ಲೇಬಲ್ಗಳು
ಗುರುವಾರ, ಏಪ್ರಿಲ್ 10, 2025
ದಯವಿರಬೇಕು ಸಕಲ ಪ್ರಾಣಿಗಳಲಿ
ಮಹಾವೀರ ಜಯಂತಿಯ ಈ ಶುಭ ಸಂದರ್ಭದಂದು ಸುಮಾರಷ್ಟು ಸದ್ಧರ್ಮ ಬಂಧುಗಳ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ಮಹಾವೀರರ ವಾಣಿ ಅನುರಣಿಸಿದ್ದು ಕಂಡು ಖುಷಿಯ ಜೊತೆಜೊತೆಗೆ ಒಂದು ಪ್ರಶ್ನೆ ತಲೆಯೊಳಗೆ ಓಡಾಡ್ತಿದೆ. ಅಹಿಂಸಾ ಪರಮೋ ಧರ್ಮಃ ಎಂಬ ಜೈನ ಧರ್ಮದ ಮೂಲಭೂತ ಸಿದ್ಧಾಂತವನ್ನ ಧರ್ಮಾತೀತವಾಗಿ ಹಲವು ಮಹಾನ್ ಚೇತನಗಳು ಪುನರುಚ್ಚರುವುದಿದೆ. ಬಸವಣ್ಣನವರ ಇದೇ ಅರ್ಥವನ್ನು ಧ್ವನಿಸುವ 'ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಪ್ರಾಣಿಗಳಲಿ' ಎಂಬ ಸಾಲು ಬಹು ಪ್ರಸಿದ್ಧವಾದುದು. ವಿಪರ್ಯಾಸ ಹೆಚ್ಚಿನವರ ಅಹಿಂಸೆ, ದಯೆಯ ಪರಿಧಿಯಲ್ಲಿ ಮನುಷ್ಯನೆಂಬ ಪ್ರಾಣಿ ಗುಂಪಿಗೆ ಸೇರದ ಪದವಾಗಿ ಉಳಿಯುತ್ತಿದ್ದಾನೆ. ಸಕಲ ಪ್ರಾಣಿಗಳಿಗೆ ದಯೆ ತೋರುವ ಧರ್ಮ ಪಾಲಕರು ತಮ್ಮ ಅಕ್ಕಪಕ್ಕದ ಬಂಧುಬಾಂಧವರ ವಿಚಾರದಲ್ಲಿ ಆ ದಯೆ ತೋರುವುದು ಕಡಿಮೆ. ಬೇರೆಲ್ಲಾ ಪ್ರಾಣಿಗಳ ಮೇಲೆ ದಯೆ ತೋರಿದವರಿಗೂ ತಮ್ಮದೇ ಕುಟುಂಬ, ಬಂಧು, ಸ್ನೇಹಿತ ಅಥವಾ ತಮ್ಮಂತಹ ಇನ್ನೊಬ್ಬ ಮನುಜನಿಗೆ ದಯೆ ಕರುಣೆ ತೋರುವುದು ವರ್ಜ್ಯ. ಸಕಲ ಪ್ರಾಣಿ, ಪಕ್ಷಿ, ಸಸ್ಯ, ಕ್ರಿಮಿ, ಕೀಟಗಳಿಗೆ ದಯೆ ತೋರಿಸಿ ಮನುಜನೆಂಬ ಪ್ರಾಣಿಯನ್ನು ಮಾತ್ರ ಲೆಕ್ಕದಿಂದ ಹೊರಗಿಡುವ ಇಂತಹ ಅಹಿಂಸಾ ವಿರೋಧಾಭಾಸವನ್ನು ಮಹಾವೀರ ತೀರ್ಥಂಕರರು ಬೋಧಿಸಿರಲಿಲ್ಲ ಎಂಬುವುದು ನನ್ನ ಭಾವನೆ. ಪರರ ಭಾವನೆಗಳಿಗೆ ಘಾಸಿಯಾಗದಂತೆ ಅಥವಾ ಸಾಧ್ಯವಾದಷ್ಟು ಕಡಿಮೆ ಘಾಸಿಯಾಗುವಂತೆ ನಡೆಯುವುದು ಮಾನವಧರ್ಮ. ಸಸ್ಯಾಹಾರ ಸೇವನೆ, ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳಿಗೆ ಹಾನಿ ಮಾಡದಿರುವಿಕೆ, ಮಂತ್ರಪಠಣ, ಪೂಜಾಪಾಠಗಳಲ್ಲ ಅಹಿಂಸಾ ಧರ್ಮ. ನಾನು ಹಾಗೂ ನನ್ನದು ಅನ್ನುವ ಪರಿಧಿಯಿಂದ ಹೊರಗಿರುವ ಪರರ ಬಗೆಗೂ ತಾದಾತ್ಮ್ಯಾನುಭೂತಿ (empathy) ಇರುವುದೇ ನಿಜವಾದ ಅಹಿಂಸೆ. ಮಾತಿಗಿಂತ ಕೃತಿಯಲ್ಲಿ ನಿಜವಾದ ಅಹಿಂಸೆಯನ್ನು ಅಳವಡಿಸಿಕೊಂಡಲ್ಲಿ ಅದುವೇ ನಿಜದ ಮಹಾವೀರ ಜಯಂತಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)