ಭಾನುವಾರ, ಜೂನ್ 28, 2020

ಅನೂಹ್ಯ 25

ಸಮನ್ವಿತಾ ಕ್ಯಾಬ್ ಹತ್ತಿದಾಕ್ಷಣ ಅದನ್ನು ಕಾರೊಂದು ಹಿಂಬಾಲಿಸಿತು. ಅವಳು ತನ್ನ ಕ್ವಾಟ್ರಸ್ ಮುಂದೆ ಇಳಿದು ಒಳ ಹೋದ ಮೇಲೆ ಹಿಂಬಾಲಿಸಿಕೊಂಡು ಬಂದ ಕಾರಿನಲ್ಲಿದ್ದ ವ್ಯಕ್ತಿ ಮುಕ್ಕಾಲು ಮುಖ ಮುಚ್ಚಿದ್ದ ತನ್ನ ಟೋಪಿಯ ಕೆಳಗಿದ್ದ ಬಾಯಿಗೆ ಸಿಗಾರ್ ಸಿಕ್ಕಿಸಿ ಹೊಗೆ ಬಿಡುತ್ತಾ ತನ್ನ ಫೋನ್ ತೆಗೆದು ಅಭಿರಾಮ್ ಗೆ ಕರೆ ಮಾಡಿದ.

ಕಥೆಯಲ್ಲಿ ಮುಂದೆ ಸಾಗುವ ಮುನ್ನ ಈ ಕಾರಿನಲ್ಲಿನ ವ್ಯಕ್ತಿಯ ಬಗ್ಗೆ ನಿಮಗೆ ಹೇಳಲೇಬೇಕು. ಅಂಥಾ ಯದ್ವಾತದ್ವಾ ಗ್ರೇಟ್ ವ್ಯಕ್ತಿ ಇವ್ನು.

ಇವನ ನಾಮಧೇಯ ವೈಭವ್. ಇವನ ಬಗ್ಗೆ ಹೇಳಬೇಕೆಂದರೆ ಇವನೊಂಥರಾ ಮ್ಯೂಸಿಯಂ ಪೀಸ್. ದೇವ್ರು ಪೂರಾ ಕನ್ಫ್ಯೂಷನಲ್ಲಿ ತಲೆಬಿಸಿಯಾಗಿ ಸೃಷ್ಟಿಸಿರೋ ಮಾಸ್ಟರ್ ಪೀಸ್ ಈ ವೈಭವ್. ಪ್ರಪಂಚದಲ್ಲಿ ಇವನ ತರ ವೇಸ್ಟ್ ಬಾಡಿ ಇನ್ನೊಬ್ಬರು ಇರ್ಲಿಕ್ಕೆ ಸಾಧ್ಯವೇ ಇಲ್ಲ ಅನ್ನೋದು ಇವನ ಅಪ್ಪನ ಅಂಬೋಣ.(ಅಪ್ಪನ ಬಗ್ಗೆ ಇವನ ಅಭಿಪ್ರಾಯವೂ ಡಿಟ್ಟೋ ಸೇಮ್)

ವೈಭವ್ ಅಭಿರಾಮ್ ನ ಚಡ್ಡಿದೋಸ್ತ್. ಮೊದಲಿನಿಂದಲೂ ಒಟ್ಟಿಗೆ ಆಡಿ ಬೆಳೆದವರು. ಅವರಿಬ್ಬರ ಆಸಕ್ತಿ, ಅಭಿರುಚಿ ಎಲ್ಲಾ ವಿಭಿನ್ನವಾದರೂ ಗೆಳೆತನಕ್ಕೆ ಇದ್ಯಾವುದೂ ಅಡ್ಡಿಯಾಗಿರಲಿಲ್ಲ. ವೈಭವ್ ತಂದೆ ನಗರದ ಹೆಸರಾಂತ ಕ್ರಿಮಿನಲ್ ಲಾಯರ್ ಶೇಷಗಿರಿ.

ಹೆಚ್ಚು ಆದಾಯ ಕೊಡುತ್ತೇ ಅಂತ ಶ್ರೀಗಂಧದ ಮರ ನೆಡೋ ಬದಲು, ಅಪ್ಪ ಹಾಕಿದ ಆಲದ ಮರಕ್ಕೇ ನೇಣು ಹಾಕ್ಕೊಳ್ಳೋದು ಒಳ್ಳೇದು ಎಂಬ ಅಭಿಪ್ರಾಯ ಹೊಂದಿದ ವೈಭವ್ ಲಾ ಕಾಲೇಜು ಸೇರಿದ್ದ. ಅಪ್ಪನ ವೃತ್ತಿ. ತಾನೂ ಲಾ ಓದಿ, ಅಪ್ಪ ಒಪ್ಪಿದ್ರೆ ಅವರ ಆಫೀಸ್ ಟೇಕ್ ಓವರ್ ಮಾಡೋದು, ಒಪ್ಪಿಲ್ಲ ಅಂದ್ರೆ ಹೈಜಾಕ್ ಮಾಡಿದ್ರಾಯ್ತು, ಆಮೇಲೆ ಲೈಫ್ ಜಿಂಗಾಲಾಲಾ ಅಂತ ವೈಭವೋಪೇತ ಯೋಜನೆ ಹಾಕಿ ವೈಭವ್ ಕಾನೂನು ಕಾಲೇಜಿಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟ.

ಲಾ ಓದಲು ಕಾಲೇಜು ಸೇರಿದ್ದು ಹೌದಾದರೂ ಕ್ಲಾಸ್ ರೂಮಿನಲ್ಲಿ ಕುಳಿತು ಕೇಸ್ ಸ್ಟಡಿ ಮಾಡಿದ್ದಕ್ಕಿಂತ ಕ್ಯಾಂಪಸ್ ಕಾರಿಡಾರಿನಲ್ಲಿ ಹುಡುಗೀರಿಗೆ ಕಾಳು ಹಾಕ್ಕೊಂಡು ಹೆಣ್ಮಕ್ಕಳ ಕಣ್ಣೋಟದ ಅನಾಲಿಸಿಸ್ ಮಾಡಿದ್ದೇ ಜಾಸ್ತಿ ಎನ್ನಬಹುದು. ಹಾಗಂತ ಅವನೇನು ದಡ್ಡನಲ್ಲ. ಒಮ್ಮೆ ಗಮನವಿಟ್ಟು ಕೇಳಿದರೆ ಮತ್ತೆಂದೂ ಅದನ್ನು ಮರೆಯದ ಕುಶಾಗ್ರಮತಿ. 

ಆದರೆ ಪಾಠ ಕೇಳಲು ನಮ್ಮ ಕೃಷ್ಣನಿಗೆ ಮನಸ್ಸಿಲ್ಲ. ಅವನಿಗೆ ಭಗವದ್ಗೀತೆಯ ಅಧ್ಯಾಯದಂತಹ  IPC ಸೆಕ್ಷನ್ ಗಳಿಗಿಂತ, ಬೃಂದಾವನದಂತಹ ಕಾಲೇಜು ಕ್ಯಾಂಪಸಿನ ಚೆಂದ ಚೆಂದದ ಗೋಪಿಕೆರ ಸಂಗವೇ ಪ್ರಿಯ.

ಅಂತೂ ಇಂತೂ ಲಾ ಮುಗಿಸಿ ಅಪ್ಪನ ಆಲದಮರದ ನೆರಳಿನಲ್ಲಿ ಇರುವ ಎಂದುಕೊಂಡು ಅವರ ಆಫೀಸ್ ಹೊಕ್ಕಿದ್ದ. ಹೇಗೂ ನಮ್ಮಪ್ಪನದೇ ಆಫೀಸ್ ನಾನೇ ಭಾವಿ ಓನರ್. ಅಪ್ಪನ ಛೇಂಬರ್ ನ ಪಕ್ಕ ನನಗೊಂದು ಕ್ಯಾಬಿನ್ ಪಕ್ಕಾ ಎನ್ನುವ ಆಸೆಯಲ್ಲಿ ಬಂದ ಹುಡುಗನಿಗೆ ಅಪ್ಪ ಶಾಕ್ ಕೊಡೋದಾ?

ಕ್ಯಾಬಿನ್ ಹೋಗಲಿ ಕುಳಿತುಕೊಳ್ಳಲು ಸರಿಯಾದ ಛೇರ್ ಕೂಡಾ ಇಲ್ಲದಂತಹಾ ಒಂದು ಪೋಸ್ಟ್ ಅವನಿಗಾಗಿಯೇ ಕ್ರಿಯೇಟ್ ಮಾಡಿ ಕೊಟ್ಟಿದ್ದರು ಅವನಪ್ಪ.  ಅವರ ಆಫೀಸಿನಲ್ಲೇ ಅತೀ ಹೆಚ್ಚು ಸ್ಟ್ರಿಕ್ಟ್ ಆಗಿದ್ದ ರಾಮಲಿಂಗ ಅವರ ಜೂನಿಯರ್ ಪೆದಂ ಪರಂಧಾಮನ (ಹೇಳಿದ್ದಕ್ಕೆಲ್ಲಾ ಉಲ್ಟಾ ಮಾತಾಡುವುದನ್ನು ತುಳುವಿನಲ್ಲಿ ಪೆದಂ ಎನ್ನುತ್ತಾರೆ)  ಅಸಿಸ್ಟೆಂಟ್ ಆಗಿ ವೈಭವ್ ಅಪಾಯಿಂಟ್ ಆಗಿದ್ದ. ರಾಮಲಿಂಗ ಹಳೆತಲೆ. ತುಂಬಾ ಸ್ಟ್ರಿಕ್ಟ್. ಅದು ಸಾಲದು ಅಂತ ಚೊರೆ ಪಾರ್ಟಿ ಪರಂಧಾಮ ಬೇರೆ. ತಾನು ಹೇಳಿದ್ದೇ ಸರಿ ಎಂಬ ಪೆದಂ ವಾದಿ. ವೈಭವ್ ನ ಸಾಹಸಗಾಥೆಗಳನ್ನು ಕೇಳಿ ಕೇಳಿ, ಬಿ.ಪಿ ಏರಿಸಿಕೊಂಡಿದ್ದ ಶೇಷಗಿರಿ, ತನ್ನ ಮಗ ಅನ್ನುವ ಯಾವ ಕನ್ಸೀಷನ್ ಕೂಡಾ ತೋರಿಸ್ಬೇಡಿ ಅಂತ ಖುದ್ದಾಗಿ ಹೇಳಿಬಿಟ್ಟಿದ್ದರು. ಹಾಗಾಗಿ ‌ವೈಭವ್ ನ ಪರಿಸ್ಥಿತಿ ರುಬ್ಬುಗುಂಡಿನಲ್ಲಿ ಅಪ್ಪಚ್ಚಿಯಾದ ತೆಂಗಿನತುರಿಯಂತಾಗಿತ್ತು. ಇವರ ಜೊತೆ ಏಗುತ್ತಾ ವೈಭವ್ ಗೆ ಈ ಆಲದಮರಕ್ಕಿಂತ ಗಂಧದ ಕೊರಡೇ ವಾಸಿ ಎನಿಸಿಬಿಟ್ಟಿತ್ತು. 

ಇದೇ ಟೆನ್ಷನಿನ್ನಲ್ಲಿ ಒಂದು ದಿನ ಬೆಳಿಗ್ಗೆ ಕನ್ನಡಿ ನೋಡುತ್ತಾ ತಲೆಬಾಚುತ್ತಿದ್ದವನಿಗೆ ಹಾರ್ಟ್ ಅಟ್ಯಾಕ್ ಅಗುವುದೊಂದು ಬಾಕಿ….. ಮಿರಿಮಿರಿ ಮಿಂಚುವ ಕಪ್ಪು ಕೇಶರಾಶಿಯ ನಡುವೆ ಒಂದು ತೆಳು ಬೆಳ್ಳಿ ರೇಖೆ!

ಒಂದು ಬಿಳಿ ಕೂದಲು ಕಂಡದ್ದೇ ಅವನ ರೋಧನೆ, ವೇದನೆ ಮಿತಿಮೀರಿ ಸ್ವರ್ಗ ನರಕಗಳ ಬಾಗಿಲು ಸೀಳಿ ತ್ರಿಮೂರ್ತಿಗಳಿಗೂ, ಯಮಧರ್ಮನಿಗೂ ಕಿವಿಯಲ್ಲಿ ರಕ್ತಬರುವಂತಾಯಿತು.

ನಾಲ್ವರೂ ಒಟ್ಟಿಗೆ ಅವನ ಕನಸಿನಲ್ಲಿ ಪ್ರತ್ಯಕ್ಷರಾಗಿ, "change the job dude" ಎಂದರಂತೆ. ಹಾಗಾಗಿ ಲಾಯರ್ ಗಿರಿಗೆ ಗುಡ್ ಬೈ ಹೇಳಿದ್ದ. ಶೇಷಗಿರಿ ಅವರಿಗೆ ತಮ್ಮ ಹೆಗಲೇರಿ ಪವಡಿಸಿದ್ದ ಶನಿ ಎದ್ದುಹೋಯಿತೆಂಬ ಖುಷಿಗೆ ಏರುತ್ತಿದ್ದ ಬಿ.ಪಿ, ಶುಗರ್ ಫುಲ್ ಕಂಟ್ರೋಲಿಗೆ ಬರುವಂತಾಯಿತು.

ಮುಂದೇನು ಅಂತ ಯೋಚಿಸುತ್ತಾ ಟೈಮ್ ಪಾಸಿಗೆಂದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡರೆ ಈ ಚಟ ಅವನ ನೆತ್ತಿಗೇರಿದ್ದಲ್ಲಾ ಮಾರ್ರೇ?

ಕವಲು ದಾರಿ, ಯು ಟರ್ನ್, ಕವಚ, ವಿಸ್ಮಯ, ಬೀರ್ ಬಲ್,  ತುಪಾರಿವಾಲನ್, ಇಮೈಕಾ ನೋಡಿಗಳ್, ರಾತ್ಸಸನ್ ಈ ತರ ಚಲನಚಿತ್ರಗಳನ್ನು ನೋಡಿದ್ದೇ ತನ್ನನ್ನೇ ಶೆರ್ಲಾಕ್ ಹೋಮ್ಸ್ ಎಂದು ಎಣಿಸತೊಡಗಿದ. ತಾನು ಹುಟ್ಟಿದ್ದೇ ಡಿಟೆಕ್ಟಿವ್ ಆಗಲು, ಕ್ರಿಮಿನಾಲಜಿ ಓದೋ ಬದ್ಲು ಲಾ ಓದಿ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಹಾಲ್ ನ ಸೀಲಿಂಗಿನಲ್ಲಿ ತಿರುಗುತ್ತಿದ್ದ ಉಷಾ ಫ್ಯಾನಿನ ಕೆಳಗೆ ಅವನಿಗೆ ಜ್ಞಾನೋದಯವಾಗತೊಡಗಿತು. ಬೆಲ್ ಬಾಟಮ್ ಚಿತ್ರ ನೋಡಿದ್ದೇ ತಡ, ಡಿಟೆಕ್ಟಿವ್ ದಿವಾಕರನಂತೆ ನಾನೂ ಡಿಟೆಕ್ಟಿವ್ ವೈಭವ್ ಆಗೇ ತೀರುವೆನೆಂದು ಡಿಸೈಡ್ ಮಾಡಿಬಿಟ್ಟ....

ಡಿಸೈಡ್ ಮಾಡಿದ ನಂತರ ಮೊದಲು ಮಾಡಿದ ಕೆಲಸ ಒಂದು ಉದ್ದದ ಕಪ್ಪನೆಯ ಕೋಟು, ಮುಕ್ಕಾಲು ಮುಖ ಮುಚ್ಚುವ ಹ್ಯಾಟು ಹಾಗೂ ಒಂದು ಸಿಗಾರ್ ಖರೀದಿಸಿದ್ದು. ಎಷ್ಟು ಫಿಲಂ ನೋಡಿಲ್ಲ? ಈ ಕಾಸ್ಟ್ಯೂಮ್ ಇಲ್ಲಾ ಅಂದ್ರೆ ಅವ್ನು ಡಿಟೆಕ್ಟಿವೇ ಅಲ್ಲ ಎಂದುಕೊಂಡವನು, ಕಾಸ್ಟ್ಯೂಮ್ ಧರಿಸಿ ಮನೆಗೆ ಬಂದಾಗ ಅವನಮ್ಮ ಯಾರೋ ಕಿಡ್ನಾಪರ್ ಬಂದಿದ್ದಾನೆ ಅಂತ ಎಣಿಸಿ ಹಿಡಿಸುಡಿ ಹಿಡಿದು ಅಟ್ಟಾಡಿಸಿದ್ದೊಂದೇ ಭಾಗ್ಯ.

ಇವರಿಗೆಲ್ಲಾ ಏನು ಗೊತ್ತಾಗುತ್ತೆ ನನ್ನ ಬೆಲೆ ಎಂದವನೇ ತನ್ನ ಸಾಮರ್ಥ್ಯವನ್ನು ಬಾಲ್ಯ ಸ್ನೇಹಿತನಲ್ಲದೇ ಬೇರ್ಯಾರೂ ಅರಿಯಲಾರರು ಎಂದೆಣಿಸಿ ಅಭಿರಾಮ್ ಆಫೀಸಿಗೆ ಹಾಜರಾಗಿದ್ದ. ಇವನನ್ನು ನೋಡಿದ್ದೇ ಅಭಿರಾಮ್ ನಗು ಕಂಟ್ರೋಲ್ ಮಾಡಿಕೊಳ್ಳಲಾಗದೇ ಬಿದ್ದು ಬಿದ್ದು ನಗತೊಡಗಿದ್ದ. 

"ಲೋ, ಏನೋ ಇದು? ಯಾವ ಸ್ಕೂಲ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಅಟೆಂಡ್ ಆಗ್ತಿದ್ದೀಯಾ. ಅದು ಈ ಶರ್ಲಾಕ್ ಹೋಮ್ಸ್ ಗೆಟಪ್ಪಿನಲ್ಲಿ" ನಗುವಿನ ಮಧ್ಯೆ ಕೇಳಿದಾಗ ನಮ್ಮ ಡಿಟೆಕ್ಟಿವ್ ವೈಭವ್ ಗೆ ಸಂತೋಷವೋ ಸಂತೋಷ.

"ಮಚ್ಚಾ, ಇಡೀ ಪ್ರಪಂಚದಲ್ಲಿ ನನ್ನ ಬುದ್ಧಿಯನ್ನು ಅಳೆಯೋ ಸಾಮರ್ಥ್ಯ ಇರೋದು ನಿನಗೊಬ್ಬನಿಗೇ ನೋಡೋ. ಎಷ್ಟು ಕರೆಕ್ಟಾಗಿ ಗೆಸ್ ಮಾಡಿದೆ. ಇವತ್ತಿನಿಂದ ನಾನು ಇಂಡಿಯನ್ ಶೆರ್ಲಾಕ್ ಹೋಮ್ಸ್, ಈ ದೇಶದ ಏಕೈಕ ಹೋಪ್ಸ್... ಡಿಟೆಕ್ಟಿವ್ ವೈಭವ್. ಏನಾದ್ರೂ ಕೇಸಿದ್ರೆ ಕೊಡೋ, ಚಿಟ್ಕಿ ಚಿಟ್ಕಿ ಹೊಡೆಯೋದರೊಳಗೆ ಸಾಲ್ವ್ ಮಾಡ್ತೀನಿ" ಎಂದು ದುಂಬಾಲು ಬಿದ್ದ.

ಅಭಿರಾಮ್ ನಿಗೆ ಹೋದಲ್ಲಿ ಬಂದಲ್ಲಿ ಇವನ ಕಾಟ ಜಾಸ್ತಿಯಾದಾಗ, "ಅಯ್ಯಾ ಪ್ರಾರಬ್ಧವೇ ,ನಿನ್ನ ಬುದ್ಧಿಮತ್ತೆ ಪರೀಕ್ಷಿಸುವಂತಹ ದೊಡ್ಡ ಕೇಸು ಯಾವುದೂ ಸಧ್ಯಕ್ಕೆ ನನ್ನ ಬಳಿ ಇಲ್ಲ. ಒಂದುವೇಳೆ ಅಂಥ ಪರಿಸ್ಥಿತಿ ಬಂದ್ರೆ ಖಂಡಿತ ನಿನ್ನೇ ಕಾಂಟ್ಯಾಕ್ಟ್ ಮಾಡ್ತೀನಿ" ಎಂದು ಅವನನ್ನು ಸಾಗಹಾಕಿದ್ದ.

ಇಂದು ಸಮನ್ವಿತಾಳ ಪರಿಸ್ಥಿತಿ ಕಂಡು ಅವನಿಗೆ ಹಿಂಸೆಯೆನಿಸಿತ್ತು. ಅವಳ ನೋವಿಗೇ ತಾನೂ ಪರೋಕ್ಷವಾಗಿ ಕಾರಣ ಎನಿಸಿದ್ದೇ ಈ ಇಡೀ ಪ್ರಕರಣವನ್ನು, ಇದರ ಒಳಸುಳಿಗಳನ್ನು ತಿಳಿಯಬೇಕೆಂದು ಬಲವಾಗಿ ಅನಿಸತೊಡಗಿತ್ತು. ಈ ಕೆಲಸ ತಾನೇ ಸ್ವತಃ ಮಾಡಲು ಕಷ್ಟ ಯಾರದ್ದಾದರೂ ಸಹಾಯ ಬೇಕೆನಿಸಿದಾಗ ತಟ್ಟನೇ ನೆನಪಿಗೆ ಬಂದವ ನಮ್ಮ ಡಿಟೆಕ್ಟಿವ್ ವೈಭವ್......

ಮಾನಿನಿಯರ ಸೌಂದರ್ಯೋಪಾಸಕ ಹಾಗೂ ಫಿಲಂ ನೋಡಿ ನೋಡಿ  ಸ್ವಲ್ಪ (ಸ್ವಲ್ಪಕ್ಕಿಂತ ಚೂರು ಜಾಸ್ತಿ) ಓವರ್ ಆಕ್ಟಿಂಗ್ ಮಾಡ್ತಾನೆ ಅನ್ನೋದು ಬಿಟ್ರೆ ಹೇಳಿದ ಕೆಲಸ ಪಕ್ಕಾ ನೀಟಾಗಿ ಮಾಡುತ್ತಾನೆ ವೈಭವ್. ಜೊತೆಗೆ ಬೆರಳು ತೋರಿದರೆ ಹಸ್ತ ನುಂಗುವ ಕುಶಾಗ್ರಮತಿ.

ಹಾಗಾಗಿಯೆ ಅವನಿಗೆ ಈ ಕೆಲಸ‌ ಒಪ್ಪಿಸಿದ್ದ ಅಭಿರಾಮ್.

                     ***************

ಫೋನ್ ರಿಂಗಣಿಸಿ ಸ್ಕ್ರೀನಲ್ಲಿ 'ಅಂಡೆ ಪಿರ್ಕಿ' (ತುಳುವಿನಲ್ಲಿ ಮೆಂಟಲ್ ಅಥವಾ ಎಡವಟ್ಟುರಾಯ ಅಂತ) ಎಂದು ಡಿಸ್ಪ್ಲೇ ಆದಾಗ ಆ ಕರೆಗಾಗಿಯೇ ಕಾದಿದ್ದವನಂತೆ ಅಭಿರಾಮ್ ತಟ್ಟನೇ ಫೋನೆತ್ತಿದ.

"ಹೇಳೋ ಏನಾಯ್ತು?" ಕಾತರದಿಂದ ಕೇಳಿದ.

"ಬೀರ್, ನೀನು ಹೇಳಿದಾಗೆ‌ ರಾವ್ ಮ್ಯಾನ್ಶನ್ ಹೊರಗೆ ಕಾಯ್ತಿದ್ದೆ. ನೀನು ಹೇಳಿದ ಹುಡುಗಿ ಈಗ ಒಂದು ಅರ್ಧ ಗಂಟೆಗೆ ಮುಂಚೆ ಮನೆಯಿಂದ ಹೊರಗೆ ಬಂದ್ಲು. ತುಂಬಾ ಡಿಪ್ರೆಸ್ ಆಗಿದ್ದಂತೆ ಕಂಡಿತು. ಅವಳ ಹಿಂದೆನೇ‌ ಇನ್ನೊಬ್ಳು ಓಡ್ಕೊಂಡು ಬಂದ್ಲು. ಕುಳ್ಳಿ, ಡುಮ್ಮಿ ಆದ್ರೂ ಕೆಂಪಗೆ ನೋಡೋಕೆ ಟೊಮೇಟೊ ತರ ಸೂಪರ್ ಆಗಿದ್ಲು ಮಚ್ಚಾ. ಬಾದಾಮ್ ತರ ಕಣ್ಣು, ಗಿಳಿ ಮೂಗು, ದಾಳಿಂಬೆ ಹಲ್ಲು….. ವಾವ್ ವಾವ್... ಆದರೆ ನಾನ್ ಸ್ಟಾಪ್ ವಟರ್ ವಟರ್ ಅಂತಿದ್ಲು ಥೇಟ್ ಕಪ್ಪೆನೇ....."(ಈ ಬೀರ್ ಯಾರು ಅಂತ ಗೊಂದಲ ಆಯ್ತಾ?ಎಲ್ಲರಿಗಿಂತ ವಿಭಿನ್ನವಾಗಿ ತನ್ನ ಆಪ್ತಮಿತ್ರನನ್ನು ಕೂಗಬೇಕೆಂಬ ವೈಭವನ ಚಟದಿಂದಾಗಿ ಅಭಿರಾಮ್ ಇವನ ಬಾಯಲ್ಲಿ "ಬೀರ್" ಎಂಬ ನಾಮಧೇಯದಿಂದ ಕರೆಯಲ್ಪಡುತ್ತಾನೆ. ಅಭಿರಾಮನ ಹೆಸರಿನ ಮಧ್ಯದ ಎರಡು ಅಕ್ಷರಗಳಾದ "ಭಿ ಹಾಗೂ ರಾ" ಎರಡನ್ನೂ ಸೇರಿಸಿ ಅದಕ್ಕೊಂಚೂರು ಫ್ಯಾನ್ಸಿ ಲುಕ್ ಕೊಟ್ಟು ಬೀರ್ ಅಂತ ಕರೀತಾನೆ ನಮ್ಮ ಎ.ಪಿ)

ವೈಭವ್ ವರ್ಣನೆ ಮುಂದುವರೆಯುತ್ತಿದ್ದಂತೆ ಅಭಿರಾಮ್ ಅವಡುಗಚ್ಚಿ, "ಹೌದಾ, ಹಾಗಿದ್ರೆ ನನಗ್ಯಾಕೋ ಫೋನ್ ಮಾಡ್ದೇ? ಅವಳನ್ನ ಫಾಲೋ ಮಾಡಿ ಅವಳ ಮನೆಗೆ ಹೋಗಿ , ನಿನ್ನ ಅತ್ತೆ ಮಾವನ ಕಾಲು ಹಿಡಿದು ಅವಳಿಗೆ ತಾಳಿ ಕಟ್ಟೋದು ತಾನೆ ಈಡಿಯಟ್?" ಸಿಟ್ಟಿನಲ್ಲಿ ಕನಲಿದ.

"ಹಾಗೇ ಮಾಡೋಣ ಅಂದ್ಕೊಂಡೆ ಕಣೋ, ಆದ್ರೆ ಬಡ್ಡಿಮಗಂದ್ ಅವಳ ಜೊತೆ ಒಬ್ಬ ಹುಡುಗ ಇದ್ದ.  ಮೋಸ್ಟಲೀ ನನ್ನ ಭಾಮೈದ ಇರ್ಬೇಕು. ಅವನನ್ನ ನೋಡಿ ಭಯ ಆಯ್ತೋ...." 

"ಮಗನೇ... ನಾನು ನಿನ್ಗೆ ಹೇಳಿದ್ದೇನು, ನೀನು ಮಾಡಿರೋದೇನು? ನನ್ಗೆ ಬರ್ತಿರೋ ಕೋಪಕ್ಕೆ ನಿನ್ನ ಹುಡುಕಿ ಹಳೇ ಕೆರ ಕಿತ್ತೋಗೋ ತರ ಹಾಕ್ತೀನಿ ನೋಡು….. ಹೋಗಿ ಹೋಗಿ ನಿನ್ನಂಥ ಎಡವಟ್ಟು ರಾಯಂಗೆ ಕೆಲಸ ಕೊಟ್ಟೆ ನೋಡು... ನಾನು ಹೋಗಿ ಯಾವ್ದಾದ್ರೂ ಹಾಳು ಬಾವಿಗೆ ಹಾರ್ಬೇಕು"

"ಮಚ್ಚಾ, ಹುಡುಕ್ಲಾ?"

"ಏನನ್ನ?"

"ಅದೇ ಹಾಳು ಬಾವಿ ಹುಡುಕ್ಲಾ? ಹಾರೋಕೆ…."

"ಯಪ್ಪಾ ಪ್ರಳಯಾಂತಕ, ಕಳ್ದೊಗಿರೋ ನಿನ್ನ ಮೆದುಳು ಹುಡ್ಕೋ ಸಾಕು ಕತ್ತೆ ಕಿರುಬ. ಮೊದ್ಲು ಮರ್ಯಾದೆಯಿಂದ ಫೋನಿಟ್ಟು ಸಾಯಿ."

"ಹೇ ಹೇ ಬೀರ್...... ಸಾರಿ ಕಣೋ. ಈ ಹಾಳಾದ್ದು ಕಣ್ಣು, ಎಷ್ಟು ಬೇಡ ಅಂದ್ರೂ ಆ ಕುಳ್ಳಿ ಹಿಂದೆನೇ ಹೋಗ್ತಿತ್ತು. ಅದಕ್ಕೆ ಫ್ಲೋ ಅಲ್ಲಿ ಅವಳ ಬಗ್ಗೆ ಸ್ವಲ್ಪ ಜಾಸ್ತಿ ಹೇಳ್ಬಿಟ್ಟೆ. ಅದು ಬಿಡು. ಇದು ನನ್ನ ಮೊದಲ ಕೇಸ್. ಹೊಗೆ ಹಾಕ್ಸೋ ಮಾತೇ ಇಲ್ಲ. ನಾನು ಸಮನ್ವಿತಾನ್ನ ಫಾಲೋ ಮಾಡಿದ್ನಪ್ಪ. ಅವಳು ರಾವ್ ಮ್ಯಾನ್ಶನ್ ಇಂದ ಹೊರಟು ಸೀದಾ ಧನ್ವಂತರಿ ಆಸ್ಪತ್ರೆ ಸ್ಟಾಫ್ ಕ್ವಾಟ್ರಸ್ ಗೆ ಬಂದ್ಲು. ನಾನು ಆ ಕ್ವಾಟ್ರಸ್ ಎದುರೇ ಇದ್ದೀನಿ. ಈಗೇನು ಮಾಡೋದು" 

"ಅಬ್ಬಾ ಸಧ್ಯ, ಹೇಳಿದ ಕೆಲಸ ಹಾಗೋ ಹೀಗೋ ಮಾಡಿದ್ಯಲ್ಲ. ನನ್ನ ಪೂರ್ವಜನ್ಮದ ಸುಕೃತ. ಬಹುಶಃ ಅವಳ ಕೊಲೀಗ್ಸ್ ಯಾರದ್ದಾದ್ರೂ ಕ್ವಾಟ್ರಸ್ ಇರಬಹುದಾ?" ಯೋಚಿಸುತ್ತಾ ಕೇಳಿದ ಅಭಿರಾಮ್.

ಈಗ ನಮ್ಮ ಜೇಮ್ಸ್ ಬಾಂಡ್ ಅವರ ತಲೆ ವೇಗವಾಗಿ ಓಡತೊಡಗಿತು. " ಇಲ್ಲಾ ಬೀರ್, ಐ ಥಿಂಕ್ ಅದು ಅವಳದೇ ಕ್ವಾಟ್ರಸ್ ಇರಬೇಕು. ಯಾಕಂದ್ರೆ ಅದು ಲಾಕ್ ಆಗಿತ್ತು. ಅವಳೇ ಲಾಕ್ ಓಪನ್ ಮಾಡಿ ಒಳಗೆ ಹೋಗಿದ್ದು" ಹೇಳಿದ.

ಅಭಿರಾಮ್ ಏನೂ ಅರ್ಥವಾಗದೆ ಕುಳಿತ. ಹೇಗಾದರೂ ಮಾಡಿ ಅವನ ಎಲ್ಲಾ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಿತ್ತು. ಮುಖ್ಯವಾಗಿ ರಾವ್ ಬಂಗಲೆಯಲ್ಲಿ ಅಪ್ಪ ಮಗಳ ನಡುವೆ ಏನು ಮಾತುಕತೆಯಾಗಿದೆಯೆಂದು ತಿಳಿಯಬೇಕಿತ್ತು ಅವನಿಗೆ. ರಾವ್ ದಂಪತಿಗಳ ಅಸಲೀ ಮುಖ, ಸಮನ್ವಿತಾಳ ಅಂತರಾಳ ಎರಡೂ ಅವರ ಇಂದಿನ ಮಾತುಕತೆಯಲ್ಲಿ ಸ್ಪಷ್ಟವಾಗಿರುತ್ತದೆ. ಆದರೆ ತಿಳಿಯುವುದು ಹೇಗೆ? ಅವನಿಗೆ ಅರ್ಥವಾಗಲಿಲ್ಲ.

"ಏನು ಯೋಚಿಸ್ತಿದ್ದೀ ಬೀರ್?" ಲೈನಿನಲ್ಲಿದ್ದ ವೈಭವ್ ಎಚ್ಚರಿಸಿದಾಗ, ಎಲ್ಲಾ ವಿಷಯವನ್ನು ವೈಭವನೊಂದಿಗೆ ಹಂಚಿಕೊಂಡು ಪರಿಹಾರ ಕೇಳುವುದು ಸೂಕ್ತ ಎನಿಸಿತು ಅವನಿಗೆ. ಸತ್ಯಂ ರಾವ್ ಅವರ ಪಾರ್ಟಿಯಲ್ಲಿ  ಸಮನ್ವಿತಾಳನ್ನು ಮೊದಲು ಕಂಡದ್ದು, ರಾವ್ ಅವರು ತಮ್ಮಿಬ್ಬರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದು, ತನ್ನ ನಿರಾಕರಣೆ, ಮನೆಯವರ ಒತ್ತಾಯ, ಅವಳೊಂದಿಗೆ ನೇರವಾಗಿ ಮಾತನಾಡಿ ವಿಷಯ ತಿಳಿಯಲು ಮನೆಗೆ ಆಹ್ವಾನಿಸಿದ್ದು, ವಿವಾಹದ ವಿಷಯ ಕೇಳಿದ ನಂತರದ ಅವಳ ವಿಚಿತ್ರ ವರ್ತನೆ, ತನ್ನ ಅನುಮಾನ ಎಲ್ಲವನ್ನೂ ವೈಭವನಿಗೆ ಸಂಕ್ಷಿಪ್ತವಾಗಿ ಹೇಳಿದ.

ತಾನು ಅವಳನ್ನು ಈ ಹಿಂದೆಲ್ಲೋ ನೋಡಿದ್ದೇನೆ ಎನ್ನುವುದೊಂದನ್ನು ಹೊರತು….. ಅದು ಸಧ್ಯಕ್ಕೆ ಅಷ್ಟು ಮುಖ್ಯವಲ್ಲ ಎನಿಸಿತು ಅವನಿಗೆ. ಜೊತೆಗೆ ಅದನ್ನು ತಾನೇ ನೆನಪಿಸಿಕೊಳ್ಳಬೇಕು ಯಾರ ಸಹಾಯವೂ ಇಲ್ಲದೆ ಎಂಬುದು ಅವನ ಬಲವಾದ ಆಸೆ‌....... ಯಾಕೆ?

ಅವನಿಗೂ ತಿಳಿದಿಲ್ಲ…….

ಎಲ್ಲಾ ಕೇಳಿ ವೈಭವ್, "ಅಂದ್ರೆ? ಏನು ನಿನ್ನ ಅನುಮಾನ? ಅವಳ ಅಪ್ಪ ಅವಳಿಗೇ ಗೊತ್ತಿಲ್ಲದೇ ಈ ಮದ್ವೆ ಮಾಡೋಕೆ ಹೊರಟಿದ್ದಾನೆ ಅಂತಾನಾ? ಆರ್ ಯು ಸೀರಿಯಸ್ ಡ್ಯೂಡ್? ಐ ಮೀನ್, ಯಾವ ಅಪ್ಪ ಅಮ್ಮ ಈ ತರ ಮಾಡ್ತಾರೆ? ನನ್ನ ನೋಡಿದ್ರೆ ಮೈ ಮೇಲೆ ತುರ್ಕೆ ಸೊಪ್ಪು ಬಿದ್ಹಾಗೆ ಆಡೋ ನಮ್ಮಪ್ಪನೇ ನನ್ನ ಕೇಳ್ದೆ ನನ್ನ ಮದ್ವೆ ಮಾಡಲ್ಲ. ಇನ್ನು ಆ ಹುಡುಗಿ ನೋಡಿದ್ರೆ ಅಷ್ಟು ಡಿಸೆಂಟಾಗಿದ್ದಾಳೆ. ನೀನು ಮಿಸ್ ಅಂಡರ್ಸ್ಟಾಂಡ್ ಮಾಡ್ಕೊಂಡಿದ್ದಿ ಅನ್ಸುತ್ತೆ" ಎಂದ.

"ಇಲ್ಲ ವೈಭವ್. ಇದು ನನ್ನ ಅನುಮಾನ ಅಲ್ಲ

ಇದೇ ನಿಜ. ಆಮ್ ಡ್ಯಾಮ್ ಶ್ಯೂರ್. ಅವಳಿಗೆ ನಾವು ಹೇಳೋ ಕ್ಷಣದವರೆಗೂ ಈ ಕಲ್ಪನೆಯೇ ಇರಲಿಲ್ಲ. ಆದ್ರೆ ನನಗೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೋಬೇಕು. ರಾವ್ ಮ್ಯಾನ್ಶನ್ ಅಲ್ಲಿ ರಾವ್ ಮತ್ತೆ ಸಮನ್ವಿತಾ ಮಧ್ಯೆ‌ ಏನು ನಡೀತು ಅಂತ ಗೊತ್ತಾದ್ರೆ ಎಲ್ಲಾ ವಿಷಯ ಆಲ್ಮೋಸ್ಟ್ ಕ್ಲಿಯರ್ ಆಗುತ್ತೆ. ಆದ್ರೆ ಹೇಗೆ ಅಂತ ಗೊತ್ತಾಗ್ತಿಲ್ಲ."

ಅಭಿರಾಮ್ ಮಾತು ವೈಭವನಿಗೂ ಸರಿ ಎನಿಸಿತು ‌ಆದರೆ ಹೇಗೆ? ಸಡನ್ನಾಗಿ ವೈಭವ್, "ಯುರೇಕಾ ಯುರೇಕಾ" ಎಂದು ಕಿರುಚಿದ.

"ಲೋ, ಯಾಕೋ ಹೀಗಾಡ್ತೀ. ನನ್ಗೆ ಹಾರ್ಟ್ ಅಟ್ಯಾಕ್ ಆಗೋವರೆಗೂ ಬಿಡಲ್ಲ ಅನ್ಸುತ್ತೆ" ಗೊಣಗಿದ ಅಭಿರಾಮ್

"ಅಲ್ಲಾ ಬೀರ್ ನಾವ್ಯಾಕೆ ಇಷ್ಟು ಯೋಚಿಸ್ತಿರೋದು? ಅಂಗೈಯಲ್ಲಿ ಪಿಜ್ಜಾ಼ ಹಿಡ್ಕೊಂಡು ಊಟಕ್ಕೆ ಊರು ಸುತ್ತಿದಂಗಾಯ್ತು. ನಮ್ಮ ಕುಳ್ಳಿ ಡಾರ್ಲಿಂಗ್ ಇದ್ದಾಳಲ್ಲ. ಅವಳನ್ನೇ ಕೇಳಿದ್ರಾಯ್ತು. ಅವಳು ಸಮನ್ವಿತಾ ಜೊತೆಗೇ ಮನೆಯಿಂದ ಹೊರಗೆ ಬಂದಿದ್ದು. ಸೋ ಅಲ್ಲೇನಾಯ್ತು ಅಂತ ಅವ್ಳಿಗೆ ಪಕ್ಕಾ ಗೊತ್ತಿರುತ್ತೆ" ಸಂತೋಷದಿಂದ ಹೇಳಿದ ವೈಭವ್.

"ಪರವಾಗಿಲ್ಲ ಕಣೋ, ನಿನ್ನ ತಲೆನೂ ಒಮ್ಮೊಮ್ಮೆ ಕೆಲಸ ಮಾಡುತ್ತೆ" ಅಭಿರಾಮ್ ಮಾತಿಗೆ, "ಮತ್ತೆ ನಾನ್ಯಾರು? ಡಿಟೆಕ್ಟಿವ್ ವೈಭವ್. ನಾನೀಗ ಆ ರಾವ್ ಮ್ಯಾನ್ಶನ್ ಹತ್ರ ಹೋಗಿ ಅಲ್ಲೊಬ್ಬ ವಾಚ್ ಮ್ಯಾನ್ ಇದ್ದಾನೆ, ಅವನ ಹತ್ರ ಆ ಕುಳ್ಳಿ ಜಾತಕ ಕಲೆಕ್ಟ್ ಮಾಡ್ತೀನಿ. ನಾಳೆ ಅವಳ ಮನೆಗೆ ಹೋಗೋದೇ. ಸ್ವಾಮಿ ಕಾರ್ಯ, ಸ್ವ ಕಾರ್ಯ ಎರಡೂ ಆಗುತ್ತೆ"  ಹಲ್ಕಿರಿದ.

"ಅಪ್ಪಾ ತಂದೆ, ತಮಗೊಂದು ಉದ್ದಂಡ ನಮಸ್ಕಾರ. ನೀನು ಅವಳ ಅಡ್ರೆಸ್ ಕಲೆಕ್ಟ್ ಮಾಡಿ ನನಗೆ ಮೆಸೇಜ್ ಮಾಡಿ ನಿಮ್ಮನೆಗೆ  ಹೋಗಿ ದಬ್ಬಾಕ್ಕೋ. ನಾನು ನಾಳೆ ಹೋಗಿ ಆ ಹುಡುಗಿ ಹತ್ರ ಮಾತಾಡ್ತೀನಿ" ಹೇಳಿದ.

"ಅದೆಲ್ಲಾ ಆಗಲ್ಲಪ್ಪ, ಇದು ನನ್ನ ಫಸ್ಟ್ ಕೇಸ್. ಅರ್ಧದಲ್ಲೇ ಬಿಡ್ತೀನಾ? ಅಡ್ರೆಸ್ ತಗೋತೀನಿ. ನಾಳೆ ಇಬ್ರೂ ಒಟ್ಟಿಗೆ ಹೋಗೋಣ ನಮ್ಮತ್ತೆ ಮನೆಗೆ" ವೈಭವನ ಮಾತಿಗೆ ಇವನನ್ನು ರಿಪೇರಿ ಮಾಡೋಕಾಗಲ್ಲ ಎಂದುಕೊಂಡು ಸಹಮತಿ ಸೂಚಿಸಿ ಕರೆಕಡಿತಗೊಳಿಸಿದ.

ಹಾಗೇ ಸೋಫಾಕ್ಕೆ ಒರಗಿ ಸೀಲಿಂಗ್ ದಿಟ್ಟಿಸತೊಡಗಿದ. ಸಂಜೆಯಿಂದ ವಿಪರೀತ ಸಂಕಟ ಅವನಿಗೆ. ತಾನು ಸಮನ್ವಿತಾಳನ್ನು ಮಾತನಾಡಲು ಕರೆಯಬಾರದಿತ್ತು ಎಂದು ಒಮ್ಮೆ ಅನಿಸಿದರೆ, ಮರುಕ್ಷಣ, ಹಾಗೆ ಕರೆಯದಿರುತ್ತಿದ್ದರೆ ಈಗಲೂ ಅವಳಿಗೆ ವಿಷಯ ತಿಳಿಯುತ್ತಿರಲಿಲ್ಲ ಎನಿಸುತ್ತಿತ್ತು. ಸತ್ಯಂ ರಾವ್ ಬಗ್ಗೆ ಅಸಹ್ಯವೆನಿಸಿತ್ತು. ಏನಾದರೂ ಈ ಇಡೀ ಪ್ರಕರಣದ ತಲೆಬುಡ ಶೋಧಿಸಬೇಕೆಂಬ ದೃಢನಿಶ್ಚಯಕ್ಕೆ ಬಂದಿದ್ದ. ಮನೆಯಲ್ಲಿ ಯಾರಿಗೂ ಈ ಬಗ್ಗೆ ಏನೂ ತಿಳಿಸಿರಲಿಲ್ಲ. ಮೊದಲು ತನಗೊಂದು ಸ್ಪಷ್ಟತೆ ಸಿಗಲಿ ಆಮೇಲೆ ಹೇಳೋಣ ಎಂಬ ನಿರ್ಧಾರ ಮಾಡಿದ್ದ.

ಆದರೆ ಇದೆಲ್ಲದರ ನಡುವೆ ಸಮನ್ವಿತಾಳ ಬಗ್ಗೆ ಅವನ ಮನೆಯವರ ಅಭಿಪ್ರಾಯ ನಿಜವಾಗಿದ್ದು ಅವನಿಗೆ ಸಂತಸ ತಂದಿತ್ತು. ಅವನ ಮನ ಯಾವಾಗಲೂ ಬಯಸಿದ್ದು ಅದನ್ನೇ. ಅವಳು ರಾವ್ ಅವರಂತಿರಲು ಸಾಧ್ಯವೇ ಇಲ್ಲ ಎಂದು ಅವನ ಮನ ಮೊದಲಿನಿಂದಲೂ ವಾದಿಸಿತ್ತು. ಈಗ ಆ ಬಗ್ಗೆ ನಿರಾಳ…... ಇನ್ನು ನಾಳೆ ವೈಭವ್ ಹೇಳಿದ ಹುಡುಗಿಯನ್ನು ಭೇಟಿಯಾಗಿ ಮಾಹಿತಿ ಪಡೆಯಬೇಕು. ಹಾಗೆಯೇ ಡಾ. ಮೀರಾ ಅವರೊಂದಿಗೂ ಮಾತನಾಡಬೇಕು. ಬಹಳ ಸಮಯದಿಂದ ಅವರಲ್ಲಿ ಕೆಲಸ ಮಾಡುತ್ತಿರುವಳೆಂದರೆ ಅವರಿಗೆ ಅವಳ ಬಗ್ಗೆ ಚೆನ್ನಾಗಿ ತಿಳಿದಿರಬಹುದು.

ಮೀರಾ..... ಧನ್ವಂತರಿ ಆಸ್ಪತ್ರೆ.....

ತಾನು ಸಮನ್ವಿತಾಳನ್ನು ಧನ್ವಂತರಿಯಲ್ಲಿ ನೋಡಿರಬಹುದೇ? ಆಗಾಗ ಅಲ್ಲಿಗೆ ಭೇಟಿ ಕೊಟ್ಟಿದ್ದಿದೆ. ಆಗೆಲ್ಲಾದರೂ‌ ಕಂಡಿರಬಹುದೇ ಇವಳನ್ನು? ಇರಬಹುದೇನೋ. ಆದರೂ ಮನವೇಕೋ ಒಪ್ಪದು.

ಬೇರೆಲ್ಲೋ ನೋಡಿರುವೆನಾ?

ಬರೀ ಗೊಂದಲವೇ ಹೊರತು ಏನೂ ಸ್ಪಷ್ಟವಾಗದು....

ಆದರೆ ತಾನು ಅವಳನ್ನು ಯಾವುದೋ ವಿಶಿಷ್ಟ ಸಂದರ್ಭದಲ್ಲಿ ಭೇಟಿಯಾಗಿದ್ದೇನೆ. ಆ ಸನ್ನಿವೇಶವೇ ಅವಳನ್ನು ಇನ್ನೂ ನನ್ನ ನೆನಪಿನಲ್ಲಿ ಜೀವಂತವಾಗಿ ಉಳಿಸಿದೆ. ಬಹುಶಃ ಅಂದಿನಿಂದ ನನ್ನ ಮನಸ್ಸು ನನಗೇ ತಿಳಿಯದೇ ಸುಪ್ತವಾಗಿ ಅವಳನ್ನು ಅರಸಿದೆ.

ಆದರೆ ಎಲ್ಲಿ?

ಹೀಗೆ ಸಮನ್ವಿತಾಳನ್ನು ಹಿಂದೆ ಎಲ್ಲಿ ನೋಡಿರುವೆನೆಂದು ಅಭಿರಾಮ್ ತಲೆಕೆಡಿಸಿಕೊಂಡಿದ್ದರೇ, ಆ ಪ್ರಶ್ನೆಯ ಉತ್ತರ ಅವನಿಗಾಗಿಯೇ ಕಾಯುತ್ತಿತ್ತು.

ಅತೀ ಶೀಘ್ರದಲ್ಲಿ ಈ ಪ್ರಶ್ನೆಯ ಉತ್ತರ ಅವನ ಕಣ್ಮುಂದೆ ಬರಲಿತ್ತು. ಅವನು ಅಷ್ಟು ಆಸ್ಥೆಯಿಂದ ನೆನಪಿಸಿಕೊಳ್ಳಲು ಹೆಣಗುತ್ತಿದ್ದ ಆ ಘಟನೆ ಅಪ್ರಯತ್ನವಾಗಿ ಅವನ ನೆನಪಿನಾಳದಿಂದ ಧೂಳುಕೊಡವಿ ಮೇಲೇಳಲಿತ್ತು.....

       ********ಮುಂದುವರೆಯುತ್ತದೆ**********




.



ಅನೂಹ್ಯ 24

ಬಾಗಿಲ ಕರೆಗಂಟೆಯ‌ ಸದ್ದಿಗೆ ಓಡಿಕೊಂಡೇ ಬಂದು ಬಾಗಿಲು ತೆರೆದ ಚೈತಾಲಿ ಎದುರು ನಿಂತಿದ್ದವಳನ್ನು ಕಂಡು ಒಂದು ಕ್ಷಣ ದಂಗಾದಳು. ಅವಳನ್ನು ದಾಟಿಕೊಂಡು ಬಿರುಗಾಳಿಯಂತೆ ಮನೆಯೊಳಗೆ ಸಾಗಿದಳು. ಚೈತಾಲಿ ಸಾವರಿಸಿಕೊಂಡು ಅವಳ ಹಿಂದೆಯೇ "ಮ್ಯಾಮ್ ನೀವಾ? ಇಷ್ಟೊತ್ತಿನಲ್ಲಿ? ಹೇಗೆ ಬಂದ್ರಿ? ಯಾಕೊಂಥರಾ ಇದ್ದೀರಿ? ಮೈ ಹುಷಾರಿಲ್ವೇ?" ಎಂದು ಒಂದೇ ಸಮನೆ ಪ್ರಶ್ನೆಗಳ ಜಡಿಮಳೆ ಸುರಿಸುತ್ತಾ ಸಾಗಿದಳು. ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ರಾವ್ ಅವರ ಕೋಣೆಯತ್ತ ನಡೆದು ಒಳಬರಲೇ ಎಂದೂ ಕೇಳದೇ ಬಾಗಿಲನ್ನು ದೂಡಿ ಸೀದಾ ಒಳಹೊಕ್ಕಳು.

ಅಪಾಯಿಂಟ್ಮೆಂಟ್ ಇಲ್ಲದೇ, ಡೋರ್ ನಾ಼ಕ್ ಮಾಡುವ ಕಷ್ಟ ತೆಗೆದುಕೊಳ್ಳದೇ, 'ಮೇ ಐ ಗೆಟ್ ಇನ್' ಎಂದು ಸಂಸ್ಕಾರಯುತವಾಗಿ ಕೇಳುವ ವ್ಯವಧಾನವೂ ಇಲ್ಲದೇ ತಮ್ಮ ರೂಮಿಗೆ ನುಗ್ಗಿದ ಅನಾಗರೀಕರಿಗೆ ಸಭ್ಯತೆ ಕಲಿಸುತ್ತೇನೆಂದು ಉರಿಗಣ್ಣಿನಿಂದ ಬಾಗಿಲೆಡೆ ತಿರುಗಿದ ಸತ್ಯಂ ರಾವ್ ಎದುರು ನಿಂತವಳನ್ನು ಕಂಡು ಕಕ್ಕಾಬಿಕ್ಕಿಯಾಗಿ ಕೈಯಲ್ಲಿದ್ದ ಗ್ಲಾಸ್ ಬದಿಗಿಟ್ಟು ಹಲ್ಕಿರಿದರು.

"ಓ…. ನೀನಾ..... ನಾನು ಇದ್ಯಾರಪ್ಪ ಇಷ್ಟೊತ್ತಲ್ಲಿ ಪರ್ಮೀಷನ್ ಕೇಳ್ದೇ ಒಳಬರ್ತಿರೋದು ಅಂದ್ಕೊಂಡೇ. ಅದೇನು ಬೇಬಿ ಈ ರಾತ್ರಿಲೀ. ಹೇಗೆ ಬಂದೆ? ಕಾರು ಇಲ್ಲೇ ಬಿಟ್ಹೋಗಿದ್ಯಲ್ಲ" ಬಹಳ ನಾಜೂಕಾಗಿ ಅಕ್ಕರಾಸ್ಥೆಯಿಂದ ಕೇಳಿದರು ಹಲ್ಲುಗಿಂಜುತ್ತಾ. 

ಅವರು 'ಬೇಬಿ' ಎಂದೊಡನೆ ಬಂದಿರುವಾಕೆ ಯಾರೆಂದು ಅರಿವಾಗಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿ, ಸಾಕ್ಷಾತ್ ಪ್ರೇತದಂತೆ ಕಂಗೊಳಿಸುತ್ತಿದ್ದ ಮಾಲಿನಿ ಧಡಕ್ಕನೆ ಎದ್ದು ಕುಳಿತಿದ್ದರು. ಆ ರಭಸಕ್ಕೆ ಅವರ ಕಣ್ಣುಗಳ ಮೇಲೆ ಕುಳಿತಿದ್ದ ಸವತೆಕಾಯಿ ಎಸಳುಗಳು ಉದುರಿ ಬಿದ್ದವು. 

ಮಾಲಿನಿಯವರ ಅವತಾರವನ್ನೇ ನೋಡುತ್ತಾ, "ಇಲ್ಲ ಮಿಸ್ಟರ್ ರಾವ್, ಈ ಅಪರಾತ್ರಿಲೀ ನಾನೊಬ್ಳೇ ಹೇಗೆ ಬರಲೀ? ನಾನು ಮನೆಗೆ ಹೋಗಬೇಕು ಅಂದಿದ್ದೇ ತಡ. ನಿಮ್ಮ 'ಭಾವಿ ಅಳಿಯ' ತಾನೇ ಕಾರು ಡ್ರೈವ್ ಮಾಡಿಕೊಂಡು ಬಂದು ನನ್ನ ಡ್ರಾಪ್ ಮಾಡಿ ಹೋದ. ನಿಮ್ಮನ್ನು ತುಂಬಾ ಕೇಳಿದೆ ಅಂತ ಹೇಳು‌ ಅಂದಿದ್ದಾನೆ" ಎಂದಳು ವ್ಯಂಗ್ಯವಾಗಿ.

ಭಾವಿ ಅಳಿಯ ಎಂಬ ಶಬ್ದ ಕೇಳಿದ್ದೇ ಮಾಲಿನಿಯವರ ಫೇಸ್ ಪ್ಯಾಕ್ ಹಾಕಿದ್ದ ಫೇಸ್ ಬ್ಲೀಚಿಂಗ್ ಪೌಡರ್ ಹಾಕಿದಂತೆ ಬಿಳಚಿಕೊಂಡರೆ, ಸತ್ಯಂ ರಾವ್ ಅವರು ಕುಡಿದ ನಶೆಯೆಲ್ಲ ಒಂದೇ ಏಟಿಗೆ ಕಾಲ ಬುಡದಲ್ಲಿ ಸೋರಿ ಹೋಯಿತು……!! 'ಅಯ್ಯೋ ದರಿದ್ರದವಳು... ನಾವಿಲ್ಲಿ ಆ ಶರ್ಮಾ ಎಂಪೈರ್ ಗೆ ಇವಳನ್ನು ಸೇರಿಸಿ ಲೈಫ್ ಸೆಟಲ್ ಮಾಡ್ಕೋಬೇಕು ಅಂತಿದ್ರೆ, ಇವಳು ಅಳಿಯ ಅಂತೆಲ್ಲ ಮಾತಾಡ್ತಿದ್ದಾಳಲ್ಲ.... ಎಲ್ಲಾ ಸರಿಯಾಗಿ ನಡೀತಿರುವಾಗ ಇವಳೇನು ಮಾಡೋಕೆ ಹೊರಟಿದ್ದಾಳೆ' ಎಂದುಕೊಂಡ ರಾವ್ ಅವರಿಗೆ ಕೋಪ ನೆತ್ತಿಗೇರಿತು.

ನಖಶಿಖಾಂತ ಕೋಪದಿಂದ "ಸಮನ್ವಿತಾ….. ಏನು ಮಾತಾಡ್ತಿದ್ದೀಯಾ ಅನ್ನೋ ಜ್ಞಾನ ಇದೆಯಾ? ಯಾವನವನು ಭಾವಿ ಅಳಿಯ? ಏನು ಲವ್ವಾ? ಇಲ್ಲಿಯವರೆಗೆ ನಾವು ಹೇಳಿದ್ದಕ್ಕೆಲ್ಲಾ ಉಲ್ಟಾ ಹೊಡೆದ್ರು ನಾವು ಸುಮ್ನಿದ್ದೀವಿ ಅಂತ ಈಗ ಯಾವನೋ ಭಾವಿ ಅಳಿಯ ಅಂತ ಶುರುಮಾಡಿದ್ಯಾ? ಇದೆಲ್ಲಾ ಚೆನ್ನಾಗಿರೋಲ್ಲ. ಹಾಗೇನಾದ್ರೂ ಮಾಡಿದ್ಯೋ ಈ ರಾವ್ ಅಂದ್ರೆ ಯಾರು ಅಂತ ತೋರಿಸಬೇಕಾಗುತ್ತೆ ಹುಷಾರ್......" ಹಿಂದು ಮುಂದು ಯೋಚಿಸದೆ ಬಾಯಿಗೆ ಬಂದದ್ದು ಬೊಗಳಿ ಸಮನ್ವಿತಾಳನ್ನು ಮತ್ತಷ್ಟು ಕೆರಳಿಸಿದರು.

"ಆಮ್ ಆಲ್ಸೋ ಕ್ಯೂರಿಯಸ್ ಟು ನೋ ಮಿಸ್ಟರ್ ರಾವ್. ಹೇಳಿ ಏನು ರಾವ್ ಅಂದ್ರೆ? ಎಷ್ಟು ಮುಖಗಳಿವೆ ನಿಮಗೆ? ಅಷ್ಟು ಮುಖಗಳ ನಡುವೆ ನಿಮ್ಮ ಅಸಲಿ ಮುಖ ಯಾವುದು?"

"ನನ್ನ ಮುಖ ಹಾಗಿರ್ಲಿ. ನೀನು ಮೊದ್ಲು ಅವನ್ಯಾವನೋ ಹೇಳು. ಅಳಿಯ ಅಂತೆ ಅಳಿಯ. ನಮಗೇ ಗೊತ್ತಿಲ್ಲದೇ ಅಳಿಯನ ಪೋಸ್ಟಿಗೆ ಬಂದ ಆ ಭಿಕಾರಿ ಯಾರು? " ಕನಲಿದರು.

"ನನಗೇ ಗೊತ್ತಿಲ್ಲದೇ ನನ್ನ ಗಂಡನ ಪೋಸ್ಟಿಗೆ ಸೆಲೆಕ್ಟ್ ಮಾಡಿದ್ರಲ್ಲ ಅವನೇ...." ಅವಳೂ ಅಷ್ಟೇ ರೋಷದಲ್ಲಿ ಚೀರಿದಳು.

ಎಸೆದ ಬಾಣ ಹೋದಷ್ಟೇ ವೇಗದಲ್ಲಿ ಹಿಂತಿರುಗಿ ತಮ್ಮ ಎದೆಯನ್ನೇ ಬಗೆದಂತಾಯಿತು ರಾವ್ ಅವರ ಪರಿಸ್ಥಿತಿ. 'ಅಂದ್ರೆ...... ಇವಳು ಯಾರ ಬಗ್ಗೆ ಮಾತಾಡ್ತಿರೋದು? ಇವಳಿಗೇನಾದರೂ ವಿಷಯ ಗೊತ್ತಾಗಿದೆಯಾ? ಹೇಗೆ ಕೇಳೋದು ಇವಳತ್ರ?' ಎಂಬ ಯೋಚನೆಯಲ್ಲಿ ಧರ್ಮಪತ್ನಿಯೆಡೆಗೆ ನೋಡಿದರು ಧರ್ಮಸಂಕಟದಿಂದ ಪಾರುಮಾಡು ಎಂಬಂತೆ.......

ತಮ್ಮ ಪತಿ ಪರಮೇಶ್ವರನ ಸಂಜ್ಞೆ ಅರ್ಥಮಾಡಿಕೊಂಡ ಮಾಲಿನಿ ನಿಧಾನವಾಗಿ, "ಹಾಗಂದ್ರೆ ಏನು ಪುಟ್ಟಾ? ಸರಿಯಾಗಿ ಬಿಡಿಸಿ ಹೇಳು" ಎಂದರು ಮೆದುವಾಗಿ.

"ಯಾಕೆ ನಿಮ್ಮಿಬ್ರಿಗೆ ಶಾರ್ಟ್ ಟರ್ಮ್ ಮೆಮೋರಿ ಲಾಸ್ ಪ್ರಾಬ್ಲಮ್ ಏನಾದ್ರೂ ಇದೆಯಾ? ನೀವೇ ತಾನೇ ಅಭಿರಾಮ್ ಶರ್ಮಾನ ಹೆಂಡತಿ ಪೋಸ್ಟಿಗೆ ನನ್ನ ಅಪಾಯಿಂಟ್ ಮಾಡ್ಕೊಳ್ಳೋಕೆ ಸಚ್ಚಿದಾನಂದ ಮತ್ತು ಮೃದುಲಾ ಅವರಿಗೆ ರೆಕಮಂಡ್ ಮಾಡಿದ್ದು? ನಾನು ಅವನ ಹೆಂಡತಿ ಆದ್ರೆ ಅವನು ನಿಮಗೆ ಅಳಿಯನೇ ತಾನೇ?" ಅವಳು ಕೇಳಿದ ವೈಖರಿಗೆ ಗಂಡ-ಹೆಂಡತಿಯರ ಮುಖ ಹರಳೆಣ್ಣೆ ಕುಡಿದಂತಾಯಿತು. 

'ಓಹ್ ಗಾಡ್!!! ಯಾವುದು ಆಗಬಾರದು ಎಂದುಕೊಂಡಿದ್ವೋ ಅದೇ‌ ಆಗ್ತಿದೆ. ಮದುವೆಯ ದಿನದವರೆಗೂ ಇವಳಿಗೆ ಗೊತ್ತಾಗಬಾರದು ಎಂದುಕೊಂಡದ್ದು…. ಇದು ಇವಳಿಗೆ ಹೇಗೆ ಗೊತ್ತಾಯ್ತು? ಅಭಿರಾಮ್ ಇವಳನ್ನು ಹೇಗೆ‌, ಯಾಕೆ ಭೇಟಿಯಾದ? ಛೇ…. ಹಿಂದುಮುಂದು ಯೋಚಿಸದೆ ಬಾಯಿಗೆ ಬಂದದ್ದು ಮಾತಾಡಿ ಬಿಟ್ಟೆ. ಈಗೇನು ಹೇಳೋದು ಇವಳಿಗೆ. ಹೇಗೆ‌ ಸಮಾಧಾನಿಸೋದು!! ಯಾವುದಾದ್ರೂ ಪಾರ್ಟಿ ಇದ್ದು ನಾವು ಮನೆಯಲಿಲ್ಲದಿದ್ರೆ‌ ಸರಿಯಿರೋದು' ರಾವ್ ದಂಪತಿಗಳು ತಮ್ಮ ದುರಾದೃಷ್ಟಕ್ಕೆ ಹಳಿದುಕೊಳ್ಳುತ್ತಾ ಯೋಚಿಸುತ್ತಿದ್ದರು.

"ಏನು ಬಾಯಿ ಬಿದ್ದೋಗಿದ್ಯಾ? ಇಲ್ಲಾ ಲಕ್ವಾ ಹೊಡೀತಾ? ನಾನು ಕೇಳ್ತಿದ್ದೀನಿ ಉತ್ತರ ಕೊಡಿ. ಉತ್ತರ ಸಿಗದೇ ನಾನಿಲ್ಲಿಂದ ಹೋಗೋಲ್ಲ. ಸ್ಪೀಕ್ ಅಪ್ ಡ್ಯಾಮಿಡ್....." ಕ್ಷಣಕ್ಷಣಕ್ಕೂ ಅವಳ ಆವೇಶ ಹೆಚ್ಚುತ್ತಿತ್ತು.

'ಈ ಮದುವೆ ನಡೆಯಲೇಬೇಕು. ಅಭಿರಾಮ್ ಇವಳನ್ನು ಡ್ರಾಪ್ ಮಾಡಿರುವನೆಂದರೆ…... ಎಲ್ಲಾ ಸೆಟ್ ಆದಂತೆಯೇ ಲೆಕ್ಕ. ಈಗ ಬಿಡಬಾರದು. ಏನಾದರೂ ಮಾಡಿ ಇವಳೊಂದಿಗೆ ರಾಜಿಯಾಗಿ ಇವಳನ್ನು ಒಪ್ಪಿಸಲೇಬೇಕು. ಇಲ್ಲದಿದ್ದರೆ ಕಷ್ಟ' ಎನಿಸಿದ್ದೇ ನಯವಾಗಿ ಮಾತನಾಡಲು ಶುರುವಿಟ್ಟರು ರಾವ್.

"ಸಾರಿ ಸಮನ್ವಿತಾ ಬೇಬಿ. ಅದು.... ಅದು.... ಏನೋ 

ಸ್ವಲ್ಪ ಆಫೀಸ್ ಟೆನ್ಷನ್. ಬಿ.ಪಿ ಜಾಸ್ತಿ. ಅದ್ಕೇ ಏನೇನೋ ಮಾತಾಡ್ದೇ. ಬೇಜಾರು ಮಾಡ್ಕೋಬೇಡ. ಇನ್ನು ಅಭಿರಾಮ್ ವಿಚಾರ…. ಅವ್ನು ನಾನು ಮತ್ತೆ ನಿನ್ನ ಮಮ್ಮಿ ನಿನಗೋಸ್ಕರ ಚೂಸ್ ಮಾಡಿರೋ ಹುಡುಗ. ಹಿ ಈಸ್ ಜೆಮ್ ಆಫ್ ಅ ಪರ್ಸನ್. ನಾವು ಎಲ್ಲಾ ಫಿಕ್ಸ್ ಆದ್ಮೇಲೆ ನಿನಗೆ ಸರ್ಪ್ರೈಸ್ ಕೊಡೋಣ ಅಂದ್ಕೊಂಡ್ವಿ. ಬಟ್ ನಿನಗೆ ಗೊತ್ತಾಯ್ತು. ಇಟ್ಸ್ ಒಕೆ..... ಅಭಿರಾಮ್ ನಿನ್ನ ಡ್ರಾಪ್ ಮಾಡಿದ್ನಾ? ಮತ್ತೆ ಒಳಗೆ ಕರೆಯೋದು ತಾನೇ?" ಎಂದರು.

"ಒಹೋ ಸರ್ಪ್ರೈಸ್….. ನನಗೆ…..? ವಾವ್ ಮಿಸ್ಟರ್ ರಾವ್….. ಜೀವನದಲ್ಲಿ ನನಗೆ ಒಂದು ಹಿಡಿ ಪ್ರೀತಿ ಕೊಡೋ ದಯೆ ತೋರದವರು ಅದೇನು ಸಡನ್ನಾಗಿ ಸರ್ಪ್ರೈಸ್ ಕೊಡೋಣ ಅಂದ್ಕೊಂಡದ್ದು? ಅದು ಬಿಡಿ. ಈ ಸರ್ಪ್ರೈಸ್ ಯಾವಾಗ ಕೊಡಬೇಕು ಅಂತಿದ್ರೀ? ತಾಳಿ ಕಟ್ಟೋವಾಗಲೋ? ಅದು ಹೋಗ್ಲೀ..... ನನ್ನ ಮದ್ವೆಯ ಬಗ್ಗೆ ನನ್ನ ಹತ್ರ ಒಂದು ಮಾತು ಕೇಳದೇ, ನನ್ನ ಅಭಿಪ್ರಾಯಕ್ಕೆ ಆಸ್ಪದ ಕೊಡದೇ ಹೇಗೆ, ಯಾವ ಆಧಾರದಲ್ಲಿ ನಿರ್ಧಾರ ತಗೊಂಡ್ರೀ? ಎಂಥೆಂಥ ಮಹಾಪರಾಧಗಳನ್ನು ಮಾಡಿ ಗಲ್ಲು ಶಿಕ್ಷೆಗೆ ಗುರಿಯಾದ ಹೀನ ಖೈದಿಗಳಿಗೂ ಸಾಯೋಕೆ ಮುಂಚೆ ಕೊನೆ ಆಸೆ ಏನೂಂತ ಕೇಳ್ತಾರೆ. ಅಂತದ್ರಲ್ಲಿ ನನ್ನ ಬದುಕಿನ ಮಹತ್ವದ ನಿರ್ಧಾರ ನನ್ನ ಕೇಳದೇ ಹೇಗೆ ತಗೊಂಡ್ರೀ? ನಾನು ಒಪ್ಪಿಕೊಳ್ತೀನಿ ಅಂತ ಹೇಗೆ ಅಂದುಕೊಂಡ್ರಿ.....?" ಸಮನ್ವಿತಾಳ ಸ್ವರ ತಾರಕಕ್ಕೇರಿತ್ತು. ಅವಳು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಳು. ಕೋಪ ನೆತ್ತಿಗೇರಿತ್ತು.

"ಡೋಂಟ್ ಬಿ ಫೂಲಿಶ್ ಸಮನ್ವಿತಾ. ನಾವೇನು ಬೀದಿಲೀ ಹೋಗೋ ಭಿಕಾರಿ ಜೊತೆ ನಿನ್ನ ಮದ್ವೆ ಫಿಕ್ಸ್ ಮಾಡಿಲ್ಲ. ಅಭಿರಾಮ್ ಈಸ್ ಸೋಲ್ ಓನರ್ ಆಫ್ ಶರ್ಮಾ ಎಂಪೈರ್. ಶರ್ಮಾ ಎಂಪೈರ್ ಗೊತ್ತಲ್ಲ ನಿನಗೆ. ಅವರ ಶ್ರೀಮಂತಿಕೆ ಲೆಕ್ಕಕ್ಕೆ ಸಿಗಲ್ಲ. ಅವರ ಮುಂದೆ ನಮ್ಮ ಶ್ರೀಮಂತಿಕೆ ಏನೂ ಅಲ್ಲ. ನೀನು ರಾಣಿ ತರಾ ಇರ್ತೀಯ. ಜೊತೆಗೆ ಇದರಿಂದ ನಮ್ಮ ಬಿಸ್ನೆಸ್ ಕೂಡಾ ತುಂಬಾ ಇಂಪ್ರೂವ್ ‌ಆಗುತ್ತೆ" ಮಾಲಿನಿ ತಮ್ಮ ವ್ಯವಹಾರ ಬುದ್ಧಿವಂತಿಕೆ ಪ್ರದರ್ಶಿಸಿದರು.

"ಒಹೋ ನಿಮ್ಮ ಬಿಸ್ನೆಸ್ ಇಂಪ್ರೂವ್ ಆಗೋಕೆ ನಾನು ಮದ್ವೆ ಆಗ್ಬೇಕಲ್ವೇ. ನನ್ನನ್ನೇನು ನಿಮ್ಮ ಕಂಪನಿಲಿ ತಯಾರಾಗೋ ಪ್ರೊಡಕ್ಟ್ ಅಂದ್ಕೊಂಡಿದ್ದೀರಾ ನಿಮಗೆ ಬೇಕಾದಂತೆ ಬಳಸೋಕೆ " ಕನಲಿದಳು.

"ನಿನ್ನ ಮಮ್ಮಿ ಸರಿಯಾಗೇ ಹೇಳಿದ್ದಾಳೆ ಬೇಬಿ. ನೋಡು ನೀನು ಅವರೆಲ್ಲರಿಗೂ ಇಷ್ಟ ಆಗಿದ್ದೀ. ಈ ಮದುವೆಯಿಂದ ನೀನೂ ಸುಖವಾಗಿರಬಹುದು. ಅವರ ಸಂಬಂಧದಿಂದ ನಮ್ಮ ಸ್ಟೇಟಸ್ ಮತ್ತಷ್ಟು ಏರುತ್ತದೆ. ಯಾವ ರೀತಿಯಿಂದ ನೋಡಿದರೂ ಇಟ್ಸ್ ಪ್ರಾಫಿಟೇಬಲ್" ಹೆಂಡತಿಯ ಮಾತಿಗೆ ಸಮರ್ಥನೆಯ ಮುದ್ರೆ ಒತ್ತಿದರು ರಾವ್.

ಅವರ ಮಾತು ಕೇಳಿ ಸಮನ್ವಿತಾಳ ತಲೆ ಧೀಂ ಎಂದಿತು. "ಇಟ್ಸ್ ಪ್ರಾಫಿಟೇಬಲ್……!!" ಲಾಭದಾಯಕ......!! ನಿಜಕ್ಕೂ ನಾನು ಇವರ ಕಂಪನಿಯ ಒಂದು ವಸ್ತು ಎಂದುಕೊಂಡಿದ್ದಾರೆಯೇ........? 

ಜೋರಾಗಿ ಚಪ್ಪಾಳೆ ತಟ್ಟಿದಳು ಸಮನ್ವಿತಾ.

"ವಾವ್ ಮಿಸ್ಟರ್ ಸತ್ಯಂ ರಾವ್, ಹ್ಯಾಟ್ಸ್ ಆಫ್ ಟು ಯು. ಮದುವೆ ಅಂದರೆ ದಿವಿನಾದ ಸಂಬಂಧ ನೋಡೋದು, ವರ ವಧು‌ ಸಾಮ್ಯ, ಮನೆತನ, ಹಿನ್ನೆಲೆ ಒಳ್ಳೆಯದಾ ಅಂತ ವಿಚಾರಿಸೋದು ಗೊತ್ತಿತ್ತು. ಆದರೆ 'ಲಾಭದಾಯಕ ಸಂಬಂಧ' ಅನ್ನೋ ಪರಿಕಲ್ಪನೆ ನಿಮ್ಮಂತಹವರಿಗೆ ಮಾತ್ರ ಬರೋಕೆ ಸಾಧ್ಯ….. ಅಂದಹಾಗೆ ಈ ಮದುವೆ ಕಾಂಟ್ರಾಕ್ಟ್ ಎಷ್ಟು ಸಮಯದ ತನಕ ಅಸ್ತಿತ್ವದಲ್ಲಿರುತ್ತೆ? ಒಂದು ತಿಂಗಳು, ಎರಡು? ಆರು ಇಲ್ಲ ವರ್ಷ? ಪ್ರೋಬೇಷನರಿ ಪಿರಿಯಡ್ ಎಷ್ಟು?"

"ವಾಟ್ ಆರ್ ಯು ಟಾಕಿಂಗ್? ಡೋಂಟ್ ಗೆಟ್ ಕನ್ಪ್ಯೂಸ್ಡ್. ಇದು ಕಾಂಟ್ರಾಕ್ಟ್ ಅಲ್ಲ ಇಟ್ಸ್ ರಿಯಲ್ ಮ್ಯಾರೇಜ್. ಇನ್ನು ಹತ್ತು ತಲೆಮಾರು ಕೂತು ತಿಂದ್ರೂ ಕರಗದಷ್ಟು ಆಸ್ತಿ ಇರೋರು ಅವರು. ಸುಮ್ನೆ ಮದುವೆ ಆಗು. ಎಲ್ಲರ ಲೈಫ್ ಸೆಟಲ್.."

"ಲಿಸನ್ ಸತ್ಯಂ ರಾವ್….... ಮದುವೆ ಯಾಕೆ? ಇನ್ನೂ ಒಂದು ಪ್ರಾಫಿಟೇಬಲ್ ಆಯ್ಕೆ ಇದೆ. ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡ್ಕೋಳ್ಳಿ.... ಯಾರಿಗೊತ್ತು ಒಂದು ವರ್ಷದ ಮೇಲೆ ಇವನಿಗಿಂತನೂ ಹೆಚ್ಚು ಆಸ್ತಿ, ದುಡ್ಡು ಇರೋನು ಸಿಗಬಹುದು. ಆಗ ಅವನಿಗೆ ಇದೇ ತರ ಮದುವೆ ಆಫರ್ ಕೊಡಬಹುದು!" ಎಂದು ಬಿಟ್ಟಳು ಸಮನ್ವಿತಾ.

ಒಂದು ಕ್ಷಣ ದಂಗಾದರೂ ತೋರಿಸಿಕೊಳ್ಳದೇ, "ನೋಡು ಸಮನ್ವಿತಾ, ಈ ತರದ ಪ್ರವಚನಗಳೆಲ್ಲಾ ಮಾತಿಗೆ‌ ಸರಿ ಅಷ್ಟೇ. ನಾವೇನು ಶಿಲಾಯುಗದಲ್ಲಿ ಜೀವಿಸುತ್ತಿಲ್ಲ. ಇದು ಕಲಿಗಾಲ. ಕಂಪ್ಯೂಟರ್ ಯುಗ. ಇಲ್ಲಿ ದುಡ್ಡೇ ದೊಡ್ಡಪ್ಪ. ಹಣ, ಸ್ಟೇಟಸ್ ಇಲ್ಲಾ ಅಂದ್ರೆ ನಾಯೀನೂ ಮೂಸಲ್ಲ. ಸಂಬಂಧ, ಅನುಬಂಧ ಎಲ್ಲಾ ಕಾಲಡಿಯ ಕಸ ಅಷ್ಟೇ...." ಎಂದರು ರಾವ್.

"ಆ ಹಣ, ಸ್ಟೇಟಸ್ ಗೋಸ್ಕರ, ನಿಮ್ಮ ವ್ಯವಹಾರಕ್ಕೋಸ್ಕರ ಮಗಳನ್ನು ಅವರಿಗೆ‌ ಮಾರಾಟ ಮಾಡ್ತಿದ್ದೀರ ಅಷ್ಟೇ ಅಲ್ವಾ? ಹಾಗಾದ್ರೆ ಹಣಕ್ಕಾಗಿ ಹೆಣ್ಣುಗಳನ್ನು ಮಾರೋ ತಲೆಹಿಡುಕರಿಗೂ ನಿಮಗೂ ಏನು ವ್ಯತ್ಯಾಸ…..? ಹೇಳಿ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್. ಉತ್ತರ ಇದೆಯಾ?" ಅವಳ ಧ್ವನಿ ನಡುಗುತ್ತಿತ್ತು.

ರಾವ್ ದಂಪತಿಗಳು ಉತ್ತರಿಸಲಿಲ್ಲ. ಉತ್ತರ ಸಿಗಲಿಲ್ಲವೋ ಇಲ್ಲಾ ಮತ್ತೇನೋ…….

ಅವಳೇ ಮಾತು ಮುಂದುವರೆಸಿದ್ದಳು.....

"ನನಗೆ ಬುದ್ಧಿ ಬಂದಾಗಿನಿಂದ ಒಂದು ಪ್ರಶ್ನೆ ನನ್ನ ಮನಸ್ಸನ್ನು ಕೊರೆಯುತ್ತಿದೆ. ನನ್ನ ಎಲ್ಲಿಂದ ಎತ್ಕೊಂಡು ಬಂದ್ರಿ ನೀವು? ಅನಾಥಾಶ್ರಮದಿಂದಲಾ? ಇಲ್ಲಾ ಎಲ್ಲೋ ದಾರಿ ಬದಿಯಲ್ಲಿ ಸಿಕ್ಕಿದ್ನಾ? ಹೇಳಿ ಪ್ಲೀಸ್. ನಾನು ಖಂಡಿತಾ ನಿಮ್ಮ ಸ್ವಂತ ಮಗಳಲ್ಲ. ಹಾಗಾಗಿದ್ರೆ ಈ ತರ ಅನ್ಯಾಯ ಮಾಡ್ತಿರ್ಲಿಲ್ಲ ನನಗೆ. ನಾನು ನಿಮಗೆ ಬೇಡ ಅಂದಿದ್ರೆ‌ ಯಾವುದೋ ಅನಾಥಾಶ್ರಮಕ್ಕೆ ಕೊಟ್ಟುಬಿಡ್ಬೇಕಿತ್ತು. ಹೀಗೆ ಇಷ್ಟು ವರ್ಷ ಎಲ್ಲಾ ಇದ್ದೂ ಅನಾಥೆಯಂತೆ ಬದುಕೋ ಶಿಕ್ಷೆ ಯಾಕೇ? ಯಾಕೆ ನನ್ನ ಮೇಲೆ ಈ ತರ ದ್ವೇಷ. ಚಿಕ್ಕ ವಯಸ್ಸಿನಲ್ಲೇ ವಿದೇಶದಲ್ಲಿ ಬಿಟ್ಟಿರಿ. ಅಲ್ಲಿ ನಾನು ಇದ್ದ ಅಷ್ಟು ದೀರ್ಘ ಸಮಯದಲ್ಲಿ ಎಷ್ಟು ಸರಿ ನೋಡೋಕೆ ಬಂದಿದ್ದೀರಿ? ನಾನು ಅಲ್ಲಿ ಏನೆಲ್ಲಾ ಸಮಸ್ಯೆ, ಹಿಂಸೆ ಅನುಭವಿಸಿದ್ದೀನಿ ಗೊತ್ತಾ ನಿಮಗೆ? ಡು ಯು ನೋ ಐ ಹ್ಯಾವ್ Agoraphobia? (ಹೊಸ ಜಾಗಗಳಿಗೆ ಹೊಂದಿಕೊಳ್ಳಲು ಭಯವಾಗುವ ಕಾಯಿಲೆ). ನನಗೆ ಹೊಸ ಜಾಗಗಳಿಗೆ ಹೊಂದಿಕೊಳ್ಳೋಕೆ ಆಗ್ತಿರ್ಲಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ಕಣ್ಣೆವೆ ಮುಚ್ಚದೇ ಕುಳಿತ್ತಿದ್ದ ದಿನಗಳಿಗೆ ಲೆಕ್ಕವಿಲ್ಲ. ಐ ವಾಸ್ ಆಲ್ವೇಸ್ ಅನ್ ಸೆಕ್ಯೂರ್ಡ್. ಯಾರ ಜೊತೆಗೂ ಮಿಂಗಲ್ ಆಗ್ತಿರ್ಲಿಲ್ಲ ನಾನು. ನನಗೆ ಇಂದಿಗೂ ಅಲ್ಲಿ ಒಬ್ಬೇ ಒಬ್ಬ ಸ್ನೇಹಿತರಿಲ್ಲ.  ನಾನು ಹದಿನೈದು ವರ್ಷದವಳಿದ್ದಾಗ ಈ ಹಿಂಸೆ, ಡಿಪ್ರೆಶನ್ ತಾಳೋಕಾಗ್ದೇ ಆತ್ಮಹತ್ಯೆ ಪ್ರಯತ್ನ ಮಾಡಿದ್ದೆ. ಅದು ಗೊತ್ತಾ ನಿಮಗೆ? ಇಲ್ಲಾ. ವಾರ್ಡನ್ ಫೋನ್ ಮಾಡಿದಾಗಲೂ ಹಣಕಳಿಸಿದ್ರೇ ಹೊರತು ನೀವು ಬರ್ಲಿಲ್ಲ. ವೆಕೇಷನ್ ಸಮಯದಲ್ಲಿ ಎಲ್ಲಾ ಮಕ್ಕಳೂ ಮನೆಗೆ ಹೋದಾಗ ನನ್ನ ಪರಿಸ್ಥಿತಿ ಹೇಗಿರ್ತಿತ್ತು ಗೊತ್ತಾ? ಇಲ್ಲ... ಇಲ್ಲ.... ನಿಮಗೇನೂ ಗೊತ್ತಿಲ್ಲ. ನಿಮ್ಗೆ ಗೊತ್ತಿರೋದು ಒಂದೇ…... ದುಡ್ಡು ಕಳಿಸಿದ್ದೀವಿ, ಫಾರಿನ್ನಲ್ಲಿ ಬೆಸ್ಟ್ ಎಜುಕೇಶನ್ ಕೊಡ್ಸಿದ್ದೀವಿ. ಅಷ್ಟೇ ನಿಮಗೊತ್ತಿರೋದು. ಬಟ್ ದುಡ್ಡಿಂದ ಎಲ್ಲಾ ಖರೀದಿಸೋಕಾಗಲ್ಲ. ಅಂಡರ್ಸ್ಟಾಂಡ್ ದಟ್. ದುಡ್ಡು ಲೈಫ್ ಹಾಳ್ ಮಾಡುತ್ತೆ ಅಷ್ಟೇ. ಸತ್ಯ ಏನ್ಗೊತ್ತಾ? ಓದೆಲ್ಲಾ ಮುಗಿದು ಭಾರತಕ್ಕೆ ಬಂದಾಗ ನಾನು ನನ್ನ ಪರಿಚಯಿಸ್ಕೊಂಡೆ ನಿಮ್ಮ ಮಗಳು ಅಂತ. ಹಾಗಾಗಿ ನಾನೇ ಸಮನ್ವಿತಾ ಅಂತ ಗೊತ್ತಾಯ್ತು ನಿಮಗೆ…… ಒಂದು ವೇಳೆ ಬೇರೆ ಯಾರನ್ನಾದ್ರೂ ಸಮನ್ವಿತಾ ಅಂತ ಕಳ್ಸಿದ್ರೇ ನೀವು ಅವಳನ್ನೇ ನಿಮ್ಮ ಮಗಳು ಅಂತ ಒಪ್ಪಿಕೊಳ್ತಿದ್ರೀ. ಫಾರಿನ್ ಬಿಡಿ….. ಇಲ್ಲಿಗೆ ಬಂದು ಎಷ್ಟೋ ಸಮಯವಾಗಿದೆ. ಈಗ್ಲೂ ನನ್ನ ಬಗ್ಗೆ ಏನು ಗೊತ್ತು ನಿಮ್ಗೆ? ನನ್ನ ಇಷ್ಟ, ಕಷ್ಟ ….? ಊಹ್ಮೂಂ.... ಏನಿಲ್ಲ....... ಏನೇನೂ ಇಲ್ಲ….. " 

ಅವಳ ಮಾತು ಅವ್ಯಾಹತವಾಗಿ ಹತಾಶೆಯ ನಡುವೆ ಸಾಗಿತ್ತು. ಆದರೆ ಅವಳ‌ ಯಾವ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿಲ್ಲ. ಅಸಲಿಗೆ ಅವಳ ನೋವೇ‌ ಅವರಿಗೆ ಅರ್ಥವಾಗಲಿಲ್ಲ. ಇನ್ನು ಏನುತ್ತರ ಕೊಟ್ಟಾರು……

ಎಷ್ಟೋ ಹೊತ್ತಿನ ಮೇಲೆ ತನ್ನ ಮನಸ್ಸಿನ ಭಾರ ಅಷ್ಟೂ ಹೊರಹಾಕಿ ಅವಳೇ ಸಮಾಧಾನಗೊಂಡು ಕಣ್ಣೊರೆಸಿಕೊಂಡು ಎದ್ದು ಹೊರಟವಳು ಮತ್ತೆ ನಿಂತು ಅವರೆಡೆ ತಿರುಗಿ, "ಇವತ್ತಿನವರೆಗೆ ನನ್ನ ಸಾಕಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಇವತ್ತಿಗೆ ನನ್ನ ನಿಮ್ಮ ಸಂಬಂಧ ಮುಗೀತು. ನನ್ನ ಬದುಕಲ್ಲಿ ಹೆತ್ತವರು ಇಲ್ಲ ಅಂದ್ಕೋತೀನಿ. ನಿಮಗೆ ಮಗಳಿಲ್ಲ ಅಂದ್ಕೋಳ್ಳೋದು ಕಷ್ಟವೇನಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ. ನನ್ನ ಬದುಕಿನ ಬಗ್ಗೆ ಚಿಂತಿಸೋ ಅಗತ್ಯವಿಲ್ಲ. ಪ್ಲೀಸ್ ಲೀವ್ ಮಿ" ಕೈ ಮುಗಿದು ಹೊರನಡೆದಳು.

ರೂಮಿನ ಹೊರಗೆ ನಿಂತು ಸಮನ್ವಿತಾಳ ನೋವಿಗೆ ದೇವರನ್ನು ಹಳಿಯುತ್ತಾ, ಬೇಡವೆಂದರೂ ಕಿವಿಗೆ ಬೀಳುತ್ತಿದ್ದ ಮಾತುಗಳನ್ನು ಅಲ್ಲಿಯವರೆಗೂ ದುಗುಡದಲ್ಲಿ ಕೇಳುತ್ತ ನಿಂತಿದ್ದ ಚೈತಾಲಿ, ಅವಳು ಹೊರಗೆ ಬಂದೊಡನೆ, "ಒಂದು ನಿಮಿಷ ಮ್ಯಾಮ್, ಪ್ಲೀಸ್ ಒಂದೇ ನಿಮಿಷ ನಿಲ್ಲಿ" ಎಂದು ಒಳಗೆ ಓಡಿದವಳು ರಾವ್ ಅವರ ಮುಂದೆ ನಿಂತು, 

"ಮಿಸ್ಟರ್ ರಾವ್, ನಾನು ನಾಳೆಯಿಂದ ನಿಮ್ಮ ಹತ್ರ ಕೆಲಸ ಮಾಡಲ್ಲ. ಒಂದು ತಿಂಗಳು ಪ್ರಿಯರ್ ನೋಟಿಸ್ ಕೊಡ್ಬೇಕಿತ್ತು, ಆಗ್ಲಿಲ್ಲ. ನನ್ನ ಈ ಮಂತ್ ಸ್ಯಾಲರಿ ನೀವೇ ಇಟ್ಕೊಳ್ಳಿ. ಫಾರ್ಮಾಲಿಟೀಸ್ ಏನಾದ್ರೂ ಇದ್ರೆ ಹೇಳಿ… ಬರ್ತೀನಿ. ಇಲ್ಲಾಂದ್ರೆ ಇನ್ಯಾವತ್ತೂ ಬರೋಲ್ಲ. ಗುಡ್ ಬೈ" ಎಂದವಳೇ ಅವರ ಉತ್ತರಕ್ಕೂ ಕಾಯದೇ ಹೊರಬಂದಳು.

ಸಮನ್ವಿತಾ ಆಗಲೇ ಮನೆಯಿಂದ ಹೊರಹೋಗಿದ್ದಳು. ಚೈತಾಲಿಯ ತಮ್ಮ ಅಕ್ಕನ ಹಾದಿ ಕಾಯುತ್ತಿದ್ದ. ಓಡಿಕೊಂಡೇ ಹೋಗಿ ಅವಳನ್ನು ಹಿಡಿದವಳು, "ಇರೀ ಮ್ಯಾಮ್ ರಾತ್ರಿಯಾಗಿದೆ. ಕ್ಯಾಬ್ ಬುಕ್ ಮಾಡ್ತೀನಿ" ಎಂದಳು.

"ಮನುಷ್ಯರಿಗಿಂತ ಕತ್ತಲೇ ವಾಸಿ ಚೈತಾಲೀ" ಭಾರವಾದ ದನಿಯಲ್ಲಿ ಅಂದಳು. ತಮ್ಮನಿಗೆ ಹೇಳಿ ಕ್ಯಾಬ್ ಬುಕ್ ಮಾಡಿಸಿ ಅವಳನ್ನು ಕ್ಯಾಬ್ ಹತ್ತಿಸಿದಾಗ, 

"ಥ್ಯಾಂಕ್ಸ್ ಚೈತಾಲೀ. ಥ್ಯಾಂಕ್ಯೂ ಫಾರ್ ಎವ್ವೆರಿ ಥಿಂಗ್" ಎಂದು ಕೈ ಬೀಸಿದಳು. 

ಅಲ್ಲಿಗೆ ಒಂದು ಬಂಧ ಬೆಸೆಯದೇ ಕಳಚಿತ್ತು........!

ಚೈತಾಲೀ ತಾನೂ ಕೈ ಬೀಸಿ ತಮ್ಮನೊಂದಿಗೆ ಮನೆಯತ್ತ ಹೆಜ್ಜೆ ಹಾಕಿದಳು ಬೇರೆ ಕೆಲಸ ಹುಡುಕಬೇಕೆಂದು.

ಎಲ್ಲಾ ನೋಡುತ್ತಿದ್ದ ವಾಚ್ಮನ್ ತಲೆಕೆರೆದುಕೊಂಡ ಏನೂ ಅರ್ಥವಾಗದೇ.

ಇಲ್ಲಿಯತನಕ ಅಲ್ಲೇ ನಿಂತಿದ್ದ ಕಾರೊಂದು ಸಮನ್ವಿತಾ ಕ್ಯಾಬ್ ಹತ್ತಿದಾಕ್ಷಣ ಅದನ್ನು ಹಿಂಬಾಲಿಸಿತು. ಅವಳು ತನ್ನ ಕ್ವಾಟ್ರಸ್ ಮುಂದೆ ಇಳಿದು ಒಳ ಹೋದ ಮೇಲೆ ಹಿಂಬಾಲಿಸಿಕೊಂಡು ಬಂದಿದ್ದ ಕಾರಿನಲ್ಲಿದ್ದ ವ್ಯಕ್ತಿ ತನ್ನ ಫೋನ್ ತೆಗೆದು ಅಭಿರಾಮ್ ಗೆ ಕರೆ ಮಾಡಿದ.

           ******ಮುಂದುವರೆಯುತ್ತದೆ*******



ಅನೂಹ್ಯ 23

ಸಮನ್ವಿತಾಳ ಗೊಂದಲಭರಿತ ವದನ ಕಂಡು ಸಚ್ಚಿದಾನಂದರು, "ಅಯ್ಯೋ, ಅದ್ಯಾಕಷ್ಟು ಗೊಂದಲ ಮಗು. ನಿನ್ನ ತಂದೆ ನಿನ್ನ ಮತ್ತು ಅಭಿರಾಮ್ ಮದುವೆಯ ಪ್ರಸ್ತಾಪ ತಂದಿದ್ರಲ್ಲ ಅದು ನಮ್ಮೆಲ್ಲರಿಗೂ ಸಂಪೂರ್ಣ ಸಹಮತ ಅಂತ ಹೇಳಿದ್ದು ಅವನು" 

ಅವರು ಮುಂದೆ ಏನು ಮಾತನಾಡಿದರೋ ಅವಳಿಗೊಂದೂ ಕೇಳಲಿಲ್ಲ. ನಿಶ್ಚಲಳಾಗಿ ಕುಳಿತುಬಿಟ್ಟಳು. ಅವಳ ಹೃದಯ ಸ್ಥಬ್ದವಾಗಿತ್ತು. ಸುತ್ತ ಏನಾಗುತ್ತಿದೆ ಎಂಬ ಅರಿವೂ ಅವಳಿಗಿರಲಿಲ್ಲ.

'ಏನು ಹೇಳುತ್ತಿದ್ದಾರೆ ಇವರೆಲ್ಲಾ?' ಸಚ್ಚಿದಾನಂದರ ಮಾತುಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಲು ಪ್ರಯತ್ನಿಸಿದಳು.......

ತನ್ನ ವಿವಾಹ.......!

ಅಭಿರಾಮ್ ಜೊತೆಗೆ......!

ಹೌದು.... ಹಾಗೆಯೇ ಹೇಳಿದರಲ್ಲವೇ ಆತ.

ಈಗ ನೆನಪಾಗುತ್ತಿದೆ. ಅಂದಿನ ಪಾರ್ಟಿಯಲ್ಲಿ ನಾನು ಇರಲೇಬೇಕೆಂಬ ಒತ್ತಾಯ, ಶರ್ಮಾ ಪರಿವಾರದ ಪರಿಚಯ, ರಾವ್ ದಂಪತಿಗಳ ವಿಚಿತ್ರ ನಡವಳಿಕೆ, ನನ್ನ ಬಗೆಗಿನ ತೋರಿಕೆಯ ಪ್ರೀತಿ, ಕಾಳಜಿ, ಚೈತಾಲಿ ಕರೆ ಮಾಡಿ ಬಾಸ್ ಏನೋ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಿದ್ದು....... ಎಲ್ಲಾ ಸರಿಯಾಗಿ ಒಂದಕ್ಕೊಂದು ಹೊಂದಿಕೆಯಾಗತೊಡಗಿತು. ತಾಳೆ ಹಾಕಿ ನೋಡಿದಳು.

ಅದಕ್ಕೇ ಪಾಪ ನಿನ್ನೆ ಅಭಿರಾಮ್ ಕರೆ ಮಾಡಿ ಹಾಗೆ ಮಾತನಾಡಿರಬೇಕು. ಅವನಿಗೇನು ಗೊತ್ತು ನನ್ನ ಪರಿಸ್ಥಿತಿ…..

ಅಂದರೆ ಮಿಸ್ಟರ್ ರಾವ್ ಅವರ ಬಿಸ್ನೆಸ್ ಉದ್ಧಾರಕ್ಕಾಗಿ ಈ ವಿವಾಹವೇ? ಇರಬೇಕು.....

ಯಾರದೋ ಮೂರನೆಯವರ ವಿವಾಹ ನಿಶ್ಚಯವಾದರೂ ತಿಂಗಳ ಮೊದಲೇ ತಿಳಿಯುತ್ತದೆ.

ಈಗಲೂ ವಿವಾಹ ನಿಶ್ಚಯವಾಗಿದೆ..... 

ಯಾರದ್ದೋ ಅಲ್ಲ........ 

ತನ್ನದೇ............. 

ಅದೂ ತನಗೇ ತಿಳಿಯದೇ..........

ಬಲಿಗೆ ಕರೆದೊಯ್ಯುವ ಹರಕೆಯ ಕುರಿಗೂ ಕಡೇಪಕ್ಷ ತನ್ನ ಸುತ್ತಮುತ್ತಲಿನ ಸನ್ನಿವೇಶದಿಂದ ತನ್ನ ತಲೆದಂಡವಾಗುತ್ತಿರುವ ಅರಿವಾಗುವುದೇನೋ.......

ತಾನು ಆ ಹರಕೆಯ ಕುರಿಗಿಂತ ಹೀನಳಾದೆನೇ?

ಈ ಬಗೆಯ ವಿವಾಹಕ್ಕೆ ಏನೆನ್ನಬಹುದು? 

ಇದು ಸ್ವಯಂವರವೇ? ಇಲ್ಲಾ ಗಾಂಧರ್ವ ವಿವಾಹವೇ? ರಾಕ್ಷಸ ವಿವಾಹ? ಊಹೂಂ ಇದ್ಯಾವುದೂ ಅಲ್ಲ........

ಬಹುಶಃ  ಈ ತರದ ವಿವಾಹ ವೇದೋಪನಿಷತ್ತು, ಪುರಾಣಗಳ ಕಾಲಘಟ್ಟದಲ್ಲಿಯೂ ನೆಡೆದಿರಲಿಕ್ಕಿಲ್ಲ.......

ಏನೆಂದು ಕರೆಯಬಹುದು ಇಂತಹ ಅದ್ಬುತ ವಿವಾಹಕ್ಕೆ? ಮಾಹಿತಿಯೇ ಇಲ್ಲದ ವಿವಾಹ ಎನ್ನಬಹುದೇ?

ಇಲ್ಲಾ ಸಾಟಿ ವಿನಿಮಯ ವಿವಾಹ......!?

ಹ್ಮಂ…. ಇದೇ ಸರಿ.....!

ಇದು ಸಾಟಿ ವಿನಿಮಯ ವಿವಾಹವೇ. ಮಗಳನ್ನು ವ್ಯವಹಾರಕ್ಕೆ ಬದಲಾಯಿಸುವ ವಿವಾಹ.....

(ಸಾಟಿ ವಿನಿಮಯ ಪದ್ಧತಿ/barter system ಎಂಬುದು ಹಣ ಅಸ್ತಿತ್ವಕ್ಕೆ ಬರುವ ಮುಂಚೆ ಇದ್ದ ವಿನಿಮಯ ಪದ್ಧತಿ. ಈ ಪದ್ದತಿಯಲ್ಲಿ ವಸ್ತುಗಳನ್ನು ವಸ್ತುಗಳಿಗೆ ಅಥವಾ ವಸ್ತುಗಳನ್ನು ಸೇವೆಗಳಿಗೆ i.e, commodity to commodity or commodity to service ನೇರವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. )

ಇವರುಗಳು ದೊಡ್ಡ ಮನಸ್ಸು ಮಾಡಿ ಈ ವಿವಾಹಕ್ಕೆ ತಮ್ಮ ಸಮ್ಮತಿಯನ್ನು ನನಗೆ ಹೇಳಬೇಕೆಂಬ ಔದಾರ್ಯವನ್ನು ತೋರಿದ್ದರಿಂದ ಈಗಲಾದರೂ ನನ್ನ ವಿವಾಹದ ಆಮಂತ್ರಣ ಸಿಕ್ಕಿತು. ಒಂದು ವೇಳೆ ಇವರೂ ರಾವ್ ದಂಪತಿಗಳಂತೆ ಯೋಚಿಸಿದ್ದರೆ?

ಆಗ ತಾಳಿ ಕತ್ತಿಗೆ ಬಿದ್ದಾಗ ಮದುವೆಯ ಬಗ್ಗೆ ತಿಳಿಯುತ್ತಿತ್ತೇನೋ…..

ತನ್ನ ಪರಿಸ್ಥಿತಿಯ ಬಗ್ಗೆ ಯೋಚಿಸಿ ಅವಳಿಗೆ ನಗು ಬಂದಿತು. ಅಲ್ಲಿಯವರೆಗೆ ಗರ ಬಡಿದಂತೆ ಕುಳಿತ್ತಿದ್ದವಳು ಇದ್ದಕ್ಕಿದ್ದಂತೆ ಜೋರಾಗಿ ನಗಲಾರಂಭಿಸಿದಳು.

ಉಳಿದ ಮೂವರು ಗಾಬರಿಗೊಂಡರೆ ಅಭಿರಾಮ್ ಮಾತ್ರ ಖೇದಗೊಂಡಿದ್ದ. ಅವನು ಈ ವಿವಾಹಕ್ಕೆ ತನ್ನ ಸಮ್ಮತಿಯನ್ನು ಹೇಳಿದ ಕ್ಷಣದಿಂದ ಅವಳ ಮುಖಚರ್ಯೆಯನ್ನೇ ಗಮನಿಸುತ್ತಿದ್ದ.....

ಮುಖದಲ್ಲಾಗುತ್ತಿದ್ದ ಬದಲಾವಣೆಗಳಲ್ಲಿ ಅವಳ ಮನದ ವಿಪ್ಲವ ಸ್ಪಷ್ಟವಾಗಿ ಗೋಚರಿಸುತ್ತಿತ್ತು.....

ತನ್ನ ಮನದಲ್ಲಿನ ಅನುಮಾನ ನಿಜವೇ ಎಂದು ಅವಳ ವರ್ತನೆಯಿಂದ ಅವನಿಗೆ ಸ್ಪುಟವಾಗತೊಡಗಿತ್ತು......

ಅವಳ ನಗು ಮುಂದುವರೆದಿತ್ತು....ಹಾಗೇ ನಗುನಗುತ್ತಲೇ ಹನಿಗಣ್ಣಾದವಳ ನಯನಗಳಿಂದ ಕಣ್ಣೀರು ಅವ್ಯಾಹತವಾಗಿ ಸುರಿಯತೊಡಗಿತು...... 

ನಗು ನಿಂತಿತು...... 

ಅಲ್ಲೊಂದು ಅಸಹನೀಯ ಮೌನವಿತ್ತು.......

ಒಂದು ಸಣ್ಣ ಸದ್ದಿಲ್ಲದ ಮೌನ......

ಆದರೆ ಆ ಮೌನದೊಳಗೆ ಗಾಢ ವಿಷಾದದಂತೆ ಅವಳ ಕಣ್ಣೀರು ಸದ್ದಿಲ್ಲದೇ ಹರಿದಿತ್ತು........

ಅವಳ ಸ್ಥಿತಿ ನೋಡಿ ಮೃದುಲಾ ಅವರಿಗೆ ತಡೆಯಲಾಗಲಿಲ್ಲ. "ಯಾಕೆ ಹೀಗೆ ಅಳ್ತಾ ಇದ್ದೀಯಾ ಮಗೂ? ದಯವಿಟ್ಟು ಸಮಾಧಾನ ಮಾಡ್ಕೋ. ಏನಾಯ್ತು ಅಂತನಾದ್ರೂ ಹೇಳು. ನೀನು ಹೀಗೆ ಅಳೋದನ್ನ ನೋಡೋಕಾಗಲ್ಲ ಮಗಳೇ...." ಎಂದು ಅವಳನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಅವಳ ಅಳು, ಬಿಕ್ಕುವಿಕೆ ಜೋರಾಯಿತು. ಮೃದುಲಾ ಅವಳ ತಲೆ ಸವರುತ್ತಿದ್ದರೆ ಸಚ್ಚಿದಾನಂದ, ಆಕೃತಿ ಅವಳನ್ನು ಶಾಂತವಾಗಿಸಲು ಶತಪ್ರಯತ್ನ ಮಾಡಿದರು...

ಎಷ್ಟು ಹೊತ್ತು ಹಾಗೆಯೇ ಇದ್ದಳೋ ಇದ್ದಕ್ಕಿದ್ದಂತೆ, "ನಾನು ಮನೆಗೆ ಹೋಗ್ತೀನಿ...." ಎದ್ದೇ ಬಿಟ್ಟಳು.

"ಅಯ್ಯೋ...ಈಗೆಲ್ಲಿಗೆ ಹೊರಟೆ? ಮೊದಲೇ ನಿನ್ನ ಮನಸ್ಥಿತಿ ಸರಿಯಾಗಿಲ್ಲ. ನಿನ್ನ ಈಗೆಲ್ಲೂ ಕಳ್ಸೋಲ್ಲ ನಾನು" ಮೃದುಲಾ ಗಾಬರಿಯಲ್ಲಿ ಹೇಳಿದರು.

"ಹೌದು ಮಗಳೇ, ನೀನು ತುಂಬಾ ನೋವಲ್ಲಿದ್ದೀಯಾ. ಇವತ್ತು ಇಲ್ಲೇ ಇರು. ನಾಳೆ ನಿನ್ನ ಮನಸು ಸಮಾಧಾನ ಆದ್ಮೇಲೆ ಹೋಗುವೆಯಂತೆ" ಸಚ್ಚಿದಾನಂದ್ ಅನುನಯಿಸಿದರು.

"ನಾನು ಹೋಗ್ಲೇಬೇಕು. ಹೋಗ್ತೀನಿ...." ಹಟಹಿಡಿದಳು.

"ನೋಡು ನಾನು ನಿನ್ನ ಅಮ್ಮ ತಾನೇ? ಅಮ್ಮಾ ಹೇಳಿದ್ದು ಮಕ್ಕಳು ಕೇಳ್ಬೇಕು ಅಷ್ಟೇ. ಸುಮ್ನಿರು....."

"ಅಮ್ಮಾ ದಯವಿಟ್ಟು ನನ್ನ ಒತ್ತಾಯ ಮಾಡ್ಬೇಡಿ. ನಾನು ಸ್ವಲ್ಪ ಸಮಯ ಒಂಟಿಯಾಗಿರಬೇಕು. ನಾನು ಹೋಗ್ಬೇಕು. ಪ್ಲೀಸ್ ಬಿಟ್ಬಿಡಿ" ಕೈ ಮುಗಿದಳು. ಅವರು ಇನ್ನೇನು ಹೇಳಲಿದ್ದರೋ,

"ಅಮ್ಮಾ ಅವಳು ಹೋಗ್ಲಿ. ತಡೀಬೇಡ" ಗಂಭೀರವಾಗಿ ಹೇಳಿದ್ದ ಅಭಿರಾಮ್. ಅವರು ಮತ್ತೇನೋ ಹೇಳುವ ಮುನ್ನ ಸುಮ್ಮನಿರುವಂತೆ ಸನ್ನೆ ಮಾಡಿದವನು, "ನೀನು ಹೊರಡು. ನಾನು ನಿನ್ನ ಮನೆಗೆ ಡ್ರಾಪ್ ಮಾಡ್ತೀನಿ" ಕಾರಿನ ಕೀ ಹಿಡಿದು ಹೇಳಿದ.

"ಯಾರೂ ಬರೋದು ಬೇಡ. ನಾನೇ ಹೋಗ್ತೀನಿ"

"ನಿನ್ನ ಮನೆ ಇಲ್ಲಿಂದ ತುಂಬಾ ದೂರದಲ್ಲಿರೋದು. ನೀನು ಆಟೋದಲ್ಲಿ ಬಂದಿದ್ದು, ಕಾರಲ್ಲಿ ಅಲ್ಲ. ಕತ್ತಲಾಗ್ತಾ ಬಂದಿದೆ. ಸುಮ್ಮನೇ ಹಠ ಮಾಡ್ಬೇಡ. ನಾನು ಬಿಡ್ತೀನಿ" ದೃಢವಾಗಿ ಹೇಳಿದ. ಸುಮ್ಮನಾದಳು.

"ನಿಮಗಂತಲೇ ಅಮ್ಮ ಅಡಿಗೆ ಮಾಡಿದ್ದು. ಸ್ವಲ್ಪ ಊಟನಾದ್ರೂ ಮಾಡ್ಕೊಂಡು ಹೋಗಿ" ಆಕೃತಿ ಗೋಗರೆದಳು.

"ಹೊಟ್ಟೆ ತುಂಬಿಹೋಗಿದೆ. ಊಟ ಮಾಡುವ ಮನಸಿಲ್ಲ. ದಯವಿಟ್ಟು ಕ್ಷಮಿಸಿ. ಎಲ್ಲರಿಗೂ ತೊಂದರೆ ಕೊಟ್ಟೆ. ಇನ್ನೊಮ್ಮೆ ಬರ್ತೀನಿ ಊಟ ಮಾಡೋಕೆ. ಬೇಸರ ಮಾಡ್ಕೋಬೇಡಿ" ಸತ್ವಹೀನ ದನಿಯಲ್ಲಿ ನುಡಿದವಳು ಬೇರೇನೂ ಹೇಳದೆ ಹೊಸಿಲು ದಾಟಿ ಹೊರನಡೆದಿದ್ದಳು. ಅಭಿರಾಮ್ ಸುಮ್ಮನೆ ಅವಳನ್ನು ಹಿಂಬಾಲಿಸಿದ......

ಮನೆಯಲ್ಲಿ ಉಳಿದ ಮೂವರು ಸಮನ್ವಿತಾಳಿಗೆ ಇದ್ದಕ್ಕಿದ್ದಂತೆ ಏನಾಯಿತು, ಅಷ್ಟು ಸ್ಥಿತಪ್ರಜ್ಞಳಾದ ಹುಡುಗಿ ಹೀಗೇಕೆ ಮಾಡಿದಳು? ತಮ್ಮಿಂದ ಏನಾದರೂ ತಪ್ಪಾಯಿತೇ? ಎಂಬ ಉತ್ತರವಿಲ್ಲದ ಪ್ರಶ್ನೆಗಳ‌ ನಡುವೆ ನಲುಗಿದರು. ಸಮಯ ದಾಟಿದರೂ ಯಾರಿಗೂ ಊಟ ಮಾಡುವ ಮನಸ್ಸಾಗಲಿಲ್ಲ. ಅವಳಿಗಾಗಿಯೇ ಸಿದ್ದಪಡಿಸಿದ್ದ ಅಡುಗೆ ರುಚಿ ನೋಡುವವರ ಗತಿಯಿಲ್ಲದೇ ಅಡುಗೆ ಕೋಣೆಯಲ್ಲಿ  ಅನಾಥವಾಗಿ ಬಿದ್ದಿತ್ತು…….. 

ಅವಳು‌ ಬಂದು ಹೋಗಿದ್ದಕ್ಕೆ ಸಾಕ್ಷಿ ಎಂಬಂತೆ ಉಳಿದದ್ದು ಖಾಲಿ ಟೀ ಕಪ್ ಮಾತ್ರ.....‌

               *********************

ಕತ್ತಲನ್ನು ಸೀಳಿಕೊಂಡು ಕಾರು ನಿಧಾನವಾಗಿ ಸಾಗುತ್ತಿತ್ತು. ಅವಳ ಬಳಿ ಕೇಳಲು ಅವನಿಗೆ ಸಾವಿರ ವಿಚಾರಗಳಿದ್ದವು..... ಆದರೆ ಅವಳು ಉತ್ತರಿಸುವ ಮನಸ್ಥಿತಿಯಲ್ಲಿರಲಿಲ್ಲ. ಅವಳನ್ನು ಆಳುತ್ತಿದ್ದದ್ದು ಮೌನವಷ್ಟೇ........

ಅವಳತ್ತ ಓರೆ ನೋಟ ಹರಿಸಿದ........

ಅವಳ‌ ಮುಖದಲ್ಲಿ ಬಿರುಗಾಳಿಗೆ ಮುನ್ನಿನ ಶಾಂತತೆ ಇತ್ತೇ…...? 

ಇಲ್ಲಾ ಪ್ರಳಯದ ಮುನ್ಸೂಚನೆ ಇತ್ತೇ…….?

ಅಥವಾ ಮೂರನೇ ಕಣ್ತೆರೆದು ತಾಂಡವಕ್ಕೆ ತಯಾರಾದ ತ್ರಿನೇತ್ರನ ರೌದ್ರವಿತ್ತೇ…….?

ಅವನಿಂದ ಅಳೆಯಲು ಸಾಧ್ಯವಾಗಲಿಲ್ಲ..........

ಅವಳು ನಿಜಕ್ಕೂ ನಿರ್ಲಿಪ್ತಳಾಗಿದ್ದಳು. ಯೋಚಿಸಲು ಉಳಿದಿರುವುದಾದರೂ ಏನು? ಏನನ್ನಾದರೂ ಉಳಿಸಿರುವರೇ ತನ್ನ ಅಪ್ಪ ಅಮ್ಮ? ಖಂಡಿತ ಇಲ್ಲ.......

ಆದರೂ ಕೇಳಬೇಕು ನಾನು.....

ನನ್ನ ಮನದಲ್ಲಿ ವರ್ಷಗಳಿಂದ ಬೇರು ಬಿಟ್ಟಿರುವ, ನನ್ನನ್ನು ಕೊಲ್ಲುತ್ತಿರುವ ಪ್ರಶ್ನೆಗಳಿಗೆ ಉತ್ತರ ಪಡೆಯಲೇ ಬೇಕು......

ಇವತ್ತು ನನ್ನೆಲ್ಲಾ ಪ್ರಶ್ನೆಗಳಿಗೂ ಅವರು ಉತ್ತರಿಸಲೇ ಬೇಕು......

ನನ್ನ ಮೇಲೆ ಏಕಿಂತಾ ದ್ವೇಷ ಎಂದು ತಿಳಿಯಬೇಕಿದೆ ನನಗೆ.......

"ಆರ್ ಯು ಓಕೆ?" ಅವಳ ಮೌನ ಅಸಹನೀಯವೆನಿಸಿ ಕೇಳಿದ. ಅವನ ಪ್ರಶ್ನೆಗೆ ನಗು ತರಿಸಿತವಳಿಗೆ...ಆಮ್ ಐ‌ ಓಕೆ? ಯಾರಿಗೆ ಗೊತ್ತು....? ಅಸಲಿಗೆ ನಾನು ಜೀವಂತವಾಗಿರುವೆನಾ? 

"ನೀನು ತುಂಬಾ ಬೇಸರದಲ್ಲಿದ್ದೀಯಾ ಅಂತ ಗೊತ್ತು ಸಮನ್ವಿತಾ.ನಿನ್ನ ನೋವಿನ ಆಳದ ಕಲ್ಪನೆ ನನಗಿದೆ. ಆದರೂ ಒಂದು ಪ್ರಶ್ನೆ ನಿನ್ನೆಯಿಂದ ನನ್ನ ಹಿಂಸಿಸ್ತಿದೆ. ಕೇಳಲೇಬೇಕು. ದಯವಿಟ್ಟು ಬೇಸರಿಸಬೇಡ. ಒಂದೇ ಒಂದು ಪ್ರಶ್ನೆ..... ನಾನು ನಿನ್ನೆ ನಿನಗೆ ಫೋನ್ ಮಾಡಿದಾಗ ನೀನು ಮಾತನಾಡಿದ ವೈಖರಿಯಿಂದ ಹುಟ್ಟಿದ ಪ್ರಶ್ನೆ. ಇವತ್ತು ನಿನ್ನ  ವರ್ತನೆ ನೋಡಿ ಇನ್ನಷ್ಟು ಬಲಗೊಂಡ ಅನುಮಾನ..... ನಿನ್ನ ತಂದೆ ಮಾಡಿದ ಈ ಪ್ರಸ್ತಾಪದ ಬಗ್ಗೆ ನಿನಗೆ  ಗೊತ್ತಿತ್ತಾ? ನನಗೆ ನಿನ್ನೆಯಿಂದ ಬಲವಾಗಿ ಅನಿಸಿದ ಪ್ರಕಾರ ನಿನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಲ್ವಾ? ನಿಜ ತಾನೇ? ಈಗ ಸ್ವಲ್ಪ ಹೊತ್ತಿಗೆ ಮುಂಚೆ ಡ್ಯಾಡ್ ಹೇಳಿದಾಗಲೇ ನಿನಗೆ ಈ ಬಗ್ಗೆ ಗೊತ್ತಾಗಿದ್ದು ಅಲ್ವಾ?"

ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ದೋಣಿಯಂತೆ ದಿಕ್ಕಾಪಾಲಾಗಿ ಸಾಗುತ್ತಿದ್ದ ಅವಳ ಯೋಚನೆಯ ಗತಿ ಬದಲಿಸುವಂತೆ ಮಾತನಾಡಿದ್ದ ಅಭಿರಾಮ್. ಅವನಿಗೆ ಅದೇ ಸತ್ಯವೆಂದು ನಿಚ್ಚಳವಾಗಿ ತಿಳಿದಿದ್ದರೂ ಅವಳ ಬಾಯಿಂದಲೇ ಕೇಳುವ ಪ್ರಯತ್ನ ಮಾಡಿದ.

"who cares? ನನಗೆ ಗೊತ್ತಾಗಲೀ, ಗೊತ್ತಾಗದೇ ಇರಲೀ ಅದರಿಂದ ಯಾರಿಗೆ ಏನಾಗ್ಬೇಕಾಗಿದೆ ಮಿಸ್ಟರ್ ಶರ್ಮಾ? ವಿವಾಹಕ್ಕೆ ವಧುವರರ ಹಿನ್ನೆಲೆ, ಕುಲ, ಗೋತ್ರ, ಪರಿವಾರ, ಕೆಲಸ, ಗುಣ, ನಡತೆ ಇತ್ಯಾದಿಗಳ ಅವಲೋಕನ ಅಗತ್ಯ ಎಂದುಕೊಂಡಿದ್ದೆ. ಆದರೆ ಹಣ ಹಾಗೂ ವ್ಯವಹಾರ ಕೂಡಾ ವಿವಾಹವೊಂದಕ್ಕೆ ಮೂಲವಾಗಬಹುದು ಎಂದು ಯಾವತ್ತೂ ಅನಿಸಿರಲಿಲ್ಲ. ನನ್ನ ವಿವಾಹ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ದಾಖಲಾಗಬೇಕಾದುದೇ...... " ನಕ್ಕಳು. ಕಣ್ಣಿಂದ ನೀರ ಹನಿಗಳು ಜಾರಿದವು…..

ಇವಳು ಹೀಗೆ ನಗುವ ಬದಲು ಅತ್ತಿದ್ದರೇ ನಡೆಯುತ್ತಿತ್ತು ಎಂದುಕೊಂಡ.

ಅವನ ಪ್ರಶ್ನೆಗೆ ನೇರವಾಗಿ ಉತ್ತರಿಸದಿದ್ದರೂ ಅವಳ ಮಾತಿನಲ್ಲಿ ಧ್ವನಿಸಿದ ಭಾವವನ್ನು ಅರಿಯದಷ್ಟು ಮೂರ್ಖನಲ್ಲ ಅವನು...

ತಾನು ನೆನಸಿದ್ದೇನು, ಇಲ್ಲಿ ನಡೆದಿರುವುದೇನು?

ಎಂತಹ ನೀಚನಿರಬಹುದು ಈ ಸತ್ಯಂ ರಾವ್?  ಮದುವೆ ಎಂದರೇನು ಮಕ್ಕಳಾಟವೇ? ಮದುವೆಯಾಗಬೇಕಾದವಳಿಗೇ ಏನೂ ತಿಳಿಸದೇ ಎಲ್ಲವನ್ನೂ ತಾವೇ ನಿರ್ಧರಿಸಲು ಅವಳೇನು ಜೀವವಿಲ್ಲದ ಗೊಂಬೆಯೇ? ಅವಳಿಗೂ ಮನಸ್ಸು, ಭಾವನೆಗಳಿಲ್ಲವೇ.......? ಅವುಡುಗಳು ಬಿಗಿದುಕೊಂಡವು. ಅವನಿಗೆ ಬಂದ ಕೋಪಕ್ಕೆ ಸತ್ಯಂ ರಾವ್ ಮನೆಗೇ ಹೋಗಿ ಬಡಿದು ಹಾಕುವಷ್ಟು ರೋಷ ಉಕ್ಕಿತು. ಈಗಲೇ ಹುಡುಕಿ ಅಲ್ಲೇ ಗುಂಡಿತೋಡಿ ಜೀವಂತ ಹುಗಿದು ಹಾಕಿಬಿಡಲೇ ಎನಿಸಿಬಿಟ್ಟಿತು. ಕಷ್ಟಪಟ್ಟು ನಿಯಂತ್ರಿಸಿಕೊಂಡ....

ರಾವ್ ಮ್ಯಾನ್ಶನ್ ತಲುಪುವವರೆಗೂ ಅವನೇನೂ ಮಾತನಾಡಲಿಲ್ಲ. ಮನೆಯೆದುರು ಕಾರು ನಿಂತಾಗ ಅವನೂ ಕೆಳಗಿಳಿದ. ಮನೆಯೊಳಗೆ ಹೋಗಿ ರಾವ್ ಕತ್ತಿನ ಪಟ್ಟಿ ಹಿಡಿದು ಉಸಿರು ನಿಲ್ಲುವಂತೆ ಬಾರಿಸಬೇಕು ಎನಿಸಿತು. ಆದರೆ ಇದು ಸರಿಯಾದ ಸಮಯವಲ್ಲ ಎಂದು ತನ್ನನ್ನು ತಾನು ‌ಸಮಾಧಾನಿಸಿಕೊಂಡ. 

ಇಳಿದ ಸಮನ್ವಿತಾ ಕೀಲು ಕೊಟ್ಟ ಗೊಂಬೆಯಂತೆ ಮನೆಯತ್ತ ನಡೆದಾಗ "ಒಂದು ನಿಮಿಷ ಸಮನ್ವಿತಾ" ಎಂದ. ಅವನ ಕರೆಗೆ ಅವಳು ಪ್ರತಿಕ್ರಿಯಿಸದಾಗ ತಾನೇ ಕೈ ಹಿಡಿದು ನಿಲ್ಲಿಸಿದ....ಎಚ್ಚೆತ್ತುಕೊಂಡವಳು ಏನು ಎಂಬಂತೆ ಅವನತ್ತ ನೋಡಿದಳು.

"ಎಕ್ಟ್ರೀಮ್ಲೀ ಸಾರಿ ಸಮನ್ವಿತಾ. ನಿನ್ನ ಬದುಕಿನ ಬಹುಮುಖ್ಯವಾದ ನಿರ್ಧಾರ ಹೀಗೆ ನಿನ್ನ ಅರಿವಿಗೇ ಬಾರದಂತೆ ಒಡಮೂಡಿರಬಹುದೆಂಬ ಸಣ್ಣ ಕಲ್ಪನೆಯೂ ನಮಗಿರಲಿಲ್ಲ. ಅಂತದ್ದೊಂದು ಸಣ್ಣ ಸುಳಿವು ಸಿಕ್ಕಿದ್ದರೂ ನಿನ್ನ ಮನಸಿಗೆ ಹಿಂಸೆಯಾಗುವಂತಹ ಈ ಮಾತುಕತೆಯ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ನಮ್ಮನ್ನು ಕ್ಷಮಿಸಿಬಿಡು" ಎಂದ.

"ನೀವ್ಯಾಕೆ ಕ್ಷಮೆ ಕೇಳ್ಬೇಕು ಅಭಿರಾಮ್. ಹಾಗೇ ನೋಡಿದ್ರೆ ನಾನೇ ನಿಮ್ಮೆಲ್ಲರ ಕ್ಷಮೆ ಕೇಳಬೇಕು. ನೀವೆಲ್ಲಾ ಅಷ್ಟು ಆತ್ಮೀಯತೆಯಿಂದ ನನಗಾಗಿ ಕಾದಿದ್ರೀ. ಆದರೆ ನಾನು ನಿಮ್ಮೆಲ್ಲರ ಸಂತೋಷವನ್ನು ಹಾಳುಮಾಡಿ, ಎಲ್ಲರಿಗೂ ನೋವುಕೊಟ್ಟು ಬಂದೆ. ಸಾಧ್ಯವಾದ್ರೇ ನನ್ನ ನೀವೆಲ್ಲಾ ಕ್ಷಮಿಸಿಬಿಡಿ. 

ಎಂಡ್ ಥ್ಯಾಂಕ್ಸ್ ಅ ಲಾಟ್ ನನ್ನ ಮನೆಯವರು ಅನ್ನಿಸಿಕೊಂಡ ಜನ ನನ್ನಿಂದ ಮುಚ್ಚಿಟ್ಟ ವಿಷಯನ ನನಗೆ ತಿಳಿಸಿದ್ದಕ್ಕೆ, ಮದುವೆ ಅಂದ್ರೆ ವ್ಯವಹಾರ ಅಲ್ಲ ಅಂತ ಭಾವಿಸಿದ್ದಕ್ಕೆ, ಮದುವೆ ಮಾಡಿಕೊಳ್ಳೋ ಹೆಣ್ಣಿನ ಅಭಿಪ್ರಾಯವೂ ಮುಖ್ಯ ಅಂತ ನಿಮಗೆಲ್ಲಾ ಅನಿಸಿದ್ದಕ್ಕೆ, ಹಣವಂತರೆಲ್ಲ ಸತ್ಯಂ ರಾವ್ ಅವರ ತರಾ ಯೋಚಿಸಲ್ಲ‌ ಅಂತ ತೋರಿಸಿಕೊಟ್ಟಿದ್ದಕ್ಕೆ.... ಎಲ್ಲಕ್ಕೂ ತುಂಬಾ ಥ್ಯಾಂಕ್ಸ್... ನೀವು ಇವತ್ತು ಹೇಳಿರಲಿಲ್ಲ ಅಂದ್ರೆ ತಾಳಿ ಕತ್ತಿಗೆ ಬೀಳೋವರೆಗೂ ನನ್ನ ಮದ್ವೆ ವಿಷ್ಯ ನನಗೇ ಗೊತ್ತಾಗ್ತಿರ್ಲಿಲ್ಲ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಅಭಿರಾಮ್. ಸಾಧ್ಯವಾದಲ್ಲಿ ಕ್ಷಮಿಸಿ. ಬರ್ತೀನಿ. ಬಾಯ್"

ಅವಳು ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದು, ಅವಳು ಮನೆಯೊಳಗೆ ತೆರಳಿದ ನಂತರ ತನ್ನ ಮನೆಯತ್ತ ಹೊರಟವನ ಮನದಲ್ಲಿ ನಿರ್ಧಾರವೊಂದು ದೃಢವಾಗಿತ್ತು......

         *******ಮುಂದುವರೆಯುತ್ತದೆ********



ಅನೂಹ್ಯ 22

ಅಂದು ಬೆಳಗ್ಗಿನಿಂದಲೇ ಮನೆ ತುಂಬಾ ಸಂಭ್ರಮ.....

ಸಂಜೆ ಬರುವ ಅತಿಥಿಯನ್ನು ಸ್ವಾಗತಿಸಲು ಮನೆ ಬೆಳಗ್ಗಿನಿಂದಲೇ ಸಜ್ಜಾಗುತ್ತಿತ್ತು.....

ಅಡುಗೆಮನೆಯಲ್ಲಿ ತರಹೇವಾರಿ ಭಕ್ಷ್ಯಗಳ ತಯಾರಿ.....

"ಹಲೋ ಮಿಸ್ಟರ್ ಲಾಯರ್, ತಮ್ಮ ಆಫೀಸಿನ ಕಾರ್ಯಚಟುವಟಿಕೆಗಳಲ್ಲಿ ಮೈಮರೆತು ಸಂಜೆಯ ವಿಷಯ ಮರ್ತು ಬಿಡಬೇಡಿ. ಒಳ್ಳೆ ಪ್ರಶ್ನೆ ಪತ್ರಿಕೆ ಸಮೇತ ತಮ್ಮ ಪಾಟಿ ಸವಾಲಿಗೆ ತಯಾರಾಗಿ.ಳ"  ಆಫೀಸಿಗೆ ತಯಾರಾಗಿ ತಿಂಡಿ ತಿನ್ನಲು ಬಂದವನಿಗೆ ನೆನಪಿಸಿದಳು ಆಕೃತಿ.

"ಒಂದು ವೇಳೆ ನಾನು ಮರೆತ್ರೂ ನೀನಿದ್ದೀಯಲ್ಲ ನಕ್ಷತ್ರಿಕನ ತರ…. ನನ್ನ ಬೆಂಬಿಡದ ಬೇತಾಳ, ಕೋತಿ...."

"ನಾನು ನಿನ್ನ ಪಿ.ಎ ನೋಡು, ನಿನಗೆಲ್ಲ ನೆನಪಿಸ್ತಾ ಇರೋದು ಬಿಟ್ಟು ಬೇರೆ ಕೆಲ್ಸ ಇಲ್ವಲ್ಲ ನನಗೆ. ಅಂಥಾ ಎಕ್ಸಪೆಕ್ಟೇಷನ್ ಇವತ್ತಿನ ಮಟ್ಟಿಗಂತೂ ಇಟ್ಕೊಳ್ಳಲೇ ಬೇಡಿ ಕಲಾವಿದ ಮಹಾಶಯರೇ. ಇವತ್ತಂತೂ ನಾನು ನಿನ್ನ ವಿರೋಧ ಪಕ್ಷದ ಸದಸ್ಯೆ. ನಾನಷ್ಟೇ ಅಲ್ಲ. ಅಪ್ಪ ಅಮ್ಮ‌ನೂ ಕೂಡಾ…… ನಿನ್ನ ಪರವಾಗಿ ನೀನೊಬ್ನೇ ವಾದ ಮಾಡ್ಬೇಕು"

"ನಡೀಲಿ ನಡೀಲಿ, ಎಷ್ಟು ದಿನ ನಡಿಯುತ್ತೆ ನಿನ್ನ ಪಾರ್ಲಿಮೆಂಟರಿ ಸೆಷನ್ ಅಂತ ನಾನೂ ನೋಡ್ತೀನಿ. ಅಪ್ನಾ ಟೈಂ ಆಯೇಗಾ......" ಅಂದವನು "ಅಮ್ಮಾ ತಿಂಡಿ ಕೊಡಮ್ಮಾ, ಲೇಟಾಯ್ತು. ಇದರ ಮಧ್ಯೆ ಇವಳ ಪಿಟೀಲು ಬೇರೆ" ಅಡುಗೆಮನೆಯಲ್ಲಿದ್ದ ಮೃದುಲಾರನ್ನು ಕೂಗಿದ.

"ಅಬ್ಬಾ ಯಾಕಿಷ್ಟು ಜೋರಾಗಿ ಕಿರುಚ್ತೀ? ನನಗೇನು ಕಿವಿ ಕೆಪ್ಪಾ?" ರೇಗುತ್ತಲೇ ಇಬ್ಬರಿಗೂ ತಿಂಡಿ ಬಡಿಸಿದರು ಮೃದುಲಾ.

"ಡ್ಯಾಡ್ ಎಲ್ಲಿ?" ಕೇಳಿದ. "ಅವರ ಫ್ರೆಂಡ್ ಯಾರೋ ಫೋನ್ ಮಾಡಿದ್ದಾರೆ. ಆಮೇಲೆ ತಿಂಡಿ ತಗೋತೀನಿ ಅಂದ್ರು." ಎಂದ ಮೃದುಲಾ ಮಗನ ತಲೆಗೂದಲಲ್ಲಿ ಕೈಯಾಡಿಸುತ್ತ, "ಅಭಿ ನನಗೆ ನಿನ್ನ ನಿರ್ಧಾರಗಳ ಬಗ್ಗೆ ಗೌರವವಿದೆ. ನೀನೇನು ಮಾಡಿದ್ರೂ ತುಂಬಾ ಯೋಚಿಸಿ ಹೆಜ್ಜೆ ಇಟ್ಟಿರ್ತೀಯಾ ಅನ್ನೋದು ನನ್ನ ನಂಬಿಕೆ. ಆದರೆ ಈ ವಿಷಯದಲ್ಲಿ ನೀನು ಯಾಕೋ ಎಡವುತ್ತಿದ್ದೀಯಾ ಅನ್ನಿಸ್ತಾ ಇದೆ ಕಣೋ….. ರಾವ್ ಅವರ ಮೇಲಿನ ತಿರಸ್ಕಾರ ಸಮನ್ವಿತಾನೂ ಅದೇ ದೃಷ್ಟಿಯಿಂದ ನೋಡೋಕೆ ನಿನ್ನನ್ನು ಪ್ರೇರೇಪಿಸ್ತಾ ಇದೆ ಅಷ್ಟೇ. ಅಂತದ್ರಲ್ಲಿ ಇವತ್ತಿನ ಈ ಮಾತುಕತೆ ಬೇಕಾ? ಇದರಿಂದ ಅವಳ ಮನಸ್ಸಿಗೆ ನೋವಾಗೋದಿಲ್ವಾ?" ಕೇಳಿದ್ದರು.

"ನೀನು ನನ್ನ ಮೇಲಿಟ್ಟಿರೋ ನಂಬಿಕೆನ ಯಾವತ್ತೂ ಸುಳ್ಳಾಗಿಸೋಲ್ಲ ಅಮ್ಮಾ. ಸಮನ್ವಿತಾಳ ಮೇಲೆ ನನಗೇನು ತಿರಸ್ಕಾರವಿಲ್ಲ. ನಾನ್ಯಾರನ್ನೂ ಪ್ರೀತಿಸಿಲ್ಲ ನಿಜ ಆದರೆ ನನಗೂ ವಿವಾಹದ ಬಗ್ಗೆ ಹಲವಾರು ಕಸಸುಗಳಿವೆ. ಇವತ್ತು ಮದುವೆಯಾಗಿ ನಾಳೆ ಡೈವೋರ್ಸ್ ಅನ್ನುವಂತಾ ಬದುಕು ನನಗೆ ಬೇಕಾಗಿಲ್ಲ. ಜೀವನಪೂರ್ತಿ ಜೊತೆಗಿರಬೇಕಾದವರ ನಡುವೆ ಇರಬೇಕಾದ್ದು ಪ್ರೀತಿ ನಂಬಿಕೆಗಳೇ ಹೊರತು ಭಿನ್ನಾಭಿಪ್ರಾಯ, ತಪ್ಪುಕಲ್ಪನೆಗಳಲ್ಲ. ಒಂದು ಸಣ್ಣ ಮಾತುಕತೆಯಿಂದ ಗೋಜಲಾಗಿರುವ ಈ ಸನ್ನಿವೇಶದ ಸ್ಪಷ್ಟ ಚಿತ್ರಣ ಸಿಗುವುದಾದರೆ ಅದರಲ್ಲಿ ತಪ್ಪಿಲ್ಲ ಅಲ್ವಾ?" ಅವನ ಮನದಿಂಗಿತ ಸ್ಪಷ್ಟವಾಗಿ ಹೊರಗೆಡವಿದ. 

ಅವನು ಹೇಳಿದ ಮಾತುಗಳಲ್ಲಿ ಅರ್ಥವಿತ್ತು. ಎಲ್ಲಾ ಗೊಂದಲಗಳು ನೇರಾನೇರ ಪರಿಹಾರವಾದರೆ ಒಳ್ಳೆಯದು ಎನಿಸಿತು ಮೃದುಲಾರಿಗೂ.

ಆದರೂ ಸಮನ್ವಿತಾ ಏನಂದುಕೊಳ್ಳಬಹುದು ಎಂಬ ಭಯವಿತ್ತು ಅವರಿಗೆ.

ಅವರ ಭಯದ ಮೂಲ ತಿಳಿದವನಂತೆ, "ಅಮ್ಮಾ ನಿನ್ನ ಚಿಂತೆ ಏನು ಅಂತ ಗೊತ್ತು. ನಾನೇನು ಸಮನ್ವಿತಾನ ದ್ವೇಷಿಸುತ್ತಿಲ್ಲ. ಅವಳ ಮನಸ್ಸಿಗೆ ನೋವಾಗುವಂತೆ ನಾನೇನು ಮಾತಾಡೋಲ್ಲ I promise" ತಾಯಿಯ ಕೈ ಅದುಮಿದ. ಅವರು ನಕ್ಕು "ಆ ನಂಬಿಕೆ ನನಗಿದೆ. ಸರಿ ಹೊರಡು. ಮಧ್ಯಾಹ್ನ ಬಂದ್ಬಿಡು. ತಿಳೀತಾ" ಎಂದರು.

"ದಟ್ಸ್ ಲೈಕ್ ಮೈ ಮುದ್ದು ಅಮ್ಮ" ಅವರ ಹಣೆಗೊಂದು ಮುತ್ತಿಟ್ಟು, "ಮಧ್ಯಾಹ್ನ ನೆನಪಿಸ್ತೀಯಲ್ಲ ಕೋತಿ....." ಎಂದು ಆಕೃತಿಯ ಕೆನ್ನೆ ಹಿಂಡಿ ಹೊರಟ.

ಇಂದು ಸಂಜೆ ನನ್ನ ಅನುಮಾನಗಳೆಲ್ಲಾ ಪರಿಹಾರವಾಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಅವಳನ್ನು ಈ ಮುಂಚೆ ಎಲ್ಲಿ ನೋಡಿರುವೆನೆಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದುಕೊಂಡವ ಅದೇ ಉತ್ಸಾಹದಲ್ಲಿ ಕಾರನ್ನು ಆಫೀಸಿನತ್ತ ಚಲಾಯಿಸಿದ......... 

                ********************

ಅವಳು ಶರ್ಮಾ ಅವರ ಮನೆ ಮುಂದೆ ಬಂದಿಳಿದಾಗ ಸಮಯ ನಾಲ್ಕರ ಸಮೀಪವಿತ್ತು. ಮಧ್ಯಾಹ್ನದ ಎಲ್ಲಾ ಕೇಸುಗಳನ್ನು ಸಹೋದ್ಯೋಗಿ ವರ್ಷಾಳಿಗೆ ಒಪ್ಪಿಸಿ ಮೀರಾ ಅವರ ಅನುಮತಿ ಪಡೆದು ಬಂದಿದ್ದಳು. 

ಆಟೋದವನಿಗೆ ಹಣವಿತ್ತು ಮನೆಯತ್ತ ನಡೆದಳು. ಗೇಟಿನಲ್ಲಿದ್ದ ವಾಚ್ ಮ್ಯಾನ್ ಏನೊಂದೂ ಕೇಳದೇ ಒಳಬಿಟ್ಟಾಗ ರಾವ್ ಅವರ ಬಂಗಲೆಯ ನೆನಪಾಯಿತವಳಿಗೆ. ಆಟೋದಲ್ಲಿ ಬರುವವರ ಪ್ರವೇಶವೇ ಅಲ್ಲಿ ನಿಷಿದ್ಧ. ಅದನ್ನೇ ನೆನೆದು ಒಳಗಡಿಯಿಟ್ಟಳು. 

ಮನೆಯೆದುರಿನ ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದ್ದ ಹೂದೋಟ ಅವಳ ಕಣ್ಮನ ತಣಿಸಿತು. ಅಲ್ಲೇ ನಿಂತವಳು ಎಚ್ಚೆತ್ತಿದ್ದು ಆಕೃತಿಯ ಧ್ವನಿ ಕೇಳಿದಾಗಲೇ........

"ಏನು ಇಲ್ಲಿಂದಾನೇ ವಾಪಾಸು ಹೋಗೋ ಯೋಚನೆಯಾ?" ನಗುತ್ತಾ ಕೇಳಿದಳು ಆಕೃತಿ.

"ಹಾಗೇನಿಲ್ಲ. ಮನಸ್ಸಿಗೆ ಹಿತವೆನಿಸಿತು. ಅದಕ್ಕೇ ಇಲ್ಲೇ ನಿಂತೆನಷ್ಟೇ" ಅದೇ ಕಿರುನಗುವಿತ್ತು ಅವಳ ಮುಖದಲ್ಲಿ.

"ಸರಿ ಸರಿ. ಈಗ ಬನ್ನಿ ಒಳಗೆ ಹೋಗೋಣ. ಎಲ್ಲಾ ನಿಮಗೇ ಕಾಯ್ತಿದ್ದಾರೆ" ಕೈಹಿಡಿದು ಒಳಗೆ ಎಳೆದೊಯ್ದಳು.

"ಅಮ್ಮಾ, ನೋಡು ಯಾರು ಬಂದಿದ್ದಾರೆ ಅಂತ"  ಮಗಳ ಕೂಗಿಗೆ ಸಂಭ್ರಮದಿಂದ ಹೊರಬಂದವರು, "ಅಂತೂ ಬಂದೆಯಲ್ಲ. ಬರ್ತೀಯೋ ಇಲ್ವೋ ಅನ್ನೋ ಅನುಮಾನವಿತ್ತು" ಮೃದುಲಾ ಮನದ ಮಾತನ್ನೇ ಹೇಳಿದ್ದರು.

"ನೀವು ಕರೆದ್ರೆ ಇಲ್ಲಾ ಅನ್ನೋಕೆ ನನ್ನಿಂದಾಗದು ಅಮ್.... ನೀವು ತಪ್ಪು ತಿಳಿಯಲ್ಲ ಅಂದ್ರೆ ನಾನು ನಿಮ್ಮನ್ನು ಅಮ್ಮ ಅಂತ ಕರೆಯಲಾ?" ಕೇಳಿದಳು.

"ಇದೂ ಕೇಳುವ ವಿಷಯವೇ? ನಿನ್ನ ಮಗಳೇ ಅಂತ ಕರೆದ ಮೇಲೆ ನಾನು ನಿನ್ನ ಅಮ್ಮನೇ ತಾನೇ" ತಲೆದಡವಿದರು.

ಅಷ್ಟರಲ್ಲೇ ಸಚ್ಚಿದಾನಂದ "ಏನು ಅಮ್ಮ ಮಕ್ಕಳದ್ದು ಗಹನವಾದ ಚರ್ಚೆ ಆಗ್ತಿದೆ. ಯಾವ ವಿಷಯದ ಬಗ್ಗೆಯೋ?" ಎನ್ನುತ್ತಾ ಮಾತಿಗೆ ಜೊತೆಯಾದರು. 

ಈ ಮಾತಿನ ಮಧ್ಯೆ‌ ಆಕೃತಿ "ಒಂದು ನಿಮಿಷ ಬಂದೆ" ಎಂದು ಅಭಿಯನ್ನು ಕರೆತರಲು ಅವನ ರೂಮಿನತ್ತ ಹೊರಟಳು.

ಅವನು ರೂಮಿನಲ್ಲೆಲ್ಲೂ ಕಾಣದಾಗ ಸೀದಾ ಟೆರೇಸಿನತ್ತ ನಡೆದಳು. ಕ್ಯಾನ್ವಾಸ್, ಬಣ್ಣಗಳು ಎಲ್ಲಾ ಇದ್ದವಾದರೂ ಕುಂಚ ಹಿಡಿದವನು ಕ್ಯಾನ್ವಾಸಿನ ಮುಂದೆ ಕಾಣದಾಗ ಸುತ್ತ ನೋಟಹರಿಸಿದಳು. ಟೆರೇಸಿನ ಮೂಲೆಯ ಕಟ್ಟೆಯೊಂದಕ್ಕೆ ಒರಗಿ ಏನೋ ಯೋಚನೆಯಲ್ಲಿ ಮುಳುಗಿದ್ದ ಅಭಿ. ಕುಂಚ ಕೈಯಲ್ಲಿಯೇ ಇತ್ತು. ಆಕೃತಿ ಬಂದಿದ್ದು ತಿಳಿಯದಷ್ಟು ಯೋಚನಾಮಗ್ನನಾಗಿದ್ದವನು ಅವಳು ಭುಜ ಹಿಡಿದು ಅಲುಗಿಸಿದಾಗ ಎಚ್ಚೆತ್ತ.

"ಏನಾಯ್ತು ಆಕೃತಿ" ಅವಳನ್ನು ಕೇಳಿದ. ಅವರು ನಿಂತಿದ್ದ ಜಾಗದಿಂದ ಮನೆಯ ಮುಖ್ಯ ಗೇಟ್, ಗಾರ್ಡನ್ ಎಲ್ಲಾ ಕಾಣುತ್ತಿತ್ತು. ಅವಳು ಏನೋ ಲೆಕ್ಕ ಹಾಕಿದವಳು, "ಒಹೋ ಇದಾ ವಿಷ್ಯಾ, ಅಂದ್ರೆ ಸಾಹೇಬರು ಸಮನ್ವಿತಾ ಬಂದಿದ್ದು, ಗಾರ್ಡನ್ ಅಲ್ಲಿ ನಿಂತಿದ್ದಿದ್ದು ಎಲ್ಲಾ ಇಲ್ಲಿಂದಲೇ ನೋಡ್ತಾ ಕಣ್ತುಂಬಿಕೋತಾ ಇದ್ರು...... ಛೀ  ಕಳ್ಳ....! ಪೈಂಟಿಂಗ್ ಮಾಡೋಕೆ ಅಂತ ಬಂದವನು ಅತ್ತಿಗೆನ ನೋಡಿ ಫ್ಲಾಟ್ ಆಗ್ಬಿಟ್ಯಾ?" ಛೇಡಿಸಿದಳು.

"ಆಕೃತಿ ನೀನು ಯಾಕೆ ಬಂದೆ ಇಲ್ಲಿಗೆ ಅದನ್ನು ಹೇಳು ಮೊದಲು" ಅವನು ತೀರಾ ಗಂಭೀರವಾಗಿ ಕೇಳಿದ.

ಅವನ ಗಂಭೀರವದನ ಕಂಡು ಅವಳಿಗೆ‌ ಮತ್ತೆ ಛೇಡಿಸುವ ಧೈರ್ಯವಾಗದೇ "ಕೆಳಗೆ ಬಾ, ಸಮನ್ವಿತಾ ಬಂದಿದ್ದಾರೆ.ಎಲ್ಲಾ ಅಲ್ಲೇ ಇದ್ದಾರೆ. ನಿನ್ನ ಕರೆಯೋಕೆ‌ ಬಂದೆ" ಎಂದ ತಂಗಿಗೆ, " ನೀನು ಹೋಗಿರು ನಾನು ಬರ್ತೀನಿ" ಎಂದು ಸಾಗಹಾಕಿದ.

ಆಕೃತಿ ಹೇಳಿದಂತೆ ಸಮನ್ವಿತಾ ಬಂದಿದ್ದು ನೋಡಿದ್ದ ಅವನು. ಆಫೀಸಿನಿಂದ ಬೇಗ‌ ಬಂದಿದ್ದ. ಬಣ್ಣಗಳು ಕಣ್ಣಿಗೆ ಬಿದ್ದಾಗ ಕ್ಯಾನ್ವಾಸ್, ಬಣ್ಣಗಳು, ಕುಂಚ ಹಿಡಿದು ಟೆರೇಸಿಗೆ ನಡೆದಿದ್ದ. ಏನೋ ಮನಸ್ಸಿಗೆ ತೋಚಿದ್ದನ್ನು ಕ್ಯಾನ್ವಾಸ್ ಮೇಲೆ ಮೂಡಿಸುತ್ತಿದ್ದವನಿಗೆ ಯಾಕೋ ಬೇಸರವೆನಿಸಿತ್ತು. ಮನಸ್ಸು ಯಾರದೋ ನಿರೀಕ್ಷೆಯಲ್ಲಿದ್ದಂತೆ ಚಡಪಡಿಸುತ್ತಿತ್ತು. ಅಲ್ಲೇ ಟೆರೇಸಿನ ಗೋಡೆಗೊರಗಿ ಸುತ್ತ ನೋಟಹರಿಸತೊಡಗಿದವನ ಗಮನ ಮನೆಯ ಮುಂದೆ ಬಂದು ನಿಂತ ಆಟೋದತ್ತ ಹರಿದಿತ್ತು. 

ಅದರಿಂದ ಇಳಿದವಳು ಸಮನ್ವಿತಾ.......  

'ದೇಶದ ಅತ್ಯಂತ ಪ್ರಸಿದ್ಧ ಉದ್ಯಮಿಯ‌ ಮಗಳು ಆಟೋದಲ್ಲಿ ಓಡಾಡುತ್ತಾಳೆಯೇ? ಅವಳ ಮನೆಯಲ್ಲಿ ಕಾರುಗಳಿಗೇನು ಬರವೇ? ಮತ್ತೇಕೆ ಆಟೋದಲ್ಲಿ ಬಂದಿದ್ದಾಳೆ? ಕೋಟ್ಯಂತರ ರೂಪಾಯಿಗಳ ಒಡತಿಯಾದರೂ ಆಟೋದಲ್ಲಿ ಓಡಾಡುವಷ್ಟು ಸರಳ ಮನಸ್ಥಿತಿ ಇರುವಾಕೆಗೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದಿರುವೆ…. ಇದು ಅಗತ್ಯವೇ? ವ್ಯಕ್ತಿಯ ವ್ಯಕ್ತಿತ್ವ ಅವನ ನಡೆನುಡಿಗಳಲ್ಲಿ ಸ್ಪಷ್ಟವಾಗದೇ? ಅದನ್ನು ಬಾಯಿಬಿಟ್ಟು ಕೇಳಿಯೇ ತಿಳಿಯಬೇಕೆ?':ಮತ್ತೊಮ್ಮೆ ಅವನ ಮನಸ್ಸು, ಮೆದುಳು ಅವನೊಂದಿಗೆ ಜಿದ್ದಿಗೆ ಬಿದ್ದಿದ್ದವು.

ಅವಳು ಗೇಟಿನಿಂದ ಒಳಬಂದವಳು ಐಶಾರಾಮಿ ಮನೆಯನ್ನಾಗಲೀ, ಅಲ್ಲಿನ ಶ್ರೀಮಂತ ವ್ಯವಸ್ಥೆ, ವಾಸ್ತುಶಿಲ್ಪವನ್ನಾಗಲೀ ಅವಲೋಕಿಸಲಿಲ್ಲ. ಅದರತ್ತ ನೋಟ ಕೂಡ ಹೊರಳಿಸಲಿಲ್ಲ. ಅವಳ ಮನಸೆಳೆದದ್ದು ಆ ಹೂದೋಟ ಮಾತ್ರವೇ. ಗಾರ್ಡನ್ ನ ಪ್ರತಿಯೊಂದು ಮೂಲೆಯನ್ನೂ ಗಮನಿಸುತ್ತಾ ನಿಂತಿದ್ದ ಕಿನ್ನರಿ ಅವನ ಮನದ ವೀಣೆಯನ್ನು ಮೌನವಾಗಿ ಮೀಟಿದ್ದಳು......

ಆಕೃತಿ ಅವಳನ್ನು ಒಳಗೆ ಕರೆದೊಯ್ದರೂ ಅವನ ಕಣ್ಣುಗಳ ಮುಂದೆ ಅವಳ ಅಸ್ತಿತ್ವ ಸ್ಪಷ್ಟವಾಗಿತ್ತು. ಅದೇ ಪರವಶ ಭಾವದಲ್ಲಿದ್ದವನನ್ನು ಆಕೃತಿಯ ಕರೆ ಎಚ್ಚರಿಸಿತ್ತು.

ಇವಳ್ಯಾರು? ಏಕೆ ನನ್ನನ್ನು ಹೀಗೆ ಕಾಡುತ್ತಿದ್ದಾಳೆ? ರಾವ್ ಅವರ ಪಾರ್ಟಿಯಲ್ಲಿ ಇವಳನ್ನು ಕಂಡಾಗಿನಿಂದ ಬೇಡಬೇಡವೆಂದರೂ ಮನಸ್ಸನ್ನು ಆವರಿಸಿಬಿಟ್ಟಿರುವಳಲ್ಲ. ಅವಳನ್ನು ಈ ಮುಂಚೆ ನೋಡಿರುವುದು ಮನಸ್ಸಿಗೆ‌ ಅತ್ಯಂತ ಸ್ಪುಟವಾಗಿದೆ. ಆದರೆ ಎಲ್ಲಿ? ಏನಾದರಾಗಲೀ ಇವತ್ತು ಎಲ್ಲವನ್ನೂ ಕೇಳಬೇಕು ಎಂದುಕೊಂಡು ರೂಮಿಗೆ ಬಂದವ ಬಣ್ಣಗಳಲ್ಲಿ ಮುಳುಗೆದ್ದ ಕೈ ತೊಳೆದು, ಬಟ್ಟೆ ಬದಲಾಯಿಸಿ ಹಾಲಿಗೆ‌ ಬಂದಾಗ ನಾಲ್ವರ ನಗು, ಮಾತುಕತೆ ಕಳೆಗಟ್ಟಿತ್ತು.

"ಅಂತೂ ಹರಟೆ ಬಹಳ‌ ಜೋರಾಗಿಯೇ ಇದೆ" ಎಂದವನ ದನಿಗೆ ತಲೆ ಎತ್ತಿದ ಸಮನ್ವಿತಾ ಅವನನ್ನು ಕಂಡು, "ಹಲೋ ಮಿಸ್ಟರ್ ಶರ್ಮಾ" ಮುಗುಳ್ನಕ್ಕಳು.

"ಹಲೋ ಮಿಸ್ ರಾವ್. ಹೇಗಿದ್ದೀರಾ? ಅಂತೂ ನಮ್ಮನೆಗೆ ಬರುವ ಕೃಪೆ ತೋರಿದ್ರೀ. ನಾವೇ ಧನ್ಯರು" ಎಂದ. 

"ನಿಮ್ಮ ಅಮ್ಮ ಅಷ್ಟೊಂದು ಪ್ರೀತಿಯಿಂದ ಕರೆದಾಗ ಬರೋದಿಲ್ಲ ಅನ್ನೋಕೆ ಮನಸ್ಸಾಗಲಿಲ್ಲ. ಅದಕ್ಕೇ….."ಅವಳು ಮತ್ತೆ ನಸುನಕ್ಕಳು.

"ನಾನು ಕರೆದಿದ್ರೆ ಬರ್ತಿರ್ಲಿಲ್ಲ ಅಂತ ಪರೋಕ್ಷವಾಗಿ ಹೇಳ್ತಿದ್ದೀರಿ ಅನ್ನಿ" ಕೆಣಕಿದ.

"ಮೇ ಬಿ......." ಅವಳು ಮಾತು ತೇಲಿಸಿದಳು.

"ನೀನು ಆ ತರಾ ಕರೆದರೆ ಯಾರು ಬರ್ತಾರೆ? ಬರೋರು ಸುಮ್ನಾಗ್ತಾರೆ ಅಷ್ಟೇ" ಮೃದುಲಾ ಅವರ ಮಾತಿಗೆ ಆಕೃತಿ, "ಹೌದಮ್ಮ ನೀನು ಹೇಳಿದ್ದು ಸರಿ. ಇವ್ನು ಎಲ್ಲರನ್ನೂ ಅವ್ನ ಬಿಸ್ನೆಸ್ ಕ್ಲೈಂಟ್ ಅನ್ನೋ ತರಾನೇ ಟ್ರೀಟ್ ಮಾಡ್ತಾನೆ" ಅಂದಳು.

"ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿರೋರ ಮನಸ್ಥಿತಿ ಹಾಗೇ ಇರುತ್ತೇ. ಆದ್ರೂ ಪ್ರತೀ ವಿಷಯನೂ ಬಿಸ್ನೆಸ್ ದೃಷ್ಟಿಯಿಂದನೇ ನೋಡೋರ ಮಧ್ಯೆ ನಿನ್ನ ಅಣ್ಣ ಬೆಟರ್. ಅವನಿಗೆ ವ್ಯಕ್ತಿ ಮತ್ತೆ ವ್ಯವಹಾರದ ನಡುವಿನ ವ್ಯತ್ಯಾಸ ಚೆನ್ನಾಗಿ ತಿಳಿದಿದೆ" ಮಗನ ಬೆನ್ನು ತಟ್ಟಿ ನುಡಿದರು ಸಚ್ಚಿದಾನಂದ.

ಮತ್ತೆ ತಂದೆಯ ನೆನಪಾಯಿತು ಸಮನ್ವಿತಾಳಿಗೆ. ಪಕ್ಕಾ ವ್ಯವಹಾರಸ್ಥ. ಹಣದ ಮುಂದೆ ಬೇರೆಲ್ಲವೂ ತೃಣ ಸಮಾನ. ಹಣಕ್ಕಾಗಿ ಎಂಥ ಹೀನ ಕೆಲಸಕ್ಕೂ ಹಿಂಜರಿಯಲಾರದಂತ ಮನಸ್ಥಿತಿಯವರು ಸತ್ಯಂ ರಾವ್ ಎನಿಸಿತು ಅವಳಿಗೆ.

"ಏನಾಯ್ತು ಸಮನ್ವಿತಾ" ಅವಳ ಅನ್ಯಮನಸ್ಕತೆ ಗಮನಿಸಿ ಕೇಳಿದರು ಮೃದುಲಾ. "ಹಾ........ ಏನಿಲ್ಲ ಹೀಗೇ ಏನೋ ನೆನಪಾಯ್ತು"  ಕೆಲಸದವನು ತಂದ ಟೀ ಕೈಗೆತ್ತಿಕೊಳ್ಳುತ್ತಾ ನುಡಿದಳು. 

"ನೀವು ಏನು ಮಾಡ್ತೀರಾ? ಐ ಮೀನ್ ನಿಮ್ಮ ತಂದೆಯ ಬಿಸ್ನೆಸ್ ಸಂಭಾಳಿಸ್ತೀರಾ? ಇಲ್ಲಾ ನಿಮ್ಮ ಸ್ವಂತ ಬಿಸ್ನೆಸ್ ಇದ್ಯಾ?" ಕುತೂಹಲದಿಂದ ಕೇಳಿದ ಅಭಿರಾಮ್ ಮಾತಿಗೆ ಅವಳಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗುತ್ತಿದ್ದವಳನ್ನು ನೋಡಿ ನಾಲ್ವರೂ ಗಲಿಬಿಲಿಗೊಂಡರು.

"ಯಾಕಮ್ಮಾ ನಗ್ತಿದ್ದೀ?" ಕೇಳೇ ಬಿಟ್ಟರು ಸಚ್ಚಿದಾನಂದ. "ಮತ್ತೇನು ಮಾಡ್ಲೀ ಅಂಕಲ್ ಈ ತರ ತಮಾಷೆ ಮಾಡಿದ್ರೇ?" ನಗುವನ್ನು ಹತೋಟಿಗೆ ತರುತ್ತಾ ಕೇಳಿದಳು.

"ಇದ್ರಲ್ಲಿ ತಮಾಷೆ ಏನ್ಬಂತು? ಅಣ್ಣ ನಿಮ್ಮ ಬಿಸ್ನೆಸ್ ಬಗ್ಗೆ ಕೇಳಿದ ಅಷ್ಟೇ" ಎಂದಳು ಆಕೃತಿ.

"ನನ್ನ ನೋಡಿದ್ರೆ ನಮ್ಮಪ್ಪನ ಬಿಸ್ನೆಸ್ ಸಂಭಾಳಿಸುವ ತರಾ ಕಾಣ್ತೀನಾ?" ಅಪನಂಬಿಕೆಯಿಂದ ಕೇಳಿದಳು.

"ನೀವೇನು ಮಾತಾಡ್ತಿದ್ದಿರೋ ನನಗಂತೂ ಅರ್ಥ ಆಗ್ತಿಲ್ಲ" ಗೊಂದಲದಲ್ಲಿ ಕೇಳಿದ ಅಭಿರಾಮ್.

"ಆಕ್ಚುಲಿ ನೀವೆಲ್ಲಾ ಏನು ಕೇಳ್ತಿದ್ದಿರೋ ನನಗೆ ಅರ್ಥ ಆಗ್ತಿಲ್ಲ. ಮೆಡಿಕಲ್ ಓದಿರೋ ನಾನು ನಮ್ಮ ಅಪ್ಪನ ಬಿಸ್ನೆಸ್ ಹೇಗೆ‌ ನೋಡ್ಕೊಳಲಿ? ನಾನೊಬ್ಬ ವೈದ್ಯೆ" ಅವಳ ಮಾತಿಗೆ ಶರ್ಮಾ ಪರಿವಾರ ದಂಗಾಗಿತ್ತು.

"ನೀವೂ ಡಾಕ್ಟರ್?" ಎಂದವನ ಮಾತಿಗೆ "ಯಸ್ ಮಿಸ್ಟರ್ ಶರ್ಮಾ ಆಮ್ ಅ ಡಾಕ್ಟರ್" ಎಂದಳು.

"ಛೇ ನೋಡು, ಇಷ್ಟೊಂದು ಮಾತಾಡಿದ್ರೂ ನೀನು ಏನು ಮಾಡ್ತಿದ್ಯಾ ಅಂತ ನಾವೂ ಕೇಳ್ಲಿಲ್ಲ. ನೀನೂ ಹೇಳ್ಲಿಲ್ಲ" ಎಂದರು ಮೃದುಲಾ.

"ನೀನು ಇಂಜಿನಿಯರಿಂಗ್, ಎಂ.ಬಿ.ಎ ಆ ತರದ ಕೋರ್ಸ್ ಮಾಡಿ ನಿಮ್ಮ ತಂದೆಯೊಂದಿಗೆ ವ್ಯವಹಾರ ನೋಡ್ಕೋತಿದ್ದೀಯಾ ಅಂದುಕೊಂಡಿದ್ದೆ" ಎಂದರು ಸಚ್ಚಿದಾನಂದ.

"ನೀವು ಅಂದುಕೊಂಡಿದ್ದು ಸರಿಯೇ ಅಂಕಲ್. ನನ್ನ ಅಪ್ಪನಿಗೆ ನಾನು ಇಂಥದೇ ಯಾವುದಾದ್ರೂ ಕೋರ್ಸ್ ಮಾಡಬೇಕೆಂದು ಆಸೆ ಇತ್ತು. ಬಟ್ ನನಗೆ ಈ ಕೋರ್ಸ್ ಗಳಲ್ಲಿ ಆಸಕ್ತಿ ಇರಲಿಲ್ಲ. ನಾನು ಇಷ್ಟಪಟ್ಟು ಆರಿಸಿಕೊಂಡ ಕೋರ್ಸ್ ಮೆಡಿಸಿನ್." ಎಂದಳು.

"ಸೋ ಇಟ್ಸ್ ಡಾಕ್ಟರ್ ಸಮನ್ವಿತಾ. ಮನೇಲಿ ಯಾರಿಗಾದ್ರೂ ಹುಷಾರಿಲ್ಲ ಅಂದ್ರೆ ಸೀದಾ ನಿಮ್ಮ ಹತ್ರ ಬರಬಹುದು" ಆಕೃತಿಯ ಹೇಳಿಕೆಗೆ ನಕ್ಕಳು.

"ಹುಷಾರು ತಪ್ಪಿದ್ರೆ ಡಾಕ್ಟರ್ ಸಮನ್ವಿತಾ ಅವರನ್ನು ಯಾವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಲೀ ಹುಡುಕಬೇಕು? ಇಲ್ಲಾ ಅವರದ್ದೇ ಒಂದು ಸ್ವಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದ್ಯಾ? ಬಿಲ್ ನಮ್ಮ ಕೈಲಿ ಕಟ್ಟೋಕಾಗುತ್ತಾ?" ತಮಾಷೆಯಾಗಿ ಕೇಳಿದ.

"ಪರವಾಗಿಲ್ಲವೇ. ನಿಮ್ಗೂ ಕಟ್ಟೋಕಾಗದಷ್ಟು ಬಿಲ್ ಮಾಡೋ ಆಸ್ಪತ್ರೆಗಳೂ ಇವೆಯೆನ್ನಿ" ತಾನೂ ಅವನ ಕಾಲೆಳೆದವಳು, "ನಾನು ಧನ್ವಂತರಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದೀನಿ" ಎಂದಳು. ಈಗ ಮತ್ತೆ ಅಚ್ಚರಿಯಾಗುವ ಸರದಿ ನಾಲ್ವರದ್ದೂ.

"ನೀವು... ಧನ್ವಂತರಿಯಲ್ಲಿ ಡಾಕ್ಟರ್? ಯಾವ ಧನ್ವಂತರಿ?" ಬೇರೆ ಯಾವುದೋ ಧನ್ವಂತರಿ ಇರಬಹುದೆಂದು ಕೇಳಿದ ಅನುಮಾನ ಪರಿಹರಿಸಿಕೊಳ್ಳಲು.

"ಡಾ. ಮೀರಾ ಅವರ ಧನ್ವಂತರಿ " ಸ್ಪಷ್ಟವಾಗಿ ಹೇಳಿದಳು.

"ಅಲ್ಲಮ್ಮಾ, ಅದು ಚಾರಿಟಿ ಪರ್ಪಸ್ ಹಾಸ್ಪಿಟಲ್. ಸ್ಯಾಲರಿನೂ ತುಂಬಾ ಕಡಿಮೆ. ನೀನು ಅಲ್ಲಿ ಕೆಲಸ ಮಾಡ್ತೀಯಾ? ಸತ್ಯಂ ರಾವ್ ಮಗಳು ಧನ್ವಂತರಿಯಲ್ಲಿ ಕೆಲಸ ಅಂದ್ರೇ......"

"ಹೌದು ಅಂಕಲ್, ನಾನು ಅಲ್ಲೇ ಕೆಲಸ ಮಾಡೋದು. ಸ್ಯಾಲರಿ ಕಡಿಮೆ ಆದ್ರೆ ನೆಮ್ಮದಿ, ಆತ್ಮತೃಪ್ತಿ ಜಾಸ್ತಿ ಇದೆ. ನನ್ನ ಅವಶ್ಯಕತೆಗಳು ಬಹಳ ಕಡಿಮೆ. ಹಾಗಾಗಿ ಜಾಸ್ತಿ ಸಂಬಳ ಅಗತ್ಯ ಇಲ್ಲ. ನೀವು ಹೇಗೆ ನಿಮ್ಮ ಸಂತೋಷಕ್ಕಾಗಿ ಧನ್ವಂತರಿಗೆ ಹಣ ಡೊನೇಟ್ ಮಾಡ್ತೀರೋ ಹಾಗೇ ನಾನೂ ನನ್ನ ಸಂತೋಷಕ್ಕೆ ಅಲ್ಲಿ ಕೆಲಸ ಮಾಡ್ತೀನಿ. ಇನ್ನು ಸತ್ಯಂ ರಾವ್ ಅವರ ಸಂಪಾದನೆ ಅವರಿಗೆ ಸಂಬಂಧಿಸಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಬಿಟ್ಟಳು.

ಅವಳ ಮಾತುಗಳನ್ನು ಕೇಳಿ ಮೂವರೂ ಅಭಿಯತ್ತ ನೋಟಹರಿಸಿದ್ದರು ನಿನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿತಲ್ಲ ಎಂಬಂತೆ. ಅವನೂ ಮೌನವಾಗಿದ್ದ ಹೌದೆಂಬಂತೆ. 

'ಎಷ್ಟು ಸ್ಪಷ್ಟ ಹಾಗೂ ನೇರ ಮನೋಭಾವದ ಹೆಣ್ಣಿವಳು. ಯಾರ ಹಂಗಿಗೂ ಬೀಳದವಳು. ಸತ್ಯಂ ರಾವ್ ಅಂತಹ ವ್ಯಕ್ತಿಯ ಜೊತೆಗಿದ್ದೂ ಪದ್ಮ ಪತ್ರದ ಮೇಲಿನ ಜಲಬಿಂದುವಿನಂತೆ, ಅಂಟಿಯೂ ಅಂಟದಂತೆ ಇರುವಳೆಂದರೆ ಅದೆಷ್ಟು ದೃಢಮನಸ್ಕಳಾಗಿರಬೇಕು? ಅವಳಾಡಿದ ಒಂದೊಂದು ಮಾತೂ ನಾನು ಕೇಳಬೇಕೆಂದುಕೊಂಡ ಪ್ರಶ್ನೆಗಳಿಗೆ, ನನ್ನ ಯೋಚನಾ ಮಟ್ಟಕ್ಕೆ ಚಾಟಿಯೇಟಿನಂತಹ ಉತ್ತರದಂತಿದೆ. ಅದು ಹೇಗೆ ಆ ಮಟ್ಟಕ್ಕೆ ಯೋಚಿಸಿ ಬಿಟ್ಟೆ ಇಂಥಾ ಹುಡುಗಿಯ ಬಗ್ಗೆ? ಒಂದು ವೇಳೆ ನನ್ನ ಅನುಮಾನಗಳನ್ನು ಪ್ರಶ್ನೆಗಳಾಗಿಸಿ ಇವಳ ಮುಂದಿಟ್ಟಿದ್ದರೆ ಅವಳ ಧೀರೋದಾತ್ತ ನಿಲುವಿನೆದುರು ನಾನು ಎಷ್ಟು ಕೇವಲನಾಗುತ್ತಿದ್ದೆ. ಇನ್ನು ಯಾವ ಪ್ರಶ್ನೋತ್ತರಗಳಿಗೂ ಜಾಗವಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಗೆ ಕಣ್ಮುಚ್ಚಿ ತಾಳಿ ಕಟ್ಟುತ್ತೇನೆಂದವನು ನಾನೇ..... ಈಗ ವಿಧಿ ಇವಳನ್ನು ನನ್ನ ಮುಂದೆ ನಿಲ್ಲಿಸಿದೆ. ಯಾರಾದರೂ ಅನುಕರಿಸಬಹುದಾದ ಗುಣ,ನಡತೆ, ಮನಸ್ಥಿತಿ ಹೊಂದಿರುವಾಕೆ ಇವಳು. ರಾವ್ ಅವರೇ ತಂದ ಪ್ರಸ್ತಾಪ ಎಂದರೆ ಇವಳಿಗೆ ಈ ಬಗ್ಗೆ ಯಾವುದೇ ವಿರೋಧವಿಲ್ಲ. ಇವಳಂಥಾ ನಿರ್ಮಲ ಮನಸ್ಸಿನ ಸಂಗಾತಿ ಎಲ್ಲರ ಅದೃಷ್ಟದಲ್ಲಿರುವುದಿಲ್ಲ.‌ ಅಂತದರಲ್ಲಿ ತಾನಾಗಿಯೇ ನನ್ನನ್ನು ಅದೃಷ್ಟವೇ ಅರಸಿ ಬಂದಿದೆ. ನಾನೂ ಇವಳನ್ನು ಕಂಡಂದಿನಿಂದ ಜಿಜ್ಞಾಸೆಗೆ ಒಳಗಾಗಿದ್ದು ಸತ್ಯ. ಭಾವನೆಗಳ ಹೋರಾಟವೇ ನನ್ನೊಳಗೆ ನಡೆದಿಲ್ಲವೇ? ಹೇಗಿದ್ದರೂ ನನ್ನ ಮನಸ್ಸು, ಮೆದುಳು ಎರಡೂ ಇವಳ ವಿರುದ್ಧ ಒಂದು ಮಾತನ್ನೂ ಕೇಳಲು ಬಯಸವು....... ಹೀಗಿರುವಾಗ ಇನ್ನೇನು ಮರುಯೋಚಿಸಬಾರದು' ಎಂದು ನಿರ್ಧರಿಸಿದವನೇ,

"ಸಮನ್ವಿತಾ ನಿಮ್ಮ ತಂದೆಯವರ ಪ್ರಸ್ತಾಪಕ್ಕೆ ನಮ್ಮೆಲ್ಲರ ಒಪ್ಪಿಗೆ ಇದೆ" ಎಂದುಬಿಟ್ಟ.

ಅವನು ಒಪ್ಪಲಿ ಎನ್ನುವ ಆಸೆ, ಒಪ್ಪಿಸಲೇಬೇಕೆನ್ನುವ ಭಾವ ಎಲ್ಲರಿಗೂ ಇತ್ತಾದರೂ, ಹೀಗೆ ಅನಿರೀಕ್ಷಿತವಾಗಿ ಸಮನ್ವಿತಾಳೆದುರೇ ಹೇಳುತ್ತಾನೆಂದು ಅವರ್ಯಾರೂ ಎಣಿಸಿರಲಿಲ್ಲ. ಆದರೆ ಅವರೆಲ್ಲರಿಗೂ ಅತೀವ ಸಂತಸವಾಗಿತ್ತು. ಮೂವರು ಅವನ ನಿರ್ಧಾರವನ್ನು ಸಮ್ಮತಿಸಿ ಅಭಿನಂದಿಸುತ್ತಿದ್ದರೇ ಸಮನ್ವಿತಾ ಏನೊಂದೂ ಅರ್ಥವಾಗದೇ ಬಿಟ್ಟು ಕಣ್ಣುಗಳಿಂದ ಅವರನ್ನೇ ನೋಡುತ್ತಿದ್ದಳು.

"ಕಂಗ್ರಾಜುಲೇಷನ್ಸ್ ಎಂಡ್ ಥ್ಯಾಂಕ್ಯೂ ಸೋ ಮಚ್ ಮಗಳೇ" ಮೃದುಲಾ ಅಕ್ಕರೆಯಿಂದ ತಬ್ಬಿದಾಗ, "ಯಾಕೇ…...?ನೀವೆಲ್ಲಾ ಯಾವ ವಿಷಯದ ಬಗ್ಗೆ ಮಾತಾಡ್ತಿದ್ದೀರಿ ಅಂತ ಗೊತ್ತಾಗ್ತಿಲ್ಲ ಅಮ್ಮಾ" ಗೊಂದಲದ ಗೂಡಾದ ಮನವನ್ನು ಸಂಭಾಳಿಸುತ್ತಾ ಕೇಳಿದಳು.

"ಇದೇನು ಅತ್ತಿಗೆ  ಹೀಗೆ ಕೇಳ್ತಿದ್ದೀರಿ? ಎಲ್ಲಾ ತಿಳಿದೂ ಏನೂ ಗೊತ್ತಿಲ್ಲದ ರೀತಿ " ಆಕೃತಿಯ ಮಾತಿನಲ್ಲಿ "ಅತ್ತಿಗೆ" ಎಂಬ ಪದಪ್ರಯೋಗ ಅವಳನ್ನು ಇನ್ನಷ್ಟು ಗಲಿಬಿಲಿಗೊಳಿಸಿತು. ಅಯೋಮಯವಾಗಿ ಕಸಿವಿಸಿಯಿಂದ ಎಲ್ಲರೆಡೆ ನೋಟಹರಿಸಿದಳು. 

ಅವಳ ಗೊಂದಲದ ನೋಟವನ್ನು ಸರಿಯಾಗಿ ಗಮನಿಸಿದ್ದು ಅಭಿರಾಮ್ ಮಾತ್ರ. ಹಿಂದಿನ ದಿನ ಫೋನಿನಲ್ಲಿ ಅವಳೊಂದಿಗೆ ಮಾತನಾಡಿದಾಗ ಮೂಡಿದ್ದ ಪ್ರಶ್ನೆಗಳು ಮತ್ತೆ ಅವನ ಮನವನ್ನಾಕ್ರಮಿಸಿತು.

ಅವಳ ಗೊಂದಲಭರಿತ ವದನ ಕಂಡು ಸಚ್ಚಿದಾನಂದರು, "ಅಯ್ಯೋ, ಅದ್ಯಾಕಷ್ಟು ಗೊಂದಲ ಮಗು. ನಿನ್ನ ತಂದೆ ನಿನ್ನ ಮತ್ತು ಅಭಿರಾಮ್ ಮದುವೆಯ ಪ್ರಸ್ತಾಪ ತಂದಿದ್ರಲ್ಲ ಅದು ನಮ್ಮೆಲ್ಲರಿಗೂ ಸಂಪೂರ್ಣ ಸಹಮತ ಅಂತ ಹೇಳಿದ್ದು ಅವನು" 

ಅವರು ಮುಂದೆ ಏನು ಮಾತನಾಡಿದರೋ ಅವಳಿಗೊಂದೂ ಕೇಳಲಿಲ್ಲ.......!!

         ******ಮುಂದುವರೆಯುತ್ತದೆ******



ಅನೂಹ್ಯ 22

ಅಂದು ಬೆಳಗ್ಗಿನಿಂದಲೇ ಮನೆ ತುಂಬಾ ಸಂಭ್ರಮ.....

ಸಂಜೆ ಬರುವ ಅತಿಥಿಯನ್ನು ಸ್ವಾಗತಿಸಲು ಮನೆ ಬೆಳಗ್ಗಿನಿಂದಲೇ ಸಜ್ಜಾಗುತ್ತಿತ್ತು.....

ಅಡುಗೆಮನೆಯಲ್ಲಿ ತರಹೇವಾರಿ ಭಕ್ಷ್ಯಗಳ ತಯಾರಿ.....

"ಹಲೋ ಮಿಸ್ಟರ್ ಲಾಯರ್, ತಮ್ಮ ಆಫೀಸಿನ ಕಾರ್ಯಚಟುವಟಿಕೆಗಳಲ್ಲಿ ಮೈಮರೆತು ಸಂಜೆಯ ವಿಷಯ ಮರ್ತು ಬಿಡಬೇಡಿ. ಒಳ್ಳೆ ಪ್ರಶ್ನೆ ಪತ್ರಿಕೆ ಸಮೇತ ತಮ್ಮ ಪಾಟಿ ಸವಾಲಿಗೆ ತಯಾರಾಗಿ.ಳ"  ಆಫೀಸಿಗೆ ತಯಾರಾಗಿ ತಿಂಡಿ ತಿನ್ನಲು ಬಂದವನಿಗೆ ನೆನಪಿಸಿದಳು ಆಕೃತಿ.

"ಒಂದು ವೇಳೆ ನಾನು ಮರೆತ್ರೂ ನೀನಿದ್ದೀಯಲ್ಲ ನಕ್ಷತ್ರಿಕನ ತರ…. ನನ್ನ ಬೆಂಬಿಡದ ಬೇತಾಳ, ಕೋತಿ...."

"ನಾನು ನಿನ್ನ ಪಿ.ಎ ನೋಡು, ನಿನಗೆಲ್ಲ ನೆನಪಿಸ್ತಾ ಇರೋದು ಬಿಟ್ಟು ಬೇರೆ ಕೆಲ್ಸ ಇಲ್ವಲ್ಲ ನನಗೆ. ಅಂಥಾ ಎಕ್ಸಪೆಕ್ಟೇಷನ್ ಇವತ್ತಿನ ಮಟ್ಟಿಗಂತೂ ಇಟ್ಕೊಳ್ಳಲೇ ಬೇಡಿ ಕಲಾವಿದ ಮಹಾಶಯರೇ. ಇವತ್ತಂತೂ ನಾನು ನಿನ್ನ ವಿರೋಧ ಪಕ್ಷದ ಸದಸ್ಯೆ. ನಾನಷ್ಟೇ ಅಲ್ಲ. ಅಪ್ಪ ಅಮ್ಮ‌ನೂ ಕೂಡಾ…… ನಿನ್ನ ಪರವಾಗಿ ನೀನೊಬ್ನೇ ವಾದ ಮಾಡ್ಬೇಕು"

"ನಡೀಲಿ ನಡೀಲಿ, ಎಷ್ಟು ದಿನ ನಡಿಯುತ್ತೆ ನಿನ್ನ ಪಾರ್ಲಿಮೆಂಟರಿ ಸೆಷನ್ ಅಂತ ನಾನೂ ನೋಡ್ತೀನಿ. ಅಪ್ನಾ ಟೈಂ ಆಯೇಗಾ......" ಅಂದವನು "ಅಮ್ಮಾ ತಿಂಡಿ ಕೊಡಮ್ಮಾ, ಲೇಟಾಯ್ತು. ಇದರ ಮಧ್ಯೆ ಇವಳ ಪಿಟೀಲು ಬೇರೆ" ಅಡುಗೆಮನೆಯಲ್ಲಿದ್ದ ಮೃದುಲಾರನ್ನು ಕೂಗಿದ.

"ಅಬ್ಬಾ ಯಾಕಿಷ್ಟು ಜೋರಾಗಿ ಕಿರುಚ್ತೀ? ನನಗೇನು ಕಿವಿ ಕೆಪ್ಪಾ?" ರೇಗುತ್ತಲೇ ಇಬ್ಬರಿಗೂ ತಿಂಡಿ ಬಡಿಸಿದರು ಮೃದುಲಾ.

"ಡ್ಯಾಡ್ ಎಲ್ಲಿ?" ಕೇಳಿದ. "ಅವರ ಫ್ರೆಂಡ್ ಯಾರೋ ಫೋನ್ ಮಾಡಿದ್ದಾರೆ. ಆಮೇಲೆ ತಿಂಡಿ ತಗೋತೀನಿ ಅಂದ್ರು." ಎಂದ ಮೃದುಲಾ ಮಗನ ತಲೆಗೂದಲಲ್ಲಿ ಕೈಯಾಡಿಸುತ್ತ, "ಅಭಿ ನನಗೆ ನಿನ್ನ ನಿರ್ಧಾರಗಳ ಬಗ್ಗೆ ಗೌರವವಿದೆ. ನೀನೇನು ಮಾಡಿದ್ರೂ ತುಂಬಾ ಯೋಚಿಸಿ ಹೆಜ್ಜೆ ಇಟ್ಟಿರ್ತೀಯಾ ಅನ್ನೋದು ನನ್ನ ನಂಬಿಕೆ. ಆದರೆ ಈ ವಿಷಯದಲ್ಲಿ ನೀನು ಯಾಕೋ ಎಡವುತ್ತಿದ್ದೀಯಾ ಅನ್ನಿಸ್ತಾ ಇದೆ ಕಣೋ….. ರಾವ್ ಅವರ ಮೇಲಿನ ತಿರಸ್ಕಾರ ಸಮನ್ವಿತಾನೂ ಅದೇ ದೃಷ್ಟಿಯಿಂದ ನೋಡೋಕೆ ನಿನ್ನನ್ನು ಪ್ರೇರೇಪಿಸ್ತಾ ಇದೆ ಅಷ್ಟೇ. ಅಂತದ್ರಲ್ಲಿ ಇವತ್ತಿನ ಈ ಮಾತುಕತೆ ಬೇಕಾ? ಇದರಿಂದ ಅವಳ ಮನಸ್ಸಿಗೆ ನೋವಾಗೋದಿಲ್ವಾ?" ಕೇಳಿದ್ದರು.

"ನೀನು ನನ್ನ ಮೇಲಿಟ್ಟಿರೋ ನಂಬಿಕೆನ ಯಾವತ್ತೂ ಸುಳ್ಳಾಗಿಸೋಲ್ಲ ಅಮ್ಮಾ. ಸಮನ್ವಿತಾಳ ಮೇಲೆ ನನಗೇನು ತಿರಸ್ಕಾರವಿಲ್ಲ. ನಾನ್ಯಾರನ್ನೂ ಪ್ರೀತಿಸಿಲ್ಲ ನಿಜ ಆದರೆ ನನಗೂ ವಿವಾಹದ ಬಗ್ಗೆ ಹಲವಾರು ಕಸಸುಗಳಿವೆ. ಇವತ್ತು ಮದುವೆಯಾಗಿ ನಾಳೆ ಡೈವೋರ್ಸ್ ಅನ್ನುವಂತಾ ಬದುಕು ನನಗೆ ಬೇಕಾಗಿಲ್ಲ. ಜೀವನಪೂರ್ತಿ ಜೊತೆಗಿರಬೇಕಾದವರ ನಡುವೆ ಇರಬೇಕಾದ್ದು ಪ್ರೀತಿ ನಂಬಿಕೆಗಳೇ ಹೊರತು ಭಿನ್ನಾಭಿಪ್ರಾಯ, ತಪ್ಪುಕಲ್ಪನೆಗಳಲ್ಲ. ಒಂದು ಸಣ್ಣ ಮಾತುಕತೆಯಿಂದ ಗೋಜಲಾಗಿರುವ ಈ ಸನ್ನಿವೇಶದ ಸ್ಪಷ್ಟ ಚಿತ್ರಣ ಸಿಗುವುದಾದರೆ ಅದರಲ್ಲಿ ತಪ್ಪಿಲ್ಲ ಅಲ್ವಾ?" ಅವನ ಮನದಿಂಗಿತ ಸ್ಪಷ್ಟವಾಗಿ ಹೊರಗೆಡವಿದ. 

ಅವನು ಹೇಳಿದ ಮಾತುಗಳಲ್ಲಿ ಅರ್ಥವಿತ್ತು. ಎಲ್ಲಾ ಗೊಂದಲಗಳು ನೇರಾನೇರ ಪರಿಹಾರವಾದರೆ ಒಳ್ಳೆಯದು ಎನಿಸಿತು ಮೃದುಲಾರಿಗೂ.

ಆದರೂ ಸಮನ್ವಿತಾ ಏನಂದುಕೊಳ್ಳಬಹುದು ಎಂಬ ಭಯವಿತ್ತು ಅವರಿಗೆ.

ಅವರ ಭಯದ ಮೂಲ ತಿಳಿದವನಂತೆ, "ಅಮ್ಮಾ ನಿನ್ನ ಚಿಂತೆ ಏನು ಅಂತ ಗೊತ್ತು. ನಾನೇನು ಸಮನ್ವಿತಾನ ದ್ವೇಷಿಸುತ್ತಿಲ್ಲ. ಅವಳ ಮನಸ್ಸಿಗೆ ನೋವಾಗುವಂತೆ ನಾನೇನು ಮಾತಾಡೋಲ್ಲ I promise" ತಾಯಿಯ ಕೈ ಅದುಮಿದ. ಅವರು ನಕ್ಕು "ಆ ನಂಬಿಕೆ ನನಗಿದೆ. ಸರಿ ಹೊರಡು. ಮಧ್ಯಾಹ್ನ ಬಂದ್ಬಿಡು. ತಿಳೀತಾ" ಎಂದರು.

"ದಟ್ಸ್ ಲೈಕ್ ಮೈ ಮುದ್ದು ಅಮ್ಮ" ಅವರ ಹಣೆಗೊಂದು ಮುತ್ತಿಟ್ಟು, "ಮಧ್ಯಾಹ್ನ ನೆನಪಿಸ್ತೀಯಲ್ಲ ಕೋತಿ....." ಎಂದು ಆಕೃತಿಯ ಕೆನ್ನೆ ಹಿಂಡಿ ಹೊರಟ.

ಇಂದು ಸಂಜೆ ನನ್ನ ಅನುಮಾನಗಳೆಲ್ಲಾ ಪರಿಹಾರವಾಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಅವಳನ್ನು ಈ ಮುಂಚೆ ಎಲ್ಲಿ ನೋಡಿರುವೆನೆಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದುಕೊಂಡವ ಅದೇ ಉತ್ಸಾಹದಲ್ಲಿ ಕಾರನ್ನು ಆಫೀಸಿನತ್ತ ಚಲಾಯಿಸಿದ......... 

                ********************

ಅವಳು ಶರ್ಮಾ ಅವರ ಮನೆ ಮುಂದೆ ಬಂದಿಳಿದಾಗ ಸಮಯ ನಾಲ್ಕರ ಸಮೀಪವಿತ್ತು. ಮಧ್ಯಾಹ್ನದ ಎಲ್ಲಾ ಕೇಸುಗಳನ್ನು ಸಹೋದ್ಯೋಗಿ ವರ್ಷಾಳಿಗೆ ಒಪ್ಪಿಸಿ ಮೀರಾ ಅವರ ಅನುಮತಿ ಪಡೆದು ಬಂದಿದ್ದಳು. 

ಆಟೋದವನಿಗೆ ಹಣವಿತ್ತು ಮನೆಯತ್ತ ನಡೆದಳು. ಗೇಟಿನಲ್ಲಿದ್ದ ವಾಚ್ ಮ್ಯಾನ್ ಏನೊಂದೂ ಕೇಳದೇ ಒಳಬಿಟ್ಟಾಗ ರಾವ್ ಅವರ ಬಂಗಲೆಯ ನೆನಪಾಯಿತವಳಿಗೆ. ಆಟೋದಲ್ಲಿ ಬರುವವರ ಪ್ರವೇಶವೇ ಅಲ್ಲಿ ನಿಷಿದ್ಧ. ಅದನ್ನೇ ನೆನೆದು ಒಳಗಡಿಯಿಟ್ಟಳು. 

ಮನೆಯೆದುರಿನ ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದ್ದ ಹೂದೋಟ ಅವಳ ಕಣ್ಮನ ತಣಿಸಿತು. ಅಲ್ಲೇ ನಿಂತವಳು ಎಚ್ಚೆತ್ತಿದ್ದು ಆಕೃತಿಯ ಧ್ವನಿ ಕೇಳಿದಾಗಲೇ........

"ಏನು ಇಲ್ಲಿಂದಾನೇ ವಾಪಾಸು ಹೋಗೋ ಯೋಚನೆಯಾ?" ನಗುತ್ತಾ ಕೇಳಿದಳು ಆಕೃತಿ.

"ಹಾಗೇನಿಲ್ಲ. ಮನಸ್ಸಿಗೆ ಹಿತವೆನಿಸಿತು. ಅದಕ್ಕೇ ಇಲ್ಲೇ ನಿಂತೆನಷ್ಟೇ" ಅದೇ ಕಿರುನಗುವಿತ್ತು ಅವಳ ಮುಖದಲ್ಲಿ.

"ಸರಿ ಸರಿ. ಈಗ ಬನ್ನಿ ಒಳಗೆ ಹೋಗೋಣ. ಎಲ್ಲಾ ನಿಮಗೇ ಕಾಯ್ತಿದ್ದಾರೆ" ಕೈಹಿಡಿದು ಒಳಗೆ ಎಳೆದೊಯ್ದಳು.

"ಅಮ್ಮಾ, ನೋಡು ಯಾರು ಬಂದಿದ್ದಾರೆ ಅಂತ"  ಮಗಳ ಕೂಗಿಗೆ ಸಂಭ್ರಮದಿಂದ ಹೊರಬಂದವರು, "ಅಂತೂ ಬಂದೆಯಲ್ಲ. ಬರ್ತೀಯೋ ಇಲ್ವೋ ಅನ್ನೋ ಅನುಮಾನವಿತ್ತು" ಮೃದುಲಾ ಮನದ ಮಾತನ್ನೇ ಹೇಳಿದ್ದರು.

"ನೀವು ಕರೆದ್ರೆ ಇಲ್ಲಾ ಅನ್ನೋಕೆ ನನ್ನಿಂದಾಗದು ಅಮ್.... ನೀವು ತಪ್ಪು ತಿಳಿಯಲ್ಲ ಅಂದ್ರೆ ನಾನು ನಿಮ್ಮನ್ನು ಅಮ್ಮ ಅಂತ ಕರೆಯಲಾ?" ಕೇಳಿದಳು.

"ಇದೂ ಕೇಳುವ ವಿಷಯವೇ? ನಿನ್ನ ಮಗಳೇ ಅಂತ ಕರೆದ ಮೇಲೆ ನಾನು ನಿನ್ನ ಅಮ್ಮನೇ ತಾನೇ" ತಲೆದಡವಿದರು.

ಅಷ್ಟರಲ್ಲೇ ಸಚ್ಚಿದಾನಂದ "ಏನು ಅಮ್ಮ ಮಕ್ಕಳದ್ದು ಗಹನವಾದ ಚರ್ಚೆ ಆಗ್ತಿದೆ. ಯಾವ ವಿಷಯದ ಬಗ್ಗೆಯೋ?" ಎನ್ನುತ್ತಾ ಮಾತಿಗೆ ಜೊತೆಯಾದರು. 

ಈ ಮಾತಿನ ಮಧ್ಯೆ‌ ಆಕೃತಿ "ಒಂದು ನಿಮಿಷ ಬಂದೆ" ಎಂದು ಅಭಿಯನ್ನು ಕರೆತರಲು ಅವನ ರೂಮಿನತ್ತ ಹೊರಟಳು.

ಅವನು ರೂಮಿನಲ್ಲೆಲ್ಲೂ ಕಾಣದಾಗ ಸೀದಾ ಟೆರೇಸಿನತ್ತ ನಡೆದಳು. ಕ್ಯಾನ್ವಾಸ್, ಬಣ್ಣಗಳು ಎಲ್ಲಾ ಇದ್ದವಾದರೂ ಕುಂಚ ಹಿಡಿದವನು ಕ್ಯಾನ್ವಾಸಿನ ಮುಂದೆ ಕಾಣದಾಗ ಸುತ್ತ ನೋಟಹರಿಸಿದಳು. ಟೆರೇಸಿನ ಮೂಲೆಯ ಕಟ್ಟೆಯೊಂದಕ್ಕೆ ಒರಗಿ ಏನೋ ಯೋಚನೆಯಲ್ಲಿ ಮುಳುಗಿದ್ದ ಅಭಿ. ಕುಂಚ ಕೈಯಲ್ಲಿಯೇ ಇತ್ತು. ಆಕೃತಿ ಬಂದಿದ್ದು ತಿಳಿಯದಷ್ಟು ಯೋಚನಾಮಗ್ನನಾಗಿದ್ದವನು ಅವಳು ಭುಜ ಹಿಡಿದು ಅಲುಗಿಸಿದಾಗ ಎಚ್ಚೆತ್ತ.

"ಏನಾಯ್ತು ಆಕೃತಿ" ಅವಳನ್ನು ಕೇಳಿದ. ಅವರು ನಿಂತಿದ್ದ ಜಾಗದಿಂದ ಮನೆಯ ಮುಖ್ಯ ಗೇಟ್, ಗಾರ್ಡನ್ ಎಲ್ಲಾ ಕಾಣುತ್ತಿತ್ತು. ಅವಳು ಏನೋ ಲೆಕ್ಕ ಹಾಕಿದವಳು, "ಒಹೋ ಇದಾ ವಿಷ್ಯಾ, ಅಂದ್ರೆ ಸಾಹೇಬರು ಸಮನ್ವಿತಾ ಬಂದಿದ್ದು, ಗಾರ್ಡನ್ ಅಲ್ಲಿ ನಿಂತಿದ್ದಿದ್ದು ಎಲ್ಲಾ ಇಲ್ಲಿಂದಲೇ ನೋಡ್ತಾ ಕಣ್ತುಂಬಿಕೋತಾ ಇದ್ರು...... ಛೀ  ಕಳ್ಳ....! ಪೈಂಟಿಂಗ್ ಮಾಡೋಕೆ ಅಂತ ಬಂದವನು ಅತ್ತಿಗೆನ ನೋಡಿ ಫ್ಲಾಟ್ ಆಗ್ಬಿಟ್ಯಾ?" ಛೇಡಿಸಿದಳು.

"ಆಕೃತಿ ನೀನು ಯಾಕೆ ಬಂದೆ ಇಲ್ಲಿಗೆ ಅದನ್ನು ಹೇಳು ಮೊದಲು" ಅವನು ತೀರಾ ಗಂಭೀರವಾಗಿ ಕೇಳಿದ.

ಅವನ ಗಂಭೀರವದನ ಕಂಡು ಅವಳಿಗೆ‌ ಮತ್ತೆ ಛೇಡಿಸುವ ಧೈರ್ಯವಾಗದೇ "ಕೆಳಗೆ ಬಾ, ಸಮನ್ವಿತಾ ಬಂದಿದ್ದಾರೆ.ಎಲ್ಲಾ ಅಲ್ಲೇ ಇದ್ದಾರೆ. ನಿನ್ನ ಕರೆಯೋಕೆ‌ ಬಂದೆ" ಎಂದ ತಂಗಿಗೆ, " ನೀನು ಹೋಗಿರು ನಾನು ಬರ್ತೀನಿ" ಎಂದು ಸಾಗಹಾಕಿದ.

ಆಕೃತಿ ಹೇಳಿದಂತೆ ಸಮನ್ವಿತಾ ಬಂದಿದ್ದು ನೋಡಿದ್ದ ಅವನು. ಆಫೀಸಿನಿಂದ ಬೇಗ‌ ಬಂದಿದ್ದ. ಬಣ್ಣಗಳು ಕಣ್ಣಿಗೆ ಬಿದ್ದಾಗ ಕ್ಯಾನ್ವಾಸ್, ಬಣ್ಣಗಳು, ಕುಂಚ ಹಿಡಿದು ಟೆರೇಸಿಗೆ ನಡೆದಿದ್ದ. ಏನೋ ಮನಸ್ಸಿಗೆ ತೋಚಿದ್ದನ್ನು ಕ್ಯಾನ್ವಾಸ್ ಮೇಲೆ ಮೂಡಿಸುತ್ತಿದ್ದವನಿಗೆ ಯಾಕೋ ಬೇಸರವೆನಿಸಿತ್ತು. ಮನಸ್ಸು ಯಾರದೋ ನಿರೀಕ್ಷೆಯಲ್ಲಿದ್ದಂತೆ ಚಡಪಡಿಸುತ್ತಿತ್ತು. ಅಲ್ಲೇ ಟೆರೇಸಿನ ಗೋಡೆಗೊರಗಿ ಸುತ್ತ ನೋಟಹರಿಸತೊಡಗಿದವನ ಗಮನ ಮನೆಯ ಮುಂದೆ ಬಂದು ನಿಂತ ಆಟೋದತ್ತ ಹರಿದಿತ್ತು. 

ಅದರಿಂದ ಇಳಿದವಳು ಸಮನ್ವಿತಾ.......  

'ದೇಶದ ಅತ್ಯಂತ ಪ್ರಸಿದ್ಧ ಉದ್ಯಮಿಯ‌ ಮಗಳು ಆಟೋದಲ್ಲಿ ಓಡಾಡುತ್ತಾಳೆಯೇ? ಅವಳ ಮನೆಯಲ್ಲಿ ಕಾರುಗಳಿಗೇನು ಬರವೇ? ಮತ್ತೇಕೆ ಆಟೋದಲ್ಲಿ ಬಂದಿದ್ದಾಳೆ? ಕೋಟ್ಯಂತರ ರೂಪಾಯಿಗಳ ಒಡತಿಯಾದರೂ ಆಟೋದಲ್ಲಿ ಓಡಾಡುವಷ್ಟು ಸರಳ ಮನಸ್ಥಿತಿ ಇರುವಾಕೆಗೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದಿರುವೆ…. ಇದು ಅಗತ್ಯವೇ? ವ್ಯಕ್ತಿಯ ವ್ಯಕ್ತಿತ್ವ ಅವನ ನಡೆನುಡಿಗಳಲ್ಲಿ ಸ್ಪಷ್ಟವಾಗದೇ? ಅದನ್ನು ಬಾಯಿಬಿಟ್ಟು ಕೇಳಿಯೇ ತಿಳಿಯಬೇಕೆ?':ಮತ್ತೊಮ್ಮೆ ಅವನ ಮನಸ್ಸು, ಮೆದುಳು ಅವನೊಂದಿಗೆ ಜಿದ್ದಿಗೆ ಬಿದ್ದಿದ್ದವು.

ಅವಳು ಗೇಟಿನಿಂದ ಒಳಬಂದವಳು ಐಶಾರಾಮಿ ಮನೆಯನ್ನಾಗಲೀ, ಅಲ್ಲಿನ ಶ್ರೀಮಂತ ವ್ಯವಸ್ಥೆ, ವಾಸ್ತುಶಿಲ್ಪವನ್ನಾಗಲೀ ಅವಲೋಕಿಸಲಿಲ್ಲ. ಅದರತ್ತ ನೋಟ ಕೂಡ ಹೊರಳಿಸಲಿಲ್ಲ. ಅವಳ ಮನಸೆಳೆದದ್ದು ಆ ಹೂದೋಟ ಮಾತ್ರವೇ. ಗಾರ್ಡನ್ ನ ಪ್ರತಿಯೊಂದು ಮೂಲೆಯನ್ನೂ ಗಮನಿಸುತ್ತಾ ನಿಂತಿದ್ದ ಕಿನ್ನರಿ ಅವನ ಮನದ ವೀಣೆಯನ್ನು ಮೌನವಾಗಿ ಮೀಟಿದ್ದಳು......

ಆಕೃತಿ ಅವಳನ್ನು ಒಳಗೆ ಕರೆದೊಯ್ದರೂ ಅವನ ಕಣ್ಣುಗಳ ಮುಂದೆ ಅವಳ ಅಸ್ತಿತ್ವ ಸ್ಪಷ್ಟವಾಗಿತ್ತು. ಅದೇ ಪರವಶ ಭಾವದಲ್ಲಿದ್ದವನನ್ನು ಆಕೃತಿಯ ಕರೆ ಎಚ್ಚರಿಸಿತ್ತು.

ಇವಳ್ಯಾರು? ಏಕೆ ನನ್ನನ್ನು ಹೀಗೆ ಕಾಡುತ್ತಿದ್ದಾಳೆ? ರಾವ್ ಅವರ ಪಾರ್ಟಿಯಲ್ಲಿ ಇವಳನ್ನು ಕಂಡಾಗಿನಿಂದ ಬೇಡಬೇಡವೆಂದರೂ ಮನಸ್ಸನ್ನು ಆವರಿಸಿಬಿಟ್ಟಿರುವಳಲ್ಲ. ಅವಳನ್ನು ಈ ಮುಂಚೆ ನೋಡಿರುವುದು ಮನಸ್ಸಿಗೆ‌ ಅತ್ಯಂತ ಸ್ಪುಟವಾಗಿದೆ. ಆದರೆ ಎಲ್ಲಿ? ಏನಾದರಾಗಲೀ ಇವತ್ತು ಎಲ್ಲವನ್ನೂ ಕೇಳಬೇಕು ಎಂದುಕೊಂಡು ರೂಮಿಗೆ ಬಂದವ ಬಣ್ಣಗಳಲ್ಲಿ ಮುಳುಗೆದ್ದ ಕೈ ತೊಳೆದು, ಬಟ್ಟೆ ಬದಲಾಯಿಸಿ ಹಾಲಿಗೆ‌ ಬಂದಾಗ ನಾಲ್ವರ ನಗು, ಮಾತುಕತೆ ಕಳೆಗಟ್ಟಿತ್ತು.

"ಅಂತೂ ಹರಟೆ ಬಹಳ‌ ಜೋರಾಗಿಯೇ ಇದೆ" ಎಂದವನ ದನಿಗೆ ತಲೆ ಎತ್ತಿದ ಸಮನ್ವಿತಾ ಅವನನ್ನು ಕಂಡು, "ಹಲೋ ಮಿಸ್ಟರ್ ಶರ್ಮಾ" ಮುಗುಳ್ನಕ್ಕಳು.

"ಹಲೋ ಮಿಸ್ ರಾವ್. ಹೇಗಿದ್ದೀರಾ? ಅಂತೂ ನಮ್ಮನೆಗೆ ಬರುವ ಕೃಪೆ ತೋರಿದ್ರೀ. ನಾವೇ ಧನ್ಯರು" ಎಂದ. 

"ನಿಮ್ಮ ಅಮ್ಮ ಅಷ್ಟೊಂದು ಪ್ರೀತಿಯಿಂದ ಕರೆದಾಗ ಬರೋದಿಲ್ಲ ಅನ್ನೋಕೆ ಮನಸ್ಸಾಗಲಿಲ್ಲ. ಅದಕ್ಕೇ….."ಅವಳು ಮತ್ತೆ ನಸುನಕ್ಕಳು.

"ನಾನು ಕರೆದಿದ್ರೆ ಬರ್ತಿರ್ಲಿಲ್ಲ ಅಂತ ಪರೋಕ್ಷವಾಗಿ ಹೇಳ್ತಿದ್ದೀರಿ ಅನ್ನಿ" ಕೆಣಕಿದ.

"ಮೇ ಬಿ......." ಅವಳು ಮಾತು ತೇಲಿಸಿದಳು.

"ನೀನು ಆ ತರಾ ಕರೆದರೆ ಯಾರು ಬರ್ತಾರೆ? ಬರೋರು ಸುಮ್ನಾಗ್ತಾರೆ ಅಷ್ಟೇ" ಮೃದುಲಾ ಅವರ ಮಾತಿಗೆ ಆಕೃತಿ, "ಹೌದಮ್ಮ ನೀನು ಹೇಳಿದ್ದು ಸರಿ. ಇವ್ನು ಎಲ್ಲರನ್ನೂ ಅವ್ನ ಬಿಸ್ನೆಸ್ ಕ್ಲೈಂಟ್ ಅನ್ನೋ ತರಾನೇ ಟ್ರೀಟ್ ಮಾಡ್ತಾನೆ" ಅಂದಳು.

"ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿರೋರ ಮನಸ್ಥಿತಿ ಹಾಗೇ ಇರುತ್ತೇ. ಆದ್ರೂ ಪ್ರತೀ ವಿಷಯನೂ ಬಿಸ್ನೆಸ್ ದೃಷ್ಟಿಯಿಂದನೇ ನೋಡೋರ ಮಧ್ಯೆ ನಿನ್ನ ಅಣ್ಣ ಬೆಟರ್. ಅವನಿಗೆ ವ್ಯಕ್ತಿ ಮತ್ತೆ ವ್ಯವಹಾರದ ನಡುವಿನ ವ್ಯತ್ಯಾಸ ಚೆನ್ನಾಗಿ ತಿಳಿದಿದೆ" ಮಗನ ಬೆನ್ನು ತಟ್ಟಿ ನುಡಿದರು ಸಚ್ಚಿದಾನಂದ.

ಮತ್ತೆ ತಂದೆಯ ನೆನಪಾಯಿತು ಸಮನ್ವಿತಾಳಿಗೆ. ಪಕ್ಕಾ ವ್ಯವಹಾರಸ್ಥ. ಹಣದ ಮುಂದೆ ಬೇರೆಲ್ಲವೂ ತೃಣ ಸಮಾನ. ಹಣಕ್ಕಾಗಿ ಎಂಥ ಹೀನ ಕೆಲಸಕ್ಕೂ ಹಿಂಜರಿಯಲಾರದಂತ ಮನಸ್ಥಿತಿಯವರು ಸತ್ಯಂ ರಾವ್ ಎನಿಸಿತು ಅವಳಿಗೆ.

"ಏನಾಯ್ತು ಸಮನ್ವಿತಾ" ಅವಳ ಅನ್ಯಮನಸ್ಕತೆ ಗಮನಿಸಿ ಕೇಳಿದರು ಮೃದುಲಾ. "ಹಾ........ ಏನಿಲ್ಲ ಹೀಗೇ ಏನೋ ನೆನಪಾಯ್ತು"  ಕೆಲಸದವನು ತಂದ ಟೀ ಕೈಗೆತ್ತಿಕೊಳ್ಳುತ್ತಾ ನುಡಿದಳು. 

"ನೀವು ಏನು ಮಾಡ್ತೀರಾ? ಐ ಮೀನ್ ನಿಮ್ಮ ತಂದೆಯ ಬಿಸ್ನೆಸ್ ಸಂಭಾಳಿಸ್ತೀರಾ? ಇಲ್ಲಾ ನಿಮ್ಮ ಸ್ವಂತ ಬಿಸ್ನೆಸ್ ಇದ್ಯಾ?" ಕುತೂಹಲದಿಂದ ಕೇಳಿದ ಅಭಿರಾಮ್ ಮಾತಿಗೆ ಅವಳಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗುತ್ತಿದ್ದವಳನ್ನು ನೋಡಿ ನಾಲ್ವರೂ ಗಲಿಬಿಲಿಗೊಂಡರು.

"ಯಾಕಮ್ಮಾ ನಗ್ತಿದ್ದೀ?" ಕೇಳೇ ಬಿಟ್ಟರು ಸಚ್ಚಿದಾನಂದ. "ಮತ್ತೇನು ಮಾಡ್ಲೀ ಅಂಕಲ್ ಈ ತರ ತಮಾಷೆ ಮಾಡಿದ್ರೇ?" ನಗುವನ್ನು ಹತೋಟಿಗೆ ತರುತ್ತಾ ಕೇಳಿದಳು.

"ಇದ್ರಲ್ಲಿ ತಮಾಷೆ ಏನ್ಬಂತು? ಅಣ್ಣ ನಿಮ್ಮ ಬಿಸ್ನೆಸ್ ಬಗ್ಗೆ ಕೇಳಿದ ಅಷ್ಟೇ" ಎಂದಳು ಆಕೃತಿ.

"ನನ್ನ ನೋಡಿದ್ರೆ ನಮ್ಮಪ್ಪನ ಬಿಸ್ನೆಸ್ ಸಂಭಾಳಿಸುವ ತರಾ ಕಾಣ್ತೀನಾ?" ಅಪನಂಬಿಕೆಯಿಂದ ಕೇಳಿದಳು.

"ನೀವೇನು ಮಾತಾಡ್ತಿದ್ದಿರೋ ನನಗಂತೂ ಅರ್ಥ ಆಗ್ತಿಲ್ಲ" ಗೊಂದಲದಲ್ಲಿ ಕೇಳಿದ ಅಭಿರಾಮ್.

"ಆಕ್ಚುಲಿ ನೀವೆಲ್ಲಾ ಏನು ಕೇಳ್ತಿದ್ದಿರೋ ನನಗೆ ಅರ್ಥ ಆಗ್ತಿಲ್ಲ. ಮೆಡಿಕಲ್ ಓದಿರೋ ನಾನು ನಮ್ಮ ಅಪ್ಪನ ಬಿಸ್ನೆಸ್ ಹೇಗೆ‌ ನೋಡ್ಕೊಳಲಿ? ನಾನೊಬ್ಬ ವೈದ್ಯೆ" ಅವಳ ಮಾತಿಗೆ ಶರ್ಮಾ ಪರಿವಾರ ದಂಗಾಗಿತ್ತು.

"ನೀವೂ ಡಾಕ್ಟರ್?" ಎಂದವನ ಮಾತಿಗೆ "ಯಸ್ ಮಿಸ್ಟರ್ ಶರ್ಮಾ ಆಮ್ ಅ ಡಾಕ್ಟರ್" ಎಂದಳು.

"ಛೇ ನೋಡು, ಇಷ್ಟೊಂದು ಮಾತಾಡಿದ್ರೂ ನೀನು ಏನು ಮಾಡ್ತಿದ್ಯಾ ಅಂತ ನಾವೂ ಕೇಳ್ಲಿಲ್ಲ. ನೀನೂ ಹೇಳ್ಲಿಲ್ಲ" ಎಂದರು ಮೃದುಲಾ.

"ನೀನು ಇಂಜಿನಿಯರಿಂಗ್, ಎಂ.ಬಿ.ಎ ಆ ತರದ ಕೋರ್ಸ್ ಮಾಡಿ ನಿಮ್ಮ ತಂದೆಯೊಂದಿಗೆ ವ್ಯವಹಾರ ನೋಡ್ಕೋತಿದ್ದೀಯಾ ಅಂದುಕೊಂಡಿದ್ದೆ" ಎಂದರು ಸಚ್ಚಿದಾನಂದ.

"ನೀವು ಅಂದುಕೊಂಡಿದ್ದು ಸರಿಯೇ ಅಂಕಲ್. ನನ್ನ ಅಪ್ಪನಿಗೆ ನಾನು ಇಂಥದೇ ಯಾವುದಾದ್ರೂ ಕೋರ್ಸ್ ಮಾಡಬೇಕೆಂದು ಆಸೆ ಇತ್ತು. ಬಟ್ ನನಗೆ ಈ ಕೋರ್ಸ್ ಗಳಲ್ಲಿ ಆಸಕ್ತಿ ಇರಲಿಲ್ಲ. ನಾನು ಇಷ್ಟಪಟ್ಟು ಆರಿಸಿಕೊಂಡ ಕೋರ್ಸ್ ಮೆಡಿಸಿನ್." ಎಂದಳು.

"ಸೋ ಇಟ್ಸ್ ಡಾಕ್ಟರ್ ಸಮನ್ವಿತಾ. ಮನೇಲಿ ಯಾರಿಗಾದ್ರೂ ಹುಷಾರಿಲ್ಲ ಅಂದ್ರೆ ಸೀದಾ ನಿಮ್ಮ ಹತ್ರ ಬರಬಹುದು" ಆಕೃತಿಯ ಹೇಳಿಕೆಗೆ ನಕ್ಕಳು.

"ಹುಷಾರು ತಪ್ಪಿದ್ರೆ ಡಾಕ್ಟರ್ ಸಮನ್ವಿತಾ ಅವರನ್ನು ಯಾವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಲೀ ಹುಡುಕಬೇಕು? ಇಲ್ಲಾ ಅವರದ್ದೇ ಒಂದು ಸ್ವಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದ್ಯಾ? ಬಿಲ್ ನಮ್ಮ ಕೈಲಿ ಕಟ್ಟೋಕಾಗುತ್ತಾ?" ತಮಾಷೆಯಾಗಿ ಕೇಳಿದ.

"ಪರವಾಗಿಲ್ಲವೇ. ನಿಮ್ಗೂ ಕಟ್ಟೋಕಾಗದಷ್ಟು ಬಿಲ್ ಮಾಡೋ ಆಸ್ಪತ್ರೆಗಳೂ ಇವೆಯೆನ್ನಿ" ತಾನೂ ಅವನ ಕಾಲೆಳೆದವಳು, "ನಾನು ಧನ್ವಂತರಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದೀನಿ" ಎಂದಳು. ಈಗ ಮತ್ತೆ ಅಚ್ಚರಿಯಾಗುವ ಸರದಿ ನಾಲ್ವರದ್ದೂ.

"ನೀವು... ಧನ್ವಂತರಿಯಲ್ಲಿ ಡಾಕ್ಟರ್? ಯಾವ ಧನ್ವಂತರಿ?" ಬೇರೆ ಯಾವುದೋ ಧನ್ವಂತರಿ ಇರಬಹುದೆಂದು ಕೇಳಿದ ಅನುಮಾನ ಪರಿಹರಿಸಿಕೊಳ್ಳಲು.

"ಡಾ. ಮೀರಾ ಅವರ ಧನ್ವಂತರಿ " ಸ್ಪಷ್ಟವಾಗಿ ಹೇಳಿದಳು.

"ಅಲ್ಲಮ್ಮಾ, ಅದು ಚಾರಿಟಿ ಪರ್ಪಸ್ ಹಾಸ್ಪಿಟಲ್. ಸ್ಯಾಲರಿನೂ ತುಂಬಾ ಕಡಿಮೆ. ನೀನು ಅಲ್ಲಿ ಕೆಲಸ ಮಾಡ್ತೀಯಾ? ಸತ್ಯಂ ರಾವ್ ಮಗಳು ಧನ್ವಂತರಿಯಲ್ಲಿ ಕೆಲಸ ಅಂದ್ರೇ......"

"ಹೌದು ಅಂಕಲ್, ನಾನು ಅಲ್ಲೇ ಕೆಲಸ ಮಾಡೋದು. ಸ್ಯಾಲರಿ ಕಡಿಮೆ ಆದ್ರೆ ನೆಮ್ಮದಿ, ಆತ್ಮತೃಪ್ತಿ ಜಾಸ್ತಿ ಇದೆ. ನನ್ನ ಅವಶ್ಯಕತೆಗಳು ಬಹಳ ಕಡಿಮೆ. ಹಾಗಾಗಿ ಜಾಸ್ತಿ ಸಂಬಳ ಅಗತ್ಯ ಇಲ್ಲ. ನೀವು ಹೇಗೆ ನಿಮ್ಮ ಸಂತೋಷಕ್ಕಾಗಿ ಧನ್ವಂತರಿಗೆ ಹಣ ಡೊನೇಟ್ ಮಾಡ್ತೀರೋ ಹಾಗೇ ನಾನೂ ನನ್ನ ಸಂತೋಷಕ್ಕೆ ಅಲ್ಲಿ ಕೆಲಸ ಮಾಡ್ತೀನಿ. ಇನ್ನು ಸತ್ಯಂ ರಾವ್ ಅವರ ಸಂಪಾದನೆ ಅವರಿಗೆ ಸಂಬಂಧಿಸಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಬಿಟ್ಟಳು.

ಅವಳ ಮಾತುಗಳನ್ನು ಕೇಳಿ ಮೂವರೂ ಅಭಿಯತ್ತ ನೋಟಹರಿಸಿದ್ದರು ನಿನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿತಲ್ಲ ಎಂಬಂತೆ. ಅವನೂ ಮೌನವಾಗಿದ್ದ ಹೌದೆಂಬಂತೆ. 

'ಎಷ್ಟು ಸ್ಪಷ್ಟ ಹಾಗೂ ನೇರ ಮನೋಭಾವದ ಹೆಣ್ಣಿವಳು. ಯಾರ ಹಂಗಿಗೂ ಬೀಳದವಳು. ಸತ್ಯಂ ರಾವ್ ಅಂತಹ ವ್ಯಕ್ತಿಯ ಜೊತೆಗಿದ್ದೂ ಪದ್ಮ ಪತ್ರದ ಮೇಲಿನ ಜಲಬಿಂದುವಿನಂತೆ, ಅಂಟಿಯೂ ಅಂಟದಂತೆ ಇರುವಳೆಂದರೆ ಅದೆಷ್ಟು ದೃಢಮನಸ್ಕಳಾಗಿರಬೇಕು? ಅವಳಾಡಿದ ಒಂದೊಂದು ಮಾತೂ ನಾನು ಕೇಳಬೇಕೆಂದುಕೊಂಡ ಪ್ರಶ್ನೆಗಳಿಗೆ, ನನ್ನ ಯೋಚನಾ ಮಟ್ಟಕ್ಕೆ ಚಾಟಿಯೇಟಿನಂತಹ ಉತ್ತರದಂತಿದೆ. ಅದು ಹೇಗೆ ಆ ಮಟ್ಟಕ್ಕೆ ಯೋಚಿಸಿ ಬಿಟ್ಟೆ ಇಂಥಾ ಹುಡುಗಿಯ ಬಗ್ಗೆ? ಒಂದು ವೇಳೆ ನನ್ನ ಅನುಮಾನಗಳನ್ನು ಪ್ರಶ್ನೆಗಳಾಗಿಸಿ ಇವಳ ಮುಂದಿಟ್ಟಿದ್ದರೆ ಅವಳ ಧೀರೋದಾತ್ತ ನಿಲುವಿನೆದುರು ನಾನು ಎಷ್ಟು ಕೇವಲನಾಗುತ್ತಿದ್ದೆ. ಇನ್ನು ಯಾವ ಪ್ರಶ್ನೋತ್ತರಗಳಿಗೂ ಜಾಗವಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಗೆ ಕಣ್ಮುಚ್ಚಿ ತಾಳಿ ಕಟ್ಟುತ್ತೇನೆಂದವನು ನಾನೇ..... ಈಗ ವಿಧಿ ಇವಳನ್ನು ನನ್ನ ಮುಂದೆ ನಿಲ್ಲಿಸಿದೆ. ಯಾರಾದರೂ ಅನುಕರಿಸಬಹುದಾದ ಗುಣ,ನಡತೆ, ಮನಸ್ಥಿತಿ ಹೊಂದಿರುವಾಕೆ ಇವಳು. ರಾವ್ ಅವರೇ ತಂದ ಪ್ರಸ್ತಾಪ ಎಂದರೆ ಇವಳಿಗೆ ಈ ಬಗ್ಗೆ ಯಾವುದೇ ವಿರೋಧವಿಲ್ಲ. ಇವಳಂಥಾ ನಿರ್ಮಲ ಮನಸ್ಸಿನ ಸಂಗಾತಿ ಎಲ್ಲರ ಅದೃಷ್ಟದಲ್ಲಿರುವುದಿಲ್ಲ.‌ ಅಂತದರಲ್ಲಿ ತಾನಾಗಿಯೇ ನನ್ನನ್ನು ಅದೃಷ್ಟವೇ ಅರಸಿ ಬಂದಿದೆ. ನಾನೂ ಇವಳನ್ನು ಕಂಡಂದಿನಿಂದ ಜಿಜ್ಞಾಸೆಗೆ ಒಳಗಾಗಿದ್ದು ಸತ್ಯ. ಭಾವನೆಗಳ ಹೋರಾಟವೇ ನನ್ನೊಳಗೆ ನಡೆದಿಲ್ಲವೇ? ಹೇಗಿದ್ದರೂ ನನ್ನ ಮನಸ್ಸು, ಮೆದುಳು ಎರಡೂ ಇವಳ ವಿರುದ್ಧ ಒಂದು ಮಾತನ್ನೂ ಕೇಳಲು ಬಯಸವು....... ಹೀಗಿರುವಾಗ ಇನ್ನೇನು ಮರುಯೋಚಿಸಬಾರದು' ಎಂದು ನಿರ್ಧರಿಸಿದವನೇ,

"ಸಮನ್ವಿತಾ ನಿಮ್ಮ ತಂದೆಯವರ ಪ್ರಸ್ತಾಪಕ್ಕೆ ನಮ್ಮೆಲ್ಲರ ಒಪ್ಪಿಗೆ ಇದೆ" ಎಂದುಬಿಟ್ಟ.

ಅವನು ಒಪ್ಪಲಿ ಎನ್ನುವ ಆಸೆ, ಒಪ್ಪಿಸಲೇಬೇಕೆನ್ನುವ ಭಾವ ಎಲ್ಲರಿಗೂ ಇತ್ತಾದರೂ, ಹೀಗೆ ಅನಿರೀಕ್ಷಿತವಾಗಿ ಸಮನ್ವಿತಾಳೆದುರೇ ಹೇಳುತ್ತಾನೆಂದು ಅವರ್ಯಾರೂ ಎಣಿಸಿರಲಿಲ್ಲ. ಆದರೆ ಅವರೆಲ್ಲರಿಗೂ ಅತೀವ ಸಂತಸವಾಗಿತ್ತು. ಮೂವರು ಅವನ ನಿರ್ಧಾರವನ್ನು ಸಮ್ಮತಿಸಿ ಅಭಿನಂದಿಸುತ್ತಿದ್ದರೇ ಸಮನ್ವಿತಾ ಏನೊಂದೂ ಅರ್ಥವಾಗದೇ ಬಿಟ್ಟು ಕಣ್ಣುಗಳಿಂದ ಅವರನ್ನೇ ನೋಡುತ್ತಿದ್ದಳು.

"ಕಂಗ್ರಾಜುಲೇಷನ್ಸ್ ಎಂಡ್ ಥ್ಯಾಂಕ್ಯೂ ಸೋ ಮಚ್ ಮಗಳೇ" ಮೃದುಲಾ ಅಕ್ಕರೆಯಿಂದ ತಬ್ಬಿದಾಗ, "ಯಾಕೇ…...?ನೀವೆಲ್ಲಾ ಯಾವ ವಿಷಯದ ಬಗ್ಗೆ ಮಾತಾಡ್ತಿದ್ದೀರಿ ಅಂತ ಗೊತ್ತಾಗ್ತಿಲ್ಲ ಅಮ್ಮಾ" ಗೊಂದಲದ ಗೂಡಾದ ಮನವನ್ನು ಸಂಭಾಳಿಸುತ್ತಾ ಕೇಳಿದಳು.

"ಇದೇನು ಅತ್ತಿಗೆ  ಹೀಗೆ ಕೇಳ್ತಿದ್ದೀರಿ? ಎಲ್ಲಾ ತಿಳಿದೂ ಏನೂ ಗೊತ್ತಿಲ್ಲದ ರೀತಿ " ಆಕೃತಿಯ ಮಾತಿನಲ್ಲಿ "ಅತ್ತಿಗೆ" ಎಂಬ ಪದಪ್ರಯೋಗ ಅವಳನ್ನು ಇನ್ನಷ್ಟು ಗಲಿಬಿಲಿಗೊಳಿಸಿತು. ಅಯೋಮಯವಾಗಿ ಕಸಿವಿಸಿಯಿಂದ ಎಲ್ಲರೆಡೆ ನೋಟಹರಿಸಿದಳು. 

ಅವಳ ಗೊಂದಲದ ನೋಟವನ್ನು ಸರಿಯಾಗಿ ಗಮನಿಸಿದ್ದು ಅಭಿರಾಮ್ ಮಾತ್ರ. ಹಿಂದಿನ ದಿನ ಫೋನಿನಲ್ಲಿ ಅವಳೊಂದಿಗೆ ಮಾತನಾಡಿದಾಗ ಮೂಡಿದ್ದ ಪ್ರಶ್ನೆಗಳು ಮತ್ತೆ ಅವನ ಮನವನ್ನಾಕ್ರಮಿಸಿತು.

ಅವಳ ಗೊಂದಲಭರಿತ ವದನ ಕಂಡು ಸಚ್ಚಿದಾನಂದರು, "ಅಯ್ಯೋ, ಅದ್ಯಾಕಷ್ಟು ಗೊಂದಲ ಮಗು. ನಿನ್ನ ತಂದೆ ನಿನ್ನ ಮತ್ತು ಅಭಿರಾಮ್ ಮದುವೆಯ ಪ್ರಸ್ತಾಪ ತಂದಿದ್ರಲ್ಲ ಅದು ನಮ್ಮೆಲ್ಲರಿಗೂ ಸಂಪೂರ್ಣ ಸಹಮತ ಅಂತ ಹೇಳಿದ್ದು ಅವನು" 

ಅವರು ಮುಂದೆ ಏನು ಮಾತನಾಡಿದರೋ ಅವಳಿಗೊಂದೂ ಕೇಳಲಿಲ್ಲ.......!!

         ******ಮುಂದುವರೆಯುತ್ತದೆ******



ಅನೂಹ್ಯ 21

ಅಭಿರಾಮ್ ಸಮನ್ವಿತಾಳಿಗೆ ಕರೆ ಮಾಡಿದಾಗ ಅವಳು  ನವ್ಯಾಳೊಂದಿಗೆ ತನ್ನ ಹೊಸ ಮನೆಯನ್ನು ಒಪ್ಪವಾಗಿಸುತ್ತಿದ್ದಳು. ಬೆಳಿಗ್ಗೆಯೇ ಇಬ್ಬರೂ ಸೇರಿ ಮನೆಗೆ ಅಗತ್ಯವಿದ್ದ ವಸ್ತುಗಳನ್ನು ಖರೀದಿಸಿ ತಂದಿದ್ದರು. ಹೊರಗೇ ಊಟ ಮುಗಿಸಿ ಮನೆಗೆ ಬಂದು ಸ್ವಲ್ಪ ವಿಶ್ರಮಿಸಿ ತಂದಿದ್ದ ವಸ್ತುಗಳನ್ನು ಜೋಡಿಸತೊಡಗಿದ್ದರು. ಅಷ್ಟರಲ್ಲಿ  ರಿಂಗಣಿಸತೊಡಗಿದ ಜಂಗಮವಾಣಿಯನ್ನು ಬ್ಯಾಗಿನಿಂದ ತೆರೆದು ನೋಡಿದಳು. ಅಪರಿಚಿತ ಸಂಖ್ಯೆ. ಕಂಪನಿಯ ಕರೆ ಇರಬಹುದೆಂದು ಕಡಿತಗೊಳಿಸಿದಳು. 

ಕರೆ ಮಾಡುತ್ತಿದ್ದ ಅಭಿರಾಮ್ ಹಣೆಯೊತ್ತಿದ. 'ಛೇ, ಇವಳು ಫೋನ್ ಬೇರೆ ರಿಸೀವ್ ಮಾಡ್ತಿಲ್ವಲ್ಲಪ್ಪ, ಏನು ಮಾಡ್ಲೀ' ಎಂದುಕೊಳ್ಳುತ್ತಲೇ ಮತ್ತೆ ಕರೆ ಮಾಡಿದ.

ಮತ್ತೇ ಅದೇ ನಂಬರಿನಿಂದ ಕರೆ ಬಂದಾಗ ಯಾರಾದರೂ ಪೇಷೆಂಟ್ ಕಡೆಯವರಿರಬಹುದೇನೋ ಎನಿಸಿ, ರಿಸೀವ್ ಮಾಡಿ "ಹಲೋ" ಎಂದಳು.

'ಅಬ್ಬಾ, ಅಂತೂ ಫೋನ್ ರಿಸೀವ್ ಮಾಡಿದ್ಲಲ್ಲಪ್ಪ' ಅಂತ ಮನದಲ್ಲೇ ಎಲ್ಲಾ ದೇವರಿಗೂ ಕೈ ಮುಗಿದ.

"ಹಲೋ? ಯಾರು ಮಾತಾಡ್ತಾ ಇರೋದು?" ಕೇಳಿದಳು.

"ಹಲೋ ಸಮನ್ವಿತಾ, ಅಭಿರಾಮ್ ಹಿಯರ್" ಅವನೆಂದಾಗ ಅವಳಿಗೆ ಅಚ್ಚರಿಯಾಯಿತು. ಇವನು ತನಗೇಕೆ ಕರೆ ಮಾಡಿದ? ಮೊನ್ನೆ ಪಾರ್ಟಿಯಲ್ಲಿ ನೋಡಿದ್ದು ಬಿಟ್ಟರೆ ಬೇರೆ ಯಾವ ಪರಿಚಯವೂ ನಮ್ಮ ನಡುವಿಲ್ಲ. ನನ್ನ ನಂಬರ್ ಹೇಗೆ ಸಿಕ್ಕಿತು? 

"ಹಲೋ ಆರ್ ಯು ದೇರ್?" ಅವಳಿಂದ ಪ್ರತಿಕ್ರಿಯೆ ಬರದಿದ್ದಾಗ ಕೇಳಿದ.

"ಯಾ, ಟೆಲ್ ಮಿ ಮಿಸ್ಟರ್ ಶರ್ಮಾ, ಅದೇನು ನನಗೆ ಫೋನ್ ಮಾಡಿದ್ದು?" ನೇರವಾಗಿ ವಿಷಯಕ್ಕೆ ಬಂದಳು.

"ನಿಮ್ಮ ಹತ್ತಿರ ತುಂಬಾ ಮುಖ್ಯವಾದ ವಿಷಯವೊಂದನ್ನು ಮಾತಾಡೋದಿದೆ ಮಿಸ್ ರಾವ್. ಫೋನಿನಲ್ಲಿ ಮಾತಾಡೋಕೆ ಸಾಧ್ಯವಿಲ್ಲ. ನಾಳೆ ಫ್ರೀ ಇದ್ದೀರಾ? ಸಿಗಬಹುದಾ?" ಅವನೂ ನೇರವಾಗಿ ವಿಷಯಕ್ಕೆ ಬಂದ.

ಆದರೆ ಅವನ ಮಾತು ಅವಳನ್ನು ಗೊಂದಲಕ್ಕೆ ಕೆಡವಿತು. ತಮ್ಮಿಬ್ಬರ ನಡುವೆ ಮಾತನಾಡಲು ಮುಖ್ಯವಾದ ವಿಷಯ ಯಾವುದಿದೆ? ಅದೂ ಫೋನಿನಲ್ಲಿ ಹೇಳಲಾಗದ್ದು? ಅವಳಿಗೇನೂ ಅರ್ಥವಾಗಲಿಲ್ಲ. ಪಾಪ, ಅವಳ ಬೆನ್ನ ಹಿಂದೆ ತಂದೆ ಮಾಡಿರುವ ಕೆಲಸ ಅವಳಿಗೆಲ್ಲಿಂದ ತಿಳಿಯಬೇಕು...

"ಮಿಸ್ಟರ್ ಶರ್ಮಾ, ನಮ್ಮಿಬ್ಬರ ಮಧ್ಯೆ ನೇರಾನೇರ ಭೇಟಿಯಾಗಿಯೇ ಮಾತನಾಡಬೇಕಾದಷ್ಟು ಮುಖ್ಯವಾದ ವಿಷಯ ಇದೆ ಅಂತ ನನಗನಿಸುತ್ತಿಲ್ಲ. ನೇರಾನೇರ ಹೋಗಲಿ ಕನಿಷ್ಟ ಫೋನಿನಲ್ಲಿ ಮಾತನಾಡಬಹುದಾದ ವಿಷಯ ಇರುವುದು ಅನುಮಾನವೇ. ಅಂತದ್ದರಲ್ಲಿ ಈ ಭೇಟಿ?"

ಇವಳ ಮಾತು ಕೇಳಿ ಅಭಿರಾಮ್ ತಲೆ ಕೆಡತೊಡಗಿತು. 'ಇವಳೋ ಏನೂ ವಿಷಯನೇ ಗೊತ್ತಿಲ್ಲದಿರುವಂತೆ ಮಾತಾಡ್ತಿದ್ದಳೆ. ಅಂತೂ ಈ ಅಪ್ಪ ಮಗಳಿಬ್ರೂ ಸೇರಿ ನನ್ನ ಲೈಫ್ ನ ಚಿತ್ರಾನ್ನ ಮಾಡೋದು ಗ್ಯಾರಂಟಿ ಅನ್ಸುತ್ತೆ' ಎಂದುಕೊಂಡವ,

"ವಿಷ್ಯ ಇರೋದ್ರಿಂದನೇ ಕರೀತಿರೋದು ಮಿಸ್ ರಾವ್. ಸುಮ್ಮನೆ ನಿಮ್ಮನ್ನ ಇನ್ವೈಟ್ ಮಾಡೋಕೆ ನನಗೇನು ಹುಚ್ಚಾ" ರೇಗಿ ಕೇಳಿದ.

ಅವನ ಮಾತಿನ ಧಾಟಿ ಅವಳಿಗೆ ವಿಚಿತ್ರವೆನಿಸಿತು. "ಮಿಸ್ಟರ್ ಶರ್ಮಾ, ಐ ಥಿಂಕ್ ನನ್ನ ತಂದೆಗೆ ಫೋನ್ ಮಾಡೋಕೆ ಹೋಗಿ ತಪ್ಪಿ ನನಗೆ ಕಾಲ್ ಮಾಡಿರಬೇಕು ನೀವು" ಅವಳೆಂದಾಗ ಅವನಿಗೆ ಬಂಡೆಗೆ ತಲೆ ಚಚ್ಚಿಕೊಳ್ಳಬೇಕೆನಿಸಿತು. ಇನ್ನು ಹೀಗೆ ಮಾತನಾಡಿ ಪ್ರಯೋಜನವಿಲ್ಲವೆಂದು,

"ಮಿಸ್ ಸಮನ್ವಿತಾ, ನಾನು ಸರಿಯಾದ ನಂಬರಿಗೇ ಕಾಲ್ ಮಾಡಿದ್ದೇನೆ. ನಿಮ್ಮ ಹತ್ತಿರವೇ ಮಾತನಾಡಲಿರೋದು. ಸೋ, ಪ್ಲೀಸ್ ಜಾಸ್ತಿ ತಲೆತಿನ್ನದೇ ನಾಳೆ ನಮ್ಮನೆಗೆ ಬಂದ್ರೆ ತುಂಬಾ ಉಪಕಾರವಾಗುತ್ತೆ" ಇನ್ನೇನು ಹೇಳುತ್ತಿದ್ದನೋ, ಆದರೆ ಅಡುಗೆ ಮನೆಯಿಂದ ಅವನ ಮಾತು ಕೇಳಿಸಿಕೊಳ್ಳುತ್ತಿದ್ದ ಮೃದುಲಾ ಅವನ ಕೈಯಿಂದ ಫೋನ್ ಕಿತ್ತುಕೊಂಡರು.

"ಸಮನ್ವಿತಾ ಪುಟ್ಟಾ, ನಾನಮ್ಮ ಮೃದುಲಾ. ನೀನು ಅಭಿ ಮಾತಿಗೆ ಬೇಜಾರು ಮಾಡಿಕೊಳ್ಳಬೇಡಮ್ಮ. ಅವ್ನಿಗೆ ಹೆಣ್ಣು ಮಕ್ಕಳ ಹತ್ರ ಹೇಗೆ ಮಾತಾಡ್ಬೇಕು ಅಂತ ಗೊತ್ತಾಗಲ್ಲ. ನಾವು ನಿಮ್ಮನೆಗೆ ಬಂದ್ವಿ ತಾನೇ? ಈಗ ನೀನು ಬರ್ಬೇಕು. ನಾಳೆ ಬಾರಮ್ಮ. ಊಟಕ್ಕೆ ಇಲ್ಲಿಗೇ ಬರ್ಬೇಕು.ಇಲ್ಲಾ ಅಂದ್ರೆ ನನಗೆ ಬೇಜಾರಾಗುತ್ತೆ ನೋಡು. ಹಾಗೇ ಸ್ವಲ್ಪ ಮಾತಾಡೋದು ಇದೆ. ಎಲ್ಲಾ ಒಟ್ಟಿಗೆ ಆಗುತ್ತೆ" ಒಂದೇ ಉಸಿರಿಗೆ ಎಲ್ಲಾ ತಾವೇ ಹೇಳಿದರು‌.

ಮೃದುಲಾ ಅವರಿಗೆ ಇಲ್ಲವೆನ್ನಲಾಗಲಿಲ್ಲ ಅವಳಿಗೆ. "ಸರಿ ಅಮ್... ಸಾರಿ ಆಂಟಿ ಬರ್ತೀನಿ. ಆದರೆ ಊಟಕ್ಕೆ ಬರೋಕೆ ಆಗೋಲ್ಲ. ಕೆಲಸ ಇದೆ. ಸಂಜೆ ಬರ್ತೀನಿ" ಎಂದಳು.

"ಸರಿ, ಸಂಜೆ ಬಾ, ರಾತ್ರಿ ಊಟ ನಮ್ಮಲ್ಲೇ" ಎಂಬ ಅವರ ಆಮಂತ್ರಣ ಖುಷಿ ತಂದಿತು ಅವಳಿಗೆ. ಮನೆಯಲ್ಲಂತೂ ಯಾರು ಕೂರಿಸಿಕೊಂಡು ಬಡಿಸಲಿಲ್ಲ. ಆದರೂ ಆತ್ಮೀಯವಾಗಿ ಊಟಕ್ಕೆ ಕರೆಯುವ ಹಿತೈಷಿಗಳನ್ನು ದಯಪಾಲಿಸಿದೆಯಲ್ಲ ಭಗವಂತ ಎಂದುಕೊಂಡು ಸರಿ ಬರುವೆನೆಂದಳು.

ಅವಳೊಂದಿಗೆ ಉಭಯಕುಶಲೋಪರಿಯ ನಾಲ್ಕು ಮಾತನಾಡಿ ನಾಳೆ ಸಂಜೆ ಬರಲೇಬೇಕೆಂದು ಮತ್ತೊಮ್ಮೆ ಹೇಳಿ ಕರೆ ಕಡಿತಗೊಳಿಸಿ ಮಗನೆಡೆಗೆ ತಿರುಗಿದಾಗ, ಅವನು ಕೋಪದಲ್ಲಿ ಅವರನ್ನೇ ನೋಡುತ್ತಿದ್ದ...

"ಏನಮ್ಮಾ, ನನಗೆ‌ ಹೆಣ್ಮಕ್ಕಳ ಹತ್ರ ಹೇಗೆ‌ ಮಾತಾಡ್ಬೇಕು ಅಂತ ಗೊತ್ತಾಗಲ್ವಾ?" ಕೇಳಿದ ಕೋಪದಲ್ಲಿ.

"ಗೊತ್ತಿದ್ರೆ ಹೀಗೆ ಮಾತಾಡ್ತಿದ್ಯಾ? ಅಲ್ವೋ ಕುಲಪುತ್ರ. ಅವತ್ತು ಪಾರ್ಟಿಲಿ ಒಂದ್ಸಲ ನೋಡಿರೋದು ಅವಳು ನಿನ್ನ. ಅದೂ ಮಾತುಕತೆ ಇಲ್ವೇ ಇಲ್ಲ. ಅಂತದ್ರಲ್ಲಿ ಒಂದೇ ಏಟಿಗೆ ಫೋನ್ ಮಾಡಿ 'ಮನೆಗೆ ಬನ್ನಿ, ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ ಅಂದ್ರೆ ಅವಳೇನಂತ ಅರ್ಥ ಮಾಡ್ಕೋಬೇಕು ಹೇಳು?"

"ಅಲ್ಲ ಮಮ್ಮಿ, ಅವಳಿಗೆ ಗೊತ್ತಿದೆ ಮದುವೆ ಪ್ರಸ್ತಾಪದ ಬಗ್ಗೆ. ಹಾಗಿದ್ದಾಗ ಮುಖ್ಯವಾದ ವಿಷಯ ಅದೇ ಅಂತ ಅಷ್ಟೂ ಗೊತ್ತಾಗೋಲ್ವಾ? ಅವಳು ಮಾತಾಡಿದ್ದು ಹೇಗಿತ್ತು ಅಂದ್ರೆ, ಏನೋ ಅವಳಪ್ಪ ಅವಳಿಗೇ ಗೊತ್ತಿಲ್ಲದೇ ಮದುವೆ ಮಾತುಕತೆ ನಡೆಸಿದ್ದಾರೇನೋ ಅನ್ಸೋಹಾಗಿತ್ತು" ಸಿಟ್ಟಿನಲ್ಲಿ ಹೇಳಿದ.

"ಅಭಿ, ಅವಳೇನು ಕೇಳಿದ್ಲೋ ನಿನಗೇನು ಅರ್ಥ ಆಯ್ತೋ ಯಾರಿಗೊತ್ತು. ನೀನು ಮದುವೆ ವಿಚಾರ ನೇರವಾಗಿ ಅವಳ ಹತ್ರ ಮಾತಾಡ್ತೀಯಾ ಅಂತ ಅವಳು ಅಂದುಕೊಂಡಿರೋಲ್ಲಾ ಅನ್ಸುತ್ತೆ. ಸಾಮಾನ್ಯವಾಗಿ ಅರೇಂಜ್ ಮ್ಯಾರೇಜ್ ಗಳಲ್ಲಿ ಇದೆಲ್ಲಾ ಹಿರಿಯರು ಮಾತಾಡ್ಕೊಳ್ಳೋದಲ್ವಾ? ಹಾಗಾಗಿ ಆ ರೀತಿ ಮಾತಾಡಿರಬಹುದು" 

ತಾಯಿಯ ಮಾತು ಸರಿಯೆನಿಸಿತು ಅವನಿಗೆ. ನನ್ನ ಮಾತಿನಿಂದ  ಅವಳಿಗೆ ಬೇಸರವಾಯಿತೇನೋ ಎನಿಸಿತು.

"ಇರಬಹುದೇನೋ. ಸರಿ ಮಮ್ಮಿ. ನಾನು ಆಫೀಸಿಗೆ ಹೊರಟೆ" ಎಂದವ ಸೀದಾ ಆಫೀಸಿನೆಡೆಗೆ ಹೊರಟ. ಆಫೀಸ್ ತಲುಪಿದ ಕೂಡಲೇ, "ಸಾರೀ,ಡೋಂಟ್ ಮೈಂಡ್, ಪ್ಲೀಸ್ ಡೂ ಕಮ್ ಟುಮಾರೋ" ಅಂತ ಅವಳಿಗೊಂದು ಮೆಸೇಜ್ ಹಾಕಿದ.

"ಇಟ್ಸ್ ಓಕೆ. ಐ ವಿಲ್ ಕಮ್" ಎಂಬ ಉತ್ತರ ನೋಡಿ ನೆಮ್ಮದಿಯೆನಿಸಿತು.

'ಹೌದು….. ಅವಳೇನಾದ್ರೂ ಅಂದ್ಕೊಳ್ಳಲಿ ತಮಗೇನು ಸರ್? ಎಷ್ಟೆಂದರೂ ತಮಗೆ ಈ ಮದುವೆ ಇಷ್ಟವಿಲ್ಲ ತಾನೇ?' ಮನಸ್ಸು ಪ್ರಶ್ನಿಸಿತು.

ಹೌದಲ್ಲ..‌... ನಾನ್ಯಾಕೆ ಇವಳ ಬಗ್ಗೆ ಇಷ್ಟು ಮೆದುವಾಗುತ್ತೇನೆ? ತನ್ನನ್ನೇ ಪ್ರಶ್ನಿಸಿಕೊಂಡ. ಉತ್ತರ ದೊರೆಯಲಿಲ್ಲವೋ ಇಲ್ಲಾ ಸಿಕ್ಕ ಉತ್ತರವನ್ನು ಒಪ್ಪಿಕೊಳ್ಳಲು ಹಿಂಜರಿಕೆಯೋ? ತಿಳಿಯಲಿಲ್ಲ.

'ಏನು ಮಿಸ್ಟರ್ ಶರ್ಮಾ? ಲವ್ ಎಟ್ ಫಸ್ಟ್ ‌ಸೈಟಾ?' ಮನ ಛೇಡಿಸಿದಾಗ, 'ಅಲ್ಲಲ್ಲಾ, ಲವ್ ಎಟ್ ಸೆಕೆಂಡ್ ಸೈಟ್. ಇದಕ್ಕೂ ಮುನ್ನ ಅವಳನ್ನು ಎಲ್ಲಿ ನೋಡಿದ್ಯಾ ಅಂತ ನೆನಪಿಸಿಕೋ ಘಜನಿ' ಎಂದು ಮುಖಕ್ಕೆ ಉಗಿಯಿತು ಮೆದುಳು.....

'ಅದೇನೇ ಇರಲಿ, ಇದು ಲವ್ ಎಟ್ ಫಸ್ಟ್ ಸೈಟೇ. ಅದಕ್ಕೇ ಆ ಹುಡುಗಿ ನಿನಗಿನ್ನೂ ನೆನಪಲ್ಲಿರೋದು' ಮನಸ್ಸು ತೊದಲತೊಡಗಿತು.

ತಲೆ ಜಾಡಿಸಿದವನು, 'ಮಿಸ್ಟರ್ ಶರ್ಮಾ, ನೀನು ಹಾಳಾಗೋ ಎಲ್ಲಾ ಲಕ್ಷಣ ಕಾಣಿಸ್ತಾ ಇದೆ. ಮೊದಲು ಮಾಡ್ಬೇಕಾಗಿರೋ ಕೆಲಸ ನೋಡು' ಎಂದುಕೊಂಡವನು

ಮತ್ತೆ, 'ಏನಾದರಾಗಲಿ ನಾಳೆ ಈ ಮುಂಚೆ ಅವಳನ್ನು ಎಲ್ಲಿ ನೋಡಿದ್ದು ಅಂತ ಅವಳನ್ನೇ ಕೇಳಬೇಕು' ಎಂದು ನಿರ್ಧರಿಸಿ ಕೆಲಸದತ್ತ ಗಮನ ಹರಿಸಿದ‌.

                      ***************

ಇತ್ತ ಮೃದುಲಾರೊಂದಿಗೆ ಮಾತನಾಡಿ ಸಮನ್ವಿತಾಳ ಮನ ಉಲ್ಲಾಸಗೊಂಡಿತ್ತು. ಏನೋ ಹಾಯೆನಿಸುವ ಭಾವ....

ಅದರ ಹಿಂದೆ ಅಭಿರಾಮ್ ಮೆಸೇಜ್ ನೋಡಿ ಅವನಿಗೆ ರಿಪ್ಲೈ ಕಳಿಸಿದವಳು, 'ಪ್ರಾಯಶಃ ಅವನು ನಾನು ಹಾಗೂ ಅಪ್ಪ ಒಟ್ಟಾಗಿ ಬಿಸ್ನೆಸ್ ಸಂಭಾಳಿಸುತ್ತೇವೆ ಎಂದುಕೊಂಡಿರಬಹುದೇನೋ. ಅದರ ಬಗ್ಗೆ ಏನಾದರೂ ಮಾತನಾಡಲು ಕರೆದಿರಬಹುದು. ಇರಲಿ ನಾಳೆ ಅವನಿಗೆ ಸ್ಪಷ್ಟವಾಗಿ ಹೇಳಿದರಾಯಿತು' ಎಂದುಕೊಂಡಳು.

ಅವಳ ಮುಖದ ತುಂಬಾ ಹರಡಿದ್ದ ನಸುನಗುವನ್ನು ಕಂಡು "ಏನು ನಮ್ಮ ರಾಜಕುಮಾರಿ ಅವರು ಫೋನಲ್ಲಿ ಮಾತನಾಡಿದ ಮೇಲೆ ಬಹಳ‌ ಆನಂದವಾಗಿದ್ದಾರೆ? ಏನು ವಿಶೇಷ? ಯಾವ್ದಾದ್ರೂ ರಾಜಕುಮಾರನ ಕರೆ ಬಂದಿತ್ತೇ?" ನಗುತ್ತಾ ಛೇಡಿಸಿದಳು ನವ್ಯಾ.

ಅವಳ ನಗುವಿಗೆ ತನ್ನ ನಗುವನ್ನು ಸೇರಿಸುತ್ತಾ, "ಕರೆ ಮಾಡಿದ್ದು ಒಬ್ಬ ರಾಜಕುಮಾರನೇ. ಆದರೆ ನನಗೆ ಆನಂದವಾದದ್ದು ರಾಜಕುಮಾರನಿಂದಲ್ಲ ಸಖೀ, ರಾಜಮಾತೆಯೊಂದಿಗೆ ಸಂಭಾಷಿಸಿದ್ದರಿಂದ" ಮತ್ತಷ್ಟು ನಕ್ಕಳು ತನ್ನ ಸಂಭಾಷಣೆಯ ಪರಿಗೆ.

"ಓಹೋ ಪರವಾಗಿಲ್ಲವೇ, ಎಲ್ಲಾ ಅತ್ತೆ ಮಗನ್ನ ಪಟಾಯಿಸಿದ್ರೆ ತಾವು ಅತ್ತೇನೇ ಒಲಿಸಿಕೊಂಡ್ಬಿಟ್ಟಿದ್ದೀರಾ" ಮತ್ತೆ ತಮಾಷೆ ಮಾಡಿದಳು.

"ಎಲ್ಲಾ ತಮ್ಮ ದಯೆಯಿಂದ ನವ್ಯಾ ಮೇಡಂ. ನೀವು ಮಂಗಳಾ ಅಮ್ಮನ್ನ ಪಟಾಯಿಸಿಲ್ವಾ? ಪಾಪ ಕಿಶೋರ್, 'ಇವಳು ಮನೆಗೆ ಬಂದಮೇಲೆ ನನ್ನ ಗೋಳು ಕೇಳೋರಿಲ್ಲದಂಗೆ ಆಗಿದೆ, ಕೆಲವೊಮ್ಮೆ ಇದು ಅವಳ ಅತ್ತೆ ಮನೆನಾ ಇಲ್ಲಾ ನನ್ನ ಅತ್ತೆ ಮನೇನಾ ಅಂತ ಅನುಮಾನ ಬರುತ್ತೆ' ಅಂತ ಒಂದೇ ಕಣ್ಣಲ್ಲಿ ಅಳ್ತಿರ್ತಾನೆ" ಜೋರಾಗಿ ನಕ್ಕಳು. ಅವಳ‌ ಮಾತಿಗೆ ನವ್ಯಾಳಿಗೂ ನಗು ತಡೆಯಲಾಗಲಿಲ್ಲ.

"ಅದು ಬಿಡು. ಹಳೆ ವಿಷ್ಯ. ಈಗ ನಿನ್ನ ವಿಷಯ ಹೇಳು.  ನಮ್ಮ ರಾಜಕುಮಾರನ ಹೆಸರೇನು?" ಕೇಳಿದಳು. 

"ಅಮ್ಮಾ ತಾಯಿ, ನೀನೇನೋ ಕೇಳ್ದೇ, ನಾನೇನೋ ಹೇಳ್ದೇ. ಅದ್ನೆಲ್ಲಾ ಗಂಭೀರವಾಗಿ ತಗೋಬೇಡ ಮತ್ತೆ" ಕೈ ಮುಗಿದಳು.

"ಮಾತು ಬದಲಿಸಬೇಡ ಸಮಾ. ನಾನೇನು ಮಹಾ ಕೇಳಿದ್ದು? ಹೆಸರೇನು ಅಂದ್ನಪ್ಪ"

"ಫೋನ್ ಮಾಡಿದವರ ಹೆಸರು ಅಭಿರಾಮ್ ಶರ್ಮಾ ‌ಅಂತ. ಆಮೇಲೆ ಮಾತಾಡಿದ್ದು ಅವರ ಅಮ್ಮ ಮೃದುಲಾ. ತುಂಬಾ ಒಳ್ಳೆಯವರು ಮಂಗಳಾ ಅಮ್ಮನ ತರಾನೇ. ಮೊನ್ನೆ ಮನೇಲೀ ಒಂದು ಪಾರ್ಟಿ ಇತ್ತು ಅಂದ್ನಲ್ಲ. ಅಲ್ಲಿ ಪರಿಚಯ ಆಗಿದ್ದು. ಅವರಪ್ಪ, ಮತ್ತೆ ತಂಗಿ ಆಕೃತಿ ಎಲ್ಲಾ ತುಂಬಾ ಹಿಡಿಸಿದರು. ನಾಳೆ ಅವರ ಮನೆಗೆ ಕರೆಯೋಕೆ ಫೋನ್ ಮಾಡಿದ್ರು" ಅಷ್ಟೂ ಹೇಳಿ ಮುಗಿಸಿದಳು.

"ಅಭಿರಾಮ್ ಶರ್ಮಾ.... ಈ ಹೆಸರು ಕೇಳಿದ ಹಾಗಿದೆಯಲ್ವಾ?"

"ನಮ್ಮ ಧನ್ವಂತರಿ ಆಸ್ಪತ್ರೆಗೆ ಇವರೂ ಒಬ್ಬ ಕಾಂಟ್ರಿಬ್ಯೂಟರ್ ಕಣೇ. ಮೀರಾ ಮೇಡಂ ಆವಾಗಾವಾಗ ಹೇಳ್ತಿರ್ತಾರಲ್ಲ ಶರ್ಮಾ ಎಂಪೈರ್ ಅಂತ, ಅದರ ಓನರ್" 

"ಹಾ ಕರೆಕ್ಟ್. ತುಂಬಾ ಒಳ್ಳೆಯ ಜನ ಅಲ್ವಾ"

"ನನಗೆ ಅವ್ರನ್ನ ಮೊನ್ನೆ ಪಾರ್ಟಿಯಲ್ಲಿ ನೋಡಿ ಶ್ರೀಮಂತರು ಹೀಗೂ ಇರ್ತಾರಾ ಅನ್ನಿಸಿಬಿಟ್ಟಿತು. ನಾನು ದುಡ್ಡಿರೋರೆಲ್ಲಾ ನನ್ನಪ್ಪ ಅಮ್ಮನ ಹಾಗೇ ಮಕ್ಕಳನ್ನು ಪರದೇಸಿಗಳನ್ನಾಗಿಸಿ, ಪಾರ್ಟಿ ಮಾಡ್ಕೊಂಡು, ಮೂರ್ಹೊತ್ತೂ ದುಡ್ಡಿಗೋಸ್ಕರ ಸಾಯ್ತಾ ಇರ್ತಾರೆ ಅಂದ್ಕೊಂಡಿದ್ದೆ. ಇವರನ್ನು ನೋಡಿದ ಮೇಲೆ ಗೊತ್ತಾಗಿದ್ದು ದುಡ್ಡಿನ ಜೊತೆ ಸಂಸ್ಕಾರಗಳು ಇರುವಂತ ಸಿರಿವಂತರೂ ಇದ್ದಾರೆ ಅಂತ. ಅವರು ಮಕ್ಕಳನ್ನು ಫ್ರೆಂಡ್ ತರ ನೋಡ್ತಾರೆ ಕಣೇ. ಮಕ್ಕಳ ಎಲ್ಲಾ ಬೇಕು ಬೇಡಗಳು ಗೊತ್ತಿದೆ ಅವರಿಗೆ. ನನ್ನ ಹಣೆಬರಹ ಹೀಗಿದೆ ಅಂತ ಎಲ್ಲಾ ಶ್ರೀಮಂತರ ಮಕ್ಕಳ ಹಣೆಬರಹ ಸರಿ ಇರೋಲ್ಲ ಅಂದ್ಕೊಬಿಟ್ಟಿದ್ದೆ. ಹುಚ್ಚಿ ನಾನು" ಗಂಭೀರವಾಗಿ ಆರಂಭವಾದ ಮಾತು ಮುಗಿಸುವಾಗ ಅವಳ ಕಣ್ಣಲ್ಲಿ ನೀರಿತ್ತು.

ನವ್ಯಾಳಿಗೆ ಸಂಕಟವಾಯಿತು. ಏನು ಹೇಳಬೇಕೆಂದು ತಿಳಿಯದೇ ಅವಳನ್ನು ಮಡಿಲಿಗೆಳೆದುಕೊಂಡು ಸುಮ್ಮನೇ ತಲೆ ನೇವರಿಸತೊಡಗಿದಳು.

ತನ್ನನ್ನು ತಾನೇ ಸಂಭಾಳಿಸಿಕೊಂಡವಳು ಎದ್ದು ಅವಳ ಹೆಗಲ ಮೇಲೆ ತಲೆಯಿಟ್ಟು "ಮೊನ್ನೆ ಅವರನ್ನು ನೋಡಿದಾಗಿನಿಂದ ನನಗೂ ಅವರಂಥ ಅಪ್ಪ ಅಮ್ಮ ಇರ್ಬೇಕಿತ್ತು ಅನ್ನೋ ಆಸೆ ವಿಪರೀತವಾಗಿದೆ ಕಣೇ. ನನಗೇ ಯಾಕೆ ಹೀಗಾಗಿದ್ದು? ನಾನು ಹೋದ ಜನ್ಮದಲ್ಲಿ ಯಾರಿಗೋ ತುಂಬಾ ಅನ್ಯಾಯ ಮಾಡಿದ್ದೆ ಅನ್ಸುತ್ತೆ ಅಲ್ವಾ. ಅದಕ್ಕೇ ನನ್ನ ಹತ್ರ ಎಲ್ಲಾ ಇದ್ರೂ ಏನೂ ಇಲ್ಲ ಅಂತಾಗಿರೋದು. ನವ್ಯಾ ನಾನು ಧನ್ವಂತರಿ ಆಸ್ಪತ್ರೆಯಲ್ಲಿ,ಆಶ್ರಯ ಸಂಸ್ಥೆಯಲ್ಲಿ ಯಾಕೆ ಕೆಲಸ ಮಾಡ್ತೀನಿ ಗೊತ್ತಾ? ನನಗೆ ಈ ಕೆಲಸ ನೆಮ್ಮದಿ ಕೊಡುತ್ತದೆ ಅನ್ನೋದು ಮೂಲ ಕಾರಣ ಹೌದಾದ್ರೂ, ಮನದ ಯಾವುದೋ ಒಂದು ಮೂಲೆಯಲ್ಲಿ ನಾನು ಈ ಜನ್ಮದಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಮುಂದಿನ ಜನ್ಮದಲ್ಲಾದ್ರೂ ನನಗೆ ಒಳ್ಳೆ ಕುಟುಂಬ ಸಿಗುತ್ತೇನೋ ಅನ್ನುವ ಆಸೆಯೂ ಇದೆ. ಇಂಥಾ ಅಪ್ಪ ಅಮ್ಮನೇ ಸಿಗೋದಾದ್ರೆ ನಂಗೆ ಬದುಕೇ ಬೇಡ" ನಿಟ್ಟುಸಿರು ಬಿಟ್ಟಳು.

"ಸಮಾ, ನಾವಿಬ್ರೂ ಮೊದಲು ಭೇಟಿಯಾಗಿದ್ದು ಸರಿಸುಮಾರು ಐದು ವರ್ಷಗಳ ಹಿಂದೆ. ಅವತ್ತಿಂದ ಇವತ್ತಿನವರೆಗೂ ನನ್ನ ಎಲ್ಲಾ ಸಮಸ್ಯೆಗಳನ್ನೂ ನೀನು ಹಂಚಿಕೊಂಡೆ. ನಾನಿವತ್ತು ಹೀಗಿದ್ದೀನಿ ಅಂದ್ರೆ ಇದಕ್ಕೆ ಕಾರಣವೇ ನೀನು. ನೀನು ನನ್ನ ಬದುಕಿನಲ್ಲಿ ಬರದಿದ್ದರೇ ನಾನು ಅದೇ ನರಕದಲ್ಲೇ ನರಳಿ ಯಾವತ್ತೋ ಒಂದು ದಿನ ಸಾಯ್ತಿದ್ದೆ. ನಿನ್ನ ಸ್ವಪ್ರಯತ್ನದಿಂದ ನನ್ನ ಅಲ್ಲಿಂದ ಬಿಡಿಸಿಕೊಂಡೆ. ಕಿಶೋರನಂತಹ ಸಂಗಾತಿಯನ್ನು ನನಗಂತ ಆರಿಸಿಕೊಟ್ಟೆ. ನನ್ನ ಮಾ ಬಾಬಾನ ಪಡಿಯಚ್ಚಿನಂತ ಅಪ್ಪ ಅಮ್ಮ, ತಲೆ ಮೇಲಿಟ್ಟು ಮೆರೆಸೋ ಮೈದುನ…. ಇದೆಲ್ಲಾ ನೀನೇ ಹಾಕಿರೋ ಭಿಕ್ಷೆ. ನನಗಾಗಿ ಇಷ್ಟೆಲ್ಲಾ ಮಾಡಿದವಳು ನಿನ್ನ ಯಾವ ನೋವನ್ನೂ ನನ್ನೊಟ್ಟಿಗೆ ಹಂಚಿಕೊಂಡಿಲ್ಲ. ಯಾಕೆ? ನಾನಷ್ಟು ಹೊರಗಿನವಳಾದೆನಾ ನಿನಗೆ? ಒಂದೇ ಒಂದು ಕ್ಷಣಕ್ಕೂ ನಿನ್ನ ಮನದಲ್ಲಿ ಇಷ್ಟೆಲ್ಲಾ ವೇದನೆ ಇದೆ ಅಂತ ತೋರಿಸ್ಕೊಳ್ಳದೇ ಇರೋಕೆ ಹೇಗೆ ಸಾಧ್ಯ?  ನನ್ನಿಂದಲೂ ಎಲ್ಲಾ ಮುಚ್ಚಿಟ್ಟೆಯಲ್ವೇ?" ಅವಳ ತಲೆದಡವುತ್ತಾ ಕೇಳಿದ್ದಳು.

ಅರೆಘಳಿಗೆ ಮೌನ.......

"ನಿನಗೆ ಗೊತ್ತಾ ನವ್ಯಾ, ವಿದೇಶದಲ್ಲಿದ್ದ ಕಾಲದಲ್ಲಿ ನಾನೆಷ್ಟು ನಿರಾಶಾವಾದಿಯಾಗಿದ್ದೆ ಅಂದ್ರೆ ಮೂರ್ನಾಲ್ಕು ಬಾರಿ ಆತ್ಮಹತ್ಯೆ ಮಾಡ್ಕೊಳ್ಳೋಣ ಅನ್ನಿಸಿದ್ದಿದೆ. ಅಷ್ಟು ದುರ್ಬಲಳಾಗಿದ್ದೆ. ನನ್ನಿಂದ ಬದುಕೋಕೆ ಸಾಧ್ಯವೇ ಇಲ್ಲ ಅನ್ನಿಸ್ತಾ ಇತ್ತು. ಆದ್ರೆ ಸಾಯೋಕೆ ಧೈರ್ಯ ಸಾಲ್ತಿರ್ಲಿಲ್ಲ. ಒಂದು ಸಾರಿ ಆ ಪ್ರಯತ್ನವನ್ನೂ ಮಾಡಿ........ ಯಕ್…... 

ಬೇಡಬಿಡು ನವ್ಯಾ. ನಾನದನ್ನು ನೆನಪಿಸ್ಕೊಳ್ಳೋಕೂ ಇಷ್ಟ ಪಡೋಲ್ಲ. ಸಾಯೋದು ಕಷ್ಟ ಅನ್ಸಿದಾಗ ಎದುರುಬಿದ್ದು ಬದುಕೋಣ ಅಂತ ನಿರ್ಧಾರ ಮಾಡಿದೆ.

ಬದುಕೋಕೆ ಒಂದು ಲಕ್ಷ್ಯ ಬೇಕಿತ್ತು. ಅಪ್ಪ ಅಮ್ಮನ ಮೇಲಿದ್ದ ತೀರದ ಕೋಪವನ್ನೇ ನನ್ನ ಲಕ್ಷ್ಯ ಮಾಡ್ಕೊಂಡೆ. ಅವರ ಎಲ್ಲಾ ಮಾತನ್ನು ವಿರೋಧಿಸೋಕಾದ್ರೂ ನಾನು ಬದುಕಬೇಕು ಅಂದ್ಕೊಂಡೆ. ಅವತ್ತಿಂದ ಅವರೆಲ್ಲಾ ನಿರ್ಧಾರನೂ ವಿರೋಧಿಸಿದೆ. ಲಂಡನಲ್ಲಿ ಇದ್ದು ಜಾಬ್ ಮಾಡು ಅಂದ್ರು, ಬಿಟ್ಟು ಇಲ್ಲಿಗೆ ಬಂದೆ. ಧನ್ವಂತರಿ ಸೇರಬೇಡ ಅಂದ್ರು, ಅಲ್ಲೇ ಕೆಲಸಕ್ಕೆ ಸೇರಿದೆ. ಆಶ್ರಯ ಸಂಸ್ಥೆಗೆ ಹೋಗಲೇಬಾರದು ಅಂದ್ರು, ನಾನು ಅಲ್ಲಿಗೇ ಹೋದೆ. ಒಟ್ಟಲ್ಲಿ ಅವ್ರು ಬೇಡ ಅಂದಿದ್ದೆಲ್ಲಾ ನನಗೆ ಬೇಕಿತ್ತು. ಅದರಿಂದ ನನಗೇನೂ ನಷ್ಟ ಆಗಿಲ್ಲ. ಯಾಕೆಂದ್ರೆ ಅವರ ಮೇಲಿನ ಜಿದ್ದಗೇ ಆದ್ರೂ ನಾನು ಮಾಡಿದ ಕೆಲಸ ಎಲ್ಲಾ ನನಗೆ ಆತ್ಮತೃಪ್ತಿ ಕೊಟ್ಟಿದೆ. ಇಷ್ಟೆಲ್ಲಾ ಆದ್ರೂ ನಾನು ನಿರಾಶಾವಾದಿನೇ ಆಗಿದ್ದೆ. ಬದುಕಿನಲ್ಲಿ ಯಾವ ಆಸಕ್ತಿನೂ ನನಗಿರಲಿಲ್ಲ. ಇಂಥಾ ನಿರರ್ಥಕ ಜೀವನ ನಡೆಸ್ತಾ ಇದ್ದ ನಾನು ಅವತ್ತು ಆ ಮೆಡಿಕಲ್ ಕ್ಯಾಂಪಲ್ಲಿ ನಿನ್ನ ನೋಡಿದ್ದು…... ಅವತ್ತಿಂದ ನನ್ನ ಯೋಚನೆಯ ದಿಕ್ಕೇ ಬದಲಾಯ್ತು ನೋಡು. ನನಗೆ ಸಮಸ್ಯೆಗಳಿತ್ತು ನಿಜ. ಆದರೆ ನಿನ್ನ ಸಮಸ್ಯೆ ಮುಂದೆ ನನಗಿದ್ದಿದ್ದು ಸಮಸ್ಯೆನೇ ಅಲ್ಲ. ನಿನ್ನ ಜೀವನ ಮೂರಾಬಟ್ಟೆಯಾಗಿತ್ತು. ಕನಸಲ್ಲೂ ನೆನಸಿಕೊಳ್ಳಲು ಭಯವಾಗೋ ಬದುಕು.... ಆದರೂ ನೀನು ಎಷ್ಟು ಜೀವನಪ್ರೀತಿ ಇಟ್ಟು ಬದುಕ್ತಿದ್ದೆ ಅನ್ನೋದೇ ಆಶ್ಚರ್ಯ ತಂದಿತ್ತು ನನಗೆ. 'ನನ್ನದಲ್ಲದ ತಪ್ಪಿಗೆ ನಾನ್ಯಾಕೆ ಸಾಯ್ಲಿ' ಅನ್ನೋ ನಿನ್ನ ಮಾತು ನಾನು ಕೇಳಿದ ದಿನ ಹೇಡಿ ಹಾಗೆ ಆತ್ಮಹತ್ಯೆ ಮಾಡ್ಕೋಳ್ಳೋಕೆ ಹೊರಟ್ಟಿದ್ದ ನನ್ನ ಮೇಲೆ ನನಗೇ ಜಿಗುಪ್ಸೆ ಬಂತು. ಹೌದಲ್ಲ….... ತಪ್ಪು ನನ್ನಪ್ಪ ಅಮ್ಮನದೇ ಹೊರತು ನನ್ನದಲ್ಲ. ನಾನ್ಯಾಕೆ ಸಾಯೋಕೆ ಹೊರಟ್ಟಿದ್ದೆ ಅನ್ನಿಸ್ತು. ಅವರ ಮೇಲಿನ ದ್ವೇಷನೇ ಬದುಕಿನ ಲಕ್ಷ್ಯವನ್ನಾಗಿಸಿ ನಿರರ್ಥಕ ಬಾಳು ಬಾಳುತ್ತಿರುವೆನಲ್ಲಾ, ಅವರು ನನ್ನ ಬಗ್ಗೆ ಕ್ಷಣಮಾತ್ರವಾದರೂ ಯೋಚಿಸುತ್ತಿದ್ದಾರಾ? ಇಲ್ಲವಲ್ಲ. ಮತ್ತೇ ನಾನ್ಯಾಕೆ ಹೀಗೆ ಹುಚ್ಚಿಯಂತೆ ಇರುವ ಒಂದು ಬದುಕನ್ನೂ ಹಾಳು ಮಾಡ್ಕೋತಿದ್ದೀನಿ ಅನ್ನಿಸಿತು. ಅಷ್ಟೇ….... ನನ್ನ ಬದುಕು ಬದಲಾಯಿತು. 

ನೀನು ನನ್ನ ಬಾಳಿನ ಲಕ್ಷ್ಯ ಆದೆ ನವ್ಯಾ. ಎಂತಹ ಪರಿಸ್ಥಿತಿಯಲ್ಲೂ ನಿನ್ನೆದುರು ಸೋಲೋದಿಲ್ಲ ಅಂತ ಬದುಕಿಗೆ ಸವಾಲು ಹಾಕಿದ ನಿನ್ನ ಸೋಲೋಕೆ ಬಿಡೋಲ್ಲ ಅಂತ ಪಣತೊಟ್ಟೆ. ನಿನ್ನ ಅಲ್ಲಿಂದ ಹೊರತಂದೆ. ನಿನಗೊಂದು ಸೆಲ್ಫ್ ಐಡೆಂಟಿಟಿ ಕೊಡ್ಬೇಕು ಅಂತ ನಿರ್ಧಾರ ಮಾಡಿ, ನಿನಗೆ ಧನ್ವಂತರಿಯಲ್ಲಿ ಕೆಲಸ ಕೊಡಿಸಿದ್ದು. ನೀನು ಈ ಹಾಳು ಸಮಾಜನ ಎದುರಿಸೋ ಧೈರ್ಯ ಬೆಳೆಸ್ಕೋ ಅಂತ. ಎಲ್ಲಾ ನಾನಂದುಕೊಂಡ ಹಾಗೇನೇ ಆಯ್ತು. ನನ್ನ ಪ್ರಯತ್ನಕ್ಕೆ ದೇವರೂ ಜೊತೆಯಾದನೇನೋ, ಕಿಶೋರ್ ನಿನ್ನ ಮದುವೆ ಆಗ್ತೀನಿ ಅಂತ ಹಟ ಹಿಡಿದು ನಿನ್ನ ಒಪ್ಪಿಸಿದ. ಅದು ನನ್ನ ಬದುಕಿನ ಮರೆಯಲಾರದ ದಿನ. ನಿನಗೆ ಅಪ್ಪ, ಅಮ್ಮ, ತಮ್ಮ ಎಲ್ಲಾ ಸಿಕ್ಕಿದ್ರು. ನಿನ್ನ ಖುಷಿ ನನ್ನ ಬದುಕಿನ ಅಸ್ಥಿತ್ವ ನವ್ಯಾ. ನನ್ನ ಬದುಕಿಗೆ ಸ್ಪೂರ್ತಿ, ಧ್ಯೇಯ, ಲಕ್ಷ್ಯ, ಆದಿ, ಅಂತ್ಯ ಎಲ್ಲಾ ನೀನೇ. ನನ್ನ ಅಮ್ಮ, ಮಗಳು, ಅಕ್ಕ,ತಂಗಿ ಎಲ್ಲಾ ಸಂಬಂಧಗಳೂ ನೀನೆ. ನಿನಗೆ ಬೇಜಾರಾದ್ರೆ ನನಗೆ‌ ತಡ್ಕೊಳ್ಳೋಕ್ಕಾಗಲ್ಲ. ಅದಕ್ಕೆ‌ ನನ್ನ ಸಂತೋಷದಲ್ಲಿ ನಿನಗೆ ಪೂರ್ತಿ ಪಾಲಿದೆ. ಇನ್ನು ನನ್ನ ನೋವು ನಿನ್ನ ಮೇಲೆ ಅವಲಂಬಿತ. ಅಪ್ಪ, ಅಮ್ಮ, ಬಂಧು, ಬಳಗ ಎಲ್ಲಾ ಯಾವತ್ತೋ ಬಿಟ್ಟಾಗಿದೆ. ಆದ್ರೂ ಕೆಲವೊಮ್ಮೆ ಮನದಾಳದಲ್ಲಿ ಯಾವತ್ತೋ ಉಳಿದ ಕಹಿ ಹೀಗೆ ಹೊರಬರುತ್ತೆ ಅಷ್ಟೇ. ಅವರಿಂದ ಯಾವ ನಿರೀಕ್ಷೆಯೂ ಇಲ್ಲ ನನಗೆ. ಆದರೂ ಒಮ್ಮೊಮ್ಮೆ ಮನಸು ಅಂಕೆ ಮೀರುತ್ತೆ ಕಣೇ ಆಗ ನಂಗೇ ಗೊತ್ತಾಗದೇ ಹೀಗೆ ಕಣ್ಣಲ್ಲಿ ನೀರು ಸುರಿಯುತ್ತೆ. ಮೊನ್ನೆ ಶರ್ಮಾ ಫ್ಯಾಮಿಲಿ ನೋಡಿದಲ್ಲಿಂದ ಮನಸ್ಯಾಕೋ ಹಳಿ ತಪ್ಪಿತ್ತು. ಅದು ಹೀಗೆ ಇವತ್ತು ನಿನ್ನೆದುರು ಹೊರಗೆಬಂತಷ್ಟೇ."

ಅವಳ ಮಾತು ಮುಗಿಯುವ ಮುನ್ನವೇ ನವ್ಯಾ ಅವಳನ್ನು ಗಟ್ಟಿಯಾಗಿ ಅಪ್ಪಿದ್ದಳು.

"ನವ್ಯಾ, ನನ್ನ ಮನೆ, ಬಂಧು ಬಳಗ ಇವರಿಗೆಲ್ಲಾ ಏನಾದ್ರೂ ನನಗೇನು ಅನಿಸದು. ಅಷ್ಟರ ಮಟ್ಟಿಗೆ ಅವರ ಬಗ್ಗೆ ನನ್ನ ಮನಸ್ಸು ವಿಮುಖವಾಗಿದೆ. ಆದ್ರೆ ನಿನಗೆ ಏನಾದ್ರೂ ಆದ್ರೆ….... ತಡ್ಕೊಳ್ಳೋಕಾಗಲ್ಲ ನವ್ಯಾ. ನನಗೆ ಗೊತ್ತು. ಮನೆಯಲ್ಲಿ ನೀನು ಹಿಂದೆ ಏನ್ಮಾಡ್ತಿದ್ದೆ ಅಂತ ಗೊತ್ತಾದ್ರೇ ಮುಂದೇನು ಅನ್ನೋ ಭಯ ನಿನಗಿದೆ‌ ಅಂತ. ಬಟ್ ಟ್ರಸ್ಟ್ ಮೀ, ಸಧ್ಯದಲ್ಲೇ ಇದಕ್ಕೊಂದು ಪರಿಹಾರ ಹುಡುಕ್ತೀನಿ. ಆದ್ರೆ ನೀನು ಮಾತ್ರ ಬೇಜಾರಾಗ್ಬೇಡ. ಕಷ್ಟ ಯಾರಿಗಿಲ್ಲ ಹೇಳು? ಅಂತಾ ದೇವರಿಗೂ ಕಷ್ಟ ತಪ್ಲಿಲ್ಲ. ಇನ್ನು ನಾನು, ನೀನು ಯಾವ ಲೆಕ್ಕ? ಕಷ್ಟಗಳು ಇಲ್ಲದೆ ಬದುಕಿಗೆ ಬೆಲೆ ಇಲ್ಲ. ಬದುಕಿನ ಸಾರ್ಥಕತೆ ಇರೋದು ಕಷ್ಟಗಳನ್ನು ಎದುರಿಸಿ ನಿಲ್ಲೋದರಲ್ಲಿ. ಇದನ್ನ ನಂಗೆ ಕಲಿಸಿದ್ದು ನೀನೇ..... " ನಕ್ಕಳು.

"ನಾನು ಆಗ ಹೇಗೆ ಯೋಚಿಸ್ತಿದ್ನೋ ನೀನು ಈಗ ಹಾಗೇ ಯೋಚಿಸ್ತಿದ್ದೀಯ ಸಮನ್ವಿತಾ"

"ಬಟ್ ನೀನು, ನಾನಾಗ ಹೇಗಿದ್ನೋ ಹಾಗಾಗಿದ್ದೀಯ ಈಗ. ಅದಲಿ ಬದಲಿ ಆಗಿದೆ ನಮ್ಮ ಯೋಚನೆಗಳು" ಮತ್ತೆ ಇಬ್ಬರೂ ನಕ್ಕರು.

"ಹೌದು ಅಭಿರಾಮ್ ನೋಡೋಕೆ ಹೇಗಿದ್ದಾರೆ?" ಒಂದು ನವಿರಾದ ಮೌನದ ನಂತರ ತುಂಟ ಧ್ವನಿಯಲ್ಲಿ ಕೇಳಿದಳು ನವ್ಯಾ.

"ಹೇಗಿದ್ದಾರೆ ಅಂದ್ರೆ? ನಾರ್ಮಲ್ ಮನುಷ್ಯರ ಹಾಗೇ ಇದ್ದಾರೆ"

"ಅಂದ್ರೆ? ಸ್ವಲ್ಪ ವಿವರಿಸಿ ಹೇಳ್ತಿಯಾ?" 

"ಅಂದ್ರೆ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇರಬೇಕಾದ ಕಡೆನೇ ಇದೆ ಅಂತ. ಈಗ ಅವರ ವಿವರ ತಗೊಂಡು ಏನು ಮಾಡ್ತೀಯಾ?" ರೇಗಿದಳು.

"ನಂಗ್ಯಾಕೋ ಡೌಟ್"

"ಏನು ನಿನ್ನ ಡೌಟ್?"

"ಅಲ್ಲಾ, ಮನೆಗೆ ಬಾರಮ್ಮ ಅಂತ ರಾಜಮಾತೆ ಹೇಳಿದ್ರೆ ಸಾಕಿತ್ತಪ್ಪ. ರಾಜಕುಮಾರನೇ ಕರೆ ಮಾಡಿ ಮಾತಾಡೋಕಿದೆ ಮನೆಗೆ ಬನ್ನಿ ಅಂತ ಕರ್ದಿದ್ದಾನೆ ಅಂದ್ರೆ......"

"ಅಂದ್ರೆ‌...... ಏನು?"

"ಅದೇ ಏನೂ ಅಂತಾ"

"ಏನೂ ಅಂತೆ ಏನು….. ಏನೂಂದ್ರೆ ಆನೆ ಮನೆ ಗೂನು"

"ನೋಡು ನನಗೆ 100% ಅನ್ಸತ್ತೆ ನಮ್ಮ ರಾಜಕುಮಾರ ತಮ್ಮ ಹೃದಯವನ್ನು ಕಳ್ಕೊಂಡು ನರಳುತ್ತಿರಬಹುದು ಅಂತ. ಅದಕ್ಕೆ……."

"ಅದಕ್ಕೆ.......? ಮುಂದುವರೆಸು"

"ಅದಕ್ಕೆ ತಮ್ಮ ಹೃದಯ ಅಪಹರಿಸಿದ ರಾಜಕುಮಾರಿ ವೈದ್ಯೆಯೂ ಆಗಿರುವುದರಿಂದ ಸ್ವಾಮಿ ಕಾರ್ಯ, ಸ್ವ ಕಾರ್ಯ ಎರಡೂ ಆಗುತ್ತೆ ಅಂತಾ ತಮಗೆ ಕರೆ ಮಾಡಿದ್ದಾರೆ. ಪಾಪ ಅಷ್ಟು ಪ್ರೀತಿಯಿಂದ ಕರೆ ಮಾಡಿದ್ರೇ ನೀನು ಬಾಯಿಗೆ ಬಂದ್ಹಾಗೆ ಮಾತಾಡಿದೆ."

"ನಾನೇನು ಬಾಯಿಗೆ ಬಂದ್ಹಾಗೆ ಮಾತಾಡಿದ್ದು"

"ಮತ್ತೆ? ನಿನ್ನ ಮಾತು ಕೇಳೋಕಾಗ್ದೇ ತಾನೇ ಅಮ್ಮನಿಗೆ ಫೋನ್ ಕೊಟ್ಟಿದ್ದು. ಪಾಪ ಒಂದಷ್ಟು ಸರಸ ಸಲ್ಲಾಪ ಮಾಡೋಣ ಅಂದ್ಕೊಂಡು ಫೋನ್ ಮಾಡಿದ್ದನೇನೋ? ನೀನು ಬರೀ ಪ್ರಲಾಪ ಮಾಡಿ ಫೋನಿಟ್ಟೆ. ಓ..... ಕರೆಕ್ಟ್ ನಾನಿದ್ನಲ್ಲಾ ಶಿವಪೂಜೆಲೀ ಕರಡಿ ತರಾ. ಅದಕ್ಕೇ ಮೇಡಂ ಮೆಸೇಜಲ್ಲಿ ಸಂಭಾಷಿಸಿದ್ದೋ...... ಪ್ರೇಮ ಸಂದೇಶ...... ಆಹಾ… ಅಲ್ನೋಡು ಮುಖವೆಲ್ಲಾ ಎಷ್ಟು ಕೆಂಪಾಯ್ತು"

"ನವ್ಯಾ ...... ಸುಮ್ನಿರು ಬೇಡ" ಸಮನ್ವಿತಾಳ ಕದಪುಗಳು ಕೆಂಪಾಗಿದ್ದಂತೂ ನಿಜ.

"ನಾಚಿಕೆ ಮುಖದ ತುಂಬಾ..... ಅದಕ್ಕೇ ಮೆಸೇಜ್ ನೋಡಿ ಬಹಳ ನಗುಬರ್ತಿತ್ತು ರಾಜಕುಮಾರಿಯವರಿಗೆ......  ಏನು...? ಲವ್ ಎಟ್ ಫಸ್ಟ್ ಸೈಟಾ...."

"ನವ್ಯಾ...." ಮನೆತುಂಬಾ ಅಟ್ಟಿಸಿಕೊಂಡು ಹೋದಳು ಸಮನ್ವಿತಾ. ಹಾಗೂ ಹೀಗೂ ಅಳುವನ್ನು ಮರೆತು ಇಬ್ಬರೂ ನಕ್ಕರು.......

ರಾತ್ರಿ ನವ್ಯಾಳನ್ನು ಮನೆಗೆ ಬಿಟ್ಟು ಅಲ್ಲೊಂದಿಷ್ಟು ಹರಟೆ ಹೊಡೆದು ಮನೆಗೆ ಬಂದು ಮಲಗಿದವಳ ಮನ ಪ್ರಶಾಂತವಾಗಿತ್ತು. ನಾಳೆ ಮಧ್ಯಾಹ್ನ ಮೃದುಲಾ ಅವರ ಮನೆಗೆ ಹೋಗಬೇಕೆಂದು ನೆನಪಿಸಿಕೊಂಡಳು. ನವ್ಯಾಳ ಮಾತುಗಳು ನೆನಪಾಗಿ ತುಟಿಯಂಚಿನಲ್ಲಿ ತಾನೇತಾನಾಗಿ ನಗುವರಳಿದಾಗ ತಲೆಗೊಂದು ಮೊಟಕಿಕೊಂಡು ಮಗ್ಗುಲಾದಳು.

ಇತ್ತ ನವ್ಯಾಳ ತಲೆ ತುಂಬಾ ಅಭಿರಾಮ್ ಇದ್ದ. ಅವಳ ಮನ ಏನೋ ಲೆಕ್ಕಾಚಾರದಲ್ಲಿತ್ತು. ಕಿಶೋರನೊಂದಿಗೆ ಎಲ್ಲಾ ವಿಚಾರ ಹೇಳಿ ತನ್ನ ಯೋಚನೆಯನ್ನೂ ತಿಳಿಸಿದಳು. ಅವನಿಗೂ ಅವಳ ಮಾತಿನಲ್ಲಿ ಅರ್ಥವಿದೆ ಎನಿಸಿತು. ಅಭಿರಾಮ್ ಬಗ್ಗೆ ನಾಳೆಯಿಂದಲೇ ಮಾಹಿತಿ ಸಂಗ್ರಹಿಸಬೇಕೆಂದು ನಿರ್ಧರಿಸಿದ ಹಿತೈಷಿಗಳಿಬ್ಬರ ಮನದಲ್ಲಿ ಹೇಗಾದರೂ ಸಮನ್ವಿತಾಳ ನೋವನ್ನು ತಮ್ಮ ಕೈಲಾದಷ್ಟಾದರೂ ಶಮನಗೊಳಿಸಲೇಬೇಕೆಂಬ ಇಂಗಿತವಿತ್ತು.

‌‌*********ಮುಂದುವರೆಯುತ್ತದೆ************



ಅನೂಹ್ಯ 20

ಸತ್ಯಂ ರಾವ್ ಅವರು ಸಂತೋಷದ ತುತ್ತತುದಿಯಲ್ಲಿ ಇದ್ದರು. ಇದುವರೆಗೆ ಎಲ್ಲಾ ತಾನೆಣಿಸಿದಂತೆಯೇ ನಡೆದಿದೆ. ಮುಂದೆಯೂ ಹಾಗೇ ನಡೆಯುತ್ತದೆ ಎಂಬ ಹಮ್ಮಿನಲ್ಲಿದ್ದರು.

"ಎಲ್ಲಾ ಸರಿ ಸತ್ಯ. ಆದರೆ ಒಂದು ವಿಷಯ. ನೀನ್ಯಾಕೆ ಸಮನ್ವಿತಾ ಮನೆಯಿಂದ ಹೋಗ್ತೀನಿ ಅಂದಾಗ ಒಪ್ಪಿಕೊಂಡಿದ್ದು? ಅವಳಿಲ್ಲೇ ಇದ್ದಿದ್ರೆ ನಮ್ಮ ಕಂಟ್ರೋಲಿನಲ್ಲಿ ಇರ್ತಿದ್ಲು. ಈಗ‌ ಅವಳು ಬೇರೆ ಕಡೆ‌ ಇರೋದು. ಏನು ಮಾಡ್ತಾಳೆ‌ ಒಂದೂ ಗೊತ್ತಾಗೋದಿಲ್ಲ. ಯಾಕೆ ಹೀಗೆ ಮಾಡ್ದೇ?" ಈಗಷ್ಟೇ ಬಣ್ಣದಿಂದ ಅಲಂಕೃತವಾದ ಬೆರಳುಗಳನ್ನೇ ನೋಡುತ್ತಾ ಕೇಳಿದರು ಮಾಲಿನಿ.

"ಅವಳು ಎಲ್ಲಿದ್ರೂ ನಮ್ಮಿಬ್ಬರ ಕಂಟ್ರೋಲಿಗೆ ಯಾವತ್ತೂ ಸಿಕ್ಕಲ್ಲ ಬಿಡು. ಅವಳು ಇಲ್ಲಿದ್ದಿದ್ರೆ ನನ್ನ ಪ್ಲಾನ್ ವರ್ಕೌಟ್ ಮಾಡೋದು ಕಷ್ಟ ಆಗಿರೋದು. ನಾವು ಅವಳ ಮದ್ವೆ ಪ್ಲಾನ್ ಮಾಡ್ತಿದ್ದೀವಿ ಅನ್ನೋ ಸಣ್ಣ ಅನುಮಾನ ಬಂದ್ರೂ ಸಾಕು.... ಜನ್ಮ ಜಾಲಾಡಿ ಬಿಡ್ತಿದ್ಲು. ನಾನು ಏನು ಮಾಡೋದು ಅಂತಾ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅವಳೇ ಬಂದು ನಾನು ಶಿಫ್ಟ್ ಆಗ್ತೀನಿ ಅಂದ್ಲು. ನನಗೂ ಅದೇ ಬೇಕಾಗಿತ್ತು. ನನ್ನ ಕೆಲ್ಸ ಆಗೋವರೆಗೂ ಅವಳಿಗೆ ಸ್ವಲ್ಪವೂ ಅನುಮಾನ ಬರ್ಬಾರದು ಅಂತ. ಅದಕ್ಕೆ ಇದೇ ಒಳ್ಳೆ ದಾರಿ ಅನಿಸಿ ಹೋಗು ಅಂದೆ" ತನ್ನ ಮಾತಿನಿಂದ ಮಗಳು ಎಷ್ಟು ನೊಂದುಕೊಂಡು ಮನೆಬಿಟ್ಟಳೆಂಬ ಅರಿವಿಲ್ಲದ ರಾವ್ ಎಂಬ ಧನದಾಹಿ ತನ್ನ ಹೆಂಡತಿಗೆ ಕಾರಣ ಹೇಳುತ್ತಿದ್ದ.

"ಅದೇನೋ ಸರಿ.ಆದರೆ ನಿನ್ನ ಕೆಲಸ ಯಶಸ್ವಿಯಾಗಿ ಮದುವೆ ನಿಶ್ಚಯವಾದ ಮೇಲೆ, ಮನೆ ಬಿಟ್ಟ ಮಗಳು ನಿನಗೆ ತಿರುಗಿಬಿದ್ದರೇ?" ಭವಿಷ್ಯದ ಮುನ್ಸೂಚನೆಯಂತೆ ಕೇಳಿದ್ದರು ಮಾಲಿನಿ.

"ಅವಳನ್ನು ಹೇಗೆ ಕರೆಸಬೇಕೆಂದು ತಿಳಿದಿದೆ ನನಗೆ. ಆ ಯೋಚನೆ ಬಿಡು. ನಮ್ಮ ಮಾತನ್ನು ತೆಗೆದುಹಾಕಬಹುದು ಆದರೆ ಅವಳು ಆ ಸಚ್ಚಿದಾನಂದ ಮತ್ತು ಮೃದುಲಾರ ಮಾತಿಗೆ ಬೆಲೆ ಕೊಟ್ಟೇ ಕೊಡುತ್ತಾಳೆ. ಅವರು ಕರೆದರೆ ಯಾಕೆ ಬರೋಲ್ಲ ಅಂತ ನಾನೂ ನೋಡ್ತೀನಿ" ಎಂದು ಮತ್ತಷ್ಟು ವಿಸ್ಕಿ ಹೊಟ್ಟೆಗಿಳಿಸಿದ್ದರು.

ಹೊರಗೆ ನಿಂತು ಇವರ ಮಾತುಗಳನ್ನು ಅರ್ಧಂಬರ್ಧ ಕೇಳಿಸಿಕೊಂಡ ಚೈತಾಲಿ ಗಾಬರಿಯಾಗಿದ್ದಳು.....!!

ಅವಳಿಗೆ ಸ್ಪಷ್ಟವಾಗಿ ಏನೊಂದೂ ತಿಳಿಯದಿದ್ದರೂ ಸಮನ್ವಿತಾಳಿಗೆ ಅರಿವಿಲ್ಲದೇ ಯೋಜನೆಯೊಂದು ತಯಾರಾಗುತ್ತಿದೆ ಎಂಬುದು ಗೊತ್ತಾಗಿತ್ತು. ಅವಳಿಗೆ ಸಮನ್ವಿತಾಳೆಂದರೆ ಹೇಳಲಾರದಷ್ಟು ಅಂತಃಕರಣ.

ಹಣವೆಂದು ಸಾಯುವ ಪಿಶಾಚಿಗಳ ನಡುವೆ ಅವಳೊಬ್ಬಳೇ ಮಂದಾನಿಲದಂತೆ ಇದ್ದವಳು.

ಕೂಡಲೆ ತಲೆಯೋಡಿಸಿ  ಲಾನ್ ಬಳಿ ಬಂದು ಸಮನ್ವಿತಾಳಿಗೆ ಕರೆ ಮಾಡಿ ತನ್ನ ಬಾಸ್ ಏನೋ ಷಡ್ಯಂತ್ರ ಹೆಣೆಯುತ್ತಿದ್ದಾರೆಂದೂ, ಆ ಕುತಂತ್ರದಲ್ಲಿ ನಿಮ್ಮನ್ನು ಎಳೆದಿರುವ ಬಗ್ಗೆ ಅನುಮಾನವಿದೆಯೆಂದೂ ತಿಳಿಸಿಬಿಟ್ಟಳು ಹುಡುಗಿ.

ಅವಳ ಮಾತು ಕೇಳಿಸಿಕೊಂಡ ಸಮನ್ವಿತಾ ಅದೇನೆಂದು ತೀವ್ರವಾಗಿ ಯೋಚಿಸಲಿಲ್ಲವಾದರೂ ತಾನು ಜಾಗ್ರತೆಯಾಗಿರುವೆನೆಂದು ಚೈತಾಲಿಗೆ ಸಮಾಧಾನ ಹೇಳಿದ್ದಳು.

ಚೈತಾಲಿಯ ಮಾತಿನ ಒಳಾರ್ಥ ಸಧ್ಯದಲ್ಲೇ ತಿಳಿಯಲಿತ್ತು ಸಮನ್ವಿತಾಳಿಗೆ.  

                **********************

ತನ್ನ ಹಾಗೂ ಸಮನ್ವಿತಾಳ ವಿವಾಹ ಪ್ರಸ್ತಾಪದ ಬಗ್ಗೆ ತಿಳಿದು ಅಭಿರಾಮ್ ದಂಗಾಗಿದ್ದ. ತಂದೆಗೆ‌ ಯೋಚಿಸಿ ನಿರ್ಧಾರ ತಿಳಿಸುವೆನೆಂದು ಹೇಳಿ ರೂಮಿಗೆ ಬಂದವನ ತಲೆ ಕೆಟ್ಟಂತಾಗಿತ್ತು. 

ಸಮನ್ವಿತಾಳೊಂದಿಗೆ ತನ್ನ ವಿವಾಹ.....!!

ಇಂಥಾ ನಿರೀಕ್ಷೆಯೇ ಅವನಿಗಿರಲಿಲ್ಲ. ಅವರ ಬಿಸ್ನೆಸಿನಲ್ಲಿ ಹೂಡಿಕೆ ಮಾಡಲು ಕೇಳಬಹುದು ಇಲ್ಲಾ ಜಂಟಿಯಾಗಿ ಹೊಸ ಬಿಸ್ನೆಸ್ ಶುರುಮಾಡುವ ಪ್ರಸ್ತಾವನೆ ಇರಬಹುದು ಎಂದುಕೊಂಡಿದ್ದನಷ್ಟೇ.

ಆದರೆ ಮದುವೆ....... ಅದೂ ಯಾರೊಂದಿಗೆ?

ಎಲ್ಲಿ ನೋಡಿರುವೆನೆಂದು ತಿಳಿಯದೇ ಯಾರ ಬಗ್ಗೆ ತಲೆಕೆಡಿಸಿಕೊಂಡು ಯೋಚಿಸುತ್ತಿರುವೆನೋ ಅವಳೊಂದಿಗೆ.....!!

ಅಸಲಿಗೆ ಮದುವೆಯ ಬಗ್ಗೆ ಅವನು ಯೋಚಿಸಿರಲೇ ಇಲ್ಲ. ವ್ಯವಹಾರ, ಕಲೆ, ಸಂಗೀತ, ಕುಟುಂಬ, ಸ್ನೇಹಿತರ ನಡುವೆ ಆರಾಮಾಗಿದ್ದ ಅವನು. ಈಗ ಒಂದೇ ಬಾರಿಗೆ ಈ ಪ್ರಸ್ತಾಪ.

ಹುಡುಗಿ ಬೇರ್ಯಾರೋ ಆಗಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದನೇನೋ, ಆದರೆ ಸಮನ್ವಿತಾಳನ್ನು ನೋಡಿದಾಗಿನಿಂದ ಅವನೇ ವಿಪರೀತ ಗೊಂದಲದಲ್ಲಿದ್ದ. ಕೊಡವಿಕೊಳ್ಳಲು ನೋಡಿದಷ್ಟೂ ಮೆದುಳು ಹಟ ಹಿಡಿದು ಅವಳನ್ನೇ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಿಡಿತ ಮೀರುತ್ತಿರುವ ಮನಸ್ಸಿನ ಲಗಾಮು ಹಿಡಿಯಲು ಪ್ರಯತ್ನಿಸಿ ಸೋತಿದ್ದ.

ಅವನ ಅಂಕೆ ಮೀರಿದ ಅವಳ ನೆನಪು ಅವನಿಗೆ ಅಪ್ಯಾಯಮಾನವಾಗತೊಡಗಿದ್ದು ಸುಳ್ಳಲ್ಲ. ಬೇಡವೆಂದಷ್ಟು ತಲೆಯೊಳಗೆ ಸುಳಿಸುಳಿದು ಕಾಡುವ ಸ್ಮೃತಿ ಹಿತವೆನಿಸತೊಡಗಿತ್ತು. ಮನದೊಳಗೆ ಚಿಟ್ಟೆಗಳು ಹಾರಾಡಿದಂತೆ…….

ಆದರೆ......

ಅವಳು ಸತ್ಯಂ ರಾವ್ ಅವರ ಮಗಳು. ಆ ವ್ಯಕ್ತಿ ಶಕುನಿಯಂತೆ. ಈ ವಿವಾಹ ಪ್ರಸ್ತಾಪದ ಹಿಂದೆ ಏನೋ ಗೂಢವಾದ ಉದ್ದೇಶವಿರುವುದಂತೂ ಸ್ಪಷ್ಟ. ಅವರ ವ್ಯವಹಾರ ಪಾತಾಳದಲ್ಲಿದೆ. ಈ ವಿವಾಹಕ್ಕೂ, ನಷ್ಟದಲ್ಲಿರುವ ಅವರ ವ್ಯವಹಾರಕ್ಕೂ ಸಂಬಂಧವಿದೆಯೇ? ಅವನ ಮೆದುಳು ಸರಿಯಾಗಿಯೇ ಲೆಕ್ಕಾಚಾರ ಹಾಕಿತು. ಕೂಡಲೇ ತನ್ನ ಪಿ.ಎ ಗೆ ಫೋನ್ ಮಾಡಿ ಆದಷ್ಟು ಬೇಗ ರಾವ್ ಅವರ ಬಿಸ್ನೆಸಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ತನಗೆ ವಿವರ ನೀಡುವಂತೆ ಹೇಳಿದ. ಸಿಕ್ಕ ವಿವರಗಳನ್ನು ಪರಿಶೀಲಿಸಿದಾಗ ಅವನ ಊಹೆ ನಿಜವೆನಿಸಿತು.

ಬಹುಶಃ ವ್ಯವಹಾರದ ಗತಿ ಬದಲಾಯಿಸಲು ಈ ವಿವಾಹವನ್ನು ಮೆಟ್ಟಿಲಾಗಿ ಬಳಸಲಿದ್ದಾರೆ ಎನಿಸಿತು. 

ತಂದೆ ಮಗಳು ಒಟ್ಟಾಗಿ ಕಾರ್ಯಗತಗೊಳಿಸಿದ ಯೋಜನೆಯೇ?

ಇರಬೇಕು......

ಸಂಬಂಧಗಳನ್ನು ವ್ಯವಹಾರಕ್ಕಾಗಿ ಬಳಸುವವರ ಜೊತೆ ಸಂಬಂಧ ಬೆಳೆಸುವುದು ಎಷ್ಟರ ಮಟ್ಟಿಗೆ ಸರಿ?

ಈ ಮನೆಯಲ್ಲಿ ಸಂಬಂಧ ಹಾಗೂ ವ್ಯವಹಾರಕ್ಕೆ ಸ್ಪಷ್ಟ ವ್ಯತ್ಯಾಸವಿದೆ. ಈಗ ಇವಳಿಂದಾಗಿ ಆ ವ್ಯತ್ಯಾಸದ ಗೆರೆ ಅಳಿಸಿದರೇ?

ತಂದೆಯ ಯೋಜನೆಯ ಎಲ್ಲಾ ಹಂತದಲ್ಲೂ ಮಗಳು ಕೈ ಜೋಡಿಸಿರಬಹುದೇ? ಅದಕ್ಕೇ ಅಂದು ಪಾರ್ಟಿಯಲ್ಲಿ ನಯವಾಗಿ ವರ್ತಿಸಿ ಮನೆಯವರ ನಂಬಿಕೆ ಗೆದ್ದಳೇ?

ಯಾಕೋ ಸಮನ್ವಿತಾಳ ಬಗ್ಗೆ ಹಾಗೆ ಯೋಚಿಸಲು ಅವನೇ ಹಿಂಜರಿದ. ಅವಳ ಪ್ರತೀ ನಡವಳಿಕೆಯಲ್ಲಿ ನೇರತೆ ಇತ್ತೇ ಹೊರತು ತೋರಿಕೆ ಇರಲಿಲ್ಲ. ಸೋಗಿನ ನಟನೆಯವರು ಎದುರಿರುವವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಮಾಡಲಾರರು. ಅವಳ ನೋಟದಲ್ಲಿ ಸತ್ಯವಿತ್ತಷ್ಟೇ. ಬಹುಶಃ ತಂದೆಯ ಪರಿಸ್ಥಿತಿಗೆ ಮರುಗಿ ಒಪ್ಪಿಕೊಂಡಿರಬಹುದು ಎಂದುಕೊಂಡ.

ಈಗ ನಾನೇನು ಮಾಡಬೇಕು? ನಾನ್ಯಾರನ್ನೂ ಪ್ರೀತಿಸಿಲ್ಲ. ಹರೆಯದ ಪ್ರೀತಿ ಪ್ರೇಮದ ಬಗ್ಗೆ ನನಗ್ಯಾವ ನಂಬಿಕೆಯೂ ಇಲ್ಲ. ಪ್ರೀತಿ, ಪ್ರೇಮವೆಲ್ಲ ವಿವಾಹದ ನಂತರ ಎಂಬುದು ನನ್ನ ನಿಲುವು. ಹಾಗಾಗಿ ವಿವಾಹಕ್ಕೆ ನನ್ನಿಂದ ಯಾವ ವಿರೋಧವೂ ಇಲ್ಲ. 

ಆದರೆ ಸಮಸ್ಯೆ ಇರುವುದು ರಾವ್ ಪರಿವಾರದಲ್ಲಿ.

ತೀರಾ ದುರಾಸೆಯ ಜನ. ಈ ಪ್ರಸ್ತಾಪ ದೂರಾಲೋಚನೆಯಿಂದಲೇ ಕೂಡಿರುತ್ತದೆ. ಬಹುಶಃ ಸಮನ್ವಿತಾ ಅಂತಹ‌ ಹೆಣ್ಣಲ್ಲದಿರಬಹುದು. 

ಆದರೆ ಅವಳೊಂದಿಗಿನ ವಿವಾಹ ಸಮಸ್ಯೆಯನ್ನು ತಂದೊಡ್ಡುವುದಂತೂ ದಿಟ. ಇದು ಕೇವಲ ನನ್ನ ಪರಿವಾರದ ಪ್ರಶ್ನೆಯಲ್ಲ. ನಮ್ಮನ್ನೇ ನಂಬಿಕೊಂಡು, ನಮಗಾಗಿಯೇ ದುಡಿಯುತ್ತಿರುವ ಶರ್ಮಾ ಎಂಪೈರ್ ನ ಲಕ್ಷಾಂತರ ಜನರ ಬದುಕಿನ ಪ್ರಶ್ನೆ….. ಅವರು ನನ್ನ ಪರಿವಾರವಲ್ಲವೇ? ಅವರ ಜವಾಬ್ದಾರಿಯೂ ನನ್ನ ಮೇಲಿದೆಯಲ್ಲವೇ?

ಈಗೇನೋ ನಾನು ಸಮನ್ವಿತಾಳನ್ನು ಮದುವೆಯಾಗಲು ಒಪ್ಪಿ, ಅವಳಪ್ಪ ರಾವ್ ಎಂಬ ಕುಟಿಲ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ, ನಾಳೆ ನನ್ನ ಈ ನಿರ್ಧಾರದಿಂದ ನನ್ನ ವ್ಯವಹಾರಕ್ಕೆ, ನನ್ನ ನಂಬಿರುವ ಲಕ್ಷಾಂತರ ಜನರಿಗೆ ಅನ್ಯಾಯವಾದರೆ…?

ಇಲ್ಲ......! ಹಾಗಾಗಬಾರದು…...! ಖಂಡಿತ ಹಾಗಾಗಬಾರದು.....!

ಹಾಗಾದರೆ ಈ ಪ್ರಸ್ತಾಪ ಇಲ್ಲಿಗೇ ಕೈ ಬಿಡಲೇ?

ಪಾಪ ಸಮನ್ವಿತಾ..... ಅವಳ ತಪ್ಪೇನು?

ಛೇ ನಾನೇಕೆ ಪದೇ ಪದೇ ಅವಳ ಬಗ್ಗೆ ಯೋಚಿಸತೊಡಗಿರುವೆ. ಏನಾಗಿದೆ ನನಗೆ?

ಬಹಳ ಯೋಚಿಸಿ, ಚಿಂತಿಸಿ ಏನೋ ನಿರ್ಧರಿಸಿದವನಂತೆ ತಂದೆಯನ್ನು ಹುಡುಕಿಕೊಂಡು ಬಂದ. ಇವನ ನಿರ್ಧಾರ ಕೇಳಲು ಮೃದುಲಾ ಹಾಗೂ ಆಕೃತಿ ಕೂಡಾ ಬಂದರು ಅವನ ಹಿಂದೆ.

ಹಾಲಿನಲ್ಲಿ ಕುಳಿತು ಪೇಪರ್ ತಿರುವುತ್ತಿದ್ದವರ ಬಳಿ ಬಂದು, "ಡ್ಯಾಡ್, ಈ ಪ್ರಸ್ತಾಪ ಬೇಡ. ಆಗೋದಿಲ್ಲ ಅಂತ ರಾವ್ ಅವರಿಗೆ ಹೇಳ್ಬಿಡಿ" ಎಂದ.

ಸಚ್ಚಿದಾನಂದ್ ಮಗನ ಮುಖ ನೋಡಿ ನಸುನಕ್ಕರು. "ನಿನ್ನ ಮಾತಿನಲ್ಲಿ, ಧ್ವನಿಯಲ್ಲಿ ಗೊಂದಲ ಎದ್ದು ಕಾಣುತ್ತಿದೆ. ನೀನು ಇಬ್ಬದಿಯ ಸಂಕಟದಲ್ಲಿದ್ದೀಯ" ಅವನ ಮನಸ್ಸನ್ನು ಸರಿಯಾಗಿ ಗ್ರಹಿಸಿ ಹೇಳಿದ್ದರು.ಅವನು ಮೌನವಾಗಿದ್ದ. 

"ನೋಡು ಅಭಿ. ನಿನ್ಗೆ ಮದುವೆ ಈ ವರ್ಷವೇ ಮಾಡೋ ಯೋಚನೆ ನಮ್ಗೆ ಮುಂಚೆಯೇ ಇತ್ತು. 'ನೀವು ಯಾವ ಹುಡುಗಿ ತೋರಿಸಿದ್ರೆ ಅವಳನ್ನು ನಾನು ಮದ್ವೆ‌ ಆಗ್ತೀನಿ. ಪ್ರೀತಿ ಪ್ರೇಮ ಅಂತ ತಲೆಕೆಡಿಸಿಕೊಳ್ಳೋಕೆ ನಂಗಿಷ್ಟವಿಲ್ಲ' ಅಂದಿದ್ದೆ. ಈಗ ಮದುವೆಯ ಪ್ರಸ್ತಾಪ ಅವರ ಕಡೆಯಿಂದಲೇ ಬಂದಿದೆ. ಅದಕ್ಕೂ ಮುಖ್ಯವಾಗಿ ಸಮನ್ವಿತಾ ನಮ್ಮೆಲ್ಲರಿಗೂ ಒಪ್ಪಿಗೆಯೇ. ಹಾಗಾಗಿ ಇದು ನಾವು ನೋಡಿರೋ ಸಂಬಂಧ ಅಂತಾನೇ ಲೆಕ್ಕ. ಮತ್ತೇನೋ ತೊಂದ್ರೆ ನಿನಗೆ?" ಮೃದುಲಾ ಆಕ್ಷೇಪಿಸಿದರು.

"ಅಮ್ಮಾ ಇದು ನೀನಂದುಕೊಂಡಷ್ಟು ಸರಳವಾದ ವಿಚಾರವಲ್ಲ. ಎಲ್ಲರೂ ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಿ. ಈ ಮದುವೆ ರಾವ್ ಅವರಿಗೆ ಅನಿವಾರ್ಯ ‌ಆಯ್ಕೆ. ಸತ್ಯಂ ರಾವ್ ಅವರ ಕಂಪನಿಯ ಷೇರುಗಳ ಬೆಲೆ ನೆಲಕ್ಕಚ್ಚಿದೆ. ಷೇರುದಾರರ ನಂಬಿಕೆನ ಕಳ್ಕೊಂಡಿದೆ. ಪಡೆದ ಕೋಟಿಗಟ್ಟಲೆ ಸಾಲ ಬಡ್ಡಿ ಸಮೇತ ತೀರಿಸದಿದ್ರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೀವಿ ಅಂತ ಬ್ಯಾಂಕಿನಿಂದ ನೋಟಿಸ್ ಬೇರೆ ಸಿಕ್ಕಿದೆಯಂತೆ.

ಇಂಥಾ ಸ್ಥಿತಿಯಲ್ಲಿ ಈ ಮದುವೆ ಖಂಡಿತಾ ಅವರಿಗೆ ಬೆಸ್ಟ್ ಆಯ್ಕೆ. ಈ ಮದುವೆಯಿಂದ ರಾವ್ ಅವರು ನಮಗೆ ಸಂಬಂಧಿಗಳಾಗ್ತಾರೆ. ಆಗ ಸಹಜವಾಗಿಯೇ ಷೇರುದಾರರಿಗೆ ಒಂದು ಭರವಸೆ ಸಿಗುತ್ತೆ.ಅವರ ಷೇರು ಮೌಲ್ಯ ಏರುತ್ತದೆ. ಅದರ ಜೊತೆಗೆ ಮುಂದೆ ಅವರು ಶರ್ಮಾ ಎಂಪೈರ್ ನಲ್ಲಿ ಹೂಡಿಕೆ ಮಾಡ್ತೀನಿ ಅಂತ ಪಾಲುದಾರಿಕೆ ಕೇಳಬಹುದು ಇಲ್ಲಾ ನಮ್ಮನ್ನು ಅವರ ಕಂಪನಿಯಲ್ಲಿ ಹೂಡಿಕೆ ಮಾಡೋಕೆ ಹೇಳಬಹುದು. ಇಲ್ಲಾ ಇನ್ನೂ ತುಂಬಾ ಆಯ್ಕೆಗಳಿರುತ್ತೆ ಅವರಿಗೆ. ಒಟ್ಟಿನಲ್ಲಿ ಎಲ್ಲಾ ರೀತಿಯಿಂದಲೂ ಇದು ಅವರಿಗೆ ಲಾಭದಾಯಕ. ಹಾಗಾಗಿಯೇ ಅವರು ಈ ಪ್ರಸ್ತಾಪ ತಂದಿರೋದು" ವಿಶ್ಲೇಷಿಸಿ ಹೇಳಿದ.

"ನಾವಿಲ್ಲಿ ನಿನ್ನ ಮದುವೆ ಬಗ್ಗೆ ಮಾತಾಡ್ತಿದ್ರೇ ನೀನು ನಿನ್ನ ಬಿಸ್ನೆಸ್ ಬಗ್ಗೆ ಮಾತಾಡ್ತೀ. ಸಮನ್ವಿತಾ ಬಗ್ಗೆ ಅಭಿಪ್ರಾಯ ಹೇಳು ಅಂದ್ರೆ ಅವಳಪ್ಪನ ಪ್ರವರ ಹೇಳ್ತಿದ್ದೀಯಲ್ಲಾ ಏನಾಗಿದೆ ನಿನ್ಗೆ?" ಮಗನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಮೃದುಲಾ.

"ನಿನ್ನಮ್ಮ ಹೇಳ್ತಿರೋದು ಸರಿಯಾಗಿದೆ ಅಭಿ. ಈ ಮನೆ ಯಾವಾಗಲೂ ವ್ಯವಹಾರಕ್ಕೂ, ಸಂಬಂಧಗಳಿಗೂ ಮಧ್ಯೆ ಒಂದು ಅಂತರವನ್ನು ಕಾಯ್ದುಕೊಂಡು ಬಂದಿದೆ. ಅದು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರೋ ನಿಯಮ. ನೀನು ಎರಡನ್ನೂ ಜೋಡಿಸಬೇಡ. ರಾವ್ ಅವರ ವ್ಯವಹಾರದಲ್ಲಿ ಸಾವಿರ ತರದ ಮೋಸ ಇರಬಹುದು. ಆದರೆ ನಾವು ರಾವ್ ಅವರೊಂದಿಗೆ ವ್ಯವಹರಿಸಲು ಹೊರಟಿಲ್ಲ. ನಾವು ಸಮನ್ವಿತಾಳನ್ನು ನಮ್ಮ ಪರಿವಾರಕ್ಕೆ ಸ್ವಾಗತಿಸುವ ಇಚ್ಛೆಯಲ್ಲಿದ್ದೇವೆ. ಇಲ್ಲಿ ಮಗಳು ಮುಖ್ಯವೇ ಹೊರತು ಅವಳ ತಂದೆಯ ವ್ಯವಹಾರದಿಂದ ನಮಗೆ ಆಗಬೇಕಾದ್ದು ಏನೂ ಇಲ್ಲ" ಹೆಂಡತಿಯ ಮಾತನ್ನು ಒಪ್ಪಿದರು ಸಚ್ಚಿದಾನಂದ.

"ಡ್ಯಾಡ್, ಐ ಅಗ್ರೀ, ನಮ್ಮ ಮನೆಯಲ್ಲಿ ವ್ಯವಹಾರ ಹಾಗೂ ಸಂಬಂಧಗಳ ನಡುವೆ ಅಂತರವಿದೆ. ಆದರೆ ಆ ಅಂತರ ರಾವ್ ಅವರ ಕುಟುಂಬದಲ್ಲಿ ಇಲ್ಲಾ ಅನ್ನೋದು ನಿಮ್ಗೂ ಗೊತ್ತು. ಈ ಸಂಬಂಧದ ಹಿಂದಿನ ಉದ್ದೇಶವೇ ವ್ಯವಹಾರ ಆಗಿರೋವಾಗ ಹೇಗೆ ಒಪ್ಪಿಕೊಳ್ಳಲಿ?"

"ಹಾಗಂತ ನೀನು ರಾವ್ ಹೆಸರು ಹೇಳಿ ಸಮನ್ವಿತಾನ ತಿರಸ್ಕರಿಸಿದ್ರೆ ಅದು ಸರಿ ಅನ್ಸುತ್ತಾ? ನಿನ್ನ ಮನಃಸಾಕ್ಷಿಯಾಗಿ ಹೇಳು…. ರಾವ್ ಅವರ ಮಗಳಾಗಿದ್ದೇ ಅವಳ ತಪ್ಪಾ?" ಮೃದುಲಾ ಶತಾಯಗತಾಯ ಮಗನನ್ನು ಒಪ್ಪಿಸುವ ಜಿದ್ದಿಗೆ ಬಿದ್ದಿದ್ದರು ಹಾಗೂ ಅವರಿಗೆ ಉಳಿದ ಇಬ್ಬರ ಪೂರ್ಣ ಸಹಕಾರವಿತ್ತು.

ಸಮನ್ವಿತಾಳನ್ನು ಮೊದಲಬಾರಿ ಕಂಡಾಗಲೇ ಅರಿಯದ ಮಮಕಾರವೊಂದು ಅರಳಿತ್ತು ಅವರಲ್ಲಿ. ಅವಳ ಚರ್ಯೆ, ನಡವಳಿಕೆ ಎಲ್ಲವೂ ಮೇಲ್ಮಟ್ಟದ್ದು. 

ತಾಯಿ ಹೃದಯಕ್ಕೆ ಅವಳ ವೇದನೆಯ ಅರಿವಾಗಿತ್ತೇನೋ…... ಇನ್ನೊಬ್ಬ ಮಗಳು ಕಂಡಿದ್ದಳು ಅವಳೊಳಗೆ. 

ರಾವ್ ಅವರು ಪ್ರಸ್ತಾಪಿಸದಿದ್ದರೇ ತಾವೇ ಈ ವಿಷಯ ಮಾತನಾಡಬೇಕೆಂದು ಅವರು ನಿರ್ಧರಿಸಿಬಿಟ್ಟಿದ್ದರು!

ಅಭಿಗೆ ತಿಳಿದಿರಲಿಲ್ಲವಷ್ಟೇ!

ಈಗಂತೂ ಖಂಡಿತಾ ಬಿಡಲಾರರು….

"ನಾನೆಲ್ಲಿ ಹೇಳಿದೆ ಹಾಗಂತ? ಅವಳದ್ದೇನೂ ತಪ್ಪಿಲ್ಲ. ನನ್ನ ನಿರ್ಧಾರಕ್ಕೆ ಅವಳು ಕಾರಣಕರ್ತಳೂ ಅಲ್ಲ. ಆದರೆ ಈ ಮದುವೆ ಸಾಧ್ಯವಿಲ್ಲ. ಇದು ನಮ್ಮ ಕುಟುಂಬವೊಂದರ ಪ್ರಶ್ನೆಯಲ್ಲ. ಇದು ನಮ್ಮನ್ನೇ ನಂಬಿಕೊಂಡಿರುವ ಶರ್ಮಾ ಎಂಪೈರ್ ನ ಲಕ್ಷಾಂತರ ಜನರ ಬದುಕಿನ ಪ್ರಶ್ನೆ. ಆ ರಾವ್ ಎಂಬ ಕ್ರಿಮಿ ಒಮ್ಮೆ ಒಳಸೇರಿತೆಂದರೆ ಮುಗಿಯಿತು. ನಮ್ಮಿಡೀ ಉದ್ಯಮಕ್ಕೆ ಗೆದ್ದಲು ಹಿಡಿಯುತ್ತೆ. ಆಗ ಅಲ್ಲಿನ ಲಕ್ಷಾಂತರ ಕಾರ್ಮಿಕರ ಗತಿಯೇನು? ಈ ತಪ್ಪನ್ನು ನಾನು ಖಂಡಿತಾ ಮಾಡಲಾರೆ"

"ನೀನು ಹೇಳುವುದು ನಿಜವೇ. ಒಪ್ಪುತ್ತೇನೆ. ಆದರೆ ರಾವ್ ಹಾಗೆ ಮಾಡಲು ನಾವು ಆಸ್ಪದ ನೀಡದಿದ್ದರಾಯಿತು. ನಮ್ಮನ್ನು ತುಳಿಯುವುದು ಸುಲಭವೇನು? ಅದೆಲ್ಲಾ ನೀನಂದುಕೊಂಡಷ್ಟು ಸುಲಭವಿಲ್ಲ" ಎಂದರು ಸಚ್ಚಿದಾನಂದ್.

"ಇಲ್ಲಾ ಅಪ್ಪಾ, ಆ ಮನುಷ್ಯ ಗುಳ್ಳೆನರಿ ಜಾತಿಗೆ ಸೇರಿದವನು. ವ್ಯವಹಾರಕ್ಕಾಗಿ ಮಗಳನ್ನು ಏಣಿಯಂತೆ ಬಳಸುತ್ತಿರುವವನು ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲ. ನನಗೆ ಈ ಮದುವೆ ಬೇಡ ಅಷ್ಟೇ" ಮಾತು ಮುಗಿಯಿತು ಎನ್ನುವಂತೆ ಹೇಳಿದ.

ಇಷ್ಟು ಹೊತ್ತು ಸುಮ್ಮನಿದ್ದ ಆಕೃತಿಗೆ ಅಣ್ಣನ ಮೇಲೆ ಕೋಪ ನೆತ್ತಿಗೇರಿತು. "ನಿನಗೆ ನಿನ್ನ ಶರ್ಮಾ ಎಂಪೈರ್ ನ ಎಲ್ಲರ ಸಮಸ್ಯೆ ಅರ್ಥ ಆಗುತ್ತೆ ಆದ್ರೆ ನಿನ್ನ ಮನೆಯವರು ಅನಿಸಿಕೊಂಡಿರೋ ಮೂರು ಜನರ ಆಸೆ ಅರ್ಥ ಆಗಲ್ಲ‌ ಅಲ್ವಾ? ರಾವ್ ಅಂಕಲ್ ಕೆಟ್ಟೋರು ಹಾಗಾಗಿ ಸಮನ್ವಿತಾ ಕೂಡಾ ಕೆಟ್ಟೋರು, ಕುತಂತ್ರಿ ಅಂತ ಡಿಸೈಡ್ ಮಾಡ್ಬಿಟ್ಟೆ ಅಲ್ವಾ? ಅವರಿಗೆ ಗತಿ ಇಲ್ಲಾ ನೋಡು. ಥೂ ಐ ಹೇಟ್ ಯು ಅಣ್ಣಾ. ಅವ್ರ ಬಗ್ಗೆ ಈ ರೀತಿ ಯೋಚಿಸ್ತೀಯಲ್ಲ. ನಾಚಿಕೆ ಆಗೋಲ್ವಾ? ನಾಳೆ ನನಗೆ ಹುಡುಗನನ್ನು ಹುಡುಕುವಾಗ ಅವ್ನೂ ಇವಳು ಶರ್ಮಾ ಅವರ ಮಗಳು. ಅವಳ ಬುದ್ದಿನೂ ಹಾಗೇ ಇರುತ್ತೆ, ದುಡ್ಡಿನ ಸೊಕ್ಕು, ಅಹಂಕಾರ ಅಂತ ಹೇಳಿ ನನ್ನ ರಿಜೆಕ್ಟ್ ಮಾಡಬಹುದಲ್ವಾ? ಆಗ ಅವನದ್ದೂ ಅದರಲ್ಲಿ ಏನೂ ತಪ್ಪಿರಲ್ಲ ಅಲ್ವಾ?"

ಆಕೃತಿಯ ಮಾತುಗಳು ಅವನ ಅಂತಃಸತ್ವವನ್ನೇ ಅಲುಗಾಡಿಸಿಬಿಟ್ಟಿತು. 'ಛೇ..... ರಾವ್ ಅವರನ್ನು ಗಮನದಲ್ಲಿಟ್ಟುಕೊಂಡು ಸಮನ್ವಿತಾಳನ್ನು ಅಳೆಯುತ್ತಿದ್ದೇನೆಯೇ? ಸಮನ್ವಿತಾ ಕುತಂತ್ರಿಯೇ?' ಹಾಗೆ ಯೋಚಿಸಲೂ ಕಷ್ಟವೆನಿಸಿತು ಅವನಿಗೆ. ಆಕೃತಿ ಹೇಳಿದಂತೆ ತನಗಾಗಿ ದುಡಿಯುವರ ಬಗ್ಗೆ ಅಷ್ಟೊಂದು ಯೋಚಿಸುತ್ತಿರುವ ನಾನು ನನಗಾಗಿಯೇ ಜೀವಿಸುತ್ತಿರುವವರ ಆಸೆಯನ್ನು ಕಡೆಗಣಿಸುತ್ತಿರುವೆನಲ್ಲ? ಈ ಮನೆಯಲ್ಲಿರುವವರೆಲ್ಲಾ ಪ್ರೀತಿಯನ್ನೇ ಉಸಿರಾಡುತ್ತಿರುವವರು. ದ್ವೇಷ, ಕಪಟ ಇವೆಲ್ಲಾ ಅವರ ಹತ್ತಿರಕ್ಕೂ ಸುಳಿಯದು. ಸರ್ವೇ ಜನಾ ಸುಖಿನೋ ಭವಂತು ಎನ್ನುವವರು. ಇವರೆಲ್ಲರಿಗೂ ಸಮನ್ವಿತಾ ಅಷ್ಟೊಂದು ಇಷ್ಟವಾಗಿದ್ದಾಳೆಂದರೆ ಅವಳು ರಾವ್ ಅವರಂತಿರಲು ಹೇಗೆ ಸಾಧ್ಯ? ಈ ಯೋಚನೆ ಮನಸ್ಸಿಗೆ ಬಂದಿದ್ದೇ ಅವನು ಒಂದೈದು ನಿಮಿಷ ಯೋಚಿಸಿ ಒಂದು ನಿರ್ಧಾರಕ್ಕೆ ಬಂದ.

"ನೀವೆಲ್ಲ ಹೇಳೋದು ಸರಿಯಾಗಿಯೇ ಇದೆ. ನಾನೇ ಸ್ವಲ್ಪ ಅಧಿಕ ಯೋಚನೆ ಮಾಡಿದೆ. ಆದರೂ ನನ್ನ ಅನುಮಾನವೂ ಅಸಾಧ್ಯವಾದುದಲ್ಲ ಅಂತ ನಿಮ್ಗೂ ಗೊತ್ತು ಡ್ಯಾಡ್. ಸೋ ಬೆಟರ್ ಒಂದು ಕೆಲಸ ಮಾಡೋಣ. ನೇರವಾಗಿ ಸಮನ್ವಿತಾ ಹತ್ರನೇ ಮಾತನಾಡಿ ನಮ್ಮ ಅನುಮಾನ ಅವಳೆದುರು ಇಡೋಣ. ಆಗ ಎಲ್ಲರ ಸಮಸ್ಯೆಗಳು ನೇರವಾಗಿ ಪರಿಹಾರವಾಗುತ್ತಲ್ಲ? ಅವಳ ಉತ್ತರ ಸಮಾಧಾನಕರವಾಗಿದ್ರೆ ನನಗೇನೂ ಸಮಸ್ಯೆಯಿಲ್ಲ" ಎಂದ.

"ಏನು? 'ನಿಮ್ಮಪ್ಪ ಕುತಂತ್ರಿ ನೀವೂ ಹಾಗೇನಾ' ಅಂತ ಕೇಳೋದಾ? ಆಗವರು ಸುಮ್ನೆ ಇರ್ತಾರಾ? ನಿನ್ಗೇ ನಾಲ್ಕು ಬಾರಿಸೋಲ್ವಾ?" ಕೇಳಿದಳು ಆಕೃತಿ.

ಆದರೆ ಅವನ ಮಾತು ಸಚ್ಚಿದಾನಂದ, ಮೃದುಲಾ ಇಬ್ಬರಿಗೂ ಸರಿಯೆನಿಸಿತು. ಸಮನ್ವಿತಾ ಕತ್ತಿಯಲುಗಿನಂತೆ ಹರಿತವಾಗಿ ಮಾತನಾಡುತ್ತಾಳೆಂದು ತಿಳಿದಿತ್ತು ಅವರಿಗೆ. ಹಾಗಾಗಿ ನೇರಾನೇರ ಮಾತನಾಡಿದರೆ ಅವನ ಗೊಂದಲಗಳೆಲ್ಲಾ  ಪರಿಹಾರವಾಗುತ್ತವೆ ಎನಿಸಿತು. ಅವಳೆಂದೂ ಸುಳ್ಳಾಡಳು ಎಂಬ ನಂಬಿಕೆ ಅವರಿಗೆ ಮಾತ್ರವಲ್ಲ ಅಭಿಗೂ ಇತ್ತು. ಹಾಗಾಗಿ ಸರಿ ಎಂದು ಅನುಮತಿ ಇತ್ತರು.

"ಸರಿ ಹಾಗಿದ್ರೇ ನಾಳೆನೇ ಅವಳನ್ನು ಮನೆಗೆ ಬರೋಕೆ ಹೇಳ್ತೀನಿ. ಅವಳ ಮನೆಯಲ್ಲಿ ಮಾತಾಡೋಕಾಗಲ್ಲ. ಇಲ್ಲೇ ಮಾತಾಡೋಣ. ಫೋನ್ ಮಾಡಿ ಕರೆಯಮ್ಮ" ಅಂದಾಗ,

"ಹಲೋ ಮಗನೇ, ಅನುಮಾನ ಪಿಶಾಚಿಯಾಗಿರೋನು ನೀನು. ನೀನು ಮಾತಾಡ್ಕೋ. ನಮಗೆ ಅವಳ ಮೇಲೆ ಪೂರ್ತಿ ನಂಬಿಕೆ ಇದೆ." ಎಂದವರೇ "ನಾನಂತೂ ಫೋನ್ ಮಾಡಲ್ಲ. ಆಕೃತಿ ಸಮನ್ವಿತಾ ನಂಬರ್ ಕೊಡು ಅವನೇ ಫೋನ್ ಮಾಡಿ ಕರೀಲೀ"  ಎಂದು ಎದ್ದು ಹೊರಟರು ಮೃದುಲಾ. 

ಅಪ್ಪನೆಡೆಗೆ ನೋಡಿದಾಗ ಅವರು ಹೆಂಡತಿಯತ್ತ ನೋಟ ಹರಿಸಿದರು. "ಏನು? ನಾಳೆ ಬ್ರೇಕಿಂಗ್ ನ್ಯೂಸಲ್ಲಿ ನಿಮ್ಮನ್ನ ಬ್ರೇಕ್ ಮಾಡಿ ಬೆಂಡೆತ್ತಿದ ನ್ಯೂಸ್ ಬರ್ಬೇಕಾ?" ಎಂದು ಕೇಳಿದ ಮಡದಿಯನ್ನು ನೋಡಿ ಮಹಾಕಾಳಿಯ ನೆನಪಾಗಿ, "ಹೈಕಮಾಂಡ್ ಆರ್ಡರ್ ಆದ್ಮೇಲೆ ಮುಗೀತು. ನಂದೂ ಅದೇ" ಎಂದವರು ತಮ್ಮ ನ್ಯೂಸ್ ರೀಡರ್ ಜೊತೆ ಬ್ರೇಕಿಂಗ್ ನ್ಯೂಸ್ ಓದಲು ಹೋದರು.

ಅವನು "ಆಕೃತಿ" ಎಂದು ಕೂಡಲೇ ಸಮನ್ವಿತಾ ನಂಬರ್ ವಾಟ್ಸಾಪ್ ಮಾಡಿ, "ಯಾರೋ ಆಕೃತಿ? ನಾನು ಕೋತಿ. ಅಲ್ಲಾ, ಎಲ್ಲರೂ ತಮ್ಮ ಹುಡುಗಿನ ರೊಮ್ಯಾಂಟಿಕ್ ಡೇಟ್ಗೆ ಕರ್ಕೊಂಡು ಹೋದ್ರೆ ಇವ್ನು ಮನೆಗೆ ಕರೆದು ನೀನು ಕೆಟ್ಟೋಳಾ, ನಿಮ್ಮಪ್ಪ ಕೆಟ್ಟೋನಾ ಅಂತ ಒಳ್ಳೆ  ಸಿ.ಎಸ್.ಪಿ ರೇಂಜಿಗೆ ಕ್ರಾಸ್ ಎಕ್ಸಾಮಿನೇಷನ್ ಮಾಡ್ತಾನಂತೆ. ದೊಡ್ಡ ಉಜ್ವಲ್ ನಿಕ್ಕಂ ಇವ್ನು. ಹೋಗಲೇ.... ನಂಬರ್ ವಾಟ್ಸಾಪ್ ಮಾಡಿದೀನಿ ನೋಡ್ಕೋ" ಎಂದು ಬಾಯಿಗೆ ಬಂದಂತೆ ಬೈದುಕೊಂಡು ರೂಮಿಗೆ ಹೊರಟಳು.

ಮೂವರ ವರ್ತನೆ ನೋಡಿ ಬೆಪ್ಪಾದವನು, 'ಈಗ್ಲೇ ಹೀಗೆ, ನಾನೆಲ್ಲಾದ್ರೂ ಇವ್ಳನ್ನ ಮದ್ವೆ ಆದ್ರೆ ನಾನು ಚಟ್ನಿಯಾಗೋದು ಗ್ಯಾರಂಟಿ' ಎಂದುಕೊಂಡು, ಈಗ ನಾನೇ ಫೋನ್ ಮಾಡಿ ಸಾಯ್ಬೇಕಾ? ಇನ್ನೇನು ಮಾಡೋದು ಎಲ್ಲಾ ನನ್ನ ಕರ್ಮ ಎಂದುಕೊಂಡು ಸಮನ್ವಿತಾಳಿಗೆ ಕರೆಹಚ್ಚಿದ ಅಭಿರಾಮ್.

ಕುತಂತ್ರದ ಯೋಜನೆ ರೂಪಿಸಿ ತಾನು ಗೆದ್ದೇ ಬಿಟ್ಟೇ ಎಂದು ಬೀಗುತ್ತಿದ್ದ ರಾವ್ ನ ಆಲೋಚನೆಗೂ ಬಾರದಂತೆ, ಯೋಜನೆಯ ಪಥ ಬದಲಿಸಲು ತಯಾರಾಗಿ ವಿಧಿ ನಗುತ್ತಿತ್ತು......!

ಯಾವುದು ನಡೆಯಬಾರದೆಂದು ರಾವ್ ಬಯಸಿದ್ದನೋ ಅದೇ ನಡೆಯಲಿತ್ತು.......!!

ಅವನ ಊಹೆಗೂ ನಿಲುಕದಂತೆ......!!

         ********ಮುಂದುವರೆಯುತ್ತದೆ*******