂದು ಯೋಚಿಸುವುದಲ್ಲದೇ ಪರರು ಎಡವಿದಾಗ ಆಡಿಕೊಂಡು ನಗುವವರೇ ಜಾಸ್ತಿ. ಇಷ್ಟು ಸಂಕುಚಿತ ಮನಸ್ಥಿತಿಯ ಜಗದಲ್ಲಿ ಒಬ್ಬ ಹೆಣ್ಣುಮಗಳು ತನ್ನ ಸ್ವಂತ ಆಸಕ್ತಿಯಿಂದ ವೇಶ್ಯಾವಾಟಿಕೆಯ ಕೂಪದಲ್ಲಿ ಬೇಯುತ್ತಿದ್ದ ಐವರನ್ನು ಬಿಡಿಸಿಕೊಂಡು ಬಂದಿರುವಳೆಂದರೆ........ ಅವಳ ಮನೋಸ್ಥೈರ್ಯವನ್ನು ಅಳೆಯದಾಗಿದ್ದ. ಬಹಳ ಧೈರ್ಯಸ್ಥೆಯೇ ಈಕೆ. ಇಲ್ಲವಾದರೇ ಈ  ಸಮಾಜದ ನೀತಿ ನಿಯಮ, ಕಟ್ಟುಪಾಡುಗಳು, ಹುಚ್ಚು ಜನರ ಚುಚ್ಚು ಮಾತುಗಳನ್ನು ಮೀರಿ ಈ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಯಾರಿರಬಹುದು ಈಕೆ ಎಂದು ಅವಳತ್ತ ಮತ್ತೆ ನೋಟಹರಿಸುವುದರೊಳಗೆ ಅವರಿಬ್ಬರೂ ಹೊರಟೇ ಹೋಗಿದ್ದರು. ಠಾಣೆಯ ಹೊರಗೂ ಇಬ್ಬರೂ ಕಾಣಲಿಲ್ಲ. ಆದರೆ ಅವರಿಬ್ಬರ ಮುಖಗಳೂ ಅವನ ಮನದಲ್ಲಿ ಅಚ್ಚಾಗಿತ್ತು. ಆ ದಿನ ಠಾಣೆಯ ಕೆಲಸ ಮುಗಿಸಿ ಮನೆಗೆ ಬಂದವನು ಆಕೃತಿಯನ್ನು ತಬ್ಬಿ ತಲೆ ನೇವರಿಸಿದ್ದ. ಕಣ್ಣಂಚು ತೇವವಾಗಿತ್ತು ವಿನಾಕಾರಣ.....‌.. 

"ಏನೋ ಅಣ್ಣಾ? ಏನಾಯ್ತು? ಯಾಕೆ ಅಳ್ತಿದ್ದೀ?" ಗಾಬರಿಯಿಂದ ಕೇಳಿದ್ದಳು ಆಕೃತಿ.

"ಏನಿಲ್ಲ ಪುಟ್ಟ, ಹೀಗೆ ಸುಮ್ಮನೆ..." ಎಂದು ಮಾತು ತೇಲಿಸಿದ್ದ.

ನಂತರದ ದಿನಗಳಲ್ಲಿ ಅವರಿಬ್ಬರನ್ನು ಹುಡುಕಲು ಬಹಳ ಪ್ರಯತ್ನಿಸಿ ಸೋತಿದ್ದ. ಅವನಿಗಿರುವ ಪ್ರಭಾವ ಬಳಸಿ ಪೋಲಿಸ್ ಠಾಣೆಯಿಂದಲೇ‌ ವಿಷಯ ಸಂಗ್ರಹಿಸಬಹುದಿತ್ತಾದರೂ,‌ ಅದರಿಂದ ಮುಂದೆ ಆ ಐವರು ಹೆಣ್ಣುಮಕ್ಕಳ ಬದುಕಲ್ಲಿ ಸಮಸ್ಯೆ‌ ತಲೆದೋರಬಹುದು ಎನ್ನಿಸಿತ್ತವನಿಗೆ. ಹೇಗೋ ಆ ನರಕದಿಂದ ತಪ್ಪಿಸಿಕೊಂಡು ಈಗಿನ್ನೂ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ತಾನು ಏನೋ ಮಾಡಲು ಹೋಗಿ ಆ ಹುಡುಗಿಯರ ಐಡೆಂಟಿಟಿ ಲೀಕ್ ಆಗಿ, ಈ ಸೋ ಕಾಲ್ಡ್ ಸಭ್ಯ ಸಮಾಜದ ಮೂಳೆ ಇಲ್ಲದ ನಾಲಿಗೆಗೆ ಆಹಾರವಾಗುವುದು ಬೇಡ ಎನಿಸಿ ಸುಮ್ಮನಾಗಿದ್ದ.

ನಿಧಾನವಾಗಿ ಈ ಘಟನೆ ಅವನ ನೆನಪಿನಾಳದಲ್ಲಿ ಎಲ್ಲೋ ಹುದುಗಿ ಧೂಳು ಹಿಡಿದಿತ್ತು. ಸಮನ್ವಿತಾ ಕಣ್ಣಿಗೆ ಬೀಳುವ ತನಕ…….. ಅವಳನ್ನು ಕಂಡಂದಿನಿಂದ ಅವನ ಚಿತ್ತ ಸ್ವಾಸ್ಥ್ಯವೇ ಕದಡಿತ್ತು. ನೆನಪಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತಿದ್ದ. ಇಂದು ನವ್ಯಾಳನ್ನು ಕಂಡಕೂಡಲೇ ಮಿಸ್ಸಿಂಗ್ ಲಿಂಕ್ ಸಿಕ್ಕಿದಂತಾಗಿತ್ತು. ನೆನಪಿನ ಕೊಂಡಿಗಳು ಒಂದಕ್ಕೊಂದು ಜೋಡಣೆಗೊಂಡು ಎಲ್ಲಾ ನೆನಪಾಗಿತ್ತು ಅವನಿಗೆ. 

             *************************

"ಬೀರ್…. ವೈ ಆರ್ ಯು ಸಿಟ್ಟಿಂಗ್ ಹಿಯರ್ ಮ್ಯಾನ್" ಎಂಬ ವೈಭವನ ಮಾತು ಅಭಿರಾಮ್ ನೆನಪಿನ ಸರಪಳಿಯನ್ನು ತುಂಡರಿಸಿತು.

ವೈಭವನೊಂದಿಗೆ ಸಚ್ಚಿದಾನಂದ್ ಹಾಗೂ ಮೃದುಲಾ ಕೂಡಾ ಇದ್ದರು. ಮೃದುಲಾ ಅವನ ಬಳಿ ಬಂದು,

"ಇದೇನೋ ಇಲ್ಲಿ ಕೂತಿದ್ದಿ? ಸಮನ್ವಿತಾ ಎಲ್ಲಿ? ಹೇಗಿದ್ದಾಳೆ?" ಗಾಬರಿಯಲ್ಲಿ ಕೇಳಿದರು.

"ಟೇಕ್ ಇಟ್ ಈಸಿ಼ ಮಾ. ಏನಾಗಿಲ್ಲ. ಸ್ವಲ್ಪ ನಿಶ್ಯಕ್ತಿಯಿಂದಾಗಿ ಪ್ರಜ್ಞೆ ತಪ್ಪಿದೆಯಷ್ಟೇ" ಸಮಾಧಾನಿಸಿ, "ಅವಳಿಗೆ ಎಚ್ಚರ ಇಲ್ಲ. ಹಾಗೆ ಇಲ್ಲಿ ಕುತ್ಕೊಂಡೆ ಅಷ್ಟೇ. ಈಗ ಒಳಗೆ ಹೋಗೋಣ ಬಾ" ಎಂದು ಎಲ್ಲರೂ ವಾರ್ಡಿನತ್ತ ನಡೆದರು.

ಅಭಿರಾಮ್ ಇನ್ನು ಯಾರೇ ಬರಲಿ, ಏನೇ ಆಗಲಿ ಎಲ್ಲದಕ್ಕೂ ಸೈ ಎಂದುಕೊಂಡವ ಉಲ್ಲಾಸದಿಂದ ವಾರ್ಡಿನೊಳಗೆ ಹೆಜ್ಜೆ ಹಾಕಿದ.....

ಯೋಚನೆಯಲ್ಲಿ ಮುಳುಗಿದ್ದ ನವ್ಯಾಳಿಗೆ ಯಾರೋ ವಾರ್ಡಿನೊಳಗೆ ಬರುತ್ತಿರುವಂತೆ ಅನಿಸಿ ತಟ್ಟನೆ ಬಾಗಿಲಿನತ್ತ ನೋಡಿದಳು.

ಒಳಬಂದ ನಾಲ್ವರೂ ಅವಳಿಗೆ ಅಪರಿಚಿತರೇ. ಅಭಿರಾಮ್ ಬಗ್ಗೆ ಕೇಳಿದ್ದೇ ಹೊರತು ನೋಡಿರಲಿಲ್ಲ ಎಂದೂ. ಅವಳು ಗಲಿಬಿಲಿಗೊಂಡು ಎದ್ದು ನಿಂತಳು. ಅವಳಿಗೆ‌ ಅಪರಿಚಿತ ಗಂಡಸರನ್ನು ನೋಡಿದ್ದೇ ಭಯದಿಂದ ಕೈಕಾಲು ನಡುಗುತ್ತದೆ. ಇದು ಅವಳ ಗತ ಜೀವನ ಅವಳಿಗಿತ್ತ ಕೊಡುಗೆ. ಇವರ್ಯಾರೋ, ನನಗೇನಾದರೂ ಹಾನಿ ಮಾಡಲು ಬಂದಿರಬಹುದೇನೋ ಎಂಬ ಭಯ ಬೆಂಬಿಡದ ಭೂತ ಅವಳಿಗೆ. ಆದರೂ ಜೊತೆಯಲ್ಲಿದ್ದ ಮೃದುಲಾರನ್ನು ಕಂಡು ಸ್ವಲ್ಪ ಧೈರ್ಯ ತಂದುಕೊಂಡಳು.

ನವ್ಯಾಳ ಮುಖ ಕಂಡು ಅವಳ ಪರಿಸ್ಥಿತಿ ಒಂದು ಮಟ್ಟಿಗೆ ಅರ್ಥವಾಯಿತು ಅಭಿರಾಮ್ ಗೆ. ಅವನು ನಸುನಕ್ಕು, "ಹಲೋ, ನನ್ನ ಹೆಸರು ಅಭಿರಾಮ್. ಇವರಿಬ್ಬರೂ ನನ್ನ ತಂದೆ ತಾಯಿ ಹಾಗೇ ಅವನು ನನ್ನ ಫ್ರೆಂಡ್. ನೀವು ನವ್ಯಾ, ರೈಟ್?" ಪರಿಸ್ಥಿತಿ ತಿಳಿಗೊಳಿಸುತ್ತಾ ಕೇಳಿದ.

ಅಭಿರಾಮ್ ಹೆಸರು ಕೇಳಿದ್ದೆ ಅವಳ ಮುಖದಲ್ಲಿ ನಗುಮೂಡಿತು. "ಓಹ್ ನೀವಾ? ಸಾರಿ ನಿಮ್ಮನ್ಯಾವತ್ತೂ ನೋಡಿರಲಿಲ್ಲ. ಹಾಗಾಗಿ ಗೊತ್ತಾಗ್ಲಿಲ್ಲ" ಎಂದಳು.

"ಇರ್ಲಿ ಬಿಡಮ್ಮಾ. ಅಂದ್ಹಾಗೆ ನೀನು?" ಕೇಳಿದರು ಮೃದುಲಾ.

"ಅಮ್ಮ, ಇವ್ರು ನವ್ಯಾ ಅಂತ. ಸಮನ್ವಿತಾ ಫ್ರೆಂಡ್" ಅವನೇ ಹೇಳಿದ. ನವ್ಯಾ ಕೈ ಜೋಡಿಸಿದಳು. ಅಷ್ಟರಲ್ಲಿ ಫೋನಿನಲ್ಲಿ ಮಾತು ಮುಗಿಸಿದ ಕಿಶೋರ್ ಒಳಗೆ ಬಂದಿದ್ದ. ನವ್ಯಾ ಅವರನ್ನು ಪರಸ್ಪರ ಪರಿಚಯಿಸಿದಳು. 

"ಇಟ್ಸ್ ಗ್ರೇಟ್ ಪ್ಲೆಷರ್ ಟು ಮೀಟ್ ಯು ಮಿಸ್ಟರ್ ಅಭಿರಾಮ್"  ಕೈ ಚಾಚಿದ ಕಿಶೋರ್. ಅವನೇ ನವ್ಯಾಳೊಂದಿಗೆ ಅಭಿಯನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದ ಸಮನ್ವಿತಾಳ‌ ಬಗ್ಗೆ ಮಾತನಾಡಲು. ಅಭಿರಾಮನ ಬಿಗುಮಾನವಿಲ್ಲದ ನಡವಳಿಕೆ ಬಹಳ ಹಿಡಿಸಿತು ಇಬ್ಬರಿಗೂ.

ಹೀಗೆ ಶುರುವಾದ ಮಾತುಕತೆ ಕೆಲವೇ ನಿಮಿಷಗಳಲ್ಲಿ ಬಹು ವರ್ಷಗಳ ಆತ್ಮೀಯರಂತೆ ಹರಟುವ ತನಕ ಬೆಳೆಯಿತು. ಮಧ್ಯೆ ಮಧ್ಯೆ ವೈಭವನ ಒಗ್ಗರಣೆ ಬೇರೆ. ಇವರ ಎಕ್ಸಪ್ರೆಸ್ ಟ್ರೈನಿನಂತಹಾ ಮಾತುಕತೆಗೆ ಬ್ರೇಕ್ ಬಿದ್ದದ್ದು ಮೀರಾ  ಒಳಗೆ ಬಂದಾಗಲೇ. ಸಮನ್ವಿತಾಳನ್ನು ಇನ್ನೊಮ್ಮೆ ಪರೀಕ್ಷಿಸಿ ಇನ್ನೊಂದು ಇಂಜೆಕ್ಷನ್ ಕೊಟ್ಟು ಡ್ರಿಪ್ಸ್ ಬದಲಾಯಿಸಿದರು.

ಅವಳಿಗೆ ಸಧ್ಯದಲ್ಲಿ ಎಚ್ಚರವಾಗುವ ಲಕ್ಷಣವಿರಲಿಲ್ಲ. ಜ್ವರ ಕಡಿಮೆಯಾದರೂ ನಿಶ್ಯಕ್ತಿ, ಸುಸ್ತು ಬಹಳವಿತ್ತು. ಸಚ್ಚಿದಾನಂದ್ ದಂಪತಿಗಳು ಮರುದಿನ ಬರುವೆವು ಎಂದು ಮೀರಾರೊಂದಿಗೆ ಹೊರಟರು. 

ಚೈತಾಲಿಯನ್ನು ಭೇಟಿಯಾಗಬೇಕಿತ್ತು ಅಭಿಗೆ. ಹಾಗಾಗಿ ಅವನೂ ಸಂಜೆಗೆ ಬರುವೆನೆಂದು ವೈಭವನೊಂದಿಗೆ ಹೊರಟ.

ಅದರ ಹಿಂದೆಯೇ ಮಂಗಳಮ್ಮ ಕರೆ ಮಾಡಿದ್ದರು. ಕಾರ್ತಿಕ್ ವಿಷಯ ಹೇಳಿದ್ದರಿಂದ ಗಾಬರಿಯಲ್ಲಿ ಕರೆ ಮಾಡಿದ್ದರಾಕೆ. ಅವರಿಗೆ ವಿಷಯ ತಿಳಿಸಿ ಗಾಬರಿಯಾಗುವಂತದ್ದು ಏನೂ ಇಲ್ಲವೆಂದು ಸಮಾಧಾನಿಸಿದಳು‌ ನವ್ಯಾ. ಇನ್ನೆರಡು ದಿನದಲ್ಲಿ ಹಿಂದಿರುಗುವವರಿದ್ದರಾಕೆ. ತಾನು ವಾಪಾಸಾದ ಕೂಡಲೇ ಒಂದು ವಾರ ರಜೆ ಹಾಕಿಸಿ ಸಮನ್ವಿತಾಳನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದವರ ಮಾತು ಕೇಳಿ ಹೆಮ್ಮೆಯೆನಿಸಿತು ಆ ತಾಯಿಯ ಬಗ್ಗೆ ನವ್ಯಾಳಿಗೆ. ಆಕೆ ಹಾಗಿರುವುದರಿಂದಲೇ ಕಿಶೋರ್ ಇಷ್ಟು ಒಳ್ಳೆಯ ವ್ಯಕ್ತಿಯಾಗಿರುವುದು ಎನಿಸದಿರಲಿಲ್ಲ. ಸತ್ಯನಾರಾಯಣ ಅವರು ಯೋಗಕ್ಷೇಮ ವಿಚಾರಿಸಿ ಫೋನಿಟ್ಟರು.

ನವ್ಯಾ, ಕಿಶೋರ್ ಮಾತ್ರ ಉಳಿದರು ಸಮನ್ವಿತಾಳೊಡನೆ. ಕಾರ್ತಿಕ್ ತಾನು ಹೊರಗೆ ಊಟತಿಂಡಿ ಮಾಡಿಕೊಳ್ಳುವೆ, ಸಂಜೆ ಆಸ್ಪತ್ರೆಗೇ ಬರುವೆ ಎಂದಿದ್ದರಿಂದ ಮನೆಯತ್ತ ಹೋಗಲಿಲ್ಲ ಇಬ್ಬರೂ.

ಅವರಿಬ್ಬರ ಯೋಚನೆಯೂ ಒಂದೇ ದಿಕ್ಕಿನಲ್ಲಿ ಸಾಗುತ್ತಿತ್ತು.

ಅದರ ಗಮ್ಯ..... ಅಭಿರಾಮ್.......

ಅವನ ಹಾಗೂ ಅವನ ಮನೆಯವರ ಮಾತುಕತೆಯ ಶೈಲಿಯಿಂದಲೇ ಅವರು ಸುಸಂಸ್ಕೃತರೆಂದು ತಿಳಿಯುತ್ತಿತ್ತು. ಹಾಗೆಯೇ ಅವರ ಮಾತಿನಲ್ಲಿ ಸಮಾಳ ಬಗ್ಗೆ ಅಕ್ಕರೆಯಿತ್ತು.

ಇಬ್ಬರೂ ಆ ಬಗ್ಗೆಯೇ ಚರ್ಚಿಸತೊಡಗಿದರು.

ಹೇಗಾದರೂ ಸಮನ್ವಿತಾಳನ್ನು ಈ ಮದುವೆಗೆ ಒಪ್ಪಿಸಿ ಆ ಪರಿವಾರಕ್ಕೆ ಸೇರಿಸಬೇಕೆಂಬ ಯೋಜನೆಗೆ ರೂಪುರೇಷೆಗಳು ತಯಾರಾಗತೊಡಗಿದವು.

ಸಮನ್ವಿತಾ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ನೆಮ್ಮದಿಯಾಗಿ ಮಲಗಿದ್ದಳು.

ನೆಮ್ಮದಿ........!?

ನೆಮ್ಮದಿ ಇತ್ತೋ ಇಲ್ಲವೋ ಯಾರಿಗೂ ತಿಳಿಯದಾಗಿತ್ತು........ 

     ********ಮುಂದುವರೆಯುತ್ತದೆ*********



ಅನೂಹ್ಯ 26

ಅದು #7, ಲೋಕ್ ಕಲ್ಯಾಣ್ ಮಾರ್ಗ್, ನವದೆಹಲಿ........

ಅದನ್ನು "ಪಂಚವಟಿ" ಎಂದೂ ಕರೆಯಲಾಗುತ್ತದೆ. ಭಾರತದ ಪ್ರಧಾನಮಂತ್ರಿಗಳ‌ ಅಧಿಕೃತ ನಿವಾಸವದು.

ಅದರೊಳಗೆ ಪ್ರವೇಶಿಸುವುದು ಸುಲಭದ ಮಾತಲ್ಲ. ಕಷ್ಟಸಾಧ್ಯವಾದ ಕೆಲಸವದು.

ಆದರೆ ತಾನು ಅಂತಹ ಸೌಭಾಗ್ಯ ಪಡೆದಿದ್ದೇನೆ.

ಪಂಚವಟಿಯಲ್ಲಿ ಇಂದಿನ ಈ ಸಮಾರಂಭ ನನಗಾಗಿಯೇ. ನನ್ನ ಸಾಧನೆಯನ್ನು ಹಾಡಿ ಹೊಗಳಲು ಎಲ್ಲೆಡೆಯಿಂದ ಅತಿಥಿಗಳು ಆಗಮಿಸಿದ್ದಾರೆ.

ಪ್ರಧಾನಿ ಮೋದಿಯವರು ನನ್ನ ಸಾಧನೆಯನ್ನು ಬಣ್ಣಿಸುತ್ತಿದ್ದಾರೆ. RAW(Research and Analysis Wing) ದ ಅತ್ಯುನ್ನತ ಅಧಿಕಾರಿಯಾಗಿ ಸಾವಿರಾರು ದೇಶವಿರೋಧಿಗಳ ಹುಟ್ಟಡಗಿಸಿದ ವೀರನೆಂದು ಕೊಂಡಾಡಿ ಸನ್ಮಾನ ಮಾಡುತ್ತಿದ್ದಾರೆ.

ಅಲ್ಲಿ ನೆರೆದಿರುವ ಸಾವಿರಾರು ಜನರು "ಮೋದಿ" "ಮೋದಿ" ಎನ್ನುವ ಬದಲು "ವೈಭವ್…." "ವೈಭವ್..." ಎಂದು ಕಿರುಚುತ್ತಿದ್ದಾರೆ. ಪ್ರೆಸ್ ರಿಪೋರ್ಟರ್ಸ್ ನನಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಒಬ್ಬಳು ಸುಂದರಿ ಎದ್ದು ನಿಂತು "ಡಿಟೆಕ್ಟಿವ್ ವೈಭವ್, ಯು ಆರ್ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಹಾರ್ಟ್ ಥ್ರೋಬ್ ಆಫ್ ಇಂಡಿಯಾ" ಎನ್ನುತ್ತಿರುವಾಗಲೇ ಸುತ್ತ ನಿಂತಿರುವ ಸಾವಿರಾರು ಲಲನೆಯರು "ಹೋ......." ಎಂದು ಅರಚುತ್ತಿದ್ದಾರೆ.

ಹಾಗೆಯೇ ನನ್ನ ಮೇಲೆ ಹೂವುಗಳನ್ನು ಎರಚುತ್ತಿದ್ದಾರೆ.

ಆಹಾ..... ಪುಷ್ಪ ವೃಷ್ಟಿ......

ಅರೇ...... ಇದೇನು? ಹೂವು ಎಸೆದರೆ ನೋವಾಗುತ್ತಾ? ಇಲ್ವಲ್ಲಾ. ಯಾವನೋ ಅದು ಹೂವಿನೊಂದಿಗೆ ಕಲ್ಲೆಸಿತಿರೋದು? ಅಯ್ಯಮ್ಮಾ , ಕಾಲು ಮುರೀತು! ಯಪ್ಪಾ…. ಇದೇನಿದು?  

ವೈಭವ್ ಕಣ್ಣು ಹೊಸಕಿಕೊಂಡು ನೋಡುವುದರೊಳಗೆ ಇನ್ನು ನಾಲ್ಕು ಏಟುಗಳು ಬಿದ್ದಾಗಿತ್ತು. ಸರಿಯಾಗಿ ಕಣ್ಬಿಟ್ಟು ನೋಡ್ತಾನೇ….. ಎದುರಲ್ಲಿ ಅವನಮ್ಮ. 

ಸೆರಗು ಸೊಂಟಕ್ಕೆ ಸಿಕ್ಕಿಸಿ ರುದ್ರ ಕಾಳಿಯಂತೆ ನಿಂತಿದ್ದರು ಕೈಯಲ್ಲಿ ದೊಣ್ಣೆ ಹಿಡಿದು.

"ವಾಟ್ ಈಸ್ ದಿಸ್ ಜನಕಿ? (ಅಪ್ಪನಿಗೆ ಜನಕ ಅನ್ನೋದಾದ್ರೆ ಅಮ್ಮನಿಗೆ ಜನಕಿ ಅನ್ನೋದ್ರಲ್ಲಿ ತಪ್ಪೇನು ಎಂಬುದು ನಮ್ಮ ಶ್ರೀ ಶ್ರೀ ಶ್ರೀ ವೈಭವಾನಂದ ಸ್ವಾಮಿಗಳ ವಾದ) ಎಂತಾ ಕನಸು ಗೊತ್ತಾ? ನಿನ್ನ ಮಗನ ಸಾಧನೆ ಮೆಚ್ಚಿ ಪ್ರಧಾನಿ ಮೋದಿ ಅವರ ಮನೆಗೇ ಕರೆಸಿ ನನಗೆ ಸನ್ಮಾನ ಮಾಡಿ,

"ಭಾಯಿಯೋ ಔರ್ ಬೆಹನೋ, ಮೇರೆ ಪ್ಯಾರೇ ದೇಶ್ ವಾಸಿಯೋ... ಆಜ್ ಕಾ ದಿನ್ ಭಾರತ್ ಮಾತಾ ಕೀ ಸಿರ್ ಫಕ್ರ್ ಸೇ ಊಂಚಾ ಹೋಗಾ, ಜೋ ಉಸ್ ನೇ ವೈಭವ್ ಜೈಸೇ ಬೇಟಾ ಪಾಯಾ....." ಅಂತ ಏನೆಲ್ಲಾ ಹೊಗಳ್ತಿದ್ರು ಗೊತ್ತಾ? ಇದನ್ನು ನೋಡೋಕೆ ಆಡಳಿತ ಪಕ್ಷ, ವಿಪಕ್ಷ, ಶುಕ್ಲ ಪಕ್ಷ, ಪಿತೃ ಪಕ್ಷ ಹೀಗೆ ಎಲ್ಲಾ ಕಡೆಯಿಂದ ಗಣ್ಯರು ಆಗಮಿಸಿ ನನ್ನ ಸಾಧನೆ ಕೊಂಡಾಡ್ತಿದ್ರು. ನನ್ನಂಥಾ ಮಾಣಿಕ್ಯನ ಹೆತ್ತಿರೋದಕ್ಕೆ ನಿನಗೊಂದು ಭಾರತರತ್ನ ಕೊಡೋಕೆ ಡಿಸ್ಕಷನ್ ಆಗ್ತಿತ್ತು. ನೀನೊಬ್ಳು ಎಬ್ಬಿಸ್ಬಿಟ್ಯಲ್ಲ" ಹಲುಬಿದ.

"ನಿನ್ನ ಮೂತಿಗೆ ಮೋದಿ ಬೇರೆ ಬೇಕೇನೋ? ನಿನ್ನ ಹೆತ್ತಿದಕ್ಕೆ ನನಗೆ ಭಾರತ ರತ್ನ ಬೇರೆ ಕೇಡು. ಬೆಳಿಗ್ಗೆ ಎದ್ದು ಲಕ್ಷಣವಾಗಿ ಕೆಲಸಕ್ಕೆ ಹೋಗೋದು ಬಿಟ್ಟು ಹಗಲುಗನಸು ಕಾಣ್ತಿಯಾ? ನಿನ್ನ ಕಚೀಫ್, ಚಡ್ಡಿ, ಸಾಕ್ಸ್ ಎಲ್ಲಿದೆ ಅಂತ ನಾನು ಹುಡ್ಕಿಡಬೇಕು.  ಡಿಟೆಕ್ಟಿವ್ ಅಂತೆ ಡಿಟೆಕ್ಟಿವ್, ನಿನ್ನ ಯಾಸಕ್ಕಷ್ಟು ಬೆಂಕಿ ಹಾಕ…." ಮತ್ತೆ ದೊಣ್ಣೆ ಎತ್ತಿ ನಾಲ್ಕು ಬಾರಿಸಿದವರು ಬಂದ ವಿಷಯ ನೆನಪಿಸಿಕೊಂಡು, "ಪಾಪ ಅಭಿರಾಮ್, ಆಗ್ಲಿಂದ ನಿನಗೆ ಫೋನ್ ಮಾಡಿ ಸಾಕಾಯ್ತು ಅಂತ ಲ್ಯಾಂಡ್ಲೈನಿಗೆ ಮಾಡಿದ್ದ. ಏನೋ ಫೋನ್ ತೆಗೆಯೋಕಾಗದಷ್ಟು ದೊಡ್ರೋಗ ಬಂದಿರೋದು ನಿನಗೆ ಕಮಂಗಿ. ಮೊದ್ಲು ಅವ್ನಿಗೆ ಫೋನ್ ಮಾಡಿ ವಿಚಾರಿಸು. ಹಾಗೆ ಅವನನ್ನು ನೋಡಿ ಸ್ವಲ್ಪ ಕಲಿ" ಎಂದರು.

"ಓಹ್ ಶಿಟ್, ಮಮ್ಮಿ ಇದನ್ನು ಮುಂಚೆನೇ ಹೇಳ್ಬೇಕು ತಾನೇ? ಈಗ ಅವನೊಬ್ನೇ ಕುಳ್ಳಿ ಡಾರ್ಲಿಂಗ್ ಮನೆಗೆ ಹೋದ್ರೇ ನಾನೇನು ಮಾಡ್ಲೀ? ರಾತ್ರಿಯೆಲ್ಲ ನನ್ನ ಕುಳ್ಳಿ ಬೇಬಿನೇ ನೆನೆಸಿಕೊಂಡು ಮಲ್ಗಿದ್ದು ಗೊತ್ತಾ?" ಅವನ ಪ್ರವರ ಕೇಳಲು ಆಕೆ ಅಲ್ಲಿರಲಿಲ್ಲ.... ಅವನು ಮೊಬೈಲು ತೆಗೆದು ನೋಡಿದ..12 ಬಾರಿ ಕಾಲ್ ಮಾಡಿದ್ದ ಅಭಿರಾಮ್... ಅಯ್ಯೋ ದುರ್ವಿಧಿಯೇ ಎಂದು ವಾಪಸು ಕರೆ ಮಾಡಿದ.

ಕಾಲ್ ರಿಸೀವ್ ಮಾಡಿದವನ ಕೋಪ ಚರಮ ಸೀಮೆಯಲ್ಲಿತ್ತು. "ಗೋ ಟು ಹೆಲ್ ಯು ಈಡಿಯಟ್. ಏನೋ ಮೂರ್ಕಾಸಿನ ಮರ್ಯಾದೆ ಇದ್ಯೇನೋ ನಿಂಗೆ? ನಾನಿಲ್ಲಿ ಸಾಯ್ತಿದ್ರೆ ನೀನು ಆರಾಮಾಗಿ ನಿದ್ರೆ ಮಾಡ್ಕೊಂಡಿದ್ದೀಯಲ್ಲ. ನೀನೂ ಒಬ್ಬ ಫ್ರೆಂಡಾ? ಮಗನೇ ನಿನ್ನೆ ಹೇಳಿದ್ದೇ ತಾನೇ ಆ ಹುಡುಗಿ ಅಡ್ರೆಸ್ ನನಗೆ ಕಳಿಸು ಅಂತ. ನನ್ನ ಫಸ್ಟ್ ಕೇಸು, ನಾನೇ ಬರ್ತೀನಿ ಅಂತ ಏನೇನೋ ಡೈಲಾಗ್ ಹೊಡೀತಿದ್ದೆ. ಈಗ ಪತ್ತೆನೇ ಇಲ್ಲ."

"ಅಲ್ಲಾ ಬೀರ್, ಅದು ಮೋದಿ, RAW, ಸನ್ಮಾನ…. ಸಾರಿ ಮಗಾ ಪ್ಲೀಸ್ ಸಿಟ್ಟಾಗಬೇಡ. ಚೈತಾಲಿ, ಅದೇ ಆ ಕುಳ್ಳಿ….. ಅವಳು ಸತ್ಯಂ ರಾವ್ ಪಿ.ಎ ಅಂತೆ. ಅವಳ ಅಡ್ರೆಸ್ ತಗೊಂಡಿದ್ದೀನಿ. ಎಲ್ಲಿಗೆ ಬರ್ಲೀ ಹೇಳು? ಈಗ್ಲೇ ಹೊರಡ್ತೀನಿ" ಅವಸರದಲ್ಲಿ ತನ್ನ ಡಿಟೆಕ್ಟಿವ್ ಪೋಷಾಕು ಏರಿಸುತ್ತಾ ಕೇಳಿದ.

"ನೋಡಪ್ಪಾ ಅತಿರಥ, ದಯವಿಟ್ಟು ಆ ಹುಡುಗಿ ಅಡ್ರೆಸ್ ಸಿಕ್ಕಿದ್ರೆ ನನಗೆ ಕಳಿಸು. ಇಲ್ಲಾ ನಿನ್ನಂತವನಿಗೆ ಕೆಲಸ ಒಪ್ಪಿಸಿದ ತಪ್ಪಿಗೆ ಅದನ್ನೂ ನಾನೇ ಮಾಡ್ಕೋತೀನಿ. ತಮ್ಮ ಸರ್ವಾಂಗಕ್ಕೂ ಸಾಷ್ಟಾಂಗ ನಮಸ್ಕಾರ. ನನ್ನ ಬಿಟ್ಬಿಡು." 

"ಬೀರ್ ಸಾರಿ ಕಣೋ, ನನ್ನಿಂದ ತಪ್ಪಾಯ್ತು. ಕ್ಷಮಿಸೋ. ನಿನ್ನ ಬಿಟ್ರೆ ನನಗ್ಯಾರಿದ್ದಾರೆ? ನೀನೆ ನನ್ನ ಕೈ ಬಿಟ್ರೆ ನನ್ನ ಫಸ್ಟ್ ಕೇಸೇ ಹೊಗೆ. ಪ್ಲೀಸ್.. ಪ್ಲೀಸ್..." ಗೋಗರೆದ.

"ನಾನೀಗ ಡಾ. ಮೀರಾ ಅವರ ಹತ್ರ ಮಾತಾಡೋಕೆ ಧನ್ವಂತರಿಗೆ ಹೋಗ್ತಿದ್ದೀನಿ. ಒಂದು ಗಂಟೆ ಆಗ್ಬಹುದು. ಅಷ್ಟರೊಳಗೆ ನೀನು ಅಡ್ರೆಸ್ ಮೆಸೇಜ್ ಮಾಡ್ತಿಯೋ ಇಲ್ಲಾ ಆಸ್ಪತ್ರೆಗೆ ಬರ್ತೀಯೋ ನಿನಗೆ‌ ಬಿಟ್ಟಿದ್ದು. ನಾನು ಫೋನಿಡ್ತೀನಿ" ಕರೆ ಕಡಿತಗೊಳಿಸಿ ಒಳ್ಳೆ ಡ್ರಾಮಾ ಕಂಪನಿ ಸಹವಾಸ ಆಯ್ತು ಎಂದು ಮನದಲ್ಲೇ ನಗುತ್ತಾ ಧನ್ವಂತರಿಯೊಳಗೆ ಪ್ರವೇಶಿಸಿದ.

ಮೀರಾ ಅವರು ಕ್ಯಾಬಿನಿನಲ್ಲಿ ಕಾಣಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಯೋಚಿಸುತ್ತಾ ಹೊರಬಂದಾಗ ನರ್ಸ್ ಒಬ್ಬಳು ಎದುರಾದಳು. ಅವಳ ಬಳಿ ತಾನು ಮೀರಾ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದಾಗ ಆಕೆ ಅವನನ್ನು ಅಲ್ಲೇ ಇರಲು ತಿಳಿಸಿ ಕ್ಯಾಥ್ ಲ್ಯಾಬಿನಲ್ಲಿದ್ದ ಮೀರಾರನ್ನು ಕರೆಯಲು ಹೋದಳು.

ಅವನು ಮೀರಾ ಅವರ ಕ್ಯಾಬಿನಿನಲ್ಲಿ ಅವರಿಗಾಗಿ ಕುಳಿತು ಕಾಯತೊಡಗಿದ. ಸಮನ್ವಿತಾಳನ್ನು ಒಮ್ಮೆ ನೋಡಿ ಮಾತನಾಡಿಸಬೇಕೆಂದು ಬಲವಾಗಿ ಅನಿಸಿತಾದರು ಇಂದು ಅವಳು ಆಸ್ಪತ್ರೆಗೆ ಬಂದಿರಲಾರಳು ಎನಿಸಿತು. ಅವಳ ಆಘಾತಗೊಂಡ ಮನಸ್ಸು ತಹಬಂದಿಗೆ ಬರಲು ಒಂದಿಷ್ಟು ಸಮಯ ಬೇಕೆಂದು ತಿಳಿದಿತ್ತು ಅವನಿಗೆ. ಕ್ವಾಟ್ರಸ್ಸಿಗೆ ಹೋಗಿ ಭೇಟಿಯಾಗಲೇ ಎಂದುಕೊಂಡವ ಮೊದಲು ಚೈತಾಲಿಯನ್ನು ಭೇಟಿಯಾಗಿ ವಿಷಯ ತಿಳಿದುಕೊಂಡು ನಂತರ ಹೋಗುವುದೇ ಸೂಕ್ತ ಎಂದು ಸುಮ್ಮನಾದ.

ಅಷ್ಟರಲ್ಲಿ ಒಳ ಬಂದ ಮೀರಾ, ಅಭಿರಾಮನನ್ನು ಕಂಡು ಆನಂದಾಶ್ಚರ್ಯಗಳಿಂದ, "ವಾಟ್ ಎ ಸರ್ಪ್ರೈಸ್. ಅದೇನು ಸಡನ್ನಾಗಿ ಬಂದ್ಬಿಟ್ಟಿದ್ದೀರಾ?" ಎಂದರು.

"ಪ್ಲೀಸ್ ಬಹುವಚನ ಎಲ್ಲಾ ಬೇಡ. ನೀವು ನನ್ನ ಅಮ್ಮನ ಹಾಗೆ. ಹೆಸರು ಹಿಡಿದು ಕರೀರಿ" ಅವನೆಂದಾಗ, "ಸರಿನಪ್ಪಾ, ಈಗ್ಹೇಳು. ಅದೇನು ಹೀಗೆ ನನ್ನ ಹುಡುಕಿ ಬಂದು ಕಾಯ್ತಿದ್ದೀಯಾ?" ಫ್ಲಾಸ್ಕಿನಲ್ಲಿದ್ದ ಟೀ ಎರಡು ಗ್ಲಾಸುಗಳಿಗೆ ಬಗ್ಗಿಸಿ, ಒಂದನ್ನು ಅವನಿಗೆ ನೀಡಿ, ಇನ್ನೊಂದು ಕಪ್ ಕೈಗೆತ್ತಿಕೊಂಡು ಕೇಳಿದರು ಮೀರಾ.

"ನಿಮ್ಮ ಹತ್ತಿರ ಸ್ವಲ್ಪ ಮಾತಾಡೋದಿದೆ. ತೀರಾ ವೈಯಕ್ತಿಕ ವಿಷಯ. ಆರ್ ಯು ಫ್ರೀ ನೌ?" ಅವನು ಕೇಳಿದಾಗ ಅಚ್ಚರಿಯಿಂದ ಅವನೆಡೆಗೆ ನೋಡಿದರು. ನನ್ನ ಹತ್ರ ಮಾತನಾಡುವ ವೈಯಕ್ತಿಕ ವಿಷಯ ಏನಿರಬಹುದು ಎಂಬುದು ಅವರಿಗೆ ಅರ್ಥವಾಗಲಿಲ್ಲ. 

"ಕೆಲಸ ಇದೆ ಬಟ್ ಫ್ರೀ ಮಾಡ್ಕೋತೀನಿ. ಹೇಳು ಏನು ವಿಷಯ?" ಕೇಳಿದರು.

ಅವನು ಹೇಗೆ ಆರಂಭಿಸಬೇಕು ಎಂದು ಅರ್ಥವಾಗದೆ, ಎರಡು ಮೂರು ಸಲ ಮಾತಿಗಾರಂಭಿಸಲು ಹೊರಟು ಸುಮ್ಮನಾದಾಗ ಬಹಳ ಗಹನವಾದ ವಿಚಾರವೇ ಇರಬೇಕು ಎನಿಸಿತು ಮೀರಾರಿಗೆ.

"ಯಾಕಿಷ್ಟು ಸಂಕೋಚ? ಈಗಷ್ಟೇ ನಾನು ನಿನ್ನ ಅಮ್ಮನ ತರಾನೇ ಅಂದಿದ್ದು ಸುಳ್ಳೇನು?" 

"ಹಾಗಲ್ಲ. ತುಂಬಾ ಸೂಕ್ಷ್ಮ ವಿಚಾರ. ಹೇಗೆ ಹೇಳ್ಬೇಕೋ ತಿಳೀತಿಲ್ಲ. ನಾನು ಸಮನ್ವಿತಾ ಬಗ್ಗೆ ಮಾತನಾಡೋಕೆ ಬಂದೆ. ಅವಳ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತು" ಎಂದ. ಇದನ್ನು ನಿರೀಕ್ಷಿಸಿರಲಿಲ್ಲ ಮೀರಾ. ಅವರಿಗೆ ಅವನ ಮಾತಿನ ತಲೆಬುಡ ಅರ್ಥವಾಗಲಿಲ್ಲ.

"ಯು ಮೀನ್ ಡಾಕ್ಟರ್ ಸಮನ್ವಿತಾ? ಸತ್ಯಂ ರಾವ್ ಮಗಳು?" ಅನುಮಾನದಲ್ಲಿ ಕೇಳಿದರು. ಹೌದೆಂದು ತಲೆಯಾಡಿಸಿದ.

"ನನಗೇನು ಅರ್ಥವಾಗುತ್ತಿಲ್ಲ ಅಭಿರಾಮ್. ನಿನಗೆ ಅವಳು ಪರಿಚಯನಾ? ಪರಿಚಯ ಇದ್ರೆ ಅವಳ್ಹತ್ರನೇ ಕೇಳಬಹುದಲ್ಲ. ಇಷ್ಟಕ್ಕೂ ಅವಳ ಮಾಹಿತಿ ನಿಂಗ್ಯಾಕೆ? ವಿವರಿಸಿ ಹೇಳ್ಬಹುದಾ?" 

ಮೀರಾ ಬಗ್ಗೆ ಚೆನ್ನಾಗಿ ಗೊತ್ತು ಅವನಿಗೆ. ಆಕೆಗೆ ಎಲ್ಲಾ ವಿಷಯ ಹೇಳುವುದರಲ್ಲಿ ತೊಂದರೆಯೇನು ಇಲ್ಲ ಎನಿಸಿತು. ಕ್ಷಣ ಯೋಚಿಸಿದವನು ರಾವ್‌ ‌ಅವರ ಪಾರ್ಟಿಯಿಂದ ಹಿಡಿದು ನಿನ್ನೆಯತನಕ ನಡೆದದ್ದೆಲ್ಲವನ್ನೂ ಚಾಚೂ ತಪ್ಪದೆ ವಿವರಿಸಿದ. ಅವನ ಮಾತನ್ನು ಕೇಳಿ ಮೀರಾ ಉಸಿರಾಟವನ್ನೂ ಮರೆತವರಂತೆ ಕುಳಿತುಬಿಟ್ಟರು.

ಅವರಿಗೆ ಸುಧಾರಿಸಿಕೊಳ್ಳಲು ಸಮಯ ಹಿಡಿಯಿತು. ಅವನೇ ಅವರನ್ನು ಸಮಾಧಾನಿಸಿದ. ಸ್ವಲ್ಪ ಚೇತರಿಸಿಕೊಂಡವರು, "ಅದಕ್ಕೇ ಇವತ್ತು ಬಂದಿಲ್ಲ ಅವಳು ಆಸ್ಪತ್ರೆಗೆ. ಒಬ್ಬಳೇ ಕ್ವಾಟ್ರಸ್ಸಿನಲ್ಲಿ ಕೂತು ಅಳ್ತಿರ್ಬೇಕು ಹುಚ್ಚುಡುಗಿ. ಸಂತೋಷ ಎಲ್ಲರೊಟ್ಟಿಗೆ ಹಂಚಿಕೊಳ್ತಾಳೆ ಆದರೆ ನೋವಲ್ಲಿ ಯಾರಿಗೂ ಪಾಲಿಲ್ಲ" ವ್ಯಾಕುಲಗೊಂಡರು.

ಅವನು ಏನೂ ಕೇಳದೆ ಸುಮ್ಮನಾದ. ಆದರೆ ಅವರು ಮಾತನಾಡತೊಡಗಿದರು. ಅವಳು ಮೊದಲು ಧನ್ವಂತರಿಯಲ್ಲಿ ಕಂಡಲ್ಲಿನಿಂದ ಈಗಿನವರೆಗಿನ ಅವಳ ಪಯಣ, ಅವಳ ನೋವು, ನಲಿವು, ಆಶ್ರಯದೊಂದಿಗಿನ ಅವಳ ಒಡನಾಟ, ಕೆಲ ದಿನದ ಹಿಂದಷ್ಟೇ ಮನೆ ಬಿಟ್ಟು ಕ್ವಾಟ್ರಸ್ಸಿಗೆ ಶಿಫ್ಟ್ ಆದುದು ಎಲ್ಲವು ಬಂದು ಹೋದವು ಅವರ ಮಾತಲ್ಲಿ. ಅವಳ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು ಅಭಿರಾಮ್ ಮನದಲ್ಲಿ. ಹೊರ ಜಗತ್ತಿಗೆ ತೋರ್ಪಡಿಸದಿದ್ದರೂ ಅವಳ ಆಂತರ್ಯದಲ್ಲಿ ನೋವಿನ ಕೈ ಮೇಲು ಎನಿಸಿತವನಿಗೆ.

"ಹಣ, ಪ್ರತಿಷ್ಟೆ, ಸಿರಿವಂತಿಕೆ ಇದ್ಯಾವುದೂ ಅವಳಿಗೆ ಬೇಕಿರಲಿಲ್ಲ. ಅವಳು ಇಷ್ಟು ವರ್ಷಗಳಲ್ಲಿ ಹೆತ್ತವರಿಂದ ಬಯಸಿದ್ದು ಪ್ರೀತಿ, ಮಮತೆ ಮಾತ್ರ. ಬಟ್ ಅವಳಪ್ಪ ಅಮ್ಮನಿಗೆ ಅದ್ಯಾವತ್ತೂ ಅರಿವಾಗಲೇ ಇಲ್ಲ. ಇನ್ನು ಮುಂದೆ ಅರಿಯಲೂ ಸಾಧ್ಯವಿಲ್ಲ ಬಿಡು. ಎಂತಾ ನೀಚ ಜನ. ಪ್ರಾಣಿಗಳಿಗೂ ಕಡೆ. ಕೈಯಲ್ಲಿ ವಜ್ರ ಇಟ್ಕೊಂಡು ಯಾವುದೋ ಕಾಗೆ ಬಂಗಾರದ ಹಿಂದೆ ಓಡ್ತಿದ್ದಾರೆ. ಎಂತಹ ಮಗಳಿಗೆ ಎಂತಹ ಹೆತ್ತವರು........" ನಿಟ್ಟುಸಿರಾದರು.

ಇಬ್ಬರಲ್ಲೂ ಮಾತುಗಳಿರಲಿಲ್ಲ. ಕ್ಷಣಗಳು ಮೌನವಾಗಿ ಜಾರುತ್ತಿದ್ದವು. ಅವನು ಫೋನ್ ರಿಂಗಣಿಸಿತು. ವೈಭವ್ ಕರೆ ಮಾಡುತ್ತಿದ್ದ. ಚೈತಾಲಿಯ ಮನೆಗೆ ಹೋಗಬೇಕಿರುವುದು ನೆನಪಾಗಿ ಎದ್ದ.

"ಥ್ಯಾಂಕ್ಯೂ, ಇಷ್ಟೆಲ್ಲಾ ವಿಚಾರ ಹಂಚಿಕೊಂಡಿದ್ದಕ್ಕೆ. ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಉಳಿದವಕ್ಕೂ ಸಿಗುತ್ತೆ ಅನ್ನೋ ಭರವಸೆ ಇದೆ. ಬರ್ತೀನಿ" ಎಂದು ಹೊರಟವನನ್ನು ಮೀರಾರ ಮಾತುಗಳು ತಡೆಯಿತು.

"ಅಭಿರಾಮ್ ನೀನು ಸಮನ್ವಿತಾಳನ್ನು ಮದುವೆ‌ ಆಗ್ತೀಯೋ ಬಿಡ್ತೀಯೋ ಅದು ನಿಮ್ಮಿಬ್ಬರ ವೈಯಕ್ತಿಕ ವಿಚಾರ. ಆದರೆ ಒಂದು ವೇಳೆ‌ ಅವಳು ನಿನ್ನ ಮದುವೆ ಆಗ್ಲಿಕ್ಕೆ ಒಪ್ಪಿದರೆ ಖಂಡಿತಾ ನಿರಾಕರಿಸಬೇಡ. ಅವಳದ್ದು ಪರಿಶುದ್ಧ ಮನಸ್ಸು. ಅವಳ ಯೋಚನೆ, ಚಿಂತನೆಗಳೆಲ್ಲಾ ಮೇಲ್ಮಟ್ಟದ್ದು. ಯಾರ ಮನಸ್ಸನ್ನು ನೋಯಿಸುವವಳಲ್ಲ. ನಾನು ಇಲ್ಲಿಯವರೆಗೆ ನೋಡಿರುವವರಲ್ಲೇ ಅತೀ ನೇರ ನಡೆನುಡಿಯ ಹೆಣ್ಣುಮಗು ಅದು. ಅವಳಿಗೆ ಮನಸ್ಸಿನೊಳಗೊಂದು, ಹೊರಗೊಂದು ಇಲ್ಲ. ನೀನು ಸಮನ್ವಿತಾನ ಮದುವೆಯಾದರೆ ನನಗೆ ತುಂಬಾ ಸಂತೋಷ. ಆಗ ನಿನ್ನ ಮನೆಯವರ ಮೂಲಕವಾದರೂ ಅವಳು ಹಂಬಲಿಸುತ್ತಿರೋ ಪ್ರೀತಿ, ಮಮತೆ ಅವಳಿಗೆ ಸಿಗುತ್ತೆ. ಆ ಅದೃಷ್ಟ ನಿನ್ನಿಂದ ಅವಳಿಗೆ ಒದಗಲಿ ಅನ್ನೋ ಸ್ವಾರ್ಥ. ಹಾಗೆ ಆಗ್ಲೀ ಅನ್ನೋ ಹಾರೈಕೆ ನನ್ನದು" ಅವರ ಹೃತ್ಪೂರ್ವಕವಾದ ಹಾರೈಕೆಗೆ ಅವನು ನಸುನಕ್ಕ. ಅವನ ಮನದ ಭಾವನೆಗಳು ಈಗ ಬಹುಪಾಲು ಸ್ಪಷ್ಟರೂಪ ಪಡೆದಿದ್ದವು.....

"ನೀವು ಹೇಳಿದ ಹಾಗೆ ಆಗ್ಲೀ ಅಂತ ನಾನೂ ಆಶಿಸುತ್ತೇನೆ. ಆದರೆ ಒಂದು ಕರೆಕ್ಷನ್. ನನ್ನಿಂದ ಅವ್ಳಿಗೆ ಅದೃಷ್ಟ ದೊರಕಬೇಕಾದ ಅಗತ್ಯವಿಲ್ಲ. ಹಾಗೊಂದು ವೇಳೆ ಸಮನ್ವಿತಾ ಈ ಮದುವೆಗೆ ಒಪ್ಪಿದರೆ ನಮಗೆ ಅದೃಷ್ಟ ದೇವತೆ ಸಿಕ್ಕಂತೆ. ಐ ವಿಲ್ ಬಿ ವೆರಿ ಲಕ್ಕಿ ಟು ಹ್ಯಾವ್ ಹರ್. ಬರ್ತೀನಿ ಸಿ ಯೂ" ಎಂದವನೇ ಹೊರಬಂದ. 

ಕಾರಿನ ಬಳಿ ಬರುವಾಗ ವೈಭವ್ ಹಾಜರಿದ್ದ. ಬೈಗುಳ ಕೇಳಲು ತಯಾರಾಗಿ ಎರಡೂ ಕಿವಿಗೆ ಹತ್ತಿಯಿಟ್ಟು ಬಂದಿದ್ದ. ಆದರೆ ಅಭಿ ಬೈಯುವ ಮೂಡಿನಲ್ಲಿರಲಿಲ್ಲ. ಬಂದವನೇ ಅವನ ಭುಜ ಬಳಸಿ, 

"ಏನೋ ಕುಂಭಕರ್ಣ, ಆಯ್ತಾ ನಿದ್ದೆ? ಹಲ್ಲುಜ್ಜಿ, ಸ್ನಾನ ಗೀನ ಎಲ್ಲ ಮಾಡ್ಕೊಂಡು ಬಂದೆ ತಾನೆ? ಕಡೆಗೆ ನಿನ್ನ ಅತ್ತೆ ಮಾವನನ್ನು ಇಂಪ್ರೆಸ್ ಮಾಡೋಕೆ ಹೋಗಿ ನಿನ್ನ ಅವತಾರಕ್ಕೆ ಅವರು ಡಿಪ್ರೆಸ್ ಆದ್ರೆ ಕಷ್ಟ. ಅದೇನು ಪ್ಯಾಂಟ್ ಶರ್ಟ್ ಹಾಕ್ಕೊಂಡ್ ಬಂದಿದ್ದೀ? ನಾನೇನೋ ಪಂಚೆ ಉಟ್ಟು, ಶಲ್ಯ ಹೊದ್ದು, ಫಲ ತಾಂಬೂಲ ಸಮೇತ ಬರ್ತೀಯಾ ಅಂದ್ಕೊಂಡಿದ್ದೆ" ರೇಗಿಸಿದ.

"ಹೌದಲ್ಲ. ನನಗ್ಯಾಕಿದು ಹೊಳಿಲೇ ಇಲ್ಲ? ಛೇ ಇವತ್ತೇ ನಿಶ್ಚಿತಾರ್ಥ ಮುಗ್ಸಿಬಿಡ್ಬಹುದಿತ್ತಲ್ಲ ಬೀರ್" ಅವಲತ್ತುಕೊಂಡ.

"ಯಾಕೆ ಮದ್ವೇ ಬೇಡ್ವಾ?" ಕೇಳಿದ ತಮಾಷೆಯಾಗಿ.

"ಮದ್ವೆ ಈಗ್ಲೇ ಬೇಡ. ನಾನು RAW ಜಾಯ್ನ್ ಆಗಿ, ಮೋದಿಯವರು ಸನ್ಮಾನ ಮಾಡಿದ್ಮೇಲೆನೇ ಮದುವೆ"

"ಮೋದಿನಾ? ಏನು ಮತ್ತೆ ಕನಸಾ? ಇನ್ನೂ ಸ್ವಲ್ಪ ಹೊತ್ತು ನಿನ್ಹತ್ರ ಮಾತಾಡ್ತಿದ್ರೆ ನಿನ್ನ ಸುಡುಗಾಡು ಕನಸಿನ ದೆಸೆಯಿಂದ ನಾನು ಕಂಕನಾಡಿಗೆ ಹೋಗ್ಬೇಕಾಗುತ್ತೆ. ನೋಡಪ್ಪಾ…. ನಾನಂತು ಹೊರಟೆ. ನೀನು ಬರ್ತಿಯಾದ್ರೆ ಬಾ, ಇಲ್ಲಾ ಇಲ್ಲೇ ನಿಂತ್ಕೊಂಡು ಮೋದಿಜೀಗೆ ವೇಯ್ಟ್ ಮಾಡು" ಎಂದು ಕಾರು ಹತ್ತಿದ.

"ಇರೋ ಬೀರ್ ನಾನೂ ಬಂದೆ" ಎಂದು ಕಾರಿನ ಇನ್ನೊಂದು ಬದಿ ಹತ್ತಿ ಕುಳಿತ ವೈಭವ್.

ಕಾರು ಚೈತಾಲಿಯ ಮನೆಯ ಹಾದಿ ಹಿಡಿಯಿತು.

               ************************

ನವ್ಯಾ ಎಡೆಬಿಡದೆ ಸಮನ್ವಿತಾಳ ಅಂಗೈ ಅಂಗಾಲುಗಳನ್ನು ಉಜ್ಜುತ್ತಿದ್ದಳು. ನಡುನಡುವೆ ಅವಳ ನೋಟ ಬಾಗಿಲತ್ತ ಹರಿಯುತ್ತಿತ್ತು. ಮಾತ್ರೆ ತರುತ್ತೇನೆಂದು ಹೋದ ಕಿಶೋರ್ ಯಾಕಿನ್ನೂ ಬರಲಿಲ್ಲ ಅನ್ನೋ ಯೋಚನೆ ಬೇರೆ. ಪ್ರಜ್ಞೆಯಿಲ್ಲದೇ ಮಲಗಿದ್ದ ಸಮನ್ವಿತಾಳ ಪರಿಸ್ಥಿತಿ ನೋಡಿ ಅವಳಿಗೆ ಹುಚ್ಚು ಹಿಡಿದಂತಾಗಿತ್ತು.

ಹಿಂದಿನ ದಿನ ಸಂಜೆ ಸಮನ್ವಿತಾಳೊಂದಿಗೆ ಮಾತಾಡೋಣವೆಂದು ಕರೆ ಮಾಡಿದಾಗ ಅವಳು ರಿಸೀವ್ ಮಾಡಿರಲಿಲ್ಲ. ರಾತ್ರಿ ಪದೇ ಪದೇ ಕರೆ ಮಾಡಿದಾಗಲೂ ಅದೇ ಪುನರಾವರ್ತನೆ. ಮೆಸೇಜಿಗೆ ಉತ್ತರವಿಲ್ಲ. ಕೊನೆಗೆ ತಲೆಬಿಸಿಯಾಗಿ ಧನ್ವಂತರಿಗೆ ಕರೆಮಾಡಿ ಕೇಳಿದಾಗ ಅರ್ಧ ದಿನ ರಜೆ ಪಡೆದು ಎಲ್ಲಿಗೋ ಹೋದರು ಎಂಬ ಉತ್ತರ. ಆಗ ನೆನಪಾಗಿತ್ತು ಅವಳಿಗೆ ಅಭಿರಾಮ್ ಮನೆಯವರ ಆಹ್ವಾನ….. ಅಲ್ಲಿಗೆ ಹೋಗಿರಬಹುದು ಎಂದು ಸಮಾಧಾನಿಸಿಕೊಂಡಳಾದರೂ ಏನೋ ತಳಮಳ.

ಎಲ್ಲೇ ಇದ್ದರೂ ತನ್ನ ಕರೆ ಸ್ವೀಕರಿಸದೇ ಇರುವವಳಲ್ಲ. ಕೊನೆಗೆ ಒಂದು ಮೆಸೇಜನ್ನಾದರೂ ಕಳಿಸಿಯೇ ಇರುತ್ತಾಳೆ. ಇಂದೇನಾಯಿತು? 

ಅದನ್ನೇ ಕಿಶೋರನಿಗೂ ಹೇಳಿದ್ದಳು. ಅವನಿಗೆ ಗಾಬರಿಯಾದರೂ, ಶರ್ಮಾ ಅವರ ಮನೆಯಲ್ಲಿ ಮಾತಿನಲ್ಲಿ ಫೋನ್ ನೋಡಿರಲಿಕ್ಕಿಲ್ಲ ಎಂದು ಸಮಾಧಾನಿಸಿದ್ದ. ಹಾಗೋ ಹೀಗೋ ಯೋಚನೆಯಲ್ಲಿಯೇ ಬೆಳಗಾಗಿಸಿದ್ದಳು. ಬೆಳಿಗ್ಗೆಯೇ ಕರೆ ಮಾಡಿದಾಗಲೂ ಅದೇ ಉತ್ತರ ಕೇಳಿದಾಗ ಅವಳಿಗೆ ಗಾಬರಿಯಾಯಿತು. ಕಿಶೋರನನ್ನು ಎಬ್ಬಿಸಿ ಹೇಳಿದಳು. ಅವನು ಆಸ್ಪತ್ರೆಯಲ್ಲಿ ಕೇಳಿದಾಗ ಬಂದಿಲ್ಲವೆಂದರು. ಕೂಡಲೇ ಕಾರ್ತಿಕ್ ಗೆ‌ ಹೇಳಿ ಹೊರಟಿದ್ದರು.

ಅವಳ ಕ್ವಾಟ್ರಸ್ಸಿನ ಬಾಗಿಲು ಬಡಿದಾಗ ಅದು ತಾನಾಗೇ ತೆರೆದುಕೊಂಡಿತು. ಲಾಕ್ ಆಗಿರದ ಬಾಗಿಲು ಇಬ್ಬರಿಗೂ ಯಾವುದೋ ಅಪಾಯದ ಮುನ್ಸೂಚನೆ ನೀಡಿತ್ತು. ಗಾಬರಿಯಲ್ಲಿ ಇಡೀ ಮನೆಯನ್ನೆಲ್ಲಾ ಸುತ್ತಿದರು. ಎಲ್ಲೂ ಅವಳ ಸುಳಿವಿರಲಿಲ್ಲ. ಕರೆದರೂ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ಕಿಶೋರ್ ಮನೆಯ ಸುತ್ತಮುತ್ತ ನೋಡುವೆನೆಂದು ಹೊರಗೋಡಿದ್ದ. ಮನೆಯೊಳಗೆ ಮತ್ತೊಮ್ಮೆ ಸುತ್ತು ಹಾಕಿದ ನವ್ಯಾಳಿಗೆ ಬಚ್ಚಲು ಮನೆಯಲ್ಲಿ ಏನೋ ಸದ್ದಾಗುತ್ತಿರುವಂತೆ ಅನಿಸಿತ್ತು. ಕರೆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲಿಗೆ ಕಿವಿಯಿಟ್ಟು ಆಲಿಸಿದಳು. ಶವರ್ ನಿಂದ ನೀರು ಸುರಿಯುತ್ತಿರುವ ಸದ್ದು...... ನಡುನಡುವೆ ಇನ್ನೇನೋ ಶಬ್ದ......

ಸಮನ್ವಿತಾ ಒಳಗಿದ್ದಾಳೆಂಬುದು ಖಚಿತವಾಗಿತ್ತು.

ಬಾಗಿಲನ್ನು ಮೆಲ್ಲಗೆ ದೂಡಿದಳು. ಅದೂ ಲಾಕ್ ಆಗಿರಲಿಲ್ಲ. ಆದರೆ ಹಳೆಯ ಬಾಗಿಲಾದ್ದರಿಂದ ನಿರಂತರವಾಗಿ ನೀರು ಬಿದ್ದು ಕಚ್ಚಿಕೊಂಡಿತ್ತು. ಬಡಪೆಟ್ಟಿಗೆ ತೆರೆಯಲಿಲ್ಲ. ಇನ್ನೊಮ್ಮೆ ಸ್ವಲ್ಪ ಬಲವಾಗಿ ದೂಡಿದಾಗ ಬಾಗಿಲು ತೆರೆದುಕೊಂಡಿತ್ತು.

ಎದುರು ಕಂಡ ದೃಶ್ಯ ಅವಳ‌ ಮನಕಲಕಿತು......

ಶವರ್ ಆನ್ ಮಾಡಿ ಅದರ ಕೆಳಗೆ ಕೂತಿದ್ದಳು ಸಮನ್ವಿತಾ.......

ಕೈಯನ್ನು ಬಾಯಿಗೆ ಅಡ್ಡವಾಗಿ ಕಚ್ಚಿ ಹಿಡಿದು ಬಿಕ್ಕುತ್ತಿದ್ದಳು ಸ್ವರ ಹೊರಬರಬಾರದೆಂದು.

ಜೋರಾಗಿ ಸ್ವರವೆತ್ತಿ ಅಳಲೂಬಾರದೇ ಹುಡುಗೀ?

ಬಹಳ‌ ಹೊತ್ತಿನಿಂದ ಅಲ್ಲೇ ಕುಳಿತಿದ್ದಳೇನೋ. ಬಿಕ್ಕಳಿಸಿ ಬಿಕ್ಕಳಿಸಿ ಉಸಿರು ಹಿಡಿದಂತೆ ಸಣ್ಣ ಚೀತ್ಕಾರ ಹೊರಡುತ್ತಿತ್ತು.

ಕಣ್ಣೀರು ತುಂಬಿ ಎದುರಿನ ಬಿಂಬ ಮಸುಕಾಗತೊಡಗಿದಾಗ ಎಚ್ಚೆತ್ತ ನವ್ಯಾ ಶವರ್ ಆಫ್ ಮಾಡಿದವಳು ಕಿಶೋರನಿಗೆ ಕೂಗು ಹಾಕಿ ಸಮನ್ವಿತಾಳನ್ನು ಎಬ್ಬಿಸಲು ಪ್ರಯತ್ನಿಸಿದಳು. ಅವಳಿಂದ ಸಾಧ್ಯವಾಗದೇ ಮತ್ತೆ ಜೋರಾಗಿ ಕಿಶೋರನನ್ನು ಕೂಗಿದ್ದಳು. ಒಳ ಬಂದ ಕಿಶೋರನಿಗೆ ಗೆಳತಿಯ ಸ್ಥಿತಿ ನೋಡಿ ಹೃದಯ ಬಾಯಿಗೆ ಬಂದಂತಾಗಿತ್ತು. ಇಬ್ಬರೂ ಸೇರಿ ಸಮನ್ವಿತಾಳನ್ನು ರೂಮಿಗೆ ಸಾಗಿಸಿದ್ದರು. ನವ್ಯಾ ಅವಳ ಬಟ್ಟೆ ಬದಲಿಸಿ, ತಲೆ ಒರೆಸುವುದರೊಳಗೆ ಕಿಶೋರ್ ಹಾಲು ಬಿಸಿ ಮಾಡಿ ತಂದಿದ್ದ. ಆದರೆ ಇಬ್ಬರೂ ಎಷ್ಟು ಪ್ರಯತ್ನಿಸಿದರೂ ಅವಳು ಬಾಯಿ ತೆರೆಯಲಿಲ್ಲ.

ಕಣ್ಣಿಂದ ಅವ್ಯಾಹತವಾಗಿ ನೀರು ಸದ್ದಿಲ್ಲದೇ ಸುರಿಯುತ್ತಿರುವುದು ಬಿಟ್ಟರೇ ಅವಳಿಗೆ ಇಹದ ಬೋಧೆಯೇ ಇರಲಿಲ್ಲ. ಅವಳನ್ನು ಕರೆದು, ಎಬ್ಬಿಸಲು ಪ್ರಯತ್ನಿಸಿ ಸುಸ್ತಾಗಿ ನವ್ಯಾ ಕೆನ್ನೆಗೊಂದೇಟು ಹಾಕಿದವಳೇ "ಸಮಾ ಎಚ್ಚರ ಮಾಡ್ಕೋಳ್ಳೇ. ಯಾಕ್ಹೀಗೆ ಮಾಡ್ತಿದ್ದೀಯಾ" ಜೋರಾಗಿ ಹಿಡಿದಲುಗಿಸಿದಾಗ ಒಮ್ಮೆಲೇ ಬೆಚ್ಚಿ ನೋಡಿದಳು….. ಕಣ್ಮುಂದೆ ನವ್ಯಾ, ಕಿಶೋರ್.....

ನವ್ಯಾಳನ್ನು ಕಂಡದ್ದೇ ಜನ್ಮಾಂತರದ ನೋವನೆಲ್ಲಾ ಇಂದೇ ಹೊರಹಾಕುವೆ ಎಂಬಂತೆ ಅವಳನ್ನು ತಬ್ಬಿ ದೊಡ್ಡ ದನಿಯಲ್ಲಿ ಅಳತೊಡಗಿದಳು‌. ಅವಳ ಆ ಪರಿ ಕಂಡು ಇಬ್ಬರೂ ದಂಗಾಗಿದ್ದರು. ಅವರಿಗೆ ತಿಳಿದಂತೆ ಸಮನ್ವಿತಾ ತನ್ನ ಸಂತಸ ಹಂಚುತ್ತಾಳೆಯೇ ಹೊರತು ನೋವನ್ನು ಯಾರೊಂದಿಗೂ ತೋಡಿಕೊಳ್ಳುವುದಿಲ್ಲ. ಇನ್ನು ಸದ್ದೆತ್ತಿ ಅಳುವ ಮಾತೇ ಇಲ್ಲ. ಅವಳ ನೋವು ನೀರೊಳಗಿನ ಮೀನಿನ ಕಣ್ಣೀರಿನಂತೆ.

ಮೀನಿನ ಕಣ್ಣೀರು ತಿಳಿಯುವುದು ಮುಳುಗೇಳುವ ಅಲೆಗೆ ಮಾತ್ರವಂತೆ...

ಹಾಗೆಯೇ ಅವಳ ನೋವು.... 

ಅವಳ‌ ಆಂತರ್ಯಕ್ಕೆ ಮಾತ್ರವೇ ಅದು ವಿಶದವಾಗುವುದು.....

ಯಾರ ಊಹೆಗೂ ನಿಲುಕುವುದಿಲ್ಲ.....

ಅವಳ ಬಾಳ ಪುಟಗಳೂ ಸಹ ನವ್ಯಾಳ ಬಾಳಿನಂತೆಯೇ ಜಗಕ್ಕೆ ಅನೂಹ್ಯ.

ಏನಾಗಿದೆ? ಯಾಕೆ ಈ ಪರಿ ಶೋಕಿಸುತ್ತಿದ್ದಾಳೆ? ಎಂಬ ಯೋಚನೆಯಲ್ಲಿ ಇದ್ದರು ಇಬ್ಬರೂ. ನಿನ್ನೆ ಫೋನ್ ರಿಸೀವ್ ಮಾಡದಿದ್ದಾಗಲೇ ಬರಬೇಕಿತ್ತೆಂದು ಸಾವಿರ ಬಾರಿ ಅನ್ನಿಸಿತು ಮನಸಿಗೆ. ಅವಳ ತಲೆ ಸವರುತ್ತಾ ಸಮಾಧಾನಿಸಿದವಳು, "ಯಾಕೆ ಪುಟ್ಟಮ್ಮಾ ಹೀಗೆ ಅಳ್ತಿದ್ದೀ? ನೀನು ಹೀಗೆ ಅಳೋದು ನೋಡೋಕಾಗಲ್ವೇ. ಪ್ಲೀಸ್ ಏನಾಯ್ತು ಅಂತನಾದರೂ ಹೇಳೇ" ಗೋಗರೆದಳು.

ತಟ್ಟನೆ ನವ್ಯಾಳ ಮೊಗವನ್ನು ತನ್ನ ಕೈಗಳಲ್ಲಿ ಹಿಡಿದವಳು, "ಮೊದಲ ಬಾರಿಗೆ ನಿನ್ನ ಅರಿವಿಗೇ ಬಾರದಂತೆ ವೇಶ್ಯಾಗೃಹದೊಳಗೆ ನಿನ್ನನ್ನು ನೀನು ಕಂಡುಕೊಂಡಾಗ ನಿನಗೆ ಹೇಗನಿಸಿರಬಹುದು ಎಂದು ನನಗೆ ನಿನ್ನೆ ಅರಿವಾಯಿತು ನವ್ಯಾ….." ಎಂದುಬಿಟ್ಟಿದ್ದಳು ಸಮನ್ವಿತಾ.

ಅವಳ ಮಾತು ಕೇಳಿ ತತ್ತರಿಸಿ "ಸಮನ್ವಿತಾ" ಎಂದು ಚೀರಿದ್ದಳು ನವ್ಯಾ.

ಕಿಶೋರ್ "ಏನು ಮಾತಾಡ್ತಿದ್ದಿ ಅನ್ನುವ ಅರಿವಾದರೂ ಇದೆಯೇ ನಿನಗೆ ಸಮಾ" ಎಂದಿದ್ದ ಕೋಪದಲ್ಲಿ.

ಅದರೆ ಅವಳಿಗೆ ಅವರ ಮಾತು ಕೇಳಿಸುತ್ತಿರಲಿಲ್ಲ.

ಅವಳೊಳಗೆ ಹುಟ್ಟಿದ ಹೇವರಿಕೆ ಅವಳನ್ನು ಜಿದ್ದಿಗೆ ನೂಕಿತ್ತು. ಮಾತನಾಡಲೇ ಬೇಕು ಎಂಬ ಜಿದ್ದು....... 

ಜಗತ್ತಿನೊಂದಿಗೆ ಬಡಿದಾಡಬೇಕೆಂಬ‌ ಜಿದ್ದು......

"ನಾವಿಬ್ಬರೂ ಮಾರಾಟಗೊಂಡ ಹಸುಗಳು‌ ನವ್ಯಾ. ವ್ಯತ್ಯಾಸವೆಂದರೆ ಅಂದು ನೀನು ಕಸಾಯಿಖಾನೆಗೆ ಮಾರಲ್ಪಟ್ಟ ಹಸುವಾದರೆ, ಇಂದು ನಾನು ಗೋಕುಲಕ್ಕೆ ಮಾರಲ್ಪಟ್ಟಿರುವೆ. ಹೋಗಲಿರುವುದು ಕಸಾಯಿಖಾನೆಯಿರಲೀ, ಗೋಕುಲವಿರಲೀ ಇಲ್ಲಾ ಇಂದ್ರನ ಅಮರಾವತಿಯೇ ಆಗಿರಲಿ, ಆದರೆ ಆ ಮಾರಲ್ಪಟ್ಟ ಭಾವನೆಯ ಹಿಂದಿರುವ ವೇದನೆ ಶಮನವಾದೀತೇ? ಆ ಗೋವಿನಂತಹ ಹೆಣ್ಣಿಗೆ ಒಂದು ಮನವೆಂಬುದಿಲ್ಲವೇ? ಅದರೊಳಗೆ ಭಾವನೆಗಳಿಲ್ಲವೇ? ಒಂದು ಯಕಶ್ಚಿತ್ ವಸ್ತುವಿನಂತೆ ಮಾರಬಹುದೇ ಅವಳನ್ನು? ಹಣ ಸಂಪಾದಿಸಲು, ಸಿರಿವಂತಿಕೆಯ ಪ್ರತಿಷ್ಟೆ ಕಾಯ್ದಿಟ್ಟುಕೊಳ್ಳಲು ಅವಳನ್ನು ದಾಳವಾಗಿ ಉರುಳಿಸಬಹುದೇ?"

ಅವಳ ಮಾತುಗಳು ನವ್ಯಾಳಿಗೆ ಅತೀತದ ನರಕವನ್ನು ನೆನಪಿಸಿದರೆ, ಕಿಶೋರ್ "ಮಾರಾಟ" ಎಂಬ ಪದವನ್ನು ಜೀರ್ಣಿಸಿಕೊಳ್ಳಲಾಗದೇ ಒದ್ದಾಡಿ ಹೋಗಿದ್ದ.

ಆದರೂ ಹುಡುಗಿ ಮಾತು ನಿಲ್ಲಿಸದಾದಳು.

ಒಡಲಾಳವನ್ನು ದಹಿಸುತ್ತಿರುವ ಉರಿಕೆಂಡವನ್ನು ಎಷ್ಟು ಸಮಯ ಮನದ ಸೆರಗಿನಲ್ಲಿ ಕಟ್ಟಿಕೊಳ್ಳಬಹುದು? ಎಂದಾದರೂ ಒಮ್ಮೆ ಅದು ಅಗ್ನಿವರ್ಷ ಸುರಿಸುವ ಜ್ವಾಲಾಮುಖಿಯಂತೆ ಸಿಡಿಯಲೇ ಬೇಕಲ್ಲವೇ?  ಇಂದು ಅವಳ ಮನೋರಂಗದ ಅಗ್ನಿಶಿಖೆ ಸ್ಫೋಟಗೊಂಡಿತ್ತು.....

ಅವಳು ಮಾತನಾಡುತ್ತಲೇ ಇದ್ದಳು ಮತಿ ಇಲ್ಲದವರಂತೆ. ಅವರಿಬ್ಬರೂ ಸಮನ್ವಿತಾಳನ್ನು ತಡೆಯಲು ಹೋಗಲಿಲ್ಲ. ಇಂದು ಅವಳ ಒಡಲುರಿಯೆಲ್ಲವನ್ನು ಹೊರಹಾಕಿ ಸಮಾಧಾನಗೊಳ್ಳಲಿ ಎಂದು ಸುಮ್ಮನಾದರು. 

ನವ್ಯಾ ಅವಳ ಹೆಗಲು ತಬ್ಬಿ ಸುಮ್ಮನೆ ತಲೆ ನೇವರಿಸುತ್ತಿದ್ದಳು. ಮಾತನಾಡುತ್ತಲೇ ಅವಳು ಹೆಗಲಿನಿಂದ ಮಡಿಲಿಗೆ ಜಾರಿದಾಗ ಕಿಶೋರ್ ಎಚ್ಚೆತ್ತಿದ್ದ. ನವ್ಯಾಳಿಗೆ ಭಯವೆನಿಸಿತ್ತು ಅವಳ ಸ್ಥಿತಿ.

ನೆತ್ತಿ ಸುಡುತ್ತಿತ್ತು. ಕಿಶೋರ್ ಮಾತ್ರೆ ತರುವೆನೆಂದು ಹೊರಟ ಸ್ವಲ್ಪ ಹೊತ್ತಿಗೆ ಪ್ರಜ್ಞಾಹೀನಳಾಗಿದ್ದಳು ಸಮನ್ವಿತಾ. ನವ್ಯಾ ಅವಳನ್ನು ಎಚ್ಚರಿಸಲು ಪ್ರಯತ್ನಿಸಿ ಸೋತಳು. ಅವಳ ಭಯ ಹೆಚ್ಚಾಯಿತು.

ಕಿಶೋರನಿಗೆ ಕರೆ ಮಾಡಿದಳು. ಅವನು ಧನ್ವಂತರಿಯಲ್ಲೇ ಇದ್ದ. ಮೆಡಿಕಲಿನಲ್ಲಿ ಮಾತ್ರೆ ಕೊಳ್ಳುತ್ತಿದ್ದವ ನವ್ಯಾಳ ಮಾತು ಕೇಳಿ ಏನು ಮಾಡುವುದೆಂದು ತೋಚದೆ ನೇರ ಮೀರಾ ಅವರ ಬಳಿ ಓಡಿದ್ದ. ಅಭಿರಾಮ್ ಜೊತೆಗಿನ ಮಾತುಕತೆಯ ಬಗ್ಗೆ ಯೋಚಿಸುತ್ತಿದ್ದವರು ಕಿಶೋರನನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಅವನ ಮುಖದಲ್ಲಿನ ಗಾಬರಿ ಅವರಿಗೆ ಸಮನ್ವಿತಾಳದ್ದೇ ಚಿಂತೆ ತರಿಸಿತು.

"ಸಮನ್ವಿತಾ ಹುಷಾರಾಗಿದ್ದಾಳಲ್ಲ?" ಅವರೇ ಕೇಳಿದ್ದರು. ಅವನು ಇರುವ ವಿಷಯ ಹೇಳಿ ಅವರನ್ನು ಜೊತೆಗೆ ಕರೆದೊಯ್ದಿದ್ದ. ಜ್ವರ ನೆತ್ತಿಗೇರುವ ಸೂಚನೆ ಕಂಡು ಮೀರಾ ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದರು‌. ಹಿಂದಿನ ದಿನ ಮಧ್ಯಾಹ್ನದಿಂದ ಏನೂ ತಿಂದಿರಲಿಲ್ಲ ಅವಳು. ಅದರೊಂದಿಗೆ ರಾತ್ರಿ ಬೆಳಗಾಗುವವರೆಗೆ ತಣ್ಣೀರಿನಡಿ ಕುಳಿತಿದ್ದು, ವಿಪರೀತ ಅಳು, ಜ್ವರ ಎಲ್ಲಾ ಸೇರಿ ಗುರುತು ಹತ್ತದಂತಾಗಿದ್ದ ಸಮನ್ವಿತಾಳನ್ನು ಕಂಡು ಮೀರಾ ಮನ ದ್ರವಿಸಿತು.

ಎಂದೂ ಹೀಗೆ ಮಾಡಿದವಳಲ್ಲ ಈ ಹುಡುಗಿ. ಇಂದು ಈ ರೀತಿ ಆಗಬೇಕೆಂದರೆ ಅವಳಿಗೆಷ್ಟು ನೋವಾಗಿರಬೇಕು...... ನಿಟ್ಟುಸಿರುಬಿಟ್ಟರು.

ಡ್ರಿಪ್ಸ್ ಏರಿಸಿ ಅದರೊಳಗೆ ಇಂಜೆಕ್ಷನ್ ಚುಚ್ಚಿ ಹೊರಬಂದಾಗ ಕಳವಳದಲ್ಲಿ ಆಚೀಚೆ ಓಡಾಡುತ್ತಿದ್ದ ಕಿಶೋರ್, ತಲೆತಗ್ಗಿಸಿ ಕುಳಿತ ನವ್ಯಾ ಕಣ್ಣಿಗೆ ಬಿದ್ದರು. ನವ್ಯಾ ಅವರನ್ನು ನೋಡಿದವಳೇ ಓಡಿಬಂದಳು. ಅವರಿಬ್ಬರನ್ನು ಸಮಾಧಾನಿಸಿ ವಾರ್ಡಿನ ಒಳಗೆ ಇರುವಂತೆ ಕಳಿಸಿ ತಮ್ಮ ಕ್ಯಾಬಿನ್ನಿಗೆ ಬಂದವರು ಅಭಿರಾಮನಿಗೆ ಕರೆ ಮಾಡಿದರು.

ವೈಭವನ ತಲೆಬುಡವಿಲ್ಲದ ಮಾತುಗಳನ್ನು ಕೇಳಿ ನಗುತ್ತಾ ಡ್ರೈವ್ ಮಾಡುತ್ತಿದ್ದ ಅಭಿ. ಅವರು ಚೈತಾಲಿಯ ಮನೆಗೆ ಸಮೀಪವಿದ್ದರು. ಅಷ್ಟರಲ್ಲಿ ಅವನ ಫೋನ್ ರಿಂಗಾಗಿತ್ತು. ಯಾರೆಂದು ನೋಡಿದ.

'ಡಾ. ಮೀರಾ ಕಾಲಿಂಗ್' ಎಂದು ಡಿಸ್ಪ್ಲೇ ಆಗುತ್ತಿತ್ತು. ಕಾರು ನಿಲ್ಲಿಸಿ ಕರೆ ಸ್ವೀಕರಿಸಿದ್ದ.

"ಸಮನ್ವಿತಾ ಈಸ್ ಹಾಸ್ಪಿಟಲೈಸ್ಡ್" ಎಂದರು ಮೀರಾ.

"ವಾಟ್?" ಕಿರುಚಿದವನು ಮತ್ತೇನೂ ಕೇಳದೆ, "ನಾನು ಬರ್ತಿದ್ದೀನಿ" ಎಂದು ಕರೆ ಕಡಿತಗೊಳಿಸಿದ.

"ಚೈತಾಲಿ ಮನೆಗೆ ಆಮೇಲೆ ಹೋಗೋಣ. ಈಗ ಧನ್ವಂತರಿಗೆ. ಸಮನ್ವಿತಾ ಅಡ್ಮಿಟ್ ಆಗಿದ್ದಾಳಂತೆ" ಎಂದವನ ದನಿಯಲ್ಲಿ ಸತ್ವವಿರಲಿಲ್ಲ. 

ವೈಭವ್ "ಬೀರ್ ಕಾರು ನಾನು ಡ್ರೈವ್ ಮಾಡ್ತೀನಿ. ನೀನು ಸಮಾಧಾನ ಮಾಡ್ಕೋ. ಏನಾಗಲ್ಲ" ಎಂದವ ತಾನು ಡ್ರೈವಿಂಗ್ ಸೀಟಿನಲ್ಲಿ ಕುಳಿತ. ಕಾರು ಯು ಟರ್ನ್ ತೆಗೆದುಕೊಂಡು ಧನ್ವಂತರಿಯೆಡೆಗೆ ವೇಗವಾಗಿ ಸಾಗಿತು. ಅಭಿರಾಮ್ ತಂದೆಗೆ ವಿಷಯ ತಿಳಿಸಿದ. 

ಕಾರು ಧನ್ವಂತರಿಯ ಮುಂದೆ ನಿಂತಾಗ ಅಭಿರಾಮ್ ಹಾಗೇ ಕುಳಿತ್ತಿದ್ದ. ಅವನನ್ನು ಎಚ್ಚರಿಸಿದ ವೈಭವ್ "ಏನೂ ಆಗಿರಲ್ಲ ಬೀರ್, ನೀನು ಒಳಗೆ ಹೋಗು. ನಾನು ಕಾರ್ ಪಾರ್ಕ್ ಮಾಡಿ ಬರ್ತೀನಿ" ಎಂದ.

ಅಭಿರಾಮ್ ಭಾರವಾದ ಹೆಜ್ಜೆಗಳನ್ನು ಎತ್ತಿಟ್ಟು ಒಳನೆಡೆದ. ರಿಸೆಪ್ಷನಿನಲ್ಲೇ ಮೀರಾ ಕಂಡರು. ನಿಧಾನವಾಗಿ ಅವರ ಬಳಿ ಸಾಗಿದ. ಅವನ ಮುಖ ನೋಡಿಯೇ ಮನದ ತುಮುಲ ಲೆಕ್ಕ ಹಾಕಿದವರು, ಅವನ ಭುಜ ಹಿಡಿದು, "ಏನಾಗಿಲ್ಲ. ಜ್ವರ ಜಾಸ್ತಿಯಾಗಿ ಪ್ರಜ್ಞೆ ತಪ್ಪಿದೆಯಷ್ಟೇ. ನೋ ನೀಡ್ ಟು ವರಿ. ಹೋಗಿ ನೋಡು. ನಂಗೊಂಚೂರು ಕೆಲ್ಸ ಇದೆ. ಅವಳ ಫ್ರೆಂಡ್ಸ್ ನವ್ಯಾ ಮತ್ತೆ ಕಿಶೋರ್ ಇಬ್ರೂ ಇದ್ದಾರೆ ಅಲ್ಲೇ" ಎಂದು ವಾರ್ಡ್ ನಂಬರ್ ಹೇಳಿ ಕಳುಹಿಸಿದರು.

ಅವರು ಮಾತಿನಿಂದ ಕೊಂಚ ಸಮಾಧಾನಗೊಂಡವನು ಮೆಟ್ಟಿಲೇರಿ ವಾರ್ಡಿನ ಬಳಿ ಬಂದ. ಬಾಗಿಲು ತೆರೆದಿತ್ತು. 

ಕಿಶೋರ್ ಆಫೀಸಿನಿಂದ ಕರೆ ಬಂದ ಕಾರಣ ಮಾತನಾಡಲು ಹೊರಹೋಗಿದ್ದ. ಸಮನ್ವಿತಾಳಿಗೆ ಎಚ್ಚರವಾಗಿರಲಿಲ್ಲ. ನವ್ಯಾ ಅವಳನ್ನೇ ನೋಡುತ್ತಾ ಕುಳಿತುಬಿಟ್ಟಿದ್ದಳು. ಮನದಲ್ಲಿ ಏನೇನೋ ಯೋಚನೆಗಳು ತುಂಬಿ ಅದರೊಳಗೇ ಮುಳುಗಿಹೋಗಿದ್ದಳವಳು.

ಇನ್ನೇನು ಒಳಗೆ ಅಡಿ ಇಡಬೇಕು ಎಂದುಕೊಂಡವನ ಗಮನ ಅಲ್ಲೇ ಚೇರಿನಲ್ಲಿ ಕುಳಿತು ಸಮನ್ವಿತಾಳ ಮುಖವನ್ನೇ ನೋಡುತ್ತಾ ಯಾವುದೋ ಯೋಚನೆಯಲ್ಲಿ ಕಳೆದುಹೋಗಿದ್ದ ನವ್ಯಾಳ ಮೇಲೆ ಬಿತ್ತು.

ಅಷ್ಟೇ.........

ಅವನು ಸ್ತಬ್ದನಾದ ಅರೆ ಘಳಿಗೆ.......

ಇಷ್ಟು ದಿನದಿಂದ ಅವನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಯ ಉತ್ತರ ಈಗ ಅವನೆದುರಿತ್ತು.

ಕೆಲವು ವರ್ಷಗಳ ಹಿಂದಿನ ಘಟನೆಯೊಂದು ಅವನ ಅಕ್ಷಿಪಟಲದ ಮುಂದೆ‌ ಮರುಕಳಿಸಿತು.

ಒಮ್ಮೆ ನಿಡಿದಾಗಿ ಉಸಿರು ತೆಗೆದವನು ವಾರ್ಡಿನ ಒಳಹೋಗದೇ ಸೀದಾ ಹೊರಬಂದು ಅಲ್ಲಿದ್ದ ಸೋಫಾದಲ್ಲಿ ಕುಳಿತ.

ಅವನಿಗಂತೂ ವಿಪರೀತ ಸಂತೋಷವಾಗಿತ್ತು...... ಎಷ್ಟು ಸಂತೋಷವೆಂದರೆ…… ಸುಧಾರಿಸಿಕೊಳ್ಳಲು ಸಮಯ ಬೇಕಾಗುವಷ್ಟು.........

ಹೌ ಕ್ಯಾನ್ ಯು? ಹೇಗೆ ಮರೆತೆ ಸಮನ್ವಿತಾಳನ್ನು? ಈಗ್ಗೆ ಮೂರ್ನಾಲ್ಕು ವರ್ಷಗಳ ಹಿಂದೆ ಎಷ್ಟೊಂದು ಹುಡುಕಿದ್ದೆ ಇವಳನ್ನು.

ಸಿಕ್ಕಿರಲಿಲ್ಲ.......

ಹಾಗಂತ ಮರೆತೇ ಬಿಟ್ಟೆಯೇನು ಅವಳನ್ನು?

ನಾನೆಷ್ಟು ನೆನಪಿಸಲು ಪ್ರಯತ್ನಿಸಿದರೂ ಧೂಳು ಹಿಡಿದು ಮಸುಕಾಗಿದ್ದ ನೆನಪನ್ನು ಜಾಡಿಸಲಿಲ್ಲ ನೀನು....

ಅವನ ಮನ ಅವನನ್ನು ಪ್ರಶ್ನಿ‌ಸುತ್ತಿತ್ತು.

ಹೌದು ಹೇಗೆ ಮರೆತುಬಿಟ್ಟೆ ಇವಳನ್ನು ನಾನು? 

ಈಗ ಆ ಹುಡುಗಿಯನ್ನು ನೋಡಿದ್ದೇ ನೆನಪಾಯಿತು.

ಅಂದು ಇವಳೇ ಇದ್ದುದ್ದಲ್ಲವೇ ಸಮನ್ವಿತಾಳೊಂದಿಗೆ...

ಅವನು ಆನಂದದ ಪರಾಕಾಷ್ಟೆಯಲ್ಲಿದ್ದ. ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು.

ಎಷ್ಟೊಂದು ಹುಡುಕಾಡಿದರೂ ಸಿಗದೇ, ಸೋತು, ನೆನಪಿನಾಳದಲ್ಲಿ ಹುದುಗಿಸಿ ಇಟ್ಟವಳನ್ನು ಮರೆತೇಬಿಟ್ಟಿದ್ದೆನಲ್ಲ?

ಅವನ ಮನ ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು........

        *******ಮುಂದುವರೆಯುತ್ತದೆ*******