ಶನಿವಾರ, ಆಗಸ್ಟ್ 26, 2023

ನೆನಪಿನ ಪುಟಗಳ ನಡುವೆ.....


ಹೆಜ್ಜೆ ಮೂಡದ ಹಾದಿಯಲ್ಲೂ ಗೆಜ್ಜೆ ಕಟ್ಟಿ ಕುಣಿವ ನೆನಪುಗಳ ಮೆರವಣಿಗೆಗೆ ಸಾಟಿಯಾವುದುಂಟು ಈ ಜಗದೊಳಗೆ..... ಬಾಳ ಪುಟಗಳಲ್ಲಿ ಎಂದೆಂದೂ ಅಳಿಯದ ಮಧುರ ಸ್ಮೃತಿಯಾಗಿ ಉಳಿದಿರುವ ಅದೇ ಹಾದಿಗಳಲ್ಲಿ ಹದಿನೈದು ವರ್ಷಗಳ ತರುವಾಯ ಹೆಜ್ಜೆಯಿಟ್ಟ ಕ್ಷಣಗಳಲ್ಲಿ ಮನದೊಳಗೆ ಸುಳಿದ ಸಾಸಿರ ಭಾವಗಳು ಪದಗಳ ವ್ಯಾಪ್ತಿಗೆ ನಿಲುಕದ್ದು. ಈ ಊರು, ಈ ಹಾದಿ, ಈ ಮೈದಾನ, ಈ ಸಭಾಂಗಣ, ಈ ಕಟ್ಟಡ...... ನನ್ನ ಮಟ್ಟಿಗೆ ಮೆಲುಕು ಹಾಕಲಾರದಷ್ಟು ನೆನಪುಗಳ ಭಂಡಾರವಿದು. ಕಾಲಾಂತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದರೂ ಈ ದಾರಿಯಲ್ಲಿನ ಹದಿನೈದು ವರ್ಷಗಳ ಹಿಂದಿನ ಹೆಜ್ಜೆ ಗುರುತುಗಳು ನನ್ನ ಮನದ ಹಾದಿಯಲ್ಲಿ ಒಂದಿನಿತೂ ಮುಕ್ಕಾಗದೆ ಉಳಿದಿವೆ. ಇಂದು ಅದೇ ಹಾದಿಯಲ್ಲಿ ಸಾಗುವಾಗ ಸಮಯ ಹಿಂದಕ್ಕೆ ಚಲಿಸಿ ಅಂದಿನ ತುಂಟಾಟ, ತರಲೆ, ಉತ್ಸಾಹ, ಹುಮ್ಮಸ್ಸು, ಕುತೂಹಲ, ಗುರಿ, ಕನಸು, ಹಾಸ್ಯ, ಕೋಪ, ದುಃಖ..... ಎಲ್ಲವೂ ಮರುಕಳಿಸಿದಂತಹ ಭಾವ. ಯಾವ ಜವಾಬ್ದಾರಿ ಚಿಂತೆಗಳ ಗೊಡವೆಯಿಲ್ಲದ ಆ ದಿನಗಳು ಒಮ್ಮೆ ಮರಳಿ ಸಿಗಬಾರದಿತ್ತೇ ಎಂಬಂತಹ ತಪನ..... ಬದುಕಿಗೆ ಉತ್ಸಾಹ ತುಂಬುತ್ತಿದ್ದ ಯಾವುದೋ ಚೈತನ್ಯ ಲುಪ್ತವಾದಂತಹ ವಿಷಾದ..... ಏನೂ ಇಲ್ಲದೆಯೂ ಎಲ್ಲವೂ ಕೈ ಬೆರಳ ತುದಿಯಲ್ಲಿದೆ ಎನ್ನುವಷ್ಟು ನೆಮ್ಮದಿಯಿದ್ದ ಅಂದಿಗೂ, ಎಲ್ಲಾ ಇದ್ದೂ ಏನೇನೂ ಇಲ್ಲ ಎಂಬ ಯಾಂತ್ರಿಕ ಇಂದಿಗೂ ಅದೆಷ್ಟು ವ್ಯತ್ಯಾಸ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವವಾಣಿಯಂತೆ ಊರಿನ ರೂಪುರೇಷೆ ಬದಲಾಗಬಹುದೇನೋ ಆಗಲಿ ಅಲ್ಲಿ ಕಳೆದ ಕ್ಷಣಗಳಿಗೆ ವಿಸ್ಮೃತಿಯಿಲ್ಲ. ನನ್ನ ಇಂದಿನ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಸ್ಥಳವಿದು. ನಾನಿಂದು ಏನೇ ಇದ್ದರೂ ಅದರ ಶ್ರೇಯ ಮುಖ್ಯವಾಗಿ ಸಲ್ಲುವುದು ಎರಡು ಸಂಸ್ಥೆಗಳಿಗೆ. ಒಂದು ನನ್ನ ಬಾಲ್ಯವನ್ನು ಹಸನಾಗಿಸಿ ನನ್ನೊಳಗೆ ಔಪಚಾರಿಕ ಶಿಕ್ಷಣಕ್ಕೂ ಮೀರಿದ ಸಂಸ್ಕಾರಗಳನ್ನು ಹಾಸುಹೊಕ್ಕಾಗಿಸಿದ ಪ್ರಬೋಧಿನಿ ವಿದ್ಯಾಕೇಂದ್ರವಾದರೆ ಮತ್ತೊಂದು ನನ್ನ ಬದುಕಿನ ಗುರಿಗಳನ್ನು ಸುಸ್ಪಷ್ಟವಾಗಿಸಿದ ಧವಲಾ ಮಹಾವಿದ್ಯಾಲಯ. ಈ ಎರಡೂ ಸಂಸ್ಥೆಗಳೂ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸಿರುವ ಪಾತ್ರ ಮಹತ್ವದ್ದು. ಅಂತಹ ಸಂಸ್ಥೆಗೆ ಹಲವು ವರ್ಷಗಳ ನಂತರ ಮತ್ತೆ ಭೇಟಿ ನೀಡುವುದೆಂದರೆ ನೆನಪಿನ ಜೋಕಾಲಿಯಲ್ಲಿ ಜೀಕುತ್ತಾ ಕಳೆದ ಕ್ಷಣಗಳನ್ನು ಮರುಜೀವಿಸುವ ಸಂಚಾರ. ನಿನ್ನೆಯ ಧವಲಾ ಕಾಲೇಜಿನ ಭೇಟಿ ಅಂತಹುದೇ ನೆನಪಿನ ಓಣಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಸುಣ್ಣ ಬಣ್ಣ ಬದಲಾಗಿರುವುದನ್ನು ಹೊರತು ಪಡಿಸಿ ಹೆಚ್ಚು ಕಡಿಮೆ ಅದೇ ಕಟ್ಟಡ, ಅದೇ ಮೈದಾನ, ಅದೇ ಸಭಾಂಗಣ, ಅದೇ ಗ್ರಂಥಾಲಯ,ಅದೇ ತರಗತಿಗಳು, ಅದೇ ಸ್ಟಾಫ್ ರೂಂ...... ಆದರೂ ಅಂದಿದ್ದ ವಿದ್ಯಾರ್ಥಿಗಳು ಇಂದಿಲ್ಲ. ಅಂದಿನ ತಲೆಹರಟೆ ವಿದ್ಯಾರ್ಥಿಗಳು ಇಂದು ಸಾವಿರ ಜವಾಬ್ದಾರಿ ಹೊತ್ತು ಎಲ್ಲೆಲ್ಲೋ ಬದುಕು ಕಟ್ಟಿಕೊಂಡಿದ್ದಾರೆ. ಅಂದಿದ್ದ ಶಿಕ್ಷಕರಲ್ಲಿ ಹೆಚ್ಚು ಕಡಿಮೆ ಎಲ್ಲರೂ ವೃತ್ತಿವೇದಿಕೆಯಿಂದ ನಿವೃತ್ತರಾಗಿದ್ದಾರೆ. ಕೆಲವರು ಬದುಕಿನ ಪರದೆಯಿಂದಲೇ ಜಾರಿ ಬಾನಂಗಳದಲ್ಲಿ ನಕ್ಷತ್ರವಾಗಿದ್ದಾರೆ. ಸೆಮಿನಾರ್ ಎನ್ನುವ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ ಕನ್ನಡ ಮೇಷ್ಟ್ರು ಅಜಿತ್ ಪ್ರಸಾದ್, ಪ್ರಾಚ್ಯವಸ್ತು ಶಾಸ್ತ್ರ, ಶಾಸನ ಶಾಸ್ತ್ರ, ನಾಣ್ಯಶಾಸ್ತ್ರಗಳ ಅದ್ಬುತ ಲೋಕವನ್ನು ಅನಾವರಣಗೊಳಿಸಿ ಇತಿಹಾಸದ ಇನ್ನೊಂದು ಮಜಲನ್ನು ಪರಿಚಯಿಸಿದ ಪುಂಡಿಕೈ ಗಣಪಯ್ಯ ಭಟ್ ಸರ್, ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳನ್ನು ಮೆದುಳಿಗೆ ಮನನಗೊಳಿಸಿದ ವಾಸುದೇವ ಭಟ್, ಸುದರ್ಶನ್ ಕುಮಾರ್ ಹಾಗೂ ಗೋಪಾಲ್ ಸರ್ ಈಗ ಇಲ್ಲಿಲ್ಲ. ಸಾಮಾಜಿಕ ಸಂಶೋಧನೆ ಅನ್ನುವ ವಿಷಯದ ಮುಖೇನ ಆಗಲೇ ಸಂಶೋಧನೆಯ ಪ್ರಾಥಮಿಕ ಪಟ್ಟುಗಳನ್ನು ಕಲಿಸಿ ಕಿರು ಸಂಶೋಧನೆಯನ್ನೇ ನಮ್ಮಿಂದ ಮಾಡಿಸಿದ್ದ ನೆಚ್ಚಿನ ಸ್ನೇಹಲತಾ ಮೇಡಂ ಈಗ ಈ ಜಗತ್ತಿನಲ್ಲೇ ಇಲ್ಲ. ಆದರೂ ಕಾಲೇಜಿನ ಪ್ರತೀ ಗೋಡೆ, ಕಾರಿಡಾರ್, ತರಗತಿಗಳು, ಬೆಂಚುಗಳು ಇವರೆಲ್ಲರನ್ನೂ ಅವರ ಹಾವಭಾವ ಶೈಲಿಯ ಸಮೇತ ನೆನಪಿಸಿದ್ದು ಸುಳ್ಳಲ್ಲ.
ಇವರೆಲ್ಲರೊಂದಿಗಿನ ಬಾಂಧವ್ಯದ ಕೊನೆಯ ಕೊಂಡಿಯಂತೆ ಹಳೆಯ ನೆನಪಿನ ಬುತ್ತಿಯಲ್ಲಿ ಉಳಿದ ಕೊನೆಯ ತುತ್ತಿನಂತೆ ನಿನ್ನೆ ಸಿಕ್ಕವರು ಪದ್ಮಜಾ ಮೇಡಂ. ಪಿಯುಸಿಯ ತನಕ ಅಚ್ಚ ಕನ್ನಡ ಮಾಧ್ಯಮದ ಅಮೃತದಲ್ಲಿ ತೇಲಿ ಪದವಿಯಲ್ಲಿ ಒಮ್ಮೆಗೇ ಆಂಗ್ಲ ಮಾಧ್ಯಮದ ಕುದಿತೈಲದ ಬಾಣೆಲೆಗೆ ಬಿದ್ದು ಒದ್ದಾಡುತ್ತಿದ್ದ ನನ್ನಂತಹ ಸಾವಿರ ವಿದ್ಯಾರ್ಥಿಗಳಿಗೆ ಶೀತಲ ಜಲಬಿಂದುವಿನಂತಹ ಮದ್ದಾದವರು ಈಕೆ. ಕಡಿಮೆ ಮಾತಿನ, ಏರುಪೇರಿಲ್ಲದ ಮೃದು ಸ್ವರದ ಹಸನ್ಮುಖಿಯಾಗಿ ನನ್ನ ಮನೋವಲಯದಲ್ಲಿ ಅಚ್ಚಾಗಿರುವ ಪದ್ಮಜಾ ಮೇಡಂರದ್ದು ಅಂದಿಗೂ ಇಂದಿಗೂ ಅದೇ ಸ್ಥಿತಪ್ರಜ್ಞತೆ. ಅವರನ್ನು ಕಂಡ ಖುಷಿಗೆ ನನ್ನ ಸ್ಥಿತಪ್ರಜ್ಞತೆ ಚಂದ್ರಮಂಡಲದಾಚೆಗೆ ಓಡಿತ್ತೆಂಬುದು ನೂರಕ್ಕೆ ನೂರು ಪ್ರತಿಶತ ಸತ್ಯ. ನಾನಂತೂ ಅವರೆದುರಿದ್ದಷ್ಟು ಹೊತ್ತೂ ಅದೇ ಪ್ರಥಮ ಬಿಎ ಕ್ಲಾಸಿನ ವಿದ್ಯಾರ್ಥಿನಿಯಂತಾಗಿದ್ದೆ. ನಿನ್ನೆಯ ನನ್ನಿಡೀ ದಿನದ ಸಂತಸಕ್ಕೆ ಕಾರಣವಾಗಿದ್ದು ಈ ಭೇಟಿ. ಎಲ್ಲಾ ತಲೆನೋವುಗಳೂ ನೇಪಥ್ಯಕ್ಕೆ ಸರಿದು ಅಂದಿನ ದಿನಗಳ ನೆಮ್ಮದಿಯನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮರಳಿ ತಂದುಕೊಟ್ಟ ಈ ಭೇಟಿ ನೆನಪಿನ ಹೊತ್ತಿಗೆಯೊಳಕ್ಕೊಂದು ಮಧುರ ಸೇರ್ಪಡೆ.....

#Nostalgia

ಶನಿವಾರ, ಏಪ್ರಿಲ್ 15, 2023

ವೈಯೆನ್ಕೆ ಅನ್ಲಿಮಿಟೆಡ್

ಸಣ್ಣವಳಿದ್ದಾಗಿನಿಂದಲೂ ವೃತ್ತಪತ್ರಿಕೆ ಎಂದರೆ ಪ್ರಜಾವಾಣಿ ಎನ್ನುವಷ್ಟು ಪ್ರಜಾವಾಣಿಯ ನಿಷ್ಠಾವಂತ ಓದುಗಳಾದ ಕಾರಣ YNK ಅನ್ನೋ ಹೆಸರು ಪರಿಚಿತ ಅನ್ನೋದು ಸತ್ಯವಾದರೂ ಅವರ ಬರಹಗಳನ್ನು ಓದಿದ ನೆನಪು ನನಗಿಲ್ಲ. ತಿಂಗಳ ಹಿಂದೆ ಅಂಕಿತ ಪುಸ್ತಕದವರು ಏರ್ಪಡಿಸಿದ್ದ ಜೋಗಿ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬೇಕೆಂದುಕೊಂಡಾಗಲೂ ಫಿಕ್ಷನ್ ಪ್ರಿಯೆಯಾದ ನನಗೆ 'ಹಸ್ತಿನಾವತಿ'ಯ ಬಗ್ಗೆ ಆಸಕ್ತಿಯಿತ್ತೇ ವಿನಃ ಅದರೊಂದಿಗಿದ್ದ ಇನ್ನೊಂದು ಪುಸ್ತಕ ನನ್ನನ್ನು ಅಷ್ಟೇನೂ ಆಕರ್ಷಿಸಿರಲಿಲ್ಲ ಅನ್ನೋದೂ ಸತ್ಯ. ಆದರೆ ಆ ದಿನ ಸಮಾರಂಭಕ್ಕೆ ಹೋದಾಗ ಅಲ್ಲಿ ಟಿ ಎನ್ ಸೀತಾರಾಂ, ಅನಂತ್ನಾಗ್, ಬಿ ಆರ್ ಎಲ್, ರವಿ ಹೆಗಡೆ ಹಾಗೂ ಜೋಗಿಯವರ ಮಾತುಗಳಲ್ಲಿ ರೂಪುಗೊಂಡ YNK ಅನ್ನುವ ವ್ಯಕ್ತಿ ಒಂದೇ ಏಟಿಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸಿಬಿಟ್ಟರು. ಅದರಲ್ಲೂ ರವಿಯವರು ಹಾಗೂ ಅನಂತ್ ಸರ್ ಹಂಚಿಕೊಂಡ ವೈಯನ್ಕೆ ಅವರೊಂದಿಗಿನ ಒಡನಾಟ, ಕೆಲ ಕವಿ-ತೆಗಳ ತುಣುಕುಗಳು ಹಾಗೂ ವೈಯನ್ಕೆಯವರ 'ಘಾ' ಬಗೆಗಿನ ಸ್ವಾರಸ್ಯಕರ ಸಂಗತಿಗಳು ಈ ಪುಸ್ತಕವನ್ನು ಓದಲೇಬೇಕೆಂಬ ತುಡಿತವನ್ನು ಹುಟ್ಟುಹಾಕಿದ್ದವು. 
ಏನೇನೋ ಅಡಚಣೆಗಳ ಕಾರಣ ಒಮ್ಮೆ ಓದಲು ಕೈಗೆತ್ತಿಕೊಂಡ ಪುಸ್ತಕವನ್ನು ಒಂದಿಷ್ಟು ಸಮಯಗಳ ಕಾಲ ಬದಿಗಿರಿಸಿದ್ದೆ. ಈಗ ವೈಯನ್ಕೆಯವರ unlimited ಪ್ರಪಂಚದೊಳಗೊಂದು ಸುತ್ತು ಹಾಕಿ ಬಂದು ನಿಂತಿರುವ ಈ ಹೊತ್ತು ತಲೆಯಲ್ಲಿ ಸುತ್ತುತ್ತಿರುವ ಒಂದೇ ಸಂಗತಿಯೆಂದರೆ.... 'ವಾವ್...
.... How someone can write like this? Wordplay at its best. ಒಂದೇ ಪದದ ಭಿನ್ನಾರ್ಥಗಳ ನಡುವೆ ಈ ರೀತಿಯಾಗಿಯೂ ಆಡಬಹುದೇ? ಪದ, ಪ್ರಾಸ, ಪಂಚ್, ಪನ್, ಫನ್...... ಬರೀ ಅಷ್ಟೇ ಆಗಿದ್ದರೆ ಸುಮ್ಮನೆ ನಗಿಸಲು ಬರೆದ ಲಲಿತ ಪ್ರಬಂಧವಾಗುತ್ತಿತ್ತೇನೋ ಆದರೆ ಇದರೊಳಗಿರುವುದು ಅಪ್ಪಟ ಸತ್ಯ. ತಮ್ಮ ಸುತ್ತಲಿನ ನೈಜ ವೃತ್ತಾಂತಗಳನ್ನೇ ತಮ್ಮದೇ ವಿಶಿಷ್ಟ ರೂಪದಲ್ಲಿ ಕಟ್ಟಿಕೊಡುವ ಈ ಕಲೆ ಬಹುಶಃ ವೈಯೆನ್ಕೆ ಅವರಿಗೆ ಮಾತ್ರ ಸಿದ್ಧಿಸಿದ್ದೇನೋ. ಪ್ರಪಂಚದ ಎಲ್ಲಾ ವಲಯಗಳಲ್ಲಿನ ಆಗುಹೋಗುಗಳ ಬಗ್ಗೆ ಇಲ್ಲಿ ಲಘುರೂಪದ ವಿವರಗಳಿವೆ. ಹೆವೀ ವಿಷಯವೂ ಇಲ್ಲಿ 'ಲೈಟೇ' ಸ್ವಾಮಿ. ಈ ಪುಸ್ತಕ ಓದಿದ ಮೇಲೆ ರವಿಯವರು ಹಾಗೂ ಅನಂತ್ನಾಗ್ ಅಂದು ಹೇಳಿದ 'ಶ್ರೀಮಾನ್ ಘಾ' ಸಂಪೂರ್ಣವಾಗಿ ಅರ್ಥವಾದರು. 
ವೈನಯ್ಕೆಯವರು ಇವುಗಳನ್ನೆಲ್ಲಾ ಬರೆದಿದ್ದು 1999ಕ್ಕೂ ಹಿಂದೆ. ಇಂದು ಅವುಗಳನ್ನು ಓದುತ್ತಿರುವ ನನಗೆ ಅವುಗಳು ಅಂದಿಗಿಂತ ಇಂದೇ ಹೆಚ್ಚು ರಿಲೇಟೆಬಲ್ ಅನಿಸಿದವೆಂಬುದು ಈ ಬರಹಗಳ ಹೆಚ್ಚುಗಾರಿಕೆ ಎಂದೇ ಭಾಸವಾಗುತ್ತದೆ ನನಗೆ. ಸಾಮಾನ್ಯವಾಗಿ ಕಾಲ ಬದಲಾದಂತೆ ಅಂದಿನ ಬರಹಗಳು ಇಂದಿಗೆ ಔಟ್ ಡೇಟೆಡ್ ಅನ್ನಿಸುವುದು ಸಾಮಾನ್ಯ. ಆದರೆ ಈ ಪುಸ್ತಕದ ಪ್ರತಿಯೊಂದು ಪುಟವೂ ನಿಮಗೆ ಇವತ್ತಿನ ವರ್ತಮಾನದ ಹಲವು ಸಂಗತಿಗಳನ್ನು ಕಣ್ಣೆದುರು ತರುತ್ತವೆ ಎಂದರೆ ಈ ಬರಹಗಳ ದೂರದೃಷ್ಟಿ ಎಷ್ಟಿರಬಹುದಲ್ಲವೇ? I can just say this man blowed my mind 🙏🙏🙏


ಸುಮ್ನೆ 'ಇರಾನ್' ಅಂದ್ರೆ 'ಇರಾಕ್' ಬಿಡಾಕಿಲ್ಲ....

ಸುಂದರಿ ಜಾಹಿರಾ-ಥೂ....

ದೂರವಿರು ದೂರ್ವಾಸನೆ ಬರುತಲಿದೆ ದುರ್ವಾಸನೆ....

ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋರಾತ್ರಿ ಎದ್ಹೋದನ

ನಾವು ಸ್ಥಾವರ, ರೂಮು ಜಂಗಮ, ಅದು ಹೆಂಗಮ?

His man's puns are world class.....




ಪಾಪಾಸ್ ಕಳ್ಳಿ ಪರ್ಮೇಶಿಯ ಪೊಲಿಟಿಕಲ್ ಸ್ಟ್ರಾಟಜಿ

ನಮ್ ಪೊಲಿಟೀಷಿಯನ್ ಪರ್ಮೇಶಿ ಚುನಾವಣಾ ಸಮಯದಲ್ಲಿ ಕಂಡಕಂಡಲ್ಲಿ  ಅಬ್ಬೇಪಾರಿಯಾಗಿ ಜೋತಾಡೋ ಪಾರ್ಟಿ ಫ್ಲೆಕ್ಸ್ ಗಳ ರೀತಿಯಲ್ಲೇ ಸೀಲಿಂಗಿಗೆ  ಜೋತುಬಿದ್ದು ಗರಗರನೆ ತಿರ್ಗ್ತಿರೋ ಫ್ಯಾನನ್ನೇ ತದೇಕಚಿತ್ತದಿಂದ ನೋಡ್ತಾ ಒಂದೇ ಸಮ್ನೆ ಚಿಂತೆ ಮಾಡ್ತಾ ಪಾರ್ಟಿ ಆಫೀಸಲ್ಲಿ ಕೂತಿದ್ದ. ಹತ್ತು ವರ್ಷದಿಂದ ರಾಜಕೀಯ ಸಾಗರದಲ್ಲಿ ಧುಮುಕಿ, ತೇಲಿ, ಈಜಿ, ಮುಳುಗಿ ಎಕ್ಸ್ಪೀರಿಯೆನ್ಸ್ ಇರೋ ಪರ್ಮೇಶಿ ಮೊದ್ಲಿಗೆ 'ಕರಾ'ಗ್ರೇ ವಸತೇ ಲಕ್ಷ್ಮೀ ಅಂತ 'ಕರದಂಟು' ಮೆಲ್ಲುತ್ತಾ ರಾಜಕೀಯಕ್ಕೆ ಕಾಲಿಟ್ಟ. ಆಮೇಲೆ ಈ 'ಕರ'ಕ್ಕೆ ದಂಟೇ ಗತಿ, ಗಂಟು ಸಿಗಾಕಿಲ್ಲ ಅಂತ ತಿಳಿದ್ಮೇಲೆ, 'ಕಮಲ'ದ ದಂಟೇ ವಾಸಿ ಅಂತ ಪರ್ಮೇಶಿಯ ಕರದಲ್ಲಿ 'ಪದ್ಮ' ಶೋಭಿಸಿತು. 'ತಾವರೆ'ಯ ದಳಗಳೆಲ್ಲಾ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ವಲಸೆ ಹೋಗಿ 'ದಿ ಗ್ರೇಟ್ ಮೈಗ್ರೇಶನ್' ಆರಂಭವಾದಾಗ ಪರ್ಮೇಶಿಗೆ ಪದುಮಕ್ಕಿಂತ ಪದುಮ'ದಳ'ಕ್ಕೆ ವ್ಯಾಲ್ಯೂ ಜಾಸ್ತಿ ಅನ್ನಿಸೋಕೆ ಶುರುವಾಯ್ತು. ಸಮೃದ್ಧ ಗಂಟಿನ 'ತೆನೆ ಹೊರುವ' ಆಸೆಯಿಂದ ಕಮಲಕ್ಕೆ ಕೈ ಕೊಟ್ಟು 'ದಳ'ವೇ ಪರಂಧಾಮವಯ್ಯ ಅಂತ ಪಾಡಿದ್ದಾಯ್ತು. ಒಂದಿಷ್ಟು ಟೈಂ ' ಆನೆ ಸವಾರಿ' ಆಮೇಲೆ 'ಸೈಕಲ್ ವಿಹಾರಿ', ಕೊನೆಕೊನೆಗೆ 'ಕಸ ಗುಡಿಸಿ' ಎಲ್ಲೆಡೆಯೂ ಭ್ರಮನಿರಸನವೇ ಅಂತ ಜ್ಞಾನೋದಯವಾದ್ಮೇಲೆ ಎಲ್ಲಕ್ಕಿಂತ ದೊಡ್ಡದು ಆಜಾ಼ದಿ ಅಂತ 'ಸ್ವತಂತ್ರ್ಯತೆ'ಯ ಸವಿಯನ್ನು ಸವಿಯುತ್ತಿರೋನು ನಮ್ಮ ಪರ್ಮೇಶಿ. ಅಂಟಿಯೂ ಅಂಟದಂತಿರು ಅನ್ನೋದಕ್ಕಿಂತ ಯಾರಿಗೂ ಅಂಟಿಕೊಳ್ಳಲು ಧೈರ್ಯ ಬಾರದಂತಿರು ಎಂಬ ತತ್ವಕ್ಕೆ ಬದ್ಧನಾಗಿ 'ಪಾಪಾಸ್ ಕಳ್ಳಿ'ಯನ್ನೆ ತನ್ನ ಸರ್ವಸ್ವತಂತ್ರ ಪಕ್ಷದ ಚಿನ್ಹೆಯಾಗಿಸಿಕೊಂಡ ಪರ್ಮೇಶಿಗೆ ಹೆಂಗಾರಾ ಮಾಡಿ ಈ ಸಲದ ಎಲೆಕ್ಷನ್ನಲ್ಲಿ ಗೆದ್ದು ಗದ್ದುಗೆಗೇರೋ ಹುಚ್ಚು ನೆತ್ತಿಗೇರಿದೆ. ಗೆದ್ದೆತ್ತಿನ ಬಾಲ ಹಿಡ್ಯೋಕಿಂತ ತಾನೇ ಆ ಎತ್ತಾಗಿ ಗತ್ತಿಂದ ಮೆರೀಬೇಕು, ತನ್ನನ್ನು ಕಾಲಿನ ಕಸವಾಗಿ ಕಂಡವರನ್ನ ಕಾಲಡಿ ಹಾಕಿ ತುಳೀಬೇಕು, ತಾನೂ ವಿಶ್ವದ ಧೀಮಂತ ರಾಜಕಾರಣಿಗಳಲ್ಲಿ ಒಬ್ಬ ಆಗ್ಬೇಕು...... ಹೀಗೆ ಲೆಕ್ಕವಿಲ್ಲದಷ್ಟು ಹಗಲುಗನಸುಗಳಲ್ಲಿ ತೇಲ್ತಾ ತನ್ನ ಹೆಸರಿನ ಹಿಂದೆ ಪೊಲಿಟೀಷಿಯನ್ ಅನ್ನೋದ್ನ ಪ್ರಿಫಿಕ್ಸ್ ಮಾಡ್ಕೊಂಡಿರೋ ಮಹಾನುಭಾವ ನಮ್ ಪರ್ಮೇಶಿ.

ಇದಿಷ್ಟು ನಮ್ ಪರ್ಮೇಶಿಯ ಇತಿಹಾಸ. ಈಗ ವರ್ತಮಾನದ ವಿಚಾರಕ್ಕೆ ಬರುವ. ತಾನು ಇಷ್ಟು ವರ್ಷದಿಂದ ಏನೆಲ್ಲಾ ಸರ್ಕಸ್ ಮಾಡಿ, ಪಕ್ಷಾಂತರೀ ತಳಿಯಾಗಿ ಹಾರಿ ಕುಣಿದು ಕುಪ್ಪಳಿಸಿದ್ರೂ ಮತದಾರ ಬಂಧು ಭಗಿನಿಯರು ತನ್ನನ್ನು ಮೂಸಿಯೂ ನೋಡ್ತಾ ಇಲ್ವಲ್ಲ ಅಂತ ಶ್ಯಾನೆ ಬ್ಯಾಸರದಾಗೆ ಫ್ಯಾನನ್ನೇ ನೋಡ್ತಾ ಇದ್ದ ಪರ್ಮೇಶಿಗೆ ತನ್ನ ದಿಮಾಗ್ ಕೀ ಬಲ್ಬ್ ಆನ್ ಆಗ್ತಿಲ್ಲ ಅಂತ ಅನ್ನಿಸ್ತು. ಮೆದುಳಿನ ಬಲ್ಬ್ ಆನ್ ಆಗ್ಲಿಕ್ಕೆ ಒಂದು ಕಪ್ ಟೀ ಅನ್ನೋ ಎಲೆಕ್ಟ್ರಿಸಿಟಿ ದೇಹದ ನರತಂತುಗಳಲ್ಲಿ ಸಂಚರಿಸ್ಬೇಕು ಅಂತ ಮನಸ್ಸಿಗೆ ಬಂದಿದ್ದೇ, "ಲೇ ಇವ್ಳೇ..... ಒಂದು ಕಪ್ ಚಾ ಕೊಡೇ" ಅಂತ ಪಾಕಶಾಲೆಯಲ್ಲಿ ಪಾತ್ರೆಗಳ ಸಂಗೀತ ಕಛೇರಿ ನಡೆಸ್ತಿದ್ದ ಎಲೆಕ್ಟ್ರಿಸಿಟಿ ಬೋರ್ಡ್ ಹೆಡ್ ಗೆ ಬೇಡಿಕೆ ಸಲ್ಲಿಸಿದ.

ಪರ್ಮೇಶಿಯ ಸಂದೇಶ ಭಾಮೆಯ ಕಿವಿ ತಲುಪಿದ್ದೇ ಅಡುಗೆಮನೆಯಿಂದ ಮಂದಗತಿಯಲ್ಲಿ ಕೇಳ್ತಿದ್ದ ಪಾತ್ರೆಗಳ ಸಂಗೀತ ಕಛೇರಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಡೆಸಿಬಲ್ಲುಗಳಿಗೆ ಏರಿಕೆಯಾಯ್ತು. ಭಾರ್ಯೆಯ ಬಾಯಿಂದ ಹೊರಟ ಬಂದೂಕು ಸಿಡಿಗುಂಡುಗಳು, ಪಾತ್ರೆ ಮಿಸೈಲುಗಳು ಬಾಂಬುಗಳು, ದಡಬಡ ಹೆಜ್ಜೆಯ ಭೂಕಂಪನಗಳೆಲ್ಲಾ ಒಟ್ಟಾಗಿ ಅನಿಶ್ಚಿತ ಭೀತಿಯ ವಾತಾವರಣ ಸೃಷ್ಟಿಯಾಯ್ತು. ಎರಡೇ ನಿಮಿಷಗಳಲ್ಲಿ ಲಾಸ್ಟ್ ಸಪ್ಪರ್ ಹಿಡ್ಕೊಂಡು ಬಂದ ಮಾನವ ಬಾಂಬರ್ ರೀತಿ ಕಣ್ಣಲ್ಲೇ ಜ್ವಾಲಾಮುಖಿ ಉಗುಳುತ್ತಾ ಟೇಬಲ್ ಮೇಲೆ ಚಾ ಕಪ್ ತಂದು ಕುಕ್ಕಿದ ಮಡದಿ, 
" ಲೋ ದರ್ಬೇಸಿ ಪರ್ಮೇಶಿ, ನನ್ನನ್ನೇನು ಸ್ವಿಗ್ಗಿ, ಜೊ಼ಮ್ಯಾಟೋ ಡೆಲಿವರಿ ಗರ್ಲ್ ಅಂದ್ಕೊಂಡ್ಯಾ? ಮೂರ್ಹೊತ್ತೂ ನಿಂಗೆ ಊಟ, ತಿಂಡಿ, ಚಾ, ಕಾಫಿ ಸೇವೆ ಮಾಡೋದ್ ಬಿಟ್ಟು ನಂಗೇನು ಬೇರೆ ಕೆಲ್ಸ ಇಲ್ವಾ? ದಂಡಪಿಂಡದ ತರ ತಿನ್ನೋದು, ಹೆಬ್ಬಾವಿನ್ ತರ ಸುತ್ಕೊಂಡು ಬೀಳೋದ್ ಬಿಟ್ಟು ನಿನ್ಗೇನ್ ಕೆಲ್ಸ ಹೇಳು? ಇನ್ನೊಂದ್ಸಲ ಚಾ, ಕಾಫಿ ಅಂತ ಕೇಳು ಆಗಿದೆ ನಿಂಗೆ ಮಾರಿಹಬ್ಬ" ಅಂತ ಒಂದೇ ಸಮನೆ ಪರ್ಮೇಶಿ ತಲೆನ ಕುಕ್ಕೋಕೆ ಶುರು ಮಾಡಿದ್ಲು.

" ಏನೇ ನೀನು ಬಾಯಿಗ್ ಬಂದ್ಹಂಗೆ ಮಾತಾಡ್ತಿ? ಗಂಡ ಅನ್ನೋ ಗೌರವ ಇಲ್ಲ, ಒಂದು ಭಯಭಕ್ತಿ ಇಲ್ಲ. ಅಲ್ಲಾ ಈಗ ನಾನೇನ್ ಕೇಳ್ದೇ ಅಂತ ಈ ಪಾಟಿ ಬೈತಿದ್ದೀ ನಂಗೆ ಅಂತ. ಎಲ್ಲರ್ ಮನೆಲೂ ಚಾ ಜೊತೆ ಸ್ನಾಕ್ಸ್, ಡೆಸರ್ಟು, ಕುರ್ಕು, ಮುರ್ಕು ಎಲ್ಲಾ ಮಾಡಿ ತಿನ್ನಿ ತಿನ್ನಿ ಅಂತ ತಿನ್ನಿಸ್ತಾರಪ್ಪಾ. ನೀನೇ ನೋಡಿಲ್ವಾ ಆ ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ಲಾ ಎಷ್ಟೊಂದು ಚೆನ್ನಾಗಿ ಅಡ್ಗೆ ಮಾಡಿ ವಾಟ್ಸಾಪ್ ಸ್ಟೇಟಸಲ್ಲಿ ಹಾಕ್ಕೊಂಡಿರ್ತಾರೆ. ಅವ್ರನ್ನ ನೋಡಿ ಸ್ವಲ್ಪ ಕಲಿ" ಅಂತ ಪರ್ಮೇಶಿ ಹೇಳಿದ್ದೇ ಹೇಳಿದ್ದು..... ಪರ್ಮೇಶಿಯ ಪಾರೋ ಚಂದ್ರಮುಖಿ ಒಂದೇ ಏಟಿಗೆ ನಾಗವಲ್ಲಿ ರೂಪಧಾರಣೆ ಮಾಡಿ ಲಕಲಕಲಕಲಕ ಅಂತ ಉರಿದುಬಿದ್ಲು.

"ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ರ ಸ್ಟೇಟಸ್ ನೋಡುವಷ್ಟು ಪುರ್ಸೊತ್ತಿದ್ಯೇನೋ ನಿಂಗೆ? ಸ್ಟೇಟಸ್ ಅಂತೆ ಸ್ಟೇಟಸ್.... ಅಷ್ಟು ಆಸೆ ಇದ್ರೆ ಆ ಸ್ಟೇಟಸ್ನ ಡೈನಿಂಗ್ ಟೇಬಲ್ ಮೇಲೆ ಡೈರೆಕ್ಟ್ ಡೌನ್ಲೋಡ್ ಮಾಡ್ಕೊಳ್ಳೋ ಅಪ್ಲಿಕೇಶನ್ ಕಂಡ್ಹಿಡಿ. ಆಮೇಲೆ ಆ ಮೂದೇವಿಯರ ಸೊಡ್ಡು ನೋಡ್ಕೊಂಡು, ಅವ್ರು ಮಾಡೋ ಪಡ್ಡು ತಿಂದ್ಕೊಂಡು, ಹ್ಯಾಷ್ಟ್ಯಾಗ್ ಪಕ್ಕದ್ಮನೆ ಫುಡ್ಡೇ ಗುಡ್ಡು ಅಂತ ಸ್ಟೇಟಸ್ ಹಾಕ್ಕೊಂಡು ಸಾಯಿ ಬಿಕ್ನಾಸಿ" ಅಂತ ಮಖಕ್ಕೆ ಉಗ್ದು ಟೇಬಲ್ ಮೇಲಿದ್ದ ಚಾ ಕಪ್ ಸಮೇತ ಚಂಡಮಾರುತದಂಗೆ ವಾಪಾಸ್ ಹೋದ್ಲು.

ಹೆಂಡ್ತಿ ಮಾತು ಕೇಳಿದ್ದೇ ಚಾ ಕುಡೀದೇನೇ ಮೆದುಳಿನೊಳಗೆ ಸಿಸ್ಕಾ ಎಲ್ ಈ ಡಿ ಚಾರ್ ಸೌ ಚಾಲೀಸ್ ವೋಲ್ಟ್ ಆನ್ ಆಯ್ತು ಪರ್ಮೇಶಿಗೆ. 'ಅಬ್ಬಾ ನನ್ ಹೆಂಡ್ತಿ ಎಂಥಾ ಐಡಿಯಾ ಕೊಟ್ಲಲ್ಲಪ್ಪೋ' ಅಂತ ಬ್ಯಾಗ್ರೌಂಡ್ ಮ್ಯೂಸಿಕ್ ಇಲ್ದೇ ಕುಣಿದಾಡಿಬಿಟ್ಟ. 

'ನನ್ ಪಾಪಾಸ್ ಕಳ್ಳಿ ಪಕ್ಷನ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸೋಕೆ ಇದೇ ಒಳ್ಳೆ ಉಪಾಯ. ಆಹಾ.... ವಾಟ್ಸಾಪ್ ಸ್ಟೇಟಸಲ್ಲಿರೋ ಫುಡ್ಡು ಡೈರೆಕ್ಟಾಗಿ ಡೈನಿಂಗ್ ಟೇಬಲ್ ಮೇಲೆ ಡೌನ್ಲೋಡ್ ಆಗ್ಬಿಟ್ರೆ...... ಆಹಾಹಾ.... ರಾಜ್ಯ ಏನು, ದೇಶ ಏನು.... ಇಡೀ ಪರಪಂಚದಲ್ಲಿರೋ ಮಹಿಳಾ ಮತಬಾಂಧವರೆಲ್ಲರ ಓಟೂ ಈ ಪರ್ಮೇಶಿ ಜೇಬಿಗೇ ಪಕ್ಕಾ. ಆಮ್ಯಾಕೆ ನಾನು ಅಂದ್ರೆ ಕುರ್ಚಿ ಕುರ್ಚಿ ಅಂದ್ರೆ ನಾನು. ಫೆವಿಕಾಲ್ ಹಂಗೆ ಅಂಟ್ಕೊಂಬಿಡ್ತದೆ ಕುರ್ಚಿ ನಂಗೆ. 

ಮನೆಮನೆಗೂ ವಾಟ್ಸಾಪ್ ಫುಡ್ಡು,
ಬಾಯಿಗ್ ಬಂದು ಬಿತ್ತಾ ಮಗಾ ಲಡ್ಡು,
ಪೊಲಿಟೀಷಿಯನ್ ಪರ್ಮೇಶಿನೇ ಗುಡ್ಡು,
ಪರ್ಮೇಶಿ ಕೈಲಾಸದ ತುಂಬಾ ದುಡ್ಡೋ ದುಡ್ಡು.....

ಹಂಗೆ ಆ ಅಪ್ಲಿಕೇಷನ್ ಇನ್ನೊಂಚೂರು ಅಪ್ಗ್ರೇಡ್ ಮಾಡಿ 'ಮನೆಗೊಂದು ಬಾರು ಕುಡಿದು ಹಗುರಾಗಿ ಚೂರು' ಅನ್ನೋ ಆಫರ್ ಬಿಟ್ಟಾಂದ್ರೆ ಪುರುಷೋತ್ತಮರೆಲ್ಲಾ 'ವೇರೆವರ್ ಯು ಗೋ ವಿ ಫಾಲೋ' ಅಂತ ಹುಚ್ ನಾಯಿ..... ಥತ್ತೇರಿಕೆ..... ಅಲ್ಲಲ್ಲಾ.... ಹಚ್ ನಾಯಿ ತರ ಹಿಂದೆ ಬಂದ್ಬಿಡ್ತಾರೆ. ಅಲ್ಲಿಗೆ 'ಪರಪಂಚ ಈ ಪರಪಂಚ, ಪರ್ಮೇಶಿಯೇ ಇದ್ರ ಸರಪಂಚ'..... 

ಆಮೇಲೆ.....

ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ, 
ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ..... 
ಆ ಫ್ಲೆಕ್ಸಲ್ಲೂ ನಾನೇ, 
ಈ ಟಿವಿಲೂ ನಾನೇ, 
ಆ ಪೇಪರ್ರಲ್ಲೂ ನಾನೇ, 
ಈ ಬಾನುಲಿಯಲ್ಲೂ ನಾನೇ, 
ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ಟ್ವಿಟ್ಟರ್
ಅಮೇಜಾನ್ ಫ್ಲಿಪ್ಕಾರ್ಟ್ ನೈಕಾ ಮೀಶೋ 
ವಾಲ್ಮಾರ್ಟ್ ಡಿ ಮಾರ್ಟ್ ರಾಯಲ್ ಮಾರ್ಟ್ ವಿಶಾಲ್ ಮಾರ್ಟ್ 
ಕೆಜಿಎಫ್ ಕಾಂತಾರಾ ಆರ್ ಆರ್ ಆರ್ ಪಠಾಣ್
ಎಲ್ಲೆಲ್ಲೂ ನಂದೇ ಹವಾ.....
ಸಬ್ ಪರ್ಮೇಶಿ ಕೆ ಲಿಯೇ ಮಾಂಗೋ ದುವಾ....'

ಹೀಗೇ ಮೈ ಮೇಲೆ ಖಬರಿಲ್ದೇ ಖಬರ್ಸ್ತಾನದಲ್ಲಿರೋ ಹೆಣದ ತರ ಬಿದ್ಕೊಂಡು ತಿರುಕನ ಕನಸು ಕಾಣ್ತಿದ್ದ ಪರ್ಮೇಶಿಗೆ ಅಡುಗೆಮನೆಯೊಳಗೆ ಭಾಮೆ ನಡೆಸ್ತಿದ್ದ ತೆಹೆಲ್ಕಾದಿಂದಾಗಿ ಮತ್ತೆ ಹೋಶ್ ಬಂತು.

ಆ ಕೂಡಲೇ ತನ್ನ ಕನಸಿನ ಕೂಸಾದ 'ದಿ ಜರ್ನಿ ಆಫ್ ಫುಡ್ - ಫ್ರಂ ವಾಟ್ಸಾಪ್ ಸ್ಟೇಟಸ್ ಟು ಡೈನಿಂಗ್ ಟೇಬಲ್'ನ ಪ್ರಸವ ಪೂರ್ವ ಹಾಗೂ ಪ್ರಸವಾನಂತರದ ಆರೈಕೆಗೆ ನುರಿತ ಶುಶ್ರೂಷಕರ ತಂಡದ ಆಯ್ಕೆಗಾಗಿ ಅಪ್ಲಿಕೇಶನ್ ಡೆವಲಪರ್ಸ್ ಹುಡುಕಾಟಕ್ಕೆ ಹೊರಟೇಬಿಟ್ಟ. 

ಹೋದಾ ಹೋದಾ ಹೋದಾ ಹೋದಾ...... ಅಪ್ಲಿಕೇಶನ್ ಡೆವಲಪರ್ಸ್'ಗಳ ರೆಸ್ಯೂಮೆ ಅಪ್ಲಿಕೇಶನ್ ಸ್ಕ್ರೂಟನಿ ಮಾಡೋಕೆ ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರ ಹೋದಾ......

ಸೋ.... ನಲ್ಮೆಯ ಮಹಿಳೆಯರೇ, ಅಡುಗೆ ಮನೆಯ ಪಾತ್ರೆ ಪಗಡೆಗಳನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸ್ದು, ಈ ಬೆಲೆ ಏರಿಕೆ ಕಾಲದಲ್ಲಿ ದಿನಸಿ ಸಾಮಾನಿಗಂತ ದುಡ್ಡು ಖರ್ಚು ಮಾಡ್ದೇ, ಆರಾಮಾಗಿ ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು ವಾಟ್ಸಾಪ್ ಸ್ಟೇಟಸ್ಸಲ್ಲಿರೋ ತರಹೇವಾರಿ ಅಡುಗೆಯ ಸ್ಕ್ರೀನ್ ಶಾಟ್ ತೆಗೀತಾ, ಈ ಸಲದ ಎಲೆಕ್ಷನ್ನಲ್ಲಿ ಯಾರಿಗೂ ನಿಮ್ಮ ಮತವನ್ನು ದಾನ ಮಾಡದೇ ಕಾಯ್ತಾ ಇರಿ. ಇನ್ನೇನು ನಮ್ ಪಾಪಾಸ್ ಕಳ್ಳಿ ಪರ್ಮೇಶಿ ಅಪ್ಲಿಕೇಶನ್ ರೆಡಿ ಮಾಡಿಸ್ಕೊಂಡು ಬಂದ್ಬಿಡ್ತಾನೆ. ಆಮೇಲೇನಿದ್ರೂ ನಿಮ್ದೇ ಹವಾ..... ಓಕೆನಾ....

ಪುರುಷ ಪುಂಗವರ ಗಮನಕ್ಕೆ- ನೀವೂ ನಿಮ್ಮ ಮತವನ್ನು ನಮ್ ಪರ್ಮೇಶಿಗೇ ಡೊನೇಟ್ ಮಾಡಿ ಮತ್ತೆ. ಈ ಡೊನೇಷನ್ ಗೆ ಪ್ರತಿಯಾಗಿ ನಿಮ್ಗೂ ಒನ್ 'ಕೇಸ್' ಗ್ಲುಕೋಸ್ ವಿತ್ 'ಸೋಡಾ ಎಂಡ್ ಸೈಡ್ಸ್' ಆಫರ್ರನ್ನೂ ಇನ್ಬಿಲ್ಟ್ ಇನ್ಸ್ಟಾಲ್ ಮಾಡ್ಕೊಂಡು ಬರ್ತಿದ್ದಾರೆ ನಮ್ ಪಾಪಾಸ್ ಕಳ್ಳಿ ಪೊಲಿಟೀಷಿಯನ್ ಪರ್ಮೇಶಿ. ಕಾಯ್ತಿರಿ ಆಯ್ತಾ.....

ಭಾನುವಾರ, ಜನವರಿ 1, 2023

ಕಾಲೇಜೆಂಬ ರಂಗಸ್ಥಳ

ಜಗತ್ತೇ ಒಂದು ನಾಟಕರಂಗ - ಷೇಕ್ಸ್ಪಿಯರ್
ಪ್ರಾಧ್ಯಾಪಕನ ಜಗತ್ತೇ ಕಾಲೇಜೆಂಬ ರಂಗಮಂದಿರವಾದ ಕಾರಣ ಷೇಕ್ಸ್ಪಿಯರ್'ನ ಜಗತ್ತೇ ಒಂದು ನಾಟಕರಂಗ ಎಂಬುದನ್ನು ನಾವು 'ಕಾಲೇಜೇ ಒಂದು ನಾಟಕರಂಗ' ಎಂಬುದಾಗಿ ಪರಿಗಣಿಸಿದರೆ ಅದರ ಮುಂದಿನ ಪ್ರಾಸಬದ್ಧ ಸಾಲು 'ನೀನೇ ಅದರೊಳಗೆ ದೊಡ್ಡ ಮಂಗ' ಎಂದಾಗಿರುತ್ತದೆ. (ಇಲ್ಲಿ 'ನೀನೇ' ಎಂಬ ಪದಕ್ಕೆ ನೈತಿಕತೆಯನ್ನು ಇನ್ನೂ ಕೊಂಡುಕೊಳ್ಳದ ಶಿಕ್ಷಕರನ್ನು ಅನ್ವರ್ಥವಾಗಿಸಿಕೊಳ್ಳಬೇಕೆಂದು ಕೋರಿಕೆ)

ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದ ಅವಧಿಯ ಸ್ವಾನುಭವಗ(ಗೋ)ಳನ್ನು ಸಂಕಲಿಸಿ ಸ್ವಾಮಿಯವರು ಬರೆದ ಈ ಕೃತಿ ಪ್ರಥಮ ಮುದ್ರಣ ಕಂಡಿದ್ದು 1973ರಲ್ಲಂತೆ. 1973ರ ಅನುಭವಗಳು 2023ಕ್ಕೂ ಅದೆಷ್ಟು ಕರಾರುವಾಕ್ಕಾಗಿ ಹೊಂದಿಕೊಳ್ಳುತ್ತವೆಂದರೆ ಓದುಗನಿಗೆ ಎಲ್ಲೂ ಇದು ಅಂದಿನ ಕಾಲಘಟ್ಟದ ಕಥೆ ವ್ಯಥೆ ಎನಿಸದೇ ಹೋಗುವುದು ಹದೆಗೆಟ್ಟ ಶಿಕ್ಷಣ ವ್ಯವಸ್ಥೆ ಪುನಶ್ಚೇತನವನ್ನು ಕಂಡೇ ಇಲ್ಲ ಎಂಬುದರ ಸ್ಪಷ್ಟ ದ್ಯೋತಕ. ಇನ್ನೂ ಅಂದಿಗಿಂತ ಇಂದು ಪರಿಸ್ಥಿತಿ ಇನ್ನಷ್ಟು ಹೆಚ್ಚು ಹದೆಗೆಟ್ಟಿದೆ ಎಂಬುದು ನಾವು ತಲೆತಗ್ಗಿಸಿ ಒಪ್ಪಿಕೊಳ್ಳಲೇಬೇಕಾದ ಸತ್ಯ. ಸ್ವತಃ ಇದೇ ವ್ಯವಸ್ಥೆಯ ಒಂದು ಭಾಗವಾಗಿರುವ ನನ್ನಂತಹವರ ಪಾಲಿಗೆ ಈ ಕೃತಿ ಶಿಕ್ಷಣ ವ್ಯವಸ್ಥೆ ಉಚ್ಛ್ರಾಯ ಮಟ್ಟದಿಂದ ಅಧೋಗತಿಗೆ ಹೇಗೆ ಹಂತಹಂತವಾಗಿ ಇಳಿದಿರಬಹುದೆಂಬುದರ ಪರಿವಿಡಿ. ವಿದ್ಯಾರ್ಥಿಗಳ ಬದುಕನ್ನು, ದೇಶದ ಭವಿತವ್ಯವನ್ನು ರೂಪಿಸಿಕೊಡಬೇಕಾದ ಪರಮ ಔನ್ನತ್ಯದ ವ್ಯವಸ್ಥೆಯೊಂದು ಜಾತಿ, ವರ್ಗ, ವರ್ಣ, ರಾಜಕೀಯ ಮೊದಲಾದ ವಿಷಸುಳಿಗಳಲ್ಲಿ ಸಿಲುಕಿ ಹೇಗೆ ಅಧಃಪತನಕ್ಕೆ ಜಾರುತ್ತದೆ ಎಂಬುದನ್ನು ತಮ್ಮ ಎಂದಿನ ಲಘುಹಾಸ್ಯದ ಶೈಲಿಯಲ್ಲಿ ಸ್ವಾಮಿ ದಾಟಿಸಿದ್ದಾರೆ. ಬರಹದ ಧಾಟಿ ಹಾಸ್ಯವಾದರೂ ಅದರೊಳಗೆ ಅಂತರ್ಗತವಾಗಿರುವುದು ನೀತಿಗೆಟ್ಟ ವ್ಯವಸ್ಥೆಯ ವಿಂಡಬನೆಯಷ್ಟೇ.

ಶನಿವಾರ, ಡಿಸೆಂಬರ್ 24, 2022

Chup - Revange of the Artist


ವರ್ಷದ ಹಿಂದಿನ ಮಾತು. ಆಗಷ್ಟೇ ನೋಡಿದ್ದ ಆದರ್ಶ್ ಈಶ್ವರಪ್ಪ ಅವರ ಶುದ್ಧಿ ಸಿನಿಮಾ ವಿಪರೀತ ಮೋಡಿ ಮಾಡಿತ್ತು. ಸಿನಿಮಾ ಕಟ್ಟಿಕೊಟ್ಟ ಭಾವಗಳನ್ನೆಲ್ಲಾ ಪದರೂಪಕ್ಕೆ ಬಸಿದು ಅನಿಸಿಕೆಯೊಂದನ್ನು ಬರೆದಿದ್ದೆ. ಪ್ರತಿಲಿಪಿಯಲ್ಲಿ ಪರಿಚಿತರಾಗಿದ್ದ ಸಿನಿಮಾ ಪ್ರೇಮಿ ಸ್ನೇಹಿತೆಯೊಬ್ಬರೊಡನೆ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾಗ ಆದರ್ಶ್ ಅವರ ಕಸಿನ್ ಎಂಬುದು ತಿಳಿಯಿತು. ನೇರವಾಗಿ ಅವರಿಗೇ ನಿಮ್ಮ ಅನಿಸಿಕೆ ತಿಳಿಸಿ ಎಂದು ಆಕೆ ಸಜೆಸ್ಟ್ ಮಾಡಿದ್ದರಿಂದ ಫೇಸ್ಬುಕ್ನಲ್ಲಿ ಆಕೆಯ ಸಹಾಯದಿಂದಲೇ ಆದರ್ಶ್ ಅವರಿಗೆ ನನ್ನ ಅನಿಸಿಕೆ ರೂಪದ ಬರಹವನ್ನು ಕಳಿಸಿದ್ದೆ. ಆ ನಂತರದಲ್ಲಿ ಆದರ್ಶ್ ನನ್ನ ಅನಿಸಿಕೆ ಓದಿ ಧನ್ಯವಾದ ತಿಳಿಸುವುದರೊಂದಿಗೆ ಆಗಿನ್ನೂ ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ತಮ್ಮ ಇನ್ನೊಂದು ಸಿನಿಮಾ 'ಭಿನ್ನ'ವನ್ನೂ ಕೂಡಾ ನೋಡಿ ಅನಿಸಿಕೆ ಹೇಳಬೇಕೆಂದು ವಿನಂತಿಸಿದ್ದರು. ಅಷ್ಟಲ್ಲದೇ ತಾವೇ ಆ ಸಿನಿಮಾದ ಡ್ರೈವ್ ಲಿಂಕ್ ಶೇರ್ ಮಾಡಿ 'ನೋಡಿ ನಿಮ್ಮ ಇಂಟರ್ಪ್ರಿಟೇಷನ್ ಹೇಳಿ' ಎಂದಾಗ ನಿಜಕ್ಕೂ ಆ ಸಿನಿಮಾ ಬಗ್ಗೆ ಒಂದು ಕುತೂಹಲ ಹುಟ್ಟಿತ್ತು. 
ಸಾಮಾನ್ಯವಾಗಿ ಸಿನಿಮಾ ನೋಡುವ ಮುನ್ನ ಒಂದಿಷ್ಟು ರಿವ್ಯೂ ಓದುವ ಹವ್ಯಾಸ ನನ್ನದು. ಅದರಲ್ಲೂ ನಾನು ಎಲ್ಲಾ ರಿವ್ಯೂಗಳನ್ನೂ ನೋಡುವುದಿಲ್ಲ. ನನ್ನ ಅಭಿರುಚಿಗೆ ತಕ್ಕಂತಹ, ನನ್ನ ವಿಮರ್ಶಾ ಶೈಲಿಗೆ ಹೊಂದುವ ಕೆಲವೇ ಕೆಲವು ರಿವ್ಯೂಗಳನ್ನು ನಾನು ನೋಡುವುದು. ಪ್ರಜಾವಾಣಿಯ ರಿವ್ಯೂ(ಅದರಲ್ಲೂ ವಿಶಾಖ ಅವರದ್ದು) ಮತ್ತು ದಿ ನ್ಯೂಸ್ ಮಿನಿಟ್ ರಿವ್ಯೂ ನಾನು ಅತೀ ಹೆಚ್ಚು ಫಾಲೋ ಮಾಡುವಂತಹವು. ಪ್ರಜಾವಾಣಿ ರಿವ್ಯೂ ಲಭ್ಯವಿಲ್ಲದ ಕಾರಣ ದಿ ನ್ಯೂಸ್ ಮಿನಿಟ್ ರಿವ್ಯೂ ನನ್ನ ಮುಂದಿನ ಏಕಮೇವ ಆಯ್ಕೆಯಾಗಿತ್ತು. TNM ರಿವ್ಯೂ ಓದಿ ಮುಗಿಸಿದಾಗ ಮನದಲ್ಲೆದ್ದ ಏಕಮೇವ ಪ್ರಶ್ನೆ ......'ಈ ಸಿನಿಮಾ ನೋಡಬೇಕೇ?' ಎಂಬುದು. ಏಕೆಂದರೆ Insensitive climax ಎಂಬ ನೇರಾನೇರ ಆರೋಪವಿತ್ತು ಈ ಸಿನಿಮಾ ಮೇಲೆ. ನಂತರ ಸುಮ್ಮನೆ ಇತರೆ ರಿವ್ಯೂಗಳನ್ನು ಕಂಡಾಗಲೂ ಒಂದೊಂದೆಡೆ ಒಂದೊಂದು ರೀತಿಯ ವಿಮರ್ಶೆ ಕಂಡು ತಲೆಕೆಟ್ಟದ್ದು ಸುಳ್ಳಲ್ಲ. ನೋಡುವುದೇ ಬೇಡವೇನೋ ಅನ್ನುವ ಭಾವನೆ ಕಾಡಿದರೂ ಆದರ್ಶ್ ಅವರೇ ಖುದ್ದಾಗಿ ತಮ್ಮ ಡ್ರೈವ್ ಲಿಂಕ್ ಮೂಲಕ ಸಿನಿಮಾ ಶೇರ್ ಮಾಡಿದ್ದರಿಂದ ಒಂದು ಬಗೆಯ ದಾಕ್ಷಿಣ್ಯಕ್ಕೆ ಸಿಲುಕಿ ಏನಾದರಾಗಲೀ ಸಿನಿಮಾ ನೋಡೇ ಬಿಡೋಣ ಅನ್ನುವ ನಿರ್ಧಾರಕ್ಕೆ ಬಂದಾಯಿತು. 

The Broken are Different ಅನ್ನುವ ಅಡಿಬರಹ ಹೊಂದಿದ್ದ ಸಿನಿಮಾ ನೋಡಿ ಮುಗಿಸಿದ ನಂತರ ನನಗನಿಸಿದ್ದು 'ಸಿನಿಮಾ ಡೀಕೋಡಿಂಗ್ ಕೂಡಾ ಒಂದು ಕಲೆ ಮತ್ತು ಅದು ಎಲ್ಲರಿಗೂ ಒಲಿಯುವುದಿಲ್ಲ' ಅಂತ. ಕಾರಣ ಆಗಲೇ ಆನ್ಲೈನ್ನಲ್ಲಿ ಲಭ್ಯವಿದ್ದ ಸಿನಿಮಾದ ರಿವ್ಯೂಗಳಿಗೂ ಹಾಗೂ ನಾನು ಒಬ್ಬ ವೀಕ್ಷಕಳಾಗಿ ಸಿನಿಮಾವನ್ನು ಅರ್ಥೈಸಿಕೊಂಡ ರೀತಿಗೂ ಅಂತರವಿತ್ತು. ನನ್ನ ಕಣ್ಣಿಗೆ, ಗ್ರಹಿಕೆಗೆ ಭಿನ್ನ ನಿಜಕ್ಕೂ ಭಿನ್ನವಾಗಿಯೇ ದಕ್ಕಿತ್ತು. ಆದರ್ಶ್ ಅವರೊಂದಿಗೆ ಈ ಬಗ್ಗೆ ಮಾತನಾಡಿದಾಗ ನಾನು ಅರ್ಥೈಸಿಕೊಂಡಿದ್ದು ಸರಿಯಿದೆ ಅನ್ನಿಸಿತು ನನಗೆ. ಹೆಚ್ಚು ಕಡಿಮೆ ಇಡೀ ಸಿನಿಮಾವೇ ಸೂಚ್ಯವಾಗಿ ಅಮೂರ್ತ ಸ್ವರೂಪದಲ್ಲಿದ್ದ ಕಾರಣ ಇಡೀ ಸಿನಿಮಾವನ್ನು ಓದುಗರೇ ಡೀಕೋಡ್ ಮಾಡಿಕೊಳ್ಳಬೇಕಿರುವುದು ಭಿನ್ನದ ವೈಶಿಷ್ಟ್ಯತೆ. ನನಗೆ ಈ ಸಿನಿಮಾದಲ್ಲಿ ಅತಿಯಾಗಿ ಹಿಡಿಸಿದ್ದೇ ಈ ಕಥಾತಂತ್ರ. ಆದರೆ ದುರದೃಷ್ಟವಶಾತ್ ನಮ್ಮ ಮೀಡಿಯಾದ ಮಂದಿ ತಮ್ಮ ತಲೆಗೆ ತೋಚಿದ್ದೇ ಸತ್ಯ ಎಂದು ಘೋಷಿಸಿ, ಇಡೀ ಸಿನಿಮಾದ ಅರ್ಥವನ್ನೇ ಅನರ್ಥವಾಗಿಸಿ ತೀರ್ಪು ಬರೆದುಬಿಟ್ಟಿದ್ದನ್ನು ಕಂಡಾಗ ನಿಜಕ್ಕೂ ಅಚ್ಚರಿಯೆನಿಸಿತ್ತು ನನಗೆ. 

ಇಂದು ಭಾಲ್ಕಿಯವರ 'ಚುಪ್' ಸಿನಿಮಾ ನೋಡಿದಾಗ ತಟ್ಟನೆ ತಲೆಯೊಳಗೆ ಸುಳಿದದ್ದು ಅದೇ ಭಿನ್ನ ಸಿನಿಮಾದ ರಿವ್ಯೂಗಳು. ಆ ರಿವ್ಯೂಗಳನ್ನು ಕಂಡಾಗ ಒಂದು ಒಳ್ಳೆ ಸಿನಿಮಾವನ್ನು ಕಾಯುವುದು ಕೊಲ್ಲುವುದು ಎರಡೂ ಈ ವಿಮರ್ಶಕರ ಕೈಯಲ್ಲಿದೆಯಲ್ಲಪ್ಪಾ ಅಂದುಕೊಂಡಿದ್ದೆ ನಾನು. ಅದನ್ನೇ ಇಷ್ಟು ದಿವಿನಾಗಿ ಸಿನಿಮಾ ಮಾಡಿಬಿಟ್ಟಿದ್ದಾರಲ್ಲಪ್ಪಾ ಅನ್ನುವ ಭಾವದೊಂದಿಗೆ ನೋಡಿ ಮುಗಿಸಿದ ಸಿನಿಮಾ ಇದು. ಯೋಚನಾರ್ಹ ಸಂಗತಿಯೊಂದನ್ನು ಕೇಂದ್ರದಲ್ಲಿಟ್ಟುಕೊಂಡು, ಗುರುದತ್ ಅವರಿಗೊಂದು ಔಟ್ ಆಫ್ ದಿ ವರ್ಲ್ಡ್ ಟ್ರಿಬ್ಯೂಟ್ ರೀತಿಯಲ್ಲಿ ಹೆಣೆದಿರುವ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದ ಜೀವಾಳ ದುಲ್ಕರ್ ಸಲ್ಮಾನ್. ಮುಗ್ದತೆ, ಸಿಟ್ಟು, ಸೆಡವು, ಪ್ರೀತಿ, ಪ್ರೇಮ, ತಣ್ಣನೆಯ ಕ್ರೌರ್ಯ ಎಲ್ಲವನ್ನೂ ಕಣ್ಣಲ್ಲೇ ದಾಟಿಸಬಲ್ಲ ಸಾಮರ್ಥ್ಯವುಳ್ಳ ದುಲ್ಕರ್ ಹಾಗೂ ಬೆಳಗಿನ ಮಂದಾನಿಲದಂತೆ ಸುಳಿಯುವ ಶ್ರೇಯಾ ಇಬ್ಬರಿದ್ದೂ ಕೂಡಾ ಯಾಕೋ ಮೊದಮೊದಲಿನ ಹಿಡಿತ ಸಿನಿಮಾ ಅಂತ್ಯಕ್ಕೆ ಬಂದಾಗ ಕೈಜಾರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರಂಭದ ಲವಲವಿಕೆ, ಹಿಡಿತ ಕೊನೆಕೊನೆಗೆ ಜಾಳಾಗುತ್ತಾ ಸಾಗಿರುವುದರಿಂದ ಎಲ್ಲೋ ಸಿನಿಮಾದ ಒಟ್ಟಾರೆ ಪರಿಣಾಮ ಕಡಿಮೆಯಾಗಿರುವುದು ನಿಜವಾದರೂ ಸಿನಿಮಾದ ಒಟ್ಟು ಥೀಮ್ ಮನಮುಟ್ಟುವಂತಿದೆ. ಗುರುದತ್ ಅವರ ಪ್ಯಾಸಾ, ಕಾಗಜ್ ಕೇ ಫೂಲ್ ಸಿನಿಮಾಗಳ ಉಪಮೆ, ರೂಪಕಗಳು, ಹಮ್ಮಿಂಗ್ ಗಳು ಸೋನೇ ಪೆ ಸುಹಾಗಾ. ಹಾಗೇ ಸಣ್ಣ ಪಾತ್ರವಾದರೂ ಹಿರಿಯ ನಟಿ ಶರಣ್ಯಾ ಪೊನ್ವಣ್ಣನ್ ತಮ್ಮ ಲವಲವಿಕೆಯ ಚೈತನ್ಯದಿಂದ ಮನಸೆಳೆಯುತ್ತಾರೆ.

ಫಿಲ್ಮ್ ಕ್ರಿಟಿಕ್'ಗಳು ಅವಶ್ಯವಾಗಿ ನೋಡಲೇಬೇಕಾದ ಸಿನಿಮಾ ಇದು ಅನ್ನುವುದು ಮಾತ್ರ ಸತ್ಯ. 

ನಾಮಧೇಯ ಪುರಾಣ

ಹೋಯ್......

ನಮಸ್ಕಾರ ಮಾರಾಯ್ರೇ...

ಮುಂಚೆಯೆಲ್ಲಾ ನಮ್ಮ ಭಾರತೀಯ ವಾಯುಗುಣದಲ್ಲಿ ಮೂರು ಕಾಲಗಳಿದ್ವು . ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಅಂತ. ಇದು ನಿಮಗೂ ತಿಳಿದ ವಿಚಾರವೇ . ಆದರೆ ಯೋಗಗಳ ಸಾಮ್ರಾಟ ಭಟ್ರು 'ಇಂಡಿಯಾನೇ ಫಾರಿನ್ನಾಗ್ಲಿ' ಅಂತ ಅದ್ಯಾವ ಘಳಿಗೆಲೀ ಹೇಳಿದ್ರೇನೋ. ಇಂಡಿಯಾ ಫಾರಿನ್ನಾಗೇ ಹೋಗಿದೆ....!! ಬಿರುಬೇಸಿಗೆಯ ಮಾರ್ಚ್, ಏಪ್ರಿಲ್ನಲ್ಲಿ ಮಳೆ ಬರುತ್ತೆ. ಮಳೆ ಕಾರಣ
ಶಾಲೆಗೆ ರಜೆ ಸಿಗ್ತಿದ್ದ ಜೂನ್, ಜುಲೈಯಲ್ಲಿ ರಣಬಿಸಿಲು.....

ಸೋ ...... ಈ ಮೇಲಿನ ಸಾಕ್ಷಾಧಾರ ಪುರಾವೆಗಳನ್ನು ಪರಿಗಣಿಸಿ ನಾವು ಏನು ಹೇಳ್ಬೋದ್ದಪ್ಪಾ ಅಂದ್ರೆ.......... ಮೂರುಕಾಲಗಳು ಲೋಪ ಸಂಧಿಯಾಗಿ ಒಂದೇ ಕಾಲ ಆಗಮ ಸಂಧಿಯಾಗಿದೆ. ಹಾಗೆ ಆಗಮಾದೇಶವಾಗಿರುವ ಕಾಲವೇ ಪೋಪಿಕಾಲ......

ಈ ಪೋಪಿಕಾಲ ಅನ್ನೋದು ತುಳುನಾಡಿನಲ್ಲಿ ಸ್ಟೇಟ್ ಬ್ಯಾಂಕಿನಲ್ಲಿ ಮೀನು ಸಿಕ್ಕುವಷ್ಟೇ ಸಾಮಾನ್ಯವಾಗಿ ಕೇಳ್ಲಿಕ್ಕೆ ಸಿಗುವ ಪದ. ಈ ಪೋಪಿಕಾಲ ಎಂಬ ಹೋಗುವ ಕಾಲವನ್ನು ಪರಂಧಾಮಕ್ಕೆ ಹೋಗುವ ಕಾಲ ಅಂತ ಅರ್ಥೈಸಿಕೊಳ್ಳಬಹುದು ನೀವು. ಇಂತಹ
ಪೋಪಿಕಾಲ ಆಗಮಿಸಿರುವ ಈ ಸಂದರ್ಭದಲ್ಲಿ ವೈರಸ್ಸು , ಬ್ಯಾಕ್ಟೀರಿಯಾಗಳ ಹಾವಳಿ ವಿಪರೀತವಾಗಿ ಜನ ಏನೇನೋ ಕಾಯಿಲೆಗಳಿಗೆ ತುತ್ತಾಗ್ತಿರೋದು ನಿಮಗೆ ಗೊತ್ತಿರುವ ಸಂಗತಿಯಷ್ಟೇ. ಅಂತಹದೇ ಒಂದು ಪೋಪಿಕಾಲದ ವೈರಸ್ಸಿನ ಬಗ್ಗೆ ನಿಮಗೆ ಮಾಹಿತಿ ನೀಡ್ಬೇಕಿತ್ತು ನೋಡಿ. ಈ ನಿಫಾ, ಕಫಾ, ಕೆಎಫ್ಡಿ, ಚಿಕುನ್ ಗುನ್ಯಾ , ಕೋಳಿ ಜ್ವರ, ಹಂದಿ ಜ್ವರ, ಡೆಂಗ್ಯೂ ಇತ್ಯಾದಿ ವೈರಸ್ಸುಗಳ ಗುಂಪಿಗೆ ಸೇರದ ಹೊಸ ತಳಿಯ
ವೈರಸ್ಸಿನ ಹಾವಳಿ ಇತ್ತೀಚಿಗೆ ಭಾರತದಲ್ಲಿ ಭಯಂಕರವಾಗಿದೆಯಂತೆ. 

'ಇದ್ಯಾವ ವೈರಸ್ಸಪ್ಪಾ ?' ಅಂದ್ರಾ....??

ಅದೇ 'ಆಂಟಿ' ವೈರಸ್......!!

ಖಂಡಿತಾ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿಲ್ಲ.

ನಾನು ಹೇಳ್ತಿರೋದು aunty ವೈರಸ್ಸೇ..... anti ವೈರಸ್ಸಲ್ಲಾ....

ನಾವು ಭಾರತೀಯರು ಮುಂಚಿನಿಂದಲೂ ಕೂಡು ಕುಟುಂಬದಲ್ಲಿ ಬಾಳಿದವರು. ಈಗೀಗ ಪೋಪಿಕಾಲದ ಆಟೋಪಟೋಟದಿಂದ ವಿಭಕ್ತಕುಟುಂಬಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಂಬಂಧಗಳ ಬೇರು ಸಂಪೂರ್ಣ ಸಡಿಲವಾಗಿಲ್ಲ. ಯಾವುದೇ ಭಾರತೀಯ
ಭಾಷೆಯನ್ನಾದರೂ ಗಮನಿಸಿ. ಅದೆಷ್ಟು ಸಂಬಂಧ ಸೂಚಕ ಸರ್ವ ನಾಮಗಳಿವೆ ನಮ್ಮಲ್ಲಿ. ಕುಟುಂಬದ ಹಿರಿತಲೆಗಳಿಂದ ಹಿಡಿದು ಪುಟಾಣಿ, ಪಾವು, ಸೇರು, ಚಟಾಕು, ಪಟಾಕು ತನಕ ಎಲ್ಲಕ್ಕೂ ಪ್ರತ್ಯೇಕ ಸರ್ವನಾಮಗಳಿವೆ. ಅದೇ ಈ ಇಂಗ್ಲೀಷಿನ ಕಥೆ ನೋಡಿ. ಈಜಿಪ್ಟಿಯನ್ ಮಮ್ಮಿ , ಮೋಯಿನ್ ಅಲಿ ದಾಡಿ ಅನ್ನೋದು ಬಿಟ್ರೆ ಅದೇನೋ ಗ್ರಾನಿ, ಗ್ರಾಂಡ್
ಪಾ, ಮತ್ತೇನೋ ಕಾನೂನಾತ್ಮಕ 'ಫಾದರ್ರು , ಮದರ್ರು , ಬ್ರದರ್ರು , ಸಿಸ್ಟರ್ರು' ಇನ್ ಲಾಗಳು, ನೀಸು, ನೇಫ್ಯೂ. ಇಷ್ಟನ್ನು ಹೊರತುಪಡಿಸಿ ಉಳಿಯುವ ಏಕೈಕ, ಭಯಂಕರ ಸರ್ವನಾಮಗಳೇ ಅಂಕಲ್ಲು ಮತ್ತೆ ಆಂಟಿ.

ಬೆಳಗ್ಗೆ ಹಾಲು ಪೇಪರ್ ಹಾಕೋರಿಂದ ಹಿಡಿದು ರಾತ್ರಿ ಗೇಟ್ ಕಾಯೋ ವಾಚ್ಮೆನ್ ತನಕ ಎಲ್ಲಾ ಅಂಕಲ್ಲೂ ಆಂಟಿದೀರೆ ನೋಡಿ. ಇದರಲ್ಲಿ ಅಂಕಲ್ಲುಗಳ ವಿಚಾರ ಸ್ವಲ್ಪ ಪಕ್ಕಕಿರಿಸೋಣ. ಯಾಕೆಂದ್ರೆ ಈ ಗಣ್ಮಕ್ಕಳಿಗೆ ಅಂಕಲ್ ಅನ್ನಿ, ಅಜ್ಜ ಅನ್ನಿ, ಇಲ್ಲಾ ಮುತ್ತಜ್ಜ ಅಂತಾದರೂ ಹೇಳಿ. ಅವರೇನೂ ಬೇಜಾರು ಮಾಡ್ಕೊಳ್ಳಲ್ಲ. ಅವರೊಂಥರಾ ಫಿಕರ್ ನಾಟ್ ಕೆಟಗರಿವರು. 

ಆದ್ರೆ ನಾವು ಮಹಿಳಾಮಣಿಗಳು. ಬಲು ಭಾವುಕ ಜೀವಿಗಳು..... ನಮಗೆ ಅವರಷ್ಟು ಕೇರ್ ಫ್ರೀ ಆಗಿ ಇರೋಕಾಗುತ್ತಾ? ಯಾರಾದ್ರೂ ಆಂಟಿ ಅಂದ್ರೆ ನಮ್ಮ ಮುಖ ಒಣಶುಂಠಿಯಂತೆ ಆಗೋದಂತು ಸತ್ಯ. ಈಗ ಈ ಆಂಟಿ ವೈರಸ್ಸು ವಿಚಾರ ಇಷ್ಟು ಪ್ರಾಮುಖ್ಯತೆ ತಗೋಳಕ್ಕೆ ಏನು ಕಾರಣ ಅನ್ನೋ ಪ್ರಶ್ನೆ ನಿಮ್ಮ ತಲೆ ತುಂಬಾ ಪಿ.ಟಿ
ಉಷಾ ರೇಂಜಲ್ಲಿ ಓಡ್ತಿರುತ್ತೆ. ಅದೇ ಪ್ರಶ್ನೆಗೆ ಉಸೇನ್ ಬೋಲ್ಟಷ್ಟೇ ಫಾಸ್ಟ್ ಎಂಡ್ ಫ್ಯೂರಿಯಸ್ ಆಗಿ ಒಂದು ಉತ್ತರನೂ ನಿಮ್ಮ ತಲೆಗೇ ಬಂದಿರುತ್ತೆ......

'ಓ..., ಮೋಸ್ಟ್ಲೀ ಇವಳನ್ನ ಯಾರೋ ಆಂಟಿ ಅಂತ ಕರ್ದಿರ್ಬೇಕು. ಅದಕ್ಕೇ ಈ ಪೀಠಿಕೆ, ಈ ಸಂಚಿಕೆ' ಅಂತ.
ಆದರೆ ವಿಷಯ ಅದಲ್ಲ. ಇಷ್ಟಕ್ಕೂ ಈ 'ಆಂಟಿ' ಅನ್ನೋ ಪದ ನನಗೆ ಹೊಸದಲ್ಲ. ಬಾಲ್ಯದಲ್ಲೇ ತಲೆಕೂದ್ಲು ಬಿಳಿಯಾಗಿ ಬಾಲನೆರೆ ಆದಂಗೆ ನಾನು ಕಾಲೇಜಿಗೆ ಹೋಗ್ತಿದ್ದ ಟೈಮಲ್ಲೇ ಈ 'ಆಂಟಿ' ವೈರಸ್ ಅಟ್ಯಾಕ್ ಆಗಿತ್ತು ನನಗೆ. 'ಏನಪ್ಪಾ ಇವಳು ಹೀಗಂತಾಳೆ?' ಅಂದ್ರಾ. ಹೌದು ನೋಡಿ. ನಾನು ಬಿ.ಎಡ್ ಓದುವಾಗ ಸೀರೆಯೇ ನಮ್ಮ ಉಡುಗೆ. ಸೀರೆ ಉಟ್ಟ ನೀರೆಯರೆಲ್ಲಾ ಆಂಟಿಯರೇ ಎಂಬ ಸಾರ್ವತ್ರಿಕ ತಪ್ಪು ಕಲ್ಪನೆಯಿಂದಾಗಿ ಆ ಕಾಲದಲ್ಲೇ ಎಲ್ಲರ ಬಾಯಲ್ಲೂ ನಾವು ಆಂಟಿಗಳಾದದ್ದು ಈಗ ಇತಿಹಾಸ. ಆಗಲೇ ಆಂಟಿ ಅನ್ನಿಸಿಕೊಂಡ ನಮಗೆಲ್ಲಾ ಈಗ ಯಾರಾದ್ರೂ 'ಓಯ್ ಅಜ್ಜಮ್ಮಾ' ಅಂತ ಕರೆದ್ರೂ ಏನೂ ಫೀಲ್ ಆಗೋಲ್ಲ. ಆ ರೇಂಜಿಗೆ ಎಮ್ಮೆ ಚರ್ಮದವಳಾಗಿದ್ದೀನಿ ನಾನು. ಅದು ಬಿಡಿ. ಈಗ ನನಗೆ ಈ ಆಂಟಿ ವೈರಸ್ ಬಗ್ಗೆ ಯೋಚನೆ ಯಾಕೆ ಬಂತು ಅಂತ ಹೇಳ್ತೀನಿ ಕೇಳಿ.

ಮೊನ್ನೆ ಸಂಜೆ ಮಗಳನ್ನ ವಾಕಿಂಗ್ ಅಂತ ಪಕ್ಕದ ಪಾರ್ಕಿಗೆ ಕರ್ಕೊಂಡು ಹೋಗಿದ್ದೆ. ಹೇಳಿ ಕೇಳಿ ಪಾರ್ಕು. ಸಂಜೆ ಹೊತ್ತು ಬೇರೆ. ಆಟವಾಡಲು ಬರೋ ಪಾವು, ಸೇರು, ಚಟಾಕು, ಪಟಾಕು, ಪಿಳ್ಳೆಗಳದು ಒಂದು ಗುಂಪಾದರೆ ಟ್ರಿಪಲ್, ಡಬಲ್ ಎಕ್ಸ್ ಎಲ್ ಸೈಜನ್ನು ಒಗೆದು, ಹಿಂಡಿ, ಕರಗಿಸಿ ಜೀರೋ ಸೈಜ್ ಆಗಲು ದೇಹ ದಂಡಿಸುವ ಡುಮ್ಮು , ಡ್ರಮ್ಮು , ಮರಿ ಸಿಂಟೆಕ್ಸ್ , ಸಿಂಟೆಕ್ಸ್ ಗಾತ್ರದ ಬೃಹತ್ ಬಾಲಿಕೆಯರದು (ನನ್ನಂಥವರು) ಇನ್ನೊಂದು ಹಿಂಡು. ಇವೆರಡು ಹಿಂಡುಗಳ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಗಂಡಸರ ಗುಂಪೊಂದು ಎಲ್ಲೋ ಮೂಲೆಯಲ್ಲಿ ಕಲ್ಲು ಬೆಂಚಿನ ಮೇಲೆ ಹರಟೆಯಲ್ಲಿ ತೊಡಗಿರುತ್ತದೆನ್ನಿ.

ಮೊನ್ನೆಯೂ ಹೀಗೇ ಎಲ್ಲವನ್ನೂ 'ಕಣ್ತುಂಬಿಕೊಳ್ಳುತ್ತಾ' ಮಗಳನ್ನು ಕರ್ಕೊಂಡು ಸುತ್ತರಿತಿರೋವಾಗಲೇ ನನ್ನ ಪಕ್ಕದಿಂದ ಒಬ್ಬಾಕೆ ಅತ್ತ ನಡಿಗೆಯೂ ಅಲ್ಲ, ಇತ್ತ ಓಟವೂ ಅಲ್ಲ ಅನ್ನೋ ವಿಧದ ನಡಿಗೆಯಲ್ಲಿ ಸರಿದುಹೋದರು. ಹಾಗೆ ಹೋಗುವ ಭರಾಟೆಯಲ್ಲಿ ಅವರ ಕೈಲಿದ್ದ ಕರವಸ್ತ್ರ ಕೆಳಗೆ ಬಿತ್ತು. ನಾನು ಅವರನ್ನು ಕರೀಬೇಕು ಅನ್ನುವಷ್ಟರಲ್ಲಿ ಅಲ್ಲೇ ಆಟವಾಡುತ್ತಿದ್ದ ಹುಡುಗನೊಬ್ಬ,

"ಆಂಟೀ...... ನಿಮ್ಮ ಕರ್ಚೀಫು" ಅಂದ್ನಪ್ಪ........!!

ಅಷ್ಟೇ ಹೇಳಿದ್ದು ಅವನು.....!!!

"ಏ ಯಾರೋ ಆಂಟಿ? ನಾನು ನಿನ್ನ ಕಣ್ಣಿಗೆ ಆಂಟಿ ತರ ಕಾಣ್ತೀನಾ" ಅಂತ ಆ ಲೇಡಿ ಆ ಅಬೋಧ ಬಾಲಕನ ಮೇಲೆ ಜಗಳಕ್ಕೇ ಬರೋದಾ.....!!  
ಪಾಪದ ಹುಡುಗ ಅವರ ಆರ್ಭಟಕ್ಕೆ ಬೆದರಿ ಓಟಕಿತ್ತ. ಆ ಮಹಾತಾಯಿ ಮಾತ್ರ ಆಮೇಲೂ ಇಂಗ್ಲೀಷಲ್ಲಿ ಅವನಿಗೆ ಸಂಸ್ಕಾರ ಇಲ್ಲ ಅಂತ ಬೈತಿದ್ರು. ಆದರೂ ಅವರನ್ನು ಸರಿಯಾಗಿ ಗಮನಿಸಿದ ಮೇಲೆ ನನಗೂ ಅವರ ಮಾತಿನಲ್ಲಿ
ಹುರುಳಿದೆ ಅನ್ನಿಸ್ತು ನೋಡಿ.(ಆಕ್ಚುಲಿ ಅವರು ಆಂಟಿ ಅಲ್ಲಾ ಅಜ್ಜಿ ತರ ಇದ್ರು. ಬಹುಶಃ ಅದಕ್ಕೆ ಹಾಗೆ ಹೇಳಿರ್ಬೇಕು) ಆದ್ರೂ ಈಕೆ ವಾಸಿ. 'ಆಂಟಿ' ಅಂತ ಕರೆದಿದ್ದು ಕೇಳಿ ಶಸ್ತ್ರಾಸ್ತ್ರ ಸಮೇತ ಯುದ್ಧಕ್ಕೆ ನಿಂತ್ರು. 'ಆಂಟಿ' ಅನ್ನೋ ಪದ ಕೇಳಿದ್ದೇ 'ಕರೆದರೂ ಕೇಳದೇ, ತಿರುಗಿಯೂ ನೋಡದೇ' ರಾಕೆಟ್ ಸ್ಪೀಡಲ್ಲಿ ಓಡಿ ಮಾಯವಾಗುವವರೂ ಇದ್ದಾರೆ.

ನಮ್ಮ ಬೀದಿ ಮೂಲೆಯಲ್ಲಿರೋ ಅಂಗಡಿಯ ಮಾಲಕಿ ನನಗಿಂತ ಹಿರಿಯಳು.....😁 (ಅದಕ್ಯಾಕೆ ಈ ದಂತ ಪ್ರದರ್ಶನ ಅಂದ್ರಾ? ಯಾರಾದರೂ ನಮಗಿಂತ ಹಿರಿಯರು, ನಾವು ಅವರಿಗಿಂತ ಚಿಕ್ಕವರು ಅಂತ ಹೇಳ್ಕೊಳ್ಳೋಕೆ ಹೆಣ್ಮಕ್ಕಳಿಗೊಂತರಾ ಖುಷಿ ಕಣ್ರಪ್ಪಾ..... It's a psychological fact you know....😉) ಮೊದಲಬಾರಿಗೆ ಅವರ ಅಂಗಡಿಗೆ ಹೋಗಿದ್ದೆ ತರಕಾರಿ ಕೊಳ್ಳಲು. "ಟೊಮ್ಯಾಟೋ ಕೆಜಿಗೆ ಎಷ್ಟು ಆಂಟಿ...." ಅಂತ ಇನ್ನೇನು ಕೇಳ್ಬೇಕು. ಅಷ್ಟರೊಳಗೆ ನನ್ನ ಪುಣ್ಯಕ್ಕೆ ಒಬ್ಬಳು ಕಾಲೇಜು ಕನ್ಯೆ ಬಂದು, "ಆಂಟಿ, ಹಾಫ್ ಲೀಟರ್ ಮೊಸರು ಕೊಡಿ" ಅಂದಿದ್ದೇ ತಡ! "ಅಯ್ಯೋ, ನನಗೇನಮ್ಮಾ ಅಂಥಾ ವಯಸ್ಸಾಗಿರೋದು. ಏನೋ ನಿನಗಿಂತ ಒಂಚೂರು (????) ದೊಡ್ಡವಳಷ್ಟೇ. ಆಂಟಿ ಅನ್ಬೇಡಾ ಅಕ್ಕಾ ಅನ್ನು" ಅಂದ್ಬಿಡೋದಾ?

ಹದಿನೆಂಟರ ಬಾಲಕಿ ಹತ್ತಿರವೇ ಈ ರೀತಿ ಕೇಳಿದ ಆ ಆಂಟಿನ......ಅಲ್ಲಲ್ಲಾ ... ಸಾರಿ...... ಅಕ್ಕನ್ನ ನಾನೆಲ್ಲಾದ್ರೂ ಆಂಟಿ ಅಂದಿದ್ರೆ ಏನು ಕಥೆ ಆಗ್ತಿತ್ತು ನಂದು? ಮೊದಲೇ ಘಟವಾಣಿ ಬಾಯಿ ಅವ್ರದ್ದು. ಪಕ್ಕಾ ಭಾರತದ ಮೇಲೆ ಘಜ್ನಿ, ಘೋರಿ ದಂಡೆತ್ತಿ ಬಂದಂಗೆ ನನ್ನ ಮಾನ ಮರ್ವಾದೆ ಮೂರ್ಕಾಸಿಗೆ ಹರಾಜಾಕ್ತಿರ್ಲಿಲ್ವಾ ಆ ಅಕ್ಕ??
ಆ ಹುಡುಗಿ ಮೊಸರು ತಗೊಂಡು ಹೋಗಿದ್ದೇ 'ಯಕ್ಕಾ ನೀನೇ ದೇವ್ರು, ಯಕ್ಕಾ ತುಮ್ಹೀ ಹೋಂ ಬಂಧು ಸಖೀ ತುಮ್ಹೀ' ಅಂತ ಅವಳಿಗೆ ಮನದಲ್ಲೇ ನೂರೆಂಟು ಪ್ರದಕ್ಷಿಣೆ ಹಾಕಿ, "ಅಕ್ಕಾ ..... ಟೊಮ್ಯಾಟೋ ಕೆಜಿಗೆ ಎಷ್ಟು?" ಅಂತ ಮೂವತ್ತೆರಡು ಹಲ್ಲು ಕಿಸಿದು ಕೇಳಿ ಬಚಾವಾಗಿದ್ದೆ. ಅವತ್ತಿಂದ ಹಿಡಿದು ಇವತ್ತಿನ ತನಕ ಯಾವಾಗ ಅಕ್ಕಯ್ಯನ ಅಂಗಡಿಗೆ ಹೋಗೋದಾದ್ರೂ ಗೇಟು ದಾಟುವಾಗಿಂದ್ಲೇ ಮೈಂಡಿಗೆ ಟ್ರೈನಿಂಗ್ ಕೊಡ್ತೀನಿ...... 'ನೋಡು
ಅಂಗಡಿಗೆ ಹೋಗಿ ಅಕ್ಕಾ ಅನ್ಬೇಕು. ಅಪ್ಪಿತಪ್ಪಿಯೂ ಆಂಟಿ ಅಂದು ಮರ್ಯಾದೆ ಕಳೀಬೇಡ' ಅಂತ. ಇಂತಹ ಮಾನ ಮರ್ಯಾದೆ ತೆಗೆಯೋ ಭಯಂಕರ ಖತರ್ನಾಕ್ ವೈರಸ್ಸು ನೋಡಿ ಈ ಆಂಟಿ ವೈರಸ್ಸು ....

ಈ ಆಂಟಿ ವೈರಸ್ಸಿನ ಸಹವಾಸವೇ ಬೇಡ, ಹೆಸರಿಡಿದೇ ಕರೆದುಬಿಡುವ ಅಂದರೆ ಈ ಹೆಸರುಗಳದ್ದೋ ಇನ್ನೊಂದು ಬಗೆಯ ಅದ್ವಾನ. ನಮ್ಮಲ್ಲಿ ಒಂದೊಂದು ಕಿಲೋಮೀಟರ್ ದಾಟಿದ ಕೂಡಲೇ ಭಾಷೆ, ಮಾತಿನ ಶೈಲಿ, ಸೊಗಡು ಎಲ್ಲಾ ಬದಲಾಗುತ್ತೆ ನೋಡಿ. ಹಾಗೆ ಬದಲಾಗೋ ಶೈಲಿಯೊಂದಿಗೆ ಹೆಸರನ್ನೂ ಕೂಡಾ ಅವರಿಗೆ ಬೇಕಾದಂತೆ ಬದಲಾಯಿಸಿ ಕರ್ಯೋದು ನ್ಯಾಯವೇ? ಈಗ ನನ್ನ ಹೆಸರು ಯಾರ್ಯಾರ ಬಾಯಲ್ಲಿ ಏನೇನಾಗುತ್ತೆ ಅಂತ ಹೇಳೋಕಾಗಲ್ಲ. ನೀತಾ ಅನ್ನೋ ಎರಡಕ್ಷರದ ಸೀದಾಸಾದಾ ಹೆಸರನ್ನು ನೀತ, ನೀತು, ನೀತಿ,
ನಿತ್ಯಾ , ನೇತ್ಯಾ , ನೈತ್ಯಾ....... ಹೀಗೆ ಏನೇನೋ ಕರೀತಾರೆ. ಹಿಂಗೆಲ್ಲಾ ಮಾಡಿದ್ರೆ ಇವರು ಕರೀತಿರೋದು ನನ್ನನ್ನೇ ಅಂತ ನನಗೆ ಗೊತ್ತಾಗೋದಾದರೂ ಹೇಗೆ ನೀವೇ ಹೇಳಿ.....?

ನಾನು ಮಾಸ್ಟರ್ಸ್ ಮಾಡ್ತಿದ್ದಾಗ ಇನ್ಶುರೆನ್ಸ್ ಮ್ಯಾನೇಜ್ಮೆಂಟ್ ಸಬ್ಜೆಕ್ಟಿಗೆ ಒಬ್ಬರು ಮೇಡಂ ಇದ್ದರು. ಎಮಿಲ್ ಮ್ಯಾಥ್ಯೂಸ್ ಅಂತ ಆಕೆಯ ಹೆಸರು. ನಮಗೆಲ್ಲಾ ಅವರ ಹೆಸರು ಒಂಥರಾ ಕ್ವೀನ್ ಎಲಿಜಬೆತ್ ತರ. (ಅವರಿಗೂ ಬಹುಶಃ ನಮ್ಮ ಹೆಸರುಗಳು ಪಜ಼ಲ್
ತರ ಅನ್ನಿಸ್ತಿತ್ತೇನೋ). ಆ ಹೆಸರು ಹೇಳುವಾಗ ಕ್ಲಿಯೋಪಾತ್ರಳ ಹೆಸರನ್ನು ಕೂಗಿದಷ್ಟೇ ಸಂತಸ. ಪಾಪ ಆಕೆ ಮಲೆಯಾಳಿ. 'ತ' ಕಾರ ಯಾವಾಗಲೂ 'ದ' ಕಾರವೇ ಅವರಿಗೆ. ಜೊತೆಗೆ ಅದೇಕೋ ಭಾರತೀಯ ಹೆಸರುಗಳ ಉಚ್ಛಾರಣೆ ಬಲು ತೊಂದರೆ ಅವರಿಗೆ. ಇಂತಿಪ್ಪ ಎಮಿಲ್ ಮ್ಯಾಮ್ ಅಟೆಂಡೆನ್ಸ್ ಕರೆಯೋಕೆ ಶುರುಮಾಡಿದ್ರು ಅಂದ್ರೆ ಅಲ್ಲಿಗೆ ಕಥೆ ಮುಗೀತಂತ್ಲೇ ಲೆಕ್ಕ. ಬಾಲಕ್ಕೆ ಬಿದ್ದ ಬೆಂಕಿಯಿಂದ ಲಂಕೆ ಸುಟ್ಟ ಹನುಮಂತನಂತಾಗುತ್ತಿತ್ತು ತರಗತಿ. 'ನೀತಾ' ಅನ್ನೋದು ಅವರ ಉಚ್ಛಾರಣೆಯಲ್ಲಿ 'ನೀದಾ' ಆಗಿ 'ನೀನ್ ದಾನ್' ಅಂತ ತಮಿಳಲ್ಲಿ ಕೇಳಿದಂತಾಗ್ತಿತ್ತು ನನಗೆ. 'ಪ್ರೆಸೆಂಟ್ ಮ್ಯಾಮ್' ಅನ್ನುವಾಗೆಲ್ಲಾ 'ಆಮ, ಅದ್ ನಾನ್ ದಾನ್' ಅಂತ ಉತ್ತರ ಕೊಟ್ಟ ಫೀಲಿಂಗೇ ಬರ್ತಿದ್ದಿದ್ದು. ಗೆಳತಿ 'ಚೇತನಾ'ಳ ನಾಮಧೇಯ 'ಚೇದನಾ' ಆದ ನಂತರ ಅವಳನ್ನು ಇಡೀ ಕ್ಲಾಸಿನವರೆಲ್ಲಾ 'ಏನೇ ದನಾ' ಅಂತ್ಲೇ ರೇಗಿಸ್ತಿದ್ದಿದ್ದು. 'ಗಣೇಶ್' ಅನ್ನೋದ್ನ 'ಗೆನೇಶ್' ಅನ್ನೋರು.

ಆದರೆ ಇವೆಲ್ಲಕ್ಕಿಂತ ಸ್ವಾರಸ್ಯಕರ ಸಂಗತಿ ಅಂದ್ರೆ ನಮ್ಮ ಕ್ಲಾಸಿನಲ್ಲಿ 'ದರ್ಶನ್ ಕರುಂಬಯ್ಯ ತಿರುನೆಲ್ಲಿಮಾದ' ಎಂಬೋ ಹೆಸರಿನ ಕೊಡವ ಒಬ್ಬನಿದ್ದ.....!! ಪ್ಲೇನ್ ದೋಸೆ
ತರ ಇರೋ ಎರಡಕ್ಷರದ ನನ್ನ ಹೆಸರೇ ಮೇಡಂ ಬಾಯಲ್ಲಿ ಚಿತ್ರಾನ್ನ ಆಗ್ತಿತ್ತು. ಇನ್ನು ಸುರುಳಿ ಸುತ್ತಿದ ಜಿಲೇಬಿಯ ತೆರನಾದ ಕರುಂಬಯ್ಯನ ಹೆಸರಿನ ಮೊಸರಾಗದೇ ಇದ್ದೀತೇ ಅಂದ್ಕೊಂಡ್ರಾ.....? ಖಂಡಿತಾ ಹಾಗಾಗ್ಲಿಲ್ಲ. ಅವರು 'ಕರ್ ರುಮ್' 'ಕರುಮ್' 'ಕುರುಮ್'
ಅಂತ ದಿನಾ ಹಾಜರಿ ಕರೆಯುವಾಗ ಪ್ರಯತ್ನಿಸಿದ್ದು ಬಂತೇ ಹೊರತು ಜಪ್ಪಯ್ಯಾ ಅಂದ್ರು ನಮ್ಮ ಎಮಿಲ್ ಮ್ಯಾಮ್ ನಾಲಿಗೆಗೆ ಕರುಂಬಯ್ಯ ಕೊನೆಗೂ ದಕ್ಕಲೇ ಇಲ್ಲ. ಇಷ್ಟಾಗುವಾಗ ಇದನ್ನು ಹೀಗೇ ಬಿಟ್ರೆ ಮೇಡಂ ಬಾಯಲ್ಲಿ ನಾನು ಕುರುಕ್ಲು ತಿಂಡಿ ಆಗೋಗ್ತೀನಿ ಅಂತ ಕರುಂಬಯ್ಯನಿಗೆ ಕನ್ಫರ್ಮ್ ಆಗೋಯ್ತು. ಹಾಗಾಗಿ ಅವರು ಹಾಜರಿ ಕರೆಯುವಾಗ ಅವನ ಹೆಸರಿಗೆ ಬಂದು
ಇನ್ನೇನು 'ಕ...' ಅಂತ ಆರಂಭಿಸಿದೊಡನೆ 'ಪ್ರೆಸೆಂಟ್ ಮ್ಯಾಮ್' ಅಂದುಬಿಡುತ್ತಿದ್ದ. ಇದರಿಂದಾಗಿ ಅವನ ಹೆಸರು ಹಾಗೂ ಮೇಡಂ ನಾಲಿಗೆ ಇಬ್ಬರೂ ಬಚಾವಾದ್ರು ಅನ್ನಿ.

ತುಳು ಭಾಷೆಯ ಅರಿವಿಲ್ಲದವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಊರಿನ ಹೆಸರುಗಳೂ ಹಲವು ಸಂಕಟಗಳನ್ನು ತಂದೊಡ್ಡುವುದು ಸುಳ್ಳಲ್ಲ. ಊರಿಗೆ ಅಧಿಕೃತವಾಗಿರುವ ಹೆಸರಿನೊಂದಿಗೇ ತಮ್ಮ ಭಾಷೆಯಲ್ಲಿಯೂ ಪ್ರೀತಿಯಿಂದ ಅಡ್ಡಹೆಸರಿಡುವ ರೂಢಿ ದಕ್ಷಿಣ ಕನ್ನಡದಲ್ಲಿದೆ. ಹೆಚ್ಚಿನ ಕಡೆ ಅಧಿಕೃತ ಹೆಸರಿಗಿಂತ ರೂಢಿಗತ ಹೆಸರಿನ ಬಳಕೆಯೇ ಹೆಚ್ಚು. ನಾನು ಓದಿಗಾಗಿ ಮೊದಲ ಬಾರಿಗೆ
ಮಲೆನಾಡಿನಿಂದ ಕರಾವಳಿಗೆ ಪಯಣ ಬೆಳೆಸಿದಾಗ ನನಗೆ ತುಳುವಿನ ಗಂಧಗಾಳಿಯೂ ತಿಳಿದಿರಲಿಲ್ಲ. ಕಾರ್ಕಳ ತಲುಪುತ್ತಿದ್ದಂತೆ ಕಂಡಕ್ಟರ್ 'ಕಾರ್ಲ , ಕಾರ್ಲ ....' ಅಂತ ಕಿರುಚಿದಾಗ 'ಕಾರ್ಕಳನ ಕಾಲರ ತರ ಏನೋ ಹೇಳ್ತಿದ್ದಾನಲ್ಲ.... ಇವನಿಗೇನಪ್ಪಾ ಆಯ್ತು' ಅನ್ನೋ ಸೋಜಿಗ ನನಗೆ. ಆಮೇಲೆ ನೋಡಿದ್ರೆ ಮೂಡುಬಿದಿರೆಗೆ 'ಬೆದ್ರ, ಬೆದ್ರ....' ಅಂದಾಗ 'ಪಕ್ಕಾ ಪುಣ್ಯಾತ್ಮನಿಗೆ ನಟ್ಟು
ಬೋಲ್ಟು ಲೂಸಾಗಿದೆ' ಅಂತ ನಿರ್ಧರಿಸಿಬಿಟ್ಟಿದ್ದೆ. ಕುಡುಪು, ಕೈಕಂಬ, ಪಿಲಿಕುಲ, ವಾಮಂಜೂರು, ಕುಲಶೇಖರ, ನಂತೂರು ಅಂತ ಮಂಗಳೂರಿನ ಹತ್ತಿರತ್ತಿರದ ಪ್ರದೇಶಗಳು ಬರುತ್ತಾ ಹೋದ್ವೇ ಹೊರತು ಕಂಡಕ್ಟರ್ ಬಾಯಲ್ಲಿ ಮಂಗಳೂರು ಅಂತ ಬರ್ತಾನೆ ಇಲ್ಲ
ಅನ್ನೋ ತಲೆಬಿಸಿ ನನಗೆ. ಕಡೆಗೊಮ್ಮೆ ಲಾಸ್ಟ್ ಸ್ಟಾಪ್ ಅಂತ ನಿಲ್ಲಿಸಿ 'ಕುಡ್ಲ, ಕುಡ್ಲ.... ಲಾಸ್ಟ್ ಸ್ಟಾಪ್' ಅಂದ ಕಂಡಕ್ಟರ್ ನೋಡಿ ನಾನು ಕಕ್ಕಾಬಿಕ್ಕಿ . ಟಿಕೆಟ್ ತಗೊಂಡಿರೋದು ಮಂಗಳೂರಿಗೆ, ಇವನ್ಯಾವ 'ಕುಡ್ಲ'ದಲ್ಲಿ ಇಳಿಸ್ತಿದ್ದಾನೆ ಅಂತ. ಬಸ್ಸಿನಲ್ಲಿರೋ ಎಲ್ಲರೂ ಅವರ ಪಾಡಿಗವರು ಇಳಿದು ಹೋಗ್ತಿದ್ದಿದ್ದು ಬೇರೆ ನೋಡಿ ನನಗೆ ಅನುಮಾನ ಬಂದು ಹೊರಗೆ ಅಂಗಡಿಗಳ ಬೋರ್ಡ್ ನೋಡಿದ್ರೆ
ಎಲ್ಲದರಲ್ಲೂ 'ಮಂಗಳೂರು' ಅಂತಿದೆ.....!! ಇನ್ನು ತಾಳಲಾರೆ ಈ ವೇದನೆ ಅಂತ ಅಪ್ಪನತ್ರ ಕೇಳೇಬಿಟ್ಟೆ ಎಂತಪ್ಪಾ ಇದು ಅಂತ. ಆಗ ಗೊತ್ತಾಯ್ತು ನನಗೆ ತುಳುವಲ್ಲಿ ಕಾರ್ಕಳನ 'ಕಾರ್ಲ' , ಮೂಡುಬಿದಿರೆಗೆ 'ಬೆದ್ರ' , ಮಂಗಳೂರಿಗೆ 'ಕುಡ್ಲ' ಅಂತ ಕರೀತಾರೆ ಅಂತ. ಬೇಕಾ ನನ್ನ ಅವಸ್ಥೆ.

ನನ್ನ ಮದುವೆಯಾದ ನಂತರ ಒಮ್ಮೆ ನಮ್ಮೆಜಮಾನರ ಅಜ್ಜಿ ಮನೆಗೆ ಹೋಗಲೆಂದು ಬೆಂಗಳೂರಿನಿಂದ ಹೊರಟೆವು. ಉಪ್ಪಿನಂಗಡಿ ಬರುವಾಗ ನನಗೆ ಮತ್ತದೇ ಪುರಾತನ ಸಮಸ್ಯೆ....... ಆದರೆ ಈ ಬಾರಿ ಮಾತ್ರ ಭಯಂಕರ ಆಶ್ಚರ್ಯವಾಗಿತ್ತು ನನಗೆ. 'ಉಬರ್, ಉಬರ್....' ಅಂತ ಬಡ್ಕೊಂಡ ಕಂಡಕ್ಟರ್ ಕಂಡು ಯಾರಿಗೆ ಅಚ್ಚರಿಯಾಗದು ನೀವೇ ಹೇಳಿ? ಬೆಂಗಳೂರಲ್ಲೇ
ಓಲಾ, ಉಬರ್ ಸಿಗುವುದು ಕಷ್ಟವಾಗಿರುವ ಕಾಲದಲ್ಲಿ ಉಪ್ಪಿನಂಗಡಿಯಲ್ಲಿ ಉಬರ್ ಕಂಡರೆ ಹೇಗಾಗಬೇಡ? ನನ್ನ ತಲೆಕೆಟ್ಟು ಗೊಬ್ಬರವಾಗದೇ ಇದ್ದೀತೇ? ಉರಿಯೋ ಬೆಂಕಿಗೆ ತುಪ್ಪ ಸುರಿಯುವಂತೆ ನನ್ನ ಈ ಭಯಂಕರ ಅನುಮಾನ ಕೇಳಿ ನನ್ನ ಗಂಡ ನಗಬೇಕಾ??? ಕೋಪದಿಂದ ತಾರಾಮಾರ ಆದ ನನ್ನನ್ನು ಕಂಡು ಇನ್ನಷ್ಟು ಜೋರಾಗಿ ನಗುತ್ತಾ, "ಮಾರಾಯ್ತೀ, ಮರ್ಯಾದೆ ತೆಗೀತೀಯಾ ನೀನು. ಅದು ಉಬರ್ ಅಲ್ವೇ. ಉಪ್ಪಿನಂಗಡಿಗೆ ಇಲ್ಲೆಲ್ಲಾ 'ಉಬ್ಬಾರ್' ಅಂತಾರೆ. ಈ ಕಂಡಕ್ಟರುಗಳು ಫ್ಲೋ ಅಲ್ಲಿ
ಹೇಳ್ತಾ 'ಉಬ್ಬಾರ್' ಅನ್ನೋದು 'ಉಬರ್' ತರ ಕೇಳಿಸುತ್ತಷ್ಟೇ" ಅಂದಾಗ ನನ್ನ ಮುಸುಡಿ ಸುಟ್ಟ ಬದನೆಕಾಯಂತೆ ಆದದ್ದು ಸುಳ್ಳಲ್ಲ.

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಇಷ್ಟೆಲ್ಲಾ ಹಗರಣಗಳ ನಂತರ ಈಗ ಯಾವ ಜಾಗದ ಯಾವ ಊರಿನ ಹೆಸರನ್ನಾಗಲೀ ಅಂಗಡಿ ಮುಂಗಟ್ಟುಗಳ ಬೋರ್ಡನ್ನ ನೋಡಿಯೇ ಕನ್ಫರ್ಮ್ ಮಾಡ್ಕೊಳ್ಳೋದು ನಾನು. ಹೀಗಿರುವಾಗ 'ಹೆಸರಲ್ಲಿ ಏನಿದೆ? ಏನೋ ಒಂದು ಕರೆದ್ರಾಯ್ತು' ಅಂತ ಹೇಳೋಕಾಗುತ್ತಾ ನೀವೇ ಹೇಳಿ.....?

'ಆಂಟಿ' ಅಂದ್ರೆ ಅನ್ನಿಸಿಕೊಂಡವರಿಗೆ ಕೋಪ........

ಹೆಸರಿಡಿದು ಕರೆಯುವಾಗ ಹೆಸರು ಆಚೀಚೆ ಆದರೆ ಕರೆಯುವವರಿಗೆ ಶಾಪ.........

ಅಬ್ಬಬ್ಬಾ 'ನಾಮ(ಧೇಯ)' ಪುರಾಣದಲ್ಲಿ ಅದೆಷ್ಟು ಲೋಪ ......!!!