ಇಂತಹ ನನಗೆ ಮತ್ತೆ ಜೀವವಿಜ್ಞಾನ ಯಾನ ಮಾಡುವ ಅವಕಾಶ ಈ ಪುಸ್ತಕದಿಂದ ಒದಗಿಬಂತು. ಕೆಲವಷ್ಟು ಪರಿಚಿತ ಸಸ್ಯಗಳ ಸಂಪೂರ್ಣ ಹಿನ್ನೆಲೆಯ ಜೊತೆಗೆ ಹಲವಷ್ಟು ಹೊಸ ಹೊಸ ಸಸ್ಯ ಪ್ರಭೇದಗಳ ಪರಿಚಯವಾಯಿತು. ಮಲೆನಾಡಿನಲ್ಲಿ ದಿನನಿತ್ಯ ನಾವು ನೋಡುವ, ಕಳೆಯೆಂದೋ ಅಥವಾ ಉಪಯೋಗವಿಲ್ಲದ್ದೆಂದೋ ಭಾವಿಸುವ ಹಲವು ಸಸ್ಯಗಳ ಆರೋಗ್ಯ ಸಂಬಂಧಿ ಹಾಗೂ ರಾಸಾಯನಿಕ ಉಪಯೋಗಗಳ ಬಗ್ಗೆಯೂ ಒಂದಿಷ್ಟು ಜ್ಞಾನ ದಕ್ಕಿತು. ವೈಜ್ಞಾನಿಕ ಆಧಾರದಲ್ಲಿ ಮಾಹಿತಿಗಳನ್ನು ತುಂಬಿಸಿಕೊಂಡ ಹೊತ್ತಿಗೆಯಾದರೂ ಬಿ ಜಿ ಎಲ್ ಸ್ವಾಮಿಯವರ ಸ್ವಾರಸ್ಯಕರ ನಿರೂಪಣಾ ಶೈಲಿಯಿಂದ ಪುಸ್ತಕ ಆರಾಮವಾಗಿ ಓದಿಸಿಕೊಳ್ಳುತ್ತದೆ. ಪಠ್ಯ ಪುಸ್ತಕ ಓದಿದ ಅನುಭವ ಕೊಡದೆಯೇ ಪಠ್ಯಕ್ಕಿಂತ ಆಳವಾದ ಮಾಹಿತಿಗಳನ್ನು ಮನದಟ್ಟು ಮಾಡಿಸುವ ಶೈಲಿ ಮುದ ಕೊಡುತ್ತದೆ. ಜೊತೆಗೆ ಸಸ್ಯಗಳ ನಿಖರ ಸ್ವರೂಪ ತಿಳಿಯಲು ಸ್ವಾಮಿಯವರೇ ರಚಿಸಿದ ರೇಖಾಚಿತ್ರಗಳು ಪುಸ್ತಕದುದ್ದಕ್ಕೂ ಇವೆ.
ಸಸ್ಯ ಜಗತ್ತಿನ ಪರ್ಯಟನೆಯೊಂದಿಗೇ ಪ್ರಾಧ್ಯಾಪಕನ ಬದುಕಿನ ಜಂಜಾಟಗಳನ್ನೂ ಅಷ್ಟೇ ವಿನೋದದಲ್ಲಿ ಅಕ್ಷರಗಳಿಗಿಳಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಪ್ರಾಂಶುಪಾಲರು ಹಾಗೂ ಕಛೇರಿ ಸಿಬ್ಬಂದಿಗಳೊಂದಿಗಿನ 'ಮಧುರಾನುಬಂಧ', ಫೀಲ್ಡ್ ವಿಸಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಒದಗುವ 'ಅಪೂರ್ವ' ತಲೆಶೂಲೆಗಳು, ಪ್ರಯಾಣದ 'ಸುಖಾನುಭವ'....... ಎಲ್ಲವನ್ನೂ ಸ್ವಾಮಿಯವರ ಲಘು ಹಾಸ್ಯ ಶೈಲಿಯಲ್ಲಿ ಓದುವುದೇ ಚೆಂದ. ಜೊತೆಗೆ ಪ್ರತೀ ಸಸ್ಯದ ವಿವರಣೆಯಲ್ಲೂ ವೇದೋಪನಿಷತ್ತುಗಳಲ್ಲಿ ಆ ಸಸ್ಯದ ಬಗ್ಗೆ ಸಿಗಬಹುದಾದ ಒಕ್ಕಣೆಗಳು, ಕನ್ನಡ, ತಮಿಳು, ತೆಲುಗು ಕವಿಗಳು ಅದನ್ನು ತಮ್ಮ ಕಾವ್ಯಗಳಲ್ಲಿ ಹೇಗೆ ನಿರೂಪಿಸಿರುವರೆಂಬ ಲಾಲಿತ್ಯಮಯ ಮಾಹಿತಿಗಳನ್ನು ಕೂಡಾ ಸ್ವಾಮಿಯವರು ನೀಡುತ್ತಾರೆ. ಕನ್ನಡದಷ್ಟೇ ಅಧಿಕಾರಯುತವಾಗಿ ತಮಿಳು ಸಾಹಿತ್ಯದ ಬಗ್ಗೆ, ನಟ್ರಿಣೈ, ಕುರುಂತೊಗೈ , ಶಿಲಪ್ಪದಿಗಾರಂ, ಅಗನಾನೂರು಼ ಮೊದಲಾದ ಸಂಗಂ ಸಾಹಿತ್ಯದ ಕ್ಲಾಸಿಕ್ ಕೃತಿಗಳನ್ನೂ ಉಲ್ಲೇಖಿಸಿರುವುದು ಅವರ ಓದಿನ ಹರವಿಗೆ, ವಿಸ್ತಾರಕ್ಕೆ ಸಾಕ್ಷಿ. ಯಾವುದೇ ಪೂರ್ವ ಜ್ಞಾನವಿಲ್ಲದೇ ಸಸ್ಯಶಾಸ್ತ್ರದ ಬಗ್ಗೆ ಒಂದಿಷ್ಟು ತಿಳುವಳಿಕೆ ಪಡೆಯಲಿಚ್ಚಿಸುವವರಿಗೆ ಈ ಪುಸ್ತಕ ಉತ್ತಮ ಆಯ್ಕೆ.
(ಅಂದಹಾಗೆ ಈ ಪುಸ್ತಕದ ಎರಡು ಅಧ್ಯಾಯಗಳು - 'ಮಾಧವೀಲತೆ' ಮತ್ತು 'ಸಾರ್ಕೆಂಡ್ರಾ' ನಮಗೆ ಪದವಿಪೂರ್ವ ಕಾಲೇಜಿನ ಕನ್ನಡ ಪಠ್ಯದ ಭಾಗವಾಗಿತ್ತು ಕೂಡಾ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ