ಸೋಮವಾರ, ಆಗಸ್ಟ್ 8, 2022

ಲಹರಿ..... ೧

ಕೆಲವೊಂದು ನೆನಪುಗಳು ಸದಾ ಮನಕ್ಕೆ ಹಿತಕರ. ಎಂತದ್ದೇ ಸನ್ನಿವೇಶದಲ್ಲಿಯೂ ಮನವನ್ನು ಪ್ರಪುಲ್ಲಗೊಳಿಸಿ ತುಟಿಯಂಚಿನಲ್ಲೊಂದು ಮುಗುಳ್ನಗೆಯನ್ನು ಹರಡಿಸಿಬಿಡುತ್ತವೆ. ಗತದ ಪುಟಗಳಲ್ಲಡಗಿದ ಸವಿಕ್ಷಣಗಳನ್ನು ಮತ್ತೆ ಮತ್ತೆ ಮೆಲುಕುಹಾಕುವಂತಾಗುವ ಘಳಿಗೆಗಳಿವು. 

ಹೀಗೇ ಯಾವುದೋ ಪುಸ್ತಕವನ್ನು ಹುಡುಕುತ್ತಿದ್ದೆ. ಹಾಗೆ ಹುಡುಕುವಾಗಲೇ ಅಚಾನಕ್ಕಾಗಿ ಎಲ್ಲಾ ಪುಸ್ತಕಗಳಿಂದ ಪ್ರತ್ಯೇಕವಾಗಿ ಕಟ್ಟಿಟ್ಟಿದ್ದ ಪುಸ್ತಕಗಳ ಸಣ್ಣಅಟ್ಟಿ ಗಮನಸೆಳೆಯಿತು. ಏನಿರಬಹುದೆಂಬ ಕುತೂಹಲದಿಂದ ಕೈಗೆತ್ತಿಕೊಂಡೆ. ನೆನಪುಗಳ ಪೆಟಾರಿಯ ಕೀಲಿಕೈ ದೊರೆತಂತಾಯಿತು. ಒಂದು ದಶಕಕ್ಕೂ ಹಿಂದಿನ ನನ್ನ ಪದವಿ ತರಗತಿಗಳ ಕನ್ನಡ ಹಾಗೂ ಇಂಗ್ಲೀಷ್ ಪಠ್ಯಪುಸ್ತಕಗಳವು..... ಆ ದಿನಗಳು ಯಾಕೋ ಬಹಳಷ್ಟು ಕಾಡತೊಡಗಿವೆ. 

ಪದವಿಪೂರ್ವ ಶಿಕ್ಷಣ ಮುಗಿಸಿ ಪದವಿ ಓದಿಗಾಗಿ ಮಲೆನಾಡನ್ನು ಬಿಟ್ಟು ಕರಾವಳಿಯೆಡೆಗೆ ಪಯಣಿಸಿದ್ದೆ. ಅದುವರೆಗೂ ಮನೆಯನ್ನು ಬಿಟ್ಟಿರದಿದ್ದವಳಿಗೆ ಹಾಸ್ಟೆಲ್ ವಾಸದ ಅನುಭವ ಹಾಗೆ ಇಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವಳಿಗೆ ಇನ್ನು ಮುಂದೆ ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಸವಾಲು.... ಒಟ್ಟಾರೆ ಭಯಂಕರ ದಿಗಿಲು ನನ್ನನ್ನು ಆವರಿಸಿತ್ತು. ಮೊದಲ ಎರಡ್ಮೂರು ವಾರಗಳಂತೂ ಬಹಳ ಬೇಸರದವು. ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳೂ ತುಳು ಹಿನ್ನೆಲೆಯವರು ಜೊತೆಗೆ ಅವರ ನಾಜೂಕಿನ ಗ್ರಾಂಥಿಕ ಕನ್ನಡದ ವೈಖರಿ ನನಗೋ ತೀರಾ ಅಪರಿಚಿತ. ಒಟ್ಟಾರೆ ನಾನು ಗುಂಪಿಗೆ ಸೇರದ ಪದವೇನೋ ಅನ್ನುವ ಭಾವ ನನ್ನೊಳಗೇ ಆವರಿಸಿತ್ತು. ಹೀಗಿರುವಾಗಲೇ ಮೊದಲ ಕಿರುಪರೀಕ್ಷೆ ಬಂದಿತ್ತು. ಪರೀಕ್ಷೆಯನ್ನು ತಕ್ಕ ಮಟ್ಟಿಗೆ ಬರೆದಿದ್ದೆನಾದರೂ ಅದೇನೋ ಅಳುಕು. ಮೌಲ್ಯಮಾಪನ ಮುಗಿದು ಒಳ್ಳೆಯ ಅಂಕಗಳೇ ಸಿಕ್ಕಾಗ ಏನೋ ನೆಮ್ಮದಿ.  ಅದಕ್ಕೆ ಸಾವಿರ ಆನೆಯ ಬಲ ಬಂದಿದ್ದು ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ಪದ್ಮಜಾ ರಾವ್ ಅವರಿಂದ. ಇಂಗ್ಲೀಷ್ ಪೇಪರ್ ತಿದ್ದಿ ಹಂಚುವಾಗ ನನ್ನ ಉತ್ತರ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರವರು. ಆ ಒಂದು ಮೆಚ್ಚುಗೆಯ ಮಾತು ನನಗೆ ನೀಡಿದ ಭರವಸೆ ಅಪಾರ. ಜೊತೆಗೆ ಪ್ರಯತ್ನಪಟ್ಟರೆ ನಾನೆಣಿಸಿದಷ್ಟು ಕಷ್ಟವಿಲ್ಲ ಆಂಗ್ಲ ಮಾಧ್ಯಮದ ಓದು ಅನ್ನುವ ಸ್ಥೈರ್ಯವೂ ಮೂಡಿತು. ಆನಂತರದಲ್ಲಿ ನಾನೆಂದೂ ತಿರುಗಿ ನೋಡಿದ್ದಿಲ್ಲ. ಪರಕೀಯತೆ ಮರೆಯಾಗಿ ಗೆಳೆಯರ ಬಳಗ ಹಿಗ್ಗಿತು. ಸಪ್ಪೆ ಮೋರೆಯಲ್ಲಿ ನಗು ಚಿಮ್ಮತೊಡಗಿತು. ಕರಾವಳಿಯೂ ಮಲೆನಾಡಿನಷ್ಟೇ ಆಪ್ತವಾಯಿತು. ನನ್ನ ಪಕ್ಕಾ ಮಲ್ನಾಡ್ ಕನ್ನಡ ಮೂಡುಬಿದಿರೆಯ ಲಾಲಿತ್ಯದ ಅರಿವೆ ತೊಟ್ಟಿತು. ತುಳುಭಾಷೆಯೂ ನಿಧಾನವಾಗಿ ಮನದೊಳಗೆ ಜಾಗ ಪಡೆದುಕೊಂಡಿತು. ಅಂದು ಆರಂಭವಾದ ಕರಾವಳಿಯ ನಂಟು ಇಂದಿನವರೆಗೂ ಮುಂದುವರೆದಿದೆ. ಗಣಪಯ್ಯ ಭಟ್ ಸರ್, ವಾಸುದೇವ ಭಟ್ ಸರ್, ಸುದರ್ಶನ್ ಸರ್, ಗೋಪಾಲ್ ಸರ್, ಸ್ನೇಹಲತಾ ಮೇಡಂ, ರಾಘವೇಂದ್ರ ಸರ್, ಲತಾ ಮೇಡಂ....... ಎಲ್ಲರ ಸ್ವರಗಳು, ಅವರ ಪಾಠದ ವೈಖರಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. 

ಅದರಲ್ಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ ನನಗೆ ಕನ್ನಡ ಮತ್ತು ಇಂಗ್ಲೀಷ್ ತರಗತಿಗಳು ಅವಿಸ್ಮರಣೀಯ. ಐಚ್ಚಿಕ ಕನ್ನಡ, ಇಂಗ್ಲೀಷ್ ವಿದ್ಯಾರ್ಥಿನಿಯಲ್ಲವಾದರೂ ಪದವಿಯ ಎರಡು ವರ್ಷಗಳಲ್ಲಿನ ಭಾಷಾ ತರಗತಿಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಅಜಿತ್ ಸರ್ ತಮ್ಮ ಕಂಚಿನ ಕಂಠದಲ್ಲಿ ನವರಸಗಳ ಸಮೇತ ವರ್ಣಿಸುತ್ತಿದ್ದ ಆ ಹಳಗನ್ನಡ ಪದ್ಯ ಗದ್ಯಗಳ ಸೊಗಸನ್ನು ಮರೆಯುವುದುಂಟೇ? ಪಂಪ, ರನ್ನ, ನಾಗಚಂದ್ರ, ರಾಘವಾಂಕ, ಕುಮಾರವ್ಯಾಸ,ಲಕ್ಮೀಶರಿಂದ ಹಿಡಿದು ದಾಸರು, ವಚನಕಾರರು, ನವ್ಯ ಪ್ರಗತಿಶೀಲ ಕವಿಗಳ ತನಕ, ವಡ್ಡಾರಾಧನೆಯಿಂದ ಹಿಡಿದು ಪಂಚತಂತ್ರದ ತನಕ, ಪ್ರಬಂಧಗಳಿಂದ ಹಿಡಿದು ಸಣ್ಣಕಥೆಗಳ ತನಕ ಅದೆಷ್ಟು ವೈವಿಧ್ಯಮಯವಾದ ಸಾಹಿತ್ಯ ಪ್ರಬೇಧಗಳು....... ಅದರಲ್ಲೂ ವಿಶೇಷವಾಗಿ ಅತ್ಯುತ್ತಮ ಸಣ್ಣ ಕಥೆಗಳ ಸಂಗ್ರಹವಾದ 'ಬದುಕು-ಭಾವದ ಕತೆಗಳು' ನನ್ನ ಇಂದಿನ ಬರವಣಿಗೆಯ ಹವ್ಯಾಸದ ಬೆನ್ನೆಲುಬು. ಈ ಪುಸ್ತಕದ ಕಥೆಗಳ ಮೇಲೆ ನಾವು ವಿದ್ಯಾರ್ಥಿಗಳೇ ನೀಡಿದ ಸೆಮಿನಾರ್, ಪ್ರಶ್ನೋತ್ತರ ಕಲಾಪ ಇವತ್ತು ನಿನ್ನೆ ನಡೆದಂತಿದೆ. 

ಇಂಗ್ಲೀಷ್ ಆದರೂ ಅಷ್ಟೇ.... ಷೇಕ್ಸ್ಪಿಯರ್ ನ sonnetಗಳು, E M Forster ಅವರ My Wood, Robert Payne ಅವರ The Great Trial, A.K Ramanujan ಅವರ Obituary, Gabriel Okara ಅವರ Once Upon a Time ಎಲ್ಲವನ್ನೂ ವಿವರಿಸುತ್ತಿದ್ದ ಪದ್ಮಜಾ ಮೇಡಂ ತರಗತಿಯಲ್ಲಿ ತೆಗೆದುಕೊಂಡ ಕ್ಲಾಸ್ ಪಾಯಿಂಟುಗಳ ನೆನಪಾಗುತ್ತದೆ. Saki ಅವರ Dusk ಕಥೆಯ ನಾರ್ಮನ್ ಗೋಟ್ಸ್ಬೈ ಆದಿಯಾಗಿ John Galsworthy ಅವರ The silver boxನ ಬಾರ್ತಿಕ್ ಕುಟುಂಬ, ಮಿಸ್ಸೆಸ್ ಜೋನ್ಸ್, ಬೆಳ್ಳಿಯ ಸಿಗರೇಟ್ ಕೇಸ್ ಎಲ್ಲವೂ ಅಚ್ಚಳಿಯದ ದೃಶ್ಯಗಳಂತೆ ಇಂದಿಗೂ ಕಣ್ಮುಂದಿವೆ. 

ಇಂದು ಈ ಪುಸ್ತಕಗಳನ್ನು ನೋಡಿದಾಗ ಎಲ್ಲವೂ ಮತ್ತೆ ಕಣ್ಮುಂದೆ ಹಾದುಹೋದವು. ಮಾರ್ಕ್ಸ್, ರ್ಯಾಂಕ್ ಮೊದಲಾದವುಗಳ ಧಾವಂತಗಳಿಲ್ಲದ ಆ ದಿನಗಳ ಚೆಂದದ ನೆನಪಿನ ಜೊತೆಗೇ ಆ ದಿನಗಳಿಗೆ ಮತ್ತೆ ಹೋಗುವಂತಿರಬೇಕಿತ್ತು ಎನ್ನುವ ಭಾವವೂ ಕಾಡುತ್ತಿರುವುದು ಸುಳ್ಳಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ