ಬುಧವಾರ, ಮೇ 27, 2020

ಲೈಫ್ ಈಸ್ ಬ್ಯೂಟಿಫುಲ್


ಕಣ್ಣೆದುರಿಗಿರುವ ಸಾವನ್ನು ಪ್ರತೀ ಘಳಿಗೆ ಕಾಣುತ್ತಾ ಬದುಕುವುದು ಅದೆಷ್ಟು ಘೋರ....? ಸಾವನ್ನು ಕಣ್ಣೆದುರಿಗಿಟ್ಟುಕೊಂಡೂ ನಗುನಗುತ್ತಾ ದಕ್ಕಿದಷ್ಟು ಬದುಕನ್ನು ಸುಂದರವಾಗಿಸಿಕೊಳ್ಳುವವರ ಸಂಖ್ಯೆ ಎಷ್ಟಿರಬಹುದು? ಬಲು ಕಠಿಣವಲ್ಲವೇ ಈ ಹಾದಿ...?

ಈ ಜಗತ್ತು ಕಂಡ ಅತೀ ಭೀಭತ್ಸ ರಕ್ತಚರಿತ್ರೆಗಳಲ್ಲಿ ಒಂದು ಹಿಟ್ಲರ್ ಅವಧಿಯಲ್ಲಿನ ಯಹೂದಿಗಳ ನರಮೇಧ‌. ಅವನ 'ಡೆತ್ ಕ್ಯಾಂಪ್'ಗಳು ಅದೆಷ್ಟು ಜೀವಗಳ ಯಾತನಾಮಯ ನಿಟ್ಟುಸಿರ ಶಾಪವನ್ನು ಕಂಡಿವೆಯೋ ಬಲ್ಲವರಾರು? ಈ ರಕ್ತಸಿಕ್ತ ಅಧ್ಯಾಯ ದೇಶಭಾಷೆಗಳ ಹಂಗಿಲ್ಲದೇ ಹತ್ತುಹಲವು ಕಥೆ, ಕಾದಂಬರಿ, ಚಲನಚಿತ್ರಗಳಿಗೆ ಪ್ರೇರಣೆಯಾಗಿರುವುದು ಎಲ್ಲರಿಗೂ ತಿಳಿದ ಸತ್ಯ.  ಅಂತಹ ಪ್ರತಿಯೊಂದು ಕೃತಿಯೂ ಹಿಟ್ಲರ್ ಅವಧಿಯಲ್ಲಿ ಯಹೂದಿಗಳು ಅನುಭವಿಸಿದ ನರಕ ಸದೃಶ ಬವಣೆಯ ಹಲವು ಆಯಾಮಗಳನ್ನು, ವಿಭಿನ್ನ ಮಜಲುಗಳನ್ನೂ ಅನಾವರಣಗೊಳಿಸುತ್ತವೆ. ಆದರೆ ಇಂತಹ ಕೃತಿಗಳಲ್ಲಿ ನಾಜಿ಼ಗಳ ಕೌರ್ಯ ಹಾಗೂ ಯಹೂದಿಗಳ ನಿಸ್ಸಾಹಯಕತೆಯ ಚಿತ್ರಣವೇ ಹೆಚ್ಚು. ಅದು ಆ ಕೃತಿಗಳ ಬಲದೊಂದಿಗೆ ಮಿತಿಯೂ ಕೂಡಾ ಹೌದು. ಕೆಲವೇ ಕೆಲವು ಅತ್ಯುತ್ಕೃಷ್ಟ ಕೃತಿಗಳು ಮಾತ್ರವೇ ಈ ಮಿತಿಗಳೆಲ್ಲವನ್ನೂ ಮೀರಿ ಬೇರೆನನ್ನೋ ಹೇಳುತ್ತವೆ. ಅಂತಹ ಕೃತಿಗಳ ಸಾಲಿಗೆ ಸೇರುವುದು 1997 ರ ಇಟಾಲಿಯನ್ ಸಿನಿಮಾ ಲೈಫ್ ಈಸ್ ಬ್ಯೂಟಿಫುಲ್ (ಇಟಾಲಿಯನ್ ಭಾಷೆಯಲ್ಲಿ "La vita è bella").

ರೊಬೆರ್ಟೋ ಬೆನಿನಿ(Roberto Benigni) ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರ ಡೆತ್ ಕ್ಯಾಂಪಿನೊಳಗಿದ್ದು, ಪ್ರತಿಕ್ಷಣ ಹಿಂಸೆ ಹಾಗೂ ಜೀವಭಯದೊಂದಿಗೆ ಬದುಕುತ್ತಿದ್ದರೂ ಜೀವನ ಪ್ರೀತಿ ಕಳೆದುಕೊಳ್ಳದೇ ತನ್ನೊಳಗಿರುವ ಅದ್ಬುತ ಕಲ್ಪನಾ ಶಕ್ತಿಯನ್ನು ಬಳಸಿ ತನ್ನ ಮಗನಿಗೆ ಸೆರೆಶಿಬಿರದ ನರಕಯಾತನೆ ಹಾಗೂ ಬಂಧನದ ಭೀಕರತೆಗಳ ಅರಿವಾಗದಂತೆ ಕಾಯ್ದುಕೊಳ್ಳುವ ತಂದೆಯೊಬ್ಬನ ಅನನ್ಯ ಕಥೆಯನ್ನು ಹೇಳುತ್ತದೆ.

ರುಬಿನೋ ರೋಮಿಯೋ ಸಾಲ್ಮೋನೆ ಅವರು ಬರೆದ "ಇನ್ ದಿ ಎಂಡ್, ಐ ಬೀಟ್ ಹಿಟ್ಲರ್" ಕೃತಿಯಿಂದ ಭಾಗಶಃ ಸ್ಪೂರ್ತಿ ಪಡೆದಿರುವ ಈ ಚಿತ್ರ, ಖುದ್ದು ನಿರ್ದೇಶಕ ಬೆನಿನಿಯವರ ತಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಕಾರ್ಮಿಕ ಶಿಬಿರದಲ್ಲಿ ಕಳೆದ ಎರಡು ವರ್ಷಗಳ  ಸ್ವಾನುಭವದಿಂದಲೂ ಪ್ರೇರಣೆ ಪಡೆದಿದೆ.

ಚಿತ್ರದ ಕಥೆಯ ವಿಚಾರಕ್ಕೆ ಬರುವುದಾದರೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರವು 1939ರ ಕಾಲಘಟ್ಟದ ಇಟಲಿ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಗೈಡೋ ಓರೆಫೈಸ್ ಎಂಬ ಯಹೂದಿ ಯುವಕನ ಬದುಕಿನ ಏರಿಳಿತಗಳನ್ನು ದಾಖಲಿಸುತ್ತದೆ. ಗೈಡೋ ಬದುಕಿನ ಪ್ರತಿ ಕ್ಷಣವನ್ನೂ ಸಕಾರಾತ್ಮಕವಾಗಿ ಆಸ್ವಾದಿಸುವ, ತನ್ನ ಸುತ್ತಲಿರುವ ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳುವ ಕಲೆ ಅರಿತ, ಅತ್ಯದ್ಬುತ ಕಲ್ಪನೆಗಳ ಹೆಣೆಯಬಲ್ಲ ಲವಲವಿಕೆಯ ಯುವಕ. ತನ್ನ ಚಿಕ್ಕಪ್ಪ ಎಲಿಸಿಯೋ ಅವರ ರೆಸ್ಟೋರೆಂಟಿನಲ್ಲಿ ಕೆಲಸಮಾಡಲು ಅರೇಝೋ಼ ನಗರಕ್ಕೆ ಆಗಮಿಸುವ ಗೈಡೋ ಆಕಸ್ಮಿಕವಾಗಿ ಭೇಟಿಯಾಗುವ ದೋರಾ ಎಂಬ ಶಿಕ್ಷಕಿಯ ಪ್ರೇಮ ಪಾಶದಲ್ಲಿ ಸಿಲುಕುತ್ತಾನೆ. ಈಗಾಗಲೇ ಅಹಂಕಾರಿ ಸಿರಿವಂತ ವ್ಯಕ್ತಿಯೋರ್ವನೊಂದಿಗೆ ವಿವಾಹ ನಿಷ್ಕರ್ಷೆಯಾಗಿರುವ ದೋರಾಳಿಗೆ ತನ್ನ ಪ್ರೇಮವನ್ನು ಅರಿಕೆ ಮಾಡಲು ಗೈಡೋ ಹಲವಾರು ಕಸರತ್ತುಗಳನ್ನು ನಡೆಸುತ್ತಾನೆ. ತಾಯಿಯ ಒತ್ತಾಯದ ಮೇರೆಗೆ ಇಷ್ಟವಿಲ್ಲದ ಸಂಬಂಧದಲ್ಲಿ ಸಿಲುಕಿ ಅಸಂತುಷ್ಟಳಾಗಿದ್ದ ದೋರಾ, ಗೈಡೋನ ನೈಜ ಪ್ರೀತಿಗೆ ಮನಸೋಲುತ್ತಾಳೆ. ಅವಳ ನಿಶ್ಚಿತಾರ್ಥದ ಔತಣಕೂಟದ ದಿನವೇ  ಅವಳ ಅನುಮತಿಯೊಂದಿಗೆ ಗೈಡೋ ದೋರಾಳನ್ನು ಅಪಹರಿಸಿ ವಿವಾಹವಾಗುತ್ತಾನೆ. ದಂಪತಿಗಳು ಪುಸ್ತಕದ ಮಳಿಗೆಯೊಂದನ್ನು ಆರಂಭಿಸುತ್ತಾರೆ. ಅವರಿಗೆ ಗಿಯೋಸುಕ್(ಜೋಶುವಾ) ಎಂಬ ಮಗನೂ ಜನಿಸುತ್ತಾನೆ.  ಮಡದಿ, ಮಗ ಹಾಗೂ ಪುಸ್ತಕದ ಮಳಿಗೆಯೊಂದಿಗೆ ಸುಲಲಿತವಾಗಿ ಗೈಡೋನ ಬದುಕು ಸಾಗುತ್ತಿರುವಾಗಲೇ ಎರಡನೇ ಮಹಾಯುದ್ಧ ಆರಂಭವಾಗುತ್ತದೆ.

ಇಟಲಿ ಸಾಮ್ರಾಜ್ಯವನ್ನು ಆಕ್ರಮಿಸಿಕೊಳ್ಳುವ ಹಿಟ್ಲರ್ ಇಟಲಿಯಲ್ಲಿರುವ ಯಹೂದಿಗಳ ಮಾರಣಹೋಮಕ್ಕೆ ಆದೇಶ ಹೊರಡಿಸುತ್ತಾನೆ. ಇಟಲಿಯಲ್ಲಿನ ಯಹೂದ್ಯರನ್ನು ಹುಡುಕಿ ಅವರನ್ನು ಬಲವಂತವಾಗಿ ರೈಲುಗಳಲ್ಲಿ ತುಂಬಿ ಸೆರೆಶಿಬಿರಗಳಿಗೆ ಒಯ್ಯಲಾರಂಭಿಸುತ್ತಾರೆ.

ಜೋಶುವಾನ ಐದನೇ ಜನ್ಮದಿನದಂದೇ ಗೈಡೋ, ಅವನ ಚಿಕ್ಕಪ್ಪ ಎಲಿಸಿಯೋ ಹಾಗೂ ಜೋಶುವಾನನ್ನು ವಶಪಡಿಸಿಕೊಂಡು ಸೆರೆಶಿಬಿರಕ್ಕೆ ಒಯ್ಯಲಾಗುತ್ತದೆ. ಅವರನ್ನು ಅರಸಿ ಬರುವ ದೋರಾಳಿಗೆ ಯಹೂದ್ಯಳಲ್ಲದ ಕಾರಣ ಸೆರೆಶಿಬಿರದಿಂದ ವಿನಾಯಿತಿ ಸಿಗುತ್ತದೆ. ಆದರೆ ಗೈಡೋ ಹಾಗೂ ಜೋಶುವಾನನ್ನು ಅಗಲಿರಲು ಬಯಸದ ದೋರಾ ಸ್ವ ಇಚ್ಛೆಯಿಂದ ತಾನೂ ರೈಲನ್ನೇರಿ ಸೆರೆಶಿಬಿರಕ್ಕೆ ಪ್ರಯಾಣಿಸುತ್ತಾಳೆ‌. ಸೆರೆಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸುವುದರಿಂದ ಗೈಡೋ ಮತ್ತು ಜೋಶುವಾ ದೋರಾಳಿಂದ ಬೇರಾಗುತ್ತಾರೆ. ಹಾಗಿದ್ದೂ ಶಿಬಿರದ ಧ್ವನಿವರ್ಧಕಗಳ ಸಹಾಯದಿಂದ ಗೈಡೋ ಮತ್ತು ಜೋಶುವಾ ದೋರಾಳಿಗೆ ಕ್ಷೇಮ ಸಂದೇಶ ಕಳಿಸುತ್ತಿರುತ್ತಾರೆ.

ಸೆರೆಶಿಬಿರದ ನಿಯಮಗಳ ಪ್ರಕಾರ ದುಡಿಯುವ ಸಾಮರ್ಥ್ಯ ಇಲ್ಲದವರನ್ನು (ವಯಸ್ಸಾದವರು ಹಾಗೂ ಮಕ್ಕಳು) ಶಿಬಿರಕ್ಕೆ ಕರೆತಂದ ತಕ್ಷಣವೇ ಕೊಲ್ಲಬೇಕು. ಅದರಂತೆ ವಯಸ್ಸಾದ ಎಲಿಸಿಯೋ ಶಿಬಿರಕ್ಕೆ ಬಂದು ಸ್ವಲ್ಪ ಸಮಯದ ತರುವಾಯ ಗ್ಯಾಸ್ ಛೇಂಬರಿನಲ್ಲಿ ಕೊಲ್ಲಲ್ಪಡುತ್ತಾರೆ. ಈಗ ಮಕ್ಕಳ ಸರದಿ. ಸ್ನಾನ ಮಾಡಿಸುವ ನೆಪದಲ್ಲಿ ಗ್ಯಾಸ್ ಛೇಂಬರಿಗೆ ಮಕ್ಕಳನ್ನು ಕರೆದೊಯ್ಯುತ್ತಾರೆ ಜರ್ಮನ್ ಕಾವಲುಗಾರರು. ಆದರೆ ಸ್ನಾನ ಮಾಡುವುದನ್ನು ದ್ವೇಷಿಸುವ ಜೋಶುವಾ ಉಳಿದ ಮಕ್ಕಳೊಂದಿಗೆ ಹೋಗದೇ ಬದುಕುಳಿಯುತ್ತಾನೆ.

ಗಾಳಿ ಬೆಳಕು ಸರಿಯಾಗಿ ಬರದ ಗೂಡಿನಂತಹ ಸೆರೆಶಿಬಿರದ ವಾತಾವರಣನ್ನೂ, ತಾಯಿಯಿಂದ ದೂರವಿರುವುದನ್ನೂ ಸಹಿಸಲಾರದ ಜೋಶುವಾ ಅಲ್ಲಿಂದ ಹೊರಹೋಗುವಾ ಎಂದು ಗೈಡೋಗೆ ದುಂಬಾಲು ಬೀಳುತ್ತಾನೆ. ಅಂತಹ ಯಾವುದೇ ಸಾಧ್ಯತೆಗಳೂ ಕನಸಿನಲ್ಲೂ ಸಾಧ್ಯವಿಲ್ಲದಂತಹ ದುಃಸ್ಥಿತಿ ಅವರದು.
ಆದರೆ ಆಶಾವಾದಿ ಗೈಡೋ ಶಿಬಿರದ ನರಕಯಾತನೆಗಳನ್ನು, ತಮ್ಮ ಹೀನ ಸ್ಥಿತಿಯನ್ನು ಮಗನಿಂದ ಮುಚ್ಚಿಡಲು ತನ್ನ ಅದ್ಬುತ ಕಲ್ಪನಾಶಕ್ತಿಯ ಸಹಾಯವನ್ನು ಪಡೆದು ಮಗನ ಆಲೋಚನೆಯಲ್ಲಿ  ಸೆರೆಶಿಬಿರಕ್ಕೆ ಭಿನ್ನ ಆಯಾಮವೊಂದನ್ನು ಸೃಷ್ಟಿಸುತ್ತಾನೆ. 

ಇಡೀ ಶಿಬಿರವನ್ನು ಒಂದು ಸಂಕೀರ್ಣವಾದ ಆಟ ಎಂದು ಮಗನಿಗೆ ವಿವರಿಸುವ ಗೈಡೋ 'ಈ ಆಟದಲ್ಲಿ ಪ್ರತಿಯೊಬ್ಬರಿಗೂ ಹಲವು ಕಠಿಣವಾದ ಚಟುವಟಿಕೆಗಳನ್ನು ನೀಡಿರುತ್ತಾರೆ. ಆ ಚಟುವಟಿಕೆಗಳು ಅದೆಷ್ಟೇ ಕಠೋರ ಹಾಗೂ ಹಿಂಸೆ ನೀಡುವಂತಹದ್ದಾಗಿದ್ದರೂ ಅದನ್ನು ನಿರ್ವಹಿಸದೇಬಿಡುವಂತಿಲ್ಲ. ಅಂತಹ ಪ್ರತಿಯೊಂದು ಚಟುವಟಿಕೆಗಳಿಗೂ ಅಂಕಗಳಿದ್ದು ಯಶಸ್ವಿಯಾಗಿ ಅದನ್ನು ಮುಗಿಸುವವರು ಅಂಕಗಳನ್ನು ಪಡೆಯುತ್ತಾರೆ. ಯಾರು ಮೊದಲು 1000 ಅಂಕಗಳನ್ನು ಪಡೆಯುತ್ತಾರೋ ಅವರಿಗೆ ಒಂದು ನೈಜವಾದ ಯುದ್ಧ ಟ್ಯಾಂಕರ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಯಾರು ಅಮ್ಮನನ್ನು ನೋಡಬೇಕೆಂದು ಬಯಸಿ ಅಳುತ್ತಾರೋ ಹಾಗೂ ಹಸಿವೆಯಾಗುತ್ತದೆ ಎಂದು ಹಠ ಮಾಡುತ್ತಾರೋ ಅವರು ತಮ್ಮ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಅದೇ ರೀತಿ ಶಿಬಿರದ ಕಾವಲುಗಾರರಿಂದ ಅವಿತುಕೊಳ್ಳುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ' ಎಂದು ಇಡೀ ಸೆರೆಶಿಬಿರದ ದಿನಚರಿಯನ್ನು ಒಂದು ಆಟದ ಚೌಕಟ್ಟಿನಲ್ಲಿ ನಿರೂಪಿಸಿ ಜೋಶುವಾನ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ ಗೈಡೋ.

ಜೀವಹಿಂಡುವ ನಾಜಿ಼ ಡೆತ್ ಕ್ಯಾಂಪಿನ ಹಿಂಸೆಗಳನ್ನು, ತನ್ನೆಲ್ಲಾ ಯಾತನೆಗಳನ್ನು ಆಟದ ಭಾಗವೆಂಬಂತೆ ಮಗನ ಕಣ್ಣಿಗೆ ಅರಿಕೆ ಮಾಡಿಸುವಲ್ಲಿ ಯಶಸ್ವಿಯಾಗುವ ಗೈಡೋ ತಾನು ಸಾವಿಗೆ ಅತೀ ಸನಿಹದಲ್ಲಿರುವೆ ಎಂಬ ಸತ್ಯ ಜೋಶುವಾನ ಅರಿವಿಗೇ ಬಾರದಂತೆ ಅವನ ಮನಸ್ಸನ್ನು ಆಟದಲ್ಲೇ ಕೇಂದ್ರಿಕರಿಸುವಲ್ಲಿ ಗೆಲ್ಲುತ್ತಾನೆ.

ಮಹಾಯುದ್ಧದಲ್ಲಿ ಅಮೇರಿಕಾ ಮುಂದಾಳತ್ವದ ಮಿತ್ರಪಕ್ಷಗಳ ಕೈ ಮೇಲಾಗಿ ಹಿಟ್ಲರ್ ಹಾಗೂ ಮುಸಲೋನಿಯ ಶತ್ರುಪಕ್ಷಗಳ ಸೋಲು ಖಚಿತವಾಗುತ್ತದೆ. ಅಮೇರಿಕನ್ ಸೇನಾಪಡೆಗಳು ಆಗಮಿಸುವ ಮುನ್ನವೇ ಸೆರೆಶಿಬಿರಗಳನ್ನ ಖಾಲಿಯಾಗಿಸುವ ಗಡಿಬಿಡಿಯಲ್ಲಿ ಅಲ್ಲಿರುವವರನ್ನೆಲ್ಲಾ ಬೇರೆಡೆಗೆ ಸಾಗಿಸಲು ಆರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೋಶುವಾನನ್ನು ರಸ್ತೆ ಬದಿಯ ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಕುಳ್ಳಿರಿಸಿ 'ಹೊರಗಿನ ಸದ್ದೆಲ್ಲಾ ಅಡಗಿ ಸಂಪೂರ್ಣ ಶಾಂತತೆ ನೆಲೆಸುವವರೆಗೂ ಆ ಪೆಟ್ಟಿಗೆಯಿಂದ ಹೊರಬರದೇ ಕುಳಿತರೆ 1000 ಅಂಕಗಳಿಸಿ ನೀನೇ ಈ ಆಟದಲ್ಲಿ ವಿಜೇತನಾಗುತ್ತೀಯಾ' ಎಂದು ಮಗನನ್ನು ನಂಬಿಸಿ ಯಾವುದೇ ಕಾರಣಕ್ಕೂ ಆತ ಗಲಭೆ ಶಾಂತವಾಗುವವರೆಗೆ ಹೊರಬಾರದಂತೆ ಮನವೊಲಿಸಿ ತಾನು ದೋರಾಳನ್ನು ಅರಸಿ ಹೊರಡುತ್ತಾನೆ ಗೈಡೋ.

ಆದರೆ ಹಾಗೆ ಹೊರಟ ಗೈಡೋ ಜರ್ಮನ್ ಸೈನಿಕರ ಕೈಯಲ್ಲಿ ಸಿಕ್ಕಿಬೀಳುತ್ತಾನೆ ಹಾಗೂ ಜರ್ಮನ್ ಅಧಿಕಾರಿ ಅವನನ್ನು ಕೊಲ್ಲಲ್ಲೆಂದು ಕರೆದೊಯ್ಯುತ್ತಾನೆ. ಹಾಗೆ ಹೋಗುವಾಗ ಗೈಡೋ ಜೋಶುವಾ ಅವಿತಿರುವ ಪೆಟ್ಟಿಗೆಯ ಮುಂಭಾಗದಿಂದಲೇ ಹಾದು ಹೋಗುತ್ತಾನೆ. ಪೆಟ್ಟಿಗೆಯ ಕಿಂಡಿಯಿಂದ ತನ್ನನ್ನೇ ನೋಡುತ್ತಿದ್ದ ಮಗನಿಗೆ ಕಣ್ಣು ಮಿಟುಕಿಸಿ ತಾನು ಆ ಸೈನಿಕರು ಹಾಗೂ ಅಧಿಕಾರಿಗಳಿಗೆ ಆದೇಶ ನೀಡುವವನಂತೆ ನಟಿಸುತ್ತಾ ಮಗನಿಗೆ ತನ್ನ ಸ್ಥಿತಿ ಅರಿವಾಗದಂತೆ, ಅವನ ಆತ್ಮಸ್ಥೈರ್ಯ ಕುಗ್ಗದಂತೆ ನಟಿಸುತ್ತಾನೆ. ನಂತರದಲ್ಲಿ ಗೈಡೋನನ್ನು ಕೊಲ್ಲಲಾಗುತ್ತದೆ.

ತಂದೆಯ ಮಾತಿನಂತೆ ಎಲ್ಲಾ ಶಾಂತವಾಗುವವರೆಗೂ ಪೆಟ್ಟಿಗೆಯೊಳಗೇ ಕುಳಿತ ಜೋಶುವಾ ಮರುದಿನ ಬೆಳಗ್ಗೆ ಎಲ್ಲೆಡೆ ನೀರವತೆ ಆವರಿಸಿ, ಅವಿತ್ತಿದ್ದ ಯಹೂದಿಗಳೆಲ್ಲಾ ನಿಧಾನವಾಗಿ ಹೊರಬರುವಾಗ ತಾನೂ ಪೆಟ್ಟಿಗೆಯಿಂದ ಹೊರಬರುತ್ತಾನೆ. ಏನು ಮಾಡಬೇಕೆಂದು ಅರಿವಾಗದೇ ಸುತ್ತಮುತ್ತ ನೋಟ ಹರಿಸುತ್ತಾ ರಸ್ತೆ ಮಧ್ಯೆ ನಿಂತವನನ್ನು ಒಂದು ಶಬ್ದ ಎಚ್ಚರಿಸುತ್ತದೆ. ಶಬ್ದ ಬಂದತ್ತ ನೋಟ ಹರಿಸುವವನಿಗೆ ಅಮೇರಿಕಾದ ಸೈನಿಕ ಚಲಾಯಿಸಿಕೊಂಡು ಬರುತ್ತಿದ್ದ ಶೆರ್ಮನ್ ಟ್ಯಾಂಕರ್ ಕಣ್ಣಿಗೆ ಬೀಳುತ್ತದೆ‌. ಅದನ್ನು ಕಂಡೊಂಡನೆ ತಂದೆ ಹೇಳಿದ ಬಹುಮಾನದ ಟ್ಯಾಂಕರ್ ತನಗೆ ದೊರಕಿತೆಂದು ಸಂತಸಪಡುವ ಪುಟ್ಟ ಜೋಶುವಾನಿಗೆ ತಂದೆ ಸತ್ತಿರುವನೆಂಬುದು ಅರಿವಾಗುವುದಿಲ್ಲ. ಅಮೇರಿಕನ್ ಸೈನಿಕ ಜೋಶುವಾನನ್ನು ಟ್ಯಾಂಕರ್ ಸವಾರಿಗೆ ಆಹ್ವಾನಿಸಿದಾಗ ಖುಷಿಯಿಂದ ಟ್ಯಾಂಕರ್ ಮೇಲೇರುವ ಜೋಶುವಾ ಅಕ್ಕಪಕ್ಕ ಸಾಗುತ್ತಿದ್ದ ಜನರನ್ನು ನೋಡತೊಡಗುತ್ತಾನೆ. ಶೀಘ್ರದಲ್ಲೇ ಆ ಗುಂಪಿನಲ್ಲಿ ತಾಯಿಯನ್ನು ಕಾಣುವ ಜೋಶುವಾ ಟ್ಯಾಂಕರಿನಿಂದ ಇಳಿದು ದೋರಾಳ ಬಳಿಗೋಡುತ್ತಾನೆ. ಅಮ್ಮನ ಬಳಿ ಅತೀವ ಸಂತೋಷದಿಂದ "ಅಮ್ಮಾ, ನಾನು ಗೆದ್ದೆ" ಎನ್ನುವ ಜೋಶುವಾನನ್ನು ಅಪ್ಪಿ ದೋರಾಳೂ ಮಗನನ್ನು ಅಪ್ಪಿ, "ಹೌದು ಮಗೂ, ನಾವು ಗೆದ್ದೆವು" ಎನ್ನುತ್ತಾಳೆ.

ತಂದೆಯ ಕಲ್ಪನಾಶಕ್ತಿಯ ಸಹಾಯದಿಂದ ಹೇಗೆ ಕೊನೆಯವರೆಗೂ ತಾನು ಸೆರೆಶಿಬಿರದ ಕಠೋರತೆಯ ಅರಿವೇ ಆಗದಂತೆ ಅಲ್ಲಿ ದಿನಗಳನ್ನು ಕಳೆದೆ ಎಂದು ತನ್ನ ತಂದೆಯ ತ್ಯಾಗದ ಕಥನವನ್ನು ವಯಸ್ಕ ಜೋಶುವಾ ಸ್ವಗತದಲ್ಲಿ ನೆನಪಿಸಿಕೊಳ್ಳುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಪ್ರಥಮಾರ್ಧದಲ್ಲಿ ಕೊಂಚ ಬೋರಿಂಗ್ ಎನಿಸುವ ಕಥೆ ದ್ವಿತಿಯಾರ್ಧದಲ್ಲಿ ಮಾತ್ರ ನೋಡುಗರ ಮನಸ್ಸನ್ನು ಅಲುಗಾಡಿಸುತ್ತದೆ. ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಅವರ ಅನುಮಾನಗಳನ್ನು ತೊಡೆಯುವುದು ಇಡೀ ಪ್ರಪಂಚದಲ್ಲಿ ಅತೀ ಕಠಿಣವಾದ ಕೆಲಸ. ಒಂದು ಪ್ರಶ್ನೆಗೆ ಉತ್ತರಿಸುವುದರೊಳಗೆ ಇನ್ನೊಂದು ಅನುಮಾನ ಅವರ ಪುಟ್ಟ ಮೆದುಳಿನೊಳಗೆ ತಯಾರಾಗಿರುತ್ತದೆ. ಅಂತಹುದೇ ಐದು ವರ್ಷದ ಮಗುವಿಗೆ ಇಡೀ ಸೆರೆಶಿಬಿರವನ್ನು ಒಂದು ಆಟದ ರೂಪದಲ್ಲಿ ಸಮರ್ಪಕವಾಗಿ ನಿರೂಪಿಸಿರುವ ರೀತಿ ಎಂತಹವರ ಮನಸ್ಸಿಗಾದರೂ ನಾಟದೇ ಬಿಡದು. ಈ ಒಂದು ಅಂಶದಿಂದಾಗಿಯೇ ಈ ಸಿನಿಮಾ ಹಿಟ್ಲರ್ ಇತಿಹಾಸ ಆಧಾರಿತ ಬೇರೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ಚಿತ್ರದುದ್ದಕ್ಕೂ ನಾಜಿ಼ ಕ್ರೌರ್ಯದ ಕರಿಛಾಯೆ ಕಾಣಸಿಗುತ್ತದಾದರೂ ಅದನ್ನೂ ಮೀರಿದ ಜೀವನ ಪ್ರೀತಿ, ಸಕರಾತ್ಮಕತೆ, ಆಶಾವಾದ ಚಿತ್ರವನ್ನು ಮೇರುಕೃತಿಯನ್ನಾಗಿಸಿದೆ‌.

ರಾಬರ್ಟೋ ಬೆನಿನಿ, ನಿಕೋಲೆಟ್ಟಾ ಬ್ರಾಸ್ಚಿ, ಜಾರ್ಜಿಯೋ ಕ್ಯಾನ್ತರಿನಿ ಅವರು ಕ್ರಮವಾಗಿ ಗೈಡೋ ಓರೆಫೈಸ್, ದೋರಾ ಓರೆಫೈಸ್ ಹಾಗೂ ಜೋಶುವಾ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಟಲಿಯಾದ್ಯಂತ ಅತ್ಯಂತ ಯಶಸ್ವಿಯಾಯಿತು. ಬೆನಿನಿ ಅವರಿಗೆ ಇಟಲಿಯ ನ್ಯಾಷನಲ್ ಹೀರೋ ಇಮೇಜ್ ತಂದುಕೊಟ್ಟ ಸಿನಿಮಾ ಇದು. ಪೋಪ್ ಜಾನ್ ಪಾಲ್ II ಅವರು ಈ ಚಿತ್ರವನ್ನು ತಮ್ಮ ಅತೀ ಇಷ್ಟದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಒಂದು ಎಂದು ಹೆಸರಿಸಿದ್ದಾರೆ.

1998ರ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಪ್ರಿಕ್ಸ್  ಪ್ರಶಸ್ತಿಯಿಂದ ಪುರಸ್ಕೃತವಾಗಿರುವ ಲೈಫ್ ಈಸ್ ಬ್ಯೂಟಿಫುಲ್, 71ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಬೆನಿನಿಯವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಮೇತ, ಅತ್ಯುತ್ತಮ ಮೂಲ ಸಂಗೀತ ಹಾಗೂ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 1998ರ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜನರ ಆಯ್ಕೆಯ ಪ್ರಶಸ್ತಿಯೊಂದಿಗೆ ಇನ್ನೂ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.

ಚಿತ್ರ ಬಿಡುಗಡೆಯಾದ ನಂತರ ಯಹೂದಿಗಳ ಹತ್ಯಾಕಾಂಡವನ್ನು ಹಾಸ್ಯಾಸ್ಪದವಾಗಿ ತೋರಿಸಿ ಪೀಡಿತರ ನೋವನ್ನು ಹಗುರವಾಗಿ ಕಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತಾದರೂ ಕಠಿಣ ಸಂದರ್ಭಗಳಲ್ಲಿ ಕಲ್ಪನಾಶಕ್ತಿಯನ್ನು ಬಳಸಿಕೊಂಡು ನಕರಾತ್ಮಕತೆಯಲ್ಲಿಯೂ ಹೇಗೆ ಸಕರಾತ್ಮಕತೆಯನ್ನು ಕಾಣಬಹುದು ಎಂಬುದಕ್ಕೆ ಭಾಷ್ಯದಂತಿದೆ ಈ ಚಿತ್ರ. ನಮ್ಮ ಕೈ ಮೀರಿ ಎದುರಾಗುವ, ನಾವು ಪರಿಹರಿಸಲಾಗದ ಸಮಸ್ಯೆಗಳ ಬಗ್ಗೆಯೇ ಯೋಚಿಸುತ್ತಾ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬಾರದು ಎಂಬುದನ್ನು ಅತ್ಯಂತ ಸಕಾರಾತ್ಮಕವಾಗಿ ಹೇಳುವ ಈ ಚಿತ್ರ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಇಂಗ್ಲೀಷ್ ಅಡಿಬರಹದೊಂದಿಗೆ ಹಾಗೂ ಇಂಗ್ಲೀಷ್ ಭಾಷೆಯಲ್ಲೂ ಲಭ್ಯವಿರುವ ಈ ಚಿತ್ರವನ್ನು ಆಸಕ್ತರು ಯೂ ಟ್ಯೂಬಿನಲ್ಲಿ ವೀಕ್ಷಿಸಬಹುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ