ಶನಿವಾರ, ಅಕ್ಟೋಬರ್ 8, 2022

ಅಜ್ಜಿಯೆಂಬ ಮಧುರ ಸ್ಮೃತಿ

बातें भलू जाती हैं
यादें याद आती हैं

ಆನಂದ್ ಭಕ್ಷಿಯವರ ಈ ಸಾಲುಗಳಲ್ಲಿ ಬದುಕಿನ ಸಾರವೇ ಅಡಗಿದೆಯಲ್ಲವೇ? ಮಾತುಗಳು ಬಂದು ಹೋಗುತ್ತವೆ. ಆದರೆ ಕಾಡುವ ನೆನಪುಗಳು ನೀಡುವ ನೋವು ಅಪಾರ. ಕಳೆದ ಮೌಲ್ಯಯುತ ಕ್ಷಣಗಳು ಸಿಹಿಕಹಿ ನೆನಪಿನ ರೂಪದಲ್ಲಿ ಮನದ ಕಣಜದಲ್ಲಿ ದಾಸ್ತಾನಾಗಿ ಪರಿವರ್ತಿತವಾಗಿ ನಮ್ಮ ಕೊನೆಯುಸಿರಿನವರೆಗೂ ಶಾಶ್ವತವಾಗಿ ಉಳಿದುಬಿಡುತ್ತದೆ. 

ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಅತೀ ಪ್ರಮುಖ ಎನಿಸುವಂತಹ ವ್ಯಕ್ತಿಗಳಿರುತ್ತಾರೆ. ಅಂತಹವರ ಅಗಲಿಕೆ ಸೃಷ್ಟಿಸುವ ಖಾಲಿತನ ಬದುಕಿನುದ್ದಕ್ಕೂ ಹಾಗೆಯೇ ಉಳಿದುಬಿಡುತ್ತದೆ. ಅದನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ. ಅವರೊಂದಿಗೆ ಕಳೆದ ಕ್ಷಣಗಳನ್ನೇ ಮೆಲುಕು ಹಾಕುತ್ತಾ ನಮ್ಮ ಸರದಿ ಬರುವವರೆಗೆ ಬಾಳಬಂಡಿ ಎಳೆಯಬೇಕಷ್ಟೇ. ನನ್ನ ಬದುಕಿನಲ್ಲಿನ ಅಂತಹದ್ದೇ ಜೀವನಾಡಿ ನನ್ನಜ್ಜಿ. 


ಆಗಾಗ ಅವರೇ ಹೇಳುತ್ತಿದ್ದಂತೆ ಓದಿದ್ದು ಮೂರನೇ ತರಗತಿವರೆಗಂತೆ. ಆದರೆ ಆಕೆಗಿದ್ದ ವಿವೇಚನೆ ಹಾಗೂ ಅರಿವಿನ ಜ್ಞಾನ ಡಬಲ್, ತ್ರಿಬಲ್ ಡಿಗ್ರಿಗಳನ್ನು ಗಳಿಸಿರುವ ನಮಗೂ ಇರಲಿಲ್ಲ ಎನ್ನುವುದು ಆಕೆಯನ್ನು ಬಲ್ಲ ಯಾರಾದರೂ ಚರ್ಚೆಯಿಲ್ಲದೇ ಒಪ್ಪುವ ಮಾತು. ಅಮ್ಮ ಸರ್ಕಾರಿ ನೌಕರಿಯಲ್ಲಿ ಪರವೂರಿನಲ್ಲಿದ್ದುದರಿಂದ ನಾನು 'ಅಜ್ಜಿಪುಲ್ಲಿ'ಯಾಗಿಯೇ ಬೆಳೆದಿದ್ದು. ನನ್ನನ್ನು ಸೊಂಟದ ಮೇಲೆ ಹೊತ್ತು ಇಡೀ ಊರಿನ ತುಂಬಾ ಅಂಬಾರಿ ಮೆರವಣಿಗೆ ಮಾಡಿಸುತ್ತಿದ್ದ ದಿನಗಳು ಇಂದಿಗೂ ನೆನಪಿನಾಳದಲ್ಲಿ ಹಚ್ಚಹಸಿರು. ನಂತರದ ದಿನಗಳಲ್ಲಿ ಅಮ್ಮನಿಗೆ ವರ್ಗಾವಣೆಯಾಗಿ ನಮ್ಮೂರಿನ ಸಮೀಪದ ಶಾಲೆಗೇ ಬಂದರಾದರೂ ಅವರ ಕೆಲಸದ ಹೊರೆಯೇ ವಿಪರೀತವಿತ್ತು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಮನೆಬಿಟ್ಟು ಸಂಜೆ ಐದರ ನಂತರ ಮನೆ ಸೇರುತ್ತಿದ್ದವರಿಗೆ ಕೆಲಸದ ಒತ್ತಡ ವಿಪರೀತವೇ. ಹಾಗಾಗಿ ನಾನು ಮತ್ತು ತಮ್ಮ ಅಜ್ಜಿಗೆ ಅಂಟಿಕೊಂಡಿದ್ದೇನೂ ಅತಿಶಯವಲ್ಲ. ಅಜ್ಜಿಯ ಪ್ರೀತಿಗೆಲ್ಲ ಏಕೈಕ ವಾರಸುದಾರಿಣಿಯಂತೆ ಮೆರೆಯುತ್ತಿದ್ದ ನನಗೆ ಭಯಂಕರ ಅಸೂಯೆ ಕಾಡಿದ್ದು ತಮ್ಮ ಹುಟ್ಟಿದಾಗ. ಅವ ಹುಟ್ಟಿದ ಮೇಲೆ ಅಜ್ಜಿಯ ಪ್ರೀತಿ ಇಬ್ಬರ ನಡುವೆ ಹಂಚಿಹೋದದ್ದು ನನಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾ ಅನುಭವ ಕೊಟ್ಟಿತ್ತು. ಆ ಕಾಲದ ಎಲ್ಲಾ ಅಜ್ಜಿಯಂದಿರಂತೆ ನಮ್ಮಜ್ಜಿಗೂ ಮೊಮ್ಮಗನ ಮೇಲೆ ಕೊಂಚ ಹೆಚ್ಚು ಪ್ರೀತಿ...... ಅದೇ ನನ್ನ ಉದರಕ್ಕೆ ಕಿಚ್ಚು ಹಚ್ಚುತ್ತಿದ್ದುದು. ಅವನು ಹದಿಮೂರು ದಿನದ ಮಗುವಾಗಿದ್ದಾಗ ಬಾವು(ಕುರು) ಎದ್ದು ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ಇದ್ದಾಗ, ಅದೆಷ್ಟೋ ಕಷ್ಟಪಟ್ಟು ಉಳಿಸಿಕೊಂಡಿದ್ದು. ಹಾಗಾಗಿ ಅವನ ಮೇಲಿನ ಕಾಳಜಿ ಮತ್ತಷ್ಟು ಜಾಸ್ತಿ. ಅದು ಸಣ್ಣವಳಾಗಿದ್ದ ನನ್ನ ಕಣ್ಣಿಗೆ ತಾರತಮ್ಯದಂತೆ ತೋರಿದ್ದ ದಿನಗಳೂ ಇವೆ. 

ಆದರೆ ಸಮಯ ಸರಿದಂತೆ ಆಕೆಯ ಪ್ರೀತಿಯ ಆಳದ ಅರಿವು ಆಗಿದ್ದೂ ಅಷ್ಟೇ ನಿಜ. ಬೆಳಿಗ್ಗೆ ಎದ್ದಕೂಡಲೇ ಒಂದು ಕೊಳಗ ಕಾಫಿ ಸರಬರಾಜಿನಿಂದ ಹಿಡಿದು, ಮಧ್ಯಾನ್ಹದ ಟಿಫಿನ್ ಬಾಕ್ಸಿನೊಳಗೆ ಗಮ್ಮನೆ ಕುಳಿತಿರುತ್ತಿದ್ದ ಕೆನೆ ಮೊಸರು, ಸಂಜೆ ಶಾಲೆಯ ಮಣಭಾರದ ಬ್ಯಾಗಿನೊಂದಿಗೆ ಕಿಕ್ಕಿರಿದು ತುಂಬಿದ ಬಸ್ಸಿಳಿದು ಮನೆಯೊಳಗೆ ಕಾಲಿಟ್ಟ ಕ್ಷಣದಲ್ಲಿ ಕಣ್ಮುಂದೆ ಹಾಜರಿರುತ್ತಿದ್ದ ಬಿಸಿ ಕಾಫಿ ಹಾಗೂ ಲಘು ಉಪಹಾರದ ಸ್ವಾದವನ್ನು ಈ ಜಿಹ್ವೆ ಎಂದಾದರೂ ಮರೆಯುವುದುಂಟೇ? 

ಬಹಳ ಕಷ್ಟದಲ್ಲಿ ಜೀವನ ನಡೆಸಿ, ಮೂವರು ಮಕ್ಕಳನ್ನು ಸಲಹಿ ಪೋಷಿಸಿದ ಜೀವವದು. ಗದ್ದೆ ಕೆಲಸ ಮುಗಿಸಿ, ಒರಳಿನಲ್ಲಿ ಭತ್ತ ಕುಟ್ಟಿ, ಅಕ್ಕಿ ಮಾಡಿ ಅದರಿಂದ ಅನ್ನಬೇ ಯಿಸಿ ಹೊಟ್ಟೆ ಹೊರೆಯುತ್ತಿದ್ದ ದಿನಗಳ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು ಅಜ್ಜಿ. ಅನ್ನಕ್ಕೆ ಅಕ್ಕಿ ಹಾಕಿ, ಅದು ಬೇಯುವುದರೊಳಗೆ ಇಡೀ ಊರನ್ನೇ ಒಂದು ಸಲ ಸುತ್ತು ಹಾಕಿ ಬರುತ್ತಿದ್ದ ಗಟ್ಟಿಗಿತ್ತಿ ಜೀವವದು. ದಿನಾ ಬೆಳಿಗ್ಗೆ ಎದ್ದು ಹೂ ಕೊಯ್ದು, ಕಟ್ಟಿ ಮಾಲೆಯಾಗಿಸಿ, ಎರಡು ಬಸದಿ, ಒಂದು ದೇವಸ್ಥಾನಕ್ಕೆ ಸುತ್ತು ಹಾಕದೇ ತಿಂಡಿಯನ್ನು ಬಾಯಿಗಿಡುತ್ತಿರಲಿಲ್ಲ. ಊರಿನಲ್ಲಿ ಇವರ ಪರಿಚಯವಿಲ್ಲದ ಒಂದೇ ಒಂದು ನರಪಿಳ್ಳೆಯೂ ಇಲ್ಲ. ಎಲ್ಲರಿಗೂ ಬೇಕಾದಾಕೆ, ಎಲ್ಲರ ಕಷ್ಟಸುಖಗಳಲ್ಲಿ ಪಾಲುದಾರೆ, ಎಲ್ಲರ ನೋವಿಗೂ ಮಿಡಿಯುವಂತಹ ಹಿರಿತಲೆ..... 

ಚಿನ್ಹೆ ಮಾತ್ರೆ(ಬಾಲಾಗ್ರಹ ಕುಟಿಕೆ), ಆಟಿ ಮದ್ದು, ಕಹಿ ಕಷಾಯಗಳನ್ನು ಮೂಗು ಹಿಡಿದು ಬಾಯೊಳಗೆ ಸುರಿಯುತ್ತಿದ್ದಾಗ 'ನಿನ್ನಂತಹ ಅಜ್ಜಿ ಯಾರಿಗೂ ಇರ್ಬಾರ್ದು ' ಅಂತ ಸಿಟ್ಟಿನಲ್ಲಿ ಒದರಾಡಿದ್ದೇನೆ. ಅವರು ಕೈ ಯ್ಯಾರೆ ತಯಾರಿಸುತ್ತಿದ್ದ ಸಿಹಿ ಸೊರೆದೋಸೆ, ಕಜ್ಜಾಯ, ಪತ್ರೋಡೆ, ಶ್ಯಾವಿಗೆ ತಿಂದು, 'ಅಜ್ಜಿ ನಿನ್ನಷ್ಟು ಒಳ್ಳೆಯವರು ಪ್ರಪಂಚದಲ್ಲೇ ಯಾರೂ ಇಲ್ಲ' ಅಂತ ಪ್ರಶಸ್ತಿಯನ್ನೂ ಕೊಟ್ಟಿದ್ದೇನೆ. ತೀರಾ ಇತ್ತೀಚೆಗೆ ಕೆಸುವಿನ ಸೊಪ್ಪಿನ ಚಟ್ನಿಯ ರೆಸಿಪಿ ಕೇಳಿ, ಅದರ ಸ್ವಾದ ಅವರ ಕೈ ರುಚಿಯಂತೆ ಇರದಿದ್ದದ್ದು ಕಂಡು, 'ನೀವು ಮಾಡಿದ ರೀತಿ ನಾನು ಮಾಡ್ಬಾರ್ದು ಅಂತ ತಪ್ಪು ರೆಸಿಪಿ ಹೇಳಿಕೊಟ್ಟಿದ್ರಲ್ಲಾ' ಅಂತ ಫೋನಿನಲ್ಲೇ ಸಣ್ಣಕಲಹ ನಡೆಸಿದ್ದೆ. 

ಇಷ್ಟೆಲ್ಲದರ ನಡುವೆಯೂ ಬದಲಾಗದೇ ಉಳಿದದ್ದು ಅವರ ಅಕ್ಕರೆ...... 'ಎಂತ ಮಾಡ್ತಿ ಮಗಾ? ಬಾಲೆ(ನನ್ನ ಮಗಳು) ಎಂತ ಮಾಡ್ತಾಳೆ? ಊಟ ಮಾಡಿದ್ಯಾ ? ಇನ್ನೂ ಮಾಡಿಲ್ಲಾ? ಹೀಗೆ ಮಾಡಿ ಆರೋಗ್ಯ ಹಾಳ್ ಮಾಡ್ಕೋ ನೀನು... ಹೇಳಿದ ಮಾತು ಅರ್ಥ ಆಗಲ್ಲ ನಿಂಗೆ... ಎಂತ ಸಾಂಬಾರು ಮಾಡಿದ್ದೇ?, ಆ ತಲೆ ನೋಡು ಚಪ್ಪರ ಮಾಡ್ಕೊಂಡಿದ್ದೀ... ಸಮಾ ಎಣ್ಣೆ ಹಾಕಿ ಚೆಂದ ಬಾಚಿ ಜಡೆ ಹಾಕ್ಕೊಳ್ಳೋಕೆ ಆಗಲ್ಲೇನು? ಇಗಾ, ಇದು ದೇವಸ್ಥಾನದಿಂದ ತಂದಿದ್ದು ಹೂವು, ಮುಡ್ಕ ಮಗ..... ಅದಂತ ಪ್ಯಾಷನ್ನೇನಾ, ಬೋಳು ಕೈ , ಬೋಳು ಹಣೆ ಇಟ್ಕೊಂಡು ತಿರ್ಗದು, ಒಂದೆರಡು ಮಣ್ಣಿನ ಬಳೆ(ಗಾಜಿನ ಬಳೆ) ಇಟ್ಟು, ಹಣೆಗೆ ಬೊಟ್ಟಿಡಕೆ ಆಗಲ್ವಾ ? ಅದೆಷ್ಟು ಸಣ್ಣಬೊಟ್ಟು? ಕಣ್ಣಿಗೆ ಕಾಣ್ತಿಲ್ಲ....., ಏ ಒಂಚೂರು ಬಾಲೆ ಮುಖ ತೋರ್ಸೇ ....'  ಫೋನಿನಲ್ಲಿನ ಇಂತಹ ಸಾವಿರ ಮಾತುಕತೆಗಳಲ್ಲಿ ಇಣುಕುತ್ತಿದ್ದದ್ದು ಶುದ್ಧ ಅಕ್ಕರೆಯಷ್ಟೇ.
ನಾನು ಪದವಿ ಓದಿನ ನಿಮಿತ್ತ ಊರುಬಿಟ್ಟು ಹಾಸ್ಟೆಲ್ ವಾಸಿಯಾದ ದಿನಗಳಲ್ಲಿಯೂ ನನಗಾಗಿ ಊರಜಾತ್ರೆಯಲ್ಲಿ ಐಸ್ ಕ್ರೀಂ ಖರೀದಿಸಿ ನನ್ನ ತಮ್ಮನ ಚೇಷ್ಟೆಗೆ ತಲೆಕೊಟ್ಟಿದ್ದನ್ನು ಮರೆಯಲಾದೀತೇ?

ಮನೆಗೆ ಯಾರೇ ಬಂದರೂ ಊಟ, ತಿಂಡಿ ಆಗದೇ ಕಳಿಸುವ ಮಾತೇ ಇರಲಿಲ್ಲ ಅಜ್ಜಿಯಲ್ಲಿ. ಯಾರಾದರೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸದೆ ಮದುವೆ ಮಾಡಿದರೆ ಅಥವಾ ಕೂಲಿ ಕೆಲಸಕ್ಕೆ ಕಳಿಸಿದ್ದು ತಿಳಿದರೆ, 'ಅದೆಂತಕ್ಕೆ ಓದು ವಯಸ್ಸಲ್ಲಿ ಇಂತದ್ದೆಲ್ಲ? ಗಂಡೋ , ಹೆಣ್ಣೋ ಮಕ್ಕಳನ್ನು ಓದಿಸ್ಬೇಕು' ಅಂತ ಅಜ್ಜಿ ಅವರ ಮನೆಯವರಿಗೆ ಹೇಳುವಾಗೆಲ್ಲಾ ಹೇಳಲಾರದಂತಹ ಹೆಮ್ಮೆಯ ಭಾವವೊಂದನ್ನು ಅಂತರಾಳದಿಂದ ಅನುಭವಿಸಿದ್ದೇನೆ...

ಡಿಕ್ಲೇಷನ್(ಡಿಕ್ಲರೇಷನ್), ಗಾಡೇಜ್(ಗಾಡ್ರೇಜ್), ಟಿಬಿ(ಟಿವಿ) ಎಂಬಿತ್ಯಾದಿ ಅವರ ಇಂಗ್ಲೀಷಿನ ಪಾಂಡಿತ್ಯ, ಪ್ರೌಢಿಮೆಯನ್ನು ಹೊಗಳಿ ಕಿಂಡಲ್ ಮಾಡಿರುವುದಕ್ಕೆ ಲೆಕ್ಕವಿಲ್ಲ. ಕಿನ್ನರಿಯಿಂದ ಆರಂಭವಾಗಿ ಕುಲವಧು, ಪುಟ್ಟಗೌರಿ, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿಯ ತನಕ ಕಲರ್ಸ್ ಕನ್ನಡದ ಸಕಲ ನಾಯಕಿಯರ ಸಂಸಾರದ ಗೋಳಾಟಕ್ಕೆ ಕಿವಿಯಾಗಿ, 'ಹಂಗೇ ಆಗ್ಬೇಕು ಕೇಡಿ ನಿಂಗೆ, ಪಾಪ ಆ ಹುಡುಗಿಗೆ ಎಷ್ಟು ಗೋಳು ಕೊಡೋದು ನೀನು' ಅಂತ ಅಜ್ಜಿ ಅವಲತ್ತುಕೊಳ್ಳುವಾಗಲೆಲ್ಲಾ ಅಜ್ಜಿಯನ್ಯಾಕೆ ಕಲರ್ಸ್ ಕನ್ನಡದವರು ಬ್ರಾಂಡ್ ಅಂಬಾಸಿಡರ್ ಮಾಡ್ಕೋಬಾರ್ದು ಅಂತ ನಾನು, ತಮ್ಮ ತೀವ್ರತರವಾದ ಚರ್ಚೆ ನಡೆಸಿದ್ದೇವೆ. ಅವರಷ್ಟು ವಿಶಿಷ್ಟವಾಗಿ ಧಾರಾವಾಹಿ ನೋಡುವ ಇನ್ನೊಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಧಾರಾವಾಹಿ ಬರುವಾಗ ಕುರ್ಚಿಯಲ್ಲೇ ಕಣ್ಣು ಕುಗುರಿಸಿಕೊಂಡು ಮಲಗಿ ಅಡ್ವರ್ಟೈಸ್ ಬರುವಾಗ ತಟಕ್ಕನೆ ಎದ್ದು ಟಿವಿ ನೋಡುವ ಸ್ಪೆಷಲ್ ಕ್ಯಾಂಡಿಡೇಟ್ ನಮ್ಮಜ್ಜಿ. ಮೂರು ಸರ್ತಿ ಅಡ್ವರ್ಟೈಸ್ಮೆಂಟ್ ಬರದೇ ಧಾರಾವಾಹಿ ಮುಗಿಯದು ಎಂಬ ಘನಘೋರ ಲೆಕ್ಕಾಚಾರ ಪ್ರವೀಣೆಯೆದುರು ವಾದ ಹೂಡಲಾಗದೇ ಶಸ್ತ್ರ ತ್ಯಾಗ ಮಾಡಿದ ದಿನಗಳಿಗೆ ಲೆಕ್ಕವಿಲ್ಲ.  ಅದಕ್ಕಿಂತಲೂ ಕಠೋರ ಪರಿಸ್ಥಿತಿ ಎಂದರೆ ಧಾರಾವಾಹಿ ಮುಗಿದು ಅರ್ಧ ಗಂಟೆ ಕಳೆದರೂ 'ಇಲ್ಲ, ಧಾರಾವಾಹಿ ಮುಗಿದಿಲ್ಲ, ನೀನೇ ಚಾನೆಲ್ ಬದಲಾಯಿಸಿದ್ದೀಯಾ' ಅನ್ನೋ ಗುರುತರ ದೋಷಾರೋಪಣೆ. ತಮ್ಮನ ಕ್ರಿಕೆಟ್ ಪ್ರೇಮಕ್ಕೆ ಅವರ ಧಾರಾವಾಹಿಗಳ ಬಲಿಯಾದಾಗಲೂ ಬೇಸರಿಸದೇ ಅವನ ಕ್ರಿಕೆಟ್ಟನ್ನೇ ಧಾರವಾಹಿಯಂತೆ ನೋಡಿದ ಧೀಮಂತೆ ನಮ್ಮಜ್ಜಿ. ಕ್ರಿಕೆಟ್ ನೋಡಲು ಗ್ಯಾಲರಿಯಲ್ಲಿ ಕುಳಿತ ಜನಸ್ತೋಮವನ್ನು ನೋಡಿ, 'ಇವರೆಲ್ಲಾ ಕಾಪಿ ಎಸ್ಟೇಟಲ್ಲಿ ಕೆಲಸ ಮಾಡೋಕೆ ಬಂದಿದ್ದಾರಾ?' ಅಂತ ಕೇಳಿದ್ದಾಕೆ ನನ್ನಜ್ಜಿ. ಗೋಲ್ಡನ್ ಸ್ಟಾರ್ ಗಣೇಶ್ ಟಿವಿಯಲ್ಲಿ ಕಂಡಾಗಲೆಲ್ಲಾ, 'ಅಗಳೇ, ಇವ ಮುಂಚೆ ನಮಸ್ಕಾರ, ನಮಸ್ಕಾರ, ನಮಸ್ಕಾರ ಅಂತ ಬರ್ತಿದ್ದ' ಎಂದು ಕಾಮಿಡಿ ಟೈಂ ಅನ್ನು ನೆನಪಿಸಿಕೊಳ್ಳುತ್ತಿದ್ದ ಅಜ್ಜಿಗೆ ಸಾಟಿಯುಂಟೇ. 

ವಯೋಸಹಜ ತೊಂದರೆಗಳಿಂದ ಕೊಂಚ ಬಳಲಿದಂತಾಗಿದ್ದು ತೀರಾ ಇತ್ತೀಚೆಗೆ. ಸರಿಸುಮಾರು ಎರಡು ವರ್ಷಗಳಿಂದ ದೈನಂದಿನ ದೇವರ ದರ್ಶನದ ಕಾರ್ಯಕ್ರಮ ನಿಂತಿತ್ತಾದರೂ ಹೂ ಕೊಯ್ದು ಮಾಲೆ ಕಟ್ಟಿ ದಿನವೂ ದೇವಸ್ಥಾನಕ್ಕೆ ಕಳಿಸುವುದು ತಪ್ಪಿಸಿರಲಿಲ್ಲ. ಎಷ್ಟೇ ಸುಸ್ತಾದರೂ ಅರೆಘಳಿಗೆ ಮಲಗಿ, ಏಳುತ್ತಿದ್ದರೇ ಹೊರತು ಮನೆಯೊಳಗಿನ ಓಡಾಟ, ಕೆಲಸ, ಬೊಗಸೆ ನಿಲ್ಲಿಸಿರಲಿಲ್ಲ. ಮೊನ್ನೆ ಅಷ್ಟಮಿಯ ದಿನ ತಮ್ಮನ ಹತ್ತಿರ ವಿಡಿಯೋ ಕಾಲ್ ಮಾಡಿಸಿ ಮೊಮ್ಮಗಳ ಮುಖ ನೋಡಿ ಮಾತನಾಡಿಸಿದ್ದರು. ಎಂಟನೇ ತಾರೀಕು ವಿಜಯದಶಮಿಯ ದಿನ ಬೆಳ್ಳಂಬೆಳಗ್ಗೆ ಅಮ್ಮನಿಗೆ ಕರೆ ಮಾಡಿ ಮಾತನಾಡಿದಾಗಲೂ ಖುಷಿಯಾಗಿದ್ದವರು ಅದೇ ಸಂಜೆಗೆ ಇನ್ನಿಲ್ಲವಾದರು ಎಂದರೆ ನಂಬುವುದು ಹೇಗೆ? ಅವರಾಸೆಯಂತೆಯೇ ಕೈ ಕಾಲು ಬಿದ್ದು ಹಾಸಿಗೆ ಹಿಡಿಯುವ ಮೊದಲೇ ಇಹಯಾತ್ರೆ ಮುಗಿಸಿದರು. ಅದೂ ವಿಜಯದಶಮಿಯ ದಿನ, ಅವರ ನೆಚ್ಚಿನ ಮನೆಯಲ್ಲೇ, ಅತೀ ಪ್ರೀತಿಪಾತ್ರ ಮೊಮ್ಮಗನ ಕೈಗಳಲ್ಲಿಯೇ...... ಒಂದಿನಿತೂ ನೋವಿಲ್ಲದ ಸುಖಮರಣ.... 

ಅದೆಷ್ಟು ಲಗುಬಗೆಯಿಂದ ಹೊರಟು ಬಂದರೂ ಕೊನೆಯ ಬಾರಿಗೊಮ್ಮೆ ಅವರ ಮುಖ ನೋಡುವ ಅವಕಾಶವೂ ಸಿಗಲೇ ಇಲ್ಲ ನನಗೆ.... ಆ ಬೇಸರ, ದುಃಖ ಸಾಯುವವರೆಗೂ ಮನದಾಳದಲ್ಲೆಲ್ಲೋ ಚುಚ್ಚುತ್ತಲೇ ಇರುತ್ತದೆ. 

ಮನೆ, ಅವರ ಕೋಣೆ, ಮಲಗುತ್ತಿದ್ದ ಮಂಚ, ಬಳಸುತ್ತಿದ್ದ ವಸ್ತುಗಳು, ಬೆಳಿಗ್ಗೆ ಪೂಜೆ ಮಾಡಿ ದೇವರಿಗೇರಿಸಿದ ಹೂವು ಎಲ್ಲವೂ ಇದ್ದಲ್ಲೇ ಇವೆ. ಅಂಗಳದ ಬದಿಯಲ್ಲಿನ ಕಾಕಡ, ಗೊರಟೆ, ದಾಸವಾಳ, ನಿತ್ಯಪುಷ್ಪ, ಗುಲಾಬಿ ಹೂಗೊಂಚಲುಗಳು ಗಾಳಿಗೆ ಆಡುತ್ತಾ ನಿಂತಿವೆ. 

ಆದರೆ ಅವುಗಳಿಗೆಲ್ಲಾ ಜೀವ ತುಂಬುತ್ತಿದ್ದ ತೊಂಬತ್ತೆರಡರ ಹರೆಯದ ನನ್ನಜ್ಜಿ ಇನ್ನು ನೆನಪು ಮಾತ್ರ.... 

ಆ ಅಕ್ಕರೆಯ ಮಾತುಗಳು, ನಿಸ್ವಾರ್ಥ ಪ್ರೀತಿ, ಮಮತೆ ಎಲ್ಲವೂ ಇನ್ನು ನೆನಪಿನ ಬುತ್ತಿಯೊಳಗೆ ಮಾತ್ರ. ಬಾಲ್ಯದಲ್ಲಿ ನನ್ನನ್ನು ಸೊಂಟದ ಮೇಲೆ ಹೊತ್ತು ಮೆರೆಸುತ್ತಿದ್ದ ದಿನಗಳಿಂದ ಹಿಡಿದು, ಮೊನ್ನೆಯ ಜಂಗಮವಾಣಿಯ ಕರೆಗಳ ತನಕ ಪ್ರತೀ ಕ್ಷಣಗಳೂ ಮತ್ತೆ ಮತ್ತೆ ಕಾಡಿ ಕಣ್ಣೀರಾಗುತ್ತಿರುವ ಈ ಸಮಯದಲ್ಲಿ ನೆನಪಾಗುತ್ತಿರುವುದು ಆನಂದ ಭಕ್ಷಿಯವರ ಅದೇ ಸಾಲುಗಳು...... 

ಅಜ್ಜಿಯೊಂದಿಗೆ ಕಳೆದ ಕ್ಷಣಗಳು ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇರುತ್ತವೆ.....

Miss you ಸಚ್ಚಿ 💔💔

(ಮೂರು ವರ್ಷಗಳ ಹಿಂದಿನ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ