ಗುರುವಾರ, ಮೇ 28, 2020

ಅನೂಹ್ಯ 1

'ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ         
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು 
ಮದುವೆಗೋ ಮಸಣಕೋ ಬೇಕೆಂದ ಕಡೆಗೋಡು ಪದಕುಸಿಯೇ ನೆಲವಿಹುದು ಮಂಕುತಿಮ್ಮ'
         
ಎಷ್ಟು ಅರ್ಥಪೂರ್ಣ ಈ ಕವಿವಾಣಿ. ವಿಧಾತನ ಇಚ್ಚೆಯಂತೆ ಈ ಬದುಕು. ನಾವೇನೇ ಎಣಿಸಿದರೂ ದೈವದ ಎಣಿಕೆಯಂತೆಯೇ ಜೀವನ ಪಥ. ಹಾಗಿಲ್ಲವಾದರೆ ನನ್ನ ಬಾಳಬಂಡಿ ಮಸಣದಿಂದ ಮದುವೆಗೆ, ಮದುವೆಯಿಂದ ನಂದನದಂತಹ ಈ ಮನೆಗೆ ಬಂದು ನಿಲ್ಲುತ್ತಿತ್ತೇ? ಆ ಮಸಣ ಸದೃಶ ನರಕದಿಂದ ಬಿಡುಗಡೆ ಸಿಗಬಹುದೆಂಬ ಸಣ್ಣ ಆಸೆಯೂ ನನಗಿರಲಿಲ್ಲ. ಆದರೆ ವಿಧಿ ನನ್ನ ಕೈ ಬಿಡಲಿಲ್ಲ. ಎಷ್ಟಾದರೂ ಭಗವಂತ ಕರುಣಾಮಯಿ ಅಲ್ಲವೇ? ನನ್ನ ಅಧಃಪತನ ಕಂಡು ಅವನಿಗೂ ಮರುಕ ಹುಟ್ಟಿರಬೇಕು. ಇಬ್ಬರು ದೈವಸ್ವರೂಪಿ ಮನುಜರನ್ನು ನನ್ನ ಕರ ಹಿಡಿದು ನಡೆಸಲು ಕಳಿಸಿದ್ದ. 
           
ನಾನೀಗ ಪರಮಸುಖಿ ಎಂದರೆ ತಪ್ಪಾಗಲಾರದು. ಈ ಮನೆಯವರೆಲ್ಲರಿಗೂ ನಾನೆಂದರೆ ಪ್ರಾಣ. ನಮ್ಮನ್ನು ಪ್ರೀತಿಸುವ, ಆದರಿಸುವ ಜೀವಗಳಿದ್ದರೇ ಬದುಕೇ ಸುಂದರ. 
         
ಆದರೇ...............

ಇದೆಲ್ಲಾ ಎಲ್ಲಿಯವರೆಗೆ??? 
ನನ್ನ ಹಿನ್ನೆಲೆ, ಪೂರ್ವಾಪರ ಇವರಿಗೆಲ್ಲಾ ತಿಳಿಯುವ ತನಕ. ನನ್ನ ಸತ್ಯ ತಿಳಿದಾಗ? ಆಗಲೂ ಹೀಗೇ ಆದರಿಸುವರೇ? ಇಲ್ಲಾ.. ಖಂಡಿತ ಇಲ್ಲ. ಆಗ ಇವರು ನನ್ನ ಈ ಮನೆಯಿಂದ ತಮ್ಮ ಮನದಿಂದ ಹೊರಹಾಕಲು ಯತ್ನಿಸುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಯಾವ ಮನೆಯವರು ನನ್ನಂಥವಳನ್ನು ಮನೆಯಲ್ಲಿರಿಸಿಕೊಂಡಾರು? 

ಈ ವಿಚಾರ ತಲೆಗೆ ಬಂದೊಡನೆ ನವ್ಯಾಳಿಗೆ ನಿಂತಲ್ಲೇ ಬವಳಿ ಬಂದಂತಾಯಿತು. ಒಡಲಾಳದಲ್ಲಿ ಅವ್ಯಕ್ತ ಸಂಕಟ..... 'ಈ ಕಿಶೋರನಿಗೆ ತಾನು ಮದುವೆಗೆ ಮೊದಲೇ ಹೇಳಿದ್ದೆ. ಈ ಸುಳ್ಳಿನ ಕಣ್ಣಾಮುಚ್ಚಾಲೆ ಬೇಡ. ಇರೋ ಸತ್ಯ‌ ಎಲ್ಲಾ ಹೇಳ್ಬೇಡಿ ಅಂತ. ಆದರೆ ಅವರೋ, ಈಗ ಬೇಡ ನವ್ಯಾ. ಸರಿಯಾದ ಸಮಯ ನೋಡಿ ಹೇಳೋಣ ಅಂದ್ಬಿಟ್ರು. ಸಮಾ ಕೂಡಾ ಹಾಗೇ ಅಂದಾಗ ನಾನು ಸುಮ್ಮನಾದೆ. ಇವರಿಬ್ಬರಿಗೂ ನನ್ನ ಭಯ ಯಾಕೆ ಅರ್ಥವಾಗುತ್ತಿಲ್ಲ? ನಂಗೋ ಕಣ್ಮುಚ್ಚಿದ್ರೂ ನಿದ್ದೆ ಹತ್ತೋಲ್ಲ.  ಏನೇನೋ ಕೆಟ್ಟ ಯೋಚನೆಗಳು. ಅದೇ ನರಕದ ನೆನಪು. ಛೇ....'  ಯೋಚಿಸುತ್ತಲೇ ತಲೆ ಕೊಡವಿದಳು.
            
ಅಷ್ಟರಲ್ಲೇ ಮನೆ ಮುಂದೆ ಬೈಕ್ ನಿಂತ ಸದ್ದಾಯಿತು. "ಅತ್ಗೇ, ಒಂದ್ಲೋಟ ಕಾಫಿ" ಕೂಗುತ್ತಲೇ ಒಳಬಂದ ಕಾರ್ತಿಕ್ ಅಲ್ಲೇ ಸೋಫಾ ಮೇಲೆ ಧೊಪ್ಪೆಂದು ಕುಳಿತ. 

"ಅಲ್ವೋ, ಸ್ವಲ್ಪ ಕೈಕಾಲು ಮುಖ ತೊಳ್ಕೊಂಡ್ ಬಟ್ಟೆ ಬದಲಾಯಿಸಿ ಕೂತ್ಕೋಬಾರ್ದ?" ಎಂದರು ಮಂಗಳಾ.
        
"ಇವತ್ತು ಕಾಲೇಜಲ್ಲಿ ಫುಲ್ ಕ್ಲಾಸ್. ಲೆಕ್ಚರ್ ಕೇಳಿ ಕೇಳಿ ಸಾಕಾಗಿದೆ. ಸಾಲದ್ದಕ್ಕೆ ಬಿಸ್ಲು ಬೇರೆ. ನೀನು ಸುಮ್ನಿರಮ್ಮ" ಅಂದ. 
         
"ಅದೇನು ಕಾಲೇಜಿಗೆ ಹೋಗ್ತೀಯೋ, ಏನ್ ಓದ್ತೀಯೋ. ಒಂದು ದಿನ ಪುಸ್ತಕ ಹಿಡಿದಿದ್ದು ನಾಕಾಣೆ" ಗೊಣಗಿದರು ಮಂಗಳಾ. 
          
"ಅಯ್ಯೋ ಅಮ್ಮಾ, ಇನ್ನೂ ಚಿಕ್ಕೋನು. ಸರಿ ಹೋಗ್ತಾನೆ ಯೋಚನೆ ಮಾಡಬೇಡಿ" ಅಂತ ಮೈದುನನ ಪರ ವಹಿಸಿದಳು ನವ್ಯಾ.
           
"ಏನೋಮ್ಮ, ನೀನುಂಟು ಅವನುಂಟು. ನನಿಗಂತೂ ಸಾಕಾಗಿದೆ. ಇವ್ನು ನಿನ್ನ ಜವಾಬ್ದಾರಿ. ನಿನ್ನ ಮಾವನಿಗಂತೂ ಪೇಪರ್ ಒಂದು ಇದ್ಬಟ್ರೇ ಲೋಕವೇ ಬೇಡ. ಇನ್ನು ಕಿಶೋರ ಒಬ್ಬನೇ ಪಾಪ ಎಷ್ಟೂಂತ ಮಾಡ್ತಾನೆ?" ಅಂದಿದ್ದೇ ತಡ, 
"ಏನೇ, ನನ್ನ ಬಗ್ಗೆ ಸೊಸೆ ಹತ್ರ ಚಾಡಿ ಹೇಳ್ತಿದ್ದೀ. ನೋಡು ನವ್ಯಾ, ನಿಮ್ಮತ್ತೇ ನಿಧಾನಕ್ಕೆ ಒಂದೊಂದೇ ಜವಾಬ್ದಾರಿ ನಿನ್ನ ಹೆಗಲಿಗೇರಿಸ್ತಾ ಇದ್ದಾಳೆ" ಗುಟುರು ಹಾಕಿದರು ಸತ್ಯನಾರಾಯಣ.
         ‌‌ 
"ಅಪ್ಪಾ..... ಅಮ್ಮಂಗೆ ತುಂಬಾ ವಯಸ್ಸಾಗಿದ್ಯಂತೆ. ಹಾಗಾಗಿ ಜವಾಬ್ದಾರಿ ಬೇರೆಯೋರಿಗೆ ವಹಿಸ್ತಿದ್ದಾಳೆ. ಇದೇ ಛಾನ್ಸು. ನಿನ್ನ ಜವಾಬ್ದಾರಿನೂ ಯಾರಿಗಾದ್ರೂ ವಹಿಸೋಕ್ಹೇಳು" ಕಾರ್ತಿಕ್ ಅಂದಾಗ ಸತ್ಯನಾರಾಯಣ ಜೋರಾಗಿ ನಕ್ಕರೆ, ನವ್ಯಾಳಿಗೂ ನಗು ತಡೆಯಲಾಗಲಿಲ್ಲ. 
          
"ಒದೋ ಅಂದ್ರೆ ತಲೆ ಎಲ್ಲಾ ಮಾತಾಡ್ತೀಯ" ಮಂಗಳಾ ಹೊಡೆಯಲು ಹೊರಟಾಗ,  ತನ್ನ ರೂಮಿಗೆ ಓಡಿದ.
     
"ಅಮ್ಮ, ನೀವೇನೂ ಯೋಚನೆ ಮಾಡಬೇಡಿ. ಇವ್ನು ನನ್ನ ಜವಾಬ್ದಾರಿ" ಅಂದ ಸೊಸೆಯ ತಲೆ ಸವರಿದರು ಮಂಗಳಾ. ರೂಮಿನಲ್ಲಿ ಬ್ಯಾಗ್ ಎಸೆದು ಬಂದವನೇ, "ಬನ್ನೀ ಅತ್ಗೇ, ಒಂದು ರೌಂಡ್ ವಾಕಿಂಗ್ ಹೋಗೋಣ" ಎಂದ. "ಇಲ್ಲ ಕಾರ್ತಿಕ್, ರಾತ್ರಿ ಅಡಿಗೆ ಇನ್ನೂ ಆಗಿಲ್ಲ" ಅಂದಳು. 
        
"ಯಾವಾಗ್ಲೂ ಮನೇಲೇ ಇರ್ತೀ. ನೀನು ಬಂದ್ಮೇಲೆ ನನಗೆ ಕೆಲಸವೇ ಇಲ್ಲ. ಎಲ್ಲ ನೀನೇ ಮಾಡ್ತೀ. ಇವತ್ತಿನ ಅಡಿಗೆ ನಾನು ಮಾಡ್ತೀನಿ. ನೀನು ಹೋಗಿ ಬಾ" ಅಂದವರ ಕಣ್ಣಲ್ಲಿನ ಮೆಚ್ಚುಗೆ, ಅಂತಃಕರಣಕ್ಕೆ ನವ್ಯಾಳ ಕಣ್ಣು ತುಂಬಿತು. 'ದೇವರೇ, ಇವರ ಆಸರೆಯನ್ನು ನನ್ನಿಂದ ಕಸಿಯಬೇಡ ತಂದೇ' ಎಂದು ಮನ ಪ್ರಾರ್ಥಿಸಿತು. ಇಬ್ಬರೂ ಹೊರಟು ರಸ್ತೆಯ ತಿರುವಿನಲ್ಲಿ ಮರೆಯಾಗುವವರೆಗೂ ನಿಂತು ನೋಡಿದರು ಮಂಗಳಾ.

ಮುಂದುವರೆಯುತ್ತದೆ.....

2 ಕಾಮೆಂಟ್‌ಗಳು:

  1. ನವ್ಯಾಳ ಜೀವನದಲ್ಲಿ ಬಹುಶಃ ಅವಳ ಗಂಡನ ಮನೆಯವರು ಒಪ್ಪಿಕೊಳ್ಳಲಾಗದ ಯಾವುದೋ ಘಟನೆ ನಡೆದಿದೆ.... ಮುಂದಿನ ಅಧ್ಯಾಯದ ನಿರೀಕ್ಷೆಯಲ್ಲಿರುವೆ....ಈ ಧಾರಾವಾಹಿಯನ್ನು ಓದಬೇಕೆಂದು ಬಹಳ ಬಾರಿ ಅಂದುಕೊಂಡಿದ್ದೆ, ಆದರೆ ಒಂದಲ್ಲ ಒಂದು ಕಾರಣದಿಂದ ಪ್ರತೀ ಸಲ ವಿಘ್ನ ಎದುರಾಗುತ್ತಿತ್ತು... ಈಗ ನೀವು ಪ್ರಕಟಿಸಿದಂತೆ ಒಂದೊಂದೇ ಅಧ್ಯಾಯ ಓದಬಹುದು....

    ಪ್ರತ್ಯುತ್ತರಅಳಿಸಿ